ನಿಮ್ಮ ದೇಹ ಭಾಷೆ ನಿಮ್ಮ ಕುರಿತಾಗಿ ಏನು ಹೇಳುತ್ತದೆ?
ನಿಮ್ಮ ದೇಹ ಭಾಷೆ ನಿಮ್ಮ ಕುರಿತಾಗಿ ಏನು ಹೇಳುತ್ತದೆ?
ದೇಹ ಭಾಷೆ ಅಂದರೆ, ಒಬ್ಬ ವ್ಯಕ್ತಿಯು ಇತರರೊಂದಿಗೆ ಸಂವಾದನಡೆಸಲು ಉಪಯೋಗಿಸುವ ಹಾವಭಾವಗಳು, ಚಲನವಲನಗಳು ಮತ್ತು ವಿಶಿಷ್ಟ ಶೈಲಿಗಳಾಗಿವೆ. ನಿಮ್ಮ ದೇಹ ಭಾಷೆ ಏನು ಹೇಳುತ್ತದೆ? ಅದು ನಿಮ್ಮಲ್ಲಿರುವ ಗೌರವಭಾವ, ನಮ್ರತೆ ಮತ್ತು ಆನಂದದ ಕುರಿತಾಗಿ ತಿಳಿಸುತ್ತದೊ? ಅಥವಾ ಅದು ಕೋಪ ಮತ್ತು ಸಿಡುಕನ್ನು ವ್ಯಕ್ತಪಡಿಸುತ್ತದೊ? ತುಂಬ ಶಕ್ತಿಶಾಲಿಯಾದ ಮತ್ತು ಅರ್ಥಪೂರ್ಣವಾದ ಭಂಗಿಗಳು ಮತ್ತು ಹಾವಭಾವಗಳ ಕುರಿತಾಗಿ ಬೈಬಲಿನಲ್ಲಿ ಬಹಳಷ್ಟು ತಿಳಿಸಲ್ಪಟ್ಟಿದೆ. ಕೆಲವೊಂದು ದೇಶಗಳಲ್ಲಿ ಕೆಲವು ಜನರು ತಮ್ಮ ಭಾವನೆಗಳನ್ನು ಯಾವುದೇ ಸಂಕೋಚವಿಲ್ಲದೆ ಬಹಿರಂಗವಾಗಿ ತೋರಿಸುತ್ತಾರಾದರೂ, ಬೈಬಲ್ ಸಮಯಗಳಲ್ಲಿ ಜನರು ತಮ್ಮ ಮನೋಭಾವಗಳನ್ನು ಹೇಗೆ ವ್ಯಕ್ತಪಡಿಸುತ್ತಿದ್ದರೆಂಬುದರ ಕಡೆಗೆ ದೃಷ್ಟಿಹರಿಸುವ ಮೂಲಕ ನಾವು ಅನೇಕ ವಿಷಯಗಳನ್ನು ಕಲಿಯಸಾಧ್ಯವಿದೆ.
ಗೌರವಭರಿತ ಭಂಗಿ
ಯೆಹೋವನಿಗೆ ಪ್ರಾರ್ಥನೆಮಾಡುವುದು ಒಂದು ಸುಯೋಗವಾಗಿದೆ. ಆದುದರಿಂದ ಅದಕ್ಕಾಗಿ ತುಂಬ ಗೌರವಪೂರ್ಣವಾದ ಮನೋಭಾವವು ಆವಶ್ಯಕ. ಇಬ್ರಿಯರು ಮತ್ತು ಆದಿ ಕ್ರೈಸ್ತರಲ್ಲಿ, ಪ್ರಾರ್ಥನೆಗಾಗಿ ಇಂಥಿಂಥದ್ದೇ ಭಂಗಿ, ಅಂದರೆ ಕೈಗಳನ್ನು ಜೋಡಿಸಬೇಕು ಅಥವಾ ಕೈಗಳನ್ನು ಒಂದಕ್ಕೊಂದು ಬೆಸೆಯಬೇಕು ಎಂಬುದೇನಿರಲಿಲ್ಲ. ಆದರೆ ಎಲ್ಲ ಭಂಗಿಗಳು ತುಂಬ ಗೌರವಪೂರ್ಣವಾದದ್ದು ಆಗಿರಬೇಕಿತ್ತು. ನಿಂತುಕೊಳ್ಳುವುದು ಮತ್ತು ಮೊಣಕಾಲೂರುವುದು ಸಾಮಾನ್ಯವಾದ ಭಂಗಿಗಳಾಗಿದ್ದವು. ಯೇಸು ತನ್ನ ದೀಕ್ಷಾಸ್ನಾನದ ನಂತರ ನಿಂತುಕೊಂಡು ಪ್ರಾರ್ಥನೆಮಾಡಿದ್ದಿರಬಹುದು ಮತ್ತು ಗೆತ್ಸೇಮನೆ ತೋಟದಲ್ಲಿ ಅವನು ಮೊಣಕಾಲೂರಿಕೊಂಡಿದ್ದಿರಬಹುದು. (ಲೂಕ 3:21, 22; 22:41) ನಿಂತುಕೊಂಡಿರುವಾಗ ಅಥವಾ ಮೊಣಕಾಲೂರಿಕೊಂಡಿರುವಾಗ ಅಂಗೈಗಳು ಕೆಲವೊಮ್ಮೆ ಆಕಾಶದ ಕಡೆಗೆ ಚಾಚಿರಬಹುದು, ಅಥವಾ ಕೈಗಳು ಮೇಲೆತ್ತಲ್ಪಡುತ್ತಿದ್ದವು ಅಥವಾ ಭಿನ್ನಹಿಸುತ್ತಿರುವ ಭಂಗಿಯಲ್ಲಿ ಮುಂದೆ ಚಾಚಲ್ಪಟ್ಟಿರಬಹುದು. ಒಬ್ಬ ವ್ಯಕ್ತಿಯು ತನ್ನ ದೃಷ್ಟಿಯನ್ನು ಅಥವಾ ಮುಖವನ್ನು ಆಕಾಶದ ಕಡೆಗೆ ಎತ್ತಸಾಧ್ಯವಿತ್ತು.—ನೆಹೆಮೀಯ 8:6; ಮತ್ತಾಯ 14:19; ಯೋಬ 22:26.
ಭಿನ್ನಹಿಸುತ್ತಿದ್ದ ಕೆಲವರು, ಮೊಣಕಾಲೂರಿಕೊಂಡು, ಆನಂತರ ತಮ್ಮ ಹಿಮ್ಮಡಿಗಳ ಮೇಲೆ ಕುಳಿತುಕೊಂಡಿರಬಹುದು, ತಲೆ ಬಾಗಿಸುತ್ತಿದ್ದಿರಬಹುದು ಅಥವಾ ಎಲೀಯನು ಮಾಡಿದಂತೆ ಮೊಣಕಾಲಿನ ಮೇಲೆ ತಲೆಯನ್ನಿಟ್ಟು ಪ್ರಾರ್ಥಿಸುತ್ತಿದ್ದಿರಬಹುದು. (1 ಅರಸುಗಳು 18:42) ಒಬ್ಬನು ತುಂಬ ದುಃಖದಿಂದಿರುವಾಗ ಅಥವಾ ತೀವ್ರ ಕಟ್ಟಾಸಕ್ತಿಯಿಂದ ಪ್ರಾರ್ಥನೆಯನ್ನು ಮಾಡುವಾಗ, ಅವನು ವಾಸ್ತವದಲ್ಲಿ ಕೆಳಮುಖ ಮಾಡಿ ನೆಲದ ಮೇಲೆ ಮಲಗಬಹುದು. ಆದರೆ ಪ್ರಾರ್ಥನೆಗಳು ಪ್ರಾಮಾಣಿಕವಾಗಿರಬೇಕೆಂದು ಯೇಸು ಸ್ಪಷ್ಟವಾಗಿ ಹೇಳಿದನು. ಆಡಂಬರವನ್ನು ಮತ್ತು ಧಾರ್ಮಿಕತೆ ಇಲ್ಲವೇ ಪವಿತ್ರತೆಯ ಸೋಗಿನ ಭಂಗಿಯನ್ನು ಮುಖದಲ್ಲಾಗಲಿ ದೇಹದಲ್ಲಾಗಲಿ ತೋರಿಸುವುದನ್ನು ಅವನು ಖಂಡಿಸಿದನು.
ಪರಸ್ಪರರಿಗೆ ಗೌರವವನ್ನು ತೋರಿಸುವಾಗ, ವಿಶೇಷವಾಗಿ ಅಧಿಕಾರಿಗಳಿಗೆ ಭಿನ್ನಹಮಾಡುವಾಗ ಹಾಗೂ ಪ್ರಾರ್ಥನೆಯ ಸಮಯದಲ್ಲಿ ಪೌರಾತ್ಯ ಜನರಿಗಿರುತ್ತಿದ್ದ ಮನೋಭಾವಗಳು ಮತ್ತು ಭಂಗಿಗಳು ಒಂದೇ ರೀತಿಯದ್ದಾಗಿದ್ದವು. ಇತರ ಮನುಷ್ಯರ ಮುಂದೆ ಭಿನ್ನಹಿಸುತ್ತಾ ಮೊಣಕಾಲೂರುವ ಉದಾಹರಣೆಗಳನ್ನು ನಾವು ನೋಡಬಹುದು. ಆದರೆ ಇದನ್ನು ಆರಾಧನೆಗಾಗಿ ಮಾಡಲಾಗುತ್ತಿರಲಿಲ್ಲ, ಬದಲಾಗಿ ಆ ವ್ಯಕ್ತಿಯ ಸ್ಥಾನ ಅಥವಾ ಅಧಿಕಾರವನ್ನು ಗಾಢವಾದ ಗೌರವದೊಂದಿಗೆ ಅಂಗೀಕರಿಸುವುದಕ್ಕಾಗಿ ಮಾಡಲಾಗುತ್ತಿತ್ತು. (ಮತ್ತಾಯ 17:14) ಗೌರವವನ್ನು ತೋರಿಸುವುದರ ಕುರಿತಾಗಿ ನಾವು ಶಾಸ್ತ್ರವಚನಗಳಿಂದ ಬಹಳಷ್ಟನ್ನು ಕಲಿಯಬಹುದು.
ಒಂದು ನಮ್ರ ಮನೋಭಾವ
ಬೈಬಲ್ ಸಮಯಗಳಲ್ಲಿ ಇನ್ನೊಬ್ಬ ವ್ಯಕ್ತಿಯ ಕೆರಗಳ ಬಾರನ್ನು ಬಿಚ್ಚುವುದು ಅಥವಾ ಅವನಿಗಾಗಿ ಕೆರಗಳನ್ನು ಹೊತ್ತು ತರುವುದನ್ನು ಒಂದು ಕೀಳು ಕೆಲಸವೆಂದೆಣಿಸಲಾಗುತ್ತಿತ್ತು. ಅದು ಆ ವ್ಯಕ್ತಿಯ ನಮ್ರತೆಯನ್ನು ಮತ್ತು ತನ್ನ ಧಣಿಗೆ ಹೋಲಿಸುವಾಗ ತಾನು ಅಲ್ಪನು ಎಂಬ ಅರಿವು ಅವನಿಗಿತ್ತೆಂಬುದನ್ನು ತೋರಿಸುತ್ತಿತ್ತು. ಊಟಮಾಡಿದ ನಂತರ ಕೈಗಳನ್ನು ತೊಳೆಯುತ್ತಿರುವಾಗ ಒಬ್ಬ ವ್ಯಕ್ತಿಯ ಕೈಗಳ ಮೇಲೆ ನೀರು ಸುರಿಸುವುದು, ಹಾಗೂ ಪಾದಗಳನ್ನು ತೊಳೆಯುವುದು, ಅತಿಥಿಸತ್ಕಾರ, ಗೌರವ ಮತ್ತು ಕೆಲವೊಂದು ಸಂಬಂಧಗಳಲ್ಲಿ ನಮ್ರತೆಯ ಕೃತ್ಯಗಳಾಗಿ ಮಾಡಲಾಗುತ್ತಿದ್ದವು. ‘ಎಲೀಯನ ಕೈಗೆ ನೀರು ಕೊಡುತ್ತಿದ್ದವನು’ ಎಂಬ ಅಭಿವ್ಯಕ್ತಿಯಿಂದಲೇ, ಎಲೀಷನನ್ನು ಎಲೀಯನ ಸೇವಕ ಅಥವಾ ಶುಶ್ರೂಷಕನೆಂದು ಗುರುತಿಸಲಾಗುತ್ತಿತ್ತು. (2 ಅರಸು 3:11) ಹೌದು, ಅವನ ದೇಹ ಭಾಷೆಯು ಅವನ ನಮ್ರ ನಡತೆಯನ್ನು ತೋರಿಸಿತು. ಯೇಸು ಈ ಪೌರಾತ್ಯ ಪದ್ಧತಿಗಳಲ್ಲಿ ಒಂದನ್ನು ಒಂದು ದೃಷ್ಟಾಂತವಾಗಿ ಉಪಯೋಗಿಸಿದನು. ಉದಾಹರಣೆಗೆ, ನಮ್ರತೆ ಹಾಗೂ ಪರಸ್ಪರರ ಸೇವೆ ಮಾಡುವುದರ ಬಗ್ಗೆ ತನ್ನ ಶಿಷ್ಯರಿಗೆ ಕಲಿಸುವಾಗ ಅವನು ಸ್ವತಃ ತನ್ನ ಶಿಷ್ಯರ ಪಾದಗಳನ್ನು ತೊಳೆದನು.—ಯೋಹಾನ 13:3-10.
ಸೇವೆಮಾಡಲು ಸಿದ್ಧಮನಸ್ಸು, ನಡುಕಟ್ಟಿಕೊಳ್ಳುವುದರಿಂದಲೂ ತೋರಿಸಲ್ಪಟ್ಟಿತು. ಬೈಬಲ್ ಸಮಯಗಳಲ್ಲಿನ ಒಂದು ಪದ್ಧತಿಗೆ ಇದು ಸೂಚಿಸುತ್ತಿತ್ತು. ಒಬ್ಬ ವ್ಯಕ್ತಿಯು ತನ್ನ ಉದ್ದವಾದ ಮೇಲಂಗಿಯನ್ನು ಮೇಲಕ್ಕೆತ್ತಿ, ಒಂದು ಬೆಲ್ಟ್ ಅಥವಾ ನಡುಕಟ್ಟಿನೊಂದಿಗೆ ಕಟ್ಟುತ್ತಿದ್ದನು. ಹೀಗೆ ಮಾಡುವುದರಿಂದ ಕೆಲಸಮಾಡುವಾಗ, ಓಡಾಡುವುದೇ ಮುಂತಾದವುಗಳನ್ನು ಮಾಡುತ್ತಿರುವಾಗ ಯಾವುದೇ ಅಡ್ಡಿಯಾಗುತ್ತಿರಲಿಲ್ಲ. ಕೈಕುಲುಕುವುದರಿಂದ ಅಥವಾ ಇನ್ನೊಬ್ಬನ ಕೈಯನ್ನು ಬಿಗಿಯಾಗಿ ಹಿಡಿದುಕೊಳ್ಳುವುದರಿಂದ, ಸಹಮತದಿಂದ ಕೆಲಸಮಾಡುವುದು, ಜಂಟಿ ಪಾಲ್ಗೊಳ್ಳುವಿಕೆ ಅಥವಾ ಪರಸ್ಪರರೊಂದಿಗೆ ಹಂಚಿಕೊಳ್ಳುವುದರಲ್ಲಿನ ನಮ್ರತೆಯು ತೋರಿಸಲ್ಪಡುತ್ತಿತ್ತು. (ಗಲಾತ್ಯ 2:9) ಸಹೋದರರು ಪರಸ್ಪರರಿಗೆ ಒಂದು ಒಳ್ಳೆಯ ಹಸ್ತಲಾಘವವನ್ನು ಕೊಡುವಾಗ, ಅದೆಷ್ಟು ಹೃದಯೋಲ್ಲಾಸಕರವಾಗಿರುತ್ತದೆ!
ದುಃಖ, ಅವಹೇಳನ ಮತ್ತು ಕೋಪ
ಪ್ರಾಚೀನ ಕಾಲದಲ್ಲಿದ್ದ ಯೆಹೋವನ ನಂಬಿಗಸ್ತ ಸೇವಕರು ಈ ಎಲ್ಲ ಭಾವನೆಗಳನ್ನು ಮುಚ್ಚುಮರೆಯಿಲ್ಲದೆ ತೋರಿಸಿದರು. ತಲೆಯ ಮೇಲೆ ಯೋಬ 2:12, 13; 2 ಸಮುವೇಲ 13:19) ಒಬ್ಬ ವ್ಯಕ್ತಿಯು ತನ್ನ ಸ್ವಂತ ಗಡ್ಡದಿಂದ ಸ್ವಲ್ಪ ಕೂದಲನ್ನು ಕತ್ತರಿಸುವುದು ಅಥವಾ ಕಿತ್ತುಹಾಕುವುದು, ತಲೆಯನ್ನು ಮುಚ್ಚಿಕೊಳ್ಳುವುದು, ತಲೆಯ ಮೇಲೆ ಕೈಯಿಟ್ಟುಕೊಳ್ಳುವುದು ದುಃಖ ಅಥವಾ ಅವಮಾನವನ್ನು ಸೂಚಿಸಿತು. (ಎಜ್ರ 9:3; ಎಸ್ತೇರ 6:12; ಯೆರೆಮೀಯ 2:37) ತಲೆಯ ಮೇಲೆ ಕೈಯಿಟ್ಟುಕೊಳ್ಳುವುದು, ಆ ದುಃಖಿಸುವವನ ಮೇಲೆ ದೇವರಿಂದ ಬಂದಿರುವ ಸಂಕಟದ ಭಾರವಾದ ಕೈಯನ್ನು ಸೂಚಿಸುತ್ತಿತ್ತೆಂದು ಕೆಲವರು ನಂಬುತ್ತಾರೆ. ಸತ್ಯಾರಾಧಕರು, ದುಃಖ ಅಥವಾ ನಾಚಿಕೆಯನ್ನು ನಿರ್ಭಾವದಿಂದ ಅಥವಾ ಹಗುರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.
ಮಣ್ಣು ಅಥವಾ ಬೂದಿ ಹಾಕಿಕೊಳ್ಳುವ ಮೂಲಕ, ಮೇಲಂಗಿಗಳನ್ನು ಹರಿದುಕೊಳ್ಳುವ ಮೂಲಕ, ಗೋಣೀತಟ್ಟನ್ನು ಧರಿಸುವ ಮೂಲಕ, ಅಳುವ ಮೂಲಕ, ದುಃಖದಿಂದ ತಲೆ ಬಾಗಿಸುವ ಮೂಲಕ ಅಥವಾ ನೆಲದ ಮೇಲೆ ಕುಳಿತುಕೊಳ್ಳುವ ಮೂಲಕ ದುಃಖವನ್ನು ತೋರಿಸಸಾಧ್ಯವಿತ್ತು. (ದುಃಖ ಮತ್ತು ಪಶ್ಚಾತ್ತಾಪವನ್ನು, ಉಪವಾಸದ ಮೂಲಕವೂ ತೋರಿಸಲಾಗುತ್ತಿತ್ತು. (2 ಸಮುವೇಲ 1:12; ಯೋವೇಲ 1:13, 14) ಯೇಸು ಭೂಮಿಯ ಮೇಲಿದ್ದಾಗ, ಕಪಟ ವ್ಯಕ್ತಿಗಳು ಉಪವಾಸಮಾಡುವ ಮೂಲಕ “ಪವಿತ್ರತೆಯ” ಪ್ರದರ್ಶನವನ್ನು ಮಾಡಲಿಕ್ಕೋಸ್ಕರ ಮುಖವನ್ನು ಸಪ್ಪಗೆ ಮತ್ತು ವಿಕಾರಮಾಡಿಕೊಳ್ಳುತ್ತಿದ್ದರು. ಆದರೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ, ಅವರು ಉಪವಾಸಮಾಡುತ್ತಿರುವಾಗ ತಲೆಗೆ ಎಣ್ಣೆ ಹಚ್ಚಿಕೊಂಡು ಮುಖವನ್ನು ತೊಳಕೊಳ್ಳಬೇಕೆಂದೇ. ಹೀಗೆ ಅವರು ಜನರಿಗೆ ಸಾಮಾನ್ಯರಾಗಿ ತೋರುವರು. ಆದರೆ ಹೃದಯವನ್ನು ನೋಡುವ ತಂದೆಗೆ ಅವರ ಬಗ್ಗೆ ತಿಳಿದಿರುವುದು. (ಮತ್ತಾಯ 6:16-18) ಯಾವುದೇ ಅಪಕರ್ಷಣೆಯಿಲ್ಲದೆ ಆತ್ಮಿಕ ವಿಷಯಗಳಿಗೆ ಗಮನವನ್ನು ಕೊಡಲಿಕ್ಕೋಸ್ಕರ ಕ್ರೈಸ್ತರು ಕೆಲವೊಮ್ಮೆ ಉಪವಾಸಮಾಡುತ್ತಿದ್ದರು.—ಅ. ಕೃತ್ಯಗಳು 13:2, 3.
ಮಾತುಗಳೊಂದಿಗೆ ವಿಭಿನ್ನ ಹಾವಭಾವಗಳು, ಇತರರ ಕಡೆಗಿನ ಕೋಪ, ದ್ವೇಷ, ತಿರಸ್ಕಾರ, ತಾತ್ಸಾರ, ನಿಂದೆ ಮುಂತಾದವುಗಳನ್ನು ಬಲವಾಗಿ ವ್ಯಕ್ತಪಡಿಸಿದವು. ಇವುಗಳಲ್ಲಿ, ಬಾಯಿಯಿಂದ ಸನ್ನೆಗಳನ್ನು ಮಾಡುವುದು, ತಲೆಯಾಡಿಸುವುದು, ಕೆನ್ನೆಯ ಮೇಲೆ ಹೊಡೆಯುವುದು, ಧೂಳೆರಚುವುದು ಮತ್ತು ಕಾಲಿನಿಂದ ನೆಲವನ್ನು ಬಡಿಯುವಂಥ ರೀತಿಯ ಹಾವಭಾವಗಳು ಸೇರಿದ್ದವು. (ಯೆಹೆಜ್ಕೇಲ 25:6; ಕೀರ್ತನೆ 22:7; ಚೆಫನ್ಯ 2:15; ಮತ್ತಾಯ 5:39; 2 ಸಮುವೇಲ 16:13) ಈ ಸಂಗತಿಗಳು ಒಬ್ಬ ಪ್ರತಿಸ್ಪರ್ಧಿ, ಒಬ್ಬ ಶತ್ರು ಅಥವಾ ಒಬ್ಬ ದಬ್ಬಾಳಿಕೆಗಾರನ ಮೇಲೆ ಬಂದಿರುವ ಆಪತ್ತನ್ನು ನೋಡಿ ಹರ್ಷಿಸುವುದನ್ನು ಸೂಚಿಸಬಹುದು. ಕ್ರೈಸ್ತರು ದುಃಖವನ್ನು ತೋರಿಸಬಹುದು ಮತ್ತು ಅವರು ಒಂದುವೇಳೆ ಪಾಪಗಳನ್ನು ಮಾಡಿರುವಲ್ಲಿ ತಮ್ಮ ನಾಚಿಕೆಯನ್ನು ತಮ್ಮ ದೇಹ ಭಂಗಿಯಲ್ಲಿ ತೋರಿಸಬಹುದು. ಆದರೆ ಅದೇ ಸಮಯದಲ್ಲಿ, ತಮ್ಮ ದೇಹ ಭಾಷೆಯು ಅನಿಯಂತ್ರಿತ ಕೋಪ ಅಥವಾ ತಿರಸ್ಕಾರವನ್ನು ಪ್ರದರ್ಶಿಸದಿರುವುದರಿಂದ ಅವರು ಯಾವಾಗಲೂ ದೂರವಿರಲು ಪ್ರಯತ್ನಿಸುವರು.
ಸ್ನೇಹ ಮತ್ತು ಆನಂದವನ್ನು ತೋರಿಸುವುದು
ಬೈಬಲ್ ದೇಶಗಳಲ್ಲಿ ಸ್ನೇಹವನ್ನು ಹೃದಯೋಲ್ಲಾಸದಿಂದ ತೋರಿಸಲಾಗುತ್ತಿತ್ತು. ಸ್ನೇಹವನ್ನು ಮುತ್ತು ಕೊಡುವ ಮೂಲಕ ವ್ಯಕ್ತಪಡಿಸಲಾಗುತ್ತಿತ್ತು. ಹೆಚ್ಚು ಭಾವನಾತ್ಮಕ ಸಂದರ್ಭಗಳಲ್ಲಿ, ಕೊರಳನ್ನು ತಬ್ಬಿಕೊಂಡು ಮುದ್ದಿಸಿ, ಕಣ್ಣೀರನ್ನು ಸುರಿಸಲಾಗುತ್ತಿತ್ತು. (ಆದಿಕಾಂಡ 33:4; ಅ. ಕೃತ್ಯಗಳು 20:37) ಯೇಸು ಈ ಭೂಮಿಯ ಮೇಲಿದ್ದಾಗ, ಊಟಮಾಡುವ ಸಮಯದಲ್ಲಿ ಒರಗಿಕೊಂಡು ತಿನ್ನುವ ಪದ್ಧತಿಯಿತ್ತು. ಹೀಗೆ, ಇನ್ನೊಬ್ಬ ವ್ಯಕ್ತಿಯ ಎದೆಯ ಮೇಲೆ ಒರಗುವುದು, ಆಪ್ತ ಸ್ನೇಹ ಅಥವಾ ಅನುಗ್ರಹದ ಭಂಗಿಯಾಗಿತ್ತು. (ಯೋಹಾನ 13:23, 25) ಈ ಪದ್ಧತಿಯೇ, ಲೂಕ 16:22, 23ರಲ್ಲಿರುವ ದೃಷ್ಟಾಂತಕ್ಕೆ ಆಧಾರವಾಗಿತ್ತು. ಇನ್ನೊಬ್ಬ ವ್ಯಕ್ತಿಯೊಂದಿಗೆ ಅವನ ರೊಟ್ಟಿಯನ್ನು ತಿನ್ನುವುದು, ಅವನ ಕಡೆಗಿನ ಸ್ನೇಹ ಮತ್ತು ಶಾಂತಿಯ ಸಂಕೇತವಾಗಿತ್ತು. ಹೀಗೆ ಮಾಡಿದ ನಂತರ ಅವನ ವಿರುದ್ಧವೇಳುವುದನ್ನು, ಅತೀ ನೀಚ ದ್ರೋಹವನ್ನಾಗಿ ಪರಿಗಣಿಸಲಾಗುತ್ತಿತ್ತು.—ಕೀರ್ತನೆ 41:9.
ಚಪ್ಪಾಳೆಹೊಡೆಯುವುದರಿಂದ ಮತ್ತು ಹೆಚ್ಚಾಗಿ ಸಂಗೀತಕ್ಕೆ ತಾಳಬದ್ಧವಾಗಿ ಕುಣಿಯುವುದರ ಮೂಲಕ ಆನಂದವನ್ನು ಪ್ರದರ್ಶಿಸಲಾಗುತ್ತಿತ್ತು. ದ್ರಾಕ್ಷೇಹಣ್ಣಿನ ಕೊಯ್ಲಿನ ಸಮಯದಲ್ಲಿ ಮಾಡಲ್ಪಟ್ಟಂತೆ ಕೆಲಸದ ಸಮಯದಲ್ಲಿ ಹರ್ಷ ಧ್ವನಿಗೈಯುವುದು ಮತ್ತು ಹಾಡುತ್ತಿರುವುದು, ಸಂತೋಷ ಅಥವಾ ಕೃತಜ್ಞತಾಭರಿತ ಆನಂದದ ಅಭಿವ್ಯಕ್ತಿಗಳಾಗಿದ್ದವು. (ಕೀರ್ತನೆ 47:1; ನ್ಯಾಯಸ್ಥಾಪಕರು 11:34; ಯೆರೆಮೀಯ 48:33) ಇಂದು ಯೆಹೋವನ ಸಂತೋಷಭರಿತ ಸೇವಕರು, ತಮ್ಮ ಅಂತಾರಾಷ್ಟ್ರೀಯ ಸಹೋದರತ್ವದಲ್ಲಿನ ಗೆಳೆತನಗಳನ್ನು ಅಮೂಲ್ಯವೆಂದೆಣಿಸುತ್ತಾರೆ, ‘ಯೆಹೋವನ ಆನಂದವನ್ನು’ ತಮ್ಮ ಭದ್ರಸ್ಥಾನವನ್ನಾಗಿ ಮಾಡುತ್ತಾರೆ ಮತ್ತು ಉತ್ಸಾಹದಿಂದ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾರೆ.
ನಡೆಯುವುದು ಮತ್ತು ಓಡುವುದು
ಒಂದು ನಿರ್ದಿಷ್ಟ ಮಾರ್ಗಕ್ರಮವನ್ನು ಬೆನ್ನಟ್ಟುವುದನ್ನು ಅರ್ಥೈಸುವ ಒಂದು ದೃಷ್ಟಾಂತರೂಪದ ಅಭಿವ್ಯಕ್ತಿಯು, ‘ನಡೆಯುವುದು’ ಆಗಿದೆ. ನೋಹನು ಸಹ ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು’ ಎಂದು ತಿಳಿಸಲಾಗಿದೆ. (ಆದಿಕಾಂಡ 6:9) ದೇವರೊಂದಿಗೆ ನಡೆದುಕೊಂಡವರು, ದೇವರಿಂದ ತಿಳಿಸಲ್ಪಟ್ಟಿರುವ ಮಾರ್ಗಕ್ರಮವನ್ನು ಅನುಸರಿಸಿದರು ಮತ್ತು ಅವನ ಅನುಗ್ರಹಕ್ಕೆ ಪಾತ್ರರಾದರು. ಕ್ರೈಸ್ತ ಗ್ರೀಕ್ ಶಾಸ್ತ್ರಗಳು ಸಹ ಇದೇ ಅಭಿವ್ಯಕ್ತಿಯನ್ನು ಉಪಯೋಗಿಸುತ್ತಾ, ಒಬ್ಬ ವ್ಯಕ್ತಿಯು ದೇವರ ಸೇವಕನಾಗುವ ಮುಂಚೆ ಮತ್ತು ನಂತರ ಅನುಸರಿಸುವಂಥ ಪರಸ್ಪರ ವಿರುದ್ಧವಾದ ಮಾರ್ಗಕ್ರಮಗಳನ್ನು ಚಿತ್ರಿಸುತ್ತವೆ. (ಎಫೆಸ 2:2; 5:2) ಹಾಗೆಯೇ ‘ಓಡುವುದು’ ಎಂಬ ಪದವನ್ನು ನಿರ್ದಿಷ್ಟ ಮಾರ್ಗಕ್ರಮವನ್ನು ಸಂಕೇತಿಸಲಿಕ್ಕಾಗಿ ಉಪಯೋಗಿಸಲಾಗಿದೆ. ಯೆಹೂದದಲ್ಲಿನ ಪ್ರವಾದಿಗಳನ್ನು ದೇವರು ಕಳುಹಿಸದಿದ್ದರೂ, ಅವರು ‘ಓಡಿದರು’ ಎಂದು ಆತನು ಹೇಳುತ್ತಾನೆ. ಅವರು ಒಂದು ಪ್ರವಾದನಾ ಮಾರ್ಗವನ್ನು ತಪ್ಪಾಗಿ, ಅಧಿಕಾರವಿಲ್ಲದೆ ತೆಗೆದುಕೊಂಡರು. ಕ್ರೈಸ್ತ ಮಾರ್ಗಕ್ರಮವನ್ನು ವರ್ಣಿಸುವಾಗ ಪೌಲನು ‘ಓಟ’ಕ್ಕೆ ಸಂಬಂಧಿಸಿದ ಪದಗಳನ್ನು ಉಪಯೋಗಿಸುತ್ತಾನೆ. ಇನಾಮನ್ನು ಗೆಲ್ಲುವುದಕ್ಕಾಗಿ ನಿಯಮಕ್ಕನುಸಾರವಾಗಿ ಓಡಬೇಕಾದ ಒಬ್ಬ ವ್ಯಕ್ತಿಯ ಓಟಕ್ಕೆ ಅವನು ಅದನ್ನು ಹೋಲಿಸುತ್ತಾನೆ.—ಯೆರೆಮೀಯ 23:21, NW; 1 ಕೊರಿಂಥ 9:24.
ನಮ್ಮ ದೇಹ ಭಾಷೆಯು ನಮ್ಮ ಬಗ್ಗೆ ಅನೇಕಾನೇಕ ವಿಷಯಗಳನ್ನು ತಿಳಿಸುತ್ತದೆ. ಆದುದರಿಂದ ಅದು ಯಾವಾಗಲೂ, ಒಂದು ಗೌರವಪೂರ್ಣ ಹಾಗೂ ನಮ್ರ ಮನೋಭಾವವನ್ನು ಸೂಚಿಸಲಿ. ಅದು ಕೋಪ ಮತ್ತು ಸಿಡುಕನ್ನಲ್ಲ ಬದಲಾಗಿ ಸ್ನೇಹ ಮತ್ತು ಆನಂದವನ್ನು ತೋರಿಸಲಿ. ನಾವು ‘ದೇವರೊಂದಿಗೆ ನಡೆಯುತ್ತಾ’ ಇರುವಾಗ, ನಿತ್ಯಜೀವಕ್ಕಾಗಿರುವ ಓಟವನ್ನು ‘ಓಡುವುದರಲ್ಲಿ’ ಯಶಸ್ವಿಗಳಾಗುವೆವು.