ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮರುಜ್ಞಾಪನಗಳು ನಿಮಗೆ ಬಹುಪ್ರಿಯವಾಗಿವೆಯೊ?

ಯೆಹೋವನ ಮರುಜ್ಞಾಪನಗಳು ನಿಮಗೆ ಬಹುಪ್ರಿಯವಾಗಿವೆಯೊ?

ಯೆಹೋವನ ಮರುಜ್ಞಾಪನಗಳು ನಿಮಗೆ ಬಹುಪ್ರಿಯವಾಗಿವೆಯೊ?

“ನಿನ್ನ ಕಟ್ಟಳೆಗಳನ್ನು [“ಮರುಜ್ಞಾಪನಗಳನ್ನು,” NW] ಮನಃಪೂರ್ವಕವಾಗಿ ಅನುಸರಿಸಿದ್ದೇನೆ; ಅವು ನನಗೆ ಬಹುಪ್ರಿಯವಾಗಿವೆ.”​—⁠ಕೀರ್ತನೆ 119:167.

1. ಬೈಬಲಿನ ಯಾವ ಪುಸ್ತಕದಲ್ಲಿ ಯೆಹೋವನ ಮರುಜ್ಞಾಪನಗಳ ಕುರಿತಾಗಿ ಪದೇ ಪದೇ ತಿಳಿಸಲಾಗಿದೆ?

ತನ್ನ ಜನರು ಸಂತೋಷದಿಂದಿರಬೇಕೆಂದು ಯೆಹೋವನು ಬಯಸುತ್ತಾನೆ. ಆದರೆ ನಿಜ ಸಂತೋಷವನ್ನು ಅನುಭವಿಸಬೇಕಾದರೆ, ನಾವು ದೇವರ ನಿಯಮಕ್ಕನುಸಾರ ನಡೆಯಬೇಕು ಮತ್ತು ಆತನ ಆಜ್ಞೆಗಳನ್ನು ಪಾಲಿಸಬೇಕೆಂಬುದು ಖಂಡಿತ. ಇದಕ್ಕಾಗಿಯೇ ಆತನು ನಮಗೆ ಮರುಜ್ಞಾಪನಗಳನ್ನು ಕೊಡುತ್ತಾನೆ. ಇವುಗಳ ಕುರಿತಾಗಿ ಶಾಸ್ತ್ರಗಳಲ್ಲಿ, ವಿಶೇಷವಾಗಿ ಕೀರ್ತನೆ ಅಧ್ಯಾಯ 119ರಲ್ಲಿ ಪದೇ ಪದೇ ತಿಳಿಸಲಾಗಿದೆ. ಈ ಕೀರ್ತನೆಯನ್ನು ರಚಿಸಿದವನು ಯೆಹೂದದ ಯುವ ರಾಜಕುಮಾರ ಹಿಜ್ಕೀಯನಾಗಿದ್ದಿರಬಹುದು. ಈ ಸುಂದರವಾದ ಹಾಡು ಈ ಮಾತುಗಳೊಂದಿಗೆ ಆರಂಭವಾಗುತ್ತದೆ: “ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ಸದಾಚಾರಿಗಳಾಗಿ ನಡೆಯುವವರು ಧನ್ಯರು. ಆತನ ಕಟ್ಟಳೆಗಳನ್ನು [“ಮರುಜ್ಞಾಪನಗಳನ್ನು,” NW] ಕೈಕೊಂಡು ಸಂಪೂರ್ಣಮನಸ್ಸಿನಿಂದ ಆತನನ್ನು ಹುಡುಕುವವರು ಭಾಗ್ಯವಂತರು.”​—⁠ಕೀರ್ತನೆ 119:1, 2.

2. ದೇವರ ಮರುಜ್ಞಾಪನಗಳಿಗೂ, ಸಂತೋಷಕ್ಕೂ ಏನು ಸಂಬಂಧ?

2 ಯೆಹೋವನ ವಾಕ್ಯದ ಕುರಿತಾಗಿ ನಿಷ್ಕೃಷ್ಟ ಜ್ಞಾನವನ್ನು ತೆಗೆದುಕೊಂಡು, ಅದನ್ನು ಜೀವಿತದಲ್ಲಿ ಅನ್ವಯಿಸಿಕೊಳ್ಳುವ ಮೂಲಕ ನಾವು ‘ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುತ್ತೇವೆ.’ ಆದರೆ ನಾವು ಅಪರಿಪೂರ್ಣರಾಗಿರುವುದರಿಂದ, ನಮಗೆ ಮರುಜ್ಞಾಪನಗಳ ಅಗತ್ಯವಿದೆ. “ಮರುಜ್ಞಾಪನಗಳು” ಎಂದು ಅನುವಾದಮಾಡಲ್ಪಟ್ಟಿರುವ ಹೀಬ್ರು ಪದವು, ದೇವರು ತನ್ನ ನಿಯಮ, ಶಾಸನಗಳು, ಕಟ್ಟಳೆಗಳು, ಆಜ್ಞೆಗಳು ಮತ್ತು ನಿಬಂಧನೆಗಳನ್ನು ಪುನಃ ನಮ್ಮ ಜ್ಞಾಪಕಕ್ಕೆ ತರುತ್ತಾನೆಂಬುದನ್ನು ಸೂಚಿಸುತ್ತದೆ. (ಮತ್ತಾಯ 10:​18-20) ಆ ಮರುಜ್ಞಾಪನಗಳೇ, ಕೇಡು ಮತ್ತು ದುಃಖದಲ್ಲಿ ಫಲಿಸುವ ಆತ್ಮಿಕ ಹಳ್ಳಗಳೊಳಗೆ ನಾವು ಬೀಳದಂತೆ ಸಹಾಯಮಾಡಬಲ್ಲವು. ಆದುದರಿಂದ ನಾವು ಆ ಮರುಜ್ಞಾಪನಗಳಿಗೆ ಗಮನಕೊಡುತ್ತಾ ಇದ್ದರೆ ಮಾತ್ರ ಸಂತೋಷದಿಂದಿರುವೆವು.

ಯೆಹೋವನ ಮರುಜ್ಞಾಪನಗಳನ್ನು ಅಪ್ಪಿಕೊಂಡಿರಿ

3. ಕೀರ್ತನೆ 119:​60, 61 ವಚನಗಳ ಆಧಾರದ ಮೇಲೆ, ನಮಗೆ ಯಾವ ಭರವಸೆಯಿದೆ?

3 “ನಿನ್ನ ಆಜ್ಞೆಗಳನ್ನು ಅನುಸರಿಸುವದರಲ್ಲಿ ಆಸಕ್ತನಾದೆನು; ಆಲಸ್ಯಮಾಡಲಿಲ್ಲ. ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡವು; ಆದರೂ ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆಯಲಿಲ್ಲ” ಎಂದು ಹಾಡಿದಂತಹ ಕೀರ್ತನೆಗಾರನಿಗೆ ದೇವರ ಮರುಜ್ಞಾಪನಗಳು ತುಂಬ ಪ್ರಿಯವಾಗಿದ್ದವು. (ಕೀರ್ತನೆ 119:​60, 61) ಯೆಹೋವನ ಮರುಜ್ಞಾಪನಗಳು ಹಿಂಸೆಯನ್ನು ತಾಳಿಕೊಳ್ಳುವಂತೆ ನಮಗೆ ಸಹಾಯಮಾಡುತ್ತವೆ. ಏಕೆಂದರೆ ಶತ್ರುಗಳು ನಮ್ಮ ಸುತ್ತಲೂ ಹಾಕುವ ನಿರ್ಬಂಧದ ಪಾಶಗಳನ್ನು ನಮ್ಮ ಸ್ವರ್ಗೀಯ ತಂದೆಯು ತೆಗೆದುಹಾಕಬಲ್ಲನೆಂಬ ಭರವಸೆ ನಮಗಿದೆ. ತಕ್ಕ ಸಮಯದಲ್ಲಿ ಆತನು ಅಂತಹ ಅಡೆತಡೆಗಳನ್ನು ತೆಗೆದುಹಾಕುತ್ತಾನೆ, ಮತ್ತು ಹೀಗೆ ನಾವು ರಾಜ್ಯದ ಕುರಿತು ಸಾರುವ ಕೆಲಸವನ್ನು ಮುಂದುವರಿಸಲು ಸಾಧ್ಯವಾಗುತ್ತದೆ.​—⁠ಮಾರ್ಕ 13:⁠10.

4. ನಾವು ದೇವರ ಮರುಜ್ಞಾಪನಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು?

4 ಕೆಲವೊಮ್ಮೆ, ಯೆಹೋವನ ಮರುಜ್ಞಾಪನಗಳು ನಮ್ಮನ್ನು ತಿದ್ದುತ್ತವೆ. ನಾವು ಅಂತಹ ತಿದ್ದುವಿಕೆಯನ್ನು ಯಾವಾಗಲೂ ಗಣ್ಯಮಾಡೋಣ. ಕೀರ್ತನೆಗಾರನು ಸಹ ಹಾಗೆಯೇ ಮಾಡಿದನು. ಅವನು ಪ್ರಾರ್ಥನಾಪೂರ್ವಕವಾಗಿ ದೇವರಿಗೆ ಹೇಳಿದ್ದು: “ನಿನ್ನ ಕಟ್ಟಳೆಗಳು [“ಮರುಜ್ಞಾಪನಗಳು,” NW] ನನ್ನ ಆನಂದವು, . . . ನಾನು ನಿನ್ನ ಕಟ್ಟಳೆಗಳನ್ನು [“ಮರುಜ್ಞಾಪನಗಳನ್ನು,” NW] ಪ್ರೀತಿಸುತ್ತೇನೆ.” (ಕೀರ್ತನೆ 119:24, 119) ಕೀರ್ತನೆಗಾರನಿಗಿದ್ದಂತಹ ಮರುಜ್ಞಾಪನಗಳಿಗಿಂತ ಎಷ್ಟೋ ಹೆಚ್ಚು ಮರುಜ್ಞಾಪನಗಳು ನಮಗೆ ಕೊಡಲ್ಪಟ್ಟಿವೆ. ಹೀಬ್ರು ಶಾಸ್ತ್ರಗಳಿಂದ ಉಲ್ಲೇಖಿಸಲ್ಪಟ್ಟಿರುವ ನೂರಾರು ವಚನಗಳು ಗ್ರೀಕ್‌ ಶಾಸ್ತ್ರಗಳಲ್ಲಿವೆ. ಇವು ಧರ್ಮಶಾಸ್ತ್ರದ ಕೆಳಗೆ ಯೆಹೋವನು ತನ್ನ ಜನರಿಗೆ ಕೊಟ್ಟ ಸೂಚನೆಗಳನ್ನು ಮಾತ್ರವಲ್ಲ, ಕ್ರೈಸ್ತ ಸಭೆಯ ಸಂಬಂಧದಲ್ಲಿ ಆತನ ಉದ್ದೇಶಗಳ ಕುರಿತಾಗಿಯೂ ಮರುಜ್ಞಾಪಿಸುತ್ತವೆ. ಆತನ ನಿಯಮಗಳಿಗೆ ಸಂಬಂಧಿಸುವ ವಿಷಯಗಳನ್ನು ಮಾಡುವುದರ ಕುರಿತಾಗಿ ದೇವರು ಸರಿಯಾದ ಸಮಯದಲ್ಲಿ ಮರುಜ್ಞಾಪಿಸುವಾಗ, ನಾವು ಅಂತಹ ನಿರ್ದೇಶನಕ್ಕಾಗಿ ಆಭಾರಿಗಳಾಗಿರುತ್ತೇವೆ. ಮತ್ತು ‘ಯೆಹೋವನ ಮರುಜ್ಞಾಪನಗಳನ್ನು ಅಪ್ಪಿಕೊಂಡಿರುವುದರಿಂದ’ ನಮ್ಮ ಸೃಷ್ಟಿಕರ್ತನನ್ನು ಅಸಂತೋಷಪಡಿಸುವ ಮತ್ತು ನಮ್ಮಿಂದ ಸಂತೋಷವನ್ನು ಕಸಿದುಕೊಳ್ಳುವ ಪಾಪಪೂರ್ಣ ಆಕರ್ಷಣೆಗಳಿಂದ ನಾವು ದೂರವಿರುತ್ತೇವೆ.​—⁠ಕೀರ್ತನೆ 119:⁠31.

5. ಯೆಹೋವನ ಮರುಜ್ಞಾಪನಗಳು ನಮಗೆ ಹೇಗೆ ಬಹುಪ್ರಿಯವಾಗುವವು?

5 ನಾವು ಯೆಹೋವನ ಮರುಜ್ಞಾಪನಗಳನ್ನು ಎಷ್ಟು ಪ್ರೀತಿಸಬೇಕು? “ನಿನ್ನ ಕಟ್ಟಳೆಗಳನ್ನು [“ಮರುಜ್ಞಾಪನಗಳನ್ನು,” NW] ಮನಃಪೂರ್ವಕವಾಗಿ ಅನುಸರಿಸಿದ್ದೇನೆ; ಅವು ನನಗೆ ಬಹುಪ್ರಿಯವಾಗಿವೆ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 119:​167, ಓರೆ ಅಕ್ಷರಗಳು ನಮ್ಮವು.) ಯೆಹೋವನ ಮರುಜ್ಞಾಪನಗಳು, ನಮ್ಮ ಕುರಿತಾಗಿ ನಿಜವಾಗಿಯೂ ಚಿಂತಿಸುವ ಒಬ್ಬ ತಂದೆಯಿಂದ ಬರುವ ಬುದ್ಧಿವಾದವಾಗಿವೆ ಎಂದು ನೆನಸಿ, ಅವುಗಳನ್ನು ಅಂಗೀಕರಿಸುವುದಾದರೆ ಆಗ ಅವು ನಮಗೆ ಬಹುಪ್ರಿಯವಾಗಿರುವವು. (1 ಪೇತ್ರ 5:​6, 7) ನಮಗೆ ಆತನ ಮರುಜ್ಞಾಪನಗಳು ತುಂಬ ಅಗತ್ಯವಾಗಿವೆ. ಮತ್ತು ಅವುಗಳಿಂದ ನಮಗೆ ಸಿಗುವ ಪ್ರಯೋಜನಗಳನ್ನು ನಾವು ಕಣ್ಣಾರೆ ನೋಡುವಾಗ ಅವುಗಳ ಕಡೆಗಿರುವ ನಮ್ಮ ಪ್ರೀತಿಯು ಇನ್ನೂ ಹೆಚ್ಚಾಗುವುದು.

ನಮಗೆ ದೇವರ ಮರುಜ್ಞಾಪನಗಳು ಅಗತ್ಯವಾಗಿರುವ ಕಾರಣ

6. ನಮಗೆ ಯೆಹೋವನ ಮರುಜ್ಞಾಪನಗಳು ಏಕೆ ಬೇಕಾಗಿವೆ, ಮತ್ತು ಅವುಗಳನ್ನು ನೆನಪಿಗೆ ತರಲು ಯಾವುದು ಸಹಾಯಮಾಡುವುದು?

6 ನಮಗೆ ಯೆಹೋವನ ಮರುಜ್ಞಾಪನಗಳು ಅಗತ್ಯವಿದೆ ಏಕೆಂದರೆ ನಾವು ಮರೆಗುಳಿ ಸ್ವಭಾವದವರಾಗಿದ್ದೇವೆ. ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಸಾಮಾನ್ಯವಾಗಿ, ಸಮಯ ಕಳೆದಂತೆ ಜನರು ಹೆಚ್ಚೆಚ್ಚು ವಿಷಯಗಳನ್ನು ಮರೆಯುತ್ತಾ ಹೋಗುತ್ತಾರೆ. . . . ನಿಮಗೂ ಈ ಅನುಭವವಾಗಿರಬಹುದು. ಒಂದು ಹೆಸರು ಅಥವಾ ಬೇರಾವುದೊ ಮಾಹಿತಿಯು ನಿಮ್ಮ ನಾಲಿಗೆಯ ತುದಿಯಲ್ಲಿರುತ್ತದೆ ಆದರೆ ಅದು ನಿಮ್ಮ ನೆನಪಿಗೆ ಬರುವುದಿಲ್ಲ . . . ಪದೇ ಪದೇ ಆಗುವ ಜ್ಞಾಪಕಶಕ್ತಿಯ ಈ ತಾತ್ಕಾಲಿಕ ನಷ್ಟವನ್ನು ಪುನರ್ಲಭ್ಯತೆಯ ವೈಫಲ್ಯ ಎಂದು ಕರೆಯಲಾಗುತ್ತದೆ. ವಿಜ್ಞಾನಿಗಳು ಅದನ್ನು, ಅಸ್ತವ್ಯಸ್ತವಾಗಿರುವ ಕೋಣೆಯೊಂದರಲ್ಲಿ ಕಳೆದುಹೋಗಿರುವ ಒಂದು ವಸ್ತುವನ್ನು ಹುಡುಕುವುದಕ್ಕೆ ಹೋಲಿಸುತ್ತಾರೆ. . . . ಯಾವುದೇ ಮಾಹಿತಿಯನ್ನು ನೆನಪಿನಲ್ಲಿಡುವ ಉತ್ತಮ ವಿಧವು, ನಿಮಗೆ ಅದು ಚೆನ್ನಾಗಿ ತಿಳಿದಿದೆಯೆಂದು ನೀವು ನೆನಸಿದ ನಂತರವೂ ಅದನ್ನು ಅಭ್ಯಾಸ ಮಾಡುತ್ತಾ ಇರುವುದೇ ಆಗಿದೆ.” ಹಾಗಾದರೆ, ನಾವು ದೇವರ ಮರುಜ್ಞಾಪನಗಳನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸ ಮಾಡಿ ಅದನ್ನು ಪುನರಾವರ್ತಿಸಿದರೆ, ಆಗ ನಾವು ಅವುಗಳನ್ನು ನೆನಪಿಗೆ ತಂದುಕೊಳ್ಳಲು ಮತ್ತು ಅದರಂತೆ ನಡೆಯಲು ಶಕ್ತರಾಗುವೆವು. ಮತ್ತು ಇದರಿಂದ ಒಳಿತಾಗುವುದು ನಮಗೇ.

7. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ನಮಗೆ ದೇವರ ಮರುಜ್ಞಾಪನಗಳು ಏಕೆ ಬೇಕಾಗಿವೆ?

7 ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ನಮಗೆ ಯೆಹೋವನ ಮರುಜ್ಞಾಪನಗಳ ಅಗತ್ಯವಿದೆ. ಏಕೆ? ಏಕೆಂದರೆ, ದುಷ್ಟತನವು ಮಾನವ ಇತಿಹಾಸದಲ್ಲೇ ಉತ್ತುಂಗವನ್ನು ತಲಪಿದೆ. ನಾವು ದೇವರ ಮರುಜ್ಞಾಪನಗಳಿಗೆ ಗಮನಕೊಟ್ಟರೆ, ಈ ಲೋಕದ ದುಷ್ಟ ಮಾರ್ಗಗಳಿಗೆ ಸೆಳೆಯಲ್ಪಡುವುದನ್ನು ತಪ್ಪಿಸಲು ಬೇಕಾಗಿರುವ ಒಳನೋಟವು ನಮಗೆ ಸಿಗುವುದು. ಕೀರ್ತನೆಗಾರನು ಹೇಳಿದ್ದು: “ನಿನ್ನ ಕಟ್ಟಳೆಗಳು [“ಮರುಜ್ಞಾಪನಗಳು,” NW] ನನ್ನ ಧ್ಯಾನವಾಗಿರುವದರಿಂದ ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ. ನಿನ್ನ ನೇಮಗಳನ್ನು ಕೈಕೊಂಡಿರುವದರಿಂದ ಹಿರಿಯರಿಗಿಂತ ವಿವೇಕಿಯಾಗಿದ್ದೇನೆ. ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ.” (ಕೀರ್ತನೆ 119:99-101) ದೇವರ ಮರುಜ್ಞಾಪನಗಳಿಗೆ ಗಮನಕೊಡುವ ಮೂಲಕ, ನಾವು “ಕೆಟ್ಟ ದಾರಿ”ಯಿಂದ ದೂರವಿರುವೆವು. ಮತ್ತು ‘ಮನಸ್ಸು ಮೊಬ್ಬಾಗಿ ಹೋಗಿರುವ ಹಾಗೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿರುವ’ ಮಾನವಕುಲದ ಜನಸಮೂಹಗಳಂತೆ ನಾವಾಗುವುದನ್ನು ತಪ್ಪಿಸಿಕೊಳ್ಳುವೆವು.​—⁠ಎಫೆಸ 4:​17-19.

8. ನಂಬಿಕೆಯ ಪರೀಕ್ಷೆಗಳನ್ನು ಸಫಲವಾಗಿ ಎದುರಿಸಲು ನಾವು ಹೇಗೆ ಹೆಚ್ಚು ಉತ್ತಮವಾಗಿ ಸಜ್ಜಾಗಿರಬಹುದು?

8 ಈ “ಅಂತ್ಯಕಾಲ”ದಲ್ಲಿ ಬರುವ ಅನೇಕ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ನಮ್ಮನ್ನು ಬಲಪಡಿಸಲಿಕ್ಕಾಗಿಯೂ ದೇವರ ಮರುಜ್ಞಾಪನಗಳು ಅಗತ್ಯವಾಗಿವೆ. (ದಾನಿಯೇಲ 12:⁠4) ಅಂತಹ ಮರುಜ್ಞಾಪನಗಳು ಇಲ್ಲದಿರುವಲ್ಲಿ, ನಾವು ‘ವಾಕ್ಯವನ್ನು ಕೇಳಿ ಮರೆತುಹೋಗುವವ’ರಾಗುವೆವು. (ಯಾಕೋಬ 1:25) ಆದರೆ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಬರುವ ಪ್ರಕಾಶನಗಳ ಸಹಾಯದೊಂದಿಗೆ ಶಾಸ್ತ್ರಗಳನ್ನು ಶ್ರದ್ಧೆಯಿಂದ ವೈಯಕ್ತಿಕವಾಗಿ ಮತ್ತು ಸಭೆಯೋಪಾದಿ ಅಭ್ಯಾಸಮಾಡುವುದರಿಂದ, ನಂಬಿಕೆಯ ಪರೀಕ್ಷೆಗಳನ್ನು ಯಶಸ್ವಿಕರವಾಗಿ ಎದುರಿಸುವಂತೆ ನಮಗೆ ಸಹಾಯಸಿಗುವುದು. (ಮತ್ತಾಯ 24:​45-47) ಸಂದಿಗ್ಧ ಪರಿಸ್ಥಿತಿಗಳಲ್ಲಿರುವಾಗ ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ನಾವೇನು ಮಾಡಬೇಕೆಂಬುದನ್ನು ಗ್ರಹಿಸಲು ಅಂಥ ಆತ್ಮಿಕ ಒದಗಿಸುವಿಕೆಗಳು ನಮ್ಮನ್ನು ಶಕ್ತಗೊಳಿಸುವವು.

ನಮ್ಮ ಕೂಟಗಳ ಅತಿ ಮುಖ್ಯ ಪಾತ್ರ

9. ‘ಮನುಷ್ಯರಲ್ಲಿರುವ ದಾನಗಳು’ ಯಾರಾಗಿದ್ದಾರೆ, ಮತ್ತು ಅವರು ಜೊತೆವಿಶ್ವಾಸಿಗಳಿಗೆ ಹೇಗೆ ಸಹಾಯಮಾಡುತ್ತಾರೆ?

9 ದೇವರ ಮರುಜ್ಞಾಪನಗಳನ್ನು ಪಡೆದುಕೊಳ್ಳಲಿಕ್ಕಾಗಿ ನಮ್ಮಲ್ಲಿರುವ ಅಗತ್ಯವನ್ನು ಆತನು ಪೂರೈಸುತ್ತಿರುವ ಒಂದು ವಿಧ ಕ್ರೈಸ್ತ ಕೂಟಗಳಾಗಿವೆ. ಅಲ್ಲಿ ನೇಮಿತ ಸಹೋದರರು ಉಪದೇಶವನ್ನು ನೀಡುತ್ತಾರೆ. ಯೇಸು “ಉನ್ನತಸ್ಥಾನಕ್ಕೆ ಏರಿದಾಗ, . . . ಮನುಷ್ಯರಿಗೆ [“ಮನುಷ್ಯರಲ್ಲಿರುವ,” NW] ದಾನಗಳನ್ನು ಮಾಡಿದನು” ಎಂದು ಅಪೊಸ್ತಲ ಪೌಲನು ಬರೆದನು. ಅವನು ಮತ್ತೂ ಕೂಡಿಸಿದ್ದು: “ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು.” (ಎಫೆಸ 4:8, 11, 12) ಆರಾಧನೆಗಾಗಿ ನಾವು ಕೂಡಿಬರುವಾಗ ‘ಮನುಷ್ಯರಲ್ಲಿರುವ ಈ ದಾನಗಳು’, ಅಂದರೆ ನೇಮಿತ ಹಿರಿಯರು, ಯೆಹೋವನ ಮರುಜ್ಞಾಪನಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಿರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬೇಕು!

10. ಇಬ್ರಿಯ 10:​24, 25ರ ಮುಖ್ಯ ವಿಷಯವೇನಾಗಿದೆ?

10 ಈ ದೈವಿಕ ಒದಗಿಸುವಿಕೆಗಳಿಗಾಗಿ ನಾವು ಕೃತಜ್ಞರಾಗಿರುವಲ್ಲಿ, ನಾವು ಪ್ರತಿವಾರ ನಡೆಯುವ ನಮ್ಮ ಐದು ಸಭಾ ಕೂಟಗಳಲ್ಲಿ ಒಂದನ್ನೂ ತಪ್ಪಿಸಿಕೊಳ್ಳದಿರುವೆವು. ಕ್ರಮವಾಗಿ ಜೊತೆಗೂಡುವ ಅಗತ್ಯವನ್ನು ಪೌಲನು ಒತ್ತಿಹೇಳಿದನು. ಅವನು ಬರೆದುದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.”​—⁠ಇಬ್ರಿಯ 10:24, 25.

11. ಪ್ರತಿಯೊಂದು ಕೂಟದಿಂದ ನಮಗೆ ಯಾವ ಯಾವ ಪ್ರಯೋಜನಗಳು ಸಿಗುತ್ತವೆ?

11 ಕೂಟಗಳಿಂದ ಸಿಗುವ ಪ್ರಯೋಜಗಳನ್ನು ನೀವು ಗಣ್ಯಮಾಡುತ್ತೀರೊ? ವಾರದ ಕಾವಲಿನಬುರುಜು ಅಭ್ಯಾಸವು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ, ಯೆಹೋವನ ಮರುಜ್ಞಾಪನಗಳಿಗನುಸಾರ ನಡೆಯುವಂತೆ ಸಹಾಯಮಾಡುತ್ತದೆ, ಮತ್ತು “ಪ್ರಾಪಂಚಿಕ ಆತ್ಮ”ದ ವಿರುದ್ಧ ಹೋರಾಡುವಂತೆ ನಮ್ಮನ್ನು ದೃಢಪಡಿಸುತ್ತದೆ. (1 ಕೊರಿಂಥ 2:12; ಅ. ಕೃತ್ಯಗಳು 15:31) ಬಹಿರಂಗ ಭಾಷಣದಲ್ಲಿ, ಭಾಷಣಕರ್ತರು ದೇವರ ವಾಕ್ಯದಿಂದ ಉಪದೇಶವನ್ನು ನೀಡುತ್ತಾರೆ. ಇದರಲ್ಲಿ ಯೆಹೋವನ ಮರುಜ್ಞಾಪನಗಳು ಮತ್ತು ಯೇಸುವಿನ ಅದ್ಭುತವಾದ ‘ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳು’ ಸೇರಿರುತ್ತವೆ. (ಯೋಹಾನ 6:68; 7:46; ಮತ್ತಾಯ 5:​1–7:⁠29) ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನಮ್ಮ ಕಲಿಸುವ ಕೌಶಲಗಳು ಚುರುಕುಗೊಳಿಸಲ್ಪಡುತ್ತವೆ. ಮತ್ತು ಸೇವಾ ಕೂಟದಿಂದ ನಮಗೆ ಸಿಗುವ ಸಹಾಯಕ್ಕೆ ಬೆಲೆಕಟ್ಟಸಾಧ್ಯವಿಲ್ಲ. ಈ ಕೂಟದ ಮೂಲಕ, ನಾವು ಮನೆಯಿಂದ ಮನೆಯ ಸೇವೆಯಲ್ಲಿ, ಪುನರ್ಭೇಟಿಗಳಲ್ಲಿ, ಮನೆ ಬೈಬಲ್‌ ಅಭ್ಯಾಸಗಳಲ್ಲಿ ಮತ್ತು ಶುಶ್ರೂಷೆಯ ಬೇರೆಬೇರೆ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಮಾಡಲು ಸಹಾಯ ಸಿಗುತ್ತದೆ. ಸಭಾ ಪುಸ್ತಕ ಅಭ್ಯಾಸವು ಒಂದು ಚಿಕ್ಕ ಗುಂಪಾಗಿರುವುದರಿಂದ, ಅನೇಕವೇಳೆ ದೇವರ ಮರುಜ್ಞಾಪನಗಳ ಕುರಿತಾದ ಉತ್ತರಗಳನ್ನು ಕೊಡಲು ನಮಗೆ ಹೆಚ್ಚು ಅವಕಾಶ ಸಿಗುತ್ತದೆ.

12, 13. ಏಷ್ಯಾ ಖಂಡದ ಒಂದು ದೇಶದಲ್ಲಿರುವ ದೇವಜನರು, ಕ್ರೈಸ್ತ ಕೂಟಗಳಿಗಾಗಿ ಹೇಗೆ ಗಣ್ಯತೆಯನ್ನು ತೋರಿಸಿದ್ದಾರೆ?

12 ಸಭಾ ಕೂಟಗಳಲ್ಲಿ ಕ್ರಮವಾಗಿ ಉಪಸ್ಥಿತರಿರುವುದರಿಂದ, ದೇವರ ಆಜ್ಞೆಗಳು ನಮ್ಮ ಜ್ಞಾಪಕಕ್ಕೆ ತರಲ್ಪಡುತ್ತವೆ ಮತ್ತು ಯುದ್ಧ, ಆರ್ಥಿಕ ಬಿಕ್ಕಟ್ಟು ಅಥವಾ ನಂಬಿಕೆಯ ಇನ್ನಿತರ ಪರೀಕ್ಷೆಗಳ ಎದುರಿನಲ್ಲಿ ಆತ್ಮಿಕವಾಗಿ ಬಲವಾಗಿರಲು ಸಹಾಯಸಿಗುತ್ತದೆ. ಕೂಟಗಳು ಎಷ್ಟು ಮಹತ್ವಪೂರ್ಣವಾಗಿವೆ ಎಂಬುದು, ಏಷ್ಯಾ ಖಂಡದ ಒಂದು ದೇಶದಲ್ಲಿರುವ ಸುಮಾರು 70 ಮಂದಿ ಕ್ರೈಸ್ತರಿಗೆ ತಿಳಿದಿತ್ತು. ಆ ದೇಶದ ಪರಿಸ್ಥಿತಿಗಳಿಂದಾಗಿ ಇವರು ತಮ್ಮ ಮನೆಗಳನ್ನು ಬಿಟ್ಟು, ಕಾಡಿನಲ್ಲಿ ಜೀವಿಸುವಂತೆ ಒತ್ತಾಯಿಸಲ್ಪಟ್ಟಿದ್ದರು. ಆದರೆ ತಮ್ಮ ಕೂಟಗಳನ್ನು ಮುಂದುವರಿಸಿಕೊಂಡು ಹೋಗುವ ದೃಢಸಂಕಲ್ಪ ಅವರಿಗಿತ್ತು. ಆದುದರಿಂದ, ತಮ್ಮ ಯುದ್ಧಛಿದ್ರ ಪಟ್ಟಣಕ್ಕೆ ಹಿಂದಿರುಗಿ, ಅಲ್ಲಿ ತಮ್ಮ ರಾಜ್ಯ ಸಭಾಗೃಹದಲ್ಲಿ ಉಳಿದಿದ್ದ ಎಲ್ಲ ಸಾಮಗ್ರಿಗಳನ್ನು ಕಳಚಿ, ಕಾಡಿಗೆ ತಂದು ಅಲ್ಲಿ ರಾಜ್ಯ ಸಭಾಗೃಹವನ್ನು ಪುನಃ ಕಟ್ಟಿದರು.

13 ಆ ದೇಶದ ಇನ್ನೊಂದು ಭಾಗದಲ್ಲಿ ಎಷ್ಟೋ ವರ್ಷಗಳಿಂದ ಯುದ್ಧ ನಡೆಯುತ್ತಿರುವುದಾದರೂ, ಯೆಹೋವನ ಜನರು ಈಗಲೂ ಹುರುಪಿನಿಂದ ಆತನ ಸೇವೆಯನ್ನು ಮಾಡುತ್ತಿದ್ದಾರೆ. ಆ ಕ್ಷೇತ್ರದ ಒಬ್ಬ ಹಿರಿಯನಿಗೆ ಹೀಗೆ ಕೇಳಲಾಯಿತು: “ಸಹೋದರರನ್ನು ಐಕ್ಯರಾಗಿರಿಸಲು ಯಾವುದು ತುಂಬ ಸಹಾಯಮಾಡಿದೆ?” ಅವನ ಉತ್ತರವೇನಾಗಿತ್ತು? “ಈ 19 ವರ್ಷಗಳಲ್ಲಿ ನಾವು ಒಂದೇ ಒಂದು ಕೂಟವನ್ನೂ ತಪ್ಪಿಸಿಕೊಂಡಿಲ್ಲ. ಕೆಲವೊಮ್ಮೆ ಬಾಂಬ್‌ ದಾಳಿ ಅಥವಾ ಬೇರಾವುದೋ ಕಷ್ಟಗಳಿಂದಾಗಿ, ಕೆಲವು ಸಹೋದರರು ಕೂಟದ ಸ್ಥಳಕ್ಕೆ ತಲಪಲು ಸಾಧ್ಯವಿರುತ್ತಿರಲಿಲ್ಲ. ಆದರೆ ನಾವು ಎಂದೂ ಒಂದು ಕೂಟವನ್ನು ರದ್ದುಗೊಳಿಸಿಲ್ಲ.” ಖಂಡಿತವಾಗಿಯೂ ಈ ಪ್ರಿಯ ಸಹೋದರಸಹೋದರಿಯರು, ‘ಸಭೆಯಾಗಿ ಕೂಡಿಕೊಳ್ಳುವದನ್ನು ಬಿಟ್ಟುಬಿಡದಿರುವುದು’ ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಗಣ್ಯಮಾಡುತ್ತಾರೆ.

14. ವೃದ್ಧೆ ಅನ್ನಳಿಗಿದ್ದ ರೂಢಿಯಿಂದ ನಾವೇನನ್ನು ಕಲಿಯಬಹುದು?

14 ಎಂಭತ್ತುನಾಲ್ಕು ವರುಷ ಪ್ರಾಯದ ವಿಧವೆ ಅನ್ನಳು, ‘ದೇವಾಲಯವನ್ನು ಬಿಟ್ಟುಹೋಗದೆ, ದೇವರ ಸೇವೆಯನ್ನು ಮಾಡುತ್ತಿದ್ದಳು.’ ಇದರಿಂದಾಗಿ, ಶಿಶುವಾಗಿದ್ದ ಯೇಸುವನ್ನು ಅವನ ಹೆತ್ತವರು ದೇವಾಲಯಕ್ಕೆ ತಂದಾಗ ಅವನನ್ನು ನೋಡಲು ಅವಳಿಗೆ ಸಾಧ್ಯವಾಯಿತು. (ಲೂಕ 2:​36-38) ನೀವು ಸಹ, ಯಾವುದೇ ಕೂಟವನ್ನು ತಪ್ಪಿಸಿಕೊಳ್ಳಬಾರದೆಂಬ ದೃಢಸಂಕಲ್ಪವನ್ನು ಮಾಡಿದ್ದೀರೊ? ನಮ್ಮ ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ಪ್ರತಿಯೊಂದೂ ಕಾರ್ಯಕ್ರಮಕ್ಕೆ ಹಾಜರಾಗಲು ನಿಮ್ಮಿಂದಾಗುವುದೆಲ್ಲವನ್ನೂ ಮಾಡುತ್ತಿದ್ದೀರೊ? ಈ ಕೂಟಗಳಲ್ಲಿ ನಮಗೆ ಸಿಗುವ ಆತ್ಮಿಕವಾಗಿ ಉಪಯುಕ್ತವಾದ ಉಪದೇಶವು, ನಮ್ಮ ಸ್ವರ್ಗೀಯ ತಂದೆಯು ತನ್ನ ಜನರ ಕುರಿತಾಗಿ ನಿಜವಾಗಿ ಕಾಳಜಿವಹಿಸುತ್ತಾನೆಂಬುದಕ್ಕೆ ಸ್ಪಷ್ಟವಾದ ರುಜುವಾತನ್ನು ಕೊಡುತ್ತದೆ. (ಯೆಶಾಯ 40:11) ಅಂತಹ ಕೂಟಗಳು, ನಮ್ಮ ಆನಂದವನ್ನು ಸಹ ಹೆಚ್ಚಿಸುತ್ತವೆ. ಮತ್ತು ನಾವು ಅಲ್ಲಿ ಹಾಜರಿರುವ ಮೂಲಕ ಯೆಹೋವನ ಮರುಜ್ಞಾಪನಗಳನ್ನು ಗಣ್ಯಮಾಡುತ್ತೇವೆಂಬುದನ್ನು ನಾವು ತೋರಿಸುತ್ತೇವೆ.​—⁠ನೆಹೆಮೀಯ 8:​5-8, 12.

ಯೆಹೋವನ ಮರುಜ್ಞಾಪನಗಳಿಂದಾಗಿ ಪ್ರತ್ಯೇಕಿಸಲ್ಪಟ್ಟಿರುವ ಜನರು

15, 16. ಯೆಹೋವನ ಮರುಜ್ಞಾಪನಗಳನ್ನು ಪಾಲಿಸುವುದು, ನಮ್ಮ ನಡತೆಯ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ?

15 ದೇವರ ಮರುಜ್ಞಾಪನಗಳನ್ನು ಪಾಲಿಸುವುದರಿಂದ, ನಾವು ಈ ದುಷ್ಟ ಲೋಕದಿಂದ ಪ್ರತ್ಯೇಕವಾಗಿರಲು ಸಾಧ್ಯವಾಗುತ್ತದೆ. ಉದಾಹರಣೆಗಾಗಿ, ದೇವರ ಮರುಜ್ಞಾಪನಗಳನ್ನು ಪಾಲಿಸುವುದು, ನಾವು ಲೈಂಗಿಕ ಅನೈತಿಕತೆಯಲ್ಲಿ ಒಳಗೂಡದಂತೆ ತಡೆಯುತ್ತದೆ. (ಧರ್ಮೋಪದೇಶಕಾಂಡ 5:18; ಜ್ಞಾನೋಕ್ತಿ 6:​29-35; ಇಬ್ರಿಯ 13:⁠4) ದೈವಿಕ ಮರುಜ್ಞಾಪನಗಳಿಗೆ ಅನುಸಾರವಾಗಿ ನಡೆಯುವ ಮೂಲಕ ನಾವು ಸುಳ್ಳು ಹೇಳುವ, ಅಪ್ರಾಮಾಣಿಕರಾಗಿರುವ, ಅಥವಾ ಕದಿಯುವ ಶೋಧನೆಯನ್ನು ಸಫಲತೆಯಿಂದ ಅದುಮಿಹಾಕಬಲ್ಲೆವು. (ವಿಮೋಚನಕಾಂಡ 20:​15, 16; ಯಾಜಕಕಾಂಡ 19:11; ಜ್ಞಾನೋಕ್ತಿ 30:​7-9; ಎಫೆಸ 4:​25, 28; ಇಬ್ರಿಯ 13:18) ಯೆಹೋವನ ಮರುಜ್ಞಾಪನಗಳನ್ನು ಪಾಲಿಸುವುದು, ನಾವು ಸೇಡುತೀರಿಸಿಕೊಳ್ಳುವುದರಿಂದ, ಒಬ್ಬನ ವಿರುದ್ಧ ದ್ವೇಷ ಸಾಧಿಸುವುದರಿಂದ ಅಥವಾ ಬೇರೆಯವರ ಹೆಸರನ್ನು ಕೆಡಿಸುವುದರಿಂದಲೂ ನಮ್ಮನ್ನು ತಡೆಯುತ್ತದೆ.​—⁠ಯಾಜಕಕಾಂಡ 19:​16, 18; ಕೀರ್ತನೆ 15:​1, 3.

16 ದೇವರ ಮರುಜ್ಞಾಪನಗಳನ್ನು ಪಾಲಿಸುವ ಮೂಲಕ, ನಾವು ಆತನ ಸೇವೆಗಾಗಿ ಪವಿತ್ರೀಕರಿಸಲ್ಪಟ್ಟವರು ಅಥವಾ ಮೀಸಲಾಗಿರಿಸಲ್ಪಟ್ಟವರಾಗಿ ಉಳಿಯುತ್ತೇವೆ. ಆದುದರಿಂದ ಈ ಲೋಕದಿಂದ ಪ್ರತ್ಯೇಕರಾಗಿ ಉಳಿಯುವುದು ತುಂಬ ಪ್ರಾಮುಖ್ಯವಾಗಿದೆ! ತನ್ನ ಭೂಜೀವಿತದ ಕೊನೆಯ ರಾತ್ರಿಯಂದು ಯೆಹೋವನಿಗೆ ಪ್ರಾರ್ಥನೆಮಾಡುತ್ತಿರುವಾಗ, ಯೇಸು ತನ್ನ ಹಿಂಬಾಲಕರಿಗೋಸ್ಕರ ಹೀಗೆ ಬೇಡಿಕೊಂಡನು: “ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ; ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ. ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ. ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:14-17) ದೇವರ ಪವಿತ್ರ ಸೇವೆಗಾಗಿ ನಮ್ಮನ್ನು ಪ್ರತ್ಯೇಕವಾಗಿರಿಸುವ ಆತನ ವಾಕ್ಯವು ನಮಗೆ ಯಾವಾಗಲೂ ಪ್ರಿಯವಾದದ್ದಾಗಿರಲಿ.

17. ನಾವು ದೇವರ ಮರುಜ್ಞಾಪನಗಳನ್ನು ಅಲಕ್ಷಿಸುವಲ್ಲಿ ಏನಾಗಸಾಧ್ಯವಿದೆ, ಮತ್ತು ಈ ಕಾರಣದಿಂದ ನಾವೇನು ಮಾಡಬೇಕು?

17 ಯೆಹೋವನ ಸೇವಕರೋಪಾದಿ ನಾವು ಯಾವಾಗಲೂ ಆತನ ಸೇವೆಯನ್ನು ಮಾಡಲು ಯೋಗ್ಯರಾದವರಾಗಿ ಉಳಿಯಬೇಕು. ಆದರೆ ನಾವು ದೇವರ ಮರುಜ್ಞಾಪನಗಳನ್ನು ಅಲಕ್ಷಿಸುವಲ್ಲಿ, ಲೋಕದ ಆತ್ಮವು ನಮ್ಮನ್ನು ಪ್ರಭಾವಿಸಬಲ್ಲದು. ಮತ್ತು ಈ ಆತ್ಮವನ್ನು ಲೋಕದ ಮಾತು, ಸಾಹಿತ್ಯ, ಮನೋರಂಜನೆ ಹಾಗೂ ನಡತೆಯು ಪ್ರೋತ್ಸಾಹಿಸುತ್ತದೆ. ನಾವಾದರೊ ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ಉಪಕಾರನೆನಸದವರೂ, ದೇವಭಯವಿಲ್ಲದವರೂ, ಉಗ್ರತೆಯುಳ್ಳವರೂ, ದುಡುಕಿನವರೂ, ಉಬ್ಬಿಕೊಂಡವರೂ, ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಆಗಿರಲು ಬಯಸುವುದಿಲ್ಲ. ಇವೆಲ್ಲವೂ, ದೇವರಿಂದ ದೂರಸರಿದವರು ಪ್ರದರ್ಶಿಸುವ ಕೆಲವೊಂದು ಗುಣಗಳಾಗಿವೆ. (2 ತಿಮೊಥೆಯ 3:​1-5) ನಾವು ಈ ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳ ಕೊನೆಯ ಭಾಗದಲ್ಲಿ ನಾವು ಜೀವಿಸುತ್ತಿರುವುದರಿಂದ, ನಾವು ದೇವರ ಸಹಾಯಕ್ಕಾಗಿ ಪ್ರಾರ್ಥಿಸುತ್ತಾ ಇರೋಣ. ಆಗ ನಾವು ಯೆಹೋವನ ಮರುಜ್ಞಾಪನಗಳನ್ನು ಪಾಲಿಸುತ್ತಾ ಇರಸಾಧ್ಯವಿದೆ ಮತ್ತು ‘ಆತನ ವಾಕ್ಯವನ್ನು ಗಮನಿಸಿ ನಡೆಯಸಾಧ್ಯವಿದೆ.’​—⁠ಕೀರ್ತನೆ 119:⁠9.

18. ದೇವರ ಮರುಜ್ಞಾಪನಗಳನ್ನು ಪಾಲಿಸುವುದು, ನಾವು ಯಾವ ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಮಾಡುವುದು?

18 ಯೆಹೋವನ ಮರುಜ್ಞಾಪನಗಳು, ಕೇವಲ ನಾವೇನನ್ನು ಮಾಡಬಾರದೆಂಬುದರ ಕುರಿತಾಗಿ ಮಾತ್ರ ಎಚ್ಚರಿಸುವುದಿಲ್ಲ. ಬದಲಾಗಿ ನಾವು ಸಕಾರಾತ್ಮಕ ಕ್ರಿಯೆಯನ್ನು ಕೈಗೊಳ್ಳುವಂತೆ ಮಾಡುತ್ತವೆ. ಅಂದರೆ ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆಯನ್ನಿಟ್ಟು, ಆತನನ್ನು ನಮ್ಮ ಪೂರ್ಣ ಹೃದಯ, ಪ್ರಾಣ, ಬುದ್ಧಿ ಮತ್ತು ಶಕ್ತಿಯಿಂದ ಪ್ರೀತಿಸುವಂತೆಯೂ ಅವು ನಮ್ಮನ್ನು ಪ್ರಚೋದಿಸುತ್ತದೆ. (ಧರ್ಮೋಪದೇಶಕಾಂಡ 6:5; ಕೀರ್ತನೆ 4:5; ಜ್ಞಾನೋಕ್ತಿ 3:​5, 6; ಮತ್ತಾಯ 22:37; ಮಾರ್ಕ 12:30) ನಾವು ನಮ್ಮ ನೆರೆಯವರನ್ನು ಪ್ರೀತಿಸುವಂತೆಯೂ ದೇವರ ಮರುಜ್ಞಾಪನಗಳು ನಮ್ಮನ್ನು ಪ್ರೇರಿಸುತ್ತವೆ. (ಯಾಜಕಕಾಂಡ 19:18; ಮತ್ತಾಯ 22:39) ನಾವು ದೇವರ ಚಿತ್ತವನ್ನು ಮಾಡುವಾಗ ಮತ್ತು ಇತರರೊಂದಿಗೆ “ದೈವಜ್ಞಾನವನ್ನು” ಹಂಚಿಕೊಳ್ಳುವಾಗ ನಾವು ದೇವರ ಕಡೆಗಿನ ಮತ್ತು ನೆರೆಯವರ ಕಡೆಗಿನ ನಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತೇವೆ.​—⁠ಜ್ಞಾನೋಕ್ತಿ 2:​1-5.

ಯೆಹೋವನ ಮರುಜ್ಞಾಪನಗಳು ಜೀವದಾಯಕವಾಗಿವೆ!

19. ಯೆಹೋವನ ಮರುಜ್ಞಾಪನಗಳನ್ನು ಪಾಲಿಸುವುದು ವ್ಯಾವಹಾರಿಕವೂ ಉಪಯುಕ್ತವೂ ಆಗಿದೆಯೆಂದು ನಾವು ಇತರರಿಗೆ ಹೇಗೆ ತೋರಿಸಬಹುದು?

19 ನಾವು ಯೆಹೋವನ ಮರುಜ್ಞಾಪನಗಳನ್ನು ಪಾಲಿಸುವಲ್ಲಿ ಮತ್ತು ಹಾಗೆ ಮಾಡುವಂತೆ ಇತರರಿಗೂ ಸಹಾಯಮಾಡುವಲ್ಲಿ, ನಾವು ನಮ್ಮನ್ನು ಮಾತ್ರವಲ್ಲ ನಮಗೆ ಕಿವಿಗೊಡುವವರನ್ನು ಸಹ ರಕ್ಷಿಸುವೆವು. (1 ತಿಮೊಥೆಯ 4:16) ಯೆಹೋವನ ಮರುಜ್ಞಾಪನಗಳಿಗನುಸಾರ ನಡೆಯುವುದು, ವ್ಯಾವಹಾರಿಕವೂ ಉಪಯುಕ್ತವೂ ಆಗಿದೆಯೆಂಬುದನ್ನು ನಾವು ಇತರರಿಗೆ ಹೇಗೆ ತೋರಿಸಬಲ್ಲೆವು? ನಮ್ಮ ಸ್ವಂತ ಜೀವಿತದಲ್ಲಿ ಬೈಬಲ್‌ ತತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕವೇ. ಈ ರೀತಿಯಲ್ಲಿ, ದೇವರ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವ ಮಾರ್ಗಕ್ರಮವು, ನಾವು ನಡೆಯಬೇಕಾದ ಅತ್ಯುತ್ತಮ ಮಾರ್ಗವಾಗಿದೆಯೆಂದು “ನಿತ್ಯಜೀವಕ್ಕೆ ಯೋಗ್ಯ ಪ್ರವೃತ್ತಿಯುಳ್ಳ”ವರಿಗೆ (NW) ಪುರಾವೆ ಸಿಗುವುದು. (ಅ. ಕೃತ್ಯಗಳು 13:48) ‘ದೇವರು ನಿಜವಾಗಿ ನಮ್ಮಲ್ಲಿದ್ದಾನೆಂಬುದನ್ನು’ ಅವರು ಸಹ ನೋಡುವರು ಮತ್ತು ಹೀಗೆ ಪರಮಾಧಿಕಾರಿ ಪ್ರಭುವಾಗಿರುವ ಯೆಹೋವನ ಆರಾಧನೆಯಲ್ಲಿ ನಮ್ಮನ್ನು ಜೊತೆಗೂಡಲು ಪ್ರೇರಿಸಲ್ಪಡುವರು.​—⁠1 ಕೊರಿಂಥ 14:​24, 25.

20, 21. ದೇವರ ಮರುಜ್ಞಾಪನಗಳು ಮತ್ತು ಆತನ ಆತ್ಮವು ನಮಗೆ ಏನು ಮಾಡುವಂತೆ ಸಹಾಯಮಾಡುವವು?

20 ನಾವು ಬೈಬಲನ್ನು ಅಭ್ಯಾಸಿಸುತ್ತಾ, ಕಲಿಯುತ್ತಿರುವ ಸಂಗತಿಗಳನ್ನು ಅನ್ವಯಿಸಿಕೊಳ್ಳುತ್ತಾ ಮತ್ತು ಯೆಹೋವನ ಆತ್ಮಿಕ ಒದಗಿಸುವಿಕೆಗಳ ಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಾ ಇರುವಲ್ಲಿ, ಆತನ ಮರುಜ್ಞಾಪನಗಳು ನಮಗೆ ಬಹುಪ್ರಿಯವಾಗುವವು. ಈ ಮರುಜ್ಞಾಪನಗಳಿಗನುಸಾರ ನಾವು ಕೆಲಸಮಾಡುವಲ್ಲಿ, ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ ನೂತನಸ್ವಭಾವವನ್ನು’ ಧರಿಸಿಕೊಳ್ಳಲು ನಮಗೆ ಸಹಾಯಸಿಗುವುದು. (ಎಫೆಸ 4:​20-24) ಯೆಹೋವನ ಮರುಜ್ಞಾಪನಗಳು ಮತ್ತು ಆತನ ಪವಿತ್ರಾತ್ಮವು ನಾವು ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ ಎಂಬ ಗುಣಗಳನ್ನು ಪ್ರದರ್ಶಿಸುವುದನ್ನು ಸಾಧ್ಯಮಾಡುವುದು. ಈ ಗುಣಗಳು ಮತ್ತು ಸೈತಾನನ ವಶದಲ್ಲಿರುವ ಈ ಲೋಕದ ಗುಣಗಳಲ್ಲಿ ಅಜಗಜಾಂತರದ ವ್ಯತ್ಯಾಸವಿದೆಯಲ್ಲವೇ! (ಗಲಾತ್ಯ 5:​22, 23; 1 ಯೋಹಾನ 5:19) ಆದುದರಿಂದ, ನಮ್ಮ ವೈಯಕ್ತಿಕ ಬೈಬಲ್‌ ಅಭ್ಯಾಸ, ನೇಮಿತ ಹಿರಿಯರ, ಮತ್ತು ಕೂಟಗಳ, ಸಮ್ಮೇಳನಗಳ ಹಾಗೂ ಅಧಿವೇಶನಗಳ ಮೂಲಕ ಯೆಹೋವನ ಆವಶ್ಯಕತೆಗಳ ಕುರಿತಾಗಿ ನಮಗೆ ಮರುಜ್ಞಾಪನಗಳು ಸಿಗುವಾಗ ನಾವು ಕೃತಜ್ಞರಾಗಿರಬೇಕು.

21 ನಾವು ನೀತಿಯ ನಿಮಿತ್ತ ಕಷ್ಟಾನುಭವಿಸುತ್ತಿರುವಾಗಲೂ ಸಂತೋಷಪಡಬಹುದು, ಏಕೆಂದರೆ ನಾವು ಯೆಹೋವನ ಮರುಜ್ಞಾಪನಗಳನ್ನು ಪಾಲಿಸುತ್ತೇವೆ. (ಲೂಕ 6:​22, 23) ಜೀವಘಾತಕ ಸನ್ನಿವೇಶಗಳಿಂದ ನಮ್ಮನ್ನು ರಕ್ಷಿಸಲಿಕ್ಕಾಗಿ ನಾವು ದೇವರಲ್ಲಿ ಭರವಸೆಯನ್ನಿಡುತ್ತೇವೆ. ಮತ್ತು ಈಗ ಅದು ತುಂಬ ಪ್ರಾಮುಖ್ಯವಾಗಿದೆ. ಏಕೆಂದರೆ, ಎಲ್ಲ ರಾಷ್ಟ್ರಗಳು ಹರ್ಮಗೆದ್ದೋನ್‌ ಎಂಬ ‘ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ’ ಒಟ್ಟುಗೂಡಿಸಲ್ಪಡುತ್ತಿವೆ.​—⁠ಪ್ರಕಟನೆ 16:​14-16.

22. ಯೆಹೋವನ ಮರುಜ್ಞಾಪನಗಳ ಕುರಿತಾಗಿ ನಮ್ಮ ದೃಢಸಂಕಲ್ಪ ಏನಾಗಿರಬೇಕು?

22 ನಾವು ನಿತ್ಯಜೀವದ ಅಪಾತ್ರ ವರದಾನವನ್ನು ಪಡೆದುಕೊಳ್ಳಬೇಕಾದರೆ, ಯೆಹೋವನ ಮರುಜ್ಞಾಪನಗಳು ನಮಗೆ ಬಹುಪ್ರಿಯವಾಗಿರಬೇಕು ಮತ್ತು ನಾವು ಮನಃಪೂರ್ವಕವಾಗಿ ಅವುಗಳಿಗನುಸಾರ ನಡೆದುಕೊಳ್ಳಬೇಕು. “ನಿನ್ನ ಕಟ್ಟಳೆಗಳು [“ಮರುಜ್ಞಾಪನಗಳು,” NW] ಸದಾಕಾಲವೂ ನೀತಿಯುಳ್ಳವುಗಳು; ನನಗೆ ವಿವೇಕವನ್ನು ದಯಪಾಲಿಸು, ಆಗ ಬದುಕುವೆನು” ಎಂದು ಹಾಡಿದಂಥ ಕೀರ್ತನೆಗಾರನ ಮನೋಭಾವವು ನಮಗೂ ಇರಲಿ. (ಕೀರ್ತನೆ 119:144) ಮತ್ತು ಕೀರ್ತನೆಗಾರನ ಈ ಮಾತುಗಳಲ್ಲಿ ವ್ಯಕ್ತವಾಗುವ ದೃಢಸಂಕಲ್ಪವು ನಮಗೂ ಇರಲಿ: “ನಿನಗೇ ಮೊರೆಯಿಟ್ಟಿದ್ದೇನೆ; ರಕ್ಷಿಸು. ನಿನ್ನ ಕಟ್ಟಳೆಗಳನ್ನು [“ಮರುಜ್ಞಾಪನಗಳನ್ನು,” NW] ಕೈಕೊಳ್ಳುವೆನು.” (ಕೀರ್ತನೆ 119:146) ಹೌದು, ಯೆಹೋವನ ಮರುಜ್ಞಾಪನಗಳು ನಮಗೆ ನಿಜವಾಗಿಯೂ ಬಹುಪ್ರಿಯವಾಗಿವೆ ಎಂಬುದನ್ನು ನಮ್ಮ ನಡೆನುಡಿಯು ತೋರಿಸಲಿ.

ನೀವು ಹೇಗೆ ಉತ್ತರಿಸುವಿರಿ?

• ಯೆಹೋವನ ಮರುಜ್ಞಾಪನಗಳ ಕುರಿತಾಗಿ ಕೀರ್ತನೆಗಾರನ ದೃಷ್ಟಿಕೋನವೇನಾಗಿತ್ತು?

• ನಮಗೆ ದೇವರ ಮರುಜ್ಞಾಪನಗಳು ಏಕೆ ಬೇಕಾಗಿವೆ?

• ದೈವಿಕ ಮರುಜ್ಞಾಪನಗಳ ಸಂಬಂಧದಲ್ಲಿ ಕೂಟಗಳ ಪಾತ್ರವೇನು?

• ಯೆಹೋವನ ಮರುಜ್ಞಾಪನಗಳು ನಮ್ಮನ್ನು ಈ ಲೋಕದಿಂದ ಹೇಗೆ ಪ್ರತ್ಯೇಕವಾಗಿರಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಕೀರ್ತನೆಗಾರನಿಗೆ ಯೆಹೋವನ ಮರುಜ್ಞಾಪನಗಳು ಬಹುಪ್ರಿಯವಾಗಿದ್ದವು

[ಪುಟ 16, 17ರಲ್ಲಿರುವ ಚಿತ್ರಗಳು]

ಅನ್ನಳಂತೆ ನೀವು ಕೂಡ ಯಾವುದೇ ಕೂಟವನ್ನು ತಪ್ಪಿಸಿಕೊಳ್ಳಬಾರದೆಂಬ ದೃಢಸಂಕಲ್ಪವನ್ನು ಮಾಡಿದ್ದೀರೊ?

[ಪುಟ 18ರಲ್ಲಿರುವ ಚಿತ್ರ]

ಯೆಹೋವನ ಮರುಜ್ಞಾಪನಗಳನ್ನು ಪಾಲಿಸುವುದು, ನಮ್ಮನ್ನು ಆತನ ಸೇವೆಗಾಗಿ ಶುದ್ಧರೂ, ಯೋಗ್ಯರೂ ಆದ ವ್ಯಕ್ತಿಗಳಾಗಿ ಪ್ರತ್ಯೇಕವಾಗಿರಿಸುತ್ತದೆ