ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಸತ್ಯವನ್ನು ನಿಮ್ಮದಾಗಿ ಮಾಡಿಕೊಂಡಿದ್ದೀರೋ?

ನೀವು ಸತ್ಯವನ್ನು ನಿಮ್ಮದಾಗಿ ಮಾಡಿಕೊಂಡಿದ್ದೀರೋ?

ನೀವು ಸತ್ಯವನ್ನು ನಿಮ್ಮದಾಗಿ ಮಾಡಿಕೊಂಡಿದ್ದೀರೋ?

“ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.”​—ರೋಮಾಪುರ 12:2.

1, 2. ಇಂದು ಸತ್ಯ ಕ್ರೈಸ್ತರೋಪಾದಿ ಮುಂದುವರಿಯುವುದು ಅಷ್ಟೇನೂ ಸುಲಭವಾದದ್ದಲ್ಲ ಏಕೆ?

“ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಕಾಲಗಳಲ್ಲಿ,” ಅಂದರೆ ಈ ಕಡೇ ದಿವಸಗಳಲ್ಲಿ ಸತ್ಯ ಕ್ರೈಸ್ತರೋಪಾದಿ ಮುಂದುವರಿಯುವುದು ಅಷ್ಟೇನೂ ಸುಲಭವಲ್ಲ. (2 ತಿಮೊಥೆಯ 3:​1, NW) ವಾಸ್ತವದಲ್ಲಿ, ಕ್ರಿಸ್ತನ ಮಾದರಿಯನ್ನು ಅನುಸರಿಸಲಿಕ್ಕಾಗಿ ಒಬ್ಬನು ಲೋಕವನ್ನು ಜಯಿಸಬೇಕಾಗಿದೆ. (1 ಯೋಹಾನ 5:4) ಕ್ರೈಸ್ತ ಜೀವನ ರೀತಿಯ ಕುರಿತು ಯೇಸು ಏನು ಹೇಳಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” ಅಷ್ಟುಮಾತ್ರವಲ್ಲ, ಅವನು ಹೀಗೂ ಹೇಳಿದನು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ.”​—ಮತ್ತಾಯ 7:​13, 14; ಲೂಕ 9:23.

2 ಒಬ್ಬ ಕ್ರೈಸ್ತನು ನಿತ್ಯಜೀವಕ್ಕೆ ಹೋಗುವ ದಾರಿಯನ್ನು ಕಂಡುಕೊಂಡ ಬಳಿಕ, ಅದೇ ದಾರಿಯಲ್ಲಿ ಕೊನೇ ತನಕ ಮುಂದುವರಿಯುವುದೇ ಮುಂದಿನ ಪಂಥಾಹ್ವಾನವಾಗಿದೆ. ಏಕೆ? ಏಕೆಂದರೆ, ನಮ್ಮ ಸಮರ್ಪಣೆ ಮತ್ತು ದೀಕ್ಷಾಸ್ನಾನವು ಸೈತಾನನ ಕುಟಿಲ ಅಥವಾ ನವಿರಾದ ತಂತ್ರೋಪಾಯಗಳಿಗೆ ನಮ್ಮನ್ನು ಗುರಿಹಲಗೆಯಾಗಿ ಮಾಡುತ್ತದೆ. (ಎಫೆಸ 6:11) ಸೈತಾನನು ನಮ್ಮ ಬಲಹೀನತೆಗಳನ್ನು ಗಮನಿಸುತ್ತಾನೆ ಮತ್ತು ನಮ್ಮ ಆತ್ಮಿಕತೆಯನ್ನು ಹಾಳುಮಾಡುವ ಪ್ರಯತ್ನದಿಂದ ಅವುಗಳನ್ನು ದುರುಪಯೋಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಯೇಸುವಿನ ಸಮಗ್ರತೆಯನ್ನೇ ಮುರಿಯಲು ಪ್ರಯತ್ನಿಸಿದ ಅವನು, ನಮ್ಮನ್ನು ಸುಮ್ಮನೆ ಬಿಡಲು ಸಾಧ್ಯವೇ?​—ಮತ್ತಾಯ 4:​1-11.

ಸೈತಾನನ ಕುಟಿಲ ತಂತ್ರೋಪಾಯಗಳು

3. ಯಾವ ರೀತಿಯಲ್ಲಿ ಸೈತಾನನು ಹವ್ವಳ ಮನಸ್ಸಿನಲ್ಲಿ ಸಂಶಯವನ್ನು ಬಿತ್ತಿದನು?

3 ಸೈತಾನನು ಉಪಯೋಗಿಸುವ ಒಂದು ತಂತ್ರೋಪಾಯವು, ನಮ್ಮ ಮನಸ್ಸಿನಲ್ಲಿ ಸಂಶಯಗಳನ್ನು ಬಿತ್ತುವದೇ ಆಗಿದೆ. ನಮ್ಮ ಆತ್ಮಿಕ ಸರ್ವಾಯುಧಗಳಲ್ಲಿ ಯಾವುದಾದರೂ ಬಲಹೀನತೆಗಳಿವೆಯೋ ಎಂದು ಅವನು ಹುಡುಕುತ್ತಾನೆ. ಆರಂಭದಲ್ಲಿಯೂ ಅವನು ಹವ್ವಳೊಂದಿಗೆ ಇದೇ ತಂತ್ರೋಪಾಯವನ್ನು ಉಪಯೋಗಿಸಿದನು. ಅವನು ಅವಳನ್ನು ಕೇಳಿದ್ದು: “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? (ಆದಿಕಾಂಡ 3:1) ಬೇರೆ ಮಾತುಗಳಲ್ಲಿ ಹೇಳುವಲ್ಲಿ, ಸೈತಾನನು ಹೀಗೆ ಕೇಳುತ್ತಿದ್ದನು: ‘ದೇವರು ನಿಮ್ಮ ಮೇಲೆ ಇಂತಹ ಒಂದು ನಿಷೇಧವನ್ನು ಹಾಕಸಾಧ್ಯವಿದೆಯೋ? ಇಷ್ಟೊಂದು ಒಳ್ಳೆಯ ವಿಷಯವನ್ನು ಆತನು ನಿಮ್ಮಿಂದ ತಡೆಹಿಡಿದಿದ್ದಾನೋ? ನೀವು ಆ ಮರದ ಹಣ್ಣನ್ನು ತಿಂದ ದಿನವೇ ನಿಮ್ಮ ಕಣ್ಣುಗಳು ತೆರೆಯುವವು ಮತ್ತು ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ ಎಂಬುದು ದೇವರಿಗೆ ಖಂಡಿತವಾಗಿಯೂ ಗೊತ್ತು!’ ಸೈತಾನನು ಸಂಶಯದ ಒಂದು ಬೀಜವನ್ನು ಬಿತ್ತಿ, ಅದು ಮೊಳಕೆಯೊಡೆಯಲು ಕಾಯುತ್ತಿದ್ದನು.​—ಆದಿಕಾಂಡ 3:5.

4. ಇಂದು ಕೆಲವರ ಮೇಲೆ ಯಾವ ಸಂಶಯಗಳು ಪ್ರಭಾವ ಬೀರಬಹುದು?

4 ಇಂದು ಸೈತಾನನು ಈ ತಂತ್ರೋಪಾಯವನ್ನು ಹೇಗೆ ಉಪಯೋಗಿಸುತ್ತಾನೆ? ಒಂದುವೇಳೆ ನಾವು ನಮ್ಮ ಬೈಬಲ್‌ ವಾಚನವನ್ನು, ವೈಯಕ್ತಿಕ ಅಧ್ಯಯನವನ್ನು, ಪ್ರಾರ್ಥನೆಗಳನ್ನು ಹಾಗೂ ಕ್ರೈಸ್ತ ಶುಶ್ರೂಷೆ ಮತ್ತು ಕೂಟಗಳನ್ನು ಅಸಡ್ಡೆಮಾಡುವಲ್ಲಿ, ಇತರರು ಬಿತ್ತುವ ಸಂಶಯಗಳಿಗೆ ಸುಲಭವಾಗಿ ಬಲಿಬೀಳಬಹುದು. ಉದಾಹರಣೆಗೆ: “ಯೇಸು ಕಲಿಸಿದಂತೆ ಇದೇ ಸತ್ಯವಾಗಿದೆ ಎಂಬುದು ನಮಗೆ ಹೇಗೆ ಗೊತ್ತು?” “ನಿಜವಾಗಿಯೂ ಇವು ಕಡೇ ದಿವಸಗಳಾಗಿವೆಯೋ? ಎಷ್ಟೆಂದರೂ, ನಾವೀಗಾಗಲೇ 21ನೆಯ ಶತಮಾನದಲ್ಲಿದ್ದೇವೆ.” “ನಾವು ಅರ್ಮಗೆದೋನ್‌ನ ಹೊಸ್ತಿಲಲ್ಲಿ ನಿಂತಿದ್ದೇವೋ ಅಥವಾ ಅದು ಇನ್ನೂ ತುಂಬ ದೂರವಿದೆಯೋ?” ಇಂತಹ ಸಂಶಯಗಳು ಮನಸ್ಸಿನಲ್ಲಿ ಏಳುವಲ್ಲಿ, ಅವುಗಳನ್ನು ಹೋಗಲಾಡಿಸಲು ನಾವೇನು ಮಾಡಸಾಧ್ಯವಿದೆ?

5, 6. ಸಂಶಯಗಳು ಏಳುವುದಾದರೆ ನಾವು ಏನು ಮಾಡಬೇಕು?

5 ಈ ವಿಷಯದಲ್ಲಿ ಯಾಕೋಬನು ಪ್ರಾಯೋಗಿಕ ಸಲಹೆಯನ್ನು ಕೊಟ್ಟನು. ಅವನು ಬರೆದುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು. ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು. ಆ ಮನುಷ್ಯನು ತಾನು ಕರ್ತನಿಂದ ಏನಾದರೂ ಹೊಂದುವೆನೆಂದು ಭಾವಿಸದೆ ಇರಲಿ; ಅವನು ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ ಆಗಿದ್ದಾನೆ.”​—ಯಾಕೋಬ 1:​5-8.

6 ಹಾಗಾದರೆ ನಾವೇನು ಮಾಡಬೇಕು? ನಂಬಿಕೆ ಹಾಗೂ ತಿಳುವಳಿಕೆಗಾಗಿ ಪ್ರಾರ್ಥನೆಯಲ್ಲಿ ‘ದೇವರನ್ನು ಕೇಳಿಕೊಳ್ಳಬೇಕು’ ಮತ್ತು ಯಾವುದೇ ಪ್ರಶ್ನೆಗಳು ಅಥವಾ ಸಂಶಯಗಳ ಬಗ್ಗೆ ಪರಿಹಾರವನ್ನು ಪಡೆಯಲು ವೈಯಕ್ತಿಕ ಅಧ್ಯಯನದಲ್ಲಿ ನಮ್ಮ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಬೇಕು. ನಮಗೆ ಅಗತ್ಯವಿರುವ ಬೆಂಬಲವನ್ನು ಯೆಹೋವನು ನಮಗೆ ಕೊಡುತ್ತಾನೆ ಎಂಬ ವಿಷಯದಲ್ಲಿ ಎಂದೂ ಸಂಶಯಪಡದೆ, ಹಾಗೂ ನಂಬಿಕೆಯಲ್ಲಿ ದೃಢರಾಗಿರುವವರಿಂದ ಸಹ ನಾವು ಸಹಾಯವನ್ನು ಪಡೆದುಕೊಳ್ಳಬಹುದು. ಯಾಕೋಬನು ಹೇಳಿದ್ದು: “ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು. ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” ಹೌದು, ಅಭ್ಯಾಸ ಮತ್ತು ಪ್ರಾರ್ಥನೆಯ ಮೂಲಕ ನಾವು ದೇವರಿಗೆ ಸಮೀಪವಾಗುವಾಗ, ನಮ್ಮ ಸಂಶಯಗಳು ಸಂಪೂರ್ಣವಾಗಿ ಕಣ್ಮರೆಯಾಗುವವು.​—ಯಾಕೋಬ 4:​7, 8.

7, 8. ಯೇಸುವಿನಿಂದ ಕಲಿಸಲ್ಪಟ್ಟ ಆರಾಧನಾ ವಿಧಾನವನ್ನು ಕಂಡುಹಿಡಿಯಲಿಕ್ಕಾಗಿರುವ ಕೆಲವು ಮೂಲಭೂತ ಮಟ್ಟಗಳು ಯಾವುವು ಮತ್ತು ಈ ಮಟ್ಟಗಳನ್ನು ಯಾರು ತಲಪಿದ್ದಾರೆ?

7 ಉದಾಹರಣೆಗೆ, ಈ ಪ್ರಶ್ನೆಯನ್ನು ಪರಿಗಣಿಸಿರಿ: ಯೇಸು ಕಲಿಸಿದಂತಹದ್ದೇ ಆರಾಧನಾ ವಿಧಾನವನ್ನು ನಾವು ಅನುಸರಿಸುತ್ತಿದ್ದೇವೆ ಎಂಬುದು ನಮಗೆ ಹೇಗೆ ಗೊತ್ತು? ಇದಕ್ಕೆ ಉತ್ತರಿಸಬೇಕಾದರೆ, ನಾವು ಯಾವ ಮಟ್ಟವನ್ನು ಪರಿಗಣಿಸಬೇಕು? ಯಥಾರ್ಥ ಕ್ರೈಸ್ತರ ನಡುವೆ ನಿಜವಾದ ಪ್ರೀತಿಯಿರಬೇಕು ಎಂದು ಬೈಬಲು ಸೂಚಿಸುತ್ತದೆ. (ಯೋಹಾನ 13:​34, 35) ಅವರು ಯೆಹೋವ ಎಂಬ ದೇವರ ಹೆಸರನ್ನು ಪವಿತ್ರೀಕರಿಸಬೇಕು. (ಯೆಶಾಯ 12:​4, 5; ಮತ್ತಾಯ 6:10) ಮತ್ತು ಅವರು ಆ ಹೆಸರನ್ನು ಪ್ರಸಿದ್ಧಪಡಿಸಬೇಕು.​—ವಿಮೋಚನಕಾಂಡ 3:15; ಯೋಹಾನ 17:26.

8 ದೇವರ ವಾಕ್ಯವಾಗಿರುವ ಬೈಬಲಿಗೆ ಗೌರವವನ್ನು ತೋರಿಸುವುದೇ ಸತ್ಯಾರಾಧನೆಯ ಇನ್ನೊಂದು ಗುರುತಾಗಿದೆ. ಇದು ಒಂದು ಅಪೂರ್ವ ಗ್ರಂಥವಾಗಿದ್ದು, ಇದರಲ್ಲಿ ದೇವರು ತನ್ನ ವ್ಯಕ್ತಿತ್ವವನ್ನೂ ತನ್ನ ಉದ್ದೇಶಗಳನ್ನೂ ತಿಳಿಯಪಡಿಸಿದ್ದಾನೆ. (ಯೋಹಾನ 17:17; 2 ತಿಮೊಥೆಯ 3:​16, 17) ಅಷ್ಟುಮಾತ್ರವಲ್ಲ, ಒಂದು ಪ್ರಮೋದವನ ಭೂಮಿಯಲ್ಲಿ ನಿತ್ಯವಾಗಿ ಜೀವಿಸಲು ದೇವರ ರಾಜ್ಯವೇ ಮಾನವರ ಏಕಮಾತ್ರ ನಿರೀಕ್ಷೆಯಾಗಿದೆ ಎಂದು ಸತ್ಯ ಕ್ರೈಸ್ತರು ಸಾರುತ್ತಾರೆ. (ಮಾರ್ಕ 13:10; ಪ್ರಕಟನೆ 21:​1-4) ಈ ಲೋಕದ ಭ್ರಷ್ಟ ರಾಜಕೀಯದಿಂದ ಹಾಗೂ ಅದರ ಕೆಟ್ಟ ಜೀವನ ರೀತಿಯಿಂದ ಅವರು ತಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳುತ್ತಾರೆ. (ಯೋಹಾನ 15:19; ಯಾಕೋಬ 1:27; 4:4) ಇಂದು ಯಾರು ನಿಜವಾಗಿಯೂ ಈ ಮಟ್ಟವನ್ನು ತಲಪಿದ್ದಾರೆ? ಇದಕ್ಕೆ ಒಂದೇ ಒಂದು ಉತ್ತರವಿದೆ ಎಂಬುದನ್ನು ವಾಸ್ತವಾಂಶಗಳು ರುಜುಪಡಿಸುತ್ತವೆ. ಅದೇನೆಂದರೆ, ಅವರು ಯೆಹೋವನ ಸಾಕ್ಷಿಗಳೇ.

ಸಂಶಯಗಳು ಮನಸ್ಸಿನಲ್ಲಿ ಸುಳಿದಾಡುವಲ್ಲಿ ಆಗೇನು?

9, 10. ಮನಸ್ಸಿನಲ್ಲಿ ಸುಳಿದಾಡುವ ಸಂಶಯಗಳನ್ನು ಹೋಗಲಾಡಿಸಲು ನಾವೇನು ಮಾಡಸಾಧ್ಯವಿದೆ?

9 ಒಂದುವೇಳೆ ನಾವು ಸಂಶಯಗಳಿಗೆ ತುತ್ತಾಗಿರುವಲ್ಲಿ ಆಗೇನು? ಆಗ ನಾವೇನು ಮಾಡಬೇಕು? ಜ್ಞಾನಿಯಾದ ಅರಸ ಸೊಲೊಮೋನನು ಇದಕ್ಕೆ ಉತ್ತರವನ್ನು ಕೊಡುತ್ತಾನೆ: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.” (ಓರೆ ಅಕ್ಷರಗಳು ನಮ್ಮವು.)​—ಜ್ಞಾನೋಕ್ತಿ 2:​1-5.

10 ಇದು ವಿಸ್ಮಯಕರ ಸಂಗತಿಯಾಗಿರುವುದಿಲ್ಲವೋ? ದೇವರ ವಿವೇಕಕ್ಕೆ ನಾವು ಶ್ರದ್ಧಾಪೂರ್ವಕವಾದ ಗಮನವನ್ನು ಕೊಡಲು ಮನಃಪೂರ್ವಕವಾಗಿ ಸಿದ್ಧರಿರುವಲ್ಲಿ, “ದೈವಜ್ಞಾನವನ್ನು ಪಡೆದುಕೊಳ್ಳು”ವೆವು. ಹೌದು, ದೇವರ ಮಾತುಗಳನ್ನು ಅಂಗೀಕರಿಸಿ, ಅವುಗಳನ್ನು ನಿಧಿಯಂತೆ ಕಾಪಾಡಿಕೊಳ್ಳುವಲ್ಲಿ, ವಿಶ್ವದ ಪರಮಾಧಿಕಾರಿಯಾಗಿರುವಾತನ ಜ್ಞಾನವು ನಮ್ಮ ಕೈಗೆ ಎಟುಕುವಷ್ಟೇ ಹತ್ತಿರದಲ್ಲಿರುತ್ತದೆ. ಪ್ರಾರ್ಥನೆಯಲ್ಲಿ ಹಾಗೂ ವೈಯಕ್ತಿಕ ಅಧ್ಯಯನದ ಮೂಲಕ ಯೆಹೋವನ ಕಡೆಗೆ ತಿರುಗುವುದೇ ಇದರ ಅರ್ಥವಾಗಿದೆ. ಆತನ ವಾಕ್ಯದ ಗುಪ್ತ ನಿಧಿಯು, ಸತ್ಯದ ಬೆಳಕಿನ ಮೂಲಕ ನಮ್ಮ ಸಂಶಯಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು.

11. ಯಾವ ರೀತಿಯಲ್ಲಿ ಎಲೀಷನ ಸೇವಕನು ಸಂಶಯಕ್ಕೆ ತುತ್ತಾದನು?

11 ಭಯಭರಿತನಾಗಿದ್ದ ಹಾಗೂ ಸಂಶಯಗೊಂಡಿದ್ದ ಒಬ್ಬ ದೇವರ ಸೇವಕನಿಗೆ, ಪ್ರಾರ್ಥನೆಯು ಯಾವ ರೀತಿಯಲ್ಲಿ ಸಹಾಯಮಾಡಿತೆಂಬುದರ ಕುರಿತಾದ ಒಂದು ಸ್ಪಷ್ಟ ಉದಾಹರಣೆಯು 2 ಅರಸುಗಳು 6:​11-18ರಲ್ಲಿ ಕೊಡಲ್ಪಟ್ಟಿದೆ. ಎಲೀಷನ ಸೇವಕನಿಗೆ ಆತ್ಮಿಕ ತಿಳುವಳಿಕೆಯ ಕೊರತೆಯಿತ್ತು. ಅರಾಮ್ಯ ಸೇನೆಯ ಮುತ್ತಿಗೆಗೆ ಒಳಗಾಗಿದ್ದ ದೇವರ ಪ್ರವಾದಿಗೆ ಸ್ವರ್ಗೀಯ ಸೇನೆಗಳು ಬೆಂಬಲವನ್ನು ನೀಡುತ್ತಿದ್ದವು ಎಂಬುದನ್ನು ಅವನು ಗ್ರಹಿಸಲಿಲ್ಲ. ತುಂಬ ಭಯಗೊಂಡಿದ್ದ ಆ ಸೇವಕನು ಕೂಗಿ ಹೇಳಿದ್ದು: “ಅಯ್ಯೋ, ಸ್ವಾಮೀ, ಏನು ಮಾಡೋಣ”? ಇದಕ್ಕೆ ಎಲೀಷನು ಹೇಗೆ ಪ್ರತಿಕ್ರಿಯಿಸಿದನು? ಅವನು ಹೇಳಿದ್ದು: “ಹೆದರಬೇಡ; ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ.” ಆದರೆ ಈ ಸೇವಕನಿಗೆ ಅದನ್ನು ಹೇಗೆ ಮನಗಾಣಿಸಸಾಧ್ಯವಿತ್ತು? ಏಕೆಂದರೆ ಅವನು ಸ್ವರ್ಗೀಯ ಸೇನೆಯನ್ನು ಕಣ್ಣಾರೆ ನೋಡಶಕ್ತನಾಗಿರಲಿಲ್ಲ.

12. (ಎ) ಎಲೀಷನ ಸೇವಕನ ಸಂಶಯಗಳು ಹೇಗೆ ಬಗೆಹರಿಸಲ್ಪಟ್ಟವು? (ಬಿ) ನಮಗಿರಬಹುದಾದಂಥ ಯಾವುದೇ ಸಂಶಯಗಳನ್ನು ನಾವು ಹೇಗೆ ಬಗೆಹರಿಸಸಾಧ್ಯವಿದೆ?

12 ಎಲೀಷನು, “ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು.” ಈ ಘಟನೆಯಲ್ಲಿ ಯೆಹೋವನು, ಆ ಸೇವಕನಿಗೆ ಎಲೀಷನ ರಕ್ಷಣೆಗಾಗಿ ಬಂದಿದ್ದ ಸ್ವರ್ಗೀಯ ಸೇನೆಯನ್ನು ನೋಡುವಂತೆ ಮಾಡಿದನು. ಆದರೂ ಇಂದು, ತದ್ರೀತಿಯ ದೈವಿಕ ಸಹಾಯವನ್ನು ನಾವು ನಿರೀಕ್ಷಿಸಬಾರದು. ಏಕೆಂದರೆ ತನ್ನ ನಂಬಿಕೆಯನ್ನು ಬಲಗೊಳಿಸಲಿಕ್ಕಾಗಿ ಅಭ್ಯಾಸವನ್ನು ಮಾಡಲು ಆ ಸೇವಕನ ಬಳಿ ಸಂಪೂರ್ಣ ಬೈಬಲು ಇರಲಿಲ್ಲ ಎಂಬುದನ್ನು ಮರೆಯದಿರಿ. ನಮ್ಮ ಬಳಿ ಬೈಬಲ್‌ ಇದೆ. ನಾವು ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸುವಲ್ಲಿ, ನಮ್ಮ ನಂಬಿಕೆಯು ಸಹ ತದ್ರೀತಿಯಲ್ಲಿ ಬಲಗೊಳಿಸಲ್ಪಡಸಾಧ್ಯವಿದೆ. ಉದಾಹರಣೆಗೆ, ಯೆಹೋವನು ತನ್ನ ಸ್ವರ್ಗೀಯ ಸಭೆಯಲ್ಲಿ ಇರುವಂತೆ ವರ್ಣಿಸುವಂತಹ ಅನೇಕ ವೃತ್ತಾಂತಗಳ ಕುರಿತು ನಾವು ಮನನಮಾಡಬಹುದು. ಯೆಹೋವನಿಗೆ ಒಂದು ಸ್ವರ್ಗೀಯ ಸಂಸ್ಥೆಯಿದೆ ಮತ್ತು ಇಂದಿನ ಲೋಕವ್ಯಾಪಕ ಶೈಕ್ಷಣಿಕ ಕಾರ್ಯದಲ್ಲಿ ಆತನ ಸೇವಕರನ್ನು ಅದು ಬೆಂಬಲಿಸುತ್ತಾ ಇದೆ ಎಂಬ ವಿಷಯದಲ್ಲಿ ಯಾವುದೇ ಸಂಶಯಕ್ಕೆ ಎಡೆಗೊಡಲಾರವು.​—ಯೆಶಾಯ 6:​1-4; ಯೆಹೆಜ್ಕೇಲ 1:​4-28; ದಾನಿಯೇಲ 7:​9, 10; ಪ್ರಕಟನೆ 4:​1-11; 14:​6, 7.

ಸೈತಾನನ ತಂತ್ರೋಪಾಯಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ!

13. ಯಾವ ಮಾಧ್ಯಮಗಳ ಮೂಲಕ ಸೈತಾನನು ಸತ್ಯದ ಮೇಲಿನ ನಮ್ಮ ಹಿಡಿತವನ್ನು ಸಡಿಲಿಸಲು ಪ್ರಯತ್ನಿಸುತ್ತಾನೆ?

13 ನಮ್ಮ ಆತ್ಮಿಕತೆಯನ್ನು ಮತ್ತು ಸತ್ಯದ ಮೇಲಿನ ನಮ್ಮ ಹಿಡಿತವನ್ನು ಸಡಿಲಿಸಲಿಕ್ಕಾಗಿ ಸೈತಾನನು ಉಪಯೋಗಿಸುವ ಇತರ ಕೆಲವು ವಿಧಾನಗಳು ಯಾವುವು? ಇವುಗಳಲ್ಲಿ ಒಂದು ಅನೈತಿಕತೆ ಹಾಗೂ ಅದರ ಬೇರೆ ಬೇರೆ ರೂಪಗಳಾಗಿವೆ. ಇಂದಿನ ಕಾಮೋನ್ಮತ ಲೋಕದಲ್ಲಿ, ಏನೇ ಆದರೂ ಮಜಾ ಮಾಡಬೇಕೆಂದು ನಿರ್ಧರಿಸಿರುವ ಭೋಗವಾದಿ ಸಂತತಿಗೆ, ಅಕ್ರಮ ಸಂಬಂಧ (ದಾಂಪತ್ಯದ್ರೋಹಕ್ಕಾಗಿರುವ ಇನ್ನೊಂದು ಹೆಸರು) ಅಥವಾ ಒಂದು ರಾತ್ರಿಯ ಕಾಮಕ್ರೀಡೆ (ಆಕಸ್ಮಿಕ ವ್ಯಭಿಚಾರ) ತುಂಬ ಸರ್ವಸಾಮಾನ್ಯವಾಗಿವೆ. ಚಲನ ಚಿತ್ರಗಳು, ಟಿವಿ ಮತ್ತು ವಿಡಿಯೋಗಳು ಈ ರೀತಿಯ ಜೀವನ ಶೈಲಿಯನ್ನು ಉತ್ತೇಜಿಸುತ್ತವೆ. ವಾರ್ತಾಮಾಧ್ಯಮಗಳ ಮೂಲಕ, ಅದರಲ್ಲೂ ವಿಶೇಷವಾಗಿ ಇಂಟರ್‌ನೆಟ್‌ನ ಮೂಲಕ ಲಂಪಟಸಾಹಿತ್ಯವು ವ್ಯಾಪಕವಾಗಿ ಹಬ್ಬಿಸಲ್ಪಡುತ್ತಿದೆ. ಯಾರು ಕುತೂಹಲಿಗಳಾಗಿದ್ದಾರೋ ಅವರಿಗೆ ಶೋಧನೆಗಳು ಕಾದಿವೆ.​—1 ಥೆಸಲೊನೀಕ 4:​3-5; ಯಾಕೋಬ 1:​13-15.

14. ಕೆಲವು ಕ್ರೈಸ್ತರು ಏಕೆ ಸೈತಾನನ ತಂತ್ರೋಪಾಯಗಳಿಗೆ ಬಲಿಪಶುಗಳಾಗಿದ್ದಾರೆ?

14 ಕೆಲವು ಕ್ರೈಸ್ತರು ಕುತೂಹಲಕ್ಕೆ ಬಲಿಬಿದ್ದು, ಅಲ್ಪ ಮಟ್ಟದ (ಸಾಫ್ಟ್‌ ಕೋರ್‌) ಹಾಗೂ ಅತಿರೇಕವಾದ (ಹಾರ್ಡ್‌ ಕೋರ್‌) ಅಶ್ಲೀಲ ಸಾಹಿತ್ಯವನ್ನು ನೋಡುವ ಮೂಲಕ ತಮ್ಮ ಹೃದಮನಗಳನ್ನು ಮಲಿನಗೊಳಿಸಿಕೊಂಡಿದ್ದಾರೆ. ಹೀಗೆ, ಸೈತಾನನ ಆಕರ್ಷಕ ಬಲೆಯೊಳಗೆ ಬೀಳುವಂತೆ ತಮ್ಮನ್ನು ಬಿಟ್ಟುಕೊಟ್ಟಿದ್ದಾರೆ. ಇದರಿಂದಾಗಿ ಅವರು ಆತ್ಮಿಕ ನಷ್ಟಕ್ಕೆ ತುತ್ತಾಗಿದ್ದಾರೆ. ಇಂತಹ ಜನರು “ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿ” ಉಳಿಯಲು ತಪ್ಪಿಹೋಗಿದ್ದಾರೆ. ಇಷ್ಟರ ತನಕ ಅವರು ‘ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿಲ್ಲ.’ (1 ಕೊರಿಂಥ 14:20) ಪ್ರತಿ ವರ್ಷ, ದೇವರ ವಾಕ್ಯದ ಮೂಲತತ್ತ್ವಗಳು ಹಾಗೂ ಮಟ್ಟಗಳಿಗೆ ಅನುಸಾರವಾಗಿ ನಡೆಯದಿರುವುದರಿಂದ ದೊರಕುವ ಫಲಿತಾಂಶವನ್ನು ಸಾವಿರಾರು ಮಂದಿ ಅನುಭವಿಸುತ್ತಾರೆ. ಅವರು “ದೇವರು ದಯಪಾಲಿಸುವ ಸರ್ವಾಯುಧಗಳನ್ನು” ಧರಿಸಿಕೊಳ್ಳುವುದನ್ನು ಮತ್ತು ಕಾಪಾಡಿಕೊಳ್ಳುವುದನ್ನು ಅಲಕ್ಷಿಸಿದ್ದಾರೆ.​—ಎಫೆಸ 6:​10-13; ಕೊಲೊಸ್ಸೆ 3:​5-10; 1 ತಿಮೊಥೆಯ 1:​18, 19.

ನಮಗಿರುವುದನ್ನು ನಿಧಿಯಂತೆ ಕಾಪಾಡಿಕೊಳ್ಳುವುದು

15. ತಮ್ಮ ಆತ್ಮಿಕ ಸ್ವಾಸ್ಥ್ಯವನ್ನು ಗಣ್ಯಮಾಡುವುದನ್ನು ಕೆಲವರು ಏಕೆ ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದು?

15 “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು” ಎಂದು ಯೇಸು ಹೇಳಿದನು. (ಯೋಹಾನ 8:​31, 32) ಅನೇಕ ಸಾಕ್ಷಿಗಳು ತಮ್ಮ ಹಿಂದಣ ಜೀವನ ಶೈಲಿಯನ್ನು ಹಾಗೂ ಧಾರ್ಮಿಕ ಸಹವಾಸಿಗಳನ್ನು ಬಿಟ್ಟುಬಿಡಬೇಕಾಗಿತ್ತು. ಆದುದರಿಂದ, ಸತ್ಯವು ತರುವಂತಹ ಬಿಡುಗಡೆಯನ್ನು ಅವರು ಇನ್ನಷ್ಟು ಗಣ್ಯಮಾಡಬಹುದು. ಇನ್ನೊಂದು ಕಡೆಯಲ್ಲಿ, ಸತ್ಯದಲ್ಲಿರುವ ಹೆತ್ತವರಿಂದ ಬೆಳೆಸಲ್ಪಟ್ಟಿರುವ ಯುವ ಜನರಲ್ಲಿ ಕೆಲವರು, ತಮ್ಮ ಆತ್ಮಿಕ ಪರಂಪರೆಯನ್ನು ಗಣ್ಯಮಾಡುವುದನ್ನು ತುಂಬ ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದು. ಈ ಮುಂಚೆ ಅವರೆಂದೂ ಸುಳ್ಳು ಧರ್ಮದ ಭಾಗವಾಗಿರಲಿಲ್ಲ ಅಥವಾ ಸುಖಾನುಭೋಗದ ಹುಡುಕುವಿಕೆಗೆ, ಅಮಲೌಷಧ ಚಟಕ್ಕೆ, ಹಾಗೂ ಅನೈತಿಕತೆಗೆ ಮಹತ್ವ ನೀಡುವಂತಹ ಈ ಲೋಕದ ಭಾಗವಾಗಿರಲಿಲ್ಲ. ಈ ಕಾರಣದಿಂದಾಗಿ, ನಮ್ಮ ಆತ್ಮಿಕ ಪ್ರಮೋದವನ ಹಾಗೂ ಸೈತಾನನ ಭ್ರಷ್ಟ ಲೋಕದ ನಡುವೆ ಇರುವ ಬಲವಾದ ವ್ಯತ್ಯಾಸವನ್ನು ಗ್ರಹಿಸಲು ಅವರು ತಪ್ಪಿಹೋಗಿರಬಹುದು. ತಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ನೋಡಲಿಕ್ಕಾಗಿ, ಈ ಲೋಕದ ವಿಷದ ರುಚಿನೋಡುವ ಶೋಧನೆಗೆ ಕೆಲವರು ಸುಲಭವಾಗಿ ಬಲಿಬೀಳಬಹುದು!​—1 ಯೋಹಾನ 2:​15-17; ಪ್ರಕಟನೆ 18:​1-5.

16. (ಎ) ಸ್ವತಃ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು? (ಬಿ) ನಮಗೆ ಏನು ಕಲಿಸಲಾಗಿದೆ ಮತ್ತು ಏನು ಮಾಡುವಂತೆ ಪ್ರೋತ್ಸಾಹಿಸಲಾಗಿದೆ?

16 ನೋವು ಹಾಗೂ ಕಷ್ಟಾನುಭವವೆಂದರೇನು ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ನಾವು ನಮ್ಮ ಬೆರಳುಗಳನ್ನು ಸುಟ್ಟುಕೊಳ್ಳುವ ಅಗತ್ಯವಿದೆಯೊ? ಇತರರ ನಕಾರಾತ್ಮಕ ಅನುಭವಗಳಿಂದ ನಾವು ಪಾಠವನ್ನು ಕಲಿಯಸಾಧ್ಯವಿಲ್ಲವೋ? ನಾವು ಏನನ್ನಾದರೂ ಕಳೆದುಕೊಂಡಿದ್ದೇವೋ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ, ನಾವು ಈ ಲೋಕದ ‘ಕೆಸರಿಗೇ’ ಹಿಂದಿರುಗುವ ಅಗತ್ಯವಿದೆಯೋ? (2 ಪೇತ್ರ 2:​20-22) ಈ ಮುಂಚೆ ಸೈತಾನನ ಲೋಕದ ಭಾಗವಾಗಿದ್ದ ಪ್ರಥಮ ಶತಮಾನದ ಕ್ರೈಸ್ತರಿಗೆ ಪೇತ್ರನು ಜ್ಞಾಪಕ ಹುಟ್ಟಿಸುತ್ತಾ ಹೇಳಿದ್ದು: “ನೀವು ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಈ ಮೊದಲಾದವುಗಳನ್ನು ನಡಿಸುವದರಲ್ಲಿಯೂ ಅನ್ಯ ಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವದರಲ್ಲಿಯೂ ಕಳೆದುಹೋದ ಕಾಲವೇ ಸಾಕು.” ನಿಶ್ಚಯವಾಗಿಯೂ, ಜೀವಿತವು ಎಷ್ಟು ಕೀಳ್ಮಟ್ಟದ್ದಾಗಿರಸಾಧ್ಯವಿದೆ ಎಂಬುದನ್ನು ನೋಡಲಿಕ್ಕಾಗಿ ನಾವು ಲೋಕದ “ಪಟಿಂಗತನ”ವನ್ನು ಅನುಭವಿಸುವ ಅಗತ್ಯವಿಲ್ಲ. (1 ಪೇತ್ರ 4:​3, 4) ಇದಕ್ಕೆ ವಿರುದ್ಧವಾಗಿ, ಬೈಬಲ್‌ ಶಿಕ್ಷಣದ ಕೇಂದ್ರಗಳಾಗಿರುವ ನಮ್ಮ ರಾಜ್ಯ ಸಭಾಗೃಹಗಳಲ್ಲಿ ನಮಗೆ ಯೆಹೋವನ ಉಚ್ಚ ನೈತಿಕ ಮಟ್ಟಗಳ ಕುರಿತು ಕಲಿಸಲಾಗುತ್ತದೆ. ಇದಲ್ಲದೆ, ನಮ್ಮಲ್ಲಿ ಸತ್ಯವಿದೆ ಎಂಬುದನ್ನು ರುಜುಪಡಿಸಲಿಕ್ಕಾಗಿ ನಮ್ಮ ವಿವೇಚನಾ ಸಾಮರ್ಥ್ಯವನ್ನು ಉಪಯೋಗಿಸುವಂತೆ ಮತ್ತು ಸತ್ಯವನ್ನು ನಮ್ಮದಾಗಿ ಮಾಡಿಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ.​—ಯೆಹೋಶುವ 1:8; ರೋಮಾಪುರ 12:​1, 2; 2 ತಿಮೊಥೆಯ 3:​14-17.

ನಮ್ಮ ಹೆಸರು ಕೇವಲ ಒಂದು ಗುರುತುಪಟ್ಟಿಯಲ್ಲ

17. ಯಾವ ರೀತಿಯಲ್ಲಿ ನಾವು ಯೆಹೋವನ ಪರಿಣಾಮಕಾರಿ ಸಾಕ್ಷಿಗಳಾಗಿರಸಾಧ್ಯವಿದೆ?

17 ಒಂದುವೇಳೆ ನಾವು ಸತ್ಯವನ್ನು ನಮ್ಮದಾಗಿ ಮಾಡಿಕೊಳ್ಳುವಲ್ಲಿ, ಪ್ರತಿಯೊಂದು ಸಂದರ್ಭದಲ್ಲಿ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುವೆವು. ಯಾರು ಆಸಕ್ತಿಯನ್ನು ತೋರಿಸುವುದಿಲ್ಲವೋ ಅವರಿಗೆ ಒತ್ತಾಯಪೂರ್ವಕವಾಗಿ ಅದನ್ನು ತಿಳಿಸಲು ಪ್ರಯತ್ನಿಸುವೆವು ಎಂಬುದನ್ನು ಇದು ಅರ್ಥೈಸುವುದಿಲ್ಲ. (ಮತ್ತಾಯ 7:6) ಬದಲಾಗಿ, ಯೆಹೋವನ ಸಾಕ್ಷಿಗಳೋಪಾದಿ ನಮ್ಮನ್ನು ಗುರುತಿಸಿಕೊಳ್ಳಲು ನಾವು ಹೆದರುವುದಿಲ್ಲ. ಒಂದು ಯಥಾರ್ಥ ಪ್ರಶ್ನೆಯನ್ನು ಕೇಳುವ ಮೂಲಕ ಅಥವಾ ಒಂದು ಬೈಬಲ್‌ ಸಾಹಿತ್ಯವನ್ನು ಸ್ವೀಕರಿಸುವ ಮೂಲಕ ಒಬ್ಬ ವ್ಯಕ್ತಿಯು ಸ್ವಲ್ಪ ಮಟ್ಟಿಗಿನ ಆಸಕ್ತಿಯನ್ನು ತೋರಿಸುವುದಾದರೂ, ನಮ್ಮ ನಿರೀಕ್ಷೆಯನ್ನು ಹಂಚಿಕೊಳ್ಳಲು ನಾವು ಸಂಪೂರ್ಣರಾಗಿ ಸಿದ್ಧರಾಗಿರುವೆವು. ನಾವು ಮನೆಯಲ್ಲಿರಲಿ, ಕೆಲಸದ ಸ್ಥಳದಲ್ಲಿರಲಿ, ಶಾಲೆಯಲ್ಲಿರಲಿ, ಅಂಗಡಿಯಲ್ಲಿರಲಿ, ಅಥವಾ ಮನೋರಂಜನೆಯ ಸ್ಥಳದಲ್ಲಿರಲಿ, ನಮ್ಮೊಂದಿಗೆ ಸಾಹಿತ್ಯವನ್ನು ಯಾವಾಗಲೂ ಇಟ್ಟುಕೊಂಡಿರುವಂತೆ ಇದು ಕೇಳಿಕೊಳ್ಳುತ್ತದೆ ಎಂಬುದು ನಿಶ್ಚಯ.​—1 ಪೇತ್ರ 3:15.

18. ನಮ್ಮನ್ನು ಕ್ರೈಸ್ತರೋಪಾದಿ ಸ್ಪಷ್ಟವಾಗಿ ಗುರುತಿಸಿಕೊಳ್ಳುವುದು, ಯಾವ ರೀತಿಯಲ್ಲಿ ನಮ್ಮ ಜೀವಿತದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಬಹುದು?

18 ನಾವು ಕ್ರೈಸ್ತರೋಪಾದಿ ನಮ್ಮನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳುವಾಗ, ಸೈತಾನನ ವಂಚನಾತ್ಮಕ ಆಕ್ರಮಣಗಳ ವಿರುದ್ಧ ನಮ್ಮ ರಕ್ಷಣೆಯನ್ನು ನಾವು ಇನ್ನಷ್ಟು ಬಲಪಡಿಸಿಕೊಳ್ಳುತ್ತೇವೆ. ಒಂದುವೇಳೆ ಜನ್ಮದಿನ ಅಥವಾ ಕ್ರಿಸ್ಮಸ್‌ ಪಾರ್ಟಿ ಇಲ್ಲವೆ ಆಫೀಸ್‌ ಲಾಟರಿಯಿರುವಲ್ಲಿ, ಅನೇಕವೇಳೆ ಜೊತೆ ಕೆಲಸಗಾರರು ಹೀಗೆ ಹೇಳುವರು: “ಅವನನ್ನು ಕರೆದರೆ ಪ್ರಯೋಜನವಿಲ್ಲ. ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು.” ಈ ಕಾರಣದಿಂದಲೇ ಜನರು ನಮ್ಮ ಮುಂದೆ ಅಶ್ಲೀಲ ಜೋಕ್‌ಗಳನ್ನು ಹೇಳದಿರಬಹುದು. ಹೀಗೆ, ನಮ್ಮ ಕ್ರೈಸ್ತ ನಿಲುವನ್ನು ನಾವು ಎಲ್ಲರಿಗೂ ತಿಳಿಯಪಡಿಸುವುದು, ನಮ್ಮ ಜೀವಿತದಲ್ಲಿ ಮಹತ್ತರವಾದ ಪ್ರಯೋಜನವನ್ನು ಉಂಟುಮಾಡುತ್ತದೆ. ಈ ವಿಷಯದಲ್ಲಿ ಅಪೊಸ್ತಲ ಪೇತ್ರನು ಹೇಳಿದ್ದು: “ನೀವು ಒಳ್ಳೇದನ್ನೇ ಮಾಡುವದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ? ಒಂದು ವೇಳೆ ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ.”​—1 ಪೇತ್ರ 3:​13, 14.

19. ನಾವು ಕಡೇ ದಿವಸಗಳ ಅಂತ್ಯಭಾಗದಲ್ಲಿದ್ದೇವೆ ಎಂಬುದು ನಮಗೆ ಹೇಗೆ ತಿಳಿದಿದೆ?

19 ಸತ್ಯವನ್ನು ನಮ್ಮದಾಗಿ ಮಾಡಿಕೊಳ್ಳುವುದರ ಇನ್ನೊಂದು ಪ್ರಯೋಜನವು ಯಾವುದೆಂದರೆ, ಈ ದಿವಸಗಳು ಖಂಡಿತವಾಗಿಯೂ ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಾಗಿವೆ ಎಂಬ ವಿಷಯದಲ್ಲಿ ನಾವು ದೃಢನಿಶ್ಚಿತರಾಗಿರುವೆವು. ಬೈಬಲಿನ ಅನೇಕ ಪ್ರವಾದನೆಗಳು ನಮ್ಮ ಸಮಯದಲ್ಲಿ ಪರಮಾವಧಿಗೇರುತ್ತಿವೆ ಎಂಬುದು ನಮಗೆ ತಿಳಿದುಬರುವುದು. * “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವು” ಎಂಬ ಪೌಲನ ಎಚ್ಚರಿಕೆಯು, ಗತ ಶತಮಾನದ ಭೀಕರ ಘಟನೆಗಳಿಂದ ಚೆನ್ನಾಗಿ ರುಜುಪಡಿಸಲ್ಪಟ್ಟಿದೆ. (2 ತಿಮೊಥೆಯ 3:​1-5; ಮಾರ್ಕ 13:​3-37) 20ನೆಯ ಶತಮಾನದ ಕುರಿತಾದ ಇತ್ತೀಚಿಗಿನ ಒಂದು ವಾರ್ತಾಪತ್ರಿಕೆಯ ಲೇಖನದ ಮೇಲ್ಬರಹವು, “ಇದನ್ನು ಅನಾಗರಿಕತೆಯ ಒಂದು ಯುಗವಾಗಿ ಸ್ಮರಿಸಲಾಗುವುದು” ಎಂದಾಗಿತ್ತು. ಆ ಲೇಖನವು ಹೇಳಿದ್ದು: “ಆ ಕಗ್ಗೊಲೆಭರಿತ ಶತಮಾನದ ಉತ್ತರಾರ್ಧದಲ್ಲಿ, 1999ನೆಯ ವರ್ಷವು ಕಡುಕಗ್ಗೊಲೆಯ ವರ್ಷವಾಗಿ ಪರಿಣಮಿಸಿತು.”

20. ಇದು ಯಾವ ರೀತಿಯ ಕ್ರಿಯೆಗೈಯುವ ಸಮಯವಾಗಿದೆ?

20 ಇದು ಓಲಾಡುವಂತಹ ಸಮಯವಲ್ಲ. ಲೋಕವ್ಯಾಪಕವಾಗಿ ಎಲ್ಲ ಜನಾಂಗಗಳಿಗೆ ಸಾಕ್ಷಿಯೋಪಾದಿ ಇಷ್ಟರ ತನಕ ಮಾಡಲ್ಪಟ್ಟಿರುವ ಅತಿ ವಿಸ್ತಾರವಾದ ಬೈಬಲ್‌ ಶಿಕ್ಷಣ ಕಾರ್ಯದ ಮೇಲಿನ ಯೆಹೋವನ ಆಶೀರ್ವಾದವು ಸ್ಪಷ್ಟವಾಗಿ ರುಜುವಾಗಿದೆ. (ಮತ್ತಾಯ 24:14) ಸತ್ಯವನ್ನು ನಿಮ್ಮದಾಗಿ ಮಾಡಿಕೊಳ್ಳಿರಿ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಿರಿ. ನೀವು ಈಗ ಏನು ಮಾಡುತ್ತೀರೋ ಅದರ ಮೇಲೆ ನಿಮ್ಮ ನಿತ್ಯ ಭವಿಷ್ಯತ್ತು ಅವಲಂಬಿಸಿದೆ. ಉದಾಸೀನಭಾವವನ್ನು ತೋರಿಸುವುದಾದರೆ, ಯೆಹೋವನ ಆಶೀರ್ವಾದವು ದೊರಕುವುದಿಲ್ಲ. (ಲೂಕ 9:62) ಅದಕ್ಕೆ ಬದಲಾಗಿ, ಇದು ‘ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರುವ’ ಸಮಯವಾಗಿದೆ. ಏಕೆಂದರೆ “ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.”​—1 ಕೊರಿಂಥ 15:58.

[ಪಾದಟಿಪ್ಪಣಿ]

^ ಪ್ಯಾರ. 19 ಜನವರಿ 15, 2000ದ ಕಾವಲಿನಬುರುಜು ಪತ್ರಿಕೆಯ 12-14ನೆಯ ಪುಟಗಳನ್ನು ನೋಡಿರಿ. 13-18ನೆಯ ಪ್ಯಾರಗ್ರಾಫ್‌ಗಳು, 1914ರಿಂದ ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ತೋರಿಸುವ ಆರು ಪುರಾವೆಗಳ ಪುನರ್ವಿಮರ್ಶೆಯನ್ನು ಕೊಡುತ್ತವೆ.

ನೀವು ಜ್ಞಾಪಿಸಿಕೊಳ್ಳುತ್ತೀರೋ?

• ನೀವು ಸಂಶಯಗಳನ್ನು ಹೇಗೆ ಹೋಗಲಾಡಿಸಸಾಧ್ಯವಿದೆ?

• ಎಲೀಷನ ಸೇವಕನ ಉದಾಹರಣೆಯಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?

• ಯಾವ ನೈತಿಕ ಶೋಧನೆಗಳ ವಿರುದ್ಧ ನಾವು ಸತತವಾಗಿ ನಮ್ಮನ್ನು ಕಾಪಾಡಿಕೊಳ್ಳಬೇಕು?

• ನಾವು ನಮ್ಮನ್ನು ಯೆಹೋವನ ಸಾಕ್ಷಿಗಳೋಪಾದಿ ಸ್ಪಷ್ಟವಾಗಿ ಏಕೆ ಗುರುತಿಸಿಕೊಳ್ಳಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ಕ್ರಮವಾದ ಬೈಬಲ್‌ ಅಧ್ಯಯನ ಹಾಗೂ ಪ್ರಾರ್ಥನೆಯು ಸಂಶಯಗಳನ್ನು ಹೋಗಲಾಡಿಸಲು ನಮಗೆ ಸಹಾಯಮಾಡಸಾಧ್ಯವಿದೆ

[ಪುಟ 11ರಲ್ಲಿರುವ ಚಿತ್ರ]

ಎಲೀಷನ ಸೇವಕನ ಸಂಶಯಗಳು ಒಂದು ದರ್ಶನದ ಮೂಲಕ ಬಗೆಹರಿಸಲ್ಪಟ್ಟವು

[ಪುಟ 12ರಲ್ಲಿರುವ ಚಿತ್ರಗಳು]

ಬೆನಿನ್‌ನಲ್ಲಿ ಇರುವಂತಹ ಈ ರೀತಿಯ ರಾಜ್ಯ ಸಭಾಗೃಹಗಳಲ್ಲಿ ಯೆಹೋವನ ಉಚ್ಚ ನೈತಿಕ ಮಟ್ಟಗಳು ನಮಗೆ ಕಲಿಸಲ್ಪಡುತ್ತವೆ