ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲ್ಯಾಟ್ವೀಯ ಸುವಾರ್ತೆಗೆ ಪ್ರತಿಕ್ರಿಯೆ ತೋರಿಸುತ್ತದೆ

ಲ್ಯಾಟ್ವೀಯ ಸುವಾರ್ತೆಗೆ ಪ್ರತಿಕ್ರಿಯೆ ತೋರಿಸುತ್ತದೆ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಲ್ಯಾಟ್ವೀಯ ಸುವಾರ್ತೆಗೆ ಪ್ರತಿಕ್ರಿಯೆ ತೋರಿಸುತ್ತದೆ

“ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ ಎಂದು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. (1 ತಿಮೊಥೆಯ 2:4) ಅನೇಕ ವರ್ಷಗಳಿಂದ ಸುವಾರ್ತೆಗೆ ಪ್ರತಿಕ್ರಿಯೆ ತೋರಿಸಲು ಅವಕಾಶವಿರದಿದ್ದ ಜನರು ಈಗ ಕಿವಿಗೊಡುತ್ತಿದ್ದಾರೆ! ಈ ಮುಂದಿನ ಅನುಭವಗಳು ತೋರಿಸುವಂತೆ, ಲೋಕದ ಇತರ ಭಾಗಗಳಲ್ಲಿರುವ ಹಾಗೆ ಲ್ಯಾಟ್ವೀಯದಲ್ಲಿ ಎಲ್ಲ ವಯಸ್ಸಿನ ಜನರು ಹಾಗೂ ವಿವಿಧ ಹಿನ್ನೆಲೆಗಳುಳ್ಳವರು ರಾಜ್ಯದ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.

• ಪೂರ್ವ ಲ್ಯಾಟ್ವೀಯದ ರೆಝೆಕ್ನೆ ಎಂಬ ಪಟ್ಟಣದಲ್ಲಿ, ಒಬ್ಬ ತಾಯಿ ಹಾಗೂ ಹದಿವಯಸ್ಕ ಮಗಳು ರಸ್ತೆಯಲ್ಲಿ ಒಬ್ಬ ಸ್ತ್ರೀಗೆ ಒಂದು ವಿಳಾಸವನ್ನು ತೋರಿಸಿ, ಇದು ಎಲ್ಲಿದೆಯೆಂದು ಕೇಳಿದರು. ಈ ಸ್ತ್ರೀಯು ಒಬ್ಬ ಯೆಹೋವನ ಸಾಕ್ಷಿಯಾಗಿದ್ದ ಕಾರಣ, ಅವರಿಗೆ ಮಾರ್ಗವನ್ನು ತೋರಿಸಿದ ಬಳಿಕ, ಸಾಕ್ಷಿಗಳ ಕೂಟಗಳಿಗೆ ಬರುವಂತೆ ಆಮಂತ್ರಣವನ್ನು ನೀಡಿದಳು.

ತಾಯಿ ಮತ್ತು ಮಗಳು, ಇಬ್ಬರೂ ಧರ್ಮದಲ್ಲಿ ಆಸಕ್ತಿಯುಳ್ಳವರಾಗಿದ್ದ ಕಾರಣ, ಕೂಟಕ್ಕೆ ಹೋಗಲು ಮನಸ್ಸುಮಾಡಿದರು. ಕೂಟದಲ್ಲಿ ಏನಾದರೂ ಸರಿಯಲ್ಲದ ವಿಷಯವು ನಡೆದರೆ, ಅಲ್ಲಿಂದ ತಕ್ಷಣವೇ ಹೊರಗೆ ಹೋಗಿಬಿಡಬೇಕು ಎಂದು ಮಾರ್ಗಮಧ್ಯದಲ್ಲಿ ಅವರು ಮಾತಾಡಿಕೊಂಡರು. ಆದರೆ, ಕೂಟವು ಅವರಿಗೆ ಎಷ್ಟು ಹಿಡಿಸಿತೆಂದರೆ, ಹೊರಗೆ ಎದ್ದು ಬರುವ ವಿಷಯವೇ ಅವರ ಮನಸ್ಸಿನಲ್ಲಿ ಸುಳಿಯಲಿಲ್ಲ. ಮಾತ್ರವಲ್ಲ, ಬೈಬಲನ್ನು ಅಭ್ಯಾಸಮಾಡಲು ಅವರು ಒಪ್ಪಿಕೊಂಡರು ಹಾಗೂ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಪ್ರಾರಂಭಿಸಿದರು. ಕೇವಲ ಮೂರು ತಿಂಗಳುಗಳೊಳಗೆ, ಸಾಕ್ಷಿನೀಡುವ ಕೆಲಸದಲ್ಲಿ ಜೊತೆಗೂಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಮುನ್ನೋಡುತ್ತಿದ್ದಾರೆ.

• ಪಶ್ಚಿಮ ಲ್ಯಾಟ್ವೀಯದ ಒಂದು ನಗರದಲ್ಲಿ, ಒಬ್ಬ ಸಾಕ್ಷಿಯು 85 ವರ್ಷ ಪ್ರಾಯದ ಆನಾಳನ್ನು ಭೇಟಿಮಾಡಿದನು. ಈಕೆಯು ನಿಜ ಆಸಕ್ತಿಯನ್ನು ತೋರಿಸಿದಳು ಮತ್ತು ಬೈಬಲ್‌ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡಳು. ಆಕೆಯ ಮಗಳು ಹಾಗೂ ಕುಟುಂಬದ ಇನ್ನಿತರ ಸದಸ್ಯರು ಬಲವಾಗಿ ವಿರೋಧಿಸಿದರು. ಆದರೆ, ವಿರೋಧ ಇಲ್ಲವೆ ವೃದ್ಧಾಪ್ಯ, ಹದಗೆಟ್ಟ ಆರೋಗ್ಯ ಯಾವುದನ್ನೂ ಲೆಕ್ಕಿಸದೇ ಆನಾ ಬೈಬಲ್‌ ಅಭ್ಯಾಸವನ್ನು ಮುಂದುವರಿಸಿದಳು.

ಒಂದು ದಿನ ಆನಾ ತನ್ನ ಮಗಳಿಗೆ ತಾನು ದೀಕ್ಷಾಸ್ನಾನ ಪಡೆದುಕೊಳ್ಳಲಿರುವೆ ಎಂದು ಹೇಳಿದಳು. “ನೀವೇನಾದರೂ ದೀಕ್ಷಾಸ್ನಾನ ಪಡೆದುಕೊಂಡರೆ, ನಿಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ” ಎಂದು ಆನಾಳ ಮಗಳು ಹೇಳಿದಳು. ಈ ಬೆದರಿಕೆಯಿಂದ ಆನಾ ಹೆದರಲಿಲ್ಲ. ಆಕೆಯು ಶಾರೀರಿಕವಾಗಿ ದುರ್ಬಲಳಾಗಿದ್ದುದ್ದರಿಂದ, ಆಕೆಯ ಮನೆಯಲ್ಲಿಯೇ ದೀಕ್ಷಾಸ್ನಾನವನ್ನು ನೀಡಲಾಯಿತು.

ಇದಕ್ಕೆ ಆನಾಳ ಮಗಳ ಪ್ರತಿಕ್ರಿಯೆಯು ಏನಾಗಿತ್ತು? ಆಕೆ ಮನಸ್ಸನ್ನು ಬದಲಾಯಿಸಿಕೊಂಡಿದ್ದಳು ಮತ್ತು ತಾಯಿಯು ದೀಕ್ಷಾಸ್ನಾನ ಪಡೆದುಕೊಂಡ ಮೇಲೆ ಅವಳಿಗಾಗಿ ವಿಶೇಷ ಅಡಿಗೆಯನ್ನು ಮಾಡಿಟ್ಟಳು. ಮಾತ್ರವಲ್ಲ, “ದೀಕ್ಷಾಸ್ನಾನ ಪಡೆದುಕೊಂಡ ಮೇಲೆ ನಿಮಗೆ ಏನನಿಸುತ್ತದೆ?” ಎಂದು ಆಕೆ ತಾಯಿಗೆ ಪ್ರಶ್ನಿಸಿದಳು. ಅದಕ್ಕೆ ಆನಾಳ ಉತ್ತರವು ಏನಾಗಿತ್ತು? ನನಗೆ “ನವಜಾತ ಕೂಸಿನಂತೆ” ಅನಿಸುತ್ತದೆ!

• ಡಿಸೆಂಬರ್‌ 1998ರಲ್ಲಿ, ಪೂರ್ವ ಸೋವಿಯಟ್‌ ಯೂನಿಯನ್‌ನ ಒಬ್ಬ ನಿವೃತ್ತ ಸೇನಾ ಆಫೀಸರನ್ನು ಇಬ್ಬರು ಸಾಕ್ಷಿಗಳು ಭೇಟಿಮಾಡಿದರು. ಅವನು ಸೃಷ್ಟಿಕರ್ತನಲ್ಲಿ ನಂಬಿಕೆಯಿಟ್ಟಿದ್ದರಿಂದ ಬೈಬಲ್‌ ಅಭ್ಯಾಸಕ್ಕೆ ಒಪ್ಪಿಕೊಂಡನು ಮತ್ತು ಅನಂತರ ಅವನ ಹೆಂಡತಿಯು ಜೊತೆಗೂಡಿದಳು. ಅವರು ಬಹಳ ಬೇಗನೆ ಪ್ರಗತಿಮಾಡಿ, ಅಸ್ನಾತ ಪ್ರಚಾರಕರಾದರು. ಮುಂದಿನ ಬೇಸಿಗೆಯಷ್ಟರಲ್ಲಿ, ಈ ಮಾಜಿ ಆಫೀಸರನು ದೀಕ್ಷಾಸ್ನಾನ ಪಡೆದುಕೊಂಡನು. ಆತ್ಮಿಕ ವಿಷಯಗಳಿಗಾಗಿ ಈ ದಂಪತಿಗಳಿಗಿರುವ ಅಪಾರ ಪ್ರೀತಿಯು, ಸಭೆಯಲ್ಲಿರುವ ಇತರರಿಗೆ ಉತ್ತೇಜನದಾಯಕವಾಗಿದೆ. ಮಾತ್ರವಲ್ಲ, ಮನೆಯೊಂದನ್ನು ಒಳ್ಳೆಯ ರಾಜ್ಯಸಭಾಗೃಹವಾಗಿ ಮಾರ್ಪಡಿಸುವ ಕೆಲಸದಲ್ಲಿಯೂ ಇವರು ತಮ್ಮನ್ನು ತೊಡಗಿಸಿಕೊಂಡರು.