ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಏಕೆ ದೇವರ ಸೇವೆಮಾಡುತ್ತೀರಿ?

ನೀವು ಏಕೆ ದೇವರ ಸೇವೆಮಾಡುತ್ತೀರಿ?

ನೀವು ಏಕೆ ದೇವರ ಸೇವೆಮಾಡುತ್ತೀರಿ?

ದೇವಭಯವುಳ್ಳವನಾಗಿದ್ದ ಒಬ್ಬ ಅರಸನು ತನ್ನ ಮಗನಿಗೆ ಈ ಬುದ್ಧಿವಾದವನ್ನು ಹೇಳಿದನು: “ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು.” (1 ಪೂರ್ವಕಾಲವೃತ್ತಾಂತ 28:⁠9) ತನ್ನ ಸೇವಕರು ಕೃತಜ್ಞತಾಭಾವದಿಂದ ಹಾಗೂ ಮನಃಪೂರ್ವಕವಾದ ಗಣ್ಯತಾಭಾವದಿಂದ ತನ್ನ ಸೇವೆಮಾಡಬೇಕೆಂದು ಯೆಹೋವನು ಬಯಸುತ್ತಾನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಮೊಟ್ಟಮೊದಲು ನಮಗೆ ಬೈಬಲ್‌ ವಾಗ್ದಾನಗಳ ಕುರಿತು ವಿವರಿಸಿದಾಗ ನಮ್ಮ ಹೃದಯಗಳು ಕೃತಜ್ಞತೆಯಿಂದ ತುಂಬಿದವು ಎಂಬುದನ್ನು, ಯೆಹೋವನ ಸಾಕ್ಷಿಗಳಾಗಿರುವ ನಾವು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ. ಪ್ರತಿ ದಿನ ನಾವು ದೇವರ ಉದ್ದೇಶಗಳ ಕುರಿತಾದ ಹೊಸ ಹೊಸ ವಿಷಯಗಳನ್ನು ಕಲಿತುಕೊಂಡೆವು. ಯೆಹೋವನ ಕುರಿತು ಹೆಚ್ಚೆಚ್ಚು ಕಲಿತುಕೊಂಡಂತೆ, “ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ” ಆತನ ಸೇವೆಮಾಡುವ ನಮ್ಮ ಬಯಕೆಯು ಹೆಚ್ಚೆಚ್ಚು ಬಲವಾಗುತ್ತಾ ಬಂತು.

ಯೆಹೋವನ ಸಾಕ್ಷಿಗಳಾಗಿರುವ ಅನೇಕರು, ತಮ್ಮ ಜೀವನಪರ್ಯಂತ ಅಪರಿಮಿತ ಆನಂದದಿಂದ ಯೆಹೋವನ ಸೇವೆಮಾಡುವುದನ್ನು ಮುಂದುವರಿಸುತ್ತಾರೆ. ಕೆಲವು ಕ್ರೈಸ್ತರು ಆರಂಭದಲ್ಲಿ ಒಳ್ಳೇ ರೀತಿಯಲ್ಲಿ ಪ್ರಗತಿಯನ್ನು ಮಾಡುತ್ತಾರಾದರೂ, ಕಾಲಕ್ರಮೇಣ ದೇವರ ಸೇವೆಮಾಡುವಂತೆ ತಮ್ಮನ್ನು ಪ್ರಚೋದಿಸುವಂತಹ ನಿರ್ಬಂಧಕ ಕಾರಣಗಳನ್ನು ಅವರು ಮರೆತುಬಿಡುತ್ತಾರೆ. ನಿಮ್ಮ ಜೀವನದಲ್ಲಿಯೂ ಹೀಗೆಯೇ ಆಗಿದೆಯೋ? ಒಂದುವೇಳೆ ಆಗಿರುವಲ್ಲಿ, ಹತಾಶರಾಗಬೇಡಿ. ಕಳೆದುಹೋದ ಆನಂದವನ್ನು ಪುನಃ ಪಡೆದುಕೊಳ್ಳಸಾಧ್ಯವಿದೆ. ಹೇಗೆ?

ನಿಮಗೆ ಸಿಕ್ಕಿರುವ ಆಶೀರ್ವಾದಗಳನ್ನು ಪರಿಗಣಿಸಿರಿ

ಮೊದಲಾಗಿ, ಪ್ರತಿದಿನ ನೀವು ದೇವರಿಂದ ಪಡೆದುಕೊಳ್ಳುವ ಆಶೀರ್ವಾದಗಳ ಕುರಿತು ಮನನಮಾಡಿರಿ. ಯೆಹೋವನ ಒಳ್ಳೇ ಉಡುಗೊರೆಗಳ ಕುರಿತು ಆಲೋಚಿಸಿರಿ: ಆತನ ನಾನಾ ರೀತಿಯ ಸೃಷ್ಟಿಕ್ರಿಯೆಗಳು, ಆಹಾರ ಮತ್ತು ಪಾನೀಯದ ನೈಸರ್ಗಿಕ ಒದಗಿಸುವಿಕೆಗಳು, ನೀವು ಆನಂದಿಸುವ ಆರೋಗ್ಯ, ಬೈಬಲ್‌ ಸತ್ಯದ ಕುರಿತಾದ ನಿಮ್ಮ ಜ್ಞಾನ, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ತನ್ನ ಮಗನನ್ನು ನಮಗೋಸ್ಕರ ಕೊಟ್ಟಿರುವುದೇ ಆಗಿದೆ. ನಮ್ಮ ಸಾಮಾಜಿಕ ಅಥವಾ ಆರ್ಥಿಕ ಸ್ಥಾನಮಾನವು ಏನೇ ಇರಲಿ, ಇವುಗಳೆಲ್ಲ ನಮಗೆ ಸಿಗುತ್ತದೆ. ಆತನ ಮಗನಾದ ಯೇಸುವಿನ ಮರಣವು, ನೀವು ಶುದ್ಧ ಮನಸ್ಸಾಕ್ಷಿಯಿಂದ ದೇವರ ಸೇವೆಮಾಡುವಂತಹ ಮಾರ್ಗವನ್ನು ಸಿದ್ಧಪಡಿಸಿತು. (ಯೋಹಾನ 3:16; ಯಾಕೋಬ 1:17) ದೇವರ ಒಳ್ಳೇತನದ ಕುರಿತು ನೀವು ಹೆಚ್ಚು ಮನನಮಾಡುವಾಗ, ಆತನ ಕಡೆಗಿನ ನಿಮ್ಮ ಗಣ್ಯತೆಯು ಸಹ ಹೆಚ್ಚಾಗುವುದು. ಆಗ, ಆತನು ಮಾಡಿರುವ ಎಲ್ಲ ಒಳಿತಿಗಾಗಿ ಕೃತಜ್ಞತೆಯಿಂದ ಆತನ ಸೇವೆಮಾಡುವಂತೆ ನಿಮ್ಮ ಹೃದಯವು ನಿಮ್ಮನ್ನು ಪ್ರಚೋದಿಸುವುದು. ಹೀಗೆ, ಕೀರ್ತನೆಗಾರನಂತಹ ಅನಿಸಿಕೆಯೇ ನಿಮಗೂ ಉಂಟಾಗುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ಅವನು ಬರೆದುದು: “ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.”​—⁠ಕೀರ್ತನೆ 40:⁠5.

ಈ ಮಾತುಗಳನ್ನು ಬರೆದವನು ದಾವೀದನೇ ಆಗಿದ್ದನು, ಆದರೆ ಅವನ ಜೀವಿತದಲ್ಲೂ ಅನೇಕ ಸಮಸ್ಯೆಗಳು ಇದ್ದವು. ದಾವೀದನು ಯುವಪ್ರಾಯದವನಾಗಿದ್ದಾಗ ಬಹಳಷ್ಟು ಸಮಯ ಒಬ್ಬ ದೇಶಭ್ರಷ್ಟನಂತೆ ಅಲೆದನು. ಏಕೆಂದರೆ, ದುಷ್ಟ ಅರಸನಾದ ಸೌಲನು ಹಾಗೂ ಅವನ ಅಂಗರಕ್ಷಕರು ದಾವೀದನನ್ನು ಕೊಲ್ಲಲಿಕ್ಕಾಗಿ ಹೊಂಚುಹಾಕುತ್ತಿದ್ದರು. (1 ಸಮುವೇಲ 23:​7, 8, 19-23) ಅಷ್ಟುಮಾತ್ರವಲ್ಲ, ದಾವೀದನು ತನ್ನ ವೈಯಕ್ತಿಕ ದೌರ್ಬಲ್ಯಗಳೊಂದಿಗೂ ಹೋರಾಡಬೇಕಿತ್ತು. 40ನೆಯ ಕೀರ್ತನೆಯಲ್ಲಿ ಅವನು ಇದನ್ನು ಒಪ್ಪಿಕೊಂಡನು: “ಲೆಕ್ಕವಿಲ್ಲದ ಆಪತ್ತುಗಳು ನನ್ನನ್ನು ಸುತ್ತಿಕೊಂಡಿವೆ; ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿರುತ್ತವೆ, ನನಗೆ ದಿಕ್ಕೇ ತೋರುವದಿಲ್ಲ. ಅವು ನನ್ನ ತಲೇ ಕೂದಲುಗಳಿಗಿಂತಲೂ ಹೆಚ್ಚಾಗಿವೆ.” (ಕೀರ್ತನೆ 40:12) ದಾವೀದನಿಗೂ ತೊಂದರೆಗಳಿದ್ದವು ನಿಜ. ಆದರೆ ಅವುಗಳೇ ತನ್ನ ಮನಸ್ಸನ್ನು ಆಕ್ರಮಿಸುವಂತೆ ಅವನು ಬಿಡಲಿಲ್ಲ. ತನ್ನ ಎಲ್ಲ ಸಮಸ್ಯೆಗಳ ಮಧ್ಯೆಯೂ, ಯೆಹೋವನು ತನ್ನನ್ನು ಆಶೀರ್ವದಿಸಿರುವ ವಿಧಗಳ ಮೇಲೆ ಅವನು ಗಮನವನ್ನು ಕೇಂದ್ರೀಕರಿಸಿದನು. ಮತ್ತು ತನ್ನ ವಿಪತ್ತುಗಳಿಗಿಂತಲೂ ಆಶೀರ್ವಾದಗಳೇ ಹೆಚ್ಚಾಗಿದ್ದವು ಎಂಬುದು ಅವನಿಗೆ ತಿಳಿದುಬಂತು.

ಕೆಲವೊಮ್ಮೆ ವೈಯಕ್ತಿಕ ಸಮಸ್ಯೆಗಳು ನಮಗಿರಬಹುದು ಅಥವಾ ನಾವು ಅಸಮರ್ಥರು ಎಂಬ ಅನಿಸಿಕೆಗಳಿಂದ ಖಿನ್ನರಾಗಬಹುದು. ಆಗ, ದಾವೀದನು ಮಾಡಿದಂತೆ ನಾವು ಸಹ ಸ್ವಲ್ಪ ಸಮಯವನ್ನು ತೆಗೆದುಕೊಂಡು ನಮಗೆ ಸಿಕ್ಕಿರುವ ಆಶೀರ್ವಾದಗಳ ಕುರಿತು ಯೋಚಿಸುವುದು ಒಳ್ಳೇದು. ಅಂತಹ ಆಶೀರ್ವಾದಗಳಿಗಾಗಿರುವ ಗಣ್ಯತೆಯೇ, ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳುವಂತೆ ಪ್ರಚೋದಿಸಿತು ಎಂಬುದರಲ್ಲಿ ಸಂಶಯವೇ ಇಲ್ಲ. ಇಂತಹ ಆಲೋಚನೆಗಳು, ನೀವು ಕಳೆದುಕೊಂಡ ಆನಂದವನ್ನು ಮತ್ತೆ ಪಡೆದುಕೊಳ್ಳುವಂತೆ ನಿಮಗೆ ಸಹಾಯಮಾಡಸಾಧ್ಯವಿದೆ. ಮತ್ತು ಮನಃಪೂರ್ವಕವಾದ ಗಣ್ಯತಾಭಾವದಿಂದ ನೀವು ದೇವರ ಸೇವೆಮಾಡುವಂತೆ ನಿಮಗೆ ಸಹಾಯಮಾಡಸಾಧ್ಯವಿದೆ.

ಸಭಾ ಕೂಟಗಳು ಸಹಾಯಮಾಡಬಲ್ಲವು

ಯೆಹೋವನ ಒಳ್ಳೇತನದ ಕುರಿತು ವ್ಯಕ್ತಿಗತವಾಗಿ ಮನನಮಾಡುವುದರೊಂದಿಗೆ, ಜೊತೆ ಕ್ರೈಸ್ತರೊಂದಿಗೆ ನಾವು ಸಹವಾಸಿಸುವ ಅಗತ್ಯವಿದೆ. ದೇವರನ್ನು ಪ್ರೀತಿಸುವ ಹಾಗೂ ಆತನ ಸೇವೆಮಾಡಲು ನಿರ್ಧರಿಸಿರುವ ಪುರುಷರು, ಸ್ತ್ರೀಯರು ಮತ್ತು ಯುವಜನರೊಂದಿಗೆ ಕ್ರಮವಾಗಿ ಒಟ್ಟುಗೂಡುವುದು ನಿಜವಾಗಿಯೂ ಪ್ರೋತ್ಸಾಹದಾಯಕವಾಗಿದೆ. ಯೆಹೋವನ ಸೇವೆಯಲ್ಲಿ ಪೂರ್ಣಮನಸ್ಸಿನಿಂದ ಒಳಗೂಡುವಂತೆ ಅವರ ಮಾದರಿಯು ನಮ್ಮನ್ನು ಪ್ರಚೋದಿಸಸಾಧ್ಯವಿದೆ. ನಾವು ರಾಜ್ಯ ಸಭಾಗೃಹದಲ್ಲಿ ಹಾಜರಿರುವ ಮೂಲಕ ಅವರನ್ನು ಸಹ ಉತ್ತೇಜಿಸಸಾಧ್ಯವಿದೆ.

ಇಡೀ ದಿನ ಶ್ರಮಪಟ್ಟು ಕೆಲಸ ಮಾಡಿ ಮನೆಗೆ ಬಂದಾಗ ಅಥವಾ ಯಾವುದೋ ಸಮಸ್ಯೆ ಇಲ್ಲವೇ ದೌರ್ಬಲ್ಯದ ಕಾರಣದಿಂದ ನಾವು ನಿರುತ್ಸಾಹಗೊಂಡಿರುವಾಗ, ರಾಜ್ಯ ಸಭಾಗೃಹದಲ್ಲಿ ನಡೆಯುವ ಕೂಟಕ್ಕೆ ಹಾಜರಾಗುವುದರ ಬಗ್ಗೆ ಆಲೋಚಿಸುವುದು ಅಷ್ಟೊಂದು ಸುಲಭವಲ್ಲ ಎಂಬುದು ಒಪ್ಪತಕ್ಕದ್ದೇ. ಅಂತಹ ಸಮಯದಲ್ಲಿ, ನಾವು ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾಗಬಹುದು. ಮತ್ತು ಜೊತೆ ಕ್ರೈಸ್ತರೊಂದಿಗೆ ಒಟ್ಟುಗೂಡಲಿಕ್ಕಾಗಿರುವ ಆಜ್ಞೆಗೆ ನಾವು ವಿಧೇಯರಾಗಲಿಕ್ಕಾಗಿ, ‘ನಮ್ಮ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳಬೇಕಾಗಬಹುದು.’​—⁠1 ಕೊರಿಂಥ 9:​26, 27; ಇಬ್ರಿಯ 10:​23-25.

ಒಂದುವೇಳೆ ಇಂತಹ ಅಗತ್ಯವು ಕಂಡುಬರುವಲ್ಲಿ, ನಾವು ನಿಜವಾಗಿಯೂ ಯೆಹೋವನನ್ನು ಪ್ರೀತಿಸುತ್ತಿಲ್ಲ ಎಂಬ ತೀರ್ಮಾನಕ್ಕೆ ಬರಬೇಕೊ? ಖಂಡಿತವಾಗಿಯೂ ಇಲ್ಲ. ನಿಸ್ಸಂದೇಹವಾಗಿಯೂ ದೇವರನ್ನು ಪ್ರೀತಿಸುತ್ತಿದ್ದ ಗತಕಾಲದ ಪ್ರೌಢ ಕ್ರೈಸ್ತರು ಸಹ, ದೇವರ ಚಿತ್ತವನ್ನು ಮಾಡಲು ಅತ್ಯಂತ ಹುರುಪಿನಿಂದ ಶ್ರಮಿಸಬೇಕಾಗಿತ್ತು. (ಲೂಕ 13:24) ಇಂತಹ ಪ್ರೌಢ ಕ್ರೈಸ್ತರಲ್ಲಿ ಅಪೊಸ್ತಲ ಪೌಲನೂ ಒಬ್ಬನಾಗಿದ್ದನು. ಅವನು ಮುಚ್ಚುಮರೆಯಿಲ್ಲದೆ ತನ್ನ ಭಾವನೆಗಳನ್ನು ಈ ರೀತಿಯಲ್ಲಿ ವರ್ಣಿಸಿದನು: “ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು. ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.” (ರೋಮಾಪುರ 7:​18, 19) ಮತ್ತು ಅವನು ಕೊರಿಂಥದವರಿಗೆ ಹೇಳಿದ್ದು: “ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. . . . ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಬಹುಮಾನದೊರೆಯುವದು; ಮತ್ತೊಬ್ಬನ ಇಷ್ಟದಿಂದ ಮಾಡಿದರೆ ಮನೆವಾರ್ತೆಯು ನನ್ನ ವಶಕ್ಕೆ ಕೊಡಲ್ಪಟ್ಟಿದೆ.”​—⁠1 ಕೊರಿಂಥ 9:​16, 17.

ನಮ್ಮೆಲ್ಲರಲ್ಲೂ ಪಾಪಪೂರ್ಣ ಪ್ರವೃತ್ತಿಗಳಿರುವಂತೆಯೇ ಪೌಲನಲ್ಲೂ ಇದ್ದವು. ಇವು, ಸರಿಯಾದದ್ದನ್ನು ಮಾಡುವ ಅವನ ಬಯಕೆಗಳಿಗೆ ತಡೆಯನ್ನೊಡ್ಡುತ್ತಿದ್ದವು. ಆದರೂ, ಅಂತಹ ಪ್ರವೃತ್ತಿಗಳ ವಿರುದ್ಧ ಅವನು ಕಷ್ಟಪಟ್ಟು ಹೋರಾಡಿದನು ಮತ್ತು ಅವುಗಳನ್ನು ಜಯಿಸುವುದರಲ್ಲಿ ಸಫಲನಾದನು. ಪೌಲನು ಇದನ್ನು ತನ್ನ ಸ್ವಂತ ಬಲದಿಂದ ಸಾಧಿಸಲಿಲ್ಲ ಎಂಬುದು ನಿಜ. ಏಕೆಂದರೆ ಅವನು ಬರೆದುದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13) ಯೆಹೋವನೇ ಪೌಲನಿಗೆ ಶಕ್ತಿಯನ್ನು ನೀಡಿದನು. ನೀವು ಸಹ ಆತನ ಬಳಿ ಸಹಾಯವನ್ನು ಬೇಡಿಕೊಳ್ಳುವಲ್ಲಿ, ಒಳ್ಳೇದನ್ನು ಮಾಡಲು ನಿಮಗೂ ಶಕ್ತಿಯನ್ನು ನೀಡುವನು. (ಫಿಲಿಪ್ಪಿ 4:​6, 7) ಆದುದರಿಂದ, ನೀವು ಸಹ ‘ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಹೋರಾಡಿರಿ.’ ಆಗ ಯೆಹೋವನು ನಿಮ್ಮನ್ನೂ ಆಶೀರ್ವದಿಸುವನು.​—⁠ಯೂದ 3.

ಈ ಹೋರಾಟವನ್ನು ನಿಮ್ಮ ಸ್ವಂತ ಬಲದಿಂದ ಹೋರಾಡಬೇಕಾಗಿಲ್ಲ. ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ಪ್ರೌಢ ಕ್ರೈಸ್ತ ಹಿರಿಯರು ಸಹ ‘ನಂಬಿಕೆಯನ್ನು ಕಾಪಾಡಿಕೊಳ್ಳುವ ಹೋರಾಟದಲ್ಲಿ’ ಮುಂದುವರಿಯುತ್ತಿದ್ದಾರೆ; ಇವರು ನಿಮಗೆ ಸಹಾಯ ಮಾಡಲು ಮನಃಪೂರ್ವಕವಾಗಿ ಸಿದ್ಧರಿದ್ದಾರೆ. ಒಂದುವೇಳೆ ಸಹಾಯಕ್ಕಾಗಿ ನೀವು ಒಬ್ಬ ಹಿರಿಯನ ಬಳಿಗೆ ಹೋಗುವಲ್ಲಿ, ನಿಮಗೆ “ಸಾಂತ್ವನ ನೀಡುವಂತಹ ರೀತಿಯಲ್ಲಿ ಮಾತಾಡಲು” (NW) ಅವನು ಪ್ರಯತ್ನಿಸುವನು. (1 ಥೆಸಲೊನೀಕ 5:14) ‘ಗಾಳಿಯಲ್ಲಿ ಮರೆಯಂತೆ ಹಾಗೂ ಅತಿವೃಷ್ಟಿಯಲ್ಲಿ ಆವರಣದಂತೆ’ ಕಾರ್ಯನಡಿಸುವುದೇ ಆ ಹಿರಿಯನ ಗುರಿಯಾಗಿರುವುದು.​—⁠ಯೆಶಾಯ 32:⁠2.

“ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ ಮತ್ತು ತನ್ನ ಸೇವಕರು ಪ್ರೀತಿಯಿಂದ ತನ್ನ ಸೇವೆಮಾಡುವಂತೆ ಆತನು ಬಯಸುತ್ತಾನೆ. (1 ಯೋಹಾನ 4:⁠8) ದೇವರ ಕಡೆಗಿನ ನಿಮ್ಮ ಪ್ರೀತಿಯ ಜ್ವಾಲೆಯು ಪುನಃ ಹೊತ್ತಿಕೊಳ್ಳಬೇಕಾದರೆ, ಈ ಮೇಲೆ ತಿಳಿಸಲ್ಪಟ್ಟಿರುವಂತೆ ಯೋಗ್ಯವಾದ ಕ್ರಮಗಳನ್ನು ತೆಗೆದುಕೊಳ್ಳಿರಿ. ನೀವು ಹೀಗೆ ಮಾಡುವಾಗ, ಖಂಡಿತವಾಗಿಯೂ ಸಂತೋಷಗೊಳ್ಳುವಿರಿ.