ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನ್ಯತೆಗೂ ತುಳಿತಕ್ಕೂ ಗುರಿಯಾಗಿರುವ ಬೈಬಲ್‌

ಮಾನ್ಯತೆಗೂ ತುಳಿತಕ್ಕೂ ಗುರಿಯಾಗಿರುವ ಬೈಬಲ್‌

ಮಾನ್ಯತೆಗೂ ತುಳಿತಕ್ಕೂ ಗುರಿಯಾಗಿರುವ ಬೈಬಲ್‌

“ಪವಿತ್ರ ಗ್ರಂಥಗಳು ಎಲ್ಲ ಭಾಷೆಗಳಲ್ಲಿ ಅನುವಾದ ಮಾಡಲ್ಪಡಬೇಕೆಂಬುದು ನನ್ನಾಸೆ,” ಎಂದು ಡೆಸಿಡೇರ್ಯಸ್‌ ಇರಾಸ್‌ಮಸ್‌ ಬೈಬಲಿನ ಕುರಿತಾಗಿ ಬರೆದರು. ಇವರು 16ನೆಯ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಪ್ರಖ್ಯಾತ ಡಚ್‌ ವಿದ್ವಾಂಸರಾಗಿದ್ದರು.

ಎಲ್ಲರೂ ಬೈಬಲನ್ನು ಓದಿ, ಅರ್ಥಮಾಡಿಕೊಳ್ಳಬೇಕೆಂಬ ತೀವ್ರ ಅಭಿಲಾಷೆ ಇರಾಸ್‌ಮಸ್‌ರಲ್ಲಿತ್ತು. ಆದರೆ, ಬೈಬಲಿನ ಕಟ್ಟಾ ವಿರೋಧಿಗಳು ಅವರ ಈ ವಿಚಾರವನ್ನು ಖಡಾಖಂಡಿತವಾಗಿ ತಿರಸ್ಕರಿಸಿದರು. ಆ ಸಮಯದಲ್ಲಿ, ಯಾರಾದರೂ ಬೈಬಲಿನಲ್ಲಿ ತುಸು ಆಸಕ್ತಿಯನ್ನು ತೋರಿಸಿದರೂ ಅಂಥವರಿಗೆ ಯೂರೋಪ್‌ ಅಪಾಯಕರ ಸ್ಥಳವಾಗಿತ್ತು. ಇಂಗ್ಲೆಂಡಿನ ಪಾರ್ಲಿಮೆಂಟ್‌ ಹೀಗೆ ಆದೇಶಿಸಿದ ಒಂದು ನಿಯಮವನ್ನೂ ಜಾರಿಗೆ ತಂದಿತು: “ಯಾರಾದರೂ ಇಂಗ್ಲಿಷ್‌ನಲ್ಲಿ ಶಾಸ್ತ್ರವಚನಗಳನ್ನು ಓದುವಲ್ಲಿ, ಅವರು ಆಸ್ತಿಪಾಸ್ತಿಗಳನ್ನು ಮತ್ತು ಜೀವವನ್ನೂ ಕಳೆದುಕೊಳ್ಳಬೇಕು. . . . ಮತ್ತು ಅವರು ಒಂದು ವೇಳೆ ಹಠಮಾರಿತನದಿಂದ ಓದುವುದನ್ನು ಮುಂದುವರಿಸಿಕೊಂಡು ಹೋದರೆ, ಇಲ್ಲವೆ ಒಮ್ಮೆ ಕ್ಷಮಿಸಲ್ಪಟ್ಟ ನಂತರ ಪುನಃ ಅದನ್ನು ಓದಲು ಆರಂಭಿಸುವುದಾದರೆ ಅಂಥವರನ್ನು, ರಾಜದ್ರೋಹಕ್ಕಾಗಿ ಮೊದಲು ಗಲ್ಲಿಗೇರಿಸಬೇಕು, ಮತ್ತು ಅನಂತರ ಈ ದೇವ-ವಿರೋಧಿ ನಡವಳಿಕೆಗಾಗಿ ಅವರನ್ನು ಸುಟ್ಟುಹಾಕಬೇಕು.”

ಯೂರೋಪಿನ ಮುಖ್ಯ ಭೂಭಾಗದಲ್ಲಿ, ಕ್ಯಾಥೊಲಿಕ್‌ ಮಠೀಯ ನ್ಯಾಯಸ್ಥಾನದವರು, ಫ್ರೆಂಚ್‌ ವಾಲ್ಡೆನ್ಸೀಸ್‌ರಂಥ “ಪಾಷಂಡಿ” ಪಂಗಡಗಳಿಗೆ ಸೇರಿದವರನ್ನು ಬೇಟೆ ಪ್ರಾಣಿಗಳಂತೆ ಬೆನ್ನಟ್ಟಿಕೊಂಡು ಹೋದರು. ಅವರನ್ನು ಹಿಂಸೆಗಾಗಿ ಪ್ರತ್ಯೇಕಿಸಲಾಯಿತು. ಏಕೆಂದರೆ ಅವರು “ಸುವಾರ್ತೆಗಳು, ಅಪೊಸ್ತಲರ ಪತ್ರಗಳು ಹಾಗೂ ಪವಿತ್ರ ಶಾಸ್ತ್ರಗಳ ಇತರ ಭಾಗಗಳ ಮೇಲಾಧರಿಸಿ” ಸಾರುತ್ತಿದ್ದರು. “ಮತ್ತು ಸಾಮಾನ್ಯ ಜನರು ಪವಿತ್ರ ಶಾಸ್ತ್ರಗಳ ಕುರಿತು ಸಾರುವುದು ಹಾಗೂ ವಿವರಿಸುವುದು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿ[ತ್ತು].” ಅಸಂಖ್ಯಾತ ಸ್ತ್ರೀಪುರುಷರು ಬೈಬಲನ್ನು ಪ್ರೀತಿಸುತ್ತಿದ್ದರೆಂಬ ಒಂದೇ ಕಾರಣಕ್ಕಾಗಿ ಯಾತನಾಮಯ ಚಿತ್ರಹಿಂಸೆ ಮತ್ತು ಮರಣಕ್ಕೀಡಾದರು. ಕರ್ತನ ಪ್ರಾರ್ಥನೆ ಇಲ್ಲವೆ ದಶಾಜ್ಞೆಗಳನ್ನು ಪಠಿಸುವುದಕ್ಕಾಗಿ ಮತ್ತು ಅದನ್ನು ತಮ್ಮ ಮಕ್ಕಳಿಗೆ ಕಲಿಸುವುದಕ್ಕಾಗಿ ಅವರು ತಮ್ಮನ್ನು ಅತ್ಯಂತ ಕಠಿನವಾದ ಶಿಕ್ಷೆಗೆ ಗುರಿಯಾಗುವ ಅಪಾಯಕ್ಕೆ ಒಡ್ಡಿಕೊಂಡರು.

ದೇವರ ವಾಕ್ಯದ ಕಡೆಗಿನ ಅಂತಹ ಭಕ್ತಿಯು, ಉತ್ತರ ಅಮೆರಿಕದಲ್ಲಿ ವಸಾಹತನ್ನು ಸ್ಥಾಪಿಸಲು ಸಮುದ್ರಯಾನ ಮಾಡಿ ಹೋದ ಅನೇಕ ವಲಸೆಗಾರರ ಹೃದಯದಲ್ಲಿ ಜೀವಂತವಾಗಿತ್ತು. ಅಮೆರಿಕದಲ್ಲಿ ಜನರು ನೆಲೆಸಲು ಪ್ರಾರಂಭಿಸಿದಾಗ, “ಓದುವಿಕೆ ಮತ್ತು ಧರ್ಮವು, ಬೇರ್ಪಡಿಸಲಾರದಂಥ ರೀತಿಯಲ್ಲಿ ಒಂದಕ್ಕೊಂದು ಹೆಣೆಯಲ್ಪಟ್ಟಿದ್ದವು. ಇದರಿಂದಾಗಿ ಅಲ್ಲಿ ಬೈಬಲಿನೊಂದಿಗೆ ಚಿರಪರಿಚಿತವಾಗಿರುವ ಒಂದು ಸಂಸ್ಕೃತಿಯು ಹುಟ್ಟಿಕೊಂಡಿತು,” ಎಂದು ಎ ಹಿಸ್ಟರಿ ಆಫ್‌ ಪ್ರೈವೇಟ್‌ ಲೈಫ್‌​—⁠ಪ್ಯಾಷನ್ಸ್‌ ಆಫ್‌ ದ ರೆನೇಸನ್ಸ್‌ ಎಂಬ ಪುಸ್ತಕವು ಹೇಳುತ್ತದೆ. ವಾಸ್ತವದಲ್ಲಿ, 1767ರಲ್ಲಿ ಪ್ರಕಾಶಿಸಲ್ಪಟ್ಟ ಒಂದು ಪ್ರಸಂಗದಲ್ಲಿ ಹೀಗೆ ಶಿಫಾರಸ್ಸು ಮಾಡಲಾಯಿತು: “ಪವಿತ್ರ ಶಾಸ್ತ್ರಗಳನ್ನು ಶ್ರದ್ಧೆಯಿಂದ ಓದು. ಪ್ರತಿ ದಿನ ಬೆಳಗ್ಗೆ ಮತ್ತು ಸಾಯಂಕಾಲ ನಿನ್ನ ಬೈಬಲಿನ ಒಂದು ಅಧ್ಯಾಯವನ್ನು ಓದಲೇಬೇಕು.”

ಕ್ಯಾಲಿಫೋರ್ನಿಯದ ವೆಂಟುರಾದಲ್ಲಿರುವ ಬಾರ್ನಾ ರಿಸರ್ಚ್‌ ಗ್ರೂಪ್‌ಗನುಸಾರ, ಅಮೆರಿಕದ ನಿವಾಸಿಗಳಲ್ಲಿ 90 ಪ್ರತಿಶತ ಮಂದಿಯ ಬಳಿ ಸರಾಸರಿ ಮೂರು ಬೈಬಲುಗಳಿವೆ. ಬೈಬಲಿಗೆ ಅಲ್ಲಿ ಈಗಲೂ ತುಂಬ ಮಾನ್ಯತೆಯನ್ನು ಕೊಡಲಾಗುತ್ತದೆ. ಆದರೂ, ಇತ್ತೀಚಿನ ಒಂದು ಸಮೀಕ್ಷೆಗನುಸಾರ, “ಅದನ್ನು ಓದುವುದಕ್ಕಾಗಿ ಸಮಯ ನೀಡುವುದು, ಅದನ್ನು ಅಭ್ಯಾಸಮಾಡುವುದು ಮತ್ತು ಅದನ್ನು ಅನ್ವಯಿಸಿಕೊಳ್ಳುವುದು . . . ಹಿಂದಿನ ಕಾಲದ ಸಂಗತಿಯಾಗಿಬಿಟ್ಟಿದೆ.” ಹೆಚ್ಚಿನವರಿಗೆ, ಬೈಬಲಿನಲ್ಲಿ ಏನಿದೆಯೆಂಬುದು ಸಹ ತಿಳಿದಿಲ್ಲ. ವಾರ್ತಾಪತ್ರಿಕೆಯ ಒಬ್ಬ ಅಂಕಣಗಾರನು ಗಮನಿಸಿದ್ದು: “[ಬೈಬಲ್‌ನಲ್ಲಿ] ಸದ್ಯದ ಸಮಸ್ಯೆಗಳಿಗೆ ಮತ್ತು ಚಿಂತೆಗಳಿಗೆ ಸಂಬಂಧಿಸುವ ವಿಷಯವಿರಬಹುದೆಂದು ನೆನಸುವವರು ತೀರ ಕಡಿಮೆ.”

ಪ್ರಾಪಂಚಿಕ ಯೋಚನೆಯ ಅಲೆ

ಕೇವಲ ಬುದ್ಧಿವಂತಿಕೆ ಮತ್ತು ಮಾನವ ಸಹಕಾರವಿದ್ದರೆ ಸಾಕು, ನಾವು ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂಬುದು ಇಂದಿನ ಜನಪ್ರಿಯ ಅಭಿಪ್ರಾಯವಾಗಿದೆ. ಆದುದರಿಂದ ಬೈಬಲನ್ನು, ವಾಸ್ತವಾಂಶಗಳು ಮತ್ತು ಸತ್ಯ ತುಂಬಿರುವ ಒಂದು ಪುಸ್ತಕವಾಗಿದೆಯೆಂದು ನೆನಸಲಾಗುವುದಿಲ್ಲ. ಬದಲಾಗಿ, ಧಾರ್ಮಿಕ ಅಭಿಪ್ರಾಯಗಳು ಮತ್ತು ವೈಯಕ್ತಿಕ ಅನುಭವಗಳುಳ್ಳ ಬೇರೆ ಅನೇಕ ಪುಸ್ತಕಗಳಂತೆಯೇ ಇದು ಸಹ ಒಂದು ಪುಸ್ತಕವಾಗಿದೆ ಎಂದು ನೆನಸಲಾಗುತ್ತದೆ.

ಹಾಗಾದರೆ, ಜೀವಿತದಲ್ಲಿ ಏಳುವಂತಹ ಜಟಿಲವಾದ ಮತ್ತು ತೊಂದರೆದಾಯಕ ವಿವಾದಗಳನ್ನು ಜನರು ಹೇಗೆ ನಿಭಾಯಿಸುತ್ತಾರೆ? ಅವರು ಯಾವುದೇ ನೈತಿಕ ಮತ್ತು ಧಾರ್ಮಿಕ ನಿರ್ದೇಶನಗಳು ಹಾಗೂ ಮಾರ್ಗದರ್ಶನವಿಲ್ಲದೆ, ಒಂದು ಆತ್ಮಿಕ ಶೂನ್ಯಾವಸ್ಥೆಯಲ್ಲಿ ಜೀವಿಸುತ್ತಿದ್ದಾರೆ. ಅವರು ಚುಕ್ಕಾಣಿಗಳಿಲ್ಲದ ಹಡಗುಗಳಂತಿದ್ದಾರೆ. “ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವ”ರಾಗಿದ್ದಾರೆ.​—⁠ಎಫೆಸ 4:⁠14.

ಹಾಗಾದರೆ, ಬೈಬಲ್‌ ಕೂಡ ಬೇರೆ ಧಾರ್ಮಿಕ ಗ್ರಂಥಗಳಂತೆಯೇ ಕೇವಲ ಒಂದು ಧಾರ್ಮಿಕ ಪುಸ್ತಕವಾಗಿದೆಯೊ? ಅಥವಾ ಅದು ನಿಜವಾಗಿಯೂ ದೇವರ ವಾಕ್ಯವಾಗಿದೆಯೊ? ಅದರಲ್ಲಿ ವ್ಯಾವಹಾರಿಕವಾದ ಮತ್ತು ಅತ್ಯಾವಶ್ಯಕವಾದ ಮಾಹಿತಿಯಿದೆಯೊ? (2 ತಿಮೊಥೆಯ 3:​16, 17) ಬೈಬಲು ನಮ್ಮ ಗಣನೆಗೆ ಅರ್ಹವಾಗಿದೆಯೊ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಉತ್ತರಿಸುವುದು.

[ಪುಟ 3ರಲ್ಲಿರುವ ಚಿತ್ರ]

ಡೆಸಿಡೇರ್ಯಸ್‌ ಇರಾಸ್‌ಮಸ್‌

[ಕೃಪೆ]

Deutsche Kulturgeschichte ಎಂಬ ಪುಸ್ತಕದಿಂದ

[ಪುಟ 4ರಲ್ಲಿರುವ ಚಿತ್ರ]

ವಾಲ್ಡೆನ್ಸೀಸ್‌ ಎಂಬ ಗುಂಪಿನವರು, ಶಾಸ್ತ್ರವಚನಗಳಿಂದ ಸಾರುತ್ತಿದ್ದದ್ದರಿಂದ ಹಿಂಸಿಸಲ್ಪಟ್ಟರು

[ಕೃಪೆ]

Stichting Atlas van Stolk, Rotterdam