ಯುದ್ಧದಿಂದಾಗುವ ಗಾಯಗಳನ್ನು ವಾಸಿಮಾಡುವುದು
ಯುದ್ಧದಿಂದಾಗುವ ಗಾಯಗಳನ್ನು ವಾಸಿಮಾಡುವುದು
ಏಬ್ರಹಾಮ್ ಎಂಬುವನು 20 ವರ್ಷಗಳ ವರೆಗೆ ಒಂದು ಗೆರಿಲ್ಲ ಸೈನ್ಯದಲ್ಲಿದ್ದನು. * ಆದರೆ ಈಗ ಅವನು ಹೋರಾಡುವುದನ್ನು ನಿಲ್ಲಿಸಿದ್ದಾನೆ, ಮತ್ತು ಮುಂದೆಂದೂ ಯುದ್ಧದಲ್ಲಿ ಹೋರಾಡುವುದಿಲ್ಲ. ಅಷ್ಟೇ ಅಲ್ಲದೆ, ಈ ಹಿಂದೆ ಅವನ ಶತ್ರುಗಳಾಗಿದ್ದವರು, ಈಗ ಅವನ ಅತ್ಯಾಪ್ತ ಮಿತ್ರರಾಗಿದ್ದಾರೆ. ಅವನಲ್ಲಿ ಈ ಬದಲಾವಣೆಯು ಹೇಗಾಯಿತು? ಬೈಬಲಿನ ಮೂಲಕವೇ. ಅದು ಏಬ್ರಹಾಮನಿಗೆ ನಿರೀಕ್ಷೆ ಮತ್ತು ಒಳನೋಟವನ್ನು ಕೊಟ್ಟಿತು. ಇದು, ಅವನು ಮಾನವ ವ್ಯವಹಾರಗಳನ್ನು ದೇವರ ದೃಷ್ಟಿಕೋನದಿಂದ ನೋಡುವಂತೆ ಸಹಾಯಮಾಡಿತು. ಅವನಲ್ಲಿದ್ದ ಹೋರಾಡುವ ಹವಣಿಕೆಯನ್ನು ಬೈಬಲ್ ತೆಗೆದುಹಾಕಿತು. ಹೀಗೆ, ಅವನಲ್ಲಿದ್ದ ದುಃಖ, ಬೇಸರ, ಮತ್ತು ಕಹಿಭಾವನೆಯು ವಾಸಿಯಾಗಲಾರಂಭಿಸಿತು. ಬೈಬಲಿನಲ್ಲಿ, ಹೃದಯಕ್ಕಾಗಿ ಒಳ್ಳೆಯ ಶಕ್ತಿಶಾಲಿ ಔಷಧವಿರುವುದನ್ನು ಅವನು ಕಂಡುಹಿಡಿದನು.
ಭಾವನಾತ್ಮಕ ಗಾಯಗಳನ್ನು ವಾಸಿಮಾಡುವಂತೆ ಬೈಬಲ್ ಹೇಗೆ ಸಹಾಯಮಾಡುತ್ತದೆ? ಏಬ್ರಹಾಮ್‌ನ ಜೀವಿತದಲ್ಲಿ ಈಗಾಗಲೇ ಏನು ಆಗಿಹೋಗಿತ್ತೊ ಅದನ್ನು ಬೈಬಲು ಬದಲಾಯಿಸಲು ಸಾಧ್ಯವಿರಲಿಲ್ಲ. ಆದರೆ ಅವನ ಸದ್ಯದ ಮತ್ತು ಮುಂದಿನ ಜೀವಿತವನ್ನು ಅದು ಖಂಡಿತವಾಗಿಯೂ ಬದಲಾಯಿಸಸಾಧ್ಯವಿತ್ತು. ದೇವರ ವಾಕ್ಯವನ್ನು ಓದಿ, ಅದರ ಕುರಿತಾಗಿ ಮನನ ಮಾಡುವುದರಿಂದ, ಅವನ ಆಲೋಚನಾ ರೀತಿಯು, ಸೃಷ್ಟಿಕರ್ತನ ವಿಚಾರಗಳಿಗೆ ಹೊಂದಿಕೆಯಲ್ಲಿ ಬಂತು. ಈಗ ಅವನಿಗೆ ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆಯಿದೆ ಮತ್ತು ಹೊಸ ಆದ್ಯತೆಗಳೂ ಇವೆ. ದೇವರಿಗೆ ಪ್ರಾಮುಖ್ಯವಾಗಿರುವ ಸಂಗತಿಗಳು ಈಗ ಅವನಿಗೂ ಪ್ರಾಮುಖ್ಯವಾಗಿಬಿಟ್ಟಿವೆ. ಹೀಗಾಗಲು ಆರಂಭವಾದಾಗ, ಅವನ ಹೃದಯದಲ್ಲಿದ್ದ ಗಾಯಗಳು ಸಹ ವಾಸಿಯಾಗತೊಡಗಿದವು. ಹೀಗೆ ಏಬ್ರಹಾಮ್‌ನಿಗೆ ಬದಲಾಗಲು ಸಹಾಯಸಿಕ್ಕಿತು.
ಅಂತರ್ಯುದ್ಧದೊಳಗೆ ಧುಮುಕಿದ್ದು
ಏಬ್ರಹಾಮ್ 1930ರ ದಶಕದಲ್ಲಿ ಆಫ್ರಿಕ ದೇಶದಲ್ಲಿ ಹುಟ್ಟಿದ್ದನು. ಎರಡನೆಯ ಲೋಕ ಯುದ್ಧದ ನಂತರ, ಅವನ ದೇಶವನ್ನು ಒಂದು ಶಕ್ತಿಶಾಲಿ ನೆರೆರಾಷ್ಟ್ರವು ಆಳತೊಡಗಿತು. ಆದರೆ ಏಬ್ರಹಾಮನ ಸ್ವದೇಶದಲ್ಲಿದ್ದ ಹೆಚ್ಚಿನವರಿಗೆ ಸ್ವಾತಂತ್ರ್ಯ ಬೇಕಾಗಿತ್ತು. ಆದುದರಿಂದ ಏಬ್ರಹಾಮ್ 1961ರಲ್ಲಿ, ಆ ಶಕ್ತಿಶಾಲಿ ನೆರೆರಾಷ್ಟ್ರದ ವಿರುದ್ಧ ಗೆರಿಲ್ಲ ಯುದ್ಧವನ್ನು ನಡೆಸುತ್ತಿದ್ದ ಒಂದು ಸ್ವಾತಂತ್ರ್ಯ ಚಳುವಳಿಯನ್ನು ಸೇರಿಕೊಂಡನು.
“ಅವರು ನಮ್ಮ ಶತ್ರುಗಳಾಗಿದ್ದರು. ಅವರು ನಮ್ಮನ್ನು ಕೊಲ್ಲಲು ಯೋಜನೆಗಳನ್ನು ಮಾಡಿದ್ದರು, ಆದುದರಿಂದ ನಾವು ಸಹ ಅವರನ್ನು ಕೊಲ್ಲಲು ಪ್ರಯತ್ನಿಸಿದೆವು” ಎಂದು ಏಬ್ರಹಾಮ್ ವಿವರಿಸುತ್ತಾನೆ.
ಏಬ್ರಹಾಮ್‌ನ ಜೀವವು ಯಾವಾಗಲೂ ಅಪಾಯದಲ್ಲಿರುತ್ತಿತ್ತು. ಆದುದರಿಂದ 20 ವರ್ಷಗಳ ವರೆಗೆ ಶಸ್ತ್ರಸಜ್ಜಿತ ಹೋರಾಟವನ್ನು ನಡೆಸಿದ ನಂತರ, ಅವನು ಯೂರೋಪಿಗೆ ಓಡಿಹೋದನು. ಅಷ್ಟರೊಳಗೆ ಅವನು 50ರ ಪ್ರಾಯವನ್ನು ಮುಟ್ಟಿದ್ದನು. ಮತ್ತು ಅವನ ಬಳಿ ಆಗ ತುಂಬ ಸಮಯವಿತ್ತಾದುದರಿಂದ ತನ್ನ ಜೀವಿತವು ಎತ್ತ ಸಾಗುತ್ತಿದೆ, ತನ್ನಲ್ಲಿದ್ದ ಕನಸುಗಳಿಗೇನಾದವು? ಭವಿಷ್ಯತ್ತಿನಲ್ಲಿ ತನಗೇನಿದೆ? ಎಂಬುದರ ಬಗ್ಗೆ ಅವನು ಯೋಚಿಸಲಾರಂಭಿಸಿದನು. ಯೆಹೋವನ ಸಾಕ್ಷಿಗಳಲ್ಲಿ ಕೆಲವರೊಂದಿಗೆ ಅವನ ಭೇಟಿಯಾಯಿತು, ಮತ್ತು ಅವನು ಅವರ ಕೂಟಗಳಿಗೆ ಹಾಜರಾಗಲಾರಂಭಿಸಿದನು. ಕೆಲವು ವರ್ಷಗಳ ಹಿಂದೆ ಆಫ್ರಿಕದಲ್ಲಿ ಒಬ್ಬ ಸಾಕ್ಷಿಯು ತನಗೆ ಕೊಟ್ಟಿದ್ದ ಒಂದು ಟ್ರ್ಯಾಕ್ಟ್ ಅನ್ನು ಓದಿದ್ದು ಅವನ ನೆನಪಿಗೆ ಬಂತು. ಅದರಲ್ಲಿ, ಭೂಮಿಯ ಮೇಲೆ ಬರಲಿರುವ ಒಂದು ಪ್ರಮೋದವನ, ಮತ್ತು ಇಡೀ ಮಾನವಕುಲದ ಮೇಲೆ ಆಳಲಿರುವ ಒಂದು ಸ್ವರ್ಗೀಯ ಸರಕಾರದ ಕುರಿತಾಗಿ ವರ್ಣಿಸಲಾಗಿತ್ತು. ಆದರೆ ಅದು ನಿಜವಾಗಿಯೂ ಸತ್ಯವಾಗಲಿತ್ತೊ?
ಏಬ್ರಹಾಮ್ ಹೇಳುವುದು: “ನಾನು ಹೋರಾಡುವುದರಲ್ಲಿ ಕಳೆದ ವರ್ಷಗಳೆಲ್ಲವೂ ವ್ಯರ್ಥವಾಗಿದ್ದವು, ಏಕೆಂದರೆ ಎಲ್ಲರಿಗೂ ನ್ಯಾಯವನ್ನು ದೊರಕಿಸಿಕೊಡುವ ಏಕೈಕ ಸರಕಾರವು ದೇವರ ರಾಜ್ಯವಾಗಿದೆ ಎಂಬುದನ್ನು ಬೈಬಲಿನಿಂದ ಕಲಿತುಕೊಂಡೆ.”
ಏಬ್ರಹಾಮ್ ಯೆಹೋವನ ಸಾಕ್ಷಿಯೋಪಾದಿ ದೀಕ್ಷಾಸ್ನಾನ ಪಡೆದುಕೊಂಡ ಸ್ವಲ್ಪ ಸಮಯದ ನಂತರ, ರಾಬರ್ಟ್ ಎಂಬ ಹೆಸರಿನ ಒಬ್ಬ ವ್ಯಕ್ತಿಯು, ಏಬ್ರಹಾಮ್ ಎಲ್ಲಿ ವಾಸಿಸುತ್ತಿದ್ದನೊ ಆ ಯೂರೋಪಿಯನ್ ನಗರಕ್ಕೇ ಆಫ್ರಿಕದಿಂದ ಓಡಿಬಂದನು. ರಾಬರ್ಟ್ ಮತ್ತು ಏಬ್ರಹಾಮ್ ಇಬ್ಬರೂ ಒಂದೇ ಯುದ್ಧದಲ್ಲಿ ಹೋರಾಡಿದ್ದರು. ಆದರೆ ವಿರುದ್ಧ ಪಕ್ಷಗಳಲ್ಲಿ. ಜೀವಿತದ ನಿಜ ಉದ್ದೇಶವೇನಾಗಿರಬಹುದು ಎಂಬುದರ ಬಗ್ಗೆ ರಾಬರ್ಟ್ ಎಷ್ಟೋ ಸಾರಿ ಯೋಚಿಸಿದ್ದನು. ಅವನೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದನು. ಮತ್ತು ಅವನು ಬೈಬಲಿನ ಕೆಲವೊಂದು ಭಾಗಗಳನ್ನು ಓದಿದ್ದರಿಂದ, ದೇವರ ಹೆಸರು ಯೆಹೋವ ಎಂಬುದು ಅವನಿಗೆ ಗೊತ್ತಿತ್ತು. ಆದುದರಿಂದ ಏಬ್ರಹಾಮನ ಸಭೆಯಲ್ಲಿದ್ದ ಸಾಕ್ಷಿಗಳು, ರಾಬರ್ಟ್ ತನ್ನ ಬೈಬಲನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವೆವು ಎಂದು ಹೇಳಿದಾಗ, ಅವನು ಕೂಡಲೇ ಒಪ್ಪಿಕೊಂಡನು.
ರಾಬರ್ಟ್ ವಿವರಿಸುವುದು: “ಸಾಕ್ಷಿಗಳನ್ನು ಪ್ರಥಮ ಬಾರಿ ಭೇಟಿಯಾದಂದಿನಿಂದಲೇ, ಅವರು ಯೆಹೋವ ಮತ್ತು ಯೇಸುವಿನ ಹೆಸರುಗಳನ್ನು ಉಪಯೋಗಿಸುತ್ತಿದ್ದ ರೀತಿ, ಮತ್ತು ಅವರಿಬ್ಬರೂ ಪ್ರತ್ಯೇಕ ವ್ಯಕ್ತಿಗಳಾಗಿದ್ದಾರೆಂಬುದನ್ನು ಅವರು ಅಂಗೀಕರಿಸುತ್ತಿದ್ದ ಸಂಗತಿಯಿಂದ ನಾನು ತುಂಬ ಪ್ರಭಾವಿತನಾದೆ. ಈ ಸಂಗತಿಗಳು ನಾನು ಈಗಾಗಲೇ ಬೈಬಲಿನಿಂದ ತಿಳಿದುಕೊಂಡಿದ್ದ ವಿಷಯಗಳೊಂದಿಗೆ ಹೊಂದಿಕೆಯಲ್ಲಿದ್ದವು. ಅದಲ್ಲದೆ ಸಾಕ್ಷಿಗಳು ನೀಟಾಗಿ ಉಡುಪನ್ನು ಧರಿಸುತ್ತಾರೆ ಮತ್ತು ಒಬ್ಬ ವ್ಯಕ್ತಿಯು ಯಾವುದೇ ರಾಷ್ಟ್ರದವನಾಗಿರಲಿ ಅವನಿಗೆ ದಯೆಯನ್ನು ತೋರಿಸುತ್ತಾರೆ. ಈ ಸಂಗತಿಗಳು ನನ್ನ ಮನಸ್ಸಿನ ಮೇಲೆ ತುಂಬ ಗಾಢವಾದ ಪರಿಣಾಮವನ್ನು ಬೀರಿದವು.”
ಶತ್ರುಗಳು ಮಿತ್ರರಾಗುತ್ತಾರೆ
ಹಿಂದೆ ಶತ್ರುಗಳಾಗಿದ್ದ ರಾಬರ್ಟ್ ಮತ್ತು ಏಬ್ರಹಾಮ್ ಈಗ ತುಂಬ ಆಪ್ತ ಮಿತ್ರರಾಗಿದ್ದಾರೆ. ಅವರಿಬ್ಬರೂ ಒಂದೇ ಸಭೆಯಲ್ಲಿ ಪೂರ್ಣ ಸಮಯದ ಸೌವಾರ್ತಿಕರೋಪಾದಿ ಸೇವೆ ಸಲ್ಲಿಸುತ್ತಿದ್ದಾರೆ. “ಯುದ್ಧದ ಸಮಯದಲ್ಲಿ, ನೆರೆರಾಷ್ಟ್ರಗಳ ಜನರು, ಅದರಲ್ಲೂ ಒಂದೇ ಧರ್ಮಕ್ಕೆ ಸೇರಿದವರು, ಪರಸ್ಪರರನ್ನು ಹೇಗೆ ದ್ವೇಷಿಸಸಾಧ್ಯವೆಂದು ನಾನು ಯೋಚಿಸುತ್ತಿದ್ದೆ” ಎಂದು ಏಬ್ರಹಾಮ್ ವಿವರಿಸುತ್ತಾನೆ. “ರಾಬರ್ಟ್ ಮತ್ತು ನಾನು ಹಿಂದೆ ಒಂದೇ ಚರ್ಚಿಗೆ ಸೇರಿದವರಾಗಿದ್ದೆವು, ಆದರೂ ನಾವು ವಿರುದ್ಧ ಪಕ್ಷಗಳಲ್ಲಿ ಯುದ್ಧ ಮಾಡುವುದಕ್ಕೆ ಹೊರಟಿದ್ದೆವು. ಆದರೆ ಈಗ ನಾವು ಯೆಹೋವನ ಸಾಕ್ಷಿಗಳಾಗಿದ್ದೇವೆ, ನಮ್ಮ ಧರ್ಮವೇ ನಮ್ಮನ್ನು ಒಂದುಗೂಡಿಸಿದೆ.”
ರಾಬರ್ಟ್ ಕೂಡಿಸುವುದು: “ವ್ಯತ್ಯಾಸ ಇರುವುದು ಇಲ್ಲಿಯೇ. ನಾವೀಗ ಯಾವ ಧರ್ಮಕ್ಕೆ ಸೇರಿದ್ದೇವೊ, ಅದು ನಮ್ಮನ್ನು ಒಂದು ನಿಜವಾದ ಸಹೋದರತ್ವದ ಭಾಗವನ್ನಾಗಿ ಮಾಡುತ್ತದೆ. ಆದುದರಿಂದ ನಾವು ಇನ್ನು ಮುಂದೆ ಎಂದೂ ಯುದ್ಧದಲ್ಲಿ ಹೋರಾಡದಿರುವೆವು.” ಹಿಂದೆ ಶತ್ರುಗಳಾಗಿದ್ದ ಈ ವ್ಯಕ್ತಿಗಳ ಹೃದಯಗಳ ಮೇಲೆ ಬೈಬಲಿನ ಶಕ್ತಿಯುತವಾದ ಸಂದೇಶವು ಪ್ರಭಾವವನ್ನು ಬೀರಿದೆ. ಅವರಲ್ಲಿದ್ದ ದ್ವೇಷ ಮತ್ತು ಕಹಿಭಾವನೆಯ ಸ್ಥಾನದಲ್ಲಿ ಈಗ ಭರವಸೆ ಮತ್ತು ಸ್ನೇಹವು ರಾರಾಜಿಸುತ್ತಿದೆ.
ಏಬ್ರಹಾಮ್ ಮತ್ತು ರಾಬರ್ಟ್ ಯುದ್ಧದಲ್ಲಿ ಹೋರಾಡುತ್ತಿದ್ದ ಸಮಯದಲ್ಲೇ, ಇನ್ನಿಬ್ಬರು ಯುವಕರು ಎರಡು ನೆರೆರಾಷ್ಟ್ರಗಳ ನಡುವಿನ ಇನ್ನೊಂದು ಕದನದಲ್ಲಿ ವಿರುದ್ಧ ಪಕ್ಷಗಳಲ್ಲಿ ಹೋರಾಡುತ್ತಿದ್ದರು. ಆದರೆ ಅವರ ಹೃದಯಗಳನ್ನೂ ವಾಸಿಮಾಡಿಸುವಂಥ ಒಂದು ಶಕ್ತಿಯುತ ಔಷಧದೋಪಾದಿ ಬೈಬಲ್ ಕಾರ್ಯವೆಸಗಿತು. ಅದು ಹೇಗೆ?
ಶತ್ರುವಿನ ಸಂಹಾರ, ನಂತರ ವೀರಮರಣ
ಗೆಬ್ರಿಯಲ್ ಎಂಬ ವ್ಯಕ್ತಿಯು, ಧಾರ್ಮಿಕ ಕುಟುಂಬವೊಂದರಲ್ಲಿ ಹುಟ್ಟಿಬೆಳೆದವನಾಗಿದ್ದನು. ತನ್ನ ತಾಯಿನಾಡು, ಒಂದು ಪವಿತ್ರ ಯುದ್ಧದ ಸಂಕಷ್ಟದಲ್ಲಿ ಸಿಲುಕಿಕೊಂಡಿದೆಯೆಂದು ಅವನಿಗೆ ಕಲಿಸಲಾಯಿತು. ಆದುದರಿಂದ ಅವನಿಗೆ 19 ವರ್ಷ ತುಂಬುತ್ತಲೆ ಅವನು ಮಿಲಿಟರಿಯಲ್ಲಿ ಭರ್ತಿಯಾಗಿ, ರಣರಂಗದಲ್ಲಿ ಹೋರಾಟವು ನಡೆಯುತ್ತಿರುವ ಕ್ಷೇತ್ರಕ್ಕೆ ಹೋಗಲಿಕ್ಕಾಗಿ ವಿನಂತಿಸಿಕೊಂಡನು. 13 ತಿಂಗಳುಗಳ ವರೆಗೆ ಅವನು ಭಾರೀ ಕದನದಲ್ಲಿ ಒಳಗೂಡಿದ್ದನು. ಕೆಲವೊಮ್ಮೆ ಅವರ ಶತ್ರುಗಳು ಕೇವಲ ಒಂದೂವರೆ ಕಿಲೊಮೀಟರ್‌ನಷ್ಟು ದೂರದಲ್ಲಿ ಇರುತ್ತಿದ್ದರು. ಅವನು ಹೇಳುವುದು: “ನನಗೆ ಒಂದು ಸಂದರ್ಭ ವಿಶೇಷವಾಗಿ ನೆನಪಿದೆ. ನಮ್ಮ ಶತ್ರುಗಳು ಆ ರಾತ್ರಿ ದಾಳಿಮಾಡಲಿದ್ದಾರೆಂದು ನಮ್ಮ ಕಮಾಂಡರ್ ಹೇಳಿದರು. ಆದುದರಿಂದ ನಾವು ಎಷ್ಟು ಉದ್ರಿಕ್ತರಾಗಿದ್ದೆವೆಂದರೆ, ಇಡೀ ರಾತ್ರಿ ನಾವು ತೋಪು ಸಿಡಿಗುಂಡುಗಳನ್ನು ಹಾರಿಸುತ್ತಾ ಇದ್ದೆವು.” ನೆರೆರಾಷ್ಟ್ರದ ಜನರು ತನ್ನ ಶತ್ರುಗಳಾಗಿದ್ದಾರೆ, ಆದುದರಿಂದ ಅವರನ್ನು
ಕೊಲ್ಲಲೇಬೇಕೆಂಬುದು ಅವನ ಅಭಿಪ್ರಾಯವಾಗಿತ್ತು. “ಸಾಧ್ಯವಿರುವಷ್ಟು ಹೆಚ್ಚು ಜನರನ್ನು ಕೊಲ್ಲಬೇಕೆಂಬುದು ನನ್ನ ಯೋಚನೆಯಾಗಿತ್ತು. ಅನಂತರ, ನನ್ನ ಹೆಚ್ಚಿನ ಸ್ನೇಹಿತರಂತೆ, ನಾನೂ ವೀರಮರಣವನ್ನು ಬಯಸುತ್ತಿದ್ದೆ.”ಆದರೆ ಸಮಯಾನಂತರ ಗೆಬ್ರಿಯಲ್ ಇವುಗಳೆಲ್ಲವುಗಳಿಂದ ರೋಸಿಹೋದನು. ಅವನು ಪರ್ವತಗಳಿಗೆ ಓಡಿ, ಗಡಿ ದಾಟಿ ಒಂದು ತಟಸ್ಥ ರಾಷ್ಟ್ರದೊಳಗೆ ನುಸುಳಿದನು. ಅಲ್ಲಿಂದ ಅವನು ಯೂರೋಪಿಗೆ ಪ್ರಯಾಣಿಸಿದನು. ಜೀವಿತವು ಏಕೆ ಇಷ್ಟೊಂದು ಕಷ್ಟಕರವಾಗಿದೆ, ಸಮಸ್ಯೆಗಳು ದೇವರಿಂದ ಬಂದ ಶಿಕ್ಷೆಗಳಾಗಿವೆಯೊ ಎಂದು ಅವನು ಯಾವಾಗಲೂ ದೇವರಿಗೆ ಕೇಳುತ್ತಾ ಇದ್ದನು. ಅನಂತರ ಅವನಿಗೆ ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕವಾಯಿತು. ಅವರು ಅವನಿಗೆ, ಇಂದು ಜೀವಿತದಲ್ಲಿ ಏಕೆ ಸಮಸ್ಯೆಗಳೇ ತುಂಬಿಕೊಂಡಿವೆ ಎಂಬ ಕಾರಣವನ್ನು ಬೈಬಲಿನಿಂದ ತೋರಿಸಿದರು.—ಮತ್ತಾಯ 24:3-14; 2 ತಿಮೊಥೆಯ 3:1-5.
ಗೆಬ್ರಿಯಲ್, ಬೈಬಲ್ ಅನ್ನು ಎಷ್ಟು ಹೆಚ್ಚಾಗಿ ಕಲಿತುಕೊಂಡನೊ, ಅದರಲ್ಲಿ ಸತ್ಯವಿದೆಯೆಂಬುದು ಅವನಿಗೆ ಅಷ್ಟೇ ಹೆಚ್ಚು ಮನವರಿಕೆಯಾಯಿತು. “ನಾವು ಪ್ರಮೋದವನ ಭೂಮಿಯಲ್ಲಿ ಸದಾ ಜೀವಿಸಬಹುದೆಂಬುದನ್ನು ನಾನು ಕಲಿತುಕೊಂಡೆ. ವಿಚಿತ್ರ ಸಂಗತಿಯೇನೆಂದರೆ, ನಾನು ಚಿಕ್ಕವನಾಗಿದ್ದಾಗ ಇದಕ್ಕಾಗಿಯೇ ಹಂಬಲಿಸುತ್ತಿದ್ದೆ.” ಬೈಬಲ್ ಗೆಬ್ರಿಯಲನಿಗೆ ಸಾಂತ್ವನವನ್ನು ಕೊಟ್ಟಿತು ಮತ್ತು ಅವನ ಕದಡಿದ ಹೃದಯವನ್ನು ಶಾಂತಗೊಳಿಸಿತು. ಅವನ ಅತಿ ಗಾಢವಾದ ಭಾವನಾತ್ಮಕ ಗಾಯಗಳು ವಾಸಿಯಾಗಲಾರಂಭಿಸಿದವು. ಆದುದರಿಂದ, ಹಿಂದೆ ತನ್ನ ಶತ್ರುವಾಗಿದ್ದ ಡ್ಯಾನಿಯೇಲನನ್ನು ಅವನು ಭೇಟಿಯಾದಾಗ ಅವನ ಕಡೆಗೆ ಯಾವುದೇ ದ್ವೇಷದ ಭಾವನೆ ಅವನಲ್ಲಿರಲಿಲ್ಲ. ಆದರೆ ಡ್ಯಾನಿಯೇಲ್ ಯೂರೋಪಿಗೆ ಬಂದದ್ದೇಕೆ?
“ನೀನು ನಿಜವಾಗಿ ಅಸ್ತಿತ್ವದಲ್ಲಿರುವಲ್ಲಿ, ದಯವಿಟ್ಟು ನನಗೆ ಸಹಾಯಮಾಡು!”
ಡ್ಯಾನಿಯೇಲ್ ಒಬ್ಬ ಕ್ಯಾಥೊಲಿಕನಾಗಿ ಬೆಳೆದವನಾಗಿದ್ದನು. ಅವನ 18ನೆಯ ವಯಸ್ಸಿನಲ್ಲಿ ಅವನನ್ನು ಒತ್ತಾಯದಿಂದ ಮಿಲಿಟರಿಯಲ್ಲಿ ಭರ್ತಿಮಾಡಿಸಲಾಯಿತು. ಗೆಬ್ರಿಯಲ್ ಹೋರಾಡುತ್ತಿದ್ದ ಯುದ್ಧದಲ್ಲಿ ಅವನೂ ಹೋರಾಡುವಂತೆ ಕಳುಹಿಸಲಾಯಿತು. ಆದರೆ, ಇವನು ಮಾತ್ರ ವಿರೋಧ ಪಕ್ಷದಲ್ಲಿದ್ದನು. ಡ್ಯಾನಿಯೇಲನು ಯುದ್ಧ ನಡೆಯುತ್ತಿದ್ದ ಕ್ಷೇತ್ರಕ್ಕೆ ಹತ್ತಿರದಲ್ಲಿದ್ದನು. ಒಮ್ಮೆ ಅವನು ಒಂದು ಟ್ಯಾಂಕ್‌ನಲ್ಲಿದ್ದಾಗ, ಸ್ಫೋಟಕವೊಂದು ಅದಕ್ಕೆ ಬಡಿಯಿತು. ಇದರಿಂದಾಗಿ ಅವನ ಸ್ನೇಹಿತರು ಕೊಲ್ಲಲ್ಪಟ್ಟರು ಮತ್ತು ಅವನಿಗೆ ಗಂಭೀರವಾದ ಗಾಯಗಳಾದವು ಮತ್ತು ಶತ್ರುಗಳು ಅವನನ್ನು ಸೆರೆಹಿಡಿದೊಯ್ದರು. ಅನೇಕ ತಿಂಗಳುಗಳ ವರೆಗೆ ಅವನು ಒಂದು ಆಸ್ಪತ್ರೆಯಲ್ಲಿ ಮತ್ತು ತದನಂತರ ಶಿಬಿರದಲ್ಲಿ ಬಿದ್ದುಕೊಂಡಿದ್ದನು. ಅನಂತರ ಅವನನ್ನು ಒಂದು ತಟಸ್ಥ ರಾಷ್ಟ್ರಕ್ಕೆ ಗಡೀಪಾರುಮಾಡಲಾಯಿತು. ಮನೆಮಠವಿಲ್ಲದವನಾಗಿ, ಒಬ್ಬನೇ ಇದ್ದದ್ದರಿಂದ ಅವನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದನು. ಆದರೆ, ಅವನು ದೇವರಿಗೆ ಹೀಗೆ ಪ್ರಾರ್ಥಿಸಿದನು: “ನೀನು ನಿಜವಾಗಿ ಅಸ್ತಿತ್ವದಲ್ಲಿರುವಲ್ಲಿ, ದಯವಿಟ್ಟು ನನಗೆ ಸಹಾಯಮಾಡು!” ಮರುದಿನವೇ, ಯೆಹೋವನ ಸಾಕ್ಷಿಗಳು ಅವನನ್ನು ಭೇಟಿಮಾಡಿದರು. ಮತ್ತು ಅವನಿಗಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟರು. ಕೊನೆಯಲ್ಲಿ, ಅವನು ಒಬ್ಬ ನಿರಾಶ್ರಿತನೋಪಾದಿ ಯೂರೋಪಿಗೆ ಪ್ರಯಾಣ ಬೆಳೆಸಿದನು. ಅಲ್ಲಿ ತಲಪಿದ ನಂತರ ಅವನು ಪುನಃ ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಮಾಡಲಾರಂಭಿಸಿದನು ಮತ್ತು ಬೈಬಲ್ ಅಭ್ಯಾಸ ಮಾಡಿದನು. ಅವನು ಕಲಿತಂಥ ಸಂಗತಿಗಳು ಅವನಿಗಿದ್ದ ಚಿಂತೆ ಮತ್ತು ಕಹಿಭಾವನೆಯನ್ನು ಕಡಿಮೆಗೊಳಿಸಿದವು.
ಈಗ, ಗೆಬ್ರಿಯಲ್ ಮತ್ತು ಡ್ಯಾನಿಯೇಲ್ ಒಳ್ಳೆಯ ಸ್ನೇಹಿತರಾಗಿದ್ದು, ದೀಕ್ಷಾಸ್ನಾನಪಡೆದಿರುವ ಯೆಹೋವನ ಸಾಕ್ಷಿಗಳೋಪಾದಿ ಒಂದು ಆತ್ಮಿಕ ಸಹೋದರತ್ವದಲ್ಲಿ ಐಕ್ಯರಾಗಿದ್ದಾರೆ. ಗೆಬ್ರಿಯಲ್ ಹೇಳುವುದು: “ಯೆಹೋವನಿಗಾಗಿರುವ ನನ್ನ ಪ್ರೀತಿ ಮತ್ತು ಬೈಬಲಿನ ಕುರಿತಾದ ಜ್ಞಾನವು, ನಾನು ವಿಷಯಗಳನ್ನು ಆತನ ದೃಷ್ಟಿಕೋನದಿಂದ ನೋಡುವಂತೆ ಸಹಾಯಮಾಡಿದೆ. ಈಗ ಡ್ಯಾನಿಯೇಲ್ ನನ್ನ ಶತ್ರುವಲ್ಲ. ಕೆಲವು ವರ್ಷಗಳ ಹಿಂದೆಯಾದರೋ ನಾನು ಅವನನ್ನು ಸಂತೋಷದಿಂದ ಕೊಂದುಹಾಕುತ್ತಿದ್ದೆನೋ ಏನೋ. ಆದರೆ ಈಗ ನಾನು ತದ್ವಿರುದ್ಧವಾದುದ್ದನ್ನು, ಅಂದರೆ ನಾನು ಅವನಿಗಾಗಿ ಸಾಯಲು ಸಿದ್ಧನಿರುವಂತೆ ಬೈಬಲ್ ಕಲಿಸಿದೆ.”
“ಬೇರೆ ಬೇರೆ ಧರ್ಮಗಳ ಮತ್ತು ದೇಶಗಳ ಜನರು ಒಬ್ಬರನ್ನೊಬ್ಬರು ಕೊಲ್ಲುವುದನ್ನು ನಾನು ನೋಡಿದೆ. ಮತ್ತು ಒಂದೇ ಧರ್ಮಕ್ಕೆ ಸೇರಿದವರು ಸಹ ವಿರುದ್ಧ ಪಕ್ಷದಲ್ಲಿರುವ ತಮ್ಮ ಧರ್ಮದವರನ್ನೇ ಕೊಲ್ಲುತ್ತಿದ್ದರು. ಇದೆಲ್ಲವನ್ನು ನೋಡಿದಾಗ, ಇದಕ್ಕೆ ದೇವರೇ ಜವಾಬ್ದಾರನೆಂದು ನನಗನಿಸುತ್ತಿತ್ತು.
ಆದರೆ, ಈ ಎಲ್ಲ ಯುದ್ಧಗಳ ಹಿಂದಿರುವವನು ಸೈತಾನನೇ ಎಂದು ನನಗೆ ಈಗ ಗೊತ್ತಾಗಿದೆ. ಗೆಬ್ರಿಯಲ್ ಮತ್ತು ನಾನು ಈಗ ಜೊತೆ ವಿಶ್ವಾಸಿಗಳಾಗಿದ್ದೇವೆ. ನಾವು ಇನ್ನೆಂದೂ ಹೋರಾಡುವುದಿಲ್ಲ!”“ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು”
ಏಬ್ರಹಾಮ್, ರಾಬರ್ಟ್, ಗೆಬ್ರಿಯಲ್ ಮತ್ತು ಡ್ಯಾನಿಯೇಲ್ ಇಷ್ಟೊಂದು ದೊಡ್ಡ ಬದಲಾವಣೆಗಳನ್ನು ಮಾಡಿದ್ದೇಕೆ? ಅವರು ತಮ್ಮ ಹೃದಯಗಳಲ್ಲಿ ಆಳವಾಗಿ ಬೇರೂರಿಬಿಟ್ಟಿದ್ದ ದ್ವೇಷ ಮತ್ತು ದುಃಖವನ್ನು ಹೇಗೆ ತೆಗೆದುಹಾಕಲು ಶಕ್ತರಾದರು?
ಈ ಪುರುಷರಲ್ಲಿ ಪ್ರತಿಯೊಬ್ಬನು, “ಸಜೀವವಾದದ್ದು, ಕಾರ್ಯಸಾಧಕವಾದದ್ದು” ಆಗಿರುವ ಬೈಬಲನ್ನು ಓದಿದರು, ಅದರ ಕುರಿತಾಗಿ ಮನನ ಮಾಡಿದರು ಮತ್ತು ಅದರಲ್ಲಿರುವ ಸತ್ಯವನ್ನು ಕಲಿತುಕೊಂಡರು. (ಇಬ್ರಿಯ 4:12) ಬೈಬಲಿನ ಗ್ರಂಥಕರ್ತನು ಮಾನವಕುಲದ ಸೃಷ್ಟಿಕರ್ತನಾಗಿದ್ದಾನೆ. ಆದುದರಿಂದ, ಕಿವಿಗೊಡಲು ಮತ್ತು ಕಲಿಯಲು ಸಿದ್ಧನಾಗಿರುವ ಒಬ್ಬ ವ್ಯಕ್ತಿಯ ಹೃದಯವನ್ನು ಒಳ್ಳೆಯದಕ್ಕಾಗಿ ಪ್ರಭಾವಿಸುವುದು ಹೇಗೆಂಬುದು ಆತನಿಗೆ ತಿಳಿದಿದೆ. “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” ಬೈಬಲನ್ನು ಓದುವ ವ್ಯಕ್ತಿಯು, ಅದು ತನ್ನನ್ನು ಮಾರ್ಗದರ್ಶಿಸುವಂತೆ ಬಿಡುವಲ್ಲಿ ಅದು ಅವನಿಗೆ ಹೊಸ ಮೌಲ್ಯಗಳು ಮತ್ತು ಮಟ್ಟಗಳನ್ನು ಕೊಡುತ್ತದೆ. ಯೆಹೋವನು ವಿಷಯಗಳನ್ನು ಹೇಗೆ ದೃಷ್ಟಿಸುತ್ತಾನೆಂಬುದನ್ನು ಅವನು ಕಲಿಯಲಾರಂಭಿಸುತ್ತಾನೆ. ಇದರಿಂದಾಗಿ ಅವನಿಗೆ ಅನೇಕ ಪ್ರಯೋಜನಗಳು ಸಿಗುತ್ತವೆ. ಅವುಗಳಲ್ಲಿ ಒಂದು, ಯುದ್ಧದಿಂದಾಗುವ ಗಾಯಗಳ ವಾಸಿಮಾಡುವಿಕೆಯಾಗಿದೆ.—2 ತಿಮೊಥೆಯ 3:16.
ಯಾವುದೇ ರಾಷ್ಟ್ರ, ಜಾತಿ, ಅಥವಾ ಜನಾಂಗೀಯ ಗುಂಪು ಇನ್ನೊಂದಕ್ಕಿಂತ ಶ್ರೇಷ್ಠವಾಗಿದೆ ಅಥವಾ ಕೀಳಾಗಿದೆಯೆಂದು ದೇವರ ವಾಕ್ಯವು ಹೇಳುವುದಿಲ್ಲ. “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” ಈ ಸಂಗತಿಯನ್ನು ಅಂಗೀಕರಿಸುವ ವಾಚಕನು, ಜಾತೀಯ ಅಥವಾ ರಾಷ್ಟ್ರೀಯ ದ್ವೇಷದ ಯಾವುದೇ ಭಾವನೆಗಳನ್ನು ನಿಧಾನವಾಗಿ ತೆಗೆದುಹಾಕಲು ಶಕ್ತನಾಗುತ್ತಾನೆ.—ಅ. ಕೃತ್ಯಗಳು 10:34, 35.
ಶೀಘ್ರದಲ್ಲೇ ಸದ್ಯದ ಮಾನವಾಳ್ವಿಕೆಯ ವ್ಯವಸ್ಥೆಯನ್ನು ದೇವರು ತೆಗೆದುಹಾಕಿ, ತನ್ನ ಮೆಸ್ಸೀಯನ ರಾಜ್ಯವನ್ನು ತರುವನೆಂದು ಬೈಬಲ್ ಪ್ರವಾದನೆಗಳು ಸೂಚಿಸುತ್ತವೆ. ಈ ಸರಕಾರದ ಮೂಲಕ, ದೇವರು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿ”ಬಿಡುವನು. ಯುದ್ಧಗಳಿಗೆ ಒತ್ತಾಸೆಕೊಡುವ ಮತ್ತು ಅವುಗಳಲ್ಲಿ ಹೋರಾಡುವಂತೆ ಜನರನ್ನು ಹುರಿದುಂಬಿಸುವ ಸಂಸ್ಥೆಗಳು ತೆಗೆದುಹಾಕಲ್ಪಡುವವು. ಯುದ್ಧಕ್ಕೆ ಬಲಿಯಾದವರು ಉಜ್ಜೀವಿಸಲ್ಪಟ್ಟು, ಪ್ರಮೋದವನ ಭೂಮಿಯಲ್ಲಿ ಜೀವಿಸುವ ಅವಕಾಶವನ್ನು ಪಡೆಯುವರು. ಆಗ ಯಾರೂ, ಒಬ್ಬ ಆಕ್ರಮಣಕಾರ ಅಥವಾ ದಬ್ಬಾಳಿಕೆಗಾರನಿಂದ ಓಡಿಹೋಗುವ ಅಗತ್ಯವಿರುವುದಿಲ್ಲ.—ಕೀರ್ತನೆ 46:9; ದಾನಿಯೇಲ 2:44; ಅ. ಕೃತ್ಯಗಳು 24:15.
ಆ ಸಮಯದಲ್ಲಿ ಜೀವಿಸುವ ಮನುಷ್ಯರ ಕುರಿತಾಗಿ ಬೈಬಲ್ ಹೇಳುವುದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; . . . ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು.” ವಾಸಿಮಾಡಲಾಗದಂತಹ ಯಾವುದೇ ಹಾನಿ ಅಥವಾ ಗಾಯವು ಅಲ್ಲಿರದು. ಅಂಥ ನಿರೀಕ್ಷೆಯಲ್ಲಿ ನಂಬಿಕೆಯನ್ನಿಡುವಾಗ, ಅದು ನಿಧಾನವಾಗಿ ಒಬ್ಬ ವ್ಯಕ್ತಿಯ ಹೃದಯದಲ್ಲಿ ತುಂಬಿರುವ ದುಃಖ ಮತ್ತು ನೋವನ್ನು ತೆಗೆದುಹಾಕುತ್ತದೆ.—ಯೆಶಾಯ 65:21-23.
ನಿಜವಾಗಿಯೂ ಬೈಬಲ್ ಹೃದಯಕ್ಕಾಗಿ ಒಂದು ಶಕ್ತಿಯುತವಾದ ಔಷಧವಾಗಿದೆ. ಅದರ ಬೋಧನೆಗಳು ಈಗಾಗಲೇ ಯುದ್ಧದಿಂದಾಗಿರುವ ಗಾಯಗಳನ್ನು ವಾಸಿಮಾಡುತ್ತಿವೆ. ಒಂದು ಕಾಲದಲ್ಲಿ ಶತ್ರುಗಳಾಗಿದ್ದವರು, ಈಗ ಒಂದು ಅಂತಾರಾಷ್ಟ್ರೀಯ ಸಹೋದರತ್ವದೊಳಗೆ ಐಕ್ಯಗೊಳಿಸಲ್ಪಡುತ್ತಿದ್ದಾರೆ. ಈ ವಾಸಿಮಾಡುವಿಕೆಯ ಕಾರ್ಯವು, ದೇವರ ಹೊಸ ವ್ಯವಸ್ಥೆಯಲ್ಲೂ ಮುಂದುವರಿಯುವುದು. ಅದು, ಮನುಷ್ಯರ ಹೃದಯದಲ್ಲಿರುವ ದ್ವೇಷ ಮತ್ತು ಕಹಿಭಾವನೆ, ದುಃಖ ಮತ್ತು ನೋವು ಇಲ್ಲವಾಗುವ ವರೆಗೂ ಮುಂದುವರಿಯುವುದು. ಮತ್ತು “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು” ಎಂದು ಸೃಷ್ಟಿಕರ್ತನು ಮಾತುಕೊಡುತ್ತಾನೆ.—ಯೆಶಾಯ 65:17.
[ಪಾದಟಿಪ್ಪಣಿ]
^ ಪ್ಯಾರ. 2 ಈ ಲೇಖನದಲ್ಲಿರುವ ಕೆಲವೊಂದು ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 4ರಲ್ಲಿರುವ ಚಿತ್ರ ಕೃಪೆ]
ನಿರಾಶ್ರಿತರ ಶಿಬಿರ: UN PHOTO 186811/J. Isaac
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನಾನು ಹೋರಾಡುವುದರಲ್ಲಿ ಕಳೆದ ವರ್ಷಗಳೆಲ್ಲವೂ ವ್ಯರ್ಥ ಎಂಬುದನ್ನು ಬೈಬಲಿನಿಂದ ಕಲಿತುಕೊಂಡೆ”
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ಹಿಂದೆ ಶತ್ರುಗಳಾಗಿದ್ದವರ ಹೃದಯಗಳ ಮೇಲೆ ಬೈಬಲ್ ಶಕ್ತಿಯುತವಾದ ಪ್ರಭಾವಬೀರಬಲ್ಲದು
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ದ್ವೇಷ ಮತ್ತು ಕಹಿಭಾವನೆಯ ಸ್ಥಾನದಲ್ಲಿ ನಿಧಾನವಾಗಿ ಭರವಸೆ ಮತ್ತು ಸ್ನೇಹವು ಚಿಗುರಿತು
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲನ್ನು ಓದುವ ವ್ಯಕ್ತಿಯು, ಅದು ತನ್ನನ್ನು ಮಾರ್ಗದರ್ಶಿಸುವಂತೆ ಬಿಡುವಲ್ಲಿ ಅದು ಅವನಿಗೆ ಹೊಸ ಮೌಲ್ಯಗಳು ಮತ್ತು ಮಟ್ಟಗಳನ್ನು ಕೊಡುತ್ತದೆ
[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]
ಹಿಂದೆ ಶತ್ರುಗಳಾಗಿದ್ದವರು ಈಗ ಒಂದು ಅಂತಾರಾಷ್ಟ್ರೀಯ ಸಹೋದರತ್ವದಲ್ಲಿ ಐಕ್ಯಗೊಳಿಸಲ್ಪಡುತ್ತಿದ್ದಾರೆ
[ಪುಟ 4ರಲ್ಲಿರುವ ಚಿತ್ರ ಕೃಪೆ]
ನಿರಾಶ್ರಿತರ ಶಿಬಿರ: UN PHOTO 186811/J. Isaac