ಆಡಳಿತ ಮಂಡಲಿಗೂ ಕಾನೂನುಬದ್ಧ ಸಂಘಟನೆಗೂ ಇರುವ ವ್ಯತ್ಯಾಸ
ಆಡಳಿತ ಮಂಡಲಿಗೂ ಕಾನೂನುಬದ್ಧ ಸಂಘಟನೆಗೂ ಇರುವ ವ್ಯತ್ಯಾಸ
ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ವಾರ್ಷಿಕ ಕೂಟಗಳು, 1885ರ ಜನವರಿ ತಿಂಗಳಿನಿಂದ ನಡೆಸಲ್ಪಡುತ್ತಿವೆ. 19ನೆಯ ಶತಮಾನದ ಕೊನೆಯಲ್ಲಿ ಅಭಿಷಿಕ್ತ ಕ್ರೈಸ್ತರ ಒಟ್ಟುಗೂಡಿಸುವಿಕೆಯು ನಡೆಯುತ್ತಿದ್ದಾಗ, ಈ ಸಂಘಟನೆಯ ಡೈರೆಕ್ಟರ್‌ಗಳು ಮತ್ತು ಅಧಿಕಾರಿಗಳು ಸ್ವರ್ಗೀಯ ನಿರೀಕ್ಷೆಯುಳ್ಳವರಾಗಿದ್ದರು. ವಾಸ್ತವದಲ್ಲಿ, ಅಂದಿನಿಂದ ಇಷ್ಟರ ತನಕ ಬಹುಮಟ್ಟಿಗೆ ಇದೇ ರೀತಿಯ ಸನ್ನಿವೇಶವಿತ್ತು.
ಆದರೆ ಒಂದೇ ಒಂದು ವಿನಾಯಿತಿ ಇತ್ತು. 1940ರಲ್ಲಿ, ಹೇಡನ್ ಸಿ. ಕವಿಂಗ್ಟನ್ ಎಂಬುವವರನ್ನು ಸೊಸೈಟಿಯ ಡೈರೆಕ್ಟರ್ ಆಗಿ ಆಯ್ಕೆಮಾಡಲಾಯಿತು. ಇವರು ಸೊಸೈಟಿಯ ಕಾನೂನು ಸಲಹೆಗಾರರೂ ಭೂನಿರೀಕ್ಷೆಯಿರುವ “ಬೇರೆ ಕುರಿ”ಗಳಲ್ಲಿ ಒಬ್ಬರೂ ಆಗಿದ್ದರು. (ಯೋಹಾನ 10:16) 1942ರಿಂದ 1945ರ ತನಕ ಇವರು ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆಮಾಡಿದರು. ಆ ಸಮಯದಲ್ಲಿ, ಪೆನ್ಸಿಲ್ವೇನಿಯ ಸಂಘಟನೆಯ ಎಲ್ಲ ಡೈರೆಕ್ಟರ್‌ಗಳು ಹಾಗೂ ಅಧಿಕಾರಿಗಳು ಅಭಿಷಿಕ್ತ ಕ್ರೈಸ್ತರಾಗಿರಬೇಕು ಎಂಬುದು ಯೆಹೋವನ ಚಿತ್ತವಾಗಿದೆ ಎಂದು ನೆನಸಲಾಗುತ್ತಿತ್ತು. ಆದುದರಿಂದ, ಈ ಚಿತ್ತಕ್ಕೆ ಅನುಸಾರವಾಗಿ ನಡೆಯಲಿಕ್ಕಾಗಿ, ಸಹೋದರ ಕವಿಂಗ್ಟನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಹೇಡನ್ ಸಿ. ಕವಿಂಗ್ಟನ್‌ರ ಸ್ಥಾನಕ್ಕೆ, ಬೋರ್ಡ್ ಆಫ್ ಡೈರೆಕ್ಟರ್‌ನ ಲೈಮನ್ ಎ. ಸ್ವಿಂಗಲ್ ಆಯ್ಕೆಯಾದರು. ಮತ್ತು ಫ್ರೆಡ್‌ರಿಕ್ ಡಬ್ಲ್ಯೂ. ಫ್ರಾನ್ಸ್ ಅವರು ಉಪಾಧ್ಯಕ್ಷರಾಗಿ ನೇಮಿಸಲ್ಪಟ್ಟರು.
ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ಎಲ್ಲ ಡೈರೆಕ್ಟರ್‌ಗಳು ಹಾಗೂ ಅಧಿಕಾರಿಗಳು ಅಭಿಷಿಕ್ತ ಕ್ರೈಸ್ತರಾಗಿರಬೇಕು ಎಂದು ಯೆಹೋವನ ಸೇವಕರು ಏಕೆ ನಂಬಿದ್ದರು? ಏಕೆಂದರೆ, ಆ ಸಮಯದಲ್ಲಿ ಬೋರ್ಡ್ ಆಫ್ ಡೈರೆಕ್ಟರ್‌ಗಳು ಮತ್ತು ಪೆನ್ಸಿಲ್ವೇನಿಯ ಸಂಘಟನೆಯ ಅಧಿಕಾರಿಗಳು, ಯಾವಾಗಲೂ ಸಂಪೂರ್ಣವಾಗಿ ಆತ್ಮಾಭಿಷಿಕ್ತ ಜನರಿಂದ ರಚಿಸಲ್ಪಟ್ಟಿದ್ದ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯೊಂದಿಗೆ ನಿಕಟವಾಗಿ ಗುರುತಿಸಲ್ಪಡುತ್ತಿದ್ದರು.
ಇತಿಹಾಸ ಪ್ರಸಿದ್ಧ ವಾರ್ಷಿಕ ಕೂಟ
ಪಿಟ್ಸ್‌ಬರ್ಗ್‌ನಲ್ಲಿ 1944ರ ಅಕ್ಟೋಬರ್ 2ರಂದು ನಡೆದ ವಾರ್ಷಿಕ ಕೂಟದಲ್ಲಿ, ಪೆನ್ಸಿಲ್ವೇನಿಯ ಸಂಘಟನೆಯ ಸದಸ್ಯರು ಅದರ ಶಾಸನಪತ್ರದಲ್ಲಿ (ಚಾರ್ಟರ್) ತಿದ್ದುಪಡಿಯನ್ನು ಮಾಡಲಿಕ್ಕಾಗಿ ಆರು ಠರಾವುಗಳನ್ನು ಅಂಗೀಕರಿಸಿದರು. ಸೊಸೈಟಿಯ ಕೆಲಸಕ್ಕೆ ಹಣಕಾಸನ್ನು ದಾನಮಾಡುವ ವ್ಯಕ್ತಿಗಳಿಗೆ ಮತಹಾಕುವ ಹಕ್ಕು ನೀಡಲ್ಪಡುವಂತೆ ಶಾಸನಪತ್ರವು ಅನುಮತಿಸಿತ್ತು. ಆದರೆ ಮೂರನೆಯ ತಿದ್ದುಪಡಿಯು ಈ ಒದಗಿಸುವಿಕೆಯನ್ನು ರದ್ದುಗೊಳಿಸಿತು. ಆ ವಾರ್ಷಿಕ ಕೂಟದ ಕುರಿತಾದ ಒಂದು ವರದಿಯು ತಿಳಿಸಿದ್ದು: “ಸೊಸೈಟಿಯ ಸದಸ್ಯತನವು ಕೇವಲ 500 ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಲ್ಪಡುವುದು . . . ಆಯ್ಕೆಮಾಡಲ್ಪಡುವ ಪ್ರತಿಯೊಬ್ಬ ವ್ಯಕ್ತಿಯು, ಸೊಸೈಟಿಯ ಪೂರ್ಣ ಸಮಯದ ಸೇವಕನಾಗಿರಬೇಕು ಅಥವಾ ಯೆಹೋವನ ಸಾಕ್ಷಿಗಳ ಕಂಪೆನಿಯ [ಸಭೆಯ] ಪಾರ್ಟ್ ಟೈಮ್ ಸೇವಕನಾಗಿರಬೇಕು ಮತ್ತು ಕರ್ತನ ಮನೋಭಾವವನ್ನು ತೋರಿಸಬೇಕು.”
ತದನಂತರ, ರಾಜ್ಯ ಕಾರ್ಯದ ಏಳಿಗೆಗಾಗಿ ಅವರು ಎಷ್ಟೇ ಹಣವನ್ನು ಕೊಡಲಿ, ಯೆಹೋವನಿಗೆ ಸಂಪೂರ್ಣ ಸಮರ್ಪಿತರಾದ ವ್ಯಕ್ತಿಗಳು ಮಾತ್ರವೇ ಡೈರೆಕ್ಟರುಗಳನ್ನು ಅವರ ಹುದ್ದೆಗೆ ಮತನೀಡಿ ಆರಿಸಬೇಕಿತ್ತು. ಈ ಏರ್ಪಾಡು, ಯೆಶಾಯ 60:17ರಲ್ಲಿ ಮುಂತಿಳಿಸಲ್ಪಟ್ಟಿರುವ ಪ್ರಗತಿಪರ ಸುಧಾರಣೆಗಳೊಂದಿಗೆ ಹೊಂದಿಕೆಯಲ್ಲಿತ್ತು. ಆ ವಚನದಲ್ಲಿ ನಾವು ಹೀಗೆ ಓದುತ್ತೇವೆ: “ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.” ‘ಅಧಿಪತಿಗಳು’ ಮತ್ತು ‘ಅಧಿಕಾರಿಗಳು’ ಎಂದು ಸಂಬೋಧಿಸುವಾಗ, ಈ ಪ್ರವಾದನೆಯು ಯೆಹೋವನ ಜನರ ನಡುವೆ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ಆಗುವಂತಹ ಪ್ರಗತಿಯನ್ನು ಸೂಚಿಸಿತು.
ಸಂಸ್ಥೆಯನ್ನು ದೇವಪ್ರಭುತ್ವ ಏರ್ಪಾಡಿಗನುಸಾರ ಮಾರ್ಪಡಿಸುವ ಈ ಪ್ರಮುಖ ಹೆಜ್ಜೆಯು, ದಾನಿಯೇಲ 8:14ರಲ್ಲಿ ತಿಳಿಸಲ್ಪಟ್ಟಿರುವ “ಉದಯಾಸ್ತಮಾನಗಳ ಎರಡು ಸಾವಿರದ ಮುನ್ನೂರರ” ಕಾಲಾವಧಿಯ ಕೊನೆಯಲ್ಲಿ ತೆಗೆದುಕೊಳ್ಳಲ್ಪಟ್ಟಿತು. ಆ ಸಮಯದಲ್ಲಿ “ಪವಿತ್ರ ಸ್ಥಳವು ಸುಸ್ಥಿತಿಗೆ ತರಲ್ಪಟ್ಟಿತು” (NW).
ಆದರೂ, 1944ರಲ್ಲಿ ನಡೆದ ಇತಿಹಾಸ ಪ್ರಸಿದ್ಧ ವಾರ್ಷಿಕ ಕೂಟದ ನಂತರ, ಅತಿ ಪ್ರಾಮುಖ್ಯವಾದ ಒಂದು ಪ್ರಶ್ನೆಯು ಹಾಗೆಯೇ ಉಳಿಯಿತು. ಆ ಸಮಯದಲ್ಲಿ ಆಡಳಿತ ಮಂಡಲಿಯು, ಪೆನ್ಸಿಲ್ವೇನಿಯ ಸಂಘಟನೆಯ ಏಳು ಮಂದಿ ಸದಸ್ಯರಿಂದ ಕೂಡಿದ ಬೋರ್ಡ್ ಆಫ್ ಡೈರೆಕ್ಟರ್‌ಗಳೊಂದಿಗೆ ನಿಕಟವಾಗಿ ಗುರುತಿಸಲ್ಪಡುತ್ತಿದುದರಿಂದ, ಆಡಳಿತ ಮಂಡಲಿಯ ಸದಸ್ಯರಲ್ಲಿ ಎಂದೂ ಏಳು ಮಂದಿ ಅಭಿಷಿಕ್ತ ಕ್ರೈಸ್ತರಿಗಿಂತ ಹೆಚ್ಚು ಮಂದಿ ಇರಸಾಧ್ಯವಿರಲಿಲ್ಲ ಎಂಬುದು ಇದರ ಅರ್ಥವಾಗಿತ್ತೋ? ಅಷ್ಟುಮಾತ್ರವಲ್ಲ, ಪೆನ್ಸಿಲ್ವೇನಿಯ ಸಂಘಟನೆಯ ಸದಸ್ಯರು ಡೈರೆಕ್ಟರ್‌ಗಳನ್ನು ಆಯ್ಕೆಮಾಡುತ್ತಿದ್ದುದರಿಂದ, ಈ ಸಂಘಟನೆಯ ಸದಸ್ಯರೇ ಪ್ರತಿ ವರ್ಷ ನಡೆಯುವ ವಾರ್ಷಿಕ ಕೂಟದಲ್ಲಿ ಆಡಳಿತ ಮಂಡಲಿಯ ಸದಸ್ಯರನ್ನು ಆಯ್ಕೆಮಾಡುತ್ತಿದ್ದರೋ? ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ಡೈರೆಕ್ಟರ್‌ಗಳು ಹಾಗೂ
ಅಧಿಕಾರಿಗಳು ಮತ್ತು ಆಡಳಿತ ಮಂಡಲಿಯ ಸದಸ್ಯರು ಒಂದೇ ಆಗಿದ್ದಾರೋ ಭಿನ್ನರಾಗಿದ್ದಾರೋ?ಇನ್ನೊಂದು ಸ್ಮರಣೀಯ ವಾರ್ಷಿಕ ಕೂಟ
1971ರ ಅಕ್ಟೋಬರ್ 1ರಂದು ನಡೆದ ವಾರ್ಷಿಕ ಕೂಟದಲ್ಲಿ, ಈ ಪ್ರಶ್ನೆಗಳಿಗೆ ಉತ್ತರ ನೀಡಲಾಯಿತು. ಆ ಸಂದರ್ಭದಲ್ಲಿ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಆಡಳಿತ ಮಂಡಲಿಯು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯವು ಅಸ್ತಿತ್ವಕ್ಕೆ ಬರುವ ನೂರಾರು ವರ್ಷಗಳಿಗೆ ಮುಂಚೆಯೇ ಇತ್ತು ಎಂದು ಭಾಷಣಕರ್ತರಲ್ಲಿ ಒಬ್ಬನು ಹೇಳಿದನು. (ಮತ್ತಾಯ 24:45-47) ಸಾ.ಶ. 33ರ ಪಂಚಾಶತ್ತಮದಲ್ಲಿ ಒಂದು ಆಡಳಿತ ಮಂಡಲಿಯು ರಚಿಸಲ್ಪಟ್ಟಿತು. ಅಂದರೆ ಪೆನ್ಸಿಲ್ವೇನಿಯ ಸಂಘಟನೆಯು ಅಸ್ತಿತ್ವಕ್ಕೆ ಬರುವ ಸುಮಾರು 18 ಶತಮಾನಗಳಿಗಿಂತಲೂ ಮುಂಚೆ ಇದು ರೂಪಿಸಲ್ಪಟ್ಟಿತು. ಆರಂಭದಲ್ಲಿ, ಆಡಳಿತ ಮಂಡಲಿಯು 7 ವ್ಯಕ್ತಿಗಳಿಂದಲ್ಲ, ಬದಲಾಗಿ 12 ಮಂದಿ ಅಪೊಸ್ತಲರಿಂದ ರಚಿತವಾಗಿತ್ತು. ಕಾಲಕ್ರಮೇಣ ಅದರ ಸಂಖ್ಯೆಯು ಹೆಚ್ಚಿಸಲ್ಪಟ್ಟಿತು ಎಂಬುದು ಸ್ಪಷ್ಟ. ಏಕೆಂದರೆ ‘ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಸಭೆಯ ಹಿರಿಯರು’ ನಾಯಕತ್ವವನ್ನು ವಹಿಸುತ್ತಿದ್ದರು ಎಂದು ಬೈಬಲು ಹೇಳುತ್ತದೆ.—ಅ. ಕೃತ್ಯಗಳು 15:2.
1971ರಲ್ಲಿ, ವಾಚ್ ಟವರ್ ಸೊಸೈಟಿಯ ಸದಸ್ಯರು, ಅಭಿಷಿಕ್ತ ಆಡಳಿತ ಮಂಡಲಿಯ ಸದಸ್ಯರನ್ನು ಮತಚಲಾವಣೆಯ ಮೂಲಕ ಚುನಾಯಿಸಸಾಧ್ಯವಿಲ್ಲ ಎಂದು ಅದೇ ಭಾಷಣಕರ್ತನು ವಿವರಿಸಿದನು. ಏಕೆ? ಅವನು ಹೇಳಿದ್ದು: “ಏಕೆಂದರೆ ‘ಆಳು’ ವರ್ಗದ ಆಡಳಿತ ಮಂಡಲಿಯು ಯಾವ ಮನುಷ್ಯನಿಂದಲೂ ನೇಮಿಸಲ್ಪಡುವುದಿಲ್ಲ. ಕ್ರೈಸ್ತ ಸಭೆಯ ತಲೆಯೂ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಕರ್ತನೂ ಯಜಮಾನನೂ ಆಗಿರುವ ಯೇಸು ಕ್ರಿಸ್ತನಿಂದ . . . ಅದು ನೇಮಿಸಲ್ಪಡುತ್ತದೆ.” ಆದುದರಿಂದ, ಯಾವುದೇ ರೀತಿಯ ಕಾನೂನುಬದ್ಧ ಸಂಘಟನೆಯ ಸದಸ್ಯರಿಂದ ಆಡಳಿತ ಮಂಡಲಿಯ ಸದಸ್ಯರು ತಮ್ಮ ಸ್ಥಾನಕ್ಕೆ ಆಯ್ಕೆಮಾಡಲ್ಪಡುವುದಿಲ್ಲ ಎಂಬುದು ಇದರಿಂದ ಸುಸ್ಪಷ್ಟವಾಗುತ್ತದೆ.
ಇನ್ನೂ ಮುಂದುವರಿಸುತ್ತಾ ಭಾಷಣಕರ್ತನು ಈ ಅರ್ಥಗರ್ಭಿತ ಹೇಳಿಕೆಯನ್ನು ಮಾಡಿದನು: “ಸೊಸೈಟಿಯ ಬೋರ್ಡ್ ಆಫ್ ಡೈರೆಕ್ಟರ್‌ಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸೆಕ್ರಿಟರಿ-ಟ್ರೆಷರರ್ ಮತ್ತು ಸಹಾಯಕ ಸೆಕ್ರಿಟರಿ-ಟ್ರೆಷರರ್ ಎಂಬಂಥ ಅಧಿಕಾರಿಗಳಿರುತ್ತಾರೆ. ಆದರೆ ಆಡಳಿತ ಮಂಡಲಿಯಲ್ಲಿ ಇಂತಹ ಅಧಿಕಾರಿಗಳಿಲ್ಲ. ಇದರಲ್ಲಿ ಒಬ್ಬ ಚೇರ್‌ಮನ್ ಇರುತ್ತಾನೆ ಅಷ್ಟೇ.” ಅನೇಕ ವರ್ಷಗಳ ವರೆಗೆ, ಪೆನ್ಸಿಲ್ವೇನಿಯ ಸಂಘಟನೆಯ ಅಧ್ಯಕ್ಷರು ಸಹ ಆಡಳಿತ ಮಂಡಲಿಯ ಅಗ್ರಗಣ್ಯ ಸದಸ್ಯರಾಗಿದ್ದರು. ಆದರೆ ಇನ್ನು ಮುಂದೆ ಹಾಗಿರುವುದಿಲ್ಲ. ಆಡಳಿತ ಮಂಡಲಿಯ ಸದಸ್ಯರು ಅನುಭವ ಅಥವಾ ಸಾಮರ್ಥ್ಯಗಳಲ್ಲಿ ಸರಿಸಮವಾಗಿರದಿದ್ದರೂ, ಅವರ ಜವಾಬ್ದಾರಿಯು ಮಾತ್ರ ಸಮಾನವಾಗಿರುವುದು. ಭಾಷಣಕರ್ತನು ಕೂಡಿಸಿ ಹೇಳಿದ್ದು: “ಆಡಳಿತ ಮಂಡಲಿಯ ಯಾವುದೇ ಸದಸ್ಯನು ಚೇರ್‌ಮನ್ ಆಗಬೇಕಾದರೆ ಅವನು . . . ಸೊಸೈಟಿಯ . . . ಅಧ್ಯಕ್ಷನಾಗಿರಬೇಕು ಎಂಬ ಅಗತ್ಯವೇನಿಲ್ಲ. ಆಡಳಿತ ಮಂಡಲಿಯ ಅಧ್ಯಕ್ಷ ಪದವಿಯ ಕ್ರಮಬದ್ಧವಾದ ಸರದಿಯ ಮೇಲೆ ಇದು ಅವಲಂಬಿಸಿದೆ.”
1971ರ ಸ್ಮರಣೀಯ ವಾರ್ಷಿಕ ಕೂಟದಲ್ಲಿ, ಆಡಳಿತ ಮಂಡಲಿಯ ಆತ್ಮಾಭಿಷಿಕ್ತ ಸದಸ್ಯರು ಹಾಗೂ ಪೆನ್ಸಿಲ್ವೇನಿಯ ಸಂಘಟನೆಯ ಡೈರೆಕ್ಟರ್‌ಗಳ ನಡುವೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಲಾಯಿತು. ಆದರೂ, ಆಡಳಿತ ಮಂಡಲಿಯ ಸದಸ್ಯರು ಸೊಸೈಟಿಯ ಡೈರೆಕ್ಟರ್‌ಗಳು ಹಾಗೂ ಅಧಿಕಾರಿಗಳಾಗಿ ಸೇವೆಸಲ್ಲಿಸುವುದನ್ನು ಮುಂದುವರಿಸಿದರು. ಆದರೆ ಇಂದು ಈ ಪ್ರಶ್ನೆಯು ಏಳುತ್ತದೆ: ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ಡೈರೆಕ್ಟರ್‌ಗಳು ಆಡಳಿತ ಮಂಡಲಿಯ ಸದಸ್ಯರಾಗಿರಲೇಬೇಕು ಎಂಬುದಕ್ಕೆ ಯಾವುದೇ ಶಾಸ್ತ್ರೀಯ ಕಾರಣವಿದೆಯೋ?
ಇಲ್ಲ ಎಂಬುದೇ ಇದಕ್ಕೆ ಉತ್ತರವಾಗಿದೆ. ಪೆನ್ಸಿಲ್ವೇನಿಯ ಸಂಘಟನೆಯು, ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಏಕಮಾತ್ರ ಕಾನೂನುಬದ್ಧ ಸಂಘಟನೆಯಾಗಿಲ್ಲ. ಇನ್ನೂ ಅನೇಕ ಸಂಘಟನೆಗಳಿವೆ. ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇನ್‌ಕಾರ್ಪರೇಟೆಡ್ ಸಂಘಟನೆಯು ಸಹ ಇದರಲ್ಲಿ ಒಂದಾಗಿದೆ. ಅಮೆರಿಕದಲ್ಲಿನ ನಮ್ಮ ಕೆಲಸವನ್ನು ಇದು ಸುಗಮಗೊಳಿಸುತ್ತದೆ. ಈ ಸಂಘಟನೆಯ ಡೈರೆಕ್ಟರ್‌ಗಳು ಹಾಗೂ ಅಧಿಕಾರಿಗಳು ಹೆಚ್ಚಾಗಿ “ಬೇರೆ ಕುರಿ”ಗಳ ಗುಂಪಿಗೆ ಸೇರಿದವರಾಗಿರುವುದಾದರೂ, ಇದರ ಮೇಲೆಯೂ ಯೆಹೋವನ ಆಶೀರ್ವಾದವಿದೆ ಎಂಬುದಂತೂ ಸುಸ್ಪಷ್ಟ. ಬ್ರಿಟನ್‌ನಲ್ಲಿ ಇಂಟರ್‌ನ್ಯಾಷನಲ್ ಬೈಬಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಎಂಬ ಸಂಘಟನೆಯು ಉಪಯೋಗಿಸಲ್ಪಡುತ್ತದೆ. ಬೇರೆ ಬೇರೆ ದೇಶಗಳಲ್ಲಿ ರಾಜ್ಯಾಭಿರುಚಿಗಳನ್ನು ಅಭಿವೃದ್ಧಿಗೊಳಿಸಲಿಕ್ಕಾಗಿ ಇನ್ನಿತರ ಕಾನೂನುಬದ್ಧ ಸಂಘಟನೆಗಳನ್ನು ಉಪಯೋಗಿಸಲಾಗುತ್ತದೆ. ಈ ಎಲ್ಲ ಸಂಘಟನೆಗಳು, ಲೋಕವ್ಯಾಪಕವಾಗಿ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಹೊಂದಿಕೆಯಿಂದ ಸಹಾಯಮಾಡುತ್ತವೆ ಮತ್ತು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಈ ಸಂಘಟನೆಗಳು ಯಾವ ದೇಶಗಳಲ್ಲೇ ಇರಲಿ ಅಥವಾ ಡೈರೆಕ್ಟರರಾಗಿ ಇಲ್ಲವೇ ಅಧಿಕಾರಿಗಳಾಗಿ ಯಾರೇ ಕಾರ್ಯನಡಿಸಲಿ, ಇವು ದೇವಪ್ರಭುತ್ವಕ್ಕನುಸಾರ ಮಾರ್ಗದರ್ಶಿಸಲ್ಪಟ್ಟಿವೆ ಮತ್ತು ಆಡಳಿತ ಮಂಡಲಿಯಿಂದ ಉಪಯೋಗಿಸಲ್ಪಟ್ಟಿವೆ. ಆದುದರಿಂದ, ರಾಜ್ಯಾಭಿರುಚಿಗಳಲ್ಲಿ ಅಭಿವೃದ್ಧಿಯನ್ನು ಮಾಡಲಿಕ್ಕಾಗಿ ಕಾರ್ಯನಡಿಸುವಂತೆ ಇಂತಹ ಸಂಘಟನೆಗಳನ್ನು ನೇಮಿಸಲಾಗಿದೆ.
ನಾವು ಕಾನೂನುಬದ್ಧ ಸಂಘಟನೆಗಳನ್ನು ಹೊಂದಿರುವುದು ನಿಜವಾಗಿಯೂ ಪ್ರಯೋಜನದಾಯಕವಾಗಿದೆ. ಇದರಿಂದ, ದೇವರ ವಾಕ್ಯವು ಅಗತ್ಯಪಡಿಸುವಂತೆ, ನಾವು ಸ್ಥಳಿಕ ಹಾಗೂ ರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ನಡೆಯಸಾಧ್ಯವಾಗುತ್ತದೆ. (ಯೆರೆಮೀಯ 32:11; ರೋಮಾಪುರ 13:1) ಬೈಬಲ್‌ಗಳು, ಪುಸ್ತಕಗಳು, ಪತ್ರಿಕೆಗಳು, ಬ್ರೋಷರ್‌ಗಳು ಮತ್ತು ಇನ್ನಿತರ ಪ್ರಕಾಶನಗಳನ್ನು ಮುದ್ರಿಸುವ ಮೂಲಕ, ರಾಜ್ಯದ ಸಂದೇಶವನ್ನು ಹಬ್ಬಿಸುವ ಕೆಲಸವನ್ನು ಕಾನೂನುಬದ್ಧ ಸಂಘಟನೆಗಳು ತುಂಬ ಸುಗಮಗೊಳಿಸುತ್ತವೆ. ಆಸ್ತಿಯ ಒಡೆತನ, ಪರಿಹಾರ ಕಾರ್ಯಗಳು, ಅಧಿವೇಶನ ಸೌಕರ್ಯಗಳ ಉಪಯೋಗಕ್ಕಾಗಿ ಕಾಂಟ್ರ್ಯಾಕ್ಟ್‌ಗಳು ಇನ್ನುಮುಂತಾದ ಕೆಲಸಗಳನ್ನು ನಿರ್ವಹಿಸುವುದರಲ್ಲಿ ಇಂತಹ ಸಂಘಟನೆಗಳು ಕಾನೂನುಬದ್ಧ ಸಾಧನಗಳಂತೆಯೂ ಕಾರ್ಯನಡಿಸುತ್ತವೆ. ಇಂತಹ ಕಾನೂನುಬದ್ಧ ಸಂಘಟನೆಗಳ ಸೇವೆಗಳಿಗೆ ನಾವು ತುಂಬ ಕೃತಜ್ಞರಾಗಿದ್ದೇವೆ.
ಯೆಹೋವನ ಹೆಸರು ಉನ್ನತಿಗೇರಿಸಲ್ಪಟ್ಟದ್ದು
1944ರಲ್ಲಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ಶಾಸನಪತ್ರದಲ್ಲಿರುವ IIನೆಯ ನಿಬಂಧನೆಯು, ಈ ಸಂಘಟನೆಯ ಉದ್ದೇಶಗಳನ್ನು ಒತ್ತಿಹೇಳಲಿಕ್ಕಾಗಿ ತಿದ್ದುಪಡಿಮಾಡಲ್ಪಟ್ಟಿತು. ಶಾಸನಪತ್ರಕ್ಕನುಸಾರ, ಸೊಸೈಟಿಯ ಉದ್ದೇಶಗಳಲ್ಲಿ ಈ ಮೂಲಭೂತ ಉದ್ದೇಶವು ಒಳಗೂಡಿದೆ: “ಸರ್ವಶಕ್ತನಾಗಿರುವ ಯೆಹೋವ ದೇವರ ಹೆಸರು, ವಾಕ್ಯ ಹಾಗೂ ಸಾರ್ವಭೌಮತೆಗೆ ಒಂದು ಸಾಕ್ಷಿಯೋಪಾದಿ, ಯೇಸು ಕ್ರಿಸ್ತನ ಆಳ್ವಿಕೆಯ ಕೆಳಗಿನ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು.”
1926ರಿಂದ, ‘ನಂಬಿಗಸ್ತ ಆಳು’ ಯೆಹೋವನ ಹೆಸರನ್ನು ಉನ್ನತಿಗೇರಿಸಿದೆ. ಅದರಲ್ಲೂ ವಿಶೇಷವಾಗಿ 1931ನೆಯ ವರ್ಷವು ತುಂಬ ಗಮನಾರ್ಹವಾಗಿತ್ತು. ಏಕೆಂದರೆ ಆ ಸಮಯದಲ್ಲೇ ಬೈಬಲ್ ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಸ್ವೀಕರಿಸಿದರು. (ಯೆಶಾಯ 43:10-12) ದೇವರ ಹೆಸರಿನ ಕುರಿತು ಮಹತ್ವವನ್ನು ನೀಡಿರುವಂತಹ ಸೊಸೈಟಿಯ ಪ್ರಕಾಶನಗಳಲ್ಲಿ, ಯೆಹೋವ (1934, ಇಂಗ್ಲಿಷ್), “ನಿನ್ನ ಹೆಸರು ಪವಿತ್ರೀಕರಿಸಲ್ಪಡಲಿ” (1961, ಇಂಗ್ಲಿಷ್), ಮತ್ತು “ನಾನೇ ಯೆಹೋವನು ಎಂಬುದು ಜನಾಂಗಗಳಿಗೆ ತಿಳಿದುಬರುವುದು”—ಹೇಗೆ? (1971, ಇಂಗ್ಲಿಷ್) ಎಂಬಂಥ ಪುಸ್ತಕಗಳು ಒಳಗೂಡಿದ್ದವು.
1960ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪೂರ್ಣವಾಗಿ ಪ್ರಕಾಶಿಸಲ್ಪಟ್ಟ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್‌ನ ಬಗ್ಗೆ ವಿಶೇಷವಾಗಿ ತಿಳಿಸಲೇಬೇಕಾಗಿದೆ. ಹೀಬ್ರು ಶಾಸ್ತ್ರವಚನಗಳಲ್ಲಿ ಎಲ್ಲಿ ಚತುರಕ್ಷರಿಯು (ನಾಲ್ಕು ಅಕ್ಷರಗಳುಳ್ಳ ದೇವರ ಹೆಸರು) ಕಂಡುಬರುತ್ತದೋ ಅಂತಹ ಎಲ್ಲ ಸ್ಥಳಗಳಲ್ಲಿ ಇದು ಯೆಹೋವನ ಹೆಸರನ್ನು ಒಳಗೊಂಡಿದೆ. ಈ ಭಾಷಾಂತರದಲ್ಲಿ, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ಸುಮಾರು 237 ಸ್ಥಳಗಳಲ್ಲಿ ದೇವರ ಹೆಸರು ಒಳಗೂಡಿಸಲ್ಪಟ್ಟಿದೆ; ಏಕೆಂದರೆ ಜಾಗರೂಕವಾಗಿ ಪರಿಶೀಲಿಸಿ ನೋಡಿದಾಗ ಈ ಸ್ಥಳಗಳಲ್ಲಿ ದೇವರ ಹೆಸರನ್ನು ಒಳಗೂಡಿಸುವುದು ಪ್ರಾಮಾಣೀಕೃತವಾಗಿತ್ತು. ಬೇರೆ ಬೇರೆ ವಿಧಗಳಲ್ಲಿ ತನ್ನ ಹೆಸರನ್ನು ಲೋಕವ್ಯಾಪಕವಾಗಿ ತಿಳಿಯಪಡಿಸಲಿಕ್ಕಾಗಿ, ‘ಆಳು’ ಹಾಗೂ ಅದರ ಆಡಳಿತ ಮಂಡಲಿಯು ತನ್ನ ಪ್ರಕಾಶನಗಳನ್ನು ಬಿಡುಗಡೆಮಾಡುವಂತೆ ಹಾಗೂ ಕಾನೂನುಬದ್ಧ ಸಂಘಟನೆಗಳನ್ನು ಉಪಯೋಗಿಸುವಂತೆ ಯೆಹೋವನು ಅನುಮತಿಸಿರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ!
ದೇವರ ವಾಕ್ಯದ ವಿತರಣೆಯು ಹೆಚ್ಚಿಸಲ್ಪಟ್ಟದ್ದು
ಅಸಂಖ್ಯಾತ ಬೈಬಲಾಧಾರಿತ ಪ್ರಕಾಶನಗಳನ್ನು ಹಾಗೂ ಬೈಬಲನ್ನು ಮುದ್ರಿಸಿ ವಿತರಿಸುವ ಮೂಲಕ, ಯೆಹೋವನ ಜನರು ಸತತವಾಗಿ ಆತನ ಹೆಸರಿಗೆ ಸಾಕ್ಷಿನೀಡಿದ್ದಾರೆ ಮತ್ತು ಆತನ ವಾಕ್ಯದ ಬಗ್ಗೆ ಪ್ರಚಾರಮಾಡಿದ್ದಾರೆ. 1900ರ ಆರಂಭದ ವರ್ಷಗಳಲ್ಲಿ ವಾಚ್ ಟವರ್ ಸೊಸೈಟಿಯು, ದಿ ಎಂಫ್ಯಾಟಿಕ್ ಡೈಗ್ಲಾಟ್ ಬೈಬಲನ್ನು ಪುನಃ ಮುದ್ರಿಸುವ ಅಧಿಕಾರವನ್ನು ಪಡೆಯಿತು. ಈ ಬೈಬಲು ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಗ್ರೀಕ್-ಇಂಗ್ಲಿಷ್ ಇಂಟರ್‌ಲೀನಿಯರ್ ಮುದ್ರಣವಾಗಿದ್ದು, ಬೆಂಜಮಿನ್ ವಿಲ್ಸನ್‌ರಿಂದ ಭಾಷಾಂತರಿಸಲ್ಪಟ್ಟದ್ದಾಗಿತ್ತು. ತದನಂತರ ಸೊಸೈಟಿಯು ಕಿಂಗ್ ಜೇಮ್ಸ್ ವರ್ಷನ್‌ನ ಬೈಬಲ್ ಸ್ಟೂಡೆಂಟ್ಸ್ ಎಡಿಷನ್ ಅನ್ನು ಸಹ ಮುದ್ರಿಸಿತು. ಈ ಬೈಬಲಿನಲ್ಲಿ 500 ಪುಟಗಳ ಪರಿಶಿಷ್ಟವು (ಅಪೆಂಡಿಕ್ಸ್) ಸಹ ಒಳಗೂಡಿತ್ತು. 1942ರಲ್ಲಿ ಸೊಸೈಟಿಯು ಪಕ್ಕಟಿಪ್ಪಣಿ (ಮಾರ್ಜಿನಲ್ ರೆಫರೆನ್ಸಸ್) ಇರುವಂತಹ ಕಿಂಗ್ ಜೇಮ್ಸ್ ವರ್ಷನ್ ಅನ್ನು ಮುದ್ರಿಸಿತು. ತದನಂತರ 1944ರಲ್ಲಿ ಸೊಸೈಟಿಯು, ದೇವರ ಹೆಸರನ್ನು ಉಪಯೋಗಿಸುವಂತಹ 1901ರ ಅಮೆರಿಕನ್ ಸ್ಟ್ಯಾಂಡರ್ಡ್ ವರ್ಷನ್ ಅನ್ನು ಮುದ್ರಿಸಿತು. ಸ್ಟೀಫನ್ ಟಿ. ಬೈಯಿಂಗ್ಟನ್‌ರ ದ ಬೈಬಲ್ ಇನ್ ಲಿವಿಂಗ್ ಇಂಗ್ಲಿಷ್ ಬೈಬಲಿನಲ್ಲಿಯೂ ಯೆಹೋವನ ಹೆಸರು ಇರುವುದು ಒಂದು ವಿಶೇಷತೆಯಾಗಿದ್ದು, 1972ರಲ್ಲಿ ಸೊಸೈಟಿಯು ಈ ಬೈಬಲನ್ನು ಮುದ್ರಿಸಿತು.
ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಕಾನೂನುಬದ್ಧ ಸಂಘಟನೆಗಳು, ಈ ಎಲ್ಲ ಬೈಬಲ್ ಭಾಷಾಂತರಗಳನ್ನು ಮುದ್ರಿಸುವುದರಲ್ಲಿ ಹಾಗೂ ವಿತರಿಸುವುದರಲ್ಲಿ ಸಹಾಯವನ್ನು ನೀಡಿವೆ. ಆದರೂ, ವಾಚ್ ಟವರ್ ಸೊಸೈಟಿ ಮತ್ತು ಯೆಹೋವನ ಅಭಿಷಿಕ್ತ ಸಾಕ್ಷಿಗಳ ಗುಂಪಿನಿಂದ ರಚಿತವಾಗಿರುವ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಕಮಿಟಿಯ ನಡುವಿನ ಅತ್ಯುತ್ತಮ ಸಹಕಾರವು ತುಂಬ ಗಮನಾರ್ಹವಾದದ್ದಾಗಿದೆ. ಇಷ್ಟರ ತನಕ, ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲು ಪೂರ್ಣವಾಗಿ ಅಥವಾ ಭಾಗಶಃ 38 ಭಾಷೆಗಳಲ್ಲಿ ಮತ್ತು 10,64,00,000 ಪ್ರತಿಗಳು ಮುದ್ರಿಸಲ್ಪಟ್ಟಿವೆ ಎಂಬ ವಿಷಯದಿಂದ ನಾವು ತುಂಬ ಸಂತೋಷಿಸುತ್ತೇವೆ. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯವು, ಖಂಡಿತವಾಗಿಯೂ ಒಂದು ಬೈಬಲ್ ಸೊಸೈಟಿಯಾಗಿದೆ!
‘ನಂಬಿಗಸ್ತ ಆಳು, ತನ್ನ ಯಜಮಾನನ ಎಲ್ಲ ಆಸ್ತಿಯ ಮೇಲೆ ನೇಮಿಸ’ಲ್ಪಟ್ಟಿದೆ. ಅಮೆರಿಕದ ನ್ಯೂ ಯಾರ್ಕ್ ಸ್ಟೇಟ್‌ನಲ್ಲಿರುವ ಮುಖ್ಯಕಾರ್ಯಾಲಯ ಮತ್ತು ಇಂದು ಲೋಕವ್ಯಾಪಕವಾಗಿ ಕಾರ್ಯನಡಿಸುತ್ತಿರುವ 100 ಬ್ರಾಂಚ್‌ಗಳು ಸಹ ಈ ಆಸ್ತಿಯಲ್ಲಿ ಒಳಗೂಡಿವೆ. ತಮ್ಮ ವಶಕ್ಕೆ ಒಪ್ಪಿಸಲ್ಪಟ್ಟಿರುವ ಆಸ್ತಿಯನ್ನು ತಾವು ಯಾವ ರೀತಿಯಲ್ಲಿ ಉಪಯೋಗಿಸಿದ್ದೇವೆ ಎಂಬ ವಿಷಯದಲ್ಲಿ ತಾವು ಲೆಕ್ಕವೊಪ್ಪಿಸಬೇಕಾಗಿದೆ ಎಂಬುದು ಆಳು ವರ್ಗದ ಸದಸ್ಯರಿಗೆ ಗೊತ್ತಿದೆ. (ಮತ್ತಾಯ 25:14-30) ಆದರೂ, ‘ಆಳು’ ವರ್ಗವು, ಕಾನೂನಿಗೆ ಸಂಬಂಧಪಟ್ಟ ಹಾಗೂ ಆಡಳಿತದ ಜವಾಬ್ದಾರಿಗಳನ್ನು ನೋಡಿಕೊಳ್ಳುವ ಹೊಣೆಯನ್ನು ‘ಬೇರೆ ಕುರಿಗಳ’ ನಡುವೆ ಇರುವ ಅರ್ಹ ಮೇಲ್ವಿಚಾರಕರಿಗೆ ವಹಿಸಿಕೊಡಸಾಧ್ಯವಿಲ್ಲ ಎಂಬುದು ಇದರ ಅರ್ಥವಲ್ಲ. ವಾಸ್ತವದಲ್ಲಿ, ‘ಬೇರೆ ಕುರಿಗಳ’ ನಡುವೆ ಇರುವ ಮೇಲ್ವಿಚಾರಕರಿಗೆ ಜವಾಬ್ದಾರಿಯನ್ನು ವಹಿಸಿಕೊಡುವುದರಿಂದ, ಆಡಳಿತ ಮಂಡಲಿಯ ಸದಸ್ಯರು “ಪ್ರಾರ್ಥನೆಯನ್ನೂ ವಾಕ್ಯೋಪದೇಶವನ್ನೂ ಮಾಡುವದರಲ್ಲಿ” ಹೆಚ್ಚು ಸಮಯವನ್ನು ವಿನಿಯೋಗಿಸಲು ಸಾಧ್ಯವಾಗುತ್ತದೆ.—ಅ. ಕೃತ್ಯಗಳು 6:4.
ಈ ಲೋಕದಲ್ಲಿನ ಸನ್ನಿವೇಶಗಳು ಅನುಮತಿಸುವ ವರೆಗೆ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ ಪ್ರತಿನಿಧಿಸುವ ಆಡಳಿತ ಮಂಡಲಿಯು, ಕಾನೂನುಬದ್ಧ ಸಂಘಟನೆಗಳನ್ನು ಉಪಯೋಗಿಸುವುದು. ಈ ಸಂಘಟನೆಗಳು ಅನುಕೂಲಕರವಾಗಿರುವುದಾದರೂ, ಇವುಗಳು ಅನಿವಾರ್ಯವೇನಲ್ಲ. ಸರಕಾರವು ಒಂದು ನಿಯಮದ ಆಧಾರದ ಮೇಲೆ ಒಂದು ಕಾನೂನುಬದ್ಧ ಸಂಘಟನೆಯನ್ನು ರದ್ದುಗೊಳಿಸುವುದಾದರೂ, ಸಾರುವ ಕಾರ್ಯವು ಮಾತ್ರ ನಿಂತುಹೋಗುವುದಿಲ್ಲ. ಇಂದು ಸಹ ಅನೇಕ ದೇಶಗಳಲ್ಲಿ ನಿರ್ಬಂಧಗಳು ಒಡ್ಡಲ್ಪಟ್ಟಿವೆ ಮತ್ತು ಅಂತಹ ದೇಶಗಳಲ್ಲಿ ಕಾನೂನುಬದ್ಧ ಸಂಘಟನೆಗಳು ಉಪಯೋಗಿಸಲ್ಪಡುತ್ತಿಲ್ಲ. ಆದರೆ ರಾಜ್ಯದ ಸಂದೇಶವು ಮಾತ್ರ ಸಾರಲ್ಪಡುತ್ತಿದೆ, ಅನೇಕರನ್ನು ಶಿಷ್ಯರನ್ನಾಗಿ ಮಾಡಲಾಗುತ್ತಿದೆ, ಮತ್ತು ದೇವಪ್ರಭುತ್ವ ರೀತಿಯಲ್ಲಿ ಅಭಿವೃದ್ಧಿಯು ಸಹ ಆಗುತ್ತಿದೆ. ಇದಕ್ಕೆ ಕಾರಣವೇನೆಂದರೆ, ಯೆಹೋವನ ಸಾಕ್ಷಿಗಳು ಸಸಿಯನ್ನು ನೆಟ್ಟು ನೀರನ್ನು ಹೊಯ್ಯುತ್ತಾರೆ, ಮತ್ತು ‘ದೇವರು ಅದನ್ನು ಬೆಳೆಸುತ್ತಾನೆ.’—1 ಕೊರಿಂಥ 3:6, 7.
ನಾವು ಭವಿಷ್ಯತ್ತಿನ ಕಡೆಗೆ ನೋಡುವಾಗ, ತನ್ನ ಜನರ ಆತ್ಮಿಕ ಹಾಗೂ ಭೌತಿಕ ಆವಶ್ಯಕತೆಗಳನ್ನು ಯೆಹೋವನು ಪೂರೈಸುತ್ತಾನೆ ಎಂಬ ವಿಷಯದಲ್ಲಿ ನಾವು ಭರವಸೆಯುಳ್ಳವರಾಗಿದ್ದೇವೆ. ರಾಜ್ಯದ ಸಾರುವಿಕೆಯ ಕೆಲಸವನ್ನು ಪೂರ್ಣಗೊಳಿಸಲು ಬೇಕಾಗಿರುವ ಸ್ವರ್ಗೀಯ ಮಾರ್ಗದರ್ಶನ ಹಾಗೂ ಬೆಂಬಲವನ್ನು, ಯೆಹೋವನೂ ಆತನ ಮಗನಾದ ಯೇಸು ಕ್ರಿಸ್ತನೂ ಒದಗಿಸುವುದನ್ನು ಮುಂದುವರಿಸುವರು. ದೇವರ ಸೇವಕರೋಪಾದಿ ನಾವು ಏನನ್ನೇ ಸಾಧಿಸಲಿ, ಅದು ‘ಪರಾಕ್ರಮದಿಂದಲ್ಲ, ಬಲದಿಂದಲ್ಲ, ಯೆಹೋವನ ಆತ್ಮದಿಂದಲೇ’ ಎಂಬುದಂತೂ ಸತ್ಯ. (ಜೆಕರ್ಯ 4:6) ಆದುದರಿಂದ, ಯೆಹೋವನು ಒದಗಿಸುವ ಬಲದ ಮೂಲಕ, ಈ ಅಂತ್ಯಕಾಲದಲ್ಲಿ ಆತನು ನಮಗೆ ಕೊಟ್ಟಿರುವ ಕೆಲಸವನ್ನು ಪೂರ್ಣಗೊಳಿಸಲು ಶಕ್ತರಾಗುವೆವು ಎಂಬುದನ್ನು ತಿಳಿದವರಾಗಿದ್ದು, ನಾವು ದೇವರ ಸಹಾಯಕ್ಕಾಗಿ ಪ್ರಾರ್ಥಿಸುತ್ತೇವೆ!