ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಜನರಿಗೆ ವಿಶ್ರಾಂತಿದಾಣವನ್ನು ಒದಗಿಸುತ್ತಾನೆ

ಯೆಹೋವನು ತನ್ನ ಜನರಿಗೆ ವಿಶ್ರಾಂತಿದಾಣವನ್ನು ಒದಗಿಸುತ್ತಾನೆ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಯೆಹೋವನು ತನ್ನ ಜನರಿಗೆ ವಿಶ್ರಾಂತಿದಾಣವನ್ನು ಒದಗಿಸುತ್ತಾನೆ

ಬಳಲಿಹೋಗಿರುವ ಯಾತ್ರಿಕನೊಬ್ಬನಿಗೆ, ಪರ್ವತದ ಹಾದಿಯಲ್ಲಿ ತಂಪಾದ ಒಂದು ವಿಶ್ರಾಂತಿದಾಣವು ಕಣ್ಣಿಗೆಬೀಳುವಾಗ ಅವನ ಮನ ಅರಳುತ್ತದೆ. ನೇಪಾಳದಲ್ಲಿ ಅಂಥ ವಿಶ್ರಾಂತಿದಾಣಗಳನ್ನು ಚೌಟಾರಾ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಚೌಟಾರಾವು ಒಂದು ದೊಡ್ಡ ಆಲದ ಮರದ ಪಕ್ಕದಲ್ಲಿದ್ದು, ಕುಳಿತುಕೊಂಡು ವಿಶ್ರಾಂತಿಪಡೆಯಲಿಕ್ಕಾಗಿ ನೆರಳಿನಲ್ಲಿರುವ ಒಂದು ತಾಣವಾಗಿರುತ್ತದೆ. ಒಂದು ಚೌಟಾರಾವನ್ನು ಕಟ್ಟಿಸುವುದು ದಯೆಯ ಕೃತ್ಯವಾಗಿದೆ ಮತ್ತು ಅದನ್ನು ಕಟ್ಟಿಸಿದವರಲ್ಲಿ ಹೆಚ್ಚಿನವರು ಅನಾಮಧೇಯರಾಗಿಯೇ ಉಳಿಯುತ್ತಾರೆ.

ಈ ವಿಷಯಗಳ ವ್ಯವಸ್ಥೆಯಲ್ಲಿ ಬಳಲಿಹೋಗಿರುವ ಅನೇಕ “ಯಾತ್ರಿಕರಿಗೆ” ಯೆಹೋವ ದೇವರು ಹೇಗೆ ಆನಂದ ಮತ್ತು ಆತ್ಮಿಕ ಚೈತನ್ಯದ ಮೂಲನಾಗಿದ್ದಾನೆ ಎಂಬುದನ್ನು ನೇಪಾಳದ ಕೆಲವು ಅನುಭವಗಳು ತೋರಿಸುತ್ತವೆ.​—⁠ಕೀರ್ತನೆ 23:⁠2.

• ಲಿಲ್‌ ಕುಮಾರಿ ಎಂಬವರು ಪೋಖರಾ ಎಂಬ ಸುಂದರವಾದ ನಗರದಲ್ಲಿ ವಾಸಿಸುತ್ತಾರೆ. ಮತ್ತು ಅಲ್ಲಿಂದ, ಮಂಜಿನ ಮುಸುಗು ಹಾಕಿಕೊಂಡಿರುವ ಹಿಮಾಲಯ ಪರ್ವತಗಳನ್ನು ಚೆನ್ನಾಗಿ ನೋಡಬಹುದು. ಕುಟುಂಬದಲ್ಲಿದ್ದ ಹಣಕಾಸಿನ ತೊಂದರೆಗಳಿಂದಾಗಿ ಚಿಂತಿತರಾಗಿದ್ದ ಲಿಲ್‌ ಕುಮಾರಿಯವರಿಗೆ ಯಾವುದೇ ನಿರೀಕ್ಷೆಯಿಲ್ಲವೆಂದು ಅನಿಸುತ್ತಿತ್ತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಅವರನ್ನು ಭೇಟಿಮಾಡಿ ಬೈಬಲಿನ ಉಜ್ವಲವಾದ ನಿರೀಕ್ಷೆಯ ಕುರಿತಾಗಿ ತಿಳಿಸಿದಾಗ, ಅವರು ಅದರಿಂದ ಪ್ರಭಾವಿತರಾದರು ಮತ್ತು ತಮ್ಮೊಂದಿಗೆ ಮನೆ ಬೈಬಲ್‌ ಅಭ್ಯಾಸವನ್ನು ಮಾಡುವಂತೆ ಕೂಡಲೇ ಕೇಳಿಕೊಂಡರು.

ಲಿಲ್‌ ಕುಮಾರಿಗೆ ಬೈಬಲ್‌ ಅಭ್ಯಾಸದಿಂದಾಗಿ ತುಂಬ ಆನಂದ ಸಿಗುತ್ತಿತ್ತಾದರೂ, ಅವರ ಕುಟುಂಬದಿಂದ ಬಹಳ ವಿರೋಧವಿದ್ದದ್ದರಿಂದ ಆ ಅಭ್ಯಾಸವನ್ನು ಮುಂದುವರಿಸುವುದು ಸುಲಭವಾಗಿರಲಿಲ್ಲ. ಆದರೂ ಅವರು ಅದನ್ನು ಬಿಟ್ಟುಕೊಡಲಿಲ್ಲ. ಅವರು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾದರು ಮತ್ತು ಕಲಿತಂಥ ಸಂಗತಿಗಳನ್ನು ಅನ್ವಯಿಸತೊಡಗಿದರು. ವಿಶೇಷವಾಗಿ, ಪತ್ನಿಯು ತನ್ನ ಗಂಡನಿಗೆ ಅಧೀನಳಾಗಿರಬೇಕೆಂದು ಅವರು ಕಲಿತ ವಿಷಯವನ್ನು ಅವರು ಅನ್ವಯಿಸಿಕೊಂಡರು. ಹೀಗೆ, ಲಿಲ್‌ ಕುಮಾರಿಯು ಬೈಬಲನ್ನು ಅಭ್ಯಾಸಮಾಡುವುದರಿಂದ ಇಡೀ ಕುಟುಂಬಕ್ಕೆ ಪ್ರಯೋಜನ ಸಿಗುತ್ತಿದೆಯೆಂಬುದನ್ನು ಅವರ ಗಂಡ ಮತ್ತು ಅವರ ತಾಯಿ ಗ್ರಹಿಸಿದರು.

ಅವರ ಗಂಡ ಮತ್ತು ಇನ್ನೂ ಅನೇಕ ಸಂಬಂಧಿಕರು ಈಗ ದೇವರ ವಾಕ್ಯವನ್ನು ಅಭ್ಯಾಸಿಸುತ್ತಿದ್ದಾರೆ. ಲಿಲ್‌ ಕುಮಾರಿಯೊಂದಿಗೆ, ಅವರ ಇನ್ನಿತರ 15 ಮಂದಿ ಸಂಬಂಧಿಕರು ಇತ್ತೀಚೆಗೆ ಪೋಖರಾದಲ್ಲಿ ನಡೆದ ಒಂದು ಸಮ್ಮೇಳನ ಕಾರ್ಯಕ್ರಮದಲ್ಲಿ ಆನಂದಿಸಿದರು. ಅವರು ಹೇಳುವುದು: “ನಮ್ಮ ಮನೆ ಈಗ ಒಂದು ವಿಶ್ರಾಂತಿದಾಣವಾಗಿದೆ, ಏಕೆಂದರೆ ನಮ್ಮ ಕುಟುಂಬವು ಈಗ ಸತ್ಯಾರಾಧನೆಯಲ್ಲಿ ಐಕ್ಯವಾಗಿದೆ. ಮತ್ತು ನನಗೆ ನಿಜವಾದ ಮನಶ್ಶಾಂತಿಯು ಸಿಕ್ಕಿದೆ.”

• ನೇಪಾಳದಲ್ಲಿ ಜಾತೀಯ ಬೇಧಭಾವ ಕಾನೂನುಬಾಹಿರವಾಗಿರುವುದಾದರೂ, ಅದು ಈಗಲೂ ಅಲ್ಲಿನ ಜನರ ಜೀವಿತವನ್ನು ತುಂಬ ಪ್ರಭಾವಿಸುತ್ತದೆ. ಹೀಗಿರುವುದರಿಂದ, ಸಮಾನತೆ ಮತ್ತು ನಿಷ್ಪಕ್ಷಪಾತದ ಕುರಿತಾಗಿ ಬೈಬಲ್‌ ಏನು ಹೇಳುತ್ತದೆಂಬುದರ ಬಗ್ಗೆ ತಿಳಿದುಕೊಳ್ಳಲು ಅನೇಕರು ಆಸಕ್ತರಾಗಿದ್ದಾರೆ. “ದೇವರು ಪಕ್ಷಪಾತಿಯಲ್ಲ” ಎಂಬ ಸಂಗತಿಯನ್ನು ಕಲಿತಿದ್ದರಿಂದ, ಸೂರ್ಯ ಮಾಯಾ ಹಾಗೂ ಅವರ ಕುಟುಂಬ ಸದಸ್ಯರ ಜೀವಿತವು ತುಂಬ ಬದಲಾಯಿತು.​—⁠ಅ. ಕೃತ್ಯಗಳು 10:⁠34.

ಜಾತೀಯ ಬೇಧಭಾವ ಮತ್ತು ಆಳವಾಗಿ ಬೇರೂರಿದ್ದ ಸಂಪ್ರದಾಯಗಳು ಮತ್ತು ಪದ್ಧತಿಗಳ ಹೊರೆಯಿಂದ ಸೂರ್ಯ ಮಾಯಾ ಬೇಸತ್ತುಹೋಗಿದ್ದರು. ಅವರೊಬ್ಬ ದೇವಭಕ್ತಿಯುಳ್ಳ ಸ್ತ್ರೀಯಾಗಿದ್ದರು. ಆದುದರಿಂದ ಎಷ್ಟೋ ವರ್ಷಗಳಿಂದ ಅವರು ತಮ್ಮ ದೇವತಾಮೂರ್ತಿಗಳ ಸಹಾಯವನ್ನು ಕೇಳುತ್ತಿದ್ದರು. ಆದರೆ ಅವರ ಪ್ರಾರ್ಥನೆಗಳಿಗೆ ಉತ್ತರ ಸಿಗುತ್ತಿರಲಿಲ್ಲ. ಹೀಗೆ, ಒಂದು ದಿನ ಅವರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾಗ, ಅವರ ಆರು ವರ್ಷ ಪ್ರಾಯದ ಮೊಮ್ಮಗಳಾದ ಬಬಿತಾ ಅವರ ಬಳಿ ಬಂದು, “ಏನನ್ನೂ ಮಾಡಲಾರದ ವಿಗ್ರಹಗಳಿಂದ ನೀವೇಕೆ ಸಹಾಯವನ್ನು ಕೇಳುತ್ತಿದ್ದೀರಿ?” ಎಂದು ಕೇಳಿದಳು.

ಬಬಿತಾಳ ತಾಯಿಯು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರೊಂದಿಗೆ ಅಭ್ಯಾಸಮಾಡುತ್ತಿದ್ದಳು. ಬಬಿತಾ ತುಂಬ ಹುರುಪಿನಿಂದ ತನ್ನ ಅಜ್ಜಿಯನ್ನು ಕ್ರೈಸ್ತ ಕೂಟಕ್ಕೆ ಬರುವಂತೆ ಆಮಂತ್ರಿಸಿದಳು. ಸೂರ್ಯ ಮಾಯಾ ಆ ಕೂಟಕ್ಕೆ ಹಾಜರಾದಾಗ, ಬೇರೆ ಬೇರೆ ಜಾತಿಗಳ ಜನರು ಯಾವುದೇ ಪೂರ್ವಾಗ್ರಹವಿಲ್ಲದೆ ಪರಸ್ಪರ ಸಹವಾಸದಲ್ಲಿ ಆನಂದಿಸುವುದನ್ನು ನೋಡಿ ಆಶ್ಚರ್ಯಚಕಿತರಾದರು. ಆ ಕೂಡಲೇ, ಅವರು ಒಂದು ಗೃಹ ಬೈಬಲ್‌ ಅಭ್ಯಾಸಕ್ಕಾಗಿ ಕೇಳಿಕೊಂಡರು. ಇದರಿಂದಾಗಿ ಅವರ ನೆರೆಹೊರೆಯವರು ಅವರ ಮೇಲೆ ಬಹಿಷ್ಕಾರಹಾಕಿದರೂ, ಅವರು ಎದೆಗುಂದಲಿಲ್ಲ. ಅಷ್ಟುಮಾತ್ರವಲ್ಲದೆ, ಅವರಿಗೆ ಅಷ್ಟೊಂದು ಓದುಬರಹ ಬರದಿದ್ದರೂ, ಇದು ಅವರು ಆತ್ಮಿಕ ಪ್ರಗತಿಗೆ ತಡೆಯಾಗಿರಲಿಲ್ಲ.

ಎಂಟು ವರ್ಷಗಳು ಕಳೆದಿವೆ ಮತ್ತು ಅವರ ಕುಟುಂಬದ ಆರು ಮಂದಿ ಸದಸ್ಯರು, ಅವಳ ಗಂಡ ಮತ್ತು ಮೂರು ಗಂಡುಮಕ್ಕಳು ಸೇರಿ ಎಲ್ಲರೂ ಯೆಹೋವನ ಸಾಕ್ಷಿಗಳಾಗಿದ್ದಾರೆ. ಸೂರ್ಯ ಮಾಯಾ ಈಗ ಒಬ್ಬ ಪೂರ್ಣಸಮಯದ ಶುಶ್ರೂಷಕಿಯಾಗಿದ್ದಾರೆ ಅಂದರೆ, ಒಬ್ಬ ರೆಗ್ಯುಲರ್‌ ಪಯನೀಯರರಾಗಿದ್ದಾರೆ. ಹೀಗೆ, ಯೆಹೋವನು ಮಾತ್ರ ಒದಗಿಸಬಲ್ಲ ನಿಜವಾದ ವಿಶ್ರಾಂತಿದಾಣದಲ್ಲಿ ತಮ್ಮ ಹೊರಲಾದ ಭಾರಗಳನ್ನು ತೆಗೆದಿಡುವಂತೆ ಅವರು ಸಂತೋಷದಿಂದ ಇತರರಿಗೂ ಸಹಾಯಮಾಡುತ್ತಾರೆ.