ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧಾರ್ಮಿಕ ಒಗ್ಗಟ್ಟು—ಶೀಘ್ರದಲ್ಲೇ?

ಧಾರ್ಮಿಕ ಒಗ್ಗಟ್ಟು—ಶೀಘ್ರದಲ್ಲೇ?

ಧಾರ್ಮಿಕ ಒಗ್ಗಟ್ಟು​—⁠ಶೀಘ್ರದಲ್ಲೇ?

“ನಮ್ಮ ಚರ್ಚುಗಳ ಇತಿಹಾಸದಲ್ಲೇ ಇದೊಂದು ಮುಖ್ಯ ದಿನವಾಗಿದೆ” ಎಂದು ಲೂತರನ್‌ ವರ್ಲ್ಡ್‌ ಫೆಡರೆಷನ್‌ನ ಅಧ್ಯಕ್ಷರಾಗಿರುವ ಕ್ರಿಸ್ಟಿಯನ್‌ ಕ್ರೌಸಾ ಹೇಳಿದರು. ಪೋಪ್‌ ಜಾನ್‌ ಪಾಲ್‌ II ಸಹ, “ಕ್ರೈಸ್ತರ ನಡುವೆ ಪೂರ್ಣ ಐಕ್ಯತೆಯನ್ನು ಪುನಸ್ಸ್ಥಾಪಿಸುವ ಕಷ್ಟಕರವಾದ ಹಾದಿಯಲ್ಲಿ ಇದೊಂದು ಮೈಲಿಗಲ್ಲು” ಆಗಿದೆ ಹೇಳಿದರು.

ಯಾವುದರ ಕುರಿತು ಈ ಹುರುಪಿನ ಘೋಷಣೆಗಳನ್ನು ಮಾಡಲಾಯಿತು? ಇವೆಲ್ಲವೂ, 1999ರ ಅಕ್ಟೋಬರ್‌ 31ರಂದು ಜರ್ಮನಿಯ ಆಗ್ಸ್‌ಬರ್ಗ್‌ನಲ್ಲಿ ಸಹಿಹಾಕಲ್ಪಟ್ಟ ಅಫಿಷಲ್‌ ಕಾಮನ್‌ ಸ್ಟೇಟ್‌ಮೆಂಟ್‌ ಕುರಿತಾಗಿಯೇ. ಇದು, ಪಾಪವಿಮೋಚನೆಯ ಬೋಧನೆಯ ಜಂಟಿ ಘೋಷಣೆಯನ್ನು ದೃಢಪಡಿಸಿತ್ತು. ಈ ಘಟನೆಗಾಗಿ, ಸರಿಯಾದ ಸಮಯ ಮತ್ತು ಸ್ಥಳವನ್ನು ಆಯ್ಕೆಮಾಡಲಾಗಿತ್ತು. ಏಕೆಂದರೆ, 1517ರಲ್ಲಿ ಅಕ್ಟೋಬರ್‌ 31ರಂದೇ, ಮಾರ್ಟಿನ್‌ ಲೂತರನು ವಿಟೆನ್‌ಬರ್ಗ್‌ನಲ್ಲಿನ ರಾಜನ ಚರ್ಚಿನ ಬಾಗಿಲ ಮೇಲೆ ತನ್ನ 95 ವಾದವಿಷಯಗಳನ್ನು ಅಂಟಿಸಿದ್ದನು. ಮತ್ತು ಇದು ತಾನೇ, ಪ್ರಾಟೆಸ್ಟೆಂಟ್‌ ಸುಧಾರಣೆಯ ಕಿಡಿಯನ್ನು ಹೊತ್ತಿಸಿತ್ತು. ಆಗ್ಸ್‌ಬರ್ಗ್‌ನಲ್ಲೇ ಲೂತರನ್‌ವಾದಿಗಳು, ಆಗ್ಸ್‌ಬರ್ಗ್‌ ಕನ್‌ಫೆಷನ್‌ ಎಂಬ ಲಿಖಿತ ದಾಖಲೆಯಲ್ಲಿ ತಮ್ಮ ಮೂಲಭೂತ ನಂಬಿಕೆಗಳನ್ನು 1530ರಲ್ಲಿ ಪ್ರಸ್ತುತಪಡಿಸಿದ್ದರು. ಇದನ್ನು ಕ್ಯಾಥೊಲಿಕ್‌ ಚರ್ಚು ತಿರಸ್ಕರಿಸಿತ್ತು. ಮತ್ತು ಇದು ಪ್ರಾಟೆಸ್ಟಂಟ್‌ ಮತ್ತು ಕ್ಯಾಥೊಲಿಕ್‌ ಮತದ ನಡುವೆ ರಾಜಿಮಾಡಲಾಗದಂಥ ಬಿರುಕನ್ನು ಉಂಟುಮಾಡಿತ್ತು.

ಈ ಜಂಟಿ ಘೋಷಣೆಯು, ಅನೇಕರು ಹೇಳುವಂತೆ ಚರ್ಚಿನ ಒಡಕನ್ನು ಸರಿಪಡಿಸುವುದರಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿರುವುದೊ? ಎಲ್ಲರಿಗೂ ಇದೇ ರೀತಿಯ ಅಭಿಪ್ರಾಯವಿಲ್ಲ. ಏಕೆಂದರೆ 250ಕ್ಕಿಂತಲೂ ಹೆಚ್ಚು ಪ್ರಾಟೆಸ್ಟೆಂಟ್‌ ದೇವತಾಶಾಸ್ತ್ರಜ್ಞರು ಇದನ್ನು ವಿರೋಧಿಸುವ ಮನವಿಯನ್ನು ಸಲ್ಲಿಸಿದರು. ಆ ಮನವಿಯಲ್ಲಿ ಅವರು, ಕ್ಯಾಥೊಲಿಕ್‌ ಚರ್ಚು ತಮ್ಮ ಮೇಲೆ ಪುನಃ ಅಧಿಕಾರ ಚಲಾಯಿಸುವುದು ಎಂಬುದರ ಬಗ್ಗೆ ಎಚ್ಚರಿಸಿದರು. ಇಸವಿ 2000ಕ್ಕಾಗಿ ಕ್ಯಾಥೊಲಿಕ್‌ ಚರ್ಚು ಒಂದು ವಿಶೇಷವಾದ ಪಾಪಕ್ಷಮೆಯನ್ನು ಘೋಷಿಸಿದಾಗಲೂ ಪ್ರಾಟೆಸ್ಟೆಂಟರು ಕೆರಳಿದರು. ಯಾಕೆಂದರೆ ಈ ಪಾಪಕ್ಷಮೆಯ ಆಚರಣೆಯೇ, ಸುಮಾರು 500 ವರ್ಷಗಳ ಹಿಂದೆ ಕ್ಯಾಥೊಲಿಕ್‌ ಮತ್ತು ಪ್ರಾಟೆಸ್ಟೆಂಟರ ನಡುವಿನ ಬಿರುಕಿಗೆ ಕಾರಣವಾಗಿತ್ತು. ಅಷ್ಟುಮಾತ್ರವಲ್ಲದೆ, ಈ ಆಗ್ಸ್‌ಬರ್ಗ್‌ ಕನ್‌ಫೆಷನ್‌ ಹಾಗೂ ಕ್ಯಾಥೊಲಿಕರು ಅದನ್ನು ನಿರಾಕರಿಸುತ್ತಾ ಹೊರಡಿಸಿದ ಕೌನ್ಸಿಲ್‌ ಆಫ್‌ ಟ್ರೆಂಟ್‌ ಈಗಲೂ ಜಾರಿಯಲ್ಲಿರುವುದರಿಂದ, ಅವರ ನಡುವಿನ ಐಕ್ಯತೆಯು ಕನ್ನಡಿಯೊಳಗಿನ ಗಂಟೇ ಸರಿ.

ಕ್ರೈಸ್ತಪ್ರಪಂಚದೊಳಗೆ ಎಷ್ಟೊಂದು ಒಡಕು ಮತ್ತು ಭಿನ್ನಾಭಿಪ್ರಾಯವಿದೆ ಎಂದರೆ, ಕೇವಲ ಒಂದು ಜಂಟಿ ಘೋಷಣೆಗೆ ಸಹಿಹಾಕುವುದರಿಂದ ಅದೆಲ್ಲವೂ ಸರಿಹೋಗಲಾರದು. ಅಷ್ಟುಮಾತ್ರವಲ್ಲದೆ, ಧರ್ಮದ ಕುರಿತಾಗಿ ನಿಜವಾದ ಐಕ್ಯವು ಇರಬೇಕಾದರೆ, ನಂಬಿಕೆಗಳು ದೇವರ ವಾಕ್ಯವಾದ ಬೈಬಲಿನಲ್ಲಿ ದೃಢವಾಗಿ ಬೇರೂರಿರಬೇಕು. (ಎಫೆಸ 4:​3-6) ನಿಜವಾದ ಐಕ್ಯತೆಯು, ರಾಜಿಮಾಡಿಕೊಳ್ಳುವುದರಿಂದ ಬರುವುದಿಲ್ಲ ಬದಲಾಗಿ ದೇವರು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆಂಬುದನ್ನು ಕಲಿತುಕೊಂಡು, ಅದಕ್ಕನುಸಾರ ನಡೆದುಕೊಳ್ಳುವ ಮೂಲಕವೇ ಬರುತ್ತದೆ. ನಂಬಿಗಸ್ತ ಪ್ರವಾದಿಯಾದ ಮೀಕನು ಘೋಷಿಸಿದ್ದು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.”​—⁠ಮೀಕ 4:5.