ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೃತ ಸಮುದ್ರದ ಸುರುಳಿಗಳು ನಿಜಾಂಶವೇನು?

ಮೃತ ಸಮುದ್ರದ ಸುರುಳಿಗಳು ನಿಜಾಂಶವೇನು?

ಮೃತ ಸಮುದ್ರದ ಸುರುಳಿಗಳು ನಿಜಾಂಶವೇನು?

ಇಪ್ಪತ್ತನೆಯ ಶತಮಾನದಲ್ಲಿಯೇ ಅತ್ಯಂತ ದೊಡ್ಡ ಪ್ರಾಕ್ತನಶಾಸ್ತ್ರದ ಆವಿಷ್ಕಾರವಾಗಿದೆ ಎಂದು ಕೆಲವರು ಅಭಿಪ್ರಾಯಪಡುವಂತಹ ಒಂದು ಸಂಗತಿಯು ನಡೆಯಿತು. ಅದೇನೆಂದರೆ, ಸುಮಾರು 50ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಒಬ್ಬ ಬೆಡುಯಿನ್‌ ಕುರುಬನು ಒಂದು ಗುಹೆಯೊಳಗೆ ಕಲ್ಲು ತೂರಿದನು. ಆಗ ಅವನಿಗೆ ಜೇಡಿಮಣ್ಣಿನ ಪಾತ್ರೆಯು ಒಡೆದುಹೋದಂತಹ ಶಬ್ದವು ಕೇಳಿಸಿತು. ಒಳಗೆ ಹೋಗಿ ನೋಡಿದಾಗ ಏಳು ಸುರುಳಿಗಳಲ್ಲಿ ಮೊದಲನೇ ಸುರುಳಿಯು ಅವನ ಕಣ್ಣಿಗೆ ಬಿತ್ತು. ಇದು ಮುಂದೆ ಮೃತ ಸಮುದ್ರದ ಸುರುಳಿಗಳು ಎಂದು ಜ್ಞಾತವಾದವು.

ಈ ಸುರುಳಿಗಳು, ಪಾಂಡಿತ್ಯ ಕ್ಷೇತ್ರದಲ್ಲೂ ಸಮೂಹ ಮಾಧ್ಯಮದಲ್ಲೂ ಗಮನವನ್ನು ಸೆಳೆದಿರುವುದು ಮಾತ್ರವಲ್ಲ, ವಾಗ್ವಾದಕ್ಕೂ ಹಾಗೂ ಜನರ ಮಧ್ಯೆ ಕೋಲಾಹಲವನ್ನೆಬ್ಬಿಸಿವೆ ಮತ್ತು ತಪ್ಪು ಮಾಹಿತಿಯನ್ನು ನೀಡಿವೆ. ಕ್ರೈಸ್ತರ ಹಾಗೂ ಯೆಹೂದಿಯರ ನಂಬಿಕೆಯನ್ನು ದುರ್ಬಲಗೊಳಿಸುವಂತಹ ನಿಜಾಂಶಗಳನ್ನು ಈ ಸುರುಳಿಗಳು ಹೊರಗೆಡಹಬಹುದು ಎಂಬ ಭಯದಿಂದ, ಇದನ್ನು ಮುಚ್ಚಿಬಿಡಲಾಗಿದೆ ಎಂಬ ಗಾಳಿಸುದ್ದಿಯು ಎಲ್ಲೆಲ್ಲಿಯೂ ಹರಡಿದೆ. ಆದರೆ ಈ ಸುರುಳಿಗಳ ನಿಜ ಮಹತ್ತ್ವವೇನಾಗಿದೆ? 50ಕ್ಕಿಂತಲೂ ಹೆಚ್ಚಿನ ವರ್ಷಗಳ ನಂತರ, ಈ ನಿಜಾಂಶಗಳನ್ನು ತಿಳಿದುಕೊಳ್ಳಸಾಧ್ಯವಿದೆಯೋ?

ಮೃತ ಸಮುದ್ರದ ಸುರುಳಿಗಳು ಅಂದರೇನು?

ಮೃತ ಸಮುದ್ರದ ಸುರುಳಿಗಳು ಪುರಾತನ ಯೆಹೂದಿ ಹಸ್ತಪ್ರತಿಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ಹೀಬ್ರೂ ಭಾಷೆಯಲ್ಲಿದ್ದು, ಇನ್ನೂ ಕೆಲವು ಆರಮೇಯಿಕ್‌ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಮತ್ತು ಕೊಂಚವೇ ಗ್ರೀಕ್‌ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಇವುಗಳಲ್ಲಿ ಅನೇಕ ಸುರುಳಿಗಳು ಹಾಗೂ ಅವಶೇಷಗಳು ಸುಮಾರು 2,000ಕ್ಕಿಂತಲೂ ಹೆಚ್ಚಿನ ವರ್ಷಗಳ ಹಿಂದಿನದ್ದಾಗಿವೆ. ಅಂದರೆ, ಯೇಸುವಿನ ಜನನಕ್ಕೆ ಮುಂಚಿನದ್ದಾಗಿವೆ. ಬೆಡುಯಿನ್‌ ಕುರುಬರಿಗೆ ಸಿಕ್ಕಿದ ಮೊದಲ ಸುರುಳಿಗಳಲ್ಲಿ, ವಿವಿಧಾವಸ್ಥೆಯಲ್ಲಿ ಹರುಕುಮುರುಕಾಗಿದ್ದ ಏಳು ಉದ್ದುದ್ದದ ಹಸ್ತಪ್ರತಿಗಳಿದ್ದವು. ಹೆಚ್ಚಿನ ಗುಹೆಗಳನ್ನು ಶೋಧಿಸಿದಂತೆ, ಇತರ ಸುರುಳಿಗಳು ಹಾಗೂ ಸಾವಿರಾರು ಸುರುಳಿಗಳ ಅವಶೇಷಗಳು ಸಿಕ್ಕಿದವು. 1947 ಹಾಗೂ 1956ರ ನಡುವೆ ಮೃತ ಸಮುದ್ರದ ಕುಮ್ರಾನ್‌ ಬಳಿ ಸುರುಳಿಯಿರುವ ಒಟ್ಟು 11 ಗುಹೆಗಳನ್ನು ಕಂಡುಹಿಡಿಯಲಾಯಿತು.

ಈ ಎಲ್ಲ ಸುರುಳಿಗಳನ್ನು ಹಾಗೂ ಅದರ ಅವಶೇಷಗಳನ್ನು ವಿಂಗಡಿಸಿದಾಗ, ಇವು ಸುಮಾರು 800 ಹಸ್ತಪ್ರತಿಗಳಾದವು. ಇದರ ಒಂದಂಶ ಅಥವಾ 200ಕ್ಕಿಂತ ತುಸು ಹೆಚ್ಚಿನ ಹಸ್ತಪ್ರತಿಗಳು ಹೀಬ್ರೂ ಭಾಷೆಯ ಬೈಬಲ್‌ ಗ್ರಂಥಪಾಠದ ಪ್ರತಿಗಳಾಗಿವೆ. ಇನ್ನೂ ಹೆಚ್ಚಿನ ಹಸ್ತಪ್ರತಿಗಳು ಪುರಾತನ ಬೈಬಲೇತರ ಯೆಹೂದಿ ಬರವಣಿಗೆಗಳಾದ, ಅಪಾಕ್ರಿಫ ಹಾಗೂ ಸ್ಯೂಡಿಪಿಗ್ರಫವಾಗಿದೆ. *

ಈ ಸುರುಳಿಗಳಲ್ಲಿ ಕೆಲವೊಂದು ಈ ಹಿಂದೆ ಅಜ್ಞಾತವಾಗಿದ್ದ ಬರವಣಿಗೆಗಳನ್ನು ಹೊಂದಿದ್ದ ಕಾರಣ ವಿದ್ವಾಂಸರನ್ನು ಆಶ್ಚರ್ಯಚಕಿತಗೊಳಿಸಿದವು. ಇದರಲ್ಲಿ ಯೆಹೂದಿ ನಿಯಮದ ಕುರಿತಾದ ವಿಷಯಗಳ ಅರ್ಥವಿವರಣೆ, ಕುಮ್ರಾನ್‌ ದೇಶದಲ್ಲಿ ಜೀವಿಸಿದ ಪಂಥಕ್ಕೆ ನೀಡಲ್ಪಟ್ಟಿದ್ದ ನಿರ್ದಿಷ್ಟ ನಿಯಮಗಳು, ಆರಾಧನೆಗಾಗಿ ಬಳಸುತ್ತಿದ್ದ ಪದ್ಯಗಳು ಹಾಗೂ ಪ್ರಾರ್ಥನೆಗಳಿದ್ದವು. ಮಾತ್ರವಲ್ಲ ಬೈಬಲ್‌ ಪ್ರವಾದನೆಯ ಹಾಗೂ ಅಂತಿಮ ದಿನಗಳ ನೆರವೇರಿಕೆಯ ಕುರಿತಾದ ದೃಷ್ಟಿಕೋನಗಳನ್ನು ಹೊರಗೆಡಹುವ ಅಂತಿಮಗತಿಯ ಶಾಸ್ತ್ರವನ್ನು ಸಹ ಇವು ಹೊಂದಿದ್ದವು. ಇದರಲ್ಲಿ, ಬೈಬಲಿನ ಒಂದೊಂದು ವಚನವನ್ನು ವಿವರವಾಗಿ ತಿಳಿಸುವ ಅತ್ಯಂತ ಪುರಾತನ ಆಧಾರವಾಕ್ಯವುಳ್ಳ ಅಸಾಧಾರಣವಾದ ಬೈಬಲ್‌ ವ್ಯಾಖ್ಯಾನಗಳಿವೆ.

ಮೃತ ಸಮುದ್ರದ ಸುರುಳಿಗಳ ಬರಹಗಾರರು ಯಾರು?

ಪುರಾತನ ದಾಖಲೆಗಳು ಎಷ್ಟು ಹಳೆಯದ್ದಾಗಿವೆ ಎಂಬುದನ್ನು ಕಂಡುಹಿಡಿಯುವ ಹಲವಾರು ವಿಧಾನಗಳು, ಈ ಸುರುಳಿಗಳು ಸಾ.ಶ.ಪೂ. ಮೂರನೇ ಶತಮಾನ ಹಾಗೂ ಸಾ.ಶ. ಒಂದನೇ ಶತಮಾನದ ನಡುವೆ ನಕಲುಮಾಡಲ್ಪಟ್ಟಿತು ಇಲ್ಲವೆ ಸಂಯೋಜಿಸಲ್ಪಟ್ಟಿತು ಎಂಬುದನ್ನು ಸೂಚಿಸುತ್ತವೆ. ಸಾ.ಶ. 70ರಲ್ಲಿ ಯೆರೂಸಲೇಮಿನ ದೇವಾಲಯವು ನಾಶಗೊಳ್ಳುವ ಮುಂಚೆ ಯೆರೂಸಲೇಮಿನ ಯೆಹೂದ್ಯರು ಈ ಸುರುಳಿಗಳನ್ನು ಗುಹೆಗಳಲ್ಲಿ ಅವಿತಿಟ್ಟರು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ, ಈ ಸುರುಳಿಗಳಲ್ಲಿರುವ ವಿಷಯಗಳು ಈ ದೃಷ್ಟಿಕೋನಕ್ಕೆ ಸರಿಹೊಂದುವುದಿಲ್ಲ ಎಂಬುದನ್ನು ಈ ವಿಷಯದಲ್ಲಿ ಸಂಶೋಧನೆಮಾಡುತ್ತಿರುವ ಅಧಿಕಾಂಶ ವಿದ್ವಾಂಸರ ಎಣಿಕೆಯಾಗಿದೆ. ಅನೇಕ ಸುರುಳಿಗಳಲ್ಲಿ, ಯೆರೂಸಲೇಮಿನಲ್ಲಿದ್ದ ಧಾರ್ಮಿಕ ಮುಖಂಡರ ದೃಷ್ಟಿಕೋನಗಳಿಗೆ ತದ್ವಿರುದ್ಧವಾದ ದೃಷ್ಟಿಕೋನಗಳನ್ನು ಹಾಗೂ ಸಂಪ್ರದಾಯಗಳನ್ನು ನೋಡಬಹುದು. ದೇವರು, ಯಾಜಕರನ್ನು ಹಾಗೂ ಯೆರೂಸಲೇಮಿನಲ್ಲಿ ದೇವಾಲಯದ ಸೇವೆಯನ್ನು ತಿರಸ್ಕರಿಸಿದ್ದಾನೆ. ಅದಕ್ಕೆ ಬದಲಿಯಾಗಿ ಅರಣ್ಯದಲ್ಲಿ ನಡೆಸುತ್ತಿದ್ದ ತಮ್ಮ ಪಂಥದ ಸೇವೆಯನ್ನು ದೇವರು ಸಮ್ಮತಿಸಿದ್ದಾನೆ ಎಂದು ನಂಬಿದ ಸಮುದಾಯವನ್ನು ಈ ಸುರುಳಿಗಳು ಹೊರಗೆಡಹುತ್ತವೆ. ಆದುದರಿಂದ, ಯೆರೂಸಲೇಮಿನ ದೇವಾಲಯದ ಮುಖಂಡರು ಇಂತಹ ಸುರುಳಿಗಳನ್ನು ಹೊಂದಿದ್ದ ಸಂಗ್ರಹವನ್ನು ಅವಿತಿಟ್ಟಿರಲಿಕ್ಕಿಲ್ಲ.

ಕುಮ್ರಾನ್‌ನಲ್ಲಿ ನಕಲುಗಾರರ ಗುಂಪು ಇತ್ತಾದರೂ, ಅನೇಕ ಸುರುಳಿಗಳು ಬೇರೆಲ್ಲಿಂದಲೋ ಸಂಗ್ರಹಿಸಲ್ಪಟ್ಟು, ಅಲ್ಲಿಗೆ ವಿಶ್ವಾಸಿಗಳಿಂದ ತರಲ್ಪಟ್ಟವು. ಒಂದರ್ಥದಲ್ಲಿ, ಮೃತ ಸಮುದ್ರದ ಸುರುಳಿಗಳು ವ್ಯಾಪಕವಾದ ಲೈಬ್ರರಿ ಸಂಗ್ರಹವಾಗಿವೆ. ಬೇರೆ ಲೈಬ್ರರಿಯಲ್ಲಿರುವಂತೆಯೇ, ಈ ಸಂಗ್ರಹಣದಲ್ಲಿ ಬೇರೆ ಬೇರೆ ವ್ಯಾಪಕವಾದ ಆಲೋಚನೆಯು ತುಂಬಿರಬಹುದು. ಇವೆಲ್ಲವೂ ಓದುಗರ ಧಾರ್ಮಿಕ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದೇನೂ ಇಲ್ಲ. ಆದರೂ, ಒಂದಕ್ಕಿಂತಲೂ ಹೆಚ್ಚಿನ ಪ್ರತಿಗಳಿರುವ ಗ್ರಂಥವಚನಗಳು ಆ ಗುಂಪಿನ ಭಿನ್ನವಾದ ಆಸಕ್ತಿ ಹಾಗೂ ನಂಬಿಕೆಗಳನ್ನು ತಿಳಿಸುತ್ತವೆ.

ಕುಮ್ರಾನ್‌ ನಿವಾಸಿಗಳು ಎಸೀನರೋ?

ಕುಮ್ರಾನ್‌ ದೇಶದ ಲೈಬ್ರರಿಯಲ್ಲಿ ಈ ಸುರುಳಿಗಳಿದ್ದವು ಎಂದಾದರೆ, ಅದರ ನಿವಾಸಿಗಳು ಯಾರಾಗಿದ್ದರು? ಈ ಸುರುಳಿಗಳು ಎಸೀನರಿಗೆ ಸೇರಿದ್ದವು ಎಂಬುದಾಗಿ ಮಂಡಿಸಿದ್ದರಲ್ಲಿ, 1947ರಲ್ಲಿ ಹೀಬ್ರೂ ವಿಶ್ವವಿದ್ಯಾನಿಲಯಕ್ಕಾಗಿ ಮೂರು ಸುರುಳಿಗಳನ್ನು ಪಡೆದುಕೊಂಡ ಪ್ರೊಫೆಸರ್‌ ಎಲಿಯಜರ್‌ ಸೂಕೆನಿಕ್‌ ಮೊದಲಿಗರಾಗಿದ್ದರು.

ಪ್ರಥಮ ಶತಮಾನದ ಲೇಖಕರಾದ ಜೋಸಿಫಸ್‌, ಅಲೆಕ್ಸಾಂಡ್ರಿಯದ ಫಿಲೊ ಮತ್ತು ಪ್ಲೈನಿ ಎಲ್ಡರ್‌ ಅವರಿಗನುಸಾರ ಈ ಎಸೀನರು ಯೆಹೂದಿ ಪಂಥಕ್ಕೆ ಸೇರಿದ್ದವರಾಗಿದ್ದರು. ಎಸೀನರ ನಿಜಮೂಲವು ಅಂದಾಜಿಗೆ ಒಳಗಾಗಿದೆಯಾದರೂ, ಸಾ.ಶ.ಪೂ. ಎರಡನೆಯ ಶತಮಾನದಲ್ಲಿ ಮಕಬೀಯರು ಕ್ರಾಂತಿಯೆದ್ದಾಗ ಉಂಟಾದ ಗಲಭೆಯ ಸಮಯದಲ್ಲಿ ಎಸೀನರ ಪಂಗಡವು ಹುಟ್ಟಿಕೊಂಡಿದ್ದಿರಬೇಕು ಎಂದು ತೋರುತ್ತದೆ. * ಆ ಸಮಯದಲ್ಲಿ ಎಸೀನರಿದ್ದರು ಎಂಬುದನ್ನು ಜೋಸೀಫಸನು ವರದಿಸಿದ್ದಾನೆ. ಅವರ ಧಾರ್ಮಿಕ ದೃಷ್ಟಿಕೋನಗಳು ಹೇಗೆ ಫರಿಸಾಯರು ಹಾಗೂ ಸದ್ದುಕಾಯರಿಂದ ಭಿನ್ನವಾಗಿದ್ದವು ಎಂಬುದನ್ನು ಅವನು ವಿವರವಾಗಿ ತಿಳಿಸಿದ್ದಾನೆ. ಯೆರಿಕೊ ಮತ್ತು ಏಂಗೆದೀಯದ ಮಧ್ಯೆ ಮೃತ ಸಮುದ್ರದ ಸಮೀಪದಲ್ಲಿ ಈ ಎಸೀನರು ವಾಸಿಸುತ್ತಿದ್ದರು ಎಂಬುದನ್ನು ಪ್ಲೈನಿ ಉಲ್ಲೇಖಿಸಿದ್ದಾನೆ.

ಮೃತ ಸಮುದ್ರದ ಸುರುಳಿಯನ್ನು ಅಧ್ಯಯನಮಾಡುತ್ತಿರುವ ಪ್ರೊಫೆಸರ್‌ ಜೇಮ್ಸ್‌ ವಂಡೆರ್ಕಮ್‌, “ಕುಮ್ರಾನ್‌ನಲ್ಲಿ ಜೀವಿಸಿದ ಎಸೀನರು, ದೊಡ್ಡ ಎಸೀನಿ ಚಳುವಳಿಯ ಒಂದು ಚಿಕ್ಕ ಭಾಗವಾಗಿದ್ದರು ಅಷ್ಟೇ” ಎಂದು ಹೇಳುತ್ತಾರೆ. ಈ ಚಳುವಳಿಯಲ್ಲಿ ಸುಮಾರು ನಾಲ್ಕು ಸಾವಿರ ಜನರಿದ್ದರು ಎಂದು ಜೋಸೀಫಸನು ಅಂದಾಜುಮಾಡುತ್ತಾನೆ. ಕೊಡಲ್ಪಟ್ಟಿರುವ ಎಲ್ಲ ವರ್ಣನೆಗಳಿಗೆ ಸರಿಹೋಲುವುದಿಲ್ಲವಾದರೂ, ಕುಮ್ರಾನ್‌ ವಚನಗಳಲ್ಲಿರುವ ಒಟ್ಟು ವರ್ಣನೆಯು ಆ ಸಮಯದಲ್ಲಿದ್ದ ಬೇರೆ ಯೆಹೂದಿ ಗುಂಪುಗಳಿಗಿಂತಲೂ ಹೆಚ್ಚಾಗಿ ಎಸೀನರಿಗೆ ಸರಿಹೋಲುತ್ತದೆ.

ಕುಮ್ರಾನ್‌ನಲ್ಲಿಯೇ ಕ್ರೈಸ್ತತ್ವವು ಹುಟ್ಟಿತು ಎಂದು ಕೆಲವರು ಪ್ರತಿಪಾದಿಸುತ್ತಾರೆ. ಆದರೆ, ಕುಮ್ರಾನ್‌ ಪಂಗಡದವರಿಗಿದ್ದ ಹಾಗೂ ಆದಿ ಕ್ರೈಸ್ತರಿಗಿದ್ದ ಧಾರ್ಮಿಕ ದೃಷ್ಟಿಕೋನಗಳ ಮಧ್ಯೆ ಬಹಳಷ್ಟು ಎದ್ದುಕಾಣುವಂತಹ ಭಿನ್ನತೆಗಳನ್ನು ನೋಡಸಾಧ್ಯವಿದೆ. ಕುಮ್ರಾನ್‌ ಬರವಣಿಗೆಗಳು ತೀರ ಕಟ್ಟುನಿಟ್ಟಾದ ಸಬ್ಬತ್‌ ನಿಯಮಗಳನ್ನು ಹಾಗೂ ಸಾಂಪ್ರದಾಯಿಕ ಸ್ವಚ್ಛತೆಯ ಬಗ್ಗೆ ಇದ್ದ ವಿಪರೀತ ಕಾಳಜಿಯನ್ನು ಹೊರಗೆಡಹುತ್ತದೆ. (ಮತ್ತಾಯ 15:​1-20; ಲೂಕ 6:​1-11) ಹಾಗೂ ಎಸೀನರು ಸಮಾಜದಿಂದ ಪ್ರತ್ಯೇಕರಾಗಿದ್ದರು ಮಾತ್ರವಲ್ಲ, ಅವರು ಅದೃಷ್ಟ, ಆತ್ಮದ ಅಮರತ್ವದಲ್ಲಿ ನಂಬಿಕೆಯನ್ನಿಟ್ಟಿದ್ದರು. ಹಾಗೂ ಬ್ರಹ್ಮಚರ್ಯೆ ಮತ್ತು ತಮ್ಮ ಆರಾಧನೆಯಲ್ಲಿ ದೇವದೂತರನ್ನು ಸಂಪರ್ಕಿಸುವುದೆಂಬ ಇಂದ್ರಿಯಾತೀತ ವಿಚಾರಗಳಿಗೆ ಹೆಚ್ಚು ಮಹತ್ತ್ವವನ್ನು ಕೊಡುತ್ತಿದ್ದರು. ಈ ವಿಚಾರಗಳು, ಯೇಸುವಿನ ಹಾಗೂ ಆದಿ ಕ್ರೈಸ್ತರ ಬೋಧನೆಗಳಿಗೆ ಎಷ್ಟು ಭಿನ್ನವಾಗಿವೆ ಎಂಬುದನ್ನು ಸ್ಫುಟವಾಗಿ ತೋರಿಸುತ್ತವೆ.​—ಮತ್ತಾಯ 5:​14-16; ಯೋಹಾನ 11:​23, 24; ಕೊಲೊಸ್ಸೆ 2:18: 1 ತಿಮೊಥೆಯ 4:​1-3.

ಸುರುಳಿಗಳು ಮುಚ್ಚಿಡಲ್ಪಡಲೂ ಇಲ್ಲ, ಮರೆಮಾಡಲ್ಪಡಲೂ ಇಲ್ಲ

ಮೃತ ಸಮುದ್ರದ ಸುರುಳಿಗಳನ್ನು ಕಂಡುಹಿಡಿದ ನಂತರದ ವರ್ಷಗಳಲ್ಲಿ, ಲೋಕದಾದ್ಯಂತ ಇದರ ಕುರಿತಾಗಿ ಅಧ್ಯಯನಮಾಡುತ್ತಿರುವ ಜನರಿಗೆ ಸುಲಭವಾಗಿ ಸಿಗುವಂತೆ ಮೊದಲ ಕಂಡುಹಿಡಿತಗಳನ್ನು ಪುಸ್ತಕಗಳ ರೂಪದಲ್ಲಿ ಹೊರತರಲಾಯಿತು. ಆದರೆ, ಗುಹೆ 4ರಿಂದ ಸಿಕ್ಕಿದ ಸಾವಿರಾರು ಸುರುಳಿಯ ಅವಶೇಷಗಳು ಹೆಚ್ಚು ಗೊಂದಲಗೊಳಿಸುವಂತಹದ್ದಾಗಿದ್ದವು. ಇವು ಪ್ಯಾಲೆಸ್ಟೀನ್‌ ಪ್ರಾಕ್ತನಶಾಸ್ತ್ರ ಮ್ಯೂಸಿಯಮ್‌ನ ಪೂರ್ವ ಯೆರೂಸಲೇಮ್‌ನಲ್ಲಿರುವ (ಆಗ ಯೋರ್ದನ್‌ನ ಭಾಗ) ಅಧ್ಯಯನಗಾರರ ಒಂದು ಚಿಕ್ಕ ಅಂತಾರಾಷ್ಟ್ರೀಯ ತಂಡದ ಕೈಗಳಲ್ಲಿದ್ದವು. ಈ ತಂಡದಲ್ಲಿ ಯಾವುದೇ ಯೆಹೂದಿ ಇಲ್ಲವೆ ಇಸ್ರಾಯೇಲ್‌ ಅಧ್ಯಯನಗಾರರು ಇರಲಿಲ್ಲ.

ಈ ತಂಡವು, ತಾವು ಸಂಶೋಧನೆಮಾಡಿದ ವಿಷಯವನ್ನು ಅಧಿಕೃತವಾಗಿ ಪ್ರಕಟಿಸುವ ವರೆಗೂ ಈ ಸುರುಳಿಗಳನ್ನು ಬೇರೆಯವರಿಗೆ ಕೊಡುವುದಿಲ್ಲವೆಂಬ ಕರಾರನ್ನು ಮಾಡಿತ್ತು. ತಂಡದಲ್ಲಿರುವವರ ಸಂಖ್ಯೆಯನ್ನು ಸೀಮಿತವಾಗಿಡಲಾಗಿತ್ತು. ತಂಡದ ಒಬ್ಬ ಸದಸ್ಯನು ಮೃತನಾಗುವಲ್ಲಿ, ಅವನ ಜಾಗದಲ್ಲಿ ಕೇವಲ ಒಬ್ಬ ಹೊಸ ಅಧ್ಯಯನಗಾರನನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಅದರಲ್ಲಿ ಒಳಗೂಡಿದ್ದ ಕೆಲಸಕ್ಕೆ, ಇನ್ನೂ ದೊಡ್ಡ ತಂಡವು ಬೇಕಾಗಿತ್ತು ಮತ್ತು ಕೆಲವೊಮ್ಮೆ ಪುರಾತನ ಹೀಬ್ರೂ ಹಾಗೂ ಆರಮೇಯಿಕ್‌ ಭಾಷೆಯ ಹೆಚ್ಚು ಪರಿಣತ ವ್ಯಾಖ್ಯಾನಕಾರರು ಬೇಕಾಗಿದ್ದರು ಎಂಬುದನ್ನು ತೋರಿಸಿತು. ಜೇಮ್ಸ್‌ ವಂಡೆರ್ಕಮ್‌ ಹೀಗೆ ಹೇಳುತ್ತಾರೆ: “ಎಂಟು ಮಂದಿ ಪರಿಣತರಿಗೆ ಹತ್ತಾರು ಸಾವಿರ ಸುರುಳಿಗಳ ಅವಶೇಷಗಳನ್ನು ನಿರ್ವಹಿಸುವುದು ನಿಜವಾಗಿಯೂ ಶಕ್ತಿಗೆ ಮೀರಿದ್ದು.”

1967ರಲ್ಲಿ ನಡೆದ ಆರು ದಿವಸಗಳ ಯುದ್ಧದಿಂದಾಗಿ, ಪೂರ್ವ ಯೆರೂಸಲೇಮ್‌ ಹಾಗೂ ಅದರ ಸುರುಳಿಗಳು ಇಸ್ರೇಲಿನ ಅಧಿಕಾರವ್ಯಾಪ್ತಿಗೆ ಬಂತಾದರೂ, ಸುರುಳಿಯ ಬಗ್ಗೆ ಅಧ್ಯಯನಮಾಡುತ್ತಿದ್ದ ತಂಡದ ಕರಾರಿನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಗುಹೆ 4ರಿಂದ ಸಿಕ್ಕಿದ ಸುರುಳಿಗಳನ್ನು ಪ್ರಕಟಿಸಲು ವರ್ಷಗಳಿಂದ ಶತಮಾನಗಳ ವರೆಗೆ ವಿಳಂಬವಾಯಿತು. ಇದರಿಂದ ರೊಚ್ಚಿಗೆದ್ದ ಅಸಂಖ್ಯಾತ ಅಧ್ಯಯನಗಾರರು ಪ್ರತಿಭಟಿಸಿದರು. 1977ರಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಗೇಜಾ ವೆರ್ಮೆಷ್‌ ಇದನ್ನು, 20ನೇ ಶತಮಾನದ ಪಾಂಡಿತ್ಯ ಹಗರಣ ಸರ್ವೋತ್ಕೃಷ್ಟತೆ ಎಂದು ಕರೆದರು. ಈ ಸುರುಳಿಗಳಲ್ಲಿ ಕ್ರೈಸ್ತತ್ವವನ್ನೇ ಕೆಡವಿಹಾಕುವಂತಹ ಮಾಹಿತಿಯನ್ನು ಕ್ಯಾಥೊಲಿಕ್‌ ಚರ್ಚು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ ಎಂಬ ಸುಳ್ಳು ವದಂತಿಯು ಕಾಡ್ಗಿಚ್ಚಿನಂತೆ ಹಬ್ಬತೊಡಗಿತು.

1980ಗಳಲ್ಲಿ, ಕಟ್ಟಕಡೆಗೆ ಆ ತಂಡದ ಸಂಖ್ಯೆಯು 20ಕ್ಕೆ ಏರಿತು. ನಂತರ, 1990ರಲ್ಲಿ ಯೆರೂಸಲೇಮಿನ ಹೀಬ್ರೂ ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ನಿಯುಕ್ತರಾದ ಮುಖ್ಯ ಸಂಪಾದಕ ಇಮಾನ್ವೆಲ್‌ ಟೋವ್‌ ಅವರ ನಿರ್ದೇಶನದ ಕೆಳಗೆ, ಆ ತಂಡದ ಸಂಖ್ಯೆಯು 50ಕ್ಕೆ ಏರಿತು. ಉಳಿದ ಸುರುಳಿಗಳ ಬಗ್ಗೆ ಸವಿವರವಾಗಿ ಪ್ರಕಟಿಸಲಿಕ್ಕಾಗಿ ಒಂದು ಕಟ್ಟುನಿಟ್ಟಾದ ಶೆಡ್ಯುಲನ್ನು ಮಾಡಲಾಯಿತು.

1991ರಲ್ಲಿ ಅನಿರೀಕ್ಷಿತವಾದ ಪ್ರಗತಿಯು ಕಂಡುಬಂತು. ಮೊದಲು, ಅಪ್ರಕಟಿತ ಮೃತ ಸಮುದ್ರದ ಸುರುಳಿಗಳ ಪ್ರಥಮ ಮುದ್ರಣ (ಇಂಗ್ಲಿಷ್‌) ಎಂಬ ಪುಸ್ತಕವು ಪ್ರಕಟವಾಯಿತು. ಇದನ್ನು ತಂಡದ ಅನುಕ್ರಮಣಿಕಾ ಪ್ರತಿಯ ಆಧಾರದ ಮೇಲೆ ಕಂಪ್ಯೂಟರಿನ ಸಹಾಯದಿಂದ ಹೊರತರಲಾಯಿತು. ಮುಂದೆ, ಕ್ಯಾಲಿಫೋರ್ನಿಯದ ಸನ್‌ಮರೀನೋದಲ್ಲಿರುವ ಹಂಟಿಗ್‌ಟಾನ್‌ ಲೈಬ್ರರಿಯು, ಸುರುಳಿಗಳ ಸಂಪೂರ್ಣ ಛಾಯಾಚಿತ್ರಗಳನ್ನು ಯಾವುದೇ ಅಧ್ಯಯನಗಾರನಿಗೆ ಸಿಗುವಂತೆ ತಮ್ಮಲ್ಲಿ ಸೌಲಭ್ಯವಿದೆ ಎಂದು ಪ್ರಕಟನೆಯನ್ನು ಹೊರಡಿಸಿತು. ಸ್ವಲ್ಪ ಸಮಯದೊಳಗೆ, ಮೃತ ಸಮುದ್ರ ಸುರುಳಿಗಳ ಪಡಿಯಚ್ಚು ಮುದ್ರಣ (ಇಂಗ್ಲಿಷ್‌) ಎಂಬ ಪುಸ್ತಕದ ಮುದ್ರಣದಿಂದಾಗಿ, ಹಿಂದೆ ಪ್ರಕಟಿಸಲ್ಪಡದಿದ್ದ ಸುರುಳಿಗಳ ಛಾಯಾಚಿತ್ರಗಳು ಸುಲಭವಾಗಿ ಸಿಗುವಂತಾಯಿತು.

ಕಳೆದ ದಶಕದ ವರೆಗೂ, ಎಲ್ಲ ಮೃತ ಸಮುದ್ರದ ಸುರುಳಿಗಳು ಪರಿಶೀಲನೆಗಾಗಿ ಲಭ್ಯವಿವೆ. ಸುರುಳಿಗಳು ಮುಚ್ಚಿಹಾಕಲ್ಪಡಲೂ ಇಲ್ಲ ಅಥವಾ ಮರೆಮಾಡಲ್ಪಡಲೂ ಇಲ್ಲವೆಂಬುದನ್ನು ಸಂಶೋಧನೆಯು ಸಾಬೀತುಪಡಿಸುತ್ತವೆ. ಸುರುಳಿಗಳ ಕೊನೆಯ ಅಧಿಕೃತ ಮುದ್ರಣಗಳು ಪ್ರಕಟಿಸಲ್ಪಡುತ್ತಿರುವುದರಿಂದ, ಈಗ ಸಂಪೂರ್ಣ ವಿಶ್ಲೇಷಣೆಯು ಪ್ರಾರಂಭವಾಗಸಾಧ್ಯವಿದೆ. ಸುರುಳಿಗಳನ್ನು ಅಧ್ಯಯನಮಾಡಲು ಮತ್ತೊಂದು ಹೊಸ ತಂಡವು ಹುಟ್ಟಿಕೊಂಡಿದೆ. ಆದರೆ, ಈ ಸಂಶೋಧನೆಯು ಬೈಬಲ್‌ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಪ್ರಾಮುಖ್ಯವಾಗಿದೆ?

[ಪಾದಟಿಪ್ಪಣಿಗಳು]

^ ಪ್ಯಾರ. 6 ಅಪಾಕ್ರಿಫ (ಅಕ್ಷರಾರ್ಥವಾಗಿ, “ಬಚ್ಚಿಟ್ಟ”) ಹಾಗೂ ಸ್ಯೂಡಿಪಿಗ್ರಫ (ಅಕ್ಷರಾರ್ಥವಾಗಿ, “ಖೋಟಾ ಬರಹಗಳು”) ಎಂಬ ಅರ್ಥವನ್ನು ಕೊಡುತ್ತದೆ. ಇವು ಸಾ.ಶ.ಪೂ. ಮೂರನೇ ಶತಮಾನದಿಂದ ಸಾ.ಶ. ಪ್ರಥಮ ಶತಮಾನದ ವರೆಗಿನ ಯೆಹೂದಿ ಬರವಣಿಗೆಗಳಾಗಿವೆ. ರೋಮನ್‌ ಕ್ಯಾಥೊಲಿಕ್‌ ಚರ್ಚು ಅಪಾಕ್ರಿಫವನ್ನು ಪ್ರೇರಿತ ಬೈಬಲ್‌ ಗ್ರಂಥದ ಭಾಗವಾಗಿ ಸ್ವೀಕರಿಸಿದೆಯಾದರೂ, ಈ ಪುಸ್ತಕಗಳು ಯೆಹೂದಿ ಹಾಗೂ ಪ್ರಾಟೆಸ್ಟಂಟರಿಂದ ತಿರಸ್ಕರಿಸಲ್ಪಟ್ಟಿವೆ. ಸ್ಯೂಡಿಪಿಗ್ರಫವು ಬೈಬಲ್‌ ಕಥೆಗಳನ್ನು ಅಧಿಕ ವಿಸ್ತರಿಸಿ ತಿಳಿಸುತ್ತವೆ. ಇದು ಕೆಲವು ಪ್ರಖ್ಯಾತ ಬೈಬಲ್‌ ಪಾತ್ರಧಾರಿಗಳ ಹೆಸರಿನಲ್ಲಿ ಬರೆಯಲ್ಪಟ್ಟಿವೆ.

^ ಪ್ಯಾರ. 13 ಕಾವಲಿನಬುರುಜು, ನವೆಂಬರ್‌ 15, 1998ರ ಪುಟಗಳು 21-4ರಲ್ಲಿರುವ “ಮಕಬೀಯರು ಯಾರು?” ಎಂಬ ಲೇಖನವನ್ನು ನೋಡಿರಿ.

[ಪುಟ 3ರಲ್ಲಿರುವ ಚಿತ್ರ]

ಪುರಾತನ ಸುರುಳಿಗಳನ್ನು ಕಂಡುಕೊಂಡ ಮೃತ ಸಮುದ್ರದ ಹತ್ತಿರದಲ್ಲಿರುವ ಗುಹೆಗಳು

[ಪುಟ 3ರಲ್ಲಿರುವ ಚಿತ್ರ ಕೃಪೆ]

ಸುರುಳಿಯ ಅವಶೇಷ: 3, 4 ಮತ್ತು 6ನೇ ಪುಟಗಳು: Courtesy of Israel Antiquities Authority

[ಪುಟ 5ರಲ್ಲಿರುವ ಚಿತ್ರ ಕೃಪೆ]

Courtesy of Shrine of the Book, Israel Museum, Jerusalem