ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಾಳೆ ಏನಾಗುವುದೋ ನಿಮಗೆ ತಿಳಿಯದು”

“ನಾಳೆ ಏನಾಗುವುದೋ ನಿಮಗೆ ತಿಳಿಯದು”

ಜೀವನ ಕಥೆ

“ನಾಳೆ ಏನಾಗುವುದೋ ನಿಮಗೆ ತಿಳಿಯದು”

ಹರ್ಬರ್ಟ್‌ ಜೆನಿಂಗ್ಸ್‌ ಹೇಳಿದಂತೆ

“ಟೇಮಾ ಎಂಬ ರೇವು ಪಟ್ಟಣದಿಂದ, ಘಾನದಲ್ಲಿರುವ ವಾಚ್‌ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸಿಗೆ ನಾನು ಮರಳುತ್ತಿದ್ದೆ. ದಾರಿಯಲ್ಲಿ ಒಬ್ಬ ಯುವಕನು, ಪಟ್ಟಣಕ್ಕೆ ಹೋಗಲು ಬಿಟ್ಟಿ ಪ್ರಯಾಣಕ್ಕಾಗಿ ಪ್ರಯತ್ನಿಸುತ್ತಿದ್ದನು. ನಾನು ಅವನನ್ನು ಟ್ರಕ್ಕಿನೊಳಗೆ ಕುಳಿತುಕೊಳ್ಳುವಂತೆ ಹೇಳಿದೆ. ಅವನಿಗೆ ಸಾಕ್ಷಿಯನ್ನು ಕೊಡಲು ಇದೊಂದು ಒಳ್ಳೆಯ ಅವಕಾಶವೆಂದೆಣಿಸುತ್ತಾ, ನಾನು ಸಾಕ್ಷಿ ಕೊಡಲಾರಂಭಿಸಿದೆ. ನಾನು ತುಂಬ ಚೆನ್ನಾಗಿ ಸಾಕ್ಷಿ ಕೊಡುತ್ತಿದ್ದೇನೆಂದು ನೆನಸಿದೆ! ಆದರೆ ಈ ಯುವಕನು ಇಳಿಯಬೇಕಾದ ಸ್ಥಳದಲ್ಲಿ ನಾನು ಟ್ರಕ್ಕನ್ನು ನಿಲ್ಲಿಸಿದ ಕೂಡಲೇ ಅವನು ಛಂಗನೆ ಹೊರಕ್ಕೆ ಹಾರಿ, ಓಡಿ ಹೋದನು.”

ಈ ಘಟನೆಯು, ನನಗೆ ಏನೋ ಆಗುತ್ತಿದೆ ಎಂಬ ಸುಳಿವನ್ನು ಕೊಟ್ಟಿತು. ಆದರೆ ಏನು ನಡೆಯಿತು ಎಂಬುದನ್ನು ನಿಮಗೆ ತಿಳಿಸುವ ಮುಂಚೆ, ಕೆನಡ ದೇಶದವನಾಗಿದ್ದ ನಾನು ಘಾನ ದೇಶವನ್ನು ಹೇಗೆ ಬಂದೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ.

ಅದು, 1949ರ ಡಿಸೆಂಬರ್‌ ತಿಂಗಳ ಮಧ್ಯಭಾಗವಾಗಿತ್ತು. ಮತ್ತು ಆ ಸ್ಥಳ, ಕೆನಡದ ಟೊರಾಂಟೊವಿನ ಉತ್ತರದಿಕ್ಕಿನಲ್ಲಿರುವ ಉಪನಗರವಾಗಿತ್ತು. ನಮ್ಮ ಕೆಲಸದ ತಂಡವು, ಒಂದು ಹೊಸ ಮನೆಗೆ ನೀರಿನ ಸರಬರಾಯಿಯನ್ನು ಒದಗಿಸುವುದಕ್ಕಾಗಿ ಹಿಮದಿಂದಾಗಿ ಹೆಪ್ಪುಗಟ್ಟಿದಂಥ ನೆಲವನ್ನು ಸುಮಾರು ಒಂದು ಮೀಟರ್‌ ಆಳಕ್ಕೆ ಆಗತಾನೇ ಅಗೆದು ಮುಗಿಸಿತ್ತು. ನಮಗೆ ತುಂಬ ಚಳಿಯಾಗುತ್ತಿತ್ತು ಮತ್ತು ಆಯಾಸವೂ ಆಗಿತ್ತು. ಟ್ರಕ್‌ ಬಂದು ನಮ್ಮನ್ನು ಕರೆದುಕೊಂಡು ಹೋಗಲಿಕ್ಕಾಗಿ ನಾವು ಕಾಯುತ್ತಿರುವಾಗ, ನಾವೆಲ್ಲರೂ ಕಟ್ಟಿಗೆಯಿಂದ ಉರಿಯುತ್ತಿದ್ದ ಬೆಂಕಿಯ ಸುತ್ತಲೂ ಹತ್ತಿರಹತ್ತಿರವಾಗಿ ಗುಂಪುಗೂಡಿದೆವು. ಒಮ್ಮೆಲೇ, ಕಾರ್ಮಿಕರಲ್ಲಿ ಒಬ್ಬರಾಗಿದ್ದ ಆರ್ನಾಲ್ಡ್‌ ಲಾರ್ಟನ್‌ ಎಂಬುವರು “ಯುದ್ಧಗಳು ಮತ್ತು ಯುದ್ಧಗಳ ಕುರಿತಾದ ವದಂತಿಗಳು,” “ಈ ಲೋಕದ ಅಂತ್ಯ” ಹೀಗೆ, ನನಗೆ ಗೊತ್ತಿರದಂತಹ ಯಾವಯಾವುದೋ ಅಭಿವ್ಯಕ್ತಿಗಳನ್ನು ಉಪಯೋಗಿಸುತ್ತಾ ಏನೇನೋ ಹೇಳಲಾರಂಭಿಸಿದರು. ತತ್‌ಕ್ಷಣ ಎಲ್ಲರೂ ಮಾತಾಡುವುದನ್ನೇ ನಿಲ್ಲಿಸಿಬಿಟ್ಟರು, ಕಸಿವಿಸಿಗೊಂಡರು ಮತ್ತು ಕೆಲವರು ಅವರ ಕಡೆಗೆ ಸಿಟ್ಟನ್ನೂ ವ್ಯಕ್ತಪಡಿಸಿದರು. ‘ಈ ವ್ಯಕ್ತಿಗೆ ನಿಜವಾಗಿಯೂ ತುಂಬ ಧೈರ್ಯವಿದೆ! ಇಲ್ಲಿ ಕೇಳಿಸಿಕೊಳ್ಳಲು ಯಾರಿಗೂ ಮನಸ್ಸಿಲ್ಲದಿದ್ದರೂ ಅವರು ಮಾತಾಡುತ್ತಾ ಇದ್ದಾರಲ್ಲ’ ಎಂದು ನಾನು ನೆನಸಿದ್ದು ಈಗಲೂ ನನಗೆ ನೆನಪಿದೆ. ಆದರೆ ಅವರು ಏನನ್ನು ಹೇಳಿದನೊ ಅದು ನನ್ನ ಮನಮುಟ್ಟಿತು. ಆಗ, ಎರಡನೆಯ ವಿಶ್ವ ಯುದ್ಧವು ಕೊನೆಗೊಂಡು ಕೆಲವೇ ವರ್ಷಗಳಾಗಿದ್ದವು. ನನ್ನ ಕುಟುಂಬವು ಹಲವಾರು ತಲೆಮಾರುಗಳಿಂದ ಕ್ರಿಸ್ಟಡೇಲ್ಫಿಯನ್‌ ಧರ್ಮದ ಭಾಗವಾಗಿದ್ದರೂ ನಾನು ಹಿಂದೆಂದೂ ಈ ರೀತಿಯ ವಿಚಾರಗಳನ್ನು ಕೇಳಿರಲಿಲ್ಲ. ನಾನು ತದೇಕಚಿತ್ತದಿಂದ ಅವರು ಹೇಳುತ್ತಿದ್ದ ಸಂಗತಿಗಳನ್ನು ಕೇಳುತ್ತಿದ್ದೆ, ಮತ್ತು ಅವರು ಕೊಡುತ್ತಿದ್ದ ವಿವರಣೆಗಳಲ್ಲಿ ಮೈಮರೆತೆ.

ಸ್ವಲ್ಪ ಸಮಯದ ನಂತರ ನಾನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲಿಕ್ಕಾಗಿ ಪುನಃ ಆರ್ನಾಲ್ಡ್‌ರನ್ನು ಭೇಟಿಯಾದೆ. ಈಗ ಅವರ ಕುರಿತಾಗಿ ಯೋಚಿಸುವಾಗ, 19 ವರ್ಷ ಪ್ರಾಯದ ಅನನುಭವಿ ಹುಡುಗನಾಗಿದ್ದ ನನ್ನ ವಿಷಯದಲ್ಲಿ ಅವರು ಮತ್ತು ಅವರ ಹೆಂಡತಿ ಜೀನ್‌ ಎಷ್ಟೊಂದು ಸಹನೆ ಮತ್ತು ದಯೆಯನ್ನು ತೋರಿಸಿದರೆಂದು ನನಗೆ ಅನಿಸುತ್ತದೆ. ಅವರೊಂದಿಗೆ ಮಾತಾಡಲಿಕ್ಕೋಸ್ಕರ ನಾನು ಎಷ್ಟೋ ಬಾರಿ, ಅವರಿಗೆ ತಿಳಿಸದೇ ಅಥವಾ ಅವರ ಆಮಂತ್ರಣವಿಲ್ಲದೇ ಅವರ ಮನೆಗೆ ಹೋಗುತ್ತಿದ್ದೆ. ಅವರು ನನ್ನನ್ನು ಸರಿಯಾದ ದಾರಿಗೆ ತಂದರು ಮತ್ತು ನನ್ನ ಯುವ ಮನಸ್ಸಿನಲ್ಲಿ ಮಟ್ಟಗಳು ಮತ್ತು ನೈತಿಕತೆಗಳ ಕುರಿತಾಗಿ ನಡೆಯುತ್ತಿದ್ದ ತಿಕ್ಕಾಟವನ್ನು ಬಗೆಹರಿಸಲು ಸಹಾಯಮಾಡಿದರು. ರಸ್ತೆಬದಿಯಲ್ಲಿ ಉರಿಯುತ್ತಿದ್ದ ಆ ಬೆಂಕಿಯ ಬಳಿಯಲ್ಲಿನ ಅನುಭವವಾಗಿ ಹತ್ತು ತಿಂಗಳುಗಳು ಕಳೆದ ನಂತರ, ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೋಪಾದಿ 1950ರ ಅಕ್ಟೋಬರ್‌ 22ರಂದು ದೀಕ್ಷಾಸ್ನಾನಪಡೆದುಕೊಂಡೆ. ಅದಾದ ಮೇಲೆ ಟೊರಾಂಟೊವಿನ ಭಾಗವಾಗಿರುವ, ನಾರ್ತ್‌ ಯಾರ್ಕ್‌ನಲ್ಲಿರುವ ವಿಲೊಡೇಲ್‌ ಸಭೆಯೊಂದಿಗೆ ನಾನು ಸಹವಾಸಮಾಡಲಾರಂಭಿಸಿದೆ.

ಜೊತೆ ಆರಾಧಕರೊಂದಿಗೆ ಮುಂದೆ ಸಾಗುವುದು

ನನ್ನ ಹೊಸ ನಂಬಿಕೆಯನ್ನು ನಾನು ಬಿಟ್ಟುಕೊಡುವುದಿಲ್ಲವೆಂಬುದು ನನ್ನ ತಂದೆಗೆ ಗೊತ್ತಾದಾಗ, ಮನೆಯಲ್ಲಿನ ವಾತಾವರಣವು ಹೆಚ್ಚೆಚ್ಚು ಬಿಗಿಯಾಗತೊಡಗಿತು. ಅಷ್ಟುಮಾತ್ರವಲ್ಲ, ಸ್ವಲ್ಪ ಸಮಯದ ಹಿಂದೆ ತಂದೆಯವರು ಒಬ್ಬ ಪಾನಮತ್ತ ಚಾಲಕನಿಂದಾಗಿ ವಾಹನ ಅಪಘಾತಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ಅವರೊಂದಿಗೆ ವ್ಯವಹರಿಸುವುದು ಸ್ವಲ್ಪ ಕಷ್ಟವೇ ಆಗಿತ್ತು. ನನ್ನ ಅಮ್ಮ, ಇಬ್ಬರು ತಮ್ಮಂದಿರು ಮತ್ತು ಇಬ್ಬರು ತಂಗಿಯರಿಗೂ ಜೀವಿತವು ಕಷ್ಟಕರವಾಗಿತ್ತು. ನಾನು ಬೈಬಲ್‌ ಸತ್ಯವನ್ನು ಕಲಿಯುತ್ತಿದ್ದದ್ದರಿಂದ ಮನೆಯಲ್ಲಿ ಉಂಟಾದ ವಾತಾವರಣವು ಇನ್ನೂ ಬಿಗಿಯಾಯಿತು. ಆದುದರಿಂದ ನನ್ನ ಹೆತ್ತವರೊಂದಿಗೆ ಸಮಾಧಾನದಿಂದಿರಲು ಮತ್ತು ‘ಸತ್ಯಮಾರ್ಗದಲ್ಲಿ’ ಸ್ಥಿರಗೊಳ್ಳಲಿಕ್ಕಾಗಿ, ಮನೆಬಿಟ್ಟು ಹೋಗುವುದೇ ಒಳ್ಳೆಯದೆಂದು ನನಗೆ ತೋಚಿತು.​—⁠2 ಪೇತ್ರ 2:⁠2.

1951ರ ಬೇಸಗೆಕಾಲದ ಕೊನೆಯ ಭಾಗದೊಳಗೆ ನಾನು ಆಲ್ಬರ್ಟದ ಕೊಲ್‌ಮ್ಯಾನ್‌ನಲ್ಲಿರುವ ಒಂದು ಚಿಕ್ಕ ಸಭೆಗೆ ಸೇರಿಕೊಂಡೆ. ಅಲ್ಲಿ, ರಾಸ್‌ ಹಂಟ್‌ ಮತ್ತು ಕೀತ್‌ ರಾಬಿನ್ಸ್‌ ಎಂಬ ಇಬ್ಬರು ಯುವಕರಿದ್ದರು. ರೆಗ್ಯುಲರ್‌ ಪಯನೀಯರಿಂಗ್‌ ಎಂದು ಕರೆಯಲಾಗುವ ಪೂರ್ಣ ಸಮಯದ ಸಾರ್ವಜನಿಕ ಸಾರುವ ಕೆಲಸದಲ್ಲಿ ಅವರು ಕಾರ್ಯಮಗ್ನರಾಗಿದ್ದರು. ನಾನು ಸಹ ಅದೇ ಸ್ವಯಂಸೇವಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂತೆ ಅವರು ನನ್ನನ್ನು ಮಾರ್ಗದರ್ಶಿಸಿದರು. ಆದುದರಿಂದ, 1952ರ ಮಾರ್ಚ್‌ 1ರಂದು ನಾನು ಸಹ ಒಬ್ಬ ರೆಗ್ಯುಲರ್‌ ಪಯನೀಯರನಾದೆ.

ನನಗೆ ಸಿಕ್ಕಿದಂತಹ ಉತ್ತೇಜನದ ಸವಿನೆನಪುಗಳು ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ನನಗೆ ಕಲಿಯಲು ಅನೇಕಾನೇಕ ವಿಷಯಗಳಿದ್ದವು ಮತ್ತು ಇದೇ ನನ್ನ ಪರೀಕ್ಷೆಯ ನೆಲವಾಗಿತ್ತು. ಆಲ್ಬರ್ಟದಲ್ಲಿದ್ದ ಲೇತ್‌ಬ್ರಿಡ್ಜ್‌ ಸಭೆಯಲ್ಲಿ ಸುಮಾರು ಒಂದು ವರ್ಷದ ವರೆಗೆ ಪಯನೀಯರ್‌ ಸೇವೆಯನ್ನು ಮಾಡಿದ ಬಳಿಕ, ಒಬ್ಬ ಸಂಚರಣ ಮೇಲ್ವಿಚಾರಕನೋಪಾದಿ ಸೇವೆಸಲ್ಲಿಸುವ ಆಮಂತ್ರಣ ಸಿಕ್ಕಿತು. ಇದು ತೀರ ಅನಿರೀಕ್ಷಿತವಾಗಿತ್ತು. ನಾನು ಕೆನಡದ ಪೂರ್ವ ಕರಾವಳಿಯಲ್ಲಿ ನ್ಯೂ ಬ್ರೂನ್ಸವಿಕ್‌ನ ಮಾಂಕ್‌ಟನ್‌ನಿಂದ ಹಿಡಿದು, ಕ್ವಿಬೆಕ್‌ನಲ್ಲಿರುವ ಗಾಸ್ಪೆ ವರೆಗಿರುವ ಯೆಹೋವನ ಸಾಕ್ಷಿಗಳ ಸಭೆಗಳಿಗೆ ಸೇವೆ ಸಲ್ಲಿಸಬೇಕಾಗಿತ್ತು.

ನಾನು ಆಗ ಬರಿ 24 ವರ್ಷದವನಾಗಿದ್ದೆ ಮತ್ತು ಸತ್ಯದಲ್ಲಿ ಹೊಸಬನೂ ಆಗಿದ್ದೆ. ಆದುದರಿಂದ, ನಾನು ಯಾರ ಸೇವೆಮಾಡಲಿದ್ದೇನೊ ಆ ಪ್ರೌಢ ಸಾಕ್ಷಿಗಳಿಗೆ ಹೋಲಿಸುವಾಗ, ನಾನು ಈ ಕೆಲಸಕ್ಕೆ ತೀರ ಅನರ್ಹನು ಎಂದು ನನಗೆ ಅನಿಸುತ್ತಿತ್ತು. ಮುಂದಿನ ಹಲವಾರು ತಿಂಗಳುಗಳ ವರೆಗೆ ನಾನು ತುಂಬ ಪ್ರಯಾಸಪಟ್ಟೆ. ಅನಂತರ ಇನ್ನೊಂದು ಆಶ್ಚರ್ಯವು ನನಗೆ ಕಾದಿತ್ತು.

ಗಿಲ್ಯಡ್‌ ಶಾಲೆ ಮತ್ತು ಗೋಲ್ಡ್‌ ಕೋಸ್ಟ್‌ಗೆ ಪ್ರಯಾಣ

1955ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ನ್ಯೂ ಯಾರ್ಕಿನ ಸೌತ್‌ ಲಾನ್ಸಿಂಗ್‌ನಲ್ಲಿದ್ದ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 26ನೆಯ ತರಗತಿಗೆ ಇನ್ನಿತರ ನೂರಾರು ವಿದ್ಯಾರ್ಥಿಗಳೊಂದಿಗೆ ಜೊತೆಗೂಡುವಂತೆ ನನ್ನನ್ನು ಆಮಂತ್ರಿಸಲಾಯಿತು. ಅಲ್ಲಿ ನಮಗೆ ಐದು ತಿಂಗಳುಗಳ ವರೆಗೆ ಸಿಕ್ಕಿದಂತಹ ತೀವ್ರ ತರಬೇತಿ ಮತ್ತು ಅಧ್ಯಯನವೇ ನನಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ವಿಷಯವಾಗಿತ್ತು. ಉದಾತ್ತ ಉದ್ದೇಶಗಳಿದ್ದ ಇಂಥ ಗುಂಪಿನೊಂದಿಗೆ ಇದ್ದದ್ದರಿಂದ ನನ್ನ ಹುರುಪು ಇನ್ನೂ ಹೆಚ್ಚಾಯಿತು. ಈ ನಡುವೆ, ನನ್ನ ಜೀವಿತವನ್ನು ಈ ದಿನದ ವರೆಗೂ ಸಂತೋಷದಾಯಕವನ್ನಾಗಿ ಇಟ್ಟಿರುವ ಇನ್ನೊಂದು ಪ್ರಸಂಗವು ನಡೆಯಿತು.

ಮಿಷನೆರಿ ಕೆಲಸಕ್ಕಾಗಿ ತಯಾರಿನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ, ಐಲೀನ್‌ ಸ್ಟಬ್ಸ್‌ ಎಂಬ ಒಬ್ಬ ಯುವ ಸಹೋದರಿಯೂ ಇದ್ದಳು. ನಾನು ಐಲೀನಳಲ್ಲಿ ಒಂದು ರೀತಿಯ ಸ್ಥಿರಮನಸ್ಸು, ಗಂಭೀರವಾದ ವ್ಯವಹಾರಜ್ಞಾನ ಮತ್ತು ವಿನಯಶೀಲತೆ ಹಾಗೂ ಪ್ರಸನ್ನ ಮನೋಭಾವವಿರುವುದನ್ನು ನೋಡಿದೆ. ನಾನು ಅವಳನ್ನು ಮದುವೆಯಾಗಲು ಬಯಸುತ್ತೇನೆಂದು ಹೇಳಿದಾಗ ಅವಳನ್ನು ನಾನು ಹೆದರಿಸಿಬಿಟ್ಟೆನೆಂದು ನೆನಸುತ್ತೇನೆ. ಏಕೆಂದರೆ ನಾನದನ್ನು ನಯನಾಜೂಕಿಲ್ಲದೆ ಅವಳಿಗೆ ಹೇಳಿಬಿಟ್ಟೆ. ಸದ್ಯಕ್ಕೆ ಅವಳು ಅದನ್ನು ಕೇಳಿ ಓಡಿಹೋಗಲಿಲ್ಲ! ಆದರೆ ನಾವಿಬ್ಬರೂ ನಮ್ಮ ಆಯಾ ಮಿಷನೆರಿ ನೇಮಕಗಳಿಗೆ ಹೋಗುವೆವು, ಅಂದರೆ ಐಲೀನ್‌ ಕೊಸ್ಟರೀಕಕ್ಕೆ ಮತ್ತು ನಾನು ಪಶ್ಚಿಮ ಆಫ್ರಿಕದ ಗೋಲ್ಡ್‌ ಕೋಸ್ಟ್‌ (ಈಗ ಘಾನ)ಗೆ ಹೋಗುವೆವು ಎಂದು ನಮ್ಮೊಳಗೆ ಒಪ್ಪಿಕೊಂಡೆವು.

ಸಹೋದರ ನೇತನ್‌ ನಾರರು ವಾಚ್‌ಟವರ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅಂದರೆ, 1956ರ ಮೇ ತಿಂಗಳ ಒಂದು ದಿನ ಬೆಳಗ್ಗೆ, ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿದ್ದ ಅವರ ಆಫೀಸಿಗೆ ನನ್ನನ್ನು ಕರೆಸಲಾಯಿತು. ಗೋಲ್ಡ್‌ ಕೋಸ್ಟ್‌, ಟೊಗೊಲ್ಯಾಂಡ್‌ (ಈಗ ಟೊಗೊ), ಐವರಿ ಕೋಸ್ಟ್‌ (ಈಗ ಕೋಟ್‌ ಡೀವಾರ್‌), ಅಪ್ಪರ್‌ ವೊಲ್ಟಾ (ಈಗ ಬುರ್ಕಿನ ಫಾಸೊ) ಮತ್ತು ದ ಗ್ಯಾಂಬಿಯದಲ್ಲಿ ನಡೆಯುತ್ತಿರುವ ಸಾರುವ ಕೆಲಸವನ್ನು ನೋಡಿಕೊಳ್ಳಲು, ಬ್ರಾಂಚ್‌ ಸೇವಕನಾಗಿ ಸೇವೆಸಲ್ಲಿಸುವ ನೇಮಕವನ್ನು ನನಗೆ ಕೊಡಲಾಯಿತು.

ಸಹೋದರರ ನಾರರ ಮಾತುಗಳು, ಅವರು ನಿನ್ನೆಯೇ ಹೇಳಿದರೊ ಎಂಬಂತೆ ಈಗಲೂ ನನಗೆ ಚೆನ್ನಾಗಿ ನೆನಪಿದೆ. “ನೀವು ಹೋದ ಕೂಡಲೇ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿಲ್ಲ” ಎಂದು ಅವರು ಹೇಳಿದರು. “ಅವಸರವೇನಿಲ್ಲ; ಅಲ್ಲಿರುವ ಅನುಭವಸ್ಥ ಸಹೋದರರಿಂದ ಕಲಿತುಕೊಳ್ಳಿರಿ. ಮತ್ತು ನೀವು ಸಿದ್ಧರಾಗಿದ್ದೀರೆಂದು ನಿಮಗನಿಸುವಾಗ, ನೀವು ಬ್ರಾಂಚ್‌ ಸೇವಕರೋಪಾದಿ ಸೇವೆಸಲ್ಲಿಸುವುದನ್ನು ಆರಂಭಿಸಬೇಕು. . . . ಇದು ನಿಮ್ಮ ನೇಮಕದ ಪತ್ರ. ನೀವು ಅಲ್ಲಿಗೆ ಹೋಗಿ ಏಳು ದಿವಸಗಳಾದ ಮೇಲೆ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.”

‘ಕೇವಲ ಏಳು ದಿನಗಳು. ಮತ್ತು ಅವರು “ಅವಸರವೇನಿಲ್ಲ” ಎಂದು ಹೇಳಿದರಲ್ಲ?’ ಎಂದು ನಾನು ಮನಸ್ಸಿನಲ್ಲಿಯೇ ಅಂದುಕೊಂಡೆ. ಅವರೊಂದಿಗಿನ ಆ ಮಾತುಕತೆಯ ನಂತರ ನಾನು ಗರಬಡಿದವನಾಗಿ ಅಲ್ಲಿಂದ ಹೊರಬಂದೆ.

ಮುಂದಿನ ಕೆಲವು ದಿನಗಳು ಹಾರಿಹೋದವು. ಸೊಸೈಟಿಯ ಬ್ರೂಕ್ಲಿನ್‌ ಆಫೀಸುಗಳನ್ನು ದಾಟುತ್ತಾ ಈಸ್ಟ್‌ ರಿವರ್‌ನಲ್ಲಿ ಸಂಚರಿಸುತ್ತಿದ್ದ ಸರಕುನೌಕೆಯ ಮೇಲ್ಭಾಗದಲ್ಲಿರುವ ಸರಳುಕಂಬಿಯ ಬಳಿ ನಾನು ನಿಂತುಕೊಂಡಿದ್ದೆ. ಗೋಲ್ಡ್‌ ಕೋಸ್ಟ್‌ ತಲಪಲು 21 ದಿವಸಗಳ ಸಮುದ್ರಯಾನವನ್ನು ನಾನು ಆರಂಭಿಸಿದೆ.

ಪರಸ್ಪರ ಪತ್ರಗಳನ್ನು ಬರೆಯುವ ಮೂಲಕ ಐಲೀನ್‌ ಮತ್ತು ನಾನು ವಿದೇಶೀ ಅಂಚೆ ಖಾತೆಯವರಿಗೆ ತುಂಬ ಕೆಲಸಕೊಟ್ಟೆವು. ನಾವು ಪುನಃ 1958ರಲ್ಲಿ ಭೇಟಿಯಾದೆವು, ಮತ್ತು ಅದೇ ವರ್ಷ ಆಗಸ್ಟ್‌ 23ರಂದು ಮದುವೆಯಾದೆವು. ಇಷ್ಟೊಂದು ಒಳ್ಳೆಯ ಸಂಗಾತಿಯನ್ನು ಕೊಟ್ಟದ್ದಕ್ಕಾಗಿ ನಾನು ಯಾವಾಗಲೂ ಯೆಹೋವನಿಗೆ ಉಪಕಾರವನ್ನು ಹೇಳಲು ಮರೆಯುವುದಿಲ್ಲ.

ಸೊಸೈಟಿಯ ಬ್ರಾಂಚ್‌ ಆಫೀಸಿನಲ್ಲಿ, ಜೊತೆ ಮಿಷನೆರಿಗಳು ಮತ್ತು ಆಫ್ರಿಕದ ನನ್ನ ಸಹೋದರಸಹೋದರಿಯರೊಂದಿಗೆ 19 ವರ್ಷಗಳ ವರೆಗೆ ಸೇವೆಸಲ್ಲಿಸಲು ನನಗೆ ಸಿಕ್ಕಿದ ಸುಯೋಗವನ್ನು ನಾನು ಗಣ್ಯಮಾಡುತ್ತೇನೆ. ಆ ಅವಧಿಯಲ್ಲಿ, ಬೆತೆಲ್‌ ಕುಟುಂಬದಲ್ಲಿದ್ದ ಬೆರಳೆಣಿಕೆಯಷ್ಟು ಸದಸ್ಯರ ಸಂಖ್ಯೆಯು ಸುಮಾರು 25ಕ್ಕೆ ಏರಿತು. ಅವು, ಪಂಥಾಹ್ವಾನದಾಯಕ, ಕಾರ್ಯಮಗ್ನ ಮತ್ತು ಒಳ್ಳೆಯ ಫಲಿತಾಂಶಗಳುಳ್ಳ ದಿನಗಳಾಗಿದ್ದವು. ಆದರೆ ನನಗೆ ಹೇಗನಿಸುತ್ತಿತ್ತೆಂದು ನಿಮಗೆ ಪ್ರಾಮಾಣಿಕವಾಗಿ ತಿಳಿಸುತ್ತೇನೆ. ಅಲ್ಲಿನ ಬಿಸಿ, ತೇವ ಹವಾಮಾನದಿಂದಾಗಿ ನನಗೆ ತುಂಬ ಕಷ್ಟವಾಗುತ್ತಿತ್ತು. ನಾನು ಯಾವಾಗಲೂ ಬೆವರುತ್ತಿದ್ದೆ, ದೇಹವೆಲ್ಲ ಅಂಟಂಟಾಗಿರುತ್ತಿತ್ತು ಮತ್ತು ಕೆಲವೊಮ್ಮೆ ಬೇಗನೆ ಸಿಟ್ಟಿಗೇಳುತ್ತಿದ್ದೆ. ಹೀಗಿದ್ದರೂ, ಅಲ್ಲಿ ಸೇವೆಮಾಡುವುದು ನನಗೆ ತುಂಬ ಆನಂದವನ್ನು ಕೊಡುತ್ತಿತ್ತು. ಏಕೆಂದರೆ, 1956ರಲ್ಲಿ ಘಾನದಲ್ಲಿದ್ದ 6,000 ರಾಜ್ಯ ಪ್ರಚಾರಕರ ಸಂಖ್ಯೆಯು, 1975ರಲ್ಲಿ 21,000ಕ್ಕೆ ಏರಿತು. ಈಗ ಅಲ್ಲಿ 60,000ಕ್ಕಿಂತಲೂ ಹೆಚ್ಚು ಸಾಕ್ಷಿಗಳು ಕಾರ್ಯಮಗ್ನರಾಗಿರುವುದನ್ನು ನೋಡಿ ನನಗೆ ಇನ್ನೂ ಹೆಚ್ಚು ಸಂತೋಷವಾಗುತ್ತದೆ.

ನಾವು ನಿರೀಕ್ಷಿಸದಿದ್ದ “ನಾಳೆ”

ಸುಮಾರು 1970ರಷ್ಟಕ್ಕೆ ನನಗೊಂದು ಆರೋಗ್ಯ ಸಮಸ್ಯೆಯು ಶುರುವಾಯಿತು. ಅದೇನೆಂದು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಅದಕ್ಕಾಗಿ ನಾನು ಸಂಪೂರ್ಣ ವೈದ್ಯಕೀಯ ತಪಾಸಣೆಯನ್ನು ಮಾಡಿಸಿಕೊಂಡೆ. ಆದರೆ ನಾನು “ಚೆನ್ನಾಗಿಯೇ” ಇದ್ದೇನೆಂದು ಹೇಳಲಾಯಿತು. ಹಾಗಾದರೆ, ನನಗೆ ಯಾವಾಗಲೂ ಹುಷಾರಿಲ್ಲದಿರುವಂಥ, ತುಂಬ ಆಯಾಸಗೊಂಡಿರುವಂಥ, ತುಂಬ ಚಡಪಡಿಸುವಂತಹ ಅನಿಸಿಕೆಗಳು ಯಾಕಾಗುತ್ತಿತ್ತು? ಎರಡು ಸಂಗತಿಗಳು ನನಗೆ ಉತ್ತರವನ್ನು ಕೊಟ್ಟವು. ಇದನ್ನು ತಿಳಿದು ನಾನು ಗರಬಡಿದವನಂತಾದೆ. ಅದು, ಯಾಕೋಬನು ಬರೆದಂತೆಯೇ ಇತ್ತು: “ನಾಳೆ ಏನಾಗುವದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದು?”​—⁠ಯಾಕೋಬ 4:​13.

ಇದರ ಮೊದಲನೆಯ ಸುಳಿವು, ನಾನು ಟ್ರಕ್ಕಿನಲ್ಲಿ ಆ ಯುವಕನಿಗೆ ಸಾಕ್ಷಿಕೊಡುತ್ತಾ ಪಟ್ಟಣಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಸಿಕ್ಕಿತ್ತು. ನಾನು ಸ್ವಲ್ಪವೂ ನಿಲ್ಲಿಸದೆ ಮಾತಾಡುತ್ತಾ ಇದ್ದೇನೆಂದೂ, ಪ್ರತಿಯೊಂದು ಕ್ಷಣ ಹೆಚ್ಚೆಚ್ಚು ವೇಗವಾಗಿ ಮತ್ತು ಹೆಚ್ಚು ಭಾವಾವೇಶದಿಂದ ಮಾತಾಡುತ್ತಿದ್ದೇನೆಂದು ನನಗೆ ಗೊತ್ತೇ ಆಗಲಿಲ್ಲ. ಆದರೆ, ಈ ಯುವಕನು ಇಳಿಯಬೇಕಾಗಿದ್ದ ಸ್ಥಳವನ್ನು ನಾವು ತಲಪಿದ ಕೂಡಲೇ, ಅವನು ಟ್ರಕ್ಕಿನಿಂದ ಹಾರಿ ಓಡಿಹೋಗಲಾರಂಭಿಸಿದಾಗ ನನಗೆ ತುಂಬ ಆಶ್ಚರ್ಯವಾಯಿತು. ಏಕೆಂದರೆ ಘಾನದ ಹೆಚ್ಚಿನ ನಿವಾಸಿಗಳು ಸ್ವಭಾವತಃ ಗಡಿಬಿಡಿಯಿಲ್ಲದವರೂ, ತುಂಬ ಶಾಂತ ಸ್ವಭಾವದವರೂ, ಏನನ್ನೂ ಬೇಗನೆ ತಲೆಗೆ ಹಚ್ಚಿಕೊಳ್ಳದವರೂ ಆಗಿದ್ದಾರೆ. ಆದುದರಿಂದ ಈ ಯುವಕನು ವರ್ತಿಸಿದ ರೀತಿಯು ನನಗೆ ಸ್ವಲ್ಪ ವಿಚಿತ್ರವೆಂದು ತೋರಿತು. ನಾನು ಅಲ್ಲಿಯೇ ಯೋಚಿಸುತ್ತಾ ಕುಳಿತುಕೊಂಡೆ. ಆಗ ನನಗೆ, ನನ್ನಲ್ಲಿ ಏನೋ ಸಮಸ್ಯೆಯಿದೆಯೆಂದು ಗೊತ್ತಾಯಿತು. ಆದರೆ ಆ ಸಮಸ್ಯೆ ಏನೆಂದು ನನಗೆ ಗೊತ್ತಾಗಲಿಲ್ಲ. ಆದರೆ ಖಂಡಿತವಾಗಿಯೂ ಒಂದು ಸಮಸ್ಯೆಯಿದೆಯೆಂಬುದು ಇದರಿಂದ ಸ್ಪಷ್ಟವಾಗಿತ್ತು.

ಎರಡನೆಯ ಸುಳಿವು, ಐಲೀನ್‌ ಮತ್ತು ನಾನು ತುಂಬ ಹೊತ್ತಿನ ವರೆಗೆ ಸ್ವ-ಪರಿಶೀಲನೆಯನ್ನು ಮಾಡುವ ಚರ್ಚೆಯನ್ನು ನಡೆಸಿದ ಬಳಿಕ, ಐಲೀನ್‌ ಕೊನೆಯಲ್ಲಿ ಹೀಗಂದಾಗ ಸಿಕ್ಕಿತು: “ಇದು ಶಾರೀರಿಕ ಸಮಸ್ಯೆಯಲ್ಲದಿದ್ದರೆ, ಖಂಡಿತವಾಗಿಯೂ ಮಾನಸಿಕ ಸಮಸ್ಯೆಯಾಗಿರಬೇಕು.” ಆದುದರಿಂದ ನಾನು ಜಾಗರೂಕತೆಯಿಂದ ನನ್ನ ಎಲ್ಲ ರೋಗಸೂಚಕ ಲಕ್ಷಣಗಳನ್ನು ಬರೆದುಕೊಂಡು, ಒಬ್ಬ ಮನೋವೈದ್ಯನನ್ನು ಭೇಟಿಮಾಡಿದೆ. ನಾನು ನನ್ನ ಪಟ್ಟಿಯನ್ನು ಓದಿಹೇಳಿದಾಗ ಅವರು ಹೇಳಿದ್ದು: “ಇದೆಲ್ಲವು ಕೇವಲ ಉನ್ಮಾದ-ವಿಷಣ್ಣತಾ ವಿಕೃತಿ ಬುದ್ಧಿವಿಕಲ್ಪ ರೋಗದ ಲಕ್ಷಣಗಳಾಗಿರಬಲ್ಲವು. ನಿಮಗೆ ಆ ಸಮಸ್ಯೆಯೇ ಇರಬೇಕು.”

ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ! ಮುಂದಿನ ಕೆಲವು ವರ್ಷಗಳಲ್ಲಿ ನಾನು ಸಮಸ್ಯೆಯಿಂದ ಒದ್ದಾಡುತ್ತಿದ್ದಾಗ, ನನ್ನ ಸ್ಥಿತಿಯು ನಿರಂತರವಾಗಿ ಹದಗೆಡುತ್ತಾ ಇತ್ತು. ಅದಕ್ಕಾಗಿ ನಾನು ಪರಿಹಾರವನ್ನು ಹುಡುಕುತ್ತಾ ಇದ್ದೆ. ಆದರೆ ಯಾರಿಗೂ ಏನು ಮಾಡಬೇಕೆಂದು ಗೊತ್ತಿರಲಿಲ್ಲ. ಅದು ನನ್ನಲ್ಲಿ ಎಂಥ ಹತಾಶೆಯನ್ನು ಉಂಟುಮಾಡಿತು!

ಜೀವನಪೂರ್ತಿ ಪೂರ್ಣ ಸಮಯದ ಸೇವೆಯ ಸುಯೋಗಕ್ಕೆ ಅಂಟಿಕೊಂಡಿರಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಮತ್ತು ಮಾಡಬೇಕಾದ ಕೆಲಸವು ಬಹಳಷ್ಟಿತ್ತು. ಎಷ್ಟೋ ಸಲ ನಾನು ಹೃತ್ಪೂರ್ವಕವಾಗಿ ಮತ್ತು ಗಾಢವಾಗಿ ಪ್ರಾರ್ಥಿಸುತ್ತಾ ಹೀಗನ್ನುತ್ತಿದ್ದೆ: “ಯೆಹೋವನೇ, ನಿನ್ನ ಚಿತ್ತವಾದರೆ ನಾನು ‘ಬದುಕಿ ಈ ಕೆಲಸವನ್ನು ಮಾಡುವೆ.’” (ಯಾಕೋಬ 4:15) ಆದರೆ ಹಾಗಾಗಲಿಲ್ಲ. ಆದುದರಿಂದ ವಾಸ್ತವ ಸಂಗತಿಯನ್ನು ಅಂಗೀಕರಿಸಿಕೊಂಡು, ನಾವು ಜೂನ್‌ 1975ರಲ್ಲಿ ಘಾನ ದೇಶವನ್ನು ಮತ್ತು ನಮ್ಮ ಅನೇಕ ಮಂದಿ ಆಪ್ತ ಮಿತ್ರರನ್ನು ಬಿಟ್ಟು ಕೆನಡಕ್ಕೆ ಹಿಂದಿರುಗಲು ಏರ್ಪಾಡುಮಾಡಿದೆವು.

ಯೆಹೋವನು ತನ್ನ ಜನರ ಮೂಲಕ ಸಹಾಯಮಾಡುತ್ತಾನೆ

ನಾನು ಕೆಲಸಕ್ಕೆ ಬಾರದವನೂ ಅಲ್ಲ, ನನ್ನ ಸಮಸ್ಯೆಯು ಅಪರೂಪದ್ದೂ ಅಲ್ಲವೆಂದು ನನಗೆ ಸ್ವಲ್ಪ ಸಮಯದೊಳಗೆ ತಿಳಿದುಬಂತು. 1 ಪೇತ್ರ 5:9ರ ಮಾತುಗಳು ನನಗೆ ಹೆಚ್ಚು ಅರ್ಥಪೂರ್ಣವಾದವು: “ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ [ತಿಳಿದಿರಲಿ].” ಇದನ್ನು ಗ್ರಹಿಸಿಕೊಂಡು, ಅನಿರೀಕ್ಷಿತವಾದ ಈ ಬದಲಾವಣೆಯ ಎದುರಿನಲ್ಲೂ ಯೆಹೋವನು ಹೇಗೆ ನಮ್ಮಿಬ್ಬರನ್ನೂ ಬೆಂಬಲಿಸಿದ್ದಾನೆಂಬುದನ್ನು ನಾನು ವಿವೇಚಿಸಲಾರಂಭಿಸಿದೆ. ನಮ್ಮ ‘ಸಹೋದರರೂ’ ನಮಗೆ ಅನೇಕ ವಿಧಗಳಲ್ಲಿ ಸಹಾಯಮಾಡಿದರು.

ಭೌತಿಕ ಸಂಪತ್ತು ನಮ್ಮ ಬಳಿ ಇರಲಿಲ್ಲ. ಆದರೂ ಯೆಹೋವನು ನಮ್ಮ ಕೈಬಿಡಲಿಲ್ಲ. ಘಾನದಲ್ಲಿರುವ ನಮ್ಮ ಸ್ನೇಹಿತರು ನಮಗೆ ಭೌತಿಕವಾಗಿ ಮತ್ತು ಬೇರೆ ರೀತಿಗಳಲ್ಲಿ ಸಹಾಯಮಾಡುವಂತೆ ಅವರನ್ನು ಆತನು ಪ್ರಚೋದಿಸಿದನು. ನಾವು ತುಂಬ ಪ್ರೀತಿಸುತ್ತಿದ್ದ ಇವರೆಲ್ಲರನ್ನೂ ಭಾರವಾದ ಹೃದಯದೊಂದಿಗೆ ಬೀಳ್ಕೊಟ್ಟು, ಈ ಅನಿರೀಕ್ಷಿತವಾದ “ನಾಳೆ”ಯನ್ನು ಎದುರಿಸಲು ಹೊರಟೆವು.

ಐಲೀನಳ ಅಕ್ಕ ಲೇನೊರಾ ಮತ್ತು ಅವರ ಗಂಡ ಆ್ಯಲ್ವಿನ್‌ ಫ್ರೀಸನ್‌ರು ದಯಾಪೂರ್ವಕವಾಗಿ ನಮ್ಮನ್ನು ಅವರ ಮನೆಯಲ್ಲಿ ತಂಗಲು ಅನುಮತಿಸಿದರು. ಅಷ್ಟುಮಾತ್ರವಲ್ಲ, ಹಲವಾರು ತಿಂಗಳುಗಳ ವರೆಗೆ ಉದಾರಭಾವದಿಂದ ನಮಗೆ ಬೇಕಾದುದೆಲ್ಲವನ್ನೂ ಒದಗಿಸಿದರು. ಒಬ್ಬ ಖ್ಯಾತ ಮನೋವೈದ್ಯನು ತುಂಬ ಭರವಸೆಯಿಂದ ಹೀಗೆ ಹೇಳಿದನು: “ಆರು ತಿಂಗಳುಗಳೊಳಗೇ ನೀನು ಗುಣಹೊಂದುವಿ.” ಇದನ್ನು ಕೇವಲ ನನ್ನಲ್ಲಿ ಭರವಸೆಮೂಡಿಸಲಿಕ್ಕಾಗಿ ಹೇಳಿದರೋ ಏನೋ, ಏಕೆಂದರೆ ಆರು ವರ್ಷಗಳು ಕಳೆದರೂ ಅವರ ಮಾತುಗಳು ನಿಜವಾಗಲಿಲ್ಲ. ಈ ದಿನದ ವರೆಗೂ ನನಗೆ ಆ ಸಮಸ್ಯೆಯಿದೆ. ಇದಕ್ಕೆ ಈಗ, ದ್ವಿಧ್ರುವ ಸಂವೇಗಾತ್ಮಕ ವಿಕೃತಿ ಎಂಬ ಸೌಮ್ಯವಾದ ಹೆಸರನ್ನು ಕೊಡಲಾಗಿದೆ. ಈ ಹೆಸರು ಹೆಚ್ಚು ಸೌಮ್ಯವಾಗಿದೆ ನಿಜ, ಆದರೆ ಈ ವ್ಯಾಧಿಯ ರೋಗಲಕ್ಷಣಗಳನ್ನು ಆ ಹೆಸರು ಯಾವುದೇ ರೀತಿಯಲ್ಲಿ ಕಡಿಮೆಗೊಳಿಸುವುದಿಲ್ಲವೆಂದು ಈ ರೋಗದಿಂದ ಬಳಲುವವನಿಗೇ ಗೊತ್ತು.

ಆ ಸಮಯದಷ್ಟಕ್ಕೆ, ಸಹೋದರ ನಾರ್‌ ಸಹ ಒಂದು ಕಾಯಿಲೆಯಿಂದ ನರಳುತ್ತಿದ್ದರು. ಮತ್ತು ಇದರಿಂದಾಗಿಯೇ, ಅವರು 1977ರ ಜೂನ್‌ ತಿಂಗಳಲ್ಲಿ ತೀರಿಹೋದರು. ಆದರೆ ಆ ಸ್ಥಿತಿಯಲ್ಲೂ ಅವರು ನನಗೆ ಸಾಂತ್ವನ ಮತ್ತು ಸಲಹೆಯಿಂದ ಕೂಡಿದ ಉದ್ದವಾದ ಪ್ರೋತ್ಸಾಹದಾಯಕ ಪತ್ರಗಳನ್ನು ಬರೆಯಲಿಕ್ಕಾಗಿ ಸಮಯವನ್ನು ತೆಗೆದುಕೊಂಡರು ಮತ್ತು ತಮ್ಮಲ್ಲಿ ಇದ್ದಬದ್ದ ಶಕ್ತಿಯನ್ನೆಲ್ಲಾ ಉಪಯೋಗಿಸುತ್ತಿದ್ದರು. ಅವರ ಆ ಪತ್ರಗಳನ್ನು ನಾನು ಈಗಲೂ ಹಾಗೆಯೇ ಇಟ್ಟುಕೊಂಡಿದ್ದೇನೆ. ಅವರ ಮಾತುಗಳು, ಪದೇ ಪದೇ ನನ್ನಲ್ಲಿ ಉಂಟಾಗುತ್ತಿದ್ದ ಅನಗತ್ಯವಾದ ವೈಫಲ್ಯದ ಭಾವನೆಗಳನ್ನು ಬಹಳಷ್ಟು ಶಮನಗೊಳಿಸಿದವು.

1975ರ ಅಂತ್ಯದಷ್ಟಕ್ಕೆ, ನಮಗೆ ತುಂಬ ಅಮೂಲ್ಯವಾಗಿದ್ದ ಪೂರ್ಣ-ಸಮಯದ ಸೇವಾ ಸುಯೋಗಗಳನ್ನು ನಾವು ಬಿಟ್ಟುಬಿಡಬೇಕಾಯಿತು. ಮತ್ತು ನನ್ನ ಆರೋಗ್ಯದತ್ತ ಹೆಚ್ಚು ಗಮನವನ್ನು ಕೊಡಬೇಕಾಯಿತು. ಸಾಧಾರಣವಾದ ಹಗಲು ಹೊತ್ತಿನ ಬೆಳಕು ಸಹ ನನ್ನ ಕಣ್ಣುಗಳಿಗೆ ತೊಂದರೆಯನ್ನು ಉಂಟುಮಾಡುತ್ತಿತ್ತು. ಕರ್ಕಶವಾದ ಯಾವುದೇ ಶಬ್ದಗಳು, ಗುಂಡೇಟುಗಳಂತೆ ಮರುಧ್ವನಿಸುತ್ತಿದ್ದವು. ಜನರು ಅತ್ತಿತ್ತ ಓಡಾಡುತ್ತಿರುವ ಶಬ್ದವನ್ನೂ ನಾನು ತಡೆದುಕೊಳ್ಳಲು ಶಕ್ತನಾಗಿರಲಿಲ್ಲ. ಕ್ರೈಸ್ತ ಕೂಟಗಳಿಗೆ ಹಾಜರಾಗುವುದೇ ಒಂದು ದೊಡ್ಡ ಸಮಸ್ಯೆಯಾಯಿತು. ಆದರೆ, ಆತ್ಮಿಕ ಸಹವಾಸವು ಎಷ್ಟು ಪ್ರಾಮುಖ್ಯವಾಗಿದೆ ಎಂಬುದು ನನಗೆ ತಿಳಿದಿತ್ತು. ಆದುದರಿಂದ ಈ ನನ್ನ ಸಮಸ್ಯೆಯೊಂದಿಗೆ ನಿಭಾಯಿಸಲು, ಎಲ್ಲರೂ ರಾಜ್ಯ ಸಭಾಗೃಹದಲ್ಲಿ ಕುಳಿತುಕೊಂಡ ಬಳಿಕವೇ ಸಭಾಗೃಹವನ್ನು ಪ್ರವೇಶಿಸುತ್ತಿದ್ದೆ. ಮತ್ತು ಕಾರ್ಯಕ್ರಮದ ಅಂತ್ಯಗೊಂಡ ನಂತರ ಜನರು ಕದಲಲು ಆರಂಭಿಸುವುದಕ್ಕೆ ಸ್ವಲ್ಪ ಮುಂಚೆಯೇ ನಾನು ಅಲ್ಲಿಂದ ಎದ್ದು ಬಂದುಬಿಡುತ್ತಿದ್ದೆ.

ಬಹಿರಂಗ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು ನನಗೆ ಇನ್ನೊಂದು ದೊಡ್ಡ ಪಂಥಾಹ್ವಾನದಂತಿದೆ. ಕೆಲವೊಮ್ಮೆ ನಾನು ಒಂದು ಮನೆಯ ಬಳಿ ನಿಂತುಕೊಳ್ಳುತ್ತಿದ್ದೆ, ಆದರೆ ನನಗೆ ಕರೆಗಂಟೆಯನ್ನು ಒತ್ತಲು ಧೈರ್ಯವೇ ಸಾಲುತ್ತಿರಲಿಲ್ಲ. ಆದರೆ ನಾನು ನನ್ನ ಮನೆಗೆ ಹಿಂದಿರುಗಿಹೋಗುತ್ತಿರಲಿಲ್ಲ, ಯಾಕೆಂದರೆ ನಮ್ಮ ಶುಶ್ರೂಷೆಯಿಂದಾಗಿ ನಮಗೆ ಮಾತ್ರವಲ್ಲ, ನಮ್ಮ ಸಂದೇಶಕ್ಕೆ ಒಳ್ಳೇ ಪ್ರತಿಕ್ರಿಯೆಯನ್ನು ತೋರಿಸುವವರಿಗೆ ರಕ್ಷಣೆಯನ್ನು ತರುತ್ತದೆಂದು ನನಗೆ ಗೊತ್ತಿತ್ತು. (1 ತಿಮೊಥೆಯ 4:16) ಸ್ವಲ್ಪ ಸಮಯದ ನಂತರ, ನಾನು ನನ್ನ ಭಾವನೆಗಳನ್ನು ನಿಯಂತ್ರಿಸಲು ಶಕ್ತನಾಗುತ್ತಿದ್ದೆ. ಮತ್ತು ಆಗ ಮುಂದಿನ ಮನೆಗೆ ಹೋಗಿ ನಾನು ಪುನಃ ಪ್ರಯತ್ನಿಸುತ್ತಿದ್ದೆ. ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದನ್ನು ಮುಂದುವರಿಸುವ ಮೂಲಕ, ನನ್ನ ಆತ್ಮಿಕ ಆರೋಗ್ಯವನ್ನು ಒಂದಷ್ಟರ ಮಟ್ಟಿಗೆ ಕಾಪಾಡಿಕೊಂಡು ಹೋದೆ ಮತ್ತು ಇದು ನಾನು ನನ್ನ ವ್ಯಾಧಿಯೊಂದಿಗೆ ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸಿತು.

ಈ ದ್ವಿಧ್ರುವ ಸಂವೇಗಾತ್ಮಕ ವಿಕೃತಿಯು ದೀರ್ಘಸಮಯದ ವರೆಗೆ ಇರುವಂಥದ್ದಾಗಿರುವುದರಿಂದ, ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಈ ರೋಗವು ನನ್ನ ಬೆನ್ನಿಗೆ ಅಂಟಿಕೊಂಡಿರುವುದೆಂದು ನಾನು ಗ್ರಹಿಸಿದ್ದೇನೆ. 1981ರಲ್ಲಿ, ಅವೇಕ್‌! * ಪತ್ರಿಕೆಯಲ್ಲಿ ಅತ್ಯುತ್ತಮವಾದ ಒಂದು ಲೇಖನಮಾಲೆಯು ಬಂತು. ಇದರಿಂದಾಗಿ, ನಾನು ಈ ರೋಗದ ಕುರಿತಾಗಿ ಚೆನ್ನಾಗಿ ಅರ್ಥಮಾಡಿಕೊಳ್ಳಲು ಶಕ್ತನಾದೆ ಮತ್ತು ಅದನ್ನು ಹೇಗೆ ನಿಭಾಯಿಸುವುದು ಎಂಬುದರ ಹೆಚ್ಚು ಪರಿಣಾಮಕಾರಿ ವಿಧಾನಗಳನ್ನು ಕಲಿಯಲು ಶಕ್ತನಾದೆ.

ನಿಭಾಯಿಸಲು ಕಲಿಯುವುದು

ಇದೆಲ್ಲವು ನನ್ನ ಹೆಂಡತಿಯ ತ್ಯಾಗ ಮನೋಭಾವ ಮತ್ತು ಹೊಂದಿಕೊಂಡುಹೋಗುವ ಸ್ವಭಾವದಿಂದಲೂ ಸಾಧ್ಯವಾಗಿದೆ. ನೀವು ಸಹ ನನ್ನಂಥ ಪರಿಸ್ಥಿತಿಯಲ್ಲಿರುವ ರೋಗಿಯನ್ನು ನೋಡಿಕೊಳ್ಳುತ್ತಿರುವಲ್ಲಿ, ಅವಳು ಗಮನಿಸಿರುವ ಈ ಸಂಗತಿಗಳು ನಿಮಗೆ ಸಹಾಯಮಾಡಬಹುದು:

“ಈ ಸಂವೇಗಾತ್ಮಕ ವಿಕೃತಿಯು, ಒಮ್ಮಿಂದೊಮ್ಮೆಲೇ ರೋಗಿಯ ವ್ಯಕ್ತಿತ್ವವನ್ನು ಬದಲಾಯಿಸುವಂತೆ ತೋರುತ್ತದೆ. ರೋಗಿಯು, ಹೊಸ ಹೊಸ ಯೋಜನೆಗಳು ಮತ್ತು ವಿಚಾರಗಳುಳ್ಳ ಒಬ್ಬ ಚೈತನ್ಯಭರಿತ ಪ್ರೋತ್ಸಾಹದಾಯಕ ವ್ಯಕ್ತಿಯಾಗಿದ್ದು, ಕೆಲವೇ ತಾಸುಗಳೊಳಗೆ ತುಂಬ ಆಯಾಸಗೊಂಡಿರುವ, ನಕಾರಾತ್ಮಕ ಮತ್ತು ಕೋಪಿಷ್ಠ ವ್ಯಕ್ತಿ ಆಗಿ ಬದಲಾಗಬಲ್ಲನು. ಅದೊಂದು ರೋಗವಾಗಿದೆ ಎಂದು ಮನಸ್ಸಿನಲ್ಲಿಟ್ಟುಕೊಳ್ಳದಿದ್ದರೆ ಬೇರೆಯವರು ಕೆರಳಿ, ತಬ್ಬಿಬ್ಬುಗೊಳ್ಳಬಹುದು. ಯಾವುದೇ ಯೋಜನೆಗಳಿರುವಲ್ಲಿ ಅವುಗಳನ್ನು ಕ್ಷಣಮಾತ್ರದಲ್ಲಿ ಬದಲಾಯಿಸಬೇಕಾಗಬಹುದು, ಮತ್ತು ನಿರಾಶೆ ಹಾಗೂ ತಿರಸ್ಕರಿಸಲ್ಪಟ್ಟಿರುವ ಭಾವನೆಗಳ ವಿರುದ್ಧ ಒಂದು ವೈಯಕ್ತಿಕ ಹೋರಾಟವು ಆರಂಭವಾಗುತ್ತದೆ.”

ನನ್ನ ವಿಷಯದಲ್ಲಾದರೊ ನಾನು ಒಳ್ಳೇ ಆರೋಗ್ಯದಲ್ಲಿದ್ದೇನೆಂಬ ಅಸಾಮಾನ್ಯವಾದ ಅನಿಸಿಕೆಯಾಗುವಾಗ, ನನಗೆ ಸ್ವಲ್ಪ ಹೆದರಿಕೆ ಆಗುತ್ತದೆ. ಏಕೆಂದರೆ ‘ಅತ್ಯುತ್ಸಾಹದ’ ಶಿಖರವನ್ನು ಮುಟ್ಟಿದ ನಂತರವೇ ‘ಅತಿಖಿನ್ನತೆಯ’ ತಗ್ಗಿಗೆ ಬೀಳುವೆನೆಂದು ನನಗೆ ಗೊತ್ತಿರುತ್ತದೆ. ನನ್ನ ವಿಷಯದಲ್ಲಿ, ‘ಅತ್ಯುತ್ಸಾಹ’ಕ್ಕಿಂತಲೂ ‘ಅತಿಖಿನ್ನತೆ’ಯೇ ಒಳ್ಳೆಯದ್ದಾಗಿರುತ್ತದೆ. ಯಾಕೆಂದರೆ, ನಾನು ಅತಿಖಿನ್ನನಾದಾಗ ಕೆಲವು ದಿನಗಳ ವರೆಗೆ ಏನನ್ನೂ ಮಾಡಲಾರೆ ಮತ್ತು ಹೀಗೆ ಯಾವುದೇ ಅನುಚಿತವಾದ ಕಾರ್ಯದಲ್ಲಿ ತೊಡಗಲಾರೆ. ನಾನು ತೀರ ಹೆಚ್ಚು ಉದ್ರೇಕಿತನಾಗದಂತೆ ಐಲೀನ್‌ ನನ್ನನ್ನು ಎಚ್ಚರಿಸುತ್ತಾ ಇರುವ ಮೂಲಕ ಸಹಾಯಮಾಡುತ್ತಾಳೆ. ಮತ್ತು ನಾನು ಅತಿ ಖಿನ್ನನಾಗುವಾಗ ಅವಳು ನನಗೆ ಸಾಂತ್ವನ ಹಾಗೂ ಬೆಂಬಲವನ್ನು ಕೊಡುತ್ತಾ ಇರುತ್ತಾಳೆ.

ಈ ರೋಗವು ಅದರ ಉಲ್ಬಣ ಸ್ಥಿತಿಯಲ್ಲಿರುವಾಗ, ಬೇರೆಲ್ಲವನ್ನೂ ಮರೆತು ಸ್ವಂತ ವಿಚಾರಗಳಲ್ಲೇ ಮುಳುಗಿಬಿಡುವ ತುಂಬ ದೊಡ್ಡ ಅಪಾಯವಿದೆ. ಖಿನ್ನಾವಸ್ಥೆಯಲ್ಲಿರುವಾಗ, ಆ ವ್ಯಕ್ತಿಯು ಬೇರೆಲ್ಲರಿಂದ ತನ್ನನ್ನು ಪ್ರತ್ಯೇಕವಾಗಿರಿಸಬಹುದು ಅಥವಾ ಅತಿಉನ್ಮಾದದ ಸಮಯದಲ್ಲಿ ಬೇರೆಯವರ ಭಾವನೆಗಳು ಮತ್ತು ಪ್ರತಿಕ್ರಿಯೆಗಳ ಕುರಿತಾಗಿ ಅರಿವೇ ಇಲ್ಲದವನಾಗಿರಬಹುದು. ಹಿಂದೆ, ನನಗೆ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಯಿದೆಯೆಂಬುದನ್ನು ಒಪ್ಪಿಕೊಳ್ಳುವುದು ಕಷ್ಟಕರವಾಗಿತ್ತು. ಈ ಸಮಸ್ಯೆಯು ಬಾಹ್ಯ ಕಾರಣಗಳಿಂದಾಗಿದೆ, ಅಂದರೆ ನಾನು ಮಾಡಿದಂತಹ ಕೆಲಸದ ವೈಫಲ್ಯದಿಂದಾಗಿ ಅಥವಾ ಬೇರಾವುದೊ ವ್ಯಕ್ತಿಯಿಂದಾಗಿದೆ ಎಂಬ ವಿಚಾರವನ್ನು ನಾನು ಮನಸ್ಸಿನಿಂದ ತೆಗೆದುಹಾಕಲು ತುಂಬ ಪ್ರಯತ್ನಪಡಬೇಕಾಯಿತು. ಅದಕ್ಕೆ ಬದಲು, ‘ನನ್ನ ಸುತ್ತಲೂ ಏನೂ ಬದಲಾಗಿಲ್ಲ. ಸಮಸ್ಯೆಯು ಹೊರಗಿನದ್ದಲ್ಲ, ನನ್ನೊಳಗೆಯೇ ಇದೆ’ ಎಂಬ ಸಂಗತಿಯನ್ನು ನಾನು ಆಗಾಗ್ಗೆ ಜ್ಞಾಪಿಸಿಕೊಳ್ಳಬೇಕಾಗುತ್ತಿತ್ತು. ಕ್ರಮೇಣವಾಗಿ ನನ್ನ ಆಲೋಚನಾ ರೀತಿಯು ಬದಲಾಯಿತು.

ಈ ಎಲ್ಲ ವರ್ಷಗಳಲ್ಲಿ, ನನ್ನ ಸ್ಥಿತಿಯ ಕುರಿತಾಗಿ ನಾವು ಪರಸ್ಪರರಿಗೆ ಮತ್ತು ಇತರರಿಗೆ ಮುಚ್ಚುಮರೆಯಿಲ್ಲದೆ ಮತ್ತು ಪ್ರಾಮಾಣಿಕತೆಯಿಂದ ತಿಳಿಸಲು ಕಲಿತುಕೊಂಡಿದ್ದೇವೆ. ಆಶಾವಾದಿ ಮನೋಭಾವವನ್ನು ಇಟ್ಟುಕೊಂಡು, ಆ ರೋಗವು ನಮ್ಮ ಜೀವಿತಗಳನ್ನು ನಿಯಂತ್ರಿಸದಂತೆಯೂ ನಾವು ಪ್ರಯತ್ನಿಸುತ್ತೇವೆ.

ಒಂದು ಉತ್ತಮ “ನಾಳೆ”

ಅನೇಕ ಹೋರಾಟಗಳನ್ನು ನಡೆಸುವ ಸಮಯದಲ್ಲಿ ನಾವು ಯೆಹೋವನ ಆಶೀರ್ವಾದ ಮತ್ತು ಬೆಂಬಲವನ್ನು ಹೃತ್ಪೂರ್ವಕವಾದ ಪ್ರಾರ್ಥನೆಗಳನ್ನು ಮಾಡುವ ಮೂಲಕ ಅನುಭವಿಸಿದ್ದೇವೆ. ನಾವಿಬ್ಬರೂ ಈಗ ನಮ್ಮ ಇಳಿವಯಸ್ಸಿನಲ್ಲಿದ್ದೇವೆ. ನನಗೆ ಕ್ರಮವಾಗಿ ವೈದ್ಯಕೀಯ ಗಮನವನ್ನು ಕೊಡಲಾಗುತ್ತಿದೆ ಮತ್ತು ಮಿತವಾದ ಆದರೂ ಸತತವಾದ ಔಷಧವನ್ನು ಕೊಡಲಾಗುತ್ತದೆ. ಈಗ ನನ್ನ ಆರೋಗ್ಯವು ಸ್ವಲ್ಪಮಟ್ಟಿಗೆ ಸುಧಾರಿಸಿದೆ. ನಮಗೆ ಕೊಡಲಾಗುವ ಯಾವುದೇ ಸೇವಾ ಸುಯೋಗಗಳನ್ನು ನಾವು ಗಣ್ಯಮಾಡುತ್ತೇವೆ. ನಾನೀಗಲೂ ಸಭೆಯಲ್ಲಿ ಒಬ್ಬ ಹಿರಿಯನಾಗಿದ್ದೇನೆ. ಮತ್ತು ನಂಬಿಕೆಯಲ್ಲಿರುವ ಇತರರಿಗೆ ಬೆಂಬಲವನ್ನು ಕೊಡಲು ನಾವು ಯಾವಾಗಲೂ ಪ್ರಯತ್ನಿಸುತ್ತೇವೆ.

“ನಾಳೆ ಏನಾಗುವದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದು?” ಎಂದು ಯಾಕೋಬ 4:14ರ ಮಾತುಗಳು ಸತ್ಯವಾಗಿವೆ. ಸದ್ಯದ ಈ ವಿಷಯಗಳ ವ್ಯವಸ್ಥೆಯು ಎಷ್ಟರ ವರೆಗೆ ಇರುವುದೊ ಅಷ್ಟರ ವರೆಗೆ ಇದು ಸತ್ಯವಾಗಿರುವುದು. ಆದರೆ ಯಾಕೋಬ 1:12ರ ಮಾತುಗಳು ಸಹ ಸತ್ಯವಾಗಿವೆ: “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು; ಸ್ವಾಮಿಯು ತನ್ನನ್ನು ಪ್ರೀತಿಸುವವರಿಗೆ ಇದನ್ನು ವಾಗ್ದಾನಮಾಡಿದ್ದಾನೆ.” ಇಂದು ನಾವೆಲ್ಲರೂ ದೃಢವಾಗಿ ನಿಂತು, ನಾಳೆಗಾಗಿ ಯೆಹೋವನು ವಾಗ್ದಾನಿಸಿರುವ ಆಶೀರ್ವಾದಗಳನ್ನು ಪಡೆದುಕೊಳ್ಳುವಂತಾಗಲಿ.

[ಪಾದಟಿಪ್ಪಣಿ]

^ ಪ್ಯಾರ. 35 ಅವೇಕ್‌! ಪತ್ರಿಕೆಯ 1981, ಆಗಸ್ಟ್‌ 8ರ ಸಂಚಿಕೆಯಲ್ಲಿ “ನೀವು ಜೀವನವನ್ನು ನಿಭಾಯಿಸಬಲ್ಲಿರಿ”; 1981, ಸೆಪ್ಟೆಂಬರ್‌ 8ರ ಸಂಚಿಕೆಯಲ್ಲಿ “ನೀವು ಖಿನ್ನತೆಯ ವಿರುದ್ಧ ಹೋರಾಡಬಹುದಾದ ವಿಧ,” ಮತ್ತು 1981, ಅಕ್ಟೋಬರ್‌ 22ರ ಸಂಚಿಕೆಯಲ್ಲಿ “ತೀವ್ರವಾದ ಖಿನ್ನತೆಯೊಂದಿಗೆ ಹೋರಾಡುವುದು” ಎಂಬ ಲೇಖನಗಳನ್ನು ನೋಡಿರಿ.

[ಪುಟ 26ರಲ್ಲಿರುವ ಚಿತ್ರ]

ಏಕಾಂತವನ್ನು ಬಯಸುತ್ತಾ ನನ್ನ ಕಲಾ ಸ್ಟುಡಿಯೋದಲ್ಲಿ

[ಪುಟ 26ರಲ್ಲಿರುವ ಚಿತ್ರ]

ನನ್ನ ಹೆಂಡತಿ ಐಲೀನಳೊಂದಿಗೆ

[ಪುಟ 28ರಲ್ಲಿರುವ ಚಿತ್ರ]

1963ರಲ್ಲಿ ಘಾನದ ಟೇಮಾದಲ್ಲಿ ನಡೆಸಲ್ಪಟ್ಟ “ನಿತ್ಯ ಶುಭವರ್ತಮಾನ” ಸಮ್ಮೇಳನದಲ್ಲಿ