ಪ್ರೀತಿಯಿಂದ ಕಟ್ಟಲ್ಪಟ್ಟವರಾಗಿರಿ
ಪ್ರೀತಿಯಿಂದ ಕಟ್ಟಲ್ಪಟ್ಟವರಾಗಿರಿ
“ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.”—ಮತ್ತಾಯ 22:37.
1. (ಎ) ಕ್ರೈಸ್ತನೊಬ್ಬನು ತನ್ನಲ್ಲಿ ಬೆಳೆಸಿಕೊಳ್ಳಬೇಕಾದ ಕೆಲವೊಂದು ಗುಣಗಳು ಯಾವವು? (ಬಿ) ಅತಿ ಮುಖ್ಯವಾದ ಕ್ರೈಸ್ತ ಗುಣ ಯಾವುದು, ಮತ್ತು ಏಕೆ?
ಒಬ್ಬ ಪರಿಣಾಮಕಾರಿ ಶುಶ್ರೂಷಕನಾಗಿರಲು ಕ್ರೈಸ್ತನೊಬ್ಬನು ಅನೇಕ ಗುಣಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಜ್ಞಾನೋಕ್ತಿ ಪುಸ್ತಕವು, ಜ್ಞಾನ, ತಿಳುವಳಿಕೆ ಮತ್ತು ವಿವೇಕವನ್ನು ಹೆಚ್ಚಿಸಿಕೊಳ್ಳುವುದರ ಮೌಲ್ಯವನ್ನು ಎತ್ತಿತೋರಿಸುತ್ತದೆ. (ಜ್ಞಾನೋಕ್ತಿ 2:1-10) ದೃಢವಾದ ನಂಬಿಕೆ ಮತ್ತು ಬಲವಾದ ನಿರೀಕ್ಷೆಯು ಸಹ ಎಷ್ಟು ಅಗತ್ಯವಾಗಿವೆ ಎಂಬುದನ್ನು ಅಪೊಸ್ತಲ ಪೌಲನು ಚರ್ಚಿಸಿದನು. (ರೋಮಾಪುರ 1:16, 17; ಕೊಲೊಸ್ಸೆ 1:5; ಇಬ್ರಿಯ 10:39) ತಾಳ್ಮೆ ಮತ್ತು ದಮೆ ಸಹ ಅತ್ಯಗತ್ಯವಾದ ಗುಣಗಳಾಗಿವೆ. (ಅ. ಕೃತ್ಯಗಳು 24:25; ಇಬ್ರಿಯ 10:36) ಆದರೆ ಕ್ರೈಸ್ತನೊಬ್ಬನಲ್ಲಿ ಇವೆಲ್ಲವೂ ಇದ್ದು, ಕೇವಲ ಒಂದು ಗುಣದ ಕೊರತೆಯಿರುವಲ್ಲಿ, ಬೇರೆಲ್ಲ ಗುಣಗಳ ಮೌಲ್ಯವು ತಗ್ಗುವುದು ಅಥವಾ ಅವು ಗೌಣವಾಗುವವು. ಆ ಗುಣ ಯಾವುದು? ಅದು ಪ್ರೀತಿಯೇ.—1 ಕೊರಿಂಥ 13:1-3, 13.
2. ಪ್ರೀತಿಯು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಯೇಸು ಹೇಗೆ ತೋರಿಸಿದನು, ಮತ್ತು ಇದರಿಂದಾಗಿ ಯಾವ ಪ್ರಶ್ನೆಗಳು ಉದ್ಭವಿಸುತ್ತವೆ?
2 ಪ್ರೀತಿಯು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಯೇಸು ತೋರಿಸಿದನು. ಅವನಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಪ್ರೀತಿಯು ಒಬ್ಬ ನಿಜ ಕ್ರೈಸ್ತನ ಗುರುತಾಗಿರುವುದರಿಂದ, ನಾವು ಇಂಥ ಪ್ರಶ್ನೆಗಳನ್ನು ಕೇಳಬೇಕಾಗಿದೆ: ಪ್ರೀತಿ ಎಂದರೇನು? ಬೇರೆಲ್ಲದ್ದಕ್ಕಿಂತಲೂ ಹೆಚ್ಚಾಗಿ ಈ ಗುಣವೇ ತನ್ನ ಶಿಷ್ಯರ ಗುರುತಾಗಿರುವುದೆಂದು ಯೇಸು ಹೇಳಿರುವುದರಿಂದ, ಅದು ಅಷ್ಟು ಅತ್ಯಗತ್ಯವಾಗಿರುವುದೇಕೆ? ನಾವು ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು? ನಾವು ಯಾರನ್ನು ಪ್ರೀತಿಸಬೇಕು? ಈ ಎಲ್ಲ ಪ್ರಶ್ನೆಗಳನ್ನು ನಾವು ಚರ್ಚಿಸೋಣ.
ಪ್ರೀತಿ ಎಂದರೇನು?
3. ಪ್ರೀತಿಯನ್ನು ಹೇಗೆ ವರ್ಣಿಸಬಹುದು, ಮತ್ತು ಅದು ಹೃದಮನಸ್ಸುಗಳೆರಡನ್ನೂ ಹೇಗೆ ಒಳಗೂಡಿಸುತ್ತದೆ?
3 ಪ್ರೀತಿಯ ಕುರಿತಾದ ಒಂದು ವರ್ಣನೆಯು ಹೀಗಿದೆ: ‘ಅನುರಾಗದಿಂದ ಕೂಡಿರುವ ವೈಯಕ್ತಿಕ ಅಂಟಿಕೆಯ ಭಾವನೆ, ಇನ್ನೊಬ್ಬರಿಗಾಗಿ ಅನುರಾಗಭರಿತ ಒಲುಮೆ ಅಥವಾ ಅಕ್ಕರೆ.’ ಈ ಗುಣವು ಒಬ್ಬ ವ್ಯಕ್ತಿಯನ್ನು, ವೈಯಕ್ತಿಕವಾಗಿ ದೊಡ್ಡ ತ್ಯಾಗಮಾಡಬೇಕಾದರೂ ಸರಿ, ಇತರರ ಒಳಿತಿಗಾಗಿ ಕೆಲಸಮಾಡುವಂತೆ ಪ್ರಚೋದಿಸುತ್ತದೆ. ಬೈಬಲ್‌ನಲ್ಲಿ ವರ್ಣಿಸಲ್ಪಟ್ಟಿರುವ ಪ್ರೀತಿಯು, ಹೃದಮನಗಳೆರಡರಿಂದಲೂ ಹೊಮ್ಮುವಂಥದ್ದಾಗಿದೆ. ಆದರೆ ಇದರಲ್ಲಿ ಮನಸ್ಸು ಅಥವಾ ಬುದ್ಧಿಶಕ್ತಿಯು ಹೇಗೆ ಪಾತ್ರವಹಿಸುತ್ತದೆ? ಪ್ರೀತಿಯನ್ನು ತೋರಿಸುವವನು ತಿಳುವಳಿಕೆಯುಳ್ಳವನಾಗಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ. ಅಂದರೆ ತನ್ನಲ್ಲಿ ಮತ್ತು ತಾನು ಪ್ರೀತಿಸುವ ಇತರ ಮಾನವರಲ್ಲಿ ಆಕರ್ಷಕ ಗುಣಗಳೊಂದಿಗೆ ದೌರ್ಬಲ್ಯಗಳೂ ಇವೆಯೆಂಬುದನ್ನು ಅವನು ಅಂಗೀಕರಿಸುತ್ತಾನೆ. ಮನಸ್ಸು ಒಳಗೂಡಿರುವ ಇನ್ನೊಂದು ವಿಧ ಯಾವುದೆಂದರೆ, ಒಬ್ಬ ಕ್ರೈಸ್ತನು ಬಹುಶಃ ತಾನು ಸ್ವಾಭಾವಿಕವಾಗಿ ಪ್ರೀತಿಸಲಾರದಂಥವರನ್ನೂ ಪ್ರೀತಿಸುತ್ತಾನೆ. ತಾನು ಹಾಗೆ ಮಾಡುವಂತೆ ದೇವರು ಅಪೇಕ್ಷಿಸುತ್ತಾನೆಂದು ಅವನು ತನ್ನ ಬೈಬಲ್ ವಾಚನದಿಂದ ತಿಳಿದುಕೊಂಡಿರುವುದರಿಂದ ಅವನದನ್ನು ಮಾಡುತ್ತಾನೆ. (ಮತ್ತಾಯ 5:44; 1 ಕೊರಿಂಥ 16:14) ಆದರೆ ಬೈಬಲ್‌ನಲ್ಲಿ ತಿಳಿಸಲ್ಪಟ್ಟಿರುವಂಥ ರೀತಿಯ ಪ್ರೀತಿಯು ಬರೀ ಜ್ಞಾನದಿಂದ ಹೊಮ್ಮುವಂಥದ್ದಲ್ಲ. ಮೂಲತಃ, ಪ್ರೀತಿಯು ಹೃದಯದಿಂದ ಹೊಮ್ಮುತ್ತದೆ. ಅದರಲ್ಲಿ ಗಾಢವಾದ ಯಥಾರ್ಥತೆ ಮತ್ತು ಪೂರ್ಣ ರೀತಿಯಲ್ಲಿ ಭಾವನಾತ್ಮಕವಾಗಿ ಬದ್ಧರಾಗಿರುವುದು ಒಳಗೂಡಿರುತ್ತದೆ.—1 ಪೇತ್ರ 1:22.
4. ಯಾವ ರೀತಿಯಲ್ಲಿ ಪ್ರೀತಿ ಒಂದು ಬಲವಾದ ಬಂಧವಾಗಿದೆ?
4 ಸ್ವಾರ್ಥ ಜನರು ನಿಜವಾದ ಪ್ರೀತಿಭರಿತ ಸಂಬಂಧವನ್ನು ಹೊಂದುವುದು ತುಂಬ ಕಷ್ಟ. ಯಾಕೆಂದರೆ ಪ್ರೀತಿಯುಳ್ಳ ವ್ಯಕ್ತಿಯು, ತನ್ನ ಸ್ವಂತ ಅಭಿರುಚಿಗಳನ್ನಲ್ಲ ಬದಲಾಗಿ ಬೇರೆಯವರ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಲು ಸಿದ್ಧನಾಗಿರುತ್ತಾನೆ. (ಫಿಲಿಪ್ಪಿ 2:2-4) ಕೊಡುವಿಕೆಯು, ಪ್ರೀತಿಯಿಂದ ಮಾಡಲ್ಪಡುವಾಗಲೇ, “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂಬ ಯೇಸುವಿನ ಮಾತುಗಳು ಸತ್ಯವಾಗಿರುತ್ತವೆ. (ಅ. ಕೃತ್ಯಗಳು 20:35) ಪ್ರೀತಿಯು ಒಂದು ಬಲವಾದ ಬಂಧವೂ ಆಗಿದೆ. (ಕೊಲೊಸ್ಸೆ 3:14) ಅದರಲ್ಲಿ ಹೆಚ್ಚಾಗಿ ಸ್ನೇಹವೂ ಒಳಗೂಡಿರುತ್ತದೆ. ಆದರೆ ಪ್ರೀತಿಯ ಬಂಧಗಳು, ಸ್ನೇಹದ ಬಂಧಗಳಿಗಿಂತ ಹೆಚ್ಚು ಬಲವಾಗಿರುತ್ತವೆ. ಒಬ್ಬ ಗಂಡ ಮತ್ತು ಅವನ ಹೆಂಡತಿಯ ನಡುವಿನ ಪ್ರಣಯ ಸಂಬಂಧವನ್ನು ಕೆಲವೊಮ್ಮೆ ಪ್ರೀತಿಯೆಂದು ಕರೆಯಲಾಗುತ್ತದೆ. ಆದರೆ ದೈಹಿಕ ಆಕರ್ಷಣೆಗಿಂತ ಹೆಚ್ಚು ಕಾಲ ಬಾಳುವಂಥ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಬೈಬಲ್ ಪ್ರೋತ್ಸಾಹಿಸುತ್ತದೆ. ಒಬ್ಬ ದಂಪತಿಯ ನಡುವೆ ನಿಜವಾದ ಪ್ರೀತಿ ಇರುವಾಗ, ವೃದ್ಧಾಪ್ಯದ ದುರ್ಬಲತೆಗಳು ಅಥವಾ ಅವರಿಬ್ಬರಲ್ಲಿ ಒಬ್ಬರು ಅಸಮರ್ಥರಾಗಿರುವುದರಿಂದ, ದೈಹಿಕ ಸಂಬಂಧವು ಇನ್ನು ಮುಂದೆ ಅಸಾಧ್ಯವಾಗಿರುವ ಸಮಯದಲ್ಲೂ ಅವರು ಜೊತೆಯಾಗಿ ಬಾಳುತ್ತಾರೆ.
ಪ್ರೀತಿ—ಅತ್ಯಾವಶ್ಯಕವಾದ ಗುಣ
5. ಪ್ರೀತಿಯು ಒಬ್ಬ ಕ್ರೈಸ್ತನಲ್ಲಿರಬೇಕಾದ ಆವಶ್ಯಕ ಗುಣವಾಗಿದೆ ಏಕೆ?
5 ಒಬ್ಬ ಕ್ರೈಸ್ತನಲ್ಲಿ ಪ್ರೀತಿ ಎಂಬ ಗುಣ ಏಕೆ ಇರಬೇಕು? ಪ್ರಥಮ ಕಾರಣವೇನೆಂದರೆ, ಯೇಸು ತನ್ನ ಹಿಂಬಾಲಕರು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಆಜ್ಞೆಯನ್ನು ಕೊಟ್ಟಿರುವುದರಿಂದಲೇ. ಅವನಂದದ್ದು: “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಿಮಗೆ ಆಜ್ಞಾಪಿಸುತ್ತೇನೆ.” (ಯೋಹಾನ 15:14, 17) ಎರಡನೆಯ ಕಾರಣವು, ಯೆಹೋವನು ಪ್ರೀತಿಯ ಸಾಕಾರರೂಪವಾಗಿದ್ದಾನೆ. ಮತ್ತು ಆತನ ಆರಾಧಕರೋಪಾದಿ ನಾವು ಆತನನ್ನು ಅನುಕರಿಸಬೇಕು. (ಎಫೆಸ 5:1; 1 ಯೋಹಾನ 4:16) ಯೆಹೋವ ಮತ್ತು ಯೇಸುವಿನ ಕುರಿತಾಗಿ ತಿಳಿದುಕೊಳ್ಳುವುದೇ ನಿತ್ಯಜೀವ ಎಂದು ಬೈಬಲ್ ಹೇಳುತ್ತದೆ. ನಾವು ದೇವರಂತಿರಲು ಪ್ರಯತ್ನಿಸದಿದ್ದರೆ, ನಾವು ಆತನನ್ನು ತಿಳಿದುಕೊಂಡಿದ್ದೇವೆಂದು ಹೇಗೆ ಹೇಳಸಾಧ್ಯ? ಅಪೊಸ್ತಲ ಯೋಹಾನನು ಸಹ ಹೀಗೆ ತರ್ಕಿಸಿದನು: “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.”—1 ಯೋಹಾನ 4:8.
6. ನಮ್ಮ ಜೀವಿತಗಳ ಬೇರೆ ಬೇರೆ ಕ್ಷೇತ್ರಗಳಲ್ಲಿ ನಾವು ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಪ್ರೀತಿ ಹೇಗೆ ಸಹಾಯಮಾಡುವುದು?
6 ಪ್ರೀತಿಯು ಒಂದು ಪ್ರಾಮುಖ್ಯ ಗುಣವಾಗಿರಲು ಮೂರನೆಯ ಕಾರಣವೂ ಇದೆ: ನಾವು ನಮ್ಮ ಜೀವಿತಗಳ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ನಾವೇನನ್ನು ಮಾಡುತ್ತೇವೊ ಅದನ್ನು ಒಳ್ಳೆಯ ಉದ್ದೇಶದೊಂದಿಗೆ ಮಾಡುವಂತೆ ಅದು ಸಹಾಯಮಾಡುತ್ತದೆ. ಉದಾಹರಣೆಗಾಗಿ, ದೇವರ ವಾಕ್ಯದ ಜ್ಞಾನವನ್ನು ತೆಗೆದುಕೊಳ್ಳುತ್ತಾ ಇರುವುದು ತುಂಬ ಆವಶ್ಯಕವಾಗಿದೆ. ಒಬ್ಬ ಕ್ರೈಸ್ತನಿಗೆ ಅಂಥ ಜ್ಞಾನವು ಆಹಾರದಂತಿದೆ. ಅದರಿಂದ ಅವನು ಪ್ರೌಢತೆಗೆ ಬೆಳೆಯಬಲ್ಲನು ಮತ್ತು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯಬಲ್ಲನು. (ಕೀರ್ತನೆ 119:105; ಮತ್ತಾಯ 4:4; 2 ತಿಮೊಥೆಯ 3:15, 16) ಆದರೆ ಪೌಲನು ಹೀಗೆ ಎಚ್ಚರಿಸಿದನು: “ಜ್ಞಾನವು ಉಬ್ಬಿಸುತ್ತದೆ, ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.” (1 ಕೊರಿಂಥ 8:1) ನಿಷ್ಕೃಷ್ಟ ಜ್ಞಾನದಲ್ಲೇ ಏನೋ ತಪ್ಪಿದೆಯೆಂಬುದು ಇದರರ್ಥವಲ್ಲ. ಸಮಸ್ಯೆಯು ಇರುವುದು ನಮ್ಮಲ್ಲಿಯೇ. ಏಕೆಂದರೆ ನಮ್ಮಲ್ಲೇ ಪಾಪಪೂರ್ಣ ಪ್ರವೃತ್ತಿಗಳಿವೆ. (ಆದಿಕಾಂಡ 8:21) ಸಮತೋಲನಗೊಳಿಸುವ ಅಂಶವಾದ ಪ್ರೀತಿಯು ಇಲ್ಲದಿರುವಲ್ಲಿ, ಜ್ಞಾನವು ಒಬ್ಬ ವ್ಯಕ್ತಿಯನ್ನು ಉಬ್ಬಿಕೊಳ್ಳುವಂತೆ ಮಾಡುವುದು. ತಾನೇ ಇತರರಿಗಿಂತ ಶ್ರೇಷ್ಠನೆಂದು ಅವನು ಯೋಚಿಸಲಾರಂಭಿಸುವನು. ಆದರೆ, ಅವನು ಆ ಜ್ಞಾನವನ್ನು ಪಡೆದುಕೊಳ್ಳಲು ಪ್ರೀತಿಯಿಂದ ಪ್ರೇರಿಸಲ್ಪಟ್ಟಿರುವುದಾದರೆ ಅವನು ಹಾಗೆ ನೆನಸುವುದಿಲ್ಲ. ಏಕೆಂದರೆ “ಪ್ರೀತಿ . . . ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ.” (1 ಕೊರಿಂಥ 13:4) ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿರುವ ಒಬ್ಬ ಕ್ರೈಸ್ತನು, ಬಹಳಷ್ಟು ಜ್ಞಾನವನ್ನು ಪಡೆದುಕೊಂಡರೂ ಎಂದೂ ಅಹಂಕಾರಿಯಾಗುವುದಿಲ್ಲ. ಪ್ರೀತಿಯು ಅವನನ್ನು ನಮ್ರನನ್ನಾಗಿಸುವುದು ಮತ್ತು ತನಗಾಗಿ ಒಂದು ದೊಡ್ಡ ಹೆಸರನ್ನು ಮಾಡಿಕೊಳ್ಳಲು ಬಯಸುವುದರಿಂದ ತಡೆಹಿಡಿಯುವುದು.—ಕೀರ್ತನೆ 138:6; ಯಾಕೋಬ 4:6.
7, 8. ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಪ್ರೀತಿ ನಮಗೆ ಹೇಗೆ ಸಹಾಯಮಾಡುತ್ತದೆ?
7 ಪೌಲನು ಫಿಲಿಪ್ಪಿಯವರಿಗೆ ಹೀಗೆ ಬರೆದನು: “ನಾನು ದೇವರನ್ನು ಪಾರ್ಥಿಸಿ—ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ ಕೂಡಿ ಉತ್ತಮ ಕಾರ್ಯಗಳು [“ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳು,” NW] ಯಾವವೆಂದು ನೀವು ವಿವೇಚಿಸುವವರಾಗಬೇಕೆಂತಲೂ . . . ಬೇಡಿಕೊಳ್ಳುತ್ತೇನೆ.” (ಫಿಲಿಪ್ಪಿ 1:9-11) ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ವಿವೇಚಿಸಲಿಕ್ಕಾಗಿ ಕೊಡಲ್ಪಟ್ಟಿರುವ ಈ ಉತ್ತೇಜನಕ್ಕನುಗುಣವಾಗಿ ನಡೆಯುವಂತೆ ಕ್ರೈಸ್ತ ಪ್ರೀತಿಯು ನಮಗೆ ಸಹಾಯಮಾಡುವುದು. ಈ ಪ್ರಾಮುಖ್ಯ ಸಂಗತಿಗಳ ಕುರಿತಾದ ಒಂದು ಉದಾಹರಣೆಗಾಗಿ, ಪೌಲನು ತಿಮೊಥೆಯನಿಗೆ ಹೇಳಿದ ಈ ಮಾತುಗಳನ್ನು ಪರಿಗಣಿಸಿರಿ: “ಸಭಾಧ್ಯಕ್ಷನಾಗಲು ಬಹಳವಾಗಿ ಪ್ರಯತ್ನಿಸುವವನು, ಒಳ್ಳೆಯ ಕೆಲಸವನ್ನೇ ಅಪೇಕ್ಷಿಸುವವನಾಗಿದ್ದಾನೆ.” (1 ತಿಮೊಥೆಯ 3:1, ಪರಿಶುದ್ಧ ಬೈಬಲ್ *) 2000 ಸೇವಾ ವರ್ಷದಲ್ಲಿ, ಲೋಕವ್ಯಾಪಕವಾಗಿ ಸಭೆಗಳ ಸಂಖ್ಯೆಯು 1,502ರಷ್ಟು ಹೆಚ್ಚಾಗಿ, 91,487ರ ಸಂಖ್ಯೆಯನ್ನು ತಲಪಿತು. ಹೀಗಿರುವುದರಿಂದ ಹಿರಿಯರಿಗಾಗಿರುವ ಅಗತ್ಯವು ತುಂಬ ಹೆಚ್ಚಾಗಿದೆ, ಮತ್ತು ಆ ಸುಯೋಗಕ್ಕಾಗಿ ಪ್ರಯತ್ನಿಸುವವರನ್ನು ಶ್ಲಾಘಿಸಬೇಕು.
8 ಆದರೆ ಅಂಥ ಮೇಲ್ವಿಚಾರಣೆಯ ಸುಯೋಗಗಳಿಗಾಗಿ ಪ್ರಯತ್ನಿಸುವವರು, ಆ ಸುಯೋಗದ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಶಕ್ತರಾಗುವರು. ಇಲ್ಲಿ, ಕೇವಲ ಅಧಿಕಾರವನ್ನು ಪಡೆದುಕೊಳ್ಳುವುದು ಅಥವಾ ಒಂದು ದೊಡ್ಡ ಹೆಸರನ್ನು ಗಳಿಸುವುದು ಪ್ರಾಮುಖ್ಯವಾದ ಸಂಗತಿಯಲ್ಲ. ಯೆಹೋವನನ್ನು ಸಂತೋಷಪಡಿಸುವ ಹಿರಿಯರು, ಆತನ ಕಡೆಗೆ ಮತ್ತು ಸಹೋದರರ ಕಡೆಗಿನ ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿರುತ್ತಾರೆ. ಅವರು ತಮ್ಮ ಪ್ರಖ್ಯಾತಿಗಾಗಿ ಅಥವಾ ವರ್ಚಸ್ಸಿಗಾಗಿ ಆ ಸುಯೋಗವನ್ನು ಪಡೆದುಕೊಳ್ಳಲು ಬಯಸುವುದಿಲ್ಲ. ಅಪೊಸ್ತಲ ಪೇತ್ರನು, ಸಭೆಯ ಹಿರಿಯರು ಒಂದು ಒಳ್ಳೆಯ ಮನೋಭಾವವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಸಲಹೆಯನ್ನು ಕೊಟ್ಟ ನಂತರ, ‘ದೀನಮನಸ್ಸನ್ನು’ ಹೊಂದಿರುವುದರ ಅಗತ್ಯವನ್ನು ಎತ್ತಿಹೇಳಿದನು. ಅವನು ಸಭೆಯಲ್ಲಿದ್ದವರೆಲ್ಲರಿಗೆ ಈ ಸಲಹೆಯನ್ನು ಕೊಟ್ಟನು: “ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ.” (1 ಪೇತ್ರ 5:1-6) ಈ ಸುಯೋಗಕ್ಕಾಗಿ ಪ್ರಯತ್ನಿಸುವ ಯಾವುದೇ ವ್ಯಕ್ತಿಯು, ಲೋಕದ ಸುತ್ತಲೂ ಇರುವ ಅಸಂಖ್ಯಾತ ಹಿರಿಯರ ಮಾದರಿಯನ್ನು ಪರಿಗಣಿಸುವುದು ಒಳ್ಳೆಯದು. ಇವರು ಪರಿಶ್ರಮಿಗಳೂ, ನಮ್ರರೂ, ಸಭೆಗಳಿಗೆ ಒಂದು ಆಶೀರ್ವಾದವೂ ಆಗಿದ್ದಾರೆ.—ಇಬ್ರಿಯ 13:7.
ಒಳ್ಳೆಯ ಉದ್ದೇಶಗಳು ತಾಳಿಕೊಳ್ಳುವಂತೆ ಸಹಾಯಮಾಡುತ್ತವೆ
9. ಯೆಹೋವನು ವಾಗ್ದಾನಿಸಿರುವ ಆಶೀರ್ವಾದಗಳನ್ನು ಕ್ರೈಸ್ತರು ಏಕೆ ಮನಸ್ಸಿನಲ್ಲಿಡುತ್ತಾರೆ?
9 ಪ್ರೀತಿಯಿಂದ ಪ್ರಚೋದಿಸಲ್ಪಡುವುದರ ಮಹತ್ವವನ್ನು ಇನ್ನೊಂದು ರೀತಿಯಲ್ಲೂ ನೋಡಬಹುದು. ಪ್ರೀತಿಯಿಂದಾಗಿ ದೇವಭಕ್ತಿಯ ಜೀವನವನ್ನು ನಡೆಸುವವರಿಗೆ, ಈಗ ಸಮೃದ್ಧವಾದ ಆಶೀರ್ವಾದಗಳು ಮತ್ತು ಭವಿಷ್ಯತ್ತಿನಲ್ಲಿ ಊಹಿಸಲಾಗದಷ್ಟು ಅದ್ಭುತಕರವಾದ ಆಶೀರ್ವಾದಗಳನ್ನು ಬೈಬಲ್ ವಾಗ್ದಾನಿಸುತ್ತದೆ. (1 ತಿಮೊಥೆಯ 4:8) ಈ ವಾಗ್ದಾನಗಳನ್ನು ದೃಢವಾಗಿ ನಂಬುವ, ಮತ್ತು ಯೆಹೋವನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ಮನವರಿಕೆಯಾಗಿರುವ ಕ್ರೈಸ್ತನೊಬ್ಬನು ನಂಬಿಕೆಯಲ್ಲಿ ದೃಢವಾಗಿ ನಿಲ್ಲುವಂತೆ ಸಾಧ್ಯವಾಗುತ್ತದೆ. (ಇಬ್ರಿಯ 11:6) ನಮ್ಮಲ್ಲಿ ಹೆಚ್ಚಿನವರು ದೇವರ ವಾಗ್ದಾನಗಳ ನೆರವೇರಿಕೆಗಾಗಿ ಹಾತೊರೆಯುತ್ತಾ, ಅಪೊಸ್ತಲ ಯೋಹಾನನಿಗಿದ್ದ ಭಾವನೆಗಳನ್ನೇ ಪ್ರತಿಧ್ವನಿಸುತ್ತೇವೆ: “ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.” (ಪ್ರಕಟನೆ 22:20) “ತನ್ನ ಮುಂದೆ ಇಟ್ಟಿದ್ದ ಸಂತೋಷ”ವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ಯೇಸುವಿಗೆ ತಾಳಿಕೊಳ್ಳುವಂತೆ ಸಹಾಯಮಾಡಿತು. ಅದೇ ರೀತಿಯಲ್ಲಿ ನಾವು ನಂಬಿಗಸ್ತರಾಗಿರುವಲ್ಲಿ ಭವಿಷ್ಯತ್ತಿನಲ್ಲಿ ನಮಗಾಗಿ ಕಾದಿರಿಸಲ್ಪಟ್ಟಿರುವ ಆಶೀರ್ವಾದಗಳ ಕುರಿತಾಗಿ ಮನನ ಮಾಡುವುದು ನಮಗೆ ತಾಳಿಕೊಳ್ಳುವಂತೆ ಬಲವನ್ನು ಕೊಡುವುದು.—ಇಬ್ರಿಯ 12:1, 2.
10, 11. ಪ್ರೀತಿಯಿಂದ ಪ್ರಚೋದಿಸಲ್ಪಡುವುದು ನಾವು ತಾಳಿಕೊಳ್ಳುವಂತೆ ಹೇಗೆ ಸಹಾಯಮಾಡುವುದು?
10 ಆದರೆ ನಾವು ಯೆಹೋವನನ್ನು ಸೇವಿಸುತ್ತಿರುವ ಮುಖ್ಯ ಉದ್ದೇಶವು, ಹೊಸ ಲೋಕದಲ್ಲಿ ಜೀವಿಸುವುದು ಆಗಿರುವಲ್ಲಿ ಆಗೇನು? ಹಾಗಿರುವುದಾದರೆ, ಸ್ವಲ್ಪ ಕಷ್ಟಗಳೇಳುವಾಗ, ಅಥವಾ ನಮ್ಮ ನಿರೀಕ್ಷೆಯಂತೆ ಘಟನೆಗಳು ನಡೆಯದಿರುವಾಗ ನಾವು ಬೇಗನೆ ತಾಳ್ಮೆಗೆಡಬಹುದು ಅಥವಾ ಅತೃಪ್ತರಾಗಬಹುದು. ನಾವು ದೂರ ತೇಲಿಹೋಗುವ ಗಂಭೀರ ಅಪಾಯವೂ ಇದೆ. (ಇಬ್ರಿಯ 2:1; 3:12) ಹಿಂದೆ ಒಬ್ಬ ಒಡನಾಡಿಯಾಗಿದ್ದ ದೇಮನೆಂಬವನ ಕುರಿತಾಗಿ ಪೌಲನು ಮಾತಾಡಿದನು. ಅವನು ಪೌಲನನ್ನು ತೊರೆದುಬಿಟ್ಟನು. ಏಕೆ? ಏಕೆಂದರೆ ಅವನು “ಇಹಲೋಕವನ್ನು ಪ್ರೀತಿಸಿ”ದನು. (2 ತಿಮೊಥೆಯ 4:10) ಕೇವಲ ಸ್ವಾರ್ಥ ಕಾರಣಗಳಿಗಾಗಿ ದೇವರನ್ನು ಸೇವಿಸುವವರು ಸಹ ಹೀಗೆಯೇ ಮಾಡುವ ಅಪಾಯವಿದೆ. ಲೋಕವು ನೀಡುವಂಥ ಸುವರ್ಣಾವಕಾಶಗಳಿಂದ ಆಕರ್ಷಿತರಾಗಿ, ಭವಿಷ್ಯತ್ತಿನಲ್ಲಿ ಸಿಗುವಂಥ ಆಶೀರ್ವಾದಗಳ ನಿರೀಕ್ಷೆಯಲ್ಲಿ ಅವರು ಈಗ ಯಾವುದೇ ತ್ಯಾಗಗಳನ್ನು ಮಾಡಲು ಸಿದ್ಧರಾಗಿರುವುದಿಲ್ಲ.
11 ಭವಿಷ್ಯತ್ತಿನ ಆಶೀರ್ವಾದಗಳನ್ನು ಪಡೆದುಕೊಳ್ಳುವ ಮತ್ತು ಸಂಕಷ್ಟಗಳಿಂದ ಪರಿಹಾರವನ್ನು ನಿರೀಕ್ಷಿಸುವ ಅಪೇಕ್ಷೆಯು ಯೋಗ್ಯವೂ ಸಹಜವಾದದ್ದೂ ಆಗಿದೆ. ಆದರೆ ನಮ್ಮಲ್ಲಿ ಪ್ರೀತಿ ಇರುವುದಾದರೆ, ಅದು ನಮ್ಮ ಜೀವಿತದಲ್ಲಿ ಪ್ರಪ್ರಥಮ ಸ್ಥಾನದಲ್ಲಿರಬೇಕಾದ ಸಂಗತಿಗಳಿಗಾಗಿ ಗಣ್ಯತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ, ನಮ್ಮ ಚಿತ್ತವಲ್ಲ ಬದಲಾಗಿ ಯೆಹೋವನ ಚಿತ್ತವೇ ಅತಿ ಪ್ರಾಮುಖ್ಯವಾದ ಸಂಗತಿಯಾಗಿದೆ. (ಲೂಕ 22:41, 42) ಹೌದು, ಪ್ರೀತಿಯು ನಮ್ಮನ್ನು ಕಟ್ಟುತ್ತದೆ. ನಾವು ದೇವರಿಗಾಗಿ ತಾಳ್ಮೆಯಿಂದ ಕಾಯುತ್ತಾ ಇರುವುದರಲ್ಲಿ ಸಂತೃಪ್ತರಾಗಿರುವಂತೆ ಮಾಡುತ್ತದೆ. ಆತನು ಕೊಡುವಂಥ ಯಾವುದೇ ಆಶೀರ್ವಾದಗಳೊಂದಿಗೆ ತೃಪ್ತರಾಗಿದ್ದು, ತನ್ನ ತಕ್ಕ ಸಮಯದಲ್ಲಿ ಆತನು ವಾಗ್ದಾನಿಸಿರುವುದೆಲ್ಲವನ್ನೂ ಮತ್ತು ಇನ್ನೂ ಹೆಚ್ಚನ್ನು ನಾವು ಪಡೆಯುವೆವು ಎಂಬ ದೃಢಭರವಸೆಯಿರುವಂತೆ ಸಹಾಯ ಮಾಡುತ್ತದೆ. (ಕೀರ್ತನೆ 145:16; 2 ಕೊರಿಂಥ 12:8, 9) ಆದರೆ ಅಷ್ಟರ ವರೆಗೆ, ನಾವು ನಿಸ್ವಾರ್ಥದಿಂದ ಆತನ ಸೇವೆ ಮಾಡುತ್ತಾ ಇರುವಂತೆ ಪ್ರೀತಿಯು ನಮಗೆ ಸಹಾಯಮಾಡುವುದು. ಏಕೆಂದರೆ “ಪ್ರೀತಿ . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.”—1 ಕೊರಿಂಥ 13:4, 5.
ಕ್ರೈಸ್ತರು ಯಾರನ್ನು ಪ್ರೀತಿಸಬೇಕು?
12. ಯೇಸುವಿಗನುಸಾರ ನಾವು ಯಾರನ್ನು ಪ್ರೀತಿಸಬೇಕು?
12 ಮೋಶೆಯ ಧರ್ಮಶಾಸ್ತ್ರದಿಂದ ಎರಡು ಹೇಳಿಕೆಗಳನ್ನು ಉಲ್ಲೇಖಿಸಿ, ನಾವು ಯಾರನ್ನು ಪ್ರೀತಿಸಬೇಕೆಂಬುದರ ಬಗ್ಗೆ ಒಂದು ಮುಖ್ಯ ಆಜ್ಞೆಯನ್ನು ಕೊಟ್ಟನು. ಅವನಂದದ್ದು: “ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು” ಮತ್ತು ಮತ್ತಾಯ 22:37-39.
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”—13. ನಾವು ಯೆಹೋವನನ್ನು ನೋಡಲು ಸಾಧ್ಯವಿರದಿದ್ದರೂ, ಆತನನ್ನು ಪ್ರೀತಿಸಲು ಹೇಗೆ ಕಲಿಯುತ್ತೇವೆ?
13 ನಾವು ಮೊತ್ತಮೊದಲು ಯೆಹೋವನನ್ನು ಪ್ರೀತಿಸಬೇಕೆಂಬುದು ಯೇಸುವಿನ ಮಾತುಗಳಿಂದ ತೀರ ಸ್ಪಷ್ಟವಾಗುತ್ತದೆ. ಆದರೆ ನಾವು ಹುಟ್ಟುವಾಗಲೇ ನಮ್ಮಲ್ಲಿ ಯೆಹೋವನಿಗಾಗಿ ಪೂರ್ಣ ಪ್ರಮಾಣದ ಪ್ರೀತಿಯಿರುವುದಿಲ್ಲ. ಅದನ್ನು ನಾವು ಬೆಳೆಸಿಕೊಳ್ಳಬೇಕು. ನಾವು ಮೊದಲನೆಯ ಬಾರಿ ಅವನ ಕುರಿತಾಗಿ ಕೇಳಿಸಿಕೊಂಡಾಗ, ನಾವು ಆತನತ್ತ ಆಕರ್ಷಿಸಲ್ಪಟ್ಟೆವು. ಆತನು ಮಾನವಕುಲಕ್ಕಾಗಿ ಭೂಮಿಯನ್ನು ಹೇಗೆ ಸಿದ್ಧಪಡಿಸಿದನೆಂಬುದರ ಕುರಿತಾಗಿ ನಾವು ಸ್ವಲ್ಪಸ್ವಲ್ಪವಾಗಿ ಕಲಿತುಕೊಂಡೆವು. (ಆದಿಕಾಂಡ 2:5-23) ಆತನು ಮಾನವಕುಲದೊಂದಿಗೆ ವ್ಯವಹರಿಸಿರುವ ರೀತಿಯ ಬಗ್ಗೆ ಕಲಿತುಕೊಂಡೆವು. ಪಾಪವು ಮಾನವಕುಲದ ಮೇಲೆ ಹಿಡಿತವನ್ನು ಸಾಧಿಸಿದಾಗ, ಆತನು ನಮ್ಮ ಕೈಬಿಡದೆ ನಮ್ಮನ್ನು ವಿಮೋಚಿಸಲಿಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿದುಕೊಂಡೆವು. (ಆದಿಕಾಂಡ 3:1-5, 15) ನಂಬಿಗಸ್ತರಾಗಿದ್ದವರೊಂದಿಗೆ ಆತನು ದಯೆಯಿಂದ ವ್ಯವಹರಿಸಿದನು. ಮತ್ತು ನಮ್ಮ ಪಾಪಗಳ ಕ್ಷಮಾಪಣೆಗಾಗಿ ಕಟ್ಟಕಡೆಗೆ ತನ್ನ ಏಕಜಾತ ಪುತ್ರನನ್ನು ಕೊಟ್ಟನು. (ಯೋಹಾನ 3:16, 36) ಈ ಜ್ಞಾನವು ಹೆಚ್ಚಾದಂತೆ, ಯೆಹೋವನಿಗಾಗಿರುವ ನಮ್ಮ ಗಣ್ಯತೆಯೂ ಹೆಚ್ಚಾಯಿತು. (ಯೆಶಾಯ 25:1) ಯೆಹೋವನ ಪ್ರೀತಿಪರ ಆರೈಕೆಯಿಂದಾಗಿ ತಾನು ಆತನನ್ನು ಪ್ರೀತಿಸುತ್ತೇನೆಂದು ರಾಜ ದಾವೀದನು ಹೇಳಿದನು. (ಕೀರ್ತನೆ 116:1-9) ಇಂದು ಸಹ ಯೆಹೋವನು ನಮ್ಮ ಆರೈಕೆ ಮಾಡುತ್ತಾನೆ, ನಮ್ಮನ್ನು ಮಾರ್ಗದರ್ಶಿಸುತ್ತಾನೆ, ಬಲಪಡಿಸುತ್ತಾನೆ ಮತ್ತು ಉತ್ತೇಜಿಸುತ್ತಾನೆ. ನಾವು ಆತನ ಬಗ್ಗೆ ಎಷ್ಟು ಹೆಚ್ಚನ್ನು ಕಲಿಯುತ್ತೇವೊ, ಆತನಿಗಾಗಿರುವ ನಮ್ಮ ಪ್ರೀತಿಯು ಸಹ ಅಷ್ಟೇ ಆಳವಾಗುತ್ತದೆ.—ಕೀರ್ತನೆ 31:23; ಚೆಫನ್ಯ 3:17; ರೋಮಾಪುರ 8:28.
ನಾವು ನಮ್ಮ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು?
14. ದೇವರಿಗಾಗಿರುವ ನಮ್ಮ ಪ್ರೀತಿಯು ನಿಜವಾಗಿದೆ ಎಂಬುದನ್ನು ಯಾವ ವಿಧದಲ್ಲಿ ತೋರಿಸಬಹುದು?
14 ಲೋಕದಲ್ಲೂ ಅನೇಕರು ತಾವು ದೇವರನ್ನು ಪ್ರೀತಿಸುತ್ತೇವೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳೆಂದು ಅವರ ವರ್ತನೆಗಳು ತೋರಿಸುತ್ತವೆ. ಹಾಗಾದರೆ ನಾವು ಯೆಹೋವನನ್ನು ನಿಜವಾಗಿ ಪ್ರೀತಿಸುತ್ತೇವೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು? ನಾವು ಪ್ರಾರ್ಥನೆಯಲ್ಲಿ ಆತನೊಂದಿಗೆ ಮಾತಾಡಿ, ನಮ್ಮ ಭಾವನೆಗಳನ್ನು ಆತನಿಗೆ ತಿಳಿಸಬಹುದು. ಅಷ್ಟುಮಾತ್ರವಲ್ಲದೆ, ನಮ್ಮ ಪ್ರೀತಿಯನ್ನು ತೋರಿಸುವಂಥ ರೀತಿಯಲ್ಲಿ ನಾವು ವರ್ತಿಸಬೇಕು. ಅಪೊಸ್ತಲ ಯೋಹಾನನು ಹೇಳಿದ್ದು: “ಯಾವನಾದರೂ ಆತನ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ. ಇದರಿಂದಲೇ ಆತನಲ್ಲಿದ್ದೇವೆಂಬದನ್ನು ತಿಳುಕೊಳ್ಳುತ್ತೇವೆ.” (1 ಯೋಹಾನ 2:5; 5:3) ಇದಲ್ಲದೆ, ನಾವು ಒಟ್ಟುಗೂಡಿ ಸಹವಾಸಮಾಡಬೇಕು ಮತ್ತು ಶುದ್ಧ, ನೈತಿಕ ಜೀವಿತಗಳನ್ನು ನಡೆಸಬೇಕೆಂದು ದೇವರ ವಾಕ್ಯವು ನಮಗೆ ಹೇಳುತ್ತದೆ. ನಾವು ಕಪಟತನದಿಂದ ದೂರವಿರುತ್ತೇವೆ, ಸತ್ಯವನ್ನಾಡುತ್ತೇವೆ ಮತ್ತು ನಮ್ಮ ಆಲೋಚನೆಗಳನ್ನು ಶುದ್ಧವಾಗಿರಿಸುತ್ತೇವೆ. (2 ಕೊರಿಂಥ 7:1; ಎಫೆಸ 4:15; 1 ತಿಮೊಥೆಯ 1:5; ಇಬ್ರಿಯ 10:23-25) ಅಗತ್ಯದಲ್ಲಿರುವವರಿಗೆ ಭೌತಿಕ ಸಹಾಯವನ್ನು ಕೊಡುವ ಮೂಲಕವೂ ನಾವು ಪ್ರೀತಿಯನ್ನು ತೋರಿಸುತ್ತೇವೆ. (1 ಯೋಹಾನ 3:17, 18) ಮತ್ತು ಯೆಹೋವನ ಬಗ್ಗೆ ಇತರರಿಗೆ ತಿಳಿಸುವುದರಿಂದ ನಾವು ಹಿಂದೆ ಸರಿಯುವುದಿಲ್ಲ. ಇದಕ್ಕಾಗಿ ನಾವು ಲೋಕವ್ಯಾಪಕವಾಗಿ ನಡೆಯುತ್ತಿರುವ ರಾಜ್ಯದ ಕುರಿತಾದ ಸುವಾರ್ತೆಯ ಸಾರುವಿಕೆಯಲ್ಲಿ ಪಾಲ್ಗೊಳ್ಳುತ್ತೇವೆ. (ಮತ್ತಾಯ 24:14; ರೋಮಾಪುರ 10:10) ಇಂಥ ವಿಷಯಗಳಲ್ಲಿ ದೇವರ ವಾಕ್ಯಕ್ಕೆ ವಿಧೇಯರಾಗಿರುವುದರಿಂದ, ಯೆಹೋವನಿಗಾಗಿ ನಮ್ಮಲ್ಲಿ ನಿಜವಾದ ಪ್ರೀತಿಯಿದೆಯೆಂಬುದನ್ನು ತೋರಿಸುತ್ತೇವೆ.
15, 16. ಯೆಹೋವನಿಗಾಗಿರುವ ಪ್ರೀತಿಯು ಕಳೆದ ವರ್ಷ ಅನೇಕರನ್ನು ಹೇಗೆ ಪ್ರಭಾವಿಸಿತು?
15 ಯೆಹೋವನನ್ನು ಪ್ರೀತಿಸುವ ಜನರಿಗೆ ಸರಿಯಾದ ನಿರ್ಧಾರಗಳನ್ನು ಮಾಡಲು ಸಹಾಯ ಸಿಗುತ್ತದೆ. ಕಳೆದ ವರ್ಷ, 2,88,907 ವ್ಯಕ್ತಿಗಳು ತಮ್ಮ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿ, ಆ ನಿರ್ಣಯವನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸುವಂತೆ ಅಂಥ ಪ್ರೀತಿಯೇ ಪ್ರಚೋದಿಸಿತು. (ಮತ್ತಾಯ 28:19, 20) ಅವರ ಸಮರ್ಪಣೆಯು ಅರ್ಥಪೂರ್ಣವಾಗಿತ್ತು. ಅದು ಅವರ ಜೀವಿತದಲ್ಲಿನ ಒಂದು ಬದಲಾವಣೆಯನ್ನು ಸೂಚಿಸಿತು. ಉದಾಹರಣೆಗಾಗಿ, ಗಾಸ್‌ಮೆಂಡ್ ಎಂಬುವನು, ಆ್ಯಲ್ಬೇನಿಯದ ಬಾಸ್ಕೆಟ್‌ಬಾಲ್ ತಾರೆಗಳಲ್ಲಿ ಒಬ್ಬನಾಗಿದ್ದನು. ಕೆಲವೊಂದು ವರ್ಷಗಳ ವರೆಗೆ, ಅವನು ಮತ್ತು ಅವನ ಹೆಂಡತಿಯು ಬೈಬಲನ್ನು ಅಭ್ಯಾಸಮಾಡಿದರು. ಮತ್ತು ಅನೇಕ ಅಡೆತಡೆಗಳ ಎದುರಿನಲ್ಲಿಯೂ ಕಟ್ಟಕಡೆಗೆ ಪ್ರಚಾರಕರಾಗಲು ಅರ್ಹರಾದರು. ಕಳೆದ ವರ್ಷ, 2000 ಸೇವಾ ವರ್ಷದಲ್ಲಿ ಗಾಸ್‌ಮೆಂಡ್‌ನ ದೀಕ್ಷಾಸ್ನಾನವಾಯಿತು. ಅವನೊಂದಿಗೆ 366 ಮಂದಿ ಸಹ ದೀಕ್ಷಾಸ್ನಾನಪಡೆದರು. ಒಂದು ವಾರ್ತಾಪತ್ರಿಕೆಯು ಅವನ ಕುರಿತಾದ ಒಂದು ಲೇಖನದಲ್ಲಿ ಹೇಳಿದ್ದು: “ಅವನ ಬದುಕಿಗೆ ಒಂದು ಉದ್ದೇಶವಿದೆ ಮತ್ತು ಈ ಕಾರಣದಿಂದ, ಅವನು ಮತ್ತು ಅವನ ಕುಟುಂಬವು ತಮ್ಮ ಜೀವನದ ಅತ್ಯಂತ ಸಂತೋಷಭರಿತ ಸಮಯವನ್ನು ಆನಂದಿಸುತ್ತಿದ್ದಾರೆ. ಈಗ ಅವನಿಗೆ, ತಾನು ಜೀವಿತದಿಂದ ಎಷ್ಟು ಲಾಭವನ್ನು ಗಳಿಸಬಹುದೆಂಬುದು ಪ್ರಾಮುಖ್ಯವಾಗಿಲ್ಲ, ಬದಲಾಗಿ ತಾನು ಬೇರೆ ಜನರಿಗೆ ಎಷ್ಟು ಸಹಾಯವನ್ನು ಮಾಡಬಲ್ಲೆ ಎಂಬುದೇ ಪ್ರಾಮುಖ್ಯವಾಗಿದೆ.”
16 ಅದೇ ರೀತಿಯಲ್ಲಿ, ಗುವಾಮ್‌ನಲ್ಲಿ ಒಂದು ಇಂಧನ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದ, ಹೊಸದಾಗಿ ದೀಕ್ಷಾಸ್ನಾನ ಪಡೆದ ಸಹೋದರಿಯನ್ನು ತೆಗೆದುಕೊಳ್ಳಿ. ಅವಳಿಗೆ ಒಂದು ಆಕರ್ಷಕ ಹುದ್ದೆಗೇರುವ ಅವಕಾಶವು ಒದಗಿಬಂತು. ಎಷ್ಟೋ ವರ್ಷಗಳಿಂದ ಅವಳು ಕಂಪೆನಿಯಲ್ಲಿ ಉನ್ನತ ಸ್ಥಾನಗಳನ್ನು ಒಂದೊಂದಾಗಿ ಪಡೆಯುತ್ತಾ ಇದ್ದಳು. ಕೊನೆಯಲ್ಲಿ, ಅವಳಿಗೆ ಆ ಕಂಪೆನಿಯ ಚರಿತ್ರೆಯಲ್ಲೇ ಮೊತ್ತಮೊದಲ ಮಹಿಳಾ ಉಪಕಾರ್ಯಾಧ್ಯಕ್ಷಳಾಗುವ ಅವಕಾಶವನ್ನು ನೀಡಲಾಯಿತು. ಆದರೆ, ಈಗ ಅವಳು ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದಳು. ಆದುದರಿಂದ, ತನ್ನ ಗಂಡನೊಂದಿಗೆ ಈ ವಿಚಾರವನ್ನು ಚರ್ಚಿಸಿದ ಬಳಿಕ, ಈ ಹೊಸ ಸಹೋದರಿಯು ಆ ಅವಕಾಶವನ್ನು ತಳ್ಳಿಹಾಕಿದಳು. ಅದಕ್ಕೆ ಬದಲು ಅವಳು ಒಬ್ಬ ಪೂರ್ಣ ಸಮಯದ ಶುಶ್ರೂಷಕಳು, ಅಂದರೆ ಪಯನೀಯರಳಾಗಲು ಪ್ರಗತಿಯನ್ನು ಮಾಡಸಾಧ್ಯವಾಗುವಂತೆ ಪಾರ್ಟ್ ಟೈಮ್ ಕೆಲಸ ಮಾಡುವ ಏರ್ಪಾಡನ್ನು ಮಾಡಿದಳು. ಈ ಲೋಕದ ಹಣಕಾಸಿನ ವ್ಯವಹಾರಗಳನ್ನು ಬೆನ್ನಟ್ಟಿಕೊಂಡು ಹೋಗುವ ಬದಲು ಅವಳು ಯೆಹೋವನ ಸೇವೆಯನ್ನು ಒಬ್ಬ ಪಯನೀಯರಳೋಪಾದಿ ಮಾಡುವಂತೆ, ಯೆಹೋವನ ಕಡೆಗಿನ ಪ್ರೀತಿಯು ಅವಳನ್ನು ಪ್ರಚೋದಿಸಿತು. ಲೋಕವ್ಯಾಪಕವಾಗಿ ಅಂಥದ್ದೇ ಪ್ರೀತಿಯು, 2000 ಸೇವಾ ವರ್ಷದಲ್ಲಿ 8,05,205 ಮಂದಿಯನ್ನು ಪಯನೀಯರ್ ಸೇವೆಯ ಭಿನ್ನಭಿನ್ನ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಪ್ರಚೋದಿಸಿತು. ಆ ಪಯನೀಯರರು ತಮ್ಮ ಪ್ರೀತಿ ಮತ್ತು ನಂಬಿಕೆಯನ್ನು ಎಷ್ಟೊಂದು ಉತ್ತಮವಾದ ರೀತಿಯಲ್ಲಿ ವ್ಯಕ್ತಪಡಿಸಿದರು!
ಯೇಸುವನ್ನು ಪ್ರೀತಿಸಲಿಕ್ಕಾಗಿ ಪ್ರಚೋದಿಸಲ್ಪಟ್ಟಿರುವುದು
17. ಯೇಸುವಿನಲ್ಲಿ ನಾವು ಪ್ರೀತಿಯ ಯಾವ ಒಳ್ಳೆಯ ಮಾದರಿಯನ್ನು ನೋಡಬಹುದು?
17 ಪ್ರೀತಿಯಿಂದ ಪ್ರಚೋದಿಸಲ್ಪಡುವ ವಿಷಯದಲ್ಲಿ ಯೇಸು ಒಂದು ಅದ್ಭುತ ಮಾದರಿಯಾಗಿದ್ದಾನೆ. ಅವನು ಮನುಷ್ಯನಾಗಿ ಭೂಮಿಗೆ ಬರುವ ಮುಂಚೆಯೇ ತನ್ನ ತಂದೆಯನ್ನು ಮತ್ತು ಮಾನವಕುಲವನ್ನು ಪ್ರೀತಿಸುತ್ತಿದ್ದನು. ವಿವೇಕದ ಸಾಕಾರರೂಪದೋಪಾದಿ, ಅವನಂದದ್ದು: “ನಾನು ಆತನ [ಯೆಹೋವನ] ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.” (ಜ್ಞಾನೋಕ್ತಿ 8:30, 31) ಯೇಸುವಿಗಿದ್ದ ಪ್ರೀತಿಯು, ಅವನು ತನ್ನ ಸ್ವರ್ಗೀಯ ನಿವಾಸಸ್ಥಾನವನ್ನು ಬಿಟ್ಟು, ಒಬ್ಬ ನಿಸ್ಸಹಾಯಕ ಶಿಶುವಿನೋಪಾದಿ ಜನಿಸುವಂತೆ ಪ್ರಚೋದಿಸಿತು. ಅವನು ದೀನ ಹಾಗೂ ನಮ್ರ ಜನರೊಂದಿಗೆ ತಾಳ್ಮೆ ಮತ್ತು ದಯೆಯಿಂದ ವ್ಯವಹರಿಸಿದನು. ಮತ್ತು ಯೆಹೋವನ ಶತ್ರುಗಳ ಕೈಯಲ್ಲಿ ಕಷ್ಟಾನುಭವಿಸಿದನು. ಕೊನೆಯಲ್ಲಿ ಅವನು ಯಾತನಾ ಕಂಭದ ಮೇಲೆ ಇಡೀ ಮಾನವಕುಲಕ್ಕೋಸ್ಕರ ಸತ್ತನು. (ಯೋಹಾನ 3:35; 14:30, 31; 15:12, 13; ಫಿಲಿಪ್ಪಿ 2:5-11) ಸರಿಯಾದ ಪ್ರಚೋದನೆಯ ವಿಷಯದಲ್ಲಿ ಎಂಥ ಉತ್ತಮ ಮಾದರಿ!
18. (ಎ) ಯೇಸುವಿಗಾಗಿ ಪ್ರೀತಿಯನ್ನು ನಾವು ಹೇಗೆ ಬೆಳೆಸಿಕೊಳ್ಳುತ್ತೇವೆ? (ಬಿ) ನಾವು ಯೇಸುವನ್ನು ಪ್ರೀತಿಸುತ್ತೇವೆಂದು ಹೇಗೆ ಪ್ರದರ್ಶಿಸುತ್ತೇವೆ?
18 ಒಳ್ಳೆಯ ಹೃದಯದ ಸ್ಥಿತಿಯುಳ್ಳವರು ಸುವಾರ್ತೆಯ ಪುಸ್ತಕಗಳಲ್ಲಿ 1 ಪೇತ್ರ 1:8) ನಾವು ಆತನಲ್ಲಿ ನಂಬಿಕೆಯನ್ನಿಟ್ಟು, ಅವನ ಸ್ವತ್ಯಾಗದ ಜೀವಿತವನ್ನು ಅನುಕರಿಸುವಾಗ ನಾವು ನಮ್ಮ ಪ್ರೀತಿಯನ್ನು ತೋರಿಸುತ್ತೇವೆ. (1 ಕೊರಿಂಥ 11:1; 1 ಥೆಸಲೊನೀಕ 1:6; 1 ಪೇತ್ರ 2:21-25) ಇಸವಿ 2000ದ ಏಪ್ರಿಲ್ 19ರಂದು, ಒಟ್ಟು 1,48,72,086 ಮಂದಿ ಯೇಸುವಿನ ಮರಣದ ವಾರ್ಷಿಕ ಜ್ಞಾಪಕಾಚರಣೆಗೆ ಹಾಜರಾದ ಸಂದರ್ಭದಲ್ಲಿ, ಯೇಸುವನ್ನು ಪ್ರೀತಿಸಲಿಕ್ಕಾಗಿ ಅವರಿಗಿರುವ ಕಾರಣಗಳನ್ನು ಜ್ಞಾಪಕಹುಟ್ಟಿಸಲಾಯಿತು. ಹಾಜರಾದವರ ಸಂಖ್ಯೆಯು ಎಷ್ಟು ದೊಡ್ಡದಾಗಿತ್ತು! ಯೇಸುವಿನ ಯಜ್ಞದ ಮೂಲಕ ಸಿಗುವ ರಕ್ಷಣೆಯಲ್ಲಿ ಇಷ್ಟೊಂದು ಜನರು ಆಸಕ್ತರಾಗಿದ್ದಾರೆಂಬುದನ್ನು ತಿಳಿದುಕೊಳ್ಳುವುದು ಎಷ್ಟು ಬಲವರ್ಧಕವಾಗಿದೆ! ಹೌದು, ಯೆಹೋವ ಮತ್ತು ಯೇಸು ನಮಗಾಗಿ ತೋರಿಸುವ ಪ್ರೀತಿ ಮತ್ತು ಅವರಿಗಾಗಿ ನಮ್ಮಲ್ಲಿರುವ ಪ್ರೀತಿಯಿಂದ ನಾವು ಕಟ್ಟಲ್ಪಡುತ್ತೇವೆ.
ಯೇಸುವಿನ ಜೀವಿತದ ವೃತ್ತಾಂತಗಳ ಬಗ್ಗೆ ಓದಿ, ಅವನ ನಂಬಿಗಸ್ತ ಜೀವನಕ್ರಮವು ಅವರಿಗಾಗಿ ಎಷ್ಟೊಂದು ಆಶೀರ್ವಾದಗಳನ್ನು ತಂದಿದೆ ಎಂಬುದರ ಬಗ್ಗೆ ಮನನ ಮಾಡುವಾಗ, ಅವರಲ್ಲಿ ಅವನಿಗಾಗಿ ಗಾಢವಾದ ಪ್ರೀತಿಯು ಬೆಳೆಯುತ್ತದೆ. ಇವರು, ಯಾರಿಗೆ ಪೇತ್ರನು “ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ” ಎಂದು ಹೇಳಿದನೊ ಅವರಂತಿದ್ದಾರೆ. (19. ಪ್ರೀತಿಯ ಕುರಿತಾದ ಯಾವ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು?
19 ನಾವು ಯೆಹೋವನನ್ನು ನಮ್ಮ ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಶಕ್ತಿಯಿಂದ ಪ್ರೀತಿಸಬೇಕೆಂದು ಯೇಸು ಹೇಳಿದನು. ಆದರೆ ನಾವು ನಮ್ಮ ನೆರೆಯವನನ್ನೂ ನಮ್ಮಂತೆಯೇ ಪ್ರೀತಿಸಬೇಕೆಂದು ಅವನು ಹೇಳಿದನು. (ಮಾರ್ಕ 12:29-31) ಇದರಲ್ಲಿ ಯಾರೆಲ್ಲಾ ಒಳಗೂಡಿದ್ದಾರೆ? ಮತ್ತು ನೆರೆಯವನಿಗಾಗಿ ಪ್ರೀತಿ ಇರುವುದರಿಂದ ನಾವು ಹೇಗೆ ಒಳ್ಳೆಯ ಸಮತೋಲನವನ್ನು ಮತ್ತು ಸರಿಯಾದ ಉದ್ದೇಶವನ್ನು ಇಟ್ಟುಕೊಳ್ಳಬಹುದು? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
[ಪಾದಟಿಪ್ಪಣಿ]
^ ಪ್ಯಾರ. 7 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.
ನಿಮಗೆ ನೆನಪಿದೆಯೊ?
• ಪ್ರೀತಿಯು ಒಂದು ಅತ್ಯಾವಶ್ಯಕ ಗುಣವಾಗಿದೆ ಏಕೆ?
• ನಾವು ಹೇಗೆ ಯೆಹೋವನನ್ನು ಪ್ರೀತಿಸಲು ಕಲಿಯಬಹುದು?
• ನಾವು ಯೆಹೋವನನ್ನು ಪ್ರೀತಿಸುತ್ತೇವೆಂಬುದನ್ನು ನಮ್ಮ ನಡತೆಯು ಹೇಗೆ ರುಜುಪಡಿಸುತ್ತದೆ?
• ಯೇಸುವಿಗಾಗಿ ನಮ್ಮ ಪ್ರೀತಿಯನ್ನು ನಾವು ಹೇಗೆ ಪ್ರದರ್ಶಿಸುತ್ತೇವೆ?
[ಅಧ್ಯಯನ ಪ್ರಶ್ನೆಗಳು]
[ಪುಟ 10, 11ರಲ್ಲಿರುವ ಚಿತ್ರಗಳು]
ಬಿಡುಗಡೆಗಾಗಿ ತಾಳ್ಮೆಯಿಂದ ಕಾಯುವಂತೆ ಪ್ರೀತಿಯು ನಮಗೆ ಸಹಾಯಮಾಡುತ್ತದೆ
[ಪುಟ 12ರಲ್ಲಿರುವ ಚಿತ್ರ]
ಯೇಸುವಿನ ಮಹಾನ್ ಯಜ್ಞವು, ಅವನನ್ನು ಪ್ರೀತಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ