ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಆ ರೀತಿಯಲ್ಲಿ ಓಡಿರಿ”

“ಆ ರೀತಿಯಲ್ಲಿ ಓಡಿರಿ”

“ಆ ರೀತಿಯಲ್ಲಿ ಓಡಿರಿ”

ಉದ್ರೇಕಿತ ಜನರಿಂದ ಕಿಕ್ಕಿರಿದಿರುವ ಒಂದು ಕ್ರೀಡಾಂಗಣದಲ್ಲಿ ನೀವಿದ್ದೀರೆಂದು ಸ್ವಲ್ಪ ಊಹಿಸಿಕೊಳ್ಳಿ. ಸ್ಪರ್ಧಾಳುಗಳು ಮೈದಾನಕ್ಕೆ ಆಗಮಿಸುತ್ತಿದ್ದಾರೆ. ತಮ್ಮ ಹೀರೋಗಳನ್ನು ನೋಡಿದಾಕ್ಷಣ ಜನರು ಹುಚ್ಚೆದ್ದು ಕೂಗಾಡುತ್ತಾರೆ. ನಿಯಮಗಳು ಸರಿಯಾಗಿ ಪಾಲಿಸಲ್ಪಡುವಂತೆ ನೋಡಿಕೊಳ್ಳಲು ತೀರ್ಪುಗಾರರು ಅಲ್ಲಿದ್ದಾರೆ. ಕ್ರೀಡೆಗಳು ನಡೆಯುತ್ತಿರುವಾಗ, ನಿರಾಶೆಯ ಕೂಗುಗಳೊಂದಿಗೆ ಜಯಕಾರದ ಅಬ್ಬರವು ಬೆರೆತಿರುತ್ತದೆ. ವಿಜೇತರನ್ನು ಕಿವಿಗಡಚಿಕೊಳ್ಳುವ ಕರತಾಡನದೊಂದಿಗೆ ಅಭಿನಂದಿಸಲಾಗುತ್ತದೆ!

ಇದು ಒಂದು ಆಧುನಿಕ ಕ್ರೀಡಾ ಸಮಾರಂಭವಲ್ಲ. ಬದಲಾಗಿ ಸುಮಾರು 2,000 ವರ್ಷಗಳ ಹಿಂದೆ ಕೊರಿಂಥದ ಭೂಸಂಧಿಯಲ್ಲಿ ನಡೆಸಲಾದ ಕ್ರೀಡಾಸಮಾರಂಭವಾಗಿದೆ. ಸಾ.ಶ.ಪೂ. ಆರನೆಯ ಶತಮಾನದಿಂದ ಸಾ.ಶ. ನಾಲ್ಕನೆಯ ಶತಮಾನದ ವರೆಗೆ, ಪ್ರತಿ ಎರಡು ವರ್ಷಕ್ಕೊಮ್ಮೆ ಅಲ್ಲಿ ಈ ಪ್ರಸಿದ್ಧವಾದ ಇಸ್ತ್‌ಮಿಅನ್‌ ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಈ ಘಟನೆಯು ಅನೇಕ ದಿನಗಳ ವರೆಗೆ ನಡೆಯುತ್ತಿತ್ತು ಮತ್ತು ಇಡೀ ಗ್ರೀಸ್‌ ಸಾಮ್ರಾಜ್ಯದ ಆಸಕ್ತಿಯು ಅದರ ಮೇಲೆ ಕೇಂದ್ರಿತವಾಗಿರುತ್ತಿತ್ತು. ಈ ಪಂದ್ಯಗಳು, ಸಾಧಾರಣವಾದ ಕ್ರೀಡಾ ಸ್ಪರ್ಧೆಗಳಾಗಿರುತ್ತಿರಲಿಲ್ಲ. ಅದರಲ್ಲಿನ ಸ್ಪರ್ಧಾಳುಗಳು, ಮಿಲಿಟರಿ ಸಿದ್ಧತೆಯ ಸಂಕೇತಗಳಾಗಿದ್ದರು. ಮತ್ತು ವಿಜೇತರು, ಮರದ ಎಲೆಗಳಿಂದ ಮಾಡಲಾಗಿದ್ದ ಕಿರೀಟಗಳನ್ನು ಪಡೆದುಕೊಳ್ಳುತ್ತಿದ್ದರು ಹಾಗೂ ಆರಾಧ್ಯದೈವಗಳಾಗಿರುತ್ತಿದ್ದರು. ಅವರ ಮೇಲೆ ಕೊಡುಗೆಗಳ ಸುರಿಮಳೆಗೈಯ್ಯಲಾಗುತ್ತಿತ್ತು, ಮತ್ತು ಆ ನಗರವು ಅವರಿಗೆ ಜೀವನಪೂರ್ತಿ ದೊಡ್ಡ ಮೊತ್ತದ ವಿಶ್ರಾಂತಿ ವೇತನವನ್ನು ಕೊಡುತ್ತಿತ್ತು.

ಕೊರಿಂಥದ ಬಳಿ ನಡೆಯುತ್ತಿದ್ದ ಈ ಇಸ್ತ್‌ಮಿಅನ್‌ ಪಂದ್ಯಗಳ ಕುರಿತಾಗಿ ಅಪೊಸ್ತಲ ಪೌಲನಿಗೆ ಚೆನ್ನಾಗಿ ತಿಳಿದಿತ್ತು. ಆದುದರಿಂದ ಅವನು ಒಬ್ಬ ಕ್ರೈಸ್ತನ ಜೀವನಕ್ರಮವನ್ನು ಒಂದು ಕ್ರೀಡಾ ಸ್ಪರ್ಧೆಗೆ ಹೋಲಿಸಿದನು. ಓಟಗಾರರು, ಮಲ್ಲರು ಮತ್ತು ಮುಷ್ಟಿಕಾಳಗದ ಜಟ್ಟಿಗಳಿಗೆ ಸೂಚಿಸುವ ಮೂಲಕ, ಒಳ್ಳೆಯ ತರಬೇತಿಯಿಂದ ಸಿಗುವ ಪ್ರತಿಫಲಗಳು, ಸರಿಯಾದ ಗುರಿಯೊಂದಿಗೆ ಮಾಡಲ್ಪಡುವ ಪ್ರಯತ್ನಗಳು ಮತ್ತು ತಾಳ್ಮೆಗೆ ಅವನು ಸೂಕ್ತವಾದ ದೃಷ್ಟಾಂತಗಳನ್ನು ಕೊಟ್ಟನು. ಅವನು ಇದೆಲ್ಲವನ್ನೂ ಯಾರಿಗೆ ಬರೆಯುತ್ತಿದ್ದನೋ ಆ ಕ್ರೈಸ್ತರಿಗೂ ಈ ಆಟಗಳ ಕುರಿತಾಗಿ ಖಂಡಿತವಾಗಿಯೂ ತಿಳಿದಿತ್ತು. ಅವರಲ್ಲಿ ಕೆಲವರು ನಿಸ್ಸಂದೇಹವಾಗಿಯೂ ಒಂದು ಸಮಯದಲ್ಲಿ, ಕ್ರೀಡಾಂಗಣದಲ್ಲಿ ಕೂಗಾಡುತ್ತಿದ್ದ ಆ ಜನರಲ್ಲೂ ಒಬ್ಬರಾಗಿದ್ದಿರಬಹುದು. ಆದುದರಿಂದ ಅವರು ಸುಲಭವಾಗಿ ಪೌಲನ ದೃಷ್ಟಾಂತಗಳನ್ನು ಅರ್ಥಮಾಡಿಕೊಳ್ಳಸಾಧ್ಯವಿತ್ತು. ಆದರೆ ಇಂದು ನಮ್ಮ ಕುರಿತಾಗಿ ಏನು? ನಾವು ಸಹ ಅವರಂತೆಯೇ ನಿತ್ಯಜೀವಕ್ಕಾಗಿರುವ ಓಟದಲ್ಲಿದ್ದೇವೆ. ಆ ಸ್ಪರ್ಧೆಗಳಿಗೆ ಸೂಚಿಸುತ್ತಾ ಪೌಲನು ಹೇಳಿದಂತಹ ವಿಷಯಗಳಿಂದ ನಾವು ಹೇಗೆ ಪ್ರಯೋಜನಪಡೆಯಬಹುದು?

‘ನಿಯಮದ ಪ್ರಕಾರ ಹೋರಾಡುವುದು’

ಪ್ರಾಚೀನ ಕ್ರೀಡೆಗಳಲ್ಲಿ ಪ್ರವೇಶಿಸಲು ಕಟ್ಟುನಿಟ್ಟಿನ ಅವಶ್ಯಕತೆಗಳಿದ್ದವು. ಪ್ರತಿಯೊಬ್ಬ ಸ್ಪರ್ಧಾಳುವನ್ನು ಪ್ರೇಕ್ಷಕರ ಮುಂದೆ ನಿಲ್ಲಿಸುತ್ತಾ, ಒಬ್ಬ ಘೋಷಕನು ಹೀಗೆ ಕೂಗುತ್ತಿದ್ದನು: ‘ಈ ಮನುಷ್ಯನು ಯಾವುದೇ ಅಪರಾಧಮಾಡಿದ್ದಾನೆಂದು ಯಾರಾದರೂ ಆರೋಪ ಹೊರಿಸಬಹುದೊ? ಅವನೊಬ್ಬ ಕಳ್ಳನು ಅಥವಾ ದುಷ್ಟನು ಮತ್ತು ತನ್ನ ಜೀವಿತ ಹಾಗೂ ವರ್ತನೆಗಳಲ್ಲಿ ಕೀಳ್ಮಟ್ಟಕ್ಕಿಳಿದವನು ಆಗಿದ್ದಾನೊ?’ ಆರ್ಕ್ಯಾಲೊಜಿಯ ಗ್ರೀಕಾ ಎಂಬ ಪುಸ್ತಕಕ್ಕನುಸಾರ, “ಒಬ್ಬ ಕುಖ್ಯಾತ ಪಾತಕಿ, ಅಥವಾ ಅಂಥ ಯಾವುದೇ ವಿಷಯದೊಂದಿಗೆ ಸಂಬಂಧ ಹೊಂದಿರುವ ಯಾವ ವ್ಯಕ್ತಿಯೂ ಸ್ಪರ್ಧಿಸಲು ಅನುಮತಿಸಲ್ಪಡುತ್ತಿರಲಿಲ್ಲ.” ಅಷ್ಟುಮಾತ್ರವಲ್ಲದೆ, ಆಟದ ನಿಯಮಗಳನ್ನು ಉಲ್ಲಂಘಿಸುವವರನ್ನು, ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಿಷೇಧಿಸುವ ಮೂಲಕ ಕಠಿನ ಶಿಕ್ಷೆಯನ್ನು ಕೊಡಲಾಗುತ್ತಿತ್ತು.

ಈ ಸಂಗತಿಯು, ಪೌಲನ ಈ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುತ್ತದೆ: “ಯಾವನಾದರೂ ರಂಗಸ್ಥಳದಲ್ಲಿ ಎದುರಾಳಿನೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವದಿಲ್ಲ.” (2 ತಿಮೊಥೆಯ 2:5) ಹಾಗೆಯೇ, ಜೀವಿತದ ಓಟದಲ್ಲಿ ಓಡಲಿಕ್ಕಾಗಿ, ನಾವು ಯೆಹೋವನ ಆವಶ್ಯಕತೆಗಳನ್ನು ಪೂರೈಸಬೇಕು, ಅಂದರೆ ಬೈಬಲಿನಲ್ಲಿ ಕೊಡಲ್ಪಟ್ಟಿರುವ ಆತನ ಉಚ್ಚ ನೈತಿಕ ಮಟ್ಟಗಳಿಗನುಸಾರ ಜೀವಿಸಬೇಕು. ಆದರೆ ಬೈಬಲ್‌ ನಮ್ಮನ್ನು ಹೀಗೆ ಎಚ್ಚರಿಸುತ್ತದೆ: “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು.” (ಆದಿಕಾಂಡ 8:21) ಆದುದರಿಂದ, ನಾವು ಜೀವಿತದ ಓಟವನ್ನು ಪ್ರವೇಶಿಸಿದ ನಂತರವೂ, ಆ ನಿಯಮಗಳಿಗನುಸಾರ ನಡೆಯುತ್ತಾ ಇರುವಂತೆ ಜಾಗ್ರತೆ ವಹಿಸಬೇಕು. ಆಗ ಮಾತ್ರ ನಾವು ಯೆಹೋವನ ಮೆಚ್ಚಿಕೆಯನ್ನು ಪಡೆದು, ನಿತ್ಯಜೀವವನ್ನು ಗಳಿಸಬಹುದು.

ಇದನ್ನು ಮಾಡಲಿಕ್ಕಾಗಿ, ದೇವರ ಕಡೆಗಿನ ಪ್ರೀತಿಯು ನಮಗೆ ತುಂಬ ಸಹಾಯಮಾಡುವುದು. (ಮಾರ್ಕ 12:​29-31) ಆ ಪ್ರೀತಿಯು ನಮ್ಮಲ್ಲಿರುವಲ್ಲಿ, ನಾವು ಯೆಹೋವನನ್ನು ಸಂತೋಷಪಡಿಸಲು ಮತ್ತು ಆತನ ಚಿತ್ತಕ್ಕನುಸಾರ ಕ್ರಿಯೆಗೈಯಲು ಬಯಸುವೆವು.​—1 ಯೋಹಾನ 5:3.

‘ಎಲ್ಲಾ ಭಾರವನ್ನು ತೆಗೆದಿಡು’

ಆ ಪುರಾತನಕಾಲದ ಕ್ರೀಡೆಗಳಲ್ಲಿ, ಓಟಗಾರರನ್ನು ಉಡುಗೆ ಅಥವಾ ಯಾವುದೇ ಸಲಕರಣೆಗಳಿಂದ ಸಜ್ಜುಗೊಳಿಸುತ್ತಿರಲಿಲ್ಲ. “ಓಟಗಳಲ್ಲಿ, . . . ಯೋಧರು ಸಂಪೂರ್ಣವಾಗಿ ಬೆತ್ತಲೆಯಾಗಿರುತ್ತಿದ್ದರು” ಎಂದು ಗ್ರೀಕರ ಮತ್ತು ರೋಮನರ ಜೀವಿತ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುತ್ತದೆ. ಬಟ್ಟೆಗಳನ್ನು ಧರಿಸದೇ ಇರುವುದರಿಂದ, ಸ್ಪರ್ಧಾಳುಗಳು ವೇಗವಾಗಿ, ಚುರುಕಾಗಿ ಮತ್ತು ಸುಲಭವಾಗಿ ಓಡಸಾಧ್ಯವಿತ್ತು. ಅನಾವಶ್ಯಕವಾದ ಭಾರದಿಂದಾಗಿ ಅವರಲ್ಲಿದ್ದ ಶಕ್ತಿಯು ವ್ಯರ್ಥವಾಗಿಹೋಗುತ್ತಿರಲಿಲ್ಲ. ಬಹುಶಃ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಪೌಲನು ಇಬ್ರಿಯ ಕ್ರೈಸ್ತರಿಗೆ ಹೀಗೆ ಬರೆದನು: “ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ . . . ತೆಗೆದಿಟ್ಟು . . . ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.”​—ಇಬ್ರಿಯ 12:​1, 2.

ಜೀವಿತದ ಓಟದಲ್ಲಿ ಯಾವ ರೀತಿಯ ಭಾರವು ನಮಗೆ ಅಡ್ಡಿಯಾಗಿರಬಲ್ಲದು? ಒಂದನೆಯದಾಗಿ, ಅನಾವಶ್ಯಕವಾದ ಭೌತಿಕ ಸ್ವತ್ತುಗಳನ್ನು ಶೇಖರಿಸುವ ಅಥವಾ ದುಬಾರಿಯಾದ ಜೀವನಶೈಲಿಗಾಗಿರುವ ಅಭಿಲಾಷೆ ಆಗಿರಬಹುದು. ಕೆಲವರು ಹಣ ತಮಗೆ ಸುರಕ್ಷೆ ಅಥವಾ ಸಂತೋಷವನ್ನು ಕೊಡುವುದೆಂದು ನೆನಸುತ್ತಾ ಅದನ್ನು ಶೇಖರಿಸುತ್ತಿರಬಹುದು. ಈ ರೀತಿಯ ಅತಿ “ಭಾರ”ವು ಒಬ್ಬ ಓಟಗಾರನ ಮೇಲೆ ಭಾರವಾದ ಹೊರೆಯಂತಿದ್ದು, ಅದು ಅವನ ಓಟವನ್ನು ನಿಧಾನಗೊಳಿಸಿ, ಕಟ್ಟಕಡೆಗೆ ಅವನ ಜೀವಿತದಲ್ಲಿ ದೇವರಿಗೆ ಅಷ್ಟೊಂದು ಪ್ರಾಮುಖ್ಯತೆ ಇರದೇ ಹೋಗಬಹುದು. (ಲೂಕ 12:​16-21) ನಿತ್ಯಜೀವವು ತುಂಬ ದೂರದಲ್ಲಿರುವ ಒಂದು ನಿರೀಕ್ಷೆಯಂತೆ ತೋರಬಹುದು. ಅವನು ಹೀಗೂ ತರ್ಕಿಸಬಹುದು: ‘ಹೊಸ ಲೋಕವು ಒಂದಲ್ಲ ಒಂದು ದಿನ ಖಂಡಿತ ಬರುವುದು. ಆದರೆ ಅಷ್ಟರ ವರೆಗೆ ನಾನು ಈ ಲೋಕವು ನೀಡುವ ಲಾಭವನ್ನು ಸಹ ಸ್ವಲ್ಪ ಆನಂದಿಸಬಹುದು.’ (1 ತಿಮೊಥೆಯ 6:​17-19) ಈ ರೀತಿಯ ಪ್ರಾಪಂಚಿಕ ದೃಷ್ಟಿಕೋನವು, ನಮ್ಮನ್ನು ಜೀವಿತದ ಓಟದ ಮಾರ್ಗದಿಂದ ಪಕ್ಕಕ್ಕೆ ಸರಿಸಬಹುದು ಅಥವಾ ಆ ಓಟವನ್ನು ಆರಂಭಿಸದೇ ಇರುವಂತೆಯೂ ಮಾಡಬಹುದು.

ಪರ್ವತ ಪ್ರಸಂಗದಲ್ಲಿ ಯೇಸು ಹೀಗಂದನು: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.” ಯೆಹೋವನು ಪ್ರಾಣಿಗಳನ್ನು ಮತ್ತು ಗಿಡಗಳನ್ನು ಪರಾಮರಿಸುವುದರ ಕುರಿತು ಹೇಳುತ್ತಾ, ಮನುಷ್ಯರು ಅವುಗಳಿಗಿಂತ ಹೆಚ್ಚು ಅಮೂಲ್ಯರಾಗಿದ್ದಾರೆಂಬುದನ್ನು ಹೇಳಿದ ನಂತರ ಅವನು ಬುದ್ಧಿಹೇಳಿದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”​—ಮತ್ತಾಯ 6:​24-33.

‘ಸ್ಥಿರಚಿತ್ತದಿಂದ ಓಡಿ’

ಪ್ರಾಚೀನ ಸಮಯದಲ್ಲಿನ ಎಲ್ಲಾ ಓಟಗಳು, ಅಲ್ಪದೂರದ ಓಟಗಳಾಗಿರುತ್ತಿರಲ್ಲಿಲ್ಲ. ಡೊಲಿಖೊಸ್‌ ಎಂದು ಕರೆಯಲಾಗುತ್ತಿದ್ದ ಒಂದು ಓಟವು, 4 ಕಿಲೊಮೀಟರ್‌ಗಳಷ್ಟು ದೂರದ್ದಾಗಿರುತ್ತಿತ್ತು. ಇದು ನಿಜವಾಗಿಯೂ, ಬಲ ಮತ್ತು ತಾಳ್ಮೆಯ ಕಠಿನವಾದ ಪರೀಕ್ಷೆಯಾಗಿರುತ್ತಿತ್ತು. ಸಂಪ್ರದಾಯಕ್ಕನುಸಾರ, ಸಾ.ಶ.ಪೂ. 328ರಲ್ಲಿ ಏಯಾಸ್‌ ಎಂಬ ಹೆಸರಿನ ಒಬ್ಬ ಸ್ಪರ್ಧಾಳು ಈ ಓಟದಲ್ಲಿ ಗೆದ್ದ ನಂತರ, ತನ್ನ ವಿಜಯವನ್ನು ಘೋಷಿಸಲಿಕ್ಕಾಗಿ ತನ್ನ ಸ್ವಂತ ಊರಾದ ಆರ್ಗೊಸ್‌ ವರೆಗೂ ಓಡಿಹೋದನು. ಆ ದಿನ ಅವನು ಸರಿಸುಮಾರು 110 ಕಿಲೊಮೀಟರ್‌ಗಳಷ್ಟು ದೂರ ಓಡಿದನಂತೆ!

ನಮ್ಮ ಕ್ರೈಸ್ತ ಓಟವು ಸಹ, ಅದೇ ರೀತಿಯಲ್ಲಿ ಬಹು ದೂರ ಅಂತರವುಳ್ಳ ಓಟವಾಗಿದ್ದು, ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂಥದ್ದಾಗಿದೆ. ಯೆಹೋವನ ಮೆಚ್ಚಿಕೆ ಮತ್ತು ನಿತ್ಯಜೀವದ ಬಹುಮಾನವನ್ನು ಪಡೆಯಬೇಕಾದರೆ, ಈ ಓಟದಲ್ಲಿ ತಾಳಿಕೊಳ್ಳಬೇಕು. ಪೌಲನು ಅದೇ ರೀತಿಯಲ್ಲಿ ಓಡಿದನು. ಆದುದರಿಂದ ತನ್ನ ಜೀವಿತದ ಅಂತ್ಯದಲ್ಲಿ, ಅವನು ಹೀಗೆ ಹೇಳಲು ಶಕ್ತನಾಗಿದ್ದನು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ; ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ.” (2 ತಿಮೊಥೆಯ 4:7, 8) ಪೌಲನಂತೆ ನಾವು ಸಹ ‘ಓಟವನ್ನು ಕಡೆಗಾಣಿಸಬೇಕು.’ ಈ ಓಟವು, ನಾವು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ದೀರ್ಘವಾಗಿರುವಂತೆ ತೋರುತ್ತಿದೆ ಎಂಬ ಒಂದೇ ಕಾರಣಕ್ಕಾಗಿ ನಮ್ಮ ತಾಳ್ಮೆಯು ಕಡಿಮೆಯಾಗುತ್ತಿರುವಲ್ಲಿ, ನಾವು ಬಹುಮಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. (ಇಬ್ರಿಯ 11:6) ಹಾಗಾಗುವಲ್ಲಿ ಅದೆಂತಹ ದುರಂತವಾಗಿರುವುದು, ಯಾಕೆಂದರೆ ನಾವೀಗ ಆ ಅಂತಿಮ ಗೆರೆಗೆ ತುಂಬ ಹತ್ತಿರದಲ್ಲಿದ್ದೇವೆ!

ಬಹುಮಾನ

ಪ್ರಾಚೀನ ಗ್ರೀಕ್‌ ಕ್ರೀಡಾ ಪಂದ್ಯಗಳಲ್ಲಿನ ವಿಜೇತರಿಗೆ, ಸಾಮಾನ್ಯವಾಗಿ ಮರಗಳ ಎಲೆಗಳಿಂದ ತಯಾರಿಸಲ್ಪಟ್ಟು, ಹೂವುಗಳಿಂದ ಅಲಂಕರಿಸಲ್ಪಟ್ಟ ಹಾರಗಳನ್ನು ತೊಡಿಸಲಾಗುತ್ತಿತ್ತು. ಪಿಥ್ಯನ್‌ ಪಂದ್ಯಗಳಲ್ಲಿನ ವಿಜೇತರಿಗೆ, ‘ಲಾರೆಲ್‌’ ಎಲೆಗಳಿಂದ ಮಾಡಲ್ಪಟ್ಟಿರುವ ಒಂದು ಕಿರೀಟವನ್ನು ಕೊಡಲಾಗುತ್ತಿತ್ತು. ಒಲಂಪಿಕ್‌ ಆಟಗಳಲ್ಲಿ, ಕಾಡು ಆಲಿವ್‌ ಎಲೆಗಳ ಕಿರೀಟಗಳನ್ನು ಕೊಡಲಾಗುತ್ತಿತ್ತು. ಮತ್ತು ಇಸ್ತ್‌ಮಿಅನ್‌ ಪಂದ್ಯಗಳಲ್ಲಿ, ಪೀತದಾರು ಎಲೆಗಳಿಂದ ತಯಾರಿಸಲ್ಪಟ್ಟಿರುವ ಕಿರೀಟಗಳನ್ನು ಕೊಡಲಾಗುತ್ತಿತ್ತು. “ಯೋಧರ ಹುರುಪನ್ನು ಕೆರಳಿಸಲಿಕ್ಕಾಗಿ, ಆ ಕಿರೀಟಗಳನ್ನು, ವಿಜಯಕ್ಕಾಗಿರುವ ಬಹುಮಾನಗಳನ್ನು ಮತ್ತು ಖರ್ಜೂರದ ಕೊಂಬೆಗಳನ್ನು, ಸ್ಪರ್ಧೆಯ ಸಮಯದಲ್ಲಿ ಕ್ರೀಡಾಂಗಣದಲ್ಲಿ ಒಂದು ತ್ರಿಪಾದಿ ಅಥವಾ ಮೇಜಿನ ಮೇಲೆ ಸ್ಪರ್ಧಾಳುಗಳಿಗೆ ಕಾಣಿಸುವಂಥ ರೀತಿಯಲ್ಲಿ ಇಡಲಾಗುತ್ತಿತ್ತು” ಎಂದು ಒಬ್ಬ ಬೈಬಲ್‌ ವಿದ್ವಾಂಸನು ಹೇಳುತ್ತಾನೆ. ಆ ಕಿರೀಟವನ್ನು ಧರಿಸಿಕೊಳ್ಳುವುದು ವಿಜೇತನಿಗೆ ಬಹಳಷ್ಟು ಸನ್ಮಾನದ ಸಂಗತಿಯಾಗಿರುತ್ತಿತ್ತು. ಅವನು, ವಿಜಯೋತ್ಸಾಹದಿಂದ ಒಂದು ರಥದಲ್ಲಿ ಸವಾರಿಮಾಡುತ್ತಾ ಮನೆಗೆ ಹಿಂದಿರುಗುತ್ತಿದ್ದನು.

ಇದನ್ನು ಮನಸ್ಸಿನಲ್ಲಿಟ್ಟು, ಪೌಲನು ಕೊರಿಂಥದಲ್ಲಿದ್ದ ವಾಚಕರಿಗೆ ಕೇಳಿದ್ದು: “ಓಟದ ಸ್ಪರ್ಧೆಯಲ್ಲಿ ಎಲ್ಲಾ ಓಟಗಾರರು ಓಡುತ್ತಾರೆಂಬುದು ನಿಮಗೆ ಗೊತ್ತಿದೆ. ಆದರೆ ಅವರಲ್ಲಿ ಒಬ್ಬನು ಮಾತ್ರ ಬಹುಮಾನವನ್ನು ಪಡೆದುಕೊಳ್ಳುತ್ತಾನೆ. ಆದ್ದರಿಂದ ಆ ರೀತಿಯಲ್ಲಿ ಓಡಿರಿ; ಗೆಲ್ಲುವುದಕ್ಕಾಗಿ ಓಡಿರಿ. . . . ಆದರೆ ಈ ಲೋಕದ ಆ ಪದಕವು [“ಕಿರೀಟವು,” NW] ಸ್ವಲ್ಪಕಾಲ ಮಾತ್ರ ಇರುತ್ತದೆ. ಆದರೆ ನಮ್ಮ ಪದಕವು ಶಾಶ್ವತವಾದದ್ದು.” (1 ಕೊರಿಂಥ 9:​24, 25, ಪರಿಶುದ್ಧ ಬೈಬಲ್‌ *; 1 ಪೇತ್ರ 1:​3, 4) ಎಷ್ಟೊಂದು ದೊಡ್ಡ ವ್ಯತ್ಯಾಸ! ಪ್ರಾಚೀನಕಾಲದ ಆಟಗಳಲ್ಲಿ ಕೊಡಲಾಗುತ್ತಿದ್ದ ಬಾಡಿಹೋಗುವ ಕಿರೀಟಗಳಂತಿರದೆ, ಜೀವದ ಓಟದಲ್ಲಿ ಕಡೇ ವರೆಗೂ ಓಡುವವರಿಗಾಗಿ ಎಂದೂ ನಾಶವಾಗದಂಥ ಬಹುಮಾನವು ಕಾದಿರಿಸಲ್ಪಟ್ಟಿದೆ.

ಈ ಶ್ರೇಷ್ಠವಾದ ಕಿರೀಟದ ಕುರಿತಾಗಿ ಅಪೊಸ್ತಲ ಪೇತ್ರನು ಹೀಗೆ ಬರೆದನು: “ಹಿರೀ ಕುರುಬನು ಪ್ರತ್ಯಕ್ಷನಾಗುವಾಗ ನೀವು ದೇವಪ್ರಭಾವವೆಂಬ ಎಂದಿಗೂ ಬಾಡದ ಜಯಮಾಲೆಯನ್ನು [“ಕಿರೀಟವನ್ನು,” NW] ಹೊಂದುವಿರಿ.” (1 ಪೇತ್ರ 5:4) ಕ್ರಿಸ್ತನೊಂದಿಗೆ ಸ್ವರ್ಗೀಯ ಮಹಿಮೆಯಲ್ಲಿ ನಶ್ವರವಾಗದ ಜೀವಿತದ ಬಹುಮಾನವನ್ನು, ಅಂದರೆ ಅಮರತ್ವವನ್ನು, ಈ ಲೋಕವು ಕೊಡುವ ಯಾವುದೇ ಬಹುಮಾನದೊಂದಿಗೆ ಹೋಲಿಸಲು ಸಾಧ್ಯವೇ?

ಇಂದು ಕ್ರೈಸ್ತ ಓಟಗಾರರಲ್ಲಿ ಹೆಚ್ಚಿನವರು, ತನ್ನ ಪುತ್ರರಾಗಿರಲಿಕ್ಕಾಗಿ ದೇವರಿಂದ ಅಭಿಷೇಕಿಸಲ್ಪಟ್ಟಿಲ್ಲ ಮತ್ತು ಅವರಿಗೆ ಸ್ವರ್ಗೀಯ ನಿರೀಕ್ಷೆಯೂ ಇಲ್ಲ. ಅವರು ಅಮರತ್ವದ ಬಹುಮಾನಕ್ಕಾಗಿ ಓಡುತ್ತಿಲ್ಲ. ಹೀಗಿದ್ದರೂ ಅವರ ಮುಂದೆಯೂ ದೇವರು ಸರಿಸಾಟಿಯಿಲ್ಲದ ಬಹುಮಾನವನ್ನು ಇಟ್ಟಿದ್ದಾನೆ. ಅದು, ಸ್ವರ್ಗೀಯ ರಾಜ್ಯದ ಕೆಳಗೆ ಪ್ರಮೋದವನ ಭೂಮಿಯ ಮೇಲೆ ಪರಿಪೂರ್ಣತೆಯಲ್ಲಿ ಅನುಭವಿಸಬಹುದಾದ ನಿತ್ಯಜೀವವಾಗಿದೆ. ಒಬ್ಬ ಕ್ರೈಸ್ತ ಓಟಗಾರನು ಯಾವುದೇ ಬಹುಮಾನಕ್ಕಾಗಿ ಪ್ರಯಾಸಪಡುತ್ತಿರಲಿ, ಅವನು ಪಂದ್ಯದಲ್ಲಿರುವ ಬೇರಾವುದೇ ಓಟಗಾರನಿಗಿಂತಲೂ ಹೆಚ್ಚಿನ ದೃಢಸಂಕಲ್ಪ ಮತ್ತು ಉತ್ಸಾಹದಿಂದ ಓಡಬೇಕು. ಏಕೆ? ಏಕೆಂದರೆ ಆ ಬಹುಮಾನವು ಎಂದೂ ಬಾಡಿಹೋಗದು: “[“ದೇವರು,” NW] ತಾನು ಕೊಡುತ್ತೇನೆಂದು ನಮಗೆ ವಾಗ್ದಾನಮಾಡಿದ್ದು ನಿತ್ಯಜೀವವು.”​—1 ಯೋಹಾನ 2:25.

ಸರಿಸಾಟಿಯಿಲ್ಲದ ಈ ಬಹುಮಾನವು ಒಬ್ಬ ಕ್ರೈಸ್ತ ಓಟಗಾರನ ಮುಂದೆ ಇಡಲ್ಪಟ್ಟಿರುವುದರಿಂದ, ಈ ಲೋಕದ ಆಕರ್ಷಣೆಗಳ ಕುರಿತಾಗಿ ಅವನ ದೃಷ್ಟಿಕೋನ ಏನಾಗಿರಬೇಕು? ಅದು ಪೌಲನಿಗಿದ್ದಂತಹ ದೃಷ್ಟಿಕೋನದಂತೆಯೇ ಇರಬೇಕು. ಅವನು ಹೇಳಿದ್ದು: “ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.” ಇದಕ್ಕನುಸಾರ, ಪೌಲನು ಎಷ್ಟೊಂದು ಕಷ್ಟಪಟ್ಟು ಓಡಿದನು! “ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.” (ಫಿಲಿಪ್ಪಿ 3:8, 13, 14) ತನ್ನ ದೃಷ್ಟಿಯನ್ನು ಬಹುಮಾನದ ಮೇಲಿಟ್ಟುಕೊಂಡು ಪೌಲನು ಓಡಿದನು. ನಾವು ಸಹ ಹಾಗೆಯೇ ಮಾಡಬೇಕು.

ನಮ್ಮ ಅತ್ಯುತ್ತಮ ಮಾದರಿ

ಪ್ರಾಚೀನ ಆಟಗಳಲ್ಲಿ, ವಿಜೇತರಾದ ಕ್ರೀಡಾಪಟುಗಳು ತುಂಬ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ಕವಿಗಳು ಅವರ ಬಗ್ಗೆ ಕವನಗಳನ್ನು ಬರೆಯುತ್ತಿದ್ದರು ಮತ್ತು ಶಿಲ್ಪಿಗಳು ಅವರ ಮೂರ್ತಿಗಳನ್ನು ಕೆತ್ತುತ್ತಿದ್ದರು. ವ್ಯಾರಾ ಓಲಿವಾವ ಎಂಬ ಇತಿಹಾಸಗಾರ್ತಿಯು ಹೇಳುವುದೇನೆಂದರೆ, ಅವರು “ಮಹಿಮೆಯಲ್ಲಿ ಮಿಂದುಬಿಡುತ್ತಿದ್ದರು ಮತ್ತು ಬಹಳಷ್ಟು ಜನಪ್ರಿಯತೆಯನ್ನು ಆನಂದಿಸುತ್ತಿದ್ದರು.” ವಿಜೇತ ಕ್ರೀಡಾಪಟುಗಳು ಯುವ ಪೀಳಿಗೆಗೂ ಮಾದರಿಯಾಗಿರುತ್ತಿದ್ದರು.

ಕ್ರೈಸ್ತರಿಗಾಗಿ ಅತ್ಯುತ್ಕೃಷ್ಟವಾದ ಮಾದರಿಯನ್ನಿಟ್ಟ “ವಿಜೇತನು” ಯಾರು? ಪೌಲನು ಉತ್ತರಿಸುವುದು: “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿಯ 12:1, 2, NW) ನಿತ್ಯಜೀವಕ್ಕಾಗಿರುವ ನಮ್ಮ ಓಟದಲ್ಲಿ ನಾವು ವಿಜೇತರಾಗಬೇಕಾದರೆ, ನಾವು ನಮ್ಮ ಆದರ್ಶ ವ್ಯಕ್ತಿಯಾದ ಯೇಸು ಕ್ರಿಸ್ತನ ಮೇಲೆ ದೃಷ್ಟಿಯನ್ನಿಡಬೇಕು. ಇದನ್ನು ಮಾಡಲಿಕ್ಕಾಗಿ ನಾವು ಕ್ರಮವಾಗಿ ಸುವಾರ್ತಾ ವೃತ್ತಾಂತಗಳನ್ನು ಓದುತ್ತಿರಬೇಕು ಮತ್ತು ಅವನನ್ನು ನಾವು ಹೇಗೆ ಅನುಕರಿಸಬಹುದು ಎಂಬುದರ ಕುರಿತಾಗಿ ಮನನಮಾಡುತ್ತಿರಬೇಕು. ಆ ರೀತಿಯ ಅಭ್ಯಾಸವನ್ನು ಮಾಡುವ ಮೂಲಕ, ಯೇಸು ಕ್ರಿಸ್ತನು ದೇವರಿಗೆ ವಿಧೇಯನಾಗಿದ್ದನು ಮತ್ತು ತನ್ನ ನಂಬಿಕೆಯ ಗುಣಮಟ್ಟವನ್ನು ತಾಳ್ಮೆಯ ಮೂಲಕ ರುಜುಪಡಿಸಿದನೆಂಬುದನ್ನು ನಾವು ಗಣ್ಯಮಾಡುವಂತೆ ಸಹಾಯ ಮಾಡಲ್ಪಡುವೆವು. ಅಷ್ಟುಮಾತ್ರವಲ್ಲದೆ, ಅವನ ತಾಳ್ಮೆಯ ಪ್ರತಿಫಲವಾಗಿ, ಅವನು ಯೆಹೋವ ದೇವರ ಮೆಚ್ಚಿಕೆಯೊಂದಿಗೆ ಅನೇಕ ಅದ್ಭುತಕರವಾದ ಸುಯೋಗಗಳನ್ನೂ ಪಡೆದನು.​—ಫಿಲಿಪ್ಪಿ 2:​9-11.

ಯೇಸುವಿನ ಎಲ್ಲ ಗುಣಗಳಲ್ಲಿ ಎದ್ದುಕಾಣುವಂಥ ಗುಣವು, ಅವನ ಪ್ರೀತಿಯಾಗಿತ್ತು. “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:13) ನಮ್ಮ ಶತ್ರುಗಳನ್ನೂ ಪ್ರೀತಿಸುವಂತೆ ಹೇಳುವ ಮೂಲಕ ಅವನು “ಪ್ರೀತಿ” ಎಂಬ ಪದಕ್ಕೆ ಹೆಚ್ಚು ಗಾಢವಾದ ಅರ್ಥವನ್ನು ಕೊಟ್ಟನು. (ಮತ್ತಾಯ 5:43-48) ಅವನು ತನ್ನ ಸ್ವರ್ಗೀಯ ತಂದೆಯನ್ನು ಪ್ರೀತಿಸಿದ್ದರಿಂದಲೇ, ಆತನ ಚಿತ್ತವನ್ನು ಮಾಡುವುದರಲ್ಲಿ ಸಂತೋಷಿಸಿದನು. (ಕೀರ್ತನೆ 40:​9, 10; ಜ್ಞಾನೋಕ್ತಿ 27:11) ನಮ್ಮ ಆದರ್ಶ ವ್ಯಕ್ತಿಯೋಪಾದಿ ಮತ್ತು ಜೀವಿತದ ಶ್ರಮದಾಯಕ ಓಟದಲ್ಲಿ ನಮ್ಮ ವೇಗವು ಎಷ್ಟಿರಬೇಕೆಂಬುದನ್ನು ಸ್ಥಾಪಿಸಿದವನೋಪಾದಿ ನಾವು ಯೇಸುವಿನ ಕಡೆಗೆ ನೋಡಬೇಕು. ಆಗ, ನಾವು ದೇವರನ್ನೂ ನಮ್ಮ ನೆರೆಯವನನ್ನೂ ಪ್ರೀತಿಸುವಂತೆ ಮತ್ತು ನಮ್ಮ ಪವಿತ್ರ ಸೇವೆಯಲ್ಲಿ ನಿಜವಾಗಿಯೂ ಆನಂದವನ್ನು ಪಡೆದುಕೊಳ್ಳುವಂತೆಯೂ ಪ್ರಚೋದಿಸಲ್ಪಡುವೆವು. (ಮತ್ತಾಯ 22:​37-39; ಯೋಹಾನ 13:34; 1 ಪೇತ್ರ 2:21) ನಮ್ಮಿಂದ ಅಸಾಧ್ಯವಾಗಿರುವಂಥದ್ದನ್ನು ಮಾಡಲು ಯೇಸು ಕೇಳುವುದಿಲ್ಲವೆಂಬುದನ್ನು ಮನಸ್ಸಿನಲ್ಲಿಡಿ. ಅವನು ನಮಗೆ ಆಶ್ವಾಸನೆಯನ್ನು ಕೊಡುವುದು: “ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”​—ಮತ್ತಾಯ 11:28-30.

ಯೇಸುವಿನಂತೆಯೇ, ಕೊನೆವರೆಗೂ ತಾಳಿಕೊಳ್ಳುವವರೆಲ್ಲರಿಗಾಗಿ ಕಾದಿರಿಸಲ್ಪಟ್ಟಿರುವ ಬಹುಮಾನದ ಮೇಲೆ ನಾವು ನಮ್ಮ ದೃಷ್ಟಿಯನ್ನಿಡಬೇಕು. (ಮತ್ತಾಯ 24:13) ನಾವು ನಿಯಮಗಳನ್ನು ಪಾಲಿಸುವಲ್ಲಿ, ಎಲ್ಲ ಭಾರವನ್ನು ತೆಗೆದುಹಾಕುವಲ್ಲಿ, ಮತ್ತು ತಾಳ್ಮೆಯಿಂದ ಓಡುವಲ್ಲಿ, ನಾವು ಖಂಡಿತವಾಗಿಯೂ ಗೆಲ್ಲುವೆವು ಎಂಬ ಭರವಸೆಯನ್ನು ಹೊಂದಿರಬಲ್ಲೆವು. ನಮ್ಮ ದೃಷ್ಟಿಯ ಮುಂದಿರುವ ಗುರಿಯು ನಮ್ಮನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಅದು ನಮ್ಮಲ್ಲಿ ತುಂಬಿಸುವ ಆನಂದವು ನಮ್ಮ ಬಲವನ್ನು ನವೀಕರಿಸುತ್ತದೆ. ಮತ್ತು ಈ ಆನಂದವು, ನಮ್ಮ ಮುಂದೆ ಉಳಿದಿರುವ ಪಥದಲ್ಲಿ ನಾವು ಸುಲಭವಾಗಿ ಓಡುವಂತೆ ಸಹಾಯಮಾಡುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 18 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.

[ಪುಟ 29ರಲ್ಲಿರುವ ಚಿತ್ರ]

ಕ್ರೈಸ್ತ ಓಟವು, ಒಂದು ದೂರ ಅಂತರದ ಓಟದಂತಿದೆ​—ಅದಕ್ಕಾಗಿ ತಾಳ್ಮೆ ಆವಶ್ಯಕ

[ಪುಟ 30ರಲ್ಲಿರುವ ಚಿತ್ರ]

ಕಿರೀಟಧಾರಿ ಸ್ಪರ್ಧಾಳುವಿನಂತಿರದೆ, ಕ್ರೈಸ್ತರು ನಾಶವಾಗದಂತಹ ಬಹುಮಾನಕ್ಕಾಗಿ ಎದುರುನೋಡಬಲ್ಲರು

[ಪುಟ 31ರಲ್ಲಿರುವ ಚಿತ್ರ]

ಕೊನೇ ವರೆಗೂ ತಾಳಿಕೊಳ್ಳುವವರೆಲ್ಲರಿಗಾಗಿ ಬಹುಮಾನವಿದೆ

[ಪುಟ 28ರಲ್ಲಿರುವ ಚಿತ್ರ ಕೃಪೆ]

Copyright British Museum