ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯದ ಪ್ರಕಾರ ನಡೆಯುವವರು ಸಂತೋಷವನ್ನು ಕಂಡುಕೊಳ್ಳುತ್ತಾರೆ

ದೇವರ ವಾಕ್ಯದ ಪ್ರಕಾರ ನಡೆಯುವವರು ಸಂತೋಷವನ್ನು ಕಂಡುಕೊಳ್ಳುತ್ತಾರೆ

ದೇವರ ವಾಕ್ಯದ ಪ್ರಕಾರ ನಡೆಯುವವರು ಸಂತೋಷವನ್ನು ಕಂಡುಕೊಳ್ಳುತ್ತಾರೆ

“ಇನ್ನೂ ಹೆಚ್ಚಿನ ರಾಜ್ಯ ಚಟುವಟಿಕೆಗಾಗಿ ನಮ್ಮನ್ನು ಅಣಿಗೊಳಿಸಲು ಯೆಹೋವನ ಏರ್ಪಾಡುಗಳಲ್ಲಿ ಈ ಅಧಿವೇಶನವು ಒಂದಾಗಿದೆ ಎಂಬುದನ್ನು ನಾವು ಒಪ್ಪುತ್ತೇವೆ” ಎಂದು “ದೇವರ ವಾಕ್ಯದ ಪ್ರಕಾರ ನಡೆಯುವವರು” ಜಿಲ್ಲಾ ಅಧಿವೇಶನದ ಆರಂಭದಲ್ಲಿ ಒಬ್ಬ ಭಾಷಣಕರ್ತರು ಹೇಳಿದರು. ಅವರು ಮುಂದುವರಿಸಿದ್ದು: “ಸಂತೋಷದ ಕುಟುಂಬ ಜೀವನದ ಕುರಿತು ಉಪದೇಶವನ್ನು ಕೇಳಿಸಿಕೊಳ್ಳಲಿಕ್ಕಾಗಿ, ಯೆಹೋವನ ಸಂಸ್ಥೆಗೆ ನಿಕಟವಾಗಿರುವಂತೆ ಉತ್ತೇಜನವನ್ನು ಪಡೆಯಲಿಕ್ಕಾಗಿ, ರಾಜ್ಯ ಸೇವೆಯಲ್ಲಿ ನಮ್ಮ ಹುರುಪನ್ನು ಕಾಪಾಡಿಕೊಂಡು ಹೋಗುವಂತೆ ಪ್ರೇರೇಪಣೆಯನ್ನು ಪಡೆಯಲಿಕ್ಕಾಗಿ, ಮತ್ತು ಯಾವಾಗಲೂ ಎಚ್ಚರವಾಗಿರುವಂತೆ ಮರುಜ್ಞಾಪನಗಳನ್ನು ಪಡೆಯಲಿಕ್ಕಾಗಿ ನಾವು ಸಿದ್ಧರಾಗಿ ಬಂದಿದ್ದೇವೆ.”

ಕಳೆದ 2000ದ ಮೇ ತಿಂಗಳಿನ ಕೊನೆಯ ಭಾಗದಿಂದ ದೇವರ ವಾಕ್ಯದ ಪ್ರಕಾರ ನಡೆಯುವ ಲಕ್ಷಾಂತರ ಜನರು ಹಾಗೂ ಅವರ ಸ್ನೇಹಿತರು, ಬಹು ಮುಖ್ಯವಾದ ಬೈಬಲ್‌ ಶಿಕ್ಷಣವನ್ನು ಪಡೆದುಕೊಳ್ಳಲು ಭೂಸುತ್ತಲೂ ಇರುವ ಸಾವಿರಾರು ಸ್ಥಳಗಳಲ್ಲಿ ನೆರೆದುಬಂದರು. ಆ ಮೂರು ದಿನದ ಅಧಿವೇಶನದಲ್ಲಿ ಅವರು ಏನನ್ನು ಕಲಿತುಕೊಂಡರು?

ಮೊದಲನೆಯ ದಿನ​—ಯೆಹೋವನ ಉಪಕಾರಗಳಲ್ಲಿ ಒಂದನ್ನೂ ಮರೆಯದಿರುವುದು

ಅಧಿವೇಶನಗಳಲ್ಲಿ ಐಕ್ಯಭಾವದಿಂದ ಯೆಹೋವನನ್ನು ಆರಾಧಿಸುವುದರಿಂದ ಬರುವ ಆಶೀರ್ವಾದಗಳನ್ನು ಅನುಭವಿಸುವಂತೆ, ಆರಂಭದ ಭಾಷಣದಲ್ಲಿ ಅಧ್ಯಕ್ಷನು ಸಭಿಕರಿಗೆ ಆಮಂತ್ರಣವನ್ನು ನೀಡಿದನು. ತಮ್ಮ ನಂಬಿಕೆಯು ಹೆಚ್ಚಾಗುವುದು ಹಾಗೂ ಯೆಹೋವನೊಂದಿಗೆ ತಮಗಿರುವ ವೈಯಕ್ತಿಕ ಸಂಬಂಧವು ಇನ್ನೂ ಬಲಗೊಳಿಸಲ್ಪಡುವುದು ಎಂಬ ಆಶ್ವಾಸನೆಯು ನೆರೆದ ಸಭಿಕರಿಗೆ ನೀಡಲ್ಪಟ್ಟಿತು.

“ಸಂತುಷ್ಟ ದೇವರು” (NW) ನಮ್ಮ ಸಂತೋಷಕ್ಕೆ ಏನು ಅಗತ್ಯ ಎಂಬುದನ್ನು ತಿಳಿದಿದ್ದಾನೆ. (1 ತಿಮೊಥೆಯ 1:11) ಹೀಗೆ, “ದೇವರ ಚಿತ್ತವನ್ನು ಮಾಡುವುದರಿಂದ ಸಂತೋಷ ಸಿಗುತ್ತದೆ” ಎಂಬ ಭಾಷಣವು, ಯೆಹೋವನ ವಾಕ್ಯವಾದ ಬೈಬಲು ಜೀವಿತದ ಅತ್ಯುತ್ತಮ ಮಾರ್ಗವನ್ನು ತೋರಿಸುತ್ತದೆ ಎಂಬುದನ್ನು ಎತ್ತಿಹೇಳಿತು. (ಯೋಹಾನ 13:17) ದೀರ್ಘಕಾಲದಿಂದ ಯೆಹೋವನ ಸಾಕ್ಷಿಗಳಾಗಿರುವ ಅನೇಕರ ಇಂಟರ್‌ವ್ಯೂಗಳು, ಬೇರೆ ಬೇರೆ ಸಂದರ್ಭಗಳಲ್ಲಿ ದೇವರ ಚಿತ್ತವನ್ನು ಮಾಡುವುದರಿಂದ ನಮ್ಮ ಜೀವಿತಗಳಿಗೆ ಹೇಗೆ ನಿಜ ಅರ್ಥವು ಸಿಗುತ್ತದೆ ಎಂಬುದನ್ನು ತೋರಿಸಿದವು. “ಯೆಹೋವನ ಒಳ್ಳೇತನದಿಂದ ಕಳೆ ತುಂಬಿದವರಾಗಿರಿ” ಎಂಬ ಮುಂದಿನ ಭಾಷಣವು, ಕ್ರೈಸ್ತರು ‘ದೇವರನ್ನು ಅನುಸರಿಸುವವರಾಗಿ’ ತಮ್ಮ ಜೀವನದಲ್ಲಿ “ಸಕಲ ರೀತಿಯ ಒಳ್ಳೇತನವನ್ನು” ಉತ್ಪಾದಿಸಲು ಬಯಸುತ್ತಾರೆ ಎಂಬುದನ್ನು ಒತ್ತಿಹೇಳಿತು. (ಎಫೆಸ 5:​1, 9, NW) ಇದನ್ನು ಮಾಡುವುದಕ್ಕೆ ಒಂದು ಎದ್ದುಕಾಣುವ ವಿಧವು, ಸುವಾರ್ತೆಯನ್ನು ಸಾರುವುದು ಹಾಗೂ ಶಿಷ್ಯರನ್ನಾಗಿ ಮಾಡುವುದು ಆಗಿದೆ.​—ಕೀರ್ತನೆ 145:7.

“ಅದೃಶ್ಯನಾಗಿರುವಾತನನ್ನು ದೃಷ್ಟಿಸುತ್ತಿದ್ದೀರೋ ಎಂಬಂತೆ ದೃಢಚಿತ್ತರಾಗಿ ಮುಂದುವರಿಯಿರಿ” ಎಂಬ ಭಾಷಣವು, ಹೇಗೆ ಬಲವಾದ ನಂಬಿಕೆಯು ಅದೃಶ್ಯನಾದ ದೇವರನ್ನು “ಕಾಣುವಂತೆ” ನಮಗೆ ಸಹಾಯಮಾಡುತ್ತದೆ ಎಂಬುದನ್ನು ತೋರಿಸಿತು. ದೇವರ ಆತ್ಮಿಕ ಜನರು ಆತನ ಗುಣಗಳನ್ನು ಅರಿತಿದ್ದಾರೆ ಮಾತ್ರವಲ್ಲ, ತಾವು ಏನನ್ನು ಆಲೋಚಿಸುತ್ತಿದ್ದೇವೆ ಎಂಬುದನ್ನು ಸಹ ಆತನು ತಿಳಿದುಕೊಳ್ಳಬಲ್ಲನು ಎಂಬುದನ್ನು ಅರಿತಿದ್ದಾರೆಂದು ಭಾಷಣಕರ್ತನು ವರ್ಣಿಸಿದನು. (ಜ್ಞಾನೋಕ್ತಿ 5:21) ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಮತ್ತು ತಮ್ಮ ಜೀವಿತಗಳಲ್ಲಿ ಆತ್ಮಿಕ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವುದಕ್ಕಾಗಿ ತೆಗೆದುಕೊಂಡಿರುವ ಹೆಜ್ಜೆಗಳನ್ನು ಇಂಟರ್‌ವ್ಯೂ ಮಾಡಲ್ಪಟ್ಟವರು ಹೇಳಿದರು.

“ಅದ್ಭುತಕಾರ್ಯಗಳನ್ನು ನಡೆಸುವಾತನಾದ ಯೆಹೋವನನ್ನು ಸ್ತುತಿಸಿರಿ” ಎಂಬ ಮುಖ್ಯ ಭಾಷಣದಿಂದ ಬೆಳಗ್ಗಿನ ಕಾರ್ಯಕ್ರಮವು ಮುಕ್ತಾಯವಾಯಿತು. ಯೆಹೋವನ ಕುರಿತು ನಾವು ಹೆಚ್ಚನ್ನು ಕಲಿತಷ್ಟು, ಅದ್ಭುತಕೃತ್ಯಗಳನ್ನು ಮಾಡುವಾತನಾದ ಆತನನ್ನು ಸ್ತುತಿಸಲು ಹೆಚ್ಚು ಕಾರಣಗಳನ್ನು ಕಂಡುಕೊಳ್ಳುತ್ತೇವೆ ಎಂಬುದನ್ನು ಸಭಿಕರು ಗಣ್ಯಮಾಡಲು ಇದು ಸಹಾಯಮಾಡಿತು. ಭಾಷಣಕರ್ತನು ಹೇಳಿದ್ದು: “ದೇವರು ಈಗಾಗಲೇ ನಮಗಾಗಿ ಮಾಡುತ್ತಿರುವ ಅದ್ಭುತಕರ ಸಂಗತಿಗಳೊಂದಿಗೆ, ಆತನ ಸೃಷ್ಟಿಯ ಅದ್ಭುತಕಾರ್ಯಗಳ ಕುರಿತು ನಾವು ಆಲೋಚಿಸುವಾಗ, ನಮ್ಮ ಹೃದಯದಾಳದಿಂದ ಗಣ್ಯತೆಯು ಹೊಮ್ಮುತ್ತದೆ. ಇದು ನಾವು ಆತನನ್ನು ಸ್ತುತಿಸುವಂತೆ ಮಾಡುತ್ತದೆ. ಹಿಂದಿನ ಸಮಯಗಳಲ್ಲಿ ಆತನು ತನ್ನ ಜನರ ಪರವಾಗಿ ನಡೆಸಿರುವ ಅದ್ಭುತಕಾರ್ಯಗಳ ಕುರಿತು ನಾವು ಮನನ ಮಾಡುವಾಗ, ಆತನನ್ನು ಸ್ತುತಿಸಬೇಕೆಂಬ ಬಯಕೆ ನಮ್ಮಲ್ಲಿ ಹುಟ್ಟುತ್ತದೆ. ಮತ್ತು ಯೆಹೋವನು ಇನ್ನು ಮುಂದೆಯೂ ಮಾಡಲಿರುವ ಅದ್ಭುತಕರ ಸಂಗತಿಗಳ ಕುರಿತಾದ ವಾಗ್ದಾನಗಳ ಬಗ್ಗೆ ಯೋಚಿಸುವಾಗ, ನಾವು ಆತನಿಗೆ ಯಾವ ರೀತಿಯಲ್ಲಿ ಗಣ್ಯತೆಯನ್ನು ವ್ಯಕ್ತಪಡಿಸಬಹುದು ಎಂಬುದಕ್ಕಾಗಿ ಮಾರ್ಗಗಳನ್ನು ಹುಡುಕುತ್ತಾ ಇರುವೆವು.”

“ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳದೆ ಇರೋಣ” ಎಂಬ ಭಾಷಣದೊಂದಿಗೆ ಮಧ್ಯಾಹ್ನದ ಕಾರ್ಯಕ್ರಮವು ಪ್ರಾರಂಭವಾಯಿತು. ಅಂತ್ಯವು ಹತ್ತಿರವಾಗಿದೆ ಎಂಬುದನ್ನು ಈ ಲೋಕದ ಒತ್ತಡಗಳು ದೃಢೀಕರಿಸುತ್ತವೆ ಎಂಬ ವಿಷಯವನ್ನು ಇದು ಸಭಿಕರಿಗೆ ಮರುಜ್ಞಾಪಿಸಿತು. (2 ತಿಮೊಥೆಯ 3:1) ಬೇಸರಗೊಳ್ಳದೆ ಇರುವ ಮೂಲಕ, ನಾವು “ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ” ಎಂಬುದನ್ನು ರುಜುಪಡಿಸಬಲ್ಲೆವು.​—ಇಬ್ರಿಯ 10:39.

ಕುಟುಂಬ ಜೀವನದ ಬಗ್ಗೆ ಯಾವ ಬೈಬಲಿನ ಸಲಹೆಯು ನೀಡಲ್ಪಟ್ಟಿತು? ಅಧಿವೇಶನದ ಮೊದಲ ಭಾಷಣಮಾಲೆಯಾದ​—“ದೇವರ ವಾಕ್ಯಕ್ಕೆ ವಿಧೇಯರಾಗಿರ್ರಿ”​—“ಯೋಗ್ಯವಾದ ವಿವಾಹ ಸಂಗಾತಿಯನ್ನು ಆಯ್ಕೆಮಾಡುವ ವಿಷಯದಲ್ಲಿ” ಎಂಬ ಭಾಷಣದಿಂದ ಪ್ರಾರಂಭವಾಯಿತು. ವಿವಾಹ ಸಂಗಾತಿಯ ಆಯ್ಕೆಯು ಒಬ್ಬನು ತನ್ನ ಜೀವಿತದಲ್ಲಿ ಮಾಡುವ ಅತ್ಯಂತ ಗಂಭೀರ ನಿರ್ಣಯಗಳಲ್ಲಿ ಒಂದಾಗಿದೆ. ಹೀಗೆ, ಕ್ರೈಸ್ತರು ಪ್ರೌಢರಾಗುವ ತನಕ ವಿವಾಹವಾಗದೆ ಉಳಿಯಲು ಇಷ್ಟಪಡುತ್ತಾರೆ ಹಾಗೂ ಅವರು ಕೇವಲ ‘ಕರ್ತನಲ್ಲಿ’ ವಿವಾಹವಾಗುತ್ತಾರೆ. (1 ಕೊರಿಂಥ 7:39) ಮುಂದಿನ ಭಾಷಣಮಾಲೆಯು, ಎಲ್ಲ ಕ್ರೈಸ್ತರ ಕುಟುಂಬಗಳು ಬಲವಾದ ಆತ್ಮಿಕ ಗುಂಪಾಗಿ ಯಶಸ್ಸನ್ನು ಹೊಂದುವುದು ಯೆಹೋವನ ಇಚ್ಛೆಯಾಗಿದೆ ಎಂಬುದನ್ನು ಚರ್ಚಿಸಿತು. ಹಾಗೂ ಯಶಸ್ಸನ್ನು ಹೊಂದಲಿಕ್ಕಾಗಿ ಪ್ರಾಯೋಗಿಕ ಸಲಹೆಗಳನ್ನು ಅದು ನೀಡಿತು. ತಮ್ಮ ಮಕ್ಕಳಿಗೆ ಯೆಹೋವನನ್ನು ಪ್ರೀತಿಸುವಂತೆ ಕಲಿಸುವುದು, ಯೆಹೋವನ ಕಡೆಗೆ ಹೆತ್ತವರಿಗಿರುವ ಪ್ರೀತಿಯಿಂದ ಆರಂಭಿಸುತ್ತದೆ ಎಂಬುದನ್ನು ಕೊನೆಯ ಭಾಷಣವು ಮರುಜ್ಞಾಪಿಸಿತು.

“ಗಾಳಿಸುದ್ದಿ ಮತ್ತು ಹರಟೆಯ ಕುರಿತು ಎಚ್ಚರಿಕೆಯಿಂದಿರ್ರಿ” ಎಂಬ ಭಾಷಣದಲ್ಲಿ ತಿಳಿಸಿದ ಅಂಶಗಳು, ಬೆರಗುಗೊಳಿಸುವ ಸಂಗತಿಗಳು ಸಂಭವಿಸಿದಾಗಲೂ ತೀರ ಆಶ್ಚರ್ಯಕರವಾದ ಸುದ್ದಿಯನ್ನು ನಾವು ಕೇಳಿಸಿಕೊಂಡಾಗಲೂ ನಾವು ವಿವೇಕದಿಂದ ಪ್ರತಿಕ್ರಿಯಿಸಬೇಕು. ಅದರಿಂದ ಸುಲಭವಾಗಿ ಮೋಸಹೋಗಬಾರದು ಎಂಬುದನ್ನು ತಿಳಿದುಕೊಳ್ಳಲು ಸಹಾಯಮಾಡಿದವು. ಯಾವುದು ಸತ್ಯವೆಂದು ತಿಳಿದಿದೆಯೋ ಆ ರಾಜ್ಯದ ಸುವಾರ್ತೆಯ ಕುರಿತು ಮಾತಾಡುವುದೇ ಕ್ರೈಸ್ತರಿಗೆ ಮೇಲಾದುದಾಗಿದೆ. ‘ಶರೀರದಲ್ಲಿನ ಶೂಲವನ್ನು ನಿಭಾಯಿಸುವುದು’ ಎಂಬ ಮುಂದಿನ ಭಾಷಣವು ಸಾಂತ್ವನದಾಯಕವೂ ಆತ್ಮೋನ್ನತಿಗೊಳಿಸುವಂತಹದ್ದೂ ಆಗಿರುವುದಾಗಿ ಅನೇಕರು ಕಂಡುಕೊಂಡರು. ನಾವು ಕೊನೆಯಿಲ್ಲದ ಪರೀಕ್ಷೆಗಳನ್ನು ಎದುರಿಸಬಹುದಾದರೂ, ಯೆಹೋವನು ತನ್ನ ಪವಿತ್ರಾತ್ಮ, ತನ್ನ ವಾಕ್ಯ ಹಾಗೂ ಕ್ರೈಸ್ತ ಸಹೋದರತ್ವದ ಮೂಲಕ ನಮ್ಮನ್ನು ಬಲಪಡಿಸಬಲ್ಲನು ಎಂಬುದನ್ನು ತಿಳಿದುಕೊಳ್ಳುವಂತೆ ಇದು ಅವರಿಗೆ ಸಹಾಯಮಾಡಿತು. ಈ ವಿಷಯದಲ್ಲಿ ಹೆಚ್ಚಿನ ಉತ್ತೇಜನವು ಅಪೊಸ್ತಲ ಪೌಲನ ವೈಯಕ್ತಿಕ ಅನುಭವದಿಂದ ಸಿಕ್ಕಿತು.​—2 ಕೊರಿಂಥ 12:​7-10; ಫಿಲಿಪ್ಪಿ 4:​11, 13.

“ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಹಾಕುವುದು” ಎಂಬ ಭಾಷಣದೊಂದಿಗೆ ಮೊದಲ ದಿನವು ಕೊನೆಗೊಂಡಿತು. ದೇವರ ಸಂಸ್ಥೆಯು ಮುಂದೆ ಸಾಗಿರುವ ಮೂರು ಕ್ಷೇತ್ರಗಳ ಕುರಿತಾಗಿ ಪರಿಗಣಿಸಲಾಯಿತು: (1) ಯೆಹೋವನಿಂದ ಬರುವ ಆತ್ಮಿಕ ಬೆಳಕಿನ ಹೆಚ್ಚುತ್ತಿರುವ ತಿಳುವಳಿಕೆ, (2) ಆತನು ನಮಗೆ ವಹಿಸಿಕೊಟ್ಟಿರುವ ಶುಶ್ರೂಷೆ ಹಾಗೂ (3) ಸಂಸ್ಥೆಯ ಕಾರ್ಯವಿಧಾನಗಳಲ್ಲಿ ಸಮಯೋಚಿತವಾದ ಹೊಂದಾಣಿಕೆಗಳು. ಅನಂತರ, ಭಾಷಣಕರ್ತನು ಆತ್ಮವಿಶ್ವಾಸದಿಂದ ಹೇಳಿದ್ದು: “ನಾವು ಮುಂದಿರುವ ಪ್ರತೀಕ್ಷೆಗಳ ಕುರಿತಾಗಿ ರೋಮಾಂಚನಗೊಂಡಿದ್ದೇವೆ.” ಅನಂತರ ಅವರು ಕೇಳಿದ್ದು: “ಆರಂಭದಲ್ಲಿ ನಮಗಿದ್ದ ಅದೇ ಭರವಸೆಯನ್ನು ಅಂತ್ಯದ ವರೆಗೂ ದೃಢವಾಗಿ ಹಿಡಿದುಕೊಳ್ಳಲು ನಮಗೆ ಪ್ರತಿಯೊಂದು ಕಾರಣವಿದೆ ಎಂಬ ವಿಷಯದಲ್ಲಿ ನಮಗೆ ಯಾವುದಾದರೂ ಸಂದೇಹವಿದೆಯೊ?” (ಇಬ್ರಿಯ 3:14) ಉತ್ತರವು ಸ್ಪಷ್ಟವಾಗಿತ್ತು. ಇದು ನೀವು ದೇವರ ಸ್ನೇಹಿತರಾಗಬಲ್ಲಿರಿ! (ಇಂಗ್ಲಿಷ್‌) ಎಂಬ ಹೊಸ ಬ್ರೋಷರಿನ ಬಿಡುಗಡೆಗೆ ಎಡೆಮಾಡಿಕೊಟ್ಟಿತು. ಇದು ಯೆಹೋವನ ಕುರಿತು ತಿಳಿದುಕೊಳ್ಳಲು ಇಷ್ಟಪಡುವ ಆದರೆ, ಕಡಿಮೆ ಶಿಕ್ಷಣವಿರುವ ಅಥವಾ ಅಷ್ಟೇನೂ ಚೆನ್ನಾಗಿ ಓದಲು ಬಾರದ ವ್ಯಕ್ತಿಗಳಿಗೆ ಸಹಾಯಮಾಡಲು ಬಹಳ ಶಕ್ತಿಶಾಲಿಯಾದ ಕಲಿಸುವಿಕೆಯ ಸಾಧನವಾಗಿದೆ.

ಎರಡನೆಯ ದಿನ​—ದೇವರ ಅದ್ಭುತ ಕೃತ್ಯಗಳ ಬಗ್ಗೆ ಪ್ರಚುರಪಡಿಸುತ್ತಾ ಇರಿ

ದಿನದ ವಚನವನ್ನು ಓದಿ, ಚರ್ಚಿಸಿದ ಬಳಿಕ, ಅಧಿವೇಶನದ ಎರಡನೆಯ ದಿನವು “ದೇವರ ವಾಕ್ಯದ ಶುಶ್ರೂಷಕರು” ಎಂಬ ಭಾಷಣಮಾಲೆಯಿಂದ ಪ್ರಾರಂಭವಾಯಿತು. ಮೊದಲ ಭಾಗವು, ನಮ್ಮ ಭೌಗೋಲಿಕ ಸಾಕ್ಷಿಕಾರ್ಯದಲ್ಲಿ ಈಗ ಪಡೆಯುತ್ತಿರುವ ಯಶಸ್ಸಿನ ಕಡೆಗೆ ನಮ್ಮ ಗಮನವನ್ನು ಸೆಳೆಯಿತು. ಈ ಕೆಲಸದಲ್ಲಿ ನಮಗಿರುವ ತಾಳ್ಮೆಯಾದರೋ, ರಾಜ್ಯದ ಸಂದೇಶವನ್ನು ತಿರಸ್ಕರಿಸುವ ಹೆಚ್ಚಿನವರಿಂದ ಪರೀಕ್ಷೆಗೊಳಗಾಗುತ್ತದೆ. ಔದಾಸೀನ್ಯ ಅಥವಾ ವಿರೋಧದ ಎದುರಿನಲ್ಲೂ ತಮ್ಮ ತನುಮನವನ್ನು ಬಲಪಡಿಸಿಕೊಳ್ಳುವ ಮೂಲಕ, ಶುಶ್ರೂಷೆಯಲ್ಲಿ ಸಂತೋಷವನ್ನು ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದನ್ನು ದೀರ್ಘಕಾಲದಿಂದ ಪ್ರಚಾರಕರಾಗಿರುವ ಅನೇಕರು ವಿವರಿಸಿದರು. ಎರಡನೆಯ ಭಾಗವು, ಯೆಹೋವನ ಸಾಕ್ಷಿಗಳು ಎಲ್ಲೆಲ್ಲಿಯೂ ಔಪಚಾರಿಕವಾಗಿ ಹಾಗೂ ಅನೌಪಚಾರಿಕವಾಗಿ ಜನರಿಗೆ ಸುವಾರ್ತೆಯನ್ನು ಸಾರಲು ಪ್ರಯತ್ನಿಸುತ್ತಾರೆ ಎಂಬುದನ್ನು ಅಧಿವೇಶನಕ್ಕೆ ಹಾಜರಿದ್ದ ಜನರಿಗೆ ಮರುಜ್ಞಾಪಿಸಿತು. ಮತ್ತು ಮೂರನೆಯ ಭಾಗವು, ಕ್ರೈಸ್ತರು ತಮ್ಮ ವೈಯಕ್ತಿಕ ಶುಶ್ರೂಷೆಯನ್ನು ವಿಸ್ತರಿಸಬಹುದಾದ ವಿವಿಧ ವಿಧಗಳನ್ನು ವರ್ಣಿಸಿತು. ಇದನ್ನು ಮಾಡುವ ಸಲುವಾಗಿ, ಅನನುಕೂಲತೆ ಮತ್ತು ತ್ಯಾಗಗಳು ಇದರಲ್ಲಿ ಸೇರಿರುವುದಾದರೂ ಸರಿ, ನಾವು ದೇವರ ರಾಜ್ಯಕ್ಕಾಗಿ ಪ್ರಥಮ ಸ್ಥಾನವನ್ನು ಕೊಡುವುದಕ್ಕೆ ಪ್ರಯತ್ನಪಡಬೇಕು ಎಂಬುದನ್ನು ಭಾಷಣಕರ್ತರು ಒತ್ತಿಹೇಳಿದರು.​—ಮತ್ತಾಯ 6:​19-21.

ನಾವು ದೇವಭಕ್ತಿಯಿಲ್ಲದ ಹಾಗೂ ಭೌತಿಕ ವಿಷಯಗಳಿಗೆ ತೃಪ್ತಿಪಡಿಸಲಾಗದ ಅತ್ಯಾಸೆಯಿರುವ ಲೋಕದಲ್ಲಿ ಜೀವಿಸುತ್ತಿರುವುದರಿಂದ, “ಸ್ವತೃಪ್ತಿಯಿಂದ ದೇವಭಕ್ತಿಯನ್ನು ಬೆಳೆಸಿಕೊಳ್ಳಿರಿ” ಎಂಬ ಭಾಷಣವು ತೀರ ಸಮಯೋಚಿತವಾಗಿತ್ತು. ತನ್ನ ಹೇಳಿಕೆಗಳಲ್ಲಿ ಕೆಲವೊಂದನ್ನು 1 ತಿಮೊಥೆಯ 6:​6-10, 18, 19ರ ಮೇಲಾಧಾರಿಸಿ, ದೇವಭಕ್ತಿಯು ಹೇಗೆ ಕ್ರೈಸ್ತರಿಗೆ ದಾರಿತಪ್ಪಿಸುವ ಹಾಗೂ ಅನೇಕ ದುಃಖಸಂಕಷ್ಟಗಳನ್ನು ತರುವ ಹಣದ ವ್ಯಾಮೋಹದಿಂದ ದೂರವಿರುವಂತೆ ಸಹಾಯಮಾಡುತ್ತದೆ ಎಂಬುದನ್ನು ಭಾಷಣಕರ್ತರು ತಿಳಿಸಿದರು. ನಮ್ಮ ಆರ್ಥಿಕ ಪರಿಸ್ಥಿತಿಗಳು ಹೇಗೇ ಇರಲಿ, ಯೆಹೋವನೊಂದಿಗೆ ನಮಗಿರುವ ಸಂಬಂಧ ಹಾಗೂ ನಮ್ಮ ಆತ್ಮಿಕತೆಯ ಮೇಲೆ ನಮ್ಮ ಸಂತೋಷವು ಅವಲಂಬಿಸಿದೆ ಎಂಬುದನ್ನು ಅವರು ಒತ್ತಿಹೇಳಿದರು. “ದೇವರು ನಾಚಿಕೆಪಡುವಂತೆ ಯಾವುದೇ ಕಾರಣವನ್ನು ಕೊಡದಿರಿ” ಎಂಬ ಭಾಷಣದಲ್ಲಿ ಪ್ರಸ್ತುತಪಡಿಸಲಾದ ಅಂಶಗಳಿಂದ ಅನೇಕರು ಆಳವಾಗಿ ಪ್ರಭಾವಿತರಾದರು. ಯೆಹೋವನು ತನ್ನ ನಂಬಿಗಸ್ತ ಸಾಕ್ಷಿಗಳನ್ನು ಎಂದಿಗೂ ಮರೆತುಬಿಡನು ಎಂಬ ವಾಸ್ತವಾಂಶವು ಒತ್ತಿಹೇಳಲ್ಪಟ್ಟಿತು. ಸರಿಸಾಟಿಯಿಲ್ಲದ ಯೇಸು ಕ್ರಿಸ್ತನ ಮಾದರಿಯು, ಜೀವಕ್ಕಾಗಿ ಓಡುವ ಓಟದಲ್ಲಿ ಸಹನೆಯಿಂದ ಮುಂದುವರಿಯುವಂತೆ ಅನೇಕರಿಗೆ ಸಹಾಯಮಾಡುವುದು. ಅವನು “ನಿನ್ನೆ ಇದ್ದ ಹಾಗೆ ಈಹೊತ್ತು ಇದ್ದಾನೆ, ನಿರಂತರವೂ ಹಾಗೆಯೇ ಇರುವನು.”​—ಇಬ್ರಿಯ 13:8.

ಬೆಳಗ್ಗಿನ ಕಾರ್ಯಕ್ರಮವನ್ನು ದೀಕ್ಷಾಸ್ನಾನದ ಭಾಷಣದ ಮೂಲಕ ಅಂತ್ಯಗೊಳಿಸುವುದು ಯಾವಾಗಲೂ, ಯೆಹೋವನ ಸಾಕ್ಷಿಗಳ ದೊಡ್ಡ ಒಟ್ಟುಗೂಡುವಿಕೆಗಳಲ್ಲಿ ಅತ್ಯಂತ ಮುಖ್ಯ ಅಂಶವಾಗಿರುತ್ತದೆ. ನೀರಿನ ದೀಕ್ಷಾಸ್ನಾನದ ಮೂಲಕ ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯಲು ಹೊಸದಾಗಿ ಸಮರ್ಪಿಸಿಕೊಂಡವರನ್ನು ನೋಡುವುದು ಎಂತಹ ಒಂದು ಆನಂದ! (ಮತ್ತಾಯ 3:​13-17) ಈ ಹೆಜ್ಜೆಯನ್ನು ಈಗಾಗಲೇ ತೆಗೆದುಕೊಂಡಿರುವವರು ದೇವರ ವಾಕ್ಯದ ಪ್ರಕಾರ ನಡೆಯುವವರೋಪಾದಿ ಹೆಚ್ಚನ್ನು ಸಾಧಿಸಿದ್ದಾರೆ. ಅಷ್ಟುಮಾತ್ರವಲ್ಲ, ಅವರು ದೀಕ್ಷಾಸ್ನಾನಪಡೆದುಕೊಂಡಾಗ ಸುವಾರ್ತೆಯ ನೇಮಿತ ಶುಶ್ರೂಷಕರಾಗುತ್ತಾರೆ. ಹೀಗೆ ಅವರು ಯೆಹೋವನ ಹೆಸರನ್ನು ಪವಿತ್ರೀಕರಿಸುವುದರಲ್ಲಿ ತಮ್ಮ ಪಾಲನ್ನು ತಿಳಿದುಕೊಂಡವರಾಗಿ ಹೆಚ್ಚಿನ ಆನಂದವನ್ನು ಪಡೆದುಕೊಳ್ಳುತ್ತಾರೆ.​—ಜ್ಞಾನೋಕ್ತಿ 27:11.

“‘ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದುಕೊಳ್ಳಲಿಕ್ಕಾಗಿ’ ಪ್ರೌಢತೆಯ ಅಗತ್ಯವಿದೆ” ಎಂಬ ಭಾಷಣದಲ್ಲಿ ನೇರವಾದ ಸಲಹೆಯು ನೀಡಲ್ಪಟ್ಟಿತು. ಸರಿ ಮತ್ತು ತಪ್ಪಿನ ಕುರಿತು ಲೋಕದ ಮಟ್ಟಗಳು ಶೋಚನೀಯವಾಗಿ ಲೋಪವುಳ್ಳದ್ದಾಗಿವೆ. ಆದುದರಿಂದ, ನಾವು ಯೆಹೋವನ ಮಟ್ಟಗಳ ಮೇಲೆ ಅವಲಂಬಿತರಾಗಬೇಕು. (ರೋಮಾಪುರ 12:2) ದೇವರ ಮಾರ್ಗಗಳನ್ನು ನಿಷ್ಕೃಷ್ಟವಾಗಿ ತಿಳಿದುಕೊಳ್ಳಲು ಹಾಗೂ ಪ್ರೌಢತೆಯನ್ನು ಪಡೆದುಕೊಳ್ಳುತ್ತಾ ಹೋಗಲು ಕಷ್ಟಪಡಬೇಕೆಂದು ಎಲ್ಲರೂ ಉತ್ತೇಜಿಸಲ್ಪಟ್ಟರು. ಆಗ, ಅಭ್ಯಾಸದಿಂದ ನಮ್ಮ ಜ್ಞಾನೇಂದ್ರಿಯಗಳು “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ತಿಳಿದುಕೊಳ್ಳಲು ತರಬೇತುಗೊಳಿಸಲ್ಪಡುವುವು.​—ಇಬ್ರಿಯ 5:​11-14.

ಮುಂದಿನ ಭಾಷಣಮಾಲೆಯು “ಆತ್ಮಿಕತೆಯನ್ನು ಬೆಳೆಸಿಕೊಳ್ಳಲು ಕಷ್ಟಪಡಿರಿ” ಎಂಬುದಾಗಿತ್ತು. ಆತ್ಮಿಕತೆಯನ್ನು ವಿಕಸಿಸಿಕೊಳ್ಳುವ ಹಾಗೂ ಕಾಪಾಡಿಕೊಂಡುಹೋಗುವ ಮಹತ್ವವನ್ನು ನಿಜ ಕ್ರೈಸ್ತರು ಗ್ರಹಿಸುತ್ತಾರೆ. ಇದು ಪರಿಶ್ರಮ ಅಂದರೆ, ಓದುವುದು, ಅಧ್ಯಯನಮಾಡುವುದು ಹಾಗೂ ಮನನಮಾಡುವುದನ್ನು ಒಳಗೂಡುತ್ತದೆ. (ಮತ್ತಾಯ 7:​13, 14; ಲೂಕ 13:24) ಆತ್ಮಿಕ ವ್ಯಕ್ತಿಗಳು ‘ಸಕಲವಿಧವಾದ ಪ್ರಾರ್ಥನೆಯನ್ನು ಹಾಗೂ ವಿಜ್ಞಾಪನೆಯನ್ನು’ ಸಹ ಮಾಡುತ್ತಾರೆ. (ಎಫೆಸ 6:18) ನಮ್ಮ ಪ್ರಾರ್ಥನೆಗಳು ನಮ್ಮ ನಂಬಿಕೆಯ ಮತ್ತು ಭಕ್ತಿಯ ಆಳವನ್ನು, ನಮ್ಮ ಆತ್ಮಿಕತೆಯ ಮಟ್ಟವನ್ನು ಹಾಗೂ ನಾವು ಯಾವುದನ್ನು “ಉತ್ತಮ ಕಾರ್ಯ”ಗಳಾಗಿ ಪರಿಗಣಿಸುತ್ತೇವೆ ಎಂಬುದನ್ನು ಪ್ರಕಟಪಡಿಸುತ್ತವೆ. (ಫಿಲಿಪ್ಪಿ 1:10) ಒಂದು ವಿಧೇಯ ಮಗುವು ತನ್ನ ಪ್ರೀತಿಯ ತಂದೆಯೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳುತ್ತದೆ. ಅದೇ ರೀತಿಯಲ್ಲಿ ನಾವು ಸಹ ಯೆಹೋವನೊಂದಿಗೆ ಹೃತ್ಪೂರ್ವಕವಾದ ಹಾಗೂ ಪ್ರೀತಿಯ ಸಂಬಂಧವನ್ನು ಬೆಳೆಸಿಕೊಳ್ಳುವುದು ಅತಿ ಪ್ರಾಮುಖ್ಯವಾಗಿದೆ ಎಂಬ ಅಂಶವು ಒತ್ತಿಹೇಳಲ್ಪಟ್ಟಿತು. ನಾವು ಒಂದು ಸತ್ಯ ಧರ್ಮಕ್ಕೆ ಸೇರಿದವರಾಗಿದ್ದೇವೆ ಎಂದು ಹೇಳುವುದು ಮಾತ್ರವೇ ಸಾಕಾಗಲಾರದು. ಬದಲಾಗಿ, ‘ದೇವರನ್ನು ದೃಷ್ಟಿಸುತ್ತಿದ್ದೇವೋ’ ಎಂಬಂತೆ ಬಲವಾದ ನಂಬಿಕೆಯನ್ನು ನಾವು ಕಟ್ಟಬೇಕಾಗಿದೆ.​—ಇಬ್ರಿಯ 11:​6, 27.

“ನಿಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗಲಿ” ಎಂಬ ಭಾಷಣದಲ್ಲಿ ಆತ್ಮಿಕ ಪ್ರಗತಿಯ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳು ಚರ್ಚಿಸಲ್ಪಟ್ಟವು. ಅಂತಹ ಅಭಿವೃದ್ಧಿಯ ಮೂರು ಕ್ಷೇತ್ರಗಳನ್ನು ಪರಿಗಣಿಸಲಾಯಿತು: (1) ಜ್ಞಾನ, ತಿಳುವಳಿಕೆ ಮತ್ತು ವಿವೇಕವನ್ನು ಹೆಚ್ಚಿಸಿಕೊಳ್ಳುವುದು, (2) ದೇವರಾತ್ಮದ ಫಲಗಳನ್ನು ಫಲಿಸುವುದು, ಹಾಗೂ (3) ಕುಟುಂಬದ ಸದಸ್ಯರೋಪಾದಿ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದು.

ಆ ದಿನದ ಅಂತಿಮ ಭಾಷಣವು “ದೇವರ ವಾಕ್ಯದ ಪ್ರಗತಿಪರ ಬೆಳಕಿನಲ್ಲಿ ನಡೆಯುವುದು” ಎಂಬುದಾಗಿತ್ತು. ಆಗ ಅಧಿವೇಶನಕ್ಕೆ ಹಾಜರಾದವರು ಯೆಶಾಯನ ಪ್ರವಾದನೆ​—ಸಕಲ ಮಾನವಕುಲಕ್ಕೆ ಬೆಳಕು I ಎಂಬ ಹೊಸ ಪುಸ್ತಕವನ್ನು ಪಡೆದುಕೊಳ್ಳಲು ಸಂತೋಷಗೊಂಡರು. ಬೈಬಲ್‌ ಪುಸ್ತಕವಾದ ಯೆಶಾಯನ ಒಂದೊಂದು ಅಧ್ಯಾಯವನ್ನು ಚರ್ಚಿಸುವ ಎರಡು ಸಂಪುಟಗಳಲ್ಲಿ ಇದು ಮೊದಲನೆಯದ್ದಾಗಿದೆ. “ಇಂದು ನಮಗಾಗಿ ಯೆಶಾಯನ ಪುಸ್ತಕದಲ್ಲಿ ಒಂದು ಸಂದೇಶವಿದೆ. ಹೌದು, ಈ ಪುಸ್ತಕದ ಪ್ರವಾದನೆಗಳಲ್ಲಿ ಅನೇಕ ಪ್ರವಾದನೆಗಳು ಯೆಶಾಯನ ದಿನಗಳಲ್ಲಿ ನೆರವೇರಿದವು. . . . ಆದರೂ, ಯೆಶಾಯನ ಪ್ರವಾದನೆಗಳಲ್ಲಿ ಅನೇಕ ಪ್ರವಾದನೆಗಳು ಇಂದು ನೆರವೇರಿಕೆಯನ್ನು ಪಡೆಯುತ್ತಿವೆ. ಮತ್ತು ಇನ್ನು ಕೆಲವು ದೇವರ ವಾಗ್ದತ್ತ ನೂತನ ಲೋಕದಲ್ಲಿ ನೆರವೇರುವವು” ಎಂದು ಭಾಷಣಕರ್ತರು ಹೇಳಿದರು.

ಮೂರನೆಯ ದಿನ​—ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ

ಅಧಿವೇಶನದ ಕೊನೆಯ ದಿನವು, ದಿನದ ವಚನವನ್ನು ಚರ್ಚಿಸುವುದರ ಮೂಲಕ ಆರಂಭಗೊಂಡಿತು. ಅದರ ನಂತರ “ದೇವರ ಚಿತ್ತವನ್ನು ಮಾಡುವವರಿಗಾಗಿ ಚೆಫನ್ಯನ ಅರ್ಥಭರಿತ ಪ್ರವಾದನೆ” ಎಂಬ ಭಾಷಣಮಾಲೆಯಿತ್ತು. ಈ ಭಾಷಣಮಾಲೆಯ ಮೂರು ಭಾಷಣಗಳು, ಹಟಮಾರಿ ರಾಷ್ಟ್ರವಾದ ಯೆಹೂದದ ದಿನಗಳಲ್ಲಿ ಯೆಹೋವನು ಏನು ಮಾಡಿದನೋ, ಅದೇ ರೀತಿಯಲ್ಲಿ ಇಂದು ತನ್ನ ಎಚ್ಚರಿಕೆಗೆ ಕಿವಿಗೊಡದವರ ಮೇಲೆ ಸಂಕಷ್ಟವನ್ನು ತರುವನು ಎಂಬುದನ್ನು ತೋರಿಸಿದವು. ಅವರು ದೇವರಿಗೆ ವಿರುದ್ಧವಾಗಿ ಪಾಪಗೈಯುವ ಕಾರಣ, ಬಿಡುಗಡೆಯನ್ನು ಕಾಣದೆ, ಕುರುಡರಂತೆ ನಿಸ್ಸಹಾಯಕವಾಗಿ ನಡೆಯುವರು. ಸತ್ಯ ಕ್ರೈಸ್ತರಾದರೋ, ಯೆಹೋವನನ್ನು ನಂಬಿಗಸ್ತರಾಗಿ ಹುಡುಕುತ್ತಾ ಇರುವರು ಮತ್ತು ಅವರು ದೇವರ ಸಿಟ್ಟಿನ ದಿನದಲ್ಲಿ ಮರೆಯಾಗುವರು. ಅಷ್ಟುಮಾತ್ರವಲ್ಲ, ಈಗಲೂ ಸಹ ಅನೇಕ ಆಶೀರ್ವಾದಗಳನ್ನು ಅವರು ಪಡೆದುಕೊಳ್ಳುವರು. ಬೈಬಲ್‌ ಸತ್ಯದ “ಶುದ್ಧ ಭಾಷೆಯನ್ನು” (NW) ಮಾತಾಡುವ ಸುಯೋಗದಿಂದ ಅವರು ಆಶೀರ್ವದಿಸಲ್ಪಡುವರು. (ಚೆಫನ್ಯ 3:9) “ಶುದ್ಧ ಭಾಷೆಯನ್ನು ಉಪಯೋಗಿಸುವುದರ ಅರ್ಥ, ಸತ್ಯವನ್ನು ನಂಬಿ ಅದನ್ನು ಇತರರಿಗೆ ಕಲಿಸಿಕೊಡುವುದು ಮಾತ್ರವಲ್ಲ, ನಮ್ಮ ನಡತೆಯನ್ನು ದೇವರ ನೀತಿನಿಯಮಗಳಿಗೆ ಹೊಂದಿಸಿಕೊಳ್ಳುವುದೂ ಆಗಿದೆ” ಎಂಬುದನ್ನು ಭಾಷಣಕರ್ತರು ಹೇಳಿದರು.

“ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು” ಎಂಬ ಡ್ರಾಮವನ್ನು ನೋಡಲು ಅಧಿವೇಶನದಲ್ಲಿ ಹಾಜರಿದ್ದವರು ಬಹಳ ಉತ್ಸುಕರಾಗಿದ್ದರು. ಪೂರ್ಣಪೋಷಾಕಿನ ಈ ಡ್ರಾಮವು, ಯೆಹೋವನನ್ನು ಮರೆತುಬಿಟ್ಟ ಕಾರಣ ಹಾಗೂ ಜಾರತ್ವ, ಸುಳ್ಳು ಆರಾಧನೆಯಲ್ಲಿ ಒಳಗೂಡುವಂತೆ ವಿಧರ್ಮಿ ಸ್ತ್ರೀಯರ ಮೋಹದ ಬಲೆಗೆ ಬಿದ್ದ ಕಾರಣ, ಸಾವಿರಾರು ಇಸ್ರಾಯೇಲ್ಯರು ವಾಗ್ದತ್ತ ದೇಶದ ಅಂಚಿನಲ್ಲಿ ತಮ್ಮ ಜೀವವನ್ನು ಹೇಗೆ ಕಳೆದುಕೊಂಡರು ಎಂಬುದನ್ನು ತೋರಿಸಿತು. ಅತಿ ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬನಾದ ಯಾಮೀನ್‌, ಮೊದಮೊದಲು ಮೋವಾಬ್ಯ ಸ್ತ್ರೀಯರ ಮೋಹ ಹಾಗೂ ಯೆಹೋವನಲ್ಲಿರುವ ಭಕ್ತಿಯ ನಡುವೆ ಎರಡು ಮನಸ್ಸುಳ್ಳವನಾಗಿದ್ದನು. ದೇವಭಕ್ತಿಯಿಲ್ಲದ ಜಿಮ್ರೀಯ ತಪ್ಪು ತರ್ಕ ಹಾಗೂ ಮೋಸಕರ ಆಲೋಚನೆಗೆ ತದ್ವಿರುದ್ಧವಾಗಿ ಫಿನೇಹಾಸನ ನಂಬಿಕೆ ಹಾಗೂ ಭಕ್ತಿ ಸ್ಪಷ್ಟವಾಗಿ ಕಂಡುಬಂತು. ಯೆಹೋವನನ್ನು ಪ್ರೀತಿಸದವರೊಂದಿಗೆ ಜೊತೆಗೂಡುವುದರಿಂದ ಉಂಟಾಗುವ ಅಪಾಯವು ಕಣ್ಣಿಗೆಕಟ್ಟುವಂತಹ ರೀತಿಯಲ್ಲಿ ಚಿತ್ರಿಸಲ್ಪಟ್ಟಿತು.

ಡ್ರಾಮಾದ ನಂತರ, “ವಾಕ್ಯವನ್ನು ಕೇಳಿಸಿಕೊಂಡ ಬಳಿಕ ಅದನ್ನು ಮರೆತುಬಿಡುವವರಾಗಬೇಡಿ” ಎಂಬ ಭಾಷಣವಿತ್ತು. ಹೊಸ ಲೋಕದಲ್ಲಿ ಒಂದು ಸ್ವಾಸ್ತ್ಯವನ್ನು ಪಡೆದುಕೊಳ್ಳಲು ನಾವು ಯೋಗ್ಯರಾಗಿದ್ದೇವೋ ಇಲ್ಲವೋ ಎಂಬುದನ್ನು ನಿರ್ಧರಿಸಲಿಕ್ಕಾಗಿ, ಯೆಹೋವನು ನಮ್ಮ ವಿಧೇಯತೆಯನ್ನು ಪರೀಕ್ಷಿಸುತ್ತಾನೆ ಎಂಬುದು 1 ಕೊರಿಂಥ 10:​1-10ರ ವಿಶ್ಲೇಷಣೆಯು ತೋರಿಸಿತು. ಕೆಲವರು, ಹೊಸ ಲೋಕಕ್ಕೆ ಪ್ರವೇಶಿಸುವ ಸಮಯವು ಹತ್ತಿರವಾಗಿರುವ ಈ ಸಮಯದಲ್ಲಿ ಸಹ, ತಮ್ಮ ಆತ್ಮಿಕ ಗುರಿಗಳಿಗಿಂತಲೂ ಹೆಚ್ಚಾಗಿ ಶಾರೀರಿಕ ಬಯಕೆಗಳಿಗೆ ಪ್ರಮುಖತೆ ಕೊಡುವ ಸಾಧ್ಯತೆಯಿದೆ. ‘ಯೆಹೋವನ ವಿಶ್ರಾಂತಿಯಲ್ಲಿ ಪ್ರವೇಶಿಸುವ’ ಸದವಕಾಶವನ್ನು ಕಳೆದುಕೊಳ್ಳದಂತಿರುವಂತೆ ಎಲ್ಲರಿಗೂ ಪ್ರೋತ್ಸಾಹನೆಯು ಸಿಕ್ಕಿತು.​—ಇಬ್ರಿಯ 4:1.

ಬಹಿರಂಗ ಭಾಷಣದ ಶೀರ್ಷಿಕೆಯು “ದೇವರ ಅದ್ಭುತಕಾರ್ಯಗಳ ಕುರಿತು ಧ್ಯಾನಿಸಬೇಕು​—ಏಕೆ?” ಎಂದಾಗಿತ್ತು. ಯೆಹೋವನ ‘ಅದ್ಭುತಕಾರ್ಯಗಳು,’ ನಮ್ಮ ಸುತ್ತಲೂ ಇರುವ ಭೌತಿಕ ಸೃಷ್ಟಿಯಲ್ಲಿ ಕಂಡುಬರುವ ಆತನ ವಿವೇಕ ಹಾಗೂ ಅಧಿಕಾರದ ಬಗ್ಗೆ ಸ್ಪಷ್ಟವಾದ ಪುರಾವೆಯನ್ನು ನೀಡುತ್ತವೆ. (ಯೋಬ 37:14) ಯೆಹೋವನಿಂದ ಕೇಳಲ್ಪಟ್ಟ ಪರೀಕ್ಷಾತ್ಮಕವಾದ ಅನೇಕ ಪ್ರಶ್ನೆಗಳು ತಾನೇ ಯೋಬನಿಗೆ ಶಕ್ತಿಶಾಲಿಯಾದ ಸೃಷ್ಟಿಕರ್ತನ ಶಕ್ತಿಯನ್ನು ತಿಳಿದುಕೊಳ್ಳುವುದಕ್ಕೆ ಸಾಕಾಗಿದ್ದವು. ಭವಿಷ್ಯತ್ತಿನಲ್ಲೂ ಯೆಹೋವನು ತನ್ನ ನಂಬಿಗಸ್ತ ಸೇವಕರ ಪರವಾಗಿ ‘ಅದ್ಭುತಕಾರ್ಯಗಳನ್ನು’ ಮಾಡುವನು. “ಯೆಹೋವನ ಅದ್ಭುತಕಾರ್ಯಗಳ ಕಡೆಗೆ ಗಮನ ಕೊಡಲು ನಮಗೆ ಸಾಕಷ್ಟು ಕಾರಣಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಗತಕಾಲದಲ್ಲಿ ಆತನು ಏನು ಮಾಡಿದ್ದಾನೆ, ಇಂದು ಸೃಷ್ಟಿಯಲ್ಲಿ ನಮ್ಮ ಸುತ್ತಲೂ ಆತನು ಏನು ಮಾಡುತ್ತಿದ್ದಾನೆ, ಮತ್ತು ಹತ್ತಿರದ ಭವಿಷ್ಯತ್ತಿನಲ್ಲಿ ಏನನ್ನು ಮಾಡುವ ವಾಗ್ದಾನವನ್ನು ನೀಡಿದ್ದಾನೆ ಎಂಬ ವಿಷಯಗಳ ಬಗ್ಗೆ ನಾವು ಧ್ಯಾನಿಸಬೇಕಾಗಿದೆ” ಎಂದು ಹೇಳುತ್ತಾ, ಭಾಷಣಕರ್ತರು ಭಾಷಣವನ್ನು ಕೊನೆಗೊಳಿಸಿದರು.

ಆ ವಾರದ ಕಾವಲಿನಬುರುಜು ಅಭ್ಯಾಸ ಲೇಖನದ ಸಾರಾಂಶದ ನಂತರ, ಅಧಿವೇಶನದ ಕೊನೆಯ ಭಾಷಣವನ್ನು ಪ್ರಸ್ತುತಪಡಿಸಲಾಯಿತು. “ದೇವರ ವಾಕ್ಯದ ಪ್ರಕಾರ ನಡೆಯುವವರೋಪಾದಿ ನಿಮ್ಮ ಸುಯೋಗವನ್ನು ಅಮೂಲ್ಯವೆಂದೆಣಿಸಿರಿ” ಎಂಬ ಶೀರ್ಷಿಕೆಯುಳ್ಳ ಈ ಮನಕಲಕುವ ಭಾಷಣವು, ದೇವರ ವಾಕ್ಯದ ಪ್ರಕಾರ ನಡೆಯುವವರೋಪಾದಿ ಎಣಿಸಲ್ಪಡುವುದು ಗೌರವಾರ್ಹವಾದ ಒಂದು ವಿಷಯವಾಗಿದೆ ಎಂಬುದನ್ನು ಎತ್ತಿಹೇಳಿತು. (ಯಾಕೋಬ 1:22) ದೇವರ ವಾಕ್ಯದ ಪ್ರಕಾರ ನಡೆಯುವವರೋಪಾದಿ ನಮಗಿರುವ ಸುಯೋಗವು ಅಪೂರ್ವವಾಗಿದೆ ಮತ್ತು ನಾವು ಅದನ್ನು ಉಪಯೋಗಿಸುತ್ತಿರುವಷ್ಟು ಕಾಲ, ಅದಕ್ಕಾಗಿರುವ ನಮ್ಮ ಗಣ್ಯತೆಯು ಹೆಚ್ಚುತ್ತಲೇ ಇರುತ್ತದೆ ಎಂಬುದನ್ನು ಅಲ್ಲಿದ್ದ ಎಲ್ಲರಿಗೆ ಮರುಜ್ಞಾಪಿಸಲಾಯಿತು. ಈ ಜಿಲ್ಲಾ ಅಧಿವೇಶನದ ಪ್ರಯೋಜನದಾಯಕ ಪ್ರಚೋದನೆಯು, ಪೂರ್ಣ ರೀತಿಯಲ್ಲಿ ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರುವ ಬಯಕೆಯನ್ನು ಪ್ರತಿಬಿಂಬಿಸುವಂತೆ ಎಲ್ಲರನ್ನು ಉತ್ತೇಜಿಸಿತು. ಇದೊಂದೇ ಅತ್ಯಧಿಕ ಸಂತೋಷವನ್ನು ಅನುಭವಿಸುವ ಏಕೈಕ ಮಾರ್ಗವಾಗಿದೆ.

[ಪುಟ 25ರಲ್ಲಿರುವ ಚೌಕ/ಚಿತ್ರ]

ನೀವು ದೇವರ ಸ್ನೇಹಿತರಾಗಬಲ್ಲಿರಿ! *

ಶುಕ್ರವಾರ ಮಧ್ಯಾಹ್ನ ನೀವು ದೇವರ ಸ್ನೇಹಿತರಾಗಬಲ್ಲಿರಿ (ಇಂಗ್ಲಿಷ್‌) ಎಂಬ ಹೊಸ ಬ್ರೋಷರನ್ನು ಬಿಡುಗಡೆಮಾಡಲಾಯಿತು. ಲೋಕದ ಅನೇಕ ಕಡೆಗಳಲ್ಲಿ ಸರಳೀಕರಿಸಿದ ಬೈಬಲ್‌ ಶಿಕ್ಷಣದ ಅಗತ್ಯವು ಇದೆ. ಮತ್ತು ಈ ಬ್ರೋಷರ್‌ ಇದೇ ಉದ್ದೇಶಕ್ಕಾಗಿಯೇ ಉಪಯೋಗಿಸಲ್ಪಡುವುದು. ಕಡಿಮೆ ಶಿಕ್ಷಣ ಪಡೆದಿರುವ ಇಲ್ಲವೆ ಓದಲಿಕ್ಕೆ ಅಷ್ಟೇನೂ ಬಾರದವರಿಗೆ ಈ ಬ್ರೋಷರು ನಿಜವಾಗಿಯೂ ಒಂದು ಆಶೀರ್ವಾದವಾಗಿರುವುದು.

[ಪಾದಟಿಪ್ಪಣಿ]

^ ಪ್ಯಾರ. 28 ಈ ಬ್ರೋಷರು ಸದ್ಯಕ್ಕೆ ಭಾರತದಲ್ಲಿ ಲಭ್ಯವಿಲ್ಲ

[ಪುಟ 26ರಲ್ಲಿರುವ ಚೌಕ/ಚಿತ್ರಗಳು]

ಯೆಶಾಯನ ಪ್ರವಾದನೆ​—ಸಕಲ ಮಾನವಕುಲಕ್ಕೆ ಬೆಳಕು

ಯೆಶಾಯನ ಪ್ರವಾದನೆ​—ಸಕಲ ಮಾನವಕುಲಕ್ಕೆ ಬೆಳಕು ಎಂಬ ಎರಡು ವಾಲ್ಯೂಮ್‌ಗಳುಳ್ಳ ಪುಸ್ತಕದ ವಾಲ್ಯೂಮ್‌ Iನ್ನು ಪಡೆದುಕೊಳ್ಳಲು ಅಧಿವೇಶನದಲ್ಲಿ ಹಾಜರಾದವರು ರೋಮಾಂಚನಗೊಂಡರು. ಈ ಪುಸ್ತಕದಲ್ಲಿ, ನಮ್ಮ ದಿನಕ್ಕಾಗಿರುವ ಯೆಶಾಯನ ಪ್ರವಾದನೆಯ ಪ್ರಾಯೋಗಿಕ ಮೌಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದೆ.