ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಏಕೆ ಪ್ರಾರ್ಥಿಸಬೇಕು?

ನೀವು ಏಕೆ ಪ್ರಾರ್ಥಿಸಬೇಕು?

ನೀವು ಏಕೆ ಪ್ರಾರ್ಥಿಸಬೇಕು?

“ನೀವು ಬೇಡಿದರೂ ಬೇಡಿದ್ದನ್ನು . . . ದುರಭಿಪ್ರಾಯಪಟ್ಟು ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ. ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:​3, 8) ಯೇಸುವಿನ ಶಿಷ್ಯನಾಗಿದ್ದ ಯಾಕೋಬನ ಈ ಮಾತುಗಳು, ನಾವು ಏಕೆ ಪ್ರಾರ್ಥಿಸುತ್ತೇವೆ ಎಂಬುದರ ಕಾರಣಗಳನ್ನು ಪರಿಗಣಿಸುವಂತೆ ನಮ್ಮನ್ನು ಪ್ರಚೋದಿಸಬಹುದು.

ಪ್ರಾರ್ಥನೆಯು, ನಮಗೆ ಯಾವುದರ ಅಗತ್ಯವಿದೆ ಎಂಬುದನ್ನು ದೇವರಿಗೆ ಹೇಳುವಂತಹ ಕೇವಲ ಒಂದು ಮಾಧ್ಯಮವಾಗಿಲ್ಲ. ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ.” ಆದರೂ, ಯೇಸು ಕೂಡಿಸಿ ಹೇಳಿದ್ದು: “ಬೇಡಿಕೊಳ್ಳಿರಿ, ನಿಮಗೆ ದೊರೆಯುವದು.” (ಮತ್ತಾಯ 6:8; 7:⁠7) ಆದುದರಿಂದ, ನಮಗೆ ಯಾವುದರ ಅಗತ್ಯವಿದೆ ಎಂದೆನಿಸುತ್ತದೋ ಅದರ ಕುರಿತು ತನಗೆ ಹೇಳುವಂತೆ ಯೆಹೋವನು ಬಯಸುತ್ತಾನೆ. ಆದರೆ ಪ್ರಾರ್ಥನೆಯಲ್ಲಿ ಇದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ.

ನಿಜವಾದ ಸ್ನೇಹಿತರು ತಮಗೆ ಏನಾದರೂ ಬೇಕಿದ್ದಾಗ ಮಾತ್ರ ಪರಸ್ಪರ ಮಾತಾಡುವುದಿಲ್ಲ. ಬದಲಾಗಿ, ಅವರಲ್ಲಿ ಒಬ್ಬರಿಗೆ ಇನ್ನೊಬ್ಬರಲ್ಲಿ ಆಸಕ್ತಿಯಿದೆ, ಮತ್ತು ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಅವರ ಸ್ನೇಹವು ಸಹ ಬೆಳೆಯುತ್ತದೆ. ಅದೇ ರೀತಿಯಲ್ಲಿ, ಕೇವಲ ಆವಶ್ಯಕತೆಗಳನ್ನು ಪೂರೈಸುವಂತೆ ಕೇಳಿಕೊಳ್ಳುವುದಕ್ಕಿಂತಲೂ ಹೆಚ್ಚು ಮಹತ್ವವಾದ ಉದ್ದೇಶವು ಪ್ರಾರ್ಥನೆಗಿದೆ. ನಮ್ಮ ಹೃತ್ಪೂರ್ವಕವಾದ ಭಕ್ತಿಯನ್ನು ಯೆಹೋವನಿಗೆ ವ್ಯಕ್ತಪಡಿಸುವ ಮೂಲಕ, ಆತನೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುವಂತೆ ಇದು ನಮಗೆ ಸದವಕಾಶವನ್ನು ನೀಡುತ್ತದೆ.

ಹೌದು, ನಾವು ಆತನೊಂದಿಗೆ ಆಪ್ತ ಸ್ನೇಹವನ್ನು ಪಡೆದುಕೊಳ್ಳುವಂತೆ ದೇವರು ನಮಗೆ ಪ್ರಾರ್ಥನೆಯ ಸುಯೋಗವನ್ನು ದಯಪಾಲಿಸಿದ್ದಾನೆ. ಬಾಯಿಪಾಠಮಾಡಿದಂತಹ ಪ್ರಾರ್ಥನೆಗಳನ್ನು ಪುನರುಚ್ಚರಿಸುವುದಕ್ಕೆ ಬದಲಾಗಿ, ನಮ್ಮ ಸ್ವಂತ ಅನಿಸಿಕೆಗಳನ್ನು ನಾವು ದೇವರಿಗೆ ವ್ಯಕ್ತಪಡಿಸುವಲ್ಲಿ, ಖಂಡಿತವಾಗಿಯೂ ನಾವು ದೇವರ ಸ್ನೇಹವನ್ನು ಪಡೆದುಕೊಳ್ಳಸಾಧ್ಯವಿದೆ. ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಮಾತಾಡುವುದು ಎಷ್ಟು ಆನಂದಮಯವಾದದ್ದಾಗಿದೆ! ಅಷ್ಟುಮಾತ್ರವಲ್ಲ, ಒಂದು ಬೈಬಲ್‌ ಜ್ಞಾನೋಕ್ತಿಯು ಹೀಗೆ ಹೇಳುತ್ತದೆ: “ಶಿಷ್ಟರ ಬಿನ್ನಪ ಆತನಿಗೆ ಒಪ್ಪಿತ.”​—⁠ಜ್ಞಾನೋಕ್ತಿ 15:⁠8.

“ನನಗಾದರೋ ದೇವರ ಸಾನ್ನಿಧ್ಯವೇ [“ದೇವರ ಆಪ್ತ ಸ್ನೇಹವನ್ನು ಪಡೆದುಕೊಳ್ಳುವುದೇ,” NW] ಭಾಗ್ಯವು” ಎಂದು ಕೀರ್ತನೆಗಾರನಾದ ಆಸಾಫನು ಹಾಡಿದನು. (ಕೀರ್ತನೆ 73: 28) ಆದರೂ, ದೇವರ ಆಪ್ತ ಸ್ನೇಹವನ್ನು ಪಡೆದುಕೊಳ್ಳಬೇಕಾದರೆ, ನಾವು ಪ್ರಾರ್ಥನೆಗಿಂತಲೂ ಹೆಚ್ಚಿನದ್ದನ್ನು ಮಾಡಬೇಕು. ಈ ಕೆಳಗಿನ ವೃತ್ತಾಂತವು ಇದನ್ನು ಹೇಗೆ ಸೂಚಿಸುತ್ತದೆ ಎಂಬುದನ್ನು ಗಮನಿಸಿರಿ:

“ಆತನ [ಯೇಸುವಿನ] ಶಿಷ್ಯರಲ್ಲಿ ಒಬ್ಬನು ಆತನಿಗೆ​—⁠ಸ್ವಾಮೀ, . . . ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು ಎಂದು ಕೇಳಿದನು.” ಇದಕ್ಕೆ ಪ್ರತ್ಯುತ್ತರವಾಗಿ, “ನೀವು ಪ್ರಾರ್ಥಿಸುವಾಗ​—⁠ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ” ಎಂದು ಯೇಸು ಹೇಳಿದನು. (ಲೂಕ 11:​1, 2) ಮೊದಲಾಗಿ ದೇವರ ಹೆಸರೇನು ಮತ್ತು ಅದು ಹೇಗೆ ಪವಿತ್ರೀಕರಿಸಲ್ಪಡುತ್ತದೆ ಎಂಬುದರ ಕುರಿತು ಕಲಿತುಕೊಳ್ಳದೆ ನಾವು ಈ ರೀತಿ ಅರ್ಥಪೂರ್ಣವಾಗಿ ಪ್ರಾರ್ಥಿಸಸಾಧ್ಯವಿದೆಯೊ? ಮತ್ತು ದೇವರ ರಾಜ್ಯವೆಂದರೇನು ಎಂಬುದು ನಮಗೆ ಸರಿಯಾಗಿ ಅರ್ಥವಾಗಿರದಿದ್ದಲ್ಲಿ, ಯೇಸುವಿನ ಈ ಮಾತುಗಳಿಗೆ ಹೊಂದಿಕೆಯಲ್ಲಿ ನಾವು ಪ್ರಾರ್ಥನೆಯನ್ನು ಮಾಡಸಾಧ್ಯವಿದೆಯೊ? ಒಂದುವೇಳೆ ನಾವು ಬೈಬಲನ್ನು ಜಾಗರೂಕತೆಯಿಂದ ಪರಿಶೀಲಿಸುವಲ್ಲಿ, ಈ ವಿಷಯಗಳ ಕುರಿತಾದ ತಿಳುವಳಿಕೆಯು ನಮಗೆ ದೊರಕುತ್ತದೆ. ಹೀಗೆ ಪಡೆದುಕೊಂಡ ಜ್ಞಾನವು, ದೇವರ ಕುರಿತು ತಿಳಿದುಕೊಳ್ಳಲು ಮತ್ತು ಆತನ ಮಾರ್ಗಗಳನ್ನು ಅರಿತುಕೊಳ್ಳಲು ನಮಗೆ ಸಹಾಯಮಾಡುವುದು. ಅಷ್ಟುಮಾತ್ರವಲ್ಲ, ಯೆಹೋವ ದೇವರೊಂದಿಗೆ ಚಿರಪರಿಚಿತರಾಗುವುದರಿಂದ, ನಾವು ಆತನಿಗೆ ಹೆಚ್ಚು ಆಪ್ತರಾಗುತ್ತಿದ್ದೇವೆ ಮತ್ತು ಆತನ ಕಡೆಗಿನ ಭಕ್ತಿಯು ನಮ್ಮಲ್ಲಿ ಹೆಚ್ಚುತ್ತಿದೆ ಎಂಬ ಅನಿಸಿಕೆ ನಮಗಾಗುತ್ತದೆ. ಇದು, ಪ್ರಾರ್ಥನೆಯಲ್ಲಿ ನಾವು ಇನ್ನೂ ಹೆಚ್ಚು ಮುಕ್ತವಾಗಿ ಆತನೊಂದಿಗೆ ಮಾತಾಡಲು ನಮಗೆ ಸಹಾಯಮಾಡುವುದು.

ಪ್ರಾರ್ಥನೆಯು ಸಮಸ್ಯೆಗಳನ್ನು ಬಗೆಹರಿಸಬಲ್ಲದು

ಯೆಹೋವನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವುದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಮಗೆ ಸಹಾಯಮಾಡುವುದು. ಈ ಕೆಳಗಿನ ಪ್ರತಿಯೊಂದು ಸನ್ನಿವೇಶಗಳಲ್ಲಿ ಇದು ಹೇಗೆ ನಿಜವಾಗಿತ್ತೆಂಬುದನ್ನು ಗಮನಿಸಿರಿ. ಯಾರು ಪ್ರಾರ್ಥನೆಮಾಡುತ್ತಿದ್ದರೋ ಅವರು ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲು ಶಕ್ತರಾಗಿದ್ದರು ಎಂಬುದನ್ನು ಅವು ದೃಷ್ಟಾಂತಿಸುತ್ತವೆ.

ಬ್ರಸಿಲ್‌ನಲ್ಲಿ, ಮಾರೀಅ ಎಂಬ ಹೆಸರಿನ ಒಬ್ಬ ಸ್ತ್ರೀಯು ತನಗೆ ಸಹಾಯ ನೀಡುವಂತೆ ದೇವರಿಗೆ ಪ್ರಾರ್ಥಿಸಿದಳು. ತಾನು ಜೀವಿಸುತ್ತಿದ್ದ ಸಮಾಜದಲ್ಲಿ ಜನರು ಅಂಗೀಕರಿಸುತ್ತಿದ್ದ ಮಟ್ಟಗಳ ವಿರುದ್ಧ ದಂಗೆಯೇಳಲು ಅವಳು ಬಯಸಿದ್ದಳು. ಸಮಾಜದಲ್ಲಿ ತಾನು ಕಣ್ಣಾರೆ ಕಂಡಿದ್ದ ಕಪಟತನವೇ ಇದಕ್ಕೆ ಒಂದು ಕಾರಣವಾಗಿತ್ತು. ಮಾರೀಅಳು ತನ್ನ ಗಂಡ, ಮಕ್ಕಳು ಹಾಗೂ ಮನೆಯನ್ನು ಸಹ ತೊರೆದಿದ್ದಳು. ಅವಳು ಅಮಲೌಷಧಗಳನ್ನು ಸಹ ಸೇವಿಸಲಾರಂಭಿಸಿದಳು. ಆದರೆ ಅವಳು ಇದರಲ್ಲಿ ಸಂತೋಷವನ್ನು ಕಂಡುಕೊಳ್ಳದಿದ್ದಾಗ, ಅವಳು ಮನಃಪೂರ್ವಕವಾಗಿ ದೇವರ ಬಳಿ ತನ್ನ ಹೃದಯವನ್ನು ತೋಡಿಕೊಂಡಳು ಮತ್ತು ಸಹಾಯಕ್ಕಾಗಿ ಪ್ರಾರ್ಥಿಸಿದಳು.

ಸ್ವಲ್ಪದರಲ್ಲೇ, ಯೆಹೋವನ ಸಾಕ್ಷಿಗಳಲ್ಲಿ ಇಬ್ಬರು, ಮಾರೀಅಳ ಮನೆಗೆ ಭೇಟಿನೀಡಿದರು. ದೈವಿಕ ಮಾರ್ಗದರ್ಶನವನ್ನು ಅಂಗೀಕರಿಸುವುದರ ಮೌಲ್ಯದ ಕುರಿತಾದ ಲೇಖನವಿದ್ದ ಕಾವಲಿನಬುರುಜು ಪತ್ರಿಕೆಯ ಸಂಚಿಕೆಯನ್ನು ಅವಳ ಬಳಿ ಬಿಟ್ಟುಹೋದರು. ಅದು ಅವಳ ಮನಸ್ಸಿನ ಮೇಲೆ ಪರಿಣಾಮಬೀರಿತು, ಮತ್ತು ಅದೇ ದಿನ ಅವಳು ಸಾಕ್ಷಿಗಳೊಂದಿಗೆ ಬೈಬಲ್‌ ಅಭ್ಯಾಸವನ್ನು ಮಾಡಲು ಆರಂಭಿಸಿದಳು. ಇದರ ಪರಿಣಾಮವಾಗಿ ಅವಳ ಕುಟುಂಬವು ಪುನಃ ಒಂದುಗೂಡಿತು. ಯೆಹೋವನ ಕುರಿತು ಅವಳು ಕಲಿತುಕೊಂಡಂತೆ, ಅವಳು ಆತನ ಬಗ್ಗೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಿದಳು. ಮಾರೀಆ ಹೇಳುವುದು: “ನಾನು ನನ್ನ ನಡತೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಪ್ರಯತ್ನಿಸಿದೆ. ಮೊದಮೊದಲು ನನ್ನ ಗಂಡ ಹಾಗೂ ಕುಟುಂಬವು ನನ್ನ ಬೈಬಲ್‌ ಅಭ್ಯಾಸಕ್ಕೆ ಆಕ್ಷೇಪಣೆಯನ್ನೊಡ್ಡಿದರು. ಆದರೆ ನಾನು ಮಾಡುತ್ತಿದ್ದ ಬದಲಾವಣೆಗಳನ್ನು ಅವರು ನೋಡಿದಾಗ, ಅವರು ನನ್ನನ್ನು ಪ್ರೋತ್ಸಾಹಿಸತೊಡಗಿದರು.” ಸಮಯಾನಂತರ ಮಾರೀಅಳು, ಪ್ರಾರ್ಥನೆಗೆ ಕಿವಿಗೊಡುವ ದೇವರ ಸೇವೆಮಾಡಲಿಕ್ಕಾಗಿ ತನ್ನ ಜೀವಿತವನ್ನು ಆತನಿಗೆ ಸಮರ್ಪಿಸಿದಳು.

ಬೊಲಿವಿಯದಲ್ಲಿ ವಾಸಿಸುತ್ತಿದ್ದ ಹೋಸೇ ಎಂಬ ವ್ಯಕ್ತಿಗೆ ಸೌಂದರ್ಯವತಿಯಾದ ಪತ್ನಿ ಹಾಗೂ ಲಾಭದಾಯಕ ವ್ಯಾಪಾರವಿತ್ತಾದರೂ, ಜೀವನದಲ್ಲಿ ಅವನು ತುಂಬ ಅಸಂತುಷ್ಟನಾಗಿದ್ದನು. ಅವನಿಗೆ ಬೇರೊಬ್ಬ ಸ್ತ್ರೀಯೊಂದಿಗೆ ಸಂಬಂಧವಿದ್ದ ಕಾರಣ ಅವನ ಪತ್ನಿಯು ಅವನನ್ನು ಬಿಟ್ಟುಹೋಗಿದ್ದಳು. ಅವನು ವಿಪರೀತವಾಗಿ ಕುಡಿಯುತ್ತಿದ್ದನು ಮತ್ತು ತಾನು ನಿಷ್ಪ್ರಯೋಜಕನೆಂಬ ಅನಿಸಿಕೆ ಅವನಿಗಾಯಿತು. ಹೋಸೇ ಹೇಳುವುದು: “ಆಗ ನಾನು ಯಥಾರ್ಥ ಮನಸ್ಸಿನಿಂದ ದೇವರಿಗೆ ಪ್ರಾರ್ಥಿಸತೊಡಗಿದೆ ಮತ್ತು ದೇವರ ಮೆಚ್ಚಿಗೆಯನ್ನು ಪಡೆಯಲು ಏನು ಮಾಡಬೇಕು ಎಂದು ಕೇಳಿಕೊಳ್ಳತೊಡಗಿದೆ. ಬೇಗನೆ ಯೆಹೋವನ ಸಾಕ್ಷಿಗಳು ವ್ಯಾಪಾರದ ಸ್ಥಳದಲ್ಲಿ ನನ್ನನ್ನು ಭೇಟಿಯಾದರು ಮತ್ತು ಉಚಿತ ಮನೆ ಬೈಬಲ್‌ ಅಭ್ಯಾಸವನ್ನು ಮಾಡುವಂತೆ ಕರೆನೀಡಿದರು. ಆದರೆ ನಾನು ಅವರಿಗೆ ಅಭ್ಯಾಸಮಾಡಲು ಇಷ್ಟವಿಲ್ಲವೆಂದು ಹೇಳಿ ಕಳುಹಿಸಿಬಿಟ್ಟೆ. ಮೂರು ಬಾರಿ ಹೀಗೆಯೇ ಆಯಿತು. ಪ್ರತಿ ಬಾರಿ ನಾನು ಸಹಾಯಕ್ಕಾಗಿ ಪ್ರಾರ್ಥನೆಯಲ್ಲಿ ಬೇಡಿಕೊಂಡಾಗ, ಸಾಕ್ಷಿಗಳು ನನ್ನ ಬಳಿಗೆ ಬರುತ್ತಿದ್ದರು. ಕೊನೆಗೆ, ಸಾಕ್ಷಿಗಳು ಮುಂದಿನ ಬಾರಿ ಬಂದಾಗ ನಾನು ಅವರ ಮಾತಿಗೆ ಕಿವಿಗೊಡುತ್ತೇನೆ ಎಂದು ನಿರ್ಧರಿಸಿದೆ. ಮತ್ತು ಹಾಗೆಯೇ ಮಾಡಿದೆ. ನಾನು ಬೈಬಲನ್ನು ಸಂಪೂರ್ಣವಾಗಿ ಓದಿಮುಗಿಸಿದ್ದೆ ಮತ್ತು ನನಗೆ ಅನೇಕ ಪ್ರಶ್ನೆಗಳಿದ್ದವು. ಸಾಕ್ಷಿಗಳು ಯಾವಾಗಲೂ ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಗಳನ್ನು ಕೊಡುತ್ತಿದ್ದರು ಮತ್ತು ಆ ಉತ್ತರಗಳು ನನಗೆ ಸಂತೃಪ್ತಿಕರವಾಗಿದ್ದವು. ಹೀಗೆ, ಯೆಹೋವನ ಕುರಿತು ಕಲಿತುಕೊಂಡದ್ದು ನನ್ನ ಜೀವಿತದಲ್ಲಿ ಒಂದು ಹೊಸ ಉದ್ದೇಶವನ್ನು ನೀಡಿತು. ಮತ್ತು ಸಾಕ್ಷಿಗಳ ನಡುವೆ ಇರುವಂತಹ ನನ್ನ ಸ್ನೇಹಿತರು ಎಷ್ಟು ಉತ್ತೇಜನದಾಯಕ ಮಾದರಿಗಳಾಗಿದ್ದರು! ನಾನು ನನ್ನ ಪ್ರೇಯಸಿಯನ್ನೂ ನನ್ನ ಕುಡಿತದ ಸಂಗಾತಿಗಳನ್ನೂ ಬಿಟ್ಟುಬಿಟ್ಟೆ. ಸಮಯಾನಂತರ ನಾನು ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಪುನಃ ಹೊಸ ಜೀವನವನ್ನು ಆರಂಭಿಸಿದೆ. 1999ರ ಆರಂಭದಲ್ಲಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ.”

ಇಟಲಿಯಲ್ಲಿ, ಟಾಮಾರಾಳ ವಿವಾಹವು ತೊಂದರೆಗೆ ಒಳಗಾಗಿತ್ತು. ಆದುದರಿಂದ ಅವಳು ವಿವೇಕವನ್ನು ದಯಪಾಲಿಸುವಂತೆ ದೇವರಿಗೆ ಪ್ರಾರ್ಥಿಸಿದಳು. 14 ವರ್ಷ ಪ್ರಾಯದವಳಾಗಿದ್ದಾಗ, ಅವಳನ್ನು ಚೆನ್ನಾಗಿ ಹೊಡೆದು, ಮನೆಯಿಂದ ಹೊರಹಾಕಲಾಗಿತ್ತು. ಆದುದರಿಂದ ಅವಳು ತುಂಬ ಆಕ್ರಮಣಶೀಲ ಮನೋಭಾವವನ್ನು ಬೆಳೆಸಿಕೊಂಡಿದ್ದಳು. ಟಾಮಾರಾ ಹೇಳುವುದು: “ನನಗೆ ಒಂದು ಬೈಬಲ್‌ ಸಿಕ್ಕಿತು ಮತ್ತು ನಾನು ಅದನ್ನು ಓದತೊಡಗಿದೆ. ಒಂದು ಸಂಜೆ ನಾನು, ‘ವಿವೇಕವನ್ನು ಹುಡುಕುವುದು ಗುಪ್ತ ನಿಕ್ಷೇಪವನ್ನು ಹುಡುಕುವಂತಿದೆ’ (NW) ಎಂದು ಬೈಬಲಿನಲ್ಲಿ ಓದಿದೆ. ಆ ವಿವೇಕಕ್ಕಾಗಿ ನಾನು ದೇವರಿಗೆ ಪ್ರಾರ್ಥಿಸಿದೆ. (ಜ್ಞಾನೋಕ್ತಿ 2:​1-6) ಮರುದಿನ ಬೆಳಗ್ಗೆ ಯೆಹೋವನ ಸಾಕ್ಷಿಗಳು ನನ್ನನ್ನು ಭೇಟಿಮಾಡಿದರು. ಅವರು ನನ್ನೊಂದಿಗೆ ಬೈಬಲ್‌ ಅಭ್ಯಾಸವನ್ನು ಮಾಡತೊಡಗಿದರು. ಆದರೆ ನಾನು ಕಲಿತುಕೊಂಡಂಥ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಸ್ವಲ್ಪ ಸಮಯ ಹಿಡಿಯಿತು. ಕೊನೆಗೂ ನಾನು ಕ್ರೈಸ್ತ ಜೀವನ ರೀತಿಯನ್ನು ಅನುಸರಿಸಲು ನಿರ್ಧರಿಸಿದೆ ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಂಡೆ. ಈಗ, ನನ್ನ ಗಂಡನೊಂದಿಗೆ ಸೇರಿಕೊಂಡು, ಇತರರು ಸಹ ದೇವರ ವಿವೇಕದಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡುತ್ತೇನೆ.”

ಬೇಆಟ್ರಿಸ್‌ ಎಂಬುವವಳು, ವೆನಿಸ್ವೇಲದ ಕಾರಕಾಸ್‌ನಲ್ಲಿರುವ ಉಚ್ಚ ಸಮಾಜದ ಸದಸ್ಯಳಾಗಿದ್ದಳು. ಆದರೂ, ಅವಳು ವಿವಾಹವಿಚ್ಛೇದವನ್ನು ಪಡೆದುಕೊಂಡಿದ್ದಳು ಮತ್ತು ತುಂಬ ವ್ಯಥೆಗೀಡಾಗಿದ್ದಳು. ವಿಪರೀತ ಹತಾಶಳಾಗಿದ್ದ ಅವಳು ಒಮ್ಮೆ ಅನೇಕ ತಾಸುಗಳ ವರೆಗೆ ದೇವರಿಗೆ ಪ್ರಾರ್ಥಿಸಿದಳು. ಮರುದಿನ ಬೆಳಗ್ಗೆ ಅವಳ ಮನೆಯ ಕರೆಗಂಟೆಯು ಬಾರಿಸಿತು. ಕಿರಿಕಿರಿಗೊಂಡ ಅವಳು ಇಣಿಕುಗಂಡಿ (ಪೀಪ್‌ಹೋಲ್‌)ಯ ಮೂಲಕ ಹೊರಗೆ ನೋಡಿದಾಗ, ಬ್ರೀಫ್‌ಕೇಸ್‌ಗಳನ್ನು ಹಿಡಿದುಕೊಂಡಿದ್ದ ಇಬ್ಬರು ವ್ಯಕ್ತಿಗಳು ನಿಂತಿರುವುದನ್ನು ಕಂಡಳು. ಯಾರೂ ಮನೆಯಲ್ಲಿಲ್ಲ ಎಂಬಂತೆ ಅವಳು ನಟಿಸಿದಳು. ಆದರೂ ಆ ಇಬ್ಬರು ವ್ಯಕ್ತಿಗಳು ಅಲ್ಲಿಂದ ಹೊರಟುಹೋಗುವುದಕ್ಕೆ ಮೊದಲು ಒಂದು ಕರಪತ್ರವನ್ನು ಬಾಗಿಲ ಕೆಳಗೆ ತುರುಕಿದರು. “ನಿಮ್ಮ ಬೈಬಲನ್ನು ತಿಳಿದುಕೊಳ್ಳಿರಿ” ಎಂಬುದು ಅದರ ಮೇಲ್ಬರಹವಾಗಿತ್ತು. ಹಿಂದಿನ ರಾತ್ರಿ ತಾನು ಮಾಡಿದ ಪ್ರಾರ್ಥನೆಗಳೊಂದಿಗೆ ಅವರ ಸಂದರ್ಶನವು ಸಂಬಂಧಿಸಿರಸಾಧ್ಯವೋ? ಎಂದು ಅವಳು ಆಲೋಚಿಸಿದಳು. ಆದುದರಿಂದ, ಅವಳು ಅವರನ್ನು ಕರೆದಳು. ಸ್ವಲ್ಪದರಲ್ಲೇ ಅವಳು ಬೈಬಲ್‌ ಅಭ್ಯಾಸವನ್ನು ಆರಂಭಿಸಿದಳು ಮತ್ತು ಸಮಯಾನಂತರ ದೀಕ್ಷಾಸ್ನಾನವನ್ನು ಪಡೆದುಕೊಂಡಳು. ಕೊನೆಗೂ ಸಂತೋಷವನ್ನು ಕಂಡುಕೊಂಡಿರುವ ಬೇಆಟ್ರಿಸ್‌ ಈಗ, ಅದನ್ನು ಹೇಗೆ ಕಂಡುಕೊಳ್ಳುವುದು ಎಂಬುದನ್ನು ಇತರರಿಗೆ ಕಲಿಸುತ್ತಾಳೆ.

ಬಡತನದೊಂದಿಗೆ ಹೋರಾಡುತ್ತಿದ್ದ ಕಾರ್ಮಿನ್‌, ಅದರ ಬಗ್ಗೆ ದೇವರಿಗೆ ಪ್ರಾರ್ಥಿಸಿದಳು. ಅವಳಿಗೆ ಹತ್ತು ಮಂದಿ ಮಕ್ಕಳಿದ್ದರು ಮತ್ತು ರಾಫಾಯೆಲ್‌ ಎಂಬ ಕುಡುಕ ಗಂಡನಿದ್ದನು. “ಬೇರೆಯವರ ಬಟ್ಟೆಗಳನ್ನು ಒಗೆಯುವ ಮೂಲಕ ನಾನು ಹಣವನ್ನು ಸಂಪಾದಿಸಲು ಪ್ರಯತ್ನಿಸಿದೆ” ಎಂದು ಕಾರ್ಮಿನ್‌ ಹೇಳುತ್ತಾಳೆ. ಆದರೂ ರಾಫಾಯೆಲ್‌ನ ಕುಡಿತವು ಇನ್ನಷ್ಟು ಅಧಿಕಗೊಂಡಿತು. “ಆದರೆ, ನಾವು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ ನನ್ನ ಗಂಡನು ಬದಲಾಗತೊಡಗಿದನು. ನಾವು ರಾಜ್ಯದ ವಾಗ್ದಾನದ ಕುರಿತು, ಅಂದರೆ ಅತಿ ಬೇಗನೆ ಯೆಹೋವನು ಲೋಕದಿಂದ ಬಡತನ ಹಾಗೂ ದಬ್ಬಾಳಿಕೆಯನ್ನು ಸಂಪೂರ್ಣವಾಗಿ ತೆಗೆದುಹಾಕುವನು ಎಂಬುದರ ಕುರಿತು ಕಲಿತೆವು. ದೇವರಿಗೆ ನಾನು ಮಾಡಿದ ಪ್ರಾರ್ಥನೆಗಳು ಕೊನೆಗೂ ಉತ್ತರಿಸಲ್ಪಟ್ಟಿದ್ದವು!” ಯೆಹೋವನ ಮಾರ್ಗಗಳ ಕುರಿತು ತಿಳಿದುಕೊಳ್ಳುವುದು, ರಾಫಾಯೆಲ್‌ ತನ್ನ ಕುಡಿಕತನವನ್ನು ನಿಲ್ಲಿಸಿಬಿಡುವಂತೆ ಸಹಾಯಮಾಡಿತು. ಮತ್ತು ಅವನು “ನೂತನಸ್ವಭಾವವನ್ನು” ಧರಿಸಿಕೊಂಡನು. (ಎಫೆಸ 4:​23, 24) ಅವನ ಹಾಗೂ ಅವನ ಕುಟುಂಬದ ಜೀವನ ಮಟ್ಟವು ಉತ್ತಮಗೊಂಡಿತು. ರಾಫಾಯೆಲ್‌ ಹೀಗೆ ಹೇಳುತ್ತಾನೆ: “ನಾವು ಶ್ರೀಮಂತರಾಗಿಲ್ಲದಿರುವುದಾದರೂ, ನಮಗೆ ನಮ್ಮ ಸ್ವಂತ ಮನೆಯಿಲ್ಲವಾದರೂ, ನಮ್ಮ ಜೀವನಕ್ಕೆ ಅತ್ಯಗತ್ಯವಾದದ್ದೆಲ್ಲವೂ ನಮಗಿದೆ. ಮತ್ತು ನಾವು ನಿಜವಾಗಿಯೂ ಸಂತೋಷದಿಂದಿದ್ದೇವೆ.”

ಎಲ್ಲ ಪ್ರಾರ್ಥನೆಗಳು ಉತ್ತರಿಸಲ್ಪಡುವಾಗ

ಪ್ರಾರ್ಥಿಸುವುದರಿಂದ ಈ ವ್ಯಕ್ತಿಗಳಿಗೆ ಏನಾದರೂ ಪ್ರಯೋಜನ ದೊರಕಿತೋ? ಖಂಡಿತವಾಗಿಯೂ! ಮತ್ತು ಈ ಮೇಲಿನ ಉದಾಹರಣೆಗಳಲ್ಲಿ, ಕ್ರೈಸ್ತ ಸಭೆಯ ಯಾರಾದರೊಬ್ಬರು ಅವರೊಂದಿಗೆ ಬೈಬಲನ್ನು ಅಭ್ಯಾಸಿಸುವ ಮೂಲಕ ಯೆಹೋವ ದೇವರೊಂದಿಗೆ ಆಪ್ತ ಸ್ನೇಹವನ್ನು ಪಡೆದುಕೊಳ್ಳುವಂತೆ ಸಹಾಯಮಾಡಿದಾಗ, ಅವರ ಪ್ರಾರ್ಥನೆಗಳು ಉತ್ತರಿಸಲ್ಪಟ್ಟವು ಎಂಬುದನ್ನು ನೀವು ಗಮನಿಸಿದಿರೋ?​—⁠ಅ. ಕೃತ್ಯಗಳು 9:⁠11.

ಆದುದರಿಂದ, ಪ್ರಾರ್ಥಿಸಲು ನಮಗೆ ಸಕಾರಣಗಳಿವೆ. ದೇವರ ರಾಜ್ಯವು ಬರಲಿ ಮತ್ತು ಆತನ ಚಿತ್ತವು ಭೂಮಿಯಲ್ಲಿ ನೆರವೇರಿಸಲ್ಪಡಲಿ ಎಂದು ಮಾಡುವ ಪ್ರಾರ್ಥನೆಯು ಅತಿ ಬೇಗನೆ ಉತ್ತರಿಸಲ್ಪಡುವುದು. (ಮತ್ತಾಯ 6:10) ತನ್ನ ವಿರೋಧಿಗಳನ್ನು ದೇವರು ಈ ಭೂಮಿಯಿಂದ ತೆಗೆದುಹಾಕಿದ ಬಳಿಕ, “ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:⁠9) ಆಗ, ಯೆಹೋವನನ್ನು ಪ್ರೀತಿಸುವವರೆಲ್ಲರೂ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಆನಂದಿಸುವರು ಮತ್ತು ಅವರ ಪ್ರಾರ್ಥನೆಗಳು ಖಂಡಿತವಾಗಿಯೂ ಉತ್ತರಿಸಲ್ಪಡುವವು.​—⁠ರೋಮಾಪುರ 8:​18-21.

[ಪುಟ 7ರಲ್ಲಿರುವ ಚಿತ್ರ]

ನಾವು ಏಕೆ ಪ್ರಾರ್ಥಿಸಬೇಕೆಂಬುದು ನಿಮಗೆ ಗೊತ್ತಿದೆಯೋ?