ಯೆಹೋವನ ಪುನಃಸ್ಥಾಪಿತ ಜನರು ಭೂವ್ಯಾಪಕವಾಗಿ ಆತನನ್ನು ಸ್ತುತಿಸುತ್ತಾರೆ
ಯೆಹೋವನ ಪುನಃಸ್ಥಾಪಿತ ಜನರು ಭೂವ್ಯಾಪಕವಾಗಿ ಆತನನ್ನು ಸ್ತುತಿಸುತ್ತಾರೆ
“ಆಗ ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರಿಗೆ ಶುದ್ಧ ಭಾಷೆಯನ್ನು ಕೊಡುವೆನು.”—ಚೆಫನ್ಯ 3:9, NW.
1. ನಾಶನದ ಸಂದೇಶಗಳು ಏಕೆ ಯೆಹೂದ ಹಾಗೂ ಇತರ ಜನಾಂಗಗಳ ಮೇಲೆ ನೆರವೇರಿದವು?
ಚೆಫನ್ಯನು ಎಂತಹ ಪ್ರಭಾವಕಾರಿ ಸಂದೇಶಗಳನ್ನು ನುಡಿಯುವಂತೆ ಯೆಹೋವನು ಅವನನ್ನು ಪ್ರೇರೇಪಿಸಿದನು! ನಾಶನದ ಆ ಸಂದೇಶಗಳು, ಯೆಹೂದದ ಮೇಲೆ ಹಾಗೂ ಅದರ ರಾಜಧಾನಿಯಾದ ಯೆರೂಸಲೇಮಿನ ಮೇಲೆ ನೆರವೇರಿಸಲ್ಪಟ್ಟವು. ಏಕೆಂದರೆ ಅಲ್ಲಿಯ ನಾಯಕರು ಹಾಗೂ ಇಡೀ ಜನಾಂಗವು ಯೆಹೋವನ ಚಿತ್ತವನ್ನು ಮಾಡುತ್ತಿರಲಿಲ್ಲ. ಯೆಹೂದದ ಸಮೀಪದಲ್ಲಿದ್ದ ಫಿಲಿಷ್ಟಿಯ, ಮೋವಾಬ್ ಹಾಗೂ ಅಮ್ಮೋನ್ ಜನಾಂಗಗಳು ಸಹ ದೇವರ ಸಿಟ್ಟನ್ನು ಅನುಭವಿಸಲಿದ್ದವು. ಏಕೆ? ಏಕೆಂದರೆ, ಬಹಳ ದೀರ್ಘ ಸಮಯದಿಂದಲೂ ಅವು ಯೆಹೋವನ ಜನರೊಂದಿಗೆ ಕ್ರೂರವಾಗಿ ನಡೆದುಕೊಂಡವು ಮತ್ತು ವಿರೋಧವನ್ನು ತೋರಿಸಿದವು. ಈ ಕಾರಣದಿಂದಲೇ ಲೋಕ ಸಾಮ್ರಾಜ್ಯವಾಗಿದ್ದ ಅಶ್ಶೂರ್ಯವು ನಾಶಗೊಳಿಸಲ್ಪಟ್ಟು, ಎಂದಿಗೂ ಪುನಃಸ್ಥಾಪಿಸಲ್ಪಡದೇ ಹೋಗಲಿತ್ತು.
2. ಚೆಫನ್ಯ 3:8ರಲ್ಲಿರುವ ಮಾತುಗಳು ಯಾರಿಗೆ ತಿಳಿಸಲ್ಪಟ್ಟಿರಬಹುದು?
2 ಹಾಗಿದ್ದರೂ, ಪುರಾತನ ಯೆಹೂದದಲ್ಲಿ ಯೋಗ್ಯರಾಗಿದ್ದ ಕೆಲವು ವ್ಯಕ್ತಿಗಳಿದ್ದರು. ದುಷ್ಟರ ವಿರುದ್ಧ ದೇವರ ನ್ಯಾಯತೀರ್ಪಿನ ಬರಮಾಡುವಿಕೆಯನ್ನು ಅವರು ಎದುರುನೋಡುತ್ತಿದ್ದರು. ಮತ್ತು ಈ ಕೆಳಗಿನ ಮಾತುಗಳು ಅವರಿಗೆ ನುಡಿಯಲ್ಪಟ್ಟಿರಬಹುದು: “ಯೆಹೋವನು ಇಂತೆನ್ನುತ್ತಾನೆ—ಹೀಗಿರಲು ನನ್ನನ್ನು ಕಾದುಕೊಂಡಿರ್ರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದು ಬಿಡುವದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ; ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವದಷ್ಟೆ.”—ಚೆಫನ್ಯ 3:8.
“ಶುದ್ಧ ಭಾಷೆ” ಯಾರಿಗೋಸ್ಕರ?
3. ನಿರೀಕ್ಷೆಯ ಯಾವ ಸಂದೇಶವನ್ನು ನುಡಿಯುವಂತೆ ಚೆಫನ್ಯನು ಪ್ರೇರೇಪಿಸಲ್ಪಟ್ಟನು?
3 ಚೆಫನ್ಯನು ನಾಶನದ ಕುರಿತಾದ ಯೆಹೋವನ ಸಂದೇಶಗಳನ್ನು ನುಡಿದನು ಎಂಬುದು ನಿಜ. ಆದರೆ, ಅದರೊಂದಿಗೆ ನಿರೀಕ್ಷೆಯ ಅದ್ಭುತಕರ ಸಂದೇಶವನ್ನು ಸಹ ನುಡಿಯುವಂತೆ ಆ ಪ್ರವಾದಿಯು ಪ್ರೇರೇಪಿಸಲ್ಪಟ್ಟನು. ಈ ನಿರೀಕ್ಷೆಯ ಸಂದೇಶವು, ಯೆಹೋವನಿಗೆ ನಂಬಿಗಸ್ತರಾಗಿ ಉಳಿದಿದ್ದ ಜನರಿಗೆ ತುಂಬ ಸಾಂತ್ವನದಾಯಕವಾಗಿರಲಿತ್ತು. ಚೆಫನ್ಯ 3:9ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೆಹೋವನು ಪ್ರಕಟಿಸಿದ್ದು: “ಆಗ ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು [“ಶುದ್ಧ ಭಾಷೆಯನ್ನು ಕೊಡುವೆನು,” NW].”
4, 5. (ಎ) ಅನೀತಿವಂತರಿಗೆ ಏನು ಸಂಭವಿಸಲಿತ್ತು? (ಬಿ) ಇದರಿಂದ ಯಾರಿಗೆ ಪ್ರಯೋಜನ ಸಿಗಲಿತ್ತು, ಮತ್ತು ಏಕೆ?
4 ಶುದ್ಧ ಭಾಷೆಯು ಕೊಡಲ್ಪಡದೆ ಇರುವಂತಹ ಜನರೂ ಇರುವರು. ಅವರ ಬಗ್ಗೆ ಪ್ರವಾದನೆಯು ಹೀಗೆ ಹೇಳುತ್ತದೆ: “ಅತಿಗರ್ವದಿಂದ ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು.” (ಚೆಫನ್ಯ 3:11) ದೇವರ ನಿಯಮಗಳನ್ನು ಕಡೆಗಣಿಸಿ, ಅನೀತಿಯನ್ನು ಅನುಸರಿಸಿದ ದುರಹಂಕಾರಿಗಳು ಸಂಪೂರ್ಣವಾಗಿ ತೆಗೆದುಹಾಕಲ್ಪಡಲಿದ್ದರು. ಇದರಿಂದ ಯಾರಿಗೆ ಪ್ರಯೋಜನ ಸಿಗುವುದು? ಚೆಫನ್ಯ 3:12, 13 ಹೇಳುವುದು: “ದೀನದರಿದ್ರಜನವನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು. ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯವನ್ನು ಮಾಡರು, ಸುಳ್ಳಾಡರು; ಅವರ ಬಾಯಲ್ಲಿ, ಮೋಸದ ನಾಲಿಗೆಯು ಇರದು; [ಮಂದೆಯಂತೆ] ಮೇದು ಮಲಗಿಕೊಳ್ಳುವರು, ಅವರನ್ನು ಯಾರೂ ಹೆದರಿಸರು.”
5 ಪುರಾತನ ಯೆಹೂದದಲ್ಲಿದ್ದ ನಂಬಿಗಸ್ತ ಉಳಿಕೆಯವರು ಪ್ರಯೋಜನವನ್ನು ಪಡೆದುಕೊಳ್ಳಲಿದ್ದರು. ಏಕೆ? ಏಕೆಂದರೆ ಅವರು ಈ ಕೆಳಗಿನ ಮಾತುಗಳಿಗನುಸಾರ ಕ್ರಿಯೆಗೈದಿದ್ದರು: “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಹುಡುಕಿರಿ, ನೀತಿಯನ್ನು ಹುಡುಕಿರಿ, ದೀನಭಾವವನ್ನು ಹುಡುಕಿರಿ. ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.”—ಚೆಫನ್ಯ 2:3, NW.
6. ಚೆಫನ್ಯನ ಪ್ರವಾದನೆಯ ಮೊದಲ ನೆರವೇರಿಕೆಯಲ್ಲಿ ಏನು ಸಂಭವಿಸಿತು?
6 ಚೆಫನ್ಯನ ಪ್ರವಾದನೆಯ ಮೊದಲ ನೆರವೇರಿಕೆಯಲ್ಲಿ, ಅವಿಶ್ವಾಸಿ ಯೆಹೂದವನ್ನು ದೇವರು ಶಿಕ್ಷಿಸಿದನು. ಹೇಗೆಂದರೆ, ಸಾ.ಶ.ಪೂ. 607ರಲ್ಲಿ ಲೋಕ ಸಾಮ್ರಾಜ್ಯವಾಗಿದ್ದ ಬಾಬೆಲು ಯೆಹೂದವನ್ನು ಸೋಲಿಸಿ, ಅದರ ನಿವಾಸಿಗಳನ್ನು ಬಂಧಿವಾಸಿಗಳಾಗಿ ಕರೆದೊಯ್ಯುವಂತೆ ಅನುಮತಿಸುವ ಮೂಲಕವೇ. ಆ ಸಮಯದಲ್ಲಿ ಪ್ರವಾದಿಯಾದ ಯೆರೆಮೀಯನನ್ನು ಸೇರಿಸಿ ಇನ್ನಿತರರು ಇದರಿಂದ ತಪ್ಪಿಸಿಕೊಂಡರು ಮತ್ತು ಇನ್ನೂ ಕೆಲವರು ಬಂಧಿವಾಸದಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಉಳಿದರು. ಸಾ.ಶ.ಪೂ. 539ರಲ್ಲಿ, ಕೋರೆಷನ ನೇತೃತ್ವದ ಕೆಳಗೆ ಮೇದ್ಯಯಪಾರಸಿಯರು ಬಾಬೆಲನ್ನು ಸೋಲಿಸಿಬಿಟ್ಟರು. ಎರಡು ವರ್ಷಗಳ ನಂತರ, ಕೋರೆಷನು ಒಂದು ಆಜ್ಞೆಯನ್ನು ಹೊರಡಿಸಿದನು. ಈ ಆಜ್ಞೆಯು, ಯೆಹೂದಿ ಉಳಿಕೆಯವರು ತಮ್ಮ ಸ್ವದೇಶಕ್ಕೆ ಹಿಂದಿರುಗುವಂತೆ ಅನುಮತಿಸಿತು. ಸಕಾಲದಲ್ಲಿ, ಯೆರೂಸಲೇಮಿನ ದೇವಾಲಯವು ಪುನಃ ಕಟ್ಟಲ್ಪಟ್ಟಿತು ಮತ್ತು ಧರ್ಮಶಾಸ್ತ್ರದ ಕುರಿತು ಜನರಿಗೆ ಬೋಧಿಸಲಿಕ್ಕಾಗಿ ಪುನಃ ಯಾಜಕವರ್ಗವು ಸ್ಥಾಪಿಸಲ್ಪಟ್ಟಿತು. (ಮಲಾಕಿಯ 2:7) ಆದುದರಿಂದ, ಪುನಃಸ್ಥಾಪಿತ ಉಳಿಕೆಯವರು ನಂಬಿಗಸ್ತರಾಗಿ ಉಳಿದಷ್ಟು ಸಮಯ ಯೆಹೋವನು ಅವರಿಗೆ ಸಮೃದ್ಧಿಯನ್ನು ಕೊಟ್ಟನು.
7, 8. ಚೆಫನ್ಯ 3:14-17ರ ಪ್ರವಾದನ ಮಾತುಗಳು ಯಾರಿಗೆ ಅನ್ವಯವಾದವು, ಮತ್ತು ನೀವು ಹೀಗೇಕೆ ಉತ್ತರಿಸುವಿರಿ?
7 ಆ ಪುನಃಸ್ಥಾಪನೆಯನ್ನು ಅನುಭವಿಸಲಿದ್ದ ಜನರ ಕುರಿತು ಚೆಫನ್ಯನು ಮುಂತಿಳಿಸಿದ್ದು: “ಚೀಯೋನ್ ನಗರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಆರ್ಬಟಿಸು! ಯೆರೂಸಲೇಮ್ ಪುರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು! ನಿನಗೆ ವಿಧಿಸಿದ ದಂಡನೆಗಳನ್ನು ಯೆಹೋವನು ತಪ್ಪಿಸಿದ್ದಾನೆ, ನಿನ್ನ ಶತ್ರುವನ್ನು ತಳ್ಳಿಬಿಟ್ಟಿದ್ದಾನೆ; ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ; ಇನ್ನು ಕೇಡಿಗೆ ಅಂಜದಿರುವಿ. ಆ ದಿನದಲ್ಲಿ ಯೆರೂಸಲೇಮಿಗೆ—ಚೀಯೋನೇ, ಭಯಪಡಬೇಡ, ನಿನ್ನ ಕೈಗಳು ಜೋಲುಬೀಳದಿರಲಿ; ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ಮುಣುಗಿ ಮೌನವಾಗಿರುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು ಎಂದು ಹೇಳೋಣವಾಗುವದು.”—ಚೆಫನ್ಯ 3:14-17.
8 ಆ ಪ್ರವಾದನ ಮಾತುಗಳು, ಬಾಬೆಲಿನ ಬಂಧಿವಾಸದಿಂದ ಬಿಡುಗಡೆಹೊಂದಿ, ತಮ್ಮ ಪೂರ್ವಜರ ದೇಶಕ್ಕೆ ಹಿಂದಿರುಗಿ ತರಲ್ಪಟ್ಟ ಉಳಿಕೆಯವರಿಗೆ ಸೂಚಿಸಿದವು. ಚೆಫನ್ಯ 3:18-20ರಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ಅಯ್ಯೋ, ಅವಮಾನವು ನಮ್ಮ ಪಟ್ಟಣದ ಮೇಲೆ ಹೊರೆಯಾಗಿ ಕೂತಿದೆ ಎಂದು ಮಹೋತ್ಸವಕ್ಕೆ ದೂರವಾಗಿ ಶೋಕಿಸುತ್ತಿರುವ ನಿನ್ನವರನ್ನು ಒಟ್ಟಿಗೆ ಬರಮಾಡುವೆನು. ಆಹಾ, ಆ ಕಾಲದಲ್ಲಿ ನಿನ್ನನ್ನು ಬಾಧಿಸುವವರಿಗೆ ತಕ್ಕದ್ದನ್ನು ಮಾಡುವೆನು; ನಿನ್ನಲ್ಲಿ ಕುಂಟುವವರನ್ನು ಉದ್ಧರಿಸುವೆನು, ಚದರಿಸಲ್ಪಟ್ಟವರನ್ನು ಕೂಡಿಸುವೆನು; ಅಂತು ಲೋಕದಲ್ಲೆಲ್ಲಾ ಅವಮಾನಪಟ್ಟವರಿಗೆ ಸ್ತೋತ್ರಕೀರ್ತಿಗಳನ್ನು ಉಂಟುಮಾಡುವೆನು. ಆ ಕಾಲದಲ್ಲಿ ನಿಮ್ಮನ್ನು ಕರತರುವೆನು, ಹೌದು, ಆ ಕಾಲದಲ್ಲಿ ನಿಮ್ಮನ್ನು ಒಟ್ಟುಗೂಡಿಸುವೆನು; ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೆ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರಗಳಿಗೆ ಗುರಿಮಾಡುವೆನು. ಇದು ಯೆಹೋವನ ನುಡಿ.”
9. ಯೆಹೂದದ ಸಂಬಂಧದಲ್ಲಿ ಯೆಹೋವನು ಹೇಗೆ ತನಗಾಗಿ ಹೆಸರನ್ನು ಮಾಡಿಕೊಂಡನು?
9 ದೇವಜನರ ವೈರಿಗಳಾಗಿದ್ದ ಸುತ್ತಮುತ್ತಲಿನ ಜನಾಂಗಗಳಿಗಾದ ಆಘಾತವನ್ನು ತುಸು ಊಹಿಸಿಕೊಳ್ಳಿರಿ! ಯೆಹೂದದ ನಿವಾಸಿಗಳನ್ನು ಬಲಿಷ್ಠ ಬಾಬೆಲಿನವರು ಬಂಧಿವಾಸಿಗಳಾಗಿ ಕೊಂಡೊಯ್ದಿದ್ದರು. ತಾವೆಂದಾದರೂ ಬಿಡುಗಡೆಗೊಳಿಸಲ್ಪಡುವೆವು ಎಂಬ ನಿರೀಕ್ಷೆಯು ಅವರಿಗೆ ಕಿಂಚಿತ್ತೂ ಇರಲಿಲ್ಲ. ಅಷ್ಟುಮಾತ್ರವಲ್ಲ, ಅವರ ದೇಶವು ಪಾಳುಬಿದ್ದಿತ್ತು. ಆದರೂ, ದೇವರ ಬಲದಿಂದ ಅವರು 70 ವರ್ಷಗಳ ಬಳಿಕ ತಮ್ಮ ಸ್ವದೇಶಕ್ಕೆ ಪುನಃಸ್ಥಾಪಿಸಲ್ಪಟ್ಟಾಗ, ವೈರಿ ಜನಾಂಗಗಳಾದರೊ ನಾಶನದ ಕಡೆಗೆ ರಭಸದಿಂದ ಮುನ್ನುಗ್ಗುತ್ತಿದ್ದವು. ಆ ನಂಬಿಗಸ್ತ ಉಳಿಕೆಯವರನ್ನು ಸ್ವದೇಶಕ್ಕೆ ಹಿಂದಿರುಗಿಸುವ ಮೂಲಕ ಯೆಹೋವನು ತನಗಾಗಿ ಎಂತಹ ಹೆಸರನ್ನು ಮಾಡಿಕೊಂಡನು! ಆತನು ಅವರನ್ನು “ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರಗಳಿಗೆ ಗುರಿ”ಮಾಡಲಿದ್ದನು. ಆ ಪುನಃಸ್ಥಾಪನೆಯು, ಯೆಹೋವನಿಗೆ ಮತ್ತು ಆತನ ಹೆಸರನ್ನು ಧರಿಸಿಕೊಂಡಿರುವವರಿಗೆ ಎಂತಹ ಸ್ತುತಿಯನ್ನು ತಂದಿತು!
ಯೆಹೋವನ ಆರಾಧನೆಯು ಉನ್ನತಕ್ಕೇರಿಸಲ್ಪಟ್ಟದ್ದು
10, 11. ಚೆಫನ್ಯನ ಪುನಃಸ್ಥಾಪನೆಯ ಪ್ರವಾದನೆಯ ಪ್ರಮುಖ ನೆರವೇರಿಕೆಯು ಯಾವಾಗ ಆಗಲಿತ್ತು, ಮತ್ತು ಇದು ನಮಗೆ ಹೇಗೆ ಗೊತ್ತಿದೆ?
10 ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ ಇನ್ನೊಂದು ಪುನಃಸ್ಥಾಪನೆಯು ನೆರವೇರಿತು. ಆಗ ಯೇಸು ಸತ್ಯಾರಾಧನೆಗಾಗಿ ಇಸ್ರಾಯೇಲ್ಯರ ಉಳಿಕೆಯವರನ್ನು ಒಟ್ಟುಗೂಡಿಸಿದನು. ಇನ್ನೂ ಸಂಭವಿಸಲಿಕ್ಕಿದ್ದ ಸಂಗತಿಗಳ ಮುನ್‌ಸೂಚನೆ ಇದಾಗಿತ್ತು. ಏಕೆಂದರೆ ಈ ಪುನಃಸ್ಥಾಪನೆಯ ಪ್ರಮುಖ ನೆರವೇರಿಕೆಯು ಇನ್ನೂ ಭವಿಷ್ಯತ್ತಿನಲ್ಲಿ ಆಗಲಿತ್ತು. ಮೀಕನ ಪ್ರವಾದನೆಯು ಮುಂತಿಳಿಸಿದ್ದು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು.”—ಮೀಕ 4:1.
11 ಇದು ಯಾವಾಗ ಸಂಭವಿಸುವುದು? ಪ್ರವಾದನೆಯು ಹೇಳಿದಂತೆ, “ಅಂತ್ಯಕಾಲದಲ್ಲಿ” ಅಂದರೆ ಈ “ಕಡೇ ದಿವಸಗಳಲ್ಲಿ” ಸಂಭವಿಸುವುದು. (2 ತಿಮೊಥೆಯ 3:1) ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯು ನಾಶಗೊಳ್ಳುವ ಮುಂಚೆ, ಅಂದರೆ ಜನಾಂಗಗಳು ಸುಳ್ಳು ದೇವದೇವತೆಗಳನ್ನು ಆರಾಧಿಸುತ್ತಿರುವಾಗಲೇ ಇದು ಸಂಭವಿಸುವುದು. ಮೀಕ 4:5 ಹೇಳುವುದು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ.” ಹಾಗಾದರೆ ಸತ್ಯಾರಾಧಕರ ವಿಷಯದಲ್ಲೇನು? ಮೀಕನ ಪ್ರವಾದನೆಯೇ ಉತ್ತರಿಸುವುದು: “ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.”
12. ಈ ಕಡೇ ದಿವಸಗಳಲ್ಲಿ ಸತ್ಯಾರಾಧನೆಯು ಹೇಗೆ ಉನ್ನತಕ್ಕೇರಿಸಲ್ಪಟ್ಟಿದೆ?
12 ಆದುದರಿಂದ ಈ ಕಡೇ ದಿವಸಗಳಲ್ಲಿ, ‘ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಂಡಿದೆ.’ ಯೆಹೋವನ ಉನ್ನತವಾದ ಸತ್ಯಾರಾಧನೆಯು
ಪುನಃಸ್ಥಾಪಿಸಲ್ಪಟ್ಟಿದೆ, ದೃಢವಾಗಿ ನೆಲೆಗೊಳಿಸಲ್ಪಟ್ಟಿದೆ ಮತ್ತು ಎಲ್ಲ ರೀತಿಯ ಇತರ ಧರ್ಮಗಳಿಗಿಂತ ಉನ್ನತ ಸ್ಥಾನಕ್ಕೇರಿಸಲ್ಪಟ್ಟಿದೆ. ಮೀಕನ ಪ್ರವಾದನೆಯು ಸಹ ಮುಂತಿಳಿಸಿದಂತೆ, “ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು.” ಸತ್ಯ ಧರ್ಮವನ್ನು ಪಾಲಿಸುತ್ತಿರುವವರೆಲ್ಲರೂ “[ತಮ್ಮ] ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯು”ವರು.13, 14. ಈ ಲೋಕವು ಯಾವಾಗ ‘ಅಂತ್ಯಕಾಲವನ್ನು’ ಪ್ರವೇಶಿಸಿತು, ಮತ್ತು ಅಂದಿನಿಂದ ಸತ್ಯಾರಾಧನೆಯ ವಿಷಯದಲ್ಲಿ ಏನು ಸಂಭವಿಸುತ್ತಿದೆ?
13 ಬೈಬಲ್ ಪ್ರವಾದನೆಯ ನೆರವೇರಿಕೆಗನುಸಾರ ನಡೆದ ಘಟನೆಗಳು, ಈ ಲೋಕವು 1914ನೇ ಇಸವಿಯಲ್ಲಿ ‘ಅಂತ್ಯಕಾಲವನ್ನು’ ಅಂದರೆ ಅದರ ಕಡೇ ದಿವಸಗಳನ್ನು ಪ್ರವೇಶಿಸಿದೆ ಎಂಬುದನ್ನು ರುಜುಪಡಿಸುತ್ತವೆ. (ಮಾರ್ಕ 13:4-10) ಸ್ವರ್ಗೀಯ ನಿರೀಕ್ಷೆಯಿರುವಂಥ ಅಭಿಷಿಕ್ತರ ನಂಬಿಗಸ್ತ ಉಳಿಕೆಯವರನ್ನು ಯೆಹೋವನು ಸತ್ಯಾರಾಧನೆಗೆ ಒಟ್ಟುಗೂಡಿಸಲು ಆರಂಭಿಸಿದನು ಎಂಬುದನ್ನು ಇತಿಹಾಸವು ತೋರಿಸುತ್ತದೆ. ಇದರ ನಂತರ, ‘ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿರುವ . . . ಒಂದು ಮಹಾ ಸಮೂಹದ’ ಒಟ್ಟುಗೂಡಿಸುವಿಕೆ ಆರಂಭವಾಯಿತು. ಈ ಮಹಾ ಸಮೂಹದವರಿಗೆ ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಿದೆ.—ಪ್ರಕಟನೆ 7:9.
14 ಒಂದನೆಯ ಜಾಗತಿಕ ಯುದ್ಧದಿಂದ ಹಿಡಿದು ಈ ದಿನದ ವರೆಗೆ, ಯೆಹೋವನ ಹೆಸರನ್ನು ಧರಿಸಿಕೊಂಡಿರುವ ಜನರು, ಆತನ ಮಾರ್ಗದರ್ಶನದ ಕೆಳಗೆ ಆತನ ಆರಾಧನೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. Iನೆಯ ಜಾಗತಿಕ ಯುದ್ಧದ ಸಮಯದಲ್ಲಿ ಯೆಹೋವನ ಆರಾಧಕರ ಸಂಖ್ಯೆಯು ಕೆಲವೇ ಸಾವಿರವಾಗಿತ್ತು. ಆದರೆ ಈಗ ಅದು ಸುಮಾರು 60 ಲಕ್ಷಕ್ಕೇರಿದೆ. ಇವರು 235 ದೇಶದ್ವೀಪಗಳಲ್ಲಿರುವ 91,000 ಸಭೆಗಳಲ್ಲಿ ಕೂಡಿಬರುತ್ತಿದ್ದಾರೆ. ಪ್ರತಿ ವರ್ಷ, ಈ ರಾಜ್ಯ ಪ್ರಚಾರಕರು ದೇವರನ್ನು ಬಹಿರಂಗವಾಗಿ ಸ್ತುತಿಸುವುದರಲ್ಲಿ ಶತಕೋಟಿಗಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸುತ್ತಿದ್ದಾರೆ. ಯೆಹೋವನ ಈ ಸಾಕ್ಷಿಗಳು, ಯೇಸುವಿನ ಈ ಪ್ರವಾದನ ಮಾತುಗಳನ್ನು ನೆರವೇರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.
15. ಇಂದು ಚೆಫನ್ಯ 2:3 ಹೇಗೆ ನೆರವೇರಿಕೆಯನ್ನು ಪಡೆಯುತ್ತಿದೆ?
15ಚೆಫನ್ಯ 3:17 ಹೀಗೆ ಹೇಳುತ್ತದೆ: “ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು.” ಈ ಕಡೇ ದಿವಸಗಳಲ್ಲಿ ಯೆಹೋವನ ಸೇವಕರು ಅನುಭವಿಸುವ ಆತ್ಮಿಕ ಸಮೃದ್ಧಿಯು, ಅವರು ‘ತಮ್ಮ ಮಧ್ಯದಲ್ಲಿ’ ಆತನನ್ನು ಸರ್ವಶಕ್ತ ದೇವರಾಗಿ ಪರಿಗಣಿಸಿರುವುದರ ನೇರವಾದ ಫಲಿತಾಂಶವಾಗಿದೆ. ಸಾ.ಶ.ಪೂ. 537ರಲ್ಲಿ ಪುರಾತನ ಯೆಹೂದವು ಪುನಃಸ್ಥಾಪನೆಯಾದಾಗ ಇದು ಎಷ್ಟು ಸತ್ಯವಾಗಿತ್ತೋ ಈಗಲೂ ಅಷ್ಟೇ ಸತ್ಯವಾಗಿದೆ. ಹೀಗಿರುವುದರಿಂದ, “ಈ ಲೋಕದ ಎಲ್ಲ ದೀನರೇ ಯೆಹೋವನನ್ನು ಹುಡುಕಿರಿ,” (NW) ಎಂದು ಚೆಫನ್ಯ 2:3 ಹೇಳುವಾಗ, ಈ ಪ್ರವಾದನೆಯು ನಮ್ಮ ಸಮಯದಲ್ಲಿ ಹೇಗೆ ಭಾರೀ ನೆರವೇರಿಕೆಯನ್ನು ಪಡೆಯುತ್ತದೆ ಎಂಬುದನ್ನು ನಾವು ನೋಡಸಾಧ್ಯವಿದೆ. ಸಾ.ಶ.ಪೂ. 537ರಲ್ಲಿ, “ಎಲ್ಲ” ಎಂಬುದು ಬಾಬೆಲಿನ ಬಂಧಿವಾಸದಿಂದ ಹಿಂದಿರುಗಿದ ಯೆಹೂದಿ ಉಳಿಕೆಯವರನ್ನು ಒಳಗೊಂಡಿತ್ತು. ಆದರೆ ಈಗ ಅದು, ಭೂಮಿಯಾದ್ಯಂತವಿರುವ ಎಲ್ಲ ಜನಾಂಗಗಳಲ್ಲಿರುವ ದೀನರನ್ನು ಪ್ರತಿನಿಧಿಸುತ್ತದೆ. ಇವರು ಭೌಗೋಲಿಕವಾಗಿ ನಡೆಯುತ್ತಿರುವ ಸಾರುವ ಕೆಲಸಕ್ಕೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿ, ‘ಯೆಹೋವನ ಮಂದಿರದ ಬೆಟ್ಟಕ್ಕೆ’ ಪ್ರವಾಹದಂತೆ ಬರುವವರಾಗಿದ್ದಾರೆ.
ಸತ್ಯಾರಾಧನೆಯು ಏಳಿಗೆ ಹೊಂದುತ್ತದೆ
16. ಆಧುನಿಕ ಸಮಯಗಳಲ್ಲಿ ಯೆಹೋವನ ಸೇವಕರ ಅಭಿವೃದ್ಧಿಯನ್ನು ನೋಡಿ ದೇವಜನರ ವೈರಿಗಳಲ್ಲಿ ಕೆಲವರು ಹೇಗೆ ಪ್ರತಿಕ್ರಿಯಿಸುತ್ತಿರಬಹುದು?
16 ಸಾ.ಶ.ಪೂ. 537ರ ನಂತರ, ದೇವರ ಸೇವಕರು ತಮ್ಮ ಸ್ವದೇಶದಲ್ಲಿ ಸತ್ಯಾರಾಧನೆಗೆ ಪುನಃಸ್ಥಾಪಿಸಲ್ಪಟ್ಟದ್ದನ್ನು ನೋಡಿ, ಸುತ್ತಮುತ್ತಲಿನ ಜನಾಂಗಗಳವರಲ್ಲಿ ಅನೇಕರು ಆಶ್ಚರ್ಯಚಕಿತರಾದರು. ಆದರೆ ಆ ಪುನಃಸ್ಥಾಪನೆಯು ತೀರ ಚಿಕ್ಕ ಪ್ರಮಾಣದಲ್ಲಿ ನಡೆಯಿತು. ಆಧುನಿಕ ಸಮಯಗಳಲ್ಲಿ ಯೆಹೋವನ ಸೇವಕರಲ್ಲಿ ಯೋಹಾನ 12:19.
ಆಗುತ್ತಿರುವ ಆಶ್ಚರ್ಯಕರ ಬೆಳವಣಿಗೆ, ಅಭಿವೃದ್ಧಿ ಮತ್ತು ಪ್ರಗತಿಯನ್ನು ನೋಡಿ, ಕೆಲವರು, ದೇವಜನರ ವೈರಿಗಳೂ ಏನು ಹೇಳುತ್ತಿದ್ದಾರೆಂಬುದನ್ನು ನೀವು ಊಹಿಸಬಲ್ಲಿರೋ? ಯೇಸುವಿನ ಸಮಯದಲ್ಲಿ ಜನರು ಅವನ ಬಳಿಗೆ ಹಿಂಡುಹಿಂಡಾಗಿ ಬರುತ್ತಿದ್ದದ್ದನ್ನು ನೋಡಿ ಕೆಲವು ಫರಿಸಾಯರಿಗೆ ಹೇಗನಿಸಿತೋ ಹಾಗೆಯೇ ಕೆಲವು ವೈರಿಗಳಿಗೆ ಇಂದು ಅನಿಸುತ್ತಿರಬೇಕು. ಫರಿಸಾಯರು ಹೇಳಿದ್ದು: “ನೋಡಿರಿ; ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ.”—17. ಯೆಹೋವನ ಸಾಕ್ಷಿಗಳ ಕುರಿತು ಬರಹಗಾರರೊಬ್ಬರು ಏನು ಹೇಳಿದರು, ಮತ್ತು ಅಂದಿನಿಂದ ಅವರು ಯಾವ ಬೆಳವಣಿಗೆಯನ್ನು ಅನುಭವಿಸಿದ್ದಾರೆ?
17 ಪ್ರೊಫೆಸರ್ ಚಾರ್ಲ್ಸ್ ಎಸ್. ಬ್ರೇಡನ್ ಅವರು, ಇವರು ಸಹ ನಂಬುತ್ತಾರೆ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಹೇಳಿದ್ದು: ‘ಯೆಹೋವನ ಸಾಕ್ಷಿಗಳು ತಮ್ಮ ಸಾಕ್ಷಿಕಾರ್ಯದಿಂದ ಈ ಭೂಮಿಯನ್ನು ನಿಜವಾಗಿಯೂ ಆವರಿಸಿದ್ದಾರೆ. ನಿಜವಾಗಿಯೂ ಇನ್ಯಾವುದೇ ಧಾರ್ಮಿಕ ಗುಂಪು ರಾಜ್ಯದ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಯೆಹೋವನ ಸಾಕ್ಷಿಗಳಿಗಿಂತ ಹೆಚ್ಚಿನ ಹುರುಪು ಹಾಗೂ ದೃಢ ನಿರ್ಧಾರವನ್ನು ತೋರಿಸಿಲ್ಲ ಎಂದು ಹೇಳಬಹುದು. ಈ ಗುಂಪು ದಿನೇ ದಿನೇ ಬಲಗೊಳ್ಳುತ್ತಾ ಮುಂದುವರಿಯುವುದರಲ್ಲಿ ಯಾವ ಸಂದೇಹವೂ ಇಲ್ಲ.’ ಇವರು ಹೇಳಿದ್ದು ಎಷ್ಟು ಸೂಕ್ತವಾಗಿತ್ತು! ಸುಮಾರು 50 ವರ್ಷಗಳ ಹಿಂದೆ ಅವರು ಈ ಮಾತುಗಳನ್ನು ಬರೆದಾಗ, ಲೋಕವ್ಯಾಪಕವಾಗಿ ಕೇವಲ 3,00,000 ಸಾಕ್ಷಿಗಳು ಮಾತ್ರ ಸುವಾರ್ತೆಯನ್ನು ಸಾರುತ್ತಿದ್ದರು. ಇಂದು, ಅಂದಿನ ಸಂಖ್ಯೆಗಿಂತ 20 ಪಟ್ಟು ಹೆಚ್ಚಿನ ಸಾಕ್ಷಿಗಳು, ಅಂದರೆ 60 ಲಕ್ಷ ಜನರು ಸುವಾರ್ತೆಯನ್ನು ಸಾರುತ್ತಿರುವುದನ್ನು ನೋಡುವಾಗ, ಅವರು ಏನು ಹೇಳಾರು?
18. ಶುದ್ಧ ಭಾಷೆ ಎಂದರೇನು, ಮತ್ತು ದೇವರು ಅದನ್ನು ಯಾರಿಗೆ ಕೊಟ್ಟಿದ್ದಾನೆ?
18 ತನ್ನ ಪ್ರವಾದಿಯ ಮೂಲಕ ದೇವರು ವಾಗ್ದಾನಿಸಿದ್ದು: “ಆಗ ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು [“ಶುದ್ಧ ಭಾಷೆಯನ್ನು ಕೊಡುವೆನು,” NW].” (ಚೆಫನ್ಯ 3:9) ಈ ಕಡೇ ದಿವಸಗಳಲ್ಲಿ, ಯೆಹೋವನ ಸಾಕ್ಷಿಗಳೇ ಯೆಹೋವನ ಹೆಸರನ್ನು ಕರೆಯುವವರಾಗಿದ್ದಾರೆ. ಇವರು ಪ್ರೀತಿಯ ಮುರಿಯಲಾಗದಂತಹ ಬಂಧದಲ್ಲಿ ಐಕ್ಯರಾಗಿ, “ಒಂದೇ ಮನಸ್ಸಿನಿಂದ” ಆತನ ಸೇವೆಮಾಡುತ್ತಾರೆ. ಇವರಿಗೇ ಯೆಹೋವನು ಶುದ್ಧ ಭಾಷೆಯನ್ನು ಕೊಟ್ಟಿದ್ದಾನೆ. ಈ ಶುದ್ಧ ಭಾಷೆಯಲ್ಲಿ, ದೇವರು ಹಾಗೂ ಆತನ ಉದ್ದೇಶಗಳ ಕುರಿತಾದ ಸತ್ಯದ ಸರಿಯಾದ ತಿಳುವಳಿಕೆಯು ಒಳಗೂಡಿದೆ. ಈ ತಿಳುವಳಿಕೆಯನ್ನು ಯೆಹೋವನೊಬ್ಬನೇ ತನ್ನ ಪವಿತ್ರಾತ್ಮದ ಮೂಲಕ ಒದಗಿಸುತ್ತಾನೆ. (1 ಕೊರಿಂಥ 2:10) ತನ್ನ ಪವಿತ್ರಾತ್ಮವನ್ನು ಆತನು ಯಾರಿಗೆ ಕೊಟ್ಟಿದ್ದಾನೆ? “ತನಗೆ ವಿಧೇಯರಾಗಿರುವವರಿಗೆ” ಮಾತ್ರ. (ಅ. ಕೃತ್ಯಗಳು 5:32) ಯೆಹೋವನ ಸಾಕ್ಷಿಗಳು ಮಾತ್ರ ಎಲ್ಲ ವಿಷಯಗಳಲ್ಲಿ ದೇವರಿಗೆ ಮನಃಪೂರ್ವಕವಾಗಿ ವಿಧೇಯರಾಗಲು ಬಯಸುತ್ತಾರೆ. ಆದುದರಿಂದಲೇ, ಅವರು ದೇವರ ಪವಿತ್ರಾತ್ಮವನ್ನು ಪಡೆದುಕೊಳ್ಳುತ್ತಾರೆ ಮತ್ತು ಯೆಹೋವನ ಹಾಗೂ ಆತನ ಅದ್ಭುತ ಉದ್ದೇಶಗಳ ಕುರಿತಾದ ಸತ್ಯತೆಯನ್ನು, ಅಂದರೆ ಶುದ್ಧ ಭಾಷೆಯನ್ನು ಮಾತಾಡುತ್ತಾರೆ. ಭೂವ್ಯಾಪಕವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಯೆಹೋವನನ್ನು ಸ್ತುತಿಸಲಿಕ್ಕಾಗಿ ಅವರು ಶುದ್ಧ ಭಾಷೆಯನ್ನು ಉಪಯೋಗಿಸುತ್ತಾರೆ.
19. ಶುದ್ಧ ಭಾಷೆಯನ್ನು ಮಾತಾಡುವುದರಲ್ಲಿ ಏನು ಒಳಗೂಡಿದೆ?
19 ಶುದ್ಧ ಭಾಷೆಯನ್ನು ಮಾತಾಡುವುದರಲ್ಲಿ, ಸತ್ಯವನ್ನು ನಂಬುವುದು ಮತ್ತು ಅದನ್ನು ಇತರರಿಗೆ ಕಲಿಸುವುದು ಮಾತ್ರವಲ್ಲ, ಒಬ್ಬನ ಸ್ವಂತ ನಡತೆಯನ್ನು ದೇವರ ನಿಯಮಗಳು ಹಾಗೂ ಮೂಲತತ್ವಗಳಿಗನುಸಾರ ಹೊಂದಿಸಿಕೊಳ್ಳುವುದು ಸಹ ಒಳಗೂಡಿದೆ. ಯೆಹೋವನನ್ನು ಹುಡುಕುವುದರಲ್ಲಿ ಮತ್ತು ಶುದ್ಧ ಭಾಷೆಯನ್ನಾಡುವುದರಲ್ಲಿ ಅಭಿಷಿಕ್ತ ಕ್ರೈಸ್ತರು ನಾಯಕತ್ವವನ್ನು ವಹಿಸಿದ್ದಾರೆ. ಇದರ ಮೂಲಕ ಏನು ಸಾಧಿಸಲ್ಪಟ್ಟಿದೆ ಎಂಬುದರ ಕುರಿತು ತುಸು ಆಲೋಚಿಸಿರಿ! ಅಭಿಷಿಕ್ತ ಕ್ರೈಸ್ತರ ಸಂಖ್ಯೆಯು 8,700ಕ್ಕಿಂತಲೂ ಕಡಿಮೆಯಾಗಿರುವುದಾದರೂ, ಬಹುಮಟ್ಟಿಗೆ 60 ಲಕ್ಷ ಇತರ ಜನರು ಯೆಹೋವನನ್ನು ಹುಡುಕುವ ಮೂಲಕ ಹಾಗೂ ಶುದ್ಧ ಭಾಷೆಯನ್ನಾಡುವ ಮೂಲಕ ಅಭಿಷಿಕ್ತರ ನಂಬಿಕೆಯನ್ನು ಅನುಸರಿಸುತ್ತಿದ್ದಾರೆ. ಇವರು ಸಕಲ ಜನಾಂಗಗಳಿಂದ ಬಂದಿರುವ ಮಹಾ ಸಮೂಹದವರಾಗಿದ್ದು, ಇವರ ಸಂಖ್ಯೆಯು ದಿನೇದಿನೇ ಅಧಿಕಗೊಳ್ಳುತ್ತಿದೆ. ಇವರು ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುತ್ತಾರೆ, ದೇವರ ಆತ್ಮಿಕ ಆಲಯದ ಭೂಅಂಗಣದಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಮತ್ತು ಅತಿ ಬೇಗನೆ ಈ ಅನೀತಿವಂತ ಲೋಕದ ಮೇಲೆ ಬರಲಿರುವ ‘ಮಹಾ ಸಂಕಟದಿಂದ’ ಪಾರಾಗಲಿರುವರು.—ಪ್ರಕಟನೆ 7:9, 14, 15.
20. ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗೆ ಮತ್ತು ಮಹಾ ಸಮೂಹದಲ್ಲಿ ಸೇರಿರುವವರಿಗೆ ಏನು ಕಾದಿರಿಸಲ್ಪಟ್ಟಿದೆ?
20 ಮಹಾ ಸಮೂಹವು ದೇವರ ನೀತಿಯ ನೂತನ ಲೋಕವನ್ನು ಪ್ರವೇಶಿಸುವುದು. (2 ಪೇತ್ರ 3:13) ಯೇಸು ಕ್ರಿಸ್ತನು ಹಾಗೂ ಅವನೊಂದಿಗೆ ರಾಜರಾಗಿಯೂ ಯಾಜಕರಾಗಿಯೂ ಸೇವೆಸಲ್ಲಿಸಲು ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಟ್ಟಿರುವ 1,44,000 ಮಂದಿ, ಭೂಮಿಯ ಮೇಲೆ ಆಳುವ ಹೊಸ ಸರಕಾರವಾಗಿರುವರು. (ರೋಮಾಪುರ 8:16, 17; ಪ್ರಕಟನೆ 7:4; 20:6) ಮಹಾ ಸಂಕಟದಿಂದ ಪಾರಾಗುವವರು, ಈ ಭೂಮಿಯನ್ನು ಒಂದು ಪ್ರಮೋದವನವಾಗಿ ಮಾಡಲು ಶ್ರಮಿಸುವರು ಮತ್ತು ದೇವರಿಂದ ಕೊಡಲ್ಪಟ್ಟ ಶುದ್ಧ ಭಾಷೆಯನ್ನು ಮಾತಾಡುತ್ತಾ ಇರುವರು. ಈ ಮುಂದಿನ ಮಾತುಗಳು ವಿಶಾಲಾರ್ಥದಲ್ಲಿ ಅವರಿಗೂ ಅನ್ವಯಿಸುವವು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು. ಧರ್ಮವೇ ನಿನಗೆ ಆಧಾರ.”—ಯೆಶಾಯ 54:13, 14.
ಇತಿಹಾಸದಲ್ಲೇ ಅತಿ ಮಹತ್ತರವಾದ ಕಲಿಸುವ ಕೆಲಸ
21, 22. (ಎ) ಅ. ಕೃತ್ಯಗಳು 24:15ರಲ್ಲಿ ಸೂಚಿಸಲ್ಪಟ್ಟಂತೆ, ಯಾರಿಗೆ ಶುದ್ಧ ಭಾಷೆಯನ್ನು ಕಲಿಸುವ ಅಗತ್ಯವಿರುವುದು? (ಬಿ) ರಾಜ್ಯದಾಳ್ವಿಕೆಯ ಕೆಳಗೆ ಭೂಮಿಯಲ್ಲಿ ವ್ಯಾಪಕವಾಗಿ ಯಾವ ಕಲಿಸುವಿಕೆಯ ಕೆಲಸವು ನಡಿಸಲ್ಪಡುವುದು?
21 ಹೊಸ ಲೋಕದಲ್ಲಿ ಶುದ್ಧ ಭಾಷೆಯನ್ನು ಕಲಿಯುವ ಅವಕಾಶವನ್ನು ಪಡೆದುಕೊಳ್ಳಲಿರುವ ಒಂದು ದೊಡ್ಡ ಗುಂಪಿನ ಕುರಿತು ಅ. ಕೃತ್ಯಗಳು 24:15ರಲ್ಲಿ ತಿಳಿಸಲ್ಪಟ್ಟಿದೆ. ಅದು ಹೇಳುವುದು: ‘ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.’ ಗತ ಸಮಯಗಳಲ್ಲಿ, ಕೋಟಿಗಟ್ಟಲೆ ಜನರು ಯೆಹೋವನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳದೇ ಜೀವಿಸಿದ್ದರು ಮತ್ತು ಮೃತಪಟ್ಟರು. ಕ್ರಮಬದ್ಧವಾದ ರೀತಿಯಲ್ಲಿ ಯೆಹೋವನು ಅವರನ್ನು ಪುನರುತ್ಥಾನಗೊಳಿಸುವನು. ತದನಂತರ, ಪುನರುತ್ಥಾನಗೊಳಿಸಲ್ಪಟ್ಟ ಆ ಜನರಿಗೆ ಶುದ್ಧ ಭಾಷೆಯನ್ನು ಕಲಿಸುವ ಅಗತ್ಯವಿರುವುದು.
22 ಕಲಿಸುವಂತಹ ಆ ಮಹಾನ್ ಕೆಲಸದಲ್ಲಿ ಭಾಗವಹಿಸುವುದು ಎಂತಹ ಒಂದು ಸುಯೋಗವಾಗಿರುವುದು! ಮಾನವಕುಲದ ಇತಿಹಾಸದಲ್ಲೇ ಇದು ಅತ್ಯಂತ ವ್ಯಾಪಕವಾದ ಶೈಕ್ಷಣಿಕ ಕೆಲಸವಾಗಿರುವುದು. ಇದೆಲ್ಲವೂ ರಾಜ್ಯಾಧಿಕಾರದಲ್ಲಿ ಕ್ರಿಸ್ತ ಯೇಸುವಿನ ದಯಾಪರ ಆಳ್ವಿಕೆಯ ಕೆಳಗೆ ಸಾಧಿಸಲ್ಪಡುವುದು. ಇದರ ಫಲಿತಾಂಶವಾಗಿ, ಯೆಶಾಯ 11:9ರ ನೆರವೇರಿಕೆಯನ್ನು ಮಾನವಕುಲವು ಕಣ್ಣಾರೆ ನೋಡುವುದು. ಈ ವಚನದಲ್ಲಿ ಹೀಗೆ ಹೇಳಲಾಗಿದೆ: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”
23. ಯೆಹೋವನ ಜನರೋಪಾದಿ ನಾವು ಸುಯೋಗವುಳ್ಳವರಾಗಿದ್ದೇವೆಂದು ನಾವೇಕೆ ಹೇಳಬಹುದು?
23 ಯೆಹೋವನ ಜ್ಞಾನವು ನಿಜವಾಗಿಯೂ ಭೂಮಿಯಲ್ಲಿ ತುಂಬಿಕೊಳ್ಳುವಂತಹ ಅದ್ಭುತಕರ ಸಮಯಕ್ಕಾಗಿ ಈ ಕಡೇ ದಿವಸಗಳಲ್ಲಿ ತಯಾರಿ ನಡೆಸುವುದು ನಮಗೆ ಎಂತಹ ಒಂದು ಸುಯೋಗವಾಗಿದೆ! ಅಷ್ಟುಮಾತ್ರವಲ್ಲ, ಈಗ ದೇವಜನರಾಗಿದ್ದು, ಚೆಫನ್ಯ 3:20ರಲ್ಲಿ ದಾಖಲಿಸಲ್ಪಟ್ಟಿರುವಂತಹ ಪ್ರವಾದನ ಮಾತುಗಳ ಮಹಾ ನೆರವೇರಿಕೆಯನ್ನು ನಾವು ಅನುಭವಿಸುತ್ತಿರುವುದು ಸಹ ಒಂದು ದೊಡ್ಡ ಸುಯೋಗವಾಗಿದೆ. ಈ ವಚನದಲ್ಲಿ ನಾವು ಯೆಹೋವನ ಆಶ್ವಾಸನಾದಾಯಕ ಮಾತುಗಳನ್ನು ಕಂಡುಕೊಳ್ಳುತ್ತೇವೆ: “ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರಗಳಿಗೆ ಗುರಿಮಾಡುವೆನು.”
ನೀವು ಹೇಗೆ ಉತ್ತರಿಸುವಿರಿ?
• ಪುನಃಸ್ಥಾಪನೆಯ ಕುರಿತಾದ ಚೆಫನ್ಯನ ಪ್ರವಾದನೆಯು ಯಾವ ನೆರವೇರಿಕೆಗಳನ್ನು ಪಡೆದಿದೆ?
• ಈ ಕಡೇ ದಿವಸಗಳಲ್ಲಿ ಸತ್ಯಾರಾಧನೆಯು ಹೇಗೆ ಅಭಿವೃದ್ಧಿಹೊಂದುತ್ತಿದೆ?
• ಹೊಸ ಲೋಕದಲ್ಲಿ ವ್ಯಾಪಕವಾಗಿ ಯಾವ ಕಲಿಸುವಿಕೆಯ ಕೆಲಸವು ನಡೆಸಲ್ಪಡುವುದು?
[ಅಧ್ಯಯನ ಪ್ರಶ್ನೆಗಳು]
[ಪುಟ 25ರಲ್ಲಿರುವ ಚಿತ್ರ]
ಶುದ್ಧ ಆರಾಧನೆಯನ್ನು ಪುನಃಸ್ಥಾಪಿಸಲಿಕ್ಕಾಗಿ ಯೆಹೋವನ ಜನರು ತಮ್ಮ ಸ್ವದೇಶಕ್ಕೆ ಹಿಂದಿರುಗಿದರು ಇಂದು ಇದರ ಮಹತ್ವಾರ್ಥವೇನೆಂಬುದು ನಿಮಗೆ ಗೊತ್ತಿದೆಯೊ?
[ಪುಟ 26ರಲ್ಲಿರುವ ಚಿತ್ರಗಳು]
“ಶುದ್ಧ ಭಾಷೆಯನ್ನು” ಮಾತಾಡುವ ಮೂಲಕ ಯೆಹೋವನ ಸಾಕ್ಷಿಗಳು ಜನರಿಗೆ ಬೈಬಲಿನ ಸಾಂತ್ವನದಾಯಕ ಸಂದೇಶವನ್ನು ನೀಡುತ್ತಾರೆ