ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಿಟ್ಟಿನ ದಿನಕ್ಕೆ ಮುಂಚೆ ಆತನನ್ನು ಹುಡುಕಿರಿ

ಯೆಹೋವನ ಸಿಟ್ಟಿನ ದಿನಕ್ಕೆ ಮುಂಚೆ ಆತನನ್ನು ಹುಡುಕಿರಿ

ಯೆಹೋವನ ಸಿಟ್ಟಿನ ದಿನಕ್ಕೆ ಮುಂಚೆ ಆತನನ್ನು ಹುಡುಕಿರಿ

“ಯೆಹೋವನನ್ನು ಹುಡುಕಿರಿ, ನೀತಿಯನ್ನು ಹುಡುಕಿರಿ, ದೀನಭಾವವನ್ನು ಹುಡುಕಿರಿ. ನೀವು ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.”​—ಚೆಫನ್ಯ 2:​3, NW.

1. ಚೆಫನ್ಯನು ಒಬ್ಬ ಪ್ರವಾದಿಯಂತೆ ತನ್ನ ಕೆಲಸವನ್ನು ಆರಂಭಿಸಿದಾಗ ಯೆಹೂದದ ಆತ್ಮಿಕ ಸ್ಥಿತಿಯು ಹೇಗಿತ್ತು?

ಯೆಹೂದದ ಇತಿಹಾಸದಲ್ಲೇ ತೀರ ಸಂದಿಗ್ಧವಾದ ಪರಿಸ್ಥಿತಿಯ ಸಮಯದಲ್ಲಿ, ಚೆಫನ್ಯನು ತನ್ನ ಪ್ರವಾದನ ಕೆಲಸವನ್ನು ಆರಂಭಿಸಿದನು. ಆ ಜನಾಂಗದ ಆತ್ಮಿಕ ಸ್ಥಿತಿಯು ಬಹಳ ಕೆಳಮಟ್ಟಕ್ಕಿಳಿದಿತ್ತು. ಆ ಜನರು ಯೆಹೋವನ ಮೇಲೆ ಭರವಸೆಯಿಡುವುದಕ್ಕೆ ಬದಲಾಗಿ, ಮಾರ್ಗದರ್ಶನಕ್ಕಾಗಿ ವಿಧರ್ಮಿ ಯಾಜಕರು ಹಾಗೂ ಜ್ಯೋತಿಷಿಗಳ ಬಳಿಗೆ ಹೋಗುತ್ತಿದ್ದರು. ಬಾಳನ ಆರಾಧನೆ ಹಾಗೂ ಅದರ ಫಲವಂತಿಕೆಯ ಸಂಸ್ಕಾರಗಳು ಆ ದೇಶದ ಎಲ್ಲೆಡೆಯೂ ವ್ಯಾಪಕವಾಗಿದ್ದವು. ಆ ದೇಶದ ಪ್ರಜೆಗಳನ್ನು ಸಂರಕ್ಷಿಸಬೇಕಾಗಿದ್ದ ಮುಖ್ಯಾಧಿಕಾರಿಗಳು, ಕುಲೀನರು ಹಾಗೂ ನ್ಯಾಯಾಧಿಪತಿಗಳೇ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. (ಚೆಫನ್ಯ 1:9; 3:3) ಆದುದರಿಂದ, ಯೆಹೋವನು ಯೆಹೂದ ಮತ್ತು ಯೆರೂಸಲೇಮಿನ ವಿರುದ್ಧ ‘ಕೈಯೆತ್ತಿ’ ಅವುಗಳನ್ನು ನಾಶಮಾಡಲು ನಿರ್ಧರಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ.​—ಚೆಫನ್ಯ 1:4.

2. ಯೆಹೂದದಲ್ಲಿದ್ದ ದೇವರ ನಂಬಿಗಸ್ತ ಸೇವಕರಿಗೆ ಯಾವ ನಿರೀಕ್ಷೆಯಿತ್ತು?

2 ಅಲ್ಲಿನ ಪರಿಸ್ಥಿತಿಯು ತುಂಬ ಹದಗೆಟ್ಟಿದ್ದರೂ, ಅವರಿಗೆ ನಿರೀಕ್ಷೆಯ ಆಶಾಕಿರಣವಿತ್ತು. ಈಗ ಆಮೋನನ ಮಗನಾದ ಯೋಷೀಯನು ರಾಜನಾಗಿ ಸಿಂಹಾಸನವನ್ನೇರಿದ್ದನು. ಯೋಷೀಯನು ಒಬ್ಬ ಚಿಕ್ಕ ಹುಡುಗನಾಗಿದ್ದರೂ, ಯೆಹೋವನನ್ನು ಯಥಾರ್ಥವಾಗಿ ಪ್ರೀತಿಸುತ್ತಿದ್ದನು. ಈ ಹೊಸ ರಾಜನು ಯೆಹೂದದಲ್ಲಿ ಶುದ್ಧಾರಾಧನೆಯನ್ನು ಪುನಃಸ್ಥಾಪಿಸುವಲ್ಲಿ, ನಂಬಿಗಸ್ತಿಕೆಯಿಂದ ದೇವರ ಸೇವೆಮಾಡುತ್ತಿದ್ದ ಕೆಲವರಿಗೆ ಇದು ಎಷ್ಟು ಪ್ರೋತ್ಸಾಹದಾಯಕವಾಗಿರಲಿತ್ತು! ಇದರಿಂದಾಗಿ ಇತರರು ಸಹ ಅವರ ಜೊತೆಗೂಡುವಂತೆ ಪ್ರಚೋದಿಸಲ್ಪಡುವ ಮತ್ತು ಹೀಗೆ ಯೆಹೋವನ ಸಿಟ್ಟಿನ ದಿನದಿಂದ ಪಾರಾಗುವ ಸಾಧ್ಯತೆಯಿತ್ತು.

ಪಾರಾಗಲಿಕ್ಕಾಗಿರುವ ಆವಶ್ಯಕತೆಗಳು

3, 4. “ಯೆಹೋವನ ಸಿಟ್ಟಿನ ದಿನದಲ್ಲಿ” ಒಬ್ಬ ವ್ಯಕ್ತಿಯು ಪಾರಾಗಬೇಕಾದರೆ, ಯಾವ ಮೂರು ಆವಶ್ಯಕತೆಗಳನ್ನು ಮುಟ್ಟಬೇಕು?

3 ಯೆಹೋವನ ಸಿಟ್ಟಿನ ದಿನದಲ್ಲಿ ಕೆಲವರು ನಿಜವಾಗಿಯೂ ಪಾರಾಗಸಾಧ್ಯವಿತ್ತೊ? ಹೌದು, ಆದರೆ ಅದಕ್ಕಾಗಿ ಅವರು ಚೆಫನ್ಯ 2:​2, 3ರಲ್ಲಿ (NW) ತಿಳಿಸಲ್ಪಟ್ಟಿರುವ ಮೂರು ಆವಶ್ಯಕತೆಗಳನ್ನು ಮುಟ್ಟಬೇಕಿತ್ತು. ನಾವು ಈ ವಚನಗಳನ್ನು ಓದುವಾಗ, ಈ ಆವಶ್ಯಕತೆಗಳಿಗೆ ವಿಶೇಷ ಗಮನವನ್ನು ಕೊಡೋಣ. ಚೆಫನ್ಯನು ಬರೆದುದು: “ತೀರ್ಪುಫಲಿಸುವದರೊಳಗೆ ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವದಕ್ಕೆ ಮುಂಚೆ, ಯೆಹೋವನ ಸಿಟ್ಟಿನ ದಿನವು ನಿಮ್ಮನ್ನು ಮುಟ್ಟುವದಕ್ಕೆ ಮೊದಲು, ಸೇರಿಬನ್ನಿರಿ, ಕೂಡಿಕೊಳ್ಳಿರಿ; ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ. ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಹುಡುಕಿರಿ; ನೀತಿಯನ್ನು ಹುಡುಕಿರಿ; ದೀನಭಾವವನ್ನು ಹುಡುಕಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.”

4 ಯೆಹೋವನ ಸಿಟ್ಟಿನ ದಿನದಲ್ಲಿ ಒಬ್ಬ ವ್ಯಕ್ತಿಯು ಪಾರಾಗಬೇಕಾದರೆ, ಅವನು (1) ಯೆಹೋವನನ್ನು ಹುಡುಕಬೇಕಿತ್ತು, (2) ನೀತಿಯನ್ನು ಹುಡುಕಬೇಕಿತ್ತು, ಮತ್ತು (3) ದೀನಭಾವವನ್ನು ಹುಡುಕಬೇಕಿತ್ತು. ಇಂದು ನಮಗೆ ಈ ಆವಶ್ಯಕತೆಗಳು ತುಂಬ ಆಸಕ್ತಿಕರವಾಗಿರಬೇಕು. ಏಕೆ? ಏಕೆಂದರೆ, ಸಾ.ಶ.ಪೂ. ಏಳನೆಯ ಶತಮಾನದಲ್ಲಿ ಯೆಹೂದ ಮತ್ತು ಯೆರೂಸಲೇಮು ಪ್ರತೀಕಾರದ ದಿನವನ್ನು ಎದುರಿಸಿದಂತೆಯೇ, ಕ್ರೈಸ್ತಪ್ರಪಂಚದ ರಾಷ್ಟ್ರಗಳು ಮತ್ತು ಎಲ್ಲ ದುಷ್ಟರು, ಬರಲಿರುವ ಮಹಾ “ಸಂಕಟ”ದಲ್ಲಿ ಯೆಹೋವ ದೇವರೊಂದಿಗೆ ವಿವಾದವನ್ನು ಇತ್ಯರ್ಥಮಾಡುವುದರ ಕಡೆಗೆ ಮುನ್ನುಗ್ಗುತ್ತಿದ್ದಾರೆ. (ಮತ್ತಾಯ 24:21) ಆ ಸಮಯದಲ್ಲಿ ಬದುಕಿ ಉಳಿಯಲು ಬಯಸುವವರು ಈಗಲೇ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು. ಹೇಗೆ? ಕಾಲವು ಮಿಂಚಿಹೋಗುವ ಮೊದಲೇ ಅವರು ಯೆಹೋವನನ್ನು, ನೀತಿಯನ್ನು, ಹಾಗೂ ದೀನಭಾವವನ್ನು ಹುಡುಕುವ ಮೂಲಕವೇ!

5. ಇಂದು ‘ಯೆಹೋವನನ್ನು ಹುಡುಕುವುದರಲ್ಲಿ’ ಏನು ಒಳಗೂಡಿದೆ?

5 ನೀವು ಒಂದುವೇಳೆ ಹೀಗೆ ಹೇಳಬಹುದು: ‘ನಾನು ದೀಕ್ಷಾಸ್ನಾನ ಪಡೆದಿರುವ ದೇವರ ಸಮರ್ಪಿತ ಸೇವಕನು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆ. ಆದುದರಿಂದ ನಾನು ಆ ಆವಶ್ಯಕತೆಗಳನ್ನು ಈಗಾಗಲೇ ಪೂರೈಸಿದ್ದೇನಲ್ಲವೋ?’ ವಾಸ್ತವದಲ್ಲಿ, ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಒಳಗೂಡಿದೆ. ಇಸ್ರಾಯೇಲ್‌ ಕೂಡ ಒಂದು ಸಮರ್ಪಿತ ಜನಾಂಗವಾಗಿತ್ತು, ಆದರೂ ಚೆಫನ್ಯನ ದಿನಗಳಲ್ಲಿ ಜೀವಿಸುತ್ತಿದ್ದ ಯೆಹೂದದ ಜನರು ತಮ್ಮ ಸಮರ್ಪಣೆಗನುಸಾರ ಜೀವಿಸುತ್ತಿರಲಿಲ್ಲ. ಇದರ ಫಲಿತಾಂಶವಾಗಿ, ಆ ಜನಾಂಗವನ್ನು ಯೆಹೋವನು ತ್ಯಜಿಸಿಬಿಟ್ಟನು. ಇಂದು ‘ಯೆಹೋವನನ್ನು ಹುಡುಕುವುದರಲ್ಲಿ,’ ಆತನ ಭೂಸಂಸ್ಥೆಯೊಂದಿಗೆ ಜೊತೆಗೂಡಿ, ಆತನೊಂದಿಗೆ ಹೃತ್ಪೂರ್ವಕವಾದ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವುದು ಮತ್ತು ಕಾಪಾಡಿಕೊಳ್ಳುವುದು ಒಳಗೂಡಿದೆ. ದೇವರು ವಿಷಯಗಳನ್ನು ಹೇಗೆ ಪರಿಗಣಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ಹಾಗೂ ಆತನ ಅನಿಸಿಕೆಗಳಿಗೆ ಗಮನಕೊಡುವುದೇ ಇದರ ಅರ್ಥವಾಗಿದೆ. ನಾವು ಯೆಹೋವನ ವಾಕ್ಯವನ್ನು ಜಾಗರೂಕತೆಯಿಂದ ಅಭ್ಯಾಸಿಸಿ, ಅದರ ಕುರಿತು ಮನನಮಾಡಿ, ಅದರ ಸಲಹೆಯನ್ನು ನಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳುವ ಮೂಲಕವೂ ಯೆಹೋವನನ್ನು ಹುಡುಕುತ್ತೇವೆ. ಅಷ್ಟುಮಾತ್ರವಲ್ಲದೆ, ತೀವ್ರವಾದ ಪ್ರಾರ್ಥನೆಯಲ್ಲಿ ನಾವು ಯೆಹೋವನ ಮಾರ್ಗದರ್ಶನವನ್ನು ಕೋರಿ, ಆತನ ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸುವಲ್ಲಿ, ಆತನೊಂದಿಗಿನ ನಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ ಮತ್ತು ‘ಪೂರ್ಣ ಹೃದಯ, ಪ್ರಾಣ, ಬಲದಿಂದ’ ಆತನ ಸೇವೆಮಾಡುವಂತೆ ನಾವು ಪ್ರಚೋದಿಸಲ್ಪಡುತ್ತೇವೆ.​—ಧರ್ಮೋಪದೇಶಕಾಂಡ 6:5; ಗಲಾತ್ಯ 5:​22-25; ಫಿಲಿಪ್ಪಿ 4:​6, 7; ಪ್ರಕಟನೆ 4:11.

6. ನಾವು ಹೇಗೆ ‘ನೀತಿಯನ್ನು ಹುಡುಕುತ್ತೇವೆ’ ಮತ್ತು ಈ ಲೋಕದಲ್ಲಿಯೂ ಇದು ಸಾಧ್ಯವಿದೆ ಏಕೆ?

6ಚೆಫನ್ಯ 2:3ರಲ್ಲಿ ತಿಳಿಸಲ್ಪಟ್ಟಿರುವ ಎರಡನೆಯ ಆವಶ್ಯಕತೆಯು ‘ನೀತಿಯನ್ನು ಹುಡುಕು’ವುದಾಗಿದೆ. ಕ್ರೈಸ್ತ ದೀಕ್ಷಾಸ್ನಾನಕ್ಕೆ ಅರ್ಹರಾಗಸಾಧ್ಯವಾಗುವಂತೆ ನಮ್ಮಲ್ಲಿ ಅನೇಕರು ದೊಡ್ಡ ಬದಲಾವಣೆಗಳನ್ನು ಮಾಡಿದೆವು. ಆದರೆ ನಮ್ಮ ಜೀವಮಾನದುದ್ದಕ್ಕೂ ದೇವರ ನೀತಿಯ ಮಟ್ಟಗಳನ್ನು ಪಾಲಿಸುವುದನ್ನು ನಾವು ಮುಂದುವರಿಸಬೇಕು. ಈ ವಿಷಯದಲ್ಲಿ ಒಳ್ಳೆಯ ಆರಂಭವನ್ನು ಮಾಡಿದ ಕೆಲವರು, ಸಮಯ ಗತಿಸಿದಂತೆ ಲೋಕದ ಪ್ರಭಾವದಿಂದ ಮಲಿನರಾಗಲು ತಮ್ಮನ್ನು ಬಿಟ್ಟುಕೊಟ್ಟಿದ್ದಾರೆ. ನೀತಿಯನ್ನು ಹುಡುಕುವುದು ಅಷ್ಟೇನೂ ಸುಲಭವಾದದ್ದಲ್ಲ. ಏಕೆಂದರೆ ಲೈಂಗಿಕ ಅನೈತಿಕತೆ, ಸುಳ್ಳು ಹೇಳುವುದು ಹಾಗೂ ಇನ್ನಿತರ ಪಾಪಗಳನ್ನು ಸಾಮಾನ್ಯವಾದ ಸಂಗತಿಗಳಾಗಿ ಪರಿಗಣಿಸುವಂತಹ ಜನರ ಮಧ್ಯೆ ನಾವು ಜೀವಿಸುತ್ತಿದ್ದೇವೆ. ಆದರೂ, ಯೆಹೋವನನ್ನು ಮೆಚ್ಚಿಸಬೇಕೆಂಬ ಬಲವಾದ ಬಯಕೆಯು, ಲೋಕದೊಂದಿಗೆ ಬೆರೆಯಲು ಪ್ರಯತ್ನಿಸುತ್ತಾ ಅದರ ಮೆಚ್ಚಿಕೆಯನ್ನು ಪಡೆಯುವ ಯಾವುದೇ ಪ್ರವೃತ್ತಿಯನ್ನು ಜಯಿಸಬಲ್ಲದು. ಯೆಹೂದವು ತನ್ನ ನೆರೆಹೊರೆಯಲ್ಲಿದ್ದ ವಿಧರ್ಮಿ ಜನಾಂಗಗಳಂತೆ ಜೀವಿಸಲು ಪ್ರಯತ್ನಿಸಿದ್ದರಿಂದ, ಅದು ಯೆಹೋವನ ಅನುಗ್ರಹವನ್ನು ಕಳೆದುಕೊಂಡಿತು. ಆದುದರಿಂದ, ನಾವು ಲೋಕವನ್ನು ಅನುಕರಿಸುವುದಕ್ಕೆ ಬದಲಾಗಿ, ‘ದೇವರನ್ನು ಅನುಸರಿಸುವವರಾಗಿರೋಣ’ ಮತ್ತು ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ ಸ್ವಭಾವವನ್ನು’ ಬೆಳೆಸಿಕೊಳ್ಳುತ್ತಾ ಇರೋಣ.​—ಎಫೆಸ 4:24; 5:1.

7. ನಾವು ಹೇಗೆ ‘ದೀನಭಾವವನ್ನು ಹುಡುಕ’ಸಾಧ್ಯವಿದೆ?

7 ಯೆಹೋವನ ಸಿಟ್ಟಿನ ದಿನದಲ್ಲಿ ನಾವು ಪಾರಾಗಲು ಬಯಸುವುದಾದರೆ, ನಾವು ‘ದೀನಭಾವವನ್ನು ಹುಡುಕ’ಬೇಕು ಎಂಬುದೇ ಚೆಫನ್ಯ 2:3ರಲ್ಲಿ ತಿಳಿಸಲ್ಪಟ್ಟಿರುವ ಮೂರನೆಯ ಅಂಶವಾಗಿದೆ. ಪ್ರತಿದಿನ ನಾವು ಅನೇಕ ಮಂದಿ ಪುರುಷರು, ಸ್ತ್ರೀಯರು ಮತ್ತು ಯುವ ಜನರನ್ನು ಭೇಟಿಯಾಗುತ್ತೇವೆ; ಇವರಲ್ಲಿ ಸ್ವಲ್ಪವೂ ದೀನಭಾವವಿರುವುದಿಲ್ಲ. ಅವರ ದೃಷ್ಟಿಯಲ್ಲಿ ಶಾಂತಸ್ವಭಾವವು ಒಂದು ದೋಷವಾಗಿದೆ. ಅಧೀನತೆಯನ್ನು ದೊಡ್ಡ ಬಲಹೀನತೆಯಾಗಿ ಪರಿಗಣಿಸಲಾಗುತ್ತದೆ. ಅವರು ತಗಾದೆಮಾಡುವವರೂ, ಸ್ವಾರ್ಥಿಗಳೂ, ಹಟವಾದಿಗಳೂ ಆಗಿರುತ್ತಾರೆ. ಏನೇ ಆದರೂ ಇತರರು ತಮ್ಮ “ಹಕ್ಕು”ಗಳು ಮತ್ತು ಇಷ್ಟಾನಿಷ್ಟಗಳಿಗೆ ಪರಿಗಣನೆ ತೋರಿಸಬೇಕೆಂದು ಇವರು ನೆನಸುತ್ತಾರೆ. ಇಂತಹ ಮನೋಭಾವಗಳಲ್ಲಿ ಕೆಲವು ನಮ್ಮ ಮೇಲೆ ಪರಿಣಾಮ ಬೀರುವಲ್ಲಿ ಅದೆಷ್ಟು ವಿಷಾದಕರವಾಗಿರುವುದು! ‘ದೀನಭಾವವನ್ನು ಹುಡುಕುವ’ ಸಮಯ ಇದೇ ಆಗಿದೆ. ಹೇಗೆ? ದೇವರ ಶಿಸ್ತನ್ನು ದೀನಭಾವದಿಂದ ಸ್ವೀಕರಿಸಿ, ಆತನ ಚಿತ್ತಕ್ಕನುಸಾರ ನಡೆಯುತ್ತಾ ಆತನಿಗೆ ಅಧೀನರಾಗಿರುವ ಮೂಲಕವೇ.

“ಒಂದುವೇಳೆ” ಮರೆಯಾಗಸಾಧ್ಯವಿದೆ​—ಹೀಗೇಕೆ?

8. ಚೆಫನ್ಯ 2:3ರಲ್ಲಿ ಉಪಯೋಗಿಸಲ್ಪಟ್ಟಿರುವ “ಒಂದುವೇಳೆ” ಎಂಬ ಶಬ್ದವು ಏನನ್ನು ಸೂಚಿಸುತ್ತದೆ?

8 “ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ” ಎಂದು ಚೆಫನ್ಯ 2:3 ಹೇಳುತ್ತದೆ ಎಂಬುದನ್ನು ಗಮನಿಸಿರಿ. ‘ಲೋಕದ ದೀನರನ್ನು’ ಉದ್ದೇಶಿಸಿ ಮಾತಾಡುವಾಗ, “ಒಂದುವೇಳೆ” ಎಂಬ ಶಬ್ದವು ಏಕೆ ಉಪಯೋಗಿಸಲ್ಪಟ್ಟಿದೆ? ಆ ದೀನರು ಸರಿಯಾದ ಕ್ರಮವನ್ನು ತೆಗೆದುಕೊಂಡಿದ್ದರೂ, ಅತಿಯಾದ ಆತ್ಮವಿಶ್ವಾಸಕ್ಕೆ ಅವಕಾಶವಿರಲಿಲ್ಲ. ನಂಬಿಗಸ್ತಿಕೆಯಲ್ಲಿ ಅವರ ಜೀವನಮಾರ್ಗವು ಇನ್ನೂ ಅಂತ್ಯಗೊಂಡಿರಲಿಲ್ಲ. ಅವರಲ್ಲಿ ಕೆಲವರು ಪಾಪಕ್ಕೆ ಬಲಿಬೀಳುವ ಸಾಧ್ಯತೆಯಿತ್ತು. ನಮ್ಮ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಯೇಸು ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ಹೌದು, ಯೆಹೋವನ ಸಿಟ್ಟಿನ ದಿನದಲ್ಲಿ ರಕ್ಷಣೆಯನ್ನು ಪಡೆಯುವುದು, ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡುತ್ತಾ ಮುಂದುವರಿಯುವುದರ ಮೇಲೆ ಅವಲಂಬಿಸಿದೆ. ನಿಮ್ಮ ದೃಢನಿರ್ಧಾರವೂ ಇದೇ ಆಗಿದೆಯೋ?

9. ಯುವ ಅರಸನಾದ ಯೋಷೀಯನು ಯೋಗ್ಯವಾದ ಯಾವ ಕ್ರಮಗಳನ್ನು ಕೈಗೊಂಡನು?

9 ಚೆಫನ್ಯನ ಮಾತುಗಳಿಗೆ ಪ್ರತ್ಯುತ್ತರವಾಗಿ, ಅರಸನಾದ ಯೋಷೀಯನು ‘ಯೆಹೋವನನ್ನು ಹುಡುಕುವಂತೆ’ ಪ್ರಚೋದಿಸಲ್ಪಟ್ಟನು ಎಂಬುದು ಸುವ್ಯಕ್ತ. ಶಾಸ್ತ್ರವಚನವು ಹೇಳುವುದು: “ಅವನು [ಯೋಷೀಯನು] ತನ್ನ ಆಳಿಕೆಯ ಎಂಟನೆಯ ವರುಷದಲ್ಲಿ ಇನ್ನೂ ಯೌವನಸ್ಥನಾಗಿರುವಾಗಲೇ ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು.” (2 ಪೂರ್ವಕಾಲವೃತ್ತಾಂತ 34:3) ಯೋಷೀಯನು ‘ನೀತಿಯನ್ನು ಹುಡುಕುತ್ತಾ’ ಮುಂದುವರಿದನು. ಏಕೆಂದರೆ ನಾವು ಓದುವುದು: “ಹನ್ನೆರಡನೆಯ ವರುಷ [ಯೋಷೀಯನು ಸುಮಾರು 20 ವರ್ಷ ಪ್ರಾಯದವನಾಗಿದ್ದಾಗ] ಯೆಹೂದದಲ್ಲಿಯೂ ಯೆರೂಸಲೇಮಿನಲ್ಲಿಯೂ ಇದ್ದ ಪೂಜಾಸ್ಥಳಗಳನ್ನೂ ಅಶೇರಸ್ತಂಭಗಳನ್ನೂ ಕೆತ್ತಿದ ಮತ್ತು ಎರಕದ ವಿಗ್ರಹಗಳನ್ನೂ ತೆಗೆದುಹಾಕಿ ದೇಶವನ್ನು ಶುದ್ಧಿಪಡಿಸಿದನು. ಇದಲ್ಲದೆ ಅವನು ಬಾಳ್‌ದೇವತೆಗಳ ಯಜ್ಞವೇದಿಗಳನ್ನು ತನ್ನೆದುರಿನಲ್ಲಿಯೇ ಹಾಳುಮಾಡಿಸಿ”ದನು. (2 ಪೂರ್ವಕಾಲವೃತ್ತಾಂತ 34:​3, 4) ಯೆಹೋವನನ್ನು ಮೆಚ್ಚಿಸಲಿಕ್ಕಾಗಿ, ವಿಗ್ರಹಾರಾಧನೆಯನ್ನು ಹಾಗೂ ಇತರ ಸುಳ್ಳು ಧಾರ್ಮಿಕ ಆಚರಣೆಗಳನ್ನು ಆ ದೇಶದಿಂದ ತೆಗೆದುಹಾಕಲಿಕ್ಕಾಗಿ ದೀನಭಾವದಿಂದ ಕ್ರಿಯೆಗೈಯುವ ಮೂಲಕ ಯೋಷೀಯನು ‘ದೀನಭಾವವನ್ನು ಸಹ ಹುಡುಕಿದನು.’ ದೇಶದಲ್ಲಿ ಆಗುತ್ತಿದ್ದ ಈ ಎಲ್ಲ ಬದಲಾವಣೆಗಳನ್ನು ನೋಡಿ ಅಲ್ಲಿದ್ದ ಇತರ ದೀನರು ಎಷ್ಟು ಸಂತೋಷಪಟ್ಟಿದ್ದಿರಬೇಕು!

10. ಸಾ.ಶ.ಪೂ. 607ರಲ್ಲಿ ಯೆಹೂದಕ್ಕೆ ಏನು ಸಂಭವಿಸಿತು, ಆದರೂ ಯಾರು ಪಾರಾಗಿ ಉಳಿದರು?

10 ಯೋಷೀಯನ ಆಳ್ವಿಕೆಯ ಸಮಯದಲ್ಲಿ ಅನೇಕ ಯೆಹೂದ್ಯರು ಪುನಃ ಯೆಹೋವನ ಕಡೆಗೆ ತಿರುಗಿದರು. ಆದರೂ, ಯೋಷೀಯನ ಮರಣಾನಂತರ, ಅವರಲ್ಲಿ ಹೆಚ್ಚಿನವರು ತಾವು ಬಿಟ್ಟುಬಿಟ್ಟಿದ್ದ ಹಳೆಯ ಮಾರ್ಗಗಳಿಗೆ ಹಿಂದಿರುಗಿದರು ಮತ್ತು ಸಂಪೂರ್ಣವಾಗಿ ದೇವರಿಗೆ ಮೆಚ್ಚಿಕೆಯಾಗದಿರುವ ಪದ್ಧತಿಗಳನ್ನು ಅನುಸರಿಸತೊಡಗಿದರು. ಯೆಹೋವನು ಈ ಮುಂಚೆಯೇ ಆಜ್ಞಾಪಿಸಿದ್ದಂತೆ, ಬಾಬೆಲಿನವರು ಯೆಹೂದವನ್ನು ಸೋಲಿಸಿಬಿಟ್ಟರು ಮತ್ತು ಸಾ.ಶ.ಪೂ. 607ರಲ್ಲಿ ಅದರ ರಾಜಧಾನಿಯಾದ ಯೆರೂಸಲೇಮನ್ನು ನಾಶಮಾಡಿಬಿಟ್ಟರು. ಹಾಗಿದ್ದರೂ, ಎಲ್ಲವೂ ನಾಶವಾಗಿಹೋಗಲಿಲ್ಲ. ಪ್ರವಾದಿಯಾದ ಯೆರೆಮೀಯನು, ಕೂಷ್ಯನಾದ ಎಬೆದ್ಮೆಲೆಕನು, ಯೋನಾದಾಬನ ವಂಶಜರು ಹಾಗೂ ದೇವರ ಇತರ ನಂಬಿಗಸ್ತ ವ್ಯಕ್ತಿಗಳು, ಯೆಹೋವನ ಸಿಟ್ಟಿನ ದಿನದಲ್ಲಿ ಪಾರಾಗಿ ಉಳಿದರು.​—ಯೆರೆಮೀಯ 35:​18, 19; 39:​11, 12, 15-18.

ದೇವರ ವೈರಿಗಳೇ ಲಕ್ಷ್ಯಕೊಡಿರಿ!

11. ಇಂದು ದೇವರಿಗೆ ನಂಬಿಗಸ್ತರಾಗಿ ಉಳಿಯುವುದು ಒಂದು ಪಂಥಾಹ್ವಾನವಾಗಿದೆ ಏಕೆ, ಆದರೂ ಯೆಹೋವನ ಜನರ ವೈರಿಗಳು ಏನನ್ನು ಪರಿಗಣಿಸುವುದು ಅವರಿಗೆ ಒಳ್ಳೇದಾಗಿರುವುದು?

11 ಈ ದುಷ್ಟ ವ್ಯವಸ್ಥೆಯ ಮೇಲೆ ಬರಲಿರುವ ಯೆಹೋವನ ಸಿಟ್ಟಿನ ದಿನಕ್ಕಾಗಿ ನಾವು ಕಾಯುತ್ತಿರುವಾಗ, “ನಾನಾವಿಧವಾದ ಕಷ್ಟ”ಗಳನ್ನು ನಾವು ಎದುರಿಸಬೇಕಾಗುತ್ತದೆ. (ಯಾಕೋಬ 1:2) ಆರಾಧನಾ ಸ್ವಾತಂತ್ರ್ಯವನ್ನು ಮಾನ್ಯಮಾಡುತ್ತೇವೆಂದು ಹೇಳಿಕೊಳ್ಳುವಂತಹ ಅನೇಕ ದೇಶಗಳಲ್ಲಿ, ದೇವಜನರ ಮೇಲೆ ತೀವ್ರವಾದ ಹಿಂಸೆಯನ್ನು ತರಲಿಕ್ಕಾಗಿ, ಕುತಂತ್ರಿ ಪಾದ್ರಿಗಳು ಐಹಿಕ ಅಧಿಕಾರಿಗಳ ಮೇಲಿನ ತಮ್ಮ ಪ್ರಭಾವವನ್ನು ಉಪಯೋಗಿಸಿದ್ದಾರೆ. ನೀತಿನಿಷ್ಠೆಗಳಿಲ್ಲದಂತಹ ಜನರು ಯೆಹೋವನ ಸಾಕ್ಷಿಗಳನ್ನು ದೂಷಿಸಿ, ಅವರಿಗೆ “ಅಪಾಯಕಾರಿ ಪಂಥ”ವೆಂಬ ಹಣೆಪಟ್ಟಿಯನ್ನು ನೀಡಿದ್ದಾರೆ. ಅವರ ಕೃತ್ಯಗಳ ಬಗ್ಗೆ ದೇವರಿಗೆ ಗೊತ್ತಿದೆ ಮತ್ತು ಆತನೇ ಇವರಿಗೆ ತಕ್ಕ ಶಿಕ್ಷೆಯನ್ನು ನೀಡುವನು. ಪುರಾತನ ಕಾಲದ ದೇವಜನರ ವೈರಿಗಳಾಗಿದ್ದ ಫಿಲಿಷ್ಟಿಯರಿಗೆ ಏನು ಸಂಭವಿಸಿತೆಂಬುದನ್ನು ಆತನ ವೈರಿಗಳು ಪರಿಗಣಿಸಿದರೆ ಒಳ್ಳೇದಿತ್ತು. ಪ್ರವಾದನೆಯು ಹೇಳುವುದು: “ಗಾಜ ನಿರ್ಜನವಾಗುವದು, ಅಷ್ಕೆಲೋನ್‌ ಹಾಳಾಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಓಡಿಸಿಬಿಡುವರು, ಎಕ್ರೋನ್‌ ನಿರ್ಮೂಲವಾಗುವದು.” ಗಾಜ, ಅಷ್ಕೆಲೋನ್‌, ಅಷ್ಡೋದ್‌, ಮತ್ತು ಎಕ್ರೋನ್‌ ಎಂಬ ಫಿಲಿಷ್ಟಿಯ ಪಟ್ಟಣಗಳು ಸಂಪೂರ್ಣವಾಗಿ ಧ್ವಂಸವಾಗಲಿದ್ದವು.​—ಚೆಫನ್ಯ 2:​4-7.

12. ಫಿಲಿಷ್ಟಿಯ, ಮೋವಾಬ್‌, ಮತ್ತು ಅಮ್ಮೋನ್‌ಗಳಿಗೆ ಏನು ಸಂಭವಿಸಿತು?

12 ಪ್ರವಾದನೆಯು ಮುಂದುವರಿಯುವುದು: “ಮೋವಾಬ್ಯರೂ ಅಮ್ಮೋನ್ಯರೂ ಉಬ್ಬಟೆಯಿಂದ ನನ್ನ ಜನರ ಮೇರೆಯನ್ನು ಮೀರಿ ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ.” (ಚೆಫನ್ಯ 2:8) ಐಗುಪ್ತ ಹಾಗೂ ಇಥಿಯೋಪಿಯಗಳು ಬಾಬೆಲಿನ ದಾಳಿಗಾರರ ವಶದಲ್ಲಿ ಕಷ್ಟಾನುಭವಿಸಿದರು ಎಂಬುದು ನಿಜ. ಆದರೆ ಯೆಹೋವನು ಮೋವಾಬ್‌ ಮತ್ತು ಅಮ್ಮೋನಿನ ಮೇಲೆ, ಅಂದರೆ ಅಬ್ರಹಾಮನ ಸೋದರಳಿಯನಾದ ಲೋಟನಿಂದ ಬಂದಿದ್ದ ಜನಾಂಗಗಳ ಮೇಲೆ ಯಾವ ನ್ಯಾಯತೀರ್ಪನ್ನು ವಿಧಿಸಲಿದ್ದನು? ಯೆಹೋವನು ಮುಂತಿಳಿಸಿದ್ದು: “ಸೊದೋಮಿನ ಗತಿಯೇ ಮೋವಾಬಿಗೆ ಆಗುವದು, ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವದು.” ಸೊದೋಮ್‌ ಹಾಗೂ ಗೊಮೋರದ ನಾಶನದಿಂದ ಪಾರಾಗಿ ಉಳಿದಿದ್ದ ತಮ್ಮ ಪೂರ್ವಜರಾಗಿದ್ದ ಲೋಟನ ಇಬ್ಬರು ಪುತ್ರಿಯರಿಗೆ ಅಸದೃಶವಾಗಿ, ಸೊಕ್ಕಿನ ಮೋವಾಬ್‌ ಮತ್ತು ಅಮ್ಮೋನ್‌ಗಳು ದೇವರ ನ್ಯಾಯತೀರ್ಪುಗಳಿಂದ ಬದುಕಿ ಉಳಿಯಸಾಧ್ಯವಿರಲಿಲ್ಲ. (ಚೆಫನ್ಯ 2:​9-12; ಆದಿಕಾಂಡ 19:​16, 23-26, 36-38) ಇಂದು, ಫಿಲಿಷ್ಟಿಯ ಹಾಗೂ ಅದರ ನಗರಗಳು ಎಲ್ಲಿವೆ? ಒಂದು ಕಾಲದಲ್ಲಿ ಹೆಮ್ಮೆಯಿಂದ ಮೆರೆದಾಡುತ್ತಿದ್ದ ಮೋವಾಬ್‌ ಹಾಗೂ ಅಮ್ಮೋನ್‌ ಜನಾಂಗಗಳ ಕುರಿತೇನು? ನೀವು ಎಷ್ಟೇ ಹುಡುಕಿದರೂ ಅವು ಸಿಗಲಾರವು.

13. ನಿನೆವೆಯಲ್ಲಿ ಪ್ರಾಕ್ತನಶಾಸ್ತ್ರಕ್ಕೆ ಸಂಬಂಧಪಟ್ಟ ಯಾವ ಕಂಡುಹಿಡಿತವನ್ನು ಮಾಡಲಾಯಿತು?

13 ಚೆಫನ್ಯನ ದಿನದಲ್ಲಿ, ಅಶ್ಶೂರ್ಯ ಸಾಮ್ರಾಜ್ಯವು ತನ್ನ ಅಧಿಕಾರದ ಉತ್ತುಂಗದಲ್ಲಿತ್ತು. ಅಶ್ಶೂರ್ಯದ ರಾಜಧಾನಿಯಾಗಿದ್ದ ನಿನೆವೆಯಲ್ಲಿ ಕಂಡುಹಿಡಿಯಲ್ಪಟ್ಟ ಒಂದು ಅರಮನೆಯ ಭಾಗವೊಂದನ್ನು ವರ್ಣಿಸುತ್ತಾ, ಪ್ರಾಕ್ತನಶಾಸ್ತ್ರಜ್ಞನಾದ ಆಸ್ಟನ್‌ ಲೋಯಾರ್ಡ್‌ ಹೀಗೆ ಬರೆದನು: “ಒಳಮಾಳಿಗೆಗಳು . . . ಚಿಕ್ಕ ಚಿಕ್ಕ ಚೌಕಗಳಾಗಿ ವಿಭಾಗಿಸಲ್ಪಟ್ಟಿದ್ದು, ಅವುಗಳಲ್ಲಿ ಹೂವುಗಳ ಇಲ್ಲವೆ ಪ್ರಾಣಿಗಳ ಆಕೃತಿಗಳು ಚಿತ್ರಿಸಲ್ಪಟ್ಟಿದ್ದವು. ಕೆಲವು ಚೌಕಗಳಲ್ಲಿ ದಂತದ ಮೇಲ್ಮೈ ಇತ್ತು. ಮತ್ತು ಪ್ರತಿಯೊಂದು ಚೌಕದ ಸುತ್ತಲೂ ಬಹು ಸುಂದರವಾದ ಅಂಚುಗಳು ಮತ್ತು ಅಚ್ಚೊತ್ತುಗಳು ಇದ್ದವು. ತೊಲೆಗಳಿಗೆ ಮತ್ತು ಕೋಣೆಗಳ ಪಕ್ಕ ಗೋಡೆಗಳಿಗೆ ಬೆಳ್ಳಿಬಂಗಾರಗಳ ಹೊದಿಕೆಯಿದ್ದಿರಬಹುದು. ಮತ್ತು ಮರದ ಕೆಲಸಕ್ಕಾಗಿ ಭಾರೀ ಬೆಲೆಬಾಳುವ ಮರವನ್ನೇ ಉಪಯೋಗಿಸಲಾಗಿತ್ತು, ಮತ್ತು ಇದರಲ್ಲಿ ವಿಶೇಷವಾಗಿ ದೇವದಾರು ಮರವು ಉಪಯೋಗಿಸಲ್ಪಟ್ಟದ್ದು ಗಮನಸೆಳೆಯುವಂಥದ್ದಾಗಿತ್ತು.” ಆದರೂ ಚೆಫನ್ಯನ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಂತೆ, ಅಶ್ಶೂರ್ಯವು ನಾಶಮಾಡಲ್ಪಟ್ಟು, ಅದರ ರಾಜಧಾನಿ ನಗರವಾದ ನಿನೆವೆಯು ‘ಹಾಳುಬೀಳಲಿತ್ತು.’​—ಚೆಫನ್ಯ 2:13.

14. ನಿನೆವೆಯ ವಿಷಯದಲ್ಲಿ ಚೆಫನ್ಯನು ನುಡಿದ ಪ್ರವಾದನೆಯು ಹೇಗೆ ನೆರವೇರಿತು?

14 ಚೆಫನ್ಯನು ಆ ಪ್ರವಾದನೆಯನ್ನು ನುಡಿದು 15 ವರ್ಷಗಳು ಗತಿಸಿದ ಬಳಿಕ, ಬಲಿಷ್ಠ ನಗರವಾಗಿದ್ದ ನಿನೆವೆಯು ನಾಶಮಾಡಲ್ಪಟ್ಟಿತು ಮತ್ತು ಅದರ ಅರಮನೆಯು ನೆಲಸಮವಾಯಿತು. ಹೌದು, ಆ ಹೆಮ್ಮೆಯ ಪಟ್ಟಣವು ಸಂಪೂರ್ಣವಾಗಿ ಧೂಳಿನ ರಾಶಿಯಾಗಿ ಪರಿಣಮಿಸಿತು. ಅಲ್ಲಿ ಸಂಭವಿಸಿದ ನಾಶನವು ಎಷ್ಟರ ಮಟ್ಟಿಗಿರುವುದೆಂಬುದನ್ನು ಈ ಮಾತುಗಳಲ್ಲಿ ಸ್ಪಷ್ಟವಾಗಿ ಮುಂತಿಳಿಸಲಾಗಿತ್ತು: “ಕೊಕ್ಕರೆಯೂ ಮುಳ್ಳುಹಂದಿಯೂ ಅದರ ಬೋದಿಗೆಗಳಲ್ಲಿ ವಾಸಮಾಡಿಕೊಳ್ಳುವವು; ಕಿಟಕಿಗಳಲ್ಲಿ ಚಿಲಿಪಿಲಿಗಾನವು ಕೇಳಿಸುವದು; ಹೊಸ್ತಿಲುಗಳಲ್ಲಿ ಹಾಳುಬಡಿಯುವದು.” (ಚೆಫನ್ಯ 2:​14, 15) ನಿನೆವೆಯ ಭವ್ಯವಾದ ಕಟ್ಟಡಗಳು, ಕೊಕ್ಕರೆಗಳಿಗೆ ಮತ್ತು ಮುಳ್ಳುಹಂದಿಗಳಿಗೆ ಮಾತ್ರ ಯೋಗ್ಯವಾದ ತಂಗುದಾಣಗಳಾಗುವವು. ಆ ನಗರದ ಬೀದಿಗಳಲ್ಲಿ ಈಗ ವ್ಯಾಪಾರಿಗಳ ಕೂಗಾಟವಾಗಲಿ, ಯೋಧರ ಆರ್ಭಟವಾಗಲಿ, ಪುರೋಹಿತರ ಮಂತ್ರಪಠನವಾಗಲಿ ಕೇಳಿಬರುವುದಿಲ್ಲ. ಒಂದು ಕಾಲದಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದ ರಸ್ತೆಗಳಲ್ಲಿ, ವಿಚಿತ್ರವಾಗಿ ಹಾಡುತ್ತಿರುವ ಧ್ವನಿಯು ಕಿಟಕಿಯಿಂದ ಕೇಳಿಬರುವುದು. ಅದೊಂದು ಹಕ್ಕಿಯ ಗೋಳುಕರೆಯಾಗಿರಬಹುದು ಇಲ್ಲವೆ ಮಂದಮಾರುತದ ಶಬ್ದವಾಗಿರಬಹುದು. ಇದೇ ರೀತಿಯಲ್ಲಿ ದೇವರ ಎಲ್ಲ ವೈರಿಗಳು ತಮ್ಮ ಅಂತ್ಯವನ್ನು ಕಾಣಲಿ!

15. ಫಿಲಿಷ್ಟಿಯ, ಮೋವಾಬ್‌, ಅಮ್ಮೋನ್‌ ಮತ್ತು ಅಶ್ಶೂರ್ಯ ಜನಾಂಗಗಳಿಗೆ ಏನು ಸಂಭವಿಸಿತೋ ಅದರಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ?

15 ಫಿಲಿಷ್ಟಿಯ, ಮೋವಾಬ್‌, ಅಮ್ಮೋನ್‌, ಮತ್ತು ಅಶ್ಶೂರ್ಯ ಜನಾಂಗಗಳಿಗೆ ಸಂಭವಿಸಿದ ವಿನಾಶದಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ? ಏನೆಂದರೆ, ಯೆಹೋವನ ಸೇವಕರಾಗಿರುವ ನಾವು, ನಮ್ಮ ವೈರಿಗಳಿಗೆ ಭಯಪಡುವ ಅಗತ್ಯವಿಲ್ಲ. ತನ್ನ ಜನರನ್ನು ವಿರೋಧಿಸುವವರು ಮಾಡುವ ಕೆಲಸಗಳನ್ನು ದೇವರು ನೋಡುತ್ತಾನೆ. ಗತಕಾಲದಲ್ಲಿ ತನ್ನ ವೈರಿಗಳ ವಿರುದ್ಧ ಯೆಹೋವನು ಕ್ರಿಯೆಗೈದನು, ಮತ್ತು ಇಂದು ಇಡೀ ಭೂಮಿಯ ಮೇಲೆ ಆತನು ತನ್ನ ನ್ಯಾಯತೀರ್ಪುಗಳನ್ನು ಬರಮಾಡುವನು. ಆದರೂ, ‘ಸಕಲ ಜನಾಂಗಗಳಿಂದ ಬಂದ ಮಹಾ ಸಮೂಹದವರು’ ಬದುಕಿ ಉಳಿಯುವರು. (ಪ್ರಕಟನೆ 7:9) ನೀವೂ ಅವರಲ್ಲಿ ಒಬ್ಬರಾಗಿರಬಹುದು. ಆದರೆ ಅದಕ್ಕಾಗಿ ನೀವು ಯೆಹೋವನನ್ನು, ನೀತಿಯನ್ನು ಮತ್ತು ದೀನಭಾವವನ್ನು ನಿರಂತರವಾಗಿ ಹುಡುಕುತ್ತಾ ಇರಬೇಕು.

ಅಹಂಕಾರಿಗಳಾದ ತಪ್ಪಿತಸ್ಥರಿಗೆ ವಿಪತ್ತು ಅಯ್ಯೋ!

16. ಯೆಹೂದದ ಪ್ರಭುಗಳು ಮತ್ತು ಧಾರ್ಮಿಕ ಮುಖಂಡರ ಕುರಿತು ಚೆಫನ್ಯನ ಪ್ರವಾದನೆಯು ಏನು ಹೇಳಿತು, ಮತ್ತು ಈ ಮಾತುಗಳು ಏಕೆ ಕ್ರೈಸ್ತಪ್ರಪಂಚಕ್ಕೆ ಸರಿಹೊಂದುತ್ತವೆ?

16 ಪುನಃ ಚೆಫನ್ಯನ ಪ್ರವಾದನೆಯು ಯೆಹೂದ ಹಾಗೂ ಯೆರೂಸಲೇಮಿನ ಕಡೆಗೆ ಗಮನ ಸೆಳೆಯುತ್ತದೆ. ಚೆಫನ್ಯ 3:​1, 2 ಹೀಗೆ ಹೇಳುತ್ತದೆ: “ಅಯ್ಯೋ, ಅವಿಧೇಯವೂ ಮಲಿನವೂ ಆದ ಹಿಂಸಕನಗರಿಯ ಗತಿಯನ್ನು ಏನು ಹೇಳಲಿ! ಅದು ದೈವೋಕ್ತಿಗೆ ಕಿವಿಗೊಡಲಿಲ್ಲ, ಶಿಕ್ಷಣೆಗೆ ಒಳಪಡಲಿಲ್ಲ, ಯೆಹೋವನಲ್ಲಿ ಭರವಸವಿಡಲಿಲ್ಲ, ತನ್ನ ದೇವರ ಸನ್ನಿಧಿಗೆ ಸಮೀಪಿಸಲಿಲ್ಲ.” ತನ್ನ ಜನರನ್ನು ಶಿಸ್ತುಗೊಳಿಸಲಿಕ್ಕಾಗಿ ಯೆಹೋವನು ಮಾಡಿದ ಪ್ರಯತ್ನಗಳಿಗೆ ಅವರು ಗಮನಕೊಡದೇ ಹೋದದ್ದು ಎಷ್ಟು ವಿಷಾದನೀಯ! ಪ್ರಭುಗಳು, ಕುಲೀನರು ಮತ್ತು ನ್ಯಾಯಾಧಿಪತಿಗಳ ಕಠೋರತೆಯು ಖಂಡಿತವಾಗಿಯೂ ಶೋಚನೀಯವಾಗಿತ್ತು. ಆ ದೇಶದ ಧಾರ್ಮಿಕ ಮುಖಂಡರ ನಾಚಿಕೆಗೆಟ್ಟ ನಡತೆಯನ್ನು ಚೆಫನ್ಯನು ಹೀಯಾಳಿಸಿದನು. ಅವನು ಹೇಳಿದ್ದು: “ಅದರ ಪ್ರವಾದಿಗಳು ಬಡಾಯಿಗಾರರು, ದ್ರೋಹಿಗಳು; ಅದರ ಯಾಜಕರು ಪವಿತ್ರಾಲಯವನ್ನು ಹೊಲೆಗೆಡಿಸಿದ್ದಾರೆ, ಧರ್ಮವಿಧಿಗಳನ್ನು ಭಂಗಮಾಡಿದ್ದಾರೆ.” (ಚೆಫನ್ಯ 3:3, 4) ಈ ಮಾತುಗಳು ಇಂದು ಕ್ರೈಸ್ತಪ್ರಪಂಚದಲ್ಲಿರುವ ಪ್ರವಾದಿಗಳ ಹಾಗೂ ಪಾದ್ರಿಗಳ ಸ್ಥಿತಿಗೆ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತವೆ! ದುರಹಂಕಾರದಿಂದ ಅವರು ತಮ್ಮ ಬೈಬಲ್‌ ಭಾಷಾಂತರಗಳಿಂದ ದೇವರ ಹೆಸರನ್ನೇ ತೆಗೆದುಬಿಟ್ಟಿದ್ದಾರೆ ಮತ್ತು ತಾವು ಯಾರನ್ನು ಆರಾಧಿಸುತ್ತೇವೆ ಎಂದು ಹೇಳಿಕೊಳ್ಳುತ್ತಾರೋ ಆತನನ್ನು ತಪ್ಪಾಗಿ ಪ್ರತಿನಿಧಿಸುವ ಸಿದ್ಧಾಂತಗಳನ್ನು ಕಲಿಸಿದ್ದಾರೆ.

17. ಜನರು ಕಿವಿಗೊಡಲಿ ಕಿವಿಗೊಡದಿರಲಿ, ನಾವು ಸುವಾರ್ತೆಯನ್ನು ಏಕೆ ಪ್ರಕಟಿಸುತ್ತಾ ಇರಬೇಕು?

17 ತಾನು ಕೈಗೊಳ್ಳಲಿದ್ದ ಕ್ರಮದ ಬಗ್ಗೆ ಯೆಹೋವನು ತನ್ನ ಪುರಾತನ ಜನರಿಗೆ ಎಚ್ಚರಿಕೆ ನೀಡಿದ್ದನು. ಜನರು ಪಶ್ಚಾತ್ತಾಪಪಡುವಂತೆ ಪ್ರೇರೇಪಿಸಲಿಕ್ಕಾಗಿ ಆತನು ತನ್ನ ಸೇವಕರಾದ ಚೆಫನ್ಯ ಹಾಗೂ ಯೆರೆಮೀಯರಂತಹ ಪ್ರವಾದಿಗಳನ್ನು ಕಳುಹಿಸಿದನು. ಹೌದು, “ಯೆಹೋವನು . . . ಎಂದಿಗೂ ಅನ್ಯಾಯವನ್ನು ಮಾಡನು; ಬೆಳಬೆಳಿಗ್ಗೆ ತನ್ನ ನ್ಯಾಯವನ್ನು ತಪ್ಪದೆ ಪ್ರಕಾಶಗೊಳಿಸುವನು.” ಇದಕ್ಕೆ ಪ್ರತಿಕ್ರಿಯೆ ಏನು? “ಅನ್ಯಾಯಗಾರನೋ ನಾಚಿಕೆಪಡನು” ಎಂದು ಚೆಫನ್ಯನು ಹೇಳಿದನು. (ಚೆಫನ್ಯ 3:5) ಈಗಲೂ ತದ್ರೀತಿಯ ಎಚ್ಚರಿಕೆಯು ಕೊಡಲ್ಪಡುತ್ತಾ ಇದೆ. ನೀವು ಸುವಾರ್ತೆಯ ಪ್ರಚಾರಕರಾಗಿರುವಲ್ಲಿ, ಈ ಎಚ್ಚರಿಕೆಯ ಕೆಲಸದಲ್ಲಿ ನೀವೂ ಪಾಲ್ಗೊಳ್ಳುತ್ತಿದ್ದೀರಿ. ಆದುದರಿಂದ, ಎಡೆಬಿಡದೆ ಸುವಾರ್ತೆಯನ್ನು ಪ್ರಕಟಿಸುತ್ತಾ ಇರಿ! ಜನರು ನಿಮ್ಮ ಸಂದೇಶಕ್ಕೆ ಕಿವಿಗೊಡಲಿ ಕಿವಿಗೊಡದಿರಲಿ, ನೀವು ಅದನ್ನು ನಂಬಿಗಸ್ತಿಕೆಯಿಂದ ಮಾಡುತ್ತಾ ಇರುವಷ್ಟರ ತನಕ, ದೇವರ ದೃಷ್ಟಿಯಲ್ಲಿ ನಿಮ್ಮ ಸೇವೆಯು ಒಂದು ಯಶಸ್ಸಾಗಿದೆ; ದೇವರ ಕೆಲಸವನ್ನು ಹುರುಪಿನಿಂದ ಮಾಡುತ್ತಿರುವಾಗ ನೀವು ನಾಚಿಕೆಪಡುವ ಆವಶ್ಯಕತೆಯಿಲ್ಲ.

18. ಚೆಫನ್ಯ 3:6 ಹೇಗೆ ನೆರವೇರಿಸಲ್ಪಡುವುದು?

18 ಯೆಹೋವನ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯು ಕೇವಲ ಕ್ರೈಸ್ತಪ್ರಪಂಚದ ವಿನಾಶಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಯೆಹೋವನು ತನ್ನ ಖಂಡನೆಯಲ್ಲಿ ಎಲ್ಲ ಜನಾಂಗಗಳನ್ನು ಒಳಗೂಡಿಸುತ್ತಾನೆ: “ನಾನು ಜನಾಂಗಗಳನ್ನು ಧ್ವಂಸಪಡಿಸಿದ್ದೇನೆ, ಅವುಗಳ ಕೊತ್ತಲಗಳು ಪಾಳುಬಿದ್ದವು, ಅವುಗಳ ಬೀದಿಗಳನ್ನು ಹಾಳುಮಾಡಿದ್ದೇನೆ, ಯಾರೂ ಹಾದುಹೋಗರು; ಅವುಗಳ ಪಟ್ಟಣಗಳು ನಾಶವಾದವು.” (ಚೆಫನ್ಯ 3:6) ಯೆಹೋವನು ನುಡಿಯುವ ಈ ಮಾತುಗಳು ಎಷ್ಟು ವಿಶ್ವಾಸಾರ್ಹವಾಗಿವೆಯೆಂದರೆ, ಆ ನಾಶನವು ಈಗಾಗಲೇ ಸಂಭವಿಸಿರುವ ಹಾಗೆ ಯೆಹೋವನು ಮಾತಾಡುತ್ತಾನೆ. ಫಿಲಿಷ್ಟಿ, ಮೋವಾಬ್‌ ಮತ್ತು ಅಮ್ಮೋನ್‌ಗಳಿಗೆ ಏನು ಸಂಭವಿಸಿತು? ಮತ್ತು ಅಶ್ಶೂರ್ಯದ ರಾಜಧಾನಿಯಾದ ನಿನೆವೆಯ ಕುರಿತಾಗಿ ಏನು? ಅವುಗಳ ನಾಶನವು ಇಂದಿರುವ ಜನಾಂಗಗಳಿಗೆ ಒಂದು ಎಚ್ಚರಿಕೆಯ ಮಾದರಿಯಾಗಿ ಕಾರ್ಯನಡಿಸುತ್ತವೆ. ಅದೇನೆಂದರೆ, ದೇವರಿಗೆ ಅಪಹಾಸ್ಯವನ್ನು ಮಾಡಬಾರದು ಎಂಬುದೇ.

ಯೆಹೋವನನ್ನು ಹುಡುಕುತ್ತಾ ಇರಿ

19. ಆಲೋಚನಾಪ್ರೇರಕವಾದ ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬಹುದು?

19 ಚೆಫನ್ಯನ ದಿನದಲ್ಲಿ, ದುಷ್ಟತನದಿಂದ “ತಮ್ಮ ನಡತೆಯನ್ನೆಲ್ಲಾ ಕೆಡಿಸಿ”ಕೊಂಡವರ ಮೇಲೆ ದೇವರ ಕೋಪವು ಬರಮಾಡಲ್ಪಟ್ಟಿತು. (ಚೆಫನ್ಯ 3:7) ನಮ್ಮ ದಿನದಲ್ಲಿಯೂ ಇದೇ ರೀತಿ ಸಂಭವಿಸುವುದು. ಯೆಹೋವನ ದಿನವು ನಿಕಟವಾಗಿದೆ ಎಂಬುದರ ಪುರಾವೆಯನ್ನು ನೀವು ನೋಡುತ್ತಿದ್ದೀರೋ? ಯೆಹೋವನ ವಾಕ್ಯವನ್ನು ಕ್ರಮವಾಗಿ, ದಿನನಿತ್ಯವೂ ಓದುವುದರ ಮೂಲಕ ನೀವು ‘ಆತನನ್ನು ಹುಡುಕುತ್ತಾ’ ಇದ್ದೀರೊ? ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿ ಶುದ್ಧವಾದ ನೈತಿಕ ಜೀವಿತವನ್ನು ನಡೆಸುವ ಮೂಲಕ ನೀವು ‘ನೀತಿಯನ್ನು ಹುಡುಕು’ತ್ತಿದ್ದೀರೋ? ಮತ್ತು ದೇವರಿಗೆ ಹಾಗೂ ರಕ್ಷಣೆಗಾಗಿ ಆತನು ಮಾಡಿರುವ ಏರ್ಪಾಡುಗಳ ಕಡೆಗೆ ಅಧೀನತೆಯ ಮನೋಭಾವವನ್ನು, ಅಂದರೆ ದೀನಭಾವವನ್ನು ತೋರಿಸುವ ಮೂಲಕ ನೀವು ‘ದೀನಭಾವವನ್ನು ಹುಡುಕುತ್ತಿದ್ದೀರೋ?’

20. ಚೆಫನ್ಯನ ಪ್ರವಾದನೆಯ ಕುರಿತಾದ ಈ ಲೇಖನಮಾಲೆಯ ಕೊನೆಯ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿರುವೆವು?

20 ಯೆಹೋವನನ್ನು, ನೀತಿಯನ್ನು ಮತ್ತು ದೀನಭಾವವನ್ನು ನಾವು ನಂಬಿಗಸ್ತಿಕೆಯಿಂದ ಹುಡುಕುತ್ತಾ ಇರುವಲ್ಲಿ, ನಾವು ಈಗಲೂ, ಹೌದು ನಂಬಿಕೆಯನ್ನು ಪರೀಕ್ಷಿಸುವಂತಹ ಈ “ಕಡೇ ದಿವಸಗಳಲ್ಲಿ”ಯೂ ಅನೇಕ ಸಮೃದ್ಧ ಆಶೀರ್ವಾದಗಳನ್ನು ಅನುಭವಿಸುವ ನಿರೀಕ್ಷೆಯನ್ನಿಡಬಲ್ಲೆವು. (2 ತಿಮೊಥೆಯ 3:​1-5; ಜ್ಞಾನೋಕ್ತಿ 10:22) ಆದರೆ ನಾವು ಹೀಗೆ ಕೇಳಿಕೊಳ್ಳಬಹುದು: ‘ಯೆಹೋವನ ಪ್ರಚಲಿತ ದಿನದ ಸೇವಕರೋಪಾದಿ ನಾವು ಯಾವ ರೀತಿಯಲ್ಲಿ ಆಶೀರ್ವದಿಸಲ್ಪಡುತ್ತಿದ್ದೇವೆ, ಮತ್ತು ವೇಗವಾಗಿ ಧಾವಿಸಿ ಬರುತ್ತಿರುವ ಯೆಹೋವನ ಸಿಟ್ಟಿನ ದಿನದಲ್ಲಿ ಪಾರಾಗಿ ಉಳಿಯುವವರಿಗೆ ಚೆಫನ್ಯನ ಪ್ರವಾದನೆಯು ಯಾವ ಭಾವೀ ಆಶೀರ್ವಾದಗಳನ್ನು ಮುಂತಿಳಿಸುತ್ತದೆ?’

ನೀವು ಹೇಗೆ ಉತ್ತರಿಸುವಿರಿ?

• ಜನರು ಯಾವ ರೀತಿಯಲ್ಲಿ ‘ಯೆಹೋವನನ್ನು ಹುಡುಕುತ್ತಾರೆ?’

• ‘ನೀತಿಯನ್ನು ಹುಡುಕುವುದರಲ್ಲಿ’ ಏನು ಒಳಗೂಡಿದೆ?

• ನಾವು ‘ದೀನಭಾವವನ್ನು’ ಹೇಗೆ ಹುಡುಕಸಾಧ್ಯವಿದೆ?

• ಯೆಹೋವನನ್ನು, ನೀತಿಯನ್ನು ಹಾಗೂ ದೀನಭಾವವನ್ನು ಏಕೆ ಹುಡುಕುತ್ತಾ ಇರಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರ]

ಬೈಬಲ್‌ ಅಭ್ಯಾಸ ಹಾಗೂ ಹುರುಪಿನ ಪ್ರಾರ್ಥನೆಯ ಮೂಲಕ ನೀವು ಯೆಹೋವನನ್ನು ಹುಡುಕುತ್ತಿದ್ದೀರೋ?

[ಪುಟ 21ರಲ್ಲಿರುವ ಚಿತ್ರ]

ಮಹಾ ಸಮೂಹದವರು ಯೆಹೋವನನ್ನು ಹುಡುಕುತ್ತಾ ಮುಂದುವರಿಯುವುದರಿಂದ, ಅವರು ಆತನ ಸಿಟ್ಟಿನ ದಿನದಲ್ಲಿ ಪಾರಾಗಿ ಉಳಿಯುವರು