ಪೆರೂವಿನಲ್ಲಿರುವ ಆಲ್ಟಿಪ್ಲೆನೋದಲ್ಲಿ ರಾಜ್ಯದ ಸುವಾರ್ತೆಯನ್ನು ಸಾರುವುದು
ನಾವಾದರೋ ನಂಬುವವರಾಗಿದ್ದೇವೆ
ಪೆರೂವಿನಲ್ಲಿರುವ ಆಲ್ಟಿಪ್ಲೆನೋದಲ್ಲಿ ರಾಜ್ಯದ ಸುವಾರ್ತೆಯನ್ನು ಸಾರುವುದು
ಆ್ಯಂಡಿಸ್ ಪರ್ವತದ ಪೂರ್ವ ಹಾಗೂ ಪಶ್ಚಿಮ ಶ್ರೇಣಿಗಳ ಮಧ್ಯೆ, ಅಂದರೆ ಬೊಲಿವಿಯ ಹಾಗೂ ಪೆರೂ ದೇಶಗಳು ಸಂಧಿಸುವ ಸ್ಥಳದಲ್ಲಿ ಆಲ್ಟಿಪ್ಲೆನೋ ಇದೆ. ಈ ಹೆಸರಿನ ಅರ್ಥ “ಎತ್ತರದಲ್ಲಿರುವ ಚಪ್ಪಟೆಭೂಮಿ” ಅಥವಾ “ಪ್ರಸ್ಥಭೂಮಿ” ಎಂದಾಗಿದೆ. ಆಲ್ಟಿಪ್ಲೆನೋದ ಅಧಿಕಾಂಶ ಭಾಗವು ಬೊಲಿವಿಯದಲ್ಲಿದೆ.
ಈ ಆಲ್ಟಿಪ್ಲೆನೋ 100 ಕಿಲೊಮೀಟರುಗಳಷ್ಟು ಅಗಲ ಮತ್ತು 1,000 ಕಿಲೊಮೀಟರುಗಳಷ್ಟು ಉದ್ದವಾಗಿದ್ದು, ಸಮುದ್ರ ಮಟ್ಟಕ್ಕಿಂತ ಅದರ ಸರಾಸರಿ ಎತ್ತರವು ಸುಮಾರು 12,000 ಅಡಿಗಳಷ್ಟಿದೆ. ಪೆರೂವಿನ ಕರಾವಳಿಯಲ್ಲಿರುವ ಅದರ ರಾಜಧಾನಿಯಾದ ಲಿಮದಿಂದ ಆಲ್ಟಿಪ್ಲೆನೋಗೆ ಹೋಗುವ ಒಂದು ವಿಮಾನವನ್ನು ಹಿಡಿದು ಪ್ರಯಾಣವನ್ನು ಆರಂಭಿಸಿರಿ. ಆಗ ಮೋಡಗಳ ಮೂಲಕ ನೋಡುವಾಗ ಸುಮಾರು 19,101 ಅಡಿಗಳಷ್ಟು ಎತ್ತರವಾಗಿದ್ದು, ಹಿಮದಿಂದ ಆವೃತವಾಗಿರುವ ಎಲ್ ಮಿಸ್ಟಿ ಎಂಬ ಅಗ್ನಿಪರ್ವತದ ಮೇಲಿನಿಂದ ನೀವು ಹಾದುಹೋಗುತ್ತೀರಿ. ಹೀಗೆ ಹಾದುಹೋಗುತ್ತಿರುವಾಗ, ಸುಮಾರು 20,000 ಅಡಿಗಳಿಗಿಂತಲೂ ಎತ್ತರದಲ್ಲಿದ್ದು, ಹಿಮದಿಂದಾವೃತವಾದ ಶಿಖರಗಳಿರುವ ಪರ್ವತಗಳು ಬಹುದೂರದಲ್ಲಿ ಕಂಡುಬರುತ್ತವೆ. ಇವು ನಬಾಡೋ ಆಂಪಾಟೋ ಹಾಗೂ ನಬಾಡೋ ಕೋರೋಪೂನಾ ಪರ್ವತಗಳಾಗಿವೆ. ಇದ್ದಕ್ಕಿದ್ದಂತೆ ವಿಶಾಲವಾದ ಒಂದು ಪ್ರಸ್ಥಭೂಮಿಯು ದೃಷ್ಟಿಗೆ ಬೀಳುತ್ತದೆ. ಇದೇ ದಕ್ಷಿಣ ಪೆರೂವಿನ ಆಲ್ಟಿಪ್ಲೆನೋ ಆಗಿದೆ.
ಪೆರೂವಿನ ಆಲ್ಟಿಪ್ಲೆನೋದ ರಾಜಧಾನಿಯು ಪೂನೊ ಆಗಿದೆ. ಈ ರಾಜಧಾನಿ ನಗರವು, ಜಗತ್ತಿನಲ್ಲೇ ಅತಿ ಎತ್ತರದಲ್ಲಿರುವ ನೌಕಾಸಂಚಾರಯೋಗ್ಯ ಸರೋವರವಾದ ಟಿಟಿಕಾಕದ ವಾಯವ್ಯ ತುದಿಯಲ್ಲಿದೆ. ಈ ಪ್ರಾಂತವು ಮೂರು ಕಿಲೊಮೀಟರುಗಳಷ್ಟು ಎತ್ತರದಲ್ಲಿರುವುದರಿಂದ, ಸಂದರ್ಶಕರು ಇಲ್ಲಿನ ಗಾಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಟಿಟಿಕಾಕ ಸರೋವರದ ತೀರದಲ್ಲಿ ಕೆಚ್‌ವ ಮತ್ತು ಐಮಾರ ಇಂಡಿಯನ್ನರು ವಾಸಿಸುತ್ತಾರೆ. ಕೆಂಪು, ಹಸಿರು, ಅಥವಾ ನೀಲಿ ಬಣ್ಣಗಳ ವರ್ಣರಂಜಿತ ಉಡುಪುಗಳನ್ನು ತೊಟ್ಟುಕೊಂಡಿರುವ ಅವರು, ತಮ್ಮ ಚಾಕ್‌ರಾಸ್‌ಗಳಲ್ಲಿ ಅಥವಾ ಚಿಕ್ಕ ಫಾರ್ಮ್‌ಗಳಲ್ಲಿ ಕೆಲಸಮಾಡುತ್ತಿರುವುದನ್ನು ನೋಡಸಾಧ್ಯವಿದೆ. ಪೆರೂವಿನ ಮುಖ್ಯ ಭಾಷೆಯು ಸ್ಪ್ಯಾನಿಷ್ ಆಗಿರುವುದಾದರೂ, ಆಲ್ಟಿಪ್ಲೆನೋದಲ್ಲಿ ಕೆಚ್‌ವ ಮತ್ತು ಐಮಾರ ಭಾಷೆಗಳನ್ನು ಸಹ ಮಾತಾಡಲಾಗುತ್ತದೆ.
ಸಾರುವ ಕೆಲಸವನ್ನು ಆರಂಭಿಸುವುದು
ದೀನರೂ ಕಷ್ಟಪಟ್ಟು ಕೆಲಸಮಾಡುವವರೂ ಆಗಿದ್ದು, ಕೆಚ್‌ವ ಮತ್ತು ಐಮಾರ ಭಾಷೆಗಳನ್ನು ಮಾತಾಡುವಂತಹ ಅನೇಕರು, ಇತ್ತೀಚೆಗೆ ಬೈಬಲ್ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳತೊಡಗಿದ್ದಾರೆ. ಬಹುಮಟ್ಟಿಗೆ ಇದಕ್ಕೆ ಕಾರಣವೇನೆಂದರೆ, ಇಲ್ಲಿ ವಿಶೇಷ ಪಯನೀಯರರೋಪಾದಿ ಸೇವೆಮಾಡುತ್ತಿರುವ ಪೂರ್ಣ ಸಮಯದ ರಾಜ್ಯ ಘೋಷಕರ ಪ್ರಯತ್ನಗಳನ್ನು ಯೆಹೋವನು ಹೇರಳವಾಗಿ ಆಶೀರ್ವದಿಸಿದ್ದಾನೆ.
ಉದಾಹರಣೆಗಾಗಿ, ಹೋಸೇ ಮತ್ತು ಸಿಲ್ವೀಆ ಎಂಬ ಹೆಸರಿನ ವಿಶೇಷ ಪಯನೀಯರರು, ಟಿಟಿಕಾಕ ಸರೋವರದಿಂದ ಸುಮಾರು 50 ಕಿಲೊಮೀಟರುಗಳಷ್ಟು ದೂರದಲ್ಲಿರುವ ಪೂಟೆನಾ ಎಂಬ ಪಟ್ಟಣದಲ್ಲಿ ಸುವಾರ್ತೆಯನ್ನು ಸಾರಲು ನೇಮಿಸಲ್ಪಟ್ಟಿದ್ದರು. ಎರಡೇ ತಿಂಗಳುಗಳೊಳಗೆ, ಸಿಲ್ವೀಆ 16 ಮನೆ ಬೈಬಲ್ ಅಭ್ಯಾಸಗಳನ್ನು ಮತ್ತು ಹೋಸೇ 14 ಮನೆ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದರು. ಕೇವಲ ಆರು ತಿಂಗಳುಗಳೊಳಗೆ, ಸಭಾ ಪ್ರಚಾರಕರ ಸಂಖ್ಯೆಯು 23ರಿಂದ 41ಕ್ಕೆ ಏರಿತು. ಈ ಮಧ್ಯೆ, ಕೂಟಗಳ ಹಾಜರಿಯು 48ರಿಂದ 132ಕ್ಕೆ ಏರಿತು.
ಹೋಸೇ ಹೇಳುವುದು: “ಈ ಪ್ರತ್ಯೇಕ ಸಮುದಾಯಗಳಲ್ಲಿ ಸಭಾ ಕೂಟಗಳನ್ನು ಆರಂಭಿಸುವಾಗ, ಮೊದಲಾಗಿ ಸಾರ್ವಜನಿಕ ಕೂಟ ಹಾಗೂ ಸಭಾ ಪುಸ್ತಕಭ್ಯಾಸದೊಂದಿಗೆ ಪ್ರಾರಂಭಿಸುವುದು ಪ್ರಾಯೋಗಿಕವಾದದ್ದಾಗಿದೆ ಎಂದು ನಮಗೆ ಗೊತ್ತಾಯಿತು. ಏಕೆಂದರೆ, ಆಸಕ್ತ ವ್ಯಕ್ತಿಗಳು ಕೂಟಗಳಿಗೆ ಹಾಜರಾಗಲು ಆರಂಭಿಸುವುದನ್ನು ಇವು ಹೆಚ್ಚು ಸುಲಭವಾದದ್ದಾಗಿ ಮಾಡುತ್ತವೆ.”
ಮೊದಲಾಗಿ ಇಬ್ಬರು ಸ್ವಂತ ಅಕ್ಕತಂಗಿಯರು, ಮೂನ್ಯಾನೀ ಎಂಬ ಈ ಪ್ರತ್ಯೇಕ ಸಮುದಾಯದಲ್ಲಿ ಸುವಾರ್ತೆಯ ಬೀಜವನ್ನು ಬಿತ್ತಿದವರಾಗಿದ್ದರು. ಅವರಲ್ಲಿ ಒಬ್ಬಳು ಪಯನೀಯರಳಾಗಿದ್ದಳು. ಪೂಟೆನಾದಿಂದ ಸುಮಾರು 20 ಕಿಲೊಮೀಟರುಗಳಷ್ಟು ದೂರದಲ್ಲಿ ಈ ಮೂನ್ಯಾನೀ ಇದೆ. ಇಲ್ಲಿ ಆ ಅಕ್ಕತಂಗಿಯರು ಲೂಸ್ಯೊ ಎಂಬ ಹೆಸರಿನ ಒಬ್ಬ ಕುರುಡನೊಂದಿಗೆ ಬೈಬಲ್ ಅಭ್ಯಾಸವನ್ನು ಆರಂಭಿಸಿದರು. * ಆಗ ಲೂಸ್ಯೊ ತನ್ನ ತಮ್ಮನಾದ ಮೀಗೆಲ್‌ನನ್ನು ಸಹ ಬೈಬಲ್ ಅಭ್ಯಾಸಕ್ಕೆ ಆಮಂತ್ರಿಸಿದನು. ಮೀಗೆಲ್ ಒಬ್ಬ ಕ್ಯಾಥೊಲಿಕ್ ಮಿಷನೆರಿಯಾಗಿದ್ದನು ಮತ್ತು ಒಂದು ಸಮುದಾಯದ ನಾಯಕನೂ ಆಗಿದ್ದನು. ಮೀಗೆಲ್ ಮೂನ್ಯಾನೀಗೆ ಏಕೆ ಹೋಗಿದ್ದನೆಂದು ಸ್ನೇಹಿತನೊಬ್ಬನು ಅವನನ್ನು ಕೇಳಿದಾಗ, ಯೆಹೋವನ ಕುರಿತು ಮತ್ತು ಆತನ ವಾಕ್ಯದ ಕುರಿತು ಕಲಿಯಲು ಹೋಗಿದ್ದೆ ಎಂದು ಅವನು ಉತ್ತರಕೊಟ್ಟನು. ಆಗ ಈ ಪ್ರಶ್ನೆಯು ಎದ್ದಿತು: “ನಾವೇಕೆ ಇಲ್ಲಿಯೇ ಬೈಬಲನ್ನು ಅಭ್ಯಾಸಿಸಬಾರದು?” ಮೀಗೆಲ್‌ನ ಸಮುದಾಯದಲ್ಲಿದ್ದ ಜನರು ತುಂಬ ಆಸಕ್ತಿಯನ್ನು ತೋರಿಸಿದ್ದರಿಂದ, ಸಾಕ್ಷಿಗಳು ಅಲ್ಲಿ ಕೂಟಗಳನ್ನು ನಡೆಸಲು ಏರ್ಪಾಡುಗಳನ್ನು ಮಾಡಿದರು.
ತಾನು ಕಲಿಯುತ್ತಿರುವಂತಹ ವಿಷಯಗಳನ್ನು ಮೀಗೆಲ್ ಇತರರೊಂದಿಗೆ ಹಂಚಿಕೊಳ್ಳಲಾರಂಭಿಸಿದನು. ಆದರೆ ಕ್ಯಾಥೊಲಿಕ್ ಮಿಷನೆರಿ ಹಾಗೂ ಡೆಪ್ಯೂಟಿ ಗವರ್ನರ್‌ನೋಪಾದಿ ಅವನಿಗಿದ್ದ ಸ್ಥಾನಮಾನದ ಕುರಿತೇನು? ಕಮ್ಯೂನಿಟಿ ಹಾಲ್‌ನಲ್ಲಿ ನಡೆದ ಒಂದು ಕೂಟದಲ್ಲಿ, ಕ್ಯಾಥೊಲಿಕ್ ಮಿಷನೆರಿ ಕೆಲಸಕ್ಕೆ ತಾನು ರಾಜೀನಾಮೆಯನ್ನು ಕೊಟ್ಟಿರುವುದಾಗಿ ಮೀಗೆಲ್ ಪ್ರಕಟಿಸಿದನು. ಹಾಗಾದರೆ ಅವನ ಸ್ಥಾನಕ್ಕೆ ಇನ್ನೊಬ್ಬ ವ್ಯಕ್ತಿಯು ಬರಲಿದ್ದನೋ? ಆಗ “ನಾವು ಸತ್ಯವನ್ನು ಕಲಿಯುತ್ತಿರುವುದರಿಂದ, ನಮಗೇಕೆ ಇನ್ನೊಬ್ಬ ಮಿಷನೆರಿಯು ಬೇಕು?” ಎಂದು ಸಭಿಕರೊಬ್ಬರು ಕೇಳಿದರು. ಇದು ಯೆಹೋವನ ಸಾಕ್ಷಿಗಳಿಂದ
ಕಲಿಸಲ್ಪಟ್ಟಿದ್ದ ವಿಷಯಕ್ಕೇ ಸೂಚಿತವಾಗಿತ್ತು ಎಂಬುದಂತೂ ಸತ್ಯ. ಇನ್ನೊಬ್ಬ ವ್ಯಕ್ತಿಯು ಕೂಡಿಸಿ ಹೇಳಿದ್ದು: “ನೀನೊಬ್ಬನೇ ರಾಜೀನಾಮೆ ನೀಡುವುದಕ್ಕೆ ನಾವು ಒಪ್ಪುವುದಿಲ್ಲ. ನಿನ್ನೊಂದಿಗೆ ನಾವೆಲ್ಲರೂ ಏಕೆ ರಾಜೀನಾಮೆ ನೀಡಬಾರದು?” ಆಗ, ಹಾಜರಿದ್ದವರೆಲ್ಲರೂ “ನಾವೆಲ್ಲರೂ ರಾಜೀನಾಮೆ ನೀಡಿದ್ದೇವೆ!” ಎಂದು ಒಕ್ಕೊರಲಿನಿಂದ ಕೂಗಿದರು.ತದನಂತರ ಸಮುದಾಯದ ಕೂಟದಲ್ಲಿ ವಿಗ್ರಹಗಳು ಹಾಗೂ ಶಿಲುಬೆಗಳ ಕುರಿತು ಚರ್ಚಿಸಲಾಯಿತು. ಉಪಸ್ಥಿತರಿದ್ದವರೆಲ್ಲರೂ ಧರ್ಮೋಪದೇಶಕಾಂಡ 7:25ನ್ನು ಓದಿರಿ ಎಂದು ಒಬ್ಬ ಮನುಷ್ಯನು ಕೇಳಿಕೊಂಡನು. ಅದು ಹೀಗೆ ಹೇಳುತ್ತದೆ: “ಅವರು ದೇವರೆಂದು ಮಾಡಿಕೊಂಡ ಮರದ ವಿಗ್ರಹಗಳನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು. ಆ ವಿಗ್ರಹಗಳ ಮೇಲಿರುವ ಬೆಳ್ಳಿಬಂಗಾರವನ್ನು ನೀವು ಆಶಿಸಬಾರದು; ಅದನ್ನು ತೆಗೆದುಕೊಂಡರೆ ಅದು ನಿಮಗೆ ಉರುಲಾಗುವದು. ಅದು ನಿಮ್ಮ ದೇವರಾದ ಯೆಹೋವನಿಗೆ ಹೇಯವಾದದ್ದು.”
ಎಲ್ಲ ವಿಗ್ರಹಗಳನ್ನು ಸುಟ್ಟುಹಾಕಲು ಒಪ್ಪಿಗೆ ನೀಡುವವರು ತಮ್ಮ ಕೈಗಳನ್ನು ಮೇಲಕ್ಕೆ ಎತ್ತಿ ಎಂದು ಆ ವ್ಯಕ್ತಿಯು ಸಭಿಕರನ್ನು ಕೇಳಿದನು. ಆ ಕೂಡಲೆ ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತಿದರು. (ಅ. ಕೃತ್ಯಗಳು 19:19, 20) ಈಗ ಆ ಸಮುದಾಯದಲ್ಲಿರುವ 25 ಕುಟುಂಬಗಳಲ್ಲಿ 23 ಕುಟುಂಬಗಳು ದೇವರ ವಾಕ್ಯವನ್ನು ಅಭ್ಯಾಸಿಸುತ್ತಿವೆ. ಇಬ್ಬರು ವ್ಯಕ್ತಿಗಳು ಅಸ್ನಾತ ಪ್ರಚಾರಕರಾಗಿ ಸೇವೆಮಾಡುತ್ತಿದ್ದಾರೆ. ಮತ್ತು ಯೆಹೋವನ ಮುಂದೆ ಶುದ್ಧವಾದ ನಿಲುವನ್ನು ಹೊಂದುವ ಸಲುವಾಗಿ, ಐವರು ದಂಪತಿಗಳು ತಮ್ಮ ವಿವಾಹವನ್ನು ಕಾನೂನುಬದ್ಧವಾಗಿ ಮಾಡಲು ಯೋಜಿಸಿದ್ದಾರೆ.—ತೀತ 3:1; ಇಬ್ರಿಯ 13:4.
ಕ್ಯಾಸೆಟ್ ರೆಕಾರ್ಡಿಂಗ್‌ಗಳ ಸಹಾಯದಿಂದ ಕಲಿಸುವುದು
ಆಲ್ಟಿಪ್ಲೆನೋದಲ್ಲಿ ಅನೇಕರು ಅನಕ್ಷರಸ್ಥರಾಗಿರುವುದರಿಂದ, ಸ್ಥಳಿಕ ಭಾಷೆಗಳಲ್ಲಿ ಲಭ್ಯಗೊಳಿಸಲ್ಪಟ್ಟಿರುವ ವಾಚ್ ಟವರ್ ವಿಡಿಯೋಗಳು ಮತ್ತು ಕ್ಯಾಸೆಟ್ ರೆಕಾರ್ಡಿಂಗ್‌ಗಳು ತುಂಬ ಪ್ರಯೋಜನಕರವಾಗಿವೆ. ಇವುಗಳ ಸಹಾಯದಿಂದ ಮನೆ ಬೈಬಲ್ ಅಭ್ಯಾಸಗಳನ್ನು ಸಹ ನಡೆಸುತ್ತಿದ್ದಾರೆ. ಒಂದು ಆಡಿಯೊ ಕ್ಯಾಸೆಟ್‌ನ ಸಹಾಯದಿಂದ, ಡೋರಾ ಎಂಬ ಹೆಸರಿನ ಒಬ್ಬ ವಿಶೇಷ ಪಯನೀಯರಳು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನಲ್ಲಿ ಅಭ್ಯಾಸಗಳನ್ನು ನಡೆಸುತ್ತಿದ್ದಾಳೆ. ಅಭ್ಯಾಸದಲ್ಲಿ ಪ್ರತಿ ಬಾರಿ ಒಂದೊಂದು ಪ್ಯಾರಗ್ರಾಫನ್ನು ಟೇಪ್‌ನಲ್ಲಿ ನುಡಿಸಿ, ಆಗಷ್ಟೇ ಕೇಳಿಸಿಕೊಂಡ ವಿಷಯಗಳ ಕುರಿತು ಬೈಬಲ್ ವಿದ್ಯಾರ್ಥಿಗೆ ಅವಳು ಪ್ರಶ್ನೆಗಳನ್ನು ಕೇಳುತ್ತಾಳೆ.
ಒಂದು ಸ್ಥಳಿಕ ರೇಡಿಯೊ ಸ್ಟೇಷನ್, ಅಪೇಕ್ಷೆ ಬ್ರೋಷರಿನ ಭಾಗಗಳನ್ನು ಕೆಚ್‌ವ ಭಾಷೆಯಲ್ಲಿ ಕ್ರಮವಾಗಿ ಪ್ರಸಾರಮಾಡುತ್ತದೆ. ಸ್ಪ್ಯಾನಿಷ್ ಭಾಷೆಯ ಎಚ್ಚರ! ಪತ್ರಿಕೆಯ ಭಾಗಗಳನ್ನು ಸಹ ಇದು ಪ್ರಸಾರಮಾಡುತ್ತದೆ. ಆದುದರಿಂದ, ಅನೇಕರು ರಾಜ್ಯದ ಸಂದೇಶವನ್ನು ಗ್ರಹಿಸುತ್ತಾರೆ ಮತ್ತು ಯೆಹೋವನ ಸಾಕ್ಷಿಗಳು ಅವರ ಮನೆಗಳಿಗೆ ಭೇಟಿನೀಡುವಾಗ ಅವರು ಹೆಚ್ಚು ವಿಷಯಗಳನ್ನು ಕಲಿತುಕೊಳ್ಳಲು ಬಯಸುತ್ತಾರೆ.
ಒಟ್ಟಿನಲ್ಲಿ ಲೋಕದ ಜನರ ಕಣ್ಣಿಗೆ ಆಲ್ಟಿಪ್ಲೆನೋ ಮರೆಯಾಗಿರುವುದಾದರೂ, ದೇವರ ದೃಷ್ಟಿಯಿಂದಂತೂ ಅದು ಮರೆಯಾಗಿಲ್ಲ. ಮಾನವಕುಲಕ್ಕಾಗಿರುವ ಯೆಹೋವನ ಪ್ರೀತಿಯ ಫಲವಾಗಿ, ಆ್ಯಂಡಿಯನ್ ಆಲ್ಟಿಪ್ಲೆನೋದಲ್ಲಿ ವಾಸಿಸುತ್ತಿರುವ ಅನೇಕ ಜನರು, ಆತನ ಸತ್ಯಾರಾಧನೆಯ ಭವ್ಯ ಆಲಯವನ್ನು ವೈಭವೀಕರಿಸುತ್ತಿರುವಂತಹ ದೊಡ್ಡ ಗುಂಪಿನ ಭಾಗವಾಗುತ್ತಿದ್ದಾರೆ.—ಹಗ್ಗಾಯ 2:7.
[ಪಾದಟಿಪ್ಪಣಿ]
^ ಪ್ಯಾರ. 10 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.