ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು ದೃಢನಿಶ್ಚಯದಿಂದ ಮುನ್ನಡೆಯುತ್ತಾರೆ!

ಯೆಹೋವನ ಸಾಕ್ಷಿಗಳು ದೃಢನಿಶ್ಚಯದಿಂದ ಮುನ್ನಡೆಯುತ್ತಾರೆ!

ಯೆಹೋವನ ಸಾಕ್ಷಿಗಳು ದೃಢನಿಶ್ಚಯದಿಂದ ಮುನ್ನಡೆಯುತ್ತಾರೆ!

ವಾರ್ಷಿಕ ಕೂಟದ ವರದಿ

ಸಂದೇಹವಾದ ಹಾಗೂ ಸಂಶಯವು ಬಲವಾಗುತ್ತಾ ಹೋಗುತ್ತಿರುವ ಈ ದಿನಗಳಲ್ಲಿ, ಯೆಹೋವನ ಸಾಕ್ಷಿಗಳು ದೃಢನಿಶ್ಚಿತ ಕ್ರೈಸ್ತರಾಗಿ ಕಂಡುಬರುತ್ತಾರೆ. 2000 ಇಸವಿಯ ಅಕ್ಟೋಬರ್‌ 7ರ ಶನಿವಾರದಂದು, ನ್ಯೂ ಜೆರ್ಸಿಯ ಜೆರ್ಸಿ ಸಿಟಿ ಅಸೆಂಬ್ಲಿ ಹಾಲ್‌ ಆಫ್‌ ಜೆಹೋವಾಸ್‌ ವಿಟ್ನೆಸಸ್‌ ಎಂಬ ಸಭಾಂಗಣದಲ್ಲಿ ನಡೆಸಲ್ಪಟ್ಟ, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ ವಾರ್ಷಿಕ ಕೂಟದಲ್ಲಿ ಇದು ಸ್ಪಷ್ಟಪಡಿಸಲ್ಪಟ್ಟಿತು. *

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಜಾನ್‌ ಇ. ಬಾರ್‌ ಅವರು ಈ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ತಮ್ಮ ಆರಂಭದ ಮಾತುಗಳಲ್ಲಿ ಅವರು ಹೇಳಿದ್ದು: “ಭೂಮಿಯಲ್ಲಿರುವ ಶತಕೋಟಿಗಟ್ಟಲೆ ಜನರಲ್ಲಿ, ಯೇಸು ಕ್ರಿಸ್ತನು ಯೆಹೋವನ ಪ್ರಿಯ ಪುತ್ರನಾಗಿದ್ದಾನೆ, ಸ್ವರ್ಗದಲ್ಲಿ ಈಗ ಅವನು ಸಿಂಹಾಸನಾರೂಢನಾಗಿದ್ದು, ತನ್ನ ವೈರಿಗಳ ನಡುವೆ ದೊರೆತನ ನಡಿಸುತ್ತಿದ್ದಾನೆ ಎಂಬುದು ನಮಗೆ ಮಾತ್ರ ಗೊತ್ತಿದೆ ಮತ್ತು ನಾವು ಮಾತ್ರ ಅದನ್ನು ನಂಬುತ್ತೇವೆ.” ಅಂತಹ ದೃಢನಿಶ್ಚಿತತೆಯ ಪುರಾವೆಯು, ಲೋಕದ ಬೇರೆ ಬೇರೆ ಕಡೆಗಳಿಂದ ಬಂದಿರುವ ಆರು ರೋಮಾಂಚಕರ ವರದಿಗಳಲ್ಲಿ ಪ್ರಸ್ತುತಪಡಿಸಲ್ಪಟ್ಟಿತು.

ಹೇಟೀಯಲ್ಲಿ ಬೈಬಲ್‌ ಸತ್ಯತೆಯಿಂದ ಪ್ರೇತಾತ್ಮವಾದವನ್ನು ಜಯಿಸುವುದು

ಹೇಟೀಯಲ್ಲಿ ಪ್ರೇತಾತ್ಮವಾದವು ಸರ್ವಸಾಮಾನ್ಯವಾಗಿದೆ. “ಸಾಮಾನ್ಯವಾಗಿ ಜನರು ತಮ್ಮ ರಕ್ಷಣೆಗೋಸ್ಕರ ಮಾಟಮಂತ್ರಗಳನ್ನು ಮಾಡುತ್ತಾರೆ” ಎಂದು ಬ್ರಾಂಚ್‌ ಕಮಿಟಿಯ ಕೋಆರ್ಡಿನೇಟರ್‌ ಆಗಿರುವ ಜಾನ್‌ ನಾರ್ಮನ್‌ ಹೇಳಿದರು. ಒಬ್ಬ ಮಾಂತ್ರಿಕನು, ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಾಗ ಅವನ ಮನಸ್ಸಿನಲ್ಲಿ ಸಂದೇಹಗಳು ಮೊಳಕೆಯೊಡೆಯಲಾರಂಭಿಸಿದವು. ‘ಒಂದುವೇಳೆ ನಾನು ಆತ್ಮಗಳಿಂದ ರಕ್ಷಿಸಲ್ಪಡುತ್ತಿರುವಲ್ಲಿ, ನನಗೆ ಏಕೆ ಹೀಗಾಯಿತು?’ ಎಂದು ಅವನು ಯೋಚಿಸತೊಡಗಿದನು. ಇತರ ಅನೇಕರಂತೆ, ಈ ವ್ಯಕ್ತಿಯು ಸಹ ಯೆಹೋವನ ಸಾಕ್ಷಿಗಳಿಂದ ಸತ್ಯವನ್ನು ಕಲಿತುಕೊಂಡನು. ಇದರಿಂದಾಗಿ, ಪ್ರೇತಾತ್ಮವಾದದಿಂದ ಅವನು ಬಿಡುಗಡೆಹೊಂದಲು ಸಾಧ್ಯವಾಯಿತು. ಹೇಟೀಯಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆಯ ಸಾಧ್ಯತೆಯಿದೆ ಎಂಬುದು ಜ್ಞಾಪಕಾಚರಣೆಯ ಹಾಜರಿಯಿಂದ ಕಂಡುಬಂತು. ಏಕೆಂದರೆ, 2000 ಇಸವಿಯ ಏಪ್ರಿಲ್‌ 19ರಂದು ನಡೆದ ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಹಾಜರಿಯು, ಆ ದೇಶದಲ್ಲಿರುವ ರಾಜ್ಯ ಪ್ರಚಾರಕರ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು.

ಕೊರಿಯದ ವಿಸ್ತಾರವಾದ ಟೆರಿಟೊರಿಯಲ್ಲಿ ಹುರುಪು

ಕೊರಿಯದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಸುಮಾರು 40 ಪ್ರತಿಶತ ಮಂದಿ ಪೂರ್ಣಸಮಯದ ಸೇವೆಯಲ್ಲಿದ್ದಾರೆ. ಅಲ್ಲಿನ ಬ್ರಾಂಚ್‌ ಕಮಿಟಿಯ ಕೋಆರ್ಡಿನೇಟರ್‌ ಆಗಿರುವ ಮಿಲ್ಟನ್‌ ಹ್ಯಾಮಿಲ್ಟನ್‌ ಅವರು ಹೇಳಿದ್ದು: “ಪೂರ್ಣಸಮಯದ ಸೇವಕರ ಇಷ್ಟೊಂದು ದೊಡ್ಡ ಗುಂಪು ಇರುವುದರಿಂದ, 47 ದಶಲಕ್ಷ ಜನರಿಂದ ಕೂಡಿರುವ ನಮ್ಮ ಟೆರಿಟೊರಿಯು ತಿಂಗಳಿಗೊಮ್ಮೆ ಪೂರ್ಣವಾಗಿ ಆವರಿಸಲ್ಪಡುತ್ತದೆ.” ಸನ್ನೆ ಭಾಷೆಯ (ಸೈನ್‌ ಲ್ಯಾಂಗ್ವೇಜ್‌) ಸಭೆಗಳಲ್ಲಿ ಆಗುತ್ತಿರುವ ಅಭಿವೃದ್ಧಿಯು ವಿಶೇಷವಾಗಿ ಗಮನಾರ್ಹವಾಗಿದೆ. ಸನ್ನೆ ಭಾಷೆಯು ಉಪಯೋಗದಲ್ಲಿರುವ ಒಂದು ಸರ್ಕಿಟ್‌ನಲ್ಲಿ, 800 ಮನೆ ಬೈಬಲ್‌ ಅಭ್ಯಾಸಗಳು ನಡೆಸಲ್ಪಡುತ್ತಿವೆ. ಇದು ಸರಾಸರಿ ಒಬ್ಬ ಪ್ರಚಾರಕನಿಗೆ ಒಂದು ಮನೆ ಬೈಬಲ್‌ ಅಭ್ಯಾಸದಂತಿದೆ. ಆದರೆ, ಯುವ ಸಹೋದರರು ತಮ್ಮ ತಾಟಸ್ಥ್ಯದ ಕಾರಣದಿಂದ ಈಗಲೂ ಸೆರೆಮನೆಗೆ ಹಾಕಲ್ಪಡುತ್ತಿದ್ದಾರೆ ಎಂಬುದು ದುಃಖಕರ ಸಂಗತಿಯಾಗಿದೆ. ಆದರೂ, ಈ ನಂಬಿಗಸ್ತ ಕ್ರೈಸ್ತರೊಂದಿಗೆ ಸೆರೆಮನೆಯ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ವ್ಯವಹರಿಸುತ್ತಿದ್ದಾರೆ. ಅಷ್ಟುಮಾತ್ರವಲ್ಲ, ವಿಶ್ವಾಸಾರ್ಹತೆಯನ್ನು ಅಗತ್ಯಪಡಿಸುವಂತಹ ಅನೇಕ ಕೆಲಸಗಳು ಸಹ ಅವರಿಗೆ ಕೊಡಲ್ಪಡುತ್ತವೆ.

ಮೆಕ್ಸಿಕೊದ ಬೆಳವಣಿಗೆಯ ಬೇಡಿಕೆಗಳನ್ನು ಪೂರೈಸುವುದು

2000 ಇಸವಿಯ ಆಗಸ್ಟ್‌ ತಿಂಗಳಿನಲ್ಲಿ, ಮೆಕ್ಸಿಕೋದಲ್ಲಿ 5,33,665 ಮಂದಿ ರಾಜ್ಯ ಪ್ರಚಾರಕರು ಕ್ಷೇತ್ರ ಸೇವಾ ವರದಿಯನ್ನು ಹಾಕಿದರು. ಜ್ಞಾಪಕಾಚರಣೆಗೆ ಆ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಮಂದಿ ಹಾಜರಾದರು. “ಈ ವರ್ಷದ ನಮ್ಮ ಗುರಿಯು 240 ಹೆಚ್ಚು ರಾಜ್ಯ ಸಭಾಗೃಹಗಳನ್ನು ಕಟ್ಟುವುದೇ ಆಗಿದೆ” ಎಂದು ಬ್ರಾಂಚ್‌ ಕಮಿಟಿಯ ಕೋಆರ್ಡಿನೇಟರ್‌ ಹೇಳಿದರು. ಅವರು ಕೂಡಿಸಿ ಹೇಳಿದ್ದು: “ಇಷ್ಟೇ ಅಲ್ಲ, ನಮಗೆ ಇನ್ನೂ ಅನೇಕ ರಾಜ್ಯ ಸಭಾಗೃಹಗಳ ಅಗತ್ಯವಿದೆ.”

ಮೆಕ್ಸಿಕೋದ ಯೆಹೋವನ ಸಾಕ್ಷಿಗಳ ಮಧ್ಯೆಯಿರುವ ಯುವಜನರು ಆದರ್ಶಪ್ರಾಯರಾಗಿದ್ದಾರೆ. ಒಬ್ಬ ಯುವಕನ ಕುರಿತು ಕ್ಯಾಥೊಲಿಕ್‌ ಪಾದ್ರಿಯೊಬ್ಬನು ಹೇಳಿದ್ದು: “ನನ್ನ ಅನುಯಾಯಿಗಳಲ್ಲಿ ಅವನಂತಹ ಒಬ್ಬ ವ್ಯಕ್ತಿಯು ಇರಬೇಕೆಂದು ನಾನು ಬಯಸುತ್ತೇನೆ. ಈ ಜನರು ತೋರಿಸುವ ದೃಢಸಂಕಲ್ಪ ಹಾಗೂ ಇವರು ಬೈಬಲನ್ನು ಉಪಯೋಗಿಸುವ ವಿವೇಕಭರಿತ ರೀತಿಯನ್ನು ನಾನು ಪ್ರಶಂಸಿಸುತ್ತೇನೆ. ತಮ್ಮ ಜೀವಗಳನ್ನೇ ಅರ್ಪಿಸಬೇಕೆನ್ನುವ ಸನ್ನಿವೇಶವೇ ಬಂದರೂ ಇವರು ದೇವರ ಪಕ್ಷವನ್ನೇ ಹಿಡಿದಿದ್ದಾರೆ.”

ಸಿಯೆರ ಲಿಯೋನದಲ್ಲಿನ ಅಶಾಂತಿಯ ಮಧ್ಯೆಯೂ ಯಥಾರ್ಥತೆ

1991ರ ಏಪ್ರಿಲ್‌ ತಿಂಗಳಿನಲ್ಲಿ ಸಿಯೆರ ಲಿಯೋನದಲ್ಲಿ ಅಂತರ್ಯುದ್ಧವು ತಲೆದೋರಿದಂದಿನಿಂದ, ಸಾವಿರಾರು ಮಂದಿ ಕೊಲ್ಲಲ್ಪಟ್ಟಿದ್ದಾರೆ, ಗಾಯಗೊಳಿಸಲ್ಪಟ್ಟಿದ್ದಾರೆ ಅಥವಾ ಅಂಗವಿಕಲಗೊಳಿಸಲ್ಪಟ್ಟಿದ್ದಾರೆ. ಅಲ್ಲಿನ ಬ್ರಾಂಚ್‌ ಕಮಿಟಿಯ ಕೋಆರ್ಡಿನೇಟರ್‌ (ವ್ಯವಸ್ಥಾಪಕರು) ವರದಿಸಿದ್ದು: “ಯುದ್ಧ ಮತ್ತು ಕಷ್ಟತೊಂದರೆಗಳು ಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರಿವೆ. ಈ ಮುಂಚೆ ನಮ್ಮ ಸಂದೇಶಕ್ಕೆ ಅಲಕ್ಷ್ಯವನ್ನು ತೋರಿಸುತ್ತಿದ್ದ ಅನೇಕರು ಈಗ ಆಸಕ್ತಿಯಿಂದ ಕಿವಿಗೊಡುತ್ತಾರೆ. ಯಾವುದೇ ಆಮಂತ್ರಣವಿಲ್ಲದೆ ಜನರು ನಮ್ಮ ರಾಜ್ಯ ಸಭಾಗೃಹಗಳಿಗೆ ಬಂದು, ತಮ್ಮ ಮೊದಲ ಕೂಟಕ್ಕೆ ಹಾಜರಾಗುವುದು ಸರ್ವಸಾಮಾನ್ಯವಾಗಿದೆ. ಅನೇಕವೇಳೆ ಬೀದಿಯಲ್ಲಿ ಸಹೋದರರನ್ನು ನಿಲ್ಲಿಸಿ, ತಮ್ಮೊಂದಿಗೆ ಬೈಬಲ್‌ ಅಭ್ಯಾಸ ಮಾಡಿರಿ ಎಂದು ಅನೇಕರು ಕೇಳಿಕೊಂಡಿದ್ದಾರೆ.” ಸಿಯೆರ ಲಿಯೋನದಲ್ಲಿ ಅಭದ್ರ ಸನ್ನಿವೇಶವಿರುವುದಾದರೂ, ರಾಜ್ಯ ಸಾರುವಿಕೆಯ ಕೆಲಸವು ಮಾತ್ರ ಫಲವನ್ನು ಫಲಿಸುತ್ತಿದೆ.

ದಕ್ಷಿಣ ಆಫ್ರಿಕದಲ್ಲಿ ವಿಸ್ತಾರವಾದ ನಿರ್ಮಾಣ ಯೋಜನೆ

ಸದ್ಯಕ್ಕೆ, ದಕ್ಷಿಣ ಆಫ್ರಿಕದ ಬ್ರಾಂಚ್‌ ಆಫೀಸು ನೋಡಿಕೊಳ್ಳುತ್ತಿರುವ ಟೆರಿಟೊರಿಯಲ್ಲಿ ಸಾವಿರಾರು ರಾಜ್ಯ ಸಭಾಗೃಹಗಳ ಆವಶ್ಯಕತೆಯಿದೆ. ಈಗಾಗಲೇ ನೂರಾರು ರಾಜ್ಯ ಸಭಾಗೃಹಗಳು ಕಟ್ಟಲ್ಪಟ್ಟಿವೆ. ಬ್ರಾಂಚ್‌ ಕಮಿಟಿಯ ಸದಸ್ಯರಾಗಿರುವ ಜಾನ್‌ ಕಿಕೋಟ್‌ ಹೇಳಿದ್ದು: “ಈ ಮುಂಚಿನಂತೆ ನಮ್ಮ ಸಹೋದರರು ಒಂದು ಗುಡಿಸಿಲಿನಲ್ಲಿ ಅಥವಾ ಒಂದು ಮರದ ಕೆಳಗೆ ಸಭೆಯಾಗಿ ಕೂಡಿಕೊಳ್ಳುವುದಕ್ಕೆ ಬದಲಾಗಿ, ಸೂಕ್ತವಾದ ಆಸನ ವ್ಯವಸ್ಥೆಯಿರುವ ಸ್ಥಳದಲ್ಲಿ ಕೂಡಿಬರಲು ಶಕ್ತರಾಗಿದ್ದಾರೆ. ಈ ರಾಜ್ಯ ಸಭಾಗೃಹಗಳಲ್ಲಿ ಹೆಚ್ಚಿನವು ಸಾಧಾರಣ ರೀತಿಯ ವಿನ್ಯಾಸದಿಂದ ಕೂಡಿರುವುದಾದರೂ, ಸುತ್ತುಮುತ್ತಲ ಕ್ಷೇತ್ರದಲ್ಲಿ ಇವೇ ಅತ್ಯಂತ ಭವ್ಯ ಕಟ್ಟಡಗಳಾಗಿ ಕಂಡುಬರುತ್ತವೆ. ಕೆಲವು ಕ್ಷೇತ್ರಗಳಲ್ಲಿ, ಒಂದು ರಾಜ್ಯ ಸಭಾಗೃಹವನ್ನು ಕಟ್ಟಿದ ಬಳಿಕ, ಮರುವರ್ಷ ಆ ಸಭೆಯು ಮುಂಚಿಗಿಂತ ಎರಡರಷ್ಟು ಅಭಿವೃದ್ಧಿಹೊಂದಿರುವುದು ಕಂಡುಬಂದಿದೆ.”

ಯೂಕ್ರೇನಿನಲ್ಲಿ ಸಾಕ್ಷಿಗಳ ಒಂದು ಹೊಸ ಸಂತತಿ

2000 ಇಸವಿಯ ಸೇವಾ ವರ್ಷದಲ್ಲಿ, ಯೂಕ್ರೇನಿನಲ್ಲಿ 1,12,720 ಪ್ರಚಾರಕರ ಉಚ್ಚಾಂಕವು ಕಂಡುಬಂತು. ಇವರಲ್ಲಿ 50,000ಕ್ಕಿಂತಲೂ ಹೆಚ್ಚು ಮಂದಿ, ಕಳೆದ ಐದು ವರ್ಷಗಳಲ್ಲಿ ಬೈಬಲ್‌ ಸತ್ಯತೆಯನ್ನು ಕಲಿತವರಾಗಿದ್ದಾರೆ. ಅಲ್ಲಿನ ಬ್ರಾಂಚ್‌ ಕಮಿಟಿಯ ಕೋಆರ್ಡಿನೇಟರ್‌ ಆಗಿರುವ ಜಾನ್‌ ಡೇಡರ್‌ ಅವರು ಹೇಳಿದ್ದು: “ತನ್ನ ಹೆಸರನ್ನು ಪ್ರಕಟಪಡಿಸಲಿಕ್ಕಾಗಿ ಯೆಹೋವನು, ಒಂದು ಹೊಸದಾದ ಯೌವನಭರಿತ ಸಾಕ್ಷಿಗಳ ಸಂತತಿಯನ್ನು ರಚಿಸಿದ್ದಾನೆ! ಕಳೆದ ಎರಡು ವರ್ಷಗಳಲ್ಲಿ ನಾವು 50 ದಶಲಕ್ಷಕ್ಕಿಂತಲೂ ಹೆಚ್ಚು ಪತ್ರಿಕೆಗಳನ್ನು ನೀಡಿದ್ದೇವೆ. ಇದು ಯೂಕ್ರೇನಿನ ಜನಸಂಖ್ಯೆಗೆ ಸಮಾನವಾಗಿದೆ. ಪ್ರತಿ ತಿಂಗಳು, ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಕೇಳಿಕೊಳ್ಳುವ ಆಸಕ್ತ ಜನರಿಂದ ಸರಾಸರಿ ಒಂದು ಸಾವಿರ ಪತ್ರಗಳು ನಮಗೆ ಬರುತ್ತವೆ.”

ಈ ಕಾರ್ಯಕ್ರಮದ ಇನ್ನಿತರ ವೈಶಿಷ್ಟ್ಯಗಳು

ಆಡಳಿತ ಮಂಡಲಿಯ ಸದಸ್ಯರಾಗಿರುವ ಡ್ಯಾನಿಯೆಲ್‌ ಸಿಡ್ಲಿಕ್‌ ಅವರು ಆಸಕ್ತಿಕರವಾದ ಒಂದು ಭಾಷಣವನ್ನು ನೀಡಿದರು. ಈ ಸಂಚಿಕೆಯಲ್ಲಿ ಕಂಡುಬರುವ “ಆಡಳಿತ ಮಂಡಲಿಗೂ ಕಾನೂನುಬದ್ಧ ಸಂಘಟನೆಗೂ ಇರುವ ವ್ಯತ್ಯಾಸ” ಎಂಬ ಲೇಖನವು, ಆ ಮಾಹಿತಿಭರಿತ ಭಾಷಣದ ಮೇಲಾಧಾರಿತವಾಗಿರುವುದು.

ಆಡಳಿತ ಮಂಡಲಿಯ ಥಿಯೊಡರ್‌ ಜಾರಸ್‌ ಅವರು, “ಮೇಲ್ವಿಚಾರಕರು ಮತ್ತು ಶುಶ್ರೂಷಾ ಸೇವಕರು ದೇವಪ್ರಭುತ್ವಕ್ಕನುಸಾರ ನೇಮಿಸಲ್ಪಟ್ಟಿದ್ದಾರೆ” ಎಂಬ ಮೇಲ್ವಿಷಯವಿರುವ ಆಲೋಚನಾಪ್ರೇರಕ ಭಾಷಣವನ್ನು ಕೊಟ್ಟರು. ಈ ಪತ್ರಿಕೆಯಲ್ಲಿ ಬಂದಿರುವ ಲೇಖನಗಳಲ್ಲಿ ಒಂದು, ಆ ವಿಷಯದ ಮೇಲೆ ಆಧಾರಿತವಾಗಿದೆ.

ವಾರ್ಷಿಕ ಕೂಟದಲ್ಲಿ, 2001ನೆಯ ವರ್ಷಕ್ಕಾಗಿರುವ ವಾರ್ಷಿಕವಚನದ ಕುರಿತು ಆಡಳಿತ ಮಂಡಲಿಯ ಸದಸ್ಯರಾದ ಡೇವಿಡ್‌ ಸ್ಪ್ಲೇನ್‌ ಅವರು ಆಸಕ್ತಿಕರ ಭಾಷಣವನ್ನು ಕೊಟ್ಟರು. ಅಪೊಸ್ತಲ ಪೌಲನ ಮಾತುಗಳ ಮೇಲಾಧಾರಿತವಾಗಿರುವ ಆ ವಚನವು ಹೀಗಿದೆ: “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ದೃಢನಿಶ್ಚಿತರಾಗಿದ್ದು . . . ಪೂರ್ಣರಾಗಿ ನಿಲ್ಲಿರಿ.” (ಕೊಲೊಸ್ಸೆ 4:​12, NW) ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳು, ಇಡೀ ಭೂಮಿಯಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ನಂಬಿಗಸ್ತಿಕೆಯಿಂದ ಸಾರುತ್ತಿರುವಾಗ ಹಾಗೆ ಮಾಡಲು ನಿರ್ಧರಿಸಿದ್ದಾರೆ.​—ಮತ್ತಾಯ 24:14.

[ಪಾದಟಿಪ್ಪಣಿ]

^ ಪ್ಯಾರ. 3 ಈ ಕಾರ್ಯಕ್ರಮವು ಬೇರೆ ಬೇರೆ ಸ್ಥಳಗಳಲ್ಲಿದ್ದ ಜನರಿಗೆ ಇಲೆಕ್ಟ್ರಾನಿಕ್‌ ಸಂಪರ್ಕ ವ್ಯವಸ್ಥೆಯ ಮೂಲಕ ಪ್ರಸಾರಮಾಡಲ್ಪಟ್ಟಿತು. ಮತ್ತು ಈ ಕಾರ್ಯಕ್ರಮದ ಒಟ್ಟು ಹಾಜರಿ 13,082 ಆಗಿತ್ತು.