ಮೃತ ಸಮುದ್ರದ ಸುರುಳಿಗಳು ಅವು ನಿಮಗೇಕೆ ಆಸಕ್ತಿಕರವಾಗಿರಬೇಕು?
ಮೃತ ಸಮುದ್ರದ ಸುರುಳಿಗಳು ಅವು ನಿಮಗೇಕೆ ಆಸಕ್ತಿಕರವಾಗಿರಬೇಕು?
ಮೃತ ಸಮುದ್ರದ ಸುರುಳಿಗಳನ್ನು ಕಂಡುಹಿಡಿಯುವುದಕ್ಕೆ ಮುಂಚೆ, ಲಭ್ಯವಿದ್ದ ಹೀಬ್ರೂ ಶಾಸ್ತ್ರಗಳ ಅತ್ಯಂತ ಹಳೆಯ ಹಸ್ತಪ್ರತಿಗಳು ಸಾ.ಶ. ಒಂಬತ್ತು ಹಾಗೂ ಹತ್ತನೇ ಶತಮಾನಗಳಿಗೆ ಸೇರಿದವುಗಳಾಗಿದ್ದವು. ಈ ಹೀಬ್ರೂ ಶಾಸ್ತ್ರವಚನಗಳು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಮುಂಚೆ ಸಂಪೂರ್ಣಗೊಳಿಸಲ್ಪಟ್ಟದ್ದರಿಂದ, ಈ ಹಸ್ತಪ್ರತಿಗಳು ದೇವರ ವಾಕ್ಯದ ನಂಬಿಗಸ್ತ ಹಸ್ತಾಂತರಗಳಾಗಿವೆ ಎಂದು ನಂಬಸಾಧ್ಯವೋ? ಮೃತ ಸಮುದ್ರದ ಸುರುಳಿಗಳ ಅಂತಾರಾಷ್ಟ್ರೀಯ ಸಂಪಾದಕರ ತಂಡದ ಒಬ್ಬ ಸದಸ್ಯರಾದ, ಪ್ರೊಫೆಸರ್ ಹೂಲ್ಯೋ ಟ್ರಿಬ್ಯೋಯೆ ಬಾರೇರಾ ಹೇಳಿದ್ದು: “ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಕಾಲಾವಧಿಯಲ್ಲಿ ಯೆಹೂದಿ ನಕಲುಗಾರರಿಂದ ನಕಲುಮಾಡಲ್ಪಟ್ಟ ಬೈಬಲ್ ಮೂಲವಚನಗಳ ಹಸ್ತಾಂತರವು ಅತ್ಯಂತ ನಿಷ್ಠೆಯಿಂದಲೂ ಜಾಗರೂಕತೆಯಿಂದಲೂ ಮಾಡಲ್ಪಟ್ಟಿತೆಂಬುದಕ್ಕೆ [ಕುಮ್ರಾನ್‌ನಲ್ಲಿ] ಸಿಕ್ಕಿದ ಯೆಶಾಯನ ಸುರುಳಿಯು ಅಲ್ಲಗಳೆಯಲಾರದ ಪುರಾವೆಯನ್ನು ಒದಗಿಸುತ್ತದೆ.”
ಬಾರೇರಾ ಹೇಳುವಂತಹ ಸುರುಳಿಯಲ್ಲಿ ಯೆಶಾಯನ ಸಂಪೂರ್ಣ ಪುಸ್ತಕವಿದೆ. ಇಷ್ಟರ ತನಕ, ಕುಮ್ರಾನ್‌ನಲ್ಲಿ ಕಂಡುಕೊಳ್ಳಲ್ಪಟ್ಟ 200ಕ್ಕಿಂತಲೂ ಹೆಚ್ಚಿನ ಬೈಬಲ್ ಹಸ್ತಪ್ರತಿಗಳಲ್ಲಿ, ಎಸ್ತೇರಳ ಪುಸ್ತಕವನ್ನು ಹೊರತುಪಡಿಸಿ, ಇನ್ನೆಲ್ಲ ಹೀಬ್ರೂ ಶಾಸ್ತ್ರವಚನಗಳ ಪ್ರತಿಯೊಂದು ಪುಸ್ತಕವನ್ನು ಗುರುತಿಸಲಾಗಿದೆ. ಯೆಶಾಯನ ಸುರುಳಿಗೆ ಭಿನ್ನವಾಗಿ, ಅನೇಕ ಪುಸ್ತಕಗಳು ಕೇವಲ ಅವಶೇಷಗಳಾಗಿ ಸಿಕ್ಕಿದವು. ಅಂದರೆ, ನಿರ್ದಿಷ್ಟ ಪುಸ್ತಕಗಳ ಕೇವಲ ಹತ್ತನೇ ಒಂದಂಶವು ಮಾತ್ರ ಇದರಲ್ಲಿ ಕಂಡುಬರುತ್ತದೆ. ಕುಮ್ರಾನ್‌ನಲ್ಲಿರುವ ಅತ್ಯಂತ ಜನಪ್ರಿಯವಾಗಿದ್ದ ಬೈಬಲ್ ಪುಸ್ತಕಗಳಲ್ಲಿ, ಕೀರ್ತನೆ (36 ಪ್ರತಿಗಳು), ಧರ್ಮೋಪದೇಶಕಾಂಡ (29 ಪ್ರತಿಗಳು), ಮತ್ತು ಯೆಶಾಯ (21 ಪ್ರತಿಗಳು) ಆಗಿದ್ದವು. ಕ್ರೈಸ್ತ ಗ್ರೀಕ್ ಶಾಸ್ತ್ರವನಚಗಳಲ್ಲಿ ಆಗಾಗ್ಗೆ ಉದ್ಧರಿಸಲ್ಪಟ್ಟಂತಹ ಪುಸ್ತಕಗಳು ಸಹ ಇವುಗಳಾಗಿದ್ದವು.
ಬೈಬಲಿನಲ್ಲಿ ಯಾವುದೇ ಮೂಲಭೂತ ಬದಲಾವಣೆಗಳು ಆಗಿಲ್ಲವೆಂಬುದನ್ನು ಈ ಸುರುಳಿಗಳು ತೋರಿಸುವುದಾದರೂ, ಎರಡನೆಯ ದೇವಾಲಯದ ಕಾಲಾವಧಿಯಲ್ಲಿ ಒಂದಷ್ಟರ ಮಟ್ಟಿಗೆ, ಯೆಹೂದಿಯರು ಭಿನ್ನವಾದ ಹೀಬ್ರೂ ಬೈಬಲ್ ವಚನಗಳನ್ನು ಉಪಯೋಗಿಸಿದರು ಎಂಬುದನ್ನು ಇವು ಬಯಲುಪಡಿಸುತ್ತವೆ. ಮತ್ತು ಖಂಡಿತವಾಗಿಯೂ ಇವುಗಳಲ್ಲಿ ತಮ್ಮದೇ ಆದ ಭಿನ್ನತೆಗಳಿದ್ದವು. ಎಲ್ಲ ಸುರುಳಿಗಳು, ಮ್ಯಾಸರೀಟ್ ಗ್ರಂಥದಲ್ಲಿರುವಂತಹ ಕಾಗುಣಿತ ಅಥವಾ ಶಬ್ದರಚನೆಗೆ ಹೊಂದಿಕೆಯಾಗಿಲ್ಲ. ಕೆಲವೊಂದು ಗ್ರೀಕ್ ಸೆಪ್ಟ್ಯುಅಜಿಂಟ್‌ಗೆ ಹತ್ತಿರವಾಗಿವೆ. ಈ ಹಿಂದೆ ವಿದ್ವಾಂಸರು, ಅನುವಾದಕನು ತಪ್ಪುಮಾಡಿದ್ದರಿಂದ ಇಲ್ಲವೆ ಉದ್ದೇಶಪೂರ್ವಕವಾಗಿ ಹೊಸ ವಿಚಾರಗಳನ್ನು ಹಾಕಿದ್ದರಿಂದಲೇ ಸೆಪ್ಟ್ಯುಅಜಿಂಟ್‌ನಲ್ಲಿ ಭಿನ್ನತೆಗೆಳು ಬಂದಿರಬಹುದು ಎಂದು ನೆನೆಸಿದ್ದರು. ಆದರೆ ಈಗ ಸುರುಳಿಗಳು, ಈ ಹೆಚ್ಚಿನ ಭಿನ್ನತೆಗಳು ಹೀಬ್ರೂ ಗ್ರಂಥದಲ್ಲಿನ ವೈವಿಧ್ಯತೆಗಳಿಂದಲೇ ಎಂಬುದನ್ನು ಬಯಲುಪಡಿಸುತ್ತವೆ. ಆದಿ ಕ್ರೈಸ್ತರು ಹೀಬ್ರೂ ಶಾಸ್ತ್ರವಚನಗಳಿಂದ ಉದ್ಧರಿಸಿದ ಕೆಲವೊಂದು ಶಬ್ದರಚನೆಗಳು ಮ್ಯಾಸರೀಟ್ ಶಾಸ್ತ್ರವಚನಗಳಿಗಿಂತಲೂ ಏಕೆ ಭಿನ್ನವಾಗಿದ್ದವು ಎಂಬುದನ್ನು ಇವು ವಿವರಿಸುತ್ತವೆ.—ವಿಮೋಚನಕಾಂಡ 1:5; ಅ. ಕೃತ್ಯಗಳು 7:14.
ಹೀಗೆ, ಬೈಬಲ್ ಸುರುಳಿಗಳ ಹಾಗೂ ಅವಶೇಷಗಳ ಅಮೂಲ್ಯವಾದ ಕಂಡುಹಿಡಿತವು, ಹಸ್ತಾಂತರಗೊಂಡ ಹೀಬ್ರೂ ಬೈಬಲ್ ಮೂಲವಚನವನ್ನು ಅಧ್ಯಯನಮಾಡುವುದಕ್ಕೆ ಒಂದು ಅತ್ಯುತ್ಕೃಷ್ಟ ಆಧಾರವನ್ನು ಕೊಡುತ್ತದೆ. ಮಾತ್ರವಲ್ಲ, ಮೂಲಗ್ರಂಥವನ್ನು ಹೋಲಿಸಿನೋಡುವುದಕ್ಕಾಗಿ ಸೆಪ್ಟ್ಯುಅಜಿಂಟ್ ಹಾಗೂ ಸಮಾರ್ಯದ ಪೆಂಟಟ್ಯೂಕ್ ಬಹಳ ಸಹಾಯಕಾರಿಯಾಗಿವೆ ಎಂಬುದನ್ನು ಮೃತ ಸಮುದ್ರದ ಸುರುಳಿಗಳು ಸಾಬೀತುಪಡಿಸಿವೆ. ಇವು ಮ್ಯಾಸರೀಟ್ ಗ್ರಂಥದಲ್ಲಿ ಸುಧಾರಣೆಗಳನ್ನು ತರಸಾಧ್ಯವಾಗುವಂತೆ ಬೈಬಲ್ ಅನುವಾದಕರಿಗಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ಮ್ಯಾಸರೀಟ್ ಗ್ರಂಥದಿಂದ ಎಲ್ಲೆಲ್ಲಿ ಯೆಹೋವನ ಹೆಸರು ತೆಗೆದುಹಾಕಲ್ಪಟ್ಟಿದೆಯೋ ಆ ಸ್ಥಳಗಳಲ್ಲಿ ಪುನಃ ಯೆಹೋವನ ಹೆಸರನ್ನು ಹಾಕುವ ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್‌ಲೇಶನ್‌ನ ನಿರ್ಣಯಗಳನ್ನು ಈ ಸುರುಳಿಗಳು ದೃಢೀಕರಿಸುತ್ತವೆ.
ಕುಮ್ರಾನ್ ಪಂಥದ ನಿಯಮಗಳನ್ನು ಹಾಗೂ ನಂಬಿಕೆಗಳನ್ನು ವರ್ಣಿಸುವ ಸುರುಳಿಗಳು, ಯೇಸುವಿನ ಸಮಯದಲ್ಲಿ ಕೇವಲ ಒಂದೇ ವಿಧದ ಯೆಹೂದಿಮತವಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಯೆಶಾಯ 40:3ರಲ್ಲಿ ಕೊಡಲ್ಪಟ್ಟ ವಾಣಿಯನ್ನು ನೆರವೇರಿಸುವವರು ತಾವೇ ಆಗಿದ್ದೇವೆ ಎಂದು ತಪ್ಪಾಗಿ ಎಣಿಸಿಕೊಂಡರು. ಅನೇಕ ಸುರುಳಿಯ ಅವಶೇಷಗಳು ಮೆಸ್ಸೀಯನನ್ನು ಸೂಚಿಸಿದವು. ಅವನ ಆಗಮನವು ಸನ್ನಿಹಿತವಾಗಿದೆ ಎಂದು ಆ ಸುರುಳಿಗಳ ಬರಹಗಾರರು ನೆನೆಸಿದ್ದರು. ಹಾಗೂ ಜನರು ಬರಲಿದ್ದ ಮೆಸ್ಸೀಯನನ್ನು ‘ಎದುರುನೋಡುವವರಾಗಿದ್ದರು’ ಎಂದು ಲೂಕನು ಸಹ ಹೇಳಿರುವುದರಿಂದ ಇದು ಆಸಕ್ತಿಕರವಾಗಿದೆ.—ಲೂಕ 3:15.
ಕುಮ್ರಾನ್ ಪಂಥದ ಸಂಪ್ರದಾಯಗಳು, ಫರಿಸಾಯರ ಹಾಗೂ ಸದ್ದುಕಾಯರ ಸಂಪ್ರದಾಯಗಳಿಗಿಂತ ತೀರ ಭಿನ್ನವಾಗಿದ್ದವು. ಹೀಗೆ, ಈ ಭಿನ್ನತೆಗಳೇ ಈ ಪಂಥದವರನ್ನು ಅರಣ್ಯಕ್ಕೆ ನಡಿಸುವಂತೆ ಮಾಡಿದ್ದಿರಬೇಕು. ಮತ್ತು ಅರಣ್ಯದಲ್ಲಿ ಯೆಹೋವನ ದಾರಿಯನ್ನು ಸರಿಪಡಿಸುವುದರ ಬಗ್ಗೆಯೇಸು ಸಾಕ್ಷಿನೀಡಿದ ಸಮಯದಲ್ಲಿ ಯೆಹೂದಿಯರ ಜೀವನವು ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಒಂದಷ್ಟರ ಮಟ್ಟಿಗೆ ಈ ಮೃತ ಸಮುದ್ರದ ಸುರುಳಿಗಳು ನಮಗೆ ಸಹಾಯವನ್ನು ನೀಡುತ್ತವೆ. ಪುರಾತನ ಹೀಬ್ರೂ ಹಾಗೂ ಬೈಬಲ್ ಮೂಲವಚನವನ್ನು ಅಧ್ಯಯನಮಾಡುವುದಕ್ಕಾಗಿ ತುಲನಾತ್ಮಕ ಮಾಹಿತಿಯನ್ನು ಇವು ನೀಡುತ್ತವಾದರೂ, ಮೃತ ಸಮುದ್ರದ ಸುರುಳಿಗಳ ಅನೇಕ ಪುಸ್ತಕಗಳನ್ನು ಇನ್ನೂ ನಿಕಟವಾಗಿ ಪರೀಕ್ಷೆಮಾಡಬೇಕಾಗಿದೆ. ಹೀಗೆ ಮಾಡುವುದರಿಂದ ನಮಗೆ ಹೊಸ ಅರ್ಥಗಳು ಸಿಗಬಹುದು. ಹೌದು, ನಿಜವಾಗಿಯೂ 20ನೇ ಶತಮಾನದ ಅತಿ ದೊಡ್ಡ ಪ್ರಾಕ್ತನಶಾಸ್ತ್ರ ಕಂಡುಹಿಡಿತವು, 21ನೇ ಶತಮಾನಕ್ಕೆ ಕಾಲಿಡುತ್ತಿರುವ ವಿದ್ವಾಂಸರಿಗೂ ಬೈಬಲ್ ವಿದ್ಯಾರ್ಥಿಗಳಿಗೂ ರೋಮಾಂಚಕಾರಿಯಾದ ಸಂಗತಿಯಾಗಿದೆ.
[ಪುಟ 7ರಲ್ಲಿರುವ ಚಿತ್ರ ಕೃಪೆ]
Qumran excavations: Pictorial Archive (Near Eastern History) Est.; manuscript: Courtesy of Shrine of the Book, Israel Museum, Jerusalem