ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ನೇಹಿತರನ್ನು ನೀವು ಹೇಗೆ ಮಾಡಿಕೊಳ್ಳಬಹುದು?

ಸ್ನೇಹಿತರನ್ನು ನೀವು ಹೇಗೆ ಮಾಡಿಕೊಳ್ಳಬಹುದು?

ಸ್ನೇಹಿತರನ್ನು ನೀವು ಹೇಗೆ ಮಾಡಿಕೊಳ್ಳಬಹುದು?

“ಜೀವಮಾನದಲ್ಲಿ ಒಬ್ಬ ಸ್ನೇಹಿತನಿರುವುದೇ ಗಮನಾರ್ಹ ಸಂಗತಿ; ಇಬ್ಬರು ಸ್ನೇಹಿತರಿದ್ದರೆ ಅದು ಜಾಸ್ತಿ; ಮೂವರಂತೂ ಸಾಧ್ಯವೇ ಇಲ್ಲ.”​—⁠ಹೆನ್ರಿ ಬ್ರೂಕ್ಸ್‌ ಆ್ಯಡಮ್ಸ್‌.

ನಿಜ ಸ್ನೇಹಿತರು ತುಂಬ ವಿರಳವೆಂದು ಈ ಮೇಲಿನ ಮಾತುಗಳಿಂದ ತಿಳಿದುಬರುತ್ತದೆ. ಸ್ನೇಹಕ್ಕಾಗಿ ಹುಡುಕುತ್ತಿರುವ ಒಂಟಿ ಜನರು ಅನೇಕವೇಳೆ, “ನನಗೆ ಸಹಾಯ ಮಾಡಲು ಯಾರೂ ಇಲ್ಲ,” “ನನಗೆ ಯಾರ ಮೇಲೂ ಭರವಸೆ ಇಲ್ಲ,” ಅಥವಾ “ನನ್ನ ನಾಯಿಯೇ ನನ್ನ ಪ್ರಾಣಸ್ನೇಹಿತ” ಎಂದು ಹೇಳುವುದನ್ನು ನಾವು ಕೇಳಿಸಿಕೊಂಡಿರಬಹುದು.

ಸ್ನೇಹಬೆಳೆಸುವುದು ಮತ್ತು ಅದನ್ನು ಕಾಪಾಡಿಕೊಂಡುಹೋಗುವುದು ಒಂದು ದೊಡ್ಡ ಪಂಥಹ್ವಾನವೇ ಸರಿ. ಒಂದು ಸಮೀಕ್ಷೆಗನುಸಾರ, “ಅಮೆರಿಕದಲ್ಲಿರುವ ವಯಸ್ಕರಲ್ಲಿ 25 ಪ್ರತಿಶತದಷ್ಟು ಜನರು, ‘ದೀರ್ಘಾವಧಿಯ ಒಂಟಿತನ’ದಿಂದ ಬಾಧಿಸಲ್ಪಟ್ಟಿದ್ದಾರೆ ಮತ್ತು . . . ಫ್ರಾನ್ಸ್‌ನಲ್ಲಿರುವ ಅರ್ಧದಷ್ಟು ಜನರು ತೀವ್ರವಾದ ಏಕಾಂಗಿತನವನ್ನು ಅನುಭವಿಸಿದ್ದಾರೆ.” ಡೇಟಿಂಗ್‌ ಕ್ಲಬ್ಬುಗಳು ಮತ್ತು ಕಂಪ್ಯೂಟರಿನಲ್ಲಿರುವ ಚ್ಯಾಟ್‌ ರೂಮುಗಳು ಹೆಚ್ಚುತ್ತಿವೆ ಮತ್ತು ವಾರ್ತಾಪತ್ರಿಕೆಗಳಲ್ಲಿ, ಜನರು ಸಂಗಾತಿಗಳಿಗಾಗಿ ಹುಡುಕುತ್ತಿರುವ ಜಾಹೀರಾತುಗಳ ಸಂಖ್ಯೆಯು ಸಹ ದಿನೇ ದಿನೇ ಏರುತ್ತಿದೆ. ಇವೆಲ್ಲವೂ, ಜನರು ಬೇರೆಯವರೊಂದಿಗೆ ಒಡನಾಟವನ್ನು ಹೊಂದಿರಲು ಹಾತೊರೆಯುತ್ತಾರೆಂಬುದನ್ನು ಸೂಚಿಸುತ್ತವೆ.

ಒಂಟಿತನವು, ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಮಾತ್ರವಲ್ಲ ಅವನ ಶಾರೀರಿಕ ಆರೋಗ್ಯವನ್ನೂ ಬಾಧಿಸುತ್ತದೆಂದು, ನರಶಾಸ್ತ್ರವಿಜ್ಞಾನಿಯಾಗಿರುವ ಡಾಕ್ಟರ್‌ ಡೇವಿಡ್‌ ವೀಕ್ಸ್‌ ಹೇಳುತ್ತಾರೆ. “ಚಿಂತೆಗೆ ಸಂಬಂಧಿಸಿರುವ ಅತಿಭಯ ಮತ್ತು ಖಿನ್ನತೆಯ ಸಮಸ್ಯೆಯಿರುವ ಅನೇಕ ರೋಗಿಗಳು ನನಗಿದ್ದಾರೆ. ಅವರನ್ನು ಒಂಟಿಜನರೆಂದೇ ಕರೆಯಬಹುದು. ಏಕೆಂದರೆ, ಖಿನ್ನತೆಯ ತೀವ್ರತೆ ಮತ್ತು ಒಂಟಿಭಾವನೆಯ ತೀವ್ರತೆಯ ನಡುವೆ ಸಂಬಂಧವಿದೆ.”

ವಿವಾಹವಿಚ್ಛೇದ ಮತ್ತು ಕುಟುಂಬ ಜೀವನದಲ್ಲಿನ ಕುಸಿತದಿಂದಾಗಿ, ಹೆಚ್ಚೆಚ್ಚು ಜನರಿಗೆ ಒಂಟಿಯಾಗಿ ಬಾಳುವುದನ್ನು ಬಿಟ್ಟರೆ ಇನ್ಯಾವ ಮಾರ್ಗವೇ ಇಲ್ಲ. ಬ್ರಿಟನಿನಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಯು ತೋರಿಸಿದ್ದೇನೆಂದರೆ, 21ನೆಯ ಶತಮಾನದ ಅಂತ್ಯದಷ್ಟಕ್ಕೆ ಆ ದೇಶದ ಜನಸಂಖ್ಯೆಯಲ್ಲಿ 30 ಪ್ರತಿಶತದಷ್ಟು ಜನರು ಒಂಟಿಯಾಗಿ ಬಾಳುವವರಾಗಿರುವರು.

“ಕಡೇ ದಿವಸಗಳಲ್ಲಿ” ಎಲ್ಲೆಲ್ಲೂ ಸ್ವಾರ್ಥತೆಯ ಭಾವನೆಯು ಇರುವುದೆಂದು ಪ್ರೇರಿತ ಶಾಸ್ತ್ರಗಳಲ್ಲಿ ಹಿಂದೆಯೇ ಮುಂತಿಳಿಸಲ್ಪಟ್ಟಿತು. (2 ತಿಮೊಥೆಯ 3:​1-5) ಇಂದು, ಹೆಚ್ಚಿನ ಜನರು ಬೇರೆ ಜನರೊಂದಿಗೆ ಸಂಬಂಧವನ್ನು ಬೆಳೆಸುವುದಕ್ಕಿಂತಲೂ ಹೆಚ್ಚಾಗಿ, ಮನೆ ಅಥವಾ ಗಾಡಿಯಂತಹ ಭೌತಿಕ ಸ್ವತ್ತುಗಳನ್ನು ಪಡೆದುಕೊಳ್ಳುವುದರ ಕುರಿತಾಗಿ ಅಥವಾ ತಮ್ಮ ಉದ್ಯೋಗಗಳ ಕುರಿತಾಗಿಯೇ ಹೆಚ್ಚು ಆಸಕ್ತರಾಗಿದ್ದಾರೆಂದು ತೋರುತ್ತದೆ. ಆ್ಯಂತೊನಿ ಸ್ಟೊರ್‌ ಎಂಬ ಲೇಖಕನು ಗಮನಿಸಿದ್ದು: “ತಮ್ಮ ವಿವಾಹ ಸಂಗಾತಿ ಮತ್ತು ಮಕ್ಕಳ ಮೇಲೆ ತಮ್ಮ ಜೀವಿತಗಳನ್ನು ಕೇಂದ್ರೀಕರಿಸುವುದರ ಬದಲಿಗೆ, ಅವರ ಜೀವಿತಗಳು ಆಫೀಸಿನ ಮೇಲೆ ಕೇಂದ್ರಿತವಾಗಿರುತ್ತದೆ.”

ನಿಜ ಸ್ನೇಹಿತರ ಬೆಲೆಕಟ್ಟಲಾಗುವುದಿಲ್ಲ

ನಿಮ್ಮ ಜೀವನದ ಗುಣಮಟ್ಟವು, ನಿಮ್ಮ ಗೆಳೆತನಗಳ ಗುಣಮಟ್ಟದ ಮೇಲೆ ಹೊಂದಿಕೊಂಡಿರುತ್ತದೆ. ಕೇವಲ ತಮಗಾಗಿ ಜೀವಿಸುವವರು ಹೆಚ್ಚಾಗಿ ಸಂತೋಷಿತರಾಗಿರುವುದಿಲ್ಲ. ಯಾಕೆಂದರೆ ತಮ್ಮಲ್ಲಿರುವ ವಸ್ತುಗಳನ್ನೊ ತಮ್ಮ ವಿಚಾರಗಳನ್ನೊ ಹಂಚಿಕೊಳ್ಳಲಿಕ್ಕೆ ಅವರಿಗೆ ಸ್ನೇಹಿತರಿರುವುದಿಲ್ಲ. ಯೇಸು ಕ್ರಿಸ್ತನ ಈ ಮಾತುಗಳು ಸತ್ಯವಾಗಿವೆಯಲ್ಲವೇ: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ.” (ಅ. ಕೃತ್ಯಗಳು 20:​35, NW) ಈ ಸತ್ಯವನ್ನು ಪುನರುಚ್ಚರಿಸುತ್ತಾ, ಜಾರ್ಜ್‌ ಬೈರಾನ್‌ ಎಂಬ ಆಂಗ್ಲ ಕವಿ ಬರೆದುದು: “ಆನಂದವನ್ನು ಪಡೆದಿರುವವರೆಲ್ಲರೂ, ಅದನ್ನು ಹಂಚಿಕೊಳ್ಳಬೇಕು.”

ಒಬ್ಬ ಸ್ನೇಹಿತನು ಯಾರಾಗಿದ್ದಾನೆ? ಒಂದು ಶಬ್ದಕೋಶವು ಸ್ನೇಹಿತ ಎಂಬ ಪದಕ್ಕೆ, “ವಾತ್ಸಲ್ಯ ಅಥವಾ ಗೌರವದಿಂದಾಗಿ ಇನ್ನೊಬ್ಬ ವ್ಯಕ್ತಿಯನ್ನು ಹಚ್ಚಿಕೊಂಡಿರುವವನು” ಎಂಬ ಅರ್ಥಕೊಡುತ್ತದೆ. ಒಬ್ಬ ನಿಜ ಸ್ನೇಹಿತನು ನಿಮ್ಮ ಮನಸ್ಸನ್ನು ಒಳ್ಳೆಯ ವಿಚಾರಗಳ ಕಡೆಗೆ ಸೆಳೆಯಬಲ್ಲನು. ಕಷ್ಟದ ಸಮಯದಲ್ಲಿ ಅವನು ನಿಮ್ಮನ್ನು ಹುರಿದುಂಬಿಸಿ, ನಿಮ್ಮ ಭರವಸೆಯನ್ನು ಕಟ್ಟುತ್ತಾನೆ. ನಿಮ್ಮ ಸುಖದುಃಖಗಳಲ್ಲಿ ಅವನೂ ಭಾಗಿಯಾಗುತ್ತಾನೆ. ರಾಜ ಸೊಲೊಮೋನನು ಹೇಳಿದ್ದು: “ಒಬ್ಬ ನಿಜ ಸಂಗಾತಿಯು ಯಾವಾಗಲೂ ಪ್ರೀತಿಸುತ್ತಾನೆ, ಮತ್ತು ಆಪತ್ತಿನ ಸಮಯದಲ್ಲಿ ಸಹಾಯಮಾಡಲಿಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ.” (ಜ್ಞಾನೋಕ್ತಿ 17:​17, NW) ಸಮಯವು ದಾಟಿದಂತೆ, ಭೌತಿಕ ವಸ್ತುಗಳ ಮೌಲ್ಯವು ಕಡಿಮೆಯಾಗುತ್ತದೆ. ಆದರೆ ನಿಜ ಸ್ನೇಹವಾದರೊ ಸಮಯ ದಾಟಿದಂತೆ ಇನ್ನೂ ಬಲಗೊಳ್ಳುತ್ತದೆ.

ಕ್ರೈಸ್ತರು ತಮ್ಮ ಪ್ರೀತಿಯನ್ನು ‘ವಿಶಾಲಗೊಳಿಸು’ವಂತೆ ಶಾಸ್ತ್ರಗಳು ಉತ್ತೇಜಿಸುತ್ತವೆ. (2 ಕೊರಿಂಥ 6:13) ಬೇರೆಯವರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಬುದ್ಧಿವಂತಿಕೆಯಾಗಿದೆ. ಪ್ರಸಂಗಿ 11:​1, 2ರಲ್ಲಿ ನಾವು ಹೀಗೆ ಓದುತ್ತೇವೆ: “ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು. ಏಳು ಮಂದಿಗೆ, ಹೌದು, ಎಂಟು ಮಂದಿಗೆ ಹಂಚಿಬಿಡು; ಲೋಕದಲ್ಲಿ ಮುಂದೆ ಸಂಭವಿಸುವ ಕೇಡು ನಿನಗೆ ಗೊತ್ತಿಲ್ಲ.” ಈ ಮೂಲತತ್ವವು ಸ್ನೇಹಕ್ಕೆ ಹೇಗೆ ಅನ್ವಯವಾಗುತ್ತದೆ? ನೀವು ಈಗಾಗಲೇ ಅನೇಕ ವ್ಯಕ್ತಿಗಳೊಂದಿಗೆ ಸ್ನೇಹವನ್ನು ಬೆಳೆಸಿರುವಲ್ಲಿ, ಅವರಲ್ಲಿ ಕಡಿಮೆಪಕ್ಷ ಕೆಲವರು ನಿಮ್ಮ ಸಂಕಷ್ಟದ ಸಮಯದಲ್ಲಿ ನಿಮ್ಮ ನೆರವಿಗೆ ಬರುವರು.

ನಿಜ ಸ್ನೇಹಿತರು ಇನ್ನೊಂದು ವಿಧದಲ್ಲೂ ನಿಮಗೆ ಸಂರಕ್ಷಣೆಯಾಗಿದ್ದಾರೆ. “ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ; ಶತ್ರುವಿನ ಮುದ್ದುಗಳು ಹೇರಳವಾಗಿವೆ” ಎಂದು ಜ್ಞಾನೋಕ್ತಿ 27:6 ಹೇಳುತ್ತದೆ. ನಿಮ್ಮನ್ನು ಕೊಂಡಾಡುವ ಜನರಿಗೆ ಬರವೇ ಇಲ್ಲ. ಆದರೆ ಕೇವಲ ನಿಮ್ಮ ನಿಜ ಸ್ನೇಹಿತರು ಮಾತ್ರ, ನಿಮ್ಮಲ್ಲಿ ಗಂಭೀರವಾದ ದೋಷವಿರುವಲ್ಲಿ ಅದನ್ನು ನಿಮ್ಮ ಗಮನಕ್ಕೆ ತಂದು, ಪ್ರೀತಿಪರವಾದ ರೀತಿಯಲ್ಲಿ ನಿಮಗೆ ಸಹಾಯಮಾಡುವ ಸಲಹೆಯನ್ನು ಕೊಡುವರು.​—⁠ಜ್ಞಾನೋಕ್ತಿ 28:⁠23.

ಒಳ್ಳೆಯ, ಆಪ್ತ ಮಿತ್ರರು ಬಹು ಅಪರೂಪದ ಕೊಡುಗೆಗಳಂತಿರುತ್ತಾರೆ. ಅವರು ನಿಮ್ಮ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಬಲ್ಲರು. ಅಪೊಸ್ತಲರ ಕೃತ್ಯಗಳ ಪುಸ್ತಕದ 10ನೆಯ ಅಧ್ಯಾಯದಲ್ಲಿ, ನಾವು ರೋಮಿನ ಸೇನಾಪತಿ ಕೊರ್ನೇಲ್ಯನ ಜೀವಿತದಲ್ಲಿ ನಡೆದ ಒಂದು ಘಟನೆಯ ಕುರಿತಾಗಿ ಓದಬಹುದು. ಅವನ ಪ್ರಾರ್ಥನೆಗಳನ್ನು ದೇವರು ಕೇಳಿಸಿಕೊಂಡಿದ್ದಾನೆಂದು ಒಬ್ಬ ದೇವದೂತನು ಅವನಿಗೆ ಹೇಳುತ್ತಾನೆ. ಆಗ ಕೊರ್ನೇಲ್ಯನು ಅಪೊಸ್ತಲ ಪೇತ್ರನ ಭೇಟಿಯನ್ನು ನಿರೀಕ್ಷಿಸುತ್ತಾ, “ತನ್ನ ಬಂಧುಬಳಗದವರನ್ನೂ ಪ್ರಾಣಮಿತ್ರರನ್ನೂ ಕೂಡ ಕರಿ”ಸುತ್ತಾನೆ. ಹೀಗೆ ಕೊರ್ನೇಲ್ಯನ ಈ ಪ್ರಾಣಮಿತ್ರರು ಸುವಾರ್ತೆಯನ್ನು ಕೇಳಿ, ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು, ದೇವರ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಆಳುವ ನಿರೀಕ್ಷೆಯನ್ನು ಹೊಂದಿದ ಸುನ್ನತಿಯಾಗದ ಅನ್ಯಜಾತಿಯ ಜನರಲ್ಲಿ ಪ್ರಪ್ರಥಮ ವ್ಯಕ್ತಿಗಳಾದರು. ಆದುದರಿಂದ ಕೊರ್ನೇಲ್ಯನ ಪ್ರಾಣಸ್ನೇಹಿತರಿಗೆ ಇದು ಎಂತಹ ಒಂದು ಆಶೀರ್ವಾದವಾಗಿತ್ತು!​—⁠ಅ. ಕೃತ್ಯಗಳು 10:​24, 44.

ಆದರೆ ನೀವು ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಹುದು? ಸ್ನೇಹದ ಕುರಿತಾಗಿ ಬಹಳಷ್ಟನ್ನು ತಿಳಿಸುವ ಬೈಬಲ್‌ ವ್ಯಾವಹಾರಿಕ ಸಲಹೆಯನ್ನು ಸಹ ಕೊಡುತ್ತದೆ. (ಕೆಳಗಿನ ರೇಖಾಚೌಕವನ್ನು ನೋಡಿ.)

ನಿಜ ಸ್ನೇಹಿತರನ್ನು ಮಾಡಿಕೊಳ್ಳಬಹುದಾದ ಸ್ಥಳ

ನಿಜ ಸ್ನೇಹಿತರನ್ನು ಮಾಡಿಕೊಳ್ಳಬಹುದಾದ ಅತ್ಯುತ್ತಮ ಸ್ಥಳವು ಕ್ರೈಸ್ತ ಸಭೆಯಾಗಿದೆ. ಮೊದಲಾಗಿ, ನೀವು ನಿಮ್ಮ ಸೃಷ್ಟಿಕರ್ತನೂ, ಸ್ವರ್ಗೀಯ ತಂದೆಯೂ ಆಗಿರುವ ಯೆಹೋವನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಿರಿ. ಅಷ್ಟುಮಾತ್ರವಲ್ಲದೆ, ನೀವು ನಿಮ್ಮ ವಿಮೋಚಕನಾಗಿರುವ ಯೇಸು ಕ್ರಿಸ್ತನೊಂದಿಗೂ ಸ್ನೇಹಿತರಾಗಬಹುದು. ತನ್ನ ಸ್ನೇಹಿತರಾಗಿರುವಂತೆ ನಿಮಗೆ ಆಮಂತ್ರಣ ಕೊಡುವ ಯೇಸು, “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ” ಎಂದು ಹೇಳುತ್ತಾನೆ. (ಯೋಹಾನ 15:13, 15) ಯೆಹೋವ ಮತ್ತು ಯೇಸು ಕ್ರಿಸ್ತನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವ ಮೂಲಕ, ಅವರು “ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು” ಎಂಬ ಆಶ್ವಾಸನೆ ನಿಮಗಿರಬಲ್ಲದು. ಹೌದು, ಯೆಹೋವ ಮತ್ತು ಯೇಸುವಿನೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದರಿಂದ ನಿತ್ಯಜೀವವು ಸಿಗುವುದು.​—⁠ಲೂಕ 16:9; ಯೋಹಾನ 17:⁠3.

ಅವರ ಪ್ರೀತಿಭರಿತ ಸ್ನೇಹವನ್ನು ನೀವು ಹೇಗೆ ಪಡೆದುಕೊಳ್ಳಬಹುದು? ಯೆಹೋವನ ಸ್ನೇಹಿತರಲ್ಲಿ ಒಬ್ಬರೋಪಾದಿ ಆತನ ಗುಡಾರದಲ್ಲಿ ಇಳುಕೊಳ್ಳಲು ಆತನ ಆವಶ್ಯಕತೆಗಳನ್ನು ಕೀರ್ತನೆ 15ರಲ್ಲಿ ಪಟ್ಟಿಮಾಡಲಾಗಿದೆ. ಬೈಬಲನ್ನು ತೆರೆದು, ಆ ಕೀರ್ತನೆಯ ಐದು ವಚನಗಳನ್ನು ಓದಿರಿ. ಇದಕ್ಕೆ ಕೂಡಿಸಿ ಯೇಸು ಕ್ರಿಸ್ತನು ಹೇಳಿದ್ದು: “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು.”​—⁠ಯೋಹಾನ 15:⁠14.

ಹೌದು, ದೇವರ ವಾಕ್ಯವಾಗಿರುವ ಬೈಬಲಿನಲ್ಲಿರುವ ನಿರ್ದೇಶನವನ್ನು ಶ್ರದ್ಧೆಯಿಂದ ಅಭ್ಯಾಸಿಸಿ, ಅನ್ವಯಿಸಿಕೊಳ್ಳುವ ಮೂಲಕ, ನೀವು ಯೆಹೋವ ಮತ್ತು ಯೇಸುವಿನ ಸ್ನೇಹಿತರಾಗಿರಲು ಬಯಸುತ್ತೀರೆಂದು ತೋರಿಸುತ್ತೀರಿ. ಇದಕ್ಕಾಗಿ ನೀವು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಬೇಕು. ಅಲ್ಲಿ ಯೆಹೋವ ದೇವರ ಕುರಿತಾದ ಜ್ಞಾನವನ್ನು ಹಂಚಲಾಗುತ್ತದೆ. ನಂಬಿಗಸ್ತಿಕೆಯಿಂದ ಯೆಹೋವನಿಗೆ ಕಿವಿಗೊಡುತ್ತಾ ಇರಿ. ಆಗ ನೀವು ಆತನಿಗೂ ಆತನ ಮಗನಿಗೂ ನಿಕಟರಾಗುವಿರಿ.

ಕೂಟಗಳಲ್ಲಿ ನೀವು ಬೇರೆ ವ್ಯಕ್ತಿಗಳೊಂದಿಗೂ ಪರಿಚಿತರಾಗಬಹುದು. ಇವರು ಯೆಹೋವನನ್ನು ಪ್ರೀತಿಸುವವರಾಗಿದ್ದಾರೆ. ಮತ್ತು ತಮ್ಮ ಜೀವಿತದಲ್ಲಿ, ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಎಂಬ ಆತ್ಮದ ಫಲಗಳನ್ನು ಪ್ರದರ್ಶಿಸುತ್ತಾರೆ. (ಗಲಾತ್ಯ 5:​22, 23) ನೀವು ನಿಜವಾಗಿಯೂ ಸ್ನೇಹಿತರನ್ನು ಮಾಡಿಕೊಂಡು ಒಂಟಿತನವನ್ನು ಹೊಡೆದೋಡಿಸಲು ಬಯಸುವುದಾದರೆ ಪ್ರತಿ ವಾರ ತಪ್ಪದೆ ಕ್ರೈಸ್ತ ಕೂಟಗಳಿಗೆ ಹಾಜರಾಗಿರಿ. ಹೀಗೆ ಮಾಡುವುದರಿಂದ, ನೀವು ದೇವರ ಆಶೀರ್ವದಿತ ಜನರೊಂದಿಗೆ ಬಾಳುವಂಥ ಸ್ನೇಹವನ್ನು ಬೆಳೆಸಿಕೊಳ್ಳಲಿಕ್ಕಾಗಿ, ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿರುವಿರಿ.

ಸದಾ ಸ್ನೇಹಿತರು

ನಿಜ ಸ್ನೇಹವು ಯೆಹೋವ ದೇವರಿಂದ ಬಂದಿರುವ ಒಂದು ಅದ್ಭುತಕರವಾದ ಕೊಡುಗೆಯಾಗಿದೆ. ಅದು ಯೆಹೋವನ ವ್ಯಕ್ತಿತ್ವ ಮತ್ತು ಸ್ವಭಾವದಿಂದಾಗಿಯೇ ಅಸ್ತಿತ್ವಕ್ಕೆ ಬಂದಿದೆ. ಆತನ ಪ್ರೀತಿಪರ ಮತ್ತು ಉದಾರ ಮನೋಭಾವದಿಂದಾಗಿ, ಆತನು ಈ ಭೂಮಿಯನ್ನು ಬುದ್ಧಿವಂತ ಜೀವಿಗಳಿಂದ ತುಂಬಿಸಿದ್ದಾನೆ. ಅವರೊಂದಿಗೆ ನೀವು ಸ್ನೇಹವನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ. ಜೊತೆ ಕ್ರೈಸ್ತರೊಂದಿಗೆ ಸಹವಾಸಮಾಡಿರಿ. ಅವರನ್ನು ಉತ್ತೇಜಿಸಿರಿ. ಶುಶ್ರೂಷೆಯಲ್ಲಿ ಅವರೊಂದಿಗೆ ಕೆಲಸಮಾಡಿರಿ. ಅವರೊಂದಿಗೆ ಮತ್ತು ಅವರಿಗಾಗಿ ಕ್ರಮವಾಗಿ ಪ್ರಾರ್ಥಿಸಿರಿ. ನೀವು ಹೀಗೆ ಮಾಡುವಲ್ಲಿ, ಯೆಹೋವನನ್ನೂ ಆತನ ಮಗನಾದ ಯೇಸು ಕ್ರಿಸ್ತನನ್ನೂ ಅನುಕರಿಸುತ್ತಿರುವಿರಿ.

ಸ್ನೇಹವು ಒಂದು ಕೊಡುಗೆಯಾಗಿರುವುದರಿಂದ ಅದನ್ನು ಎಲ್ಲರೂ ಕೊಡಬಲ್ಲರು ಮತ್ತು ತೆಗೆದುಕೊಳ್ಳಬಲ್ಲರು. ಬೇಗನೆ ಭವಿಷ್ಯತ್ತಿನಲ್ಲಿ ನೀವು ನಿಮ್ಮ ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸಬಲ್ಲಿರಿ. ಈಗ ಜೀವಿಸುತ್ತಿರುವ ಲಕ್ಷಾಂತರ ಜನರೊಂದಿಗೆ ಮಾತ್ರವಲ್ಲ, ಗತಕಾಲದಲ್ಲಿ ಸತ್ತು ‘ಮರಣವಿಲ್ಲದಿರುವ’ ಸಮಯದಲ್ಲಿ ಪುನರುತ್ಥಾನವಾಗುವವರೊಂದಿಗೂ ನೀವು ಸ್ನೇಹವನ್ನು ಬೆಳೆಸಿಕೊಳ್ಳಬಹುದು. (ಪ್ರಕಟನೆ 21:4; ಯೋಹಾನ 5:​28, 29) ಸ್ನೇಹಭಾವದವರಾಗಿರಲು ಈಗಲೇ ಪ್ರಯತ್ನಿಸಿರಿ ಮತ್ತು ಯೆಹೋವನನ್ನು ಪ್ರೀತಿಸುವವರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿರಿ. ದೇವರ ಪ್ರೇರಿತ ವಾಕ್ಯಕ್ಕೆ ಕಿವಿಗೊಡುವ ಮೂಲಕ ಯೆಹೋವ ದೇವರೊಂದಿಗೆ ಮತ್ತು ಯೇಸು ಕ್ರಿಸ್ತನೊಂದಿಗೆ ಸ್ನೇಹವನ್ನು ಕಾಪಾಡಿಕೊಂಡಿರಿ. ಆಗ ಅನಂತಾನಂತಕಾಲಕ್ಕೂ ನೀವು ಒಂಟಿತನವೆಂಬ ಕೊರಗಿನಿಂದ ನರಳದಿರುವಿರಿ.

[ಪುಟ 22, 23ರಲ್ಲಿರುವ ಚೌಕ/ಚಿತ್ರಗಳು]

ಬಾಳುವಂತಹ ಸ್ನೇಹಕ್ಕಾಗಿ ಆರು ಸೂತ್ರಗಳು

1. ಸ್ವತಃ ಒಬ್ಬ ಸ್ನೇಹಿತರಾಗಿರಿ. ಅಬ್ರಹಾಮನ ಅಚಲವಾದ ನಂಬಿಕೆಗಾಗಿ ಅವನನ್ನು ‘ದೇವರ ಸ್ನೇಹಿತ’ ಎಂದು ಕರೆಯಲಾಯಿತು. (ಯಾಕೋಬ 2:23) ಆದರೆ ಇದಕ್ಕೆ ಇನ್ನೊಂದು ಕಾರಣವೂ ಇತ್ತು. ಅದೇನೆಂದರೆ, ದೇವರಿಗಾಗಿ ತನ್ನಲ್ಲಿದ್ದ ಪ್ರೀತಿಯನ್ನು ಅವನು ತೋರಿಸಿದನೆಂದು ಬೈಬಲ್‌ ಹೇಳುತ್ತದೆ. (2 ಪೂರ್ವಕಾಲವೃತ್ತಾಂತ 20:⁠7) ಅವನೇ ಪ್ರಥಮಹೆಜ್ಜೆಯನ್ನು ತೆಗೆದುಕೊಂಡು, ಯೆಹೋವನಿಗೆ ತನ್ನ ಮನಸ್ಸಿನಲ್ಲಿದ್ದ ವಿಚಾರಗಳನ್ನು ತಿಳಿಸಿದನು. (ಆದಿಕಾಂಡ 18:​20-33) ಹೌದು, ನಿಮ್ಮ ಸ್ನೇಹದ ರುಜುವಾತನ್ನು ಕೊಡಲು ನೀವು ಪ್ರಥಮಹೆಜ್ಜೆಯನ್ನು ತೆಗೆದುಕೊಳ್ಳಬೇಕು. ಯೇಸು ಹೇಳಿದ್ದು: “ಕೊಡಿರಿ, ಆಗ ನಿಮಗೂ ಕೊಡುವರು.” (ಲೂಕ 6:38) ಹುರಿದುಂಬಿಸುವಂಥ ಮಾತುಗಳು ಅಥವಾ ಸಹಾಯಹಸ್ತವನ್ನು ನೀಡುವುದು, ದೊಡ್ಡ ಹೆಮ್ಮರವಾಗಿ ಬೆಳೆಯುವಂಥ ಸ್ನೇಹಕ್ಕೆ ಒಂದು ಬೀಜದಂತಿರಬಲ್ಲದು. ಅಮೆರಿಕದ ಪ್ರಬಂಧಕಾರ ರಾಲ್ಫ್‌ ವ್ಯಾಲ್ಡೊ ಎಮರ್‌ಸನ್‌ ಒಮ್ಮೆ ಹೀಗಂದರು: “ಒಬ್ಬ ಸ್ನೇಹಿತನನ್ನು ಪಡೆದುಕೊಳ್ಳುವ ಒಂದೇ ಒಂದು ವಿಧವು, ನೀವೇ ಒಬ್ಬ ಸ್ನೇಹಿತರಾಗಿರಬೇಕು.”

2. ಸ್ನೇಹವನ್ನು ಬೆಳೆಸಲಿಕ್ಕಾಗಿ ಸಮಯ ಕೊಡಿ. ಹೆಚ್ಚಿನವರಿಗೆ ಸ್ನೇಹದಿಂದ ಸಿಗುವ ಪ್ರಯೋಜನಗಳು ಬೇಕು. ಆದರೆ ಅದಕ್ಕಾಗಿ ಅವರು ಸಮಯವನ್ನು ಕೊಡುವುದಿಲ್ಲ. ಅವರು ತೀರ ಕಾರ್ಯಮಗ್ನರಾಗಿರುತ್ತಾರೆ. ಆದರೆ ನಾವು ಬೇರೆಯವರ ಸಂತೋಷ ಮತ್ತು ದುಃಖ, ಯಶಸ್ಸು ಮತ್ತು ವೈಫಲ್ಯದಲ್ಲಿ ಭಾಗಿಗಳಾಗಬೇಕೆಂದು ರೋಮಾಪುರ 12:​15, 16 ಉತ್ತೇಜಿಸುತ್ತದೆ. ಅದು ಹೇಳುವುದು: “ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ. ನಿಮ್ಮ ನಿಮ್ಮೊಳಗೆ ಏಕಮನಸ್ಸುಳ್ಳವರಾಗಿರ್ರಿ.” ಯೇಸು ಕ್ರಿಸ್ತನು ಸಹ ಒಬ್ಬ ಕಾರ್ಯಮಗ್ನ ವ್ಯಕ್ತಿಯಾಗಿದ್ದರೂ ತನ್ನ ಸ್ನೇಹಿತರಿಗೋಸ್ಕರ ಸಮಯ ಕೊಟ್ಟನು. (ಮಾರ್ಕ 6:​31-34) ಇದನ್ನು ಮನಸ್ಸಿನಲ್ಲಿಡಿ: ಸ್ನೇಹವು, ಹೂಬಿಡುವ ಸಸಿಯಂತಿದೆ. ಅದರಲ್ಲಿ ಹೂವುಗಳು ಅರಳಿ ನಳನಳಿಸಬೇಕಾದರೆ, ಅದಕ್ಕೆ ನೀರು ಹಾಕಬೇಕು ಮತ್ತು ಚೆನ್ನಾಗಿ ನೋಡಿಕೊಳ್ಳಬೇಕು. ಮತ್ತು ಇದಕ್ಕೆ ಸಮಯ ಹಿಡಿಯುತ್ತದೆ.

3. ಇತರರು ಮಾತಾಡುವಾಗ ಗಮನಕೊಡಿ. ಚೆನ್ನಾಗಿ, ಗಮನಕೊಟ್ಟು ಆಲಿಸುವವರಿಗೆ ಸ್ನೇಹಿತರನ್ನು ಮಾಡಿಕೊಳ್ಳುವುದು ಹೆಚ್ಚು ಸುಲಭ. ಶಿಷ್ಯನಾದ ಯಾಕೋಬನು ಹೇಳಿದ್ದು: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ.” (ಯಾಕೋಬ 1:19) ನೀವು ಇತರರೊಂದಿಗೆ ಸಂಭಾಷಿಸುತ್ತಿರುವಾಗ, ಅವರ ಭಾವನೆಗಳ ಕುರಿತು ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ. ಅವರು ತಮ್ಮ ಬಗ್ಗೆ ಮಾತಾಡುವಂತೆ ಉತ್ತೇಜಿಸಿರಿ. ಅವರಿಗೆ ಗೌರವವನ್ನು ತೋರಿಸುವುದರಲ್ಲಿ ಮೊದಲಿಗರಾಗಿರಿ. (ರೋಮಾಪುರ 12:10) ನೀವು ಹೀಗೆ ಮಾಡಿದರೆ, ಅವರು ನಿಮ್ಮೊಂದಿಗಿರಲು ಬಯಸುವರು. ಇದರ ಬದಲು, ಪ್ರತಿಯೊಂದು ಸಂಭಾಷಣೆಯಲ್ಲಿ ನೀವೇ ಮಾತಾಡುತ್ತಾ ಹೋದರೆ ಅಥವಾ ಯಾವಾಗಲೂ ನಿಮ್ಮ ಕಡೆಗೆ ಗಮನ ಸೆಳೆಯುತ್ತಿರುವುದಾದರೆ, ಯಾರೂ ನಿಮಗೆ ಕಿವಿಗೊಡಲು ಮನಸ್ಸುಮಾಡಲಿಕ್ಕಿಲ್ಲ ಅಥವಾ ನಿಮ್ಮ ಭಾವನೆಗಳು ಮತ್ತು ಅಗತ್ಯಗಳ ಕುರಿತಾಗಿ ಆಸಕ್ತಿವಹಿಸಲಿಕ್ಕಿಲ್ಲ.

4. ಕ್ಷಮಿಸುವವರಾಗಿರಿ. ‘ಏಳೆಪ್ಪತ್ತು ಸಾರಿ’ ಕ್ಷಮಿಸಲು ಸಿದ್ಧನಿರಬೇಕೆಂದು ಒಮ್ಮೆ ಯೇಸು ಪೇತ್ರನಿಗೆ ಹೇಳಿದನು. (ಮತ್ತಾಯ 18:​21, 22) ಒಬ್ಬ ನಿಜ ಸ್ನೇಹಿತನು, ಚಿಕ್ಕಪುಟ್ಟ ತಪ್ಪುಗಳನ್ನು ಬೇಗನೆ ಕ್ಷಮಿಸಿಬಿಡುವನು. ದೃಷ್ಟಾಂತಕ್ಕಾಗಿ: ದಾಳಿಂಬೆಹಣ್ಣಿನಲ್ಲಿ ತುಂಬ ಬೀಜಗಳಿವೆ ಎಂಬ ಕಾರಣಕ್ಕಾಗಿ ಕೆಲವರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಈ ಫಲವನ್ನು ಇಷ್ಟಪಡುವವರು, ಆ ಬೀಜಗಳನ್ನು ಲೆಕ್ಕಿಸುವುದಿಲ್ಲ. ಹಾಗೆಯೇ, ನಿಜ ಸ್ನೇಹಿತರು ಪರಸ್ಪರರನ್ನು ತಮ್ಮ ಒಳ್ಳೆಯ ಗುಣಗಳಿಗೋಸ್ಕರ ಪ್ರೀತಿಸುತ್ತಾರೆ. ಅವರಲ್ಲಿರುವ ಚಿಕ್ಕಪುಟ್ಟ ದೋಷಗಳಿಗೆ ಅಷ್ಟೊಂದು ಗಮನಕೊಡಲಾಗುವುದಿಲ್ಲ. ಪೌಲನು ಸಹ ನಮ್ಮನ್ನು ಹೀಗೆ ಉತ್ತೇಜಿಸುತ್ತಾನೆ: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ.” (ಕೊಲೊಸ್ಸೆ 3:13) ಯಾರು ಕ್ಷಮಿಸಲು ಕಲಿಯುತ್ತಾರೊ ಅವರು ತಮ್ಮ ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ.

5. ಇತರರ ಏಕಾಂತತೆಯನ್ನು ಗೌರವಿಸಿ. ಎಲ್ಲರೂ ಸ್ವಲ್ಪ ಸಮಯವನ್ನು ಏಕಾಂತದಲ್ಲಿ ಕಳೆಯಲು ಬಯಸುತ್ತಾರೆ. ಮತ್ತು ನಿಮ್ಮ ಸ್ನೇಹಿತರ ವಿಷಯದಲ್ಲೂ ಇದು ಸತ್ಯ. ಜ್ಞಾನೋಕ್ತಿ 25:17 ವಿವೇಕಯುತವಾಗಿ ಗಮನಿಸುವುದು: “ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.” ಆದುದರಿಂದ ನೀವು ಎಷ್ಟು ಸಲ ನಿಮ್ಮ ಸ್ನೇಹಿತರನ್ನು ಭೇಟಿಮಾಡುತ್ತೀರಿ ಮತ್ತು ಎಷ್ಟು ಸಮಯ ಅವರೊಂದಿಗಿರುತ್ತೀರಿ ಎಂಬ ವಿಷಯದಲ್ಲಿ ಮಿತಿಯಿರಲಿ. ಅವರ ಮೇಲೆ ಒಡೆತನ ನಡೆಸಬೇಡಿರಿ. ಇದು ಅಸೂಯೆಗೆ ನಡೆಸುತ್ತದೆ. ನಿಮಗೆ ವೈಯಕ್ತಿಕವಾಗಿ ಇಷ್ಟವಾಗುವ ಸಂಗತಿಗಳನ್ನು ತಿಳಿಸುವಾಗ ಅಥವಾ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅಭಿಪ್ರಾಯಗಳೇನೆಂಬುದನ್ನು ವ್ಯಕ್ತಪಡಿಸುವಾಗ ವಿವೇಚನೆಯುಳ್ಳವರಾಗಿರಿ. ಇದು, ಒಂದು ಚೈತನ್ಯಕಾರಕ ಮತ್ತು ಸಂತೋಷತರುವ ಸ್ನೇಹಕ್ಕೆ ಸಹಾಯಮಾಡುತ್ತದೆ.

6. ಉದಾರಿಗಳಾಗಿರಿ. ಉದಾರಿಗಳಾಗಿರುವ ಮೂಲಕ ಸ್ನೇಹವನ್ನು ಬೆಳೆಸಿಕೊಳ್ಳಸಾಧ್ಯವಿದೆ. “ಉದಾರಿಗಳೂ, ಹಂಚಿಕೊಳ್ಳಲು ಸಿದ್ಧರೂ ಆಗಿರುವಂತೆ” (NW) ಅಪೊಸ್ತಲ ಪೌಲನು ಬುದ್ಧಿವಾದವನ್ನು ಕೊಡುತ್ತಾನೆ. (1 ತಿಮೊಥೆಯ 6:18) ನೀವೇನನ್ನು ಹಂಚಿಕೊಳ್ಳಬಹುದು? ಹುರಿದುಂಬಿಸುವಂಥ ಮಾತುಗಳನ್ನೇ. (ಜ್ಞಾನೋಕ್ತಿ 11:25) ಪ್ರಾಮಾಣಿಕವಾದ ಶ್ಲಾಘನೆ ಮತ್ತು ಭರವಸೆ ಮೂಡಿಸುವಂಥ ಮಾತುಗಳ ವಿಷಯದಲ್ಲಿ ಉದಾರಿಗಳಾಗಿರಿ. ಇತರರ ಕ್ಷೇಮದ ಕುರಿತಾಗಿ ನೀವು ನಿಜವಾದ ಆಸಕ್ತಿಯನ್ನು ತೋರಿಸುವಾಗ, ಅವರು ನಿಮ್ಮ ಕಡೆಗೆ ಆಕರ್ಷಿಸಲ್ಪಡುವರು. ಅವರು ನಿಮಗಾಗಿ ಏನು ಮಾಡಬಲ್ಲರೆಂಬುದರ ಕುರಿತಾಗಿ ಯೋಚಿಸದೇ, ನೀವು ಅವರಿಗಾಗಿ ಏನನ್ನು ಮಾಡಬಹುದೆಂಬುದರ ಕುರಿತಾಗಿ ಯೋಚಿಸಿರಿ.