ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ನಂಬಲೇಬೇಕೊ?

ನೀವು ನಂಬಲೇಬೇಕೊ?

ನೀವು ನಂಬಲೇಬೇಕೊ?

ಬೀಜಗಣಿತದ ಮೂಲತತ್ವಗಳನ್ನು 12 ವರ್ಷದ ವಿದ್ಯಾರ್ಥಿಯೊಬ್ಬನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಅವನ ಶಿಕ್ಷಕನು, ಯಾವುದೇ ತಪ್ಪಿಲ್ಲದಂತೆ ತೋರಿದ ಬೀಜಗಣಿತದ ಲೆಕ್ಕವನ್ನು ತರಗತಿಗೆ ಕೊಟ್ಟನು.

x=y ಆಗಿರಲಿ ಮತ್ತು ಎರಡರ ಮೌಲ್ಯವೂ 1 ಆಗಿರಲಿ,” ಎಂದು ಶಿಕ್ಷಕನು ಲೆಕ್ಕವನ್ನು ಆರಂಭಿಸಿದನು.

‘ಇದು ಸರಿ,’ ಎಂದು ಆ ವಿದ್ಯಾರ್ಥಿಯು ನೆನಸಿದನು.

ಆದರೆ ತರ್ಕಸಂಗತವಾದ ಲೆಕ್ಕಾಚಾರದ ನಾಲ್ಕು ಸಾಲುಗಳ ನಂತರ, ಶಿಕ್ಷಕನು ಈ ಆಶ್ಚರ್ಯಕರ ಫಲಿತಾಂಶವನ್ನು ತಿಳಿಸಿದನು: “ಹೀಗಿರುವುದರಿಂದ 2=1!”

“ಇದು ತಪ್ಪಾಗಿರುವುದಾದರೆ, ಅದನ್ನು ರುಜುಪಡಿಸಿರಿ,” ಎಂದು ಅವನು ಕಕ್ಕಾಬಿಕ್ಕಿಯಾಗಿದ್ದ ವಿದ್ಯಾರ್ಥಿಗಳಿಗೆ ಸವಾಲನ್ನೊಡ್ಡಿದನು.

ಆ ಎಳೆಯ ವಿದ್ಯಾರ್ಥಿಗೆ ಬೀಜಗಣಿತದ ಬಗ್ಗೆ ಸ್ವಲ್ಪವೇ ತಿಳಿದಿದ್ದರಿಂದ, ಆ ಲೆಕ್ಕವನ್ನು ತಪ್ಪೆಂದು ರುಜುಪಡಿಸುವುದು ಹೇಗೆಂದು ತಿಳಿಯಲಿಲ್ಲ. ಲೆಕ್ಕಾಚಾರದ ಪ್ರತಿಯೊಂದು ಹಂತದಲ್ಲಿ ಯಾವುದೇ ಲೋಪವಿರಲಿಲ್ಲ. ಎಷ್ಟೆಂದರೂ ಅವನಿಗಿಂತಲೂ ಅವನ ಶಿಕ್ಷಕನಿಗೆ ಗಣಿತದ ಕುರಿತು ಹೆಚ್ಚು ತಿಳಿದಿರುತ್ತದಲ್ಲವೇ. ಆದುದರಿಂದ, ಆ ವಿಚಿತ್ರವಾದ ಫಲಿತಾಂಶವನ್ನು ಅವನು ನಂಬಬೇಕೊ? ಖಂಡಿತವಾಗಿಯೂ ಇಲ್ಲ! ಅವನು ತನ್ನಷ್ಟಕ್ಕೇ ಹೀಗೆ ಅಂದುಕೊಂಡ: ‘ನನಗೆ ಇದನ್ನು ತಪ್ಪೆಂದು ರುಜುಪಡಿಸುವ ಅಗತ್ಯವೇ ಇಲ್ಲ! ಏಕೆಂದರೆ ಇದು ಸರಿಯಲ್ಲವೆಂದು ನನ್ನ ಸಾಮಾನ್ಯ ಬುದ್ಧಿಯೇ ಹೇಳುತ್ತದೆ.’ (ಜ್ಞಾನೋಕ್ತಿ 14:​15, 18) ತನ್ನ ಶಿಕ್ಷಕನು ಇಲ್ಲವೇ ಸಹಪಾಠಿಗಳು, ಎರಡು ಡಾಲರುಗಳನ್ನು ಕೊಟ್ಟು ಒಂದು ಡಾಲರನ್ನು ಖಂಡಿತವಾಗಿಯೂ ಪಡೆದುಕೊಳ್ಳಲಾರರೆಂದು ಅವನಿಗೆ ತಿಳಿದಿತ್ತು!

ಸಮಯಾನಂತರ, ಆ ಲೆಕ್ಕಾಚಾರದಲ್ಲಿದ್ದ ತಪ್ಪನ್ನು ಆ ಬೀಜಗಣಿತದ ವಿದ್ಯಾರ್ಥಿಯು ಕಂಡುಹಿಡಿದನು. ಆದರೆ ಆ ಅನುಭವವು ಅವನಿಗೊಂದು ಮುಖ್ಯ ಪಾಠವನ್ನು ಕಲಿಸಿಕೊಟ್ಟಿತು. ಅದೇನೆಂದರೆ, ತುಂಬ ಶ್ರೇಷ್ಠಮಟ್ಟದ ಜ್ಞಾನವುಳ್ಳ ಒಬ್ಬ ವ್ಯಕ್ತಿಯು, ಬಹಳ ಚಾತುರ್ಯದಿಂದ ರಚಿಸಿದ ಮತ್ತು ಟೀಕಿಸಲು ಸಾಧ್ಯವಿಲ್ಲದಿರುವಂತೆ ತೋರುವ ಒಂದು ವಾದವನ್ನು ಪ್ರಸ್ತುತಪಡಿಸಬಹುದು. ಆದರೆ, ಒಬ್ಬ ಕೇಳುಗನು ಅದನ್ನು ಆ ಹೊತ್ತಿನಲ್ಲೇ ತಪ್ಪೆಂದು ರುಜುಪಡಿಸಲು ಶಕ್ತನಾಗಿರದ ಕಾರಣಕ್ಕಾಗಿ ಮಾತ್ರ ಆ ಮೂರ್ಖ ವಾದವನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಈ ಲೇಖನದಲ್ಲಿ ನಾವು ಯಾರ ಕುರಿತಾಗಿ ಮಾತಾಡಿದೆವೊ, ಆ ವಿದ್ಯಾರ್ಥಿಯು ಬೈಬಲಿನ ತುಂಬ ವ್ಯಾವಹಾರಿಕವಾದ ತತ್ವವನ್ನು ಅನ್ವಯಿಸುತ್ತಿದ್ದನು. ಅದು 1 ಯೋಹಾನ 4:1ರಲ್ಲಿದೆ. ಅದೇನೆಂದರೆ, ಯಾವುದಾದರೊಂದು ಸಂಗತಿಯು ಒಂದು ಅಧಿಕೃತ ಮೂಲದಿಂದ ಬಂದಿರುವಂತೆ ತೋರುವುದಾದರೂ, ನೀವು ಅದನ್ನು ಕೇಳಿದ ಕೂಡಲೇ ನಂಬಬೇಕೆಂದಿಲ್ಲ.

ಸಾಕಷ್ಟು ಆಧಾರಗಳಿಲ್ಲದೇ ಅಥವಾ ಪರಿಶೀಲಿಸುವ ಮುಂಚೆಯೇ ಅಂಗೀಕರಿಸಿಕೊಂಡಿರುವ ಅಭಿಪ್ರಾಯಗಳಿಗೆ ನೀವು ಹಟಮಾರಿಗಳಾಗಿ ಅಂಟಿಕೊಂಡಿರಬೇಕೆಂಬುದು ಇದರರ್ಥವಲ್ಲ. ನಿಮ್ಮಲ್ಲಿರುವ ತಪ್ಪು ದೃಷ್ಟಿಕೋನಗಳನ್ನು ಸರಿಪಡಿಸಬಹುದಾದಂತಹ ಮಾಹಿತಿಯನ್ನು ಅಲಕ್ಷಿಸುವುದು ತಪ್ಪಾಗಿದೆ. ಆದರೆ ಅದೇ ಸಮಯದಲ್ಲಿ, ತನಗೆ ತುಂಬ ಜ್ಞಾನವಿದೆ ಅಥವಾ ಅಧಿಕಾರವಿದೆ ಎಂದು ಹೇಳುವ ಒಬ್ಬ ವ್ಯಕ್ತಿಯ ಒತ್ತಡದ ಎದುರಿಗೆ ನೀವು ‘ಬೇಗನೆ ಬುದ್ಧಿಗೆಟ್ಟು ಚಂಚಲರಾಗಿ ಕಳವಳಪಡಬಾರದು.’ (2 ಥೆಸಲೊನೀಕ 2:⁠2) ಈ ಲೇಖನದಲ್ಲಿ ತಿಳಿಸಲ್ಪಟ್ಟಿರುವ ಆ ಶಿಕ್ಷಕನು ತಪ್ಪು ಲೆಕ್ಕಾಚಾರವನ್ನು ತೋರಿಸಿದ್ದು, ಒಂದು ಕಲಿಸುವ ತಂತ್ರವಾಗಿತ್ತು. ಆದರೆ ಕೆಲವೊಮ್ಮೆ ಸಂಗತಿಗಳು ಅಷ್ಟು ಸರಳವಾಗಿರಲಿಕ್ಕಿಲ್ಲ. ಜನರು ತುಂಬ “ಕುಯುಕ್ತಿ”ಯುಳ್ಳವರಾಗಿರಬಲ್ಲರು.​—⁠ಎಫೆಸ 4:14; 2 ತಿಮೊಥೆಯ 2:​14, 23, 24.

ಪರಿಣತರು ಹೇಳಿದ್ದೆಲ್ಲವೂ ಯಾವಾಗಲೂ ಸರಿಯಾಗಿರುತ್ತದೊ?

ಯಾವುದೇ ಕ್ಷೇತ್ರದ ಪರಿಣತರು ಎಷ್ಟೇ ಜ್ಞಾನವಂತರಾಗಿರಲಿ, ಅವರೊಳಗೆಯೇ ಪರಸ್ಪರ ವಿರುದ್ಧವಾಗಿರುವ ವಿಚಾರಗಳು ಮತ್ತು ಬದಲಾಗುತ್ತಾ ಇರುವ ಅಭಿಪ್ರಾಯಗಳಿರುತ್ತವೆ. ಉದಾಹರಣೆಗಾಗಿ, ಒಂದು ವಿಷಯವನ್ನು ಪರಿಗಣಿಸಿರಿ. ರೋಗದ ಕಾರಣಗಳೇನು ಎಂಬುದರ ಕುರಿತಾಗಿ, ವೈದ್ಯಕೀಯ ವಿಜ್ಞಾನದ ಕ್ಷೇತ್ರದಲ್ಲಿ ನಿರಂತರ ವಾಗ್ವಾದಗಳು ನಡೆಯುತ್ತಿರುತ್ತವೆ. “ರೋಗವನ್ನು ಉಂಟುಮಾಡುವುದರಲ್ಲಿ ನಮ್ಮ ವಂಶವಾಹಿಗಳಿಗೆ ದೊಡ್ಡ ಪಾತ್ರವಿದೆಯೆಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ. ಆದರೆ ಇತರರು ಹೇಳುವುದೇನೆಂದರೆ, ನಮ್ಮ ವಾತಾವರಣ ಮತ್ತು ನಾವು ಬೆಳೆಸಲ್ಪಟ್ಟಿರುವ ಹಾಗೂ ಜೀವಿಸುವ ರೀತಿಯು ಸಹ ರೋಗಗಳನ್ನು ಉಂಟುಮಾಡುವುದರಲ್ಲಿ ಒಂದು ಮುಖ್ಯ ಅಂಶವಾಗಿದೆ. ಇದರ ಕುರಿತಾಗಿ ವಿಜ್ಞಾನಿಗಳ ನಡುವೆ ಯಾವಾಗಲೂ ಬಿಸಿಬಿಸಿ ವಾಗ್ವಾದಗಳು ನಡೆಯುತ್ತಿರುತ್ತವೆ” ಎಂದು ಹಾವಾರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಔಷಧಶಾಸ್ತ್ರದ ಒಬ್ಬ ಪ್ರೊಫೆಸರರು ಬರೆಯುತ್ತಾರೆ. ನಿಯತಿವಾದಿಗಳೆಂದು ಕರೆಯಲ್ಪಡುವ ಗುಂಪಿನವರು ನಂಬುವುದೇನೆಂದರೆ, ವಿಭಿನ್ನ ರೋಗಗಳಿಗೆ ನಾವು ತುತ್ತಾಗುವುದರಲ್ಲಿ ನಮ್ಮ ವಂಶವಾಹಿಗಳ ದೊಡ್ಡ ಪಾತ್ರವಿದೆ ಎಂಬುದನ್ನೇ. ಆದರೆ, ಪರಿಸರ ಮತ್ತು ಜೀವನಶೈಲಿಯೇ ರೋಗಗಳಿಗೆ ಕಾರಣವೆಂದು ಇತರರು ಹೇಳುತ್ತಾರೆ. ಈ ಎರಡೂ ಪಕ್ಷದವರೂ, ತಮ್ಮ ವಾದವನ್ನು ಬೆಂಬಲಿಸಲಿಕ್ಕಾಗಿ ಅಧ್ಯಯನಗಳನ್ನು ಮತ್ತು ಅಂಕಿಸಂಖ್ಯೆಗಳನ್ನು ಉಲ್ಲೇಖಿಸುತ್ತಾರೆ. ಆದರೂ ವಾಗ್ವಾದ ಮುಂದುವರಿಯುತ್ತಲೇ ಇದೆ.

ಸುಪ್ರಸಿದ್ಧ ತತ್ವಜ್ಞಾನಿಗಳು ಕಲಿಸಿರುವ ಸಂಗತಿಗಳು ಆ ಸಮಯದಲ್ಲಿ ಸರಿಯಾಗಿರುವಂತೆ ತೋರಿದರೂ, ಅವು ತಪ್ಪಾಗಿವೆ ಎಂದು ಸಮಯಾನಂತರ ಎಷ್ಟೋ ಸಲ ರುಜುವಾಗಿದೆ. ತತ್ವಜ್ಞಾನಿ ಬಟ್ರಾಂಡ್‌ ರಸಲ್‌, ಅರಿಸ್ಟಾಟಲನನ್ನು “ಎಲ್ಲ ತತ್ವಜ್ಞಾನಿಗಳಲ್ಲೇ ಅತಿ ಪ್ರಭಾವಶಾಲಿ ತತ್ವಜ್ಞಾನಿ” ಎಂದು ಕರೆದರು. ಆದರೆ ಅರಿಸ್ಟಾಟಲನ ಬೋಧನೆಗಳಲ್ಲಿ ಅನೇಕ ಬೋಧನೆಗಳು “ಪೂರ್ತಿ ಸುಳ್ಳಾಗಿವೆ” ಎಂದು ಸಹ ರಸಲ್‌ ತೋರಿಸಿದರು. “ಆಧುನಿಕ ಸಮಯದಲ್ಲೆಲ್ಲ, ವಿಜ್ಞಾನ, ತರ್ಕ, ಅಥವಾ ತತ್ವಜ್ಞಾನದಲ್ಲಿನ ಕಾರ್ಯತಃ ಪ್ರತಿಯೊಂದು ಪ್ರಗತಿಯು, ಅರಿಸ್ಟಾಟಲನ ಶಿಷ್ಯರ ವಿರೋಧವನ್ನು ಎದುರಿಸಿದೆ” ಎಂದು ರಸಲ್‌ ಬರೆದರು.​—⁠ಹಿಸ್ಟರಿ ಆಫ್‌ ವೆಸ್ಟರ್ನ್‌ ಫಿಲಾಸಫಿ.

“ಸುಳ್ಳಾದ ಜ್ಞಾನ”

ಆರಂಭದ ಕ್ರೈಸ್ತರು ಆ ಸಮಯದಲ್ಲಿ, ಸಾಕ್ರಟಿಸ್‌, ಪ್ಲೇಟೊ, ಮತ್ತು ಅರಿಸ್ಟಾಟಲರಂತಹ ಪ್ರಖ್ಯಾತ ಗ್ರೀಕ್‌ ತತ್ವಜ್ಞಾನಿಗಳ ಅನೇಕ ಶಿಷ್ಯರನ್ನು ಎದುರುಗೊಂಡಿದ್ದಿರಬಹುದು. ಆ ಸಮಯದಲ್ಲಿದ್ದ ಸುಶಿಕ್ಷಿತ ಜನರು, ತಾವು ಕ್ರೈಸ್ತರಿಗಿಂತ ಹೆಚ್ಚು ಬುದ್ಧಿವಂತರೆಂದು ಎಣಿಸಿಕೊಳ್ಳುತ್ತಿದ್ದರು. ಯೇಸುವಿನ ಶಿಷ್ಯರಲ್ಲಿ ಹೆಚ್ಚಿನವರನ್ನು ‘ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೆಂದು’ ಎಣಿಸಲಾಗುತ್ತಿರಲಿಲ್ಲ. (1 ಕೊರಿಂಥ 1:26) ವಾಸ್ತವದಲ್ಲಿ, ಆ ಸಮಯದಲ್ಲಿನ ತತ್ವಜ್ಞಾನಗಳಲ್ಲಿ ಶಿಕ್ಷಿತರಾಗಿದ್ದವರು, ಕ್ರೈಸ್ತರು ನಂಬುವಂಥ ಸಂಗತಿಗಳು ‘ಹುಚ್ಚುಮಾತಾಗಿವೆ’ ಅಥವಾ ‘ಮೂರ್ಖತನ’ (NW) ಎಂದು ನೆನಸುತ್ತಿದ್ದರು.​—⁠1 ಕೊರಿಂಥ 1:⁠23.

ಆ ಆರಂಭದ ಕ್ರೈಸ್ತರಲ್ಲಿ ನೀವು ಒಬ್ಬರಾಗಿರುತ್ತಿದ್ದಲ್ಲಿ, ಆ ಸಮಯದಲ್ಲಿದ್ದ ಬುದ್ಧಿವಂತ ಜನರ ಮನವೊಲಿಸುವಂಥ ವಾದಗಳಿಂದ ನೀವು ಪ್ರಭಾವಿತರಾಗುತ್ತಿದ್ದೀರೊ ಅಥವಾ ಅವರ ಬುದ್ಧಿವಂತಿಕೆಯ ಪ್ರದರ್ಶನದಿಂದ ಬೆರಗಾಗಿಬಿಡುತ್ತಿದ್ದೀರೊ? (ಕೊಲೊಸ್ಸೆಯ 2:⁠4) ಅಪೊಸ್ತಲ ಪೌಲನಿಗನುಸಾರ, ಹಾಗಾಗಲು ಕಾರಣವಿರಲಿಲ್ಲ. ಏಕೆಂದರೆ ಯೆಹೋವನು ತಾನು “ಜ್ಞಾನಿಗಳ ಜ್ಞಾನವನ್ನು” ಮತ್ತು “ವಿವೇಕಿಗಳ ವಿವೇಕವನ್ನು” ಮೂರ್ಖತನವೆಂದೆಣಿಸುತ್ತೇನೆಂದು ಹೇಳಿರುವುದನ್ನು ಅವನು ಕ್ರೈಸ್ತರಿಗೆ ನೆನಪು ಹುಟ್ಟಿಸಿದ್ದನು. (1 ಕೊರಿಂಥ 1:19) ಪೌಲನು ಕೇಳಿದ್ದು: “ಜ್ಞಾನಿಯು ಎಲ್ಲಿ? ಶಾಸ್ತ್ರಿಯೆಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ?” (1 ಕೊರಿಂಥ 1:20) ಪೌಲನ ದಿನದಲ್ಲಿದ್ದ ತತ್ವಜ್ಞಾನಿಗಳು, ಲೇಖಕರು, ಮತ್ತು ವಿಮರ್ಶಕರು ತುಂಬ ಬುದ್ಧಿವಂತರಾಗಿದ್ದರೂ, ಅವರು ಮಾನವಕುಲದ ಸಮಸ್ಯೆಗಳಿಗೆ ಯಾವುದೇ ನಿಜ ಪರಿಹಾರವನ್ನು ಕಂಡುಕೊಳ್ಳಲು ಅಸಮರ್ಥರಾಗಿದ್ದರು.

ಆದುದರಿಂದ ಅಪೊಸ್ತಲ ಪೌಲನು, ಯಾವುದನ್ನು “ಸುಳ್ಳಾದ ಜ್ಞಾನ” ಎಂದು ಹೇಳಿದನೊ ಅದರಿಂದ ಕ್ರೈಸ್ತರು ದೂರವಿರಲು ಕಲಿತುಕೊಂಡರು. (1 ತಿಮೊಥೆಯ 6:21) ಪೌಲನು ಅಂತಹ ಜ್ಞಾನವನ್ನು ‘ಸುಳ್ಳು’ ಎಂದು ಕರೆಯುವುದಕ್ಕೆ ಒಂದು ಕಾರಣ, ಅದರಲ್ಲಿ ಒಂದು ಬಹುಮುಖ್ಯ ಅಂಶದ ಕೊರತೆಯಿತ್ತು. ಅದೇನೆಂದರೆ, ಅವರ ವಾದಗಳು ಸರಿಯೋ ತಪ್ಪೋ ಎಂಬುದನ್ನು ಪರೀಕ್ಷಿಸಿ ನೋಡಲಿಕ್ಕಾಗಿ ಅವುಗಳಲ್ಲಿ, ದೇವರಿಂದ ಬಂದಿರುವ ಯಾವುದೇ ಆಕರ ಗ್ರಂಥ ಅಥವಾ ಪುಸ್ತಕವು ಸೂಚಿಸಲ್ಪಟ್ಟಿರಲಿಲ್ಲ. (ಯೋಬ 28:12; ಜ್ಞಾನೋಕ್ತಿ 1:⁠7) ಇದರೊಂದಿಗೆ, ಅವರು ಮಹಾವಂಚಕನಾದ ಸೈತಾನನಿಂದ ಕುರುಡುಗೊಳಿಸಲ್ಪಟ್ಟಿರುವುದರಿಂದ, ಅಂಥ ಜ್ಞಾನಕ್ಕೆ ಅಂಟಿಕೊಂಡಿರುವವರಿಗೆ ಸತ್ಯವನ್ನು ಕಂಡುಹಿಡಿಯುವ ನಿರೀಕ್ಷೆಯೇ ಇರಲಿಲ್ಲ.​—⁠1 ಕೊರಿಂಥ 2:​6-8, 14; 3:​18-20; 2 ಕೊರಿಂಥ 4:4; 11:14; ಪ್ರಕಟನೆ 12:⁠9.

ಬೈಬಲ್‌​—⁠ದೇವಪ್ರೇರಿತ ಮಾರ್ಗದರ್ಶಿ

ದೇವರು ತನ್ನ ಚಿತ್ತ, ಉದ್ದೇಶ ಮತ್ತು ತತ್ವಗಳ ಕುರಿತಾಗಿ ಶಾಸ್ತ್ರವಚನಗಳಲ್ಲಿ ಪ್ರಕಟಪಡಿಸಿದ್ದಾನೆಂಬುದನ್ನು ಆರಂಭದ ಕ್ರೈಸ್ತರು ಎಂದೂ ಸಂದೇಹಿಸಲಿಲ್ಲ. (2 ತಿಮೊಥೆಯ 3:​16, 17) ಇದು, ಅವರನ್ನು ‘ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ಮನಸ್ಸು ಕೆಡಿಸಿ ವಶಮಾಡಿ’ಕೊಳ್ಳುವುದರಿಂದ ಸಂರಕ್ಷಿಸಿತು. (ಕೊಲೊಸ್ಸೆ 2:⁠8) ಇಂದು ಸಹ ಸನ್ನಿವೇಶವು ಹೀಗೆಯೇ ಇದೆ. ಆದರೆ ದೇವರ ಪ್ರೇರಿತ ವಾಕ್ಯವು, ಮನುಷ್ಯರ ಗಲಿಬಿಲಿಗೊಳಿಸುವ ಮತ್ತು ಒಂದಕ್ಕೊಂದು ತದ್ವಿರುದ್ಧವಾದ ಅಭಿಪ್ರಾಯಗಳಂತಿರದೆ, ಒಂದು ಬಲವಾದ ತಳಪಾಯದಂತಿರುವುದರಿಂದ ನಾವು ಅದರ ಮೇಲೆ ನಮ್ಮ ನಂಬಿಕೆಗಳನ್ನು ಆಧಾರಿಸಬಲ್ಲೆವು. (ಯೋಹಾನ 17:17; 1 ಥೆಸಲೊನೀಕ 2:13; 2 ಪೇತ್ರ 1:21) ದೇವರ ವಾಕ್ಯವು ಇಲ್ಲದಿರುತ್ತಿದ್ದಲ್ಲಿ, ಬದಲಾಗುತ್ತಾ ಇರುವ ಮಾನವ ವಾದಗಳು ಮತ್ತು ತತ್ವಜ್ಞಾನಗಳೆಂಬ ಉಸುಬಿನ ಮೇಲೆ ನಮ್ಮ ನಂಬಿಕೆಗಳನ್ನು ಕಟ್ಟಲು ಪ್ರಯತ್ನಿಸುವ ಅಸಾಧ್ಯವಾದ ಕೆಲಸದಲ್ಲಿ ತೊಡಗಿರುತ್ತಿದ್ದೆವು.​—⁠ಮತ್ತಾಯ 7:​24-27.

‘ಆದರೆ ಸ್ವಲ್ಪ ನಿಲ್ಲಿ. ಬೈಬಲ್‌ನಲ್ಲಿ ತಪ್ಪು ವಿಚಾರಗಳಿವೆ ಮತ್ತು ಈ ಕಾರಣದಿಂದ ಸದಾ ಬದಲಾಗುತ್ತಾ ಇರುವ ಮನುಷ್ಯರ ತತ್ವಜ್ಞಾನದಂತೆಯೇ ಅದರ ಮೇಲೂ ಭರವಸೆ ಇಡಲು ಸಾಧ್ಯವಿಲ್ಲವೆಂದು ವಿಜ್ಞಾನದ ವಾಸ್ತವಾಂಶಗಳು ರುಜುಪಡಿಸಿವೆಯಲ್ಲವೊ?’ ಎಂದು ಕೆಲವರು ಹೇಳಬಹುದು. ಉದಾಹರಣೆಗಾಗಿ, “ಈ ಭೂಮಿಯು ವಿಶ್ವದ ಕೇಂದ್ರವಾಗಿಲ್ಲ ಎಂಬ ವಿಚಾರವನ್ನು ಸ್ಥಾಪಿಸಲಿಕ್ಕಾಗಿ ಕೊಪೆರ್ನಿಕಸ್‌, ಕೆಪ್ಲರ್‌, ಮತ್ತು ಗ್ಯಾಲಿಲಿಯೊರಂಥವರು, ಅರಿಸ್ಟಾಟಲ್‌ ಮತ್ತು ಬೈಬಲನ್ನು ಸಹ ಎದುರಿಸಿನಿಲ್ಲಬೇಕಾಯಿತು” ಎಂದು ಬಟ್ರಂಡ್‌ ರಸಲ್‌ ವಾದಿಸಿದನು. (ಓರೆ ಅಕ್ಷರಗಳು ನಮ್ಮವು.) ಅಷ್ಟುಮಾತ್ರವಲ್ಲದೆ, ಭೂಮಿಯು ನೂರಾರು ಕೋಟಿ ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ಎಲ್ಲ ವಾಸ್ತವಾಂಶಗಳು ತೋರಿಸುತ್ತಿರುವುದಾದರೂ, ಭೂಮಿಯು ಕೇವಲ 24 ತಾಸುಗಳುಳ್ಳ ಆರು ದಿನಗಳಲ್ಲಿ ಸೃಷ್ಟಿಸಲ್ಪಟ್ಟಿತ್ತೆಂಬುದನ್ನು ಬೈಬಲ್‌ ಕಲಿಸುತ್ತದೆಂದು ಸೃಷ್ಟಿವಾದಿಗಳು ಪಟ್ಟುಹಿಡಿದು ಹೇಳುತ್ತಾರಲ್ಲವೊ?

ನಿಜವಾಗಿ ನೋಡುವುದಾದರೆ, ಭೂಮಿಯು ಈ ವಿಶ್ವದ ಕೇಂದ್ರವಾಗಿದೆಯೆಂದು ಬೈಬಲ್‌ ಎಲ್ಲಿಯೂ ಹೇಳುವುದಿಲ್ಲ. ಅದು ಚರ್ಚು ಮುಖಂಡರ ಒಂದು ಬೋಧನೆಯಾಗಿತ್ತು. ಮತ್ತು ಇವರು ಸ್ವತಃ ಬೈಬಲಿಗನುಸಾರ ನಡೆಯುತ್ತಿರಲಿಲ್ಲ. ಬೈಬಲಿನ ಆದಿಕಾಂಡ ಪುಸ್ತಕದಲ್ಲಿರುವ ಸೃಷ್ಟಿಯ ಕುರಿತಾದ ವೃತ್ತಾಂತವು, ಭೂಮಿಯು ನೂರಾರು ಕೋಟಿ ವರ್ಷಗಳಷ್ಟು ಹಳೆಯದಾಗಿದೆ ಎಂಬ ಸಂಗತಿಯನ್ನು ಬೆಂಬಲಿಸುತ್ತದೆ. ಮತ್ತು ಸೃಷ್ಟಿಯ ಪ್ರತಿದಿನವು 24 ತಾಸುಗಳದ್ದಾಗಿತ್ತೆಂದು ಅದು ಹೇಳುವುದಿಲ್ಲ. (ಆದಿಕಾಂಡ 1:​1, 5, 8, 13, 19, 23, 31; 2:​3, 4) ಬೈಬಲನ್ನು ಬಿಚ್ಚುಮನಸ್ಸಿನಿಂದ ಪರೀಕ್ಷಿಸುವಲ್ಲಿ, ಅದೊಂದು ವಿಜ್ಞಾನ ಪಠ್ಯಪುಸ್ತಕವಲ್ಲದಿದ್ದರೂ, ಖಂಡಿತವಾಗಿಯೂ ಅದು ‘ಹುಚ್ಚುಮಾತಲ್ಲ’ ಎಂಬುದು ತಿಳಿದುಬರುತ್ತದೆ. ವಾಸ್ತವದಲ್ಲಿ ಅದು ರುಜುಪಡಿಸಲಾಗಿರುವ ವಿಜ್ಞಾನದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಲ್ಲಿದೆ. *

“ವಿವೇಚನಾಶಕ್ತಿ”

ಯೇಸುವಿನ ಶಿಷ್ಯರಲ್ಲಿ ಹೆಚ್ಚಿನವರು ಬಹುಶಃ ಮಿತವಾದ ಶಿಕ್ಷಣವುಳ್ಳ, ತುಂಬ ಸರಳ ವ್ಯಕ್ತಿಗಳಾಗಿದ್ದರು. ಹಾಗಿದ್ದರೂ, ಅವರ ಬಳಿ ದೇವದತ್ತವಾದ ಇನ್ನೊಂದು ಆಸ್ತಿ ಇತ್ತು. ಅದೇನು? ಅವರು ಯಾವುದೇ ಹಿನ್ನೆಲೆಯಿಂದ ಬಂದವರಾಗಿದ್ದರೂ, ಅವರೆಲ್ಲರ ಬಳಿ ವಿವೇಚನಾಶಕ್ತಿ ಮತ್ತು ಯೋಚನಾ ಸಾಮರ್ಥ್ಯಗಳಿದ್ದವು. ಜೊತೆ ಕ್ರೈಸ್ತರು “ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊ”ಳ್ಳಲಿಕ್ಕಾಗಿ ತಮ್ಮ “ವಿವೇಚನಾಶಕ್ತಿ”ಯನ್ನು (NW) ಸಂಪೂರ್ಣವಾಗಿ ಉಪಯೋಗಿಸುವಂತೆ ಅಪೊಸ್ತಲ ಪೌಲನು ಪ್ರೋತ್ಸಾಹಿಸಿದನು.​—⁠ರೋಮಾಪುರ 12:1, 2.

ಹೀಗೆ, ದೇವರ ಪ್ರಕಟಿತ ವಾಕ್ಯಕ್ಕೆ ಹೊಂದಿಕೆಯಲ್ಲಿರದ ಯಾವುದೇ ತತ್ವಜ್ಞಾನ ಅಥವಾ ಬೋಧನೆಯು ನಿಷ್ಪ್ರಯೋಜಕವಾಗಿದೆ ಎಂಬುದನ್ನು ಆರಂಭದ ಕ್ರೈಸ್ತರು ದೇವರು ತಮಗೆ ಕೊಟ್ಟಿದ್ದ “ವಿವೇಚನಾಶಕ್ತಿ”ಯ ಮೂಲಕ ಸ್ಪಷ್ಟವಾಗಿ ಗ್ರಹಿಸಲು ಶಕ್ತರಾಗಿದ್ದರು. ಕೆಲವೊಂದು ಸಂದರ್ಭಗಳಲ್ಲಿ, ಅವರ ದಿನಗಳಲ್ಲಿದ್ದ ಬುದ್ಧಿವಂತ ಜನರು, “ಸತ್ಯವನ್ನು ಅಣಗಿಸು”ತ್ತಿದ್ದರು ಮತ್ತು ಒಬ್ಬ ದೇವರಿದ್ದಾನೆ ಎಂಬ ಪುರಾವೆಯನ್ನು ಅಲಕ್ಷಿಸುತ್ತಿದ್ದರು. “ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚರಾದರು” ಎಂದು ಅಪೊಸ್ತಲ ಪೌಲನು ಬರೆದನು. ಅವರು ದೇವರು ಮತ್ತು ಆತನ ಉದ್ದೇಶದ ಕುರಿತಾದ ಸತ್ಯವನ್ನು ತಿರಸ್ಕರಿಸಿದ್ದರಿಂದ, “ಅವರು ವಿಚಾರ ಮಾಡಿಮಾಡಿ ಫಲಕಾಣಲಿಲ್ಲ; ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಯಿತು.”​—⁠ರೋಮಾಪುರ 1:​18-22; ಯೆರೆಮೀಯ 8:​8, 9.

ತಾವೇ ಬುದ್ಧಿವಂತರೆಂದು ಹೇಳಿಕೊಳ್ಳುವವರೇ ಹೆಚ್ಚಾಗಿ, “ದೇವರು ಇಲ್ಲ” ಅಥವಾ “ಬೈಬಲ್‌ ಮೇಲೆ ಭರವಸೆಯಿಡಸಾಧ್ಯವಿಲ್ಲ” ಅಥವಾ “ಇವು ‘ಕಡೇ ದಿವಸ’ಗಳಲ್ಲ” ಎಂಬಂತಹ ತೀರ್ಮಾನಗಳಿಗೆ ಬರುತ್ತಾರೆ. ಈ ಎಲ್ಲ ವಿಚಾರಗಳು ದೇವರ ದೃಷ್ಟಿಯಲ್ಲಿ, “2=1” ಎಂಬ ಲೆಕ್ಕಾಚಾರದಷ್ಟೇ ಮೂರ್ಖವಾಗಿವೆ. (1 ಕೊರಿಂಥ 3:19) ಜನರ ಬಳಿ ಯಾವುದೇ ಅಧಿಕಾರವಿದ್ದರೂ, ಅವರ ವಿಚಾರಗಳು ದೇವರಿಗೆ ವಿರುದ್ಧವಾಗಿರುವಲ್ಲಿ, ಆತನ ವಾಕ್ಯವನ್ನು ಅಲಕ್ಷಿಸುತ್ತಿರುವಲ್ಲಿ ಮತ್ತು ಸಾಮಾನ್ಯ ಜ್ಞಾನವನ್ನು ಉಲ್ಲಂಘಿಸುತ್ತಿರುವಲ್ಲಿ ನೀವು ಅವುಗಳನ್ನು ಅಂಗೀಕರಿಸಬೇಕಾಗಿಲ್ಲ. “ಎಲ್ಲ ಮನುಷ್ಯರು ಸುಳ್ಳುಗಾರರಾದರೂ” ಯಾವಾಗಲೂ “ದೇವರು ಸತ್ಯವಂತನೇ” ಎಂಬುದನ್ನು ರುಜುಪಡಿಸುವುದು ಬುದ್ಧಿವಂತಿಕೆಯಾಗಿದೆ.​—⁠ರೋಮಾಪುರ 3:⁠4.

[ಪಾದಟಿಪ್ಪಣಿ]

^ ಪ್ಯಾರ. 20 ಹೆಚ್ಚಿನ ವಿವರಗಳಿಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಬೈಬಲ್‌​—⁠ದೇವರ ವಾಕ್ಯವೊ ಮನುಷ್ಯನದ್ದೊ? ಮತ್ತು ನಿಮ್ಮ ಕುರಿತಾಗಿ ಚಿಂತಿಸುವ ಸೃಷ್ಟಿಕರ್ತನೊಬ್ಬನಿದ್ದಾನೊ? (ಇಂಗ್ಲಿಷ್‌) ಎಂಬ ಪುಸ್ತಕಗಳನ್ನು ನೋಡಿರಿ.

[ಪುಟ 31ರಲ್ಲಿರುವ ಚಿತ್ರಗಳು]

ಬೈಬಲ್‌, ಮನುಷ್ಯರ ಬದಲಾಗುತ್ತಾ ಇರುವ ಅಭಿಪ್ರಾಯಗಳಂತಿರದೆ, ನಂಬಿಕೆಗಾಗಿ ಒಂದು ದೃಢವಾದ ಆಧಾರವನ್ನು ಕೊಡುತ್ತದೆ

[ಕೃಪೆ]

ಎಡಗಡೆ, ಎಪಿಕ್ಯೂರಸ್‌: Photograph taken by courtesy of the British Museum; ಮೇಲೆ ಮಧ್ಯದಲ್ಲಿ, ಪ್ಲೇಟೊ: National Archaeological Museum, Athens, Greece; ಬಲಗಡೆ, ಸಾಕ್ರಟಿಸ್‌: Roma, Musei Capitolini