“ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು”
“ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು”
ಅವನು ಯೌವನಸ್ಥನಾಗಿದ್ದನು, ಬುದ್ಧಿವಂತನಾಗಿದ್ದನು, ಮತ್ತು “ರೂಪದಲ್ಲಿಯೂ ಮುಖಭಾವದಲ್ಲಿಯೂ ಸುಂದರನಾಗಿದ್ದನು.” ಅವನ ದಣಿಯ ಹೆಂಡತಿಯು ಇಂದ್ರಿಯ ಸುಖಭೋಗವನ್ನು ಅಪೇಕ್ಷಿಸುವವಳಾಗಿದ್ದಳು ಮತ್ತು ನಾಚಿಕೆಗೆಟ್ಟವಳಾಗಿದ್ದಳು. ಈ ಯೌವನಸ್ಥನೆಡೆಗೆ ತುಂಬ ಆಕರ್ಷಿತಳಾದ ಅವಳು, ಅವನನ್ನು ದುಷ್ಪ್ರೇರಣೆಗೆ ಸಿಕ್ಕಿಸಲು ದಿನಾಲೂ ಪ್ರಯತ್ನಿಸುತ್ತಿದ್ದಳು. “ಹೀಗಿರಲು ಒಂದು ದಿನ ಅವನು ತನ್ನ ಕೆಲಸದ ಮೇಲೆ ಮನೆಗೆ ಬಂದಾಗ ಮನೆಯವರಲ್ಲಿ ಯಾರೂ ಒಳಗೆ ಇಲ್ಲದಿರುವಲ್ಲಿ ಆಕೆ ಅವನ ಬಟ್ಟೆಯನ್ನು ಹಿಡಿದುಕೊಂಡು—ನನ್ನ ಸಂಗಮಕ್ಕೆ ಬಾ” ಎಂದು ಕರೆದಳು. ಆದರೆ, ಪೂರ್ವಜನಾದ ಯಾಕೋಬನ ಮಗನಾಗಿದ್ದ ಯೋಸೇಫನು ತನ್ನ ಬಟ್ಟೆಯನ್ನು ಪೋಟೀಫರನ ಹೆಂಡತಿಯ ಕೈಯಲ್ಲೇ ಬಿಟ್ಟು, ಅಲ್ಲಿಂದ ತಪ್ಪಿಸಿಕೊಂಡು ಓಡಿಹೋದನು.—ಆದಿಕಾಂಡ 39:1-12.
ಇಂತಹ ದುಷ್ಪ್ರೇರಕ ಸನ್ನಿವೇಶದಿಂದ ಪ್ರತಿಯೊಬ್ಬರೂ ಪಲಾಯನಗೈಯುವುದಿಲ್ಲ ಎಂಬುದಂತೂ ಸತ್ಯ. ಉದಾಹರಣೆಗೆ, ರಾತ್ರಿಹೊತ್ತು ಬೀದಿಯಲ್ಲಿ ಹಾದುಹೋಗುತ್ತಿದ್ದು, ಇಸ್ರಾಯೇಲಿನ ಅರಸನಾಗಿದ್ದ ಸೊಲೊಮೋನನ ಕಣ್ಣಿಗೆ ಬಿದ್ದ ಒಬ್ಬ ಯೌವನಸ್ಥನ ವಿದ್ಯಮಾನವನ್ನು ಪರಿಗಣಿಸಿರಿ. ನಡತೆಗೆಟ್ಟ ಒಬ್ಬ ಸ್ತ್ರೀಯಿಂದ ದುರ್ಮಾರ್ಗಕ್ಕೆ ಸೆಳೆಯಲ್ಪಟ್ಟ ಅವನು, “ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೆ ಆ ಕೂಡಲೆ ಅವನು ಅವಳ ಹಿಂದೆ ನಡೆಯಲಾರಂಭಿಸಿದನು.”—ಜ್ಞಾನೋಕ್ತಿ 7:21, 22, ನ್ಯೂ ಇಂಟರ್‌ನ್ಯಾಷನಲ್ ವರ್ಷನ್.
ಕ್ರೈಸ್ತರಿಗೆ “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂಬ ಬುದ್ಧಿವಾದವು ಕೊಡಲ್ಪಟ್ಟಿದೆ. (1 ಕೊರಿಂಥ 6:18) ಯುವಪ್ರಾಯದ ಕ್ರೈಸ್ತ ಶಿಷ್ಯನಾದ ತಿಮೊಥೆಯನಿಗೆ ಅಪೊಸ್ತಲ ಪೌಲನು ಬರೆದುದು: “ನೀನು ಯೌವನದ ಇಚ್ಛೆಗಳಿಗೆ ದೂರವಾಗಿರು.” (2 ತಿಮೊಥೆಯ 2:22) ಜಾರತ್ವ, ವ್ಯಭಿಚಾರ, ಅಥವಾ ಇನ್ನಿತರ ನೈತಿಕ ತಪ್ಪುಗಳಿಗೆ ನಡಿಸುವಂತಹ ಸನ್ನಿವೇಶಗಳು ಎದುರಾಗುವಾಗ, ಪೋಟೀಫರನ ಹೆಂಡತಿಯಿಂದ ಯೋಸೇಫನು ತಪ್ಪಿಸಿಕೊಂಡು ಓಡಿಹೋದಷ್ಟೇ ತ್ವರಿತಗತಿಯಲ್ಲಿ ನಾವು ಸಹ ಪಲಾಯನಗೈಯಬೇಕು. ಹಾಗೆ ಮಾಡುವ ನಿರ್ಧಾರವುಳ್ಳವರಾಗಿರುವಂತೆ ನಮಗೆ ಯಾವುದು ಸಹಾಯಮಾಡುವುದು? ಬೈಬಲಿನ ಜ್ಞಾನೋಕ್ತಿ ಪುಸ್ತಕದ 7ನೆಯ ಅಧ್ಯಾಯದಲ್ಲಿ ಸೊಲೊಮೋನನು ತುಂಬ ಅಮೂಲ್ಯವಾದ ಬುದ್ಧಿವಾದವನ್ನು ನಮಗೆ ಕೊಡುತ್ತಾನೆ. ಅವನು, ಅನೈತಿಕ ಜನರ ಕುತಂತ್ರಗಳಿಂದ ನಮ್ಮನ್ನು ಕಾಪಾಡುವಂತಹ ಬೋಧನೆಗಳ ಕುರಿತು ನಮಗೆ ತಿಳಿಯಪಡಿಸುತ್ತಾನೆ. ಅಷ್ಟುಮಾತ್ರವಲ್ಲ, ಒಬ್ಬ ಯೌವನಸ್ಥನು ನಡತೆಗೆಟ್ಟ ಒಬ್ಬ ಸ್ತ್ರೀಯಿಂದ ಹೇಗೆ ದುಷ್ಪ್ರೇರಣೆಗೆ ಒಳಗಾದನು ಎಂಬುದನ್ನು ಸ್ಪಷ್ಟವಾಗಿ ವರ್ಣಿಸುವಂತಹ ಒಂದು ಕಥಾವಿವರದ ಮೂಲಕ, ಅನೈತಿಕ ಜನರು ಕಾರ್ಯನಡಿಸುವ ರೀತಿಯನ್ನು ಬಯಲಿಗೆಳೆಯುತ್ತಾನೆ.
‘ನನ್ನ ಆಜ್ಞೆಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಇಟ್ಟುಕೋ’
ಅರಸನಾದ ಸೊಲೊಮೋನನು ಪಿತೃಸಹಜವಾದ ಈ ಬುದ್ಧಿವಾದದಿಂದ ತನ್ನ ಮಾತುಗಳನ್ನು ಆರಂಭಿಸುತ್ತಾನೆ: “ಕಂದಾ, ನನ್ನ ಮಾತುಗಳನ್ನು ಅನುಸರಿಸು, ನನ್ನ ಆಜ್ಞೆಗಳನ್ನು ಮನಸ್ಸಿನಲ್ಲಿಟ್ಟುಕೋ. ನನ್ನ ಉಪದೇಶವನ್ನು ಕೈಕೊಂಡು ಬಾಳು. ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಇಟ್ಟುಕೋ, ಹೃದಯದ ಹಲಗೆಯಲ್ಲಿ ಬರೆ.” (ಎಲ್ಲ ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 7:1, 2.
ಹೆತ್ತವರಿಗೆ, ಅದರಲ್ಲೂ ವಿಶೇಷವಾಗಿ ತಂದೆಗಳಿಗೆ, ಒಳ್ಳೇದು ಹಾಗೂ ಕೆಟ್ಟದ್ದರ ಕುರಿತಾದ ದೇವರ ಮಟ್ಟಗಳನ್ನು ತಮ್ಮ ಮಕ್ಕಳಿಗೆ ಕಲಿಸುವ ದೇವದತ್ತ ಜವಾಬ್ದಾರಿಯಿದೆ. ಮೋಶೆಯು ತಂದೆಗಳಿಗೆ ಪ್ರೋತ್ಸಾಹಿಸಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:6, 7) ಮತ್ತು ಅಪೊಸ್ತಲ ಪೌಲನು ಬರೆದುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ.” (ಎಫೆಸ 6:4) ಆದುದರಿಂದ, ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕಾಗಿರುವ ಅಥವಾ ಅಮೂಲ್ಯವಾದವುಗಳೆಂದು ಪರಿಗಣಿಸಬೇಕಾಗಿರುವ ಹೆತ್ತವರ ಬೋಧನೆಗಳಲ್ಲಿ, ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಕಟ್ಟಳೆಗಳು, ಆಜ್ಞೆಗಳು, ಮತ್ತು ನಿಯಮಗಳು ಖಂಡಿತವಾಗಿ ಒಳಗೂಡಿವೆ.
ಹೆತ್ತವರ ಬೋಧನೆಯಲ್ಲಿ, ಇತರ ನಿಬಂಧನೆಗಳು, ಅಂದರೆ ಕುಟುಂಬದ ನಿಯಮಗಳು ಸಹ ಒಳಗೂಡಿರಬಹುದು. ಇವೆಲ್ಲವೂ ಕುಟುಂಬದ ಸದಸ್ಯರ ಒಳಿತಿಗಾಗಿವೆ. ಕುಟುಂಬದ ಆವಶ್ಯಕತೆಗಳ ಮೇಲೆ ಹೊಂದಿಕೊಂಡು, ನಿಯಮಗಳು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ವ್ಯತ್ಯಾಸಮಯವಾಗಿರಬಹುದು ಎಂಬುದು ನಿಜ. ಆದರೂ, ತಮ್ಮ ಸ್ವಂತ ಕುಟುಂಬಕ್ಕೆ ಯಾವುದು ಅತ್ಯುತ್ತಮವಾದದ್ದಾಗಿದೆ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಹೆತ್ತವರಿಗೆ ವಹಿಸಲ್ಪಟ್ಟಿದೆ. ಮತ್ತು ಅವರು ಮಾಡುವಂತಹ ನಿಯಮಗಳು, ಸಾಮಾನ್ಯವಾಗಿ ಅವರ ನಿಜವಾದ ಪ್ರೀತಿ ಹಾಗೂ ಕಾಳಜಿಯ ಅಭಿವ್ಯಕ್ತಿಯಾಗಿರುತ್ತವೆ. ತಮ್ಮ ಹೆತ್ತವರಿಂದ ಕೊಡಲ್ಪಡುವ ಶಾಸ್ತ್ರೀಯ ಬೋಧನೆಗಳ ಜೊತೆಗೆ, ಈ ನಿಯಮಗಳನ್ನು ಸಹ ಅನುಸರಿಸಿರಿ ಎಂಬುದೇ ಎಳೆಯರಿಗೆ ಕೊಡಲ್ಪಟ್ಟಿರುವ ಸಲಹೆಯಾಗಿದೆ. ಹೌದು, ಅಂತಹ ಉಪದೇಶಗಳನ್ನು “ಕಣ್ಣುಗುಡ್ಡಿನಂತೆ,” ಅಂದರೆ ತುಂಬ ಮುತುವರ್ಜಿಯಿಂದ ಕಾಪಾಡಿಕೊಳ್ಳುವ ಆವಶ್ಯಕತೆಯಿದೆ.
ಯೆಹೋವನ ಮಟ್ಟಗಳನ್ನು ಅಲಕ್ಷಿಸುವುದರಿಂದ ಅನುಭವಿಸಬಹುದಾದ ಮಾರಕ ಪರಿಣಾಮಗಳಿಂದ ದೂರವಿದ್ದು, ‘ಬಾಳುವುದನ್ನು’ ಮುಂದುವರಿಸುವ ವಿಧಾನವು ಇದೇ ಆಗಿದೆ.ಸೊಲೊಮೋನನು ಮುಂದುವರಿಸುತ್ತಾ ಹೇಳಿದ್ದು: “ಅವುಗಳನ್ನು [ನನ್ನ ಆಜ್ಞೆಗಳನ್ನು] ನಿನ್ನ ಬೆರಳುಗಳಿಗೆ ಉಂಗುರವಾಗಿ ಇಟ್ಟುಕೋ, ಹೃದಯದ ಹಲಗೆಯಲ್ಲಿ ಬರೆ.” (ಜ್ಞಾನೋಕ್ತಿ 7:3) ಬೆರಳುಗಳು ಯಾವಾಗಲೂ ನಮ್ಮ ಕಣ್ಣುಗಳ ಮುಂದೆಯೇ ಇರುತ್ತವೆ ಮತ್ತು ನಮ್ಮ ಕಾರ್ಯಗಳನ್ನು ಪೂರೈಸುವುದರಲ್ಲಿ ಅತ್ಯಾವಶ್ಯಕವಾಗಿವೆ. ತದ್ರೀತಿಯಲ್ಲಿ, ಹೆತ್ತವರಿಂದ ಕೊಡಲ್ಪಡುವ ಶಾಸ್ತ್ರೀಯ ತರಬೇತಿ ಅಥವಾ ಬೈಬಲ್ ಜ್ಞಾನದ ಮೂಲಕ ನಾವು ಕಲಿತಂಥ ಪಾಠಗಳು ಸಹ ತುಂಬ ಪ್ರಯೋಜನಕಾರಿಯಾಗಿವೆ. ಹೇಗೆಂದರೆ, ನಾವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಅವು ನಮಗೆ ಎಚ್ಚರಿಕೆಯನ್ನೂ ಮಾರ್ಗದರ್ಶನವನ್ನೂ ನೀಡುತ್ತವೆ. ನಾವು ದೇವರ ಆಜ್ಞೆಗಳನ್ನು ನಮ್ಮ ಹೃದಯದ ಹಲಗೆಯ ಮೇಲೆ ಕೆತ್ತಬೇಕಾಗಿದೆ ಮತ್ತು ಅವುಗಳನ್ನು ನಮ್ಮ ಆಂತರಿಕ ಬಲದ ಒಂದು ಭಾಗವಾಗಿ ಮಾಡಿಕೊಳ್ಳಬೇಕಾಗಿದೆ.
ವಿವೇಕ ಮತ್ತು ತಿಳುವಳಿಕೆಯ ಮಹತ್ವವನ್ನು ಮರೆಯದ ಸೊಲೊಮೋನನು ಈ ಬುದ್ಧಿವಾದವನ್ನು ನೀಡುತ್ತಾನೆ: “ಜ್ಞಾನವನ್ನು [“ವಿವೇಕವನ್ನು,” NW] ಅಕ್ಕಾ ಎಂದು ಹೇಳು, ವಿವೇಕವನ್ನು [“ತಿಳುವಳಿಕೆಯನ್ನು,” NW] ಆಪ್ತಮಿತ್ರಳೇ ಎಂದು ಕರೆ.” (ಜ್ಞಾನೋಕ್ತಿ 7:4) ದೇವದತ್ತ ಜ್ಞಾನವನ್ನು ಯೋಗ್ಯವಾದ ರೀತಿಯಲ್ಲಿ ಉಪಯೋಗಿಸುವ ಸಾಮರ್ಥ್ಯವೇ ವಿವೇಕವಾಗಿದೆ. ಒಬ್ಬ ಪ್ರೀತಿಯ ಅಕ್ಕನ ಬಗ್ಗೆ ಆತ್ಮೀಯತೆಯನ್ನು ತೋರಿಸುವಂತೆಯೇ ವಿವೇಕಕ್ಕಾಗಿ ನಾವು ಒಲವನ್ನು ತೋರಿಸಬೇಕು. ತಿಳುವಳಿಕೆ ಎಂದರೇನು? ಒಂದು ವಿಷಯವನ್ನು ಗಹನವಾಗಿ ಪರಿಶೀಲಿಸಿ, ಅದರ ಭಾಗಗಳು ಹಾಗೂ ಇಡೀ ವಿಷಯದ ನಡುವೆ ಇರುವ ಸಂಬಂಧವನ್ನು ಗ್ರಹಿಸುವ ಮೂಲಕ, ಅದರ ಅರ್ಥವನ್ನು ತಿಳಿದುಕೊಳ್ಳುವ ಸಾಮರ್ಥ್ಯವೇ ತಿಳುವಳಿಕೆಯಾಗಿದೆ. ಒಬ್ಬ ಆಪ್ತಮಿತ್ರಳನ್ನು ನಾವು ಹೇಗೆ ಇಷ್ಟಪಡುತ್ತೇವೋ ಹಾಗೆಯೇ ತಿಳುವಳಿಕೆಯನ್ನು ಸಹ ಇಷ್ಟಪಡುವವರಾಗಿರಬೇಕು.
ಶಾಸ್ತ್ರೀಯ ತರಬೇತಿಗೆ ನಾವು ಹೇಗೆ ಭದ್ರವಾಗಿ ಅಂಟಿಕೊಳ್ಳಬೇಕು ಮತ್ತು ವಿವೇಕ ಹಾಗೂ ತಿಳುವಳಿಕೆಯೊಂದಿಗೆ ಆಪ್ತತೆಯನ್ನು ಏಕೆ ಬೆಳೆಸಿಕೊಳ್ಳಬೇಕು? ಏಕೆಂದರೆ “ಅವು ಜಾರಳಿಂದ [“ಅಪರಿಚಿತ ಸ್ತ್ರೀಯಿಂದ,” NW], ಸವಿಮಾತನಾಡುವ ಪರಸ್ತ್ರೀಯಿಂದ, ನಿನ್ನನ್ನು [ನಮ್ಮನ್ನು] ರಕ್ಷಿಸುವವು.” (ಜ್ಞಾನೋಕ್ತಿ 7:5) ಹೌದು, ವಿವೇಕ ಹಾಗೂ ತಿಳುವಳಿಕೆಯೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದು, ಸವಿಮಾತನಾಡುವ ಅಪರಿಚಿತಳು ಅಥವಾ ಪರಸ್ತ್ರೀಯಾಗಿರುವ ಅನೈತಿಕ ವ್ಯಕ್ತಿಯ ದುಷ್ಟ ಮಾರ್ಗಗಳಿಂದ ನಮ್ಮನ್ನು ಕಾಪಾಡುವುದು. *
ಆ ಯೌವನಸ್ಥನು ‘ಒಬ್ಬ ಕಪಟ ಸ್ತ್ರೀಯನ್ನು’ ಸಂಧಿಸುತ್ತಾನೆ
ಸ್ವತಃ ತಾನೇ ಗಮನಿಸಿದ ಒಂದು ದೃಶ್ಯವನ್ನು ಇಸ್ರಾಯೇಲಿನ ಅರಸನು ಈ ಮಾತುಗಳಿಂದ ವರ್ಣಿಸುತ್ತಾನೆ: “ನಾನು ನನ್ನ ಮನೆಯ ಜಾಲರಿಯಿಂದ ಇಣಿಕಿ ನೋಡಲು ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ, ಅವಳ [ಮನೆಯ] ಮೂಲೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು.”—ಜ್ಞಾನೋಕ್ತಿ 7:6-9.
ಸೊಲೊಮೋನನು ಯಾವ ಜಾಲರಿಯಿಂದ ಹೊರಗೆ ನೋಡುತ್ತಿದ್ದನೋ ಆ ಜಾಲರಿಗೆ ಅಡ್ಡಪಟ್ಟಿಗಳ ಚೌಕಟ್ಟು ಇತ್ತು. ಬಹುಶಃ ಇದು ಮರದ ಪಟ್ಟಿಗಳು ಹಾಗೂ ಅತ್ಯುತ್ತಮವಾದ ಕೆತ್ತನೆಗಳಿಂದ ಕೂಡಿದ ಒಂದು ಚೌಕಟ್ಟಾಗಿದ್ದಿರಬಹುದು. ಸಂಜೆಯ ಬೆಳಕು ಮೊಬ್ಬಾಗುತ್ತಾ ಹೋಗುವಾಗ, ಬೀದಿಗಳಲ್ಲಿ ರಾತ್ರಿಯ ಅಂಧಕಾರವು ಆವರಿಸುತ್ತದೆ. ಆ ಸಮಯದಲ್ಲಿ, ಸುಲಭವಾಗಿ ಶೋಧನೆಗೆ ಒಳಗಾಗಸಾಧ್ಯವಿರುವಂತಹ ಒಬ್ಬ ಯೌವನಸ್ಥನನ್ನು ಅರಸನು ನೋಡುತ್ತಾನೆ. ವಿವೇಚನಾಶಕ್ತಿ ಅಥವಾ ಒಳ್ಳೆಯ ಪರಿಜ್ಞಾನವಿಲ್ಲದವನಾಗಿರುವ ಅವನು ಜ್ಞಾನಹೀನನಾಗಿದ್ದಾನೆ. ತಾನು ಎಂತಹ ಜನರಿರುವ ಬೀದಿಯನ್ನು ಪ್ರವೇಶಿಸಿದ್ದೇನೆ ಮತ್ತು ತನಗೆ ಇಲ್ಲಿ ಏನು ಸಂಭವಿಸಸಾಧ್ಯವಿದೆ ಎಂಬುದು ಅವನಿಗೆ ಗೊತ್ತಿರಬಹುದು. ಆ ಯೌವನಸ್ಥನು ಅವಳ ಮನೆಯ
ದಾರಿಯಲ್ಲಿರುವ “ಮೂಲೆಯ” ಹತ್ತಿರ ಬರುತ್ತಾನೆ. ಅವಳು ಯಾರು? ಅವಳು ಏನು ಮಾಡುತ್ತಿದ್ದಾಳೆ?ಈ ವ್ಯಕ್ತಿಯನ್ನು ಗಮನಿಸುತ್ತಿರುವ ಅರಸನು ಹೀಗೆ ಮುಂದುವರಿಸುತ್ತಾನೆ: “ಇಗೋ ವೇಶ್ಯಾವೇಷವನ್ನು ಧರಿಸಿರುವ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಳ್ಳುತ್ತಾಳೆ. (ಇವಳು ಕೂಗಾಟದವಳು, ಹಟಮಾರಿ, ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ; ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚುಹಾಕುವಳು).”—ಜ್ಞಾನೋಕ್ತಿ 7:10-12.
ಈ ಸ್ತ್ರೀಯು ಉಡುಪನ್ನು ಧರಿಸಿರುವಂತಹ ವಿಧವು, ಅವಳು ಎಂತಹ ವ್ಯಕ್ತಿಯಾಗಿದ್ದಾಳೆ ಎಂಬುದನ್ನು ತಿಳಿಯಪಡಿಸುತ್ತದೆ. (ಆದಿಕಾಂಡ 38:14, 15) ಅವಳು ಒಬ್ಬ ವೇಶ್ಯೆಯಂತೆ ಅಸಭ್ಯವಾದ ರೀತಿಯಲ್ಲಿ ಉಡುಪನ್ನು ಧರಿಸಿದ್ದಾಳೆ. ಅಷ್ಟುಮಾತ್ರವಲ್ಲ, ಅವಳ ಹೃದಯದಲ್ಲಿ ಕಪಟವು ತುಂಬಿದೆ, ಅವಳ ಮನಸ್ಸು “ವಂಚನಾತ್ಮಕವಾಗಿದೆ,” ಅವಳು “ಕುಟಿಲ” ಉದ್ದೇಶದವಳಾಗಿದ್ದಾಳೆ. (ಆ್ಯನ್ ಅಮೆರಿಕನ್ ಟ್ರಾನ್ಸ್‌ಲೇಶನ್; ನ್ಯೂ ಇಂಟರ್‌ನ್ಯಾಷನಲ್ ವರ್ಷನ್) ಅವಳು ಕೂಗಾಟದವಳು ಮತ್ತು ಹಟಮಾರಿಯಾಗಿದ್ದಾಳೆ, ಮಾತುಗಾತಿ ಹಾಗೂ ಮೊಂಡಿಯಾಗಿದ್ದಾಳೆ, ಗದ್ದಲಮಾಡುವವಳೂ ದುರಾಗ್ರಹವುಳ್ಳವಳೂ, ನಾಚಿಕೆಗೆಟ್ಟವಳೂ ಅವಿಧೇಯಳೂ ಆಗಿದ್ದಾಳೆ. ಅವಳು ಮನೆಯಲ್ಲಿ ಉಳಿಯಲು ಇಷ್ಟಪಡುವುದಿಲ್ಲ, ಬದಲಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇರಲು ಇಷ್ಟಪಡುತ್ತಾಳೆ. ಏಕೆಂದರೆ ತನ್ನ ಬಲಿಪಶುವನ್ನು ಹಿಡಿಯಲಿಕ್ಕಾಗಿ ಬೀದಿಯ ಮೂಲೆಗಳಲ್ಲಿ ಅವಳು ಹೊಂಚುಹಾಕಿ ಕಾಯುತ್ತಿರುತ್ತಾಳೆ. ಆ ಯೌವನಸ್ಥನಂತಹ ಒಬ್ಬನನ್ನು ಹಿಡಿಯಲಿಕ್ಕಾಗಿ ಅವಳು ಕಾಯುತ್ತಿದ್ದಾಳೆ.
‘ಸವಿಮಾತುಗಳಿಂದ ಬಲಾತ್ಕರಿಸುತ್ತಾಳೆ’
ಹೀಗೆ, ಕುಟಿಲ ಯೋಜನೆಯೊಂದಿಗೆ ನಿಂತಿರುವ ಸಡಿಲುನಡತೆಯ ಒಬ್ಬ ಸ್ತ್ರೀಯನ್ನು ಆ ಯೌವನಸ್ಥನು ಸಂಧಿಸುತ್ತಾನೆ. ಎಂತಹ ರೀತಿಯಲ್ಲಿ ಇದು ಸೊಲೊಮೋನನ ದೃಷ್ಟಿಗೆ ಬಿದ್ದಿರಬೇಕು! ಅವನು ವಿವರಿಸುವುದು: “ಅವನನ್ನು ಹಿಡಿದು ಮುದ್ದಾಡಿ ನಾಚಿಕೆಗೆಟ್ಟವಳಾಗಿ—ಎಲೈ, ಈ ದಿವಸ ನನ್ನ ಹರಿಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನಯಜ್ಞಶೇಷವು ನನ್ನಲ್ಲಿದೆ, ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆ, ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು.”—ಜ್ಞಾನೋಕ್ತಿ 7:13-15.
ಈ ಸ್ತ್ರೀಯ ತುಟಿಗಳು ತುಂಬ ನಯವಾಗಿವೆ. ಧೈರ್ಯದ ಮುಖವಾಡವನ್ನು ಹಾಕಿಕೊಳ್ಳುತ್ತಾ, ಅವಳು ತುಂಬ ವಿಶ್ವಾಸದಿಂದ ಅವನೊಂದಿಗೆ ಮಾತಾಡುತ್ತಾಳೆ. ಅವಳು ಹೇಳುವ ಪ್ರತಿಯೊಂದು ಮಾತು, ಈ ಯೌವನಸ್ಥನನ್ನು ದುಷ್ಪ್ರೇರಣೆಗೆ ನಡಿಸಲು ಜಾಗರೂಕತೆಯಿಂದ ಮೊದಲೇ ಲೆಕ್ಕಾಚಾರಹಾಕಿದಂತಿದೆ. ಅದೇ ದಿನ ಸಮಾಧಾನಯಜ್ಞವನ್ನು ಮತ್ತು ಹರಿಕೆಗಳನ್ನು ಸಲ್ಲಿಸಿದ್ದೇನೆ ಎಂದು ಆರಂಭಿಸುವ ಮೂಲಕ ಅವಳು, ತಾನು ನೀತಿವಂತಳೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಮತ್ತು ತನ್ನಲ್ಲಿ ಆತ್ಮಿಕತೆಯ ಕೊರತೆಯಿಲ್ಲ ಎಂಬ ಸುಳಿವು ನೀಡುತ್ತಿದ್ದಾಳೆ. ಯೆರೂಸಲೇಮಿನ ದೇವಾಲಯದಲ್ಲಿ ಸಮಾಧಾನಯಜ್ಞವನ್ನು ಸಮರ್ಪಿಸುವಾಗ, ಅದರಲ್ಲಿ ಮಾಂಸ, ಗೋದಿಹಿಟ್ಟು, ಎಣ್ಣೆ, ಮತ್ತು ದ್ರಾಕ್ಷಾರಸವು ಒಳಗೂಡಿರುತ್ತಿತ್ತು. (ಯಾಜಕಕಾಂಡ 19:5, 6; 22:21; ಅರಣ್ಯಕಾಂಡ 15:8-10) ಸಮಾಧಾನಯಜ್ಞವನ್ನು ಸಮರ್ಪಿಸುವಂತಹ ವ್ಯಕ್ತಿಯು, ತನಗೋಸ್ಕರ ಹಾಗೂ ತನ್ನ ಕುಟುಂಬಕ್ಕೋಸ್ಕರ ಪಾಲನ್ನು ಪಡೆಯಸಾಧ್ಯವಿತ್ತು. ಆದುದರಿಂದಲೇ ಅವಳು ತನ್ನ ಮನೆಯಲ್ಲಿ ತಿನ್ನಲು ಹಾಗೂ ಕುಡಿಯಲು ಸಮೃದ್ಧವಾಗಿದೆ ಎಂದು ಸೂಚಿಸುತ್ತಾಳೆ. ಇದರ ಅರ್ಥ ಸ್ಪಷ್ಟ: ಈ ಯೌವನಸ್ಥನು ಅವಳ ಮನೆಯಲ್ಲಿ ಆನಂದಮಯವಾಗಿ ಸಮಯವನ್ನು ಕಳೆಯಸಾಧ್ಯವಿದೆ. ವಿಶೇಷವಾಗಿ ಅವನನ್ನು ಎದುರುಗೊಳ್ಳಲಿಕ್ಕೋಸ್ಕರ ಅವಳು ಮನೆಯಿಂದ ಹೊರಗೆ ಬಂದಿದ್ದಾಳೆ. ಇಂತಹ ಒಂದು ಕಥೆಯನ್ನು ಯಾರಾದರೂ ನಂಬುವುದಾದರೆ, ಅದೆಷ್ಟು ನಾಚಿಕೆಗೇಡಿತನವಾಗಿದೆ! ಒಬ್ಬ ಬೈಬಲ್ ವಿದ್ವಾಂಸನು ಹೇಳುವುದು: “ಅವಳು ಒಬ್ಬನನ್ನು ಹುಡುಕುತ್ತಿದ್ದಳು ಎಂಬುದು ಸತ್ಯವಾದರೂ, ನಿರ್ದಿಷ್ಟವಾಗಿ ಈ ಯೌವನಸ್ಥನಿಗೋಸ್ಕರವೇ ಅವಳು ಹುಡುಕಾಟ ನಡೆಸುತ್ತಿದ್ದಳೋ? ಕೇವಲ ಮೂರ್ಖನು, ಅದರಲ್ಲೂ ಈ ಯೌವನಸ್ಥನಂತಹ ಬುದ್ಧಿಗೇಡಿಯು ಮಾತ್ರ ಅವಳನ್ನು ನಂಬಸಾಧ್ಯವಿತ್ತು.”
ತನ್ನ ವೇಷಭೂಷಣದ ತೋರಿಕೆಯ ಮೂಲಕ, ಮನಸೂರೆಮಾಡುವಂತಹ ಮಾತುಗಳಿಂದ, ತನ್ನ ಆಲಿಂಗನದ ಸ್ಪರ್ಶದಿಂದ, ಮತ್ತು ತನ್ನ ತುಟಿಗಳ ಸವಿಯಿಂದ ತನ್ನನ್ನು ಆಕರ್ಷಣೀಯವಾಗಿ ವ್ಯಕ್ತಪಡಿಸಿಕೊಂಡ ಬಳಿಕ, ಈ ದುಷ್ಪ್ರೇರಕಿಯು ಅವನಲ್ಲಿ ಸುವಾಸನೆಯ ಪರಿಜ್ಞಾನವನ್ನು ಮೂಡಿಸುತ್ತಾಳೆ. ಅವಳು ಹೇಳುವುದು: “ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ ಐಗುಪ್ತದೇಶದ ನೂಲಿನ ವಿಚಿತ್ರವಸ್ತ್ರಗಳನ್ನೂ ಹಾಸಿದ್ದೇನೆ. ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ ಚಕ್ಕೆ, ಇವುಗಳ ಚೂರ್ಣವನ್ನು ಉದರಿಸಿದ್ದೇನೆ.” (ಜ್ಞಾನೋಕ್ತಿ 7:16, 17) ಐಗುಪ್ತ ದೇಶದ ವರ್ಣರಂಜಿತ ನೂಲಿನ ವಸ್ತ್ರಗಳಿಂದ ಅವಳು ಕಲಾತ್ಮಕವಾಗಿ ಹಾಸಿಗೆಯನ್ನು ಸಿದ್ಧಪಡಿಸಿದ್ದಾಳೆ ಹಾಗೂ ರಕ್ತಬೋಳ, ಅಗುರು, ಲವಂಗಚಕ್ಕೆಗಳ ಅತ್ಯುತ್ತಮ ಪರಿಮಳದಿಂದ ಅದನ್ನು ಸುವಾಸನೆಭರಿತವಾದದ್ದಾಗಿ ಮಾಡಿದ್ದಾಳೆ.
“ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ” ಎಂದು ಅವಳು ಕರೆಕೊಡುತ್ತಾಳೆ. ಈ ಕರೆಯಲ್ಲಿ, ಅವರಿಬ್ಬರೂ ಒಟ್ಟಿಗೆ ಆಹ್ಲಾದಕರವಾದ ರಾತ್ರಿಯೂಟವನ್ನು ಮಾಡುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಪರಸ್ಪರ ಲೈಂಗಿಕ ಸಂಬಂಧದಲ್ಲಿ ಆನಂದಿಸುವ ವಾಗ್ದಾನವನ್ನು ಅವಳು ಮಾಡುತ್ತಿದ್ದಾಳೆ. ಈ ಕರೆಯು ತುಂಬ ಸಾಹಸಮಯವೂ ರೋಮಾಂಚನೀಯವೂ ಆಗಿದೆ ಎಂದು ಆ ಯೌವನಸ್ಥನಿಗೆ ಅನಿಸುತ್ತದೆ! ಮುಂದಿನ ಆಕರ್ಷಣೆಯೋಪಾದಿ ಅವಳು ಹೀಗೆ ಹೇಳುತ್ತಾಳೆ: “ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ. ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು.” (ಜ್ಞಾನೋಕ್ತಿ 7:18-20) ತನ್ನ ಗಂಡನು ವ್ಯಾಪಾರಕ್ಕಾಗಿ ಬಹು ದೂರದ ಪ್ರಯಾಣದಲ್ಲಿದ್ದಾನೆ ಮತ್ತು ಸಾಕಷ್ಟು ಕಾಲ ಅವನು ಹಿಂದೆ ಬರುವುದಿಲ್ಲ, ಆದುದರಿಂದ ತಾವು ಸಂಪೂರ್ಣವಾಗಿ ಸುರಕ್ಷಿತರಾಗಿದ್ದೇವೆ ಎಂದು ಅವಳು ಅವನಿಗೆ ಆಶ್ವಾಸನೆ ನೀಡುತ್ತಾಳೆ. ಒಬ್ಬ ಯುವಕನನ್ನು ತಪ್ಪುದಾರಿಗೆ ಸೆಳೆಯುವುದರಲ್ಲಿ ಅವಳೆಷ್ಟು ಚತುರಳಾಗಿದ್ದಾಳೆ! “ಅವನನ್ನು ತನ್ನ ಸವಿಮಾತುಗಳಿಂದ ಬಲಾತ್ಕರಿಸಿ ಬಹಳವಾಗಿ ಪ್ರೇರಿಸಿ ಸಮ್ಮತಿಪಡಿಸುತ್ತಾಳೆ.” (ಜ್ಞಾನೋಕ್ತಿ 7:21) ಯೋಸೇಫನಂತಹ ಮಾನಸಿಕ ಸ್ಥೈರ್ಯವಿರುವ ವ್ಯಕ್ತಿಯು ಮಾತ್ರ ಇಷ್ಟೊಂದು ಮೋಹಕವಾಗಿರುವಂತಹ ಕರೆಯನ್ನು ನಿರಾಕರಿಸಸಾಧ್ಯವಿತ್ತು. (ಆದಿಕಾಂಡ 39:9, 12) ಈ ಯೌವನಸ್ಥನು ಅಂತಹ ವ್ಯಕ್ತಿತ್ವವುಳ್ಳವನಾಗಿದ್ದಾನೋ?
‘ವಧ್ಯಸ್ಥಾನಕ್ಕೆ ಹೋಗುವ ಹೋರಿಯಂತೆ’
ತದನಂತರ ಸೊಲೊಮೋನನು ಹೀಗೆ ವರದಿಸುತ್ತಾನೆ: “ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ ಪಕ್ಷಿಯು ಬಲೆಯ ಕಡೆಗೆ ಓಡುವ ಮೇರೆಗೂ ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ ಬಾಣವು ತನ್ನ ಕಾಳಿಜವನ್ನು ತಿವಿಯುವ ಕಡೆಗೆ ತಟ್ಟನೆ ಅವಳ ಹಿಂದೆ ಹೋಗುತ್ತಾನೆ.”—ಜ್ಞಾನೋಕ್ತಿ 7:22, 23.
ಅವಳ ಕರೆಯನ್ನು ನಿರಾಕರಿಸುವುದು ಅಸಾಧ್ಯ ಎಂದು ಈ ಯೌವನಸ್ಥನಿಗೆ ಅನಿಸುತ್ತದೆ. ತನ್ನೆಲ್ಲಾ ಬುದ್ಧಿಯನ್ನು ಗಾಳಿಗೆ ತೂರಿ, ‘ವಧ್ಯಸ್ಥಾನಕ್ಕೆ ಹೋಗುವ ಹೋರಿಯಂತೆ’ ಅವನು ಅವಳ ಹಿಂದೆ ಹೋಗುತ್ತಾನೆ. ಬೇಡಿಬಿದ್ದಿರುವ ಒಬ್ಬ ಮನುಷ್ಯನು ತನ್ನ ದಂಡನೆಯಿಂದ ತಪ್ಪಿಸಿಕೊಳ್ಳಲು ಅಸಮರ್ಥನಾಗಿರುವಂತೆಯೇ, ಈ ಯೌವನಸ್ಥನು ಸಹ ಪಾಪದ ಕಡೆಗೆ ಮುನ್ನುಗ್ಗುತ್ತಿದ್ದಾನೆ. “ಬಾಣವು ತನ್ನ ಕಾಳಿಜವನ್ನು ತಿವಿಯುವ” ತನಕ, ಅಂದರೆ ತನಗೆ ಮರಣವನ್ನು ಉಂಟುಮಾಡಸಾಧ್ಯವಿರುವಂತಹ ಗಾಯವನ್ನು ಮಾಡಿಕೊಳ್ಳುವ ತನಕ ಇದರ ಅಪಾಯವನ್ನು ಅವನು ಮನಗಾಣುವುದಿಲ್ಲ. ಈ ಮರಣವು ಶಾರೀರಿಕವಾಗಿರಬಹುದು, ಏಕೆಂದರೆ ಅವನು ತನ್ನನ್ನು ಮಾರಕವಾದ ರತಿರವಾನಿತ ರೋಗಕ್ಕೆ ಒಡ್ಡಿಕೊಳ್ಳುತ್ತಾನೆ. * ಆ ಗಾಯವು ಅವನಿಗೆ ಆತ್ಮಿಕ ಮರಣವನ್ನೂ ಉಂಟುಮಾಡಸಾಧ್ಯವಿದೆ. ಏಕೆಂದರೆ ಇದರಲ್ಲಿ ಅವನ “ಪ್ರಾಣಾಪಾಯ”ವೇ ಒಳಗೂಡಿದೆ. ಅವನ ಇಡೀ ಜೀವಿತವೇ ಗಂಭೀರವಾಗಿ ಬಾಧಿಸಲ್ಪಟ್ಟಿದೆ, ಮತ್ತು ಅವನು ದೇವರ ವಿರುದ್ಧ ಗಂಭೀರವಾದ ತಪ್ಪನ್ನು ಮಾಡಿದ್ದಾನೆ. ಹೀಗೆ, ಪಕ್ಷಿಯು ಒಂದು ಬಲೆಯ ಕಡೆಗೆ ಹಾರುವ ಹಾಗೆ ಅವನು ಮರಣದ ಹಿಡಿತದ ಕಡೆಗೆ ತ್ವರಿತಗತಿಯಿಂದ ಸಾಗುತ್ತಾನೆ!
“ಅವಳ ಮಾರ್ಗದಲ್ಲಿ ನಡೆಯಬೇಡ”
ತಾನು ನೋಡಿರುವ ಸಂಗತಿಯಿಂದ ಪಾಠವನ್ನು ಕಲಿಯುತ್ತಾ ಜ್ಞಾನಿಯಾದ ಅರಸನು ಹೀಗೆ ಉತ್ತೇಜಿಸುತ್ತಾನೆ: “ಈಗ, ಕಂದಾ, ನನ್ನ ಕಡೆಗೆ ಕಿವಿಗೊಡು, ನನ್ನ ಮಾತುಗಳನ್ನು ಆಲಿಸು. ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, ತಪ್ಪಿಹೋಗಿ ಅವಳ ಮಾರ್ಗದಲ್ಲಿ ನಡೆಯಬೇಡ. ಅವಳಿಂದ ಗಾಯಪಟ್ಟು ಬಿದ್ದವರು ಬಹು ಮಂದಿ, ಹತರಾದವರೋ ಲೆಕ್ಕವೇ ಇಲ್ಲ. ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದುಹೋಗುತ್ತದೆ.”—ಜ್ಞಾನೋಕ್ತಿ 7:24-27.
ಸ್ಪಷ್ಟವಾಗಿಯೇ, ಒಬ್ಬ ಅನೈತಿಕ ವ್ಯಕ್ತಿಯ ಮಾರಕ ಮಾರ್ಗಗಳಿಂದ ವಿಮುಖರಾಗಿ, ‘ಬಾಳುವುದನ್ನು’ ಮುಂದುವರಿಸಿರಿ ಎಂಬುದೇ ಸೊಲೊಮೋನನ ಸಲಹೆಯಾಗಿದೆ. (ಜ್ಞಾನೋಕ್ತಿ 7:2) ಈ ಬುದ್ಧಿವಾದವು ನಮ್ಮ ದಿನಕ್ಕೆ ಎಷ್ಟು ಸಮಯೋಚಿತವಾದದ್ದಾಗಿದೆ! ಬಲಿಪಶುವನ್ನು ಕಂಡುಕೊಳ್ಳಲಿಕ್ಕಾಗಿ ಅನೈತಿಕ ಜನರು ಹೊಂಚುಹಾಕುವಂತಹ ಸ್ಥಳಗಳಿಂದ ದೂರವಿರುವ ಅಗತ್ಯವಿದೆ ಎಂಬುದಂತೂ ಖಂಡಿತ. ಅಂತಹ ಸ್ಥಳಗಳಿಗೆ ಹೋಗುವ ಮೂಲಕ ಅವರ ಕುತಂತ್ರಗಳಿಗೆ ನೀವು ಏಕೆ ನಿಮ್ಮನ್ನು ಬಲಿಪಶುವಾಗಿ ಮಾಡಿಕೊಳ್ಳಬೇಕು? ಅಷ್ಟುಮಾತ್ರವಲ್ಲ, ನೀವು ಏಕೆ ‘ಜ್ಞಾನಹೀನರಾಗಿ’ ಆ ‘ಪರಸ್ತ್ರೀಯ’ ಮಾರ್ಗಗಳಲ್ಲಿ ಹಾದುಹೋಗುವವರಾಗಿರಬೇಕು?
ಅರಸನು ನೋಡಿದ ಆ “ಅಪರಿಚಿತ ಸ್ತ್ರೀ”ಯು, “ಕಾಮವಿಲಾಸಗಳಿಂದ ಸಂತೋಷಿಸುವ” ಎಂಬ ಕರೆಯನ್ನು ಕೊಡುವ ಮೂಲಕ ಆ ಯೌವನಸ್ಥನನ್ನು ದುಷ್ಪ್ರೇರಣೆಗೆ ಒಳಪಡಿಸಿದಳು. ಇಂದು ಅನೇಕ ಯುವಜನರು, ಅದರಲ್ಲೂ ವಿಶೇಷವಾಗಿ ಹುಡುಗಿಯರು ತದ್ರೀತಿಯಲ್ಲಿ ಶೋಷಣೆಗೊಳಗಾಗಿಲ್ಲವೋ? ಆದರೆ ಈ ವಿಷಯವನ್ನು ಪರಿಗಣಿಸಿರಿ: ಯಾರಾದರೊಬ್ಬರು ನಿಮ್ಮನ್ನು ಲೈಂಗಿಕ ಅನೈತಿಕತೆಗೆ ಸಿಕ್ಕಿಸಲು ಪ್ರಯತ್ನಿಸುವಾಗ, ಅದು ನಿಜವಾದ ಪ್ರೀತಿಯೋ ಅಥವಾ ಕೇವಲ ಸ್ವಾರ್ಥಪರ ಕಾಮಾಸಕ್ತಿಯೋ? ಒಬ್ಬ ಸ್ತ್ರೀಯನ್ನು ನಿಜವಾಗಿಯೂ ಪ್ರೀತಿಸುವ ಒಬ್ಬ ಪುರುಷನು, ಅವಳ ಕ್ರೈಸ್ತ ತರಬೇತಿ ಹಾಗೂ ಮನಸ್ಸಾಕ್ಷಿಯನ್ನು ಉಲ್ಲಂಘಿಸುವಂತೆ ಅವಳನ್ನು ಏಕೆ ಒತ್ತಾಯಿಸುವನು? ‘ನಿಮ್ಮ ಹೃದಯವು ಅವಳ ಮಾರ್ಗಗಳ ಕಡೆಗೆ ತಿರುಗದಿರಲಿ’ ಎಂದು ಸೊಲೊಮೋನನು ಬುದ್ಧಿವಾದ ಹೇಳುತ್ತಾನೆ.
ದುಷ್ಪ್ರೇರಣೆಗೆ ಒಳಪಡಿಸಲು ಪ್ರಯತ್ನಿಸುವಂತಹ ವ್ಯಕ್ತಿಯ ಮಾತುಗಳು ಸಾಮಾನ್ಯವಾಗಿ ತುಂಬ ಸವಿಯಾಗಿರುತ್ತವೆ ಮತ್ತು ಜಾಗರೂಕವಾಗಿ ಲೆಕ್ಕಾಚಾರ ಹಾಕಲ್ಪಟ್ಟವುಗಳಾಗಿರುತ್ತವೆ. ವಿವೇಕ ಹಾಗೂ ತಿಳುವಳಿಕೆಯೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದು, ಅಂತಹ ಮಾತುಗಳ ನಿಜವಾದ ಅರ್ಥವನ್ನು ಗ್ರಹಿಸಲು ನಮಗೆ ಸಹಾಯಮಾಡುವುದು. ಯೆಹೋವನು ನಮಗೆ ಏನನ್ನು ಆಜ್ಞಾಪಿಸಿದ್ದಾನೋ ಅದನ್ನು ಎಂದಿಗೂ ಮರೆಯಬಾರದು. ಏಕೆಂದರೆ ಅದು ನಮ್ಮನ್ನು ಸಂರಕ್ಷಿಸುವುದು. ಆದುದರಿಂದ, ನಾವು ಯಾವಾಗಲೂ ‘ದೇವರ ಆಜ್ಞೆಗಳನ್ನು ಕೈಕೊಂಡು ಬಾಳಲು’ ಹೆಣಗಾಡೋಣ.—1 ಯೋಹಾನ 2:17.
[ಪಾದಟಿಪ್ಪಣಿಗಳು]
^ ಪ್ಯಾರ. 11 “ಅಪರಿಚಿತ” ಎಂಬ ಶಬ್ದವು, ಧರ್ಮಶಾಸ್ತ್ರದಿಂದ ದೂರಹೋಗುವ ಮೂಲಕ ಯೆಹೋವನಿಂದ ವಿಮುಖರಾದವರಿಗೆ ಅನ್ವಯವಾಗುತ್ತಿತ್ತು. ಆದುದರಿಂದ, ಒಬ್ಬ ವೇಶ್ಯೆಯಂತಹ ಅನೈತಿಕ ಸ್ತ್ರೀಯನ್ನು, “ಅಪರಿಚಿತ ಸ್ತ್ರೀ” ಎಂದು ಸಂಬೋಧಿಸಲಾಗಿದೆ.
^ ಪ್ಯಾರ. 24 ಕೆಲವು ರತಿರವಾನಿತ ರೋಗಗಳು ಕಾಳಿಜ (ಪಿತ್ತಜನಕಾಂಗ)ಕ್ಕೆ ಹಾನಿಯನ್ನು ಉಂಟುಮಾಡುತ್ತವೆ. ಉದಾಹರಣೆಗೆ, ಸಿಫಿಲಿಸ್ ರೋಗವು ಉಲ್ಬಣಗೊಂಡಿರುವ ರೋಗಿಗಳಲ್ಲಿ, ಬ್ಯಾಕ್ಟೀರಿಯ ಜೀವಿಗಳು ಪಿತ್ತಜನಕಾಂಗವನ್ನು ಸಂಪೂರ್ಣವಾಗಿ ಆವರಿಸಿಬಿಡುತ್ತವೆ. ಮತ್ತು ಗಾನೊರೀಯ ರೋಗಕ್ಕೆ ಕಾರಣವಾಗಿರುವ ಜೀವಿಯು, ಪಿತ್ತಜನಕಾಂಗದ ಉರಿಯೂತವನ್ನು ಉಂಟುಮಾಡಬಲ್ಲವು.
[ಪುಟ 29ರಲ್ಲಿರುವ ಚಿತ್ರಗಳು]
ಹೆತ್ತವರ ನಿಯಮಗಳನ್ನು ನೀವು ಹೇಗೆ ಪರಿಗಣಿಸುತ್ತೀರಿ?
[ಪುಟ 31ರಲ್ಲಿರುವ ಚಿತ್ರ]
ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ ಜೀವದ ದಾರಿಯಾಗಿದೆ