ಮೇಲ್ವಿಚಾರಕರು ಮತ್ತು ಶುಶ್ರೂಷಾ ಸೇವಕರು ದೇವಪ್ರಭುತ್ವಕ್ಕನುಸಾರ ನೇಮಿಸಲ್ಪಟ್ಟಿದ್ದಾರೆ
ಮೇಲ್ವಿಚಾರಕರು ಮತ್ತು ಶುಶ್ರೂಷಾ ಸೇವಕರು ದೇವಪ್ರಭುತ್ವಕ್ಕನುಸಾರ ನೇಮಿಸಲ್ಪಟ್ಟಿದ್ದಾರೆ
‘ಪವಿತ್ರಾತ್ಮನು ನಿಮ್ಮನ್ನು . . . ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.’—ಅ. ಕೃತ್ಯಗಳು 20:28.
1, 2. ಯೆಶಾಯ 60:22ರಲ್ಲಿರುವ ಪ್ರವಾದನೆಯು ಹೇಗೆ ನೆರವೇರಿಸಲ್ಪಡುತ್ತಿದೆ?
ಅಂತ್ಯಕಾಲದಲ್ಲಿ ಯಾವ ಗಮನಾರ್ಹ ವಿಷಯವು ಸಂಭವಿಸುವುದು ಎಂಬುದನ್ನು ಯೆಹೋವನು ಬಹಳ ಸಮಯದ ಹಿಂದೆಯೇ ಮುಂತಿಳಿಸಿದ್ದನು. ಪ್ರವಾದಿಯಾದ ಯೆಶಾಯನ ಮೂಲಕ ಅದು ಮುಂತಿಳಿಸಲ್ಪಟ್ಟಿತ್ತು: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.”—ಯೆಶಾಯ 60:22.
2 ಈ ಪ್ರವಾದನೆಯು ಇಂದು ನೆರವೇರಿಕೆಯನ್ನು ಪಡೆಯುತ್ತಿದೆ ಎಂಬುದಕ್ಕೆ ಯಾವುದಾದರೂ ಪುರಾವೆಯಿದೆಯೋ? ಖಂಡಿತವಾಗಿಯೂ ಇದೆ! 1870ಗಳಲ್ಲಿ, ಅಮೆರಿಕದ ಪೆನ್ಸಿಲ್ವೇನಿಯದಲ್ಲಿರುವ ಆ್ಯಲಿಗೆನಿಯಲ್ಲಿ ಯೆಹೋವನ ಸಾಕ್ಷಿಗಳ ಒಂದು ಸಭೆಯು ರಚಿಸಲ್ಪಟ್ಟಿತು. ಹೀಗೆ ಚಿಕ್ಕದಾಗಿ ಆರಂಭಗೊಂಡು, ಇಂದು ಲೋಕವ್ಯಾಪಕವಾಗಿ ಸಾವಿರಾರು ಸಭೆಗಳು ಸ್ಥಾಪಿಸಲ್ಪಟ್ಟಿವೆ ಮತ್ತು ದಿನೇ ದಿನೇ ಏಳಿಗೆಹೊಂದುತ್ತಿವೆ. ಒಂದು ಬಲವಾದ ಜನಾಂಗದಂತಿರುವ ಲಕ್ಷಗಟ್ಟಲೆ ರಾಜ್ಯ ಪ್ರಚಾರಕರು, ಇಂದು ಭೂಮಿಯಾದ್ಯಂತ 235 ದೇಶಗಳಲ್ಲಿರುವ 91,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಸಹವಾಸಿಸುತ್ತಿದ್ದಾರೆ. ಈಗ ತ್ವರಿತಗತಿಯಲ್ಲಿ ಸಮೀಪಿಸುತ್ತಿರುವ ‘ಮಹಾಸಂಕಟ’ವು ಆರಂಭವಾಗುವುದರೊಳಗೆ ಸತ್ಯಾರಾಧಕರನ್ನು ಒಟ್ಟುಗೂಡಿಸುವ ಕೆಲಸವನ್ನು ಯೆಹೋವನು ವೇಗಗೊಳಿಸುತ್ತಿದ್ದಾನೆ ಎಂಬುದನ್ನು ಇದು ದೃಢಪಡಿಸುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ.—ಮತ್ತಾಯ 24:21; ಪ್ರಕಟನೆ 7:9-14.
3. ‘ತಂದೆಯ, ಮಗನ ಹಾಗೂ ಪವಿತ್ರಾತ್ಮದ ಹೆಸರಿನಲ್ಲಿ’ ದೀಕ್ಷಾಸ್ನಾನ ಪಡೆದುಕೊಳ್ಳುವುದರ ಅರ್ಥವೇನು?
3 ಯೆಹೋವನಿಗೆ ವೈಯಕ್ತಿಕ ಸಮರ್ಪಣೆಯನ್ನು ಮಾಡಿಕೊಂಡ ಬಳಿಕ, ಯೇಸುವಿನ ಸೂಚನೆಗಳಿಗನುಸಾರ ಈ ಲಕ್ಷಾಂತರ ಜನರು “ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ”ಕೊಂಡಿದ್ದಾರೆ. (ಮತ್ತಾಯ 28:19) ‘ತಂದೆಯ ಹೆಸರಿನಲ್ಲಿ’ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದರ ಅರ್ಥ, ಈ ಸಮರ್ಪಿತ ವ್ಯಕ್ತಿಗಳು ಯೆಹೋವನನ್ನು ತಮ್ಮ ಸ್ವರ್ಗೀಯ ತಂದೆಯಾಗಿ ಹಾಗೂ ಜೀವದಾತನಾಗಿ ಸ್ವೀಕರಿಸುತ್ತಾರೆ ಮತ್ತು ಆತನ ಪರಮಾಧಿಕಾರಕ್ಕೆ ಅಧೀನರಾಗುತ್ತಾರೆ ಎಂಬುದನ್ನು ಸೂಚಿಸುತ್ತದೆ. ‘ಮಗನ ಹೆಸರಿನಲ್ಲಿ’ ಪಡೆದುಕೊಳ್ಳುವ ದೀಕ್ಷಾಸ್ನಾನವು, ಇವರು ಯೇಸು ಕ್ರಿಸ್ತನನ್ನು ತಮ್ಮ ವಿಮೋಚಕನೋಪಾದಿ, ನಾಯಕನೋಪಾದಿ ಹಾಗೂ ಅರಸನೋಪಾದಿ ಅಂಗೀಕರಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ತಮ್ಮ ಜೀವಿತವನ್ನು ಮಾರ್ಗದರ್ಶಿಸುವುದರಲ್ಲಿ ದೇವರ ಪವಿತ್ರಾತ್ಮದ ಅಥವಾ ಕಾರ್ಯಕಾರಿ ಶಕ್ತಿಯ ಪಾತ್ರವನ್ನು ಸಹ ಅವರು ಒಪ್ಪಿಕೊಳ್ಳುತ್ತಾರೆ. ಇದು, ಅವರು ‘ಪವಿತ್ರಾತ್ಮದ ಹೆಸರಿನಲ್ಲಿ’ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.
4. ಕ್ರೈಸ್ತ ಶುಶ್ರೂಷಕರನ್ನು ಹೇಗೆ ನೇಮಿಸಲಾಗುತ್ತದೆ?
4 ಹೊಸ ಶಿಷ್ಯರು ದೀಕ್ಷಾಸ್ನಾನ ಪಡೆದುಕೊಳ್ಳುವಾಗ, ಅವರು ಯೆಹೋವ ದೇವರ ಶುಶ್ರೂಷಕರಾಗಿ ನೇಮಿಸಲ್ಪಡುತ್ತಾರೆ. ಅವರನ್ನು ಯಾರು ನೇಮಿಸುತ್ತಾರೆ? ವಾಸ್ತವದಲ್ಲಿ, 2 ಕೊರಿಂಥ 3:5ರಲ್ಲಿ (NW) ದಾಖಲಿಸಲ್ಪಟ್ಟಿರುವ ಮಾತುಗಳು ಅವರಿಗೆ ಅನ್ವಯಿಸುತ್ತವೆ: “ನಾವು ಸಾಕಷ್ಟು ಮಟ್ಟಿಗೆ [ಶುಶ್ರೂಷಕರೋಪಾದಿ] ಅರ್ಹರಾಗಿರುವುದು ದೇವರಿಂದಲೇ ಬಂದದ್ದು.” ಸ್ವತಃ ಯೆಹೋವ ದೇವರಿಂದ ನೇಮಿಸಲ್ಪಡುವುದನ್ನು ಬಿಟ್ಟು ಬೇರೆ ಯಾವ ರೀತಿಯ ಘನತೆಯನ್ನೂ ಅವರು ಬಯಸಲಾರರು! ತಮ್ಮ ದೀಕ್ಷಾಸ್ನಾನದ ಬಳಿಕ, ಎಷ್ಟರ ತನಕ ಅವರು ದೇವರ ಪವಿತ್ರಾತ್ಮದ ಮಾರ್ಗದರ್ಶನವನ್ನು ಅಂಗೀಕರಿಸಿ, ದೇವರ ವಾಕ್ಯವನ್ನು ತಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳುತ್ತಾ ಹೋಗುತ್ತಾರೋ ಅಷ್ಟರ ತನಕ ಅವರು “ಸುವಾರ್ತೆ”ಯ ಶುಶ್ರೂಷಕರೋಪಾದಿ ಆತ್ಮಿಕವಾಗಿ ಪ್ರಗತಿಯನ್ನು ಮಾಡುತ್ತಾ ಹೋಗುತ್ತಾರೆ.—ಮತ್ತಾಯ 24:14; ಅ. ಕೃತ್ಯಗಳು 9:31.
ಪ್ರಜಾಪ್ರಭುತ್ವದ್ದಲ್ಲ, ದೇವಪ್ರಭುತ್ವದ ನೇಮಕ
5. ಕ್ರೈಸ್ತ ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರನ್ನು ಪ್ರಜಾಪ್ರಭುತ್ವಕ್ಕನುಸಾರ ಆಯ್ಕೆಮಾಡಲಾಗುತ್ತದೋ? ವಿವರಿಸಿರಿ.
5 ಕ್ರಿಯಾಶೀಲ ಶುಶ್ರೂಷಕರ ಸಂಖ್ಯೆಯು ಬೆಳೆಯುತ್ತಿರುವುದರಿಂದ, ಫಿಲಿಪ್ಪಿ 1:1) ಇಂತಹ ಆತ್ಮಿಕ ಪುರುಷರನ್ನು ಯಾರು ನೇಮಿಸುತ್ತಾರೆ? ಕ್ರೈಸ್ತಪ್ರಪಂಚದಲ್ಲಿ ಅನುಸರಿಸಲ್ಪಡುವ ವಿಧಾನಗಳ ಮೂಲಕ ಇವರು ನೇಮಿಸಲ್ಪಡುವುದಿಲ್ಲ. ದೃಷ್ಟಾಂತಕ್ಕಾಗಿ, ಪ್ರಜಾಪ್ರಭುತ್ವಕ್ಕನುಸಾರ, ಅಂದರೆ ಒಂದು ಸಭೆಯೊಂದಿಗೆ ಸಹವಾಸಿಸುತ್ತಿರುವ ಜನರ ಬಹುಮತಗಳನ್ನು ಪಡೆದುಕೊಳ್ಳುವ ಮೂಲಕ ಕ್ರೈಸ್ತ ಮೇಲ್ವಿಚಾರಕರು ಚುನಾಯಿಸಲ್ಪಡುವುದಿಲ್ಲ. ಬದಲಾಗಿ, ದೇವಪ್ರಭುತ್ವಕ್ಕನುಸಾರವಾಗಿ ಈ ನೇಮಕಗಳನ್ನು ಮಾಡಲಾಗುತ್ತದೆ. ಇದರ ಅರ್ಥವೇನು?
ಅವರ ಆತ್ಮಿಕ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಅರ್ಹ ಮೇಲ್ವಿಚಾರಕರ ಪ್ರೌಢ ಮೇಲ್ವಿಚಾರಣೆ ಹಾಗೂ ಶುಶ್ರೂಷಾ ಸೇವಕರ ದಕ್ಷ ಸಹಾಯದ ಅಗತ್ಯವಿದೆ. (6. (ಎ) ನಿಜವಾದ ದೇವಪ್ರಭುತ್ವ ಎಂದರೇನು? (ಬಿ) ಮೇಲ್ವಿಚಾರಕರ ಹಾಗೂ ಶುಶ್ರೂಷಾ ಸೇವಕರ ನೇಮಕಗಳು ದೇವಪ್ರಭುತ್ವಕ್ಕನುಸಾರವಾಗಿವೆ ಏಕೆ?
6 ಸರಳವಾದ ಮಾತುಗಳಲ್ಲಿ ಹೇಳುವುದಾದರೆ, ನಿಜವಾದ ದೇವಪ್ರಭುತ್ವವು ದೇವರಿಂದ ನಡೆಸಲ್ಪಡುವ ಆಳ್ವಿಕೆಯಾಗಿದೆ. ಯೆಹೋವನ ಸಾಕ್ಷಿಗಳು ಸ್ವಇಚ್ಛೆಯಿಂದ ಆತನ ಆಳ್ವಿಕೆಗೆ ಅಧೀನರಾಗುತ್ತಾರೆ ಮತ್ತು ದೇವರ ಚಿತ್ತವನ್ನು ಮಾಡುವುದರಲ್ಲಿ ಒಟ್ಟಿಗೆ ಸಹಕರಿಸುತ್ತಾರೆ. (ಕೀರ್ತನೆ 143:10; ಮತ್ತಾಯ 6:9, 10) ಕ್ರೈಸ್ತ ಮೇಲ್ವಿಚಾರಕರು ಅಥವಾ ಹಿರಿಯರು ಹಾಗೂ ಶುಶ್ರೂಷಾ ಸೇವಕರ ನೇಮಕಗಳು ದೇವಪ್ರಭುತ್ವಕ್ಕನುಸಾರವಾಗಿವೆ. ಏಕೆಂದರೆ ಅಂತಹ ಜವಾಬ್ದಾರಿಯುತ ಪುರುಷರನ್ನು ಆ ಸ್ಥಾನಕ್ಕೆ ಶಿಫಾರಸ್ಸುಮಾಡುವ ಹಾಗೂ ನೇಮಿಸುವ ಕಾರ್ಯವು, ಪವಿತ್ರ ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿರುವ ದೇವರ ಏರ್ಪಾಡಿಗನುಸಾರ ನಡೆಯುತ್ತದೆ. ಅಷ್ಟುಮಾತ್ರವಲ್ಲ, ತನ್ನ ದೃಶ್ಯ ಸಂಸ್ಥೆಯು ಹೇಗೆ ಕಾರ್ಯನಡಿಸಬೇಕು ಎಂಬ ವಿಷಯವನ್ನು ನಿರ್ಧರಿಸುವ ಹಕ್ಕು ‘ಸರ್ವವನ್ನೂ ಆಳುವವನಾಗಿರುವ’ ಯೆಹೋವನಿಗಿದೆ ಎಂಬುದಂತೂ ನಿಶ್ಚಯ.—1 ಪೂರ್ವಕಾಲವೃತ್ತಾಂತ 29:11; ಕೀರ್ತನೆ 97:9.
7. ಯೆಹೋವನ ಸಾಕ್ಷಿಗಳು ಹೇಗೆ ಆಳಲ್ಪಡುತ್ತಾರೆ?
7 ಕ್ರೈಸ್ತಪ್ರಪಂಚದ ಅನೇಕ ಧಾರ್ಮಿಕ ಗುಂಪುಗಳಿಗೆ ವ್ಯತಿರಿಕ್ತವಾಗಿ, ಯೆಹೋವನ ಸಾಕ್ಷಿಗಳು ತಾವು ಯಾವ ರೀತಿಯ ಆತ್ಮಿಕ ಆಡಳಿತದ ಕೆಳಗೆ ಕಾರ್ಯನಡಿಸಬೇಕು ಎಂಬುದನ್ನು ತಾವಾಗಿಯೇ ನಿರ್ಧರಿಸುವುದಿಲ್ಲ. ಈ ಯಥಾರ್ಥ ಕ್ರೈಸ್ತರು ಯೆಹೋವನ ಮಟ್ಟಗಳಿಗೆ ಬಲವಾಗಿ ಅಂಟಿಕೊಳ್ಳಲು ಪ್ರಯತ್ನಿಸುತ್ತಾರೆ. ಯೆಹೋವನ ಸಾಕ್ಷಿಗಳ ನಡುವೆ ಇರುವ ಮೇಲ್ವಿಚಾರಕರು ಚರ್ಚ್ ಆಡಳಿತದ ಒಂದು ರೀತಿಯ ಅಧಿಕಾರ ಮಂಡಲಿಯಿಂದ ಆಯ್ಕೆಮಾಡಲ್ಪಡುವುದಿಲ್ಲ. ಅವರು ಸಭಾಧಿಕಾರದಿಂದ, ಪಾದ್ರಿಪ್ರಭುತ್ವದಿಂದ ಅಥವಾ ಹಿರಿಯರ ಒಂದು ಗುಂಪಿನಿಂದ ಆಯ್ಕೆಮಾಡಲ್ಪಡುವುದಿಲ್ಲ. ಸಭೆಯ ಹೊರಗಿನ ಯಾವುದೇ ವಿಚಾರಗಳು ಈ ನೇಮಕಗಳ ಮೇಲೆ ಪ್ರಭಾವಬೀರಲು ಪ್ರಯತ್ನಿಸುವುದಾದರೆ, ಯೆಹೋವನ ಜನರು ಅದಕ್ಕೆ ರಾಜಿಯಾಗಲು ನಿರಾಕರಿಸುತ್ತಾರೆ ಮತ್ತು ಯೆಹೋವನ ಮಟ್ಟಗಳಿಗೆ ಅಂಟಿಕೊಳ್ಳುತ್ತಾರೆ. ಹೀಗೆ, ಪ್ರಥಮ ಶತಮಾನದಲ್ಲಿದ್ದ ಅಪೊಸ್ತಲರು “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಹೇಳಿದಾಗ ಅವರು ವ್ಯಕ್ತಪಡಿಸಿದ ನಿಲುವನ್ನೇ ಯೆಹೋವನ ಜನರು ಇಂದು ಸಹ ದೃಢತೆಯಿಂದ ಕಾಪಾಡಿಕೊಳ್ಳುತ್ತಾರೆ. (ಅ. ಕೃತ್ಯಗಳು 5:29) ಹೀಗೆ, ಎಲ್ಲ ವಿಷಯಗಳಲ್ಲಿ ಸಾಕ್ಷಿಗಳು ತಮ್ಮನ್ನು ದೇವರಿಗೆ ಅಧೀನಪಡಿಸಿಕೊಳ್ಳುತ್ತಾರೆ. (ಇಬ್ರಿಯ 12:9; ಯಾಕೋಬ 4:7) ದೇವಪ್ರಭುತ್ವ ಕಾರ್ಯವಿಧಾನಗಳನ್ನು ಅನುಸರಿಸುವುದರಿಂದ ದೇವರ ಮೆಚ್ಚಿಕೆಗೆ ಪಾತ್ರರಾಗಸಾಧ್ಯವಿದೆ.
8. ಯಾವ ರೀತಿಯಲ್ಲಿ ಪ್ರಜಾಪ್ರಭುತ್ವ ಹಾಗೂ ದೇವಪ್ರಭುತ್ವ ಕಾರ್ಯವಿಧಾನಗಳ ನಡುವೆ ಭಿನ್ನತೆಯಿದೆ?
8 ಮಹಾನ್ ದೇವಪ್ರಭುತ್ವಾಧಿಪತಿಯಾದ ಯೆಹೋವನ ಸೇವಕರಾಗಿರುವ ನಾವು, ಪ್ರಜಾಪ್ರಭುತ್ವ ಹಾಗೂ ದೇವಪ್ರಭುತ್ವ ಕಾರ್ಯವಿಧಾನಗಳ ನಡುವಿನ ಭಿನ್ನತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೇದು. ಪ್ರಜಾಪ್ರಭುತ್ವ ಕಾರ್ಯವಿಧಾನಗಳು ಸರಿಸಮಾನ ಪ್ರಾತಿನಿಧ್ಯತೆಯನ್ನು ಕೇಳಿಕೊಳ್ಳುತ್ತವೆ. ಅಧಿಕಾರಸ್ಥಾನಕ್ಕಾಗಿ ಪ್ರಚಾರ ಕಾರ್ಯಕ್ರಮಗಳು ಯೋಜಿಸಲ್ಪಡುತ್ತವೆ ಮತ್ತು ಬಹುಮತದಿಂದ ಚುನಾವಣೆ ಜಯಿಸಲ್ಪಡುತ್ತದೆ. ಆದರೆ ದೇವಪ್ರಭುತ್ವ ನೇಮಕಗಳಲ್ಲಿ ಇಂತಹ ಕಾರ್ಯವಿಧಾನಗಳು ಒಳಗೂಡಿರುವುದಿಲ್ಲ. ಈ ನೇಮಕಗಳು ಮನುಷ್ಯರಿಂದ ಕೊಡಲ್ಪಡುವುದಿಲ್ಲ; ಅಥವಾ ಯಾವುದೋ ಒಂದು ಕಾನೂನುಬದ್ಧ ಸಂಘಟನೆಯಿಂದ ಸಹ ಇವು ನೇಮಿಸಲ್ಪಡುವುದಿಲ್ಲ. “ಅನ್ಯಜನರಿಗೆ ಅಪೊಸ್ತಲನಾಗಿ” ಯೇಸುವಿನಿಂದ ಹಾಗೂ ಯೆಹೋವನಿಂದ ನೇಮಿಸಲ್ಪಟ್ಟದ್ದರ ಕುರಿತು ಸೂಚಿಸುತ್ತಾ ಪೌಲನು ಗಲಾತ್ಯದವರಿಗೆ, ತಾನು “ಮನುಷ್ಯರ ಕಡೆಯಿಂದಾಗಲಿ ಮನುಷ್ಯನ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಯೇಸುಕ್ರಿಸ್ತನ ಮುಖಾಂತರವೂ ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ” ನೇಮಿಸಲ್ಪಟ್ಟಿದ್ದೇನೆ ಎಂದು ಹೇಳಿದನು.—ರೋಮಾಪುರ 11:13; ಗಲಾತ್ಯ 1:1.
ಪವಿತ್ರಾತ್ಮದಿಂದ ನೇಮಿಸಲ್ಪಡುವುದು
9. ಅ. ಕೃತ್ಯಗಳು 20:28ನೆಯ ವಚನವು ಕ್ರೈಸ್ತ ಮೇಲ್ವಿಚಾರಕರ ನೇಮಕದ ಕುರಿತು ಏನು ಹೇಳುತ್ತದೆ?
9 ಎಫೆಸದಲ್ಲಿ ಜೀವಿಸುತ್ತಿದ್ದ ಮೇಲ್ವಿಚಾರಕರಿಗೆ ಪೌಲನು, ಅವರು ಪವಿತ್ರಾತ್ಮದ ಮೂಲಕ ದೇವರಿಂದ ನೇಮಿಸಲ್ಪಟ್ಟಿದ್ದಾರೆ ಎಂಬುದನ್ನು ಜ್ಞಾಪಕಹುಟ್ಟಿಸಿದನು. ಅವನು ಹೇಳಿದ್ದು: “ದೇವರು ಸ್ವರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.” (ಅ. ಕೃತ್ಯಗಳು 20:28, ಓರೆ ಅಕ್ಷರಗಳು ನಮ್ಮವು.) ಆ ಕ್ರೈಸ್ತ ಮೇಲ್ವಿಚಾರಕರು ದೇವರ ಮಂದೆಯ ಕುರುಬರೋಪಾದಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ, ಸತತವಾಗಿ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡುವಂತೆ ಅನುಮತಿಸುವ ಅಗತ್ಯವಿತ್ತು. ಒಂದುವೇಳೆ ನೇಮಿತ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಯು ದೇವರ ಮಟ್ಟಗಳಿಗನುಸಾರ ನಡೆಯದಿದ್ದಲ್ಲಿ, ಅವನನ್ನು ತಕ್ಕ ಕಾಲದಲ್ಲಿ ಆ ಸ್ಥಾನದಿಂದ ತೆಗೆದುಹಾಕುವಂತೆ ಪವಿತ್ರಾತ್ಮವು ಕಾರ್ಯನಡಿಸಲಿತ್ತು.
10. ದೇವಪ್ರಭುತ್ವ ನೇಮಕಗಳನ್ನು ನೀಡುವುದರಲ್ಲಿ ಪವಿತ್ರಾತ್ಮವು ಯಾವ ರೀತಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ?
10 ಯಾವ ರೀತಿಯಲ್ಲಿ ಪವಿತ್ರಾತ್ಮವು ಪ್ರಮುಖ ಪಾತ್ರವನ್ನು 1 ತಿಮೊಥೆಯ 3:1-10, 12, 13; ತೀತ 1:5-9.
ನಿರ್ವಹಿಸುತ್ತದೆ? ಎಲ್ಲಕ್ಕಿಂತಲೂ ಮೊದಲಾಗಿ, ಆತ್ಮಿಕ ಮೇಲ್ವಿಚಾರಣೆಗಾಗಿರುವ ಆವಶ್ಯಕತೆಗಳನ್ನು ವಿವರಿಸುವ ದಾಖಲೆಯು ಪವಿತ್ರಾತ್ಮದಿಂದ ಪ್ರೇರಿತವಾದದ್ದಾಗಿದೆ. ತಿಮೊಥೆಯನಿಗೆ ಹಾಗೂ ತೀತನಿಗೆ ಬರೆದ ತನ್ನ ಪತ್ರಗಳಲ್ಲಿ ಪೌಲನು, ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರು ಅನುಸರಿಸಬೇಕಾದ ಮಟ್ಟಗಳನ್ನು ವಿವರಿಸಿದನು. ಎಲ್ಲವನ್ನೂ ಸೇರಿಸಿ ಸುಮಾರು 16 ಬೇರೆ ಬೇರೆ ಆವಶ್ಯಕತೆಗಳನ್ನು ಅವನು ಮುಂತಿಳಿಸಿದನು. ಉದಾಹರಣೆಗಾಗಿ, ಮೇಲ್ವಿಚಾರಕರು ದೋಷಾರೋಪಣೆಯಿಲ್ಲದವರೂ, ಮದ್ಯಾಸಕ್ತಿಯಿಲ್ಲದವರೂ, ಜಿತೇಂದ್ರಿಯರೂ, ಕ್ರಮಬದ್ಧವಾಗಿ ನಡೆದುಕೊಳ್ಳುವವರೂ, ಅತಿಥಿಸತ್ಕಾರಮಾಡುವವರೂ, ಬೋಧಿಸುವುದರಲ್ಲಿ ಪ್ರವೀಣರೂ, ಕುಟುಂಬದ ಆದರ್ಶಪ್ರಾಯ ಶಿರಸ್ಸುಗಳೂ ಆಗಿರಬೇಕಿತ್ತು. ಅವರು ಮದ್ಯಪಾನೀಯಗಳನ್ನು ಮಿತಪ್ರಮಾಣದಲ್ಲಿ ಉಪಯೋಗಿಸುವವರೂ, ದ್ರವ್ಯಾಶೆಯಿಲ್ಲದವರೂ, ಆತ್ಮನಿಯಂತ್ರಣವುಳ್ಳವರೂ ಆಗಿರಬೇಕಿತ್ತು. ಶುಶ್ರೂಷಾ ಸೇವಕರಾಗಿ ನೇಮಕವನ್ನು ಪಡೆಯಲು ಪ್ರಯತ್ನಿಸುವಂತಹ ಪುರುಷರು ಸಹ ಇದೇ ರೀತಿಯ ಉಚ್ಚ ಮಟ್ಟಗಳನ್ನು ಅನುಸರಿಸಬೇಕಿತ್ತು.—11. ಸಭಾ ಜವಾಬ್ದಾರಿಗಳನ್ನು ಪಡೆದುಕೊಳ್ಳಲು ಬಯಸುವ ಪುರುಷರಿಗೆ ಇರಬೇಕಾದ ಅರ್ಹತೆಗಳಲ್ಲಿ ಕೆಲವು ಯಾವುವು?
11 ಈ ಅರ್ಹತೆಗಳನ್ನು ಪುನಃ ಪರಿಶೀಲಿಸುವಾಗ, ಯೆಹೋವನ ಆರಾಧನೆಯಲ್ಲಿ ಮುಂದಾಳುಗಳಾಗಿರುವವರು ಕ್ರೈಸ್ತ ನಡತೆಯಲ್ಲಿ ಆದರ್ಶಪ್ರಾಯರಾಗಿರಬೇಕು ಎಂಬುದು ಸ್ಪಷ್ಟವಾಗುತ್ತದೆ. ಸಭಾ ಜವಾಬ್ದಾರಿಗಳನ್ನು ಪಡೆದುಕೊಳ್ಳಲು ಬಯಸುವ ಪುರುಷರು, ಪವಿತ್ರಾತ್ಮವು ತಮ್ಮಲ್ಲಿ ಕಾರ್ಯನಡಿಸುತ್ತಿದೆ ಎಂಬುದರ ಪುರಾವೆಯನ್ನು ಒದಗಿಸಬೇಕು. (2 ತಿಮೊಥೆಯ 1:14) ದೇವರ ಪವಿತ್ರಾತ್ಮವು ಈ ಪುರುಷರಲ್ಲಿ “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಯಂತಹ ಫಲಗಳನ್ನು ಉಂಟುಮಾಡುತ್ತಿದೆ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗಬೇಕು. (ಗಲಾತ್ಯ 5:22, 23) ಇಂತಹ ಫಲವು ಜೊತೆ ವಿಶ್ವಾಸಿಗಳು ಹಾಗೂ ಇತರರೊಂದಿಗಿನ ಅವರ ವ್ಯವಹಾರಗಳಲ್ಲಿ ವ್ಯಕ್ತಪಡಿಸಲ್ಪಡುತ್ತದೆ. ಕೆಲವರು ಪವಿತ್ರಾತ್ಮದ ಕೆಲವೊಂದು ಫಲಗಳನ್ನು ಅತ್ಯುತ್ತಮ ರೀತಿಯಲ್ಲಿ ತೋರ್ಪಡಿಸಬಹುದು. ಅದೇ ಸಮಯದಲ್ಲಿ ಇನ್ನಿತರರು ಮೇಲ್ವಿಚಾರಕರಿಗಾಗಿರುವ ಇನ್ನಿತರ ಅರ್ಹತೆಗಳನ್ನು ಅತ್ಯುತ್ತಮ ರೀತಿಯಲ್ಲಿ ಮುಟ್ಟಬಹುದು. ಮೇಲ್ವಿಚಾರಕರು ಅಥವಾ ಶುಶ್ರೂಷಾ ಸೇವಕರೋಪಾದಿ ನೇಮಕವನ್ನು ಪಡೆಯಲು ನಿರೀಕ್ಷಿಸುವವರೆಲ್ಲರ ಜೀವನ ರೀತಿಯು, ಅವರು ಆತ್ಮಿಕ ಪುರುಷರಾಗಿದ್ದಾರೆ ಮತ್ತು ದೇವರ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವ ಆವಶ್ಯಕತೆಗಳಿಗನುಸಾರ ನಡೆಯಬಲ್ಲರು ಎಂಬುದನ್ನು ತೋರ್ಪಡಿಸುವಂತಿರಬೇಕು.
12. ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ ಎಂದು ಯಾರ ಬಗ್ಗೆ ಹೇಳಬಹುದಾಗಿದೆ?
12 ತನ್ನನ್ನು ಅನುಸರಿಸುವಂತೆ ಇತರರಿಗೆ ಪೌಲನು ಸಲಹೆ ನೀಡಿದಾಗ, ಅವನು ತುಂಬ ವಾಕ್ ಸ್ವಾತಂತ್ರ್ಯದಿಂದ ಸಲಹೆ ನೀಡಸಾಧ್ಯವಿತ್ತು. ಏಕೆಂದರೆ ‘ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ನಮಗೆ ಮಾದರಿಯನ್ನು ತೋರಿಸಿಹೋದ’ ಯೇಸು ಕ್ರಿಸ್ತನನ್ನು ಸ್ವತಃ ಪೌಲನು ಅನುಸರಿಸುತ್ತಿದ್ದನು. (1 ಪೇತ್ರ 2:21; 1 ಕೊರಿಂಥ 11:1) ಹೀಗೆ, ಮೇಲ್ವಿಚಾರಕರು ಅಥವಾ ಶುಶ್ರೂಷಾ ಸೇವಕರಾಗಿ ಶಾಸ್ತ್ರೀಯ ಆವಶ್ಯಕತೆಗಳನ್ನು ಮುಟ್ಟಿರುವವರು, ಖಂಡಿತವಾಗಿಯೂ ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ ಎಂದು ಹೇಳಬಹುದಾಗಿದೆ.
13. ಸಭೆಯಲ್ಲಿ ಸೇವಾ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಾಗಿ ಪುರುಷರನ್ನು ಶಿಫಾರಸ್ಸುಮಾಡುವವರಿಗೆ ಪವಿತ್ರಾತ್ಮವು ಹೇಗೆ ಸಹಾಯಮಾಡುತ್ತದೆ?
13 ಮೇಲ್ವಿಚಾರಕರ ಶಿಫಾರಸ್ಸು ಹಾಗೂ ನೇಮಕದ ವಿಷಯದಲ್ಲಿ ಪವಿತ್ರಾತ್ಮವು ಹೇಗೆ ಕಾರ್ಯನಡಿಸುತ್ತದೆ ಎಂಬುದನ್ನು ಸೂಚಿಸುವ ಇನ್ನೊಂದು ಅಂಶವಿದೆ. ‘ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುತ್ತಾನೆ’ ಎಂದು ಯೇಸು ಹೇಳಿದನು. (ಲೂಕ 11:13) ಆದುದರಿಂದ, ಸ್ಥಳಿಕ ಸಭೆಯಲ್ಲಿರುವ ಹಿರಿಯರು ಸಭಾ ಜವಾಬ್ದಾರಿಗಾಗಿ ಇತರ ಪುರುಷರನ್ನು ಶಿಫಾರಸ್ಸುಮಾಡಲು ಒಟ್ಟುಗೂಡುವಾಗ, ತಮ್ಮನ್ನು ಮಾರ್ಗದರ್ಶಿಸುವಂತೆ ಅವರು ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುತ್ತಾರೆ. ದೇವರ ಪ್ರೇರಿತ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವ ಅರ್ಹತೆಗಳ ಆಧಾರದ ಮೇಲೆ ಅವರು ಶಿಫಾರಸ್ಸುಮಾಡುತ್ತಾರೆ. ಮತ್ತು ಹೊಸ ನೇಮಕಕ್ಕಾಗಿ ಪರಿಗಣಿಸಲ್ಪಡುತ್ತಿರುವ ವ್ಯಕ್ತಿಯಲ್ಲಿ ಶಾಸ್ತ್ರೀಯ ಅರ್ಹತೆಗಳು ಇವೆಯೋ ಇಲ್ಲವೋ ಎಂಬುದನ್ನು ವಿವೇಚಿಸಿ ನೋಡುವಂತೆ ಪವಿತ್ರಾತ್ಮವು ಅವರಿಗೆ ಶಕ್ತಿ ನೀಡುತ್ತದೆ. ಯಾರು ಒಬ್ಬ ವ್ಯಕ್ತಿಯನ್ನು ಶಿಫಾರಸ್ಸುಮಾಡುತ್ತಾರೋ ಅವರು, ಅವನ ಹೊರತೋರಿಕೆ, ಶೈಕ್ಷಣಿಕ ಸಾಧನೆಗಳು ಅಥವಾ ಸಹಜ ಸಾಮರ್ಥ್ಯಗಳಿಂದ ಅನುಚಿತವಾಗಿ ಪ್ರಭಾವಿಸಲ್ಪಡಬಾರದು. ಆ ವ್ಯಕ್ತಿಯು, ಸಭೆಯ ಸದಸ್ಯರು ಯಾವುದೇ ಹಿಂಜರಿಕೆಯಿಲ್ಲದೇ ಆತ್ಮಿಕ ಸಲಹೆಗಾಗಿ ಅವನನ್ನು ಸಮೀಪಿಸಸಾಧ್ಯವಿರುವಂತಹ ಆತ್ಮಿಕ ವ್ಯಕ್ತಿಯಾಗಿದ್ದಾನೋ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗಿದೆ.
14. ಅ. ಕೃತ್ಯಗಳು 6:1ರಿಂದ 3ರ ವರೆಗಿನ ವಚನಗಳಿಂದ ನಾವು ಏನನ್ನು ಕಲಿತುಕೊಳ್ಳುತ್ತೇವೆ?
14 ಹಿರಿಯರು ಹಾಗೂ ಶುಶ್ರೂಷಾ ಸೇವಕರಾಗಿ ಸೇವೆಮಾಡಲು ಸಹೋದರರನ್ನು ಶಿಫಾರಸ್ಸುಮಾಡುವುದರಲ್ಲಿ, ಹಿರಿಯರ ಮಂಡಲಿ ಹಾಗೂ ಸಂಚರಣ ಮೇಲ್ವಿಚಾರಕರು ಒಳಗೂಡಿರುತ್ತಾರಾದರೂ, ವಾಸ್ತವಿಕವಾಗಿ ಪ್ರಥಮ ಶತಮಾನದಲ್ಲಿ ಇಡಲ್ಪಟ್ಟ ಮಾದರಿಗನುಸಾರವೇ ನೇಮಕಗಳನ್ನು ಮಾಡಲಾಗುತ್ತದೆ. ಒಂದು ಸಂದರ್ಭದಲ್ಲಿ, ಪ್ರಾಮುಖ್ಯವಾದ ಒಂದು ನೇಮಕವನ್ನು ನಿರ್ವಹಿಸಲು ಆತ್ಮಿಕವಾಗಿ ಅರ್ಹರಾಗಿರುವ ಪುರುಷರ ಅಗತ್ಯವು ಉಂಟಾಯಿತು. ಆಗ ಆಡಳಿತ ಮಂಡಲಿಯು ಈ ನಿರ್ದೇಶನವನ್ನು ನೀಡಿತು: “ಸಂಭಾವಿತರೂ ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಆಗಿರುವ ಏಳು ಮಂದಿಯನ್ನು ನಿಮ್ಮೊಳಗಿಂದ ನೋಡಿ ಆರಿಸಿಕೊಳ್ಳಿರಿ; ಅವರನ್ನು ಈ ಕೆಲಸದ ಮೇಲೆ ನೇಮಿಸುವೆವು.” (ಅ. ಕೃತ್ಯಗಳು 6:1-3) ಈ ಸನ್ನಿವೇಶದೊಂದಿಗೆ ನೇರವಾಗಿ ವ್ಯವಹರಿಸಿದ ಪುರುಷರು ಶಿಫಾರಸ್ಸುಗಳನ್ನು ಮಾಡಿದರಾದರೂ, ಯೆರೂಸಲೇಮಿನಲ್ಲಿದ್ದ ಜವಾಬ್ದಾರಿಯುತ ಪುರುಷರು ನೇಮಕಗಳನ್ನು ಮಾಡಿದರು. ಇಂದು ಸಹ ಅದೇ ರೀತಿಯ ವಿಧಾನವು ಅನುಸರಿಸಲ್ಪಡುತ್ತದೆ.
15. ಜವಾಬ್ದಾರಿಯುತ ಪುರುಷರನ್ನು ನೇಮಿಸುವ ವಿಷಯದಲ್ಲಿ ಆಡಳಿತ ಮಂಡಲಿಯು ಹೇಗೆ ಒಳಗೂಡಿದೆ?
ಲೂಕ 12:48) ಬ್ರಾಂಚ್ ಕಮಿಟಿಯ ಸದಸ್ಯರನ್ನು ನೇಮಿಸುವುದರ ಜೊತೆಗೆ ಆಡಳಿತ ಮಂಡಲಿಯು ಬೆತೆಲ್ ಹಿರಿಯರನ್ನು ಹಾಗೂ ಸಂಚರಣ ಮೇಲ್ವಿಚಾರಕರನ್ನು ಸಹ ನೇಮಿಸುತ್ತದೆ. ಆದರೂ, ಇನ್ನಿತರ ನೇಮಕಗಳನ್ನು ಮಾಡುವುದರಲ್ಲಿ ತಮ್ಮ ಪರವಾಗಿ ಕಾರ್ಯನಡಿಸುವಂತೆ ಆಡಳಿತ ಮಂಡಲಿಯು ಜವಾಬ್ದಾರಿಯುತ ಸಹೋದರರನ್ನು ನೇಮಿಸುತ್ತದೆ. ಇದಕ್ಕೆ ಒಂದು ಶಾಸ್ತ್ರೀಯ ಪೂರ್ವನಿದರ್ಶನವೂ ಇದೆ.
15 ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಬ್ರಾಂಚ್ ಕಮಿಟಿಗಳ ಎಲ್ಲ ಸದಸ್ಯರನ್ನು ನೇರವಾಗಿ ನೇಮಿಸುತ್ತದೆ. ಯಾವ ವ್ಯಕ್ತಿಗೆ ಇಂತಹ ಒಂದು ಗಂಭೀರ ಜವಾಬ್ದಾರಿಯನ್ನು ನೀಡಸಾಧ್ಯವಿದೆ ಎಂಬುದನ್ನು ನಿರ್ಧರಿಸುವಾಗ, ಯೇಸುವಿನ ಈ ಹೇಳಿಕೆಯು ಆಡಳಿತ ಮಂಡಲಿಯ ಮನಸ್ಸಿನಲ್ಲಿರುತ್ತದೆ: “ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು; ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳುವರು.” (‘ನಾನು ನಿಮಗೆ ಅಪ್ಪಣೆಕೊಟ್ಟಂತೆ ಹಿರಿಯರನ್ನು ನೇಮಿಸಿ’
16. ಪೌಲನು ತೀತನನ್ನು ಏಕೆ ಕ್ರೇತದ್ವೀಪದಲ್ಲೇ ಬಿಟ್ಟುಬಂದನು, ಮತ್ತು ಇಂದಿನ ದೇವಪ್ರಭುತ್ವ ನೇಮಕಗಳ ವಿಷಯದಲ್ಲಿ ಇದು ಏನನ್ನು ಸೂಚಿಸುತ್ತದೆ?
16 ತನ್ನ ಜೊತೆ ಕೆಲಸಗಾರನಾಗಿದ್ದ ತೀತನಿಗೆ ಪೌಲನು ಹೇಳಿದ್ದು: “ನೀನು ಕ್ರೇತದ್ವೀಪದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ ಪಟ್ಟಣಪಟ್ಟಣಗಳಲ್ಲೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ ಅಪ್ಪಣೆಕೊಟ್ಟು ನಿನ್ನನ್ನು ಅಲ್ಲೇ ಬಿಟ್ಟು ಬಂದೆನಲ್ಲಾ.” (ತೀತ 1:5) ತದನಂತರ ಪೌಲನು, ಅಂತಹ ನೇಮಕಗಳಿಗಾಗಿ ಅರ್ಹರಾಗುವ ಪುರುಷರಲ್ಲಿ ಕಂಡುಕೊಳ್ಳಬೇಕಾದ ಅರ್ಹತೆಗಳನ್ನು ತೀತನಿಗೆ ತಿಳಿಯಪಡಿಸಿದನು. ಆದುದರಿಂದ, ಇಂದು ಹಿರಿಯರು ಹಾಗೂ ಶುಶ್ರೂಷಾ ಸೇವಕರ ನೇಮಕಗಳನ್ನು ಮಾಡುವುದರಲ್ಲಿ ತಮ್ಮನ್ನು ಪ್ರತಿನಿಧಿಸಲಿಕ್ಕಾಗಿ, ಆಡಳಿತ ಮಂಡಲಿಯು ಬ್ರಾಂಚ್‌ಗಳಲ್ಲಿರುವ ಅರ್ಹ ಸಹೋದರರನ್ನು ನೇಮಿಸುತ್ತದೆ. ಆಡಳಿತ ಮಂಡಲಿಯ ಪರವಾಗಿ ಪ್ರತಿನಿಧಿಗಳೋಪಾದಿ ಕಾರ್ಯನಡಿಸುವವರು, ಅಂತಹ ನೇಮಕಗಳನ್ನು ಮಾಡುವುದಕ್ಕಾಗಿ ಕೊಡಲ್ಪಟ್ಟಿರುವ ಶಾಸ್ತ್ರೀಯ ಮಾರ್ಗದರ್ಶನಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಅವುಗಳನ್ನು ಅನುಸರಿಸುವಂತೆ ಜಾಗ್ರತೆಯನ್ನು ವಹಿಸಲಾಗುತ್ತದೆ. ಆದುದರಿಂದ, ಆಡಳಿತ ಮಂಡಲಿಯ ಮಾರ್ಗದರ್ಶನಕ್ಕನುಸಾರ, ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಸೇವೆಮಾಡುವಂತೆ ಅರ್ಹ ಪುರುಷರನ್ನು ನೇಮಿಸಲಾಗುತ್ತದೆ.
17. ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರ ನೇಮಕಕ್ಕಾಗಿ ಮಾಡಲ್ಪಡುವ ಶಿಫಾರಸ್ಸುಗಳನ್ನು ಒಂದು ಬ್ರಾಂಚ್ ಆಫೀಸು ಹೇಗೆ ನಿರ್ವಹಿಸುತ್ತದೆ?
17 ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರ ನೇಮಕಕ್ಕಾಗಿ ಮಾಡಲ್ಪಡುವ ಶಿಫಾರಸ್ಸುಗಳು, ವಾಚ್ ಟವರ್ ಸೊಸೈಟಿಯ ಒಂದು ಬ್ರಾಂಚ್ ಆಫೀಸಿಗೆ ಕಳುಹಿಸಲ್ಪಡುವಾಗ, ಅಂತಹ ನೇಮಕಗಳನ್ನು ಮಾಡುವ ವಿಷಯದಲ್ಲಿ ಅನುಭವಸ್ಥ ಪುರುಷರು ದೇವರ ಪವಿತ್ರಾತ್ಮದ ಮಾರ್ಗದರ್ಶನದ ಮೇಲೆ ಆತುಕೊಂಡಿರುತ್ತಾರೆ. ಯಾರ ತಲೆಯ ಮೇಲೆಯಾದರೂ ಹಸ್ತವನ್ನಿಟ್ಟು ಅವಸರದಿಂದ ಸಭೆಯ ಉದ್ಯೋಗಕ್ಕಾಗಿ ನೇಮಿಸಬಾರದು ಮತ್ತು ಅವನ ಪಾಪದಲ್ಲಿ ಪಾಲುಗಾರರಾಗಬಾರದು ಎಂಬುದನ್ನು 1 ತಿಮೊಥೆಯ 5:22.
ಮನಗಂಡಿರುವ ಈ ಪುರುಷರಿಗೆ ಹೊಣೆಗಾರಿಕೆಯ ಅನಿಸಿಕೆಯಿರುತ್ತದೆ.—18, 19. (ಎ) ನಿರ್ದಿಷ್ಟ ನೇಮಕಗಳು ಹೇಗೆ ಕಳುಹಿಸಲ್ಪಡುತ್ತವೆ? (ಬಿ) ಶಿಫಾರಸ್ಸು ಹಾಗೂ ನೇಮಕದ ಸಂಪೂರ್ಣ ಕಾರ್ಯವಿಧಾನವು ಹೇಗೆ ನಡೆಯುತ್ತದೆ?
18 ಒಂದು ಕಾನೂನುಬದ್ಧ ಸಂಘಟನೆಯಿಂದ ಕೆಲವೊಂದು ನೇಮಕಗಳು ಅಧಿಕೃತ ಸ್ಟ್ಯಾಂಪ್ ಇರುವ ಪತ್ರದ ಮೂಲಕ ಕಳುಹಿಸಲ್ಪಡಬಹುದು. ಸಭೆಯಲ್ಲಿ ಒಬ್ಬನಿಗಿಂತ ಹೆಚ್ಚು ಸಹೋದರರನ್ನು ನೇಮಿಸುವಾಗ, ಅಂತಹ ಪತ್ರವನ್ನು ಉಪಯೋಗಿಸಬಹುದು.
19 ದೇವಪ್ರಭುತ್ವ ನೇಮಕಗಳು, ಯೆಹೋವನಿಂದ ಆತನ ಮಗನ ಮೂಲಕ ಮತ್ತು ಭೂಮಿಯಲ್ಲಿ ದೇವರ ದೃಶ್ಯ ಮಾಧ್ಯಮವಾಗಿರುವ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಹಾಗೂ ಅದರ ಆಡಳಿತ ಮಂಡಲಿಯ ಮೂಲಕ ಬರುತ್ತವೆ. (ಮತ್ತಾಯ 24:45-47) ಅಂತಹ ಶಿಫಾರಸ್ಸು ಹಾಗೂ ನೇಮಕದ ಸಂಪೂರ್ಣ ಕಾರ್ಯವಿಧಾನವನ್ನು ಪವಿತ್ರಾತ್ಮವು ಮಾರ್ಗದರ್ಶಿಸುತ್ತದೆ. ಏಕೆಂದರೆ ಈ ನೇಮಕದ ಅರ್ಹತೆಗಳು ದೇವರ ವಾಕ್ಯದಲ್ಲಿ ದಾಖಲಿಸಲ್ಪಟ್ಟಿವೆ, ಮತ್ತು ದೇವರ ವಾಕ್ಯವು ಪವಿತ್ರಾತ್ಮದಿಂದ ಪ್ರೇರಿತವಾದದ್ದಾಗಿದೆ. ಅಷ್ಟುಮಾತ್ರವಲ್ಲ, ನೇಮಕವನ್ನು ಪಡೆಯುವ ವ್ಯಕ್ತಿಯು, ಆ ಪವಿತ್ರಾತ್ಮದ ಫಲವನ್ನು ಉತ್ಪಾದಿಸುತ್ತಿರುವ ಪುರಾವೆಯನ್ನು ನೀಡುತ್ತಾನೆ. ಆದುದರಿಂದ, ನೇಮಕಗಳು ಪವಿತ್ರಾತ್ಮದಿಂದ ಮಾಡಲ್ಪಟ್ಟವುಗಳಾಗಿವೆ ಎಂದು ಪರಿಗಣಿಸತಕ್ಕದ್ದು. ಪ್ರಥಮ ಶತಮಾನದಲ್ಲಿ ಮೇಲ್ವಿಚಾರಕರು ಮತ್ತು ಶುಶ್ರೂಷಾ ಸೇವಕರು ದೇವಪ್ರಭುತ್ವಕ್ಕನುಸಾರವಾಗಿ ನೇಮಿಸಲ್ಪಟ್ಟಂತೆಯೇ ಇಂದು ಸಹ ನೇಮಿಸಲ್ಪಡುತ್ತಾರೆ.
ಯೆಹೋವನ ಮಾರ್ಗದರ್ಶನಕ್ಕಾಗಿ ಆಭಾರಿಗಳು
20. ಕೀರ್ತನೆ 133:1ರಲ್ಲಿ ದಾಖಲಿಸಲ್ಪಟ್ಟಿರುವ ದಾವೀದನ ಭಾವನೆಗಳಲ್ಲಿ ನಾವು ಸಹ ಪಾಲಿಗರಾಗಿದ್ದೇವೆ ಏಕೆ?
20 ಆತ್ಮಿಕ ಸಮೃದ್ಧಿ ಹಾಗೂ ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ದೇವಪ್ರಭುತ್ವ ಅಭಿವೃದ್ಧಿ ಆಗುತ್ತಿರುವಂತಹ ಈ ಸಮಯದಲ್ಲಿ, ನಾವು ಯೆಹೋವನಿಗೆ ಆಭಾರಿಗಳಾಗಿದ್ದೇವೆ. ಏಕೆಂದರೆ ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರ ನೇಮಕಕ್ಕೆ ಆತನೇ ಜವಾಬ್ದಾರನಾಗಿದ್ದಾನೆ. ಈ ಶಾಸ್ತ್ರೀಯ ಏರ್ಪಾಡು, ಯೆಹೋವನ ಸಾಕ್ಷಿಗಳೋಪಾದಿ ನಾವು ದೇವರ ನೀತಿಯ ಉಚ್ಚ ಮಟ್ಟಗಳನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುತ್ತದೆ. ಅಷ್ಟುಮಾತ್ರವಲ್ಲ, ಈ ಮೇಲ್ವಿಚಾರಕರ ಹಾಗೂ ಶುಶ್ರೂಷಾ ಸೇವಕರ ಕ್ರೈಸ್ತ ಮನೋಭಾವ ಹಾಗೂ ಶ್ರದ್ಧಾಪೂರ್ವಕ ಪ್ರಯತ್ನಗಳು, ಯೆಹೋವನ ಸೇವಕರೋಪಾದಿ ನಮ್ಮ ಶಾಂತಿ ಹಾಗೂ ಐಕ್ಯಭಾವಕ್ಕೆ ಮಹತ್ತರ ರೀತಿಯಲ್ಲಿ ಸಹಾಯಮಾಡುತ್ತವೆ. ಆದುದರಿಂದ, ಕೀರ್ತನೆಗಾರನಾದ ದಾವೀದನಂತೆ ಉದ್ಗರಿಸುವ ಪ್ರಚೋದನೆ ನಮಗಾಗಿದೆ: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!”—ಕೀರ್ತನೆ 133:1.
21. ಯೆಶಾಯ 60:17ನೆಯ ವಚನವು ಇಂದು ಹೇಗೆ ನೆರವೇರಿಕೆಯನ್ನು ಪಡೆಯುತ್ತಿದೆ?
21 ತನ್ನ ವಾಕ್ಯ ಮತ್ತು ಪವಿತ್ರಾತ್ಮದ ಮೂಲಕ ಯೆಹೋವನು ಕೊಟ್ಟಿರುವ ಮಾರ್ಗದರ್ಶನಕ್ಕಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! ಮತ್ತು ಯೆಶಾಯ 60:17ರಲ್ಲಿ ದಾಖಲಿತವಾಗಿರುವ ಮಾತುಗಳು ಸಹ ಅರ್ಥಭರಿತವಾದವುಗಳಾಗಿವೆ: “ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.” ಯೆಹೋವನ ಸಾಕ್ಷಿಗಳ ನಡುವೆ ದೇವಪ್ರಭುತ್ವ ವಿಧಾನಗಳು ಪೂರ್ಣ ರೀತಿಯಲ್ಲಿ ಪ್ರಗತಿಪರವಾಗಿ ಕಾರ್ಯರೂಪಕ್ಕೆ ತರಲ್ಪಟ್ಟಂತೆ, ದೇವರ ಭೂಸಂಸ್ಥೆಯಾದ್ಯಂತ ಈ ಆಶೀರ್ವದಿತ ಸ್ಥಿತಿಗಳಲ್ಲಿ ನಾವು ಆನಂದಿಸುತ್ತಿದ್ದೇವೆ.
22. ಯಾವುದಕ್ಕಾಗಿ ನಾವು ಆಭಾರಿಗಳಾಗಿದ್ದೇವೆ, ಮತ್ತು ನಾವು ಯಾವ ನಿರ್ಧಾರವನ್ನು ಮಾಡಬೇಕು?
22 ನಮ್ಮ ನಡುವೆ ಇರುವ ದೇವಪ್ರಭುತ್ವ ಏರ್ಪಾಡುಗಳಿಗಾಗಿ ನಾವು ತುಂಬ ಆಭಾರಿಗಳಾಗಿದ್ದೇವೆ. ಮತ್ತು ದೇವಪ್ರಭುತ್ವಕ್ಕನುಸಾರ ನೇಮಿಸಲ್ಪಟ್ಟಿರುವ ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರು ಮಾಡುವ ಶ್ರಮಭರಿತ ಹಾಗೂ ಸಂತೃಪ್ತಿಕರ ಕೆಲಸವನ್ನು ನಾವು ಬಹಳವಾಗಿ ಗಣ್ಯಮಾಡುತ್ತೇವೆ. ನಮಗೆ ಆತ್ಮಿಕ ಸಮೃದ್ಧಿಯನ್ನು ನೀಡಿ, ಇಷ್ಟೊಂದು ಸಂಪದ್ಭರಿತ ರೀತಿಯಲ್ಲಿ ನಮ್ಮನ್ನು ಆಶೀರ್ವದಿಸಿರುವ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯನ್ನು ನಾವು ಮನಃಪೂರ್ವಕವಾಗಿ ಘನಪಡಿಸುತ್ತೇವೆ. (ಜ್ಞಾನೋಕ್ತಿ 10:22) ಆದುದರಿಂದ, ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಹಾಕುವ ನಿರ್ಧಾರವನ್ನು ನಾವು ಮಾಡೋಣ. ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನ ಮಹಾನ್ ಹಾಗೂ ಪವಿತ್ರ ನಾಮಕ್ಕೆ ಘನತೆ, ಸ್ತುತಿ ಮತ್ತು ಮಹಿಮೆಯನ್ನು ತರಲಿಕ್ಕಾಗಿ ಐಕ್ಯರಾಗಿ ಸೇವೆಸಲ್ಲಿಸುವುದನ್ನು ಮುಂದುವರಿಸೋಣ.
ನೀವು ಹೇಗೆ ಉತ್ತರಿಸುವಿರಿ?
• ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರ ನೇಮಕವು ಪ್ರಜಾಪ್ರಭುತ್ವದ್ದಲ್ಲ, ಬದಲಾಗಿ ದೇವಪ್ರಭುತ್ವದ್ದಾಗಿದೆ ಎಂದು ನಾವೇಕೆ ಹೇಳಬಹುದು?
• ಜವಾಬ್ದಾರಿಯುತರಾದ ಕ್ರೈಸ್ತ ಪುರುಷರು ಪವಿತ್ರಾತ್ಮದ ಮೂಲಕ ಹೇಗೆ ನೇಮಿಸಲ್ಪಡುತ್ತಾರೆ?
• ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರ ನೇಮಕದಲ್ಲಿ ಆಡಳಿತ ಮಂಡಲಿಯು ಹೇಗೆ ಒಳಗೂಡಿದೆ?
• ದೇವಪ್ರಭುತ್ವ ನೇಮಕಗಳ ವಿಷಯದಲ್ಲಿ ನಾವು ಯೆಹೋವನಿಗೆ ಏಕೆ ಆಭಾರಿಗಳಾಗಿರಬೇಕು?
[ಅಧ್ಯಯನ ಪ್ರಶ್ನೆಗಳು]
[ಪುಟ 15ರಲ್ಲಿರುವ ಚಿತ್ರಗಳು]
ಹಿರಿಯರು ಮತ್ತು ಶುಶ್ರೂಷಾ ಸೇವಕರು, ದೇವಪ್ರಭುತ್ವ ನೇಮಕಕ್ಕನುಸಾರ ಸೇವೆಮಾಡುವ ಸುಯೋಗವನ್ನು ಹೊಂದಿದ್ದಾರೆ