ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಳಲಿಹೋದವರಿಗೆ ಯೆಹೋವನು ಬಲವನ್ನು ಕೊಡುತ್ತಾನೆ

ಬಳಲಿಹೋದವರಿಗೆ ಯೆಹೋವನು ಬಲವನ್ನು ಕೊಡುತ್ತಾನೆ

ಬಳಲಿಹೋದವರಿಗೆ ಯೆಹೋವನು ಬಲವನ್ನು ಕೊಡುತ್ತಾನೆ

“ಬಳಲಿಹೋದವರನ್ನು [ಯೆಹೋವನು] ಬಲಶಾಲಿಗಳನ್ನಾಗಿ ಮಾಡುತ್ತಾನೆ. ಬಲಹೀನರನ್ನು ಶಕ್ತಿವಂತರನ್ನಾಗಿ ಮಾಡುತ್ತಾನೆ.”​—⁠ಯೆಶಾಯ 40:⁠29, ಪರಿಶುದ್ಧ ಬೈಬಲ್‌. *

1. ದೇವರು ಸೃಷ್ಟಿಮಾಡಿರುವ ವಸ್ತುಗಳಲ್ಲಿರುವ ಶಕ್ತಿಯ ಉದಾಹರಣೆಗಳನ್ನು ಕೊಡಿರಿ.

ಯೆಹೋವನ ಶಕ್ತಿಗೆ ಮಿತಿಯೇ ಇಲ್ಲ. ಆತನು ಸೃಷ್ಟಿಸಿರುವಂಥ ವಸ್ತುಗಳಲ್ಲೂ ಎಷ್ಟೊಂದು ಶಕ್ತಿಯಿರುತ್ತದೆ! ದೃಷ್ಟಾಂತಕ್ಕಾಗಿ, ಎಲ್ಲ ವಸ್ತುಗಳಲ್ಲೂ ಅತ್ಯಾವಶ್ಯಕ ಘಟಕವಾಗಿರುವ ಪುಟ್ಟ ಅಣುವನ್ನೇ ತೆಗೆದುಕೊಳ್ಳಿ. ಅದು ಎಷ್ಟು ಚಿಕ್ಕದ್ದಾಗಿದೆಯೆಂದರೆ, ನೀರಿನ ಒಂದು ತೊಟ್ಟು ಹನಿಯಲ್ಲಿ ಹತ್ತು ಲಕ್ಷ ಕೋಟಿ ಕೋಟಿಗಳಷ್ಟು ಅಣುಗಳಿರುತ್ತವೆ. ಸೂರ್ಯನನ್ನು ಸಹ ತೆಗೆದುಕೊಳ್ಳಿ. ಅದರೊಳಗೆ ನಡೆಯುವಂತಹ ಪರಮಾಣು ಪ್ರಕ್ರಿಯೆಗಳಿಂದಾಗಿ ಹೊರಡುವಂಥ ಶಕ್ತಿಯ ಮೇಲೆಯೇ ನಮ್ಮ ಭೂಮಿಯಲ್ಲಿರುವ ಎಲ್ಲ ಜೀವವು ಅವಲಂಬಿಸಿದೆ. ಆದರೆ ಭೂಮಿಯ ಮೇಲಿನ ಜೀವವನ್ನು ಪೋಷಿಸಲಿಕ್ಕಾಗಿ ಎಷ್ಟು ಸೌರಶಕ್ತಿಯು ಬೇಕಾಗುತ್ತದೆ? ಸೂರ್ಯನು ಉತ್ಪಾದಿಸುವ ಶಕ್ತಿಯಲ್ಲಿ ಅತಿ ಚಿಕ್ಕ ಅಂಶವನ್ನು ಮಾತ್ರ ಭೂಮಿಯು ಪಡೆಯುತ್ತದೆ. ಹೀಗಿದ್ದರೂ, ಭೂಮಿಯು ಪಡೆದುಕೊಳ್ಳುವಂಥ ಆ ಅತಿ ಚಿಕ್ಕ ಅಂಶವು, ಲೋಕದಲ್ಲಿರುವ ಕಾರ್ಖಾನೆಗಳು ಉಪಯೋಗಿಸುವಂಥ ಒಟ್ಟು ಶಕ್ತಿಗಿಂತಲೂ ಎಷ್ಟೋ ಪಟ್ಟು ಹೆಚ್ಚಾಗಿರುತ್ತದೆ.

2. ಚುಟುಕಾಗಿ ಹೇಳುವುದಾದರೆ, ಯೆಶಾಯ 40:26 ಯೆಹೋವನ ಶಕ್ತಿಯ ಕುರಿತಾಗಿ ಏನು ಹೇಳುತ್ತದೆ?

2 ನಾವು ಅಣುವಿನ ಕುರಿತಾಗಿ ಯೋಚಿಸಲಿ ಅಥವಾ ಈ ವಿಶಾಲವಾದ ವಿಶ್ವದ ಕಡೆಗೆ ನಮ್ಮ ಗಮನವನ್ನು ಹರಿಸಲಿ, ಒಂದು ವಿಷಯವಂತೂ ನಮ್ಮನ್ನು ದಂಗುಬಡಿಸುತ್ತದೆ. ಅದೇನು? ಯೆಹೋವನ ಭಯಚಕಿತಗೊಳಿಸುವ ಶಕ್ತಿಯೇ. ಆದುದರಿಂದಲೇ ಆತನು ಹೀಗೆ ಹೇಳಶಕ್ತನು: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು”! (ಯೆಶಾಯ 40:26) ಹೌದು, ಯೆಹೋವನು “ಬಲಾಢ್ಯನೂ,” ಈ ಇಡೀ ವಿಶ್ವವನ್ನು ಸೃಷ್ಟಿಸಲು ಉಪಯೋಗಿಸಲಾಗಿರುವ ‘ಬಲದ’ ಮೂಲನೂ ಆಗಿದ್ದಾನೆ.

ಸಾಧಾರಣಕ್ಕಿಂತಲೂ ಹೆಚ್ಚಿನ ಬಲ ಅಗತ್ಯ

3, 4. (ಎ) ನಾವು ಬಳಲಿಹೋಗುವಂತೆ ಮಾಡಬಹುದಾದ ಕೆಲವೊಂದು ಅಂಶಗಳಾವವು? (ಬಿ) ನಾವು ಯಾವ ಪ್ರಶ್ನೆಯನ್ನು ಪರಿಗಣಿಸುವುದು ಆವಶ್ಯಕ?

3 ದೇವರ ಶಕ್ತಿಗೆ ಯಾವುದೇ ಮಿತಿಯಿಲ್ಲವೆಂಬುದು ನಿಜ. ಆದರೆ ಮನುಷ್ಯರ ವಿಷಯದಲ್ಲಿ ಹೀಗೆ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅವರು ಬಳಲಿಹೋಗುತ್ತಾರೆ. ಇಂದು ನಾವು ಎಲ್ಲಿಯೇ ಹೋಗಲಿ, ಬಳಲಿಹೋಗಿರುವ ಜನರೇ ನಮ್ಮ ಕಣ್ಣಿಗೆ ಬೀಳುತ್ತಾರೆ. ಬೆಳಗ್ಗೆ ಎದ್ದೇಳುವಾಗಲೇ ಅವರು ದಣಿದಿರುತ್ತಾರೆ, ಶಾಲೆಗೆ ಇಲ್ಲವೇ ಕೆಲಸಕ್ಕೆ ಹೋಗುತ್ತಿರುವಾಗ ದಣಿದಿರುತ್ತಾರೆ, ಮನೆಗೆ ಹಿಂದಿರುಗುವಾಗ ದಣಿದಿರುತ್ತಾರೆ, ಮತ್ತು ರಾತ್ರಿ ನಿದ್ದೆಮಾಡಲು ಹೋಗುವಾಗ ಅವರು ಕೇವಲ ದಣಿದಿರುವುದಿಲ್ಲ ಬದಲಾಗಿ ಸ್ವಲ್ಪವೂ ಶಕ್ತಿಯಿಲ್ಲದ ಹಾಗೆ ಸುಸ್ತಾಗಿಬಿಟ್ಟಿರುತ್ತಾರೆ. ಕೆಲವರು, ತಾವು ಎಲ್ಲಿಗಾದರೂ ಹೋಗಿ ತಮಗೆ ತುಂಬ ಅಗತ್ಯವಿರುವ ವಿರಾಮವನ್ನು ಪಡೆದುಕೊಳ್ಳಲು ಸಾಧ್ಯವಿರುತ್ತಿದ್ದರೆ ಒಳ್ಳೇದಿತ್ತೆಂದು ನೆನಸುತ್ತಾರೆ. ನಾವು ಯೆಹೋವನ ಸೇವಕರಾಗಿರುವುದಾದರೂ ನಾವು ಕೂಡ ಬಳಲಿಹೋಗುತ್ತೇವೆ. ಯಾಕೆಂದರೆ ದೇವಭಕ್ತಿಯ ಜೀವನವನ್ನು ನಡೆಸಲಿಕ್ಕಾಗಿ ನಾವು ತುಂಬ ಹೆಣಗಾಡಬೇಕಾಗುತ್ತದೆ. (ಮಾರ್ಕ 6:​30, 31; ಲೂಕ 13:24; 1 ತಿಮೊಥೆಯ 4:⁠8) ಅಷ್ಟುಮಾತ್ರವಲ್ಲದೆ, ನಮ್ಮ ಶಕ್ತಿಯನ್ನು ಹೀರಿಕೊಳ್ಳುವ ಅನೇಕ ಇತರ ಅಂಶಗಳೂ ಇವೆ.

4 ನಾವು ಕ್ರೈಸ್ತರಾಗಿರುವುದಾದರೂ ಸಾಮಾನ್ಯವಾಗಿ ಲೋಕದ ಜನರು ಅನುಭವಿಸುವ ಸಮಸ್ಯೆಗಳಿಂದ ಮುಕ್ತರಾಗಿಲ್ಲ. ನಮಗೂ ಅವರಂಥದ್ದೇ ಸಮಸ್ಯೆಗಳಿರುತ್ತವೆ. (ಯೋಬ 14:⁠1) ಅಸ್ವಸ್ಥತೆ, ಹಣಕಾಸಿನ ತೊಂದರೆಗಳು ಅಥವಾ ಜೀವಿತದಲ್ಲಿ ಸರ್ವಸಾಮಾನ್ಯವಾಗಿರುವ ಇನ್ನಿತರ ಕಷ್ಟತೊಂದರೆಗಳು ನಮ್ಮನ್ನು ನಿರುತ್ತೇಜಿಸಬಹುದು. ಅಲ್ಲದೆ, ಅವು ನಮ್ಮ ಮೇಲೆ ಎದೆಗುಂದಿಸುವ ಪ್ರಭಾವವನ್ನೂ ಬೀರಬಹುದು. ಇವುಗಳಲ್ಲದೆ, ವಿಶೇಷವಾಗಿ ನೀತಿಯ ನಿಮಿತ್ತ ಹಿಂಸಿಸಲ್ಪಡುವವರಿಗೆ ಬರುವಂಥ ಸಂಕಷ್ಟಗಳೂ ಇವೆ. (2 ತಿಮೊಥೆಯ 3:12; 1 ಪೇತ್ರ 3:14) ಹೌದು, ಲೋಕದಿಂದ ನಾವು ಪ್ರತಿದಿನವೂ ಒತ್ತಡಗಳನ್ನು ಮತ್ತು ರಾಜ್ಯ ಸಾರುವಿಕೆಯ ಕೆಲಸದ ಕಡೆಗಿನ ವಿರೋಧವನ್ನು ಎದುರಿಸಬಹುದು. ಇದರಿಂದಾಗಿ ನಮ್ಮಲ್ಲಿ ಕೆಲವರು ಎಷ್ಟು ದಣಿದುಹೋಗಬಹುದೆಂದರೆ, ಯೆಹೋವನ ಸೇವೆಯನ್ನು ಸ್ವಲ್ಪ ಕಡಿಮೆಗೊಳಿಸೋಣ ಎಂದು ನಮಗೆ ಅನಿಸಬಹುದು. ಅದಲ್ಲದೆ, ದೇವರ ಕಡೆಗಿನ ನಮ್ಮ ಸಮಗ್ರತೆಯನ್ನು ಮುರಿಯಲಿಕ್ಕಾಗಿ ಪಿಶಾಚನಾದ ಸೈತಾನನು ತನಗೆ ಸಾಧ್ಯವಿರುವ ಎಲ್ಲ ವಿಧದಲ್ಲಿಯೂ ಪ್ರಯತ್ನಿಸುತ್ತಿದ್ದಾನೆ. ಹೀಗಿರುವಾಗ, ನಾವು ಬಳಲಿಹೋಗಿ ನಮ್ಮ ಕೆಲಸವನ್ನು ನಿಲ್ಲಿಸದಂತೆ ಬೇಕಾಗಿರುವ ಆತ್ಮಿಕ ಬಲವನ್ನು ಹೇಗೆ ಪಡೆದುಕೊಳ್ಳಬಲ್ಲೆವು?

5. ಕ್ರೈಸ್ತ ಶುಶ್ರೂಷೆಯನ್ನು ನಡೆಸಲಿಕ್ಕಾಗಿ ಮಾನವ ಬಲಕ್ಕಿಂತಲೂ ಹೆಚ್ಚಿನದ್ದು ಬೇಕಾಗಿದೆ ಏಕೆ?

5 ಆತ್ಮಿಕ ಬಲಕ್ಕಾಗಿ ನಾವು ಸರ್ವಶಕ್ತ ಸೃಷ್ಟಿಕರ್ತನಾದ ಯೆಹೋವನ ಮೇಲೆ ಆತುಕೊಳ್ಳಬೇಕು. ಕ್ರೈಸ್ತ ಶುಶ್ರೂಷೆಗಾಗಿ, ಅಪರಿಪೂರ್ಣ ಮಾನವರಲ್ಲಿರುವ ಸಾಧಾರಣವಾದ ಬಲಕ್ಕಿಂತಲೂ ಹೆಚ್ಚಿನದ್ದು ಬೇಕಾಗಿರುವುದೆಂದು ಅಪೊಸ್ತಲ ಪೌಲನು ತೋರಿಸಿದನು. ಅವನು ಬರೆದುದು: “ಬಲಾಧಿಕ್ಯವು [“ಸಾಧಾರಣವಾದದ್ದಕ್ಕಿಂತಲೂ ಹೆಚ್ಚಿನ ಬಲ,” NW] ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.” (2 ಕೊರಿಂಥ 4:7) ಅಭಿಷಿಕ್ತ ಕ್ರೈಸ್ತರು, ಭೂಮಿಯ ಮೇಲೆ ಜೀವಿಸುವ ನಿರೀಕ್ಷೆಯುಳ್ಳ ತಮ್ಮ ಸಂಗಾತಿಗಳ ಬೆಂಬಲದೊಂದಿಗೆ “ಸಮಾಧಾನವಿಷಯವಾದ ಸೇವೆಯನ್ನು” ನಡೆಸುತ್ತಾ ಇದ್ದಾರೆ. (2 ಕೊರಿಂಥ 5:18; ಯೋಹಾನ 10:16; ಪ್ರಕಟನೆ 7:⁠9) ಅಪರಿಪೂರ್ಣ ಮಾನವರಾಗಿರುವ ನಾವು ದೇವರ ಕೆಲಸವನ್ನು ಮಾಡುತ್ತಿರುವಾಗ ಹಿಂಸೆಯನ್ನು ಎದುರಿಸುತ್ತೇವೆ. ಆದುದರಿಂದ, ಆ ಕೆಲಸವನ್ನು ನಾವು ಕೇವಲ ನಮ್ಮ ಸ್ವಂತ ಬಲದಿಂದ ಪೂರೈಸಲಾರೆವು. ತನ್ನ ಪವಿತ್ರಾತ್ಮದ ಮೂಲಕ ಯೆಹೋವನು ನಮಗೆ ಸಹಾಯಮಾಡುತ್ತಾನೆ ಮತ್ತು ಹೀಗೆ ನಮ್ಮ ದೌರ್ಬಲ್ಯವು ಆತನ ಶಕ್ತಿಯನ್ನು ಮಹಿಮೆಪಡಿಸುತ್ತದೆ. ಅಲ್ಲದೆ, “ನೀತಿವಂತರನ್ನು ಯೆಹೋವನೇ ಉದ್ಧರಿಸುವನು” ಎಂಬ ಆಶ್ವಾಸನೆಯು ನಮಗಿದೆ. ಇದರಿಂದ ನಮಗೆಷ್ಟು ಸಾಂತ್ವನ ದೊರಕುತ್ತದೆ!​—⁠ಕೀರ್ತನೆ 37:⁠17.

‘ಯೆಹೋವನೇ ನಮ್ಮ ಬಲ’

6. ಯೆಹೋವನು ನಮ್ಮ ಬಲದ ಮೂಲನಾಗಿದ್ದಾನೆಂದು ಶಾಸ್ತ್ರಗಳು ನಮಗೆ ಹೇಗೆ ಆಶ್ವಾಸನೆಯನ್ನು ನೀಡುತ್ತವೆ?

6 ಸ್ವರ್ಗದಲ್ಲಿರುವ ನಮ್ಮ ತಂದೆಯು, “ಬಲಾಢ್ಯ”ನಾಗಿದ್ದಾನೆ. ಆದುದರಿಂದ ಆತನು ನಮಗೆ ಸುಲಭವಾಗಿ ಬಲವನ್ನು ಕೊಡಬಲ್ಲನು. ವಾಸ್ತವದಲ್ಲಿ ನಮಗೆ ಹೀಗೆ ಹೇಳಲಾಗಿದೆ: “ಬಳಲಿಹೋದವರನ್ನು [ಯೆಹೋವನು] ಬಲಶಾಲಿಗಳನ್ನಾಗಿ ಮಾಡುತ್ತಾನೆ. ಬಲಹೀನರನ್ನು ಶಕ್ತಿವಂತರನ್ನಾಗಿ ಮಾಡುತ್ತಾನೆ. ಯೌವನಸ್ಥರು ಆಯಾಸಗೊಳ್ಳುವರು. ಅವರಿಗೆ ವಿಶ್ರಾಂತಿ ಬೇಕು, ಹುಡುಗರೂ ಮುಗ್ಗರಿಸಿ ಬೀಳುವರು. ಆದರೆ ಯೆಹೋವನಲ್ಲಿ ಭರವಸೆಯಿಟ್ಟವರು ಮತ್ತೆ ಬಲಹೊಂದುವರು. ಹದ್ದು ಹೊಸ ಗರಿಗಳನ್ನು ಹೊಂದುವಂತೆ ಅವರು ಹೊಸ ಬಲವನ್ನು ಹೊಂದುವರು. ಅವರು ಓಡಾಡಿದರೂ ಆಯಾಸಗೊಳ್ಳುವದಿಲ್ಲ, ನಡೆದಾಡಿದರೂ ಬಳಲಿ ಹೋಗುವುದಿಲ್ಲ.” (ಯೆಶಾಯ 40:​29-31, ಪರಿಶುದ್ಧ ಬೈಬಲ್‌) ನಾವು ದಿನಾಲೂ ಹೆಚ್ಚೆಚ್ಚು ಒತ್ತಡಗಳನ್ನು ಎದುರಿಸುತ್ತೇವೆ. ಆಗ ನಮಗೆ ಹೇಗನಿಸಬಹುದು? ತುಂಬ ಸುಸ್ತಾಗಿ, ಮುಂದೆ ಓಡಲೂ ತ್ರಾಣವಿಲ್ಲದ ಒಬ್ಬ ಓಟಗಾರನಂತೆಯೇ ನಮಗನಿಸಬಹುದು. ನಮಗಾದರೊ ಜೀವಕ್ಕಾಗಿರುವ ಓಟದ ಅಂತಿಮ ಗೆರೆಯು ಸಮೀಪದಲ್ಲೇ ಇದೆ. ಆದುದರಿಂದ ನಾವು ಓಡುವುದನ್ನು ಬಿಟ್ಟುಕೊಡಬಾರದು. (2 ಪೂರ್ವಕಾಲವೃತ್ತಾಂತ 29:11) ಆದರೆ ನಮ್ಮ ಶತ್ರುವಾಗಿರುವ ಪಿಶಾಚನು “ಗರ್ಜಿಸುವ ಸಿಂಹದೋಪಾದಿಯಲ್ಲಿ” ಅತ್ತಿತ್ತ ತಿರುಗಾಡುತ್ತಿದ್ದಾನೆ ಮತ್ತು ಅವನ ಒಂದೇ ಗುರಿ ನಮ್ಮನ್ನು ತಡೆಗಟ್ಟಿ ನಿಲ್ಲಿಸುವುದಾಗಿದೆ. (1 ಪೇತ್ರ 5:⁠8) ಆದರೆ ‘ಯೆಹೋವನು ನಮ್ಮ ಬಲವೂ ಗುರಾಣಿಯೂ ಆಗಿದ್ದಾನೆ’ ಮತ್ತು ‘ಬಳಲಿಹೋದವನಿಗೆ ಬಲವನ್ನು’ ಕೊಡಲು ಅವನು ಹಲವಾರು ಒದಗಿಸುವಿಕೆಗಳನ್ನು ಮಾಡಿದ್ದಾನೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳೋಣ.​—⁠ಕೀರ್ತನೆ 28:⁠7.

7, 8. ಯೆಹೋವನು ದಾವೀದ, ಹಬಕ್ಕೂಕ ಮತ್ತು ಪೌಲರನ್ನು ಬಲಪಡಿಸಿದನೆಂಬುದಕ್ಕೆ ಯಾವ ರುಜುವಾತಿದೆ?

7 ದೊಡ್ಡ ದೊಡ್ಡ ಅಡೆತಡೆಗಳ ಎದುರಿನಲ್ಲೂ ಮುಂದುವರಿಯುವಂತೆ ಬೇಕಾದ ಬಲವನ್ನು ಯೆಹೋವನು ದಾವೀದನಿಗೆ ಕೊಟ್ಟನು. ಹೀಗಿರುವುದರಿಂದ, ದಾವೀದನು ಪೂರ್ಣ ನಂಬಿಕೆ ಮತ್ತು ಭರವಸೆಯೊಂದಿಗೆ ಬರೆದುದು: “ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು. ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!” (ಕೀರ್ತನೆ 60:​12, ಪರಿಶುದ್ಧ ಬೈಬಲ್‌) ಯೆಹೋವನು ಹಬಕ್ಕೂಕನಿಗೂ ಬಲವನ್ನು ಕೊಟ್ಟನು. ಹೀಗೆ, ಅವನು ಒಬ್ಬ ಪ್ರವಾದಿಯೋಪಾದಿ ತನಗೆ ಕೊಡಲ್ಪಟ್ಟಿದ್ದ ನೇಮಕವನ್ನು ಪೂರೈಸಲು ಶಕ್ತನಾದನು. ಹಬಕ್ಕೂಕ 3:19 ಹೇಳುವುದು: “ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕುಮಾಡಿ ನನ್ನ ಉನ್ನತಪ್ರದೇಶಗಳಲ್ಲಿ ನನ್ನನ್ನು ನಡಿಸುತ್ತಾನೆ.” ಪೌಲನ ಮಾದರಿಯು ಸಹ ಗಮನಾರ್ಹವಾದದ್ದು. ಅವನು ಬರೆದುದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”​—⁠ಫಿಲಿಪ್ಪಿ 4:13.

8 ದೇವರ ಬಳಿ ನಮ್ಮನ್ನು ಬಲಗೊಳಿಸುವ ಸಾಮರ್ಥ್ಯವಿದೆ ಮತ್ತು ನಮ್ಮನ್ನು ರಕ್ಷಿಸುವ ಶಕ್ತಿ ಇದೆಯೆಂಬ ನಂಬಿಕೆ ದಾವೀದ, ಹಬಕ್ಕೂಕ ಮತ್ತು ಪೌಲರಿಗಿದ್ದಂತೆ ನಮಗೂ ಇರಬೇಕು. ಪರಮಾಧಿಕಾರಿ ಪ್ರಭುವಾದ ಯೆಹೋವನು ನಮ್ಮ ‘ಬಲದ’ ಮೂಲನಾಗಿದ್ದಾನೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ದೇವರು ಹೇರಳವಾಗಿ ಒದಗಿಸುವಂತಹ ಏರ್ಪಾಡುಗಳಿಂದ ನಾವು ಆತ್ಮಿಕ ಬಲವನ್ನು ಪಡೆದುಕೊಳ್ಳಬಹುದಾದ ಕೆಲವೊಂದು ವಿಧಗಳನ್ನು ಈಗ ಪರಿಗಣಿಸೋಣ.

ನಮ್ಮಲ್ಲಿ ಬಲವನ್ನು ತುಂಬಿಸುವ ಆತ್ಮಿಕ ಒದಗಿಸುವಿಕೆಗಳು

9. ನಮ್ಮನ್ನು ಪೋಷಿಸುವುದರಲ್ಲಿ ಕ್ರೈಸ್ತ ಪ್ರಕಾಶನಗಳ ಪಾತ್ರವೇನು?

9 ಕ್ರೈಸ್ತ ಪ್ರಕಾಶನಗಳ ಸಹಾಯದೊಂದಿಗೆ, ಶಾಸ್ತ್ರಗಳನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಮಾಡುವುದು ನಮ್ಮಲ್ಲಿ ಬಲವನ್ನು ತುಂಬಿಸಿ, ಪೋಷಿಸಬಲ್ಲದು. ಕೀರ್ತನೆಗಾರನು ಹೀಗೆ ಹಾಡಿದನು: “ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:1-3) ಶಾರೀರಿಕ ಬಲಕ್ಕಾಗಿ ನಾವು ಊಟಮಾಡಬೇಕು. ಹಾಗೆಯೇ ಆತ್ಮಿಕ ಬಲಕ್ಕಾಗಿ ನಾವು ಆತ್ಮಿಕ ಆಹಾರವನ್ನು ಸೇವಿಸಬೇಕು. ಈ ಆಹಾರವನ್ನು ದೇವರು ತನ್ನ ವಾಕ್ಯ ಮತ್ತು ಕ್ರೈಸ್ತ ಪ್ರಕಾಶನಗಳ ಮೂಲಕ ಒದಗಿಸುತ್ತಿದ್ದಾನೆ. ಆದುದರಿಂದ, ಉದ್ದೇಶಭರಿತ ಅಭ್ಯಾಸ ಮತ್ತು ಮನನವು ಅತ್ಯಾವಶ್ಯಕ.

10. ಅಭ್ಯಾಸ ಮತ್ತು ಮನನಕ್ಕಾಗಿ ನಾವು ಯಾವಾಗ ಸಮಯವನ್ನು ಕಂಡುಕೊಳ್ಳಬಹುದು?

10 “ದೇವರ ಅಗಾಧವಾದ ವಿಷಯಗಳ” ಕುರಿತಾಗಿ ಮನನ ಮಾಡುವುದರಿಂದ ನಿಜವಾಗಿಯೂ ಪ್ರತಿಫಲಗಳು ದೊರಕುತ್ತವೆ. (1 ಕೊರಿಂಥ 2:10) ಆದರೆ ಮನನ ಮಾಡುವುದಕ್ಕಾಗಿ ನಾವು ಯಾವಾಗ ಸಮಯವನ್ನು ಕಂಡುಕೊಳ್ಳಬಹುದು? ಅಬ್ರಹಾಮನ ಮಗನಾದ ಇಸಾಕನು, “ಸಂಜೇ ವೇಳೆಯಲ್ಲಿ ಧ್ಯಾನ ಮಾಡುವದಕ್ಕೋಸ್ಕರ ಅಡವಿಗೆ ಹೋಗಿ”ದ್ದನು. (ಆದಿಕಾಂಡ 24:​63-67) ಕೀರ್ತನೆಗಾರನಾದ ದಾವೀದನು, ‘ರಾತ್ರಿಯ ಜಾವಗಳಲ್ಲಿ ದೇವರನ್ನು ಧ್ಯಾನಿಸುತ್ತಿದ್ದನು.’ (ಕೀರ್ತನೆ 63:⁠6) ಬೆಳಗ್ಗೆ, ಸಾಯಂಕಾಲ ಅಥವಾ ರಾತ್ರಿ, ಹೀಗೆ ಯಾವುದೇ ಸಮಯದಲ್ಲಿ ನಾವು ದೇವರ ವಾಕ್ಯವನ್ನು ಅಭ್ಯಾಸಮಾಡಿ, ಅದರ ಕುರಿತು ಮನನಮಾಡಬಹುದು. ಅಂತಹ ಅಭ್ಯಾಸ ಮತ್ತು ಮನನವು, ನಮ್ಮನ್ನು ಆತ್ಮಿಕವಾಗಿ ಬಲಪಡಿಸುವುದಕ್ಕಾಗಿರುವ ಯೆಹೋವನ ಇನ್ನೊಂದು ಒದಗಿಸುವಿಕೆಯ ಕಡೆಗೆ ನಡೆಸುತ್ತದೆ. ಅದು ಪ್ರಾರ್ಥನೆಯೇ ಆಗಿದೆ.

11. ಕ್ರಮವಾಗಿ ಪ್ರಾರ್ಥನೆಮಾಡುವುದಕ್ಕೆ ನಾವು ಏಕೆ ತುಂಬ ಮಹತ್ವವನ್ನು ಕೊಡಬೇಕು?

11 ದೇವರಿಗೆ ಕ್ರಮವಾಗಿ ಪ್ರಾರ್ಥನೆಮಾಡುವುದು, ನಮ್ಮಲ್ಲಿ ಬಲವನ್ನು ತುಂಬಿಸುತ್ತದೆ. ಆದುದರಿಂದ ನಾವು ‘ಬೇಸರಗೊಳ್ಳದೆ ಪ್ರಾರ್ಥನೆ ಮಾಡೋಣ.’ (ರೋಮಾಪುರ 12:12) ಕೆಲವೊಮ್ಮೆ, ಒಂದು ಸಂಕಷ್ಟವನ್ನು ನಿಭಾಯಿಸಲಿಕ್ಕಾಗಿ ಬೇಕಾಗಿರುವ ವಿವೇಕ ಮತ್ತು ಬಲಕ್ಕಾಗಿ ನಾವು ನಿರ್ದಿಷ್ಟವಾಗಿ ವಿನಂತಿಸುವ ಅಗತ್ಯವಿರಬಹುದು. (ಯಾಕೋಬ 1:​5-8) ಅಷ್ಟುಮಾತ್ರವಲ್ಲದೆ, ದೇವರ ಉದ್ದೇಶಗಳು ನೆರವೇರುತ್ತಿರುವುದನ್ನು ನಾವು ನೋಡುವಾಗ ಅಥವಾ ಆತನ ಸೇವೆಯಲ್ಲಿ ಆತನು ನಮ್ಮನ್ನು ಬಲಪಡಿಸಿದ್ದಾನೆಂದು ನಮಗೆ ಗೊತ್ತಾದಾಗ ನಾವು ದೇವರಿಗೆ ಉಪಕಾರ ಮತ್ತು ಸ್ತುತಿಯನ್ನೂ ಸಲ್ಲಿಸೋಣ. (ಫಿಲಿಪ್ಪಿ 4:​6, 7) ನಾವು ಪ್ರಾರ್ಥನೆಯ ಮೂಲಕ ದೇವರಿಗೆ ನಿಕಟರಾಗಿ ಉಳಿಯುವಲ್ಲಿ, ಆತನು ಎಂದಿಗೂ ನಮ್ಮ ಕೈಬಿಡನು. ಆದುದರಿಂದಲೇ ದಾವೀದನು “ಇಗೋ, ದೇವರೇ ನನಗೆ ಸಹಾಯಕನು” ಎಂದು ಹಾಡಿದನು.​—⁠ಕೀರ್ತನೆ 54:⁠4.

12. ದೇವರು ನಮಗೆ ತನ್ನ ಪವಿತ್ರಾತ್ಮವನ್ನು ಕೊಡುವಂತೆ ನಾವೇಕೆ ಕೇಳಿಕೊಳ್ಳಬೇಕು?

12 ನಮ್ಮ ಸ್ವರ್ಗೀಯ ತಂದೆಯು, ತನ್ನ ಪವಿತ್ರಾತ್ಮ ಅಥವಾ ಕ್ರಿಯಾಶೀಲ ಶಕ್ತಿಯ ಮೂಲಕ ನಮ್ಮನ್ನು ಬಲಪಡಿಸುತ್ತಾನೆ. ಪೌಲನು ಬರೆದುದು: “ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು​—⁠ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ ವಿಶೇಷಬಲ ಹೊಂದಿದವರಾಗುವ ಹಾಗೆಯೂ . . . ಆತನನ್ನು ಬೇಡಿಕೊಳ್ಳುತ್ತೇನೆ.” (ಎಫೆಸ 3:14-19) ಯೆಹೋವನು ನಮಗೆ ಪವಿತ್ರಾತ್ಮವನ್ನು ಕೊಟ್ಟು ಆಶೀರ್ವದಿಸುವನೆಂಬ ಭರವಸೆಯೊಂದಿಗೆ ನಾವು ಅದಕ್ಕಾಗಿ ಪ್ರಾರ್ಥಿಸಬೇಕು. ಇದರ ಕುರಿತು ಯೇಸು ಹೀಗೆ ತರ್ಕಿಸಿದನು: ಒಬ್ಬ ಮಗನು ತನ್ನನ್ನು ಪ್ರೀತಿಸುತ್ತಿರುವ ತಂದೆಗೆ ಮೀನನ್ನು ಕೇಳುವಲ್ಲಿ, ಅವನು ಹಾವನ್ನು ಕೊಡುವನೇ? ಖಂಡಿತವಾಗಿಯೂ ಇಲ್ಲ. ಹೀಗಿರುವುದರಿಂದ, “[ಪಾಪಿಗಳಾಗಿರುವ ಮತ್ತು ಹೀಗೆ ಹೆಚ್ಚುಕಡಿಮೆ] ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ” ಎಂದು ಅವನು ತನ್ನ ಮಾತನ್ನು ಮುಕ್ತಾಯಗೊಳಿಸಿದನು. (ಲೂಕ 11:11-13) ಇದೇ ಭರವಸೆಯೊಂದಿಗೆ ನಾವು ಪ್ರಾರ್ಥನೆಮಾಡೋಣ. ಮತ್ತು ದೇವರ ನಂಬಿಗಸ್ತ ಸೇವಕರು ಆತನ ಆತ್ಮದ ಶಕ್ತಿಯ ಮೂಲಕ “ವಿಶೇಷಬಲ ಹೊಂದಿದವರಾಗ”ಬಲ್ಲರೆಂಬುದನ್ನು ಯಾವಾಗಲೂ ಮನಸ್ಸಿನಲ್ಲಿಡೋಣ.

ಸಭೆಯು ಬಲಪಡಿಸುತ್ತದೆ

13. ಕ್ರೈಸ್ತ ಕೂಟಗಳ ಕುರಿತಾಗಿ ನಮ್ಮ ಅಭಿಪ್ರಾಯ ಏನಾಗಿರಬೇಕು?

13 ಕ್ರೈಸ್ತ ಸಭೆಯ ಕೂಟಗಳ ಮೂಲಕವೂ ಯೆಹೋವನು ನಮಗೆ ಬಲವನ್ನು ಕೊಡುತ್ತಾನೆ. ಯೇಸು ಹೇಳಿದ್ದು: “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” (ಮತ್ತಾಯ 18:20) ಯೇಸು ಹಾಗೆ ಹೇಳಿದಾಗ, ಸಭೆಯಲ್ಲಿ ಮುಂದಾಳತ್ವವನ್ನು ವಹಿಸುತ್ತಿರುವವರು ಗಮನಕೊಡಬೇಕಾದ ಸಂಗತಿಗಳ ಕುರಿತಾಗಿ ಚರ್ಚಿಸುತ್ತಿದ್ದನು. (ಮತ್ತಾಯ 18:​15-19) ಆದರೆ, ಅವನ ಮಾತುಗಳ ಹಿಂದಿರುವ ಮೂಲತತ್ವವು ನಮ್ಮ ಎಲ್ಲ ಕೂಟಗಳಿಗೆ, ಸಮ್ಮೇಳನಗಳಿಗೆ, ಮತ್ತು ಅಧಿವೇಶನಗಳಿಗೆ ಅನ್ವಯಿಸುತ್ತದೆ. ಯಾಕೆಂದರೆ ಇವೆಲ್ಲವೂ ಅವನ ಹೆಸರಿನಲ್ಲಿಯೇ ಮಾಡಲಾಗುವ ಪ್ರಾರ್ಥನೆಯ ಮೂಲಕ ಆರಂಭಿಸಲ್ಪಡುತ್ತವೆ ಮತ್ತು ಕೊನೆಗೊಳಿಸಲ್ಪಡುತ್ತವೆ. (ಯೋಹಾನ 14:14) ಆದುದರಿಂದ ಅಂತಹ ಕ್ರೈಸ್ತ ಕೂಟಗಳಲ್ಲಿ ಕೆಲವರೇ ಇರಲಿ ಇಲ್ಲವೆ ಸಾವಿರಾರು ಮಂದಿಯೇ ಕೂಡಿರಲಿ, ನಾವು ಅಲ್ಲಿ ಹಾಜರಿರುವುದೇ ಒಂದು ದೊಡ್ಡ ಸುಯೋಗವಾಗಿದೆ. ಈ ಕಾರಣದಿಂದ, ನಮ್ಮನ್ನು ಆತ್ಮಿಕವಾಗಿ ಬಲಪಡಿಸಲು ಮತ್ತು ಪ್ರೀತಿಸಲು ಹಾಗೂ ಸತ್ಕಾರ್ಯಮಾಡಲು ಪ್ರೇರೇಪಿಸುವ ಉದ್ದೇಶಕ್ಕಾಗಿ ರಚಿಸಲ್ಪಟ್ಟಿರುವ ಈ ಸಂದರ್ಭಗಳಿಗಾಗಿ ನಾವು ಕೃತಜ್ಞತೆಯನ್ನು ತೋರಿಸೋಣ.​—⁠ಇಬ್ರಿಯ 10:​24, 25.

14. ಕ್ರೈಸ್ತ ಹಿರಿಯರ ಪ್ರಯತ್ನಗಳಿಂದ ನಮಗೆ ಯಾವ ಪ್ರಯೋಜನಗಳು ಸಿಗುತ್ತವೆ?

14 ಕ್ರೈಸ್ತ ಹಿರಿಯರು ಆತ್ಮಿಕ ಸಹಾಯ ಹಾಗೂ ಉತ್ತೇಜನವನ್ನು ಕೊಡುತ್ತಾರೆ. (1 ಪೇತ್ರ 5:​2, 3) ಇಂದಿನ ಸಂಚರಣ ಮೇಲ್ವಿಚಾರಕರಂತೆಯೇ, ಪೌಲನು ಯಾವ ಸಭೆಗಳಲ್ಲಿ ಕೆಲಸಮಾಡುತ್ತಿದ್ದನೊ ಆ ಸಭೆಗಳಿಗೆ ಸಹಾಯಮಾಡುತ್ತಿದ್ದನು ಮತ್ತು ಉತ್ತೇಜಿಸುತ್ತಿದ್ದನು. ವಾಸ್ತವದಲ್ಲಿ, ಅವನು ಜೊತೆ ವಿಶ್ವಾಸಿಗಳೊಂದಿಗಿರಲು ತುಂಬ ಹಾತೊರೆಯುತ್ತಿದ್ದನು. ಯಾಕೆಂದರೆ ಇದರಿಂದಾಗಿ, ಅವನ ಮತ್ತು ಅವರ ನಡುವೆ ಭಕ್ತಿವೃದ್ಧಿಗೊಳಿಸುವ ಉತ್ತೇಜನದ ವಿನಿಮಯವಾಗಸಾಧ್ಯವಿತ್ತು. (ಅ. ಕೃತ್ಯಗಳು 14:​19-22; ರೋಮಾಪುರ 1:​11, 12) ನಮ್ಮನ್ನು ಆತ್ಮಿಕವಾಗಿ ಬಲಪಡಿಸುವುದರಲ್ಲಿ ದೊಡ್ಡ ಪಾತ್ರವನ್ನು ವಹಿಸುವ ನಮ್ಮ ಸ್ಥಳಿಕ ಹಿರಿಯರು ಮತ್ತು ಇತರ ಕ್ರೈಸ್ತ ಮೇಲ್ವಿಚಾರಕರಿಗಾಗಿ ನಾವು ಯಾವಾಗಲೂ ಗಣ್ಯತೆಯನ್ನು ತೋರಿಸೋಣ.

15. ನಮ್ಮ ಸಭೆಯಲ್ಲಿರುವ ಜೊತೆ ವಿಶ್ವಾಸಿಗಳು ನಮ್ಮನ್ನು ಹೇಗೆ ‘ಬಲಪಡಿಸಬಲ್ಲರು’?

15 ನಮ್ಮ ಸಭೆಯಲ್ಲಿರುವ ಜೊತೆ ವಿಶ್ವಾಸಿಗಳು ಸಹ ನಮ್ಮನ್ನು “ಬಲಪಡಿಸ”ಬಲ್ಲರು (NW). (ಕೊಲೊಸ್ಸೆ 4:​10, 11) ನಿಜ ‘ಮಿತ್ರ’ರೋಪಾದಿ, ಅವರು ನಮಗೆ ಆಪತ್ತಿನ ಸಮಯದಲ್ಲಿ ಸಹಾಯಮಾಡಬಲ್ಲರು. (ಜ್ಞಾನೋಕ್ತಿ 17:17) ಉದಾಹರಣೆಗಾಗಿ, ಸ್ಯಾಕ್ಸನ್‌ಹಾಸೆನ್‌ ಕೂಟ ಶಿಬಿರದಲ್ಲಿದ್ದ ಸೆರೆವಾಸಿಗಳನ್ನು 1945ರಲ್ಲಿ ನಾಸಿ ಸೈನಿಕರ ಕಾವಲಿನೊಂದಿಗೆ ಬಿಡುಗಡೆಗೊಳಿಸಲ್ಪಟ್ಟಾಗ, ಅವರು ಕಾಲ್ನಡಿಗೆಯಲ್ಲಿ 200 ಕಿಲೊಮೀಟರ್‌ಗಳ ಪ್ರಯಾಣವನ್ನು ಮಾಡಬೇಕಿತ್ತು. ಈ ಸೆರೆವಾಸಿಗಳಲ್ಲಿ, ದೇವರ 220 ಮಂದಿ ಸೇವಕರೂ ಇದ್ದರು. ಇವರು ಒಂದೇ ಗುಂಪಾಗಿ ಪ್ರಯಾಣಿಸಿದರು. ಹೆಚ್ಚು ಶಕ್ತಿಶಾಲಿಗಳಾಗಿರುವವರು, ದುರ್ಬಲರಾಗಿದ್ದವರನ್ನು ಕೆಲವೊಂದು ಚಿಕ್ಕ ಬಂಡಿಗಳಲ್ಲಿ ಕುಳ್ಳಿರಿಸಿ, ಬಂಡಿಯನ್ನು ಎಳೆದುಕೊಂಡು ಮುಂದೆ ಸಾಗಿದರು. ಹೀಗೆ ಮಾಡಿದ್ದರ ಫಲಿತಾಂಶವೇನಾಗಿತ್ತು? ಮೃತ್ಯು ನಡಿಗೆ ಎಂದು ಕರೆಯಲಾಗಿದ್ದ ಆ ಪ್ರಯಾಣದ ಸಮಯದಲ್ಲಿ, ಕೂಟ ಶಿಬಿರದಿಂದ ಹೊರಟಂತಹ ಸೆರೆವಾಸಿಗಳಲ್ಲಿ 10,000 ಮಂದಿ ಸತ್ತುಹೋದರು. ಆದರೆ ಯೆಹೋವನ ಸಾಕ್ಷಿಗಳ ಪೈಕಿಯಾದರೋ ಒಬ್ಬರೂ ಸಾಯಲಿಲ್ಲ. ಯಿಯರ್‌ಬುಕ್‌ ಆಫ್‌ ಜೆಹೊವಾಸ್‌ ವಿಟ್ನೆಸಸ್‌ ಮತ್ತು ಜೆಹೋವಾಸ್‌ ವಿಟ್ನೆಸಸ್‌​—⁠ಪ್ರೊಕ್ಲೆಮರ್ಸ್‌ ಆಫ್‌ ಗಾಡ್ಸ್‌ ಕಿಂಗ್‌ಡಮ್‌ ಪುಸ್ತಕಗಳನ್ನು ಸೇರಿಸಿ ವಾಚ್‌ ಟವರ್‌ ಪ್ರಕಾಶನಗಳಲ್ಲಿ ಈ ರೀತಿಯ ವೃತ್ತಾಂತಗಳು ಬರುತ್ತವೆ. ಮತ್ತು ಇವು, ತನ್ನ ಜನರು ಬಿಟ್ಟುಕೊಡದಂತೆ ದೇವರು ಅವರಿಗೆ ಬಲವನ್ನು ಕೊಡುತ್ತಾನೆಂಬುದನ್ನು ರುಜುಪಡಿಸುತ್ತದೆ.​—⁠ಗಲಾತ್ಯ 6:⁠9. *

ನಮ್ಮ ಕ್ಷೇತ್ರ ಸೇವೆಯಿಂದ ಬಲಗೊಳಿಸಲ್ಪಡುವುದು

16. ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು ನಮ್ಮನ್ನು ಆತ್ಮಿಕವಾಗಿ ಹೇಗೆ ಬಲಗೊಳಿಸುತ್ತದೆ?

16 ರಾಜ್ಯದ ಕುರಿತು ಸಾರುವ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು ನಮ್ಮನ್ನು ಆತ್ಮಿಕವಾಗಿ ಬಲಪಡಿಸುತ್ತದೆ. ಈ ಚಟುವಟಿಕೆಯು, ನಾವು ದೇವರ ರಾಜ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಮತ್ತು ನಿತ್ಯತೆ ಹಾಗೂ ಅದರ ಆಶೀರ್ವಾದಿತ ಪ್ರತೀಕ್ಷೆಗಳನ್ನು ಸದಾ ನಮ್ಮ ಕಣ್ಮುಂದೆಯೇ ಇಟ್ಟುಕೊಳ್ಳುವಂತೆ ಸಹಾಯಮಾಡುತ್ತದೆ. (ಯೂದ 20, 21) ನಮ್ಮ ಶುಶ್ರೂಷೆಯಲ್ಲಿ ನಾವು ಶಾಸ್ತ್ರೀಯ ವಾಗ್ದಾನಗಳ ಕುರಿತಾಗಿ ಮಾತಾಡುತ್ತಿರುತ್ತೇವೆ. ಈ ವಾಗ್ದಾನಗಳು ನಮಗೆ ನಿರೀಕ್ಷೆಯನ್ನು ಕೊಡುತ್ತವೆ ಮತ್ತು ಪ್ರವಾದಿ ಮೀಕನಿಗಿದ್ದಂಥ ಈ ದೃಢಸಂಕಲ್ಪವನ್ನು ನಮ್ಮಲ್ಲಿ ಕಟ್ಟುತ್ತವೆ. ಅವನಂದದ್ದು: “ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.”​—⁠ಮೀಕ 4:⁠5.

17. ಮನೆ ಬೈಬಲ್‌ ಅಭ್ಯಾಸಗಳ ಕುರಿತಾಗಿ ಯಾವ ಸಲಹೆಗಳನ್ನು ಕೊಡಲಾಗಿದೆ?

17 ನಾವು ಬೇರೆಯವರಿಗೆ ಕಲಿಸುತ್ತಿರುವಾಗ ಶಾಸ್ತ್ರವಚನಗಳನ್ನು ಹೆಚ್ಚಾಗಿ ಉಪಯೋಗಿಸುವುದಾದರೆ, ಯೆಹೋವನೊಂದಿಗಿನ ನಮ್ಮ ಸ್ವಂತ ಸಂಬಂಧವು ತಾನೇ ಹೆಚ್ಚು ಬಲವಾಗುವುದು. ಉದಾಹರಣೆಗಾಗಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಿಂದ ನಾವು ಮನೆ ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಿರುವಾಗ, ಅದರಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರವಚನಗಳನ್ನು ಓದಿ ಚರ್ಚಿಸುವುದು ವಿವೇಕಯುತ. ಇದು ವಿದ್ಯಾರ್ಥಿಯ ಆತ್ಮಿಕ ತಿಳುವಳಿಕೆಯನ್ನು ಮಾತ್ರವಲ್ಲ ಬದಲಾಗಿ ನಮ್ಮ ಆತ್ಮಿಕ ತಿಳುವಳಿಕೆಯನ್ನೂ ದೃಢಪಡಿಸುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗೆ, ಬೈಬಲಿನ ಯಾವುದೊ ವಿಚಾರ ಅಥವಾ ದೃಷ್ಟಾಂತವನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಆಗ, ಜ್ಞಾನ ಪುಸ್ತಕದ ಆ ಒಂದು ಅಧ್ಯಾಯವನ್ನು ಒಂದೇ ಸಲ ಅಭ್ಯಾಸ ಮಾಡಿಮುಗಿಸುವ ಬದಲು, ಅದನ್ನು ಒಂದಕ್ಕಿಂತಲೂ ಹೆಚ್ಚು ಅಭ್ಯಾಸಾವಧಿಗಳಲ್ಲಿ ಅಭ್ಯಾಸ ಮಾಡಬೇಕಾಗಬಹುದು. ಇತರರು ದೇವರ ಸಮೀಪಕ್ಕೆ ಬರುವಂತೆ ನಾವು ಒಳ್ಳೆಯ ಮುನ್‌ತಯಾರಿ ಮತ್ತು ಹೆಚ್ಚಿನ ಪ್ರಯತ್ನವನ್ನು ಮಾಡಲು ಎಷ್ಟು ಸಂತೋಷಿಸುತ್ತೇವೆ!

18. ಜ್ಞಾನ ಪುಸ್ತಕವನ್ನು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಬಹುದೆಂಬುದನ್ನು ದೃಷ್ಟಾಂತಿಸಿರಿ.

18 ಪ್ರತಿ ವರ್ಷ ಸಾವಿರಾರು ಜನರು ಯೆಹೋವನ ಸಮರ್ಪಿತ ಸೇವಕರಾಗುವಂತೆ ಸಹಾಯಮಾಡಲು ಜ್ಞಾನ ಪುಸ್ತಕವನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಮತ್ತು ಇವರಲ್ಲಿ ಹೆಚ್ಚಿನವರು ಬೈಬಲಿನ ಕುರಿತಾಗಿ ಏನೂ ತಿಳಿಯದವರಾಗಿದ್ದಾರೆ. ಉದಾಹರಣೆಗಾಗಿ, ಶ್ರೀಲಂಕಾದಲ್ಲಿ ಒಬ್ಬ ಹಿಂದೂ ಯುವಕನು ಚಿಕ್ಕ ಹುಡುಗನಾಗಿದ್ದಾಗ, ಒಬ್ಬ ಸಾಕ್ಷಿಯು ಪ್ರಮೋದವನದ ಕುರಿತಾಗಿ ಮಾತಾಡುವುದನ್ನು ಕೇಳಿಸಿಕೊಂಡಿದ್ದನು. ಕೆಲವು ವರ್ಷಗಳ ಬಳಿಕ, ಅವನು ಆ ಸಾಕ್ಷಿಯ ಬಳಿ ಪುನಃ ಹೋದನು ಮತ್ತು ಆಗ ಆ ಸಾಕ್ಷಿಯ ಗಂಡನು ಅವನೊಂದಿಗೆ ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸಿದನು. ಆ ಯುವಕನು ಹೆಚ್ಚುಕಡಿಮೆ ಪ್ರತಿದಿನ ಅಭ್ಯಾಸಮಾಡಲು ಬರುತ್ತಿದ್ದನು. ಆದುದರಿಂದ, ಜ್ಞಾನ ಪುಸ್ತಕದಲ್ಲಿನ ಅವನ ಅಭ್ಯಾಸವು ಸ್ವಲ್ಪ ಸಮಯದೊಳಗೆಯೇ ಪೂರ್ಣಗೊಂಡಿತು. ಅವನು ಎಲ್ಲ ಕೂಟಗಳಿಗೆ ಹಾಜರಾಗಲಾರಂಭಿಸಿದನು, ತನ್ನ ಹಿಂದಿನ ಧರ್ಮದೊಂದಿಗಿದ್ದ ಎಲ್ಲ ಸಂಬಂಧಗಳನ್ನು ಕಡಿದುಹಾಕಿದನು ಮತ್ತು ಒಬ್ಬ ರಾಜ್ಯ ಪ್ರಚಾರಕನಾದನು. ಅವನು ದೀಕ್ಷಾಸ್ನಾನ ತೆಗೆದುಕೊಳ್ಳುವ ಸಮಯದಷ್ಟಕ್ಕೆ ಅವನು ಆಗಲೇ ಒಬ್ಬ ಪರಿಚಯಸ್ಥನೊಂದಿಗೆ ಬೈಬಲ್‌ ಅಭ್ಯಾಸವನ್ನು ಸಹ ನಡೆಸುತ್ತಿದ್ದನು.

19. ನಾವು ಮೊದಲು ರಾಜ್ಯಕ್ಕಾಗಿ ತವಕಪಡುತ್ತಿರುವಾಗ, ನಮಗೆ ಯಾವುದರ ಬಗ್ಗೆ ಖಾತ್ರಿಯಿರಬಲ್ಲದು?

19 ಮೊದಲು ದೇವರ ರಾಜ್ಯಕ್ಕಾಗಿ ತವಕಪಡುವುದು, ನಮ್ಮನ್ನು ಬಲಪಡಿಸುವಂಥ ರೀತಿಯ ಆನಂದವನ್ನು ತರುತ್ತದೆ. (ಮತ್ತಾಯ 6:33) ನಾವು ಬೇರೆ ಬೇರೆ ರೀತಿಯ ಕಷ್ಟಗಳನ್ನು ಅನುಭವಿಸುತ್ತಿರುವುದಾದರೂ, ನಾವು ಸಂತೋಷದಿಂದ ಮತ್ತು ಹುರುಪಿನಿಂದ ಸುವಾರ್ತೆಯನ್ನು ಘೋಷಿಸುತ್ತಾ ಇದ್ದೇವೆ. (ತೀತ 2:14) ನಮ್ಮಲ್ಲಿ ಅನೇಕರು, ಪೂರ್ಣ ಸಮಯದ ಪಯನೀಯರ್‌ ಸೇವೆಯಲ್ಲಿದ್ದೇವೆ. ಮತ್ತು ಕೆಲವರು, ಸೌವಾರ್ತಿಕರ ಅಗತ್ಯವಿರುವ ಸ್ಥಳಗಳಲ್ಲಿ ಸೇವೆಮಾಡುತ್ತಿದ್ದೇವೆ. ನಾವು ರಾಜ್ಯದ ಅಭಿರುಚಿಗಳಿಗಾಗಿ ಈ ವಿಧಗಳಲ್ಲಿ ಅಥವಾ ಬೇರಾವುದೊ ವಿಧಗಳಲ್ಲಿ ಸಂತೋಷದಿಂದ ಕೆಲಸಮಾಡುತ್ತಿರುವಲ್ಲಿ, ನಮಗೆ ಖಂಡಿತವಾಗಿಯೂ ಈ ಭರವಸೆ ಇರಬಲ್ಲದು. ಅದೇನೆಂದರೆ, ಯೆಹೋವನು ನಮ್ಮ ಕೆಲಸವನ್ನು ಮತ್ತು ಆತನ ನಾಮದ ವಿಷಯವಾಗಿ ನಾವು ತೋರಿಸುವ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ.​—⁠ಇಬ್ರಿಯ 6:​10-12.

ಯೆಹೋವನ ಬಲದಿಂದ ಮುಂದೆ ಸಾಗಿರಿ

20. ನಾವು ಯೆಹೋವನಿಂದ ಬಲವನ್ನು ಪಡೆದುಕೊಳ್ಳಲು ನಿರೀಕ್ಷಿಸುತ್ತೇವೆಂಬುದನ್ನು ಹೇಗೆ ತೋರಿಸಬಲ್ಲೆವು?

20 ನಾವು ಯೆಹೋವನಲ್ಲಿ ನಿರೀಕ್ಷಿಸುತ್ತೇವೆ ಮತ್ತು ಆತನಿಂದಲೇ ಬಲವನ್ನು ಪಡೆದುಕೊಳ್ಳಲು ಎದುರುನೋಡುತ್ತೇವೆ ಎಂಬುದನ್ನು ಇಚ್ಛಾಪೂರ್ವಕವಾಗಿ ಮತ್ತು ಮನಃಪೂರ್ವಕವಾಗಿ ತೋರಿಸೋಣ. ಆತನು ‘ನಂಬಿಗಸ್ತ ಆಳಿನ’ ಮೂಲಕ ಒದಗಿಸುತ್ತಿರುವ ಆತ್ಮಿಕ ಸರಬರಾಯಿಗಳ ಪೂರ್ಣ ಲಾಭವನ್ನು ಪಡೆದುಕೊಳ್ಳುವುದರಿಂದ ನಾವು ಹಾಗೆ ಮಾಡಬಹುದು. (ಮತ್ತಾಯ 24:45) ಯೆಹೋವನೊಂದಿಗಿರುವ ನಮ್ಮ ಸಂಬಂಧವನ್ನು ಬಲಪಡಿಸಿಕೊಂಡು, ಆತನ ಪವಿತ್ರ ಸೇವೆಯಲ್ಲಿ ಮುಂದುವರಿಯುತ್ತಾ ಹೋಗುವಂತೆ ಬಲವನ್ನು ಕೊಡುವ ಒದಗಿಸುವಿಕೆಗಳಲ್ಲಿ, ಕ್ರೈಸ್ತ ಪ್ರಕಾಶನಗಳ ಸಹಾಯದಿಂದ ದೇವರ ವಾಕ್ಯದ ವೈಯಕ್ತಿಕ ಮತ್ತು ಸಭಾ ಅಭ್ಯಾಸಗಳು, ಹೃತ್ಪೂರ್ವಕವಾದ ಪ್ರಾರ್ಥನೆ, ಹಿರಿಯರ ಆತ್ಮಿಕ ನೆರವು, ನಂಬಿಗಸ್ತ ಜೊತೆ ವಿಶ್ವಾಸಿಗಳ ಉತ್ತಮ ಮಾದರಿಗಳು, ಮತ್ತು ಶುಶ್ರೂಷೆಯಲ್ಲಿ ಕ್ರಮವಾದ ಪಾಲ್ಗೊಳ್ಳುವಿಕೆಯು ಸೇರಿದೆ.

21. ಅಪೊಸ್ತಲರಾದ ಪೇತ್ರ ಮತ್ತು ಪೌಲರು, ದೇವರು ಕೊಡುವಂಥ ಬಲವು ಅಗತ್ಯವೆಂಬುದನ್ನು ಹೇಗೆ ವ್ಯಕ್ತಪಡಿಸಿದರು?

21 ಒಂದುವೇಳೆ ನಾವು ಸಹಾಯಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳುವುದಾದರೆ, ನಮ್ಮ ಮಾನವ ದೌರ್ಬಲ್ಯಗಳ ಎದುರಿನಲ್ಲೂ ನಾವು ಆತನ ಚಿತ್ತವನ್ನು ಮಾಡುವಂತೆ ಯೆಹೋವನು ನಮ್ಮನ್ನು ಬಲಪಡಿಸುವನು. ನಮಗೆ ಅಂತಹ ಸಹಾಯದ ಅಗತ್ಯವಿದೆಯೆಂದು ತಿಳಿದಿದ್ದ, ಅಪೊಸ್ತಲ ಪೇತ್ರನು ಬರೆದುದು: “ಒಬ್ಬನು ಸಭೆಯ ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ.” (1 ಪೇತ್ರ 4:11) ಪೌಲನು ಸಹ ದೇವರು ಕೊಡುವ ಬಲದ ಮೇಲೆ ಆತುಕೊಂಡಿದ್ದನು. ಇದನ್ನು ಅವನು ಈ ಮಾತುಗಳಲ್ಲಿ ತೋರಿಸಿದನು: “ಕ್ರಿಸ್ತನ ನಿಮಿತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂಥ 12:10) ನಾವು ಸಹ ಅದೇ ರೀತಿಯ ಭರವಸೆಯನ್ನು ತೋರಿಸಿ, ಬಳಲಿಹೋದವರಿಗೆ ಬಲವನ್ನು ಕೊಡುವ ಪರಮಾಧಿಕಾರಿ ಪ್ರಭುವಾಗಿರುವ ಯೆಹೋವನಿಗೆ ಮಹಿಮೆಯನ್ನು ತರೋಣ.​—⁠ಯೆಶಾಯ 12:⁠2.

[ಪಾದಟಿಪ್ಪಣಿಗಳು]

^ ಪ್ಯಾರ. 2 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.

^ ಪ್ಯಾರ. 15 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission

ನೀವು ಹೇಗೆ ಉತ್ತರಿಸುವಿರಿ?

• ಯೆಹೋವನ ಜನರಿಗೆ ಸಾಧಾರಣವಾದದ್ದಕ್ಕಿಂತಲೂ ಹೆಚ್ಚಿನ ಬಲವು ಏಕೆ ಬೇಕಾಗಿದೆ?

• ಯೆಹೋವನು ತನ್ನ ಸೇವಕರಿಗೆ ಬಲವನ್ನು ಕೊಡುತ್ತಾನೆಂಬುದಕ್ಕೆ ಶಾಸ್ತ್ರಗಳಲ್ಲಿ ಯಾವ ಪುರಾವೆ ಇದೆ?

• ನಮ್ಮನ್ನು ಬಲಪಡಿಸಲಿಕ್ಕಾಗಿ ಯೆಹೋವನು ಮಾಡಿರುವ ಕೆಲವೊಂದು ಆತ್ಮಿಕ ಒದಗಿಸುವಿಕೆಗಳು ಯಾವುವು?

• ನಾವು ದೇವರಿಂದಲೇ ಬಲವನ್ನು ಪಡೆದುಕೊಳ್ಳಲು ನಿರೀಕ್ಷಿಸುತ್ತೇವೆಂಬುದನ್ನು ಹೇಗೆ ತೋರಿಸಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರ]

ಇತರರಿಗೆ ಕಲಿಸಲು ನಾವು ಬೈಬಲನ್ನು ಉಪಯೋಗಿಸುವಾಗ ಯೆಹೋವನೊಂದಿಗಿರುವ ನಮ್ಮ ಸ್ವಂತ ಸಂಬಂಧವು ಬಲವಾಗುತ್ತದೆ