ಒಂದು ಅಕ್ಷರಮಾಲೆಯನ್ನು ರಚಿಸಿದ ಬೈಬಲ್ ಭಾಷಾಂತರಗಾರರು ಸಿರಿಲ್ ಮತ್ತು ಮೆಥೊಡ್ಯಸ್
ಒಂದು ಅಕ್ಷರಮಾಲೆಯನ್ನು ರಚಿಸಿದ ಬೈಬಲ್ ಭಾಷಾಂತರಗಾರರು ಸಿರಿಲ್ ಮತ್ತು ಮೆಥೊಡ್ಯಸ್
“ನಮ್ಮ ದೇಶದವರು ಕ್ರೈಸ್ತರೋಪಾದಿ ದೀಕ್ಷಾಸ್ನಾನ ಪಡೆದಿದ್ದಾರೆ, ಆದರೂ ನಮ್ಮ ಬಳಿ ಒಬ್ಬ ಶಿಕ್ಷಕನಿಲ್ಲ. ನಮಗೆ ಗ್ರೀಕ್ ಭಾಷೆಯಾಗಲಿ, ಲ್ಯಾಟಿನ್ ಭಾಷೆಯಾಗಲಿ ಅರ್ಥವಾಗುವುದಿಲ್ಲ. ನಮಗೆ ಲಿಖಿತ ಅಕ್ಷರಗಳು ಏನೆಂಬುದು ತಿಳಿದಿಲ್ಲ ಮತ್ತು ಅವುಗಳ ಅರ್ಥವೂ ತಿಳಿದಿಲ್ಲ; ಆದುದರಿಂದ ಶಾಸ್ತ್ರವಚನಗಳ ಮಾತುಗಳನ್ನು ಮತ್ತು ಅವುಗಳ ಅರ್ಥವನ್ನು ತಿಳಿಸಲು ಸಾಧ್ಯವಿರುವ ಶಿಕ್ಷಕರನ್ನು ನಮ್ಮ ಬಳಿ ಕಳುಹಿಸಿರಿ.”—ರಾಸ್ಟೀಸ್ಲಾವ್, ಸಾ.ಶ. 862ರಲ್ಲಿ ಮೊರಾವಿಯದ ರಾಜಕುಮಾರ.
ಇಂದು, ಸ್ಲಾವ್ ಭಾಷಾ ಗುಂಪಿಗೆ ಸೇರಿರುವ ವಿಭಿನ್ನ ಭಾಷೆಗಳನ್ನಾಡುವ 43,50,000ಕ್ಕಿಂತಲೂ ಹೆಚ್ಚು ಜನರು, ತಮ್ಮ ಮಾತೃಭಾಷೆಯಲ್ಲಿ ಬೈಬಲನ್ನು ಓದಸಾಧ್ಯವಿದೆ. * ಇವರಲ್ಲಿ, 36 ಕೋಟಿ ಮಂದಿ, ಸಿರಿಲಿಕ್ ಅಕ್ಷರಮಾಲೆಯನ್ನು ಬಳಸುವವರಾಗಿದ್ದಾರೆ. ಆದರೆ ವಿಷಯವು ಯಾವಾಗಲೂ ಹೀಗಿರಲಿಲ್ಲ. 12 ಶತಮಾನಗಳ ಹಿಂದೆ, ಈ ಸ್ಲಾವ್ ಜನಾಂಗದವರ ಪೂರ್ವಜರ ಉಪಭಾಷೆಗಳ ಒಂದು ಲಿಖಿತರೂಪವೂ ಇರಲಿಲ್ಲ, ಅಕ್ಷರಮಾಲೆಯೂ ಇರಲಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಸಹಾಯಮಾಡಿದವರೇ, ಸಿರಿಲ್ ಮತ್ತು ಮೆಥೊಡ್ಯಸ್ ಎಂಬ ಹುಟ್ಟುಸಹೋದರರು. ಈ ಅಣ್ಣತಮ್ಮಂದಿರ ಧೈರ್ಯಶಾಲಿ ಮತ್ತು ನವೀನ ಪ್ರಯತ್ನಗಳು, ಬೈಬಲಿನ ಸಂರಕ್ಷಣೆ ಮತ್ತು ಪ್ರಚಾರದ ಇತಿಹಾಸದಲ್ಲಿಯೇ ಒಂದು ಆಸಕ್ತಿಹುಟ್ಟಿಸುವ ಅಧ್ಯಾಯವಾಗಿದೆ ಎಂಬುದನ್ನು ದೇವರ ವಾಕ್ಯವನ್ನು ಪ್ರೀತಿಸುವವರು ಕಂಡುಕೊಳ್ಳುವರು. ಅವರು ಯಾರು, ಮತ್ತು ಯಾವ್ಯಾವ ತಡೆಗಳನ್ನು ಎದುರಿಸಿದರು?
“ತತ್ತ್ವಜ್ಞಾನಿ” ಮತ್ತು ರಾಜ್ಯಪಾಲ
ಸಿರಿಲ್ (ಸಾ.ಶ. 827-869, ಮೂಲತಃ ಕಾನ್ಸ್‌ಸ್ಟೆಂಟೈನ್ ಎಂಬ ಹೆಸರಿತ್ತು) ಮತ್ತು ಮೆಥೊಡ್ಯಸ್ (ಸಾ.ಶ. 825-885) ಎಂಬವರು, ಗ್ರೀಸ್‌ನ ಥೆಸಲೊನೀಕದಲ್ಲಿದ್ದ ಒಂದು ಕುಲೀನ ಮನೆತನದಲ್ಲಿ ಹುಟ್ಟಿದರು. ಆ ಕಾಲದಲ್ಲಿ ಥೆಸಲೊನೀಕ ಒಂದು ದ್ವಿಭಾಷಾ ನಗರವಾಗಿತ್ತು. ಅಂದರೆ ಅದರ ನಿವಾಸಿಗಳು ಗ್ರೀಕ್ ಭಾಷೆಯನ್ನೂ, ಒಂದು ರೀತಿಯ ಸ್ಲಾವ್ ಭಾಷೆಯನ್ನೂ ಮಾತಾಡುತ್ತಿದ್ದರು. ಅಲ್ಲಿದ್ದ ಅಸಂಖ್ಯಾತ ಸ್ಲಾವ್ ಜನರು ಹಾಗೂ ಥೆಸಲೊನೀಕದ ಪ್ರಜೆಗಳಾದ ಗ್ರೀಕ್ ಜನರು ಹಾಗೂ ಅದರ ಸುತ್ತಲಿದ್ದ ಸ್ಲಾವ್ ಭಾಷೆಯ ಸಮುದಾಯದ ಮಧ್ಯೆ ನಿಕಟ ಸಂಪರ್ಕವಿತ್ತು. ಇದು ಸಿರಿಲ್ ಮತ್ತು ಮೆಥೊಡ್ಯಸ್‌ರಿಗೆ, ದಕ್ಷಿಣದ ಸ್ಲಾವ್ ಜನರ ಭಾಷೆಯನ್ನು ಚೆನ್ನಾಗಿ ಕಲಿತುಕೊಳ್ಳಲು ಸುವರ್ಣಾವಕಾಶವನ್ನು ಕೊಟ್ಟಿರಬಹುದು. ಅವರ ತಾಯಿ ಸ್ಲಾವ್ ಮೂಲದವರಾಗಿದ್ದರೆಂಬುದನ್ನು ಸಹ ಮೆಥೊಡ್ಯಸ್‌ನ ಜೀವನಚರಿತ್ರೆಗಾರನೊಬ್ಬನು ತಿಳಿಸುತ್ತಾನೆ.
ಅವನ ತಂದೆಯ ಮರಣಾನಂತರ, ಸಿರಿಲ್ ಕಾನ್‌ಸ್ಟಾಂಟಿನೋಪಲ್‌ಗೆ ಸ್ಥಳಾಂತರಿಸಿದನು. ಇದು ಬೈಸೆಂಟೈನ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಲ್ಲಿ ಅವನು ರಾಜೋಚಿತ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗಮಾಡಿದನು ಮತ್ತು ಪ್ರಖ್ಯಾತ ಶಿಕ್ಷಕರೊಂದಿಗೆ ಸಹವಾಸಿಸಿದನು. ಅವನು, ಇಡೀ ಪೂರ್ವದಲ್ಲೇ ಅತೀ ಪ್ರಮುಖ ಚರ್ಚು ಕಟ್ಟಡವಾಗಿರುವ, ಆಈಯಾ ಸೋಫಿಯಾದ ಪುಸ್ತಕ ಭಂಡಾರದ ಅಧಿಕಾರಿಯಾದನು ಮತ್ತು ಮುಂದೆ ತತ್ವಜ್ಞಾನದ ಪ್ರೊಫೆಸರನಾದನು. ತನ್ನ ಶೈಕ್ಷಣಿಕ ಸಾಧನೆಗಳಿಂದಾಗಿಯೇ, ಸಿರಿಲ್‌ಗೆ ತತ್ತ್ವಜ್ಞಾನಿ ಎಂಬ ಅಡ್ಡಹೆಸರನ್ನು ಕೊಡಲಾಯಿತು.
ಆ ವೇಳೆಗೆ, ಮೆಥೊಡ್ಯಸ್, ತನ್ನ ತಂದೆಯ ವೃತ್ತಿಯನ್ನು ಬೆನ್ನಟ್ಟುತ್ತಿದ್ದನು. ಅಂದರೆ ರಾಜಕೀಯ ಆಡಳಿತದಲ್ಲಿ ಸೇರಿದನು. ಎಲ್ಲಿ ಅನೇಕ ಸ್ಲಾವ್ ಜನರು ಜೀವಿಸುತ್ತಾರೊ ಆ ಗಡಿನಾಡು ಪ್ರದೇಶದ ಬೈಸೆಂಟೈನ್ ಜಿಲ್ಲೆಯಲ್ಲಿ ಅವನು ಆರ್ಕನ್ (ರಾಜ್ಯಪಾಲ)ರ ಪದವಿಯನ್ನು ಪಡೆದನು. ಹಾಗಿದ್ದರೂ, ಅವನು ಇದೆಲ್ಲವನ್ನು ಬಿಟ್ಟು
ಏಷಿಯಾದ ಬಿಥಿನ್ಯ ಎಂಬಲ್ಲಿ ಇರುವ ಸಂನ್ಯಾಸಿಮಠಕ್ಕೆ ಸೇರಿಕೊಂಡನು. ಸಿರಿಲ್ ಸಹ ಸಾ.ಶ. 855ರಲ್ಲಿ ಅಲ್ಲಿ ಬಂದು ಅವನೊಂದಿಗೆ ಸೇರಿದನು.ಸಾ.ಶ. 860ರಲ್ಲಿ ಕಾನ್‌ಸ್ಟಾಂಟಿನೋಪಲ್‌ನ ಬಿಷಪರು, ಈ ಅಣ್ಣತಮ್ಮಂದಿರನ್ನು ಧರ್ಮಪ್ರಚಾರಕ್ಕಾಗಿ ವಿದೇಶಕ್ಕೆ ಕಳುಹಿಸಿದರು. ಅವರನ್ನು ಖಾಜಾರ್ ಜನರ ಬಳಿ ಕಳುಹಿಸಲಾಯಿತು. ಇವರು, ಕಪ್ಪು ಸಮುದ್ರದ ನೈರುತ್ಯ ದಿಕ್ಕಿನಲ್ಲಿ ವಾಸಿಸುತ್ತಿದ್ದ ಜನರಾಗಿದ್ದರು ಮತ್ತು ಇಸ್ಲಾಮ್ ಮತ, ಯೆಹೂದಿ ಮತ ಹಾಗೂ ಕ್ರೈಸ್ತ ಮತದಲ್ಲಿ ಯಾವುದನ್ನು ಅನುಸರಿಸುವುದು ಎಂಬುದರ ಕುರಿತು ನಿರ್ಣಯವನ್ನು ಮಾಡುವುದರಲ್ಲಿ ಹಿಂದೆಮುಂದೆ ನೋಡುತ್ತಿದ್ದ ಜನರಾಗಿದ್ದರು. ಅಲ್ಲಿಗೆ ಹೋಗುವ ಮಾರ್ಗದಲ್ಲಿ, ಸಿರಿಲ್ ಸ್ವಲ್ಪ ಸಮಯಕ್ಕೆ ಕ್ರಿಮೀಯದ ಚರ್ಸೋನೀಸ್‌ನಲ್ಲಿ ತಂಗಿದನು. ಅಲ್ಲಿ ಅವನು ಹೀಬ್ರು ಮತ್ತು ಸಮಾರ್ಯರ ಭಾಷೆಯನ್ನು ಕಲಿತು, ಹೀಬ್ರೂ ವ್ಯಾಕರಣ ಪುಸ್ತಕವನ್ನು ಖಾಜಾರ್ ಜನರ ಭಾಷೆಗೆ ತರ್ಜುಮೆಮಾಡಿದನೆಂದು ಕೆಲವು ವಿದ್ವಾಂಸರ ನಂಬಿಕೆಯಾಗಿದೆ.
ಮೊರಾವಿಯದಿಂದ ಕರೆ
ಸಾ.ಶ. 862ರಲ್ಲಿ, ಮೊರಾವಿಯದ (ಆಧುನಿಕ ದಿನದಲ್ಲಿ, ಪೂರ್ವ ಚೆಕ್ಯಾ, ಪಾಶ್ಚಾತ್ಯ ಸ್ಲೊವಾಕಿಯ ಮತ್ತು ಪಾಶ್ಚಾತ್ಯ ಹಂಗರಿ) ರಾಜಕುಮಾರನಾದ ರೊಸ್ಟಿಸ್ಲಾವ್, ಬೈಸೆಂಟೈನ್ ಸಾಮ್ರಾಟನಾದ IIIನೆಯ ಮೈಕಲ್‌ಗೆ ಒಂದು ವಿನಂತಿಯನ್ನು ಮಾಡಿದನು. ಅದನ್ನೇ ಈ ಲೇಖನದ ಆರಂಭದ ಪ್ಯಾರಗ್ರಾಫ್‌ನಲ್ಲಿ ಕೊಡಲಾಗಿದೆ. ಶಾಸ್ತ್ರವಚನಗಳ ಶಿಕ್ಷಕರನ್ನು ಕಳುಹಿಸುವಂತೆ ಅವನು ಕೇಳಿಕೊಂಡನು. ಮೊರಾವಿಯದಲ್ಲಿ ಸ್ಲಾವ್ ಭಾಷೆಯನ್ನಾಡುತ್ತಿದ್ದ ಪ್ರಜೆಗಳಿಗೆ, ಪೂರ್ವ ಫ್ರ್ಯಾಂಕ್ ರಾಜ್ಯದಿಂದ (ಈಗ ಜರ್ಮನಿ ಮತ್ತು ಆಸ್ಟ್ರಿಯಾ) ಬಂದಿದ್ದ ಮಿಷನೆರಿಗಳು ಈಗಾಗಲೇ ಚರ್ಚಿನ ಬೋಧನೆಗಳನ್ನು ಪರಿಚಯಿಸಿದ್ದರು. ಆದರೆ ರೊಸ್ಟಿಸ್ಲಾವ್, ಜರ್ಮನಿಯ ಕುಲಗಳು ಬೀರುವ ರಾಜಕೀಯ ಮತ್ತು ಧಾರ್ಮಿಕ ಪ್ರಭಾವದ ಕುರಿತಾಗಿ ಚಿಂತಿತನಾಗಿದ್ದನು. ಕಾನ್ಸ್‌ಟಾಂಟಿನೋಪಲ್‌ನೊಂದಿಗೆ ತಾನು ಧಾರ್ಮಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದಾದರೆ, ತನ್ನ ರಾಷ್ಟ್ರವು ರಾಜಕೀಯವಾಗಿಯೂ ಧಾರ್ಮಿಕವಾಗಿಯೂ ಸ್ವತಂತ್ರವಾಗಿರುವುದೆಂದು ಅವನ ಎಣಿಕೆಯಾಗಿತ್ತು.
ಹೀಗಿರುವುದರಿಂದ ಸಾಮ್ರಾಟನು, ಮೆಥೊಡ್ಯಸ್ ಮತ್ತು ಸಿರಿಲ್‌ನನ್ನು ಮೊರಾವಿಯಕ್ಕೆ ಕಳುಹಿಸುವ ನಿರ್ಧಾರಮಾಡಿದನು. ಈ ಧರ್ಮಪ್ರಚಾರ ಕೆಲಸದ ಮುಂದಾಳತ್ವವನ್ನು ವಹಿಸಲಿಕ್ಕಾಗಿ ಈ ಅಣ್ಣತಮ್ಮಂದಿರು ಸುಸಜ್ಜಿತರಾಗಿದ್ದರು ಯಾಕೆಂದರೆ ಅವರು ಉಚ್ಚ ಶಿಕ್ಷಣವುಳ್ಳವರಾಗಿದ್ದರು, ಶಿಕ್ಷಕರ ಅರ್ಹತೆಯುಳ್ಳವರಾಗಿದ್ದರು ಮತ್ತು ಭಾಷೆಗಳ ಕುರಿತಾಗಿ ಒಳ್ಳೆಯ ಜ್ಞಾನವುಳ್ಳವರಾಗಿದ್ದರು. ಒಂಬತ್ತನೆಯ ಶತಮಾನದ ಒಬ್ಬ ಜೀವನಚರಿತ್ರೆಗಾರನು ಹೇಳುವುದೇನೆಂದರೆ, ಅವರನ್ನು ಮೊರಾವಿಯಕ್ಕೆ ಹೋಗಲು ಉತ್ತೇಜಿಸುತ್ತಿದ್ದಾಗ ಸಾಮ್ರಾಟನು ಹೀಗೆ ತರ್ಕಮಾಡಿದನು: “ನೀವಿಬ್ಬರೂ ಥೆಸಲೊನೀಕದ ನಿವಾಸಿಗಳಾಗಿದ್ದೀರಿ, ಮತ್ತು ಥೆಸಲೊನೀಕದ ಎಲ್ಲ ನಿವಾಸಿಗಳು ಶುದ್ಧ ಸ್ಲಾವ್ ಭಾಷೆಯನ್ನಾಡುತ್ತಾರೆ.”
ಅಕ್ಷರಮಾಲೆ ಮತ್ತು ಬೈಬಲ್ ಭಾಷಾಂತರದ ಜನನ
ಮೊರಾವಿಯಕ್ಕೆ ಹೊರಡುವ ಮುಂಚಿನ ತಿಂಗಳುಗಳಲ್ಲಿ, ಸ್ಲಾವ್ ಜನರಿಗಾಗಿ ಒಂದು ಲಿಪಿಯನ್ನು ತಯಾರಿಸುವ ಮೂಲಕ ಸಿರಿಲ್ ತನ್ನ ಕೆಲಸಕ್ಕಾಗಿ ತಯಾರಿ ಮಾಡಿದನು. ಭಾಷೆಯ ಧ್ವನಿಮಾಲೆಯ ಕುರಿತು ಅವನಿಗೆ ತುಂಬ ಅಭಿರುಚಿಯಿತ್ತೆಂದು ಹೇಳಲಾಗುತ್ತದೆ. ಹೀಗಿರುವುದರಿಂದ ಅವನು ಗ್ರೀಕ್ ಮತ್ತು ಹೀಬ್ರೂ ಅಕ್ಷರಗಳನ್ನು ಉಪಯೋಗಿಸುತ್ತಾ, ಸ್ಲವಾನಿಕ್ ಭಾಷೆಯಲ್ಲಿನ ಪ್ರತಿಯೊಂದು ಧ್ವನಿಗೆ ಒಂದು ಅಕ್ಷರವನ್ನು ಕೊಡಲು ಪ್ರಯತ್ನಿಸಿದನು. * ಅಂಥ ಅಕ್ಷರಮಾಲೆಗಾಗಿ ತಳಪಾಯವನ್ನು ಹಾಕುವುದರಲ್ಲಿ ಅವನು ಈಗಾಗಲೇ ಎಷ್ಟೋ ವರ್ಷಗಳನ್ನು ಕಳೆದಿದ್ದನೆಂದು ಕೆಲವು ಸಂಶೋಧಕರು ನಂಬುತ್ತಾರೆ. ಅಲ್ಲದೆ, ಸಿರಿಲ್ ರಚಿಸಿದ ಅಕ್ಷರಮಾಲೆಯ ಸರಿಯಾದ ಆಕಾರದ ಕುರಿತಾಗಿ ಈಗಲೂ ಅನಿಶ್ಚಯತೆಯಿದೆ.—“ಸಿರಿಲಿಕ್ ಅಥವಾ ಗ್ಲಾಗೊಲಿಟಿಕ್—ಯಾವುದು?” ಎಂಬ ರೇಖಾಚೌಕವನ್ನು ನೋಡಿರಿ.
ಆ ಸಮಯದಲ್ಲೇ, ಸಿರಿಲ್ ಬೈಬಲನ್ನು ಕ್ಷಿಪ್ರವಾಗಿ ಭಾಷಾಂತರಿಸುವ ಒಂದು ಕಾರ್ಯಕ್ರಮವನ್ನು ಆರಂಭಿಸಿದನು. “ಆದಿಯಲ್ಲಿ ವಾಕ್ಯವಿತ್ತು . . . ” ಎಂಬ ಯೋಹಾನನ ಸುವಾರ್ತೆಯ ಮೊತ್ತಮೊದಲ ವಾಕ್ಸರಣಿಯನ್ನು ಗ್ರೀಕ್ ಭಾಷೆಯಿಂದ ಸ್ಲವಾನಿಕ್ ಭಾಷೆಗೆ ತರ್ಜುಮೆಮಾಡುವ ಮೂಲಕ ಅವನು ಭಾಷಾಂತರಮಾಡುವುದನ್ನು ಆರಂಭಿಸಿದನೆಂದು ಹೇಳಲಾಗುತ್ತದೆ. ಇದಕ್ಕೆ, ಅವನು ಹೊಸದಾಗಿ ರಚಿಸಿದಂತಹ ಅಕ್ಷರಮಾಲೆಯನ್ನು ಉಪಯೋಗಿಸಿದನು. ಸಿರಿಲ್ ನಾಲ್ಕು ಸುವಾರ್ತಾ ಪುಸ್ತಕಗಳನ್ನು, ಪೌಲನ ಪತ್ರಗಳನ್ನು ಮತ್ತು ಕೀರ್ತನೆಗಳ ಪುಸ್ತಕವನ್ನು ತರ್ಜುಮೆಮಾಡಿದನು.
ಅವನು ಒಬ್ಬನೇ ಈ ಎಲ್ಲ ಕೆಲಸವನ್ನು ಮಾಡಿದನೊ? ಇಲ್ಲ, ಬಹುಶಃ ಅವನ ತಮ್ಮ ಮೆಥೊಡ್ಯಸ್ ಅವನಿಗೆ ಸಹಾಯಮಾಡಿದ್ದಿರಬಹುದು. ಅಷ್ಟುಮಾತ್ರವಲ್ಲದೆ, ದ ಕೇಂಬ್ರಿಡ್ಜ್ ಮೀಡಿವ್ಯಲ್ ಹಿಸ್ಟರಿ ಎಂಬ ಪುಸ್ತಕವು ಹೇಳುವುದು: “ಇತರರು [ಸಿರಿಲ್‌ಗೆ] ಸಹಾಯಮಾಡಿದ್ದಿರಬಹುದು. ಅವರಲ್ಲಿ ಪ್ರಥಮವಾಗಿ, ಗ್ರೀಕ್ ಶಿಕ್ಷಣವಿದ್ದ ಸ್ಲಾವ್ ಜನಾಂಗದಿಂದ ಹುಟ್ಟಿದ ಜನರು ಇದ್ದಿರಬಹುದು. ನಾವು ತೀರ ಹಳೆಯ ಭಾಷಾಂತರಗಳನ್ನು ಪರೀಕ್ಷಿಸುವಾಗ, . . . ಅತಿ ಶ್ರೇಷ್ಠ ಗುಣಮಟ್ಟದ ಸ್ಲವಾನಿಕ್ ಭಾಷೆಯ ಅತ್ಯುತ್ತಮ ಪುರಾವೆಯು ಸಿಗುತ್ತದೆ. ಮತ್ತು ಇದಕ್ಕೆ ಕಾರಣರು, ಸ್ವತಃ ಸ್ಲಾವ್ ಜನಾಂಗದವರಾಗಿದ್ದ ಸಹಕರ್ಮಿಗಳಾಗಿರಬೇಕು.” ಬೈಬಲಿನ ಉಳಿದ ಭಾಗವನ್ನು ಆನಂತರ ಮೆಥೊಡ್ಯಸ್ ಪೂರ್ಣಗೊಳಿಸಿದನು. ಇದನ್ನು ಮುಂದೆ ನೋಡಲಿದ್ದೇವೆ.
‘ಡೇಗೆ ಪಕ್ಷಿಯ ಮೇಲೆರಗಿದ ರೂಕ್ ಪಕ್ಷಿಗಳಂತೆ’
ಸಾ.ಶ. 863ರಲ್ಲಿ ಸಿರಿಲ್ ಮತ್ತು ಮೆಥೊಡ್ಯಸ್ ಮೊರಾವಿಯದಲ್ಲಿ ತಮ್ಮ ಕೆಲಸವನ್ನು ಆರಂಭಿಸಿದರು. ಅವರನ್ನು ಅಲ್ಲಿ ಆದರದಿಂದ ಸ್ವಾಗತಿಸಲಾಯಿತು. ಅವರಿಗೆ ಅಲ್ಲಿ ತುಂಬ ಕೆಲಸವಿತ್ತು. ಅವರು ಸ್ಥಳಿಕ ಜನರಿಗೆ, ಹೊಸದಾಗಿ ಸೃಷ್ಟಿಸಲಾಗಿದ್ದ ಸ್ಲವಾನಿಕ್ ಲಿಪಿಯನ್ನು ಕಲಿಸಬೇಕಿತ್ತು ಮಾತ್ರವಲ್ಲ, ಬೈಬಲ್ ಸಂಬಂಧಿತ ಹಾಗೂ ಪ್ರಾರ್ಥನಾ ಪುಸ್ತಕಗಳನ್ನೂ ಭಾಷಾಂತರಿಸಬೇಕಾಗಿತ್ತು.
ಆದರೆ ಇದೆಲ್ಲವೂ ಸುಲಭವಾಗಿ ನಡೆಯಲಿಲ್ಲ. ಮೊರಾವಿಯದಲ್ಲಿನ ಫ್ರ್ಯಾಂಕ್ ಪಾದ್ರಿಗಳು, ಸ್ಲವಾನಿಕ್ ಲಿಪಿಯ ಬಳಕೆಯನ್ನು ತೀಕ್ಷ್ಣವಾಗಿ ವಿರೋಧಿಸಿದರು. ಕೇವಲ ಲ್ಯಾಟಿನ್, ಗ್ರೀಕ್ ಮತ್ತು ಹೀಬ್ರೂ ಭಾಷೆಗಳನ್ನು ಆರಾಧನೆಯಲ್ಲಿ ಉಪಯೋಗಿಸಬಹುದೆಂಬ ತ್ರಿಭಾಷಾ ವಾದಕ್ಕೆ ಅವರು ಅಂಟಿಕೊಂಡಿದ್ದರು. ಆದುದರಿಂದ, ಈ ಅಣ್ಣತಮ್ಮಂದಿರು ತಾವು ಹೊಸದಾಗಿ ಸೃಷ್ಟಿಸಿರುವ ಲಿಖಿತ ಭಾಷೆಗಾಗಿ ಪೋಪ್‌ನಿಂದ ಬೆಂಬಲವನ್ನು ಪಡೆಯುವ ನಿರೀಕ್ಷೆಯಿಂದ ಸಾ.ಶ. 867ರಲ್ಲಿ ರೋಮ್‌ಗೆ ಪ್ರಯಾಣಬೆಳಸಿದರು.
ಆದರೆ ಮಾರ್ಗದಲ್ಲಿ ವೆನಿಸ್‌ನಲ್ಲಿ, ಸಿರಿಲ್ ಮತ್ತು ಮೆಥೊಡ್ಯಸ್, ತ್ರಿಭಾಷಾ ವಾದದ ಲ್ಯಾಟಿನ್ ಪಾದ್ರಿಗಳ ಇನ್ನೊಂದು ಗುಂಪನ್ನು ಎದುರಿಸಬೇಕಾಯಿತು. ಅಲ್ಲಿನ ಬಿಷಪರು, ಪಾದ್ರಿಗಳು ಮತ್ತು ಸಂನ್ಯಾಸಿಗಳು ಸಿರಿಲ್ ಮೇಲೆ ‘ಡೇಗೆ ಪಕ್ಷಿಯ ಮೇಲೆರಗುವ ರೂಕ್ ಪಕ್ಷಿಗಳಂತೆ’ ಆಕ್ರಮಿಸಿದರೆಂದು ಮದ್ಯಯುಗಗಳ ಒಬ್ಬ ಜೀವನಚರಿತ್ರೆಗಾರನು ಹೇಳುತ್ತಾನೆ. ಅವನ ವೃತ್ತಾಂತಕ್ಕನುಸಾರ, ಸಿರಿಲ್ 1 ಕೊರಿಂಥ 14:8, 9ನ್ನು ಉಲ್ಲೇಖಿಸುವ ಮೂಲಕ ಅವರಿಗೆ ಪ್ರತ್ಯುತ್ತರವನ್ನು ಕೊಟ್ಟನು: “ತುತೂರಿಯು ಗೊತ್ತಿಲ್ಲದ ಶಬ್ದವನ್ನು ಕೊಟ್ಟರೆ ಯಾರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವರು? ಹಾಗೆಯೇ ನೀವೂ ತಿಳಿಯಬಹುದಾದ ಭಾಷೆಯನ್ನೂ ಬಾಯಿಂದ ಆಡದೆಹೋದರೆ ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿಯುವದು? ನೀವು ಗಾಳಿಯ ಸಂಗಡ ಮಾತಾಡಿದ ಹಾಗಿರುವದಷ್ಟೆ.”
ಈ ಸಹೋದರರು ಕೊನೆಗೆ ರೋಮ್ ತಲಪಿದಾಗ, ಪೋಪ್ ಆ್ಯಡ್ರಿಯನ್ II, ಸ್ಲವಾನಿಕ್ ಲಿಪಿಯನ್ನು ಉಪಯೋಗಿಸಲು ತಮ್ಮ ಪೂರ್ಣ ಸಮ್ಮತಿಯನ್ನು ಕೊಟ್ಟರು. ಕೆಲವು ತಿಂಗಳುಗಳ ನಂತರ, ಸಿರಿಲ್ ರೋಮ್‌ನಲ್ಲೇ ತುಂಬ ಅಸ್ವಸ್ಥನಾದನು. ಎರಡು ತಿಂಗಳುಗಳಿಗಿಂತಲೂ ಮುಂಚೆಯೇ ಅವನು 42ರ ವಯಸ್ಸಿನಲ್ಲಿ ಮೃತನಾದನು.
ಮೆಥೊಡ್ಯಸ್ ಹಿಂದಿರುಗಿ ಹೋಗಿ ಮೊರಾವಿಯ ಮತ್ತು ಈಗ ಸ್ಲೊವಾಕಿಯ ಆಗಿರುವ ನಿಟ್ರಾ ಪಟ್ಟಣದಲ್ಲೆಲ್ಲ ಕೆಲಸವನ್ನು ಪುನಃ ಶುರುಮಾಡಲು ಪೋಪ್ ಆಡ್ರಿಯನ್ II ಉತ್ತೇಜಿಸಿದನು. ಪೋಪ್ ಆ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಆಸೆಯಿಂದ, ಸ್ಲವಾನಿಕ್ ಲಿಪಿಯ ಬಳಕೆಯನ್ನು ಸಮ್ಮತಿಸುವ ಮತ್ತು ಅವನನ್ನು ಆರ್ಚ್‌ಬಿಷಪನನ್ನಾಗಿ ನೇಮಿಸುವ ಪತ್ರಗಳನ್ನು ಮೆಥೊಡ್ಯಸ್‌ನಿಗೆ ಕೊಟ್ಟನು. ಆದರೆ, ಸಾ.ಶ. 870ರಲ್ಲಿ ಫ್ರ್ಯಾಂಕರ ಬಿಷಪರಾದ ಹರ್ಮನ್‌ರಿಕ್ ಎಂಬುವನು, ನಿಟ್ರಾದ ರಾಜಕುಮಾರ ಸ್ವೇಟೊಪ್ಲಕ್‌ನ ಸಹಾಯದೊಂದಿಗೆ ಮೆಥೊಡ್ಯಸನ ದಸ್ತಗಿರಿಮಾಡಿದನು. ಅವನನ್ನು, ನೈರುತ್ಯ ಜರ್ಮನಿಯಲ್ಲಿನ ಒಂದು ಸಂನ್ಯಾಸಿಮಠದಲ್ಲಿ ಎರಡೂವರೆ ವರ್ಷಗಳ ವರೆಗೆ ಸೆರೆಯಲ್ಲಿಡಲಾಯಿತು. ಕೊನೆಯಲ್ಲಿ ಆಡ್ರಿಯನ್ IIರ ಉತ್ತರಾಧಿಕಾರಿಯಾದ ಪೋಪ್ ಜಾನ್ VIII ಮೆಥೊಡ್ಯಸನನ್ನು ಬಿಡುಗಡೆಮಾಡುವ ಅಪ್ಪಣೆಯನ್ನು ಕೊಟ್ಟನು. ಅವನು ಮೆಥೊಡ್ಯಸನನ್ನು ತನ್ನ ಆಡಳಿತ ಪ್ರಾಂತದಲ್ಲಿ ಪುನಸ್ಸ್ಥಾಪಿಸಿದನು ಮತ್ತು ಆರಾಧನೆಯಲ್ಲಿ ಸ್ಲವಾನಿಕ್ ಭಾಷೆಯ ಬಳಕೆಗಾಗಿ ಪೋಪನ ಬೆಂಬಲವನ್ನು ಪುನರ್ದೃಢೀಕರಿಸಿದನು.
ಆದರೆ ಫ್ರ್ಯಾಂಕರ ಪಾದ್ರಿಗಳಿಂದ ವಿರೋಧವು ಮುಂದುವರಿಯಿತು. ತನ್ನ ಮೇಲೆ ಹಾಕಲಾದ ಪಾಷಂಡವಾದದ ಆರೋಪಗಳ ವಿರುದ್ಧ ವಾದಿಸುವುದರಲ್ಲಿ ಮೆಥೊಡ್ಯಸ್ ಸಫಲನಾದನು. ಕೊನೆಯಲ್ಲಿ ಮೆಥೊಡ್ಯಸನಿಗೆ, ಚರ್ಚಿನಲ್ಲಿ ಸ್ಲವಾನಿಕ್ ಭಾಷೆಯ ಉಪಯೋಗವನ್ನು ಬಹಿರಂಗವಾಗಿ ಅಧೀಕೃತಗೊಳಿಸಿದ ಒಂದು ಶಾಸನಪತ್ರವು ಲಭಿಸಿತು. ಸದ್ಯದ ಪೋಪ್, ಜಾನ್ ಪಾಲ್ II ಒಪ್ಪಿಕೊಂಡಿರುವಂತೆ, ಮೆಥೊಡ್ಯಸನ ಜೀವನವು “ಪ್ರಯಾಣಗಳಲ್ಲಿ, ಅಭಾವಗಳಲ್ಲಿ, ಕಷ್ಟಾನುಭವಗಳಲ್ಲಿ, ವೈರತ್ವ ಮತ್ತು ಹಿಂಸೆಯಲ್ಲಿ . . . ಮಾತ್ರವಲ್ಲ ಕ್ರೂರವಾದ ಸೆರೆವಾಸದಲ್ಲೂ” ಕಳೆಯಿತು. ಹಾಸ್ಯಾಸ್ಪದ ಸಂಗತಿಯೇನೆಂದರೆ, ಅವನನ್ನು ಇದೆಲ್ಲಕ್ಕೆ ಗುರಿಪಡಿಸಿದವರು ರೋಮ್‌ನ ಕುರಿತಾಗಿ ಅನುಕೂಲ ಪ್ರವೃತ್ತಿಯಿದ್ದ ಬಿಷಪರು ಮತ್ತು ರಾಜಕುಮಾರರಾಗಿದ್ದರು.
ಇಡೀ ಬೈಬಲಿನ ಭಾಷಾಂತರವು ಪೂರ್ಣಗೊಳ್ಳುತ್ತದೆ
ಈ ಅವಿರತ ವಿರೋಧದ ಎದುರಿನಲ್ಲೂ, ಮೆಥೊಡ್ಯಸನು ಅನೇಕ ಮಂದಿ ಲಘುಲಿಪಿಗಾರರ ಸಹಾಯದೊಂದಿಗೆ, ಬೈಬಲಿನ ಉಳಿದ ಭಾಗವನ್ನು ಸ್ಲವಾನಿಕ್ ಭಾಷೆಗೆ ಭಾಷಾಂತರಿಸಿದನು. ಈ ಬೃಹತ್ತಾದ ಕೆಲಸವನ್ನು ಅವನು ಕೇವಲ ಎಂಟೇ ತಿಂಗಳುಗಳಲ್ಲಿ ಮುಗಿಸಿದನೆಂದು ಹೇಳಲಾಗುತ್ತದೆ. ಆದರೆ ಅವನು ಸಂದಿಗ್ಧಮೂಲದ ಮಕಬೀಯರ ಪುಸ್ತಕಗಳನ್ನು ಭಾಷಾಂತರಿಸಲಿಲ್ಲ.
ಸಿರಿಲ್ ಮತ್ತು ಮೆಥೊಡ್ಯಸರು ಮಾಡಿದಂಥ ಭಾಷಾಂತರದ ಗುಣಮಟ್ಟವನ್ನು ಇಂದು ಸರಿಯಾಗಿ ಅಳೆಯುವುದು ಅಷ್ಟು ಸುಲಭವಲ್ಲ. ಯಾಕೆಂದರೆ, ಮೊದಲನೆಯ ಭಾಷಾಂತರವು ಮಾಡಲ್ಪಟ್ಟ ಸಮಯಕ್ಕೆ ಹತ್ತಿರದಲ್ಲಿರುವ ಕೆಲವೇ ಹಸ್ತಪ್ರತಿಗಳು ಅಸ್ತಿತ್ವದಲ್ಲಿವೆ. ಆ ವಿರಳವಾದ ಆರಂಭದ ಹಸ್ತಪ್ರತಿಗಳನ್ನು ಪರಿಶೀಲಿಸುವ ಮೂಲಕ, ಆ ಭಾಷಾಂತರವು ನಿಕರವಾದದ್ದೂ, ಸ್ವಭಾವಿಕವಾದ ಶೈಲಿಯದ್ದೂ ಆಗಿತ್ತೆಂದು ಭಾಷಾಪಂಡಿತರು ಗಮನಿಸುತ್ತಾರೆ. ಆ ಇಬ್ಬರು ಸಹೋದರರು “ಅನೇಕ ಹೊಸ ಪದಗಳನ್ನು ಮತ್ತು ವಾಕ್ಸರಣಿಗಳನ್ನು ರಚಿಸಬೇಕಾಯಿತು . . . ಮತ್ತು ಇದೆಲ್ಲವನ್ನೂ ಅವರು ಬೆರಗುಗೊಳಿಸುವಷ್ಟು ನಿಷ್ಕೃಷ್ಟತೆಯೊಂದಿಗೆ ಮಾಡಿ, ಸ್ಲಾವರ ಭಾಷೆಗೆ ಹಿಂದೆಂದೂ ಇರದಷ್ಟು ಉಚ್ಚವಾದ ಶಬ್ದಭಂಡಾರವನ್ನು ಕೊಟ್ಟರು” ಎಂದು ಅವರ್ ಸ್ಲವಿಕ್ ಬೈಬಲ್ ಎಂಬ ಕೃತಿಯು ಹೇಳುತ್ತದೆ.
ಬಾಳುವಂಥ ಸ್ವತ್ತು
ಸಾ.ಶ. 885ರಲ್ಲಿ ಮೆಥೊಡ್ಯಸ್ ಮರಣಪಟ್ಟ ಬಳಿಕ, ಅವನ ಶಿಷ್ಯರನ್ನು ಫ್ಯಾಂಕ್ ವಿರೋಧಿಗಳು ಮೊರಾವಿಯದಿಂದ ಹೊರಗಟ್ಟಿದರು. ಈ ಶಿಷ್ಯರು ಬೊಹೀಮೀಯಾ, ದಕ್ಷಿಣ ಪೋಲೆಂಡ್ ಮತ್ತು ಬಲ್ಗೇರಿಯದಲ್ಲಿ ಆಶ್ರಯವನ್ನು ಪಡೆದರು. ಈ ರೀತಿಯಲ್ಲಿ ಸಿರಿಲ್ ಮತ್ತು ಮೆಥೊಡ್ಯಸರ ಕೆಲಸವು ಮುಂದುವರಿಸಲ್ಪಟ್ಟಿತು ಮತ್ತು ಹಬ್ಬಿತು ಸಹ. ಈ ಅಣ್ಣತಮ್ಮಂದಿರು, ಯಾವುದಕ್ಕೆ ಲಿಖಿತವಾದ ಮತ್ತು ಶಾಶ್ವತವಾದ ಆಕಾರವನ್ನು ಕೊಟ್ಟ ಸ್ಲವಾನಿಕ್ ಭಾಷೆಯು, ಏಳಿಗೆಹೊಂದಿ, ವಿಕಸನಗೊಂಡು, ಕಾಲಾನಂತರ ಬಹು ರೂಪಗಳನ್ನು ತಾಳಿತು. ಇಂದು, ಸ್ಲಾವ್ ಭಾಷಾ ಗುಂಪಿನಲ್ಲಿ 13 ಭಿನ್ನ ಭಾಷೆಗಳು ಮತ್ತು ಅನೇಕ ಉಪಭಾಷೆಗಳಿವೆ.
ಅಷ್ಟುಮಾತ್ರವಲ್ಲದೆ, ಸಿರಿಲ್ ಮತ್ತು ಮೆಥೊಡ್ಯಸರು ಬೈಬಲನ್ನು ಭಾಷಾಂತರಿಸಲು ಮಾಡಿದ ಧೀರ ಪ್ರಯತ್ನಗಳು, ಇಂದು ಲಭ್ಯವಿರುವ ಭಿನ್ನ ಭಿನ್ನ ಸ್ಲಾವ್ ಭಾಷಾಂತರಗಳ ಫಲವನ್ನು ಉತ್ಪಾದಿಸಿವೆ. ಈ ಭಾಷೆಯನ್ನು ಓದುವ ಕೋಟಿಗಟ್ಟಲೆ ಜನರು ದೇವರ ವಾಕ್ಯವನ್ನು ತಮ್ಮ ಮಾತೃಭಾಷೆಯಲ್ಲಿ ಪಡೆಯಲು ಶಕ್ತರಾಗಿದ್ದಾರೆ. ತೀಕ್ಷ್ಣ ವಿರೋಧದ ಎದುರಿನಲ್ಲಿ, ಈ ಮಾತುಗಳು ಎಷ್ಟು ಸತ್ಯವಾಗಿವೆ: “ನಮ್ಮ ದೇವರ ಮಾತೋ ಸದಾಕಾಲವೂ ಇರುವದು.”—ಯೆಶಾಯ 40:8.
[ಪಾದಟಿಪ್ಪಣಿಗಳು]
^ ಪ್ಯಾರ. 3 ಸ್ಲಾವ್ ಭಾಷೆಗಳನ್ನು ಪೂರ್ವ ಮತ್ತು ಮಧ್ಯ ಯೂರೋಪ್‌ನಲ್ಲಿ ಉಪಯೋಗಿಸಲಾಗುತ್ತದೆ ಮತ್ತು ಅದರಲ್ಲಿ ರಷ್ಯನ್, ಯೂಕ್ರೇನ್ಯನ್, ಸರ್ಬಿಯನ್, ಪೋಲಿಷ್, ಚೆಕ್, ಬಲ್ಗೇರಿಯನ್ ಹಾಗೂ ತದ್ರೀತಿಯ ಭಾಷೆಗಳು ಸೇರಿವೆ.
^ ಪ್ಯಾರ. 13 ಈ ಲೇಖನದಲ್ಲಿ ಉಪಯೋಗಿಸಲ್ಪಟ್ಟಿರುವ “ಸ್ಲವಾನಿಕ್” ಎಂಬ ಪದವು, ಸಿರಿಲ್ ಮತ್ತು ಮೆಥೊಡ್ಯಸ್ ತಮ್ಮ ಧರ್ಮಪ್ರಚಾರ ಮತ್ತು ಸಾಹಿತ್ಯಿಕ ಕೆಲಸಕ್ಕಾಗಿ ಬಳಸಿದ ಸ್ಲಾವ್ ಉಪಭಾಷೆಯಾಗಿತ್ತು. ಇಂದು ಕೆಲವರು “ಹಳೆಯ ಸ್ಲವಾನಿಕ್” ಅಥವಾ “ಹಳೆಯ ಚರ್ಚು ಸ್ಲವಾನಿಕ್” ಎಂಬ ಪದಗಳನ್ನು ಉಪಯೋಗಿಸುತ್ತಾರೆ. ಸಾ.ಶ. ಒಂಬತ್ತನೆಯ ಶತಮಾನದಲ್ಲಿ, ಸ್ಲಾವ್ ಜನರು ಯಾವುದೇ ಒಂದು ಸಾಮಾನ್ಯ ಭಾಷೆಯನ್ನು ಮಾತಾಡುತ್ತಿರಲಿಲ್ಲವೆಂದು ಭಾಷಾಪಂಡಿತರು ಒಪ್ಪಿಕೊಳ್ಳುತ್ತಾರೆ.
[ಪುಟ 29ರಲ್ಲಿರುವ ಚೌಕ]
ಸಿರಿಲಿಕ್ ಭಾಷೆಯೊ, ಗ್ಲಾಗೊಲಿಟಿಕ್ ಭಾಷೆಯೊ?
ಸಿರಿಲ್ ಸೃಷ್ಟಿಸಿದಂಥ ಅಕ್ಷರಮಾಲೆಯ ರಚನೆಯು ತುಂಬ ವಾಗ್ವಾದವನ್ನುಂಟುಮಾಡಿದೆ. ಯಾಕೆಂದರೆ ಅದು ಯಾವ ಅಕ್ಷರಮಾಲೆಯಾಗಿತ್ತು ಎಂಬುದರ ಬಗ್ಗೆ ಭಾಷಾಪಂಡಿತರಿಗೆ ಅನಿಶ್ಚಯತೆ ಇದೆ. ಸಿರಿಲಿಕ್ ಎಂದು ಕರೆಯಲ್ಪಡುವ ಅಕ್ಷರಮಾಲೆಯು, ಗ್ರೀಕ್ ಅಕ್ಷರಮಾಲೆಯ ಮೇಲೆ ಬಹಳಷ್ಟು ಆಧಾರಿಸಿದೆ. ಮತ್ತು ಅವುಗಳಲ್ಲಿ ಹನ್ನೆರಡೊ, ಅದಕ್ಕಿಂತಲೂ ಹೆಚ್ಚು ಅಕ್ಷರಗಳಿದ್ದು, ಅವು ಗ್ರೀಕ್ ಭಾಷೆಯಲ್ಲಿ ಇಲ್ಲದಿರುವಂಥ ಸ್ಲವಾನಿಕ್ ಧ್ವನಿಗಳನ್ನು ಪ್ರತಿನಿಧಿಸಲಿಕ್ಕಾಗಿ ರಚಿಸಲ್ಪಟ್ಟವು. ಆದರೆ ಅತ್ಯಾರಂಭದ ಕೆಲವೊಂದು ಸ್ಲವಾನಿಕ್ ಹಸ್ತಪ್ರತಿಗಳು ತೀರ ಭಿನ್ನವಾದ ಲಿಪಿಯನ್ನು ಉಪಯೋಗಿಸುತ್ತವೆ. ಅದು ಗ್ಲಾಗೊಲಿಟಿಕ್ ಎಂದು ಪ್ರಸಿದ್ಧವಾಗಿದೆ. ಮತ್ತು ಈ ಲಿಪಿಯನ್ನೇ ಸಿರಿಲ್ ಸೃಷ್ಟಿಸಿದನೆಂದು ಅನೇಕ ವಿದ್ವಾಂಸರು ನಂಬುತ್ತಾರೆ. ಈ ಗ್ಲಾಗೊಲಿಟಿಕ್ ಅಕ್ಷರಗಳಲ್ಲಿ ಕೆಲವೊಂದು, ಗ್ರೀಕ್ ಅಥವಾ ಹೀಬ್ರೂ ಬರಹದಿಂದ ಬಂದಿರುವಂತೆ ತೋರುತ್ತವೆ. ಕೆಲವು ಅಕ್ಷರಗಳು ಮಧ್ಯ ಯುಗಗಳ ಉಚ್ಚರಣಾ ಚಿಹ್ನೆಗಳಿಂದ ತೆಗೆಯಲ್ಪಟ್ಟಿರಬಹುದು. ಆದರೆ ಹೆಚ್ಚಿನ ಅಕ್ಷರಗಳು ನವೀನ ಹಾಗೂ ಸಂಕೀರ್ಣ ರಚನೆಗಳಾಗಿವೆ. ಗ್ಲಾಗೊಲಿಟಿಕ್ ಲಿಪಿಯು, ತುಂಬ ಭಿನ್ನ ಹಾಗೂ ನವೀನವಾದ ರಚನೆಯಾಗಿ ತೋರುತ್ತದೆ. ಆದರೆ, ಇಂದಿನ ರಷ್ಯನ್, ಯೂಕ್ರೇನ್ಯನ್, ಸರ್ಬಿಯನ್, ಬಲ್ಗೇರಿಯನ್, ಮತ್ತು ಮ್ಯಾಸೆಡೋನ್ಯನ್ ಲಿಪಿಗಳಲ್ಲದೆ, ಇನ್ನೂ 22 ಭಾಷೆಗಳು (ಇವುಗಳಲ್ಲಿ ಕೆಲವು ಸ್ಲವಾನಿಕ್ ಅಲ್ಲ) ಬಂದಿವೆ.
[Artwork—Cyrillic and Glagolitic characters]
[ಪುಟ 31ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಬಾಲ್ಟಿಕ್ ಸಮುದ್ರ
(ಪೋಲೆಂಡ್)
ಬೊಹಿಮಿಯಾ (ಚೆಕ್ಯಾ)
ಮೊರಾವಿಯಾ (ಪೂರ್ವ ಚೆಕ್ಯಾ, ಪಶ್ಚಿಮ ಸ್ಲೊವಾಕಿಯಾ, ಪಶ್ಚಿಮ ಹಂಗೆರಿ)
ನಿಟ್ರಾ
ಪೂರ್ವ ಫ್ರ್ಯಾಂಕ್ ರಾಜ್ಯದಿಂದ (ಜರ್ಮನಿ ಮತ್ತು ಆಸ್ಟ್ರಿಯಾ)
ಇಟಲಿ
ವೆನಿಸ್
ರೋಮ್
ಮೆಡಿಟರೇನಿಯನ್ ಸಮುದ್ರ
ಬಲ್ಗೇರಿಯಾ
ಗ್ರೀಸ್
ಥೆಸಲೊನೀಕ
(ಕ್ರಿಮೀಯ)
ಕಪ್ಪು ಸಮುದ್ರ
ಬಿಥಿನ್ಯಾ
ಕಾನ್‌ಸ್ಟಾಂಟಿನೋಪಲ್ (ಇಸ್ತಾಂಬುಲ್)
[ಪುಟ 31ರಲ್ಲಿರುವ ಚಿತ್ರ]
1581ರ ಕಾಲದಲ್ಲಿನ ಸಿರಿಲಿಕ್ ಲಿಪಿಯಲ್ಲಿ ಸ್ಲವಾನಿಕ್ ಬೈಬಲ್
[ಕೃಪೆ]
ಬೈಬಲ್: Narodna in univerzitetna knjiz̆nica-Slovenija-Ljubljana