ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನಪೂರ್ತಿ ಯೆಹೋವನ ಅಭಯಹಸ್ತದ ಕೆಳಗೆ

ಜೀವನಪೂರ್ತಿ ಯೆಹೋವನ ಅಭಯಹಸ್ತದ ಕೆಳಗೆ

ಜೀವನ ಕಥೆ

ಜೀವನಪೂರ್ತಿ ಯೆಹೋವನ ಅಭಯಹಸ್ತದ ಕೆಳಗೆ

ಫಾರೆಸ್ಟ್‌ ಲೀ ಹೇಳಿದಂತೆ

ನಮ್ಮ ಗ್ರ್ಯಾಮಫೋನ್‌ಗಳನ್ನು ಹಾಗೂ ನಮ್ಮ ಬೈಬಲ್‌ ಸಾಹಿತ್ಯವನ್ನು ಪೊಲೀಸರು ಆಗ ತಾನೇ ಜಪ್ತಿಮಾಡಿದ್ದರು. ಯೆಹೋವನ ಸಾಕ್ಷಿಗಳ ಚಟುವಟಿಕೆಯು ಕಾನೂನುಬಾಹಿರವಾಗಿದೆ ಎಂದು ಘೋಷಿಸುವಂತೆ ಕೆನಡದ ಹೊಸ ಗವರ್ನರ್‌ ಜನರಲ್‌ನ ಮನವೊಲಿಸಲಿಕ್ಕಾಗಿ, ಎರಡನೇ ವಿಶ್ವಯುದ್ಧವು ಒಂದು ನೆವವನ್ನು ನೀಡಿತು. ಅದು 1940, ಜುಲೈ 4ರಂದು ನಡೆಯಿತು.

ಏನು ಸಂಭವಿಸಿತೋ ಅದರಿಂದ ಒಂದಿನಿತೂ ಹೆದರದೆ ಧೈರ್ಯದಿಂದ, ಸಾಹಿತ್ಯಗಳು ಎಲ್ಲಿ ಸಂಗ್ರಹಿಸಿಡಲ್ಪಟ್ಟಿದ್ದವೋ ಅಲ್ಲಿಂದ ಅದನ್ನು ತರಿಸಿಕೊಂಡು ಸಾಕ್ಷಿಕಾರ್ಯವನ್ನು ಮುಂದುವರಿಸಿದೆವು. ಆ ಸಮಯದಲ್ಲಿ ನನ್ನ ತಂದೆ ಹೇಳಿದ ಮಾತುಗಳು ಈಗಲೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಅವರು ಹೇಳಿದ್ದು: “ನಾವೇನೂ ಅಷ್ಟು ಸುಲಭವಾಗಿ ನಿಲ್ಲಿಸುವುದಿಲ್ಲ. ಏಕೆಂದರೆ, ಯೆಹೋವನು ತಾನೇ ಸಾಕ್ಷಿನೀಡುವಂತೆ ನಮಗೆ ಆಜ್ಞಾಪನೆಯನ್ನು ಕೊಟ್ಟಿದ್ದಾನೆ.” ಆ ಸಮಯದಲ್ಲಿ ನಾನು 10 ವರ್ಷದ ಚುರುಕಿನ ಬಾಲಕನಾಗಿದ್ದೆ. ಶುಶ್ರೂಷೆಯ ಬಗ್ಗೆ ನನ್ನ ತಂದೆಗಿದ್ದ ದೃಢನಿಶ್ಚಯ ಹಾಗೂ ಹುರುಪು-ಉತ್ಸಾಹವು, ನಮ್ಮ ದೇವರಾದ ಯೆಹೋವನು ಹೇಗೆ ತನ್ನ ನಿಷ್ಠಾವಂತ ಸೇವಕರನ್ನು ಕಾಪಾಡುತ್ತಾನೆ ಎಂಬ ವಿಷಯವನ್ನು ಈಗಲೂ ಜ್ಞಾಪಿಸುತ್ತದೆ.

ಮುಂದಿನ ಸಲ ಪೊಲೀಸರು ನಮ್ಮ ಸಾಕ್ಷಿಕಾರ್ಯವನ್ನು ನಿಲ್ಲಿಸಿದಾಗ, ಅವರು ನಮ್ಮ ಸಾಹಿತ್ಯವನ್ನು ಜಪ್ತಿಮಾಡಿಕೊಂಡಿದ್ದಲ್ಲದೆ, ನನ್ನ ತಂದೆಯವರನ್ನು ಬಂಧಿಸಿ ಜೈಲಿಗೆ ಹಾಕಿದರು. ನಮ್ಮ ತಾಯಿ ಹಾಗೂ ನಾವು ನಾಲ್ಕು ಮಕ್ಕಳು ಒಂಟಿಯಾಗಿಬಿಟ್ಟೆವು. ಇದು ಸಸ್ಕ್ಯಾಚುವಾನ್‌ ಎಂಬಲ್ಲಿ 1940 ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಯಿತು. ಇದಾದ ಸ್ವಲ್ಪದರಲ್ಲಿಯೇ ನನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯಿಂದಾಗಿ, ಧ್ವಜವಂದನೆ ಮತ್ತು ರಾಷ್ಟ್ರಗೀತೆ ಹಾಡದೇ ಇದ್ದದ್ದಕ್ಕಾಗಿ ನನ್ನನ್ನು ಶಾಲೆಯಿಂದ ಹೊರಹಾಕಲಾಯಿತು. ಆದರೆ ನಾನು ಅಂಚೆಶಿಕ್ಷಣದ ಮೂಲಕ ಶಿಕ್ಷಣವನ್ನು ಮುಂದುವರಿಸಿದೆ. ಹೀಗೆ ನಾನು ಸಂದರ್ಭಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದಾದ ಶೆಡ್ಯುಲನ್ನು ಮಾಡಿಕೊಂಡೆ. ಮಾತ್ರವಲ್ಲ ನಾನು ಸಾಕ್ಷಿಕಾರ್ಯದಲ್ಲಿ ಇನ್ನೂ ಹೆಚ್ಚಿನ ಸಮಯವನ್ನು ಕಳೆದೆ.

ಯೆಹೋವನ ಸಾಕ್ಷಿಗಳ ಪೂರ್ಣಸಮಯ ಸೇವಕರಾದ ಪಯನೀಯರರಿಗೆ 1948ರಲ್ಲಿ ಕೆನಡದ ಪೂರ್ವದ ಕರಾವಳಿಗೆ ಹೋಗುವಂತೆ ಕೇಳಿಕೊಳ್ಳಲಾಯಿತು. ಆಗ ನಾನು ಪಯನೀಯರ್‌ ಸೇವೆಯನ್ನು ಮಾಡಲು ನೋವಸ್ಕೋಷ್‌ನ ಹಲಿಫ್ಯಾಕ್ಸ್‌ ಹಾಗೂ ಪ್ರಿನ್ಸ್‌ ಎಡ್ವರ್ಡ್‌ ದ್ವೀಪದ ಕೇಪ್‌ ವುಲ್ಫ್‌ಗೆ ಹೋದೆ. ಅದರ ಮುಂದಿನ ವರ್ಷ, ಟೊರಾಂಟೊದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಎರಡು ವಾರಗಳ ತನಕ ಕೆಲಸಮಾಡುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ಆ ಎರಡು ವರ್ಷಗಳೇ, ಮುಂದೆ ಆರು ಫಲದಾಯಕ ವರ್ಷಗಳಾದವು. ಕೊನೆಗೆ ನಾನು ಯೆಹೋವನನ್ನು ಪ್ರೀತಿಸಿದ ಮರ್ನಳನ್ನು 1955ರಲ್ಲಿ ಮದುವೆಯಾದೆ. ನಾವು ಆಂಟೆರೀಯೋದ ಮಿಲ್ಟನ್‌ನಲ್ಲಿ ನೆಲೆಸಿದೆವು ಮತ್ತು ಬಹಳ ಬೇಗನೆ ಅಲ್ಲಿ ಒಂದು ಸಭೆಯು ಶುರುವಾಯಿತು. ನಮ್ಮ ಮನೆಯ ನೆಲಮಾಳಿಗೆಯೇ ರಾಜ್ಯ ಸಭಾಗೃಹವಾಯಿತು.

ನಮ್ಮ ಶುಶ್ರೂಷೆಯನ್ನು ಇನ್ನೂ ವಿಸ್ತರಿಸುವ ಅಭಿಲಾಷೆ

ವರ್ಷಗಳು ಗತಿಸಿದಂತೆ ನಮಗೆ ಬೇಗನೆ ಒಂದರ ನಂತರ ಒಂದಂತೆ ಆರು ಮಕ್ಕಳಾದವು. ಮೊದಲನೆಯವಳು ಮಿರೀಯಮ್‌, ನಂತರ ಷಾರ್‌ಮೇನ್‌, ಮಾರ್ಕ್‌, ಆನೆಟ್‌, ಗ್ರ್ಯಾಂಟ್‌ ಹಾಗೂ ಕೊನೆಗೆ ಗ್ಲೆನ್‌. ನಾನು ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ ನೋಡುತ್ತಿದ್ದದ್ದು ಏನು? ನಮ್ಮ ಪುಟ್ಟ ಮಕ್ಕಳು ಬೆಂಕಿಗೂಡಿನ ಸುತ್ತಲೂ ನೆಲದ ಮೇಲೆ ಕುಳಿತಿರುತ್ತಿದ್ದರು ಮತ್ತು ಮರ್ನ ಅವರಿಗೆ ಬೈಬಲನ್ನು ಓದಿಹೇಳುತ್ತಿರುತ್ತಿದ್ದಳು ಮಾತ್ರವಲ್ಲ ಬೈಬಲ್‌ ವೃತ್ತಾಂತಗಳನ್ನು ವಿವರಿಸುತ್ತಿರುತ್ತಿದ್ದಳು. ಹೀಗೆ, ಅವಳು ಯೆಹೋವನಿಗಾಗಿ ನಿಜವಾದ ಪ್ರೀತಿಯನ್ನು ಬೆಳೆಸಿಕೊಳ್ಳಸಾಧ್ಯವಾಗುವಂತೆ ಅವರ ಹೃದಯಗಳಲ್ಲಿ ಅದನ್ನು ಬೇರೂರಿಸುತ್ತಿದ್ದಳು. ಅವಳು ಪ್ರೀತಿವಾತ್ಸಲ್ಯದಿಂದ ನೀಡಿದ ಬೆಂಬಲದಿಂದಾಗಿ, ನಮ್ಮ ಮಕ್ಕಳೆಲ್ಲರೂ ಹಾಲುಗಲ್ಲದ ಎಳೆಯವರಾಗಿರುವಾಗಲೇ ಬೈಬಲಿನ ಬಗ್ಗೆ ಸಾಕಷ್ಟು ಜ್ಞಾನವನ್ನು ಪಡೆದುಕೊಂಡಿದ್ದರು.

ಶುಶ್ರೂಷೆಗಾಗಿ ನನ್ನ ತಂದೆಯವರಿಗಿದ್ದ ಹುರುಪು-ಉತ್ಸಾಹವು ನನ್ನ ಹೃದಮನಗಳಲ್ಲಿ ಅಚ್ಚಳಿಯದೇ ಉಳಿಯಿತು. “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) ಹೀಗೆ 1968ರಲ್ಲಿ, ಸಾಕ್ಷಿಕಾರ್ಯದಲ್ಲಿ ಸಹಾಯಮಾಡಲಿಕ್ಕಾಗಿ ಮಧ್ಯ ಹಾಗೂ ದಕ್ಷಿಣದ ಅಮೆರಿಕಕ್ಕೆ ಹೋಗುವಂತೆ ಯೆಹೋವನ ಸಾಕ್ಷಿಗಳನ್ನು ಕೇಳಿಕೊಳ್ಳಲಾಯಿತು. ಆಗ ನಾವು ಅಲ್ಲಿಗೆ ಹೋಗಲು ಮನಸ್ಸುಮಾಡಿದೆವು. ಆಗ ನಮ್ಮ ಮಕ್ಕಳು 5ರಿಂದ 13 ವರ್ಷದವರಾಗಿದ್ದರು ಹಾಗೂ ಯಾರೊಬ್ಬರಿಗೂ ಸ್ಪ್ಯಾನಿಷ್‌ ಭಾಷೆ ಬರುತ್ತಿರಲಿಲ್ಲ. ಕೊಡಲ್ಪಟ್ಟ ನಿರ್ದೇಶನದ ಮೇರೆಗೆ, ಅಲ್ಲಿನ ಜೀವನಮಟ್ಟವನ್ನು ತಿಳಿದುಕೊಳ್ಳಲಿಕ್ಕಾಗಿ ನಾನು ಹಲವಾರು ದೇಶಗಳಿಗೆ ಹೋದೆ. ನಾನು ಅಲ್ಲಿಂದ ಹಿಂದಿರುಗಿ ಬಂದ ಮೇಲೆ, ಕುಟುಂಬವಾಗಿ ಪ್ರಾರ್ಥನೆಮಾಡಿ, ನಿಕರಾಗ್ವಕ್ಕೆ ಹೋಗಲು ನಿರ್ಧರಿಸಿದೆವು.

ನಿಕರಾಗ್ವದಲ್ಲಿ ಸೇವೆಮಾಡುವುದು

1970ರ ಅಕ್ಟೋಬರ್‌ ತಿಂಗಳು ನಾವು ನಮ್ಮ ಹೊಸ ಮನೆಯಲ್ಲಿದ್ದೆವು. ಮೂರು ವಾರದೊಳಗೆ ಸಭೆಯ ಕೂಟದಲ್ಲಿ ಒಂದು ಸಣ್ಣ ಭಾಗವನ್ನು ನಿರ್ವಹಿಸುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ನನಗೆ ಗೊತ್ತಿದ್ದ ಅರ್ಧಂಬರ್ಧ ಸ್ಪ್ಯಾನಿಷ್‌ ಭಾಷೆಯಲ್ಲಿ ನಾನು ಆ ಭಾಗವನ್ನು ನಿರ್ವಹಿಸಿದೆ ಮತ್ತು ಎಲ್ಲರನ್ನೂ ಶನಿವಾರ ಬೆಳಗ್ಗೆ 9:30ಕ್ಕೆ ಸರ್ವೇಸಾಗಾಗಿ ನಮ್ಮ ಮನೆಗೆ ಬರುವಂತೆ ಹೇಳಿದೆ. ಸರ್ವೀಸ್ಯೋ ಅಂದರೆ, ಕ್ಷೇತ್ರಸೇವೆಗಾಗಿ ಕೂಡಿಬರುವುದು ಎಂದಾಗಿತ್ತು. ಮತ್ತು ಅದನ್ನೇ ನಾನು ಹೇಳಬೇಕಾಗಿತ್ತು ಆದರೆ ಅದಕ್ಕೆ ಬದಲಾಗಿ ಸರ್ವೇಸಾ ಎಂದು ಹೇಳಿದ್ದೆ. ಅಂದರೆ ನಾನು ಎಲ್ಲರನ್ನೂ ಬೀಯರ್‌ ಕುಡಿಯಲಿಕ್ಕಾಗಿ ನಮ್ಮ ಮನೆಗೆ ಆಮಂತ್ರಿಸುತ್ತಿದ್ದೆ. ಭಾಷೆಯನ್ನು ಕಲಿಯುವುದಕ್ಕೆ ನಿಜವಾಗಿಯೂ ಬಹಳ ಕಷ್ಟಪಡಬೇಕಾಯಿತು!

ಮೊದಮೊದಲು ಸಾಕ್ಷಿಕಾರ್ಯದಲ್ಲಿ ಭಾಗವಹಿಸುವಾಗ, ನಾನು ನಿರೂಪಣೆಯನ್ನು ಕೈಯಲ್ಲಿ ಬರೆದುಕೊಳ್ಳುತ್ತಿದ್ದೆ ಮತ್ತು ಮನೆಯಿಂದ ಮನೆಗೆ ಹೋಗುವ ದಾರಿಯಲ್ಲಿ ಅದನ್ನು ಹೇಗೆ ಹೇಳಬೇಕೆಂದು ಅಭ್ಯಾಸಮಾಡಿಕೊಳ್ಳುತ್ತಿದ್ದೆ. ನಾನು ಹೀಗೆ ಹೇಳುತ್ತಿದ್ದೆ: “ಈ ಪುಸ್ತಕದೊಂದಿಗೆ ನಿಮಗೆ ಒಂದು ಉಚಿತ ಬೈಬಲ್‌ ಅಧ್ಯಯನವು ಸಿಗುತ್ತದೆ.” ಈ ನೀಡುವಿಕೆಯನ್ನು ಸ್ವೀಕರಿಸಿದ್ದ ಒಬ್ಬ ವ್ಯಕ್ತಿಯು, ನಾನು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ನಮ್ಮ ಕೂಟಗಳಿಗೆ ಬಂದಿದ್ದನೆಂದು ಆಮೇಲೆ ನನಗೆ ಹೇಳಿದನು. ಈ ವ್ಯಕ್ತಿಯು ಈಗ ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾನೆ. ಅಪೊಸ್ತಲ ಪೌಲನೇ ಒಪ್ಪಿಕೊಂಡಂತೆ, ದೇವರು ನಮ್ರಭಾವದ ಹೃದಯಗಳಲ್ಲಿ ಸತ್ಯದ ಬೀಜಗಳು ಬೆಳೆದು ಹೆಮ್ಮರವಾಗುವಂತೆ ಯಾವ ರೀತಿಯಲ್ಲಿ ಸಹಾಯಮಾಡುತ್ತಾನೆ ಎಂಬುದರ ಎಂತಹ ಒಳ್ಳೆಯ ನಿದರ್ಶನ!​—1 ಕೊರಿಂಥ 3:7.

ರಾಜಧಾನಿಯಾದ ಮನಾಗ್ವದಲ್ಲಿ ಎರಡು ವರ್ಷಗಳ ವರೆಗೆ ಸಾಕ್ಷಿಯನ್ನು ನೀಡಿದ ಬಳಿಕ, ನಿಕರಾಗ್ವದ ದಕ್ಷಿಣ ಭಾಗಕ್ಕೆ ಹೋಗುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು. ಅಲ್ಲಿ ನಾವು ರೀವಾಸ್‌ ಎಂಬ ಸ್ಥಳದಲ್ಲಿದ್ದ ಸಭೆಯೊಂದಿಗೆ ಹಾಗೂ ಅದರ ಅಕ್ಕಪಕ್ಕದಲ್ಲಿದ್ದ ಆಸಕ್ತ ಜನರಿದ್ದ ಪ್ರತ್ಯೇಕ ಗುಂಪಿನೊಂದಿಗೆ ಸಾಕ್ಷಿಕಾರ್ಯದಲ್ಲಿ ಜೊತೆಗೂಡಿದೆವು. ನಾವು ಈ ಗುಂಪುಗಳನ್ನು ಸಂದರ್ಶಿಸುತ್ತಿರುವಾಗ ಪೇತ್ರೋ ಪೇನ್ಯೇ ಎಂಬ ಒಬ್ಬ ನಂಬಿಗಸ್ತ ವೃದ್ಧ ಸಹೋದರರು ಸಹ ನಮ್ಮ ಜೊತೆಗೆ ಬಂದರು. ಇದು ಲೇಕ್‌ ನಿಕರಾಗ್ವದಲ್ಲಿನ ಜ್ವಾಲಾಮುಖಿ ದ್ವೀಪದಲ್ಲಿತ್ತು. ಇಲ್ಲಿ ಯೆಹೋವನ ಸಾಕ್ಷಿಗಳ ಒಂದೇ ಒಂದು ಕುಟುಂಬವು ಇತ್ತು.

ಈ ಕುಟುಂಬವು ಬಡತನದಲ್ಲಿದ್ದರೂ, ನಾವು ಅಲ್ಲಿಗೆ ಭೇಟಿನೀಡಿದಾಗ ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಅಲ್ಲಿಗೆ ಹೋಗಿ ತಲಪಿದ ಸಂಜೆಯಂದು ನಮಗಾಗಿ ಅಡುಗೆಯು ಸಿದ್ಧವಾಗಿತ್ತು. ನಾವು ಸುಮಾರು ಒಂದು ವಾರದ ವರೆಗೆ ಅಲ್ಲಿ ಉಳಿದೆವು. ಆ ಗುಂಪಿನಲ್ಲಿ ಬೈಬಲನ್ನು ಪ್ರೀತಿಸಿದ ಅನೇಕ ಜನರು ನಮ್ಮೊಂದಿಗೆ ಊಟವನ್ನು ಹಂಚಿಕೊಂಡರು. ಭಾನುವಾರದಂದು ಸಾರ್ವಜನಿಕ ಭಾಷಣಕ್ಕಾಗಿ ಸುಮಾರು 101 ಜನರು ಹಾಜರಾಗಿದ್ದದ್ದನ್ನು ನೋಡಿ ನಾವು ರೋಮಾಂಚಿತರಾದೆವು.

ಮತ್ತೊಂದು ಸಂದರ್ಭದಲ್ಲಿ ಅಂದರೆ, ಕೊಸ್ಟರೀಕದ ಗಡಿಯ ಹತ್ತಿರದಲ್ಲಿರುವ ಪರ್ವತಗಳಲ್ಲಿ ವಾಸಿಸುವ ಕೆಲವು ಆಸಕ್ತ ಜನರ ಗುಂಪೊಂದನ್ನು ಭೇಟಿಮಾಡುವಾಗ ಯೆಹೋವನು ನಿಜವಾಗಿಯೂ ನಮ್ಮ ಮೇಲೆ ತನ್ನ ಅಭಯಹಸ್ತವನ್ನಿಟ್ಟಿದ್ದನು ಎಂದು ನಾನು ನೆನೆಸುತ್ತೇನೆ. ನಾವು ಅಲ್ಲಿಗೆ ಹೋಗುವ ದಿವಸದಂದು ಪೇತ್ರೋ ನನ್ನನ್ನು ಕರೆದುಕೊಂಡುಹೋಗಲು ಬಂದರು. ಆದರೆ ನಾನು ಮಲೇರಿಯದಿಂದ ಹಾಸಿಗೆಹಿಡಿದಿದ್ದೆ. “ಪೇತ್ರೋ ನನಗೆ ಅಲ್ಲಿಗೆ ಹೋಗಲು ಆಗುವುದಿಲ್ಲ” ಎಂದು ಹೇಳಿದೆ. ತನ್ನ ಕೈಯನ್ನು ನನ್ನ ಹಣೆಯ ಮೇಲಿಟ್ಟು ನೋಡಿ, “ಓಹ್‌, ನಿನಗೆ ಬಹಳ ಜ್ವರವಿದೆ. ಆದರೆ ನೀನು ಬರಲೇಬೇಕು! ಏಕೆಂದರೆ ನಿನಗಾಗಿ ಸಹೋದರರು ಅಲ್ಲಿ ಕಾಯುತ್ತಿದ್ದಾರೆ” ಎಂದು ಅವರು ಹೇಳಿದರು. ಅನಂತರ ನಾನು ಹಿಂದೆಂದೂ ಕೇಳಿಸಿಕೊಂಡಿರದಂತಹ ಹೃದಯದಾಳದಿಂದ ಹೊಮ್ಮಿದ ಒಂದು ಪ್ರಾರ್ಥನೆಯನ್ನು ಅವರು ಮಾಡಿದರು.

“ಫ್ರೆಸ್ಕೋ (ಹಣ್ಣಿನ ರಸ) ಅನ್ನು ಕುಡಿಯಿರಿ. ನಾನು ಹತ್ತೇ ನಿಮಿಷಗಳಲ್ಲಿ ಸಿದ್ಧನಾಗಿ ಬರುತ್ತೇನೆ” ಎಂದು ಅವರಿಗೆ ಹೇಳಿದೆ. ನಾವು ಹೋಗುತ್ತಿದ್ದ ಸ್ಥಳದಲ್ಲಿ ಎರಡು ಸಾಕ್ಷಿ ಕುಟುಂಬಗಳು ವಾಸಿಸುತ್ತಿದ್ದವು ಮತ್ತು ನಮ್ಮನ್ನು ಅವರು ಬಹಳ ಚೆನ್ನಾಗಿ ನೋಡಿಕೊಂಡರು. ಜ್ವರದ ತಾಪದಿಂದ ಬಹಳ ದುರ್ಬಲನಾಗಿದ್ದರೂ ಮರುದಿನ ನಾವು ಸಾಕ್ಷಿಕಾರ್ಯವನ್ನು ಮುಂದುವರಿಸಿಕೊಂಡುಹೋದೆವು. ಆ ಭಾನುವಾರದ ಕೂಟಕ್ಕೆ ನೂರಕ್ಕಿಂತಲೂ ಹೆಚ್ಚು ಜನರು ಬಂದದ್ದನ್ನು ನೋಡಿ ನನಗೆ ಆನೆಬಲ ಬಂತು!

ಪುನಃ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ

1975ರಲ್ಲಿ ಏಳನೆಯವನಾದ ವಾನ್‌ ಹುಟ್ಟಿದ. ಆದರೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ಅದರ ಮುಂದಿನ ವರ್ಷ, ನಾವು ಕೆನಡಕ್ಕೆ ಹೋಗಬೇಕಾಯಿತು. ನಿಕರಾಗ್ವವನ್ನು ಬಿಡುವುದು ಅಷ್ಟು ಸುಲಭವಾಗಿರಲಿಲ್ಲ ಏಕೆಂದರೆ, ನಾವು ಅಲ್ಲಿ ಉಳಿದಿದ್ದಾಗ ಯೆಹೋವನು ನಮ್ಮನ್ನು ಕಾಪಾಡಿದ್ದನು. ನಾವು ಅಲ್ಲಿಂದ ಕೆನಡಕ್ಕೆ ಹೋಗುವಷ್ಟರಲ್ಲಿ ನಿಕರಾಗ್ವದ ಸಭೆಯ ಸುತ್ತಮುತ್ತಲಿನ ಟೆರಿಟೊರಿಯಿಂದ ಸುಮಾರು 500ಕ್ಕಿಂತಲೂ ಹೆಚ್ಚು ಜನರು ಕೂಟಗಳಿಗೆ ಬರುತ್ತಿದ್ದರು.

ಈ ಮುಂಚೆ ನಿಕರಾಗ್ವದಲ್ಲಿ ನನ್ನನ್ನು ಮತ್ತು ನನ್ನ ಮಗಳಾದ ಮಿರೀಯಮ್‌ಳನ್ನು ವಿಶೇಷ ಪಯನೀಯರರಾಗಿ ನೇಮಿಸಿದಾಗ, ಮಿರೀಯಮ್‌ ನನಗೆ ಒಂದು ಪ್ರಶ್ನೆಯನ್ನು ಕೇಳಿದ್ದಳು. “ಅಪ್ಪ, ಮುಂದೆ ನೀವು ಪುನಃ ಕೆನಡಕ್ಕೆ ಮರಳಿ ಹೋಗಬೇಕಾದ ಪರಿಸ್ಥಿತಿ ಬಂದರೆ, ನಾನು ಇಲ್ಲಿ ಪಯನೀಯರಳಾಗಿ ಉಳಿಯುವಂತೆ ಬಿಡುತ್ತೀರೋ?” ನಿಕರಾಗ್ವವನ್ನು ಬಿಡುವ ಉದ್ದೇಶವೇ ಇಲ್ಲದಿದ್ದರಿಂದ ನಾನು ಅವಳಿಗೆ ಹೀಗೆ ಹೇಳಿದ್ದೆ: “ಓಹೋ ಖಂಡಿತವಾಗಿಯೂ!” ಆದುದರಿಂದ, ನಾವು ಕೆನಡಕ್ಕೆ ಹಿಂದಿರುಗಿದಾಗ, ಮಿರೀಯಮ್‌ಳನ್ನು ಮಾತ್ರ ನಿಕರಾಗ್ವದಲ್ಲಿಯೇ ಬಿಟ್ಟೆವು. ಅನಂತರ ಅವಳು ಆ್ಯಂಡ್ರ್ಯು ರೀಡ್‌ ಎಂಬುವವರನ್ನು ಮದುವೆಯಾದಳು. 1984ರಲ್ಲಿ ಅವರಿಬ್ಬರೂ ಆಗ ನ್ಯೂ ಯಾರ್ಕ್‌, ಬ್ರೂಕ್ಲಿನ್‌ನಲ್ಲಿದ್ದ ಯೆಹೋವನ ಸಾಕ್ಷಿಗಳ ಮಿಷನೆರಿ ಶಾಲೆಯಲ್ಲಿ 77ನೇ ಗಿಲ್ಯಡ್‌ ಕ್ಲಾಸಿಗೆ ಹಾಜರಾದರು. ಈಗ ಮಿರೀಯಮ್‌ ತನ್ನ ಪತಿಯೊಂದಿಗೆ ಡಾಮಿನಿಕನ್‌ ರಿಪಬ್ಲಿಕ್‌ನಲ್ಲಿ ಸೇವೆಸಲ್ಲಿಸುತ್ತಾಳೆ. ಇದು ನಿಕರಾಗ್ವದಲ್ಲಿದ್ದ ಮಿಷನೆರಿಗಳು ಅವಳ ಹೃದಯದಲ್ಲಿ ಬೇರೂರಿಸಿದಂತಹ ಅಭಿಲಾಷೆಯನ್ನು ಪೂರ್ಣಗೊಳಿಸಿದೆ.

ಆದರೂ, “ನಾವೇನೂ ಅಷ್ಟು ಸುಲಭವಾಗಿ ನಿಲ್ಲಿಸುವುದಿಲ್ಲ” ಎಂದು ನನ್ನ ತಂದೆಯವರು ಹೇಳಿದ ಮಾತುಗಳು ಇನ್ನೂ ನನ್ನ ಹೃದಯದಲ್ಲಿ ಬೆಂಕಿಯಂತೆ ನಿಗಿನಿಗಿಸುತ್ತಿತ್ತು. ಆದುದರಿಂದ, 1981ರಷ್ಟರೊಳಗೆ ಮಧ್ಯ ಅಮೆರಿಕಕ್ಕೆ ಹಿಂದಿರುಗಿಹೋಗುವಷ್ಟು ಹಣವನ್ನು ಉಳಿತಾಯಮಾಡಿದ್ದೆವು. ಆದರೆ ಈ ಬಾರಿ ನಾವು ಕೊಸ್ಟರೀಕಕ್ಕೆ ಹೋದೆವು. ಅಲ್ಲಿ ನಾವು ಸಾಕ್ಷಿಕಾರ್ಯವನ್ನು ಮುಂದುವರಿಸುತ್ತಿದ್ದಾಗ, ಅಲ್ಲಿನ ಹೊಸ ಬ್ರಾಂಚ್‌ ಕಟ್ಟಡವನ್ನು ಕಟ್ಟುವುದರಲ್ಲಿ ಸಹಾಯಹಸ್ತವನ್ನು ನೀಡುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು. ಆದರೆ, 1985ರಲ್ಲಿ ನಮ್ಮ ಮಗನಾದ ಗ್ರ್ಯಾಂಟ್‌ ಅಸೌಖ್ಯನಾದುದರಿಂದ, ವೈದ್ಯಕೀಯ ತಪಾಸಣೆಗಾಗಿ ನಾವು ಕೆನಡಕ್ಕೆ ಹಿಂದಿರುಗಬೇಕಾಯಿತು. ಗ್ಲೆನ್‌ ಕೊಸ್ಟರೀಕದ ಬ್ರಾಂಚನ್ನು ಕಟ್ಟಲಿಕ್ಕಾಗಿ ಅಲ್ಲೇ ಉಳಿದನು. ಆನೆಟ್‌ ಮತ್ತು ಷಾರ್‌ಮೇನ್‌ ವಿಶೇಷ ಪಯನೀಯರರಾಗಿ ಸೇವೆಸಲ್ಲಿಸಿದರು. ನಮ್ಮಲ್ಲಿ ಕೊಸ್ಟರೀಕವನ್ನು ಬಿಟ್ಟುಬಂದ ಉಳಿದವರು ಪುನಃ ನಾವು ಅಲ್ಲಿಗೆ ಹಿಂದಿರುಗಿಹೋಗಲಾರೆವು ಎಂಬುದನ್ನು ಕನಸಿನಲ್ಲಿಯೂ ನೆನೆಸಿನೋಡಿರಲಿಲ್ಲ.

ಅವಘಡದಿಂದಾದ ನೋವನ್ನು ಸಹಿಸಿಕೊಳ್ಳುವುದು

1993 ಸೆಪ್ಟೆಂಬರ್‌ 17ರಂದು ಬೆಳಗ್ಗೆ ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಿದ್ದನು. ನಮ್ಮ ಹಿರಿಯ ಮಗನಾದ ಮಾರ್ಕ್‌ ಮತ್ತು ನಾನು ಛಾವಣಿಯನ್ನು ಹೊದಿಸುತ್ತಿದ್ದೆವು. ನಾವು ಪಕ್ಕಪಕ್ಕದಲ್ಲಿಯೇ ಕೆಲಸಮಾಡುತ್ತಾ, ಎಂದಿನಂತೆ ಆತ್ಮಿಕ ವಿಷಯಗಳ ಬಗ್ಗೆ ಮಾತಾಡಿಕೊಳ್ಳುತ್ತಿದ್ದೆವು. ಆಗ ಹಠಾತ್ತನೇ ನಾನು ನಿಯಂತ್ರಣವನ್ನು ಕಳೆದುಕೊಂಡು ಛಾವಣಿಯ ಮೇಲಿಂದ ಉರುಳಿ ಕೆಳಗೆ ಬಿದ್ದುಬಿಟ್ಟೆ. ಆಮೇಲೆ ನನಗೆ ಪ್ರಜ್ಞೆ ಬಂದಾಗ, ಪ್ರಕಾಶಮಾನವಾದ ಬೆಳಕುಗಳು ಹಾಗೂ ಶ್ವೇತ ವಸ್ತ್ರವನ್ನು ತೊಟ್ಟ ಜನರು ನನ್ನ ಸುತ್ತಲೂ ಇರುವುದನ್ನು ನೋಡಿದೆ. ನಾನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದೆ.

ಬೈಬಲಿಗನುಸಾರ ಮೊದಲು “ನಾನು ರಕ್ತವನ್ನು ತೆಗೆದುಕೊಳ್ಳುವುದಿಲ್ಲ, ನಾನು ರಕ್ತವನ್ನು ತೆಗೆದುಕೊಳ್ಳುವುದಿಲ್ಲ!” ಎಂದು ಹೇಳಿದೆ. (ಅ. ಕೃತ್ಯಗಳು 15:​28, 29) “ಅಪ್ಪಾ, ಸಮಾಧಾನ ತಂದುಕೊಳ್ಳಿ, ನಾವೆಲ್ಲರೂ ಇಲ್ಲೇ ಇದ್ದೇವೆ” ಎಂದು ಷಾರ್‌ಮೆನ್‌ ಹೇಳಿದಾಗ ಅದು ನನಗೆಷ್ಟು ಸಮಾಧಾನವನ್ನು ತಂದಿತು! ಡಾಕ್ಟರರು ನನ್ನ ಮೆಡಿಕಲ್‌ ಡಾಕ್ಯುಮೆಂಟನ್ನು ಮೊದಲೇ ನೋಡಿದ್ದರಿಂದ ರಕ್ತವನ್ನು ಕೊಡಬೇಕು ಎಂಬ ವಿಷಯವೇ ತಲೆಯೆತ್ತಲಿಲ್ಲ ಎಂಬುದು ನನಗೆ ಆಮೇಲೆ ಗೊತ್ತಾಯಿತು. ಈ ಅವಘಡದಿಂದ ನಾನು ನನ್ನ ಕತ್ತನ್ನು ಮುರಿದುಕೊಂಡಿದ್ದೆ ಮತ್ತು ಸಂಪೂರ್ಣವಾಗಿ ನಿಷ್ಕ್ರಿಯನಾಗಿದ್ದೆ. ನನಗೆ ಉಸಿರಾಡುವುದಕ್ಕೂ ಕಷ್ಟವಾಗಿತ್ತು.

ಮಿಸುಕಾಡಲಿಕ್ಕೂ ಆಗದೆ ನಿಶ್ಚಲನಾಗಿದ್ದುದ್ದರಿಂದ, ಈಗ ಯೆಹೋವನಿಂದ ನನಗೆ ಇನ್ನೂ ಹೆಚ್ಚಿನ ಬಲವು ಬೇಕಿತ್ತು. ಕೃತಕ ಉಸಿರಾಟದ ಟ್ಯೂಬನ್ನು ಅಳವಡಿಸಲಿಕ್ಕಾಗಿ ಶ್ವಾಸನಾಳಚ್ಛೇದವನ್ನು ಮಾಡಲಾಯಿತು. ಇದು ನನ್ನ ಧ್ವನಿ ತಂತುವಿಗೆ ಸಾಗುವ ಗಾಳಿಯ ಮಾರ್ಗವನ್ನು ಮುಚ್ಚಿಬಿಟ್ಟಿತು. ಇದರಿಂದ ನನಗೆ ಮಾತಾಡಲಿಕ್ಕೂ ಆಗುತ್ತಿರಲಿಲ್ಲ. ಜನರು ನನ್ನ ತುಟಿಯ ಚಲನೆಯನ್ನು ಗಮನಿಸಿ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು.

ಖರ್ಚು ದಿನೇದಿನೇ ಪರ್ವತದಂತೆ ಬೆಳೆಯುತ್ತಾ ಹೋಯಿತು. ನನ್ನ ಪತ್ನಿ ಹಾಗೂ ಮಕ್ಕಳಲ್ಲಿ ಹೆಚ್ಚಿನವರು ಪೂರ್ಣ ಸಮಯದ ಸೇವೆಯಲ್ಲಿದ್ದುದ್ದರಿಂದ, ಖರ್ಚನ್ನು ನಿಭಾಯಿಸಲು ಅವರೇನಾದರೂ ಈ ಸೇವೆಯನ್ನು ಬಿಡಬೇಕೋ ಏನೋ ಎಂದು ನಾನು ನೆನೆಸಿದೆ. ಆದರೆ, ಮಾರ್ಕ್‌ಗೆ ಬಹಳ ಬೇಗನೆ ಒಂದು ಕೆಲಸ ಸಿಕ್ಕಿತು ಮತ್ತು ಕೇವಲ ಮೂರು ತಿಂಗಳೊಳಗೆ, ಇಷ್ಟರ ವರೆಗೆ ಆದ ಖರ್ಚಿಗೆ ಸಾಕಷ್ಟು ಹಣವನ್ನು ಹೊಂದಿಸಸಾಧ್ಯವಾಯಿತು. ಇದರಿಂದಾಗಿ, ನನ್ನನ್ನು ಮತ್ತು ನನ್ನ ಪತ್ನಿಯನ್ನು ಬಿಟ್ಟು ಇನ್ನೆಲ್ಲರೂ ಪೂರ್ಣ ಸಮಯದ ಸೇವೆಯಲ್ಲಿ ಉಳಿಯಸಾಧ್ಯವಾಯಿತು.

ಆರು ದೇಶಗಳಿಂದ ಬಂದ ನೂರಾರು ಶುಭಾಶಯಗಳ ಕಾರ್ಡುಗಳನ್ನು ಹಾಗೂ ಪತ್ರಗಳನ್ನು ಆಸ್ಪತ್ರೆಯ ನನ್ನ ರೂಮಿನ ಗೋಡೆಗಳ ಮೇಲೆಲ್ಲ ತೂಗುಹಾಕಿದ್ದರು. ನಿಜವಾಗಿಯೂ ಯೆಹೋವನೇ ನನ್ನ ಮೇಲೆ ಅಭಯಹಸ್ತವನ್ನಿಟ್ಟಿದ್ದನು. ನಾನು ತುರ್ತು ಚಿಕಿತ್ಸಾ ವಿಭಾಗದಲ್ಲಿ ಐದೂವರೆ ತಿಂಗಳಿದ್ದೆ. ಈ ಎಲ್ಲ ಸಮಯದಲ್ಲಿ ನನ್ನ ಕುಟುಂಬದವರಿಗೂ ಊಟವನ್ನು ತಂದುಕೊಡುವ ಮೂಲಕ ಸಭೆಯವರು ಬಹಳಷ್ಟು ಸಹಾಯವನ್ನು ಮಾಡಿದರು. ಪ್ರತಿ ದಿನ ಒಬ್ಬ ಕ್ರೈಸ್ತ ಹಿರಿಯರು ಮಧ್ಯಾಹ್ನದ ಹೊತ್ತಿನಲ್ಲಿ, ಬೈಬಲನ್ನು ಮತ್ತು ಬೈಬಲ್‌ ಪುಸ್ತಕಗಳನ್ನು ಓದುತ್ತಿರುತ್ತಿದ್ದರು ಮತ್ತು ಉತ್ತೇಜನವನ್ನು ನೀಡುವಂತಹ ಅನುಭವಗಳನ್ನು ಹೇಳುತ್ತಿರುತ್ತಿದ್ದರು. ನಮ್ಮ ಕುಟುಂಬದ ಸದಸ್ಯರಿಂದ ಇಬ್ಬರು ಪ್ರತಿಯೊಂದು ಸಭಾಕೂಟಕ್ಕೆ ನನ್ನೊಂದಿಗೆ ಜೊತೆಗೂಡಿ ತಯಾರುಮಾಡುತ್ತಿದ್ದರು. ಹೀಗೆ ನಾನು ಮುಖ್ಯವಾದ ಆತ್ಮಿಕ ಆಹಾರವನ್ನು ತಪ್ಪಿಸಿಕೊಳ್ಳಲೇ ಇಲ್ಲ.

ನಾನು ಇನ್ನೂ ಆಸ್ಪತ್ರೆಯಲ್ಲಿದ್ದಾಗ, ವಿಶೇಷ ದಿನದ ಸಮ್ಮೇಳನವನ್ನು ಹಾಜರಾಗಲಿಕ್ಕಾಗಿ ಏರ್ಪಾಡನ್ನು ಮಾಡಲಾಯಿತು. ಒಬ್ಬ ನರ್ಸ್‌ ಹಾಗೂ ಕೃತಕ ಉಸಿರಾಟದ ಟೆಕ್ನಿಷಿಯನ್‌ ಇಡೀ ದಿನ ನನ್ನ ಜೊತೆಗಿರುವಂತೆ ಆಸ್ಪತ್ರೆಯ ಸಿಬ್ಬಂದಿಯು ಏರ್ಪಾಡನ್ನು ಮಾಡಿದರು. ನಮ್ಮ ಸಹೋದರ ಹಾಗೂ ಸಹೋದರಿಯರೊಂದಿಗೆ ಪುನಃ ಜೊತೆಗೂಡುವುದು ಎಷ್ಟು ಆನಂದಮಯವಾಗಿತ್ತು! ನನ್ನನ್ನು ಅಭಿವಂದಿಸಲು ನೂರಾರು ಜನ ಸಾಲಾಗಿ ನಿಂತಿದ್ದ ದೃಶ್ಯವನ್ನು ನಾನೆಂದೂ ಮರೆಯಲಾರೆ.

ಆತ್ಮಿಕತೆಯನ್ನು ಕಾಪಾಡಿಕೊಳ್ಳುವುದು

ಈ ಅವಘಡವಾದ ಒಂದು ವರ್ಷದ ನಂತರ, ನಾನು ಮನೆಗೆ ಹೋಗಲು ಶಕ್ತನಾದೆ. ಆದರೆ ಈಗಲೂ 24 ಗಂಟೆ ಬೇರೆಯವರು ನನ್ನನ್ನು ನೋಡಿಕೊಳ್ಳಬೇಕು. ವಿಶೇಷವಾಗಿ ಸಜ್ಜಿತವಾದ ಒಂದು ವ್ಯಾನ್‌ನಲ್ಲಿ ನಾನು ಕೂಟಗಳಿಗೆ ಹೋಗುತ್ತೇನೆ. ನಾನು ಕೂಟಗಳನ್ನು ತಪ್ಪಿಸಿಕೊಳ್ಳುವುದೇ ಅಪರೂಪ. ಆದರೆ ಇದಕ್ಕೆ ದೃಢನಿಶ್ಚಯವು ಬೇಕೇಬೇಕು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಮನೆಗೆ ಬಂದಂದಿನಿಂದ ನಾನು ಎಲ್ಲ ಜಿಲ್ಲಾ ಅಧಿವೇಶನಗಳಿಗೆ ಹಾಜರಾಗಶಕ್ತನಾಗಿದ್ದೇನೆ.

ಕಟ್ಟಕಡೆಗೆ, 1997ರ ಫೆಬ್ರವರಿ ತಿಂಗಳಿನಲ್ಲಿ ನಾನು ಒಂದಷ್ಟರ ಮಟ್ಟಿಗೆ ಮಾತಾಡಶಕ್ತನಾದೆ. ನನ್ನ ಬೈಬಲ್‌ ಆಧಾರಿತ ನಿರೀಕ್ಷೆಯನ್ನು ಕೆಲವು ನರ್ಸ್‌ಗಳೊಂದಿಗೆ ನಾನು ಹಂಚಿಕೊಳ್ಳುವಾಗ ಅವರು ಬೇಸರಗೊಳ್ಳದೆ ಗಣ್ಯತಾಪೂರ್ವಕವಾಗಿ ಕೇಳಿಸಿಕೊಳ್ಳುತ್ತಾರೆ. ಒಬ್ಬ ನರ್ಸ್‌ ಯೆಹೋವನ ಸಾಕ್ಷಿಗಳು​—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಎಂಬ ಇಡೀ ಪುಸ್ತಕವನ್ನು ಮತ್ತು ಇತರ ವಾಚ್‌ ಟವರ್‌ ಪ್ರಕಾಶನಗಳನ್ನು ನನಗೆ ಓದಿಹೇಳಿದ್ದಾಳೆ. ನಾನು ಒಂದು ಕಡ್ಡಿಯನ್ನು ಉಪಯೋಗಿಸುತ್ತಾ ಕಂಪ್ಯೂಟರ್‌ ಅನ್ನು ಆಪರೇಟ್‌ ಮಾಡುತ್ತೇನೆ. ಈ ಮೂಲಕ ನಾನು ಜನರೊಂದಿಗೆ ಬೈಬಲ್‌ ಸಂದೇಶವನ್ನು ಹಂಚಿಕೊಳ್ಳುತ್ತೇನೆ. ಈ ರೀತಿ ಟೈಪ್‌ ಮಾಡುವುದು ಬಹಳ ಆಯಾಸವನ್ನು ಉಂಟುಮಾಡುತ್ತಾದರೂ, ಇದು ಶುಶ್ರೂಷೆಯಲ್ಲಿ ಕ್ರಿಯಾಶೀಲನಾಗಿರುವುದಕ್ಕೆ ಸಹಾಯಮಾಡಿದೆ.

ನಾನು ನರಗಳ ನೋವಿನಿಂದ ತುಂಬ ನರಳುತ್ತೇನೆ. ಆದರೆ ನಾನು ಬೈಬಲ್‌ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ಇಲ್ಲವೆ ಬೇರೆಯವರು ನನಗೆ ಓದಿಹೇಳುವಾಗ ಒಂದಿಷ್ಟು ಸಮಾಧಾನವಾಗುತ್ತದೆ. ಯಾವಾಗಲಾದರೊಮ್ಮೆ, ನಾನು ನನಗೆ ಊರುಗೋಲಾಗಿರುವ ನನ್ನ ಪತ್ನಿಯ ಸಹಾಯದೊಂದಿಗೆ ರಸ್ತೆಬದಿಯ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುತ್ತೇನೆ. ನನಗೆ ಸಹಾಯವು ಬೇಕಾದಾಗ ಅವಳು ನನ್ನ ಪರವಾಗಿ ಮಾತಾಡುತ್ತಾಳೆ. ಹಲವಾರು ಸಂದರ್ಭಗಳಲ್ಲಿ ನಾನು ಆಕ್ಸಿಲಿಯರಿ ಪಯನೀಯರನಾಗಿ ಸೇವೆಸಲ್ಲಿಸಿದ್ದೇನೆ. ಕ್ರೈಸ್ತ ಹಿರಿಯನೋಪಾದಿ ಸೇವೆಸಲ್ಲಿಸುವುದು ನಿಜವಾಗಿಯೂ ಆನಂದವನ್ನು ತಂದಿದೆ. ಇದು ವಿಶೇಷವಾಗಿ ಸಹೋದರರು ಕೂಟಗಳಲ್ಲಿ ನನ್ನ ಬಳಿ ಬಂದು ಮಾತಾಡುವಾಗ ಇಲ್ಲವೆ ಮನೆಗೆ ಬಂದು ನನ್ನನ್ನು ನೋಡಿಹೋಗುವಾಗ ಹಾಗೂ ಅವರಿಗೆ ನಾನು ಸಹಾಯವನ್ನು, ಉತ್ತೇಜನವನ್ನು ನೀಡುವಾಗ ನಿಜವಾಗಿದೆ.

ಆದರೆ ಬಹಳ ಸುಲಭವಾಗಿ ನಾನು ಖಿನ್ನನಾಗುತ್ತೇನೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದುದರಿಂದ ಖಿನ್ನನಾಗುವಾಗಲೆಲ್ಲ, ಸಂತೋಷವನ್ನು ಕಂಡುಕೊಳ್ಳಲಿಕ್ಕಾಗಿ ತತ್‌ಕ್ಷಣವೇ ಯೆಹೋವನಿಗೆ ನಾನು ಪ್ರಾರ್ಥನೆಯನ್ನು ಮಾಡುತ್ತೇನೆ. ಯೆಹೋವನು ಯಾವಾಗಲೂ ನನ್ನ ಮೇಲೆ ಅಭಯಹಸ್ತವನ್ನಿಡುವಂತೆ ಹಗಲೂರಾತ್ರಿ ನಾನು ಪ್ರಾರ್ಥಿಸುತ್ತೇನೆ. ಯಾರಾದರೊಬ್ಬರು ಪತ್ರ ಬರೆದಾಗ ಇಲ್ಲವೆ ಭೇಟಿಮಾಡುವಾಗ ನನಗೆ ಬಹಳ ಸಂತೋಷವಾಗುತ್ತದೆ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ನನ್ನ ಮನವನ್ನು ಆತ್ಮೋನ್ನತಿ ಮಾಡುವಂತಹ ವಿಷಯಗಳಿಂದ ತುಂಬುತ್ತವೆ. ಈ ಪತ್ರಿಕೆಗಳನ್ನು ಬೇರೆ ಬೇರೆ ನರ್ಸ್‌ಗಳು ನನಗೆ ಓದಿಹೇಳುತ್ತಾರೆ. ನನಗೆ ಈ ಅವಘಡವಾದಾಗಿನಿಂದ, ಇಡೀ ಬೈಬಲನ್ನು ಕ್ಯಾಸೆಟ್ಟಿನ ಮೂಲಕ ಸುಮಾರು ಏಳು ಬಾರಿ ಕೇಳಿಸಿಕೊಂಡಿದ್ದೇನೆ. ಹೀಗೆ ಹಲವಾರು ವಿಧಗಳಲ್ಲಿ ಯೆಹೋವನು ನನ್ನನ್ನು ಕಾಪಾಡಿದ್ದಾನೆ.​—ಕೀರ್ತನೆ 41:3.

ನನ್ನ ಜೀವನದಲ್ಲಾದ ಬದಲಾವಣೆಗಳು, ನಮ್ಮ ಮಹಾನ್‌ ಸೃಷ್ಟಿಕರ್ತನಾದ ಯೆಹೋವನು ಭವಿಷ್ಯತ್ತಿನ ಜೀವಕ್ಕಾಗಿ ಯಾವ ರೀತಿಯಲ್ಲಿ ಶಿಕ್ಷಣವನ್ನು ನೀಡುತ್ತಿದ್ದಾನೆ ಎಂಬುದನ್ನು ಮನನಮಾಡಲು ಬಹಳಷ್ಟು ಸಮಯವನ್ನು ಕೊಟ್ಟಿದೆ. ತನ್ನ ಚಿತ್ತ, ಉದ್ದೇಶ, ಅರ್ಥಭರಿತವಾದ ಶುಶ್ರೂಷೆ, ಕುಟುಂಬ ಸಂತೋಷದ ರಹಸ್ಯದ ಕುರಿತಾದ ಸಲಹೆ ಹಾಗೂ ವಿಪತ್ತು ಎರಗಿದಾಗ ವಿವೇಚನೆಯನ್ನು ಉಪಯೋಗಿಸುವುದರ ಬಗ್ಗೆ ನಿಷ್ಕೃಷ್ಟ ಜ್ಞಾನವನ್ನು ನಮಗೆ ಆತನು ನೀಡುತ್ತಾನೆ. ಯೆಹೋವನು ನನಗೆ ಒಬ್ಬ ನಂಬಿಗಸ್ತೆಯಾದ ಹಾಗೂ ಬಹಳ ಒಳ್ಳೆಯ ಪತ್ನಿಯನ್ನು ಕೊಟ್ಟಿದ್ದಾನೆ. ನನ್ನ ಮಕ್ಕಳು ಸಹ ನನಗೆ ಬಹಳ ಸಹಾಯವನ್ನು ಮಾಡಿದ್ದಾರೆ ಮತ್ತು ಎಲ್ಲರೂ ಪೂರ್ಣ ಸಮಯದ ಸೇವೆಯನ್ನು ಮಾಡುತ್ತಿರುವುದು ಬಹಳ ಸಂತೋಷವನ್ನು ತಂದಿದೆ. 2000 ಮಾರ್ಚ್‌ 11ರಂದು ನಮ್ಮ ಮಗನಾದ ಮಾರ್ಕ್‌ ಮತ್ತು ಅವನ ಪತ್ನಿ ಆಲೆಸನ್‌ 108ನೇ ಗಿಲ್ಯಡ್‌ ಶಾಲೆಯ ಪದವೀಧರರಾದರು ಮತ್ತು ನಿಕರಾಗ್ವಕ್ಕೆ ನೇಮಿಸಲ್ಪಟ್ಟರು. ನಾನು ಮತ್ತು ನನ್ನ ಪತ್ನಿ ಇಬ್ಬರೂ ಅವರ ಪದವಿಪ್ರಾಪ್ತಿಗೆ ಹೋಗಶಕ್ತರಾದೆವು. ಆ ಅವಘಡವು ನನ್ನ ಜೀವಿತವನ್ನು ಮಾರ್ಪಡಿಸಿತಾದರೂ ನನ್ನ ಹೃದಯವನ್ನು ಮಾರ್ಪಡಿಸಲಿಲ್ಲ ಎಂಬುದನ್ನು ಪೂರ್ಣಮನಸ್ಸಿನಿಂದ ಹೇಳಶಕ್ತನಾಗಿದ್ದೇನೆ.​—ಕೀರ್ತನೆ 127:​3, 4.

ನಾನು ಪಡೆದುಕೊಂಡಂತಹ ಆತ್ಮಿಕ ಪರಂಪರೆಯನ್ನು ನನ್ನ ಕುಟುಂಬಕ್ಕೆ ದಾಟಿಸಸಾಧ್ಯವಾಗುವಂತೆ, ಯೆಹೋವನು ನೀಡಿರುವ ವಿವೇಕಕ್ಕಾಗಿ ನಾನು ಆತನಿಗೆ ಆಭಾರಿಯಾಗಿದ್ದೇನೆ. “ನಾವೇನೂ ಅಷ್ಟು ಸುಲಭವಾಗಿ ನಿಲ್ಲಿಸುವುದಿಲ್ಲ. ಏಕೆಂದರೆ, ಯೆಹೋವನು ತಾನೇ ಸಾಕ್ಷಿನೀಡುವಂತೆ ನಮಗೆ ಆಜ್ಞಾಪನೆಯನ್ನು ಕೊಟ್ಟಿದ್ದಾನೆ” ಎಂದು ಹೇಳಿದ ನನ್ನ ತಂದೆಗಿದ್ದ ಮನೋಭಾವದಂತೆಯೇ, ನನ್ನ ಮಕ್ಕಳು ಸಹ ತಮ್ಮ ಸೃಷ್ಟಿಕರ್ತನಿಗೆ ಸೇವೆಸಲ್ಲಿಸುತ್ತಿರುವುದನ್ನು ನೋಡುವುದು ನಿಜವಾಗಿಯೂ ನನಗೆ ಬಲವನ್ನೂ ಉತ್ತೇಜನವನ್ನೂ ನೀಡಿದೆ. ಹೌದು, ಖಂಡಿತವಾಗಿಯೂ ಯೆಹೋವನು ನನ್ನನ್ನೂ ನನ್ನ ಕುಟುಂಬವನ್ನೂ ಜೀವನಪೂರ್ತಿ ಕಾಪಾಡಿದ್ದಾನೆ.

[ಪುಟ 24ರಲ್ಲಿರುವ ಚಿತ್ರ]

ಪಯನೀಯರ್‌ ಸೇವೆಯನ್ನು ಮಾಡುತ್ತಿದ್ದ ದಿನಗಳಲ್ಲಿ ಉಪಯೋಗಿಸುತ್ತಿದ್ದ ಹೌಸ್‌ ಕಾರ್‌ನ ಪಕ್ಕದಲ್ಲಿ ತಂದೆಯವರೊಂದಿಗೆ ನನ್ನ ಅಣ್ಣಂದಿರು ಮತ್ತು ಅಕ್ಕ, ಬಲಭಾಗದಲ್ಲಿ ನಾನಿದ್ದೇನೆ

[ಪುಟ 26ರಲ್ಲಿರುವ ಚಿತ್ರ]

ನನ್ನ ಪತ್ನಿ ಮರ್ನಳೊಂದಿಗೆ

[ಪುಟ 26ರಲ್ಲಿರುವ ಚಿತ್ರ]

ನಮ್ಮ ಕುಟುಂಬದ ಇತ್ತೀಚೆಗಿನ ಛಾಯಾಚಿತ್ರ

[ಪುಟ 27ರಲ್ಲಿರುವ ಚಿತ್ರ]

ನಾನೂ ಈಗಲೂ ಪತ್ರಗಳನ್ನು ಬರೆಯುವ ಮೂಲಕ ಸಾಕ್ಷಿಯನ್ನು ಕೊಡುತ್ತೇನೆ