ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಒಬ್ಬ ಪತಿಯು ವಿವಾಹ ವಿಚ್ಛೇದಕ್ಕಾಗಿ ಒತ್ತಾಯಿಸುವಲ್ಲಿ, ನಂಬಿಗಸ್ತ ಕ್ರೈಸ್ತ ಪತ್ನಿಯು ಎಷ್ಟರ ಮಟ್ಟಿಗೆ ಅದನ್ನು ವಿರೋಧಿಸುವ ಅಗತ್ಯವಿದೆ?
ಮಾನವ ವಿವಾಹವು ಆರಂಭವಾದಾಗ, ಪತಿಪತ್ನಿಯರು ಒಟ್ಟಿಗೆ ‘ಸೇರಿಕೊಂಡಿರಬೇಕು’ ಎಂದು ದೇವರು ಹೇಳಿದನು. (ಆದಿಕಾಂಡ 2:18-24) ಮಾನವರು ಅಪರಿಪೂರ್ಣರಾದಂದಿನಿಂದ, ವಿವಾಹದಲ್ಲಿ ಅನೇಕ ಸಮಸ್ಯೆಗಳು ತಲೆದೋರತೊಡಗಿದವು. ಆದರೂ, ವಿವಾಹ ಸಂಗಾತಿಗಳು ಒಟ್ಟಿಗಿರಬೇಕೆಂದು ದೇವರು ಬಯಸುತ್ತಾನೆ. ಈ ವಿಷಯದಲ್ಲಿ ಅಪೊಸ್ತಲ ಪೌಲನು ಬರೆದುದು: “ಮದುವೆಮಾಡಿಕೊಂಡಿರುವವರಿಗೆ ನನ್ನ ಅಪ್ಪಣೆ ಮಾತ್ರವಲ್ಲದೆ ಕರ್ತನ ಅಪ್ಪಣೆಯು ಏನಂದರೆ—ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು; ಒಂದು ವೇಳೆ ಅಗಲಿದರೂ ಪುರುಷಸಹವಾಸವಿಲ್ಲದೆ ಇರಬೇಕು [“ಅವಿವಾಹಿತಳಾಗಿಯೇ ಉಳಿಯಬೇಕು,” NW], ಇಲ್ಲವೆ ಗಂಡನ ಸಂಗಡ ಸಮಾಧಾನವಾಗಬೇಕು; ಮತ್ತು ಗಂಡನು ಹೆಂಡತಿಯನ್ನು ಬಿಡಬಾರದು.”—1 ಕೊರಿಂಥ 7:10, 11.
ಅಪರಿಪೂರ್ಣ ಮಾನವರ ನಡುವೆ ಕೆಲವೊಮ್ಮೆ ವಿವಾಹ ಸಂಗಾತಿಯು ತನ್ನ ಪತಿಯನ್ನು ಅಥವಾ ಪತ್ನಿಯನ್ನು ಬಿಟ್ಟುಹೋಗುವ ನಿರ್ಧಾರವನ್ನು ಮಾಡುತ್ತಾನೆ/ಳೆ ಎಂಬುದನ್ನು ಈ ಮಾತುಗಳು ಒಪ್ಪಿಕೊಳ್ಳುತ್ತವೆ. ಉದಾಹರಣೆಗಾಗಿ, ಒಬ್ಬ ವಿವಾಹ ಸಂಗಾತಿಯು ತನ್ನ ಪತಿಯನ್ನು ಅಥವಾ ಪತ್ನಿಯನ್ನು ಅಗಲುವಲ್ಲಿ, ಅವರಿಬ್ಬರೂ ‘ಅವಿವಾಹಿತರಾಗಿಯೇ ಉಳಿಯಬೇಕು’ ಎಂದು ಪೌಲನು ಹೇಳಿದನು. ಏಕೆ? ಏಕೆಂದರೆ, ಪತಿಯು ಪತ್ನಿಯನ್ನು ಬಿಟ್ಟುಹೋಗುವುದಾದರೂ, ದೇವರ ದೃಷ್ಟಿಯಲ್ಲಿ ಅವರಿಬ್ಬರೂ ಇನ್ನೂ ವಿವಾಹ ಬಂಧದಲ್ಲಿ ಐಕ್ಯಗೊಂಡವರಾಗಿದ್ದಾರೆ. ಪೌಲನು ಹೀಗೆ ಹೇಳಲು ಕಾರಣವೇನೆಂದರೆ, ಕ್ರೈಸ್ತ ವಿವಾಹಕ್ಕಾಗಿ ಯೇಸು ಒಂದು ಅತ್ಯುತ್ತಮ ಮಟ್ಟವನ್ನು ಸ್ಥಾಪಿಸಿದ್ದನು: “ಹಾದರ [ಗ್ರೀಕ್ ಭಾಷೆಯಲ್ಲಿ, ಪೋರ್ನೀಯ]ದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆ.” (ಮತ್ತಾಯ 19:9) ಹೌದು, ಒಂದು ವಿವಾಹವನ್ನು ಶಾಸ್ತ್ರೀಯವಾಗಿ ಕೊನೆಗೊಳಿಸುವ ವಿಚ್ಛೇದಕ್ಕಿರುವ ಏಕಮಾತ್ರ ಆಧಾರವು “ಹಾದರ”ವಾಗಿದೆ, ಅಂದರೆ ಲೈಂಗಿಕ ಅನೈತಿಕತೆಯಾಗಿದೆ. ಪೌಲನು ಯಾರ ಬಗ್ಗೆ ಸೂಚಿಸಿ ಮಾತಾಡಿದನೋ ಆ ವಿವಾಹ ಸಂಗಾತಿಗಳಲ್ಲಿ ಇಬ್ಬರೂ ಅನೈತಿಕತೆಯಲ್ಲಿ ಒಳಗೂಡಿರಲಿಲ್ಲ. ಆದುದರಿಂದ, ಪತಿ ಅಥವಾ ಪತ್ನಿ ಒಬ್ಬರನ್ನೊಬ್ಬರು ಬಿಟ್ಟುಹೋದರೆ, ದೇವರ ದೃಷ್ಟಿಯಲ್ಲಿ ಅವರ ವಿವಾಹವು ಕೊನೆಗೊಳ್ಳುವುದಿಲ್ಲ.
ತದನಂತರ, ಒಬ್ಬ ಅವಿಶ್ವಾಸಿ ಸಂಗಾತಿಯಿರುವ ಒಬ್ಬ ಸತ್ಕ್ರೈಸ್ತಳ ಸನ್ನಿವೇಶದ ಕುರಿತು ಪೌಲನು ಮಾತಾಡಿದನು. ಪೌಲನ ಮಾರ್ಗದರ್ಶನಗಳನ್ನು ಪರಿಗಣಿಸಿರಿ: “ಕ್ರಿಸ್ತನಂಬಿಕೆಯಿಲ್ಲದವನು ಅಗಲಬೇಕೆಂದಿದ್ದರೆ ಅಗಲಿಹೋಗಲಿ; ಇಂಥಾ ಸಂದರ್ಭಗಳಲ್ಲಿ ಕ್ರೈಸ್ತಸಹೋದರನಾಗಲಿ ಸಹೋದರಿಯಾಗಲಿ ಬದ್ಧರಲ್ಲ. ಸಮಾಧಾನದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ.” (1 ಕೊರಿಂಥ 7:12-16) ಒಬ್ಬ ಅವಿಶ್ವಾಸಿ ಪತಿಯು ತನ್ನ ಪತ್ನಿಯನ್ನು ಬಿಟ್ಟುಹೋಗುವಲ್ಲಿ, ಮತ್ತು ಅವಳಿಂದ ಕಾನೂನುಬದ್ಧ ವಿಚ್ಛೇದವನ್ನು ಪಡೆದುಕೊಳ್ಳಲು ಪ್ರಯತ್ನಿಸುವಲ್ಲಿ, ಆ ನಂಬಿಗಸ್ತ ಪತ್ನಿಯು ಏನು ಮಾಡಸಾಧ್ಯವಿದೆ?
ಅವನು ತನ್ನೊಂದಿಗೆ ಉಳಿಯುವಂತೆ ಅವಳು ಬಯಸಬಹುದು. ಇನ್ನು ಸಹ ಅವಳು ಅವನನ್ನು ಪ್ರೀತಿಸುತ್ತಿರಬಹುದು. ಮತ್ತು ತಮ್ಮ ಭಾವನಾತ್ಮಕ ಹಾಗೂ ಲೈಂಗಿಕ ಆವಶ್ಯಕತೆಗಳ ಅರಿವು ಅವಳಿಗಿರಬಹುದು. ಅಷ್ಟುಮಾತ್ರವಲ್ಲ, ತನಗೆ ಹಾಗೂ ತನ್ನ ಮಕ್ಕಳಿಗೆ ಅವನಿಂದ ಭೌತಿಕ ಬೆಂಬಲದ ಆವಶ್ಯಕತೆಯಿದೆ ಎಂಬುದು ಅವಳಿಗೆ ಗೊತ್ತಿರಬಹುದು. ಸಕಾಲದಲ್ಲಿ, ತನ್ನ ಪತಿಯು ಕ್ರೈಸ್ತ ನಂಬಿಕೆಯುಳ್ಳವನಾಗಿ ರಕ್ಷಣೆಯನ್ನು ಪಡೆದುಕೊಳ್ಳುವನು ಎಂಬ ನಿರೀಕ್ಷೆಯು ಸಹ ಅವಳಿಗಿರಬಹುದು. ಆದರೂ, ತಮ್ಮ ವಿವಾಹವನ್ನು ಕೊನೆಗೊಳಿಸಲು ಅವನು ಸೂಕ್ತ ಕ್ರಮಗಳನ್ನು (ಯಾವುದೋ ಅಶಾಸ್ತ್ರೀಯ ಆಧಾರದ ಮೇಲೆ) ತೆಗೆದುಕೊಳ್ಳುವಲ್ಲಿ, ಪೌಲನು ಬರೆದಂತೆ ಪತ್ನಿಯು ಅವನಿಗೆ ‘ಅಗಲಲು’ ಬಿಡಸಾಧ್ಯವಿದೆ. ಅವಿಶ್ವಾಸಿಯಾದ ಪತಿಯು ವಿವಾಹದ ಕುರಿತಾದ ದೇವರ ದೃಷ್ಟಿಕೋನವನ್ನು ಕಡೆಗಣಿಸುವಲ್ಲಿ ಮತ್ತು ಪತ್ನಿಯನ್ನು ಬಿಟ್ಟುಹೋಗಲು ಒತ್ತಾಯಿಸುವಲ್ಲಿ, ಈ ಮೇಲಿನ ನಿಯಮವೇ ಅನ್ವಯವಾಗುತ್ತದೆ.
ಅಂತಹ ಸನ್ನಿವೇಶದಲ್ಲೂ, ಸ್ವತಃ ತನ್ನನ್ನು ಹಾಗೂ ತನ್ನ ಮಕ್ಕಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಿಕೊಳ್ಳುವ ಅಗತ್ಯವನ್ನು ಅವಳು ಮನಗಾಣಬಹುದು. ಹೇಗೆ? ಪತಿಯು ಅವಳನ್ನು ಬಿಟ್ಟುಹೋದ ನಂತರ, ತನ್ನ ಪ್ರೀತಿಯ ಮಕ್ಕಳನ್ನು ತನ್ನ ಬಳಿಯೇ ಇಟ್ಟುಕೊಂಡು, ಅವರಿಗೆ ಮಮತೆಯನ್ನು ತೋರಿಸುತ್ತಾ, ನೈತಿಕ ಶಿಕ್ಷಣವನ್ನು ಕೊಡುತ್ತಾ, ಅತ್ಯುತ್ತಮ ಬೈಬಲ್ ಬೋಧನೆಗಳ ಕುರಿತಾದ ನಂಬಿಕೆಯನ್ನು ಅವರಲ್ಲಿ ತುಂಬಿಸಲು ಅವಳು ಬಯಸಬಹುದು. (2 ತಿಮೊಥೆಯ 3:15) ವಿವಾಹ ವಿಚ್ಛೇದವು ಅವಳ ಇಂತಹ ಹಕ್ಕುಗಳಿಗೆ ಅಪಾಯವನ್ನೊಡ್ಡಸಾಧ್ಯವಿದೆ. ಆದುದರಿಂದ, ಅಧಿಕಾರಿಗಳ ಮುಂದೆ ತಾನು ಯೋಗ್ಯವಾಗಿ ನಿಲ್ಲಶಕ್ತಳಾಗುವಂತೆ ಅವಳು ಕೆಲವೊಂದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವಳು ಮಕ್ಕಳನ್ನು ತನ್ನ ಬಳಿ ಇಟ್ಟುಕೊಳ್ಳಲು ಮತ್ತು ತನ್ನ ಪತಿಯು ತೊರೆದುಹೋಗುತ್ತಿರುವ ಕುಟುಂಬವನ್ನು ನೋಡಿಕೊಳ್ಳುವ ಹಂಗಿನಲ್ಲಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬಹುದು. ಕೆಲವು ಸ್ಥಳಗಳಲ್ಲಿ, ವಿಚ್ಛೇದವನ್ನು ವಿರೋಧಿಸುವ ಸ್ತ್ರೀಯು, ಮಗುವಿನ ರಕ್ಷಣೆ ಹಾಗೂ ಆರ್ಥಿಕ ಸಹಾಯವನ್ನು ಒದಗಿಸುವ ಕರಾರುಗಳಿರುವ ಶಾಸನಬದ್ಧ ಕಾಗದಪತ್ರಗಳಿಗೆ ಮಾತ್ರ ಸಹಿಹಾಕಸಾಧ್ಯವಿದೆ. ಇತರ ಸ್ಥಳಗಳಲ್ಲಿ, ಕಾಗದಪತ್ರಗಳ ಹೇಳಿಕೆಗಳು ಆಕೆ ವಿವಾಹ ವಿಚ್ಛೇದಕ್ಕೆ ಒಪ್ಪುತ್ತಾಳೆಂದು ಸೂಚಿಸುತ್ತವೆ; ಹೀಗೆ ಆಕೆಯ ಗಂಡನು ವ್ಯಭಿಚಾರಿಯಾಗಿರುವಲ್ಲಿ, ಹೆಂಡತಿಯು ಈ ಪತ್ರಗಳಿಗೆ ಸಹಿಹಾಕುವಲ್ಲಿ ಆಕೆ ಅವನನ್ನು ನಿರಾಕರಿಸುತ್ತಾಳೆಂದು ಅರ್ಥೈಸುವುದು.
ವಿವಾಹ ವಿಚ್ಛೇದವು ಶಾಸ್ತ್ರೀಯ ಆಧಾರದ ಮೇಲೆ ಪಡೆದುಕೊಳ್ಳಲ್ಪಟ್ಟಿದೆಯೋ ಇಲ್ಲವೋ ಎಂಬಂತಹ ವಿವರಗಳು ಸಮಾಜದ ಜನರಿಗೆ ಹಾಗೂ ಸಭೆಯಲ್ಲಿರುವವರಿಗೆ ಗೊತ್ತಿಲ್ಲದಿರಬಹುದು. ಆದುದರಿಂದ, ವಿಷಯವು ಅಷ್ಟು ಮುಂದುವರಿಯುವುದಕ್ಕೆ ಮೊದಲು, ಈ ವಿಷಯಗಳನ್ನು ಪತ್ನಿಯು ಸಭೆಯಲ್ಲಿರುವ ಅಧ್ಯಕ್ಷ ಮೇಲ್ವಿಚಾರಕನಿಗೆ ಹಾಗೂ ಇನ್ನೊಬ್ಬ ಹಿರಿಯನಿಗೆ (ಬರಹರೂಪದಲ್ಲಿ) ತಿಳಿಸುವುದು ಸೂಕ್ತವಾದದ್ದಾಗಿದೆ. ಹೀಗೆ ಮಾಡುವುದರಿಂದ, ಆ ಸಮಯದಲ್ಲಿ ಅಥವಾ ಮುಂದೆ ಎಂದಾದರೂ ವಿವಾಹ ವಿಚ್ಛೇದವು ಶಾಸ್ತ್ರೀಯವಾಗಿತ್ತೋ ಇಲ್ಲವೋ ಎಂಬ ಪ್ರಶ್ನೆಯು ಏಳುವಾಗ, ಈ ವಾಸ್ತವಾಂಶಗಳು ಲಭ್ಯವಿರುವವು.
ಈಗ ನಾವು ಯೇಸುವಿನ ಮಾತುಗಳ ಕಡೆಗೆ ಪುನಃ ಗಮನಹರಿಸೋಣ: “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆ.” ಒಬ್ಬ ಪತಿಯು ಲೈಂಗಿಕ ಅನೈತಿಕತೆಯ ವಿಷಯದಲ್ಲಿ ದೋಷಿಯಾಗಿ ಕಂಡುಕೊಳ್ಳಲ್ಪಟ್ಟು, ಅವನು ತನ್ನ ಪತ್ನಿಯೊಂದಿಗೇ ಉಳಿಯಲು ಇಷ್ಟಪಡುತ್ತಾನೆ ಎಂದಿಟ್ಟುಕೊಳ್ಳಿ. ಆಗ, ಅವನನ್ನು ಕ್ಷಮಿಸಿ ಅವನೊಂದಿಗೆ ವಿವಾಹ ಸಂಬಂಧವನ್ನು ಮುಂದುವರಿಸಬೇಕೋ ಅಥವಾ ಅವನನ್ನು ತಿರಸ್ಕರಿಸಬೇಕೋ ಎಂಬುದನ್ನು ಹೋಶೇಯ 1:1-3; 3:1-3.
ಪತ್ನಿಯು (ಯೇಸುವಿನ ಉದಾಹರಣೆಯಲ್ಲಿ ತಿಳಿಸಲ್ಪಟ್ಟಿರುವ ಮುಗ್ಧ ಸಂಗಾತಿಯು) ನಿರ್ಧರಿಸಬೇಕಾಗಿದೆ. ಒಂದುವೇಳೆ ಅವಳು ತನ್ನ ಕಾನೂನುಬದ್ಧ ಪತಿಯನ್ನು ಕ್ಷಮಿಸಲು ಹಾಗೂ ಅವನೊಂದಿಗೆ ಬಾಳುವುದನ್ನು ಮುಂದುವರಿಸಲು ಬಯಸುವಲ್ಲಿ, ಹೀಗೆ ಮಾಡಿದ್ದಕ್ಕಾಗಿ ಅವಳನ್ನು ಯಾರೂ ಅನೈತಿಕಳೆಂದು ಪರಿಗಣಿಸಸಾಧ್ಯವಿಲ್ಲ.—ಒಬ್ಬ ಅನೈತಿಕ ಪತಿಯು ವಿವಾಹ ವಿಚ್ಛೇದಕ್ಕಾಗಿ ಪ್ರಯತ್ನಿಸುವ ಸಂದರ್ಭದಲ್ಲಿ, ಒಂದಲ್ಲ ಒಂದು ದಿನ ಅವನು ತನ್ನ ಬಳಿಗೆ ಹಿಂದಿರುಗಿ ಬರುತ್ತಾನೆ ಎಂಬ ನಿರೀಕ್ಷೆಯಿಂದ ಪತ್ನಿಯು ಅವನನ್ನು ಮನಃಪೂರ್ವಕವಾಗಿ ಕ್ಷಮಿಸಲು ಸಿದ್ಧಳಿರಬಹುದು. ತನ್ನ ಮನಸ್ಸಾಕ್ಷಿ ಹಾಗೂ ಸನ್ನಿವೇಶದ ಆಧಾರದ ಮೇಲೆ ಪತ್ನಿಯು, ತನ್ನ ಪತಿಯ ವಿಚ್ಛೇದ ಕ್ರಿಯೆಗೆ ತಾನು ವಿರೋಧಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದ್ದಾಳೆ. ಕೆಲವು ಸ್ಥಳಗಳಲ್ಲಿ, ವಿಚ್ಛೇದವನ್ನು ವಿರೋಧಿಸುವ ಸ್ತ್ರೀಯು, ಮಗುವಿನ ರಕ್ಷಣೆ ಹಾಗೂ ಆರ್ಥಿಕ ಸಹಾಯವನ್ನು ನೀಡುವ ಕರಾರುಗಳಿರುವ ಶಾಸನಬದ್ಧ ಕಾಗದಪತ್ರಗಳಿಗೆ ಮಾತ್ರ ಸಹಿಹಾಕಸಾಧ್ಯವಿದೆ. ಅಂತಹ ಕಾಗದಪತ್ರಗಳಿಗೆ ಆಕೆ ಹಾಕುವ ಸಹಿಯು ತಾನೇ ಆಕೆ ಅವನನ್ನು ನಿರಾಕರಿಸುತ್ತಿಲ್ಲ ಎಂಬುದನ್ನು ಸೂಚಿಸುವುದು. ಆದರೂ, ಬೇರೆ ಸ್ಥಳಗಳಲ್ಲಿ, ವಿಚ್ಛೇದವನ್ನು ವಿರೋಧಿಸುವ ಹೆಂಡತಿಯು, ತಾನು ವಿಚ್ಛೇದಕ್ಕೆ ಒಪ್ಪಿಕೊಳ್ಳುತ್ತೇನೆಂದು ಸೂಚಿಸುವ ಕಾಗದಪತ್ರಗಳಿಗೆ ಸಹಿಹಾಕುವಂತೆ ಕೇಳಿಕೊಳ್ಳಲ್ಪಡಬಹುದು; ಇಂತಹ ಕಾಗದಪತ್ರಗಳಿಗೆ ಆಕೆ ಸಹಿಹಾಕುವಲ್ಲಿ, ಆಕೆ ತನ್ನ ಗಂಡನನ್ನು ನಿರಾಕರಿಸುತ್ತಿದ್ದಾಳೆಂಬುದನ್ನು ಸ್ಪಷ್ಟವಾಗಿ ತೋರಿಸುವುದು.
ಈ ಸನ್ನಿವೇಶದಲ್ಲೂ, ತಪ್ಪಭಿಪ್ರಾಯದ ಸಾಧ್ಯತೆಯನ್ನು ದೂರಮಾಡಲಿಕ್ಕಾಗಿ ಪತ್ನಿಯು ಸಭೆಯ ಹಿರಿಯರಿಗೆ ಒಂದು ಪತ್ರವನ್ನು ಕೊಡುವುದು ಸೂಕ್ತವಾದದ್ದಾಗಿದೆ. ಆ ಪತ್ರದಲ್ಲಿ, ತಾನು ಯಾವ ಸೂಕ್ತ ಕ್ರಮಗಳನ್ನು ತೆಗೆದುಕೊಂಡೆ ಮತ್ತು ಅವುಗಳ ಹಿಂದಿರುವ ಉದ್ದೇಶವೇನು ಎಂಬುದನ್ನು ನಮೂದಿಸತಕ್ಕದ್ದು. ತಾನು ಕ್ಷಮಿಸಲು ಮತ್ತು ಅವನ ಹೆಂಡತಿಯಾಗಿಯೇ ಉಳಿಯಲು ಮನಃಪೂರ್ವಕವಾಗಿ ಸಿದ್ಧಳಿದ್ದೇನೆ ಎಂದು ತನ್ನ ಪತಿಗೆ ತಾನು ಹೇಳಿದೆ ಎಂಬುದನ್ನು ಸಹ ಅವಳು ಅದರಲ್ಲಿ ಬರೆಯಸಾಧ್ಯವಿದೆ. ವಿವಾಹ ವಿಚ್ಛೇದವು ಅವಳ ಇಷ್ಟಕ್ಕೆ ವಿರುದ್ಧವಾಗಿ ಪಡೆದುಕೊಳ್ಳಲ್ಪಟ್ಟಿದೆ; ತನ್ನ ಪತಿಯನ್ನು ತಿರಸ್ಕರಿಸುವುದಕ್ಕೆ ಬದಲಾಗಿ ಅವಳು ಅವನನ್ನು ಕ್ಷಮಿಸಲು ಸಿದ್ಧಳಿದ್ದಳು ಎಂಬುದನ್ನು ಇದು ಅರ್ಥೈಸುತ್ತದೆ. ತಾನು ಕ್ಷಮಿಸಲು ಹಾಗೂ ಅವನ ಪತ್ನಿಯಾಗಿ ಉಳಿಯಲು ಮನಃಪೂರ್ವಕವಾಗಿ ಸಿದ್ಧಳಿದ್ದೆ ಎಂಬುದನ್ನು ಸ್ಪಷ್ಟಪಡಿಸಿದ ಬಳಿಕ, ಹಣಕಾಸಿನ ಹಾಗೂ/ಅಥವಾ ಮಕ್ಕಳನ್ನು ತನ್ನೊಂದಿಗೆ ಇಟ್ಟುಕೊಳ್ಳುವ ವಿಷಯಗಳು ಹೇಗೆ ತೀರ್ಮಾನಿಸಲ್ಪಡಬೇಕು ಎಂಬುದನ್ನು ಸೂಚಿಸುವಂತಹ ಕಾಗದಪತ್ರಗಳಿಗೆ ಮಾತ್ರ ಅವಳು ಸಹಿಹಾಕುವುದಾದರೆ, ಇದು ಅವಳು ತನ್ನ ಪತಿಯನ್ನು ತಿರಸ್ಕರಿಸುತ್ತಿಲ್ಲ ಎಂಬುದನ್ನು ಸೂಚಿಸುವುದು. *
ವಿಚ್ಛೇದದ ನಂತರವೂ ತನ್ನ ಪತಿಯನ್ನು ಕ್ಷಮಿಸಲು ತಾನು ಮನಃಪೂರ್ವಕವಾಗಿ ಸಿದ್ಧಳಿದ್ದೇನೆ ಎಂಬುದನ್ನು ದೃಢಪಡಿಸಿದ ಬಳಿಕ, ಅವಳಾಗಲಿ ಅವಳ ಪತಿಯಾಗಲಿ ಇನ್ನೊಬ್ಬ ಸಂಗಾತಿಯನ್ನು ಮದುವೆಯಾಗಲು ಸ್ವತಂತ್ರರಲ್ಲ. ಯಾರ ಕ್ಷಮಾಪಣೆಯನ್ನು ನಿರಾಕರಿಸಲಾಗಿದೆಯೋ ಆ ಮುಗ್ಧ ಸಂಗಾತಿಯು, ಅಂದರೆ ಪತ್ನಿಯು, ತನ್ನ ಪತಿಯ ಅನೈತಿಕತೆಯ ಕಾರಣದಿಂದ ಸಮಯಾನಂತರ ಅವನನ್ನು ತೊರೆಯುವ ನಿರ್ಧಾರವನ್ನು ಮಾಡುವಲ್ಲಿ, ಆಗ ಅವರಿಬ್ಬರೂ ಸ್ವತಂತ್ರರಾಗಿದ್ದಾರೆ. ಮುಗ್ಧ ಸಂಗಾತಿಗೆ ಅಂತಹ ಒಂದು ನಿರ್ಧಾರವನ್ನು ಮಾಡುವ ಹಕ್ಕಿದೆ ಎಂದು ಯೇಸು ತೋರಿಸಿದನು.—ಮತ್ತಾಯ 5:32; 19:9; ಲೂಕ 16:18.
[ಪಾದಟಿಪ್ಪಣಿ]
^ ಪ್ಯಾರ. 11 ಕಾನೂನಿನ ಕಾರ್ಯವಿಧಾನಗಳು ಹಾಗೂ ದಾಖಲೆಪತ್ರಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವ್ಯತ್ಯಾಸಮಯವಾಗಿರುತ್ತವೆ. ಕಾನೂನುಬದ್ಧ ಕಾಗದಪತ್ರಗಳಲ್ಲಿ ಮುದ್ರಿಸಲ್ಪಟ್ಟಿರುವ ವಿಚ್ಛೇದದ ಕುರಿತಾದ ಕರಾರುಗಳಿಗೆ ಸಹಿಹಾಕುವ ಮುಂಚೆ ಅವುಗಳನ್ನು ತುಂಬ ಜಾಗರೂಕತೆಯಿಂದ ಪರೀಕ್ಷಿಸತಕ್ಕದ್ದು. ತನ್ನ ಸಂಗಾತಿಯು ಪಡೆದುಕೊಳ್ಳುತ್ತಿರುವ ವಿಚ್ಛೇದಕ್ಕೆ ತಾನು ಆಕ್ಷೇಪವೆತ್ತುವುದಿಲ್ಲ ಎಂಬುದನ್ನು ಸೂಚಿಸುವಂತಹ ಕಾಗದಪತ್ರಗಳಿಗೆ ಒಬ್ಬ ಮುಗ್ಧ ಸಂಗಾತಿಯು (ಅವನು ಅಥವಾ ಅವಳು) ಸಹಿಹಾಕುವಲ್ಲಿ, ಇದು ಆ ಸಂಗಾತಿಯನ್ನು ತಿರಸ್ಕರಿಸುತ್ತೇನೆ ಎಂಬ ಕರಾರಿಗೆ ಸಹಿಹಾಕುವುದಕ್ಕೆ ಸಮಾನವಾದದ್ದಾಗಿದೆ.—ಮತ್ತಾಯ 5:37.