ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಿರಿ
ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಿರಿ
“ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ನೀವು ದೃಢನಿಶ್ಚಿತರಾಗಿದ್ದು, ಕೊನೆಯಲ್ಲಿ ನೀವು ಪೂರ್ಣರಾಗಿ ನಿಲ್ಲಬೇಕೆಂದು [ಅವನು] ಯಾವಾಗಲೂ ನಿಮ್ಮ ಪರವಾಗಿ ತನ್ನ ಪ್ರಾರ್ಥನೆಗಳಲ್ಲಿ ಪ್ರಯಾಸಪಡುತ್ತಾನೆ.”—ಕೊಲೊಸ್ಸೆ 4:12, NW.
1, 2. (ಎ) ಆರಂಭದ ಕ್ರೈಸ್ತರ ವಿಷಯದಲ್ಲಿ ಹೊರಗಿನ ಜನರು ಏನನ್ನು ಗಮನಿಸಿದರು? (ಬಿ) ಕೊಲೊಸ್ಸೆ ಪುಸ್ತಕವು ಪ್ರೀತಿಭರಿತ ಆಸಕ್ತಿಯನ್ನು ಹೇಗೆ ವ್ಯಕ್ತಪಡಿಸುತ್ತದೆ?
ಯೇಸುವಿನ ಹಿಂಬಾಲಕರು ಜೊತೆ ಆರಾಧಕರ ವಿಷಯದಲ್ಲಿ ತುಂಬ ಆಸಕ್ತಿಯನ್ನು ತೋರಿಸುತ್ತಿದ್ದರು. ಅನಾಥರು, ಬಡವರು, ಹಾಗೂ ವೃದ್ಧರ ಕಡೆಗೆ ಅವರು ಹೇಗೆ ಕರುಣೆಯನ್ನು ತೋರಿಸಿದರು ಎಂಬುದನ್ನು ಟೆರ್ಟುಲಿಯನನು (ಸಾ.ಶ. ಎರಡನೆಯ ಹಾಗೂ ಮೂರನೆಯ ಶತಮಾನಗಳ ಬರಹಗಾರ) ತಿಳಿಸಿದನು. ಪ್ರೀತಿಯನ್ನು ಕಾರ್ಯರೂಪದಲ್ಲಿ ತೋರಿಸಿದಂತಹ ಆ ಪುರಾವೆಗಳು, ಅನೇಕ ಅವಿಶ್ವಾಸಿಗಳ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿದವು. ಆದುದರಿಂದಲೇ, ‘ನೋಡಿ, ಅವರು ಹೇಗೆ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ’ ಎಂದು ಕೆಲವರು ಕ್ರೈಸ್ತರ ಕುರಿತು ಮಾತಾಡಿಕೊಂಡರು.
2 ಕೊಲೊಸ್ಸೆ ಪುಸ್ತಕದಲ್ಲಿ ಇಂತಹ ಪ್ರೀತಿಭರಿತ ಆಸಕ್ತಿಯನ್ನು ವ್ಯಕ್ತಪಡಿಸಲಾಗಿದೆ. ಕೊಲೊಸ್ಸೆ ಸಭೆಯಲ್ಲಿದ್ದ ಸಹೋದರ ಸಹೋದರಿಯರ ಕಡೆಗೆ ಅಪೊಸ್ತಲ ಪೌಲನು ಹಾಗೂ ಅವನ ಸಂಗಡಿಗನಾದ ಎಪಫ್ರನು ತೋರಿಸಿದ ಆಸಕ್ತಿಯು ಇದೇ ರೀತಿಯದ್ದಾಗಿತ್ತು. ಪೌಲನು ಅವರಿಗೆ ಬರೆದುದು: ಎಪಫ್ರನು “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ನೀವು ದೃಢನಿಶ್ಚಿತರಾಗಿದ್ದು, ಕೊನೆಯಲ್ಲಿ ನೀವು ಪೂರ್ಣರಾಗಿ ನಿಲ್ಲಬೇಕೆಂದು ಕೊಲೊಸ್ಸೆ 4:12ರಲ್ಲಿರುವ (NW) ಈ ಮಾತುಗಳ ಮೇಲಾಧಾರಿತವಾಗಿರುವುದು: “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ನೀವು ದೃಢನಿಶ್ಚಿತರಾಗಿದ್ದು, . . . ಪೂರ್ಣರಾಗಿ ನಿಲ್ಲಿರಿ.”
ಯಾವಾಗಲೂ ನಿಮ್ಮ ಪರವಾಗಿ ತನ್ನ ಪ್ರಾರ್ಥನೆಗಳಲ್ಲಿ ಪ್ರಯಾಸಪಡುತ್ತಾನೆ.” 2001ನೆಯ ಇಸವಿಯಲ್ಲಿ, ಯೆಹೋವನ ಸಾಕ್ಷಿಗಳ ವಾರ್ಷಿಕ ವಚನವು3. ಯಾವ ಎರಡು ವಿಷಯಗಳಿಗಾಗಿ ಎಪಫ್ರನು ಪ್ರಾರ್ಥಿಸಿದನು?
3 ಎಪಫ್ರನು ತನ್ನ ಪ್ರಿಯ ಜನರಿಗಾಗಿ ಮಾಡಿದ ಪ್ರಾರ್ಥನೆಗಳಲ್ಲಿ ಎರಡು ಅಂಶಗಳು ಒಳಗೂಡಿದ್ದವು ಎಂಬುದನ್ನು ನೀವು ಗಮನಿಸಸಾಧ್ಯವಿದೆ: (1) ಅವರು “ಕೊನೆಯಲ್ಲಿ ಪೂರ್ಣರಾಗಿ ನಿಲ್ಲ”ಬೇಕು ಮತ್ತು (2) “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು . . . ದೃಢನಿಶ್ಚಿತರಾಗಿ” ನಿಲ್ಲಬೇಕು ಎಂಬುದೇ. ನಮ್ಮ ಪ್ರಯೋಜನಕ್ಕೋಸ್ಕರ ಈ ಮಾಹಿತಿಯನ್ನು ಪವಿತ್ರ ಶಾಸ್ತ್ರದಲ್ಲಿ ಒಳಗೂಡಿಸಲಾಗಿದೆ. ಆದುದರಿಂದ, ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ಕೊನೆಯಲ್ಲಿ ಪೂರ್ಣರಾಗಿ ನಿಲ್ಲಲು ಮತ್ತು ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ದೃಢನಿಶ್ಚಿತರಾಗಿ ಇರಲು ನಾನು ವೈಯಕ್ತಿಕವಾಗಿ ಏನು ಮಾಡಬೇಕು? ಹಾಗೂ ಒಂದುವೇಳೆ ನಾನು ಹೀಗೆ ಮಾಡುವುದಾದರೆ ನನಗೆ ಇದರಿಂದ ಯಾವ ಪ್ರಯೋಜನವಿದೆ?’ ನಾವೀಗ ಅದರ ಬಗ್ಗೆ ತಿಳಿದುಕೊಳ್ಳೋಣ.
“ಪೂರ್ಣರಾಗಿ ನಿಲ್ಲ”ಲು ಪ್ರಯತ್ನಿಸಿರಿ
4. ಕೊಲೊಸ್ಸೆಯವರು ಯಾವ ಅರ್ಥದಲ್ಲಿ ‘ಪೂರ್ಣರಾಗಿರುವ’ ಅಗತ್ಯವಿತ್ತು?
4 ಕೊಲೊಸ್ಸೆಯಲ್ಲಿರುವ ತನ್ನ ಆತ್ಮಿಕ ಸಹೋದರ ಸಹೋದರಿಯರು “ಕೊನೆಯಲ್ಲಿ ಪೂರ್ಣರಾಗಿ ನಿಲ್ಲ”ಬೇಕು ಎಂಬ ತೀವ್ರಾಪೇಕ್ಷೆ ಎಪಫ್ರನಿಗಿತ್ತು. ಇಲ್ಲಿ ಪೌಲನು “ಪೂರ್ಣರಾಗಿ” ಎಂದು ಭಾಷಾಂತರಿಸಲು ಉಪಯೋಗಿಸಿರುವ ಶಬ್ದಕ್ಕೆ, ಪರಿಪೂರ್ಣ, ಪ್ರಾಯಸ್ಥ, ಅಥವಾ ಪ್ರೌಢ ಎಂಬ ಅರ್ಥವಿರಸಾಧ್ಯವಿದೆ. (ಮತ್ತಾಯ 19:21; ಇಬ್ರಿಯ 5:14; ಯಾಕೋಬ 1:4, 25) ಒಬ್ಬನು ಯೆಹೋವನ ಸಾಕ್ಷಿಯೋಪಾದಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ತಾನೇ, ಅವನು ಒಬ್ಬ ಪ್ರೌಢ ಕ್ರೈಸ್ತನಾಗಿದ್ದಾನೆ ಎಂಬುದನ್ನು ಅರ್ಥೈಸುವುದಿಲ್ಲ ಎಂಬುದು ನಿಮಗೆ ಗೊತ್ತಿರಬಹುದು. ಕೊಲೊಸ್ಸೆಯ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದ ಎಫೆಸದವರಿಗೆ ಪೌಲನು ಈ ವಿಷಯದ ಕುರಿತು ಬರೆದನು. ಅದೇನೆಂದರೆ, ಕುರುಬರು ಹಾಗೂ ಬೋಧಕರು “ನಾವೆಲ್ಲರು ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರವೀಣತೆಗೆ ಬಂದವರಾಗಿ [“ಪ್ರಾಯಸ್ಥರಾಗಿ,” NW] ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟು”ವಂತೆ ಸಹಾಯಮಾಡಲು ಪ್ರಯತ್ನಿಸುವರು. ಇನ್ನೊಂದು ಕಡೆಯಲ್ಲಿ ಪೌಲನು ಕ್ರೈಸ್ತರಿಗೆ “ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥ”ರಾಗುವಂತೆ ಉತ್ತೇಜಿಸಿದನು.—ಎಫೆಸ 4:8-13; 1 ಕೊರಿಂಥ 14:20.
5. ನಾವು ಪೂರ್ಣತೆಯನ್ನು ಒಂದು ಪ್ರಾಮುಖ್ಯ ಗುರಿಯಾಗಿ ಹೇಗೆ ಮಾಡಿಕೊಳ್ಳಸಾಧ್ಯವಿದೆ?
5 ಕೊಲೊಸ್ಸೆಯಲ್ಲಿದ್ದ ಕೆಲವರು ಇನ್ನು ಕೂಡ ಆತ್ಮಿಕವಾಗಿ ಪ್ರಾಯಸ್ಥರಾಗಿರದಿದ್ದಲ್ಲಿ, ಅಥವಾ ಪ್ರೌಢರಾಗಿರದಿದ್ದಲ್ಲಿ, ಆ ಮಟ್ಟವನ್ನು ತಲಪುವುದು ಅವರ ಗುರಿಯಾಗಿರಬೇಕಾಗಿತ್ತು. ಇದು ಇಂದು ಸಹ ಸತ್ಯವಾಗಿರಬಾರದೋ? ನಾವು ಅನೇಕ ದಶಕಗಳ ಹಿಂದೆಯೇ ದೀಕ್ಷಾಸ್ನಾನ ಪಡೆದುಕೊಂಡಿರಲಿ ಅಥವಾ ಇತ್ತೀಚೆಗಷ್ಟೇ ದೀಕ್ಷಾಸ್ನಾನ ಪಡೆದುಕೊಂಡಿರಲಿ, ನಮ್ಮ ವಿವೇಚನಾ ಸಾಮರ್ಥ್ಯ ಹಾಗೂ ದೃಷ್ಟಿಕೋನಗಳಲ್ಲಿ ನಾವು ಸ್ಪಷ್ಟವಾದ ಪ್ರಗತಿ ಮಾಡಿರುವುದನ್ನು ನಾವು ನೋಡಸಾಧ್ಯವಿದೆಯೋ? ಯಾವುದೇ ನಿರ್ಣಯಗಳನ್ನು ಮಾಡುವುದಕ್ಕೆ ಮೊದಲು ನಾವು ಬೈಬಲ್ ಮೂಲತತ್ವವನ್ನು ಪರಿಗಣಿಸುತ್ತೇವೋ? ದೇವರಿಗೆ ಹಾಗೂ ಸಭೆಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳು ನಮ್ಮ ಜೀವಿತದಲ್ಲಿ ಸದಾ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತಿವೆಯೋ ಅಥವಾ ಅವುಗಳಿಗೆ ನಾವು ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿಲ್ಲವೋ? ನಾವು ಪೂರ್ಣತೆಯ ಕಡೆಗೆ ಅಂತಹ ಪ್ರಗತಿಯನ್ನು ಮಾಡಬಹುದಾದ ಎಲ್ಲ ವಿಧಗಳನ್ನು ಇಲ್ಲಿ ದೃಷ್ಟಾಂತಿಸಲು ಸಾಧ್ಯವಿಲ್ಲವಾದರೂ, ಅವುಗಳಲ್ಲಿ ಎರಡು ಉದಾಹರಣೆಗಳನ್ನು ಪರಿಗಣಿಸೋಣ.
6. ಯಾವ ವಿಷಯದಲ್ಲಿ ನಾವು ಯೆಹೋವನಂತೆ ಪರಿಪೂರ್ಣರಾಗುವ ಪ್ರಯತ್ನವನ್ನು ಮಾಡಬಹುದು?
6 ಮೊದಲನೆಯ ಉದಾಹರಣೆ: ಬೇರೊಂದು ಜಾತಿಯ, ರಾಷ್ಟ್ರದ ಅಥವಾ ಧರ್ಮದ ಜನರ ಕಡೆಗೆ ಅವಿಚಾರಾಭಿಪ್ರಾಯ ಅಥವಾ ಹಗೆತನವನ್ನು ತೋರಿಸುವಂತಹ ಪರಿಸರದಲ್ಲಿ ನಾವು ಬೆಳೆದಿದ್ದೇವೆ ಎಂದಿಟ್ಟುಕೊಳ್ಳಿ. ದೇವರು ಪಕ್ಷಪಾತಿಯಲ್ಲ, ಆದುದರಿಂದ ನಾವು ಸಹ ಪಕ್ಷಪಾತಿಗಳಾಗಿರಬಾರದು ಎಂಬುದು ನಮಗೆ ಗೊತ್ತಿದೆ. (ಅ. ಕೃತ್ಯಗಳು 10:14, 15, 34, 35) ನಮ್ಮ ಸಭೆಯಲ್ಲಿ ಅಥವಾ ಸರ್ಕಿಟ್‌ನಲ್ಲಿ, ಅಂತಹ ಹಿನ್ನೆಲೆಯಿರುವ ವ್ಯಕ್ತಿಗಳು ಇದ್ದಾರೆ. ಆದರೂ, ಅಂತಹ ಹಿನ್ನೆಲೆಯಿಂದ ಬಂದಿರುವ ಜನರ ಕಡೆಗೆ ಹೊರನೋಟಕ್ಕೆ ನಾವು ಒಳ್ಳೇದಾಗಿ ವರ್ತಿಸುವುದಾದರೂ, ನಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ಇನ್ನೂ ನಕಾರಾತ್ಮಕ ಅನಿಸಿಕೆಗಳು ಅಥವಾ ಸಂಶಯಗಳು ಇವೆಯೋ? ಆ ಹಿನ್ನೆಲೆಯಿರುವ ಒಬ್ಬ ವ್ಯಕ್ತಿಯು ಒಂದು ಚಿಕ್ಕ ತಪ್ಪನ್ನು ಅಥವಾ ಅಪರಾಧವನ್ನು ಮಾಡುವಲ್ಲಿ, ಆ ಕೂಡಲೆ ಅವನ ಬಗ್ಗೆ ನಮಗೆ ಕೆಟ್ಟ ಭಾವನೆ ಮೂಡುತ್ತದೋ? ನೀವು ಸ್ವತಃ ಹೀಗೆ ಕೇಳಿಕೊಳ್ಳಿ, ‘ದೇವರಂತೆ ನಾನೂ ನಿಷ್ಪಕ್ಷಪಾತಿಯಾಗಬೇಕಾದರೆ, ನನ್ನ ಜೀವಿತದಲ್ಲಿ ನಾನು ಇನ್ನೂ ಹೆಚ್ಚು ಪ್ರಗತಿಯನ್ನುಮಾಡುವ ಅಗತ್ಯವಿದೆಯೋ?’
7. ಒಬ್ಬ ಕ್ರೈಸ್ತನೋಪಾದಿ ಪೂರ್ಣನಾಗುವುದರಲ್ಲಿ, ಇತರರ ಕುರಿತು ಯಾವ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಸಹ ಒಳಗೂಡಿದೆ?
7 ಎರಡನೆಯ ಉದಾಹರಣೆ: ಫಿಲಿಪ್ಪಿ 2:3ಕ್ಕನುಸಾರ, ನಾವು ‘ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ ಪ್ರತಿಯೊಬ್ಬನೂ ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಬೇಕು.’ ಈ ವಿಷಯದಲ್ಲಿ ನಾವು ಹೇಗೆ ಪ್ರಗತಿಯನ್ನು ಮಾಡುತ್ತಿದ್ದೇವೆ? ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಬಲಹೀನತೆಗಳು ಹಾಗೂ ಒಳ್ಳೇ ಗುಣಗಳು ಇರುತ್ತವೆ. ಈ ಮುಂಚೆ, ಇತರರ ದೌರ್ಬಲ್ಯಗಳನ್ನು ಬೇಗನೆ ಗಮನಿಸುವಂತಹ ಗುಣವು ನಮ್ಮಲ್ಲಿದ್ದಿರಬಹುದು. ಆದರೆ ಈಗ, ಇನ್ನೆಂದೂ ಇತರರಿಂದ “ಪರಿಪೂರ್ಣತೆ”ಯನ್ನು (NW) ಅಪೇಕ್ಷಿಸದಿರುವಂತಹ ಮಟ್ಟಕ್ಕೆ ನಾವು ಪ್ರಗತಿಯನ್ನು ಮಾಡಿದ್ದೇವೋ? (ಯಾಕೋಬ 3:2) ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ, ಯಾವ ವಿಷಯಗಳಲ್ಲಿ ಇತರರು ನಮಗಿಂತಲೂ ಶ್ರೇಷ್ಠರಾಗಿದ್ದಾರೆ ಎಂಬುದನ್ನು ನಾವು ನೋಡಶಕ್ತರಾಗಿದ್ದೇವೋ? ‘ಈ ಸಹೋದರಿಯು ನನಗಿಂತ ತುಂಬ ತಾಳ್ಮೆಯನ್ನು ತೋರಿಸುತ್ತಾಳೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.’ ‘ಆ ವ್ಯಕ್ತಿಗೆ ತುಂಬ ಬಲವಾದ ನಂಬಿಕೆಯಿದೆ.’ ‘ನಿಜವಾಗಿಯೂ ಹೇಳಬೇಕೆಂದರೆ, ಅವನು ನನಗಿಂತಲೂ ಹೆಚ್ಚು ಉತ್ತಮ ಶಿಕ್ಷಕನಾಗಿದ್ದಾನೆ.’ ಕೊಲೊಸ್ಸೆ ಸಭೆಯಲ್ಲಿದ್ದ ಕೆಲವರಿಗೆ ಈ ವಿಷಯದಲ್ಲಿ ಪ್ರಗತಿಯನ್ನು ಮಾಡುವ ಅಗತ್ಯವಿದ್ದಿರಬಹುದು. ನಾವು ಸಹ ಪ್ರಗತಿಯನ್ನು ಮಾಡುವ ಅಗತ್ಯವಿದೆಯೋ?
8, 9. (ಎ) ಯಾವ ಅರ್ಥದಲ್ಲಿ ಕೊಲೊಸ್ಸೆಯವರು ಪೂರ್ಣರಾಗಿ ‘ನಿಲ್ಲುವಂತೆ’ ಎಪಫ್ರನು ಪ್ರಾರ್ಥಿಸಿದನು? (ಬಿ) ‘ಪೂರ್ಣರಾಗಿ ನಿಲ್ಲುವುದು,’ ಭವಿಷ್ಯತ್ತಿನ ವಿಷಯದಲ್ಲಿ ಯಾವುದಕ್ಕೆ ಸೂಚಿತವಾಗಿತ್ತು?
8 ಕೊಲೊಸ್ಸೆಯವರು ‘ಪೂರ್ಣರಾಗಿ ನಿಲ್ಲಲಿ’ ಎಂದು ಎಪಫ್ರನು ಪ್ರಾರ್ಥಿಸಿದನು. ಕೊಲೊಸ್ಸೆಯವರು ಈಗ ಎಷ್ಟರ ಮಟ್ಟಿಗೆ ಪೂರ್ಣರೂ, ಪ್ರೌಢರೂ, ಪ್ರಾಯಸ್ಥರೂ ಆದ ಕ್ರೈಸ್ತರಾಗಿದ್ದರೋ ಅದೇ ಸ್ಥಿತಿಯಲ್ಲಿ ಮುಂದೆಯೂ ಪೂರ್ಣರಾಗಿ ‘ನಿಲ್ಲಲಿ’ ಎಂದು ಎಪಫ್ರನು ದೇವರಿಗೆ ಪ್ರಾರ್ಥಿಸುತ್ತಿದ್ದನು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
9 ಕ್ರೈಸ್ತನಾಗುವ ಪ್ರತಿಯೊಬ್ಬ ವ್ಯಕ್ತಿಯು ಎಷ್ಟೇ ಪ್ರೌಢನಾಗಿರಲಿ, ಅವನು ಅದೇ ಮಾರ್ಗದಲ್ಲಿ ಮುಂದುವರಿಯುತ್ತಾನೆ ಎಂದು ನಾವು ಊಹಿಸಸಾಧ್ಯವಿಲ್ಲ. ದೇವದೂತನಂತಿದ್ದ ಒಬ್ಬ ದೇವಕುಮಾರನು, “ಸತ್ಯದಲ್ಲಿ ನಿಲ್ಲಲಿಲ್ಲ” ಎಂದು ಯೇಸು ಹೇಳಿದನು. (ಯೋಹಾನ 8:44) ಗತಕಾಲದಲ್ಲಿ ಸ್ವಲ್ಪ ಸಮಯದ ವರೆಗೆ ಯೆಹೋವನ ಸೇವೆಮಾಡುತ್ತಿದ್ದು, ಕಾಲಾನಂತರ ಬೇರೆ ದಾರಿ ಹಿಡಿದಂತಹ ಕೆಲವರ ಕುರಿತು ಪೌಲನು ಕೊರಿಂಥದವರಿಗೆ ಎಚ್ಚರಿಕೆ ನೀಡಿದನು. ಯೇಸುವಿನ ಆತ್ಮಾಭಿಷಿಕ್ತ ಸಹೋದರರಿಗೆ ಅವನು ಎಚ್ಚರಿಕೆ ನೀಡಿದ್ದು: “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” (1 ಕೊರಿಂಥ 10:12) ಕೊಲೊಸ್ಸೆಯವರು ‘ಕೊನೆಯಲ್ಲಿ ಪೂರ್ಣರಾಗಿ ನಿಲ್ಲಬೇಕೆಂಬ’ ಪ್ರಾರ್ಥನೆಗೆ ಇದು ಹೆಚ್ಚು ಮಹತ್ವವನ್ನು ಕೊಡುತ್ತದೆ. ಒಮ್ಮೆ ಅವರು ಪೂರ್ಣರಾಗಿ, ಪ್ರಾಯಸ್ಥರಾಗಿ ಪರಿಣಮಿಸಿದ ಬಳಿಕ, ಅವರು ಹಿಂದೆಗೆಯದೆ, ಉತ್ಸಾಹಗುಂದದೆ, ಅಥವಾ ಬಳಲದೆ ಅದೇ ಮಾರ್ಗದಲ್ಲಿ ಮುಂದುವರಿಯಬೇಕಿತ್ತು. (ಇಬ್ರಿಯ 2:1; 3:12; 6:6; 10:39; 12:25) ಹೀಗೆ ಮಾಡುವಲ್ಲಿ, ಅವರು ತಮ್ಮ ಪರೀಕ್ಷೆ ಹಾಗೂ ಅಂತಿಮ ಅಂಗೀಕಾರದ ದಿನದಲ್ಲಿ ‘ಪೂರ್ಣರಾಗಿ’ ನಿಲ್ಲಶಕ್ತರಿದ್ದರು.—2 ಕೊರಿಂಥ 5:10; 1 ಪೇತ್ರ 2:12.
10, 11. (ಎ) ಪ್ರಾರ್ಥನೆಯ ವಿಷಯದಲ್ಲಿ ಎಪಫ್ರನು ನಮಗೆ ಯಾವ ಮಾದರಿಯನ್ನಿಟ್ಟಿದ್ದಾನೆ? (ಬಿ) ಎಪಫ್ರನ ಮಾದರಿಯನ್ನು ಅನುಸರಿಸಲಿಕ್ಕಾಗಿ, ನೀವು ಯಾವ ನಿರ್ಧಾರವನ್ನು ಮಾಡಲು ಬಯಸುವಿರಿ?
10 ಪ್ರಾರ್ಥನೆಯಲ್ಲಿ ಇತರರ ಹೆಸರನ್ನು ಒಳಗೂಡಿಸುವ ಮೂಲಕ, ಯೆಹೋವನು ಅವರಿಗೆ ಸಹಾಯಮಾಡಲಿ, ಅವರಿಗೆ ಸಾಂತ್ವನ ನೀಡಲಿ, ಅವರನ್ನು ಆಶೀರ್ವದಿಸಲಿ, ಮತ್ತು ಅವರಿಗೆ ಪವಿತ್ರಾತ್ಮವನ್ನು ನೀಡಲಿ ಎಂದು ಸ್ಪಷ್ಟವಾಗಿ ಕೇಳಿಕೊಳ್ಳುವ ಮೂಲಕ, ಇತರರಿಗೋಸ್ಕರ ಪ್ರಾರ್ಥಿಸುವುದರ ಮಹತ್ವವನ್ನು ನಾವು ಈಗಾಗಲೇ ಚರ್ಚಿಸಿದ್ದೇವೆ. ಕೊಲೊಸ್ಸೆಯವರ ಪರವಾಗಿ ಎಪಫ್ರನು ಮಾಡಿದ ಪ್ರಾರ್ಥನೆಗಳು ಈ ರೀತಿಯಲ್ಲಿದ್ದವು. ಮತ್ತು ಅವನ ಮಾತುಗಳಲ್ಲಿ, ನಾವು ಪ್ರಾರ್ಥನೆಮಾಡುವಾಗ ನಮಗಾಗಿ ಏನನ್ನು ಬೇಡಿಕೊಳ್ಳಬೇಕು ಎಂಬುದರ ಕುರಿತು ಅಮೂಲ್ಯ ಸಲಹೆಯನ್ನು ಕಂಡುಕೊಳ್ಳಬಹುದು. ವೈಯಕ್ತಿಕವಾಗಿ ನಾವು ‘ಕೊನೆಯಲ್ಲಿ ಪೂರ್ಣರಾಗಿ ನಿಲ್ಲುವಂತಾಗಲು’ ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳುವ ಅಗತ್ಯವಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಈ ವಿಷಯದಲ್ಲಿ ಆತನ ಸಹಾಯಕ್ಕಾಗಿ ನೀವು ಪ್ರಾರ್ಥಿಸುತ್ತೀರೋ?
11 ಪ್ರಾರ್ಥನೆಯಲ್ಲಿ ನಿಮ್ಮ ಸನ್ನಿವೇಶವನ್ನು ಏಕೆ ವ್ಯಕ್ತಪಡಿಸಬಾರದು? ‘ಪೂರ್ಣರಾಗುವ,’ ಪ್ರಾಯಸ್ಥರಾಗುವ, ಪ್ರೌಢರಾಗುವ ಪಥದಲ್ಲಿ ನೀವು ಎಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದೀರಿ ಎಂಬುದರ ಕುರಿತು ದೇವರೊಂದಿಗೆ ಮಾತಾಡಿರಿ. ಅಷ್ಟುಮಾತ್ರವಲ್ಲ, ಯಾವ ಕ್ಷೇತ್ರಗಳಲ್ಲಿ ನೀವು ಆತ್ಮಿಕವಾಗಿ ಬೆಳೆಯುವ ಆವಶ್ಯಕತೆಯಿದೆ ಎಂಬುದನ್ನು ಗುರುತಿಸಲು ನಿಮಗೆ ಸಹಾಯಮಾಡುವಂತೆ ಆತನನ್ನು ಬೇಡಿಕೊಳ್ಳಿರಿ. (ಕೀರ್ತನೆ 17:3; 139:23, 24) ನೀವು ಇನ್ನೂ ಪ್ರಗತಿಮಾಡಬೇಕಾಗಿರುವಂಥ ಕ್ಷೇತ್ರಗಳಿವೆ ಎಂಬುದಂತೂ ಖಂಡಿತ. ಹಾಗಾದರೆ, ಇದರ ಬಗ್ಗೆ ನಿರುತ್ಸಾಹಗೊಳ್ಳುವುದಕ್ಕೆ ಬದಲಾಗಿ, ಪ್ರಗತಿಮಾಡಲು ಸಹಾಯಮಾಡುವಂತೆ ಸ್ಪಷ್ಟವಾದ ರೀತಿಯಲ್ಲಿ ಕೇಳಿಕೊಳ್ಳುತ್ತಾ ದೇವರಿಗೆ ಪ್ರಾರ್ಥಿಸಿರಿ. ಈ ವಿಷಯದ ಬಗ್ಗೆ ಒಂದಕ್ಕಿಂತಲೂ ಹೆಚ್ಚು ಬಾರಿ ಪ್ರಾರ್ಥಿಸಿರಿ. ವಾಸ್ತವದಲ್ಲಿ, ನಾನು ಪ್ರಗತಿಯನ್ನು ಮಾಡಬೇಕಾಗಿರುವಂಥ ವಿಷಯದ ಬಗ್ಗೆ ಬರುವ ವಾರದಲ್ಲೇ ದೀರ್ಘವಾದ ಪ್ರಾರ್ಥನೆಯನ್ನು ಮಾಡುವೆ ಮತ್ತು ‘ಕೊನೆಯಲ್ಲಿ ಪೂರ್ಣವಾಗಿ ನಿಲ್ಲಲು’ ಪ್ರಯತ್ನಿಸುವೆ ಎಂಬ ನಿರ್ಧಾರವನ್ನು ನೀವೇಕೆ ಮಾಡಬಾರದು? ಮತ್ತು ನೀವು ವಾರ್ಷಿಕವಚನವನ್ನು ಪರಿಗಣಿಸುವಾಗ ಇದನ್ನು ಇನ್ನಷ್ಟು ಮಾಡಲು ಯೋಜನೆಗಳನ್ನು ಮಾಡಿರಿ. ನಿಮ್ಮ ಪ್ರಾರ್ಥನೆಗಳಲ್ಲಿ, ದೇವರ ಸೇವೆಯಿಂದ ನಿಮ್ಮನ್ನು ದೂರ ಸೆಳೆಯುವಂತಹ, ನಿಮ್ಮ ಉತ್ಸಾಹವನ್ನು ಕುಂದಿಸುವಂತಹ, ಅಥವಾ ನಿಮಗೆ ಬೇಸರಹಿಡಿಸುವಂತಹ ಯಾವುದೇ ಪ್ರವೃತ್ತಿಗಳಿರುವಲ್ಲಿ, ಅವುಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಮತ್ತು ಹೀಗಾಗುವುದನ್ನು ಹೇಗೆ ತಡೆಗಟ್ಟಸಾಧ್ಯವಿದೆ ಎಂಬುದರ ಬಗ್ಗೆ ಸಹ ಯೋಚಿಸಿರಿ.—ಎಫೆಸ 6:11, 13, 14, 18.
ದೃಢನಿಶ್ಚಿತತೆಯಿಂದ ಪ್ರಾರ್ಥಿಸಿರಿ
12. ವಿಶೇಷವಾಗಿ ಕೊಲೊಸ್ಸೆಯವರು “ದೃಢನಿಶ್ಚಿತರಾಗಿ” ನಿಲ್ಲುವ ಅಗತ್ಯವಿತ್ತೇಕೆ?
12 ಎಪಫ್ರನು ಇನ್ನೊಂದು ವಿಷಯದ ಬಗ್ಗೆಯೂ ಪ್ರಾರ್ಥಿಸಿದನು. ಮತ್ತು ಇದು, ಕೊಲೊಸ್ಸೆಯವರು ಕೊನೆಯದಾಗಿ ದೇವರಿಗೆ ಅಂಗೀಕಾರಾರ್ಹರಾಗಿ ಕಂಡುಬರಲು ಅತ್ಯಗತ್ಯವಾದದ್ದಾಗಿತ್ತು. ನಮಗೂ ಇದು ತುಂಬ ಅತ್ಯಗತ್ಯವಾದದ್ದಾಗಿದೆ. ಅದು ಏನಾಗಿತ್ತು? ಅವರು ‘ಎಲ್ಲಾ ವಿಷಯಗಳಲ್ಲಿ ಗಲಾತ್ಯ 3:19; ಕೊಲೊಸ್ಸೆ 2:8, 16-18.
ದೇವರ ಚಿತ್ತದ ಕುರಿತು ದೃಢನಿಶ್ಚಿತರಾಗಿ’ ನಿಲ್ಲಸಾಧ್ಯವಾಗುವಂತೆ ಎಪಫ್ರನು ಪ್ರಾರ್ಥಿಸಿದನು. ಪಾಷಂಡವಾದ ಹಾಗೂ ವಿನಾಶಕರ ತತ್ವಜ್ಞಾನವು ಅವರ ಸುತ್ತಲೂ ಹಬ್ಬಿಕೊಂಡಿತ್ತು. ಇದು ಹೊರತೋರಿಕೆಗೆ ಸತ್ಯಾರಾಧನೆಯಂತೆ ಕಂಡುಬರುತ್ತಿತ್ತು. ಉದಾಹರಣೆಗೆ, ಒಂದುಕಾಲದಲ್ಲಿ ಯೆಹೂದಿ ಆರಾಧನೆಯಲ್ಲಿ ಅಗತ್ಯಪಡಿಸಲ್ಪಟ್ಟಿದ್ದಂತೆ, ಅವರು ವಿಶೇಷ ದಿನಗಳನ್ನು ಉಪವಾಸ ಹಾಗೂ ಹಬ್ಬದೊಂದಿಗೆ ಆಚರಿಸುವಂತೆ ಒತ್ತಾಯಿಸಲ್ಪಟ್ಟಿದ್ದರು. ಸುಳ್ಳು ಬೋಧಕರು, ಮೋಶೆಗೆ ಧರ್ಮಶಾಸ್ತ್ರವನ್ನು ಕೊಡಲಿಕ್ಕಾಗಿ ಉಪಯೋಗಿಸಲ್ಪಟ್ಟಂತಹ ಪ್ರಬಲ ಆತ್ಮಜೀವಿಗಳಾಗಿದ್ದ ದೇವದೂತರಿಗೆ ಮಹತ್ವ ನೀಡಿದರು. ಈ ರೀತಿಯ ಒತ್ತಡಗಳಿಗೆ ಅಧೀನರಾಗಿರುವುದನ್ನು ತುಸು ಊಹಿಸಿಕೊಳ್ಳಿರಿ! ಅಷ್ಟುಮಾತ್ರವಲ್ಲ, ಪರಸ್ಪರ ವಿರುದ್ಧವಾಗಿರುವ ಅಸಂಖ್ಯಾತ ಊಹಾಪೋಹಗಳೂ ಅಸ್ತಿತ್ವದಲ್ಲಿದ್ದವು.—13. ಯಾವ ಅಂಶವನ್ನು ಗ್ರಹಿಸುವುದು ಕೊಲೊಸ್ಸೆಯವರಿಗೆ ಸಹಾಯಮಾಡಸಾಧ್ಯವಿತ್ತು, ಮತ್ತು ಅದು ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ?
13 ಯೇಸು ಕ್ರಿಸ್ತನ ಪಾತ್ರವನ್ನು ಒತ್ತಿಹೇಳುವ ಮೂಲಕ ಪೌಲನು ಅವರ ಊಹಾಪೋಹಗಳನ್ನು ತಪ್ಪೆಂದು ರುಜುಪಡಿಸಲು ಪ್ರಯತ್ನಿಸಿದನು. “ನೀವು ಕರ್ತನಾದ ಯೇಸುವೆಂಬ ಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದುಕೊಳ್ಳಿರಿ. ಆತನಲ್ಲಿ ಬೇರೂರಿಕೊಂಡು ಭಕ್ತಿವೃದ್ಧಿಯನ್ನು ಹೊಂದಿ ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತನಂಬಿಕೆಯಲ್ಲಿ ನೆಲೆ”ಗೊಂಡಿರಿ ಎಂದು ಅವನು ಹೇಳಿದನು. ಹೌದು, ದೇವರ ಉದ್ದೇಶದಲ್ಲಿ ಮತ್ತು ನಮ್ಮ ಜೀವಿತದಲ್ಲಿ ಕ್ರಿಸ್ತನು ವಹಿಸುವ ಪಾತ್ರದ ಕುರಿತು (ಕೊಲೊಸ್ಸೆಯವರಿಗೆ ಮತ್ತು ನಮಗೆ) ದೃಢನಿಶ್ಚಿತ ಮನೋಭಾವದ ಅಗತ್ಯವಿತ್ತು. ಈ ವಿಷಯದ ಕುರಿತು ಪೌಲನು ವಿವರಿಸಿದ್ದು: “ಕ್ರಿಸ್ತನಲ್ಲಿಯೇ ದೇವರ ಸರ್ವಸಂಪೂರ್ಣತೆಯು ಅವತರಿಸಿ ವಾಸಮಾಡುತ್ತದೆ, ಮತ್ತು ನೀವು ಆತನಲ್ಲಿದ್ದುಕೊಂಡೇ ಪರಿಪೂರ್ಣತೆಯನ್ನು ಹೊಂದಿದವರಾಗಿದ್ದೀರಿ. ಆತನು ಎಲ್ಲಾ ಧೊರೆತನಗಳಿಗೂ ಅಧಿಕಾರಿಗಳಿಗೂ ಶಿರಸ್ಸು.”—ಕೊಲೊಸ್ಸೆ 2:6-11.
14. ಕೊಲೊಸ್ಸೆಯಲ್ಲಿದ್ದವರಿಗೆ ನಿರೀಕ್ಷೆಯು ಒಂದು ನೈಜ ಸಂಗತಿಯಾಗಿತ್ತೇಕೆ?
14 ಕೊಲೊಸ್ಸೆಯವರು ಆತ್ಮಾಭಿಷಿಕ್ತ ಕ್ರೈಸ್ತರಾಗಿದ್ದರು. ಅವರಿಗೆ ಒಂದು ಗಮನಾರ್ಹ ನಿರೀಕ್ಷೆಯಿತ್ತು, ಮತ್ತು ಅದು ಸ್ವರ್ಗೀಯ ಜೀವಿತವೇ ಆಗಿತ್ತು. ಅಷ್ಟುಮಾತ್ರವಲ್ಲ, ಆ ನಿರೀಕ್ಷೆಯನ್ನು ಉಜ್ವಲವಾಗಿರಿಸಲು ಅನೇಕ ಕಾರಣಗಳಿದ್ದವು. (ಕೊಲೊಸ್ಸೆ 1:5) ತಮ್ಮ ನಿರೀಕ್ಷೆಯ ನಿಶ್ಚಿತತೆಯ ಕುರಿತು ಅವರಿಗೆ ದೃಢನಿಶ್ಚಯವಿರಬೇಕು ಎಂಬುದು “ದೇವರ ಚಿತ್ತ”ವಾಗಿತ್ತು. ಅವರಲ್ಲಿ ಯಾರಾದರೊಬ್ಬರು ಆ ನಿರೀಕ್ಷೆಯ ಬಗ್ಗೆ ಸಂದೇಹಪಟ್ಟಿದ್ದಿರಬಹುದೋ? ಖಂಡಿತವಾಗಿಯೂ ಇಲ್ಲ! ಹಾಗಾದರೆ, ಭೂಪ್ರಮೋದವನದಲ್ಲಿ ಜೀವಿಸುವ ದೇವದತ್ತ ಪ್ರತೀಕ್ಷೆಯಿರುವವರೆಲ್ಲರೂ ಈ ನಿರೀಕ್ಷೆಯ ಬಗ್ಗೆ ಸಂದೇಹಪಡಬೇಕೋ? ನಿಶ್ಚಯವಾಗಿಯೂ ಇಲ್ಲ! ಆ ನಿರೀಕ್ಷೆಯು “ದೇವರ ಚಿತ್ತ”ದ ಒಂದು ಭಾಗವಾಗಿದೆ ಎಂಬುದಂತೂ ಸ್ಪಷ್ಟ. ಈಗ ಈ ಪ್ರಶ್ನೆಗಳನ್ನು ಪರಿಗಣಿಸಿರಿ: ಒಂದುವೇಳೆ ನೀವು “ಮಹಾ ಸಂಕಟ”ದಿಂದ ಪಾರಾಗಲಿರುವ “ಮಹಾ ಸಮೂಹ”ದವರಲ್ಲಿ ಒಬ್ಬರಾಗಿರಲು ಶ್ರಮಿಸುತ್ತಿರುವಲ್ಲಿ, ನಿಮ್ಮ ನಿರೀಕ್ಷೆಯು ಎಷ್ಟು ನೈಜವಾಗಿದೆ? (ಪ್ರಕಟನೆ 7:9, 14) ಅದು ‘ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತಾದ ದೃಢನಿಶ್ಚಿತ’ ಮನೋಭಾವದ ಒಂದು ಭಾಗವಾಗಿದೆಯೋ?
15. ನಿರೀಕ್ಷೆಯನ್ನು ಒಳಗೂಡಿಸಿದಂತಹ ಯಾವ ಅಂಶಗಳನ್ನು ಪೌಲನು ವಿವರಿಸಿದನು?
15 “ನಿರೀಕ್ಷೆ” ಎಂದು ಹೇಳುವಾಗ, ಅದು ಅನಿಶ್ಚಿತ ಬಯಕೆಯನ್ನು ಇಲ್ಲವೇ ಹಗಲುಗನಸನ್ನು ಅರ್ಥೈಸುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಈ ಮುಂಚೆ ಪೌಲನು ರೋಮಾಪುರದವರಿಗೆ ಬರೆದ ಅನೇಕ ಅಂಶಗಳಿಂದ ನಾವಿದನ್ನು ನೋಡಸಾಧ್ಯವಿದೆ. ಆ ಅಂಶಗಳಲ್ಲಿ ತಿಳಿಸಲ್ಪಟ್ಟಿರುವ ಪ್ರತಿಯೊಂದು ವಿಷಯವು ಮುಂದಿನ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ತನ್ನ ವಿಚಾರಸರಣಿಯಲ್ಲಿ ಪೌಲನು ಎಲ್ಲಿ “ನಿರೀಕ್ಷೆ”ಯನ್ನು ಸೇರಿಸುತ್ತಾನೆ ಎಂಬುದಕ್ಕೆ ಗಮನವನ್ನು ಕೊಡಿರಿ: “ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ ಉಲ್ಲಾಸವಾಗಿದ್ದೇವೆ. ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ [“ಅಂಗೀಕೃತ ಸ್ಥಿತಿಗೆ ನಡಿಸುತ್ತದೆ,” NW], ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು. ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆಯಲ್ಲಾ.”—ರೋಮಾಪುರ 5:3-5.
16. ನೀವು ಬೈಬಲ್ ಸತ್ಯವನ್ನು ಕಲಿಯುತ್ತಿರುವಾಗ, ಯಾವ ನಿರೀಕ್ಷೆಯು ನಿಮಗೆ ಸಿಕ್ಕಿತು?
16 ಮೊತ್ತಮೊದಲ ಬಾರಿ ಯೆಹೋವನ ಸಾಕ್ಷಿಗಳು ನಿಮಗೆ ಬೈಬಲಿನ ಸಂದೇಶವನ್ನು ತಿಳಿಸಿದಾಗ, ಮೃತರ ಸ್ಥಿತಿ ಅಥವಾ ಪುನರುತ್ಥಾನದಂತಹ ನಿರ್ದಿಷ್ಟ ಸತ್ಯತೆಯು ನಿಮ್ಮ ಗಮನವನ್ನು ಸೆಳೆದಿರಬಹುದು. ಅನೇಕರಿಗಾದರೋ, ಒಂದು ಭೂಪ್ರಮೋದವನದಲ್ಲಿ ಸದಾಕಾಲ ಜೀವಿಸುವಂತಹ ಬೈಬಲಾಧಾರಿತ ಸಾಧ್ಯತೆಯೇ, ಸತ್ಯದ ಕುರಿತಾದ ಆಸಕ್ತಿಯನ್ನು ಕೆರಳಿಸಿರಬಹುದು. ಆ ಬೋಧನೆಯನ್ನು ನೀವು ಪ್ರಥಮ ಬಾರಿ ಕೇಳಿಸಿಕೊಂಡ ಸಂದರ್ಭವನ್ನು ಜ್ಞಾಪಿಸಿಕೊಳ್ಳಿರಿ. ಅಸ್ವಸ್ಥತೆ ಹಾಗೂ ವೃದ್ಧಾಪ್ಯವು ಇರುವುದಿಲ್ಲ, ನಿಮ್ಮ ಪರಿಶ್ರಮದ ಫಲವನ್ನು ಆನಂದಿಸಲಿಕ್ಕಾಗಿ ನೀವು ಸದಾಕಾಲ ಜೀವಿಸಸಾಧ್ಯವಿದೆ, ಮತ್ತು ಪ್ರಾಣಿಗಳೊಂದಿಗೂ ಸಮಾಧಾನಕರ ಸಂಬಂಧವಿರುವುದು ಎಂದು ನಮಗೆ ಹೇಳಲಾಗಿತ್ತು. ನಿಜವಾಗಿಯೂ ಅದು ಎಂಥ ಅದ್ಭುತಕರವಾದ ನಿರೀಕ್ಷೆಯಾಗಿದೆ! (ಪ್ರಸಂಗಿ 9:5, 10; ಯೆಶಾಯ 65:17-25; ಯೋಹಾನ 5:28, 29; ಪ್ರಕಟನೆ 21:3, 4) ತುಂಬ ಆಶ್ಚರ್ಯಕರವಾದ ಒಂದು ನಿರೀಕ್ಷೆಯು ನಿಮಗೆ ಸಿಕ್ಕಿತಲ್ಲವೆ!
17, 18. (ಎ) ಪೌಲನು ರೋಮಾಪುರದವರಿಗೆ ಬರೆದ ವಿಚಾರಸರಣಿಯು ಹೇಗೆ ನಿರೀಕ್ಷೆಗೆ ಕಾರಣವಾಯಿತು? (ಬಿ) ರೋಮಾಪುರ 5:4, 5ರಲ್ಲಿ ಯಾವ ರೀತಿಯ ನಿರೀಕ್ಷೆಯ ಕುರಿತು ತಿಳಿಸಲಾಗಿದೆ, ಮತ್ತು ಅಂತಹ ನಿರೀಕ್ಷೆ ನಿಮ್ಮಲ್ಲಿದೆಯೋ?
17 ಈ ಮಧ್ಯೆ ನೀವು ವಿರೋಧವನ್ನೋ ಅಥವಾ ಹಿಂಸೆಯನ್ನೋ ಅನುಭವಿಸಿರಬಹುದು. (ಮತ್ತಾಯ 10:34-39; 24:9) ಇತ್ತೀಚೆಗೆ, ಅನೇಕ ದೇಶಗಳಲ್ಲಿ, ಸಾಕ್ಷಿಗಳ ಮನೆಗಳು ಲೂಟಿಮಾಡಲ್ಪಟ್ಟಿವೆ ಅಥವಾ ಅವರು ನಿರಾಶ್ರಿತರಾಗಿ ಜೀವಿಸುವಂತೆ ಒತ್ತಾಯಿಸಲ್ಪಟ್ಟಿದ್ದಾರೆ. ಇನ್ನೂ ಕೆಲವರು ಶಾರೀರಿಕವಾಗಿ ಹಿಂಸಿಸಲ್ಪಟ್ಟಿದ್ದಾರೆ, ಮತ್ತು ಅವರಿಂದ ಬೈಬಲ್ ಸಾಹಿತ್ಯಗಳು ವಶಪಡಿಸಿಕೊಳ್ಳಲ್ಪಟ್ಟಿವೆ, ಅಥವಾ ವಾರ್ತಾಮಾಧ್ಯಮಗಳ ಸುಳ್ಳು ವರದಿಗೆ ಬಲಿಯಾಗಿದ್ದಾರೆ. ಯಾವುದೇ ರೀತಿಯ ಹಿಂಸೆಯನ್ನು ನೀವು ಅನುಭವಿಸಿರಬಹುದಾದರೂ, ರೋಮಾಪುರ 5:3 ಹೇಳುವ ಪ್ರಕಾರ, ನೀವು ಉಪದ್ರವದಲ್ಲಿಯೂ ಉಲ್ಲಾಸಿಸಲು ಸಾಧ್ಯವಾಯಿತು, ಮತ್ತು ಇದರಿಂದ ಅತ್ಯುತ್ತಮ ಫಲಿತಾಂಶವು ದೊರಕಿತು. ಪೌಲನು ಬರೆದಂತೆ, ಉಪದ್ರವವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡಿತು. ತದನಂತರ, ತಾಳ್ಮೆಯು ಅಂಗೀಕೃತ ಸ್ಥಿತಿಗೆ ನಡಿಸಿತು. ನೀವು ಯಾವುದು ಸರಿಯಾಗಿದೆಯೋ ಅದನ್ನು ಮಾಡುತ್ತಿದ್ದೀರಿ, ಅಂದರೆ ದೇವರ ಚಿತ್ತವನ್ನು ಮಾಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತಿತ್ತು. ಆದುದರಿಂದ, ಆತನ ಅಂಗೀಕಾರ ಸಿಕ್ಕಿದೆ ಎಂಬ ವಿಷಯವು ನಿಮಗೆ ಮನದಟ್ಟಾಯಿತು. ಪೌಲನ ಮಾತುಗಳಲ್ಲೇ ಹೇಳುವುದಾದರೆ, ಸ್ವತಃ ನಿಮಗೆ “ಅಂಗೀಕೃತ ಸ್ಥಿತಿ”ಯಲ್ಲಿರುವ ಅನಿಸಿಕೆಯಾಯಿತು. ತನ್ನ ವಿಚಾರಸರಣಿಯನ್ನು ಮುಂದುವರಿಸುತ್ತಾ ಪೌಲನು ಬರೆದುದು: ‘ಆ ಅಂಗೀಕೃತ ಸ್ಥಿತಿಯು ನಿರೀಕ್ಷೆಯನ್ನು [ಉಂಟುಮಾಡುತ್ತದೆ].’ ಇದು ಸ್ವಲ್ಪ ಅಸಾಮಾನ್ಯ ಸಂಗತಿಯಾಗಿ ತೋರಬಹುದು. ತನ್ನ ವಿಚಾರಸರಣಿಯಲ್ಲಿ ಪೌಲನು “ನಿರೀಕ್ಷೆ”ಯನ್ನು ಇಷ್ಟೊಂದು ತಡವಾಗಿ ಏಕೆ ಹೆಸರಿಸಿದನು? ನೀವು ಮೊತ್ತಮೊದಲ ಬಾರಿ ಸುವಾರ್ತೆಯನ್ನು ಕೇಳಿಸಿಕೊಂಡಾಗಲೇ, ಅಂದರೆ ಬಹಳ ಸಮಯಕ್ಕೆ ಮುಂಚೆಯೇ ನಿಮ್ಮಲ್ಲಿ ನಿರೀಕ್ಷೆಯಿರಲಿಲ್ಲವೋ?
18 ಇಲ್ಲಿ ಪೌಲನು, ಪರಿಪೂರ್ಣ ಜೀವಿತದ ನಿರೀಕ್ಷೆಯ ಕುರಿತಾದ ನಮ್ಮ ಮೂಲ ಅನಿಸಿಕೆಗಳ ಬಗ್ಗೆ ಮಾತಾಡುತ್ತಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಅವನು ಯಾವುದರ ಕುರಿತಾಗಿ ಮಾತಾಡುತ್ತಾನೋ ಅದು ಆ ಪರಿಪೂರ್ಣ ಜೀವನದ ನಿರೀಕ್ಷೆಗಿಂತ ಹೆಚ್ಚಿನದ್ದನ್ನು ಒಳಗೂಡಿದೆ; ಇದು ಹೆಚ್ಚು ಆಳವಾದ ಮತ್ತು ಪ್ರೋತ್ಸಾಹದಾಯಕ ವಿಷಯವಾಗಿದೆ. ನಾವು ನಂಬಿಗಸ್ತಿಕೆಯಿಂದ ತಾಳಿಕೊಂಡು, ದೇವರ ಅಂಗೀಕಾರ ನಮಗೆ ಸಿಕ್ಕಿದೆ ಎಂಬುದನ್ನು ಗ್ರಹಿಸಿದಾಗ, ನಮ್ಮ ನಿರೀಕ್ಷೆಯ ಮೇಲೆ ಇದು ಗಾಢವಾದ ಪರಿಣಾಮವನ್ನು ಬೀರುತ್ತದೆ ಮತ್ತು ಆ ಆರಂಭದ ನಿರೀಕ್ಷೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಆರಂಭದಲ್ಲಿ ನಮಗಿದ್ದ ನಿರೀಕ್ಷೆಯು ಈಗ ಇನ್ನೂ ಹೆಚ್ಚು ನೈಜವಾಗುತ್ತದೆ, ಇನ್ನಷ್ಟು ದೃಢವಾಗುತ್ತದೆ, ಮತ್ತು ಇನ್ನಷ್ಟು ವೈಯಕ್ತಿಕವಾಗುತ್ತದೆ. ಈ ಆಳವಾದ
ನಿರೀಕ್ಷೆಯು ಇನ್ನೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ. ಮತ್ತು ನಮ್ಮ ಜೀವಿತದ ಅವಿಭಾಜ್ಯ ಅಂಗವಾಗಿ ಪರಿಣಮಿಸುತ್ತದೆ, ಮತ್ತು ನಮ್ಮ ನರನಾಡಿಗಳಲ್ಲಿ ಹರಿಯುತ್ತದೆ. ಮತ್ತು “ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆ.”19. ನಿಮ್ಮ ನಿರೀಕ್ಷೆಯು ಹೇಗೆ ನಿಮ್ಮ ಕ್ರಮವಾದ ಪ್ರಾರ್ಥನೆಗಳ ಒಂದು ಭಾಗವಾಗಿರಬೇಕು?
19 ಕೊಲೊಸ್ಸೆಯಲ್ಲಿರುವ ತನ್ನ ಸಹೋದರ ಸಹೋದರಿಯರು, ‘ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ದೃಢನಿಶ್ಚಿತ’ರಾಗಿದ್ದು, ತಮ್ಮ ಮುಂದಿರುವ ನಿರೀಕ್ಷೆಯ ಮೇಲೆ ಭರವಸೆಯಿಟ್ಟು, ಅದನ್ನು ಮನಗಂಡವರಾಗಿರಬೇಕು ಎಂಬುದು ಎಪಫ್ರನ ಶ್ರದ್ಧಾಪೂರ್ವಕ ಪ್ರಾರ್ಥನೆಯಾಗಿತ್ತು. ತದ್ರೀತಿಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ನಿರೀಕ್ಷೆಯ ಕುರಿತು ಕ್ರಮವಾಗಿ ದೇವರ ಬಳಿ ವಿನಂತಿಸಿಕೊಳ್ಳೋಣ. ನಿಮ್ಮ ಖಾಸಗಿ ಪ್ರಾರ್ಥನೆಗಳಲ್ಲಿ, ಹೊಸ ಲೋಕದ ಕುರಿತಾದ ನಿಮ್ಮ ನಿರೀಕ್ಷೆಯನ್ನು ಒಳಗೂಡಿಸಿರಿ. ಆ ಹೊಸ ಲೋಕವು ಬಂದೇ ಬರುತ್ತದೆ ಎಂಬ ದೃಢಭರವಸೆಯಿಂದ, ಅದಕ್ಕಾಗಿ ನೀವೆಷ್ಟು ಹಂಬಲಿಸುತ್ತೀರಿ ಎಂಬುದನ್ನು ಯೆಹೋವನಿಗೆ ವ್ಯಕ್ತಪಡಿಸಿರಿ. ನಿಮ್ಮ ದೃಢನಿಶ್ಚಯವನ್ನು ಇನ್ನಷ್ಟು ಬಲಗೊಳಿಸಲು ಹಾಗೂ ವಿಶಾಲಗೊಳಿಸಲಿಕ್ಕಾಗಿ ಸಹಾಯಮಾಡುವಂತೆ ಆತನನ್ನು ಬೇಡಿಕೊಳ್ಳಿರಿ. ಕೊಲೊಸ್ಸೆಯವರು ‘ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ದೃಢನಿಶ್ಚಿತ’ರಾಗಿರುವಂತೆ ಎಪಫ್ರನು ಪ್ರಾರ್ಥಿಸಿದಂತೆಯೇ, ನೀವು ಸಹ ಪ್ರಾರ್ಥಿಸಿರಿ. ಅನೇಕಾವರ್ತಿ ಪ್ರಾರ್ಥಿಸಿರಿ.
20. ಕೆಲವರು ಕ್ರೈಸ್ತ ಮಾರ್ಗವನ್ನು ಬಿಟ್ಟುಹೋಗುವಲ್ಲಿ, ಇದು ನಿರುತ್ಸಾಹಕ್ಕೆ ಒಂದು ಕಾರಣವಾಗಿರಬಾರದೇಕೆ?
20 ಎಲ್ಲರೂ ಪೂರ್ಣರಾಗಿ ಮತ್ತು ದೃಢನಿಶ್ಚಿತರಾಗಿ ನಿಲ್ಲುವುದಿಲ್ಲ ಎಂಬ ವಾಸ್ತವಾಂಶದಿಂದ ನೀವು ಅಪಕರ್ಷಿತರಾಗಬಾರದು ಅಥವಾ ನಿರಾಶೆಗೊಳ್ಳಬಾರದು. ಕೆಲವರು ಅಸಫಲರಾಗಿ, ಬೇರೆ ದಾರಿಯನ್ನು ಹಿಡಿಯಬಹುದು, ಅಥವಾ ಹೋರಾಟವನ್ನು ನಿಲ್ಲಿಸಬಹುದು. ಯೇಸುವಿಗೆ ತುಂಬ ಆಪ್ತರಾಗಿದ್ದವರ ನಡುವೆ, ಅಂದರೆ ಅವನ ಅಪೊಸ್ತಲರಿಗೇ ಇದು ಸಂಭವಿಸಿತು. ಆದರೆ, ಯೂದನು ಯೇಸುವಿಗೆ ದ್ರೋಹಮಾಡಿದಾಗ, ಇತರ ಅಪೊಸ್ತಲರು ನಿರುತ್ಸಾಹಗೊಂಡು ಅವನನ್ನು ಬಿಟ್ಟುಹೋದರೋ? ಖಂಡಿತವಾಗಿಯೂ ಇಲ್ಲ! ಯೂದನ ಸ್ಥಾನಕ್ಕೆ ಇನ್ನೊಬ್ಬನು ಬರುವನು ಎಂಬುದನ್ನು ತೋರಿಸಲಿಕ್ಕಾಗಿ ಪೇತ್ರನು ಕೀರ್ತನೆ 109:8ನೆಯ ವಚನವನ್ನು ಉಪಯೋಗಿಸಿದನು. ಯೂದನಿಗೆ ಬದಲಾಗಿ ಇನ್ನೊಬ್ಬ ವ್ಯಕ್ತಿಯನ್ನು ಆರಿಸಿಕೊಳ್ಳಲಾಯಿತು. ಮತ್ತು ದೇವರ ನಿಷ್ಠಾವಂತ ಸೇವಕರು ತಮ್ಮ ಸಾರುವ ನೇಮಕವನ್ನು ಕ್ರಿಯಾಶೀಲರಾಗಿ ಮುಂದುವರಿಸಿದರು. (ಅ. ಕೃತ್ಯಗಳು 1:15-26) ಅವರು ದೃಢನಿಶ್ಚಿತರಾಗಿದ್ದು, ಪೂರ್ಣರಾಗಿ ನಿಲ್ಲುವ ನಿರ್ಧಾರವನ್ನು ಮಾಡಿದ್ದರು.
21, 22. ನೀವು ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಂತಿರುವುದು, ಯಾವ ಅರ್ಥದಲ್ಲಿ ಇತರರಿಂದ ಗಮನಿಸಲ್ಪಡುವುದು?
21 ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ನೀವು ದೃಢನಿಶ್ಚಿತರಾಗಿದ್ದು, ಕೊನೆಯಲ್ಲಿ ಪೂರ್ಣರಾಗಿ ನಿಲ್ಲುವುದು ಖಂಡಿತವಾಗಿಯೂ ಇತರರಿಂದ ಗಮನಿಸಲ್ಪಡುತ್ತದೆ ಎಂಬ ವಿಷಯದಲ್ಲಿ ನೀವು ಸಂಪೂರ್ಣ ಖಾತ್ರಿಯಿಂದಿರಸಾಧ್ಯವಿದೆ. ನಿಮ್ಮ ನಿಲುವನ್ನು ಇತರರು ಗಮನಿಸುವರು ಮತ್ತು ಗಣ್ಯಮಾಡುವರು. ಹಾಗಾದರೆ, ಯಾರಿಂದ ಗಮನಿಸಲ್ಪಡುತ್ತದೆ?
22 ನಿಮ್ಮ ಬಗ್ಗೆ ಗೊತ್ತಿರುವಂತಹ ಮತ್ತು ನಿಮ್ಮನ್ನು ಪ್ರೀತಿಸುವಂತಹ ನಿಮ್ಮ ಸಹೋದರ ಸಹೋದರಿಯರು ಅದನ್ನು ಗಮನಿಸುವರು. ಅವರಲ್ಲಿ ಹೆಚ್ಚಿನವರು ಬಾಯಿಮಾತಿನಲ್ಲಿ ನಿಮ್ಮನ್ನು ಹೊಗಳುವುದಿಲ್ಲವಾದರೂ, 1 ಥೆಸಲೊನೀಕ 1:2-6ರಲ್ಲಿ ನಾವು ಓದುವಂತಹ ಅನಿಸಿಕೆ ಅವರಿಗೂ ಆಗುತ್ತದೆ: “ನಾವು ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಣ ನಿರೀಕ್ಷೆಯಿಂದುಂಟಾದ ನಿಮ್ಮ ಸೈರಣೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕಮಾಡಿಕೊಂಡು ನಮ್ಮ ಪ್ರಾರ್ಥನೆಗಳಲ್ಲಿ ನಿಮಗೋಸ್ಕರ ವಿಜ್ಞಾಪನೆಮಾಡುವಾಗ ನಿಮ್ಮೆಲ್ಲರ ವಿಷಯದಲ್ಲಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. . . . ನಾವು ಸಾರಿದ ಸುವಾರ್ತೆಯು ನಿಮ್ಮಲ್ಲಿ ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಬಹು ನಿಶ್ಚಯದೊಡನೆಯೂ ಬಂತೆಂಬದನ್ನೂ ಬಲ್ಲೆವು. . . . . [ನೀವು] ನಮ್ಮನ್ನೂ ಕರ್ತನಾದ ಯೇಸುವನ್ನೂ ಅನುಸರಿಸುವವರಾದಿರಿ.” ‘ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ನೀವು ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಂತಿದ್ದೀರಿ’ ಎಂಬುದನ್ನು ನಿಮ್ಮ ಸುತ್ತಲೂ ಇರುವ ನಿಷ್ಠಾವಂತ ಕ್ರೈಸ್ತರು ಗಮನಿಸುವಾಗ, ಅವರಿಗೂ ಇದೇ ರೀತಿಯ ಭಾವನೆಯುಂಟಾಗುವುದು.—ಕೊಲೊಸ್ಸೆ 1:23.
23. ಬರಲಿರುವ ವರ್ಷದಲ್ಲಿ ನಿಮ್ಮ ದೃಢನಿರ್ಧಾರವು ಏನಾಗಿರಬೇಕು?
23 ಅಷ್ಟುಮಾತ್ರವಲ್ಲ, ನಿಮ್ಮ ಸ್ವರ್ಗೀಯ ತಂದೆಯು ಸಹ ನಿಮ್ಮನ್ನು ಗಮನಿಸುವನು ಮತ್ತು ಸಂತೋಷಿಸುವನು ಎಂಬುದಂತೂ ನಿಶ್ಚಯ. ಮತ್ತು ದೇವರು ಗಮನಿಸುತ್ತಾನೆಂಬ ವಿಷಯದಲ್ಲಿ ಭರವಸೆಯುಳ್ಳವರಾಗಿರಿ. ಏಕೆ? ಏಕೆಂದರೆ, “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು” ಮಾಡಲು ನೀವು ದೃಢನಿಶ್ಚಿತರಾಗಿದ್ದು, ಪೂರ್ಣರಾಗಿ ನಿಂತಿದ್ದೀರಿ. ಯೆಹೋವನಿಗೆ “ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿ”ರುವುದರ ಕುರಿತು ಪೌಲನು ಕೊಲೊಸ್ಸೆಯವರಿಗೆ ಪ್ರೋತ್ಸಾಹದಾಯಕ ರೀತಿಯಲ್ಲಿ ಬರೆದನು. (ಕೊಲೊಸ್ಸೆ 1:10) ಹೌದು, ಅಪರಿಪೂರ್ಣ ಮಾನವರು ಎಲ್ಲ ವಿಧದಲ್ಲಿ ಆತನನ್ನು ಸಂತೋಷಪಡಿಸಸಾಧ್ಯವಿದೆ. ಕೊಲೊಸ್ಸೆಯಲ್ಲಿದ್ದ ನಿಮ್ಮ ಸಹೋದರ ಸಹೋದರಿಯರು ಹಾಗೆಯೇ ಮಾಡಿದರು. ಈಗಲೂ ನಿಮ್ಮ ಸುತ್ತಲಿರುವ ಕ್ರೈಸ್ತರು ಯೆಹೋವನನ್ನು ಸಂತೋಷಪಡಿಸುತ್ತಿದ್ದಾರೆ. ನೀವು ಸಹ ಹಾಗೆ ಮಾಡಬಲ್ಲಿರಿ! ಆದುದರಿಂದ, ಬರಲಿರುವ ವರ್ಷದಾದ್ಯಂತ, ನಿಮ್ಮ ದೈನಂದಿನ ಪ್ರಾರ್ಥನೆಗಳು ಮತ್ತು ನಿಮ್ಮ ಕ್ರಮವಾದ ಕಾರ್ಯಗಳು, “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ನೀವು ದೃಢನಿಶ್ಚಿತರಾಗಿದ್ದು, ಕೊನೆಯಲ್ಲಿ ನೀವು ಪೂರ್ಣರಾಗಿ ನಿಲ್ಲ”ಲು ನಿರ್ಧರಿಸಿದ್ದೀರಿ ಎಂಬುದನ್ನು ರುಜುಪಡಿಸಲಿ.
ನೀವು ಜ್ಞಾಪಿಸಿಕೊಳ್ಳಬಲ್ಲಿರೋ?
• ನೀವು ‘ಪೂರ್ಣರಾಗಿ ನಿಂತುಕೊಳ್ಳುವುದರಲ್ಲಿ’ ಏನೆಲ್ಲ ಒಳಗೂಡಿದೆ?
• ನಿಮ್ಮ ಕುರಿತು ಪ್ರಾರ್ಥನೆಯಲ್ಲಿ ನೀವು ಯಾವ ವಿಷಯಗಳನ್ನು ಕೇಳಿಕೊಳ್ಳಸಾಧ್ಯವಿದೆ?
• ರೋಮಾಪುರ 5:4, 5ರಲ್ಲಿ ಸೂಚಿಸಲ್ಪಟ್ಟಿರುವಂತೆ, ಯಾವ ರೀತಿಯ ನಿರೀಕ್ಷೆಯನ್ನು ಇಟ್ಟುಕೊಳ್ಳಲು ನೀವು ಬಯಸುತ್ತೀರಿ?
• ಬರಲಿರುವ ವರ್ಷದಲ್ಲಿ ಯಾವ ಗುರಿಯನ್ನು ಹೊಂದಿರುವಂತೆ ಈ ಅಭ್ಯಾಸವು ನಿಮ್ಮನ್ನು ಪ್ರಚೋದಿಸಿದೆ?
[ಅಧ್ಯಯನ ಪ್ರಶ್ನೆಗಳು]
[ಪುಟ 20ರಲ್ಲಿರುವ ಚಿತ್ರ]
ಕ್ರಿಸ್ತನ ಕುರಿತಾದ ಹಾಗೂ ತಮ್ಮ ನಿರೀಕ್ಷೆಯ ಕುರಿತಾದ ದೃಢನಿಶ್ಚಿತತೆಯಿಂದ, ತನ್ನ ಸಹೋದರರು ಪೂರ್ಣರಾಗಿ ನಿಲ್ಲಲಿ ಎಂದು ಎಪಫ್ರನು ಪ್ರಾರ್ಥಿಸಿದನು
[ಪುಟ 23ರಲ್ಲಿರುವ ಚಿತ್ರಗಳು]
ಇತರ ಲಕ್ಷಾಂತರ ಮಂದಿಗೆ ನಿಮ್ಮ ಹಾಗೆಯೇ ನಿಶ್ಚಿತ ನಿರೀಕ್ಷೆ ಹಾಗೂ ದೃಢನಿಶ್ಚಯತೆಯಿದೆ