ಸದ್ಗುಣವನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ?
ಸದ್ಗುಣವನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ?
ಇಂದಿರುವ ಡಿಕ್ಷನೆರಿಗಳು ‘ಸದ್ಗುಣವು,’ “ನೈತಿಕ ಉತ್ಕೃಷ್ಟತೆ; ಸುಗುಣ”ವಾಗಿದೆ ಎಂದು ವಿವರಿಸುತ್ತವೆ. ಅಂದರೆ, ಇದು “ಸರಿಯಾದ ಕಾರ್ಯವನ್ನು ಮಾಡುವುದು ಹಾಗೂ ಆಲೋಚಿಸುವುದಾಗಿದೆ; ವ್ಯಕ್ತಿಯೊಬ್ಬನ ಗುಣದ ಒಳ್ಳೆಯತನವಾಗಿದೆ.” “ಸದ್ಗುಣ” ಎಂಬ ಅನುವಾದದ ಮೂಲ ಗ್ರೀಕ್ ಅರ್ಥವು “ಯಾವುದೇ ವಿಷಯದ ಅತ್ಯುತ್ಕೃಷ್ಟತೆಯನ್ನು” ಸೂಚಿಸುತ್ತದೆ ಎಂದು ನಿಘಂಟುಕಾರರಾದ ಮಾರ್ವನ್ ಆರ್. ವಿನ್‌ಸೆಂಟ್ ಹೇಳುತ್ತಾರೆ. ಮತ್ತು ದೂರದೃಷ್ಟಿ, ಧೈರ್ಯ, ಸ್ವಶಿಸ್ತು, ನ್ಯಾಯನಡವಳಿಕೆ, ದಯೆ, ದೃಢನಿಷ್ಠೆ, ಪ್ರಾಮಾಣಿಕತೆ, ನಮ್ರತೆ ಮತ್ತು ನಿಷ್ಠೆಯು ಒಂದಲ್ಲ ಒಂದು ಸಮಯದಲ್ಲಿ ಶ್ಲಾಘಿಸಲ್ಪಟ್ಟಿದೆ ಎಂಬುದರಲ್ಲಿ ಆಶ್ಚರ್ಯವೇ ಇಲ್ಲ. ಆದುದರಿಂದ, ಸದ್ಗುಣ ಅಂದರೆ, “ಸರಿಯಾದ ಮಟ್ಟವೊಂದಕ್ಕೆ ವಿಧೇಯತೆಯನ್ನು ತೋರಿಸುವುದು” ಸಹ ಆಗಿದೆ.
ಹಾಗಾದರೆ, ನಾವು ಯಾರ ಅತ್ಯುತ್ಕೃಷ್ಟತೆ, ಒಳ್ಳೆಯತನ ಹಾಗೂ ನ್ಯಾಯದ ಮಟ್ಟಕ್ಕೆ ತಲೆಬಾಗಬೇಕು? “ಒಂದೇ ನೈತಿಕ ತತ್ವವನ್ನು ಅನುಸರಿಸುವ ಅತ್ಯಂತ ಪ್ರಬಲವಾದ ಒಂದು ಗುಂಪಿಗನುಸಾರ, ಜ್ಞಾನೋದಯದ ಚಳುವಳಿಯಿಂದ ಉಂಟಾದ ಸಂದೇಹಗಳು, ವ್ಯಕ್ತಿಯೊಬ್ಬನು ಸರಿತಪ್ಪುಗಳನ್ನು ವೈಯಕ್ತಿಕ ಇಚ್ಛೆ, ಮಾನಸಿಕ ಇಷ್ಟ ಅಥವಾ ಸಂಸ್ಕೃತಿಯ ಆಯ್ಕೆಗನುಸಾರ ನಿರ್ಧರಿಸುವಂತೆ ಮಾಡಿದೆ” ಎಂದು ನ್ಯೂಸ್‌ವೀಕ್ ಪತ್ರಿಕೆ ಹೇಳಿತು. ಸರಿ ಹಾಗೂ ತಪ್ಪುಗಳನ್ನು ನಿರ್ಧರಿಸಲು ಕೇವಲ ಅಭಿರುಚಿ ಇಲ್ಲವೆ ಇಷ್ಟವು ಸಾಕೋ? ಖಂಡಿತವಾಗಿಯೂ ಇಲ್ಲ. ನಾವು ಸದ್ಗುಣವನ್ನು ಬೆಳೆಸಿಕೊಳ್ಳಬೇಕಾದರೆ, ಯಾವುದು ಒಳ್ಳೆಯದು ಹಾಗೂ ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸುವ ಒಂದು ಭರವಸಾರ್ಹವಾದ ಮಟ್ಟವು ಅಗತ್ಯ. ಅಂದರೆ, ನಿರ್ದಿಷ್ಟ ಕಾರ್ಯ, ಮನೋಭಾವ ಇಲ್ಲವೆ ಗುಣವು ಸರಿಯಾಗಿದೆ ಅಥವಾ ತಪ್ಪಾಗಿದೆ ಎಂಬುದನ್ನು ತೀರ್ಮಾನಿಸುವ ಒಂದು ಮಟ್ಟವು ಬೇಕಾಗಿರುತ್ತದೆ.
ನೈತಿಕ ಮಟ್ಟಗಳ ಏಕೈಕ ನಿಜ ಮೂಲ
ನೈತಿಕತೆಯ ಮಟ್ಟಗಳಿಗಾಗಿ ಏಕೈಕ ನಿಜ ಮೂಲವು ಖಂಡಿತವಾಗಿಯೂ ಇದೆ. ಆ ಮೂಲವು ಇಡೀ ಮಾನವಕುಲದ ಸೃಷ್ಟಿಕರ್ತನಾದ ಯೆಹೋವ ದೇವರೇ ಆಗಿದ್ದಾನೆ. ಮೊದಲ ಮಾನವನಾದ ಆದಾಮನನ್ನು ಸೃಷ್ಟಿಸಿದ ನಂತರ, ಯೆಹೋವನು ಮನುಷ್ಯನಿಗೆ ಈ ಆಜ್ಞೆಯನ್ನು ಕೊಟ್ಟನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ಯೆಹೋವ ದೇವರು ಆ ಮರಕ್ಕೆ ಅಪೂರ್ವವಾದ ಹೆಸರನ್ನು ಕೊಡುವ ಮೂಲಕ, ತಾನು ಸೃಷ್ಟಿಸಿದ ಜೀವಿಗಳಿಗೆ ಯಾವುದು ಒಳ್ಳೆಯದಾಗಿದೆ ಮತ್ತು ಯಾವುದು ಕೆಟ್ಟದ್ದಾಗಿದೆ ಎಂಬುದನ್ನು ನಿರ್ಧರಿಸುವ ಹಕ್ಕು ತನಗೆ ಮಾತ್ರ ಇದೆ ಎಂಬುದನ್ನು ತೋರಿಸುತ್ತಿದ್ದನು. ಹೀಗೆ ಒಳ್ಳೆಯ ಹಾಗೂ ಕೆಟ್ಟದ್ದರ ಬಗ್ಗೆ ದೇವರಿಟ್ಟ ಮಟ್ಟಗಳು, ವ್ಯಕ್ತಿಯೊಬ್ಬನ ಕಾರ್ಯ, ದೃಷ್ಟಿಕೋನ ಹಾಗೂ ವೈಯಕ್ತಿಕ ಗುಣಗಳ ಬಗ್ಗೆ ನಿರ್ಣಯಮಾಡಲು ಅಥವಾ ಬೆಲೆಕಟ್ಟಲು ಮೂಲಾಧಾರವನ್ನು ಒದಗಿಸಿದವು. ಇಂತಹ ಮಟ್ಟಗಳಿಲ್ಲದೆ, ಸರಿ ಹಾಗೂ ತಪ್ಪಿನ ನಡುವೆ ಇರುವ ವ್ಯತ್ಯಾಸವನ್ನು ನಾವು ಕಂಡುಹಿಡಿಯಸಾಧ್ಯವಿಲ್ಲ.
ಒಳ್ಳೆಯದರ ಹಾಗೂ ಕೆಟ್ಟದ್ದರ ಅರುಹುಳ್ಳ ಮರದ ಕುರಿತು ಆದಾಮ ಹವ್ವರಿಗೆ ನೀಡಲ್ಪಟ್ಟ ಆಜ್ಞೆಯಲ್ಲಿ, ಅವಿಧೇಯರಾಗುವುದರ ಆಯ್ಕೆಯಿತ್ತು. ಅವರ ವಿಷಯದಲ್ಲಿ, ಸದ್ಗುಣವೆಂದರೆ ದೇವರು ಕೊಟ್ಟ ಆಜ್ಞೆಗೆ ವಿಧೇಯತೆಯನ್ನು ತೋರಿಸುವುದಾಗಿತ್ತು. ಸಕಾಲದಲ್ಲಿ, ಯೆಹೋವನು ತನಗೆ ಯಾವ ವಿಷಯವು ಸಂತೋಷವನ್ನು ತರುತ್ತದೆ ಹಾಗೂ ಯಾವುದು ಸಂತೋಷವನ್ನು ತರುವುದಿಲ್ಲ ಎಂಬುದನ್ನು ಪ್ರಕಟಪಡಿಸಿದನು. ಮತ್ತು ಇದನ್ನು ನಮಗಾಗಿ ಬೈಬಲಿನಲ್ಲಿ ಬರೆಯಿಸಿದನು. ಆದುದರಿಂದ, ಸದ್ಗುಣವನ್ನು ಬೆಳೆಸಿಕೊಳ್ಳುವುದು, ಶಾಸ್ತ್ರವಚನಗಳಲ್ಲಿರುವ ಯೆಹೋವನ ನೀತಿಯುತ ಮಟ್ಟಗಳಿಗೆ ಅನುಸಾರವಾಗಿ ನಡೆದುಕೊಳ್ಳುವುದನ್ನು ಅಗತ್ಯಪಡಿಸುತ್ತದೆ.
ದೇವರ ಮಟ್ಟಗಳನ್ನು ಚೆನ್ನಾಗಿ ಅರಿತುಕೊಳ್ಳಿರಿ
ಯೆಹೋವ ದೇವರು ಒಳ್ಳೆಯದರ ಹಾಗೂ ಕೆಟ್ಟದ್ದರ ಮಟ್ಟಗಳನ್ನು ನಿರ್ಧರಿಸಿ, ಬೈಬಲಿನಲ್ಲಿ ಅವುಗಳನ್ನು ಬರೆದಿರುವಾಗ ನಾವು ಅದನ್ನು ಚೆನ್ನಾಗಿ ಅರಿತುಕೊಳ್ಳಬಾರದೋ? ಅಪೊಸ್ತಲ ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”—2 ತಿಮೊಥೆಯ 3:16, 17.
ಉದಾಹರಣೆಗೆ, ಹಿಂದಿನ ಲೇಖನದಲ್ಲಿ ತಿಳಿಸಿದ ಕುನೀಹೀಟೋ, ತನ್ನ ಸಂಸ್ಕೃತಿಯ ಪ್ರಕಾರ ನಿಗರ್ವ ಸ್ವಭಾವವನ್ನು ತೋರಿಸಿದಾಗ ಆದ ಅಪಾರ್ಥವನ್ನು ಸ್ವಲ್ಪ ಪರಿಗಣಿಸಿರಿ. ಶಾಸ್ತ್ರವಚನಗಳಲ್ಲಿರುವ ಮಟ್ಟಗಳನ್ನು ಅನಂತರ ಸರಿಯಾಗಿ ಪರೀಕ್ಷಿಸಿದಾಗ, ಅವನು ಹೆಚ್ಚು ಸಮತೋಲನದ ಮನೋಭಾವವನ್ನು ಹೊಂದಸಾಧ್ಯವಾಯಿತು. ಬೈಬಲು ನಿಗರ್ವ ಸ್ವಭಾವವುಳ್ಳವರಾಗಿರುವಂತೆ ಉತ್ತೇಜಿಸುತ್ತದೆ ಮತ್ತು ಅತಿಯಾದ ಆತ್ಮವಿಶ್ವಾಸವುಳ್ಳವರಾಗಿರುವುದರ ಹಾಗೂ ದುರಹಂಕಾರಿಗಳಾಗಿರುವುದರ ವಿರುದ್ಧ ನಮಗೆ ಸಲಹೆಯನ್ನು ನೀಡುತ್ತದೆ. (ಜ್ಞಾನೋಕ್ತಿ 11:2; ಮೀಕ 6:8) ಆದರೂ, “ಸಭಾಧ್ಯಕ್ಷನ ಉದ್ಯೋಗವನ್ನು” ಪಡೆದುಕೊಳ್ಳಲಿಕ್ಕಾಗಿ ಬೇಕಾಗಿರುವ ಅರ್ಹತೆಗಳನ್ನು ತಿಳಿಸುವಾಗ, ಅಪೊಸ್ತಲ ಪೌಲನು ಆ ಸುಯೋಗಕ್ಕಾಗಿ “ಪ್ರಯಾಸಪಡುವ” (NW) ಅಗತ್ಯವನ್ನು ತಿಳಿಸುತ್ತಾನೆ. (1 ತಿಮೊಥೆಯ 3:1) ಈ ‘ಪ್ರಯಾಸಪಡುವಿಕೆಯನ್ನು’ ಹೆಮ್ಮೆ ಅಥವಾ ಅಹಂಕಾರದಿಂದ ಮಾಡಬಾರದು ಮಾತ್ರವಲ್ಲ, ತನ್ನನ್ನು ನಿಕೃಷ್ಟವಾಗಿ ಎಣಿಸಿಕೊಳ್ಳಲೂಬಾರದು.
ವ್ಯಾಪಾರ ಕ್ಷೇತ್ರದಲ್ಲಿ ನೈತಿಕ ಉತ್ಕೃಷ್ಟತೆಯು ಹೇಗಿರಬೇಕು ಎಂಬುದರ ಕುರಿತಾಗಿ ಬೈಬಲು ಏನು ಹೇಳುತ್ತದೆ? ಇಂದಿನ ವ್ಯಾಪಾರಿ ಲೋಕದಲ್ಲಿ, ಸರಕಾರಿ ನಿಯಮಗಳು ಹಾಗೂ ತೆರಿಗೆ ನಿಯಮಗಳನ್ನು ಅಲಕ್ಷ್ಯಮಾಡಿ, ಸಂಶಯಾಸ್ಪದ ವಿಧಾನಗಳನ್ನು ಇಲ್ಲವೆ ಸುಲಭವಾಗಿ ಮತ್ತು ಬೇಗನೆ ಲಾಭಮಾಡಿಕೊಳ್ಳುವುದು ಸರ್ವಸಾಮಾನ್ಯವಾಗಿದೆ. ಬೇರೆಯವರು ಏನೇ ಮಾಡಿದರೂ, ನಾವು ‘ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [“ಪ್ರಾಮಾಣಿಕರಾಗಿ,” NW] ನಡೆದುಕೊಳ್ಳಬೇಕು’ ಎಂಬುದೇ ಬೈಬಲಿನ ಮಟ್ಟವಾಗಿದೆ. (ಇಬ್ರಿಯ 13:18) ಆದುದರಿಂದ, ನಮ್ಮ ಧಣಿ, ನಮ್ಮ ಕೈಕೆಳಗಿರುವ ಕೆಲಸಗಾರರು, ಗ್ರಾಹಕರು ಹಾಗೂ ಸರಕಾರಗಳೊಂದಿಗೆ ವ್ಯವಹರಿಸುವಾಗ, ಪ್ರಾಮಾಣಿಕರೂ ಭೇದಭಾವವಿಲ್ಲದವರೂ ಆಗಿರುವ ಮೂಲಕ ನಾವು ಸದ್ಗುಣವನ್ನು ಬೆಳೆಸಿಕೊಳ್ಳುತ್ತೇವೆ. (ಧರ್ಮೋಪದೇಶಕಾಂಡ 25:13-16; ರೋಮಾಪುರ 13:1; ತೀತ 2:9, 10) ಪ್ರಾಮಾಣಿಕತೆಯು, ಭರವಸೆ ಹಾಗೂ ವಿಶ್ವಾಸವನ್ನು ಗಳಿಸಿಕೊಳ್ಳುತ್ತದೆ. ಕರಾರು ಒಪ್ಪಂದಗಳನ್ನು ಬರವಣಿಗೆಯಲ್ಲಿ ಹಾಕುವುದು, ‘ಮುಂಗಾಣದ ಘಟನೆಗಳ’ (NW) ಕಾರಣ ಉದ್ಭವಿಸಬಹುದಾದ ಅಪಾರ್ಥಗಳನ್ನು ಹಾಗೂ ತೊಡಕುಗಳನ್ನು ತಡೆಗಟ್ಟಬಹುದು.—ಪ್ರಸಂಗಿ 9:11; ಯಾಕೋಬ 4:13, 14.
ನಾವು ಉಡುಪನ್ನು ಧರಿಸುವ ಹಾಗೂ ತಲೆಬಾಚುವ ವಿಷಯದಲ್ಲಿಯೂ ಸದ್ಗುಣವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಉಡುಪಿನ ಆಯ್ಕೆಗಳು ಸಂಸ್ಕೃತಿಗನುಸಾರ ಭಿನ್ನವಾಗಿರುತ್ತವೆ ಮತ್ತು ಇತ್ತೀಚೆಗಿನ ಸ್ಟೈಲ್‌ಗಳು ಹಾಗೂ ಫ್ಯಾಷನ್‌ಗಳಿಗೆ ಹೊಂದಿಕೆಯಲ್ಲಿ ಉಡುಪನ್ನು ಧರಿಸುವಂತೆ ಒತ್ತಡಗಳಿರಬಹುದು. ಆದರೆ ನಮ್ಮ ಕಣ್ಣಿಗೆ ಕಾಣುವ ಎಲ್ಲ ಫ್ಯಾಷನ್ ಅನ್ನು ನಾವೇಕೆ ಅನುಸರಿಸಬೇಕು? ಬೈಬಲು ನಮಗೆ ‘ಇಹಲೋಕದ ನಡವಳಿಕೆಯನ್ನು ಅನುಸರಿಸದಂತೆ’ ಬುದ್ಧಿವಾದವನ್ನು ನೀಡುತ್ತದೆ. (ರೋಮಾಪುರ 12:2) ಇದರ ಕುರಿತಾಗಿ ನೀತಿನಿಯಮಗಳನ್ನು ಕೊಡುವ ಬದಲು, ಅಪೊಸ್ತಲ ಪೌಲನು ಪ್ರೇರಣೆಯ ಕೆಳಗೆ ಬರೆದುದು: “ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ . . . ಅಲಂಕರಿಸಿಕೊಳ್ಳಬೇಕು.” (1 ತಿಮೊಥೆಯ 2:9, 10) ಈ ಮೂಲಭೂತ ಮಟ್ಟವು ಪುರುಷಸ್ತ್ರೀಯರಾದಿಯಾಗಿ ಎಲ್ಲರಿಗೂ ಅನ್ವಯಿಸುತ್ತದೆ. ಸಾಂಸ್ಕೃತಿಕ ಅಭಿರುಚಿ ಇಲ್ಲವೆ ವೈಯಕ್ತಿಕ ಅಭಿರುಚಿಗಳಿಗನುಸಾರ ಮನಕ್ಕೆ ಮುದನೀಡಬಹುದಾದ ಸ್ಟೈಲ್ ಅನ್ನು ಮಾಡುವುದರಲ್ಲಿ ತಪ್ಪೇನಿಲ್ಲ.
ದೇವರು ಖಡಾಖಂಡಿತವಾಗಿ ಖಂಡಿಸುವ ಅನೈತಿಕತೆಯ ಕುರಿತಾಗಿ ಸಹ ಬೈಬಲು ತಿಳಿಸುತ್ತದೆ. 1 ಕೊರಿಂಥ 6:9, 10ರಲ್ಲಿ ನಾವು ಓದುವುದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” ಈ ಹಿಂದೆ ತಿಳಿಸಲ್ಪಟ್ಟ ಮರೀಯಳಿಗೆ ಈ ಶಾಸ್ತ್ರವಚನವು ಸಹಾಯಮಾಡಿತು. ಸೃಷ್ಟಿಕರ್ತನಿಂದ ಇಡಲ್ಪಟ್ಟ ನೈತಿಕ ಉತ್ಕೃಷ್ಟತೆಯ ಮಟ್ಟಕ್ಕನುಸಾರ, ಹ್ವಾನ್‌ನೊಂದಿಗೆ ತಾನಿಟ್ಟುಕೊಂಡಿರುವ ಸಂಬಂಧವು ತಪ್ಪಾಗಿದೆ ಹಾಗೂ ದೇವರ ಸಮ್ಮತಿಯನ್ನು ಪಡೆದುಕೊಳ್ಳಬೇಕಾದರೆ ಈ ಸಂಬಂಧವನ್ನು ಕೊನೆಗೊಳಿಸಬೇಕೆಂಬ ತೀರ್ಮಾನಕ್ಕೆ ಬರುವಂತೆ ಇದು ಅವಳ ಕಣ್ಣನ್ನು ತೆರೆಸಿತು. ನಾವು ಸದ್ಗುಣವನ್ನು ಬೆಳೆಸಿಕೊಳ್ಳಬೇಕಾದರೆ, ಯೆಹೋವನ ಮಟ್ಟಗಳನ್ನು ಚೆನ್ನಾಗಿ ತಿಳಿದುಕೊಳ್ಳುವ ಅಗತ್ಯವಿದೆ.
ಹೃದಯದಾಳದಿಂದ ಕಲಿತುಕೊಳ್ಳಿರಿ
ಸದ್ಗುಣ ಅಂದರೆ, ಕೇವಲ ಕೆಟ್ಟದ್ದರಿಂದ ದೂರವಿರುವುದು ಅಲ್ಲ. ಬದಲಿಗೆ ಅದಕ್ಕೆ ನೈತಿಕ ಬಲವಿದೆ. ಸದ್ಗುಣಶೀಲ ವ್ಯಕ್ತಿಯಲ್ಲಿ ಒಳ್ಳೆಯತನವಿರುತ್ತದೆ. “ಸದ್ಗುಣ”ವನ್ನು “ತನುಮನದಿಂದ ಕಲಿತುಕೊಳ್ಳಬೇಕು” ಎಂದು ಒಬ್ಬ ಪ್ರೊಫೆಸರರು ಹೇಳುತ್ತಾರೆ. ಆದುದರಿಂದ, ಸದ್ಗುಣವನ್ನು ಬೆಳೆಸಿಕೊಳ್ಳುವುದು, ಕೇವಲ ದೇವರ ವಾಕ್ಯವನ್ನು ಚೆನ್ನಾಗಿ ತಿಳಿದಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಅವಶ್ಯಪಡಿಸುತ್ತದೆ. ಅಂದರೆ, ದೇವರ ವಾಕ್ಯದಲ್ಲಿರುವ ವಿಷಯಗಳನ್ನು ಮನನಮಾಡಬೇಕಾಗಿರುತ್ತದೆ. ಏಕೆಂದರೆ ಇದರಿಂದ, ಯೆಹೋವನಿಗಾಗಿ ನಮ್ಮ ಕೃತಜ್ಞತೆಯು ಹೃದಯದಲ್ಲಿ ಉಕ್ಕಿಹರಿಯುತ್ತದೆ ಹಾಗೂ ನಮ್ಮ ಜೀವಿತದಲ್ಲಿ ಶಾಸ್ತ್ರೀಯ ತತ್ವಗಳನ್ನು ಅನುಸರಿಸುವಂತೆ ನಾವು ಪ್ರಚೋದಿಸಲ್ಪಡುತ್ತೇವೆ.
“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ” ಎಂದು ಕೀರ್ತನೆಗಾರನು ಘೋಷಿಸಿದನು. (ಕೀರ್ತನೆ 119:97) ಮಾತ್ರವಲ್ಲ, ರಾಜ ದಾವೀದನು ಬರೆದುದು: “ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.” (ಕೀರ್ತನೆ 143:5) ಬೈಬಲ್ ಹಾಗೂ ಬೈಬಲಾಧಾರಿತ ಸಾಹಿತ್ಯಗಳನ್ನು ಅಧ್ಯಯನಮಾಡುವ ಸಮಯದಲ್ಲಿ ನಾವು ಪ್ರಾರ್ಥನಾಪೂರ್ವಕವಾಗಿ ಮನನಮಾಡುವುದನ್ನು ಸಹ ಮುಖ್ಯ ಭಾಗವಾಗಿ ಮಾಡತಕ್ಕದ್ದು.
ಶ್ರದ್ಧಾಪೂರ್ವಕವಾದ ಅಧ್ಯಯನಕ್ಕಾಗಿ ಹಾಗೂ ಇದರ ಜೊತೆಗೆ ಮನನಕ್ಕಾಗಿ ಸಮಯವನ್ನು ಬದಿಗಿಡುವುದು ನಿಜವಾಗಿಯೂ ಸವಾಲಾಗಿರುತ್ತದೆ. ಆದರೆ, ಸದ್ಗುಣವನ್ನು ಬೆಳೆಸಿಕೊಳ್ಳಲಿಕ್ಕಾಗಿ ನಾವು ಪಡುವ ಪ್ರಯಾಸವು, ಇದಕ್ಕಾಗಿ ಬೇರೆ ಚಟುವಟಿಕೆಗಳಿಂದ ಸಮಯವನ್ನು ಖರೀದಿಸುವಂತೆ ಅಗತ್ಯಪಡಿಸುತ್ತದೆ. (ಎಫೆಸ 5:15, 16) 24 ವರ್ಷ ಪ್ರಾಯದ ಏರನ್, ಪ್ರತಿದಿನ ಬೆಳಗ್ಗೆ ಮೊದಲಿಗಿಂತ 30 ನಿಮಿಷ ಬೇಗ ಏಳುವ ಮೂಲಕ ಅಂತಹ ಸಮಯವನ್ನು ಖರೀದಿಸುತ್ತಾನೆ. ಅವನು ಹೇಳುವುದು: “ಮೊದಮೊದಲು, ಪೂರ್ತಿ 30 ನಿಮಿಷ ಕೇವಲ ಬೈಬಲನ್ನು ಓದುತ್ತಿದ್ದೆ. ಆದರೆ ಇತ್ತೀಚೆಗಷ್ಟೇ ಮನನಮಾಡುವುದರ ಪ್ರಾಮುಖ್ಯತೆಯನ್ನು ನಾನು ಕಂಡುಕೊಂಡೆ. ಆದುದರಿಂದ, ನಾನೇನನ್ನು ಆಗಲೇ ಓದಿದೆನೋ ಅದರ ಬಗ್ಗೆ ಮನನಮಾಡಲು ಆ ಸಮಯದ ಅರ್ಧವನ್ನು ಉಪಯೋಗಿಸುತ್ತೇನೆ. ಇದು ನಿಜವಾಗಿಯೂ ಪ್ರತಿಫಲವನ್ನು ಕೊಟ್ಟಿದೆ.” ಮನನವನ್ನು ಬೇರೆ ಸಮಯಗಳಲ್ಲಿ ಸಹ ಮಾಡಸಾಧ್ಯವಿದೆ. ಯೆಹೋವನಿಗಾಗಿ ಸಂಗೀತ ರಚನೆಯನ್ನು ಮಾಡಿದ ಸಂದರ್ಭದಲ್ಲಿ, ದಾವೀದನು ಹಾಡಿದ್ದು: “ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು.” (ಕೀರ್ತನೆ 63:6) ಇನ್ನೊಂದು ಸಂದರ್ಭದಲ್ಲಿ ಬೈಬಲು ಹೇಳುವುದು: ‘ಅವನು [ಇಸಾಕನು, NW] ಸಂಜೇ ವೇಳೆಯಲ್ಲಿ ಧ್ಯಾನ ಮಾಡುವದಕ್ಕೋಸ್ಕರ ಅಡವಿಗೆ ಹೋದನು.’—ಆದಿಕಾಂಡ 24:63.
ಸದ್ಗುಣವನ್ನು ಬೆಳೆಸಿಕೊಳ್ಳುವುದರ ಸಂಬಂಧದಲ್ಲಿ ಮನನಮಾಡುವುದರ ಪಾತ್ರವು ಬೆಲೆಕಟ್ಟಲಾರದಂತಹ ವಿಷಯವಾಗಿದೆ. ಏಕೆಂದರೆ ಇದು, ಯೆಹೋವನಿಗೆ ಹೇಗೆ ಅನಿಸುತ್ತದೋ ಹಾಗೆ ನಮಗೆ ಅನಿಸುವಂತೆ ಮತ್ತು ಆತನ ದೃಷ್ಟಿಕೋನಗಳನ್ನು ನಮ್ಮ ದೃಷ್ಟಿಕೋನಗಳನ್ನಾಗಿ ಮಾಡಿಕೊಳ್ಳುವಂತೆ ಸಹಾಯಮಾಡುತ್ತದೆ. ಉದಾಹರಣೆಗೆ, ದೇವರು ಜಾರತ್ವವನ್ನು ನಿಷೇಧಿಸುತ್ತಾನೆ ಎಂಬುದು ಮರೀಯಳಿಗೆ ಗೊತ್ತಿತ್ತು. ಆದರೆ, ‘ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಲು’ ಅವಳು ಬೈಬಲಿನ ಶಾಸ್ತ್ರವಚನಗಳ ಕುರಿತು ಮನನಮಾಡಬೇಕಾಗಿತ್ತು. (ರೋಮಾಪುರ 12:9) ಕೊಲೊಸ್ಸೆ 3:5ನ್ನು ಓದಿದ ಬಳಿಕ ಬದಲಾವಣೆಗಳನ್ನು ಮಾಡುವ ಅಗತ್ಯವನ್ನು ಅವಳು ಕಂಡುಕೊಂಡಳು. ಆ ಶಾಸ್ತ್ರವಚನವು ‘ನಮ್ಮಲ್ಲಿರುವ ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ಲೋಭ ಎಂಬಂತಹ ಭಾವಗಳನ್ನು ಸಾಯಿಸುವಂತೆ’ ಪ್ರಚೋದಿಸುತ್ತದೆ. ‘ಯಾವ ರೀತಿಯ ಕಾಮಾಭಿಲಾಷೆಯನ್ನು ನಾನು ಸಾಯಿಸಬೇಕು? ದುರಾಶೆಗಳನ್ನು ಬಡಿದೆಬ್ಬಿಸುವಂತಹ ಯಾವ ವಿಷಯಗಳಿಂದ ನಾನು ದೂರವಿರಬೇಕು? ವಿರುದ್ಧ ಲಿಂಗದವರ ಬಗ್ಗೆ ನನಗಿರುವ ದೃಷ್ಟಿಕೋನದಲ್ಲಿ ನಾನೇನಾದರೂ ಬದಲಾವಣೆಗಳನ್ನು ಮಾಡಬೇಕೋ?’ ಎಂಬಂತಹ ಪ್ರಶ್ನೆಗಳನ್ನು ಮರೀಯಳು ಕೇಳಿಕೊಳ್ಳಬೇಕಾಗಿತ್ತು.
ಮನನಮಾಡುವುದರಲ್ಲಿ ನಾವು ಮಾಡಿರುವ ಕ್ರಿಯೆಗಳ ಫಲಿತಾಂಶವನ್ನು ಸಹ ಪರಿಗಣಿಸುವುದು ಒಳಗೂಡುತ್ತದೆ. ಜಾರತ್ವದಿಂದ ದೂರವಿರುವಂತೆ ಹಾಗೂ “ತನ್ನ ಸಹೋದರನ ಹಕ್ಕುಗಳಿಗೆ ಹಾನಿತರುವಂತಹ 1 ಥೆಸಲೊನೀಕ 4:3-7) ಚಿಂತನೆಮಾಡಿನೋಡುವುದಕ್ಕೆ ಇವು ಒಳ್ಳೆಯ ಪ್ರಶ್ನೆಗಳಾಗಿವೆ: ‘ಈ ಕೆಲಸವನ್ನು ಮಾಡುವುದರಿಂದ ನನಗೆ, ನನ್ನ ಕುಟುಂಬಕ್ಕೆ ಅಥವಾ ಇನ್ನಿತರರಿಗೆ ಎಷ್ಟು ಹಾನಿಯಾಗಬಹುದು? ಇದರಿಂದ ನಾನು ಯಾವ ರೀತಿಯಲ್ಲಿ ಆತ್ಮಿಕ, ಭಾವನಾತ್ಮಕ ಹಾಗೂ ಶಾರೀರಿಕವಾಗಿ ಬಾಧಿಸಲ್ಪಡುವೆ? ಗತಕಾಲದಲ್ಲಿ ದೇವರ ನಿಯಮವನ್ನು ಉಲ್ಲಂಘಿಸಿದವರು ಯಾವ ಪರಿಸ್ಥಿತಿಯನ್ನು ಎದುರಿಸಿದ್ದಾರೆ?’ ಮರೀಯಳು ಇಂತಹ ವಿಷಯಗಳನ್ನು ಆಲೋಚನೆಮಾಡಿನೋಡುವ ಮೂಲಕ ಮುಂದೆ ತಪ್ಪುಮಾಡದಿರಲು ದೃಢನಿಶ್ಚಯಮಾಡಿದಳು. ಮತ್ತು ನೀವು ಸಹ ಹಾಗೆ ಮಾಡಸಾಧ್ಯವಿದೆ.
ಮತ್ತು ಅತಿಕ್ರಮಿಸುವಂತಹ ಹಂತಕ್ಕೆ ಹೋಗದ” (NW) ಹಾಗೆ ಆತ್ಮನಿಯಂತ್ರಣವನ್ನು ತೋರಿಸುವಂತೆ ಕ್ರೈಸ್ತರನ್ನು ಪೌಲನು ಪ್ರೇರೇಪಿಸುತ್ತಾನೆ. (ಉದಾಹರಣೆಗಳಿಂದ ಕಲಿತುಕೊಳ್ಳಿರಿ
ಸದ್ಗುಣವನ್ನು ಕ್ಲಾಸ್‌ರೂಮಿನಲ್ಲಿ ಕಲಿಸಸಾಧ್ಯವೋ? ಈ ಪ್ರಶ್ನೆಯು ಸಹಸ್ರಮಾನದ ಅನೇಕ ಜನರನ್ನು ಗೊಂದಲಗೊಳಿಸಿದೆ. ಇದನ್ನು ಕ್ಲಾಸ್‌ರೂಮಿನಲ್ಲಿ ಕಲಿಸಸಾಧ್ಯ ಎಂದು ಗ್ರೀಕ್ ತತ್ವಜ್ಞಾನಿ ಪ್ಲೇಟೋ ನೆನೆಸಿದನು. ಇನ್ನೊಂದು ಕಡೆಯಲ್ಲಿ, ಅರಿಸ್ಟಾಟಲ್ ಸದ್ಗುಣವನ್ನು ಅಭ್ಯಾಸಬಲದಿಂದ ಕಲಿತುಕೊಳ್ಳಬಹುದು ಎಂದು ತರ್ಕಮಾಡಿದನು. ಈ ವಿಚಾರದ ಕುರಿತಾದ ವಾಗ್ವಾದವನ್ನು ಈ ರೀತಿಯಲ್ಲಿ ಒಬ್ಬ ಪತ್ರಿಕೋದ್ಯಮಿ ಹೇಳಿದನು: “ಸಾರಾಂಶವಾಗಿ ಹೇಳುವುದಾದರೆ, ಸದ್ಗುಣದ ನೈತಿಕ ನಡವಳಿಕೆಗಳನ್ನು ಒಬ್ಬಂಟಿಗರಾಗಿ ಕಲಿತುಕೊಳ್ಳಸಾಧ್ಯವಿಲ್ಲ. ಇಲ್ಲವೆ ಪಠ್ಯಪುಸ್ತಕಗಳಿಂದಲೂ ಅದನ್ನು ಕಲಿಸಿಕೊಡಸಾಧ್ಯವಿಲ್ಲ. ಎಲ್ಲಿ ಸದ್ಗುಣವನ್ನು ಉತ್ತೇಜಿಸಲಾಗುತ್ತದೋ ಹಾಗೂ ಮೆಚ್ಚಲಾಗುತ್ತದೋ ಅಂತಹ ಸಮಾಜದ ಜನರೊಂದಿಗೆ ಬಾಳುವಾಗ ಒಳ್ಳೆಯ ಗುಣವು ಬರುತ್ತದೆ.” ಆದರೆ ನಿಜವಾದ ಸದ್ಗುಣವುಳ್ಳ ಜನರನ್ನು ನಾವೆಲ್ಲಿ ಕಂಡುಕೊಳ್ಳಸಾಧ್ಯವಿದೆ? ಹೆಚ್ಚಿನ ಸಂಸ್ಕೃತಿಗಳು, ತಮ್ಮ ಮಿಥ್ಯಾ ಮಹಾಪುರುಷರಲ್ಲಿ ಹಾಗೂ ಕಥೆಗಳಲ್ಲಿ ಸದ್ಗುಣದ ಕೆಲವೊಂದು ಉದಾಹರಣೆಗಳನ್ನು ತೋರಿಸುವುದಾದರೂ, ಬೈಬಲಿನಲ್ಲಿ ಅನೇಕ ವ್ಯಕ್ತಿಗಳ ನೈಜ ಉದಾಹರಣೆಗಳಿವೆ.
ಸದ್ಗುಣದ ಅತ್ಯುತ್ತಮ ಮಾದರಿಯು ಯೆಹೋವನಾಗಿದ್ದಾನೆ. ಆತನು ಯಾವಾಗಲೂ ಸದ್ಗುಣಶೀಲನಾಗಿ ಹಾಗೂ ಯಾವುದು ನ್ಯಾಯವೂ ಹಿತವೂ ಆಗಿದೆಯೋ ಅಂತಹ ರೀತಿಯಲ್ಲಿ ಕ್ರಿಯೆಗೈಯುತ್ತಾನೆ. ನಾವು ಸಹ “ದೇವರನ್ನು ಅನುಕರಿಸುವವ”ರಾಗುವ (NW) ಮೂಲಕ ಸದ್ಗುಣವನ್ನು ಬೆಳೆಸಿಕೊಳ್ಳಸಾಧ್ಯವಿದೆ. (ಎಫೆಸ 5:1) ಮತ್ತು ದೇವರ ಪುತ್ರನಾದ ಯೇಸು ಕ್ರಿಸ್ತನು ‘ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು’ ನಮಗೆ ‘ಮಾದರಿಯನ್ನು ತೋರಿಸಿ ಹೋಗಿದ್ದಾನೆ.’ (1 ಪೇತ್ರ 2:21) ಅಷ್ಟುಮಾತ್ರವಲ್ಲ, ಬೈಬಲಿನಲ್ಲಿ ಅಬ್ರಹಾಮ, ಸಾರ, ಯೊಸೇಫ, ರೂತ್, ಯೋಬ, ದಾನಿಯೇಲ ಹಾಗೂ ಅವನ ಮೂವರು ಇಬ್ರಿಯ ಸಂಗಡಿಗರಂತಹ ಅನೇಕ ನಂಬಿಗಸ್ತ ಜನರ ವೃತ್ತಾಂತಗಳಿವೆ. ಖಂಡಿತವಾಗಿ ಇಂದು ಸಹ ಯೆಹೋವನ ಸೇವಕರ ಮಧ್ಯೆ ಸದ್ಗುಣಶೀಲರಿದ್ದಾರೆ.
ನಾವು ಸಹ ಯಶಸ್ಸನ್ನು ಕೈಗೆಟುಕಿಸಿಕೊಳ್ಳಬಹುದು
ದೇವರ ದೃಷ್ಟಿಯಲ್ಲಿ ಯಾವುದು ಸದ್ಗುಣವಾಗಿದೆಯೋ ಅದನ್ನು ಮಾಡುವುದರಲ್ಲಿ ನಾವು ನಿಜವಾಗಿಯೂ ಯಶಸ್ಸನ್ನು ಪಡೆದುಕೊಳ್ಳಸಾಧ್ಯವಿದೆಯೋ? ನಾವು ಅಪರಿಪೂರ್ಣರಾಗಿರುವುದರಿಂದ, ಕೆಲವೊಮ್ಮೆ ನಮ್ಮ ಮನಸ್ಸು ಹಾಗೂ ದೇಹದ ನಡುವೆ ಭಯಂಕರವಾದ ಹೋರಾಟವು ನಡೆಯುತ್ತಿರಬಹುದು. ಅಂದರೆ, ಯಾವುದು ಸದ್ಗುಣವಾಗಿದೆಯೋ ಅದನ್ನು ಮಾಡುವ ಇಚ್ಛೆಯ ಹಾಗೂ ನಮ್ಮ ಪಾಪಭರಿತ ಪ್ರವೃತ್ತಿಗಳನ್ನು ಅನುಸರಿಸುವುದರ ಮಧ್ಯೆ ಹೋರಾಟವಿರಬಹುದು. (ರೋಮಾಪುರ 5:12; 7:13-23) ಆದರೆ ಈ ಹೋರಾಟವನ್ನು ದೇವರ ಸಹಾಯದಿಂದ ಗೆಲ್ಲಸಾಧ್ಯವಿದೆ. (ರೋಮಾಪುರ 7:24, 25) ಯೆಹೋವನು ತನ್ನ ವಾಕ್ಯವನ್ನು ಹಾಗೂ ಬೈಬಲ್ ಆಧಾರಿತ ಸಾಹಿತ್ಯಗಳನ್ನು ನಮಗೆ ನೀಡಿದ್ದಾನೆ. ಶಾಸ್ತ್ರವಚನಗಳನ್ನು ಶ್ರದ್ಧಾಪೂರ್ವಕವಾಗಿ ಅಭ್ಯಸಿಸುವ ಮೂಲಕ ಹಾಗೂ ಅವುಗಳನ್ನು ಪ್ರಾರ್ಥನಾಪೂರ್ವಕವಾಗಿ ಮನನಮಾಡುವ ಮೂಲಕ, ನಾವು ಹೃದಯದಲ್ಲಿ ನಿರ್ಮಲರಾಗಸಾಧ್ಯವಿದೆ. ಅಂತಹ ಒಂದು ನಿರ್ಮಲವಾದ ಹೃದಯದಿಂದ ಸದ್ಗುಣಶೀಲ ಆಲೋಚನೆಗಳು, ನುಡಿಗಳು ಹಾಗೂ ಕ್ರಿಯೆಗಳು ಹೊರಹೊಮ್ಮುತ್ತವೆ. (ಲೂಕ 6:45) ಯೆಹೋವ ದೇವರು ಹಾಗೂ ಯೇಸು ಕ್ರಿಸ್ತನ ಮಾದರಿಗಳ ಆಧಾರದ ಮೇಲೆ, ನಾವು ಒಂದು ದೇವಭಕ್ತ ವ್ಯಕ್ತಿತ್ವವನ್ನು ಕಟ್ಟಸಾಧ್ಯವಿದೆ. ಹಾಗೂ ಇಂದು ದೇವರಿಗೆ ನಂಬಿಗಸ್ತರಾಗಿ ಸೇವೆಸಲ್ಲಿಸುತ್ತಿರುವ ಜನರಿಂದ ಖಂಡಿತವಾಗಿಯೂ ಹೆಚ್ಚನ್ನು ಕಲಿತುಕೊಳ್ಳಬಹುದು.
ಸದ್ಗುಣವನ್ನು ಹಾಗೂ ಇನ್ನಿತರ ಪ್ರಶಂಸಾರ್ಹ ವಿಷಯಗಳನ್ನು ‘ಲಕ್ಷ್ಯಕ್ಕೆ ತಂದುಕೊಳ್ಳುವಂತೆ’ ತನ್ನ ಓದುಗರಿಗೆ ಅಪೊಸ್ತಲ ಪೌಲನು ಉತ್ತೇಜಿಸಿದನು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದವು ಖಂಡಿತವಾಗಿಯೂ ನಮ್ಮ ಮೇಲಿರುತ್ತದೆ. (ಫಿಲಿಪ್ಪಿ 4:8, 9) ಯೆಹೋವನ ಸಹಾಯದಿಂದ, ನಾವು ಸದ್ಗುಣವನ್ನು ಬೆಳೆಸಿಕೊಳ್ಳುವುದರಲ್ಲಿ ಯಶಸ್ಸನ್ನು ಕಾಣುವೆವು.
[ಪುಟ 6ರಲ್ಲಿರುವ ಚಿತ್ರ]
ನಿಮ್ಮ ಬೈಬಲ್ ಅಧ್ಯಯನದ ಸಮಯದಲ್ಲಿ ಮನನಮಾಡುವುದನ್ನು ಮುಖ್ಯ ಭಾಗವಾಗಿ ಮಾಡಿರಿ
[ಪುಟ 7ರಲ್ಲಿರುವ ಚಿತ್ರ]
ಕ್ರಿಸ್ತ ಯೇಸುವನ್ನು ಅನುಕರಿಸುವ ಮೂಲಕ ಒಂದು ದೇವಭಕ್ತ ವ್ಯಕ್ತಿತ್ವವನ್ನು ಕಟ್ಟಿರಿ