ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುದ್ಧದಿಂದಾಗುವ ಗಾಯಗಳು

ಯುದ್ಧದಿಂದಾಗುವ ಗಾಯಗಳು

ಯುದ್ಧದಿಂದಾಗುವ ಗಾಯಗಳು

“ಯುದ್ಧದಲ್ಲಿ ಯಾರೂ ವಿಜೇತರಿಲ್ಲ, ಎಲ್ಲರೂ ಸೋಲುವವರೇ” ಎಂದು IIನೆಯ ವಿಶ್ವ ಯುದ್ಧದಲ್ಲಿ ಹೋರಾಡಿದ ಒಬ್ಬ ಮಾಜಿ ಸೈನಿಕನು ಹೇಳಿದನು. ಅವನ ಈ ಮಾತುಗಳೊಂದಿಗೆ ಅನೇಕರು ಸಮ್ಮತಿಸಬಹುದು. ಯುದ್ಧದ ವೆಚ್ಚವು ಭಯಂಕರ; ಮತ್ತು ಗೆದ್ದವರು ಹಾಗೂ ಸೋತವರು ಇಬ್ಬರೂ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಸಶಸ್ತ್ರ ಕದನವು ನಿಂತ ಬಳಿಕವೂ ಕೋಟಿಗಟ್ಟಲೆ ಜನರು ಯುದ್ಧದಿಂದಾಗಿರುವ ಭೀಕರವಾದ ಗಾಯಗಳಿಂದ ನರಳುತ್ತಿರುತ್ತಾರೆ.

ಆ ಗಾಯಗಳು ಯಾವುವು? ಯುದ್ಧವು ಬಹಳಷ್ಟು ಜನರನ್ನು ಸಾಯಿಸಿ, ಎಷ್ಟೋ ಮಂದಿ ಸ್ತ್ರೀಯರನ್ನು ಮತ್ತು ಮಕ್ಕಳನ್ನು ವಿಧವೆಯರು ಹಾಗೂ ಅನಾಥರನ್ನಾಗಿ ಮಾಡುತ್ತದೆ. ಯುದ್ಧದಿಂದ ಕೆಲವರು ಪಾರಾಗಿ ಉಳಿದರೂ, ಅವರಿಗೆ ತೀವ್ರವಾದ ಶಾರೀರಿಕ ಗಾಯಗಳೊಂದಿಗೆ ಮಾನಸಿಕ ಗಾಯಗಳೂ ಆಗಿರುತ್ತವೆ. ಕೋಟಿಗಟ್ಟಲೆ ಜನರು ಮನೆಮಾರುಗಳನ್ನು ಕಳೆದುಕೊಳ್ಳುತ್ತಾರೆ ಅಥವಾ ನಿರಾಶ್ರಿತರಾಗಿ ಜೀವಿಸುವಂತೆ ಒತ್ತಾಯಿಸಲ್ಪಡುತ್ತಾರೆ. ಇಂತಹ ಕದನಗಳಿಂದ ಬದುಕುಳಿದವರ ಹೃದಯಗಳಲ್ಲಿ ಎಷ್ಟೊಂದು ದ್ವೇಷ ಮತ್ತು ದುಃಖವು ತುಂಬಿಕೊಂಡಿರಬಹುದು ಎಂಬುದನ್ನು ನೀವು ಕಲ್ಪಿಸಿಕೊಳ್ಳಬಹುದೊ?

ಕೊರೆಯುತ್ತಿರುವ ಗಾಯಗಳು

ಯುದ್ಧವು ನಿಲ್ಲಿಸಲ್ಪಟ್ಟಿರಬಹುದು, ಫಿರಂಗಿಗಳು ಮೌನವಾಗಿಬಿಟ್ಟಿರಬಹುದು, ಮತ್ತು ಸೈನಿಕರೆಲ್ಲರೂ ಮನೆಗೆ ಹೋಗಿರಬಹುದು. ಆದರೆ ಯುದ್ಧದಿಂದಾಗಿ ಜನರ ಹೃದಯಗಳಲ್ಲಿ ಅಚ್ಚೊತ್ತಲ್ಪಟ್ಟಿರುವ ಗಾಯಗಳು ಅವರನ್ನು ಕೊರೆಯುತ್ತಾ ಇರುತ್ತವೆ. ಮುಂದಿನ ಪೀಳಿಗೆಗಳು ಒಬ್ಬರು ಇನ್ನೊಬ್ಬರೆಡೆಗೆ, ಆಳವಾಗಿ ನೆಲೆಯೂರಿರುವ ಕಹಿಭಾವನೆಯನ್ನು ತಮ್ಮೊಳಗೇ ಪೋಷಿಸುತ್ತಿರುತ್ತವೆ. ಈ ರೀತಿಯಲ್ಲಿ, ಒಂದು ಯುದ್ಧದಿಂದಾಗಿರುವ ಗಾಯಗಳು, ಮುಂದಿನ ಯುದ್ಧಕ್ಕೆ ಮೂಲಕಾರಣವಾಗಿ ಪರಿಣಮಿಸಬಹುದು.

ದೃಷ್ಟಾಂತಕ್ಕಾಗಿ, Iನೆಯ ಲೋಕ ಯುದ್ಧವನ್ನು ವಿಧಿವಿಹಿತವಾಗಿ ಅಂತ್ಯಗೊಳಿಸಲು 1919ರಲ್ಲಿ ವರ್ಸೈ ಒಪ್ಪಂದಕ್ಕೆ ಸಹಿಹಾಕಲಾಯಿತು. ಈ ಒಪ್ಪಂದವು ಜರ್ಮನಿಯ ಮೇಲೆ ಅನೇಕ ಷರತ್ತುಗಳನ್ನು ವಿಧಿಸಿತು. ಆ ಷರತ್ತುಗಳು ಕಠೋರವೂ ಪ್ರತೀಕಾರಾತ್ಮಕವೂ ಆಗಿವೆಯೆಂದು ಜರ್ಮನಿಯ ಪ್ರಜೆಗಳಿಗನಿಸಿತು. ಆ ಒಪ್ಪಂದದ ಷರತ್ತುಗಳು, “ಜರ್ಮನ್‌ ಜನರಲ್ಲಿ ಅಸಮಾಧಾನವನ್ನು ಹುಟ್ಟಿಸಿ, ಸೇಡಿನ ಭಾವನೆಯನ್ನು ಅವರಲ್ಲಿ ಕೆರಳಿಸಿತು” ಎಂದು ದ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳಿತು. ಕೆಲವೊಂದು ವರ್ಷಗಳ ಬಳಿಕ, “ಆ ಶಾಂತಿ ಒಪ್ಪಂದದ ಕಡೆಗಿನ ಈ ಅಸಮಾಧಾನವೇ ಹಿಟ್ಲರನಿಗೆ ಮುಂದೆಬರಲು ಅವಕಾಶವನ್ನು ಕೊಟ್ಟಿತ್ತು” ಮತ್ತು IIನೆಯ ಲೋಕ ಯುದ್ಧಕ್ಕೆ ಕಾರಣವಾದ ಇತರ ಅಂಶಗಳಲ್ಲಿ ಒಂದಾಗಿತ್ತು.

IIನೆಯ ಲೋಕ ಯುದ್ಧವು ಪೋಲೆಂಡ್‌ನಲ್ಲಿ ಆರಂಭವಾಗಿ, ಅನಂತರ ಬಾಲ್ಕನ್‌ ಪ್ರದೇಶಗಳ ವರೆಗೆ ಹರಡಿತು. 1940ರ ದಶಕದಲ್ಲಿ ಆ ಪ್ರದೇಶದಲ್ಲಿದ್ದ ಜನಾಂಗೀಯ ಗುಂಪುಗಳು ಒಬ್ಬರಿನ್ನೊಬ್ಬರ ಮೇಲೆ ಬರಮಾಡಿಕೊಂಡ ಗಾಯಗಳೇ, 1990ರ ದಶಕಗಳಲ್ಲಿ ಆ ಬಾಲ್ಕನ್‌ ಪ್ರದೇಶಗಳಲ್ಲಿ ನಡೆದಂತಹ ಯುದ್ಧಕ್ಕೆ ದಾರಿಮಾಡಿಕೊಟ್ಟವು. “ದ್ವೇಷ ಮತ್ತು ಸೇಡಿನ ವಿಷ ಚಕ್ರವು, ನಮ್ಮ ಸದ್ಯದ ದಿನದ ವರೆಗೂ ತಲಪುತ್ತಾ, ವೇಗದಿಂದ ತಿರುಗುತ್ತಿರುವ ಒಂದು ಸುರುಳಿಯಾಗಿಬಿಟ್ಟಿದೆ” ಎಂದು ಜರ್ಮನ್‌ ವಾರ್ತಾಪತ್ರಿಕೆಯಾದ ಡೆ ಸಿಟ್‌ ಹೇಳಿತು.

ಮಾನವಕುಲವು ಶಾಂತಿಯಿಂದ ಬಾಳಬೇಕಾದರೆ, ಮೊದಲು ಯುದ್ಧದಿಂದಾಗುವ ಗಾಯಗಳು ಖಂಡಿತವಾಗಿಯೂ ವಾಸಿಮಾಡಲ್ಪಡಬೇಕು. ಆದರೆ ಇದು ಹೇಗೆ ಸಾಧ್ಯ? ಈ ರೀತಿಯ ದ್ವೇಷ ಮತ್ತು ದುಃಖವನ್ನು ಅಳಿಸಿಹಾಕಲಿಕ್ಕಾಗಿ ಏನು ಮಾಡಸಾಧ್ಯವಿದೆ? ಯುದ್ಧದ ಗಾಯಗಳನ್ನು ಯಾರು ವಾಸಿಮಾಡಬಲ್ಲರು?

[ಪುಟ 2ರಲ್ಲಿರುವ ಚಿತ್ರ ಕೃಪೆ]

ಮುಖಪುಟ: Fatmir Boshnjaku

[ಪುಟ 3ರಲ್ಲಿರುವ ಚಿತ್ರ ಕೃಪೆ]

U.S. Coast Guard photo; UN PHOTO 158297/J. Isaac