ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ನ್ಯಾಯತೀರ್ಪಿನ ದಿನವು ಹತ್ತಿರವಿದೆ!

ಯೆಹೋವನ ನ್ಯಾಯತೀರ್ಪಿನ ದಿನವು ಹತ್ತಿರವಿದೆ!

ಯೆಹೋವನ ನ್ಯಾಯತೀರ್ಪಿನ ದಿನವು ಹತ್ತಿರವಿದೆ!

“ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.”​—ಚೆಫನ್ಯ 1:14.

1. ಚೆಫನ್ಯನ ಮೂಲಕ ದೇವರು ಯಾವ ಎಚ್ಚರಿಕೆಯನ್ನು ಕೊಟ್ಟನು?

ಯೆಹೋವ ದೇವರು ಇನ್ನು ಸ್ವಲ್ಪ ಸಮಯದೊಳಗೆ ದುಷ್ಟರ ವಿರುದ್ಧ ಕ್ರಿಯೆಗೈಯಲಿದ್ದಾನೆ. ಕಿವಿಗೊಡಿರಿ! ಇದು ಆತನ ಎಚ್ಚರಿಕೆಯಾಗಿದೆ: ‘ಜನಗಳನ್ನು ನಾಶಪಡಿಸುವೆನು; ಭೂಮಿಯ ಮೇಲಿಂದ ನರಸಂತಾನವನ್ನು ಕಿತ್ತುಹಾಕುವೆನು.’ (ಚೆಫನ್ಯ 1:3) ಪರಮಾಧಿಕಾರಿ ಪ್ರಭುವಾದ ಯೆಹೋವನ ಈ ಮಾತುಗಳು, ಆತನ ಪ್ರವಾದಿಯಾಗಿದ್ದ ಚೆಫನ್ಯನ ಮೂಲಕ ನುಡಿಯಲ್ಪಟ್ಟವು. ಚೆಫನ್ಯನು ನಂಬಿಗಸ್ತ ಅರಸನಾಗಿದ್ದ ಹಿಜ್ಕೀಯನ ಮರಿಮಗನ ಮಗನಾಗಿದ್ದಿರಬಹುದು. ಅರಸನಾದ ಯೋಷೀಯನ ಕಾಲದಲ್ಲಿ ಮಾಡಲ್ಪಟ್ಟ ಈ ಪ್ರಕಟನೆಯು, ಯೆಹೂದದಲ್ಲಿ ವಾಸಿಸುತ್ತಿದ್ದ ದುಷ್ಟರಿಗೆ ಒಳ್ಳೆಯ ಪರಿಣಾಮವನ್ನು ಮುಂತಿಳಿಸಲಿಲ್ಲ.

2. ಯೋಷೀಯನು ಕೈಗೊಂಡ ಕ್ರಮಗಳು ಯೆಹೋವನ ನ್ಯಾಯತೀರ್ಪಿನ ದಿನವನ್ನು ಏಕೆ ತಡೆಗಟ್ಟಲಿಲ್ಲ?

2 ಚೆಫನ್ಯನ ಪ್ರವಾದನೆಯು, ಯೆಹೂದದಲ್ಲಿದ್ದ ಅಶುದ್ಧ ಆರಾಧನೆಯನ್ನು ಸಂಪೂರ್ಣವಾಗಿ ಅಳಿಸಿಬಿಡಬೇಕೆಂಬ ಯೋಷೀಯನ ಅರಿವನ್ನು ಇನ್ನೂ ಬಲಪಡಿಸಿತು ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೂ, ಈ ದೇಶದಿಂದ ಸುಳ್ಳಾರಾಧನೆಯನ್ನು ಅಳಿಸಿಬಿಡಲಿಕ್ಕಾಗಿ ಯೋಷೀಯನು ಕೈಗೊಂಡ ಕ್ರಮಗಳು, ಜನರ ಮಧ್ಯದಲ್ಲಿದ್ದ ಎಲ್ಲ ದುಷ್ಟತನವನ್ನು ತೆಗೆದುಹಾಕಲಿಲ್ಲ; ಅಥವಾ ‘ಯೆರೂಸಲೇಮನ್ನು ನಿರಪರಾಧರಕ್ತದಿಂದ ತುಂಬಿಸಿದ್ದ’ ಅವನ ಅಜ್ಜನಾದ ಅರಸ ಮನಸ್ಸೆಯ ಪಾಪಗಳಿಗಾಗಿ ಪ್ರಾಯಶ್ಚಿತ್ತವನ್ನು ಸಹ ಒದಗಿಸಲಿಲ್ಲ. (2 ಅರಸುಗಳು 24:​3, 4; 2 ಪೂರ್ವಕಾಲವೃತ್ತಾಂತ 34:3) ಆದುದರಿಂದ, ಅವರ ಮೇಲೆ ಯೆಹೋವನ ನ್ಯಾಯತೀರ್ಪಿನ ದಿನವು ಖಂಡಿತವಾಗಿಯೂ ಬರಲಿಕ್ಕಿತ್ತು.

3. “ಯೆಹೋವನ ಸಿಟ್ಟಿನ ದಿನದಲ್ಲಿ” ಬದುಕಿ ಉಳಿಯಬಲ್ಲೆವು ಎಂಬ ವಿಷಯದಲ್ಲಿ ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?

3 ಆದರೆ, ಆ ಭಯಪ್ರೇರಿತ ದಿನದಲ್ಲಿ ಕೆಲವರು ಬದುಕಿ ಉಳಿಯಲಿದ್ದರು. ಆದುದರಿಂದ, ದೇವರ ಪ್ರವಾದಿಯು ಪ್ರೇರೇಪಿಸಿದ್ದು: “ತೀರ್ಪುಫಲಿಸುವದರೊಳಗೆ ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವದಕ್ಕೆ ಮುಂಚೆ, ಯೆಹೋವನ ಸಿಟ್ಟಿನ ದಿನವು ನಿಮ್ಮನ್ನು ಮುಟ್ಟುವದಕ್ಕೆ ಮೊದಲು ಸೇರಿಬನ್ನಿರಿ, ಕೂಡಿಕೊಳ್ಳಿರಿ; ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ. ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” (ಚೆಫನ್ಯ 2:​2, 3) ಯೆಹೋವನ ನ್ಯಾಯತೀರ್ಪಿನ ದಿನದಲ್ಲಿ ಬದುಕಿ ಉಳಿಯುವ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡವರಾಗಿದ್ದು, ನಾವು ಈಗ ಬೈಬಲಿನ ಚೆಫನ್ಯ ಪುಸ್ತಕವನ್ನು ಪರಿಗಣಿಸೋಣ. ಇದು ಸಾ.ಶ.ಪೂ. 648ಕ್ಕೆ ಮುಂಚೆ ಯೆಹೂದದಲ್ಲಿ ಬರೆಯಲ್ಪಟ್ಟಿತು. ಇದು ದೇವರ ‘ಪ್ರವಾದನವಾಕ್ಯದ’ ಭಾಗವಾಗಿರುವುದರಿಂದ, ನಾವೆಲ್ಲರೂ ಇದಕ್ಕೆ ಮನಃಪೂರ್ವಕ ಗಮನಕೊಡಬೇಕಾಗಿದೆ.​—2 ಪೇತ್ರ 1:19.

ಯೆಹೋವನು ಕೈಯೆತ್ತುತ್ತಾನೆ

4, 5. ಯೆಹೂದದಲ್ಲಿ ಚೆಫನ್ಯ 1:​1-3ರ ಮಾತುಗಳು ದುಷ್ಟರ ವಿಷಯದಲ್ಲಿ ಹೇಗೆ ನೆರವೇರಿದವು?

4 ಚೆಫನ್ಯನಿಗೆ “ಯೆಹೋವನು ದಯಪಾಲಿಸಿದ ವಾಕ್ಯ”ವು, ಈ ಮುಂಚೆ ಉಲ್ಲೇಖಿಸಲ್ಪಟ್ಟ ಎಚ್ಚರಿಕೆಯೊಂದಿಗೆ ಆರಂಭವಾಗುತ್ತದೆ. ದೇವರು ಪ್ರಕಟಿಸುವುದು: “ಯೆಹೋವನು ಇಂತೆನ್ನುತ್ತಾನೆ​—ನಾನು ಭೂಮಂಡಲದಿಂದ ಸಮಸ್ತವನ್ನು ಅಳಿಸಿಬಿಡುವೆನು. ಜನಪಶುಗಳನ್ನೂ ಆಕಾಶದ ಪಕ್ಷಿಗಳನ್ನೂ ಸಮುದ್ರದ ಮೀನುಗಳನ್ನೂ ನಾಶಪಡಿಸುವೆನು; ವಿಗ್ರಹಗಳೆಂಬ ವಿಘ್ನಗಳನ್ನೂ ಅವುಗಳಿಗೆ ಎಡವುವ ದುಷ್ಟರನ್ನೂ ಸಂಹರಿಸುವೆನು; ಭೂಮಿಯ ಮೇಲಿಂದ ನರಸಂತಾನವನ್ನು ಕಿತ್ತುಹಾಕುವೆನು; ಇದು ಯೆಹೋವನ ನುಡಿ.”​—ಚೆಫನ್ಯ 1:1-3.

5 ಹೌದು, ಯೆಹೂದದಲ್ಲಿದ್ದ ಗಮನಾರ್ಹ ದುಷ್ಟತನಕ್ಕೆ ಯೆಹೋವನು ಅಂತ್ಯವನ್ನು ತರಲಿದ್ದನು. ‘ಭೂಮಂಡಲದಿಂದ ಸಮಸ್ತವನ್ನು ಅಳಿಸಿಬಿಡಲಿಕ್ಕಾಗಿ’ ದೇವರು ಯಾರನ್ನು ಉಪಯೋಗಿಸಲಿದ್ದನು? ಸಾ.ಶ.ಪೂ. 659ರಲ್ಲಿ ಆರಂಭಗೊಂಡ ಅರಸನಾದ ಯೋಷೀಯನ ಆಳ್ವಿಕೆಯ ಆದಿಭಾಗದಲ್ಲಿ ಚೆಫನ್ಯನು ಈ ಪ್ರವಾದನೆಯನ್ನು ನುಡಿದಿದ್ದನು. ಆದುದರಿಂದ, ಆ ಪ್ರವಾದನಾತ್ಮಕ ಮಾತುಗಳು, ಸಾ.ಶ.ಪೂ. 607ರಲ್ಲಿ ಬಾಬೆಲಿನವರ ಕೈಗಳಲ್ಲಿ ಯೆಹೂದ ಮತ್ತು ಅದರ ರಾಜಧಾನಿ ನಗರವಾದ ಯೆರೂಸಲೇಮಿನ ನಾಶನದಲ್ಲಿ ನೆರವೇರಿಕೆಯನ್ನು ಪಡೆದವು. ಆ ಸಮಯದಲ್ಲಿ, ಯೆಹೂದದಲ್ಲಿ ದುಷ್ಟರ ‘ಅಳಿವಾಯಿತು.’

6-8. ಚೆಫನ್ಯ 1:​4-6ರಲ್ಲಿ ಏನು ಮುಂತಿಳಿಸಲ್ಪಟ್ಟಿತು, ಮತ್ತು ಆ ಪ್ರವಾದನೆಯು ಪುರಾತನ ಯೆಹೂದದಲ್ಲಿ ಹೇಗೆ ನೆರವೇರಿತು?

6 ಸುಳ್ಳು ಆರಾಧಕರ ವಿರುದ್ಧ ದೇವರ ಕೃತ್ಯಗಳ ಕುರಿತು ಮುಂತಿಳಿಸುತ್ತಾ ಚೆಫನ್ಯ 1:​4-6 ಹೀಗೆ ಹೇಳುತ್ತದೆ: “ನಾನು ಯೆಹೂದದ ಮೇಲೂ ಯೆರೂಸಲೇಮಿನವರೆಲ್ಲರ ಮೇಲೂ ಕೈಯೆತ್ತಿ ಈ ಸ್ಥಳದಿಂದ ಬಾಳನ ಪೂಜೆಯನ್ನು ನಿಶ್ಶೇಷಗೊಳಿಸಿ ಕೆಮಾರ್ಯ ಮೊದಲಾದ ಪೂಜಾರಿಗಳನ್ನು ನಿರ್ನಾಮಮಾಡುವೆನು; ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆ ಪೂಜಿಸುವವರನ್ನೂ ಯೆಹೋವನ ಭಕ್ತರೆಂದು ಪ್ರತಿಜ್ಞೆಮಾಡಿಕೊಂಡು ಆರಾಧಿಸಿ ಮಲ್ಕಾಮನ ಮೇಲೆ ಆಣೆಯಿಡುವವರನ್ನೂ ಯೆಹೋವನನ್ನು ಆಶ್ರಯಿಸದೆ ಯೆಹೋವನ ದರ್ಶನವನ್ನು ಬಯಸದೆ ಯೆಹೋವನ ಮಾರ್ಗಬಿಟ್ಟವರನ್ನೂ ಧ್ವಂಸಪಡಿಸುವೆನು.”

7 ಯೆಹೂದ ಮತ್ತು ಯೆರೂಸಲೇಮಿನ ಜನರ ವಿರುದ್ಧ ಯೆಹೋವನು ಕೈಯೆತ್ತಿದ್ದನು. ಆತನು ಕಾನಾನ್ಯರ ಫಲವಂತಿಕೆಯ ದೇವನಾದ ಬಾಳನ ಆರಾಧಕರನ್ನು ಕೊಂದುಹಾಕಲಿದ್ದನು. ಸ್ಥಳಿಕ ದೇವದೇವತೆಗಳಲ್ಲಿ ಅನೇಕರನ್ನು ಬಾಳರೆಂದು ಕರೆಯಲಾಗುತ್ತಿತ್ತು. ಏಕೆಂದರೆ ಆ ದೇವತೆಗಳು ನಿರ್ದಿಷ್ಟ ಸ್ಥಳಗಳ ಮೇಲೆ ಅಧಿಕಾರವನ್ನು ಹೊಂದಿದ್ದಾರೆಂದು ಮತ್ತು ಆ ಸ್ಥಳಗಳಲ್ಲಿ ಅವರು ತಮ್ಮ ಪ್ರಭಾವವನ್ನು ಬೀರುತ್ತಾರೆಂದು ಅವುಗಳ ಆರಾಧಕರು ಭಾವಿಸುತ್ತಿದ್ದರು. ಉದಾಹರಣೆಗೆ, ಪೆಗೋರದ ಪರ್ವತದಲ್ಲಿ ಮೋವಾಬ್ಯರು ಮತ್ತು ಮಿದ್ಯಾನ್ಯರು ಬಾಳನನ್ನು ಆರಾಧಿಸಿದರು. (ಅರಣ್ಯಕಾಂಡ 25:​1, 3, 6) ಬಾಳನ ಯಾಜಕರನ್ನು ಮತ್ತು ಈ ಯಾಜಕರೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳುವ ಮೂಲಕ ದೇವರ ನಿಯಮವನ್ನು ಉಲ್ಲಂಘಿಸುತ್ತಿದ್ದ ಅಪನಂಬಿಗಸ್ತ ಲೇವಿಯ ಯಾಜಕರನ್ನು ಸಹ ಯೆಹೋವನು ಯೆಹೂದದಾದ್ಯಂತ ಕಡಿದುಹಾಕಲಿದ್ದನು.​—ವಿಮೋಚನಕಾಂಡ 20:​2, 3.

8 ದೇವರು ‘ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಹಾಕಿ’ ತಲೆಬಾಗುತ್ತಿದ್ದವರನ್ನು, ಅಂದರೆ ಜ್ಯೋತಿಶಾಸ್ತ್ರವನ್ನು ಬಳಸುತ್ತಿದ್ದವರನ್ನು ಹಾಗೂ ಸೂರ್ಯನ ಆರಾಧಕರನ್ನು ಸಹ ನಿರ್ಮೂಲಮಾಡಲಿದ್ದನು. (2 ಅರಸು 23:11; ಯೆರೆಮೀಯ 19:13; 32:29) ‘ಯೆಹೋವನ ಭಕ್ತರೆಂದು ಪ್ರತಿಜ್ಞೆಮಾಡಿಕೊಂಡು ಆರಾಧಿಸಿ, ಮಲ್ಕಾಮನ ಮೇಲೆ ಆಣೆಯಿಡುವ’ ಮೂಲಕ ಸತ್ಯಾರಾಧನೆಯನ್ನು ಸುಳ್ಳು ಧರ್ಮದೊಂದಿಗೆ ಸೇರಿಸಲು ಪ್ರಯತ್ನಿಸುವವರ ಮೇಲೆಯೂ ದೈವಿಕ ಕೋಪವು ಸುರಿಸಲ್ಪಡಲಿತ್ತು. ಮಲ್ಕಾಮ ಎಂಬುದು, ಅಮ್ಮೋನಿಯರ ಪ್ರಧಾನ ದೇವನಾದ ಮೋಲೆಕನ ಇನ್ನೊಂದು ಹೆಸರಾಗಿದ್ದಿರಬಹುದು. ಇವನ ಆರಾಧನೆಯಲ್ಲಿ ಮಕ್ಕಳ ಬಲಿಯೂ ಸೇರಿತ್ತು.​—1 ಅರಸು 11:5; ಯೆರೆಮೀಯ 32:35.

ಕ್ರೈಸ್ತಪ್ರಪಂಚದ ಅಂತ್ಯವು ಸಮೀಪವಿದೆ!

9. (ಎ) ಕ್ರೈಸ್ತಪ್ರಪಂಚವು ಯಾವ ವಿಷಯದಲ್ಲಿ ದೋಷಿಯಾಗಿದೆ? (ಬಿ) ಯೆಹೂದದ ಅಪನಂಬಿಗಸ್ತ ಜನರಿಗೆ ಅಸದೃಶವಾಗಿ ನಾವು ಯಾವ ನಿರ್ಧಾರವನ್ನು ಮಾಡತಕ್ಕದ್ದು?

9 ಇದೆಲ್ಲವೂ, ಸುಳ್ಳಾರಾಧನೆ ಮತ್ತು ಜ್ಯೋತಿಶಾಸ್ತ್ರದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿರುವ ಕ್ರೈಸ್ತಪ್ರಪಂಚವನ್ನು ನಮ್ಮ ನೆನಪಿಗೆ ತರಬಹುದು. ಮತ್ತು ಪಾದ್ರಿಗಳಿಂದ ಬೆಂಬಲಿಸಲ್ಪಟ್ಟ ಯುದ್ಧವೆಂಬ ವೇದಿಯ ಮೇಲೆ ಲಕ್ಷಗಟ್ಟಲೆ ಜೀವಗಳನ್ನು ಅರ್ಪಿಸುವುದರಲ್ಲಿ ಇದು ವಹಿಸುವ ಪಾತ್ರವು ಖಂಡಿತವಾಗಿಯೂ ಅಸಹ್ಯಕರವಾದದ್ದಾಗಿದೆ! ಯೆಹೂದದ ಅಪನಂಬಿಗಸ್ತ ಜನರು ‘ಯೆಹೋವನ ಮಾರ್ಗವನ್ನು ಬಿಟ್ಟು,’ ಉದಾಸೀನಭಾವವನ್ನು ತೋರಿಸುತ್ತಾ, ಆತನನ್ನು ಆಶ್ರಯಿಸದೆ, ಆತನ ಮಾರ್ಗದರ್ಶನವನ್ನು ಕೋರಲಿಲ್ಲ. ನಾವೆಂದಿಗೂ ಅವರಂತೆ ಆಗದಿರೋಣ. ಅದಕ್ಕೆ ಬದಲಾಗಿ, ದೇವರ ಕಡೆಗಿನ ನಮ್ಮ ಸಮಗ್ರತೆಯನ್ನು ನಾವು ಕಾಪಾಡಿಕೊಳ್ಳೋಣ.

10. ಚೆಫನ್ಯ 1:7ರ ಪ್ರವಾದನಾತ್ಮಕ ವಿಶೇಷತೆಯನ್ನು ನೀವು ಹೇಗೆ ವಿವರಿಸುವಿರಿ?

10 ಪ್ರವಾದಿಯ ಮುಂದಿನ ಮಾತುಗಳು, ಯೆಹೂದದ ತಪ್ಪಿತಸ್ಥರಿಗೆ ಮತ್ತು ಇಂದಿರುವ ದುಷ್ಟರಿಗೆ ಅನ್ವಯಿಸುತ್ತವೆ. ಚೆಫನ್ಯ 1:7 ಹೇಳುವುದು: “ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ; ಯೆಹೋವನ ದಿನವು ಸಮೀಪಿಸಿತು; ಯೆಹೋವನು ಯಜ್ಞದ ಔತಣವನ್ನು ಸಿದ್ಧಪಡಿಸಿದ್ದಾನೆ, ಕರೆದವರನ್ನು ಮಡಿಮಾಡಿದ್ದಾನೆ.” ಈ ‘ಕರೆಯಲ್ಪಟ್ಟವರು’ ಯೆಹೂದದ ಕಸ್ದೀಯ ವೈರಿಗಳೇ ಆಗಿದ್ದರು ಎಂಬುದು ಸ್ಪಷ್ಟ. ‘ಯಜ್ಞವು’ ಯೆಹೂದ ಮತ್ತು ಅದರ ರಾಜಧಾನಿ ನಗರವೇ ಆಗಿತ್ತು. ಹೀಗೆ ಯೆರೂಸಲೇಮನ್ನು ನಾಶಮಾಡುವ ದೇವರ ಉದ್ದೇಶವನ್ನು ಚೆಫನ್ಯನು ಪ್ರಕಟಿಸಿದನು; ಮತ್ತು ಈ ಪ್ರವಾದನೆಯು ಕ್ರೈಸ್ತಪ್ರಪಂಚದ ನಾಶನವನ್ನು ಸಹ ಸೂಚಿಸಿತು. ನಿಜವಾಗಿಯೂ ದೇವರ ನ್ಯಾಯತೀರ್ಪಿನ ದಿನವು ಇಂದು ತುಂಬ ಹತ್ತಿರವಿರುವುದರಿಂದ, ಸಮಸ್ತ ಲೋಕವು ‘ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಬೇಕು’ ಮತ್ತು ಯೇಸುವಿನ ಅಭಿಷಿಕ್ತ ಹಿಂಬಾಲಕರ ‘ಚಿಕ್ಕ ಹಿಂಡಿನ’ ಮೂಲಕ ಹಾಗೂ ಅವರ ಸಂಗಡಿಗರಾಗಿರುವ ‘ಬೇರೆ ಕುರಿಗಳ’ ಮೂಲಕ ಆತನು ಏನು ಹೇಳುತ್ತಾನೋ ಅದಕ್ಕೆ ಕಿವಿಗೊಡಬೇಕು. (ಲೂಕ 12:32; ಯೋಹಾನ 10:16) ಕಿವಿಗೊಡದಿರುವ ಮೂಲಕ ದೇವರ ರಾಜ್ಯದ ಆಳ್ವಿಕೆಗೆ ತಮ್ಮನ್ನು ಯಾರು ವಿರೋಧಿಗಳಾಗಿ ಮಾಡಿಕೊಳ್ಳುತ್ತಾರೋ ಅವರೆಲ್ಲರಿಗೆ ಸರ್ವನಾಶವು ಕಾದಿದೆ.​—ಕೀರ್ತನೆ 2:​1, 2.

ಅತಿ ಬೇಗನೆ ಗೋಳಾಟದ ದಿನವು ಬರಲಿದೆ!

11. ಚೆಫನ್ಯ 1:​8-11ರ ಸಾರಾಂಶವೇನು?

11 ಯೆಹೋವನ ದಿನದ ಕುರಿತು ಚೆಫನ್ಯ 1:​8-11 ಹೀಗೆ ಕೂಡಿಸಿ ಹೇಳುತ್ತದೆ: “ಯೆಹೋವನ ಆ ಯಜ್ಞದಿನದಲ್ಲಿ ನಾನು ದೇಶಾಧಿಪತಿಗಳನ್ನೂ ರಾಜವಂಶದವರನ್ನೂ ವಿದೇಶವಸ್ತ್ರಧಾರಿಗಳೆಲ್ಲರನ್ನೂ ದಂಡಿಸುವೆನು. ಹೊಸ್ತಿಲಹಾರಿ ನುಗ್ಗಿ ಮೋಸಹಿಂಸೆಗಳಿಂದ ದೋಚಿದ್ದನ್ನು ತಮ್ಮ ಒಡೆಯನ ಮನೆಯೊಳಗೆ ತುಂಬಿಸುವವರೆಲ್ಲರನ್ನು ಆ ದಿನದಲ್ಲಿ ದಂಡಿಸುವೆನು. ಅದೇ ದಿನದಲ್ಲಿ ಮೀನುಬಾಗಲಿಂದ ಕೂಗಾಟ, ಎರಡನೆಯ ಕೇರಿಯಿಂದ ಗೋಳಾಟ, ಗುಡ್ಡಗಳ ಮೇಲಿಂದ ಧಡಮ್‌ ಎನ್ನುವ ಶಬ್ದ, ಅಂತು ದೊಡ್ಡ ಗದ್ದಲವಾಗುವದು; ಇದು ಯೆಹೋವನ ನುಡಿ. ಒರಳ ಕೇರಿಯವರೇ, ಕಿರಚಿರಿ, ಎಲ್ಲಾ ಸಾಹುಕಾರರು ಹಾಳಾದರು, ಹೊರೆಬೆಳ್ಳಿಯವರೆಲ್ಲರು ನಾಶವಾದರು.”

12. ಯಾವ ರೀತಿಯಲ್ಲಿ ಕೆಲವರು ‘ವಿದೇಶವಸ್ತ್ರಗಳನ್ನು’ ಧರಿಸಿಕೊಂಡವರಾಗಿ ಕಂಡುಬರುತ್ತಾರೆ?

12 ಅರಸ ಯೋಷೀಯನ ನಂತರ ಯೆಹೋವಾಹಾಜ, ಯೆಹೋಯಾಕೀಮ ಮತ್ತು ಯೆಹೋಯಾಖೀನರು ರಾಜರಾಗಲಿದ್ದರು. ತದನಂತರ ಯೆರೂಸಲೇಮಿನ ನಾಶನದಿಂದ ಗುರುತಿಸಲ್ಪಡುವ ಚಿದ್ಕೀಯನ ಆಳ್ವಿಕೆಯು ಆರಂಭವಾಗಲಿತ್ತು. ಅಂತಹ ವಿಪತ್ತು ಅವರ ಮೇಲೆ ಬಂದೆರಗಲಿತ್ತಾದರೂ, ಕೆಲವರು ‘ವಿದೇಶವಸ್ತ್ರಗಳನ್ನು’ ಧರಿಸಿಕೊಳ್ಳುವ ಮೂಲಕ ನೆರೆಹೊರೆಯ ಜನಾಂಗಗಳ ಅಂಗೀಕಾರವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರು. ಅವರಂತೆಯೇ ಇಂದು ಅನೇಕರು, ತಾವು ಯೆಹೋವನ ಸಂಸ್ಥೆಯ ಭಾಗವಾಗಿಲ್ಲ ಎಂಬುದನ್ನು ಬೇರೆ ಬೇರೆ ವಿಧಗಳಲ್ಲಿ ತೋರ್ಪಡಿಸುತ್ತಾರೆ. ಇಂತಹ ವಿದೇಶೀ ವಸ್ತ್ರಧಾರಿಗಳು ಸೈತಾನನ ಸಂಸ್ಥೆಯವರೆಂದು ಗುರುತಿಸಲ್ಪಡುವುದರಿಂದ ನಾಶನಕ್ಕೆ ಗುರಿಯಾಗುವರು.

13. ಚೆಫನ್ಯನ ಪ್ರವಾದನೆಗೆ ಹೊಂದಿಕೆಯಲ್ಲಿ, ಬಾಬೆಲಿನವರು ಯೆರೂಸಲೇಮಿಗೆ ಮುತ್ತಿಗೆಹಾಕುವಾಗ ಏನು ಸಂಭವಿಸಲಿತ್ತು?

13 ಯೆಹೂದವು ಲೆಕ್ಕವೊಪ್ಪಿಸಬೇಕಾಗಿದ್ದ ‘ಆ ದಿನವು,’ ತನ್ನ ವೈರಿಗಳ ಮೇಲೆ ನ್ಯಾಯತೀರಿಸುವ, ದುಷ್ಟತನವನ್ನು ಕೊನೆಗಾಣಿಸುವ, ಮತ್ತು ತನ್ನ ಪರಮಾಧಿಕಾರವನ್ನು ರುಜುಪಡಿಸುವ ಯೆಹೋವನ ದಿನಕ್ಕೆ ಅನುರೂಪವಾಗಿದೆ. ಬಾಬೆಲಿನವರು ಯೆರೂಸಲೇಮಿನ ಮೇಲೆ ದಾಳಿಮಾಡುವಾಗ, ಮೀನು ಬಾಗಲಿನಿಂದ ಕೂಗಾಟವು ಕೇಳಿಬರಲಿತ್ತು. ಆ ಬಾಗಿಲು ಮೀನಿನ ಮಾರುಕಟ್ಟೆಯ ಬಳಿಯಿದ್ದದರಿಂದ ಅದಕ್ಕೆ ಈ ಹೆಸರು ಬಂದಿರಬಹುದು. (ನೆಹೆಮೀಯ 13:16) ಬಾಬೆಲಿನ ಸೈನ್ಯವು, ಎರಡನೆಯ ಕೇರಿ ಎಂಬುದಾಗಿ ಕರೆಯಲ್ಪಡುವ ಸ್ಥಳದಿಂದ ಪ್ರವೇಶಿಸಲಿತ್ತು. ಮತ್ತು ‘ಗುಡ್ಡಗಳ ಮೇಲಿಂದ ಧಡಮ್‌ ಎನ್ನುವ ಶಬ್ದವು,’ ನುಗ್ಗಿಬರುತ್ತಿರುವ ಕಸ್ದೀಯರ ಶಬ್ದವನ್ನು ಸೂಚಿಸುತ್ತಿರಬಹುದು. ಒರಳ ಕೇರಿಯ ನಿವಾಸಿಗಳು, ಅಂದರೆ ತೂರ್ಯ ಕಣಿವೆಯ ಮೇಲ್ಭಾಗದಲ್ಲಿರುವವರು ‘ಕಿರುಚಾಡಲಿದ್ದರು.’ ಅವರು ಏಕೆ ಕಿರುಚಾಡಲಿದ್ದರು? ಏಕೆಂದರೆ ಅಲ್ಲಿ ಎಲ್ಲ ವ್ಯಾಪಾರದೊಂದಿಗೆ ‘ಬೆಳ್ಳಿ’ ಮಾರುವವರ ವ್ಯಾಪಾರವು ಸಹ ನಿಂತುಹೋಗಲಿತ್ತು.

14. ತನ್ನ ಆರಾಧಕರೆಂದು ಹೇಳಿಕೊಳ್ಳುವವರ ಕುರಿತಾಗಿ ದೇವರು ನಡೆಸಲಿರುವ ಪರೀಕ್ಷೆಯು ಎಷ್ಟು ವ್ಯಾಪಕವಾಗಿರುವುದು?

14 ಯೆಹೋವನು ತನ್ನ ಆರಾಧಕರೆಂದು ಹೇಳಿಕೊಳ್ಳುವವರ ಕುರಿತಾಗಿ ನಡೆಸಲಿರುವ ಪರೀಕ್ಷೆಯು ಎಷ್ಟು ವ್ಯಾಪಕವಾಗಿರಲಿತ್ತು? ಪ್ರವಾದನೆಯು ಮುಂದುವರಿಸುವುದು: “ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು; ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು. ಅವರ ಆಸ್ತಿಯು ಸೂರೆಯಾಗುವದು, ಅವರ ಮನೆಗಳು ಹಾಳಾಗುವವು; ಅವರು ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಿಸರು, ತೋಟಗಳನ್ನು ಮಾಡಿಕೊಂಡರೂ ಅವುಗಳ ದ್ರಾಕ್ಷಾರಸವನ್ನು ಕುಡಿಯರು.”​—ಚೆಫನ್ಯ 1:​12, 13.

15. (ಎ) ಯೆರೂಸಲೇಮಿನ ಧರ್ಮಭ್ರಷ್ಟ ಯಾಜಕರಿಗೆ ಏನು ಸಂಭವಿಸಲಿತ್ತು? (ಬಿ) ಆಧುನಿಕ ದಿನದ ಸುಳ್ಳು ಧರ್ಮದ ಅನುಯಾಯಿಗಳಿಗೆ ಏನು ಕಾದಿರಿಸಲ್ಪಟ್ಟಿದೆ?

15 ಯೆರೂಸಲೇಮಿನ ಧರ್ಮಭ್ರಷ್ಟ ಯಾಜಕರು, ಯೆಹೋವನ ಆರಾಧನೆಯಲ್ಲಿ ವಿಧರ್ಮಿ ಆಚರಣೆಗಳನ್ನು ಬೆರಸುತ್ತಿದ್ದರು. ಹಾಗೆ ಮಾಡುತ್ತಿದ್ದವರು ತಾವು ಸುರಕ್ಷಿತವಾಗಿದ್ದೇವೆ ಎಂದು ನೆನಸಿದರೂ, ಆತ್ಮಿಕ ಅಂಧಕಾರದಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದ ಅವರನ್ನು ಯೆಹೋವನು ಉಜ್ವಲವಾದ ದೀಪಗಳ ಸಹಾಯದಿಂದಲೋ ಎಂಬಂತೆ ಹುಡುಕಿಬಿಡಲಿದ್ದನು. ಯಾರೊಬ್ಬರೂ ಈ ದೈವಿಕ ನ್ಯಾಯತೀರ್ಪಿನ ಘೋಷಣೆ ಹಾಗೂ ನೆರವೇರಿಕೆಯಿಂದ ತಪ್ಪಿಸಿಕೊಳ್ಳಸಾಧ್ಯವಿರಲಿಲ್ಲ. ಆ ಸಂತುಷ್ಟ ಧರ್ಮಭ್ರಷ್ಟರು, ದ್ರಾಕ್ಷಾರಸದ ತೊಟ್ಟಿಯ ತಳದಲ್ಲಿ ನಿಂತಿರುವ ಮಡ್ಡಿಯಂತಿದ್ದರು. ಮಾನವ ವ್ಯವಹಾರಗಳಲ್ಲಿ ದೇವರ ಹಸ್ತಕ್ಷೇಪದ ಕುರಿತಾದ ಯಾವುದೇ ಪ್ರಕಟನೆಯಿಂದ ಅವರು ಕ್ಷೋಭೆಗೊಳಗಾಗಲು ಬಯಸುತ್ತಿರಲಿಲ್ಲ. ಆದರೂ ಅವರ ಮೇಲೆ ಬರಲಿರುವ ದೇವರ ನ್ಯಾಯತೀರ್ಪಿನಿಂದ ಅವರು ತಪ್ಪಿಸಿಕೊಳ್ಳಸಾಧ್ಯವಿರಲಿಲ್ಲ. ಕ್ರೈಸ್ತಪ್ರಪಂಚದ ಸದಸ್ಯರನ್ನೂ ಒಳಗೊಂಡು ಆಧುನಿಕ ದಿನದ ಸುಳ್ಳು ಧರ್ಮದ ಅನುಯಾಯಿಗಳು ಮತ್ತು ಯೆಹೋವನ ಆರಾಧನೆಯಿಂದ ಧರ್ಮಭ್ರಷ್ಟರಾಗಿರುವವರು ಸಹ ದೇವರ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳಲಾರರು. ಇವು ‘ಕಡೇ ದಿವಸಗಳು’ ಎಂಬುದನ್ನು ಅಲ್ಲಗಳೆಯುತ್ತಾ, ಅವರು ತಮ್ಮ ಮನಸ್ಸಿನಲ್ಲಿ “ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು” ಎಂದುಕೊಳ್ಳುತ್ತಾರೆ. ಆದರೆ ಅವರ ಅಭಿಪ್ರಾಯವು ಎಷ್ಟು ತಪ್ಪಾಗಿದೆ!​—2 ತಿಮೊಥೆಯ 3:​1-5; 2 ಪೇತ್ರ 3:​3, 4, 10.

16. ಯೆಹೂದದ ಮೇಲೆ ದೇವರ ನ್ಯಾಯತೀರ್ಪು ಬರಮಾಡಲ್ಪಟ್ಟಾಗ ಏನು ಸಂಭವಿಸಲಿತ್ತು, ಮತ್ತು ಅದರ ಕುರಿತಾದ ಜ್ಞಾನವು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರಬೇಕು?

16 ಬಾಬೆಲಿನವರು ಯೆಹೂದದ ಧರ್ಮಭ್ರಷ್ಟರ ಆಸ್ತಿಯನ್ನು ಲೂಟಿಮಾಡಿ, ಅವರ ಮನೆಗಳನ್ನು ಧ್ವಂಸಮಾಡಿ, ಅವರ ದ್ರಾಕ್ಷೇತೋಟಗಳ ಫಲವನ್ನು ದೋಚಿಕೊಳ್ಳುವರೆಂದು ಅವರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಯೆಹೂದದ ಮೇಲೆ ದೇವರ ನ್ಯಾಯತೀರ್ಪು ಬರಮಾಡಲ್ಪಟ್ಟಾಗ, ಪ್ರಾಪಂಚಿಕ ಸ್ವತ್ತುಗಳು ನಿಷ್ಪ್ರಯೋಜಕವಾಗಲಿದ್ದವು. ಸದ್ಯದ ವಿಷಯಗಳ ವ್ಯವಸ್ಥೆಯ ಮೇಲೆ ಯೆಹೋವನ ನ್ಯಾಯತೀರ್ಪಿನ ದಿನವು ಬರುವಾಗ, ಇದೇ ರೀತಿ ಸಂಭವಿಸುವುದು. ಆದುದರಿಂದ, ನಾವು ಆತ್ಮಿಕ ಹೊರನೋಟವುಳ್ಳವರಾಗಿದ್ದು, ನಮ್ಮ ಜೀವಿತಗಳಲ್ಲಿ ಯೆಹೋವನ ಸೇವೆಗೆ ಪ್ರಥಮ ಸ್ಥಾನವನ್ನು ಕೊಡುವ ಮೂಲಕ ‘ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳೋಣ’!​—ಮತ್ತಾಯ 6:​19-21, 33.

“ಯೆಹೋವನ ಮಹಾದಿನವು ಹತ್ತಿರವಾಯಿತು”

17. ಚೆಫನ್ಯ 1:​14-16ಕ್ಕನುಸಾರ, ಯೆಹೋವನ ನ್ಯಾಯತೀರ್ಪಿನ ದಿನವು ಎಷ್ಟು ಹತ್ತಿರವಿದೆ?

17 ಯೆಹೋವನ ನ್ಯಾಯತೀರ್ಪಿನ ದಿನವು ಎಷ್ಟು ಹತ್ತಿರವಿದೆ? ಚೆಫನ್ಯ 1:​14-16ಕ್ಕನುಸಾರ, ದೇವರು ಈ ಆಶ್ವಾಸನೆಯನ್ನು ಕೊಡುತ್ತಾನೆ: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ; ಆಹಾ, ಕಿವಿಗೊಡಿರಿ, ಯೆಹೋವನ ದಿನವೇ ಬಂದಿತು; ಇಗೋ, ಅಲ್ಲಿ ಒಬ್ಬ ಶೂರನು ಘೋರವಾಗಿ ಗೋಳಾಡುತ್ತಿದ್ದಾನೆ! ಆ ದಿನವು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ. ಕೋಟೆಗಳನ್ನೂ ದೊಡ್ಡ ಕೊತ್ತಲಗಳನ್ನೂ ಹಿಡಿಯಲು ಆರ್ಬಟಿಸಿ ಕೊಂಬೂದುವ ದಿನ.”

18. ಯೆಹೋವನ ನ್ಯಾಯತೀರ್ಪಿನ ದಿನವು ತುಂಬ ದೂರವಿದೆ ಎಂಬ ತೀರ್ಮಾನಕ್ಕೆ ನಾವೇಕೆ ಬರಬಾರದು?

18 ‘ಯೆಹೋವನ ಮಹಾದಿನವು ಹತ್ತಿರವಾಯಿತು’ ಎಂದು ಯೆಹೂದದ ಪಾಪಭರಿತ ಯಾಜಕರಿಗೆ, ಪ್ರಭುಗಳಿಗೆ ಮತ್ತು ಜನರಿಗೆ ಎಚ್ಚರಿಕೆ ನೀಡಲಾಯಿತು. ಯೆಹೂದ ದೇಶದ ಮೇಲೆ ‘ಯೆಹೋವನ ದಿನವು ಬಹು ತ್ವರೆಯಾಗಿ ಬರಲಿತ್ತು.’ ತದ್ರೀತಿಯಲ್ಲಿ ನಮ್ಮ ದಿನಗಳಲ್ಲಿ, ದುಷ್ಟರ ಮೇಲೆ ಬರಲಿರುವ ಯೆಹೋವನ ನ್ಯಾಯತೀರ್ಪು ತುಂಬ ದೂರವಿದೆ ಎಂದು ಯಾರೊಬ್ಬನೂ ನೆನಸದಿರಲಿ. ಅದಕ್ಕೆ ಬದಲಾಗಿ, ಯೆಹೂದದ ವಿಷಯದಲ್ಲಿ ದೇವರು ಹೇಗೆ ಕೂಡಲೆ ಕ್ರಿಯೆಗೈದನೋ ಅದೇ ರೀತಿ ಆತನು ತನ್ನ ನ್ಯಾಯತೀರ್ಪಿನ ದಿನವನ್ನು ‘ತ್ವರೆಗೊಳಿಸುವನು.’ (ಪ್ರಕಟನೆ 16:​14, 16) ತನ್ನ ಸಾಕ್ಷಿಗಳ ಮೂಲಕ ಕೊಡಲ್ಪಡುವ ಯೆಹೋವನ ಎಚ್ಚರಿಕೆಗಳನ್ನು ಅಲಕ್ಷಿಸುವವರೆಲ್ಲರಿಗೆ ಮತ್ತು ಸತ್ಯಾರಾಧನೆಯಲ್ಲಿ ಒಳಗೂಡಲು ನಿರಾಕರಿಸುವವರೆಲ್ಲರಿಗೆ ಅದೆಷ್ಟು ಸಂಕಟಮಯ ಸಮಯವಾಗಿರುವುದು!

19, 20. (ಎ) ಯೆಹೂದ ಹಾಗೂ ಯೆರೂಸಲೇಮಿನ ಮೇಲೆ ದೇವರು ಬರಮಾಡಿದ ಉಗ್ರಕೋಪದ ಕೆಲವು ವಿಶೇಷತೆಗಳು ಯಾವುವು? (ಬಿ) ಈ ವಿಷಯಗಳ ವ್ಯವಸ್ಥೆಯಲ್ಲಿ ದುಷ್ಟರ ಮೇಲೆ ಬರಲಿರುವ ನಾಶನವನ್ನು ಪರಿಗಣಿಸುವಾಗ, ಯಾವ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?

19 ಯೆಹೂದ ಮತ್ತು ಯೆರೂಸಲೇಮಿನ ಮೇಲೆ ದೇವರು ಉಗ್ರಕೋಪವನ್ನು ಸುರಿಸಿದಾಗ, ಅದು “ಶ್ರಮಸಂಕಟಗಳ ದಿನ”ವಾಗಿತ್ತು. ದಾಳಿಮಾಡಿದ ಬಾಬೆಲಿನವರು ಯೆಹೂದದ ನಿವಾಸಿಗಳಿಗೆ ಅನೇಕ ಕಷ್ಟಾನುಭವಗಳನ್ನು ತಂದೊಡ್ಡಿದರು; ಸಾವು ಹಾಗೂ ನಾಶನಗಳ ಎದುರಿನಲ್ಲಿ ಮಾನಸಿಕ ಬೇಗುದಿಯನ್ನು ಸಹ ಅವರು ಅನುಭವಿಸಿದರು. ‘ಹಾಳುಪಾಳುಮಾಡುವ ಆ ದಿನವು’ ಕತ್ತಲಿನ, ಮೊಬ್ಬಿನ, ಹಾಗೂ ಕಾರ್ಮುಗಿಲ ಕಗ್ಗತ್ತಲಿನ ದಿನವಾಗಿತ್ತು. ಇದು ಬಹುಶಃ ಸಾಂಕೇತಿಕವಾಗಿತ್ತು ಮಾತ್ರವಲ್ಲ ಅಕ್ಷರಾರ್ಥವೂ ಆಗಿತ್ತು, ಏಕೆಂದರೆ ಎಲ್ಲೆಲ್ಲೂ ಹೊಗೆ ಹಾಗೂ ಕಗ್ಗೊಲೆಯು ಇತ್ತು. ಅದು ‘ಆರ್ಬಟದ ಕೊಂಬೂದುವ ದಿನ’ವಾಗಿತ್ತು, ಆದರೆ ನೀಡಲ್ಪಟ್ಟ ಎಚ್ಚರಿಕೆಗಳು ವ್ಯರ್ಥವಾಗಿದ್ದವು.

20 ಬಾಬೆಲಿನ ಟಗರುದಿಮ್ಮಿಗಳು ‘ದೊಡ್ಡ ಕೊತ್ತಲಗಳನ್ನು’ ಉರುಳಿಸಿದಾಗ, ಯೆರೂಸಲೇಮಿನ ಕಾವಲುಗಾರರು ನಿಸ್ಸಹಾಯಕರಾಗಿ ನಿಂತಿದ್ದರು. ದುಷ್ಟ ಜನರ ನಾಶನಕ್ಕಾಗಿ ದೇವರು ಸಿದ್ಧವಾಗಿಟ್ಟಿರುವ ಸ್ವರ್ಗೀಯ ಶಸ್ತ್ರಾಸ್ತ್ರಗಳ ಮುಂದೆ, ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಈ ಕೋಟೆಕೊತ್ತಲಗಳು ಅಷ್ಟೇ ನಿಷ್ಪ್ರಯೋಜಕವಾಗಿರುವವು. ರಕ್ಷಣೆಯನ್ನು ಹೊಂದುವ ನಿರೀಕ್ಷೆ ನಿಮಗಿದೆಯೋ? ‘ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುವ, ಆದರೆ ಎಲ್ಲ ದುಷ್ಟರನ್ನು ಸಂಹರಿಸುವ’ ಯೆಹೋವನ ಪಕ್ಷದಲ್ಲಿ ನೀವು ದೃಢರಾಗಿ ನಿಂತಿದ್ದೀರೋ?​—ಕೀರ್ತನೆ 145:20.

21, 22. ನಮ್ಮ ದಿನದಲ್ಲಿ ಚೆಫನ್ಯ 1:​17, 18 ಹೇಗೆ ನೆರವೇರಿಸಲ್ಪಡುವುದು?

21ಚೆಫನ್ಯ 1:​17, 18ರಲ್ಲಿ, ನ್ಯಾಯತೀರ್ಪಿನ ಎಂತಹ ಭಯಂಕರ ದಿನದ ಕುರಿತು ಮುಂತಿಳಿಸಲಾಗಿದೆ! ಯೆಹೋವ ದೇವರು ಹೇಳುವುದು: “ಯೆಹೋವನಾದ ನನಗೆ ಜನರು ಪಾಪಮಾಡಿದ ಕಾರಣ ಕುರುಡರಂತೆ ನಡೆಯುವ ಹಾಗೆ ಅವರನ್ನು ಸಂಕಟಪಡಿಸುವೆನು; ಅವರ ರಕ್ತವು ದೂಳಿನಂತೆ ಚೆಲ್ಲಿಹೋಗುವದು, ಅವರ ಮಾಂಸವು ಮಲದ ಹಾಗೆ ಬಿದ್ದಿರುವದು. ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿಬಂಗಾರಗಳು ಕೂಡಾ ಅವರನ್ನು ರಕ್ಷಿಸಲಾರವು; ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು.”

22 ಯೆಹೋವನು ಚೆಫನ್ಯನ ದಿನಗಳಲ್ಲಿ ಮಾಡಿದಂತೆಯೇ, ತನ್ನ ಎಚ್ಚರಿಕೆಗೆ ಕಿವಿಗೊಡಲು ನಿರಾಕರಿಸುವವರ ಮೇಲೆ, ಅಂದರೆ ‘ದೇಶನಿವಾಸಿಗಳೆಲ್ಲರ ಮೇಲೆ’ ಅತಿ ಬೇಗನೆ ಸಂಕಟವನ್ನು ತರುವನು. ಅವರು ದೇವರ ವಿರುದ್ಧ ಪಾಪಮಾಡಿದ್ದರಿಂದ, ಅವರು ಬಿಡುಗಡೆಯ ಮಾರ್ಗವನ್ನು ಕಂಡುಹಿಡಿಯಲು ಅಸಾಧ್ಯವಾಗಿರುವ ಕುರುಡರಂತೆ ನಿಸ್ಸಹಾಯಕರಾಗಿ ಅಲೆದಾಡುವರು. ಯೆಹೋವನ ನ್ಯಾಯತೀರ್ಪಿನ ದಿನದಲ್ಲಿ ಅವರ ರಕ್ತವು ಕೆಲಸಕ್ಕೆ ಬಾರದ ವಸ್ತುವಿನಂತೆ, ‘ದೂಳಿನಂತೆ ಚೆಲ್ಲಿಹೋಗುವುದು.’ ಅವರ ಅಂತ್ಯವು ತೀರ ಅವಮಾನಕರವಾಗಿರುವುದು, ಏಕೆಂದರೆ ದೇವರು ಈ ದುಷ್ಟರ ದೇಹಗಳನ್ನು ಹಾಗೂ ಒಳಾಂಗಗಳನ್ನು “ಮಲದ ಹಾಗೆ” ಭೂಮಿಯ ಮೇಲೆ ಚೆಲ್ಲಾಪಿಲ್ಲಿಯಾಗಿ ಎಸೆಯುವನು.

23. ‘ಯೆಹೋವನ ರೌದ್ರದ ದಿನದಲ್ಲಿ’ ತಪ್ಪಿತಸ್ಥರು ತಪ್ಪಿಸಿಕೊಳ್ಳಲಾರರಾದರೂ, ಚೆಫನ್ಯನ ಪ್ರವಾದನೆಯು ಯಾವ ನಿರೀಕ್ಷೆಯನ್ನು ಎತ್ತಿಹಿಡಿಯುತ್ತದೆ?

23 ದೇವರ ವಿರುದ್ಧ ಮತ್ತು ಆತನ ಜನರ ವಿರುದ್ಧ ಹೋರಾಡುವವರನ್ನು ಯಾರೊಬ್ಬರೂ ರಕ್ಷಿಸಸಾಧ್ಯವಿಲ್ಲ. ಯೆಹೂದದ ತಪ್ಪಿತಸ್ಥರ ಬೆಳ್ಳಿಬಂಗಾರಗಳು ಅವರನ್ನು ರಕ್ಷಿಸಸಾಧ್ಯವಿರಲಿಲ್ಲ. ಹಾಗೆಯೇ ಕ್ರೈಸ್ತಪ್ರಪಂಚದ ಮೇಲೆ ಮತ್ತು ಈ ದುಷ್ಟ ವಿಷಯಗಳ ವ್ಯವಸ್ಥೆಯ ಉಳಿದ ಭಾಗದ ಮೇಲೆ ‘ಯೆಹೋವನ ರೌದ್ರದ ದಿನವು’ ಬರುವಾಗ, ಸಂಗ್ರಹಿಸಿಡಲ್ಪಟ್ಟಿರುವ ಸಿರಿಸಂಪತ್ತು ಮತ್ತು ಲಂಚವು ಯಾವ ರಕ್ಷಣೆಯನ್ನಾಗಲಿ ಬಿಡುಗಡೆಯನ್ನಾಗಲಿ ನೀಡಲಾರದು. ಆ ನಿರ್ಣಾಯಕ ದಿನದಂದು, ದೇವರು ದುಷ್ಟರ ಸರ್ವನಾಶ ಮಾಡುವಾಗ, ಆತನ ಹುರುಪಿನ ಅಗ್ನಿಯಿಂದ ‘ಭೂಲೋಕವು’ ಧ್ವಂಸವಾಗುವುದು. ದೇವರ ಪ್ರವಾದನ ವಾಕ್ಯದಲ್ಲಿ ನಮಗೆ ನಂಬಿಕೆಯಿರುವುದರಿಂದ, ನಾವಿಂದು ‘ಅಂತ್ಯಕಾಲದಲ್ಲಿ’ ಜೀವಿಸುತ್ತಿದ್ದೇವೆ ಎಂಬುದು ನಮಗೆ ಮನದಟ್ಟಾಗಿದೆ. (ದಾನಿಯೇಲ 12:4) ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿದೆ, ಮತ್ತು ಅತಿ ಬೇಗನೆ ಆತನು ತನ್ನ ವೈರಿಗಳ ಮೇಲೆ ಪ್ರತೀಕಾರವನ್ನು ತೀರಿಸುವನು. ಆದರೂ, ಚೆಫನ್ಯನ ಪ್ರವಾದನೆಯು ಬಿಡುಗಡೆಯ ನಿರೀಕ್ಷೆಯನ್ನು ಎತ್ತಿಹಿಡಿಯುತ್ತದೆ. ಒಂದುವೇಳೆ ನಾವು ಯೆಹೋವನ ಸಿಟ್ಟಿನ ದಿನದಲ್ಲಿ ಮರೆಯಾಗಬೇಕಾದರೆ, ನಮ್ಮಿಂದ ಏನು ಕೇಳಿಕೊಳ್ಳಲ್ಪಡುತ್ತದೆ?

ನೀವು ಹೇಗೆ ಉತ್ತರಿಸುವಿರಿ?

• ಯೆಹೂದ ಮತ್ತು ಯೆರೂಸಲೇಮಿನ ವಿಷಯದಲ್ಲಿ ಚೆಫನ್ಯನ ಪ್ರವಾದನೆಯು ಹೇಗೆ ನೆರವೇರಿತು?

• ಕ್ರೈಸ್ತಪ್ರಪಂಚಕ್ಕೆ ಹಾಗೂ ನಮ್ಮ ದಿನಗಳಲ್ಲಿರುವ ಎಲ್ಲ ದುಷ್ಟರಿಗೆ ಏನು ಕಾದಿರಿಸಲ್ಪಟ್ಟಿದೆ?

• ಯೆಹೋವನ ನ್ಯಾಯತೀರ್ಪಿನ ದಿನವು ತುಂಬ ದೂರವಿದೆ ಎಂದು ನಾವೇಕೆ ನೆನಸಬಾರದು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿದೆ ಎಂದು ಚೆಫನ್ಯನು ಧೈರ್ಯದಿಂದ ಸಾರಿದನು

[ಕೃಪೆ]

From the Self-Pronouncing Edition of the Holy Bible, containing the King James and the Revised versions

[ಪುಟ 15ರಲ್ಲಿರುವ ಚಿತ್ರ]

ಸಾ.ಶ.ಪೂ. 607ರಲ್ಲಿ ಬಾಬೆಲಿನವರ ಮೂಲಕ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ಯೆಹೋವನ ದಿನವು ಬಂತು

[ಪುಟ 16ರಲ್ಲಿರುವ ಚಿತ್ರ]

ಯೆಹೋವನು ದುಷ್ಟರನ್ನು ನಾಶಮಾಡುವಾಗ ರಕ್ಷಣೆಯನ್ನು ಹೊಂದುವ ನಿರೀಕ್ಷೆ ನಿಮಗಿದೆಯೋ?