ಅಪಾಯವು ಕಟ್ಟಿಟ್ಟ ಬುತ್ತಿಯಾದ ಈ ಲೋಕದಲ್ಲಿ ಸುರಕ್ಷೆ!
ಅಪಾಯವು ಕಟ್ಟಿಟ್ಟ ಬುತ್ತಿಯಾದ ಈ ಲೋಕದಲ್ಲಿ ಸುರಕ್ಷೆ!
ಸಿಡಿಗುಂಡಿನ ಪ್ರದೇಶದಲ್ಲಿ ನಡೆದಾಡುವುದು ನಿಜವಾಗಿ ಪ್ರಾಣಾಂತಕವಾಗಿರಸಾಧ್ಯವಿದೆ. ಆದರೂ ಎಲ್ಲೆಲ್ಲಿ ಭೂಸ್ಫೋಟಕಗಳಿವೆ ಎಂಬುದನ್ನು ತೋರಿಸುವ ಮ್ಯಾಪ್ ನಿಮ್ಮಲ್ಲಿರುವುದಾದರೆ, ಅದು ಸಹಾಯಕಾರಿಯಾಗಿರುವುದಿಲ್ಲವೋ? ಮಾತ್ರವಲ್ಲ, ವಿಭಿನ್ನ ರೀತಿಯ ಭೂಸ್ಫೋಟಕಗಳನ್ನು ಗುರುತಿಸಲು ನಿಮಗೆ ತರಬೇತು ನೀಡಲಾಗಿದೆ ಎಂದಿಟ್ಟುಕೊಳ್ಳಿ. ಆಗ ನಿಜವಾಗಿಯೂ, ಅಂತಹ ಒಂದು ಜ್ಞಾನವು, ಅಂಗ ಊನಗೊಳ್ಳುವುದರಿಂದಲೋ ಇಲ್ಲವೆ ಕೊಲ್ಲಲ್ಪಡುವುದರಿಂದಲೋ ನಿಮಗೆ ಆಗುವ ಅಪಾಯವನ್ನು ಕಡಿಮೆಮಾಡುವುದು.
ಹೀಗೆ ಬೈಬಲ್, ಎಲ್ಲೆಲ್ಲಿ ಸ್ಫೋಟಕಗಳಿವೆ ಎಂಬುದನ್ನು ಗುರುತಿಸಲಿಕ್ಕೆ ತರಬೇತಿಯನ್ನು ನೀಡುವ ಮ್ಯಾಪಿನಂತಿದೆ. ಗಂಡಾಂತರಗಳಿಂದ ದೂರವಿರುವ ಹಾಗೂ ಜೀವನದಲ್ಲಿ ಏಳಬಹುದಾದ ಸಮಸ್ಯೆಯ ಅಲೆಗಳನ್ನು ದಾಟಿಹೋಗುವ ವಿಷಯದಲ್ಲಿ ಎಣೆಯಿಲ್ಲದ ವಿವೇಕವನ್ನು ಬೈಬಲು ಹೊಂದಿದೆ.
ಜ್ಞಾನೋಕ್ತಿ 2:10, 11ರಲ್ಲಿ ಕಂಡುಬರುವ ಈ ಆಶ್ವಾಸನೆದಾಯಕ ವಾಗ್ದಾನವನ್ನು ಗಮನಿಸಿರಿ. ಅದು ಹೇಳುವುದು: “ಜ್ಞಾನವು [“ವಿವೇಕ,” NW] ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು [“ವಿವೇಚನಾಶಕ್ತಿ,” NW] ನಿನ್ನನ್ನು ಕಾಪಾಡುವದು.” ಇಲ್ಲಿ ತಿಳಿಸಲ್ಪಟ್ಟಿರುವ ವಿವೇಕ ಹಾಗೂ ವಿವೇಚನಾಶಕ್ತಿ ಮನುಷ್ಯರಿಂದ ಬಂದದ್ದಲ್ಲ, ಬದಲಾಗಿ ದೇವರಿಂದ ಬಂದದ್ದಾಗಿದೆ. “ನನ್ನ ಮಾತಿಗೆ [ದೈವಿಕ ವಿವೇಕಕ್ಕೆ] ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.” (ಜ್ಞಾನೋಕ್ತಿ 1:33) ಬೈಬಲು ನಮಗೆ ಹೇಗೆ ಸುರಕ್ಷೆಯನ್ನು ಹೆಚ್ಚಿಸಸಾಧ್ಯವಿದೆ ಹಾಗೂ ಅನೇಕ ಸಂಕಷ್ಟಗಳಿಂದ ದೂರವಿರಲು ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ನೋಡೋಣ.
ಪ್ರಾಣಾಂತಕ ಆ್ಯಕ್ಸಿಡೆಂಟ್‌ಗಳಿಂದ ದೂರವಿರುವುದು
ಲೋಕಾರೋಗ್ಯ ಸಂಸ್ಥೆಯಿಂದ (ಡಬ್ಲ್ಯೂಏಚ್‌ಓ) ಪ್ರಕಟಿಸಿರುವ ಇತ್ತೀಚಿನ ಸಂಖ್ಯೆಗಳು ಭೂಮ್ಯಾದ್ಯಂತ, ಒಂದು ವರ್ಷದಲ್ಲಿ ಟ್ರ್ಯಾಫಿಕ್ ಆ್ಯಕ್ಸಿಡೆಂಟ್‌ಗಳಿಂದ ಸುಮಾರು 11,71,000ದಷ್ಟು ಜನರು ಮೃತರಾದರು ಎಂದು ತೋರಿಸುತ್ತದೆ. ಮತ್ತು ಹತ್ತಿರಹತ್ತಿರ ನಾಲ್ಕು ಕೋಟಿ ಜನರು ಗಾಯಗೊಂಡಿದ್ದಾರೆ ಮತ್ತು ಸುಮಾರು 80 ಲಕ್ಷ ಜನರು ದೀರ್ಘಕಾಲದ ಅಶಕ್ತತೆಯಿಂದ ನರಳುತ್ತಿದ್ದಾರೆ.
ವಾಹನವನ್ನು ಓಡಿಸುತ್ತಿರುವಾಗ ಸಂಪೂರ್ಣವಾದ ಸುರಕ್ಷೆ ಸಿಗುವುದು ಅಸಾಧ್ಯವಾದರೂ, ನಾವು ಸ್ವತಃ ಟ್ರ್ಯಾಫಿಕ್ ನಿಯಮಗಳನ್ನು ಪಾಲಿಸುವಾಗ ನಮಗೆ ವೈಯಕ್ತಿಕ ಸುರಕ್ಷೆಯು ಗಮನಾರ್ಹವಾದ ಮಟ್ಟಿಗೆ ಸಿಗುವುದು. ಟ್ರ್ಯಾಫಿಕ್ ನಿಯಮಗಳನ್ನು ಮಾಡಿ, ಅದನ್ನು ಪಾಲಿಸಬೇಕೆಂದು ನಿರ್ಬಂಧಿಸುವ ಸರಕಾರೀ ಅಧಿಕಾರಿಗಳ ಕುರಿತಾಗಿ ಬೈಬಲು ಹೇಳುವುದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ.” (ರೋಮಾಪುರ 13:1) ವಾಹನ ಓಡಿಸುವವರು ಈ ಸಲಹೆಗನುಸಾರ ನಡೆದುಕೊಳ್ಳುವಾಗ, ಭೀಕರವಾದ ಆ್ಯಕ್ಸಿಡೆಂಟಿನಿಂದ ತಪ್ಪಿಸಿಕೊಳ್ಳುತ್ತಾರೆ.
ಜೀವಕ್ಕಾಗಿರುವ ಗೌರವವೇ ಜೋಪಾನವಾಗಿ ವಾಹನವನ್ನು ಓಡಿಸುವದಕ್ಕೆ ಪ್ರೇರಣೆಯಾಗಿದೆ. “ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ” ಎಂದು ಬೈಬಲು ಯೆಹೋವ ದೇವರ ಬಗ್ಗೆ ತಿಳಿಸುತ್ತದೆ. (ಕೀರ್ತನೆ 36:9) ಜೀವ ದೇವರಿಂದ ಕೊಡಲ್ಪಟ್ಟ ಕೊಡುಗೆಯಾಗಿದೆ. ಆದುದರಿಂದ, ಯಾರಿಂದಲೂ ಆ ಕೊಡುಗೆಯನ್ನು ತೆಗೆದುಕೊಳ್ಳಲಿಕ್ಕೋ ಇಲ್ಲವೆ ನಮ್ಮ ಜೀವವನ್ನು ಸೇರಿಸಿ, ಇತರರ ಜೀವಕ್ಕೆ ಅಗೌರವವನ್ನು ತೋರಿಸಲಿಕ್ಕೋ ನಮಗೆ ಯಾವುದೇ ಹಕ್ಕು ಇರುವುದಿಲ್ಲ.—ಆದಿಕಾಂಡ 9:5, 6.
ಮಾನವನ ಜೀವಕ್ಕೆ ಗೌರವವನ್ನು ತೋರಿಸಬೇಕು ಅನ್ನುವಾಗ, ಅದರಲ್ಲಿ ನಮ್ಮ ಕಾರ್ ಹಾಗೂ ಮನೆಯನ್ನು ಸಹ ಸುರಕ್ಷಿತವಾಗಿಡಬೇಕಾಗಿರುತ್ತದೆ. ಧರ್ಮೋಪದೇಶಕಾಂಡ 22:8) ಈ ಸುರಕ್ಷಿತ ನಿಯಮವನ್ನು ಪಾಲಿಸದ ಕಾರಣ ಯಾರಾದರೂ ಕೆಳಗೆ ಬಿದ್ದಲ್ಲಿ, ದೇವರು ಆ ಮನೆಯ ಒಡೆಯನನ್ನು ಹೊಣೆಗಾರನನ್ನಾಗಿಸುತ್ತಿದ್ದನು. ಈ ನಿಯಮದಲ್ಲಿ ಪ್ರೀತಿಯು ಒಳಗೂಡಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಇದು ಕೆಲಸದ ಸ್ಥಳದಲ್ಲಿ ಇಲ್ಲವೆ ಮನೋರಂಜನೆಯ ಸಮಯದಲ್ಲಿ ಅಪಘಾತಗಳನ್ನು ಕಡಿಮೆಗೊಳಿಸುತ್ತಿತ್ತು.
ಪುರಾತನ ಇಸ್ರಾಯೇಲಿನಲ್ಲಿ, ಸುರಕ್ಷಿತತ್ವ ಜೀವಿತದಲ್ಲಿ ಅತ್ಯಂತ ಮುಖ್ಯವಾಗಿತ್ತು. ಉದಾಹರಣೆಗೆ, ಒಂದು ಮನೆಯನ್ನು ಕಟ್ಟುವಾಗ ಮಾಳಿಗೆಯ ಮೇಲೆ ಸುತ್ತಲೂ ಒಂದು ಸಣ್ಣ ಗೋಡೆಯನ್ನು ಕಟ್ಟಬೇಕು ಎಂಬುದು ದೇವರ ನಿಯಮವಾಗಿತ್ತು. ಏಕೆಂದರೆ, ಇಲ್ಲಿಯೇ ಕುಟುಂಬದ ಹೆಚ್ಚಿನ ಕೆಲಸವು ನಡೆಯುತ್ತಿತ್ತು. ಆದುದರಿಂದ, “ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು” ಎಂಬ ನಿಯಮವನ್ನು ಕೊಡಲಾಗಿತ್ತು. (ಪ್ರಾಣಾಂತಕ ದುಶ್ಚಟಗಳೊಂದಿಗೆ ಹೋರಾಟ
ಡಬ್ಲ್ಯೂಏಚ್‌ಓ ಪ್ರಕಾರ, ಸುಮಾರು 100 ಕೋಟಿ ಧೂಮಪಾನಿಗಳು ಲೋಕದಲ್ಲಿದ್ದಾರೆ. ಒಂದು ವರ್ಷದಲ್ಲಿ ಸುಮಾರು 40 ಲಕ್ಷ ಜನರು ಹೊಗೆಸೊಪ್ಪಿನ ಸೇವನೆಯಿಂದ ಅಸುನೀಗುತ್ತಾರೆ. ಮತ್ತು ಮುಂದಿನ 20ರಿಂದ 30 ವರ್ಷಗಳೊಳಗೆ ಈ ಸಂಖ್ಯೆ ಒಂದು ಕೋಟಿಯಷ್ಟಾಗುವುದು ಎಂದು ಅಂದಾಜುಮಾಡಲಾಗಿದೆ. ಕೋಟ್ಯಂತರ ಧೂಮಪಾನಿಗಳು ಹಾಗೂ “ಮನೋರಂಜನೆಗಾಗಿ” ಮಾದಕ ವಸ್ತುಗಳನ್ನು ತೆಗೆದುಕೊಳ್ಳುವವರು, ಈ ದುಶ್ಚಟಗಳಿಂದಾಗಿ ಆರೋಗ್ಯವನ್ನು ಮಾತ್ರವಲ್ಲ ತಮ್ಮ ಜೀವನದ ಗುಣಮಟ್ಟವನ್ನು ಸಹ ನಾಶಪಡಿಸಿಕೊಳ್ಳುವರು.
ಹೊಗೆಸೊಪ್ಪಿನ ಸೇವನೆ ಹಾಗೂ ಮಾದಕ ವಸ್ತುಗಳ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಬೈಬಲು ಹೇಳುವುದಿಲ್ಲವಾದರೂ, ಅದರ ತತ್ತ್ವಗಳನ್ನು ಅನುಸರಿಸುವುದರಿಂದ ನಾವು ಆ ಚಟಗಳಿಂದ ನಮ್ಮನ್ನು ಕಾಪಾಡಿಕೊಳ್ಳಸಾಧ್ಯವಿದೆ. ಉದಾಹರಣೆಗೆ, ‘ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಳ್ಳೋಣ’ ಎಂಬ ಬುದ್ಧಿವಾದವನ್ನು 2ನೇ ಕೊರಿಂಥ 7:1 ನೀಡುತ್ತದೆ. ಹೊಗೆಸೊಪ್ಪು ಹಾಗೂ ಮಾದಕ ವಸ್ತುಗಳು ಹಾನಿಕರ ರಸಾಯನಗಳಿಂದ, ನಮ್ಮ ಶರೀರವನ್ನು ಮಲಿನಗೊಳಿಸುತ್ತವೆ ಇಲ್ಲವೆ ಕಲ್ಮಶಗೊಳಿಸುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಮಾತ್ರವಲ್ಲ, ನಮ್ಮ ಶರೀರಗಳನ್ನು “ಪವಿತ್ರ”ವಾಗಿ (NW) ಇಟ್ಟುಕೊಳ್ಳುವಂತೆ, ಅಂದರೆ ನಿರ್ಮಲವಾಗಿಯೂ ಸ್ವಚ್ಛವಾಗಿಯೂ ಇಟ್ಟುಕೊಳ್ಳುವಂತೆ ದೇವರು ಬಯಸುತ್ತಾನೆ. (ರೋಮಾಪುರ 12:1) ಈ ತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರಿಂದ ಒಬ್ಬನು ತನ್ನ ಜೀವಿತದಲ್ಲಿ ಆದಷ್ಟು ಅಪಾಯವನ್ನು ಕಡಿಮೆಗೊಳಿಸಿಕೊಳ್ಳಬಹುದು ಎಂಬುದನ್ನು ನೀವು ಒಪ್ಪುವುದಿಲ್ಲವೋ?
ಅಪಾಯಕಾರಿ ಅಭ್ಯಾಸಗಳನ್ನು ಜಯಿಸುವುದು
ಅನೇಕ ಜನರು ತಿನ್ನುವುದು ಹಾಗೂ ಕುಡಿಯುವುದರ ವಿಷಯದಲ್ಲಿ ಅತಿರೇಕವುಳ್ಳವರಾಗಿದ್ದಾರೆ. ಮಿತಿಮೀರಿ ತಿನ್ನುವುದು ಸಕ್ಕರೆ ಕಾಯಿಲೆ, ಕ್ಯಾನ್ಸರ್ ಹಾಗೂ ಹೃದ್ರೋಗಗಳಂತಹ ಕಾಯಿಲೆಗಳನ್ನು ಉಂಟುಮಾಡುತ್ತದೆ. ಮಿತಿಮಾರಿ ಆ್ಯಲ್ಕೋಹಾಲ್ ಸೇವನೆ ಮಾಡುವುದರಿಂದ, ಕುಡಿತದ ಚಟ ಅಂಟಿಕೊಳ್ಳುತ್ತದೆ, ಯಕೃತ್ತಿನ ರೋಗ ಉಂಟಾಗುತ್ತದೆ ಮಾತ್ರವಲ್ಲ ಕುಟುಂಬಗಳು ಮುರಿದುಹೋಗುತ್ತವೆ ಹಾಗೂ ಆ್ಯಕ್ಸಿಡೆಂಟುಗಳು ಸಂಭವಿಸುತ್ತವೆ. ಇನ್ನೊಂದು ವಿಪರೀತಕ್ಕೆ ಹೋಗುವಾಗಲೂ ಅಪಾಯವು ತಪ್ಪಿದ್ದಲ್ಲ. ಅಂದರೆ, ಡೈಯಟಿಂಗ್ ಮಾಡುವ ಗೀಳು ಸಹ ಹಾನಿಕಾರಿಯಾಗಿರಸಾಧ್ಯವಿದೆ. ಮತ್ತು ಇದು ಜೀವಕ್ಕೆ ಬೆದರಿಕೆಯನ್ನೊಡ್ಡುವಂತಹ ಆ್ಯನೊರೆಕ್ಸಿಯ ನರ್ವೋಸಾ ಎಂಬ ಕಾಯಿಲೆಯನ್ನು ತರಬಲ್ಲದು.
ಬೈಬಲು ಒಂದು ವೈದ್ಯಕೀಯ ಪುಸ್ತಕವಲ್ಲದಿದ್ದರೂ, ತಿನ್ನುವುದು ಹಾಗೂ ಕುಡಿಯುವುದರ ವಿಷಯದಲ್ಲಿ ಹಿತಮಿತವಾಗಿರಬೇಕೆಂಬ ಸಲಹೆಯನ್ನು ನೇರವಾಗಿ ಕೊಡುತ್ತದೆ. “ಕಂದಾ, ಕೇಳು, ಜ್ಞಾನವಂತನಾಗಿರು, ನಿನ್ನ ಮನಸ್ಸನ್ನು [ಜ್ಞಾನ] ಮಾರ್ಗದಲ್ಲಿ ಮುಂದೆ ನಡೆಯಿಸು. ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು. ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು; ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವದು.” (ಜ್ಞಾನೋಕ್ತಿ 23:19-21) ಆದರೂ, ತಿನ್ನುವುದು ಹಾಗೂ ಕುಡಿಯುವುದರ ವಿಷಯವು ಮನಸ್ಸಿಗೆ ಅಪ್ಯಾಯಮಾನವಾಗಿರಬೇಕು ಎಂದು ಬೈಬಲು ಹೇಳುತ್ತದೆ. “ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.”—ಪ್ರಸಂಗಿ 3:13.
ಶಾರೀರಿಕ ವ್ಯಾಯಾಮದ ಬಗ್ಗೆ ಸಹ ಬೈಬಲು ಸಮತೋಲನವುಳ್ಳ ಮನೋಭಾವವನ್ನು ಹೊಂದಿರುವಂತೆ ಉತ್ತೇಜನವನ್ನು ನೀಡುತ್ತದೆ. “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು” ಎಂದು ಅದು ದೃಢೀಕರಿಸುತ್ತದೆ. (1 ತಿಮೊಥೆಯ 4:8) ‘ದೇವಭಕ್ತಿ ಈಗಲೂ ಹೇಗೆ ಪ್ರಯೋಜನಕರವಾಗಿದೆ’ ಎಂದು ನೀವು ಪ್ರಶ್ನಿಸಬಹುದು. ಹೌದು, ಅನೇಕ ವಿಧಗಳಲ್ಲಿ ಅದು ಪ್ರಯೋಜನವನ್ನು ತರುವಂತಹದ್ದಾಗಿದೆ. ಇದು ಒಬ್ಬರ ಜೀವಿತದಲ್ಲಿ ಮುಖ್ಯವಾದ ಆತ್ಮಿಕ ಅಂಶವನ್ನು ಕೂಡಿಸುವುದು ಮಾತ್ರವಲ್ಲ, ದೇವಭಕ್ತಿಯು ಪ್ರೀತಿ, ಸಂತೋಷ, ಸಮಾಧಾನ, ಶಮೆದಮೆಯಂತಹ ಪ್ರಯೋಜನಕಾರಿ ಗುಣಗಳನ್ನು ಪೋಷಿಸುತ್ತದೆ. ಇವೆಲ್ಲವೂ ಸಕಾರಾತ್ಮಕ ದೃಷ್ಟಿಕೋನವನ್ನು ಹಾಗೂ ಒಳ್ಳೆಯ ಆರೋಗ್ಯವನ್ನು ಹೊಂದಿರಲು ಸಹಾಯಮಾಡುತ್ತವೆ.—ಗಲಾತ್ಯ 5:22, 23.
ಅನೈತಿಕತೆಯ ಕಹಿಸತ್ಯ
ಇಂದು, ಕೋಟ್ಯಂತರ ಜನರು ಎಲ್ಲ ನೈತಿಕ ಎಲ್ಲೆಗಳನ್ನು ಕಿತ್ತೊಗೆದಿದ್ದಾರೆ. ಏಡ್ಸ್ ರೋಗವು ಅನೈತಿಕತೆಯ ಒಂದು ಪರಿಣಾಮವಾಗಿದೆ. ಡಬ್ಲ್ಯೂಏಚ್‌ಓ ಪ್ರಕಾರ, 1.6 ಕೋಟಿಗಿಂತಲೂ ಹೆಚ್ಚಿನ ಜನರು ಏಡ್ಸ್ ರೋಗದಿಂದ ಮೃತರಾಗಿದ್ದಾರೆ. ಮತ್ತು ಈಗ ಸುಮಾರು 3.4 ಕೋಟಿ ಜನರು ಏಡ್ಸ್ ರೋಗವನ್ನು ಉಂಟುಮಾಡುವ ವೈರಸ್ ಆದ ಏಚ್‌ಐವಿಯಿಂದ ಸೋಂಕಿತರಾಗಿದ್ದಾರೆ. ಅನೇಕ ಜನರು ಸ್ವಚ್ಛಂದ
ರೀತಿಯ ಲೈಂಗಿಕ ಸಂಬಂಧ, ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ಜನರಿಂದ ಉಪಯೋಗಿಸಲ್ಪಟ್ಟ ಕಲುಷಿತಗೊಂಡ ಸಿರಿಂಜುಗಳು ಅಥವಾ ಕಲುಷಿತಗೊಂಡ ರಕ್ತ ಪೂರಣಗಳಿಂದ ಈ ರೋಗವನ್ನು ಹತ್ತಿಸಿಕೊಂಡಿದ್ದಾರೆ.ಅನೈತಿಕತೆಯ ಇತರ ಪರಿಣಾಮಗಳು, ಹರ್ಪಿಸ್, ಗೋನೋರಿಯ, ಹೆಪಟೈಟಿಸ್ ಬಿ ಮತ್ತು ಸಿ (ಯಕೃತ್ತಿನ ಉರಿಯೂತ) ಹಾಗೂ ಸಿಫಿಲಿಸ್ ಆಗಿದೆ. ಬೈಬಲ್ ಸಮಯಗಳಲ್ಲಿ ಇಂತಹ ವೈದ್ಯಕೀಯ ಪದಗಳು ಉಪಯೋಗಿಸಲ್ಪಡದಿದ್ದರೂ, ರತಿ ರವಾನಿತ ರೋಗಗಳಿಂದ ಬಾಧಿಸಲ್ಪಡುವ ಅಂಗಾಂಗಗಳು ಆ ಸಮಯದಲ್ಲಿ ಉಲ್ಲೇಖಿಸಲ್ಪಟ್ಟಿದ್ದವು. ಉದಾಹರಣೆಗೆ, ಜಾರತ್ವದ ಭೀಕರ ಪರಿಣಾಮವನ್ನು ಜ್ಞಾನೋಕ್ತಿ 7:23 ಹೀಗೆ ವರ್ಣಿಸುತ್ತದೆ: ‘ಬಾಣವು . . . ಕಾಳಿಜವನ್ನು [“ಯಕೃತ್ತು,” NW] ತಿವಿಯುವ’ ಹಾಗಿದೆ. ಸಿಫಿಲಿಸ್, ಹೆಪಟೈಟಿಸ್‌ನಂತೆ ಸಾಮಾನ್ಯವಾಗಿ ಯಕೃತ್ತಿನ ಮೇಲೆ ದಾಳಿಮಾಡುತ್ತದೆ. ಹೌದು, ಕ್ರೈಸ್ತರು “ರಕ್ತದಿಂದ ಹಾಗೂ ಜಾರತ್ವದಿಂದ ದೂರವಿರಬೇಕು” (NW) ಎಂಬ ಬೈಬಲಿನ ಸಲಹೆಯು ಎಷ್ಟು ಸಮಯೋಚಿತವೂ ಪ್ರೀತಿಪರವೂ ಆದದ್ದಾಗಿದೆ!—ಅ. ಕೃತ್ಯಗಳು 15:28, 29.
ಹಣವ್ಯಾಮೋಹವೆಂಬ ಪಿಶಾಚಿ
ಚಿಟಿಕೆಹೊಡೆಯುವುದರೊಳಗೆ ಐಶ್ವರ್ಯವಂತರಾಗಬೇಕು ಎಂಬ ಅತ್ಯಾಸೆಯಲ್ಲಿ, ಅನೇಕರು ತಮ್ಮ ಹಣದೊಂದಿಗೆ ಬಹಳ ಅಪಾಯದ ಕೆಲಸಕ್ಕೆ ಕೈಹಾಕುತ್ತಾರೆ. ಆದರೆ ದುಃಖಕರವಾದ ವಿಷಯವೇನೆಂದರೆ, ಅಂತಹ ಅಪಾಯಕಾರಿ ಕೆಲಸಕ್ಕೆ ಕೈಹಾಕುವದು ಒಂದೋ ಹಣ ನಷ್ಟಕ್ಕೋ ಇಲ್ಲವೆ ಶಾಶ್ವತ ಅಳಿವಿಗೋ ಕಾರಣವಾಗುತ್ತದೆ. ದೇವರ ಸೇವಕನಿಗೆ ಬೈಬಲು ಹೀಗೆ ಹೇಳುತ್ತದೆ: “ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ ಅವನಿಂದಾಗುವದು.” (ಎಫೆಸ 4:28) ಕಷ್ಟಪಟ್ಟು ದುಡಿಯುವವರೆಲ್ಲರೂ ಯಾವಾಗಲೂ ಐಶ್ವರ್ಯವಂತರಾಗದಿರಬಹುದು ನಿಜ. ಆದರೂ, ಅವರಿಗೆ ಮನಶ್ಶಾಂತಿ, ಆತ್ಮಗೌರವ ಇರುತ್ತದೆ ಮಾತ್ರವಲ್ಲ, ಯೋಗ್ಯವಾದ ಕೆಲಸಕ್ಕೆ ದಾನನೀಡಲು ಅವರ ಬಳಿ ಹಣವಿರಬಹುದು.
ಬೈಬಲು ಎಚ್ಚರಿಕೆಯನ್ನು ನೀಡುವುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ 1 ತಿಮೊಥೆಯ 6:9, 10) “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವ” ಅನೇಕರು ಐಶ್ವರ್ಯವಂತರಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾವ ಬೆಲೆಯನ್ನು ತೆತ್ತು ಐಶ್ವರ್ಯವಂತರಾಗುತ್ತಾರೆ? ಅವರ ಆರೋಗ್ಯ, ಕುಟುಂಬ, ಆತ್ಮಿಕತೆ ಹಾಗೂ ನಿದ್ರೆ ಸಹ ಇದರಿಂದ ಕೆಟ್ಟುಹೋಗುವುದಿಲ್ಲವೋ?—ಪ್ರಸಂಗಿ 5:12.
ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” (“ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ” ಎಂಬುದನ್ನು ಬುದ್ಧಿವಂತ ವ್ಯಕ್ತಿ ಅರಿತುಕೊಳ್ಳುತ್ತಾನೆ. (ಲೂಕ 12:15) ಕೆಲವೊಂದು ಸಮಾಜಗಳಲ್ಲಿ ಹಣ ಮತ್ತು ಆಸ್ತಿ ಇರಲೇಬೇಕಾಗಿರುತ್ತದೆ. “ಧನವು . . . ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ” ಎಂದು ಬೈಬಲು ಹೇಳುತ್ತದೆ. (ಪ್ರಸಂಗಿ 7:12) ಹಣಕ್ಕೆ ತದ್ವಿರುದ್ಧವಾಗಿ, ಸರಿಯಾದ ಜ್ಞಾನ ಹಾಗೂ ವಿವೇಕ ಎಲ್ಲ ಸಂದರ್ಭಗಳಲ್ಲೂ ನಮಗೆ ಸಹಾಯಮಾಡುವುವು. ಅದು ವಿಶೇಷವಾಗಿ ನಮ್ಮ ಜೀವಿತವನ್ನು ಬಾಧಿಸುತ್ತಿರುವ ವಿಷಯಗಳಲ್ಲಿ ಸಹಾಯಮಾಡುವುದು.—ಜ್ಞಾನೋಕ್ತಿ 4:5-9.
ವಿವೇಕವೊಂದೇ ನಮ್ಮನ್ನು ಕಾಪಾಡುವಾಗ
ನಿಜವಾದ ವಿವೇಕವು ಬೇಗನೆ ಅಭೂತಪೂರ್ವವಾದ ವಿಧದಲ್ಲಿ, ‘ತನ್ನನ್ನು ಹೊಂದಿದವನಿಗೆ ಜೀವದಾಯಕವಾಗಿರುವುದು.’ ಅಂದರೆ, ದೇವರು ದುಷ್ಟರನ್ನು ನಾಶಗೊಳಿಸುವಂತಹ, ಬಹಳ ವೇಗವಾಗಿ ಸಮೀಪಿಸುತ್ತಿರುವ ‘ಮಹಾ ಸಂಕಟದ’ ಸಮಯದಲ್ಲಿ ಕಾಪಾಡುವುದು. (ಮತ್ತಾಯ 24:21) ಬೈಬಲಿಗನುಸಾರ ಆ ಸಮಯದಲ್ಲಿ ಜನರು ತಮ್ಮ ಹಣಕಾಸನ್ನು ‘ಅಶುದ್ಧಪದಾರ್ಥದಂತೆ’ ಬೀದಿಯಲ್ಲಿ ಬಿಸಾಡುವರು. ಏಕೆಂದರೆ, “ಯೆಹೋವನು ತನ್ನ ರೋಷವನ್ನು ತೀರಿಸುವ ದಿನದಲ್ಲಿ” ತಮ್ಮ ಬೆಳ್ಳಿಬಂಗಾರಗಳು ಜೀವವನ್ನು ಖರೀದಿಸಸಾಧ್ಯವಿಲ್ಲ ಎಂಬುದನ್ನು ಅವರು ಕಹಿ ಅನುಭವದಿಂದ ತಿಳಿದುಕೊಂಡಿರುವರು. (ಯೆಹೆಜ್ಕೇಲ 7:19) ಮತ್ತೊಂದು ಕಡೆಯಲ್ಲಿ, “ಮಹಾ ಸಮೂಹವು” ಬುದ್ಧಿಯನ್ನು ಉಪಯೋಗಿಸುತ್ತಾ, ಜೀವಿತದಲ್ಲಿ ಆತ್ಮಿಕ ವಿಷಯಗಳನ್ನು ಪ್ರಥಮವಾಗಿಡುವ ಮೂಲಕ ‘ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳುವವರಿಗೆ’ ಖಚಿತ ಬಂಡವಾಳ ಹೂಡಿದ ಕಾರಣ ಪ್ರಯೋಜನವಾಗುವುದು. ಮಾತ್ರವಲ್ಲ, ಪ್ರಮೋದವನದ ಭೂಮಿಯಲ್ಲಿ ಅನಂತಕಾಲದ ಜೀವನವು ಸಿಗುವುದು.—ಪ್ರಕಟನೆ 7:9, 14; 21:3, 4; ಮತ್ತಾಯ 6:19, 20.
ಇಂತಹ ಸುರಕ್ಷಿತ ಭವಿಷ್ಯತ್ತನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ? ಯೇಸು ಉತ್ತರಿಸುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನ ಹಾಗೂ ನೀನು ಕಳುಹಿಸಿಕೊಟ್ಟಿರುವ ಯೇಸು ಕ್ರಿಸ್ತನ ಕುರಿತು ಜ್ಞಾನ ಪಡೆದುಕೊಳ್ಳುವುದೇ ನಿತ್ಯಜೀವವು.” (ಯೋಹಾನ 17:3, NW) ಲಕ್ಷಾಂತರ ಜನರು ಈ ಜ್ಞಾನವನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಕೊಂಡಿದ್ದಾರೆ. ಇಂತಹವರಿಗೆ ಭವಿಷ್ಯತ್ತಿಗಾಗಿ ಭವ್ಯವಾದ ನಿರೀಕ್ಷೆಯಿದೆ ಮಾತ್ರವಲ್ಲ, ಈಗ ಒಂದಷ್ಟರ ಮಟ್ಟಿಗೆ ಶಾಂತಿ, ಸುರಕ್ಷತೆಯನ್ನು ಅವರು ಅನುಭವಿಸುತ್ತಿದ್ದಾರೆ. ಇದು ಕೀರ್ತನೆಗಾರನು ವ್ಯಕ್ತಪಡಿಸಿದಂತೆಯೇ ಇದೆ. ಅವನು ಹೇಳಿದ್ದು: “ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ.”—ಕೀರ್ತನೆ 4:8.
ನಿಮ್ಮ ಆರೋಗ್ಯಕ್ಕೆ ಹಾಗೂ ಜೀವನಕ್ಕೆ ಬಂದೆರಗುವ ಅಪಾಯಗಳನ್ನು ಬೈಬಲು ಕಡಿಮೆಗೊಳಿಸುವಷ್ಟು, ಬೇರೆ ಯಾವುದಾದರೂ ಮಾಹಿತಿಯು ಕಡಿಮೆಗೊಳಿಸುತ್ತದೆ ಎಂದು ನೀವು ನೆನಸಸಾಧ್ಯವೋ? ಬೈಬಲಿಗಿರುವ ಅಧಿಕಾರವಾಣಿಯು ಇನ್ಯಾವ ಗ್ರಂಥಕ್ಕೂ ಇಲ್ಲ. ಅಪಾಯವು ಕಟ್ಟಿಟ್ಟ ಬುತ್ತಿಯಾಗಿರುವ ಈ ಲೋಕದಲ್ಲಿ ನಿಜ ಸುರಕ್ಷಣೆಯನ್ನು ಕಂಡುಕೊಳ್ಳಲು ಇನ್ಯಾವ ಗ್ರಂಥವೂ ನಿಮಗೆ ಸಹಾಯಮಾಡಸಾಧ್ಯವಿಲ್ಲ ಎಂದು ಘಂಟಾಘೋಷವಾಗಿ ಹೇಳಸಾಧ್ಯವಿದೆ. ಇದರ ಕುರಿತಾಗಿ ನೀವೇಕೆ ಇನ್ನೂ ಹೆಚ್ಚಿನ ಪರೀಕ್ಷೆಯನ್ನು ಮಾಡಿನೋಡಬಾರದು?
[ಪುಟ 6ರಲ್ಲಿರುವ ಚೌಕ/ಚಿತ್ರ]
ಬೈಬಲಿನಿಂದಾಗಿ ಉತ್ತಮ ಆರೋಗ್ಯ ಹಾಗೂ ಸುರಕ್ಷೆ
ಜೀವನದ ಜಂಜಾಟಗಳಿಂದ ಬೇಸತ್ತ ಜೇನ್ * ಎಂಬ ಯುವತಿಗೆ ಮಾರಿವಾನ, ಹೊಗೆಸೊಪ್ಪು, ಕೊಕೇನ್, ಆ್ಯಂಪೆಟಮಿನ್, ಎಲ್‌ಎಸ್‌ಡಿಯಂತಹ ಮಾದಕ ಪದಾರ್ಥಗಳನ್ನು ತೆಗೆದುಕೊಳ್ಳುವ ಅಭ್ಯಾಸವಿತ್ತು. ಮಾತ್ರವಲ್ಲ ಅವಳು ವಿಪರೀತವಾಗಿ ಕುಡಿಯುತ್ತಿದ್ದಳು. ಈ ಯುವತಿಯ ಪತಿಯು ಸಹ ಅದೇ ಸ್ಥಿತಿಯಲ್ಲಿದ್ದನು. ಆದುದರಿಂದ ಅವರ ಭವಿಷ್ಯತ್ತು ಕತ್ತಲೆಯಿಂದ ತುಂಬಿತ್ತು. ಒಮ್ಮೆ ಜೇನ್‌ಗೆ ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕವಾಯಿತು ಮತ್ತು ಅವಳು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದಳು. ಮಾತ್ರವಲ್ಲ, ಕಾವಲಿನಬುರುಜು ಹಾಗೂ ಅದರ ಜೊತೆ ಪತ್ರಿಕೆಯಾದ ಎಚ್ಚರ! ಪತ್ರಿಕೆಯನ್ನು ಓದಿ, ತನ್ನ ಗಂಡನಿಗೆ ಹೇಳುತ್ತಿದ್ದಳು. ಇಬ್ಬರೂ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಮಾಡಲು ಪ್ರಾರಂಭಿಸಿದರು. ಅವರಿಬ್ಬರು ಯೆಹೋವನ ಉಚ್ಚಮಟ್ಟಗಳಿಗಾಗಿ ಗಣ್ಯತೆಯನ್ನು ಬೆಳೆಸಿಕೊಂಡಂತೆ, ಎಲ್ಲ ರೀತಿಯ ಮಾದಕ ಪದಾರ್ಥಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಟ್ಟರು. ಇದರಿಂದ ಏನಾಯಿತು? ಕೆಲವು ವರ್ಷಗಳ ನಂತರ ಜೇನ್ ಬರೆದುದು: “ನಮ್ಮ ಈ ಹೊಸ ಜೀವನವು ಆನಂದದ ಹೊಳೆಯನ್ನು ಹರಿಸಿದೆ. ಸ್ವಚ್ಛಗೊಳಿಸುವ ಶಕ್ತಿ ಯೆಹೋವನ ವಾಕ್ಯಕ್ಕಿದೆ. ಮಾತ್ರವಲ್ಲ, ಈಗ ನಮಗೆ ಭಾರವನ್ನು ಕೆಳಗಿಳಿಸಿದಂತಿದೆ ಹಾಗೂ ಒಂದು ಆರೋಗ್ಯಕರವಾದ ಜೀವನವನ್ನು ನಡೆಸಶಕ್ತರಾಗಿದ್ದೇವೆ. ಇದಕ್ಕಾಗಿ ಯೆಹೋವನಿಗೆ ನಾನು ಆಭಾರಿಯಾಗಿದ್ದೇನೆ.”
ಒಬ್ಬ ಒಳ್ಳೆಯ ಪ್ರಾಮಾಣಿಕ ಕೆಲಸಗಾರನಾಗಿರುವುದರ ಮೌಲ್ಯವು ಕುರ್ಟ್ ಎಂಬ ವ್ಯಕ್ತಿಯ ಉದಾಹರಣೆಯಿಂದ ಗೊತ್ತಾಗುತ್ತದೆ. ಇವನ ಕೆಲಸವು ಕಂಪ್ಯೂಟರ್ ಸಿಸ್ಟಮ್‌ಗಳನ್ನು ನೋಡಿಕೊಳ್ಳುವುದಾಗಿತ್ತು. ಹೊಸ ಕಂಪ್ಯೂಟರ್ ಸಾಧನವು ಬೇಕಾಗಿತ್ತಾದುದರಿಂದ, ಅದನ್ನು ಲಾಭಕರವಾದ ಬೆಲೆಗೆ ಖರೀದಿಸುವ ಕೆಲಸವನ್ನು ಮಾಲೀಕನು ಕುರ್ಟ್‌ಗೆ ವಹಿಸಿದನು. ಕುರ್ಟ್ ತಕ್ಕ ಸಪ್ಲೈರ್ ಅನ್ನು ಕಂಡುಹಿಡಿದನು. ಹಾಗೂ ನಿರ್ದಿಷ್ಟ ಬೆಲೆಯನ್ನು ಗೊತ್ತುಪಡಿಸಲಾಯಿತು. ಆದರೆ ಆ ಸಪ್ಲೈರ್‌ನ ಕ್ಲರ್ಕ್ ಒಂದು ತಪ್ಪುಮಾಡಿಬಿಟ್ಟ. ಅದೇನೆಂದರೆ, ಅವನು ಬಿಲ್‌ನಲ್ಲಿ 40,000 ಡಾಲರ್‌ಗಳಿಗೆ ಬದಲಾಗಿ 20,000 ಡಾಲರ್‌ಗಳು ಎಂದು ಬರೆದುಬಿಟ್ಟ. ಈ ತಪ್ಪನ್ನು ಗುರುತಿಸಿ, ಅದರ ಬಗ್ಗೆ ತಿಳಿಸಲು ಕುರ್ಟ್ ಆ ಕಂಪೆನಿಗೆ ಫೋನ್ ಮಾಡಿದ. ಆಗ ಆ ಕಂಪೆನಿಯ ಮ್ಯಾನೇಜರ್ ತನ್ನ 25 ವರ್ಷಗಳ ಸರ್ವಿಸ್‌ನಲ್ಲಿಯೇ ಇದೇ ಪ್ರಥಮ ಬಾರಿ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ನೋಡಿದ್ದು ಎಂದು ಹೇಳಿದ. ಅದಕ್ಕೆ ಕುರ್ಟ್ ತನ್ನ ಮನಸ್ಸಾಕ್ಷಿಯು ಬೈಬಲಿನಿಂದ ರೂಪುಗೊಂಡಿದೆ ಎಂದು ವಿವರಿಸಿದನು. ಇದರಿಂದಾಗಿ, ಆ ಮ್ಯಾನೇಜರ್ ವ್ಯಾಪಾರದ ಕ್ಷೇತ್ರದಲ್ಲಿ ಪ್ರಾಮಾಣಿಕತೆಯನ್ನು ತೋರಿಸುವುದರ ಕುರಿತಾದ ಎಚ್ಚರ! ಪತ್ರಿಕೆಯ 300 ಪ್ರತಿಗಳನ್ನು ಕೊಡುವಂತೆ ಕೇಳಿಕೊಂಡ. ಹೀಗೆ ಅವನು ತನ್ನ ಸಹೋದ್ಯೋಗಿಗಳಿಗೆ ಅವುಗಳನ್ನು ವಿತರಿಸಿದ. ಆದರೆ ಕುರ್ಟ್‌ನ ವಿಷಯದಲ್ಲೇನು? ಅವನ ಪ್ರಾಮಾಣಿಕತೆಯಿಂದ ಅವನಿಗೆ ಭಡ್ತಿ ಸಿಕ್ಕಿತು.
[ಪಾದಟಿಪ್ಪಣಿಗಳು]
^ ಪ್ಯಾರ. 30 ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 7ರಲ್ಲಿರುವ ಚಿತ್ರ]
‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸುವವನಾಗಿದ್ದೇನೆ.’—ಯೆಶಾಯ 48:17