ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಹಾಕುವುದು
ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಹಾಕುವುದು
“ಶಾಂತಿದಾಯಕನಾದ ದೇವರು, ನೀವು ತನ್ನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಯನ್ನು ನಿಮಗೆ ಅನುಗ್ರಹಿಸಲಿ.”—ಇಬ್ರಿಯ 13:21.
1. ಲೋಕದ ಜನಸಂಖ್ಯೆ ಎಷ್ಟಾಗಿದೆ, ಮತ್ತು ಎಷ್ಟು ಜನರು ಬೇರೆ ಬೇರೆ ಧರ್ಮಗಳ ಸದಸ್ಯರಾಗಿ ಲೆಕ್ಕಿಸಲ್ಪಟ್ಟಿದ್ದಾರೆ?
ಇಸವಿ 1999ರಲ್ಲಿ, ಲೋಕದ ಜನಸಂಖ್ಯೆಯು 600 ಕೋಟಿಯನ್ನು ಮುಟ್ಟಿತು! ದ ವರ್ಲ್ಡ್ ಆ್ಯಲ್ಮನಾಕ್ ಎಂಬ ಪುಸ್ತಕವು ಸೂಚಿಸುವುದೇನೆಂದರೆ, ಈ ಜನಸಂಖ್ಯೆಯಲ್ಲಿ 116,50,00,000 ಮಂದಿ ಮುಸಲ್ಮಾನರಾಗಿದ್ದಾರೆ; 103,00,00,000 ಮಂದಿ ರೋಮನ್ ಕ್ಯಾಥೊಲಿಕರಾಗಿದ್ದಾರೆ; 76,20,00,000 ಮಂದಿ ಹಿಂದೂಗಳಾಗಿದ್ದಾರೆ; 35,40,00,000 ಮಂದಿ ಬೌದ್ಧರಾಗಿದ್ದಾರೆ; 31,60,00,000 ಮಂದಿ ಪ್ರಾಟೆಸ್ಟಂಟರಾಗಿದ್ದಾರೆ; ಮತ್ತು 21,40,00,000 ಮಂದಿ ಆರ್ತೊಡಾಕ್ಸ್ ಆಗಿದ್ದಾರೆ.
2. ಇಂದು ಅಸ್ತಿತ್ವದಲ್ಲಿರುವ ಧಾರ್ಮಿಕ ಸನ್ನಿವೇಶದ ಕುರಿತು ಏನು ಹೇಳಸಾಧ್ಯವಿದೆ?
2 ಇಂದು ಅಸ್ತಿತ್ವದಲ್ಲಿರುವ ಧಾರ್ಮಿಕ ವಿಭಜನೆ ಹಾಗೂ ಗೊಂದಲವನ್ನು ಪರಿಗಣಿಸುವಾಗ, ಈ ಧರ್ಮಗಳಿಗೆ ಸೇರಿರುವ ದಶಕೋಟಿಯಷ್ಟು ಜನರು, ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ನಡೆಯುತ್ತಿದ್ದಾರೋ? ಖಂಡಿತವಾಗಿಯೂ ಇಲ್ಲ. ಏಕೆಂದರೆ “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.” (1 ಕೊರಿಂಥ 14:33) ಇನ್ನೊಂದು ಕಡೆಯಲ್ಲಿ, ಯೆಹೋವನ ಸೇವಕರ ಅಂತಾರಾಷ್ಟ್ರೀಯ ಸಹೋದರತ್ವದ ಕುರಿತಾಗಿ ಏನು? (1 ಪೇತ್ರ 2:17) ಜಾಗರೂಕತೆಯಿಂದ ಮಾಡಿದ ಪರಿಶೀಲನೆಯು ರುಜುಪಡಿಸುವುದೇನೆಂದರೆ, ‘ಶಾಂತಿದಾಯಕನಾದ ದೇವರು ತನ್ನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಯನ್ನು ಅವರಿಗೆ ಒದಗಿಸುತ್ತಾನೆ.’—ಇಬ್ರಿಯ 13:20, 21.
3. ಸಾ.ಶ. 33ರ ಪಂಚಾಶತ್ತಮದಂದು ಯೆರೂಸಲೇಮಿನಲ್ಲಿ ಏನು ಸಂಭವಿಸಿತು, ಮತ್ತು ಏಕೆ?
3 ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸುತ್ತಿರುವ ಜನರ ಸಂಖ್ಯೆಯು, ಅವರು ದೇವರ ಅನುಗ್ರಹವನ್ನು ಪಡೆದುಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಒರೆಗಲ್ಲಾಗಿರುವುದಿಲ್ಲ ಎಂಬುದಂತೂ ನಿಶ್ಚಯ; ಅಥವಾ ದೊಡ್ಡ ಸಂಖ್ಯೆಗಳಿಂದ ದೇವರು ಪ್ರಭಾವಿತನೂ ಆಗುವುದಿಲ್ಲ. ಇಸ್ರಾಯೇಲ್ಯರು “ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಮಂದಿ”ಯಾಗಿದ್ದಾರೆಂಬ ಕಾರಣಕ್ಕಾಗಿ ಆತನು ಅವರನ್ನು ಆರಿಸಿಕೊಳ್ಳಲಿಲ್ಲ. ವಾಸ್ತವದಲ್ಲಿ, ಅವರು ‘ಎಲ್ಲಾ ಜನಾಂಗಗಳಿಗಿಂತಲೂ ಸ್ವಲ್ಪ ಮಂದಿಯೇ’ ಆಗಿದ್ದರು. (ಧರ್ಮೋಪದೇಶಕಾಂಡ 7:7) ಆದರೆ, ಇಸ್ರಾಯೇಲ್ ಜನಾಂಗದವರು ಯೆಹೋವನಿಗೆ ಅಪನಂಬಿಗಸ್ತರಾದ್ದರಿಂದ, ಸಾ.ಶ. 33ರ ಪಂಚಾಶತ್ತಮದಂದು ಯೆಹೋವನು ತನ್ನ ಅನುಗ್ರಹವನ್ನು ಯೇಸು ಕ್ರಿಸ್ತನ ಹಿಂಬಾಲಕರಿಂದ ರಚಿತವಾಗಿದ್ದ ಹೊಸ ಸಭೆಗೆ ವರ್ಗಾಯಿಸಿದನು. ಅವರು ಯೆಹೋವನ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು, ದೇವರು ಹಾಗೂ ಕ್ರಿಸ್ತನ ಕುರಿತಾದ ಸತ್ಯತೆಯನ್ನು ಇತರರಿಗೆ ತಿಳಿಸುವುದರಲ್ಲಿ ಹುರುಪಿನಿಂದ ಮುಂದೆ ಸಾಗಿದರು.—ಅ. ಕೃತ್ಯಗಳು 2:41, 42.
ಸತತವಾಗಿ ಅಭಿವೃದ್ಧಿಹೊಂದುವುದು
4. ಆರಂಭದ ಕ್ರೈಸ್ತ ಸಭೆಯು ಸತತವಾಗಿ ಅಭಿವೃದ್ಧಿಯನ್ನು ಹೊಂದುತ್ತಿತ್ತು ಎಂದು ನೀವೇಕೆ ಹೇಳಸಾಧ್ಯವಿದೆ?
4 ಪ್ರಥಮ ಶತಮಾನದಲ್ಲಿ, ಕ್ರೈಸ್ತ ಸಭೆಯು ಹೊಸ ಅ. ಕೃತ್ಯಗಳು 10:21, 22; 13:46, 47; 2 ತಿಮೊಥೆಯ 1:13; 4:5; ಇಬ್ರಿಯ 6:1-3; 2 ಪೇತ್ರ 3:17, 18.
ಹೊಸ ಟೆರಿಟೊರಿಗಳನ್ನು ಆರಂಭಿಸುತ್ತಾ, ಶಿಷ್ಯರನ್ನಾಗಿ ಮಾಡುತ್ತಾ, ದೇವರ ಉದ್ದೇಶಗಳ ಕುರಿತಾದ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಳ್ಳುತ್ತಾ, ಸತತವಾಗಿ ಅಭಿವೃದ್ಧಿಹೊಂದುತ್ತಿತ್ತು. ಆರಂಭದ ಕ್ರೈಸ್ತರು, ದೈವಪ್ರೇರಿತ ಪತ್ರಗಳ ಮೂಲಕ ಒದಗಿಸಲ್ಪಟ್ಟ ಆತ್ಮಿಕ ಬೆಳಕಿನೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಹಾಕಿದರು. ಅಪೊಸ್ತಲರ ಹಾಗೂ ಇನ್ನಿತರರ ವೈಯಕ್ತಿಕ ಭೇಟಿಗಳಿಂದ ಹುರಿದುಂಬಿಸಲ್ಪಟ್ಟ ಅವರು ತಮ್ಮ ಶುಶ್ರೂಷೆಯನ್ನು ಪೂರ್ಣರೀತಿಯಲ್ಲಿ ನೆರವೇರಿಸಿದರು. ಇದು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ದಾಖಲಿಸಲ್ಪಟ್ಟಿದೆ.—5. ಇಂದು ದೇವರ ಸಂಸ್ಥೆಯು ಏಕೆ ಪ್ರಗತಿಹೊಂದುತ್ತಿದೆ, ಮತ್ತು ನಾವು ಏಕೆ ಅದರ ಜೊತೆ ಜೊತೆಯಾಗಿ ಹೆಜ್ಜೆಯಿಡಲು ಪ್ರಯತ್ನಿಸಬೇಕಾಗಿದೆ?
5 ಆರಂಭದ ಕ್ರೈಸ್ತರಂತೆ, ಕೆಲವೇ ಸಂಖ್ಯೆಯಲ್ಲಿದ್ದ ಯೆಹೋವನ ಆಧುನಿಕ ದಿನದ ಸಾಕ್ಷಿಗಳು ಇಂದು ಬಹುದೊಡ್ಡ ಸಂಖ್ಯೆಯಾಗಿ ಬೆಳೆದಿದ್ದಾರೆ. (ಜೆಕರ್ಯ 4:8-10) 19ನೆಯ ಶತಮಾನದಿಂದ, ಯೆಹೋವನ ಆತ್ಮವು ಆತನ ಸಂಸ್ಥೆಯ ಮೇಲಿದೆಯೆಂಬುದಕ್ಕೆ ಸ್ಪಷ್ಟವಾದ ಪುರಾವೆಯನ್ನು ನಾವು ನೋಡಸಾಧ್ಯವಿದೆ. ಏಕೆಂದರೆ ನಾವು ಮಾನವ ಶಕ್ತಿಯ ಮೇಲಲ್ಲ, ಬದಲಾಗಿ ಪವಿತ್ರಾತ್ಮದ ಮಾರ್ಗದರ್ಶನದ ಮೇಲೆ ಆತುಕೊಂಡಿರುವುದರಿಂದ, ಶಾಸ್ತ್ರವಚನಗಳ ಕುರಿತಾದ ನಮ್ಮ ತಿಳುವಳಿಕೆಯಲ್ಲಿ ಹಾಗೂ ದೇವರ ಚಿತ್ತವನ್ನು ಮಾಡುವುದರಲ್ಲಿ ನಾವು ಪ್ರಗತಿಯನ್ನು ಮಾಡುತ್ತಾ ಬಂದಿದ್ದೇವೆ. (ಜೆಕರ್ಯ 4:6) ಈಗ ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವುದರಿಂದ, ಯೆಹೋವನ ಪ್ರಗತಿಪರ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಯಿಡುವುದು ಅತ್ಯಾವಶ್ಯಕವಾಗಿದೆ. (2 ತಿಮೊಥೆಯ 3:1-5) ಹೀಗೆ ಮಾಡುವುದರಿಂದ ನಾವು ನಮ್ಮ ನಿರೀಕ್ಷೆಯನ್ನು ಜೀವಂತವಾಗಿರಿಸಸಾಧ್ಯವಿದೆ ಮತ್ತು ಈ ಸದ್ಯದ ವಿಷಯಗಳ ವ್ಯವಸ್ಥೆಯು ಅಂತಿಮವಾಗಿ ನಾಶವಾಗುವ ಮುಂಚೆ, ದೇವರ ಸ್ಥಾಪಿತ ರಾಜ್ಯದ ಕುರಿತಾಗಿ ಸರ್ವಲೋಕದಲ್ಲಿ ಎಡೆಬಿಡದೆ ಸಾಕ್ಷಿಯನ್ನು ಕೊಡುವ ಕೆಲಸದಲ್ಲಿ ಪಾಲ್ಗೊಳ್ಳಸಾಧ್ಯವಿದೆ.—ಮತ್ತಾಯ 24:3-14.
6, 7. ಯೆಹೋವನ ಸಂಸ್ಥೆಯು ಪ್ರಗತಿಯನ್ನು ಮಾಡಿರುವ ಯಾವ ಮೂರು ಕ್ಷೇತ್ರಗಳನ್ನು ನಾವು ಪರಿಗಣಿಸಲಿದ್ದೇವೆ?
6 ನಮ್ಮ ಮಧ್ಯೆ, 1920, 30 ಮತ್ತು 40ರ ದಶಕಗಳಲ್ಲಿ ಯೆಹೋವನ ಸಂಸ್ಥೆಯೊಂದಿಗೆ ಸಹವಾಸಿಸಲಾರಂಭಿಸಿದವರು ಇದ್ದಾರೆ. ಆ ಆರಂಭದ ವರ್ಷಗಳಲ್ಲಿ, ಈ ಸಂಸ್ಥೆಯು ಇಷ್ಟರ ಮಟ್ಟಿಗೆ ಮುಂದುವರಿದು, ಇಷ್ಟೊಂದು ಗಮನಾರ್ಹವಾದ ಅಭಿವೃದ್ಧಿ ಮತ್ತು ಪ್ರಗತಿಪರವಾದ ವಿಕಸನವನ್ನು ಅನುಭವಿಸುತ್ತದೆಂದು ನಮ್ಮಲ್ಲಿ ಯಾರು ಊಹಿಸಿದ್ದರು? ನಮ್ಮ ಆಧುನಿಕ ದಿನದ ಇತಿಹಾಸದಲ್ಲಿ ಸಾಧಿಸಿರುವ ಕೆಲವೊಂದು ಮೈಲಿಗಲ್ಲುಗಳ ಕುರಿತು ತುಸು ಯೋಚಿಸಿರಿ! ದೇವಪ್ರಭುತ್ವ ರೀತಿಯಲ್ಲಿ ಸಂಘಟಿತರಾಗಿರುವ ತನ್ನ ಜನರ ಮೂಲಕ ಯೆಹೋವನು ಏನನ್ನು ಸಾಧಿಸಿದ್ದಾನೆ ಎಂಬುದರ ಕುರಿತು ಯೋಚಿಸುವುದು, ನಿಜವಾಗಿಯೂ ಆತ್ಮಿಕ ರೀತಿಯಲ್ಲಿ ಪ್ರತಿಫಲದಾಯಕವಾದದ್ದಾಗಿದೆ.
7 ಪ್ರಾಚೀನಕಾಲದ ದಾವೀದನು ಯೆಹೋವನ ಅದ್ಭುತಕಾರ್ಯಗಳ ಕುರಿತಾಗಿ ಯೋಚಿಸಿದಾಗ ಅವುಗಳಿಂದ ತುಂಬ ಪ್ರಭಾವಿಸಲ್ಪಟ್ಟನು. ಅವನು ಹೇಳಿದ್ದು: “ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.” (ಕೀರ್ತನೆ 40:5) ನಮಗೂ ಅದೆಲ್ಲವನ್ನು ಪೂರ್ಣವಾಗಿ ವರ್ಣಿಸಲು ಸಾಧ್ಯವಿಲ್ಲ, ಏಕೆಂದರೆ ನಮ್ಮ ದಿನಗಳಲ್ಲಿ ಯೆಹೋವನು ಮಾಡಿರುವ ಅನೇಕ ಮಹತ್ಕಾರ್ಯಗಳು ಹಾಗೂ ಸ್ತುತಿಗೆ ಅರ್ಹವಾದ ಕೃತ್ಯಗಳನ್ನು ವಿವರಿಸಲು ನಾವು ಅಸಮರ್ಥರಾಗಿದ್ದೇವೆ. ಆದರೂ, ಯೆಹೋವನ ಸಂಸ್ಥೆಯು ಪ್ರಗತಿಯನ್ನು ಮಾಡಿರುವಂತಹ ಮೂರು ಕ್ಷೇತ್ರಗಳನ್ನು ನಾವೀಗ ಪರಿಗಣಿಸೋಣ: (1) ಪ್ರಗತಿಪರವಾದ ಆತ್ಮಿಕ ತಿಳುವಳಿಕೆ, (2) ಉತ್ತಮಗೊಂಡಿರುವ ಹಾಗೂ ವಿಸ್ತರಿಸಲ್ಪಟ್ಟಿರುವ ಶುಶ್ರೂಷೆ, ಮತ್ತು (3) ಸಂಸ್ಥೆಯ ಕಾರ್ಯವಿಧಾನಗಳಲ್ಲಿ ಸಮಯೋಚಿತವಾದ ಹೊಂದಾಣಿಕೆಗಳು.
ಆತ್ಮಿಕ ತಿಳುವಳಿಕೆಗಾಗಿ ಕೃತಜ್ಞರು
8. ಜ್ಞಾನೋಕ್ತಿ 4:18ಕ್ಕೆ ಹೊಂದಿಕೆಯಲ್ಲಿ, ರಾಜ್ಯದ ವಿಷಯದಲ್ಲಿ ಏನನ್ನು ವಿವೇಚಿಸಿ ತಿಳಿದುಕೊಳ್ಳುವಂತೆ ಆತ್ಮಿಕ ತಿಳುವಳಿಕೆಯು ನಮ್ಮನ್ನು ಶಕ್ತರನ್ನಾಗಿ ಮಾಡಿದೆ?
8 ಪ್ರಗತಿಪರವಾದ ಆತ್ಮಿಕ ತಿಳುವಳಿಕೆಯ ವಿಷಯದಲ್ಲಿ ಜ್ಞಾನೋಕ್ತಿ 4:18 ನೂರಕ್ಕೆ ನೂರರಷ್ಟು ಸತ್ಯವಾಗಿ ರುಜುವಾಗಿದೆ. ಅದು ಹೀಗೆ ಹೇಳುತ್ತದೆ: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” ನಮಗೆ ಸಿಕ್ಕಿರುವ ಪ್ರಗತಿಪರವಾದ ಆತ್ಮಿಕ ತಿಳುವಳಿಕೆಗಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ! 1919ರಲ್ಲಿ ನಡೆದ ಸೀಡರ್ ಪಾಯಿಂಟ್ ಓಹಾಯೋದ ಅಧಿವೇಶನದಲ್ಲಿ ದೇವರ ರಾಜ್ಯದ ಕುರಿತಾದ ವಿಷಯಕ್ಕೆ ಹೆಚ್ಚಿನ ಗಮನವನ್ನು ಕೊಡಲಾಯಿತು. ತನ್ನ ಹೆಸರನ್ನು ಪವಿತ್ರೀಕರಿಸಲು ಮತ್ತು ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಲು ಯೆಹೋವನು ಈ ರಾಜ್ಯವನ್ನು ಉಪಯೋಗಿಸುತ್ತಾನೆ. ಆದಿಕಾಂಡದಿಂದ ಪ್ರಕಟನೆಯ ವರೆಗೆ, ತನ್ನ ಮಗನಿಂದ ಆಳಲ್ಪಡುವ ರಾಜ್ಯದ ಮೂಲಕ ತನ್ನ ಹೆಸರನ್ನು ಪವಿತ್ರೀಕರಿಸುವ ಯೆಹೋವನ ಉದ್ದೇಶದ ಬಗ್ಗೆ ಬೈಬಲು ಪುರಾವೆ ನೀಡುತ್ತದೆ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳುವಂತೆ ಆತ್ಮಿಕ ತಿಳುವಳಿಕೆಯು ನಮ್ಮನ್ನು ಶಕ್ತರನ್ನಾಗಿ ಮಾಡಿದೆ. ಎಲ್ಲ ನೀತಿಪ್ರಿಯರಿಗಾಗಿ ಮಹಿಮಾಭರಿತ ನಿರೀಕ್ಷೆಯು ಕಾದಿರಿಸಲ್ಪಟ್ಟಿದೆ.—ಮತ್ತಾಯ 12:18, 21.
9, 10. ಇಸವಿ 1920ರ ದಶಕಗಳಲ್ಲಿ ರಾಜ್ಯದ ಕುರಿತು ಮತ್ತು ಪರಸ್ಪರ ವಿರೋಧಿಸುತ್ತಿರುವ ಸಂಸ್ಥೆಗಳ ಕುರಿತು ಏನನ್ನು ಕಲಿಯಲಾಯಿತು, ಮತ್ತು ಇದು ಹೇಗೆ ಸಹಾಯಕರವಾದದ್ದಾಗಿದೆ?
9 ಇಸವಿ 1922ರಲ್ಲಿ ಸೀಡರ್ ಪಾಯಿಂಟ್ನಲ್ಲಿ ನಡೆದ ಇನ್ನೊಂದು ಅಧಿವೇಶನದಲ್ಲಿ, ಮುಖ್ಯ ಭಾಷಣಕರ್ತರಾಗಿದ್ದ ಜೆ. ಎಫ್. ರದರ್ಫರ್ಡರು “ರಾಜನನ್ನೂ, ಆತನ ರಾಜ್ಯವನ್ನೂ ಘೋಷಿಸಿರಿ, ಘೋಷಿಸಿರಿ, ಘೋಷಿಸಿರಿ” ಎಂದು ಸಭಿಕರನ್ನು ಹುರಿದುಂಬಿಸಿದರು. 1925, ಮಾರ್ಚ್ 1ರ ದ ವಾಚ್ಟವರ್ ಪತ್ರಿಕೆಯಲ್ಲಿ ಪ್ರಕಟವಾದ “ಜನಾಂಗದ ಜನನ” ಎಂಬ ಲೇಖನದಲ್ಲಿ, ದೇವರ ರಾಜ್ಯವು 1914ರಲ್ಲಿ ಸ್ಥಾಪನೆಯಾಗುತ್ತದೆ ಎಂದು ಮುಂತಿಳಿಸಿದಂತಹ ಪ್ರವಾದನೆಗಳ ಕುರಿತಾದ ಆತ್ಮಿಕ ಒಳನೋಟದ ಕಡೆಗೆ ಗಮನ ಸೆಳೆಯಲಾಗಿತ್ತು. ಯೆಹೋವನ ಮತ್ತು ಸೈತಾನನ ಸಂಸ್ಥೆಗಳು, ಹೀಗೆ ಪರಸ್ಪರ ವಿರೋಧಿಸುವಂತಹ ಎರಡು ಸಂಸ್ಥೆಗಳಿವೆ ಎಂಬುದನ್ನು ಸಹ 1920ರ ದಶಕಗಳಲ್ಲಿ ಗ್ರಹಿಸಲಾಯಿತು. ಇವುಗಳ ನಡುವೆ ಹೋರಾಟವು ನಡೆಯುತ್ತಿದೆ, ಮತ್ತು ಒಂದುವೇಳೆ ನಾವು ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಯಿಡುವಲ್ಲಿ ಮಾತ್ರ ಗೆಲ್ಲುವ ಪಕ್ಷದಲ್ಲಿ ನಾವಿರುವೆವು.
10 ಅಂತಹ ಆತ್ಮಿಕ ತಿಳುವಳಿಕೆಯು ನಮಗೆ ಹೇಗೆ ಸಹಾಯಮಾಡಿದೆ? ದೇವರ ರಾಜ್ಯವಾಗಲಿ ಅಥವಾ ಅದರ ಅರಸನಾಗಿರುವ ಯೇಸು ಕ್ರಿಸ್ತನಾಗಲಿ ಈ ಲೋಕದ ಭಾಗವಾಗಿಲ್ಲದಿರುವುದರಿಂದ, ನಾವು ಸಹ ಈ ಲೋಕದ ಭಾಗವಾಗಿರಸಾಧ್ಯವಿಲ್ಲ. ಈ ಲೋಕದಿಂದ ಪ್ರತ್ಯೇಕರಾಗಿರುವ ಮೂಲಕ, ನಾವು ಸತ್ಯದ ಪಕ್ಷದಲ್ಲಿದ್ದೇವೆಂಬುದನ್ನು ತೋರಿಸಿಕೊಡುತ್ತೇವೆ. (ಯೋಹಾನ 17:16; 18:37) ಈ ದುಷ್ಟ ವ್ಯವಸ್ಥೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಜಟಿಲ ಸಮಸ್ಯೆಗಳನ್ನು ನೋಡುವಾಗ, ನಾವು ಸೈತಾನನ ಸಂಸ್ಥೆಯ ಭಾಗವಾಗಿಲ್ಲದಿರುವುದಕ್ಕೆ ಎಷ್ಟೊಂದು ಆಭಾರಿಗಳಾಗಿದ್ದೇವೆ! ಮತ್ತು ಯೆಹೋವನ ಸಂಸ್ಥೆಯೊಳಗೆ ಆತ್ಮಿಕ ಭದ್ರತೆಯನ್ನು ಪಡೆದಿರಲು ನಾವೆಷ್ಟು ಅನುಗ್ರಹವುಳ್ಳವರಾಗಿದ್ದೇವೆ!
11. ಇಸವಿ 1931ರಲ್ಲಿ ಯಾವ ಶಾಸ್ತ್ರೀಯ ಹೆಸರನ್ನು ದೇವಜನರು ಸ್ವೀಕರಿಸಿದರು?
11 ಇಸವಿ 1931ರಲ್ಲಿ ಓಹಾಯೋದ ಕೊಲಂಬಸ್ನಲ್ಲಿ ನಡೆದ ಅಧಿವೇಶನದಲ್ಲಿ, ಯೆಶಾಯ 43:10-12ನೆಯ ವಚನಗಳ ಸರಿಯಾದ ಅನ್ವಯವನ್ನು ಮಾಡಲಾಯಿತು. ಬೈಬಲ್ ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳು ಎಂಬ ವಿಶೇಷ ಹೆಸರನ್ನು ಪಡೆದುಕೊಂಡರು. ಇತರರು ಸಹ ರಕ್ಷಿಸಲ್ಪಡಲಿಕ್ಕಾಗಿ ದೇವರ ಹೆಸರನ್ನು ಹೇಳಿಕೊಳ್ಳುವಂತೆ ಆ ಹೆಸರನ್ನು ಪ್ರಸಿದ್ಧಪಡಿಸುವುದು ಎಂತಹ ಒಂದು ದೊಡ್ಡ ಸುಯೋಗವಾಗಿದೆ!—ಕೀರ್ತನೆ 83:18; ರೋಮಾಪುರ 10:13.
12. ಮಹಾ ಸಮೂಹದ ಕುರಿತಾದ ಯಾವ ಆತ್ಮಿಕ ತಿಳುವಳಿಕೆಯನ್ನು 1935ರಲ್ಲಿ ಒದಗಿಸಲಾಯಿತು?
12 ಸುಮಾರು 1930ರ ದಶಕಗಳಿಗೆ ಮುಂಚೆ, ದೇವಜನರಲ್ಲಿ ಅನೇಕರು ತಮ್ಮ ಭವಿಷ್ಯತ್ತಿನ ಜೀವಿತದ ಕುರಿತಾದ ನಿರೀಕ್ಷೆಯ ವಿಷಯದಲ್ಲಿ ಬಹುಮಟ್ಟಿಗೆ ಕಂಗೆಟ್ಟ ಸ್ಥಿತಿಯಲ್ಲಿದ್ದರು. ಕೆಲವರು ಸ್ವರ್ಗೀಯ ಜೀವಿತಕ್ಕಾಗಿ ಹಂಬಲಿಸುತ್ತಿದ್ದರು, ಆದರೆ ಅದೇ ಸಮಯದಲ್ಲಿ ಭೂಪ್ರಮೋದವನದ ಕುರಿತಾದ ಬೈಬಲ್ ಬೋಧನೆಗಳ ಕಡೆಗೆ ಆಕರ್ಷಿತರಾಗಿದ್ದರು. 1935ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಅಧಿವೇಶನದಲ್ಲಿ, ಪ್ರಕಟನೆ 7ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ಮಹಾ ಸಮುದಾಯ ಅಥವಾ ಮಹಾ ಸಮೂಹವು, ಭೂಮಿಯ ಮೇಲೆ ಜೀವಿಸುವ ನಿರೀಕ್ಷೆಯುಳ್ಳ ಒಂದು ಗುಂಪಾಗಿದೆಯೆಂಬ ಹರ್ಷದಾಯಕ ವಾರ್ತೆಯನ್ನು ತಿಳಿಸಲಾಯಿತು. ಅಂದಿನಿಂದ ಮಹಾ ಸಮೂಹದವರ ಒಟ್ಟುಗೂಡಿಸುವಿಕೆಯು ಹೆಚ್ಚೆಚ್ಚು ತೀವ್ರವಾಗುತ್ತಾ ಮುಂದೆ ಸಾಗುತ್ತಿದೆ. ಮಹಾ ಸಮೂಹಕ್ಕೆ ಸೇರಿದವರು ಯಾರಾಗಿದ್ದಾರೆ ಎಂಬ ಸಂಗತಿಯು ನಮಗೆ ಇನ್ನೆಂದೂ ಒಂದು ರಹಸ್ಯವಾಗಿ ಉಳಿದಿಲ್ಲ ಎಂಬುದಕ್ಕಾಗಿ ನಾವು ಕೃತಜ್ಞರಾಗಿಲ್ಲವೋ? ಸಕಲ ಜನಾಂಗ, ಕುಲ, ಭಾಷೆಗಳನ್ನು ಆಡುವವರೊಳಗಿಂದ ಜನರನ್ನು ದೊಡ್ಡ ಸಂಖ್ಯೆಗಳಲ್ಲಿ ಒಟ್ಟುಗೂಡಿಸಲಾಗುತ್ತಿದೆ ಎಂಬ ವಾಸ್ತವಿಕತೆಯು, ಯೆಹೋವನ ಸಂಸ್ಥೆಯೊಂದಿಗೆ ಸರಿಯಾಗಿ ಹೆಜ್ಜೆಯನ್ನಿಡಲು ನಮ್ಮ ಹೆಜ್ಜೆಯನ್ನು ವೇಗಗೊಳಿಸುವಂತೆ ಪ್ರಚೋದಿಸುತ್ತದೆ.
13. ಇಸವಿ 1941ರ ಸೆಂಟ್ ಲೂಯಿ ಅಧಿವೇಶನದಲ್ಲಿ ಯಾವ ದೊಡ್ಡ ವಿವಾದಾಂಶದ ಕುರಿತು ಎತ್ತಿಹೇಳಲಾಯಿತು?
13 ಇಸವಿ 1941ರಲ್ಲಿ ನಡೆದ ಮಿಸೌರಿಯ ಸೆಂಟ್ ಲೂಯಿ ಅಧಿವೇಶನದಲ್ಲಿ, ಮಾನವ ಸಮಾಜದ ಮುಖ್ಯ ಚಿಂತೆಯಾಗಿರಬೇಕಾದ ಒಂದು ದೊಡ್ಡ ವಿವಾದಾಂಶವು ಎತ್ತಿಹೇಳಲ್ಪಟ್ಟಿತು. ಇದು ವಿಶ್ವ ಪ್ರಭುತ್ವ ಅಥವಾ ಪರಮಾಧಿಕಾರದ ವಿವಾದಾಂಶವೇ ಆಗಿದೆ. ಈ ವಿವಾದಾಂಶವು ಬೇಗನೆ ಇತ್ಯರ್ಥಗೊಳಿಸಲ್ಪಡಬೇಕು; ಮತ್ತು ಅದು ಇತ್ಯರ್ಥಗೊಳಿಸಲ್ಪಡಲಿರುವ ಆ ಮಹಾ ಹಾಗೂ ಭಯಪ್ರೇರಕ ದಿನವು ವೇಗವಾಗಿ ಧಾವಿಸುತ್ತಿದೆ! 1941ರಲ್ಲೇ, ಇದಕ್ಕೆ ಸಂಬಂಧಿಸಿದ ಇನ್ನೊಂದು ವಿವಾದಾಂಶವನ್ನು, ಅಂದರೆ ಸಮಗ್ರತೆಯ ಕುರಿತಾದ ವಿವಾದಾಂಶವನ್ನು ಸಹ ಗಮನಕ್ಕೆ ತರಲಾಯಿತು. ಇದು, ದೇವರ ಪರಮಾಧಿಕಾರದ ಸಂಬಂಧದಲ್ಲಿ ನಮ್ಮ ವೈಯಕ್ತಿಕ ನಿಲುವು ಏನಾಗಿದೆ ಎಂಬುದನ್ನು ತೋರಿಸಲು ನಮಗೆ ಅವಕಾಶವನ್ನು ಒದಗಿಸುತ್ತದೆ.
14. ಇಸವಿ 1950ರಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ, ಕೀರ್ತನೆ 45:16ರಲ್ಲಿ ತಿಳಿಸಲ್ಪಟ್ಟಿರುವ ಅಧಿಕಾರಿಗಳ ಕುರಿತು ಯಾವ ವಿಷಯವನ್ನು ಕಲಿಯಲಾಯಿತು?
14 ನ್ಯೂ ಯಾರ್ಕ್ ಸಿಟಿಯಲ್ಲಿ ನಡೆದ 1950ರ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ, ಕೀರ್ತನೆ 45:16ರಲ್ಲಿ ತಿಳಿಸಲ್ಪಟ್ಟಿರುವ ಅಧಿಕಾರಿಗಳು (ರಾಜಪುತ್ರರು) ಯಾರೆಂಬುದನ್ನು ಸ್ಪಷ್ಟವಾಗಿ ತಿಳಿಸಲಾಯಿತು. ಸಹೋದರ ಫ್ರೆಡ್ರಿಕ್ ಫ್ರಾನ್ಸ್ರವರು ಈ ವಿಷಯದ ಕುರಿತಾಗಿ ಮಾತಾಡಿ, ಹೊಸ ಲೋಕದಲ್ಲಿ ಭಾವೀ ಅಧಿಪತಿಗಳು ನಮ್ಮ ಮಧ್ಯೆಯೇ ಇದ್ದಾರೆ ಎಂಬುದನ್ನು ವಿವರಿಸಿದಾಗ, ಅದೊಂದು ಪುಳಕಿತಗೊಳಿಸುವ ಕ್ಷಣವಾಗಿತ್ತು. ಆ ಅಧಿವೇಶನದಲ್ಲಿ ಮತ್ತು ತದನಂತರ ನಡೆದ ಅಧಿವೇಶನದಲ್ಲಿ, ಆತ್ಮಿಕ ಬೆಳಕಿನ ಹೆಚ್ಚಿನ ಪ್ರಕಾಶಗಳು ಕಂಡುಬಂದವು. (ಕೀರ್ತನೆ 97:11) ನಮ್ಮ ಮಾರ್ಗವು “ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿ”ರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ!
ನಮ್ಮ ಶುಶ್ರೂಷೆಯಲ್ಲಿ ಮುನ್ನಡೆಯುವುದು
15, 16. (ಎ) ಇಸವಿ 1920 ಹಾಗೂ 1930ರ ದಶಕಗಳಲ್ಲಿ ನಮ್ಮ ಶುಶ್ರೂಷೆಯಲ್ಲಿ ನಾವು ಹೇಗೆ ಮುನ್ನಡೆದೆವು? (ಬಿ) ಇತ್ತೀಚಿನ ದಶಕಗಳಲ್ಲಿ ಕ್ರೈಸ್ತ ಶುಶ್ರೂಷೆಗೆ ಯಾವ ಪ್ರಕಾಶನಗಳು ಪ್ರಚೋದನೆಯನ್ನು ನೀಡಿವೆ?
15 ಯೆಹೋವನ ಸಂಸ್ಥೆಯು ಮುಂದೆ ಸಾಗಿರುವ ಎರಡನೆಯ ವಿಧಾನವು, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ನಮ್ಮ ಮುಖ್ಯ ಕೆಲಸದೊಂದಿಗೆ ಸಂಬಂಧಿಸಿದೆ. (ಮತ್ತಾಯ 28:19, 20; ಮಾರ್ಕ 13:10) ಈ ಕೆಲಸವನ್ನು ಪೂರೈಸಲಿಕ್ಕಾಗಿ, ನಮ್ಮ ಶುಶ್ರೂಷೆಯನ್ನು ವಿಸ್ತರಿಸುವುದರ ಮಹತ್ವವನ್ನು ಸಂಸ್ಥೆಯು ನಮಗೆ ತಿಳಿಸುತ್ತಾ ಬಂದಿದೆ. 1922ರಲ್ಲಿ, ಸಾರುವ ಕೆಲಸದಲ್ಲಿ ಭಾಗವಹಿಸುವಂತೆ ಎಲ್ಲ ಕ್ರೈಸ್ತರಿಗೆ ಉತ್ತೇಜಿಸಲಾಯಿತು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಬೆಳಕನ್ನು ಪ್ರಕಾಶಿಸುವುದು, ಅಂದರೆ ಸತ್ಯದ ಕುರಿತಾದ ಸಾಕ್ಷಿಯನ್ನು ಕೊಡುವುದರಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳುವುದು ವ್ಯಕ್ತಿಗತ ವಿಷಯವಾಗಿತ್ತು. (ಮತ್ತಾಯ 5:14-16) 1927ರಲ್ಲಿ, ಭಾನುವಾರವನ್ನು ಕ್ಷೇತ್ರ ಸೇವೆಗಾಗಿರುವ ಒಂದು ದಿನದೋಪಾದಿ ಪ್ರತ್ಯೇಕವಾಗಿರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. 1940ರ ಫೆಬ್ರವರಿ ತಿಂಗಳಿನಿಂದ ಆರಂಭಿಸಿ, ಸಾಕ್ಷಿಗಳು ವ್ಯಾಪಾರದ ಕ್ಷೇತ್ರಗಳಲ್ಲಿರುವ ಬೀದಿಗಳಲ್ಲಿ ನಿಂತುಕೊಂಡು ದ ವಾಚ್ಟವರ್ ಮತ್ತು ಕಾನ್ಸೊಲೇಷನ್ (ಈಗ ಅವೇಕ್!) ಪತ್ರಿಕೆಗಳನ್ನು ನೀಡುತ್ತಿರುವ ದೃಶ್ಯವು ಸಾಮಾನ್ಯವಾಗಿಹೋಯಿತು.
16 ಇಸವಿ 1937ರಲ್ಲಿ, ಮಾದರಿ ಅಭ್ಯಾಸ (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ಪರಿಚಯಿಸಲಾಯಿತು. ಇದು, ಇತರರಿಗೆ ಬೈಬಲ್ ಸತ್ಯತೆಯನ್ನು ಕಲಿಸಬೇಕಾದರೆ ಪುನರ್ಭೇಟಿಗಳನ್ನು ಮಾಡುವ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿತು. ತದನಂತರದ ವರ್ಷಗಳಲ್ಲಿ, ಬೈಬಲ್ ಅಭ್ಯಾಸದ ಚಟುವಟಿಕೆಗೆ ಹೆಚ್ಚು ಮಹತ್ವವನ್ನು ಕೊಡಲಾಯಿತು. 1946ರಲ್ಲಿ “ದೇವರು ಸತ್ಯವಂತನೇ ಸರಿ” ಎಂಬ ಪುಸ್ತಕವನ್ನು ಹಾಗೂ 1968ರಲ್ಲಿ ನಿತ್ಯ ಜೀವಕ್ಕೆ ನಡೆಸುವ ಸತ್ಯವು ಎಂಬ ಪುಸ್ತಕವನ್ನು ಮುದ್ರಿಸಿದಾಗ, ಶುಶ್ರೂಷೆಯ ಈ ಭಾಗಕ್ಕೆ ಹೆಚ್ಚಿನ ಪ್ರಚೋದನೆಯು ಕೊಡಲ್ಪಟ್ಟಿತು. ಸದ್ಯಕ್ಕೆ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ನಾವು ಉಪಯೋಗಿಸುತ್ತಿದ್ದೇವೆ. ಈ ಮಾಹಿತಿಯನ್ನು ಅಭ್ಯಾಸಿಸುವುದು, ಶಿಷ್ಯರನ್ನು ಮಾಡುವ ಕೆಲಸದಲ್ಲಿ ಒಂದು ದೃಢವಾದ ಶಾಸ್ತ್ರೀಯ ತಳಪಾಯವನ್ನು ಹಾಕುತ್ತದೆ.
ಸಂಸ್ಥೆಯ ಸುಧಾರಣೆಗಳೊಂದಿಗೆ ಮುನ್ನಡೆಯುವುದು
17. ಯೆಶಾಯ 60:17ಕ್ಕೆ ಹೊಂದಿಕೆಯಲ್ಲಿ, ಯೆಹೋವನ ಸಂಸ್ಥೆಯು ಯಾವ ರೀತಿಯಲ್ಲಿ ಮುನ್ನಡೆದಿದೆ?
17 ಯೆಹೋವನ ಸಂಸ್ಥೆಯು ಮುನ್ನಡೆಯನ್ನು ಮಾಡಿರುವ ಮೂರನೆಯ ವಿಧಾನವು, ಸಂಸ್ಥೆಯ ಕಾರ್ಯಕಲಾಪಗಳಲ್ಲಿ ಸುಧಾರಣೆಗಳನ್ನು ಮಾಡಿರುವುದೇ ಆಗಿದೆ. ಯೆಶಾಯ 60:17ಕ್ಕನುಸಾರ ಯೆಹೋವನು ವಾಗ್ದಾನಿಸಿದ್ದು: “ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.” ಈ ಪ್ರವಾದನೆಗೆ ಹೊಂದಿಕೆಯಲ್ಲಿ, ಹೆಚ್ಚು ಉತ್ತಮವಾದ ರೀತಿಯಲ್ಲಿ ರಾಜ್ಯ ಸಾರುವಿಕೆಯ ಕೆಲಸದ ಮೇಲ್ವಿಚಾರಣೆ ಮಾಡಲು ಮತ್ತು ಹಿಂಡನ್ನು ಪರಿಪಾಲಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
18, 19. ಗತ ವರ್ಷಗಳಲ್ಲಿ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ಯಾವ ಸುಧಾರಣೆಗಳು ಮಾಡಲ್ಪಟ್ಟಿವೆ?
18 ಇಸವಿ 1919ರಲ್ಲಿ, ಕ್ಷೇತ್ರಸೇವೆಗಾಗಿ ಸಂಘಟಿಸಲ್ಪಟ್ಟಿದ್ದ ಪ್ರತಿಯೊಂದು ಸಭೆಯಲ್ಲಿ ಸೊಸೈಟಿಯು ಒಬ್ಬ ಸರ್ವಿಸ್ ಡೈರೆಕ್ಟರ್ ಅನ್ನು ನೇಮಿಸಿತು. ಇದು ಕ್ಷೇತ್ರದಲ್ಲಿನ ನಮ್ಮ ಶುಶ್ರೂಷೆಗೆ ಹೆಚ್ಚಿನ ಪ್ರಚೋದನೆಯನ್ನು ನೀಡಿತು. 1932ರಲ್ಲಿ, ಚುನಾವಣೆ ನಡೆಸುವ ಮೂಲಕ ಸಭೆಗಳಲ್ಲಿ ಹಿರಿಯರನ್ನು ಮತ್ತು ಡೀಕನ್ರನ್ನು ನೇಮಿಸುವ ಕಾರ್ಯವಿಧಾನವು ನಿಲ್ಲಿಸಲ್ಪಟ್ಟಿತು. 1938ರಲ್ಲಿ ಇನ್ನೊಂದು ಮೈಲಿಗಲ್ಲನ್ನು ತಲಪಲಾಯಿತು. ಆಗ, ಸಭೆಯಲ್ಲಿರುವ ಎಲ್ಲ ಸೇವಕರು, ಆರಂಭದ ಕ್ರೈಸ್ತ ಸಭೆಯಲ್ಲಿದ್ದ ದೇವಪ್ರಭುತ್ವ ನೇಮಕದ ಏರ್ಪಾಡುಗಳಿಗೆ ಹೆಚ್ಚು ನಿಕಟವಾದ ರೀತಿಯಲ್ಲಿ ನೇಮಕವನ್ನು ಪಡೆಯಲಾರಂಭಿಸಿದರು. (ಅ. ಕೃತ್ಯಗಳು 14:23; 1 ತಿಮೊಥೆಯ 4:14) 1972ರಲ್ಲಿ, ಆರಂಭದ ಕ್ರೈಸ್ತರ ನಡುವೆ ಪುರುಷರು ಸೇವಾ ನೇಮಕವನ್ನು ಪಡೆಯುತ್ತಿದ್ದಂತೆಯೇ ಇಂದು ಮೇಲ್ವಿಚಾರಕರು ಮತ್ತು ಶುಶ್ರೂಷಾ ಸೇವಕರು ನೇಮಕವನ್ನು ಪಡೆಯುತ್ತಾರೆ. ಕೇವಲ ಒಬ್ಬ ವ್ಯಕ್ತಿಯು ಒಂದು ಸಭೆಯ ಮೇಲ್ವಿಚಾರಕನೋಪಾದಿ ಕಾರ್ಯನಡಿಸುವುದಕ್ಕೆ ಬದಲಾಗಿ, ಫಿಲಿಪ್ಪಿ 1:1 ಹಾಗೂ ಇನ್ನಿತರ ಶಾಸ್ತ್ರವಚನಗಳು, ಯಾರು ಮೇಲ್ವಿಚಾರಕರಿಗಾಗಿರುವ ಶಾಸ್ತ್ರೀಯ ಆವಶ್ಯಕತೆಗಳನ್ನು ಮುಟ್ಟುತ್ತಾರೋ ಅವರು ಹಿರಿಯರ ಮಂಡಲಿಯ ಭಾಗವಾಗಿರುವರು ಎಂಬುದನ್ನು ಸೂಚಿಸಿದವು.—ಅ. ಕೃತ್ಯಗಳು 20:28; ಎಫೆಸ 4:11, 12.
19 ಇಸವಿ 1975ರಲ್ಲಿ, ದೇವರ ಸಂಸ್ಥೆಯ ಲೋಕವ್ಯಾಪಕ ಚಟುವಟಿಕೆಗಳನ್ನು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಕಮಿಟಿಗಳು ನೋಡಿಕೊಳ್ಳುವ ಏರ್ಪಾಡು ಜಾರಿಗೆ ಬಂತು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆಯುವ ರಾಜ್ಯ ಸಾರುವಿಕೆಯ ಕೆಲಸದ ಮೇಲ್ವಿಚಾರಣೆಮಾಡಲು ಬ್ರಾಂಚ್ ಕಮಿಟಿಗಳು ಸಹ ನೇಮಿಸಲ್ಪಟ್ಟವು. ಅಂದಿನಿಂದ, ಮುಖ್ಯಕಾರ್ಯಾಲಯದಲ್ಲಿ ಹಾಗೂ ವಾಚ್ ಟವರ್ ಸೊಸೈಟಿಯ ಬ್ರಾಂಚ್ಗಳಲ್ಲಿ ಕೆಲಸವನ್ನು ಸರಳೀಕರಿಸಲು ಹೆಚ್ಚಿನ ಗಮನವನ್ನು ಕೊಡಲಾಗಿದೆ. ಹೀಗೆ, “ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಖಚಿತಪಡಿಸಿಕೊಳ್ಳಲು” (NW) ಸಾಧ್ಯವಾಗಿದೆ. (ಫಿಲಿಪ್ಪಿ 1:9, 10) ಕ್ರಿಸ್ತನ ಉಪಕುರುಬರಿಗಿರುವ ಜವಾಬ್ದಾರಿಗಳಲ್ಲಿ, ಸೌವಾರ್ತಿಕ ಕೆಲಸದಲ್ಲಿ ಮುಂದಾಳತ್ವವನ್ನು ವಹಿಸುವುದು ಮಾತ್ರವಲ್ಲ, ಸಭೆಯಲ್ಲಿ ಪರಿಣಾಮಕಾರಿಯಾದ ರೀತಿಯಲ್ಲಿ ಕಲಿಸುವುದು ಮತ್ತು ದೇವರ ಮಂದೆಯನ್ನು ಯೋಗ್ಯವಾಗಿ ಪರಾಮರಿಸುವುದು ಸಹ ಒಳಗೂಡಿದೆ.—1 ತಿಮೊಥೆಯ 4:16; ಇಬ್ರಿಯ 13:7, 17; 1 ಪೇತ್ರ 5:2, 3.
ಯೇಸುವಿನ ಸಕ್ರಿಯ ನಾಯಕತ್ವ
20. ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಯಿಡುವುದು, ಯೇಸುವಿನ ಸ್ಥಾನದ ವಿಷಯದಲ್ಲಿ ಯಾವುದನ್ನು ಅಂಗೀಕರಿಸುವಂತೆ ಅಗತ್ಯಪಡಿಸುತ್ತದೆ?
20 ಯೆಹೋವನ ಪ್ರಗತಿಪರ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಚೆಯನ್ನಿಡಲಿಕ್ಕಾಗಿ, “ಸಭೆಗೆ ತಲೆ”ಯಾಗಿರುವ ಎಫೆಸ 5:22, 23) ಯೆಶಾಯ 55:4ರಲ್ಲಿ ತಿಳಿಸಲ್ಪಟ್ಟಿರುವ ವಿಷಯವು ಸಹ ಗಮನಾರ್ಹವಾದದ್ದಾಗಿದೆ. ಅಲ್ಲಿ ನಮಗೆ ಹೀಗೆ ಹೇಳಲಾಗಿದೆ: “ಇಗೋ, ನಾನು [ಯೆಹೋವನು] ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.” ನಾಯಕತ್ವವನ್ನು ಹೇಗೆ ವಹಿಸಬೇಕೆಂಬುದು ಖಂಡಿತವಾಗಿಯೂ ಯೇಸುವಿಗೆ ತಿಳಿದಿದೆ. ಅವನಿಗೆ ತನ್ನ ಕುರಿಗಳ ಮತ್ತು ಅವರ ಕೃತ್ಯಗಳ ಕುರಿತು ಚೆನ್ನಾಗಿ ತಿಳಿದಿದೆ. ವಾಸ್ತವದಲ್ಲಿ, ಅವನು ಏಷಿಯ ಮೈನರ್ನಲ್ಲಿರುವ ಏಳು ಸಭೆಗಳನ್ನು ಪರೀಕ್ಷಿಸಿದಾಗ, ಐದು ಬಾರಿ ಅವನು ಹೇಳಿದ್ದು: ‘ನಾನು ನಿನ್ನ ಕೃತ್ಯಗಳನ್ನು ಬಲ್ಲೆನು.’ (ಪ್ರಕಟನೆ 2:2, 19; 3:1, 8, 15) ಯೇಸುವಿಗೆ ನಮ್ಮ ಆವಶ್ಯಕತೆಗಳು ಏನೆಂಬುದು ಸಹ ತಿಳಿದಿದೆ. ಮತ್ತು ಅವನ ತಂದೆಯಾಗಿರುವ ಯೆಹೋವನಿಗೂ ಅವು ತಿಳಿದಿವೆ. ಮಾದರಿ ಪ್ರಾರ್ಥನೆಯನ್ನು ಕಲಿಸುವುದಕ್ಕೆ ಮುಂಚೆ ಯೇಸು ಹೇಳಿದ್ದು: “ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ.”—ಮತ್ತಾಯ 6:8-13.
ಯೇಸು ಕ್ರಿಸ್ತನಿಗೆ ದೇವರು ನೇಮಿಸಿರುವ ಪಾತ್ರವನ್ನು ಅಂಗೀಕರಿಸುವ ಅಗತ್ಯವಿದೆ. (21. ಯೇಸುವಿನ ನಾಯಕತ್ವವು ಕ್ರೈಸ್ತ ಸಭೆಯಲ್ಲಿ ಹೇಗೆ ತೋರಿಬರುತ್ತದೆ?
21 ಯೇಸುವಿನ ನಾಯಕತ್ವವು ಹೇಗೆ ತೋರಿಬರುತ್ತದೆ? ಒಂದು ವಿಧವು, “ಮನುಷ್ಯರಿಗೆ ದಾನ”ಗಳಾಗಿರುವ ಕ್ರೈಸ್ತ ಮೇಲ್ವಿಚಾರಕರ ಮೂಲಕವೇ. (ಎಫೆಸ 4:8) ಈ ಮೇಲ್ವಿಚಾರಕರು ಯೇಸುವಿನ ಬಲಗೈಯಲ್ಲಿದ್ದಾರೆ, ಅಂದರೆ ಅವನ ಅಧಿಕಾರದ ಕೆಳಗಿದ್ದಾರೆ ಎಂದು ಪ್ರಕಟನೆ 1:16 ವರ್ಣಿಸುತ್ತದೆ. ಇಂದು, ಹಿರಿಯರಿಗೆ ಸ್ವರ್ಗೀಯ ನಿರೀಕ್ಷೆಯಿರಲಿ ಅಥವಾ ಭೂಪ್ರಮೋದವನ ನಿರೀಕ್ಷೆಯಿರಲಿ, ಆ ಹಿರಿಯರಿಗಾಗಿರುವ ಏರ್ಪಾಡನ್ನು ಯೇಸು ಮಾರ್ಗದರ್ಶಿಸುತ್ತಾನೆ. ಹಿಂದಿನ ಲೇಖನದಲ್ಲಿ ವಿವರಿಸಲ್ಪಟ್ಟಂತೆ, ಶಾಸ್ತ್ರಗಳಲ್ಲಿ ಕೊಡಲ್ಪಟ್ಟಿರುವ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಅವರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ. (1 ತಿಮೊಥೆಯ 3:1-7; ತೀತ 1:5-9) ಪ್ರಥಮ ಶತಮಾನದಲ್ಲಿ, ಯೆರೂಸಲೇಮಿನಲ್ಲಿದ್ದ ಹಿರೀ ಪುರುಷರ ಗುಂಪೇ ಆಡಳಿತ ಮಂಡಲಿಯಾಗಿತ್ತು. ಈ ಮಂಡಲಿಯ ಸದಸ್ಯರು, ಸಭೆಗಳ ಹಾಗೂ ರಾಜ್ಯ ಸಾರುವಿಕೆಯ ಚಟುವಟಿಕೆಯ ಮೇಲ್ವಿಚಾರಣೆ ಮಾಡುತ್ತಿದ್ದರು. ಇಂದು ಯೆಹೋವನ ಸಂಸ್ಥೆಯಲ್ಲಿ ಇದೇ ರೀತಿಯ ಏರ್ಪಾಡನ್ನು ಅನುಸರಿಸಲಾಗುತ್ತದೆ.
ಜೊತೆ ಜೊತೆಯಾಗಿ ಹೆಜ್ಜೆಯಿಡುವುದು!
22. ಆಡಳಿತ ಮಂಡಲಿಯು ಯಾವ ಸಹಾಯವನ್ನು ನೀಡುತ್ತದೆ?
22 ಭೂಮಿಯಲ್ಲಿರುವ ರಾಜ್ಯಾಭಿರುಚಿಗಳನ್ನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ವಹಿಸಿಕೊಡಲಾಗಿದೆ. ಮತ್ತು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಆ ಆಳನ್ನು ಪ್ರತಿನಿಧಿಸುತ್ತದೆ. (ಮತ್ತಾಯ 24:45-47) ಕ್ರೈಸ್ತ ಸಭೆಗೆ ಆತ್ಮಿಕ ಮಾಹಿತಿಯನ್ನು ಹಾಗೂ ಮಾರ್ಗದರ್ಶನವನ್ನು ಒದಗಿಸುವುದೇ ಆಡಳಿತ ಮಂಡಲಿಯ ಪ್ರಾಮುಖ್ಯ ಚಿಂತೆಯಾಗಿದೆ. (ಅ. ಕೃತ್ಯಗಳು 6:1-6) ಹೀಗಿರುವುದರಿಂದ, ಜೊತೆ ಆರಾಧಕರು ನೈಸರ್ಗಿಕ ವಿಪತ್ತುಗಳಿಂದ ಬಾಧಿಸಲ್ಪಡುವಾಗ ಪರಿಹಾರವನ್ನು ಒದಗಿಸಲು ಮತ್ತು ಹಾನಿಗೊಂಡಿರುವ ಮನೆಗಳನ್ನು ಹಾಗೂ ರಾಜ್ಯ ಸಭಾಗೃಹಗಳನ್ನು ರಿಪೇರಿ ಮಾಡಿಸಲು ಇಲ್ಲವೇ ಪುನಃ ನಿರ್ಮಿಸಲು, ಒಂದು ಅಥವಾ ಅದಕ್ಕಿಂತಲೂ ಹೆಚ್ಚಿನ ಕಾನೂನುಬದ್ಧ ಸಂಘಟನೆಗಳು ಕಾರ್ಯನಡಿಸುವಂತೆ ಆಡಳಿತ ಮಂಡಲಿಯು ಕೇಳಿಕೊಳ್ಳುತ್ತದೆ. ಕೆಲವು ಕ್ರೈಸ್ತರನ್ನು ಕ್ರೂರವಾಗಿ ಉಪಚರಿಸುವಾಗ ಅಥವಾ ಅವರು ಹಿಂಸೆಗೊಳಗಾಗುವಾಗ, ಅವರನ್ನು ಆತ್ಮಿಕವಾಗಿ ಹುರಿದುಂಬಿಸಲಿಕ್ಕಾಗಿ ಸೂಕ್ತ ಕ್ರಮಗಳನ್ನು ಕೈಕೊಳ್ಳಲಾಗುತ್ತದೆ. ಮತ್ತು “ಅನುಕೂಲವಿಲ್ಲದ ಕಾಲದಲ್ಲಿಯೂ” ಸಾರುವ ಕೆಲಸವನ್ನು ಮುನ್ನಡೆಸುತ್ತಾ ಹೋಗಲು ಪ್ರತಿಯೊಂದು ಪ್ರಯತ್ನವನ್ನೂ ಮಾಡಲಾಗುತ್ತದೆ.—2 ತಿಮೊಥೆಯ 4:1, 2.
23, 24. ತನ್ನ ಜನರ ಮೇಲೆ ಯಾವುದೇ ಸನ್ನಿವೇಶವು ಬಂದೆರಗುವುದಾದರೂ ಯೆಹೋವನು ಸತತವಾಗಿ ಏನನ್ನು ಒದಗಿಸುತ್ತಾನೆ, ಮತ್ತು ನಾವು ಯಾವ ದೃಢನಿರ್ಧಾರವನ್ನು ಮಾಡಬೇಕು?
23 ತನ್ನ ಜನರ ಮೇಲೆ ಯಾವುದೇ ರೀತಿಯ ಸನ್ನಿವೇಶವು ಬಂದೆರಗುವುದಾದರೂ, ಆತ್ಮಿಕ ಆಹಾರವನ್ನು ಮತ್ತು ಅಗತ್ಯವಿರುವ ಮಾರ್ಗದರ್ಶನವನ್ನು ಯೆಹೋವನು ಸತತವಾಗಿ ಒದಗಿಸುತ್ತಾನೆ. ದೇವಪ್ರಭುತ್ವ ಸಂಸ್ಥೆಯಲ್ಲಿ ಆಗುವ ಇನ್ನೂ ಹೆಚ್ಚಿನ ಪ್ರಗತಿಗಾಗಿ ಮತ್ತು ಸುಧಾರಣೆಗಳಿಗಾಗಿ ಜವಾಬ್ದಾರಿಯುತ ಸಹೋದರರನ್ನು ಸಿದ್ಧಗೊಳಿಸಲು, ದೇವರು ಅವರಿಗೆ ವಿವೇಚನಾಶಕ್ತಿಯನ್ನೂ ಒಳನೋಟವನ್ನೂ ಕೊಡುತ್ತಾನೆ. (ಧರ್ಮೋಪದೇಶಕಾಂಡ 34:9; ಎಫೆಸ 1:16, 17) ಶಿಷ್ಯರನ್ನಾಗಿ ಮಾಡುವ ನಮ್ಮ ನೇಮಕವನ್ನು ಪೂರೈಸಲು ಮತ್ತು ನಮ್ಮ ಶುಶ್ರೂಷೆಯನ್ನು ಲೋಕವ್ಯಾಪಕವಾಗಿ ನೆರವೇರಿಸಲು ನಮಗೆ ಅಗತ್ಯವಿರುವುದನ್ನೆಲ್ಲಾ ಯೆಹೋವನು ತಪ್ಪದೆ ಒದಗಿಸುತ್ತಾನೆ.—2 ತಿಮೊಥೆಯ 4:5.
24 ಯೆಹೋವನು ಎಂದೂ ತನ್ನ ನಂಬಿಗಸ್ತ ಜನರ ಕೈಬಿಡುವುದಿಲ್ಲ ಎಂಬ ದೃಢ ಭರವಸೆ ನಮಗಿದೆ; ಆತನು ಅವರನ್ನು ಬರಲಿರುವ ‘ಮಹಾ ಸಂಕಟ’ದಿಂದ ಕಾಪಾಡುವನು. (ಪ್ರಕಟನೆ 7:9-14; ಕೀರ್ತನೆ 94:14; 2 ಪೇತ್ರ 2:9) ನಮಗೆ ಆರಂಭದಲ್ಲಿದ್ದಷ್ಟೇ ಭರವಸೆಯನ್ನು ಕೊನೆಯ ತನಕ ಕಾಪಾಡಿಕೊಳ್ಳಲು ನಮಗೆ ಪ್ರತಿಯೊಂದು ಸಕಾರಣವಿದೆ. (ಇಬ್ರಿಯ 3:14) ಆದುದರಿಂದ, ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಯಿಡಲು ನಾವು ದೃಢನಿಶ್ಚಯವನ್ನು ಮಾಡೋಣ.
ನೀವು ಹೇಗೆ ಉತ್ತರಿಸುವಿರಿ?
• ಯೆಹೋವನ ಸಂಸ್ಥೆಯು ಪ್ರಗತಿಯನ್ನು ಮಾಡುತ್ತಾ ಹೋಗುತ್ತದೆ ಎಂದು ನಾವೇಕೆ ಹೇಳಸಾಧ್ಯವಿದೆ?
• ದೇವಜನರು ಪ್ರಗತಿಪರವಾದ ಆತ್ಮಿಕ ತಿಳುವಳಿಕೆಯಲ್ಲಿ ಆನಂದಿಸುತ್ತಾರೆ ಎಂಬುದಕ್ಕೆ ಯಾವ ಪುರಾವೆಯಿದೆ?
• ಕ್ರೈಸ್ತ ಶುಶ್ರೂಷೆಯಲ್ಲಿ ಯಾವ ಪ್ರಗತಿಯು ಮಾಡಲ್ಪಟ್ಟಿತು?
• ಯೆಹೋವನ ಸೇವಕರ ನಡುವೆ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ಯಾವ ಸಮಯೋಚಿತ ಹೊಂದಾಣಿಕೆಗಳನ್ನು ಮಾಡಲಾಗಿದೆ?
[ಅಧ್ಯಯನ ಪ್ರಶ್ನೆಗಳು]
[ಪುಟ 17ರಲ್ಲಿರುವ ಚಿತ್ರ]
ದಾವೀದನಂತೆ ನಾವು ಸಹ ಯೆಹೋವನ ಎಲ್ಲ ಅದ್ಭುತಕಾರ್ಯಗಳನ್ನು ಪೂರ್ಣವಾಗಿ ವರ್ಣಿಸಲು ಸಾಧ್ಯವಿಲ್ಲ
[ಪುಟ 18ರಲ್ಲಿರುವ ಚಿತ್ರ]
ಸಂಸ್ಥೆಯಲ್ಲಿನ ಸಮಯೋಚಿತ ಹೊಂದಾಣಿಕೆಗಳಿಂದ ದೇವರ ಮಂದೆಯು ಪ್ರಯೋಜನವನ್ನು ಪಡೆದುಕೊಂಡಿದೆ