ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆನ್ಯದಲ್ಲಿ ಯೋಗ್ಯ ಜನರಿಗಾಗಿ ಹುಡುಕಾಟ

ಕೆನ್ಯದಲ್ಲಿ ಯೋಗ್ಯ ಜನರಿಗಾಗಿ ಹುಡುಕಾಟ

ಕೆನ್ಯದಲ್ಲಿ ಯೋಗ್ಯ ಜನರಿಗಾಗಿ ಹುಡುಕಾಟ

ಕೆನ್ಯವು ಅಪೂರ್ವ ನೈಸರ್ಗಿಕ ಸೌಂದರ್ಯವುಳ್ಳ ಒಂದು ದೇಶವಾಗಿದೆ. ಹುಲುಸಾಗಿ ಬೆಳೆದಿರುವ ಕಾಡುಗಳು, ವಿಸ್ತಾರವಾದ ಬಯಲುಪ್ರದೇಶಗಳು, ತೀಕ್ಷ್ಣ ಉಷ್ಣತೆಯಿರುವ ಮರುಭೂಮಿಗಳು, ಮತ್ತು ಹಿಮದಿಂದಾವೃತವಾದ ಪರ್ವತಗಳು, ಈ ಮನಮೋಹಕ ಪ್ರದೇಶದ ಸೊಬಗನ್ನು ಹೆಚ್ಚಿಸುತ್ತವೆ. ಇದು, ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜಿಂಕೆಗಳು ಹಾಗೂ ನಾಶನದ ಅಂಚಿನಲ್ಲಿರುವ ಖಡ್ಗಮೃಗಗಳ ಇರುನೆಲೆಯಾಗಿದೆ. ಹುಲ್ಲುಗಾವಲುಗಳಲ್ಲಿ ಜಿರಾಫೆಗಳ ಹಿಂಡುಗಳು ಓಡಾಡುತ್ತಿರುವುದನ್ನು ಸಹ ಒಬ್ಬನು ನೋಡಸಾಧ್ಯವಿದೆ.

ಆಕಾಶದಲ್ಲಿ ಹಾರಾಡುವಂತಹ ಪಕ್ಷಿಗಳು ಸಹ ಬಹಳಷ್ಟಿವೆ. ಶಕ್ತಿಶಾಲಿಯಾಗಿದ್ದು, ಬಹಳ ಎತ್ತರದಲ್ಲಿ ಹಾರುವ ಹದ್ದಿನಿಂದ ಹಿಡಿದು ಅಸಂಖ್ಯಾತ ಸಂಖ್ಯೆಯಲ್ಲಿರುವ ವರ್ಣರಂಜಿತ ಹಾಡುಹಕ್ಕಿಗಳು ತಮ್ಮ ಸುಮಧುರ ಸ್ವರದಿಂದ ಇಂಪಾದ ಸಂಗೀತವನ್ನು ಹೊರಡಿಸುತ್ತವೆ. ಅಷ್ಟುಮಾತ್ರವಲ್ಲ, ಆನೆಗಳು ಹಾಗೂ ಸಿಂಹಗಳನ್ನು ಯಾರು ತಾನೇ ನೋಡದೆ ಇರಸಾಧ್ಯವಿದೆ? ಕೆನ್ಯದ ರಮಣೀಯ ದೃಶ್ಯಗಳು ಹಾಗೂ ಧ್ವನಿಗಳು ಅವಿಸ್ಮರಣೀಯವಾದದ್ದಾಗಿವೆ.

ಆದರೂ, ಈ ಸುಂದರ ದೇಶದಾದ್ಯಂತ ಇನ್ನೊಂದು ಧ್ವನಿಯು ಕೇಳಿಬರುತ್ತಿದೆ. ಅದು, ನಿರೀಕ್ಷೆಯ ಸಂದೇಶವನ್ನು ತಿಳಿಸುತ್ತಿರುವಂತಹ ಸಾವಿರಾರು ಮಂದಿಯ ಧ್ವನಿಯೇ ಆಗಿದೆ. (ಯೆಶಾಯ 52:7) 40ಕ್ಕಿಂತಲೂ ಹೆಚ್ಚು ಕುಲಗಳು ಹಾಗೂ ಭಾಷೆಗಳ ಜನರಿಗೆ ಈ ಧ್ವನಿಯು ತಲಪುತ್ತಿದೆ. ಈ ಅರ್ಥದಲ್ಲಿ, ಕೆನ್ಯವು ಆತ್ಮಿಕ ಸೌಂದರ್ಯವುಳ್ಳ ದೇಶವೂ ಆಗಿದೆ.

ಕೆನ್ಯದಲ್ಲಿರುವ ಅಧಿಕಾಂಶ ಜನರು ಧಾರ್ಮಿಕ ಮನೋಭಾವದವರಾಗಿದ್ದಾರೆ ಮತ್ತು ಆತ್ಮಿಕ ವಿಷಯಗಳನ್ನು ಚರ್ಚಿಸಲು ಇಷ್ಟಪಡುತ್ತಾರೆ. ಹೀಗಿದ್ದರೂ, ಸುವಾರ್ತೆಯನ್ನು ಸಾರಲಿಕ್ಕಾಗಿ ಜನರನ್ನು ಕಂಡುಕೊಳ್ಳುವುದು ಒಂದು ಪಂಥಾಹ್ವಾನವಾಗಿ ಪರಿಣಮಿಸಿದೆ. ಏಕೆಂದರೆ ಇನ್ನಿತರ ದೇಶಗಳಂತೆಯೇ ಕೆನ್ಯದಲ್ಲಿ ಸಹ ಬಹಳ ದೊಡ್ಡ ಬದಲಾವಣೆಯಾಗುತ್ತಿದೆ.

ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಗಳು, ಅನೇಕರು ತಮ್ಮ ಜೀವನರೀತಿಯನ್ನು ಬದಲಾಯಿಸಿಕೊಳ್ಳುವಂತೆ ಒತ್ತಾಯಿಸಿವೆ. ಸಾಮಾನ್ಯವಾಗಿ ಮನೆಯಲ್ಲೇ ಕೆಲಸಮಾಡುತ್ತಿದ್ದ ಸ್ತ್ರೀಯರು, ಈಗ ಆಫೀಸುಗಳಲ್ಲಿ ಕೆಲಸಮಾಡುತ್ತಾರೆ ಅಥವಾ ರಸ್ತೆಬದಿಗಳಲ್ಲಿ ಹಣ್ಣು, ತರಕಾರಿ, ಮೀನು ಹಾಗೂ ಹೆಣೆದ ಬುಟ್ಟಿಗಳನ್ನು ಮಾರುತ್ತಿರುತ್ತಾರೆ. ತಮ್ಮ ಕುಟುಂಬದ ಪೋಷಣೆಮಾಡುವ ಪ್ರಯತ್ನದಲ್ಲಿ ಪುರುಷರು ಬಹಳ ದೀರ್ಘ ಸಮಯದ ವರೆಗೆ ಹಾಗೂ ಬಹಳ ಪರಿಶ್ರಮದಿಂದ ಕೆಲಸಮಾಡುತ್ತಾರೆ. ಮಕ್ಕಳು ಸಹ ತಮ್ಮ ಚಿಕ್ಕ ಕೈಗಳಲ್ಲಿ ಹುರಿದ ಕಡಲೆಕಾಯಿಯ ಪೊಟ್ಟಣಗಳು ಹಾಗೂ ಬೇಯಿಸಿದ ಮೊಟ್ಟೆಗಳನ್ನು ಹಿಡಿದುಕೊಂಡು, ಅವುಗಳನ್ನು ಬೀದಿಗಳಲ್ಲಿ ಮಾರುತ್ತಾ ಇರುತ್ತಾರೆ. ಇದರಿಂದಾಗಿ ಹಗಲು ಹೊತ್ತಿನಲ್ಲಿ ಮನೆಯಲ್ಲಿರುವವರು ತೀರ ಕೊಂಚ ಜನ. ಈ ಪರಿಸ್ಥಿತಿಯಿಂದಾಗಿ ರಾಜ್ಯ ಸುವಾರ್ತೆಯ ಪ್ರಚಾರಕರು ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಯಿತು.

ಮನೆಗಳಿಂದ ಹೊರಗಿರುವಂತಹ ಜನರು, ದೈನಂದಿನ ಚಟುವಟಿಕೆಗಳಲ್ಲಿ ಅತ್ತಿತ್ತ ಹೋಗುವವರು, ಮಿತ್ರರು, ಸಂಬಂಧಿಕರು, ವ್ಯಾಪಾರಿಗಳು ಮತ್ತು ಜೊತೆಕೆಲಸಗಾರರ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಯೆಹೋವನ ಸಾಕ್ಷಿಗಳ ಸಭೆಗಳಿಗೆ ಸಲಹೆ ನೀಡಲಾಯಿತು. ಮತ್ತು ಸಹೋದರರು ಈ ಸಲಹೆಗೆ ಪ್ರತಿಕ್ರಿಯಿಸಿದರು. ಜನರನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆಯೋ ಅಲ್ಲೆಲ್ಲ ಅವರು ಸಾರಿದರು. (ಮತ್ತಾಯ 10:11) ಬೇರೆ ಬೇರೆ ಸ್ಥಳಗಳಲ್ಲಿ ಮಾಡಲ್ಪಡುವ ಈ ಪ್ರಯತ್ನಕ್ಕೆ ಪ್ರತಿಫಲವು ಸಿಕ್ಕಿದೆಯೋ? ಹೌದು, ಸಿಕ್ಕಿದೆ! ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.

ಸಂಬಂಧಿಕರು​—ನಮಗೆ ತುಂಬ ಹತ್ತಿರದಲ್ಲಿರುವ ನೆರೆಯವರು

ಕೆನ್ಯದ ರಾಜಧಾನಿಯಾಗಿರುವ ನೈರೋಬಿಯಲ್ಲಿ ಸುಮಾರು 30 ಲಕ್ಷ ನಿವಾಸಿಗಳಿದ್ದಾರೆ. ನಗರದ ಪೂರ್ವಭಾಗದಲ್ಲಿ ಒಬ್ಬ ನಿವೃತ್ತ ಸೈನ್ಯಾಧಿಕಾರಿಯು ವಾಸಿಸುತ್ತಿದ್ದನು. ಅವನಿಗೆ ಯೆಹೋವನ ಸಾಕ್ಷಿಗಳನ್ನು ಕಂಡರೆ ಆಗುತ್ತಿರಲಿಲ್ಲ. ಆದರೂ, ಅವನ ಸ್ವಂತ ಮಗನೇ ಯೆಹೋವನ ಸಾಕ್ಷಿಯಾಗಿದ್ದನು. ಒಮ್ಮೆ ಫೆಬ್ರವರಿ ತಿಂಗಳಲ್ಲಿ ಈ ನಿವೃತ್ತ ಅಧಿಕಾರಿಯು 160 ಕಿಲೊಮೀಟರ್‌ ದೂರವನ್ನು ಪ್ರಯಾಣಿಸಿ, ನಾಕೂರೂವಿನ ರಿಫ್ಟ್‌ ವ್ಯಾಲಿ ಎಂಬ ಪಟ್ಟಣದಲ್ಲಿದ್ದ ಆ ಮಗನ ಮನೆಗೆ ಹೋದನು. ಅವನು ಅಲ್ಲಿ ಹೋಗಿದ್ದಾಗ, ನಿತ್ಯಜೀವಕ್ಕೆ ನಡೆಸುವ ಜ್ಞಾನ* ಎಂಬ ಪುಸ್ತಕವನ್ನು ಮಗನು ಉಡುಗೊರೆಯಾಗಿ ನೀಡಿದನು. ತಂದೆಯು ಅದನ್ನು ಸ್ವೀಕರಿಸಿ, ಅಲ್ಲಿಂದ ಹಿಂದಿರುಗಿದನು.

ಮನೆಗೆ ಬಂದ ನಂತರ ಆ ಮಾಜಿ ಅಧಿಕಾರಿಯು ಪುಸ್ತಕವನ್ನು ತನ್ನ ಪತ್ನಿಗೆ ಕೊಟ್ಟನು. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಪುಸ್ತಕವಾಗಿದೆ ಎಂಬ ಅರಿವಿಲ್ಲದೆ ಅವಳು ಅದನ್ನು ಓದಲಾರಂಭಿಸಿದಳು. ನಿಧಾನವಾಗಿ ಬೈಬಲ್‌ ಸತ್ಯವು ಅವಳ ಹೃದಯವನ್ನು ಸ್ಪರ್ಶಿಸಲಾರಂಭಿಸಿತು ಮತ್ತು ಅವಳು ಆ ಪುಸ್ತಕದಲ್ಲಿದ್ದ ಮಾಹಿತಿಯನ್ನು ತನ್ನ ಗಂಡನಿಗೂ ತಿಳಿಸಿದಳು. ಕುತೂಹಲಗೊಂಡ ಅವನು ಈ ಪುಸ್ತಕವನ್ನು ಓದಲು ಆರಂಭಿಸಿದನು. ಇದರ ಪ್ರಕಾಶಕರು ಯಾರೆಂಬುದು ಅವರಿಗೆ ತಿಳಿದುಬಂದಾಗ, ಯೆಹೋವನ ಸಾಕ್ಷಿಗಳ ಕುರಿತು ತಮಗೆ ಸತ್ಯ ಸಂಗತಿಯು ತಿಳಿಸಲ್ಪಟ್ಟಿರಲಿಲ್ಲ ಎಂಬುದು ಅವರಿಗೆ ಮನದಟ್ಟಾಯಿತು. ಅವರು ಸ್ಥಳಿಕ ಸಾಕ್ಷಿಗಳನ್ನು ಸಂಪರ್ಕಿಸಿದರು ಮತ್ತು ಒಂದು ಬೈಬಲ್‌ ಅಭ್ಯಾಸವು ಆರಂಭಿಸಲ್ಪಟ್ಟಿತು. ತಾವಾಗಿಯೇ ಆ ಪುಸ್ತಕವನ್ನು ಓದಿದಾಗ, ಹೊಗೆಸೊಪ್ಪನ್ನು ಉಪಯೋಗಿಸುವುದು ಅಥವಾ ಮಾರಾಟಮಾಡುವುದು ಅಕ್ರೈಸ್ತವಾದದ್ದಾಗಿದೆ ಎಂಬುದು ಅವರಿಗೆ ಗೊತ್ತಾಯಿತು. (ಮತ್ತಾಯ 22:39; 2 ಕೊರಿಂಥ 7:1) ಆ ಕೂಡಲೆ ಅವರು ಹಿಂದೆಮುಂದೆ ನೋಡದೆ, ತಮ್ಮ ಅಂಗಡಿಯಲ್ಲಿದ್ದ ಎಲ್ಲ ಸಿಗರೇಟ್‌ಗಳನ್ನು ಎಸೆದುಬಿಟ್ಟರು. ಕೆಲವು ತಿಂಗಳುಗಳ ಬಳಿಕ ಅವರು ಅಸ್ನಾನಿತ ಪ್ರಚಾರಕರಾಗಲು ಅರ್ಹರಾದರು ಮತ್ತು ಬೇಗನೆ ಜಿಲ್ಲಾ ಅಧಿವೇಶನವೊಂದರಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡರು.

ಕಸದಲ್ಲಿ ನಿಕ್ಷೇಪ

ರಾಜಧಾನಿ ಜಿಲ್ಲೆಯ ಕೆಲವು ಭಾಗಗಳಲ್ಲಿ, ಒಡ್ಡೊಡ್ಡಾಗಿ ಹಬ್ಬಿಕೊಂಡಿರುವ ಹಳ್ಳಿಗಳಿದ್ದು, ಇವುಗಳಲ್ಲಿ ಲಕ್ಷಾಂತರ ಮಂದಿ ವಾಸಿಸುತ್ತಿದ್ದಾರೆ. ಮಣ್ಣು, ಮರ, ಲೋಹದ ಚೂರುಗಳು, ಅಥವಾ ಜಿಂಕ್‌ ಷೀಟ್‌ಗಳಿಂದ ಕಟ್ಟಲ್ಪಟ್ಟಿರುವ ಮನೆಗಳು ಸಾಲುಸಾಲಾಗಿ ಇರುವುದನ್ನು ಒಬ್ಬನು ನೋಡಸಾಧ್ಯವಿದೆ. ಉದ್ಯಮಗಳಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಕೆಲಸವು ವಿರಳವಾಗಿರುವಾಗ, ಜನರು ತಮ್ಮದೇ ಆದ ಯಾವುದಾದರೊಂದು ಕೆಲಸವನ್ನು ಶುರುಮಾಡುತ್ತಾರೆ. ಜೂಆ ಕಾಲೀ (“ವಿಪರೀತ ಬಿಸಿಲು” ಎಂಬುದಕ್ಕಾಗಿರುವ ಸ್ವಾಹೀಲಿ ಶಬ್ದ) ಕೆಲಸಗಾರರು ಸುಡು ಬಿಸಿಲಿನಲ್ಲಿ ಕೆಲಸಮಾಡುತ್ತಿರುತ್ತಾರೆ; ಅವರು ಕಾರಿನ ಹಳೆಯ ಟೈಯರ್‌ಗಳಿಂದ ಪಾದರಕ್ಷೆಗಳನ್ನು ಮಾಡುತ್ತಿರುತ್ತಾರೆ ಅಥವಾ ಉಪಯೋಗಿಸಿ ಎಸೆಯಲ್ಪಟ್ಟಿರುವ ಡಬ್ಬಗಳಿಂದ ಸೀಮೆಎಣ್ಣೆ ದೀಪಗಳನ್ನು ಮಾಡುತ್ತಿರುತ್ತಾರೆ. ಇತರರು ತಿಪ್ಪೆಯಲ್ಲಿ ಹಾಗೂ ಕಸದ ತೊಟ್ಟಿಗಳಲ್ಲಿ, ಪುನರುಪಯೋಗಕ್ಕಾಗಿ ಕಾಗದ, ಡಬ್ಬಗಳು, ಹಾಗೂ ಬಾಟಲಿಗಳನ್ನು ಹುಡುಕುತ್ತಿರುತ್ತಾರೆ.

ಕಸದಲ್ಲಿ ನಿಕ್ಷೇಪವು ಇರಸಾಧ್ಯವಿದೆಯೋ? ಹೌದು! ಒಬ್ಬ ಸಹೋದರನು ಜ್ಞಾಪಿಸಿಕೊಳ್ಳುವುದು: “ಗಟ್ಟಿಮುಟ್ಟಾಗಿದ್ದು, ಕೊಳಕಾಗಿದ್ದು, ಒರಟಾಗಿ ಕಾಣುತ್ತಿದ್ದ ಒಬ್ಬ ವ್ಯಕ್ತಿಯು, ಹಳೆಯ ವಾರ್ತಾಪತ್ರಿಕೆಗಳು ಮತ್ತು ಪತ್ರಿಕೆಗಳು ತುಂಬಿದ್ದ ಒಂದು ದೊಡ್ಡ ಪ್ಲ್ಯಾಸ್ಟಿಕ್‌ ಚೀಲವನ್ನು ಹೊತ್ತುಕೊಂಡು ನಮ್ಮ ಅಸೆಂಬ್ಲಿ ಹಾಲ್‌ನ ಮೈದಾನದೊಳಗೆ ಬಂದನು. ತನ್ನ ಹೆಸರು ವಿಲಿಯಮ್‌ ಎಂದು ಅವನು ನನಗೆ ಹೇಳಿದ ಬಳಿಕ, ‘ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳು ನಿನ್ನ ಬಳಿ ಇವೆಯೋ?’ ಎಂದು ನನ್ನನ್ನು ಪ್ರಶ್ನಿಸಿದನು. ಅವನ ಉದ್ದೇಶವೇನು ಎಂಬುದನ್ನು ಅರಿಯದ ನಾನು ಸ್ವಲ್ಪ ಹೆದರಿದೆ. ಕಾವಲಿನಬುರುಜು ಪತ್ರಿಕೆಯ ಐದು ಪ್ರತಿಗಳನ್ನು ನಾನು ಅವನಿಗೆ ತೋರಿಸಿದಾಗ, ಒಂದರ ನಂತರ ಇನ್ನೊಂದರಂತೆ ಅವುಗಳನ್ನು ನೋಡಿ ಅವನು ಹೇಳಿದ್ದು: ‘ಇವುಗಳನ್ನೆಲ್ಲ ನಾನು ತೆಗೆದುಕೊಂಡುಹೋಗುತ್ತೇನೆ.’ ಆಶ್ಚರ್ಯಚಕಿತನಾದ ನಾನು ನನ್ನ ರೂಮ್‌ಗೆ ಹೋಗಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ * ಎಂಬ ಪುಸ್ತಕವನ್ನು ತೆಗೆದುಕೊಂಡು ಬಂದೆ. ನಾನು ಅವನಿಗೆ ಪ್ರಮೋದವನದ ಚಿತ್ರವನ್ನು ತೋರಿಸಿ, ನಾವು ಜನರೊಂದಿಗೆ ಉಚಿತವಾಗಿ ಬೈಬಲ್‌ ಅಭ್ಯಾಸವನ್ನು ಮಾಡುತ್ತೇವೆ ಎಂದು ವಿವರಿಸಿದೆ. ತದನಂತರ ನಾನು ಸಲಹೆ ನೀಡಿದ್ದು: ‘ವಿಲಿಯಮ್‌, ಒಂದುವೇಳೆ ನಾಳೆ ನೀನು ಬರುವುದಾದರೆ, ನಾಳೆಯೇ ನಾವು ಅಭ್ಯಾಸವನ್ನು ಆರಂಭಿಸಬಹುದು.’ ಮರುದಿನವೇ ಅವನು ಅಭ್ಯಾಸಕ್ಕಾಗಿ ಬಂದನು!

“ಒಂದು ಭಾನುವಾರ ಅವನು ಮೊದಲ ಬಾರಿ ಕೂಟಕ್ಕೆ ಬಂದನು. ಆ ದಿನ ನಾನು ಬಹಿರಂಗ ಭಾಷಣವನ್ನು ಕೊಡುತ್ತಿದ್ದೆ. ವಿಲಿಯಮ್‌ ಸಭಾಗೃಹದ ಒಳಗೆ ಬಂದು, ಸಭಿಕರ ಮೇಲೆ ನೋಟ ಹರಿಸಿ, ನಾನು ವೇದಿಕೆಯ ಮೇಲಿರುವುದನ್ನು ನೋಡಿ, ಸಭಾಗೃಹದಿಂದ ಹೊರಗೆ ಓಡಿಬಿಟ್ಟನು. ನೀನು ಹಾಗೇಕೆ ಮಾಡಿದಿ ಎಂದು ನಂತರ ನಾನು ಅವನನ್ನು ಕೇಳಿದೆ. ನಾಚಿಕೆಯಿಂದ ಅವನು ಉತ್ತರಿಸಿದ್ದು: ‘ಅಲ್ಲಿದ್ದವರೆಲ್ಲರು ತುಂಬ ಶುಚಿಯಾಗಿದ್ದರು. ನನಗೆ ತುಂಬ ನಾಚಿಕೆಯಾಯಿತು.’

“ವಿಲಿಯಮ್‌ ತನ್ನ ಅಭ್ಯಾಸವನ್ನು ಮುಂದುವರಿಸಿದಂತೆ, ಬೈಬಲ್‌ ಸತ್ಯವು ಅವನ ಜೀವಿತವನ್ನು ಬದಲಾಯಿಸಲಾರಂಭಿಸಿತು. ಅವನು ಸ್ನಾನಮಾಡಿ, ತನ್ನ ಕೂದಲನ್ನು ಕತ್ತರಿಸಿ, ಸ್ವಚ್ಛವಾದ ಹಾಗೂ ನೀಟಾದ ಬಟ್ಟೆಗಳನ್ನು ಧರಿಸಿಕೊಳ್ಳಲಾರಂಭಿಸಿದನು ಮತ್ತು ಸ್ವಲ್ಪ ಸಮಯದಲ್ಲೇ ಕ್ರಮವಾಗಿ ಕೂಟಗಳಿಗೆ ಹಾಜರಾಗತೊಡಗಿದನು. ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವು ಬಿಡುಗಡೆಮಾಡಲ್ಪಟ್ಟಾಗ, ನಾವು ಅದನ್ನು ಉಪಯೋಗಿಸಿ ಅಭ್ಯಾಸಮಾಡಲಾರಂಭಿಸಿದೆವು. ಈ ಮಧ್ಯೆ, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಅವನು ಎರಡು ಭಾಷಣಗಳನ್ನು ಕೊಟ್ಟಿದ್ದನು ಮತ್ತು ಅಸ್ನಾನಿತ ಪ್ರಚಾರಕನೂ ಆಗಿದ್ದನು. ವಿಶೇಷ ಸಮ್ಮೇಳನ ದಿನದಲ್ಲಿ ಅವನು ದೀಕ್ಷಾಸ್ನಾನವನ್ನು ಪಡೆದುಕೊಂಡಾಗ, ನನ್ನ ಆತ್ಮಿಕ ಸಹೋದರನೋಪಾದಿ ಅವನನ್ನು ಸ್ವಾಗತಿಸಲು ನಾನು ತುಂಬ ಪುಳಕಿತನಾಗಿದ್ದೆ.”

ಮೊದಲ ಬಾರಿಗೆ ವಿಲಿಯಮ್‌ ಕಾವಲಿನಬುರುಜು ಪತ್ರಿಕೆಯ ಮೌಲ್ಯವನ್ನು ಎಲ್ಲಿ ಕಂಡುಕೊಂಡನು? “ಕಸದಲ್ಲಿ ಎಸೆಯಲ್ಪಟ್ಟಿದ್ದ ಕಾಗದಗಳ ಮಧ್ಯೆ ಕೆಲವು ಸಂಚಿಕೆಗಳನ್ನು ನಾನು ಕಂಡುಕೊಂಡೆ” ಎಂದು ಅವನು ಹೇಳುತ್ತಾನೆ. ಹೌದು, ಇಂತಹ ಅನಿರೀಕ್ಷಿತ ರೀತಿಯಲ್ಲಿ ಅವನು ನಿಕ್ಷೇಪವನ್ನು ಕಂಡುಕೊಂಡನು!

ಕೆಲಸದ ಸ್ಥಳದಲ್ಲಿ ಸಾಕ್ಷಿನೀಡುವುದು

ನಮ್ಮ ಕೆಲಸದ ಸ್ಥಳದಲ್ಲಿ ಅನೌಪಚಾರಿಕ ಸಾಕ್ಷಿಯನ್ನು ನೀಡಲಿಕ್ಕಾಗಿ ಸಿಗುವ ಅವಕಾಶಗಳನ್ನು ನಾವು ಯಾವಾಗಲೂ ಸದುಪಯೋಗಿಸಿಕೊಳ್ಳುತ್ತೇವೋ? ನೈರೋಬಿಯ ಸಭೆಯೊಂದರಲ್ಲಿ ಹಿರಿಯನಾಗಿರುವ ಜೇಮ್ಸ್‌ಗೆ ಈ ರೀತಿಯಲ್ಲೇ ಬೈಬಲ್‌ ಸತ್ಯವು ಪರಿಚಯಿಸಲ್ಪಟ್ಟಿತು. ಮತ್ತು ಅವನು ಸಹ ಇತರರಿಗೆ ಸಾಕ್ಷಿನೀಡಲಿಕ್ಕಾಗಿ ಈ ವಿಧಾನವನ್ನು ಉಪಯೋಗಿಸುವುದರಲ್ಲಿ ತುಂಬ ನಿಪುಣನಾಗಿದ್ದಾನೆ. ಉದಾಹರಣೆಗೆ, ಒಮ್ಮೆ ಜೊತೆ ಕೆಲಸಗಾರನೊಬ್ಬನು ಆಫೀಸಿನೊಳಕ್ಕೆ ಬರುವಾಗ “ಯೇಸು ರಕ್ಷಿಸುತ್ತಾನೆ” ಎಂಬ ನುಡಿಗಳಿರುವ ಒಂದು ಬ್ಯಾಡ್ಜ್‌ ಅನ್ನು ಧರಿಸಿಕೊಂಡಿರುವುದನ್ನು ಜೇಮ್ಸ್‌ ನೋಡಿದನು. ಸೌವಾರ್ತಿಕನಾಗಿದ್ದ ಫಿಲಿಪ್ಪನನ್ನು ಅನುಕರಿಸುತ್ತಾ, ಜೇಮ್ಸ್‌ ತನ್ನ ಜೊತೆ ಕೆಲಸಗಾರನಿಗೆ ಕೇಳಿದ್ದು: “ಆ ಪದಗಳ ಅರ್ಥ ನಿನಗೆ ನಿಜವಾಗಿಯೂ ತಿಳಿದಿದೆಯೊ?” (ಅ. ಕೃತ್ಯಗಳು 8:30) ಈ ಪ್ರಶ್ನೆಯು ಒಂದು ಒಳ್ಳೆಯ ಚರ್ಚೆಗೆ ದಾರಿಮಾಡಿಕೊಟ್ಟಿತು. ಒಂದು ಬೈಬಲ್‌ ಅಭ್ಯಾಸವು ಆರಂಭಿಸಲ್ಪಟ್ಟಿತು ಮತ್ತು ಸಮಯಾನಂತರ ಅವನು ದೀಕ್ಷಾಸ್ನಾನ ಪಡೆದುಕೊಂಡನು. ಇತರರಿಗೂ ಸಾಕ್ಷಿನೀಡುವಾಗ ಜೇಮ್ಸ್‌ ಯಶಸ್ಸನ್ನು ಪಡೆದಿದ್ದಾನೋ? ಅವನೇ ವಿವರಿಸಲಿ:

“ನಾನು ಮತ್ತು ಟಾಮ್‌ ಒಂದೇ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದೆವು. ನಾವಿಬ್ಬರೂ ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ಒಂದು ದಿನ ಬೆಳಗ್ಗೆ, ಬಸ್ಸಿನಲ್ಲಿ ನಾವಿಬ್ಬರೂ ಒಟ್ಟಿಗೆ ಕುಳಿತುಕೊಳ್ಳುವಂತಹ ಸಂದರ್ಭ ಸಿಕ್ಕಿತು. ನಮ್ಮ ಪುಸ್ತಕಗಳಲ್ಲಿ ಒಂದನ್ನು ನಾನು ಓದುತ್ತಿದ್ದೆ. ಟಾಮ್‌ ಸಹ ಅದರ ಮೇಲೆ ನೋಟಹರಿಸಲು ಅನುಕೂಲವಾಗುವಂತಹ ರೀತಿಯಲ್ಲಿ ನಾನು ಪುಸ್ತಕವನ್ನು ಹಿಡಿದುಕೊಂಡಿದ್ದೆ. ನಾನು ನಿರೀಕ್ಷಿಸಿದ್ದಂತೆ, ಈ ಪುಸ್ತಕವು ಅವನ ಗಮನವನ್ನು ಸೆಳೆಯಿತು ಮತ್ತು ಸಂತೋಷದಿಂದ ನಾನು ಆ ಪುಸ್ತಕವನ್ನು ಅವನಿಗೆ ಓದಲು ಕೊಟ್ಟೆ. ತಾನು ಓದಿದಂತಹ ವಿಷಯದಿಂದ ಅವನು ತುಂಬ ಪ್ರಭಾವಿತನಾದನು ಮತ್ತು ಬೈಬಲ್‌ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡನು. ಈಗ ಅವನು ಹಾಗೂ ಅವನ ಪತ್ನಿಯು ಯೆಹೋವನ ದೀಕ್ಷಾಸ್ನಾನಿತ ಸೇವಕರಾಗಿದ್ದಾರೆ.”

ಜೇಮ್ಸ್‌ ಮುಂದುವರಿಸುತ್ತಾ ಹೇಳುವುದು: “ನಮ್ಮ ಕಂಪೆನಿಯಲ್ಲಿ ಮಧ್ಯಾಹ್ನದ ಊಟದ ಅವಧಿಯಲ್ಲಿ ತುಂಬ ಆಸಕ್ತಿಕರ ಸಂಭಾಷಣೆಗಳು ನಡೆಸಲ್ಪಡುತ್ತವೆ. ಇಂತಹ ಬೇರೆ ಬೇರೆ ಸಂದರ್ಭಗಳಲ್ಲೇ ನಾನು ಎಫ್ರಾಯಿಮ್‌ ಮತ್ತು ವಾಲ್ಟರ್‌ ಎಂಬ ವ್ಯಕ್ತಿಗಳನ್ನು ಸಂಧಿಸಿದೆ. ನಾನೊಬ್ಬ ಯೆಹೋವನ ಸಾಕ್ಷಿಯೆಂಬುದು ಇವರಿಬ್ಬರಿಗೂ ಗೊತ್ತಿತ್ತು. ಯೆಹೋವನ ಸಾಕ್ಷಿಗಳ ವಿರುದ್ಧ ಇಷ್ಟೊಂದು ವಿರೋಧ ಏಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಎಫ್ರಾಯಿಮ್‌ ಆಸಕ್ತನಾಗಿದ್ದನು. ಸಾಕ್ಷಿಗಳು ಹಾಗೂ ಇತರ ಧರ್ಮಗಳವರ ನಡುವಿನ ಭಿನ್ನತೆಗಳ ಕುರಿತು ವಾಲ್ಟರ್‌ನಿಗೆ ಪ್ರಶ್ನೆಗಳಿದ್ದವು. ನಾನು ನೀಡಿದ ಶಾಸ್ತ್ರೀಯ ಉತ್ತರಗಳು ಅವರಿಗೆ ತೃಪ್ತಿಕರವಾಗಿದ್ದವು ಮತ್ತು ಅವರು ಅಭ್ಯಾಸಮಾಡಲು ಒಪ್ಪಿಕೊಂಡರು. ಎಫ್ರಾಯಿಮ್‌ ಅತಿ ಬೇಗನೆ ಪ್ರಗತಿಯನ್ನು ಮಾಡಿದನು. ಸಕಾಲದಲ್ಲಿ, ಅವನು ಹಾಗೂ ಅವನ ಪತ್ನಿಯು ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡರು. ಈಗ ಅವನು ಒಬ್ಬ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದಾನೆ ಮತ್ತು ಅವನ ಪತ್ನಿಯು ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಮಾಡುತ್ತಿದ್ದಾಳೆ. ಆದರೆ, ವಾಲ್ಟರ್‌ ಎಷ್ಟೊಂದು ವಿರೋಧವನ್ನು ಎದುರಿಸಿದನೆಂದರೆ, ಅವನು ತನ್ನ ಅಭ್ಯಾಸದ ಪುಸ್ತಕವನ್ನೇ ಎಸೆದುಬಿಟ್ಟನು. ಆದರೆ ನಾನು ಪಟ್ಟುಹಿಡಿದು ಮುಂದುವರಿದಿದ್ದರಿಂದ, ಅವನು ಪುನಃ ಅಭ್ಯಾಸ ಮಾಡತೊಡಗಿದನು. ಈಗ ಅವನು ಸಹ ಹಿರಿಯನೋಪಾದಿ ಸೇವೆಮಾಡುವ ಸುಯೋಗದಲ್ಲಿ ಆನಂದಿಸುತ್ತಿದ್ದಾನೆ.” ತನ್ನ ಕೆಲಸದ ಸ್ಥಳದಲ್ಲಿ ಅನೌಪಚಾರಿಕ ಸಾಕ್ಷಿಯನ್ನು ನೀಡಲಿಕ್ಕಾಗಿ ಸಿಕ್ಕಿದ ಅವಕಾಶವನ್ನು ಜೇಮ್ಸ್‌ ಉಪಯೋಗಿಸಿಕೊಂಡದ್ದರಿಂದ, ಒಟ್ಟಿಗೆ 11 ಮಂದಿ ನಿಜ ಕ್ರೈಸ್ತರಾಗಿ ಪರಿಣಮಿಸಿದ್ದಾರೆ.

ತುಂಬ ಆಶ್ಚರ್ಯಕರವಾದ ಪರಿಣಾಮ

ವಿಕ್ಟೋರಿಯ ಸರೋವರದ ತೀರದಲ್ಲಿರುವ ಒಂದು ಚಿಕ್ಕ ಹಳ್ಳಿಯಲ್ಲಿ, ಸ್ನೇಹಿತರು ಮತ್ತು ಸಂಬಂಧಿಕರು ಒಂದು ಶವಸಂಸ್ಕಾರಕ್ಕಾಗಿ ಒಟ್ಟುಗೂಡಿದ್ದರು. ಅಲ್ಲಿ ಶೋಕಿಸುತ್ತಿದ್ದವರ ನಡುವೆ ಒಬ್ಬ ವೃದ್ಧ ಸಾಕ್ಷಿಯೂ ಇದ್ದನು. ಅವನು ಡಾಲೀ ಎಂಬ ಹೆಸರಿನ ಶಾಲಾ ಶಿಕ್ಷಕಿಯ ಬಳಿಗೆ ಹೋಗಿ, ಮೃತರ ಸ್ಥಿತಿಯ ಕುರಿತಾಗಿ ಹಾಗೂ ಮರಣವನ್ನು ಶಾಶ್ವತವಾಗಿ ತೆಗೆದುಹಾಕಲಿರುವ ದೇವರ ಉದ್ದೇಶದ ಕುರಿತಾಗಿ ವಿವರಿಸಿದನು. ಅವಳು ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಿದ್ದರಿಂದ, ಅವನು ಅವಳಿಗೆ ಭರವಸೆ ನೀಡಿದ್ದು: “ನಿಮ್ಮ ಸ್ವಂತ ಊರಿಗೆ ನೀವು ಹಿಂದಿರುಗಿದಾಗ, ನಮ್ಮ ಮಿಷನೆರಿಗಳಲ್ಲಿ ಒಬ್ಬರು ನಿಮ್ಮನ್ನು ಭೇಟಿಯಾಗಿ, ನಿಮಗೆ ಬೈಬಲಿನ ಕುರಿತು ಕಲಿಸುವರು.”

ಡಾಲೀಯ ಸ್ವಂತ ಊರು, ಕೆನ್ಯದಲ್ಲೇ ಇರುವ ಮೂರನೆಯ ಅತಿ ದೊಡ್ಡ ಪಟ್ಟಣವಾಗಿತ್ತು. ಆ ಸಮಯದಲ್ಲಿ ಕೇವಲ ನಾಲ್ಕು ಮಂದಿ ಸಾಕ್ಷಿ ಮಿಷನೆರಿಗಳು ಮಾತ್ರ ಅಲ್ಲಿ ಸೇವೆಮಾಡುತ್ತಿದ್ದರು. ವಾಸ್ತವದಲ್ಲಿ ಈ ವೃದ್ಧ ಸಹೋದರನು, ಡಾಲೀಯನ್ನು ಭೇಟಿಯಾಗುವಂತೆ ಇಲ್ಲಿನ ಯಾವುದೇ ಮಿಷನೆರಿಗೆ ತಿಳಿಸಲಿಲ್ಲ. ಇದೇ ರೀತಿ ಆಗುತ್ತದೆಂಬ ಪೂರ್ಣ ಭರವಸೆಯು ಅವನಿಗಿತ್ತು. ಅವನು ಹೇಳಿದ್ದಂತೆಯೇ ಆಯಿತು! ಸ್ವಲ್ಪ ಸಮಯದಲ್ಲೇ ಒಬ್ಬ ಮಿಷನೆರಿ ಸಹೋದರಿಯು ಡಾಲೀಯನ್ನು ಭೇಟಿಯಾಗಿ, ಅವಳೊಂದಿಗೆ ಅಭ್ಯಾಸವನ್ನು ಆರಂಭಿಸಿದಳು. ಡಾಲೀ ಈಗ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಾಳೆ ಮತ್ತು ಅವಳ ಚಿಕ್ಕ ಮಗಳು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಭಾಗವಹಿಸಿದ್ದಾಳೆ. ಅಷ್ಟುಮಾತ್ರವಲ್ಲ, ಅವಳ ಇಬ್ಬರು ಪುತ್ರರು ಸಹ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಪಯನೀಯರ್‌ ಸೇವಾ ಶಾಲೆಗೆ ಹಾಜರಾಗುವ ಆನಂದವನ್ನೂ ಅವಳು ಅನುಭವಿಸಿದ್ದಾಳೆ.

ಅಭಿವೃದ್ಧಿಯಿಂದ ಉಂಟಾಗಿರುವ ಆವಶ್ಯಕತೆಗಳನ್ನು ಪೂರೈಸುವುದು

ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ಕೊಡಲ್ಪಟ್ಟಿರುವ ಮಹತ್ವದಿಂದಾಗಿ, ಕೆನ್ಯದಲ್ಲಿ ಸಾವಿರಾರು ಮಂದಿಗೆ ಸುವಾರ್ತೆಯನ್ನು ಕೇಳಿಸಿಕೊಳ್ಳುವ ಅವಕಾಶವು ಸಿಕ್ಕಿದೆ. ಈಗ 15,000ಕ್ಕಿಂತಲೂ ಹೆಚ್ಚು ಪ್ರಚಾರಕರು ಈ ಸರ್ವಪ್ರಮುಖ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದಾರೆ. ಮತ್ತು ಕಳೆದ ವರ್ಷ 41,000ಕ್ಕಿಂತಲೂ ಹೆಚ್ಚು ಮಂದಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗಿದ್ದರು. ಅನೇಕವೇಳೆ ರಾಜ್ಯ ಪ್ರಚಾರಕರ ಸಂಖ್ಯೆಗೆ ಹೋಲಿಸುವಾಗ ಕೆನ್ಯದಾದ್ಯಂತ ಕೂಟಗಳಿಗೆ ಹಾಜರಾಗುವವರ ಸಂಖ್ಯೆಯು ಇಮ್ಮಡಿಯಾಗಿರುತ್ತದೆ. ಇದರಿಂದಾಗಿ, ರಾಜ್ಯ ಸಭಾಗೃಹಗಳ ಆವಶ್ಯಕತೆ ಇನ್ನೂ ಹೆಚ್ಚಾಗಿದೆ.

ಪ್ರಮುಖ ನಗರಗಳಲ್ಲಿ ಹಾಗೂ ಬಹುದೂರದ ಕ್ಷೇತ್ರಗಳಲ್ಲಿ ಸಹ ರಾಜ್ಯ ಸಭಾಗೃಹಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ಒಂದು, ನೈರೋಬಿಯ ಈಶಾನ್ಯ ದಿಕ್ಕಿಗೆ ಸುಮಾರು 320 ಕಿಲೊಮೀಟರುಗಳಷ್ಟು ದೂರದಲ್ಲಿರುವ ಸಾಂಬೂರೂ ಪಟ್ಟಣದ ರಾಜ್ಯ ಸಭಾಗೃಹವಾಗಿದೆ. 1934ರಲ್ಲಿ, ಈ ಪಟ್ಟಣಕ್ಕೆ ಮಾರಾಲಾಲ್‌ ಎಂಬ ಹೆಸರು ಕೊಡಲ್ಪಟ್ಟಿತು, ಏಕೆಂದರೆ ಅಲ್ಲಿ ಉಪಯೋಗಿಸಲ್ಪಟ್ಟಿದ್ದ ಪ್ರಪ್ರಥಮ ಜಿಂಕ್‌ ಷೀಟ್‌ ಸೂರ್ಯನ ಬೆಳಕಿನಲ್ಲಿ ಮಿಂಚುತ್ತಿತ್ತು. ಅರುವತ್ತೆರಡು ವರ್ಷಗಳ ನಂತರ, ಮಾರಾಲಾಲ್‌ನಲ್ಲಿ ಜಿಂಕ್‌ ಷೀಟ್‌ನ ಚಾವಣಿಯಿರುವ ಇನ್ನೊಂದು ಕಟ್ಟಡವನ್ನು ಕಟ್ಟಿಸಲಾಯಿತು. ಸಾಂಬೂರೂ ಭಾಷೆಯಲ್ಲಿ ಇದರ ಅರ್ಥ “ಥಳಥಳಿಸು” ಎಂದಾಗಿದೆ. ಅರುವತ್ತೆರಡು ವರ್ಷಗಳ ಬಳಿಕ, ಮಾರಾಲಾಲ್‌ನಲ್ಲಿ ಜಿಂಕ್‌ ಷೀಟ್‌ ಛಾವಣಿಯ ಇನ್ನೊಂದು ಕಟ್ಟಡವನ್ನು ಕಟ್ಟಲಾಯಿತು. ಇದು ಸಹ “ಹೊಳೆಯುತ್ತದೆ” ಮತ್ತು “ಮಿನುಗುತ್ತದೆ,” ಏಕೆಂದರೆ ಇದು ಸತ್ಯಾರಾಧನೆಗಾಗಿರುವ ಸ್ಥಳಿಕ ಸ್ಥಳವಾಗಿದೆ.

ಕೆನ್ಯದ ಈ ಗ್ರಾಮೀಣ ಪ್ರದೇಶದಲ್ಲಿ ಮೊಟ್ಟಮೊದಲ ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ, ಅಲ್ಲಿನ 15 ಮಂದಿ ಪ್ರಚಾರಕರು ತುಂಬ ಪರಿಶ್ರಮಿಸಿದರು. ಹಣಕಾಸು ತುಂಬ ಮಿತವಾಗಿತ್ತು. ಆದುದರಿಂದ ಸಹೋದರರು ಸ್ಥಳಿಕ ವಸ್ತುಗಳನ್ನೇ ಅವಲಂಬಿಸಬೇಕಾಗಿತ್ತು. ಅವರು ಕೆಮ್ಮಣ್ಣನ್ನು ನೀರಿನೊಂದಿಗೆ ಬೆರಸಿ, ನೇರವಾಗಿ ನಿಲ್ಲಿಸಲ್ಪಟ್ಟಿರುವ ಕಂಬಗಳ ನಡುವೆ ಅದನ್ನು ತುರುಕಿ ಗೋಡೆಗಳನ್ನು ಕಟ್ಟಿದರು. ಆ ಗೋಡೆಗಳನ್ನು ಸಮಗೊಳಿಸಿ, ಸೆಗಣಿ ಹಾಗೂ ಗೊಬ್ಬರಗಳ ಮಿಶ್ರಣದಿಂದ ಸಾರಿಸಲಾಯಿತು. ಈ ವಿಧಾನದಿಂದ ಗೋಡೆಗಳು ಗಟ್ಟಿಗೊಳಿಸಲ್ಪಟ್ಟು, ಅನೇಕ ವರ್ಷಗಳ ವರೆಗೆ ಉಳಿದವು.

ಕಟ್ಟಡಕ್ಕೆ ಬೇಕಾಗಿದ್ದ ತೊಲೆಗಳನ್ನು ಪಡೆದುಕೊಳ್ಳಲಿಕ್ಕಾಗಿ ಸಹೋದರರು ಮರಗಳನ್ನು ಕಡಿಯಲು ಅನುಮತಿ ಪಡೆದುಕೊಂಡರು. ಆದರೆ ಸಮೀಪದ ಕಾಡು ಸುಮಾರು ಹತ್ತು ಕಿಲೊಮೀಟರುಗಳಷ್ಟು ದೂರವಿತ್ತು. ಸಹೋದರ ಸಹೋದರಿಯರು ಕಾಡಿಗೆ ನಡೆದುಕೊಂಡು ಹೋಗಿ, ಮರಗಳನ್ನು ಕಡಿದು, ಪರಿಷ್ಕರಿಸಿ, ಆ ತೊಲೆಗಳನ್ನು ನಿರ್ಮಾಣದ ಸ್ಥಳಕ್ಕೆ ಕೊಂಡೊಯ್ಯಬೇಕಾಗಿತ್ತು. ಒಂದು ಸಲ, ಸಹೋದರರು ಕಾಡಿನಿಂದ ಹಿಂದಿರುಗುತ್ತಿದ್ದಾಗ ಪೊಲೀಸರು ಅವರನ್ನು ತಡೆದರು ಮತ್ತು ಅವರ ಅನುಮತಿಯು ನಿಷ್ಪ್ರಯೋಜಕವಾದದ್ದಾಗಿದೆ ಎಂದು ಅವರು ವಾದಿಸಿದರು. ನೀನು ಮರಗಳನ್ನು ಕಡಿದುಹಾಕಿದ್ದರಿಂದ ನಿನ್ನನ್ನು ಬಂಧಿಸಲಾಗಿದೆ ಎಂದು ಪೊಲೀಸನು ಒಬ್ಬ ವಿಶೇಷ ಪಯನೀಯರನಿಗೆ ಹೇಳಿದನು. ಆ ಸಮುದಾಯಕ್ಕೆ ಹಾಗೂ ಪೊಲೀಸರಿಗೆ ತುಂಬ ಪರಿಚಯವಿದ್ದ ಒಬ್ಬ ಸ್ಥಳಿಕ ಸಹೋದರಿಯು ಪೊಲೀಸರಿಗೆ ಹೀಗೆ ಹೇಳಿದಳು: “ಒಂದುವೇಳೆ ನೀವು ನಮ್ಮ ಸಹೋದರನನ್ನು ಬಂಧಿಸುವಲ್ಲಿ, ನೀವು ನಮ್ಮೆಲ್ಲರನ್ನೂ ಬಂಧಿಸಬೇಕು. ಏಕೆಂದರೆ ನಾವೆಲ್ಲರೂ ಸೇರಿಕೊಂಡು ಮರಗಳನ್ನು ಕಡಿದುಹಾಕಿದೆವು!” ಆಗ ಅಧಿಕಾರಿಯು ಅವರೆಲ್ಲರನ್ನು ಹೋಗಲುಬಿಟ್ಟನು.

ಕಾಡಿನಲ್ಲಿ ವನ್ಯಮೃಗಗಳೂ ಇದ್ದವು. ಆದುದರಿಂದ, ಅಲ್ಲಿ ನಡೆದಾಡುವುದು ತುಂಬ ಅಪಾಯಕರವಾಗಿತ್ತು. ಒಂದು ದಿನ ಒಬ್ಬ ಸಹೋದರಿಯು ಒಂದು ಮರವನ್ನು ಕಡಿದಳು. ಅದು ನೆಲಕ್ಕೆ ಬೀಳುತ್ತಿದ್ದಾಗ, ಒಂದು ಪ್ರಾಣಿಯು ಅಲ್ಲಿಂದ ನೆಗೆದು ಓಡಿಹೋದದ್ದನ್ನು ಅವಳು ನೋಡಿದಳು. ಕಂದುಹಳದಿ ಬಣ್ಣ ಛಾಯೆಯನ್ನು ಅವಳು ನೋಡಿದ್ದರಿಂದ ಅದು ಒಂದು ಎರಳೆಯಾಗಿರಬಹುದೆಂದು ನೆನಸಿದಳು. ನಂತರ ಅದರ ಹೆಜ್ಜೆಗುರುತುಗಳನ್ನು ನೋಡಿದಾಗ, ಅದು ಒಂದು ಸಿಂಹವಾಗಿತ್ತು ಎಂಬುದು ಅವಳಿಗೆ ಗೊತ್ತಾಯಿತು! ಇಂತಹ ಅಪಾಯಗಳನ್ನು ಎದುರಿಸಿದರೂ, ಅಲ್ಲಿನ ಸಹೋದರರು ರಾಜ್ಯ ಸಭಾಗೃಹವನ್ನು ಪೂರ್ಣಗೊಳಿಸಿದರು ಮತ್ತು ಇದು ಯೆಹೋವನಿಗೆ ಸ್ತುತಿಯನ್ನು ತರುವ “ಥಳಥಳಿಸುವ” ಮೂಲವಾಗಿದೆ.

1963ರ ಫೆಬ್ರವರಿ 1, ಕೆನ್ಯದ ದೇವಪ್ರಭುತ್ವ ಇತಿಹಾಸದಲ್ಲೇ ಅತಿ ಗಮನಾರ್ಹ ದಿನವಾಗಿತ್ತು. ಆ ದಿನ, 7.4 ಚದರ ಮೀಟರುಗಳ ಒಂದು ಕೋಣೆಯಲ್ಲಿ ಮೊದಲ ಬ್ರಾಂಚ್‌ ಆಫೀಸು ಆರಂಭಿಸಲ್ಪಟ್ಟಿತು. 1997ರ ಅಕ್ಟೋಬರ್‌ 25ರಂದು, ಕೆನ್ಯದ ದೇವಪ್ರಭುತ್ವ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲನ್ನು ಮುಟ್ಟಲಾಯಿತು. 7,800 ಚದರ ಮೀಟರುಗಳ ಒಂದು ಹೊಸ ಬೆತೆಲ್‌ ಕಾಂಪ್ಲೆಕ್ಸ್‌ನ ಉದ್ಘಾಟನಾ ದಿನವೇ ಆದಾಗಿತ್ತು! ಪೂರ್ಣಗೊಳಿಸಲ್ಪಟ್ಟ ಈ ಕಟ್ಟಡವು, ಮೂರು ವರ್ಷಗಳ ಸಮರ್ಪಿತ ಪರಿಶ್ರಮದ ನಿರ್ಣಾಯಕ ಹಂತವಾಗಿತ್ತು. 25 ಬೇರೆ ಬೇರೆ ದೇಶಗಳಿಂದ ಬಂದ ಸ್ವಯಂಸೇವಕರು, ಕೆಸರು ಹಾಗೂ ಕಳೆಗಳಿಂದ ತುಂಬಿದ್ದ 7.8 ಎಕರೆ ಭೂಮಿಯನ್ನು, ಹೊಸ ಬ್ರಾಂಚ್‌ ಕಟ್ಟಡಕ್ಕಾಗಿ ಸುಂದರವಾದ ತೋಟದಂತೆ ಮಾರ್ಪಡಿಸಿದ್ದರು. ಈ ಹೊಸ ಕಟ್ಟಡವು, ಬೆತೆಲ್‌ ಕುಟುಂಬದ 80 ಸದಸ್ಯರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿತ್ತು.

ತನ್ನ ಜನರಿಗೋಸ್ಕರ ಯೆಹೋವನು ಮಾಡಿರುವ ಪ್ರತಿಯೊಂದು ಕೆಲಸದಲ್ಲಿ ಆನಂದಿಸಲು ನಮಗೆ ಸಕಾರಣವಿದೆ. ಕೆನ್ಯದಲ್ಲಿರುವ ತನ್ನ ಸೇವಕರು ತಮ್ಮ ಮನಸ್ಸನ್ನು ವಿಶಾಲಗೊಳಿಸಿ, ಯೋಗ್ಯರನ್ನು ಹುಡುಕುವ ಕೆಲಸವನ್ನು ತೀವ್ರಗೊಳಿಸುವಂತೆ, ಅವರ ಹೃದಯಗಳನ್ನು ಪ್ರಚೋದಿಸುವ ಮೂಲಕ ಯೆಹೋವನು ಕೆನ್ಯವನ್ನು ಆತ್ಮಿಕ ಸೌಂದರ್ಯದ ಒಂದು ದೇಶವಾಗಿ ಮಾಡುತ್ತಿದ್ದಾನೆ.

[ಪಾದಟಿಪ್ಪಣಿ]

^ ಪ್ಯಾರ. 13 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.