ಕ್ರಿಸ್ಮಸ್ ಸಂಪ್ರದಾಯಗಳು ಕ್ರೈಸ್ತ ಸಂಪ್ರದಾಯಗಳೋ?
ಕ್ರಿಸ್ಮಸ್ ಸಂಪ್ರದಾಯಗಳು ಕ್ರೈಸ್ತ ಸಂಪ್ರದಾಯಗಳೋ?
ಕ್ರಿಸ್ಮಸ್ ಸಮಯವು ಬಂತು. ಹೀಗಂದಾಗ ನಿಮಗೆ, ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ಪರಿಚಯಸ್ಥರಿಗೆ ಏನನಿಸುತ್ತದೆ? ಇದು ಒಂದು ಆತ್ಮಿಕ ವಿಷಯಗಳನ್ನು ಪರಿಗಣಿಸುವ ಸಂದರ್ಭವೋ ಇಲ್ಲವೆ ಕೇವಲ ಹಬ್ಬದ ಸಡಗರಸಂಭ್ರಮವೋ? ಯೇಸು ಕ್ರಿಸ್ತನ ಜನನದ ಕುರಿತು ಪರಿಶೀಲಿಸಿ ನೋಡುವ ಸಮಯವೋ ಇಲ್ಲವೆ ಕ್ರೈಸ್ತ ಸಂಪ್ರದಾಯಗಳ ಕುರಿತು ಚಿಂತೆಮಾಡದೇ ಇರುವ ಸಮಯವೋ?
ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವಾಗ, ನೀವು ಎಲ್ಲಿ ಜೀವಿಸುತ್ತೀರೋ ಆ ಸ್ಥಳಕ್ಕನುಸಾರ ಕ್ರಿಸ್ಮಸ್ ಸಂಪ್ರದಾಯಗಳು ಭಿನ್ನವಾಗಿರುತ್ತವೆ ಎಂಬುದನ್ನು ಮನದಲ್ಲಿಟ್ಟುಕೊಳ್ಳಿರಿ. ಉದಾಹರಣೆಗೆ, ಮೆಕ್ಸಿಕೊ ಹಾಗೂ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಕ್ರಿಸ್ಮಸ್ ಎಂಬ ಹೆಸರು ಸಹ ಬೇರೆಯಾಗಿದೆ. ಕ್ರಿಸ್ಮಸ್ ಎಂಬ ಇಂಗ್ಲಿಷ್ ಹೆಸರು “ಕ್ರಿಸ್ಟಸ್ ಮಾಸೆ, ಕ್ರಿಸ್ತನ ಮಾಸ್ ಎಂಬ ಪದದಿಂದ ಬಂದಿದೆ.” ಆದರೆ, ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಲಾ ನಾವೀಡಾಡ್ ಅಥವಾ ಜನನ ಎಂದು ಕರೆಯಲ್ಪಡುವ ಹೆಸರು, ಕ್ರಿಸ್ತನ ಜನನಕ್ಕೆ ಸೂಚಿಸುತ್ತದೆ. ಮೆಕ್ಸಿಕೊ ದೇಶದಲ್ಲಿ ಯಾವ ರೀತಿಯ ಸಂಪ್ರದಾಯಗಳಿವೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಿರಿ. ಇದು ಈ ಕ್ರಿಸ್ಮಸ್ ರಜೆಯ ಕಾಲದ ಕುರಿತಾಗಿ ನಿಮ್ಮ ಸ್ವಂತ ಅಭಿಪ್ರಾಯವನ್ನು ರೂಪಿಸಲು ಸಹಾಯಮಾಡುವುದು.
ಪೋಸಾಡಾಸ್, “ಮೂವರು ಜ್ಞಾನಿ ಪುರುಷರು,” ಮತ್ತು ನ್ಯಾಸಿಮಯಂಟೋ
ಪೋಸಾಡಾಸ್‌ನೊಂದಿಗೆ ಕ್ರಿಸ್ಮಸ್ ಹಬ್ಬವು ಡಿಸೆಂಬರ್ 16ರಂದು ಪ್ರಾರಂಭವಾಗುತ್ತದೆ. ಮೆಕ್ಸಿಕೊಸ್ ಫೀಸ್ಟ್ ಆಫ್ ಲೈಫ್ ಪುಸ್ತಕವು ಈ ಹೇಳಿಕೆಯನ್ನು ನೀಡುತ್ತದೆ: “ಕ್ರಿಸ್ಮಸ್ ಹಬ್ಬದ ಹಿಂದಿನ ದಿನದ ತನಕ ನಡೆಯುವ ಪೋಸಾಡಾಸ್ ಆಚರಣೆಯು ಸುಮಾರು ಒಂಬತ್ತು ಮಂತ್ರಮುಗ್ಧಗೊಳಿಸುವ ದಿನಗಳ ಒಂದು ಕಾರ್ಯಕ್ರಮವಾಗಿರುತ್ತದೆ. ಇವು ಬೆತ್ಲೆಹೇಮಿನಲ್ಲಿ ಒಂಟಿಯಾಗಿ ಯೋಸೇಫನೂ ಮರಿಯಳೂ ಅಲೆದಾಡುತ್ತಿರುವ ಹಾಗೂ ಕೊನೆಗೂ ದಯೆಯನ್ನು ಪಡೆದುಕೊಂಡ ಮತ್ತು ಉಳಿದುಕೊಳ್ಳಲು ಒಂದಿಷ್ಟು ಸ್ಥಳವನ್ನು ಕಂಡುಕೊಂಡ ಸಂದರ್ಭವನ್ನು ಆಚರಿಸುವ ಕಾರ್ಯಕ್ರಮವಾಗಿದೆ. ಹೀಗೆ, ಕ್ರಿಸ್ತನ ಹುಟ್ಟುಹಬ್ಬಕ್ಕೆ ಮುಂಚೆ ಇದನ್ನು ಕುಟುಂಬಗಳು ಹಾಗೂ ಸ್ನೇಹಿತರು ಸೇರಿಕೊಂಡು ರಾತ್ರಿಯ ಹೊತ್ತಿನಲ್ಲಿ ಪುನರ್‌ಅಭಿನಯಿಸುತ್ತಾರೆ.
ಸಾಂಪ್ರದಾಯಿಕವಾಗಿ, ಜನರ ಗುಂಪೊಂದು ಸೇರಿಕೊಂಡು ಮೇರಿ ಹಾಗೂ ಯೋಸೇಫನ ಮೂರ್ತಿಗಳನ್ನು ಮನೆಗೆ ಹೊತ್ತುಕೊಂಡು ಹೋಗುತ್ತಾರೆ. ಮತ್ತು ಹಾಡಿನಲ್ಲಿ ಅವರು ಉಳಿಯಲು ಸ್ಥಳವನ್ನು ಇಲ್ಲವೆ ಪೋಸಾಡಾ ಅನ್ನು ಕೇಳುತ್ತಾರೆ. ಆಗ ಆ ಮನೆಯಲ್ಲಿರುವವರು ಹಾಡಿನ ಮೂಲಕ ಅವರಿಗೆ ಜವಾಬನ್ನು ನೀಡುತ್ತಾರೆ. ಅನಂತರ ಅವರನ್ನು ಮನೆಯೊಳಗೆ ಬರಲು ಬಿಡಲಾಗುತ್ತದೆ. ಅನಂತರ ಪಾರ್ಟಿ ಶುರುವಾಗುತ್ತದೆ. ಕೆಲವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಹಗ್ಗಕ್ಕೆ ಸಿಕ್ಕಿಸಲ್ಪಟ್ಟಿರುವ ಸಿಂಗರಿಸಿದ ಮಣ್ಣಿನ ಪಾತ್ರೆಯಾದ ಪಿನಾಟವನ್ನು ಕೋಲಿನಿಂದ ಒಡೆದುಹಾಕಲು ಪ್ರಯತ್ನಿಸುತ್ತಾರೆ. ಅದನ್ನು ಒಡೆದ ಬಳಿಕ, ಅದರಲ್ಲಿರುವ (ಚಾಕ್‌ಲೇಟ್, ಹಣ್ಣು, ಇನ್ನೂ ಮುಂತಾದ) ವಸ್ತುಗಳನ್ನು ಅಲ್ಲಿ ಕೂಡಿಬಂದಿರುವವರು ತೆಗೆದುಕೊಳ್ಳುತ್ತಾರೆ. ಇದರ ನಂತರ ತಿಂಡಿ-ತೀರ್ಥ, ಹಾಡು-ಕುಣಿತ ಆರಂಭವಾಗುತ್ತದೆ. ಡಿಸೆಂಬರ್ 16ರಿಂದ ಡಿಸೆಂಬರ್ 23ರ ವರೆಗೆ ಎಂಟು ಪೋಸಾಡಾ ಪಾರ್ಟಿಗಳು ನಡೆಸಲ್ಪಡುತ್ತವೆ. 24ನೇ ತಾರೀಖು ನಾಚಿಬ್ವೆನಾ (ಕ್ರಿಸ್ಮಸ್‌ನ ಹಿಂದಿನ ದಿನ) ಆಚರಿಸಲ್ಪಡುತ್ತದೆ. ಅಲ್ಲಿ ಕುಟುಂಬದವರೆಲ್ಲರೂ ಒಟ್ಟಾಗಿ ಸೇರಿ ವಿಶೇಷ ಭೋಜನವನ್ನು ಸವಿಯುತ್ತಾರೆ.
ಇದಾದ ಮೇಲೆ ಹೊಸ ವರ್ಷವು ಆರಂಭವಾಗುತ್ತದೆ. ಆಗ ಎಲ್ಲೆಲ್ಲೂ ಗದ್ದಲದ ಪಾರ್ಟಿಗಳಿರುತ್ತವೆ. ಜನವರಿ 5ರ ಸಂಜೆ, ಟ್ರೆಸ್ ರೇಯಸ್ ಮಾಗೋಸ್ (“ಮೂವರು ಜ್ಞಾನಿ ಪುರುಷರು”) ಮಕ್ಕಳಿಗಾಗಿ ಆಟದ ಸಾಮಾನುಗಳನ್ನು ತರಬೇಕಾಗಿರುತ್ತದೆ. ಇದರ ಪರಮಾವಧಿಯು ಜನವರಿ 6ರಂದು ರಾಸ್ಕಾ ಡೆ ರೇಯಸ್ (ಬಳೆಯಾಕಾರದ ಕೇಕ್) ಅನ್ನು ನೀಡುವಾಗ ಆಗುವ ಪಾರ್ಟಿಯಾಗಿದೆ. ಈ ಕೇಕನ್ನು ತಿನ್ನುತ್ತಿರುವಾಗ, ಅವರಲ್ಲಿ ಯಾರಾದರೊಬ್ಬರು ಬಾಲಯೇಸುವಿನ ಒಂದು ಪುಟ್ಟ ಬೊಂಬೆಯನ್ನು ತಮ್ಮ ಕೇಕಿನ ತುಂಡಿನಲ್ಲಿ ಕಂಡುಕೊಳ್ಳುತ್ತಾರೆ. ಆ ಪುಟ್ಟ ಬೊಂಬೆ ಸಿಕ್ಕಿದ ವ್ಯಕ್ತಿಯು ಫೆಬ್ರವರಿ 2ರಂದು ಕೊನೆಯ ಪಾರ್ಟಿಯನ್ನು ಕೊಡಬೇಕು. (ಕೆಲವು ಸ್ಥಳಗಳಲ್ಲಿ ಮೂರು ಪುಟ್ಟ ಬೊಂಬೆಗಳನ್ನು ನೀಡಲಾಗುತ್ತದೆ. ಇದು ಆ ‘ಮೂವರು ಜ್ಞಾನಿ ಪುರುಷರನ್ನು’ ಚಿತ್ರಿಸುತ್ತದೆ.) ಹೀಗೆ ಕ್ರಿಸ್ಮಸ್ ಸಂಬಂಧದಲ್ಲಿ ಪಾರ್ಟಿಗೆ ಕೊನೆಯೇ ಇರುವುದಿಲ್ಲ.
ಈ ಅವಧಿಯಲ್ಲಿ, ನ್ಯಾಸಿಮಯಂಟೋ (ಯೇಸುವಿನ ಜನನದ ದೃಶ್ಯ) ಮಾಡುವುದು ಖ್ಯಾತಿ. ಇದರಲ್ಲಿ ಏನೆಲ್ಲ ಒಳಗೂಡಿರುತ್ತದೆ? ಸಾರ್ವಜನಿಕ ಸ್ಥಳಗಳಲ್ಲಿ, ಚರ್ಚುಗಳಲ್ಲಿ ಮತ್ತು ಮನೆಗಳಲ್ಲಿ, ಪಿಂಗಾಣಿ, ಮರ ಅಥವಾ ಮಣ್ಣಿನಿಂದ ಮಾಡಿದ (ದೊಡ್ಡ ಇಲ್ಲವೆ
ಚಿಕ್ಕ) ಮೂರ್ತಿಗಳನ್ನು ಇಡಲಾಗುತ್ತದೆ. ಇದು ಗೋದಲಿಯಲ್ಲಿ ಮಲಗಿರುವ ನವಜಾತ ಶಿಶುವಿನ ಮುಂದೆ ಯೇಸೇಫನೂ ಮರಿಯಳೂ ಮೊಣಕಾಲೂರಿ ಕುಳಿತಿರುವುದರ ಚಿತ್ರವಾಗಿರುತ್ತದೆ. ಅದರಲ್ಲಿ ಕುರುಬರು ಮತ್ತು ಲಾಸ್ ರೇಯಸ್ ಮಾಗೋಸ್ (“ಮೂವರು ಜ್ಞಾನಿ ಪುರುಷರು”) ಇರುತ್ತಾರೆ. ಆ ದೃಶ್ಯವು ಕೊಟ್ಟಿಗೆಯ ದೃಶ್ಯವಾಗಿದ್ದು, ಸುತ್ತಲೂ ಕೆಲವು ಪ್ರಾಣಿಗಳಿರುತ್ತವೆ. ಆದರೆ ಅದರಲ್ಲಿ ನವಜಾತ ಶಿಶುವೇ ಮುಖ್ಯವಾದದ್ದು. ಸ್ಪಾನಿಷ್‌ನಲ್ಲಿ ಎಲ್ ನೀನ್ಯೋ ಡೆ ಡ್ಯೂಸ್ (ದೇವಶಿಶು) ಎಂದು ಕರೆಯುತ್ತಾರೆ. ಈ ನವಜಾತ ಶಿಶುವಿನ ಮೂರ್ತಿಯನ್ನು ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಇಡುತ್ತಾರೆ.ಜನನ ಸಂಪ್ರದಾಯಗಳ ಕುರಿತ ಒಂದು ನಿಕಟ ನೋಟ
ಇಡೀ ಲೋಕಕ್ಕೆ ಗೊತ್ತಿರುವಂತೆ ಈ ಕ್ರಿಸ್ಮಸ್ ಹಬ್ಬದ ಬಗ್ಗೆ ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನಾ ಹೇಳುವುದು: “ಈಗ ಕ್ರಿಸ್ಮಸ್ ಹಬ್ಬದೊಂದಿಗೆ ಸಂಬಂಧಿಸಿರುವ ಸಂಪ್ರದಾಯಗಳಲ್ಲಿ ಹೆಚ್ಚಿನವು, ಮೂಲತಃ ಕ್ರಿಸ್ಮಸ್ ಸಂಪ್ರದಾಯಗಳಾಗಿರಲಿಲ್ಲ ಅದಕ್ಕೆ ಬದಲಾಗಿ ಅವು ಚರ್ಚು ತನ್ನದಾಗಿಸಿಕೊಂಡ ಕ್ರೈಸ್ತಪೂರ್ವ ಹಾಗೂ ಕ್ರೈಸ್ತೇತರ ಸಂಪ್ರದಾಯಗಳಾಗಿದ್ದವು. ಡಿಸೆಂಬರ್ ತಿಂಗಳಿನ ಮಧ್ಯಭಾಗದಲ್ಲಿ ಆಚರಿಸಲ್ಪಡುವ ರೋಮನ್ ಹಬ್ಬವಾದ ಸ್ಯಾಟರ್ನ್ ದೇವತೆಯ ಮಹೋತ್ಸವವು, ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮಜಾ ಮಾಡುವ ಕೆಲವು ಸಂಪ್ರದಾಯಗಳಿಗೆ ಮಾದರಿಯಾಯಿತು. ಇದರಿಂದಾಗಿಯೇ ಭರ್ಜರಿ ಔತಣ, ಕೊಡುಗೆಗಳನ್ನು ನೀಡುವುದು ಮತ್ತು ಕ್ಯಾಂಡಲ್‌ಗಳನ್ನು ಹಚ್ಚುವುದೆಲ್ಲವೂ ಶುರುವಾಯಿತು.”
ಲ್ಯಾಟಿನ್ ಅಮೆರಿಕದಲ್ಲಿ, ಇನ್ನಿತರ ಸಂಪ್ರದಾಯಗಳೊಂದಿಗೆ ಮೂಲಭೂತವಾದ ಯೇಸುವಿನ ಜನನದ ಸಂಪ್ರದಾಯಗಳನ್ನು ಸಹ ಆಚರಿಸಬಹುದು. ಆದರೆ ಇವೆಲ್ಲವೂ ‘ಯಾವುದರ ಆಧಾರದ ಮೇಲೆ’ ಆಚರಿಸಲ್ಪಡುತ್ತವೆ ಎಂದು ನೀವು ಸೋಜಿಗಪಡಬಹುದು. ನೇರವಾಗಿ ಹೇಳುವುದಾದರೆ, ಕೆಲವೊಂದು ಸಂಪ್ರದಾಯಗಳು ಆಸ್‌ಟೆಕ್ ಸಂಸ್ಕಾರಗಳಿಂದ ಬಂದವು ಎಂಬುದನ್ನು ಬೈಬಲಿಗನುಸಾರ ನಡೆಯಲು ಇಷ್ಟಪಡುವ ಅನೇಕ ಜನರು ಕಂಡುಕೊಳ್ಳುತ್ತಾರೆ. ಮೆಕ್ಸಿಕೊ ನಗರದ ವಾರ್ತಾಪತ್ರಿಕೆಯಾದ ಎಲ್ ಯೂನೀವರ್ಸಾಲ್ ಹೇಳಿದ್ದು: “ಅಮೆರಿಕನ್ ಇಂಡಿಯನ್ನರ ಮತಾಚರಣೆಯ ಕ್ಯಾಲೆಂಡರ್, ಕ್ಯಾಥೊಲಿಕ್ ಧಾರ್ಮಿಕವಿಧಿಯ ಕ್ಯಾಲೆಂಡರಿಗೆ ಸರಿಹೊಂದುತ್ತಿದ್ದರಿಂದ, ವಿಭಿನ್ನ ವರ್ಗದ ಕ್ರೈಸ್ತ ಸಂನ್ಯಾಸಿಗಳು ಇದರ ಲಾಭವನ್ನು ಪಡೆದುಕೊಂಡರು. ಮತ್ತು ಇದನ್ನು ತಮ್ಮ ಸೌವಾರ್ತಿಕ ಹಾಗೂ ಮಿಷನೆರಿ ಕೆಲಸಕ್ಕೆ ಬೆಂಬಲವನ್ನು ನೀಡಲು ಉಪಯೋಗಿಸಿದರು. ಸ್ಪೇನ್ ದೇಶದ ಜನರು ಅಲ್ಲಿಗೆ ಬಂದು ನೆಲಸುವ ಮುಂಚೆ ಆಚರಿಸುತ್ತಿದ್ದ ದೇವಿದೇವತೆಗಳ ಹಬ್ಬಗಳ ಜಾಗದಲ್ಲಿ ಈಗ ಕ್ರೈಸ್ತ ದೇವಿದೇವತೆಗಳ ಹಬ್ಬಗಳನ್ನು ಆಚರಿಸಲು ಪ್ರಾರಂಭಿಸಿದರು. ಈ ಸಂನ್ಯಾಸಿಗಳು ಯೂರೋಪಿಯನ್ ಹಬ್ಬಗಳನ್ನು ಪ್ರಾರಂಭಿಸಿದರು ಮತ್ತು ಹೀಗೆ ಅಮೆರಿಕನ್ ಇಂಡಿಯನ್ ಹಬ್ಬಗಳ ಲಾಭವನ್ನು ಪಡೆದುಕೊಂಡರು. ಇದರಿಂದಾಗಿ ಸಾಂಸ್ಕೃತಿಕವಾಗಿ ಭಿನ್ನವಾದ ನಂಬಿಕೆ ಮತ್ತು ಪದ್ಧತಿಗಳು ಒಂದಾಗಿ, ಸಪ್ರಮಾಣವುಳ್ಳ ಮೆಕ್ಸಿಕನ್ ಪದಪ್ರಯೋಗಗಳು ಹುಟ್ಟಿಕೊಂಡವು.”
ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ ವಿವರಿಸುವುದು: “ಯೇಸುವಿನ ಜನನದ ಅಭಿನಯವು ಕ್ರಿಸ್ಮಸ್ ಹಬ್ಬದ ಆಚರಣೆಯ ಒಂದು ಭಾಗವಾಯಿತು. . . ಚರ್ಚಿನಲ್ಲಿ ಕೊಟ್ಟಿಗೆಯ ದೃಶ್ಯದ ಚಿತ್ರವನ್ನಿಡುವುದು ಸಂತ ಫ್ರಾನ್ಸಿಸ್‌ನಿಂದ ಶುರವಾಯಿತು ಎಂದು ಹೇಳಲಾಗುತ್ತದೆ.” ಕ್ರಿಸ್ತನ ಜನನವನ್ನು ಸೂಚಿಸುವ ಈ ಪಾತ್ರಾಭಿನಯಗಳು ಮೆಕ್ಸಿಕೊ ವಸಾಹತುಗಾರಿಕೆಯ ಆರಂಭದ ಸಮಯದಲ್ಲಿ ಚರ್ಚುಗಳಲ್ಲಿ ಅಭಿನಯಿಸಲ್ಪಡುತ್ತಿದ್ದವು. ಯೇಸುವಿನ ಜನನದ ಬಗ್ಗೆ ಅಮೆರಿಕನ್ ಇಂಡಿಯನ್ನರಿಗೆ ಬೋಧಿಸುವುದಕ್ಕಾಗಿ ಸಂತ ಫ್ರಾನ್ಸಿಸ್‌ನ ಸನ್ಯಾಸಿಗಳು ಇವುಗಳನ್ನು ಏರ್ಪಡಿಸುತ್ತಿದ್ದರು. ಅದರ ನಂತರ ಬಂದ ಪೋಸಾಡಾಸ್ ಬಹಳ ಜನಪ್ರಿಯವಾಯಿತು. ಅವುಗಳ ಹಿಂದೆ ಯಾವುದೇ ಮೂಲ ಉದ್ದೇಶವಿರಲಿ, ಇಂದು ಪೋಸಾಡಾಸ್ ಆಚರಣೆಯ ರೀತಿಯು, ಅದರ ನಿಜವಾದ ಬಣ್ಣವನ್ನು ಬಯಲುಮಾಡುತ್ತದೆ. ಆ ಸಮಯದಲ್ಲೇನಾದರೂ ನೀವು ಮೆಕ್ಸಿಕೊದಲ್ಲಿರುವುದಾದರೆ, ಎಲ್ ಯೂನೀವರ್ಸಾಲ್‌ನ ಲೇಖಕನು ತನ್ನ ಹೇಳಿಕೆಯಲ್ಲಿ ಎತ್ತಿತೋರಿಸಿದ ವಿಷಯವನ್ನು ನೀವು ನೋಡಸಾಧ್ಯವಿದೆ ಇಲ್ಲವೇ ಅದನ್ನು ಗ್ರಹಿಸಸಾಧ್ಯವಿದೆ. ಅವನು ಹೇಳಿದ್ದು: “ನಿಜವಾಗಿ ನೋಡುವುದಾದರೆ, ಪೋಸಾಡಾಸ್ ಆಚರಣೆಯು ದೇವಶಿಶು ಜನಿಸಲಿಕ್ಕಿದ್ದ ಸ್ಥಳದಲ್ಲಿ ತಂಗಲಿಕ್ಕಾಗಿ ಯೇಸುವಿನ ತಂದೆತಾಯಿ ಯಾತ್ರೆಯನ್ನು ಮಾಡುತ್ತಿದ್ದ ವಿಷಯವನ್ನು ನಮಗೆ ಜ್ಞಾಪಿಸುವಂತಹ ಒಂದು ಉತ್ಸವವಾಗಿದೆ. ಆದರೆ ಇಂದು ಈ ಆಚರಣೆಯ ಸಮಯದಲ್ಲಿ ಕುಡುಕುತನ, ಮಿತಿಮೀರಿದ ವರ್ತನೆ, ಹೊಟ್ಟೆಬಾಕತನ, ನಿರರ್ಥಕತೆ ಹಾಗೂ ಹೆಚ್ಚೆಚ್ಚು ಪಾತಕಗಳು ನಡೆಯುತ್ತವೆ.”
ಮೆಕ್ಸಿಕೊ ನೆಲಸುನಾಡಾದ ಸಮಯದಲ್ಲಿ, ಚರ್ಚಿನ ಮೂಲ ಅಭಿನಯ ದೃಶ್ಯಗಳಿಂದಾಗಿ ನ್ಯಾಸಿಮಯಂಟೋ ಕಲ್ಪನೆಯು ಉದಯಿಸಿತು. ಕೆಲವರಿಗೆ ಇದು ಬಹಳ ಆಕರ್ಷಣೀಯವಾಗಿ ಕಾಣುವುದಾದರೂ, ನಿಜವಾಗಿಯೂ ಬೈಬಲಿನಲ್ಲಿ ತಿಳಿಸಿರುವ ವಿಷಯಗಳನ್ನು ಇದು ಚಿತ್ರಿಸುತ್ತದೋ? ಇದು ನ್ಯಾಯಸಮ್ಮತ ಪ್ರಶ್ನೆಯಾಗಿದೆ. ಮೂವರು ಜ್ಞಾನಿ ಪುರುಷರು ಎಂದು ಕರೆಯಲ್ಪಟ್ಟ ಆ ಜೋಯಿಸರು, ಯೇಸು ಮತ್ತು ಅವನ ಕುಟುಂಬವನ್ನು ಸಂದರ್ಶಿಸಿದಾಗ ಅವರು ಕೊಟ್ಟಿಗೆಯಲ್ಲಿ ತಂಗಿರಲಿಲ್ಲ. ಬದಲಾಗಿ ಅವನ ಕುಟುಂಬವು ಮನೆಯೊಂದರಲ್ಲಿ ವಾಸಿಸುತ್ತಿತ್ತು. ಇದರ ಕುರಿತಾಗಿ ಮತ್ತಾಯ 2:1, 11ರಲ್ಲಿ ಕೊಡಲ್ಪಟ್ಟಿರುವ ಪ್ರೇರಿತ ದಾಖಲೆಯನ್ನು ಓದುವಾಗ ಆಸಕ್ತಿಕರವಾದ ವಿಚಾರವನ್ನು ನೀವು ಕಂಡುಕೊಳ್ಳುವಿರಿ. ಮತ್ತು ಇನ್ನೊಂದು ಸ್ವಾರಸ್ಯಕರವಾದ ಸಂಗತಿಯೇನೆಂದರೆ, ಬೈಬಲು ಎಷ್ಟು ಮಂದಿ ಜೋಯಿಸರು ಅಲ್ಲಿದ್ದರು ಎಂದು ನಿಖರವಾಗಿ ಹೇಳುವುದಿಲ್ಲ. *
ಲ್ಯಾಟಿನ್ ಅಮೆರಿಕದಲ್ಲಿ, ಈ ಮೂವರು ಜ್ಞಾನಿ ಪುರುಷರು ಸ್ಯಾಂಟಾ ಕ್ಲಾಸ್‌ನ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ. ಆದರೂ, ಇತರ ದೇಶಗಳಲ್ಲಿ ಮಾಡುವಂತೆಯೇ ಇಲ್ಲಿ ಕೂಡ ಅನೇಕ ಹೆತ್ತವರು ಮನೆಯಲ್ಲಿ ಆಟದ ಸಾಮಾನುಗಳನ್ನು ಬಚ್ಚಿಡುತ್ತಾರೆ. ಮೂವರು ಜ್ಞಾನಿ ಪುರುಷರು ಆ ಆಟದ ಸಾಮಾನುಗಳನ್ನು ತಂದರೋ ಎಂಬಂತೆ, ಜನವರಿ 6ರ ಬೆಳಗ್ಗೆ ಮಕ್ಕಳು ಅವುಗಳನ್ನು ಮನೆಯಲ್ಲಿ ಹುಡುಕುತ್ತಾರೆ. ಈ ಸಮಯದಲ್ಲಿ ಆಟದ ಸಾಮಾನುಗಳನ್ನು ಮಾರುವವರಿಗೆ ಲಾಭವೋ ಲಾಭ. ಅನೇಕ ಪ್ರಾಮಾಣಿಕ ಜನರು ಯಾವುದನ್ನು ಕಲ್ಪನಾಚಿತ್ರವೆಂದು ನೆನಸಿಕೊಳ್ಳುತ್ತಾರೋ ಅದರಿಂದ ಕೆಲವರು ತಮಗೆ ಭಾರಿ ಹಣವನ್ನು ಮಾಡಿಕೊಂಡಿದ್ದಾರೆ. ಆ ಮೂವರು ಜ್ಞಾನಿ ಪುರುಷರ ಕಲ್ಪನಾಕಥೆಯಲ್ಲಿ ಈಗ ಅನೇಕರು ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಮಕ್ಕಳು ಸಹ ಸೇರಿದ್ದಾರೆ. ಈ ಮಿಥ್ಯೆಯು ವಿಶ್ವಾಸಿಗಳನ್ನು ಕಳೆದುಕೊಳ್ಳುತ್ತಿದೆಯಾದುದರಿಂದ ಕೆಲವರು ಇದರಿಂದ ಅಸಮಾಧಾನಗೊಂಡಿದ್ದಾರೆ. ಆದರೂ ಕೇವಲ ಸಂಪ್ರದಾಯಕ್ಕಾಗಿ ಹಾಗೂ ವ್ಯಾಪಾರಕ್ಕಾಗಿ ಮಾಡುತ್ತಿರುವ ಈ ಆಚರಣೆಯಿಂದ ಒಬ್ಬರು ಇನ್ನೇನನ್ನು ತಾನೇ ಅಪೇಕ್ಷಿಸಸಾಧ್ಯವಿದೆ?
ಕ್ರಿಸ್ಮಸ್ ಇಲ್ಲವೆ ಯೇಸುವಿನ ಜನನವನ್ನು ಆರಂಭದ ಕ್ರೈಸ್ತರು ಆಚರಿಸುತ್ತಿರಲಿಲ್ಲ. ಇದರ ಕುರಿತಾಗಿ ಒಂದು ಎನ್‌ಸೈಕ್ಲೊಪೀಡಿಯ ಹೇಳುವುದು: “ಗಣ್ಯ ವಕ್ಯಿಯೊಬ್ಬನು ಜನಿಸಿದಾಗಲ್ಲ ಬದಲಿಗೆ ಮೃತಪಟ್ಟಾಗ ಅವನ ಜ್ಞಾಪಕಕ್ಕಾಗಿ ಆಚರಣೆಯನ್ನು ಮಾಡುವುದನ್ನು ಬಿಟ್ಟರೆ, ಇನ್ಯಾವ ಆಚರಣೆಯೂ ಪ್ರಥಮ ಶತಮಾನದಲ್ಲಿ ಆಚರಿಸಲ್ಪಡುತ್ತಿರಲಿಲ್ಲ.” ಹುಟ್ಟುಹಬ್ಬ ಆಚರಿಸುವುದು ದೇವರ ಸತ್ಯಾರಾಧಕರಲ್ಲ ಬದಲಿಗೆ ವಿಧರ್ಮಿಗಳು ಎಂದು ಬೈಬಲು ತಿಳಿಸುತ್ತದೆ.—ಮತ್ತಾಯ 14:6-10.
ದೇವರ ಮಗನ ಜನನದಲ್ಲಿ ಯಾವ ನಿಜವಾದ ಘಟನೆಗಳು ಒಳಗೂಡಿವೆ ಎಂಬುದನ್ನು ತಿಳಿದುಕೊಳ್ಳುವುದು ಹಾಗೂ ಅದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಪ್ರಯೋಜನವಲ್ಲ ಎಂಬುದು ಇದರರ್ಥವಲ್ಲ. ದೇವರ ಚಿತ್ತವನ್ನು ಮಾಡಲು ಇಷ್ಟಪಡುವವರಿಗೆಲ್ಲ ಮುಖ್ಯವಾದ ಒಳನೋಟಗಳನ್ನು ಹಾಗೂ ಪಾಠಗಳನ್ನು ಬೈಬಲಿನ ನಿಜ ವೃತ್ತಾಂತವು ನೀಡುತ್ತದೆ.
ಬೈಬಲಿಗನುಸಾರ ಯೇಸುವಿನ ಜನನ
ಯೇಸುವಿನ ಜನನದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ನೀವು ಮತ್ತಾಯ ಹಾಗೂ ಲೂಕನ ಸುವಾರ್ತೆಗಳಲ್ಲಿ ನೋಡಸಾಧ್ಯವಿದೆ. ನಜರೇತಿನ ಗಲಿಲಾಯ ಪಟ್ಟಣದಲ್ಲಿ ಮರಿಯಳೆಂಬ ಒಬ್ಬ ಕನ್ಯೆಯನ್ನು ದೇವದೂತನಾದ ಗಬ್ರಿಯೇಲನು ಭೇಟಿಮಾಡಿದನು ಎಂಬುದನ್ನು ಅವು ತಿಳಿಸುತ್ತವೆ. ಅವನು ಯಾವ ಸಂದೇಶವನ್ನು ನೀಡಿದನು? “ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.”—ಲೂಕ 1:31-33.
ಈ ಸಂದೇಶವನ್ನು ಕೇಳಿಸಿಕೊಂಡ ಮರಿಯಳು ಬಹಳ ಆಶ್ಚರ್ಯಚಕಿತಳಾದಳು. ಏಕೆಂದರೆ, ಅವಳು ಅವಿವಾಹಿತಳಾಗಿದ್ದಳು. ಆದುದರಿಂದ ಅವಳು ಕೇಳಿದ್ದು: “ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ”? ಅದಕ್ಕೆ ದೂತನು ಹೇಳಿದ್ದು: “ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು.” ಇದು ದೇವರ ಚಿತ್ತವಾಗಿದೆ ಎಂಬುದನ್ನು ಮರಿಯಳು ಗ್ರಹಿಸಿದಳು ಮತ್ತು ಅವಳು ಹೇಳಿದ್ದು: “ಇಗೋ, ನಾನು ಕರ್ತನ [“ಯೆಹೋವನ,” NW] ದಾಸಿ; ನಿನ್ನ ಮಾತಿನಂತೆ ನನಗಾಗಲಿ.”—ಲೂಕ 1:34-38.
ಮರಿಯಳು ಗರ್ಭವತಿಯಾಗಿದ್ದಾಳೆ ಎಂಬುದು ಯೋಸೇಫನಿಗೆ ತಿಳಿದುಬಂದಾಗ, ಅವಳಿಗೆ ವಿಚ್ಚೇಧವನ್ನು ನೀಡಲು ಅವನು ಯೋಚಿಸುತ್ತಿದ್ದನು. ಆದುದರಿಂದ, ಈ ಅದ್ಭುತಕರವಾದ ಜನನದ ಕುರಿತು ಯೋಸೇಫನಿಗೆ ದೇವದೂತನು ಹೇಳಿದನು. ಆಗ ದೇವರ ಮಗನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಲು ಯೋಸೇಫನು ಒಪ್ಪಿಕೊಂಡನು.—ಮತ್ತಾಯ 1:18-25.
ಚಕ್ರವರ್ತಿಯಾದ ಔಗುಸ್ತನು, ಎಲ್ಲರೂ ಖಾನೆಷುಮಾರಿ ಬರಸಿಕೊಳ್ಳಬೇಕೆಂದು ಆಜ್ಞೆಯಿತ್ತದ್ದರಿಂದ, ಯೋಸೇಫನೂ ಮರಿಯಳೂ ಗಲಿಲಾಯದಲ್ಲಿದ್ದ ನಜರೇತಿನಿಂದ ಯೂದಾಯದಲ್ಲಿರುವ ಬೇತ್ಲೆಹೇಮಿಗೆ ಪ್ರಯಾಣಿಸಿದರು. ಇದು ಅವರ ಪೂರ್ವಜರ ನಗರವಾಗಿತ್ತು. “ಅವರು ಅಲ್ಲಿದ್ದಾಗ ಆಕೆಗೆ ದಿನತುಂಬಿತು. ಆಕೆಯು ತನ್ನ ಚೊಚ್ಚಲುಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ ಚತ್ರದಲ್ಲಿ ಅವರಿಗೆ ಸ್ಥಳವಿಲ್ಲದ ಕಾರಣ ಅವನನ್ನು ಗೋದಲಿಯಲ್ಲಿ ಮಲಗಿಸಿದಳು.”—ಲೂಕ 2:1-7.
ಲೂಕ 2:8-14 ವರ್ಣಿಸುವುದು: “ಆ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು ಕಾಯುತ್ತಿರಲಾಗಿ ಕರ್ತನ [“ಯೆಹೋವನ,” NW] ದೂತನೊಬ್ಬನು ಬಂದು ಅವರ ಎದುರಿನಲ್ಲಿ ನಿಂತನು. ಕರ್ತನ ಪ್ರಭೆಯು ಅವರ ಸುತ್ತಲು ಪ್ರಕಾಶಿಸಿತು; ಅವರು ಬಹಳವಾಗಿ ಹೆದರಿದರು. ಆ ದೂತನು ಅವರಿಗೆ—ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ. ಆತನು ನಿಮಗೆ ಗೊತ್ತಾಗುವದಕ್ಕೆ ಗುರುತೇನಂದರೆ—ಬಟ್ಟೆಯಿಂದ ಸುತ್ತಿರುವ ಒಂದು ಕೂಸು ಗೋದಲಿಯಲ್ಲಿ ಮಲಗಿರುವದನ್ನು ಕಾಣುವಿರಿ ಎಂದು ಹೇಳಿದನು. ಫಕ್ಕನೆ ಆ ದೂತನ ಸಂಗಡ ಪರಲೋಕಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು—ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು.”
ಜೋಯಿಸರು
ಯೆಹೂದದ ರಾಜನು ಜನಿಸಿದ ಸ್ಥಳವನ್ನು ಹುಡುಕುತ್ತಾ ಯೆರೂಸಲೇಮಿಗೆ ಪೂರ್ವ ದೇಶದಿಂದ ಜೋಯಿಸರು ಬಂದರು ಎಂದು ಮತ್ತಾಯನ ಸುವಾರ್ತೆಯು ತಿಳಿಸುತ್ತದೆ. ರಾಜ ಹೆರೋದನು ಇದರ ಬಗ್ಗೆ ತುಂಬ ಆಸಕ್ತಿಯುಳ್ಳವನಾಗಿದ್ದನು. ಆದರೆ, ಅವನ ಉದ್ದೇಶವು ಒಳ್ಳೆಯದ್ದಾಗಿರಲಿಲ್ಲ. ಆಗ ಹೆರೋದನು, “ನೀವು ಹೋಗಿ ಆ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನೂ ಬಂದು ಅದಕ್ಕೆ ಅಡ್ಡಬೀಳಬೇಕು ಎಂದು ಹೇಳಿ ಅವರನ್ನು ಬೇತ್ಲೆಹೇಮಿಗೆ ಕಳುಹಿಸಿದನು.” ಆ ಜೋಯಿಸರು ಶಿಶುವನ್ನು ಕಂಡುಹಿಡಿದರು ಮತ್ತು “ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು.” ಆದರೆ ಅವರು ಹೆರೋದನ ಬಳಿಗೆ ಹಿಂದಿರುಗಲಿಲ್ಲ. ಏಕೆಂದರೆ, ‘ದೇವರು ಕನಸಿನಲ್ಲಿ ಅವರಿಗೆ—ನೀವು ಹೆರೋದನ ಬಳಿಗೆ ತಿರಿಗಿ ಹೋಗಬಾರದೆಂದು ಅಪ್ಪಣೆಕೊಟ್ಟನು.’ ಯೋಸೇಫನಿಗೆ ಹೆರೋದನ ಉದ್ದೇಶಗಳ ಬಗ್ಗೆ ಎಚ್ಚರಿಕೆಯನ್ನು ನೀಡಲು ದೇವರು ತನ್ನ ದೂತನನ್ನು ಉಪಯೋಗಿಸಿದನು. ಹೀಗೆ ಯೋಸೇಫನೂ ಮರಿಯಳೂ ತಮ್ಮ ಮಗನೊಂದಿಗೆ ಐಗುಪ್ತ್ಯಕ್ಕೆ ಹೊರಟುಹೋದರು. ಹೊಸ ರಾಜನನ್ನು ಸಂಪೂರ್ಣವಾಗಿ ಇನ್ನಿಲ್ಲದಂತೆ ಮಾಡಲಿಕ್ಕಾಗಿ, ಕ್ರೂರಿ ರಾಜನಾದ ಹೆರೋದನು ಬೇತ್ಲೆಹೇಮಿನಲ್ಲಿದ್ದ ಎಲ್ಲ ಗಂಡುಕೂಸುಗಳನ್ನು ಕೊಲ್ಲಲು ಆಜ್ಞೆಯನ್ನು ಕೊಟ್ಟನು. ಅಂದರೆ, ಎರಡು ಹಾಗೂ ಎರಡು ವರ್ಷದೊಳಗಿನ ಎಲ್ಲ ಕೂಸುಗಳನ್ನು ಕೊಲ್ಲಲು ಅವನು ಆಜ್ಞಾಪಿಸಿದನು.—ಮತ್ತಾಯ 2:1-16.
ಈ ವೃತ್ತಾಂತದಿಂದ ನಾವೇನನ್ನು ಕಲಿಯಸಾಧ್ಯವಿದೆ?
ಭೇಟಿಮಾಡುತ್ತಿದ್ದ ಅನೇಕ ಜೋಯಿಸರು ಸತ್ಯ ದೇವರನ್ನು ಆರಾಧಿಸುತ್ತಿರಲಿಲ್ಲ. ಲಾ ನ್ಯೂವೆ ಬಿಬ್ಲಿಯ ಲ್ಯಾಟಿನೋಅಮೆರಿಕ (1989ರ ಮುದ್ರಣ) ಎಂಬ ಬೈಬಲಿನ ಪಾದಟಿಪ್ಪಣಿಯಲ್ಲಿ ಹೇಳುವುದು: “ಆ ಮೇಜೈ (ಜೋಯಿಸರು) ರಾಜರಾಗಿರಲಿಲ್ಲ ಬದಲಾಗಿ ಕಣಿಹೇಳುವವರೂ ವಿಧರ್ಮಿ ಧರ್ಮದ ಯಾಜಕರೂ ಆಗಿದ್ದರು.” ಯಾವುದಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದರೋ ಆ ನಕ್ಷತ್ರಗಳ ಕುರಿತಾದ ತಮ್ಮ ಜ್ಞಾನಕ್ಕನುಸಾರವಾಗಿ ಅವರು ಬಂದಿದ್ದರು. ಶಿಶು ಎಲ್ಲಿದೆ ಎಂಬುದನ್ನು ದೇವರು ಮಾರ್ಗದರ್ಶಿಸಿದ್ದಲ್ಲಿ, ಅವರು ಮೊದಲು ಯೆರೂಸಲೇಮಿಗೆ, ನಂತರ ಹೆರೋದನ ಆಸ್ಥಾನಕ್ಕೆ ಹೋಗುವ ಅಗತ್ಯವಿರುತ್ತಿರಲಿಲ್ಲ. ಅದಕ್ಕೆ
ಬದಲಾಗಿ ಅವರು ನೇರವಾಗಿ ಶಿಶು ಜನಿಸಿದ ಸ್ಥಳಕ್ಕೆ ಹೋಗುತ್ತಿದ್ದರು. ಆದರೆ ಇದರ ನಂತರ ಮಗುವನ್ನು ಕಾಪಾಡಲಿಕ್ಕಾಗಿ ದೇವರು ಅವರ ಮಾರ್ಗವನ್ನು ಬದಲಾಯಿಸಿದನು ನಿಜ.ಆದರೆ ಮರಿಯಳಿಗೆ ಹಾಗೂ ಕುರುಬರಿಗೆ ಪ್ರಕಟಿಸಿದಂತೆ, ಈ ಶಿಶು ಒಬ್ಬ ರಾಜನಾಗಲು ಹುಟ್ಟಿದ್ದಾನೆ ಎಂಬ ಬಹಳ ಮುಖ್ಯವಾದ ವಿಷಯವನ್ನು, ಕ್ರಿಸ್ಮಸ್ ಸಮಯದಲ್ಲಿ ಕಾಣಸಿಗುವ ಈ ಕಾಲ್ಪನಿಕ ಹಾಗೂ ಭಾವೋದ್ರೇಕಕಾರಿಯಾದ ವಾತಾವರಣವು ಅಸ್ಪಷ್ಟಗೊಳಿಸುತ್ತದೆ. ಖಂಡಿತವಾಗಿಯೂ ಯೇಸು ಕ್ರಿಸ್ತನು ಈಗ ಶಿಶು ಅಥವಾ ಬಾಲಕನಾಗಿರಲು ಸಾಧ್ಯವೇ ಇಲ್ಲ. ಅವನು ದೇವರ ರಾಜ್ಯವನ್ನು ಆಳುತ್ತಿರುವ ರಾಜನಾಗಿದ್ದಾನೆ. ಅವನು ದೇವರ ಚಿತ್ತಕ್ಕೆ ವಿರುದ್ಧವಾಗಿರುವ ಎಲ್ಲ ಆಳ್ವಿಕೆಗಳನ್ನು ಬಹಳ ಬೇಗನೆ ನಿರ್ಮೂಲಮಾಡಲಿಕ್ಕಿದ್ದಾನೆ ಹಾಗೂ ಮನುಷ್ಯರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಿಕ್ಕಿದ್ದಾನೆ. ನಾವು ಮಾದರಿ ಪ್ರಾರ್ಥನೆಯಲ್ಲಿ ಕೇಳಿಕೊಳ್ಳುವುದು ಈ ರಾಜ್ಯಕ್ಕಾಗಿಯೇ.—ದಾನಿಯೇಲ 2:44; ಮತ್ತಾಯ 6:9, 10.
ಸುವಾರ್ತೆಯನ್ನು ಕೇಳಿಸಿಕೊಳ್ಳಲು ಇಷ್ಟಪಡುವವೆರಲ್ಲರಿಗೂ ರಕ್ಷಣೆಯ ಅವಕಾಶವು ನೀಡಲ್ಪಡುತ್ತದೆ ಎಂಬ ವಿಷಯವು, ಕುರುಬರಿಗೆ ನೀಡಲ್ಪಟ್ಟ ದೇವದೂತನ ಪ್ರಕಟನೆಯಿಂದ ತಿಳಿದುಬರುತ್ತದೆ. ದೇವರ ಅನುಗ್ರಹವನ್ನು ಪಡೆದುಕೊಳ್ಳುವವರು ‘ದೇವರು ಒಲಿದ’ ವ್ಯಕ್ತಿಗಳಾಗುತ್ತಾರೆ. ಯೇಸು ಕ್ರಿಸ್ತನ ರಾಜ್ಯದಲ್ಲಿ ಇಡೀ ಲೋಕದಲ್ಲಿ ಶಾಂತಿಯಿರುವುದು ಆದರೆ, ಜನರು ದೇವರ ಚಿತ್ತವನ್ನು ಮಾಡಲು ಸಿದ್ಧಮನಸ್ಕರಾಗಿರಬೇಕು. ಆದರೆ ಕ್ರಿಸ್ಮಸ್ ಸಮಯವು ಇದಕ್ಕೆ ಬೆಂಬಲವನ್ನು ನೀಡುತ್ತದೋ ಹಾಗೂ ಆ ಅಭಿಲಾಷೆಯನ್ನು ಪ್ರತಿಬಿಂಬಿಸುತ್ತದೋ? ಉತ್ತರವು ತೀರ ಸ್ಪಷ್ಟವಾಗಿದೆ ಎಂಬುದು ಬೈಬಲಿಗನುಸಾರ ನಡೆಯಲು ಇಷ್ಟಪಡುವ ಅನೇಕ ಸಹೃದಯಿಗಳ ಅನಿಸಿಕೆಯಾಗಿದೆ.—ಲೂಕ 2:10, 11, 14.
[ಪಾದಟಿಪ್ಪಣಿಗಳು]
^ ಪ್ಯಾರ. 13 ಈ ಮುಂದಿನ ವಿವರಣೆಯನ್ನು ಕಡೆಗಣಿಸಸಾಧ್ಯವಿಲ್ಲ, ಅದೇನೆಂದರೆ: ಮೆಕ್ಸಿಕನ್ ನ್ಯಾಸಿಮಯಂಟೋದಲ್ಲಿ ಶಿಶು “ದೇವಶಿಶು” ಅನ್ನು ಚಿತ್ರಿಸುತ್ತದೆ. ಅಂದರೆ, ಒಂದು ಶಿಶುವೋಪಾದಿ ದೇವರು ತಾನೇ ಈ ಭೂಮಿಗೆ ಬಂದನು ಎಂಬ ವಿಚಾರವನ್ನು ಇದು ತಿಳಿಸುತ್ತದೆ. ಆದರೆ ಬೈಬಲು ಯೇಸು, ಈ ಭೂಮಿಯಲ್ಲಿ ಜನಿಸಿದ ದೇವರ ಮಗನಾಗಿದ್ದಾನೆ ಎಂದು ಹೇಳುತ್ತದೆ. ಹಾಗೂ ಸರ್ವಶಕ್ತನಾದ ದೇವರಾದ ಯೆಹೋವನಂತೆ ಇದ್ದಾನೆ ಇಲ್ಲವೆ ಆತನಿಗೆ ಸಮಾನನಾದವನು ಇವನು ಎಂದು ಹೇಳುವುದಿಲ್ಲ. ಇದರ ಕುರಿತಾದ ಸತ್ಯಾಂಶವನ್ನು ಲೂಕ 1:35; ಯೋಹಾನ 3:16; 5:37; 14:1, 6, 9, 28; 17:1, 3; 20:17ರ ವಚನಗಳಲ್ಲಿ ಪರೀಕ್ಷಿಸಿನೋಡಿರಿ.
[ಪುಟ 4ರಲ್ಲಿರುವ ಚೌಕ]
ಕೆಲವರು ಆಶ್ಚರ್ಯಚಕಿತರಾಗಬಹುದು
ಅನೇಕ ವರ್ಷಗಳಿಂದ ಕ್ರಿಸ್ಮಸ್ ಬಗ್ಗೆ ಸಂಶೋಧನೆ ಮಾಡಿದ ಬಳಿಕ, ಕ್ರಿಸ್ಮಸ್‌ನಲ್ಲಿ ನ್ಯೂನತೆ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಲೇಖಕರಾದ ಟಾಮ್ ಫ್ಲಿನ್, ಹೀಗೆ ಹೇಳಿದರು:
“ಈಗ ಕ್ರಿಸ್ಮಸ್ ಹಬ್ಬದೊಂದಿಗೆ ಸೇರಿಕೊಂಡಿರುವ ಬಹಳಷ್ಟು ಸಂಪ್ರದಾಯಗಳು ಕ್ರೈಸ್ತಪೂರ್ವ ವಿಧರ್ಮಿ ಧರ್ಮಗಳಿಂದ ಬಂದವುಗಳಾಗಿವೆ. ಇವುಗಳಲ್ಲಿ ಕೆಲವೊಂದು ಸಾಮಾಜಿಕ, ಲೈಂಗಿಕ ಅಥವಾ ವಿಶ್ವವಿಜ್ಞಾನದ ಸೂಚಿತಾರ್ಥಗಳಾಗಿವೆ. ಸುಶಿಕ್ಷಿತ, ಸಾಂಸ್ಕೃತಿಕವಾಗಿ ಸೂಕ್ಷಸಂವೇದಿಗಳಾದ ಆಧುನಿಕ ಜನರು ಈ ಹಿಂದೆ ಸಂಪ್ರದಾಯಗಳು ಯಾವ ಮೂಲದಿಂದ ಬಂದದ್ದಾಗಿವೆ ಎಂಬುದನ್ನು ಒಮ್ಮೆ ಅರಿತುಕೊಂಡರೆಂದರೆ, ಅವರದನ್ನು ಕಿತ್ತೆಸೆಯುವಂತೆ ನಡಿಸಲ್ಪಡುವರು.”—ಪುಟ 19.
ಇದಕ್ಕೆ ಬೆಂಬಲಿಸುವಂತಹ ರಾಶಿ ಮಾಹಿತಿಯನ್ನು ಒದಗಿಸಿದ ನಂತರ, ಫ್ಲಿನ್ ಮುಖ್ಯ ಅಂಶಕ್ಕೆ ಪುನಃ ಹಿಂದಿರುಗುತ್ತಾರೆ. ಅದೇನೆಂದರೆ: “ಕ್ರಿಸ್ಮಸ್ ಹಬ್ಬದ ಸಂಪ್ರದಾಯದಲ್ಲಿ ನಿಜ ಕ್ರೈಸ್ತ ವಿಷಯವು ಬೆರಳೆಣಿಕೆಯಷ್ಟೇ ಇದೆ ಎಂಬುದು ನಗೆಪಾಟಲಾದ ಸಂಗತಿಯಾಗಿದೆ. ಕ್ರೈಸ್ತಪೂರ್ವದ ಅಂಶಗಳನ್ನು ತೆಗೆದುಹಾಕಿದರೆ, ಉಳಿಯುವುದೆಲ್ಲವೂ ವಿಶ್ವಾಸಾರ್ಹವಾದ ಕ್ರೈಸ್ತ ಸಂಪ್ರದಾಯಗಳಾಗಿರುವ ಬದಲು ಕ್ರೈಸ್ತಾನಂತರದ ಮೂಲಗಳಿಂದ ಬಂದವುಗಳೇ ಆಗಿರುತ್ತವೆ.”—ಪುಟ 155.
[ಪುಟ 7ರಲ್ಲಿರುವ ಚಿತ್ರ]
ಯೇಸುವಿನ ಜನನದ ಪ್ರಕಟನೆಯು ಮುಂದೆ ಅವನು ದೇವರ ನೇಮಿತ ರಾಜನಾಗಿ ಆಳುವನೆಂಬುದಕ್ಕೆ ಆಧಾರವನ್ನು ಒದಗಿಸಿತು