ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಪ್ರೀತಿಯು ಎಷ್ಟು ವ್ಯಾಪಕವಾಗಿದೆ?

ನಿಮ್ಮ ಪ್ರೀತಿಯು ಎಷ್ಟು ವ್ಯಾಪಕವಾಗಿದೆ?

ನಿಮ್ಮ ಪ್ರೀತಿಯು ಎಷ್ಟು ವ್ಯಾಪಕವಾಗಿದೆ?

“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”​—ಮತ್ತಾಯ 22:39.

1. ನಾವು ಯೆಹೋವನನ್ನು ಪ್ರೀತಿಸುತ್ತಿರುವಲ್ಲಿ ನಮ್ಮ ನೆರೆಯವನನ್ನೂ ಪ್ರೀತಿಸಬೇಕು ಏಕೆ?

ಯಾವ ಆಜ್ಞೆಯು ಅತಿ ಮುಖ್ಯವಾದದ್ದೆಂದು ಯೇಸುವಿಗೆ ಕೇಳಲ್ಪಟ್ಟಾಗ, ಅವನು ಉತ್ತರಿಸಿದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.” ಅನಂತರ ಆ ಮೊದಲನೆಯ ಆಜ್ಞೆಗೆ ಹೋಲುವಂಥ ಎರಡನೆಯ ಆಜ್ಞೆಯನ್ನು ಅವನು ಉಲ್ಲೇಖಿಸಿ ಹೇಳಿದ್ದು: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:​37, 39) ಹೌದು, ನೆರೆಯವನನ್ನು ಪ್ರೀತಿಸುವುದು ಕ್ರೈಸ್ತನೊಬ್ಬನ ಗುರುತಾಗಿದೆ. ನಾವು ಯೆಹೋವನನ್ನು ಪ್ರೀತಿಸುತ್ತಿರುವುದಾದರೆ, ನಮ್ಮ ನೆರೆಯವನನ್ನೂ ಪ್ರೀತಿಸಲೇಬೇಕು. ಏಕೆ? ಏಕೆಂದರೆ ನಾವು ದೇವರನ್ನು ಪ್ರೀತಿಸುತ್ತೇವೆಂಬುದನ್ನು ಆತನ ವಾಕ್ಯಕ್ಕೆ ವಿಧೇಯರಾಗುವ ಮೂಲಕ ತೋರಿಸುತ್ತೇವೆ. ಮತ್ತು ಆತನ ವಾಕ್ಯವೇ, ನಾವು ನಮ್ಮ ನೆರೆಯವನನ್ನು ಪ್ರೀತಿಸುವಂತೆ ಆಜ್ಞಾಪಿಸುತ್ತದೆ. ಆದುದರಿಂದ ನಾವು ನಮ್ಮ ಸಹೋದರ ಸಹೋದರಿಯರನ್ನು ಪ್ರೀತಿಸದಿರುವಲ್ಲಿ, ದೇವರಿಗಾಗಿರುವ ನಮ್ಮ ಪ್ರೀತಿಯು ನಿಜವಾದದ್ದಲ್ಲ.​—ರೋಮಾಪುರ 13:8; 1 ಯೋಹಾನ 2:​5; 4:​20, 21.

2. ನಮ್ಮ ನೆರೆಯವನ ಕಡೆಗೆ ನಮಗೆ ಯಾವ ರೀತಿಯ ಪ್ರೀತಿಯಿರಬೇಕು?

2 ನಾವು ನಮ್ಮ ನೆರೆಯವನನ್ನು ಪ್ರೀತಿಸಬೇಕೆಂದು ಯೇಸು ಹೇಳಿದಾಗ, ಅವನು ಸ್ನೇಹಕ್ಕಿಂತಲೂ ಹೆಚ್ಚಿನದ್ದರ ಕುರಿತಾಗಿ ಮಾತಾಡುತ್ತಿದ್ದನು. ಸ್ವಾಭಾವಿಕವಾಗಿ ಕುಟುಂಬ ಸದಸ್ಯರ ನಡುವೆ ಇರುವ ಅಥವಾ ಒಬ್ಬ ಪುರುಷ ಮತ್ತು ಸ್ತ್ರೀಯ ನಡುವೆ ಇರುವ ಪ್ರೀತಿಗಿಂತಲೂ ಭಿನ್ನವಾದ ಪ್ರೀತಿಯ ಕುರಿತಾಗಿ ಅವನು ಮಾತಾಡುತ್ತಿದ್ದನು. ಈ ಪ್ರೀತಿಯು, ಯೆಹೋವನಿಗೆ ತನ್ನ ಸಮರ್ಪಿತ ಸೇವಕರ ಕಡೆಗೆ ಇರುವಂಥ ಮತ್ತು ಆತನಿಗಾಗಿ ಅವರಿಗಿರುವಂಥ ರೀತಿಯ ಪ್ರೀತಿಯಾಗಿದೆ. (ಯೋಹಾನ 17:26; 1 ಯೋಹಾನ 4:​11, 19) ಯೇಸುವಿನ ಬಳಿ ಬಂದ ಒಬ್ಬ ಯೆಹೂದಿ ಶಾಸ್ತ್ರಿಯು ಬುದ್ಧಿವಂತಿಕೆಯಿಂದ ಮಾತಾಡುತ್ತಿದ್ದನೆಂಬುದನ್ನು ಯೇಸು ಗ್ರಹಿಸಿದನು. ಒಬ್ಬ ವ್ಯಕ್ತಿಯು ದೇವರನ್ನು “ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ” ಪ್ರೀತಿಸಬೇಕೆಂಬ ವಿಷಯದಲ್ಲಿ ಯೇಸುವಿನೊಂದಿಗೆ ಅವನು ಸಮ್ಮತಿಸಿದನು. (ಮಾರ್ಕ 12:​28-34) ಅವನು ಹೇಳಿದ್ದು ಸರಿಯಾಗಿತ್ತು. ಒಬ್ಬ ಕ್ರೈಸ್ತನು ದೇವರಿಗಾಗಿ ಮತ್ತು ನೆರೆಯವನಿಗಾಗಿ ಬೆಳೆಸಿಕೊಳ್ಳುವಂಥ ಪ್ರೀತಿಯು, ನಮ್ಮ ಭಾವನೆಗಳು ಮತ್ತು ಬುದ್ಧಿಶಕ್ತಿ ಎರಡನ್ನೂ ಒಳಗೂಡಿಸುತ್ತದೆ. ಅದು ಹೃದಯದಿಂದ ಹೊಮ್ಮುತ್ತದೆ ಮತ್ತು ಮನಸ್ಸಿನಿಂದ ಮಾರ್ಗದರ್ಶಿಸಲ್ಪಡುತ್ತದೆ.

3. (ಎ) ಒಬ್ಬ “ಧರ್ಮೋಪದೇಶಕನು” ತನ್ನ ನೆರೆಯವನ ಕುರಿತಾಗಿ ವಿಸ್ತಾರವಾದ ದೃಷ್ಟಿಕೋನವನ್ನು ಹೊಂದಿರುವಂತೆ ಯೇಸು ಹೇಗೆ ಕಲಿಸಿದನು? (ಬಿ) ಯೇಸುವಿನ ದೃಷ್ಟಾಂತವು ಇಂದು ಕ್ರೈಸ್ತರಿಗೆ ಹೇಗೆ ಅನ್ವಯಿಸುತ್ತದೆ?

3 ನಾವು ನಮ್ಮ ನೆರೆಯವನನ್ನು ಪ್ರೀತಿಸಬೇಕೆಂಬುದಾಗಿ ಯೇಸು ಹೇಳಿದಾಗ, “ನನ್ನ ನೆರೆಯವನು ಯಾರು” ಎಂದು “ಒಬ್ಬ ಧರ್ಮೋಪದೇಶಕನು” ಕೇಳಿದನೆಂದು ಲೂಕನು ವರದಿಸುತ್ತಾನೆ. ಆಗ ಯೇಸು ಒಂದು ಸಾಮ್ಯವನ್ನು ಕೊಟ್ಟು ಉತ್ತರಿಸಿದನು. ಒಬ್ಬ ವ್ಯಕ್ತಿಯನ್ನು ಕಳ್ಳರು ಸುಲಿಗೆಮಾಡಿ, ಗಾಯವಾಗುವಷ್ಟು ಹೊಡೆದು, ಅರೆಜೀವಮಾಡಿ ದಾರಿ ಬದಿಯಲ್ಲಿ ಬಿಟ್ಟುಹೋದರು. ಮೊದಲು ಒಬ್ಬ ಯಾಜಕನು ಮತ್ತು ಅನಂತರ ಒಬ್ಬ ಲೇವಿಯು ಅಲ್ಲಿಂದ ದಾಟಿಹೋದರು. ಆದರೆ ಇಬ್ಬರೂ ಅವನನ್ನು ನೋಡಿಯೂ ನೋಡದಂತೆ ಮುಂದೆ ಹೋದರು. ಕೊನೆಯಲ್ಲಿ ಒಬ್ಬ ಸಮಾರ್ಯದವನು ಆಚೆ ಬಂದನು. ಅವನು ಆ ಗಾಯಾಳು ವ್ಯಕ್ತಿಯನ್ನು ನೋಡಿ, ದಯಾಪೂರ್ವಕವಾಗಿ ಅವನ ಸೇವೆಮಾಡಿದನು. ಈ ಮೂವರಲ್ಲಿ ಯಾರು ಆ ಗಾಯಾಳು ವ್ಯಕ್ತಿಗೆ ನೆರೆಯವನಾಗಿದ್ದನು? ಉತ್ತರವು ತೀರ ಸ್ಪಷ್ಟವಾಗಿತ್ತು. (ಲೂಕ 10:​25-37) ಒಬ್ಬ ಸಮಾರ್ಯದವನು, ಒಬ್ಬ ಯಾಜಕ ಮತ್ತು ಲೇವಿಗಿಂತಲೂ ಹೆಚ್ಚು ಉತ್ತಮ ನೆರೆಯವನಾಗಿದ್ದಾನೆಂದು ಯೇಸು ಹೇಳುವುದನ್ನು ಕೇಳಿ ಆ ಧರ್ಮೋಪದೇಶಕನಿಗೆ ಆಘಾತವಾಗಿರಬಹುದು. ಆದರೆ, ಆ ಮನುಷ್ಯನು ಹೆಚ್ಚು ವ್ಯಾಪಕವಾದ ರೀತಿಯಲ್ಲಿ ತನ್ನ ನೆರೆಯವನನ್ನು ಪ್ರೀತಿಸುವಂತೆ ಯೇಸು ಸಹಾಯಮಾಡುತ್ತಿದ್ದನು. ಕ್ರೈಸ್ತರು ಸಹ ಅದೇ ರೀತಿಯಲ್ಲಿ ಪ್ರೀತಿಸುತ್ತಾರೆ. ಅವರ ಪ್ರೀತಿಯಲ್ಲಿ ಯಾರೆಲ್ಲ ಒಳಗೂಡಿರುತ್ತಾರೆಂಬುದನ್ನು ಪರಿಗಣಿಸಿರಿ.

ಕುಟುಂಬದೊಳಗೆ ಪ್ರೀತಿ

4. ಪ್ರಥಮವಾಗಿ, ಒಬ್ಬ ಕ್ರೈಸ್ತನು ಯಾರಿಗೆ ಪ್ರೀತಿ ತೋರಿಸುತ್ತಾನೆ?

4 ಕ್ರೈಸ್ತರು ತಮ್ಮ ಕುಟುಂಬ ಸದಸ್ಯರನ್ನು ಪ್ರೀತಿಸುತ್ತಾರೆ. ಹೆಂಡತಿಯರು ತಮ್ಮ ಗಂಡಂದಿರನ್ನು, ಗಂಡಂದಿರು ತಮ್ಮ ಹೆಂಡತಿಯರನ್ನು, ಮತ್ತು ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ. (ಪ್ರಸಂಗಿ 9:9; ಎಫೆಸ 5:33; ತೀತ 2:4) ಹೆಚ್ಚಿನ ಕುಟುಂಬಗಳಲ್ಲಿ ಸ್ವಾಭಾವಿಕವಾದ ಪ್ರೀತಿಯ ಬಂಧಗಳು ಇದ್ದೇ ಇರುತ್ತವೆಂಬುದು ನಿಜ. ಆದರೆ ಮುರಿದುಬಿದ್ದಿರುವ ವಿವಾಹಗಳು, ಗಂಡ ಅಥವಾ ಹೆಂಡತಿಯರ ದುರುಪಚಾರ, ಮತ್ತು ಅಲಕ್ಷಿಸಲ್ಪಟ್ಟಿರುವ ಅಥವಾ ದುರುಪಚರಿಸಲ್ಪಟ್ಟಿರುವ ಮಕ್ಕಳ ಕುರಿತಾದ ವರದಿಗಳು, ಇಂದು ಕುಟುಂಬದ ಮೇಲೆ ತುಂಬ ಒತ್ತಡವಿದೆ ಎಂಬುದನ್ನು ತೋರಿಸುತ್ತವೆ. ಆದುದರಿಂದ ಕುಟುಂಬ ಸದಸ್ಯರ ಕಡೆಗಿನ ಸ್ವಾಭಾವಿಕವಾದ ಭಾವನೆಗಳು ಒಂದು ಕುಟುಂಬವನ್ನು ಐಕ್ಯವಾಗಿರಿಸಲು ಸಾಕಾಗುವುದಿಲ್ಲ. (2 ತಿಮೊಥೆಯ 3:​1-3) ತಮ್ಮ ಕುಟುಂಬ ಜೀವಿತವನ್ನು ಸಫಲಗೊಳಿಸಲಿಕ್ಕಾಗಿ, ಕ್ರೈಸ್ತರು ಯೆಹೋವ ಮತ್ತು ಯೇಸುವಿಗಿರುವಂಥ ರೀತಿಯ ಪ್ರೀತಿಯನ್ನು ತೋರಿಸಬೇಕು.​—ಎಫೆಸ 5:​21-27.

5. ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವರು ಯಾರ ಸಹಾಯವನ್ನು ಕೋರುತ್ತಾರೆ, ಮತ್ತು ಅನೇಕರಿಗೆ ಯಾವ ಫಲಿತಾಂಶಗಳು ಸಿಕ್ಕಿವೆ?

5 ಹೆತ್ತವರು ತಮ್ಮ ಮಕ್ಕಳನ್ನು, ಯೆಹೋವನು ತಮಗೆ ವಹಿಸಿಕೊಟ್ಟಿರುವ ಅಮೂಲ್ಯವಾದ ಆಸ್ತಿಯೋಪಾದಿ ದೃಷ್ಟಿಸುತ್ತಾರೆ. ಆದುದರಿಂದ, ಅವರನ್ನು ಬೆಳೆಸುವುದರಲ್ಲಿ ಅವರು ಆತನ ಸಹಾಯವನ್ನು ಕೋರುತ್ತಾರೆ. (ಕೀರ್ತನೆ 127:​3-5; ಜ್ಞಾನೋಕ್ತಿ 22:6) ಈ ರೀತಿಯಲ್ಲಿ ಅವರು ಕ್ರೈಸ್ತ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಾರೆ. ಇದು, ಯುವ ಜನರು ಸಾಮಾನ್ಯವಾಗಿ ಬಲಿಬೀಳುವಂಥ ಭ್ರಷ್ಟವಾದ ಪ್ರಭಾವಗಳಿಂದ ತಮ್ಮ ಮಕ್ಕಳನ್ನು ಕಾಪಾಡುವಂತೆ ಅವರಿಗೆ ಸಹಾಯಮಾಡುತ್ತದೆ. ಫಲಿತಾಂಶದಲ್ಲಿ, ಅನೇಕ ಕ್ರೈಸ್ತ ಹೆತ್ತವರು, ನೆದರ್‌ಲ್ಯಾಂಡ್ಸ್‌ನಲ್ಲಿರುವ ಒಬ್ಬ ತಾಯಿಗಾದಂತಹ ಆನಂದವನ್ನು ಅನುಭವಿಸಿದ್ದಾರೆ. ಕಳೆದ ವರ್ಷ ನೆದರ್‌ಲ್ಯಾಂಡ್ಸ್‌ನಲ್ಲಿ 575 ಮಂದಿ ದೀಕ್ಷಾಸ್ನಾನ ಪಡೆದರು. ಅವರಲ್ಲಿ ತನ್ನ ಮಗನು ಸಹ ದೀಕ್ಷಾಸ್ನಾನ ತೆಗೆದುಕೊಳ್ಳುವುದನ್ನು ನೋಡಿದ ನಂತರ ಆ ತಾಯಿ ಹೀಗೆ ಬರೆದಳು: “ಈ ಕ್ಷಣ, ನಾನು ಗತ 20 ವರ್ಷಗಳಲ್ಲಿ ಹೂಡಿರುವ ಬಂಡವಾಳಕ್ಕೆ ಪ್ರತಿಫಲ ಸಿಕ್ಕಿದೆ. ನಾನು ಹೂಡಿದಂತಹ ಸಮಯ, ಶಕ್ತಿ ಹಾಗೂ ನೋವು, ಪ್ರಯತ್ನ, ಮತ್ತು ದುಃಖ ಇವೆಲ್ಲವನ್ನು ಈಗ ಮರೆತುಬಿಟ್ಟಿದ್ದೇನೆ.” ತನ್ನ ಮಗನು ತನ್ನ ಸ್ವಂತ ಇಚ್ಛೆಯಿಂದ ಯೆಹೋವನ ಸೇವೆಮಾಡುವ ಆಯ್ಕೆಮಾಡಿದಾಗ ಅವಳ ಆನಂದಕ್ಕೆ ಪಾರವೇ ಇರಲಿಲ್ಲ. ಕಳೆದ ವರ್ಷ ನೆದರ್‌ಲ್ಯಾಂಡ್ಸ್‌ನಲ್ಲಿ ವರದಿಮಾಡಿದ 31,089 ಉಚ್ಚ ಸಂಖ್ಯೆಯ ಪ್ರಚಾರಕರಲ್ಲಿ ಅನೇಕರು, ಯೆಹೋವನನ್ನು ಪ್ರೀತಿಸಲು ಕಲಿತದ್ದು ತಮ್ಮ ಹೆತ್ತವರಿಂದಲೇ.

6. ಕ್ರೈಸ್ತ ಪ್ರೀತಿಯು ಹೇಗೆ ವಿವಾಹಬಂಧವನ್ನು ಬಲಪಡಿಸಬಲ್ಲದು?

6 ಪೌಲನು ಪ್ರೀತಿಯನ್ನು, “ಸಮಸ್ತವನ್ನು ಸಂಪೂರ್ಣಮಾಡುವ ಬಂಧ” ಎಂದು ಕರೆದನು. ವಿವಾಹದಲ್ಲಿ ಬಿರುಗಾಳಿಗಳಂಥ ಸನ್ನಿವೇಶಗಳು ಏಳುವಾಗಲೂ, ಪ್ರೀತಿಯು ವಿವಾಹಬಂಧವನ್ನು ಸುರಕ್ಷಿತವಾಗಿಡಬಲ್ಲದು. (ಕೊಲೊಸ್ಸೆ 3:​14, 18, 19; 1 ಪೇತ್ರ 3:​1-7) ಟಹೀಟಿಯಿಂದ ಸುಮಾರು 700 ಕಿಲೋಮೀಟರ್‌ ದೂರದಲ್ಲಿರುವ ಒಂದು ಚಿಕ್ಕ ದ್ವೀಪವಾದ ರೂರುಟುವಿನಲ್ಲಿ ಒಬ್ಬ ವ್ಯಕ್ತಿಯು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಮಾಡಲಾರಂಭಿಸಿದನು. ಅವನ ಹೆಂಡತಿಯು ಅವನನ್ನು ತುಂಬ ವಿರೋಧಿಸಿದಳು. ಕೊನೆಯಲ್ಲಿ, ಅವಳು ಅವನನ್ನು ಬಿಟ್ಟು, ಮಕ್ಕಳನ್ನು ತನ್ನೊಂದಿಗೆ ಕರಕೊಂಡುಹೋಗಿ ಟಹೀಟಿಯಲ್ಲಿ ವಾಸಿಸಲಾರಂಭಿಸಿದಳು. ಆದರೂ ಅವಳಿಗಾಗಿ ಅವನು ತನ್ನ ಪ್ರೀತಿಯನ್ನು ತೋರಿಸುತ್ತಾ ಇದ್ದನು. ಅವಳಿಗಾಗಿ ಕ್ರಮವಾಗಿ ಹಣವನ್ನು ಕಳುಹಿಸಿದನು ಮತ್ತು ಅವಳಿಗೆ ಅಥವಾ ಮಕ್ಕಳಿಗೆ ಏನಾದರೂ ಬೇಕಾಗಿದೆಯೊ ಎಂಬುದನ್ನು ಕೇಳಲು ಫೋನ್‌ ಕೂಡ ಮಾಡುತ್ತಿದ್ದನು. ಹೀಗೆ ಅವನು ತನ್ನ ಕ್ರೈಸ್ತ ಹಂಗುಗಳನ್ನು ಪೂರೈಸಲು ತನ್ನಿಂದಾಗುವುದೆಲ್ಲವನ್ನೂ ಮಾಡಿದನು. (1 ತಿಮೊಥೆಯ 5:8) ತನ್ನ ಕುಟುಂಬವು ಪುನಃ ಒಂದಾಗುವಂತೆ ಅವನು ಕ್ರಮವಾಗಿ ಪ್ರಾರ್ಥಿಸಿದನು ಮತ್ತು ಕೊನೆಯಲ್ಲಿ ಅವನ ಹೆಂಡತಿಯು ಹಿಂದಿರುಗಿ ಬಂದಳು. ಅವಳು ಬಂದಾಗ ಅವನು ಅವಳೊಂದಿಗೆ “ಪ್ರೀತಿ, ಸ್ಥಿರಚಿತ್ತ, ಸಾತ್ವಿಕತ್ವ”ದಿಂದ ವ್ಯವಹರಿಸಿದನು. (1 ತಿಮೊಥೆಯ 6:11) 1998ರಲ್ಲಿ ಅವನು ದೀಕ್ಷಾಸ್ನಾನಪಡೆದುಕೊಂಡನು, ಮತ್ತು ಅವನ ಹೆಂಡತಿ ಸಹ ಬೈಬಲ್‌ ಅಭ್ಯಾಸಮಾಡಲು ಒಪ್ಪಿಕೊಂಡಾಗ ಆನಂದಪರವಶನಾದನು. ಕಳೆದ ವರ್ಷ ಟಹೀಟಿ ಬ್ರಾಂಚ್‌ನ ಮೇಲ್ವಿಚಾರಣೆಯ ಕೆಳಗಿರುವ ಕ್ಷೇತ್ರದಲ್ಲಿ ನಡೆಸಲ್ಪಟ್ಟಿರುವ 1,351 ಅಭ್ಯಾಸಗಳಲ್ಲಿ ಅದು ಒಂದಾಗಿತ್ತು.

7. ಜರ್ಮನಿಯ ಒಬ್ಬ ವ್ಯಕ್ತಿಗನುಸಾರ, ಅವನ ವಿವಾಹವನ್ನು ಯಾವುದು ಬಲಗೊಳಿಸಿತು?

7 ಜರ್ಮನಿಯಲ್ಲಿ ಒಬ್ಬ ಮಹಿಳೆಯು ಬೈಬಲ್‌ ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿದಾಗ, ಅವಳ ಗಂಡನು ವಿರೋಧಿಸಿದನು. ಯೆಹೋವನ ಸಾಕ್ಷಿಗಳು ಅವಳನ್ನು ಮೋಸಮಾಡಲು ಪ್ರಯತ್ನಿಸುತ್ತಿದ್ದಾರೆಂದು ಅವನಿಗೆ ಮನದಟ್ಟಾಗಿತ್ತು. ಆದರೆ ಅನಂತರ, ತನ್ನ ಹೆಂಡತಿಯನ್ನು ಪ್ರಥಮ ಸಲ ಭೇಟಿಮಾಡಿದ ಸಾಕ್ಷಿಗೆ ಅವನು ಹೀಗೆ ಬರೆದನು: “ನನ್ನ ಹೆಂಡತಿಯನ್ನು ಯೆಹೋವನ ಸಾಕ್ಷಿಗಳಿಗೆ ಪರಿಚಯಿಸಿದ್ದಕ್ಕಾಗಿ ನಿಮಗೆ ಉಪಕಾರಗಳು. ಶುರುಶುರುವಿನಲ್ಲಿ ನಾನು ಚಿಂತಿತನಾಗಿದ್ದೆ, ಯಾಕೆಂದರೆ ಅವರ ಬಗ್ಗೆ ನಾನು ಎಷ್ಟೋ ಕೆಟ್ಟ ವಿಷಯಗಳನ್ನು ಕೇಳಿದ್ದೆ. ಆದರೆ ನಾನು ನನ್ನ ಹೆಂಡತಿಯೊಂದಿಗೆ ಕೂಟಗಳಿಗೆ ಹಾಜರಾಗಿದ್ದೇನೆ ಮತ್ತು ನನ್ನ ಅಭಿಪ್ರಾಯ ಎಷ್ಟು ತಪ್ಪಾಗಿತ್ತೆಂದು ನನಗೆ ಈಗ ತಿಳಿದುಬಂದಿದೆ. ಈಗ ನಾನು ಏನನ್ನು ಕೇಳುತ್ತಿದ್ದೇನೊ ಅದು ಸತ್ಯವೆಂದು ನನಗೆ ಗೊತ್ತಿದೆ ಮತ್ತು ಇದು ನಮ್ಮ ವಿವಾಹವನ್ನು ಹೆಚ್ಚು ಬಲಗೊಳಿಸಿದೆ.” ಜರ್ಮನಿಯಲ್ಲಿರುವ 1,62,932 ಮಂದಿ, ಮತ್ತು ಟಹೀಟಿ ಬ್ರಾಂಚ್‌ನ ಕೆಳಗಿರುವ ದ್ವೀಪಗಳಲ್ಲಿರುವ 1,773 ಮಂದಿ ಯೆಹೋವನ ಸಾಕ್ಷಿಗಳ ನಡುವೆ, ದೈವಿಕ ಪ್ರೀತಿಯಿಂದ ಐಕ್ಯಗೊಳಿಸಲ್ಪಟ್ಟಿರುವ ಅನೇಕ ಕುಟುಂಬಗಳಿವೆ.

ನಮ್ಮ ಕ್ರೈಸ್ತ ಸಹೋದರರಿಗಾಗಿರುವ ಪ್ರೀತಿ

8, 9. (ಎ) ನಮ್ಮ ಸಹೋದರರನ್ನು ಪ್ರೀತಿಸುವಂತೆ ಯಾರು ನಮಗೆ ಕಲಿಸುತ್ತಾರೆ, ಮತ್ತು ನಾವೇನನ್ನು ಮಾಡುವಂತೆ ಪ್ರೀತಿಯು ಪ್ರಚೋದಿಸುತ್ತದೆ? (ಬಿ) ಸಹೋದರರು ಪರಸ್ಪರರಿಗೆ ಬೆಂಬಲವನ್ನು ಕೊಡುವಂತೆ ಪ್ರೀತಿಯು ಸಹಾಯಮಾಡುವ ಒಂದು ಉದಾಹರಣೆಯನ್ನು ಕೊಡಿರಿ.

8 ಪೌಲನು ಥೆಸಲೊನೀಕದ ಕ್ರೈಸ್ತರಿಗೆ ಹೇಳಿದ್ದು: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವು ದೇವರಿಂದ ಹೊಂದಿದವರಾಗಿ”ದ್ದೀರಿ. (1 ಥೆಸಲೊನೀಕ 4:9) ಹೌದು, “ಯೆಹೋವನಿಂದ ಶಿಕ್ಷಿತರಾಗಿರುವ”ವರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. (ಯೆಶಾಯ 54:13) ಅವರ ಪ್ರೀತಿಯು ಕಾರ್ಯದಲ್ಲಿ ತೋರಿಸಲ್ಪಡುತ್ತದೆ. “ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆಮಾಡಿರಿ” ಎಂದು ಪೌಲನು ಹೇಳಿದಾಗ ಇದನ್ನೇ ತೋರಿಸಿದನು. (ಗಲಾತ್ಯ 5:13; 1 ಯೋಹಾನ 3:18) ಉದಾಹರಣೆಗಾಗಿ ಅವರು ಅಸ್ವಸ್ಥ ಸಹೋದರರನ್ನು ಮತ್ತು ಸಹೋದರಿಯರನ್ನು ಭೇಟಿಮಾಡುವಾಗ, ಖಿನ್ನರಾಗಿರುವವರನ್ನು ಪ್ರೋತ್ಸಾಹಿಸುವಾಗ, ಮತ್ತು ಬಲಹೀನರನ್ನು ಬೆಂಬಲಿಸುವಾಗ ಈ ಪ್ರೀತಿಯನ್ನು ತೋರಿಸುತ್ತಾರೆ. (1 ಥೆಸಲೊನೀಕ 5:14) ನಮ್ಮ ನಿಜವಾದ ಕ್ರೈಸ್ತ ಪ್ರೀತಿಯು, ನಮ್ಮ ಆತ್ಮಿಕ ಪ್ರಮೋದವನದ ಬೆಳವಣಿಗೆಗೆ ಸಹಾಯಕಾರಿಯಾಗಿದೆ.

9 ಎಕ್ವಡಾರ್‌ನಲ್ಲಿರುವ 544 ಸಭೆಗಳಲ್ಲಿ ಒಂದಾಗಿರುವ ಆ್ಯಂಕಾನ್‌ ಸಭೆಯಲ್ಲಿರುವ ಸಹೋದರರು ತಮ್ಮ ಪ್ರೀತಿಯನ್ನು ಕಾರ್ಯರೂಪದಲ್ಲಿ ತೋರಿಸಿದರು. ಒಂದು ಆರ್ಥಿಕ ಬಿಕ್ಕಟ್ಟಿನಿಂದಾಗಿ, ಅಲ್ಲಿನ ಸಹೋದರರು ತಮ್ಮ ಕೆಲಸಗಳನ್ನು ಕಳೆದುಕೊಂಡರು ಅಥವಾ ಅವರ ಆದಾಯವು ನಿಂತುಹೋಯಿತು. ಆದುದರಿಂದ, ಅಲ್ಲಿನ ಪ್ರಚಾರಕರು ಹಣವನ್ನು ಸಂಪಾದಿಸಲು ನಿರ್ಧರಿಸಿದರು. ಹೇಗೆಂದರೆ, ಸ್ಥಳಿಕ ಬೆಸ್ತರು ಇಡೀ ರಾತ್ರಿ ಮೀನು ಹಿಡಿದು ಮನೆಗೆ ಹಿಂದಿರುಗುವಾಗ ಅವರಿಗೆ ಊಟವನ್ನು ಮಾರುವ ಮೂಲಕವೇ. ಇದರಲ್ಲಿ ಎಲ್ಲರೂ, ಮಕ್ಕಳು ಸಹ ಸಹಕರಿಸಿದರು. ಅವರು ರಾತ್ರಿ 1:00 ಘಂಟೆಗೆ ಆರಂಭಿಸಿ, ಬೆಸ್ತರು ಮುಂಜಾನೆ 4:00 ಘಂಟೆಗೆ ಹಿಂದಿರುಗುವಷ್ಟರೊಳಗೆ ಊಟವನ್ನು ಸಿದ್ಧಗೊಳಿಸಬೇಕಾಗಿತ್ತು. ಹೀಗೆ ಮಾಡಿ ಕೂಡಿಸಲಾದ ಹಣವನ್ನು, ಸಹೋದರರು ತಮ್ಮೊಳಗೆಯೇ ಅಗತ್ಯಕ್ಕನುಸಾರ ಹಂಚಿಕೊಂಡರು. ಇಂತಹ ಪರಸ್ಪರ ಸಹಾಯವು ನಿಜವಾದ ಕ್ರೈಸ್ತ ಪ್ರೀತಿಯನ್ನು ಪ್ರದರ್ಶಿಸಿತು.

10, 11. ನಮಗೆ ವೈಯಕ್ತಿಕವಾಗಿ ಪರಿಚಯವಿಲ್ಲದಿರುವ ಸಹೋದರರ ಕಡೆಗೂ ನಾವು ಹೇಗೆ ಪ್ರೀತಿಯನ್ನು ತೋರಿಸಬಲ್ಲೆವು?

10 ಆದರೆ ನಮ್ಮ ಪ್ರೀತಿಯು ನಾವು ವೈಯಕ್ತಿಕವಾಗಿ ತಿಳಿದಿರುವಂಥ ಕ್ರೈಸ್ತರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅಪೊಸ್ತಲ ಪೇತ್ರನು ಹೇಳಿದ್ದು: “ಸಹೋದರರ ಸಂಪೂರ್ಣ ಸಂಘಕ್ಕಾಗಿ ಪ್ರೀತಿ ಇರಲಿ.” (1 ಪೇತ್ರ 2:​17, NW) ನಾವು ನಮ್ಮ ಎಲ್ಲ ಸಹೋದರ ಸಹೋದರಿಯನ್ನು ಪ್ರೀತಿಸುತ್ತೇವೆ, ಯಾಕೆಂದರೆ ಅವರು ನಮ್ಮೊಂದಿಗೆ ಯೆಹೋವ ದೇವರನ್ನು ಆರಾಧಿಸುವವರಾಗಿದ್ದಾರೆ. ಸಂಕಷ್ಟಗಳ ಸಮಯಗಳಲ್ಲಿ ನಮಗೆ ಈ ಪ್ರೀತಿಯನ್ನು ಪ್ರದರ್ಶಿಸಲು ಒಂದು ಅವಕಾಶ ಸಿಗಬಹುದು. ಉದಾಹರಣೆಗಾಗಿ, 2000 ಸೇವಾ ವರ್ಷದಲ್ಲಿ, ನೆರೆಹಾವಳಿಗಳಿಂದಾಗಿ ಮೊಸಾಂಬೀಕ್‌ ಧ್ವಂಸವಾಯಿತು, ಮತ್ತು ಆ್ಯಂಗೋಲಾದಲ್ಲಿ ನಡೆಯುತ್ತಾ ಇರುವ ಒಂದು ಆಂತರಿಕ ಯುದ್ಧದಿಂದಾಗಿ ಅನೇಕರು ಗತಿಯಿಲ್ಲದವರಾಗಿಬಿಟ್ಟಿದ್ದಾರೆ. ಇದರಿಂದಾಗಿ, ಮೊಸಾಂಬೀಕ್‌ನಲ್ಲಿರುವ 31,725 ಮತ್ತು ಆ್ಯಂಗೋಲದಲ್ಲಿರುವ 41,222 ಮಂದಿ ಸಹೋದರರಲ್ಲಿ ಅನೇಕರು ಬಾಧಿಸಲ್ಪಟ್ಟಿದ್ದಾರೆ. ಆದುದರಿಂದ, ನೆರೆರಾಷ್ಟ್ರವಾದ ದಕ್ಷಿಣ ಆಫ್ರಿಕದಲ್ಲಿರುವ ಸಾಕ್ಷಿಗಳು, ಈ ದೇಶಗಳಲ್ಲಿರುವ ತಮ್ಮ ಸಹೋದರರ ಕಷ್ಟವನ್ನು ಕಡಿಮೆಗೊಳಿಸಲಿಕ್ಕಾಗಿ ಬೇಕಾದಂತಹ ಸಾಮಗ್ರಿಗಳನ್ನು ದೊಡ್ಡ ಪ್ರಮಾಣದಲ್ಲಿ ಕಳುಹಿಸಿದ್ದಾರೆ. ಅವರ ಬಳಿ ಇದ್ದ “ಸಮೃದ್ಧಿ”ಯನ್ನು, ಕಷ್ಟದಲ್ಲಿದ್ದ ತಮ್ಮ ಸಹೋದರರಿಗೆ ಕೊಡಲು ಅವರಿಗಿದ್ದ ಸಿದ್ಧಮನಸ್ಸು ಅವರ ಪ್ರೀತಿಯನ್ನು ಪ್ರದರ್ಶಿಸಿತು.​—2 ಕೊರಿಂಥ 8:​8, 13-15, 24.

11 ಧನಿಕವಲ್ಲದ ದೇಶಗಳಲ್ಲಿ ರಾಜ್ಯ ಸಭಾಗೃಹಗಳು ಮತ್ತು ಸಮ್ಮೇಳನ ಹಾಲ್‌ಗಳನ್ನು ಕಟ್ಟುವುದಕ್ಕಾಗಿ ಅನೇಕ ದೇಶಗಳಲ್ಲಿರುವ ಸಹೋದರರು ಕಾಣಿಕೆಯನ್ನು ಕೊಡುವಾಗಲೂ ಪ್ರೀತಿಯು ತೋರಿಬರುತ್ತದೆ. ಒಂದು ಉದಾಹರಣೆ ಸಾಲೊಮೊನ್‌ ಐಲೆಂಡ್ಸ್‌ನದ್ದಾಗಿದೆ. ಅಲ್ಲಿ ಬಹಳಷ್ಟು ಅಶಾಂತಿ ಇರುವುದಾದರೂ, ಕಳೆದ ವರ್ಷ ಅಲ್ಲಿ ಪ್ರಚಾರಕರ ಸಂಖ್ಯೆಯಲ್ಲಿ 6 ಪ್ರತಿಶತ ವೃದ್ಧಿಯಾಯಿತು. ಅವರ ಉಚ್ಚಾಂಕವು 1,697 ಆಗಿತ್ತು. ಅವರು ಒಂದು ಅಸೆಂಬ್ಲಿ ಹಾಲ್‌ ಅನ್ನು ಕಟ್ಟುವ ಯೋಜನೆಮಾಡಿದರು. ಆ ದ್ವೀಪದ ಜನರಲ್ಲೇ ಅನೇಕರು ದ್ವೀಪವನ್ನು ಬಿಟ್ಟು ಬೇರೆ ಕಡೆಗೆ ಹೋಗುತ್ತಿದ್ದರೂ, ಈ ಅಸೆಂಬ್ಲಿ ಹಾಲ್‌ ಅನ್ನು ಕಟ್ಟುವ ಕೆಲಸದಲ್ಲಿ ಸಹಾಯಮಾಡಲಿಕ್ಕಾಗಿ ಆಸ್ಟ್ರೇಲಿಯದಿಂದ ಸ್ವಯಂಸೇವಕರು ಅಲ್ಲಿಗೆ ಬಂದರು. ಕಟ್ಟಕಡೆಗೆ ಈ ಸ್ವಯಂಸೇವಕರು ಸಹ ಹೊರಡಬೇಕಾಯಿತು. ಆದರೆ ಅದಕ್ಕಿಂತ ಮುಂಚೆ ಅವರು ಸ್ಥಳಿಕ ಸಹೋದರರಿಗೆ ಹಾಲ್‌ನ ತಳಪಾಯವನ್ನು ಹೇಗೆ ಪೂರ್ಣಗೊಳಿಸುವುದೆಂಬುದನ್ನು ತರಬೇತಿಗೊಳಿಸಿಯೇ ಹೋದರು. ಆ ಹಾಲ್‌ನ ಪ್ರಿಫ್ಯಾಬ್ರಿಕೇಟಡ್‌ ಸ್ಟೀಲ್‌ ರಚನೆಯನ್ನು ಆಸ್ಟ್ರೇಲಿಯದಿಂದ ರವಾನಿಸಲಾಯಿತು. ಮತ್ತು ಅನೇಕ ಕಟ್ಟಡಗಳು ಅರ್ಧದಲ್ಲಿ ನಿಲ್ಲಿಸಲ್ಪಟ್ಟಿದ್ದರೂ, ಈ ಒಳ್ಳೆಯ ಕಟ್ಟಡವನ್ನು ಕಟ್ಟಿ ಪೂರ್ಣಗೊಳಿಸಲಾಯಿತು. ಆದುದರಿಂದ ಇದು ಯೆಹೋವನ ಹೆಸರಿಗೂ, ಸಹೋದರರ ನಡುವಿನ ಪ್ರೀತಿಗೂ ಒಂದು ಉತ್ತಮ ಸಾಕ್ಷಿಯಾಗಿರುವುದು.

ದೇವರಂತೆ ನಾವು ಕೂಡ ಲೋಕವನ್ನು ಪ್ರೀತಿಸುತ್ತೇವೆ

12. ನಮ್ಮ ನಂಬಿಕೆಗೆ ಸೇರಿರದವರ ಕಡೆಗಿನ ನಮ್ಮ ಮನೋಭಾವದಲ್ಲಿ ನಾವು ಹೇಗೆ ಯೆಹೋವನನ್ನು ಅನುಕರಿಸುತ್ತೇವೆ?

12 ನಾವು ಕೇವಲ ನಮ್ಮ ಕುಟುಂಬ ಮತ್ತು ಸಹೋದರರನ್ನು ಮಾತ್ರ ಪ್ರೀತಿಸುತ್ತೇವೊ? ಇಲ್ಲ. ಯಾಕೆಂದರೆ ನಾವು ‘ದೇವರನ್ನು ಅನುಸರಿಸುವವರಾಗಿದ್ದೇವೆ.’ ಯೇಸು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಓರೆಅಕ್ಷರಗಳು ನಮ್ಮವು.) (ಎಫೆಸ 5:1; ಯೋಹಾನ 3:16) ಯೆಹೋವ ದೇವರಂತೆ ನಾವು ಎಲ್ಲರೊಂದಿಗೂ ಪ್ರೀತಿಯಿಂದ ವರ್ತಿಸುತ್ತೇವೆ. ನಮ್ಮ ನಂಬಿಕೆಯಲ್ಲಿಲ್ಲದವರೊಂದಿಗೂ ನಾವು ಹೀಗೆ ವರ್ತಿಸುತ್ತೇವೆ. (ಲೂಕ 6:​35, 36; ಗಲಾತ್ಯ 6:10) ಈ ಕಾರಣದಿಂದಾಗಿಯೇ ನಾವು ರಾಜ್ಯದ ಸುವಾರ್ತೆಯನ್ನು ಸಾರುತ್ತೇವೆ ಮತ್ತು ದೇವರು ಅವರಿಗಾಗಿ ಮಾಡಿರುವ ಪ್ರೀತಿಯ ಮಹಾ ಕೆಲಸವನ್ನು ತಿಳಿಸುತ್ತೇವೆ. ಇದು, ಕಿವಿಗೊಡುವ ಯಾವುದೇ ವ್ಯಕ್ತಿಗೂ ರಕ್ಷಣೆಯನ್ನು ತರಬಲ್ಲದು.​—ಮಾರ್ಕ 13:10; 1 ತಿಮೊಥೆಯ 4:16.

13, 14. ವೈಯಕ್ತಿಕವಾಗಿ ತುಂಬ ಕಷ್ಟಪಡಬೇಕಾದರೂ, ಸಾಕ್ಷಿಗಳಲ್ಲದ ಜನರಿಗೆ ಪ್ರೀತಿಯನ್ನು ತೋರಿಸಿದ ಸಹೋದರರ ಕೆಲವು ಅನುಭವಗಳು ಯಾವವು?

13 ನೇಪಾಳದಲ್ಲಿರುವ ನಾಲ್ಕು ಮಂದಿ ವಿಶೇಷ ಪಯನೀಯರ್‌ ಶುಶ್ರೂಷಕರನ್ನು ಪರಿಗಣಿಸಿರಿ. ಆ ದೇಶದ ನೈರುತ್ಯ ದಿಕ್ಕಿನಲ್ಲಿರುವ ಒಂದು ನಗರಕ್ಕೆ ಅವರನ್ನು ನೇಮಿಸಲಾಯಿತು. ಮತ್ತು ಅವರು ಕಳೆದ ಐದು ವರ್ಷಗಳಿಂದ ಆ ನಗರದಲ್ಲಿ ಮತ್ತು ಆಸುಪಾಸಿನ ಹಳ್ಳಿಗಳಲ್ಲಿ ತಾಳ್ಮೆಯಿಂದ ಸಾಕ್ಷಿಕೊಡುತ್ತಾ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ಅವರ ಟೆರಿಟೊರಿಯನ್ನು ಆವರಿಸಲಿಕ್ಕಾಗಿ, ಅವರು ಅನೇಕ ತಾಸುಗಳ ವರೆಗೆ ಸೈಕಲ್‌ಗಳಲ್ಲಿ ಸವಾರಿಮಾಡುತ್ತಾರೆ ಮತ್ತು ಅದು ಕೂಡ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ. ಅವರು ಪ್ರೀತಿಯಿಂದ ಮತ್ತು ‘ಒಳ್ಳೇದನ್ನು ಬೇಸರಗೊಳ್ಳದೆ ಮಾಡಿ’ದ್ದರಿಂದ, ಒಳ್ಳೆಯ ಫಲಿತಾಂಶಗಳು ಸಿಕ್ಕಿದವು. ಅಲ್ಲಿನ ಹಳ್ಳಿಗಳಲ್ಲೊಂದರಲ್ಲಿ ಒಂದು ಪುಸ್ತಕ ಅಭ್ಯಾಸ ಗುಂಪನ್ನು ಆರಂಭಿಸಲಾಯಿತು. (ರೋಮಾಪುರ 2:7) ಮಾರ್ಚ್‌ 2000ದಲ್ಲಿ, ಭೇಟಿ ಮಾಡುತ್ತಿದ್ದ ಸರ್ಕಿಟ್‌ ಮೇಲ್ವಿಚಾರಕರ ಬಹಿರಂಗ ಭಾಷಣಕ್ಕೆ ಕಿವಿಗೊಡಲು 32 ಮಂದಿ ಹಾಜರಿದ್ದರು. ನೇಪಾಳದಲ್ಲಿ ಕಳೆದ ವರ್ಷ 430 ಪ್ರಚಾರಕರ ಉಚ್ಚಾಂಕವಿತ್ತು. ಮತ್ತು 9 ಪ್ರತಿಶತ ವೃದ್ಧಿಯಾಗಿತ್ತು. ಆ ದೇಶದಲ್ಲಿರುವ ಸಹೋದರರ ಪ್ರೀತಿ ಹಾಗೂ ಹುರುಪನ್ನು ಯೆಹೋವನು ಆಶೀರ್ವದಿಸುತ್ತಿದ್ದಾನೆಂಬುದು ಸ್ಪಷ್ಟವಾಗಿ ತೋರಿಬರುತ್ತದೆ.

14 ಕೊಲಂಬಿಯದಲ್ಲಿ, ತಾತ್ಕಾಲಿಕ ವಿಶೇಷ ಪಯನೀಯರರು ವೈಯೂ ಇಂಡಿಯನ್‌ ಜನರಿಗೆ ಸುವಾರ್ತೆಯನ್ನು ಸಾರಲು ಹೋದರು. ಇದಕ್ಕಾಗಿ ಅವರು ಒಂದು ಹೊಸ ಭಾಷೆಯನ್ನೂ ಕಲಿಯಬೇಕಾಗಿತ್ತು. ಆದರೆ ಅವರು ತೋರಿಸಿದಂತಹ ಪ್ರೀತಿಪರ ಆಸಕ್ತಿಗೆ ಪ್ರತಿಫಲ ಸಿಕ್ಕಿತ್ತು. ಏಕೆಂದರೆ ಭಾರಿ ಮಳೆಯ ಎದುರಿನಲ್ಲೂ, 27 ಮಂದಿ ಬಹಿರಂಗ ಭಾಷಣಕ್ಕೆ ಹಾಜರಾದರು. ಈ ಪಯನೀಯರರು ತೋರಿಸದಂಥದ್ದೇ ರೀತಿಯ ಪ್ರೀತಿಪರ ಹುರುಪಿನಿಂದಾಗಿ, ಕೊಲಂಬಿಯದಲ್ಲಿ 5 ಪ್ರತಿಶತ ವೃದ್ಧಿಯಾಗಿ, ಅವರು 1,07,613 ಪ್ರಚಾರಕರ ಉಚ್ಚಾಂಕವನ್ನು ತಲಪಿದರು. ಡೆನ್ಮಾರ್ಕ್‌ನಲ್ಲೂ ಒಬ್ಬ ವೃದ್ಧ ಸಹೋದರಿಯು ಬೇರೆಯವರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಬಯಸಿದರು. ಆದರೆ ಅವರು ಅಶಕ್ತರಾಗಿದ್ದದ್ದರಿಂದ ಮನೆಯಿಂದ ಮನೆಗೆ ಹೋಗಲು ಸಾಧ್ಯವಿರಲಿಲ್ಲ. ಅವರು ಎದೆಗುಂದದೆ ಪತ್ರಗಳನ್ನು ಬರೆಯುವ ಮೂಲಕ ಆಸಕ್ತ ಜನರನ್ನು ಸಂಪರ್ಕಿಸಿದರು. ಸದ್ಯದಲ್ಲಿ ಅವರು 42 ಜನರೊಂದಿಗೆ ಪತ್ರವ್ಯವಹಾರವನ್ನು ಮತ್ತು 11 ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ಡೆನ್ಮಾರ್ಕ್‌ನಲ್ಲಿ ವರದಿಮಾಡಿದ 14,885 ಮಂದಿ ಪ್ರಚಾರಕರಲ್ಲಿ ಅವರು ಒಬ್ಬರಾಗಿದ್ದರು.

ನಿಮ್ಮ ಶತ್ರುಗಳನ್ನು ಪ್ರೀತಿಸಿರಿ

15, 16. (ಎ) ನಮ್ಮ ಪ್ರೀತಿಯು ಎಷ್ಟು ವಿಶಾಲವಾಗಿರಬೇಕೆಂದು ಯೇಸು ಹೇಳಿದನು? (ಬಿ) ಯೆಹೋವನ ಸಾಕ್ಷಿಗಳ ವಿರುದ್ಧ ತಪ್ಪಾರೋಪಗಳನ್ನು ಮುದ್ರಿಸಿದ ವ್ಯಕ್ತಿಯೊಂದಿಗೆ ಜವಾಬ್ದಾರಿಯುತ ಸಹೋದರರು ಹೇಗೆ ಪ್ರೀತಿಪರವಾಗಿ ನಡೆದುಕೊಂಡರು?

15 ಒಬ್ಬ ಸಮಾರ್ಯದವನನ್ನು ನೆರೆಯವನಾಗಿ ದೃಷ್ಟಿಸಬಹುದೆಂದು ಯೇಸು ಆ ಧರ್ಮೋಪದೇಶಕನಿಗೆ ಹೇಳಿದನು. ಪರ್ವತ ಪ್ರಸಂಗದಲ್ಲಿ, ಯೇಸು ಮುಂದುವರಿಸುತ್ತಾ ಹೇಳಿದ್ದು: “ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕೆಂದು ಹೇಳಿದೆ ಎಂಬದಾಗಿ ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ​—ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ.” (ಮತ್ತಾಯ 5:43-45) ಯಾರಾದರೂ ನಮ್ಮನ್ನು ವಿರೋಧಿಸುವುದಾದರೂ, ನಾವು ‘ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸಲು’ ಪ್ರಯತ್ನಿಸುತ್ತಾ ಇರುತ್ತೇವೆ. (ರೋಮಾಪುರ 12:19-21) ಸಾಧ್ಯವಿರುವಲ್ಲಿ, ನಮ್ಮ ಬಳಿ ಇರುವ ಅತ್ಯಮೂಲ್ಯ ಸ್ವತ್ತಾಗಿರುವ ಸತ್ಯವನ್ನು ನಾವು ಅವರೊಂದಿಗೆ ಹಂಚಿಕೊಳ್ಳುವೆವು.

16 ಯೆಹೋವನ ಸಾಕ್ಷಿಗಳು ಒಂದು ಅಪಾಯಕಾರಿ ಪಂಥ ಎಂಬ ವಿಷಯವನ್ನು ಯೂಕ್ರೇನಿನ ಕ್ರೇಮೆನ್‌ಚುಕ್‌ ಹೆರಾಲ್ಡ್‌ ಎಂಬ ವಾರ್ತಾಪತ್ರಿಕೆಯು ಒಂದು ಲೇಖನದಲ್ಲಿ ಮುದ್ರಿಸಿತು. ಇದು ಒಂದು ಗಂಭೀರವಾದ ವಿಷಯವಾಗಿತ್ತು. ಏಕೆಂದರೆ, ಸಾಕ್ಷಿಗಳ ಕೆಲಸವನ್ನು ನಿರ್ಬಂಧಿಸಲಿಕ್ಕಾಗಿ ಅಥವಾ ನಿಷೇಧಿಸಲಿಕ್ಕಾಗಿ ಜನರ ಮನವೊಲಿಸುವಂತೆ ಕೆಲವರು ಯೆಹೋವನ ಸಾಕ್ಷಿಗಳ ಬಗ್ಗೆ ಈ ರೀತಿಯಲ್ಲಿ ಮಾತಾಡುತ್ತಾರೆ. ಆದುದರಿಂದ ಆ ವಾರ್ತಾಪತ್ರಿಕೆಯ ಸಂಪಾದಕನನ್ನು ಸಂಪರ್ಕಿಸಲಾಯಿತು ಮತ್ತು ಆ ಲೇಖನವನ್ನು ತಿದ್ದುಪಡಿಸುವ ಒಂದು ಅಧಿಕೃತ ಪತ್ರಿಕಾ ಪ್ರಕಟನೆಯನ್ನು ಹೊರಡಿಸುವಂತೆ ಕೇಳಿಕೊಳ್ಳಲಾಯಿತು. ಅದಕ್ಕೆ ಅವನು ಒಪ್ಪಿಕೊಂಡನು. ಆದರೆ ಆ ಮೊದಲನೆಯ ಲೇಖನವು ವಾಸ್ತವಾಂಶದ ಮೇಲೆ ಆಧಾರಿತವಾಗಿತ್ತೆಂಬ ಹೇಳಿಕೆಯನ್ನೂ ಆ ಪ್ರಕಟನೆಯೊಂದಿಗೆ ಮುದ್ರಿಸಿದನು. ಆದುದರಿಂದ ಪುನಃ ಒಮ್ಮೆ ಜವಾಬ್ದಾರಿಯುತ ಸಹೋದರರು ಹೆಚ್ಚಿನ ಮಾಹಿತಿಯೊಂದಿಗೆ ಅವನನ್ನು ಸಂಪರ್ಕಿಸಿದರು. ಆ ಆರಂಭದ ಲೇಖನವು ತಪ್ಪಾಗಿತ್ತೆಂದು ಕೊನೆಗೆ ಆ ಸಂಪಾದಕನಿಗೆ ಮನದಟ್ಟಾಯಿತು ಮತ್ತು ಅದು ತಪ್ಪಾಗಿದೆಯೆಂಬ ಹೇಳಿಕೆಯನ್ನು ಪ್ರಕಾಶಿಸಿದನು. ಈ ಸನ್ನಿವೇಶವನ್ನು ನಿಭಾಯಿಸಲು ಅವನೊಂದಿಗೆ ಮುಚ್ಚುಮರೆಯಿಲ್ಲದೆ ಮತ್ತು ದಯಾಪರವಾಗಿ ನಡೆದುಕೊಳ್ಳುವುದೊಂದೇ ಏಕೈಕ ಮಾರ್ಗವಾಗಿತ್ತು. ಮತ್ತು ಇದರಿಂದಾಗಿ ಒಳ್ಳೆಯ ಫಲಿತಾಂಶವು ಸಿಕ್ಕಿತು.

ನಾವು ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?

17. ಬೇರೆಯವರ ಕಡೆಗೆ ಪ್ರೀತಿಯಿಂದ ವರ್ತಿಸುವುದು ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ ಎಂಬುದನ್ನು ಯಾವುದು ಸೂಚಿಸುತ್ತದೆ?

17 ಒಂದು ಮಗು ಹುಟ್ಟುವಾಗ, ಹೆತ್ತವರು ಅದನ್ನು ನೋಡಿದಾಕ್ಷಣ ಪ್ರೀತಿಸಲಾರಂಭಿಸುತ್ತಾರೆ. ಆದರೆ ವಯಸ್ಕರನ್ನು ಅಷ್ಟು ಬೇಗನೆ ಪ್ರೀತಿಸಲಾರಂಭಿಸುವುದು ಸ್ವಲ್ಪ ಕಷ್ಟ. ಈ ಕಾರಣಕ್ಕಾಗಿಯೇ, ಬೈಬಲ್‌ ಪದೇಪದೇ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಹೇಳುತ್ತಿರಬೇಕು. ಏಕೆಂದರೆ ನಾವು ಅಂಥ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. (1 ಪೇತ್ರ 1:22; 4:8; 1 ಯೋಹಾನ 3:11) ನಮ್ಮ ಪ್ರೀತಿಯು ಪರೀಕ್ಷೆಗೊಳಗಾಗುವುದೆಂದು ಯೇಸುವಿಗೆ ತಿಳಿದಿತ್ತು. ಆದುದರಿಂದಲೇ ನಾವು ನಮ್ಮ ಸಹೋದರನನ್ನು “ಏಳೆಪ್ಪತ್ತು ಸಾರಿ” ಕ್ಷಮಿಸಬೇಕೆಂದು ಅವನು ಹೇಳಿದನು. (ಮತ್ತಾಯ 18:​21, 22) ನಾವು ‘ಒಬ್ಬರಿಗೊಬ್ಬರು ಸೈರಿಸಿಕೊಂಡು’ ಹೋಗುವಂತೆ ಪೌಲನು ಸಹ ನಮ್ಮನ್ನು ಉತ್ತೇಜಿಸಿದನು. (ಕೊಲೊಸ್ಸೆ 3:​12, 13) “ಪ್ರೀತಿಯನ್ನು ಅಭ್ಯಾಸಮಾಡಿಕೊಳ್ಳಿರಿ” ಎಂದು ನಮಗೆ ಹೇಳಲ್ಪಟ್ಟಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ! (1 ಕೊರಿಂಥ 14:1) ನಾವಿದನ್ನು ಹೇಗೆ ಮಾಡಬಹುದು?

18. ಬೇರೆಯವರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನಮಗೆ ಯಾವುದು ಸಹಾಯಮಾಡುವುದು?

18 ಪ್ರಥಮವಾಗಿ, ಯೆಹೋವ ದೇವರಿಗಾಗಿ ನಮ್ಮಲ್ಲಿರುವ ಪ್ರೀತಿಯನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡಬಹುದು. ನಮ್ಮ ನೆರೆಯವನನ್ನು ಪ್ರೀತಿಸಲಿಕ್ಕಾಗಿ ಇದೊಂದು ಬಲವಾದ ಪ್ರಚೋದಕವಾಗಿದೆ. ಏಕೆ? ಏಕೆಂದರೆ ನಾವು ಪ್ರೀತಿಪರವಾದ ರೀತಿಯಲ್ಲಿ ವರ್ತಿಸುವಾಗ, ಇದು ನಮ್ಮ ಸ್ವರ್ಗೀಯ ತಂದೆಗೆ ಕೀರ್ತಿಯೊಂದಿಗೆ, ಮಹಿಮೆ ಮತ್ತು ಸ್ತುತಿಯನ್ನೂ ತರುತ್ತದೆ. (ಯೋಹಾನ 15:​8-10; ಫಿಲಿಪ್ಪಿ 1:​9-11) ಎರಡನೆಯದಾಗಿ, ಯೆಹೋವನು ವಿಷಯಗಳನ್ನು ಹೇಗೆ ನೋಡುತ್ತಾನೊ ಆ ದೃಷ್ಟಿಕೋನದಿಂದಲೇ ನಾವು ಸಹ ನೋಡಲು ಪ್ರಯತ್ನಿಸಬಹುದು. ನಾವು ಪಾಪಮಾಡುವಾಗಲೆಲ್ಲ, ಯೆಹೋವನ ವಿರುದ್ಧ ಪಾಪಮಾಡುತ್ತೇವೆ; ಆದರೂ ಆತನು ನಮ್ಮನ್ನು ಪುನಃ ಪುನಃ ಕ್ಷಮಿಸುತ್ತಾನೆ ಮತ್ತು ಪ್ರೀತಿಸುತ್ತಾ ಇರುತ್ತಾನೆ. (ಕೀರ್ತನೆ 86:5; 103:​2, 3; 1 ಯೋಹಾನ 1:​9; 4:18) ನಾವು ಯೆಹೋವನ ದೃಷ್ಟಿಕೋನವನ್ನು ಇಟ್ಟುಕೊಳ್ಳುವಲ್ಲಿ, ನಾವು ಬೇರೆಯವರನ್ನು ಪ್ರೀತಿಸುವ ಒಲವುಳ್ಳವರಾಗಿರುವೆವು ಮತ್ತು ನಮ್ಮ ವಿರುದ್ಧ ಅವರು ಮಾಡಿರುವ ತಪ್ಪುಗಳನ್ನು ಕ್ಷಮಿಸುವೆವು. (ಮತ್ತಾಯ 6:12) ಮೂರನೆಯದಾಗಿ, ಬೇರೆಯವರು ನಮ್ಮೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸಬೇಕೆಂದು ನಾವು ಬಯಸುತ್ತೇವೊ ನಾವೂ ಅವರೊಂದಿಗೆ ಅದೇ ರೀತಿಯಲ್ಲಿ ವ್ಯವಹರಿಸಬೇಕು. (ಮತ್ತಾಯ 7:12) ನಾವು ಅಪರಿಪೂರ್ಣರಾಗಿರುವುದರಿಂದ, ನಮ್ಮನ್ನು ಅನೇಕ ಸಲ ಕ್ಷಮಿಸುವ ಅಗತ್ಯವಿರುತ್ತದೆ. ಉದಾಹರಣೆಗಾಗಿ, ನಾವು ಬೇರೆಯವರ ಮನನೋಯಿಸುವಂಥ ಮಾತುಗಳನ್ನಾಡುವಾಗ, ಎಲ್ಲರೂ ಆಗಾಗ್ಗೆ ತಮ್ಮ ನಾಲಿಗೆಯಿಂದ ತಪ್ಪುಮಾಡುತ್ತಾರೆಂಬುದನ್ನು ಅವರು ನೆನಪಿನಲ್ಲಿಡುವಂತೆ ನಾವು ನಿರೀಕ್ಷಿಸುತ್ತೇವೆ. (ಯಾಕೋಬ 3:2) ಬೇರೆಯವರು ನಮ್ಮೊಂದಿಗೆ ಪ್ರೀತಿಪರವಾಗಿ ವ್ಯವಹರಿಸಬೇಕೆಂದು ನಾವು ಬಯಸುತ್ತೇವೆ. ಆದುದರಿಂದ ನಾವು ಸಹ ಅವರೊಂದಿಗೆ ಪ್ರೀತಿಪರವಾಗಿ ವ್ಯವಹರಿಸಬೇಕಲ್ಲವೊ?

19. ಪ್ರೀತಿಯನ್ನು ಬೆಳೆಸಿಕೊಳ್ಳುವುದರಲ್ಲಿ ನಾವು ಪವಿತ್ರಾತ್ಮದ ಸಹಾಯವನ್ನು ಹೇಗೆ ಕೇಳಿಕೊಳ್ಳಬಹುದು?

19 ನಾಲ್ಕನೆಯದಾಗಿ, ನಾವು ಪವಿತ್ರಾತ್ಮದ ಸಹಾಯವನ್ನು ಕೋರಬಹುದು. ಯಾಕೆಂದರೆ, ಪ್ರೀತಿಯು ಆತ್ಮದ ಫಲಗಳಲ್ಲೊಂದಾಗಿದೆ. (ಗಲಾತ್ಯ 5:​22, 23) ಗೆಳೆತನಗಳು, ಕುಟುಂಬದ ಸದಸ್ಯರಿಗಾಗಿ ಪ್ರೀತಿ ಮತ್ತು ಪ್ರಣಯಾತ್ಮಕ ಪ್ರೀತಿಯು ಸ್ವಾಭಾವಿಕವಾಗಿ ಹೊರ ಹೊಮ್ಮುವಂಥದ್ದಾಗಿದೆ. ಆದರೆ ಯೆಹೋವನಿಗಿರುವಂಥ ರೀತಿಯ ಪ್ರೀತಿ, ಅಂದರೆ ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿರುವ ಪ್ರೀತಿಯನ್ನು ಬೆಳೆಸಿಕೊಳ್ಳಲಿಕ್ಕಾಗಿ ನಮಗೆ ಯೆಹೋವನ ಆತ್ಮದ ಅಗತ್ಯವಿದೆ. ಪ್ರೇರಿತ ಬೈಬಲನ್ನು ಓದುವ ಮೂಲಕ ನಾವು ಪವಿತ್ರಾತ್ಮದ ಸಹಾಯವನ್ನು ಕೋರಬಹುದು. ಉದಾಹರಣೆಗಾಗಿ ನಾವು ಯೇಸುವಿನ ಜೀವಿತವನ್ನು ಅಭ್ಯಾಸಮಾಡುವಲ್ಲಿ, ಅವನು ಜನರೊಂದಿಗೆ ಹೇಗೆ ವ್ಯವಹರಿಸಿದನೆಂಬುದನ್ನು ನೋಡಿ, ನಾವು ಅವನನ್ನು ಅನುಕರಿಸಬಹುದು. (ಯೋಹಾನ 13:​34, 35; 15:12) ಅಲ್ಲದೆ, ವಿಶೇಷವಾಗಿ ನಾವು ಪ್ರೀತಿಪರವಾಗಿ ವರ್ತಿಸಲು ಕಷ್ಟಕರವಾಗಿರುವ ಸನ್ನಿವೇಶಗಳಲ್ಲಿ ನಾವು ಯೆಹೋವನಿಂದ ಪವಿತ್ರಾತ್ಮವನ್ನು ಕೇಳಬಹುದು. (ಲೂಕ 11:13) ಕೊನೆಯದಾಗಿ, ನಾವು ಕ್ರೈಸ್ತ ಸಭೆಯೊಂದಿಗೆ ನಿಕಟವಾಗಿ ಉಳಿಯುವ ಮೂಲಕ ಪ್ರೀತಿಯನ್ನು ಕಾಪಾಡಿಕೊಳ್ಳಸಾಧ್ಯವಿದೆ. ಪ್ರೀತಿಪರರಾದ ಸಹೋದರಸಹೋದರಿಯರೊಂದಿಗೆ ಇರುವುದು ನಾವು ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುವುದು.​—ಜ್ಞಾನೋಕ್ತಿ 13:20.

20, 21. 2000ನೆಯ ಸೇವಾ ವರ್ಷದಲ್ಲಿ ಯೆಹೋವನ ಸಾಕ್ಷಿಗಳು ಯಾವ ಗಮನಾರ್ಹವಾದ ರೀತಿಯಲ್ಲಿ ತಮ್ಮ ಪ್ರೀತಿಯನ್ನು ತೋರಿಸಿದರು?

20 ಕಳೆದ ವರ್ಷ, ಲೋಕದ ಸುತ್ತಲೂ ಸುವಾರ್ತೆಯನ್ನು ಸಾರುವವರ ಪ್ರಚಾರಕರ ಉಚ್ಚಾಂಕವು 60,35,564 ಆಗಿತ್ತು. ಸುವಾರ್ತೆಯನ್ನು ತಿಳಿಸಲಿಕ್ಕಾಗಿ ಜನರ ಬಳಿ ಹೋಗುವುದರಲ್ಲಿ ಯೆಹೋವನ ಸಾಕ್ಷಿಗಳು 117,12,70,425 ತಾಸುಗಳನ್ನು ಕಳೆದರು. ಬಿಸಿಲಾಗಿರಲಿ, ಮಳೆಯಾಗಿರಲಿ, ಚಳಿಯಾಗಿರಲಿ ಈ ಕೆಲಸವನ್ನು ಮಾಡುತ್ತಾ ಇರಲು ಪ್ರೀತಿಯು ಅವರನ್ನು ಶಕ್ತಗೊಳಿಸಿತು. ಸುವಾರ್ತೆಯ ಕುರಿತಾಗಿ ಸಹಪಾಠಿಗಳೊಂದಿಗೆ ಮತ್ತು ಜೊತೆಕಾರ್ಮಿಕರೊಂದಿಗೆ ಮಾತಾಡಲು ಹಾಗೂ ಬೀದಿಗಳಲ್ಲಿ ಮತ್ತು ಬೇರೆ ಸ್ಥಳಗಳಲ್ಲಿ ಅಪರಿಚಿತರೊಂದಿಗೆ ಮಾತಾಡಲಾರಂಭಿಸುವಂತೆ ಮಾಡಿದ್ದು ಪ್ರೀತಿಯೇ. ಸಾಕ್ಷಿಗಳು ಭೇಟಿಮಾಡಿದಂಥ ಅನೇಕರು ಉದಾಸೀನಭಾವದವರಾಗಿದ್ದರು ಮತ್ತು ಕೆಲವರು ವಿರೋಧಿಸಿದರು ಸಹ. ಆದರೆ ಕೆಲವರು ಆಸಕ್ತಿಯನ್ನು ತೋರಿಸಿದರು. ಆದುದರಿಂದ 43,34,54,049 ಪುನರ್ಭೇಟಿಗಳನ್ನು ಮಾಡಲಾಯಿತು ಮತ್ತು 47,66,631 ಬೈಬಲ್‌ ಅಭ್ಯಾಸಗಳನ್ನು ನಡೆಸಲಾಯಿತು. *

21 ಯೆಹೋವನ ಸಾಕ್ಷಿಗಳಿಗೆ ದೇವರ ಕಡೆಗೆ ಮತ್ತು ತಮ್ಮ ನೆರೆಯವನ ಕಡೆಗಿರುವ ಪ್ರೀತಿಯನ್ನು ಇದೆಲ್ಲವು ಎಷ್ಟು ಚೆನ್ನಾಗಿ ಪ್ರದರ್ಶಿಸಿತು! ಆ ಪ್ರೀತಿಯು ಎಂದೂ ಆರಿಹೋಗದು, ತಣ್ಣಗಾಗದು. 2001ನೆಯ ಸೇವಾ ವರ್ಷದಲ್ಲಿ ಎಲ್ಲ ಮನುಷ್ಯರಿಗೆ ಇನ್ನೂ ಹೆಚ್ಚಿನ ಸಾಕ್ಷಿಯು ಕೊಡಲ್ಪಡುವುದೆಂಬ ಭರವಸೆ ನಮಗಿದೆ. ಯೆಹೋವನ ನಿಷ್ಠಾವಂತ ಮತ್ತು ಹುರುಪಿನ ಆರಾಧಕರು, ‘ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿದಂತೆ’ ಆತನ ಆಶೀರ್ವಾದವು ಅವರೊಂದಿಗಿರಲಿ!​—1 ಕೊರಿಂಥ 16:14.

[ಪಾದಟಿಪ್ಪಣಿಗಳು]

^ ಪ್ಯಾರ. 20 2000 ಇಸವಿಯ ಸೇವಾ ವರ್ಷದ ವರದಿಯ ಸಂಪೂರ್ಣ ವಿವರಗಳಿಗಾಗಿ, 18-21ನೆಯ ಪುಟಗಳಲ್ಲಿರುವ ಚಾರ್ಟನ್ನು ನೋಡಿರಿ.

ನೀವು ವಿವರಿಸಬಲ್ಲಿರೊ?

• ನಮ್ಮ ನೆರೆಯವನನ್ನು ಪ್ರೀತಿಸುವಾಗ ನಾವು ಯಾರನ್ನು ಅನುಕರಿಸುತ್ತಿದ್ದೇವೆ?

• ನಮ್ಮ ಪ್ರೀತಿಯು ಎಷ್ಟು ವ್ಯಾಪಕವಾಗಿರಬೇಕು?

• ಕ್ರೈಸ್ತ ಪ್ರೀತಿಯನ್ನು ತೋರಿಸುವಂಥ ಕೆಲವೊಂದು ಅನುಭವಗಳು ಯಾವವು?

• ನಾವು ಕ್ರೈಸ್ತ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 18-21ರಲ್ಲಿರುವ ಚಾರ್ಟು]

ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿ ಗಳ 2000 ಇಸವಿಯ ಸೇವಾ ವರ್ಷದ ವರದಿ

[ಪುಟ 15ರಲ್ಲಿರುವ ಚಿತ್ರಗಳು]

ಕ್ರೈಸ್ತ ಪ್ರೀತಿಯು ಒಂದು ಕುಟುಂಬವನ್ನು ಐಕ್ಯವಾಗಿರಿಸಬಲ್ಲದು

[ಪುಟ 17ರಲ್ಲಿರುವ ಚಿತ್ರಗಳು]

ನಾವು ಇತರರೊಂದಿಗೆ ನಮ್ಮ ನಿರೀಕ್ಷೆಯನ್ನು ಹಂಚಿಕೊಳ್ಳುವಂತೆ ಮಾಡುವಂಥದ್ದು ಪ್ರೀತಿಯೇ