ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಒಂದು ಅತ್ಯುತ್ತಮ ಕೃತಿ”

“ಒಂದು ಅತ್ಯುತ್ತಮ ಕೃತಿ”

ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಿರಿ

“ಒಂದು ಅತ್ಯುತ್ತಮ ಕೃತಿ”

ತಮ್ಮ ಆಧುನಿಕ ದಿನದ ಇತಿಹಾಸದ ಆರಂಭದಿಂದಲೂ ಯೆಹೋವನ ಸಾಕ್ಷಿಗಳು ಯೇಸು ಕ್ರಿಸ್ತನ ಪ್ರವಾದನೆಗಳಲ್ಲೊಂದರಲ್ಲಿ ಅತ್ಯಾಸಕ್ತಿಯನ್ನು ತೋರಿಸುತ್ತಿದ್ದಾರೆ. ಆ ಪ್ರವಾದನೆಯು ಯಾವುದೆಂದರೆ, “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) 1914ನೆಯ ವರ್ಷವು, ಅಂದರೆ “ಕಡೇ ದಿವಸಗಳು” ಹತ್ತಿರವಾದಂತೆ ಯಥಾರ್ಥ ಬೈಬಲ್‌ ವಿದ್ಯಾರ್ಥಿಗಳು, ಪವಿತ್ರ ಶಾಸ್ತ್ರಗಳ ಮೇಲಾಧಾರಿತವಾದ ಲೋಕವ್ಯಾಪಕ ಶಿಕ್ಷಣ ಕಾರ್ಯಾಚರಣೆಯನ್ನು ದೃಢನಿಶ್ಚಯದಿಂದ ಕೈಗೊಂಡರು.​—2 ತಿಮೊಥೆಯ 3:1.

ಭೂವ್ಯಾಪಕವಾಗಿ ಸುವಾರ್ತೆಯನ್ನು ಸಾರುವ ತಮ್ಮ ಗುರಿಯನ್ನು ಸಾಧಿಸಲಿಕ್ಕಾಗಿ ಯೆಹೋವನ ಈ ಸೇವಕರು, ತುಂಬ ಹೊಸದಾದ, ದಿಟ್ಟ ಹಾಗೂ ಸುವ್ಯಕ್ತವಾದ ವಿಧಾನವನ್ನು ಉಪಯೋಗಿಸಿದರು. ಅದರ ಕುರಿತು ಹೆಚ್ಚನ್ನು ತಿಳಿದುಕೊಳ್ಳಲಿಕ್ಕಾಗಿ ನಾವು ಇತಿಹಾಸದ ಕಡೆಗೆ ಸ್ವಲ್ಪ ಗಮನಹರಿಸೋಣ.

ಸುವಾರ್ತೆಯನ್ನು ಸಾರುವ ಒಂದು ಹೊಸ ವಿಧಾನ

ಅದು 1914ನೆಯ ಇಸವಿಯ ಜನವರಿ ತಿಂಗಳಾಗಿದೆ. ನ್ಯೂ ಯಾರ್ಕ್‌ ಸಿಟಿಯಲ್ಲಿರುವ ಒಂದು ಕತ್ತಲೆಭರಿತ ಸಭಾಂಗಣದಲ್ಲಿ ಕುಳಿತಿರುವ 5,000 ಮಂದಿಯ ಮಧ್ಯೆ ನೀವೂ ಇದ್ದೀರಿ ಎಂದು ಊಹಿಸಿಕೊಳ್ಳಿರಿ. ಚಲನ ಚಿತ್ರದ ಒಂದು ದೊಡ್ಡ ಪರದೆಯು ನಿಮ್ಮ ಮುಂದೆ ಇದೆ. ನಿಲುವಂಗಿ ಧರಿಸಿಕೊಂಡಿರುವ ಬಿಳಿ ಕೂದಲಿನ ಒಬ್ಬ ಮನುಷ್ಯನು ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾನೆ. ಈ ಮುಂಚೆ ನೀವು ಮೂಕ ಚಲನ ಚಿತ್ರಗಳನ್ನು ನೋಡಿದ್ದೀರಿ. ಆದರೆ ಈ ಚಲನ ಚಿತ್ರದಲ್ಲಿರುವ ಮನುಷ್ಯನು ಮಾತಾಡುತ್ತಿದ್ದಾನೆ ಮತ್ತು ಅವನ ಮಾತುಗಳನ್ನು ನೀವು ಕೇಳಿಸಿಕೊಳ್ಳಸಾಧ್ಯವಿದೆ. ತಾಂತ್ರಿಕ ರೀತಿಯಲ್ಲಿ ಹೊಸತನ ಪಡೆದಿರುವ ಚಲನ ಚಿತ್ರದ ಪ್ರಥಮ ಪ್ರದರ್ಶನವನ್ನು ನೀವು ನೋಡುತ್ತಿದ್ದೀರಿ ಮತ್ತು ಅಲ್ಲಿ ತಿಳಿಸಲ್ಪಡುತ್ತಿರುವ ಸಂದೇಶವು ಸಹ ಅಪೂರ್ವವಾದದ್ದಾಗಿದೆ. ಪರದೆಯ ಮೇಲೆ ಕಾಣುತ್ತಿರುವವರು, ವಾಚ್‌ ಟವರ್‌ ಸೊಸೈಟಿಯ ಮೊದಲ ಅಧ್ಯಕ್ಷರಾಗಿರುವ ಚಾರ್ಲ್ಸ್‌ ಟೇಸ್‌ ರಸಲ್‌ ಆಗಿದ್ದಾರೆ. ಮತ್ತು ಆ ಚಲನ ಚಿತ್ರವು “ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌” ಆಗಿದೆ.

ಜನಸಮೂಹಗಳಿಗೆ ಸುವಾರ್ತೆಯನ್ನು ತಲಪಿಸುವ ವಿಷಯದಲ್ಲಿ ಚಲನ ಚಿತ್ರಗಳಿಗಿರುವ ಸಾಮರ್ಥ್ಯವನ್ನು ಸಿ. ಟಿ. ರಸಲ್‌ ಅವರು ಮನಗಂಡರು. ಆದುದರಿಂದ, 1912ರಲ್ಲಿ ಅವರು “ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌” ಅನ್ನು ಸಿದ್ಧಪಡಿಸಲಾರಂಭಿಸಿದರು. ಕಾಲಕ್ರಮೇಣ, ಇದು ಎಂಟು ತಾಸುಗಳಷ್ಟು ಉದ್ದವಾದ ಛಾಯಾಚಿತ್ರ ಸ್ಲೈಡ್‌ ಮತ್ತು ಚಲನ ಚಿತ್ರವಾಗಿ ಸಿದ್ಧಗೊಂಡಿತು. ಇದು ವರ್ಣರಂಜಿತವಾಗಿತ್ತು ಮತ್ತು ಇದರಲ್ಲಿ ಧ್ವನಿಯೂ ಒಳಗೂಡಿತ್ತು.

ಈ “ಫೋಟೋ-ಡ್ರಾಮಾ”ವನ್ನು ನಾಲ್ಕು ಭಾಗಗಳಾಗಿ ತೋರಿಸುವಂತೆ ವಿನ್ಯಾಸಿಸಲಾಗಿತ್ತು. ಸೃಷ್ಟಿಕಾರ್ಯದಿಂದ ಹಿಡಿದು ಅಂದಿನ ಮಾನವ ಇತಿಹಾಸದ ಪೂರ್ಣ ಚಿತ್ರಣವನ್ನು, ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಕೊನೆಯಲ್ಲಿ, ಭೂಮಿ ಹಾಗೂ ಮಾನವಕುಲದ ಕಡೆಗಿರುವ ಯೆಹೋವ ದೇವರ ಉದ್ದೇಶದ ಪರಮಾವಧಿಯನ್ನು ಸಹ ವೀಕ್ಷಕರು ನೋಡಸಾಧ್ಯವಿತ್ತು. ಇದೇ ರೀತಿಯ ತಾಂತ್ರಿಕತೆಯ ಉಪಯೋಗವು ವಾಣಿಜ್ಯ ರೀತಿಯಲ್ಲಿ ಯಶಸ್ವಿಯಾಗಲು ಇನ್ನೂ ಅನೇಕ ವರ್ಷಗಳು ಗತಿಸಲಿದ್ದವು. ಆದರೂ, ಕೋಟಿಗಟ್ಟಲೆ ಜನರು “ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌” ಅನ್ನು ಉಚಿತವಾಗಿ ನೋಡಿದರು.

ಈ “ಫೋಟೋ-ಡ್ರಾಮಾ”ಕ್ಕಾಗಿ, ಅತ್ಯುತ್ತಮ ಗುಣಮಟ್ಟದ ಸಂಗೀತ ರೆಕಾರ್ಡಿಂಗ್‌ಗಳು ಮತ್ತು ಫೋನೋಗ್ರಾಫ್‌ನಲ್ಲಿ ರೆಕಾರ್ಡ್‌ ಮಾಡಿದ 96 ಭಾಷಣಗಳು ಸಿದ್ಧವಾದವು. ಸ್ಟೀರಿಯೋಪ್ಟಿಕಾನ್‌ ಸ್ಲೈಡ್‌ಗಳು, ಲೋಕ ಇತಿಹಾಸವನ್ನು ಚಿತ್ರೀಕರಿಸುವಂತಹ ಲಲಿತಕಲೆಗಳಿದ್ದ ಚಿತ್ರಗಳಿಂದ ರಚಿತವಾಗಿದ್ದವು. ನೂರಾರು ಹೊಸ ಪೈಂಟಿಂಗ್‌ಗಳನ್ನು ಹಾಗೂ ಕರಡುಚಿತ್ರಗಳನ್ನು (ಸ್ಕೆಚ್‌ಗಳನ್ನು) ಸಹ ಸಿದ್ಧಪಡಿಸಬೇಕಾಗಿತ್ತು. ವರ್ಣರಂಜಿತವಾಗಿದ್ದ ಕೆಲವೊಂದು ಸ್ಲೈಡ್‌ಗಳನ್ನು ಹಾಗೂ ಫಿಲ್ಮ್‌ಗಳನ್ನು ತುಂಬ ಎಚ್ಚರವಹಿಸಿ ಕೈಯಿಂದ ಪೈಂಟ್‌ ಮಾಡಲಾಗಿತ್ತು. ಇವುಗಳ ಅನೇಕ ಪ್ರತಿಗಳನ್ನು ಪುನಃ ಪುನಃ ಮಾಡಬೇಕಾಗಿತ್ತು; ಏಕೆಂದರೆ ನಾಲ್ಕು ಭಾಗಗಳಿದ್ದ 20 ಸೆಟ್‌ಗಳನ್ನು ಸಿದ್ಧಪಡಿಸಬೇಕಾಗಿತ್ತು. ಇದರಿಂದಾಗಿ, ಮುಂತಿಳಿಸಲ್ಪಟ್ಟ ದಿನದಂದು 80 ಬೇರೆ ಬೇರೆ ದೇಶಗಳಲ್ಲಿ “ಫೋಟೋ-ಡ್ರಾಮಾ”ದ ಒಂದು ಭಾಗವನ್ನು ಪ್ರದರ್ಶಿಸಲು ಸಾಧ್ಯವಾಯಿತು!

ಪರದೆಗಳ ಹಿಂದೆ

“ಫೋಟೋ-ಡ್ರಾಮಾ”ದ ಪ್ರದರ್ಶನಗಳು ನಡೆಯುತ್ತಿದ್ದ ಸಮಯದಲ್ಲಿ, ಪರದೆಗಳ ಹಿಂದೆ ಏನು ನಡೆಯಿತು? ಆ್ಯಲಿಸ್‌ ಹೋಫ್‌ಮನ್‌ ಎಂಬ ಬೈಬಲ್‌ ವಿದ್ಯಾರ್ಥಿನಿ ಹೇಳಿದ್ದು: “ಸಹೋದರ ರಸಲ್‌ರ ಚಲನ ಚಿತ್ರದೊಂದಿಗೆ ಫೋಟೋ-ಡ್ರಾಮಾ ಆರಂಭವಾಯಿತು. ಅವರು ಪರದೆಯ ಮೇಲೆ ಕಾಣಿಸಿಕೊಂಡು, ಅವರ ತುಟಿಗಳು ಅಲುಗಾಡಲು ಆರಂಭಿಸಿದಾಗ, ಹಿಂದಿನಿಂದ ಫೋನೋಗ್ರಾಫ್‌ ಅನ್ನು ನುಡಿಸಲಾಗುತ್ತಿತ್ತು . . . ಮತ್ತು ಅವರ ಧ್ವನಿಯನ್ನು ಕೇಳಿಸಿಕೊಳ್ಳುವುದು ನಮಗೆ ತುಂಬ ಇಷ್ಟಕರವಾಗಿತ್ತು.”

ಟೈಮ್‌-ಲ್ಯಾಪ್ಸ್‌ ಫೋಟೋಗ್ರಫಿಯ ಕುರಿತು ಮಾತಾಡುತ್ತಾ ಝೋಲ ಹೋಫ್‌ಮನ್‌ ಹೀಗೆ ಹೇಳಿದರು: “ಸೃಷ್ಟಿಯ ದಿನಗಳ ಕುರಿತಾದ ಚಿತ್ರಗಳನ್ನು ನಾವು ನೋಡುತ್ತಿದ್ದಾಗ, ಅತ್ಯಾಶ್ಚರ್ಯದಿಂದ ನಾನು ಕಣ್ಣಗಲಿಸಿಕೊಂಡು ಕುಳಿತಿದ್ದೆ. ನಮ್ಮ ಕಣ್ಣುಗಳ ಮುಂದೆಯೇ ಲಿಲಿ ಹೂಗಳು ನಿಧಾನವಾಗಿ ಅರಳುತ್ತಿದ್ದವು.”

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರೂ ಸಂಗೀತಪ್ರಿಯರೂ ಆಗಿದ್ದ ಕಾರ್ಲ್‌ ಎಫ್‌. ಕ್ಲೈನ್‌ ಹೇಳಿದ್ದು: “ಈ ಚಿತ್ರಗಳನ್ನು ತೋರಿಸುತ್ತಿದ್ದ ಸಮಯದಲ್ಲೇ, ಇದರ ಜೊತೆಗೆ ನಾರ್ಸಿಸಸ್‌ ಮತ್ತು ಹ್ಯೂಮರೆಕ್ಸ್‌ಗಳಂತಹ ಅಪೂರ್ವ ಸಂಗೀತವು ಸಹ ಕೇಳಿಬರುತ್ತಿತ್ತು.”

ಇದರೊಂದಿಗೆ ಇನ್ನೂ ಅನೇಕ ಸ್ಮರಣಾರ್ಹ ಘಟನೆಗಳು ಸಹ ನಡೆದಿದ್ದವು. ಕ್ಲೇಟನ್‌ ಜೆ. ವುಡ್‌ವರ್ತ್‌ ಜೂನಿಯರ್‌ ಅವರು ಜ್ಞಾಪಿಸಿಕೊಳ್ಳುತ್ತಾ ಹೇಳಿದ್ದು: “ಕೆಲವೊಮ್ಮೆ ಮೋಜಿನ ಸಂಗತಿಗಳು ಸಂಭವಿಸುತ್ತಿದ್ದವು. ಒಮ್ಮೆ ರೆಕಾರ್ಡ್‌ನಲ್ಲಿ, ‘ಒಂದು ಪಕ್ಷಿಯಂತೆ ನಿಮ್ಮ ಪರ್ವತಕ್ಕೆ ಪಲಾಯನಗೈಯಿರಿ’ ಎಂಬ ಹೇಳಿಕೆಯು ಕೇಳಿಬರುತ್ತಿದ್ದಾಗ, ಪರದೆಯ ಮೇಲೆ ದೈತ್ಯಾಕಾರದ ಒಂದು ಜೈಗ್ಯಾಂಟೋಸಾರಸ್‌ ಕಂಡುಬಂತು; ಇದು ಜಲಪ್ರಳಯಕ್ಕೆ ಮುಂಚೆ ಇದ್ದ ದೈತ್ಯಾಕಾರದ ಪ್ರಾಣಿಯಾಗಿದೆ”!

ಕ್ರಮವಾದ “ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌” ಅಲ್ಲದೆ, ಅತಿಬೇಗನೆ “ಯುರೇಕ ಡ್ರಾಮಾ” ಸೆಟ್‌ಗಳು ಸಹ ತೋರಿಸಲ್ಪಟ್ಟವು. (ರೇಖಾಚೌಕವನ್ನು ನೋಡಿರಿ.) ಒಂದು ಸೆಟ್‌ ಕೇವಲ ರೆಕಾರ್ಡ್‌ ಮಾಡಲ್ಪಟ್ಟಿದ್ದ ಭಾಷಣಗಳಿಂದ ಕೂಡಿತ್ತು ಮತ್ತು ಇದರಲ್ಲಿ ಸಂಗೀತದ ರೆಕಾರ್ಡಿಂಗ್‌ ಸಹ ಇತ್ತು. ಇನ್ನೊಂದು ಸೆಟ್‌ನಲ್ಲಿ ರೆಕಾರ್ಡ್‌ಗಳು ಹಾಗೂ ಸ್ಲೈಡ್‌ಗಳೆರಡೂ ಒಳಗೂಡಿದ್ದವು. “ಯುರೇಕ ಡ್ರಾಮಾ”ದಲ್ಲಿ ಚಲನ ಚಿತ್ರಗಳು ಇರಲಿಲ್ಲವಾದರೂ, ಕಡಿಮೆ ಜನಸಂಖ್ಯೆಯಿರುವ ಕ್ಷೇತ್ರಗಳಲ್ಲಿ ಇದು ತುಂಬ ಯಶಸ್ವಿಕರವಾಗಿತ್ತು.

ಸಾಕ್ಷಿಕಾರ್ಯದಲ್ಲಿ ತುಂಬ ಪರಿಣಾಮಕಾರಕ ಸಾಧನ

1914ರ ಅಂತ್ಯಭಾಗದಷ್ಟಕ್ಕೆ “ಫೋಟೋ-ಡ್ರಾಮಾ”ವು ಉತ್ತರ ಅಮೆರಿಕ, ಯೂರೋಪ್‌ ಹಾಗೂ ಆಸ್ಟ್ರೇಲಿಯದಲ್ಲಿದ್ದ ಒಟ್ಟು 90,00,000ಕ್ಕಿಂತಲೂ ಹೆಚ್ಚು ಸಭಿಕರಿಗೆ ತೋರಿಸಲ್ಪಟ್ಟಿತ್ತು. ಬೈಬಲ್‌ ವಿದ್ಯಾರ್ಥಿಗಳು ತುಂಬ ಕಡಿಮೆ ಸಂಖ್ಯೆಯಲ್ಲಿದ್ದರೂ, ಈ ಹೊಸ ಮಾಧ್ಯಮದ ಸಹಾಯದಿಂದ ಸುವಾರ್ತೆಯನ್ನು ಸಾರಲು ಅಗತ್ಯವಾಗಿದ್ದ ದೃಢನಿಶ್ಚಯದ ಕೊರತೆ ಅವರಿಗಿರಲಿಲ್ಲ. ಈ ಪ್ರದರ್ಶನಗಳಿಗಾಗಿ ಯೋಗ್ಯವಾದ ಸ್ಥಳಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಅಗತ್ಯವಿದ್ದ ಹಣಕಾಸನ್ನು ಈ ಬೈಬಲ್‌ ವಿದ್ಯಾರ್ಥಿಗಳು ಸಂತೋಷದಿಂದ ನೀಡಿದರು. ಆದುದರಿಂದ, ವೀಕ್ಷಕರು ದೇವರ ವಾಕ್ಯ ಹಾಗೂ ದೇವರ ಉದ್ದೇಶಗಳೊಂದಿಗೆ ಚಿರಪರಿಚಿತರಾಗುವಂತೆ “ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌” ಅತ್ಯಧಿಕ ಮಟ್ಟದಲ್ಲಿ ಸಹಾಯಮಾಡಿತು.

ಸಿ. ಟಿ. ರಸಲ್‌ರಿಗೆ ಕಳುಹಿಸಿದ ಒಂದು ಪತ್ರದಲ್ಲಿ ಒಬ್ಬ ವ್ಯಕ್ತಿ ಹೀಗೆ ಬರೆದನು: “ನಿಮ್ಮ ಡ್ರಾಮಾವನ್ನು ನಾನು ಮೊದಲ ಬಾರಿ ನೋಡಿದ್ದೇ ನನ್ನ ಜೀವಿತದ ತಿರುಗುಬಿಂದುವಾಗಿತ್ತು; ಅಥವಾ ಬೈಬಲಿನ ಕುರಿತಾದ ನನ್ನ ಜ್ಞಾನದ ತಿರುಗುಬಿಂದುವಾಗಿತ್ತು ಎಂದು ನಾನು ಹೇಳಸಾಧ್ಯವಿದೆ.” ಇನ್ನೊಬ್ಬ ವ್ಯಕ್ತಿಯು ಹೇಳಿದ್ದು: “ನನ್ನ ನಂಬಿಕೆಯು ಬಹುಮಟ್ಟಿಗೆ ಕುಸಿದಿತ್ತು, ಆದರೆ ಕಳೆದ ಬೇಸಗೆಯಲ್ಲಿ ತೋರಿಸಲ್ಪಟ್ಟ ‘ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌’ ನನ್ನನ್ನು ಕಾಪಾಡಿತು ಎಂದು ನನಗನಿಸುತ್ತದೆ. . . . ಲೋಕವು ಎಂದೂ ನೀಡಲಾರದಂತಹ ಶಾಂತಿಯನ್ನು ನಾನೀಗ ಅನುಭವಿಸುತ್ತಿದ್ದೇನೆ ಮತ್ತು ಇದನ್ನು ಲೋಕದ ಯಾವುದೇ ಐಶ್ವರ್ಯವು ನನ್ನಿಂದ ಕಸಿದುಕೊಳ್ಳಲಾರದು.”

ಬಹಳ ಸಮಯದಿಂದ ಸೊಸೈಟಿಯ ಮುಖ್ಯಕಾರ್ಯಾಲಯದ ಸಿಬ್ಬಂದಿಯಲ್ಲಿ ಒಬ್ಬರಾಗಿರುವ ಡಮೀಟ್ರೀಅಸ್‌ ಪಾಪಾಜಾರ್ಜ್‌ ಹೀಗೆ ಹೇಳಿದರು: “ಆ ಕಾಲದಲ್ಲಿದ್ದ ಬೈಬಲ್‌ ವಿದ್ಯಾರ್ಥಿಗಳ ಚಿಕ್ಕ ಸಂಖ್ಯೆಯನ್ನು ಹಾಗೂ ಲಭ್ಯವಿದ್ದ ಅಲ್ಪ ಪ್ರಮಾಣದ ಹಣಕಾಸನ್ನು ಪರಿಗಣಿಸುವಾಗ, ‘ಫೋಟೋ-ಡ್ರಾಮಾ’ವು ಒಂದು ಅತ್ಯುತ್ತಮ ಕೃತಿಯಾಗಿತ್ತು. ಖಂಡಿತವಾಗಿಯೂ ಇದರ ಹಿಂದೆ ಯೆಹೋವನ ಆತ್ಮದ ಸಹಾಯವಿತ್ತು!”

[ಪುಟ 8, 9ರಲ್ಲಿರುವ ಚೌಕ/ಚಿತ್ರಗಳು]

“ಯುರೇಕ ಡ್ರಾಮಾ”

“ಫೋಟೋ-ಡ್ರಾಮಾ”ದ ಪ್ರಥಮ ಪ್ರದರ್ಶನವಾಗಿ ಎಂಟು ತಿಂಗಳುಗಳು ಕಳೆದ ಬಳಿಕ, ಅದರ “ಯುರೇಕ ಡ್ರಾಮಾ” ಎಂಬ ಇನ್ನೊಂದು ವರ್ಷನ್‌ ಅನ್ನು ತೋರಿಸುವ ಆವಶ್ಯಕತೆಯನ್ನು ಸೊಸೈಟಿಯು ಮನಗಂಡಿತು. ದೊಡ್ಡ ದೊಡ್ಡ ನಗರಗಳಲ್ಲಿ ಸಂಪೂರ್ಣ “ಫೋಟೋ-ಡ್ರಾಮಾ” ತೋರಿಸಲ್ಪಡುತ್ತಿದ್ದಾಗ, ಹಳ್ಳಿಗಳಲ್ಲಿ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿ ಇದೇ ಮೂಲಭೂತ ಸಂದೇಶವು “ಯುರೇಕ” ಸೆಟ್‌ಗಳ ಮೂಲಕ ತೋರಿಸಲ್ಪಟ್ಟಿತು. “ಯುರೇಕ ಡ್ರಾಮಾ”ದ ಒಂದು ಸೆಟ್‌, “ಸಾರುವ ವಿಷಯದಲ್ಲಿ ಸಹೋದರಿಯರಿಗೆ ವಿಶೇಷ ಸದವಕಾಶವನ್ನು ಕೊಡುತ್ತದೆ” ಎಂದು ವರ್ಣಿಸಲಾಯಿತು. ಏಕೆ? ಏಕೆಂದರೆ ಫೋನೋಗ್ರಾಫ್‌ ರೆಕಾರ್ಡ್‌ಗಳಿಂದ ಕೂಡಿದ್ದ ಈ ಸೆಟ್‌ ಕೇವಲ 14 ಕಿಲೊಗ್ರಾಮ್‌ಗಳಷ್ಟು ಭಾರವಿತ್ತು. ಒಂದು ಪ್ರದರ್ಶನ ನೀಡಬೇಕಾದರೆ, ಖಂಡಿತವಾಗಿಯೂ ಫೋನೋಗ್ರಾಫನ್ನು ಸಹ ಕೊಂಡೊಯ್ಯುವುದು ಅಗತ್ಯ.