ಬೆಳಕಿನಲ್ಲಿ ನಡೆಯುವವರಿಗೆ ಹರ್ಷಾನಂದ
ಬೆಳಕಿನಲ್ಲಿ ನಡೆಯುವವರಿಗೆ ಹರ್ಷಾನಂದ
“ಬನ್ನಿರಿ, ಯೆಹೋವನ ಜ್ಞಾನಪ್ರಕಾಶದಲ್ಲಿ ನಡೆಯುವ!”—ಯೆಶಾಯ 2:5.
1, 2. (ಎ) ಬೆಳಕು ಎಷ್ಟು ಪ್ರಾಮುಖ್ಯವಾಗಿದೆ? (ಬಿ) ಕತ್ತಲು ಭೂಮಿಯನ್ನು ಆವರಿಸುವುದು ಎಂಬ ಎಚ್ಚರಿಕೆಯು ಏಕೆ ತುಂಬ ಗಂಭೀರವಾದದ್ದಾಗಿದೆ?
ಯೆಹೋವನು ಬೆಳಕಿನ ಮೂಲನಾಗಿದ್ದಾನೆ. ಬೈಬಲ್ ಆತನನ್ನು “ಹಗಲಿನಲ್ಲಿ ಸೂರ್ಯನನ್ನು ರಾತ್ರಿಯಲ್ಲಿ ಚಂದ್ರನಕ್ಷತ್ರಗಳ ಕಟ್ಟಳೆಗಳನ್ನು ಪ್ರಕಾಶಕ್ಕಾಗಿ ನೇಮಿಸುವಾತನೂ” ಎಂದು ಕರೆಯುತ್ತದೆ. (ಯೆರೆಮೀಯ 31:35; ಕೀರ್ತನೆ 8:3) ನಮ್ಮ ಸೂರ್ಯನನ್ನು ಸೃಷ್ಟಿಸಿದವನು ಆತನೇ. ಮತ್ತು ಈ ಸೂರ್ಯ ವಾಸ್ತವದಲ್ಲಿ ಒಂದು ದೊಡ್ಡ ನ್ಯೂಕ್ಲಿಯರ್ ಅಗ್ನಿಕುಂಡವಾಗಿದೆ. ಅದು ಅಂತರಿಕ್ಷದಲ್ಲಿ ವಿಪರೀತ ಪ್ರಮಾಣಗಳಲ್ಲಿ ಶಕ್ತಿಯನ್ನು ಹೊರಗೆಡಹುತ್ತದೆ. ಈ ಶಕ್ತಿಯ ಸ್ವಲ್ಪ ಅಂಶವನ್ನು ಅದು ಬೆಳಕು ಮತ್ತು ಉಷ್ಣದ ರೂಪದಲ್ಲಿ ಹೊರಹಾಕುತ್ತದೆ. ಈ ಶಕ್ತಿಯಲ್ಲಿ ಒಂದು ಚಿಕ್ಕ ಅಂಶವು ಸೂರ್ಯನಬೆಳಕಿನ ರೂಪದಲ್ಲಿ ನಮ್ಮ ಭೂಗ್ರಹವನ್ನು ತಲಪುತ್ತದೆ ಮತ್ತು ಈ ಭೂಮಿಯ ಮೇಲಿನ ಎಲ್ಲ ಜೀವವನ್ನು ಪೋಷಿಸುತ್ತದೆ. ಸೂರ್ಯನ ಬೆಳಕು ಇಲ್ಲದಿರುತ್ತಿದ್ದಲ್ಲಿ, ನಾವು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಮತ್ತು ಈ ಭೂಮಿಯು ಒಂದು ನಿರ್ಜೀವ ಗ್ರಹವಾಗಿರುತ್ತಿತ್ತು.
2 ಇದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಪ್ರವಾದಿಯಾದ ಯೆಶಾಯನು ವರ್ಣಿಸಿದ ಸ್ಥಿತಿಯ ಗಂಭೀರತೆಯನ್ನು ನಾವು ಅರ್ಥಮಾಡಿಕೊಳ್ಳಸಾಧ್ಯವಿದೆ. ಅವನಂದದ್ದು: “ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ.” (ಯೆಶಾಯ 60:2) ಇದು ಅಕ್ಷರಶಃವಾದ ಕತ್ತಲೆಗೆ ಸೂಚಿಸುವುದಿಲ್ಲ ನಿಜ. ಒಂದು ದಿನ ಸೂರ್ಯ, ಚಂದ್ರ, ಮತ್ತು ನಕ್ಷತ್ರಗಳು ಪ್ರಕಾಶಿಸುವುದನ್ನು ನಿಲ್ಲಿಸುವವು ಎಂಬುದು ಯೆಶಾಯನ ಅರ್ಥವಾಗಿರಲಿಲ್ಲ. (ಕೀರ್ತನೆ 89:36, 37; 136:7-9) ಅದಕ್ಕೆ ಬದಲು ಅವನು ಆತ್ಮಿಕ ಕತ್ತಲಿನ ಕುರಿತಾಗಿ ಮಾತಾಡುತ್ತಿದ್ದನು. ಮತ್ತು ಈ ಆತ್ಮಿಕ ಕತ್ತಲು ಪ್ರಾಣಾಂತಕವಾಗಿದೆ. ಸೂರ್ಯನ ಬೆಳಕಿಲ್ಲದೆ ನಾವು ಹೇಗೆ ಹೆಚ್ಚು ಸಮಯ ಬದುಕಿರಲಾರೆವೊ ಹಾಗೆಯೇ ಆತ್ಮಿಕ ಬೆಳಕಿಲ್ಲದೆಯೂ ನಾವು ಹೆಚ್ಚುಕಾಲ ಬದುಕಿರಲಾರೆವು.—ಲೂಕ 1:79.
3. ಯೆಶಾಯನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ಕ್ರೈಸ್ತರು ಏನು ಮಾಡಬೇಕು?
3 ಆದುದರಿಂದ ಯೆಶಾಯನ ಮಾತುಗಳು ಪುರಾತನ ಯೆಹೂದದಲ್ಲಿ ನೆರವೇರಿದ್ದರೂ, ಇಂದು ನಮ್ಮ ದಿನದಲ್ಲಿ ಹೆಚ್ಚಿನ ನೆರವೇರಿಕೆಯನ್ನು ಪಡೆಯುತ್ತಿವೆ ಎಂಬುದನ್ನು ಗಮನಿಸುವುದು ಗಂಭೀರವಾದ ಸಂಗತಿಯಾಗಿದೆ. ಹೌದು, ನಮ್ಮ ಸಮಯದಲ್ಲಿ ಈ ಭೂಮಿಯ ಮೇಲೆ ಆತ್ಮಿಕ ಕತ್ತಲು ಕವಿದಿದೆ. ಇಂಥ ಅಪಾಯಕರವಾದ ಸ್ಥಿತಿಯಲ್ಲಿ ಆತ್ಮಿಕ ಬೆಳಕು ಅತಿ ಮುಖ್ಯವಾದದ್ದಾಗಿದೆ. ಆದುದರಿಂದ ಕ್ರೈಸ್ತರು ಯೇಸುವಿನ ಈ ಬುದ್ಧಿವಾದವನ್ನು ಪಾಲಿಸಬೇಕು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.” (ಮತ್ತಾಯ 5:16) ನಂಬಿಗಸ್ತ ಕ್ರೈಸ್ತರು ದೀನರಿಗಾಗಿ ಕತ್ತಲಿನಲ್ಲಿ ಬೆಳಕನ್ನು ಪ್ರಕಾಶಿಸಿ, ಹೀಗೆ ಅವರು ಜೀವವನ್ನು ಗಳಿಸುವ ಅವಕಾಶವನ್ನು ಕೊಡಬಹುದು.—ಯೋಹಾನ 8:12.
ಇಸ್ರಾಯೇಲಿನಲ್ಲಿ ಅಂಧಕಾರದ ಸಮಯಗಳು
4. ಯೆಶಾಯನ ಪ್ರವಾದನಾತ್ಮಕ ಮಾತುಗಳು ಪ್ರಥಮವಾಗಿ ಯಾವಾಗ ನೆರವೇರಿದವು, ಆದರೆ ಅವನ ದಿನದಲ್ಲಿ ಆಗಲೇ ಯಾವ ಸ್ಥಿತಿಯು ಅಸ್ತಿತ್ವದಲ್ಲಿತ್ತು?
4 ಕತ್ತಲು ಭೂಮಿಯನ್ನು ಆವರಿಸುವುದರ ಕುರಿತಾದ ಯೆಶಾಯನ ಮಾತುಗಳು ಪ್ರಥಮವಾಗಿ ನೆರವೇರಿದ್ದು, ಯೆಹೂದವು ಧ್ವಂಸಗೊಂಡು ಅವಳ ಜನರು ಬಾಬೆಲಿನಲ್ಲಿ ಸೆರೆಯಲ್ಲಿದ್ದಾಗಲೇ. ಆದರೆ ಅದಕ್ಕಿಂತಲೂ ಮುಂಚೆ, ಯೆಶಾಯನ ಸ್ವಂತ ದಿನದಲ್ಲಿ ಆ ಜನಾಂಗದ ಹೆಚ್ಚಿನ ಭಾಗದ ಮೇಲೆ ಆಗಲೇ ಆತ್ಮಿಕ ಕತ್ತಲು ಕವಿದಿತ್ತು. ಈ ವಾಸ್ತವಾಂಶವು, ಅವನು ತನ್ನ ಸ್ವದೇಶದವರಿಗೆ ಹೀಗೆ ಉತ್ತೇಜಿಸುವಂತೆ ಪ್ರೇರಿಸಿತು: “ಯಾಕೋಬನ ಮನೆತನದವರೇ, ಬನ್ನಿರಿ, ಯೆಹೋವನ ಜ್ಞಾನಪ್ರಕಾಶದಲ್ಲಿ ನಡೆಯುವ!”—ಯೆಶಾಯ 2:5; 5:20.
5, 6. ಯೆಶಾಯನ ದಿನದಲ್ಲಿನ ಕತ್ತಲಿಗೆ ಯಾವ ಅಂಶಗಳು ಕಾರಣವಾಗಿದ್ದವು?
5 ಯೆಶಾಯನು “ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ, ಇವರ ಕಾಲದಲ್ಲಿ” ಯೆಹೂದದಲ್ಲಿ ಪ್ರವಾದಿಸಿದನು. (ಯೆಶಾಯ 1:1) ಅದು ರಾಜಕೀಯ ಗಲಭೆ, ಧಾರ್ಮಿಕ ಕಪಟತನ, ನ್ಯಾಯಸ್ಥಾನದಲ್ಲಿ ಭ್ರಷ್ಟಾಚಾರ, ಮತ್ತು ಬಡವರ ಮೇಲೆ ದಬ್ಬಾಳಿಕೆಯ ಪ್ರಕ್ಷುಬ್ದ ಸಮಯವಾಗಿತ್ತು. ಯೋತಾಮನಂತಹ, ನಂಬಿಗಸ್ತ ಅರಸರ ಆಳ್ವಿಕೆಯ ಸಮಯದಲ್ಲಿಯೂ ಬೆಟ್ಟಗಳ ಮೇಲೆ ಸುಳ್ಳು ದೇವರುಗಳ ಯಜ್ಞವೇದಿಗಳನ್ನು ನೋಡಬಹುದಿತ್ತು! ಮತ್ತು ಅಪನಂಬಿಗಸ್ತ ರಾಜರ ಸಮಯದಲ್ಲಾದರೊ ಪರಿಸ್ಥಿತಿಯು ಇನ್ನೂ ಕೆಟ್ಟದ್ದಾಗಿತ್ತು. ಉದಾಹರಣೆಗಾಗಿ, ದುಷ್ಟ ಅರಸನಾದ ಆಹಾಜನಂತೂ ಮೊಲೇಕನಿಗೆ ಸಂಸ್ಕಾರಬದ್ಧ ಯಜ್ಞವನ್ನು ಅರ್ಪಿಸುವಷ್ಟರ ಮಟ್ಟಿಗೂ ಮುಂದುವರಿದಿದ್ದನು. ಖಂಡಿತವಾಗಿಯೂ ಆ ದೇಶದಲ್ಲಿ ಕಾರ್ಗತ್ತಲು ಕವಿದಿತ್ತು!—2 ಅರಸುಗಳು 15:32-34; 16:2-4.
6 ಅಂತರಾಷ್ಟ್ರೀಯ ಸ್ಥಿತಿಯು ಸಹ ವಿಷಣ್ಣಕರವಾಗಿತ್ತು. ಮೋವಾಬ್, ಎದೋಮ್, ಮತ್ತು ಫಿಲಿಷ್ಟಿಯ ಜನಾಂಗಗಳು ಯೆಹೂದದ ಗಡಿಗಳಲ್ಲಿ ಬೆದರಿಕೆಯನ್ನು ಒಡ್ಡುತ್ತಿದ್ದವು. ಇಸ್ರಾಯೇಲ್‌ನ ಉತ್ತರ ರಾಜ್ಯವು ಯೆಹೂದದ ರಕ್ತ ಸಂಬಂಧಿಯಾಗಿದ್ದರೂ ಅದರ ಬದ್ಧವೈರಿಯಾಗಿತ್ತು. ಉತ್ತರ ದಿಕ್ಕಿನಲ್ಲಿ ಅರಾಮ್ಯ ಜನಾಂಗವು, ಯೆಹೂದದ ಶಾಂತಿಗೆ ಬೆದರಿಕೆಯನ್ನೊಡ್ಡುತ್ತಿತ್ತು. ಮತ್ತು ಕ್ರೂರ ಅಶ್ಶೂರವು ಇದಕ್ಕಿಂತಲೂ ಹೆಚ್ಚು ಅಪಾಯಕರವಾದದ್ದಾಗಿತ್ತು. ಅದು ಯಾವಾಗಲೂ ತನ್ನ ಅಧಿಕಾರವನ್ನು ವಿಸ್ತರಿಸಲು ಅವಕಾಶಗಳಿಗಾಗಿ ಹುಡುಕುತ್ತಾ ಇತ್ತು. ಯೆಶಾಯನು ಪ್ರವಾದಿಸುತ್ತಿದ್ದ ಕಾಲಾವಧಿಯಲ್ಲಿ, ಅಶ್ಶೂರವು ಇಸ್ರಾಯೇಲನ್ನು ಸ್ವಾಧೀನಪಡಿಸಿ, ಯೆಹೂದವನ್ನು ನಾಶಮಾಡುವುದರಲ್ಲಿತ್ತು. ಮತ್ತು ಒಂದು ಕಾಲದಲ್ಲಿ ಯೆರೂಸಲೇಮನ್ನು ಬಿಟ್ಟು ಯೆಹೂದದ ಪ್ರತಿಯೊಂದು ನಗರವು ಅಶ್ಶೂರದ ಸ್ವಾಧೀನದಲ್ಲಿತ್ತು.—7. ಇಸ್ರಾಯೇಲ್ ಮತ್ತು ಯೆಹೂದವು ಯಾವ ಹಾದಿಯನ್ನು ಆರಿಸಿಕೊಂಡರು, ಮತ್ತು ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?
7 ದೇವರ ಒಡಂಬಡಿಕೆಯ ಜನರು ಇಂಥ ವಿಪತ್ತುಗಳಿಂದ ಬಾಧಿಸಲ್ಪಟ್ಟರು ಯಾಕೆಂದರೆ ಇಸ್ರಾಯೇಲ್ ಮತ್ತು ಯೆಹೂದವು ಆತನಿಗೆ ದ್ರೋಹ ಮಾಡಿದ್ದವು. ಜ್ಞಾನೋಕ್ತಿ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವವರಂತೆ, ಅವರು ‘ಕತ್ತಲ ಹಾದಿಗಳನ್ನು ಹಿಡಿಯಬೇಕೆಂದು ಧರ್ಮಮಾರ್ಗಗಳನ್ನು ತೊರೆದುಬಿಟ್ಟರು.’ (ಜ್ಞಾನೋಕ್ತಿ 2:13) ಯೆಹೋವನಿಗೆ ತನ್ನ ಜನರ ಮೇಲೆ ಸಿಟ್ಟುಬಂದರೂ, ಆತನು ಅವರನ್ನು ಸಂಪೂರ್ಣವಾಗಿ ತೊರೆದುಬಿಡಲಿಲ್ಲ. ಅದಕ್ಕೆ ಬದಲು, ಆ ಜನಾಂಗದಲ್ಲಿ ಯೆಹೋವನನ್ನು ನಂಬಿಗಸ್ತಿಕೆಯಿಂದ ಇನ್ನೂ ಪ್ರಯತ್ನಿಸುತ್ತಿದ್ದ ವ್ಯಕ್ತಿಗಳಿಗೆ ಆತ್ಮಿಕ ಬೆಳಕನ್ನು ಕೊಡಲಿಕ್ಕಾಗಿ ಆತನು ಯೆಶಾಯ ಮತ್ತು ಇತರ ಪ್ರವಾದಿಗಳನ್ನು ಕಳುಹಿಸಿದನು. ಈ ಪ್ರವಾದಿಗಳ ಮೂಲಕ ಒದಗಿಸಲ್ಪಡುತ್ತಿದ್ದ ಬೆಳಕು ಖಂಡಿತವಾಗಿಯೂ ಅಮೂಲ್ಯವಾದದ್ದಾಗಿತ್ತು. ಅದು ಜೀವದಾಯಕವಾಗಿತ್ತು.
ಇಂದು—ಅಂಧಕಾರದ ಸಮಯಗಳು
8, 9. ಇಂದು ಲೋಕದ ಕತ್ತಲೆಗೆ ಕಾರಣವಾಗಿರುವ ಅಂಶಗಳು ಯಾವುವು?
8 ಯೆಶಾಯನ ದಿನದಲ್ಲಿದ್ದ ಸನ್ನಿವೇಶವು ಮತ್ತು ಇಂದು ಇರುವಂಥ ಪರಿಸ್ಥಿತಿಗಳಲ್ಲಿ ತುಂಬ ಹೋಲಿಕೆಗಳಿವೆ. ನಮ್ಮ ಸಮಯದಲ್ಲಿ ಮಾನವ ನಾಯಕರು, ಯೆಹೋವನನ್ನು ಮತ್ತು ಆತನ ಸಿಂಹಾಸನಾರೂಢನಾದ ಯೇಸು ಕ್ರಿಸ್ತನನ್ನು ತಿರಸ್ಕರಿಸಿದ್ದಾರೆ. (ಕೀರ್ತನೆ 2:2, 3) ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ತಮ್ಮ ಹಿಂಡುಗಳಿಗೆ ಮೋಸಮಾಡಿದ್ದಾರೆ. ತಾವು ದೇವರ ಸೇವೆಯನ್ನು ಮಾಡುತ್ತೇವೆಂದು ಅಂತಹ ಮುಖಂಡರು ಹೇಳುತ್ತಾರೆ, ಆದರೆ ವಾಸ್ತವದಲ್ಲಿ ಅವರಲ್ಲಿ ಹೆಚ್ಚಿನವರು ಈ ಲೋಕದ ದೇವರುಗಳಿಗೆ, ಅಂದರೆ ರಾಷ್ಟ್ರೀಯತೆ, ಮಿಲಿಟರಿವಾದ, ಐಶ್ವರ್ಯ, ಮತ್ತು ಗಣ್ಯ ವ್ಯಕ್ತಿಗಳಿಗೆ ಹೆಚ್ಚು ಒತ್ತಾಸೆಯನ್ನು ಕೊಡುತ್ತಾರೆ. ಮತ್ತು ಅವರು ಕಲಿಸುತ್ತಿರುವ ವಿಧರ್ಮಿ ಬೋಧನೆಗಳ ಬಗ್ಗೆಯಂತೂ ಹೇಳಬೇಕಾಗಿಲ್ಲ.
9 ಒಂದಾದ ಬಳಿಕ ಇನ್ನೊಂದು ಸ್ಥಳದಲ್ಲಿ ಕ್ರೈಸ್ತಪ್ರಪಂಚದ ಧರ್ಮಗಳು, ಒಂದು ನಿರ್ದಿಷ್ಟ ಕುಲಕ್ಕೆ ಸೇರಿರುವ ಜನರನ್ನು ನಿರ್ನಾಮಮಾಡುವ ಮತ್ತು ಮೈನಡುಗಿಸುವಂತಹ ಕೃತ್ಯಗಳನ್ನು ನಡೆಸಲಾಗುವ ಯುದ್ಧಗಳಲ್ಲಿ ಮತ್ತು ಆಂತರಿಕ ಕಲಹದಲ್ಲಿ ಸೇರಿರುತ್ತವೆ. ಅಷ್ಟುಮಾತ್ರವಲ್ಲದೆ, ಬೈಬಲ್ ಆಧಾರಿತ ನೈತಿಕತೆಯ ವಿಷಯದಲ್ಲಿ ಒಂದು ನಿಲುವನ್ನು ತೆಗೆದುಕೊಳ್ಳುವ ಬದಲಿಗೆ ಹೆಚ್ಚಿನ ಚರ್ಚುಗಳು, ವ್ಯಭಿಚಾರ ಮತ್ತು ಸಲಿಂಗಿಕಾಮದಂತಹ ಅನೈತಿಕ ಕೆಲಸಗಳನ್ನು ನೋಡಿಯೂ ನೋಡದವರಂತೆ ಇರುತ್ತಾರೆ ಇಲ್ಲವೇ ಸಕ್ರಿಯವಾಗಿ ಬೆಂಬಲಿಸುತ್ತಾರೆ. ಬೈಬಲ್ ಮಟ್ಟಗಳನ್ನು ಈ ರೀತಿಯಲ್ಲಿ ತಿರಸ್ಕರಿಸಿರುವುದರಿಂದ, ಕ್ರೈಸ್ತಪ್ರಪಂಚದ ಹಿಂಡುಗಳು, ಪ್ರಾಚೀನ ಕೀರ್ತನೆಗಾರನು ತಿಳಿಸಿದಂತಹ ರೀತಿಯ ಜನರಂತಾಗಿದ್ದಾರೆ: “ಇವರು ಬುದ್ಧಿಹೀನರೂ ವಿವೇಕಶೂನ್ಯರೂ ಆಗಿ ಅಂಧಕಾರದಲ್ಲಿ ಅಲೆಯುತ್ತಾರೆ.” (ಕೀರ್ತನೆ 82:5) ಪ್ರಾಚೀನ ಯೆಹೂದದಂತೆ, ಕ್ರೈಸ್ತಪ್ರಪಂಚವು ನಿಜವಾಗಿಯೂ ಗಾಢ ಅಂಧಕಾರದಲ್ಲಿ ಮುಳುಗಿದೆ.—ಪ್ರಕಟನೆ 8:12.
10. ಇಂದು ಕತ್ತಲಿನಲ್ಲಿ ಬೆಳಕು ಹೇಗೆ ಪ್ರಕಾಶಿಸುತ್ತದೆ, ಮತ್ತು ದೀನರು ಹೇಗೆ ಪ್ರಯೋಜನ ಹೊಂದುತ್ತಾರೆ?
10 ಇಂಥ ಕತ್ತಲಿನ ನಡುವೆ, ದೀನರಿಗೋಸ್ಕರ ಯೆಹೋವನು ಬೆಳಕನ್ನು ಪ್ರಕಾಶಿಸುತ್ತಿದ್ದಾನೆ. ಇದಕ್ಕಾಗಿ ಅವನು ಭೂಮಿಯ ಮೇಲಿರುವ ತನ್ನ ಅಭಿಷಿಕ್ತ ಸೇವಕರನ್ನು, “ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು” ಉಪಯೋಗಿಸುತ್ತಿದ್ದಾನೆ ಮತ್ತು ಇವರು “ಲೋಕದೊಳಗೆ ಹೊಳೆಯುವ ಜ್ಯೋತಿರ್ಮಂಡಲಗಳಂತೆ” ಇದ್ದಾರೆ. (ಮತ್ತಾಯ 24:45; ಫಿಲಿಪ್ಪಿ 2:16) ಆ ಆಳು ವರ್ಗವು, ದೇವರ ವಾಕ್ಯವಾದ ಬೈಬಲಿನ ಮೇಲೆ ಆಧಾರಿಸಲ್ಪಟ್ಟಿರುವ ಆತ್ಮಿಕ ಬೆಳಕನ್ನು ಪ್ರತಿಬಿಂಬಿಸುತ್ತದೆ ಮತ್ತು ಲಕ್ಷಾಂತರ ಮಂದಿ “ಬೇರೆ ಕುರಿ”ಗಳೆಂಬ ಸಂಗಾತಿಗಳು ಅದನ್ನು ಬೆಂಬಲಿಸುತ್ತಾರೆ. (ಯೋಹಾನ 10:16) ಈ ಕತ್ತಲು ತುಂಬಿರುವ ಲೋಕದಲ್ಲಿ, ಅಂತಹ ಬೆಳಕು ದೀನರಿಗೆ ನಿರೀಕ್ಷೆಯನ್ನು ಕೊಡುತ್ತದೆ, ದೇವರೊಂದಿಗೆ ಒಂದು ಸಂಬಂಧವನ್ನು ಇಟ್ಟುಕೊಳ್ಳಲು ಸಹಾಯಮಾಡುತ್ತದೆ, ಮತ್ತು ಆತ್ಮಿಕತೆಗೆ ಅಪಾಯವನ್ನೊಡ್ಡುವಂಥ ಯಾವುದೇ ವಿಷಯಗಳಿಂದ ದೂರವಿರಲು ಸಹಾಯಮಾಡುತ್ತದೆ. ಅದು ಅಮೂಲ್ಯವಾದದ್ದೂ, ಜೀವದಾಯಕವೂ ಆಗಿದೆ.
“ನಿನ್ನ ನಾಮವನ್ನು ಮಹಿಮೆಗೊಳಿಸುವೆನು”
11. ಯೆಶಾಯನ ದಿನದಲ್ಲಿ ಯೆಹೋವನು ಯಾವ ರೀತಿಯ ಮಾಹಿತಿಯನ್ನು ಲಭ್ಯಗೊಳಿಸಿದನು?
11 ಯೆಶಾಯನು ಜೀವಿಸುತ್ತಿದ್ದ ಕತ್ತಲಿನ ದಿನಗಳಲ್ಲಿ ಮತ್ತು ತದನಂತರ ಬಬಿಲೋನ್ಯದವರು ಯೆಹೋವನ ಜನಾಂಗವನ್ನು ಸೆರೆವಾಸಕ್ಕೆ ಕೊಂಡೊಯ್ದ ಹೆಚ್ಚು ಕತ್ತಲಿನ ದಿನಗಳಲ್ಲಿ, ಯೆಹೋವನು ಯಾವ ರೀತಿಯ ಮಾರ್ಗದರ್ಶನವನ್ನು ಕೊಟ್ಟನು? ನೈತಿಕ ಮಾರ್ಗದರ್ಶನವನ್ನು ಕೊಡುವುದರೊಂದಿಗೆ, ತನ್ನ ಜನರಿಗೆ ಸಂಬಂಧಿಸುವ ಉದ್ದೇಶಗಳನ್ನು ತಾನು ಹೇಗೆ ಪೂರೈಸುವೆನು ಎಂಬುದನ್ನು ಆತನು ಮುಂಚಿತವಾಗಿಯೇ ಸ್ಪಷ್ಟವಾಗಿ ತಿಳಿಸಿದನು. ಉದಾಹರಣೆಗಾಗಿ ಯೆಶಾಯ 25ರಿಂದ 27ನೆಯ ಅಧ್ಯಾಯಗಳಲ್ಲಿರುವ ಅದ್ಭುತವಾದ ಪ್ರವಾದನೆಗಳನ್ನು ಪರಿಗಣಿಸಿರಿ. ಆ ಅಧ್ಯಾಯಗಳಲ್ಲಿನ ಮಾತುಗಳು, ಯೆಹೋವನು ಆ ಸಮಯದಲ್ಲಿ ಸಂಗತಿಗಳನ್ನು ಹೇಗೆ ನಿರ್ವಹಿಸಿದನು ಮತ್ತು ಇಂದು ಹೇಗೆ ನಿರ್ವಹಿಸುತ್ತಿದ್ದಾನೆಂಬುದನ್ನು ಸೂಚಿಸುತ್ತವೆ.
12. ಯೆಶಾಯನು ಯಾವ ಹೃತ್ಪೂರ್ವಕ ಅಭಿವ್ಯಕ್ತಿಯನ್ನು ಮಾಡುತ್ತಾನೆ?
12 ಪ್ರಥಮವಾಗಿ, ಯೆಶಾಯನು ಘೋಷಿಸುವುದು: “ಯೆಹೋವನೇ, ನೀನೇ ನನ್ನ ದೇವರು; . . . ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಗೊಳಿಸುವೆನು.” ಎಷ್ಟೊಂದು ಹೃತ್ಪೂರ್ವಕವಾದ ಸ್ತುತಿಯ ಅಭಿವ್ಯಕ್ತಿ! ಆದರೆ ಅಂಥ ಪ್ರಾರ್ಥನೆಯನ್ನು ಹೇಳುವಂತೆ ಆ ಪ್ರವಾದಿಯನ್ನು ಯಾವುದು ಪ್ರಚೋದಿಸಿತು? ಒಂದು ಮುಖ್ಯ ಅಂಶವನ್ನು ಅದೇ ವಚನದಲ್ಲಿ ತಿಳಿಸಲಾಗಿದೆ. ಅದು ಹೇಳುವುದು: “ನೀನು ಸತ್ಯಪ್ರಾಮಾಣಿಕತೆಗಳನ್ನು ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ ಅದ್ಭುತಗಳನ್ನು ನಡಿಸಿ”ದ್ದೀ.—ಯೆಶಾಯ 25:1.
13. (ಎ) ಯಾವ ಜ್ಞಾನವು, ಯೆಹೋವನ ಕಡೆಗೆ ಯೆಶಾಯನಿಗಿದ್ದ ಗಣ್ಯತೆಯನ್ನು ಹೆಚ್ಚಿಸಿತು? (ಬಿ) ನಾವು ಯೆಶಾಯನ ಮಾದರಿಯಿಂದ ಏನನ್ನು ಕಲಿಯಬಲ್ಲೆವು?
13 ಯೆಶಾಯನ ದಿನದೊಳಗೆ ಯೆಹೋವನು ಇಸ್ರಾಯೇಲಿಗಾಗಿ ಎಷ್ಟೋ ಅದ್ಭುತ ಸಂಗತಿಗಳನ್ನು ಮಾಡಿದ್ದನು, ಮತ್ತು ಇವುಗಳನ್ನು ಬರವಣಿಗೆಯಲ್ಲಿ ಹಾಕಲಾಗಿತ್ತು. ಯೆಶಾಯನು ಈ ಬರವಣಿಗೆಗಳೊಂದಿಗೆ ಪರಿಚಿತನಾಗಿದ್ದನೆಂಬುದು ವ್ಯಕ್ತ. ಉದಾಹರಣೆಗಾಗಿ, ಯೆಹೋವನು ತನ್ನ ಜನರನ್ನು ಐಗುಪ್ತದ ದಾಸತ್ವದಿಂದ ಹೊರತಂದು, ಕೆಂಪು ಸಮುದ್ರದ ಬಳಿ ಫರೋಹನ ಸೇನೆಯ ಕೋಪದಿಂದ ಪಾರುಗೊಳಿಸಿದ್ದನೆಂಬುದು ಅವನಿಗೆ ತಿಳಿದಿತ್ತು. ಯೆಹೋವನು ತನ್ನ ಜನರನ್ನು ಅರಣ್ಯದ ದಾರಿಯಿಂದ ನಡೆಸಿ, ಅವರನ್ನು ವಾಗ್ದತ್ತ ದೇಶದೊಳಗೆ ತಂದಿದ್ದನೆಂದು ಅವನಿಗೆ ತಿಳಿದಿತ್ತು. (ಕೀರ್ತನೆ 136:1, 10-26) ಅಂಥ ಐತಿಹಾಸಿಕ ವೃತ್ತಾಂತಗಳು, ಯೆಹೋವ ದೇವರು ನಂಬಿಗಸ್ತನೂ ವಿಶ್ವಾಸಾರ್ಹನೂ ಆಗಿದ್ದಾನೆಂಬುದನ್ನು ತೋರಿಸಿದವು. ಆತನ ‘ಸಂಕಲ್ಪಗಳು,’ ಅಂದರೆ ಆತನು ಉದ್ದೇಶಿಸುವಂಥದ್ದೆಲ್ಲವೂ ನೆರವೇರುತ್ತವೆ. ದೈವಿಕವಾಗಿ ಒದಗಿಸಲ್ಪಟ್ಟಿರುವ ನಿಷ್ಕೃಷ್ಟ ಜ್ಞಾನವು, ಯೆಶಾಯನಿಗೆ ಬೆಳಕಿನಲ್ಲಿ ನಡೆಯುತ್ತಾ ಇರುವಂತೆ ಬಲಪಡಿಸಿತು. ಹೀಗೆ, ಅವನು ನಮಗೋಸ್ಕರ ಒಂದು ಉತ್ತಮ ಮಾದರಿಯಾಗಿದ್ದನು. ನಾವು ದೇವರ ಲಿಖಿತ ವಾಕ್ಯವನ್ನು ಜಾಗರೂಕತೆಯಿಂದ ಅಭ್ಯಾಸಮಾಡುವಲ್ಲಿ ಮತ್ತು ನಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳುವಲ್ಲಿ, ನಾವು ಕೂಡ ಆ ಬೆಳಕಿನಲ್ಲಿ ಉಳಿಯುವೆವು.—ಕೀರ್ತನೆ 119:105; 2 ಕೊರಿಂಥ 4:6.
ಒಂದು ದುರ್ಗವು ನಾಶಗೊಳಿಸಲ್ಪಡುತ್ತದೆ
14. ಒಂದು ನಗರದ ಕುರಿತಾಗಿ ಏನು ಮುಂತಿಳಿಸಲ್ಪಟ್ಟಿದೆ, ಮತ್ತು ಅದು ಯಾವ ನಗರವಾಗಿದ್ದಿರಬಹುದು?
14 ದೇವರ ಸಂಕಲ್ಪದ ಒಂದು ಉದಾಹರಣೆಯನ್ನು ಯೆಶಾಯ 25:2ರಲ್ಲಿ ನೋಡಸಾಧ್ಯವಿದೆ: “ನೀನು ದುರ್ಗವನ್ನು [“ನಗರವನ್ನು,” NW] ನಾಶಪಡಿಸಿ ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಬಾರದ ಹಾಳೂರನ್ನಾಗಿಯೂ ಮಾಡಿದ್ದೀ.” ಈ ನಗರವು ಏನಾಗಿದೆ? ಯೆಶಾಯನು ಪ್ರವಾದನಾತ್ಮಕವಾಗಿ ಬಾಬೆಲಿನ ಕುರಿತಾಗಿ ಮಾತಾಡುತ್ತಿದ್ದಿರಬಹುದು. ಮತ್ತು ಬಾಬೆಲು ಕೇವಲ ಕಲ್ಲುಗಳ ರಾಶಿಯಾಗಿ ಬಿದ್ದ ಸಮಯವು ಬಂದೇ ಬಂತು.
15. ಇಂದು ಯಾವ “ಮಹಾ ನಗರಿಯು” ಅಸ್ತಿತ್ವದಲ್ಲಿದೆ, ಮತ್ತು ಅದಕ್ಕೆ ಏನಾಗಲಿದೆ?
15 ಯೆಶಾಯನಿಂದ ತಿಳಿಸಲ್ಪಟ್ಟಿರುವ ನಗರಕ್ಕೆ ಇಂದು ಯಾವುದೇ ಪ್ರತಿರೂಪವಿದೆಯೊ? ಹೌದು, ಇದೆ. ಪ್ರಕಟನೆಯ ಪುಸ್ತಕವು, ‘ಭೂರಾಜರ ಮೇಲೆ ಅಧಿಕಾರ ಹೊಂದಿರುವ ಮಹಾನಗರಿಯ’ ಕುರಿತಾಗಿ ಮಾತಾಡುತ್ತದೆ. (ಪ್ರಕಟನೆ 17:18) ಆ ಮಹಾನಗರಿಯು “ಮಹಾ ಬಾಬೆಲ್,” ಸುಳ್ಳು ಧರ್ಮದ ಲೋಕವ್ಯಾಪಕ ಸಾಮ್ರಾಜ್ಯ ಆಗಿದೆ. (ಪ್ರಕಟನೆ 17:5, NW) ಇಂದು ಮಹಾ ಬಾಬೆಲಿನ ಮುಖ್ಯ ಭಾಗವು, ಕ್ರೈಸ್ತಪ್ರಪಂಚವಾಗಿದೆ. ಮತ್ತು ಅದರ ಪಾದ್ರಿವರ್ಗವು, ಯೆಹೋವನ ಜನರ ರಾಜ್ಯ ಸಾರುವಿಕೆಯ ಕೆಲಸವನ್ನು ವಿರೋಧಿಸುವುದರಲ್ಲಿ ಮುಂದಾಳತ್ವವನ್ನು ವಹಿಸುತ್ತದೆ. (ಮತ್ತಾಯ 24:14) ಆದರೆ ಪ್ರಾಚೀನ ಬಾಬೆಲಿನಂತೆ, ಮಹಾ ಬಾಬೆಲು ಸಹ ಬೇಗನೆ ನಾಶಗೊಳಿಸಲ್ಪಡುವುದು. ಅದು ಇನ್ನೆಂದಿಗೂ ಮೇಲೇಳದು.
16, 17. ಪ್ರಾಚೀನ ಹಾಗೂ ಆಧುನಿಕ ಸಮಯದಲ್ಲಿ ಯೆಹೋವನ ಶತ್ರುಗಳು ಆತನನ್ನು ಹೇಗೆ ಘನಪಡಿಸಿದ್ದಾರೆ?
16 ಆ “ಪಟ್ಟಣದ” ಕುರಿತಾಗಿ ಯೆಶಾಯನು ಇನ್ನೇನನ್ನು ಮುಂತಿಳಿಸುತ್ತಾನೆ? ಯೆಹೋವನನ್ನು ಸಂಬೋಧಿಸುತ್ತಾ, ಯೆಶಾಯ 25:3) ಈ “ಭಯಂಕರ ಜನರ ಪಟ್ಟಣವು,” ಈ ಶತ್ರು ನಗರವು ಯೆಹೋವನನ್ನು ಹೇಗೆ ಘನಪಡಿಸುವುದು? ಬಾಬೆಲಿನ ಅತಿ ಬಲಿಷ್ಠ ರಾಜನಾದ ನೆಬೂಕದ್ನೆಚ್ಚರನಿಗೆ ಏನಾಯಿತೆಂಬುದನ್ನು ನೆನಪಿಸಿಕೊಳ್ಳಿ. ಅವನ ಸ್ವಂತ ಬಲಹೀನತೆಯನ್ನು ಪ್ರದರ್ಶಿಸಿದಂತಹ ವಿಚಾರಪ್ರೇರಕ ಅನುಭವದ ನಂತರ, ಅವನು ಯೆಹೋವನ ಮತ್ತು ಆತನ ಸರ್ವಶಕ್ತಿಯ ಮಹೋನ್ನತೆಯನ್ನು ಒಪ್ಪಿಕೊಳ್ಳಲೇಬೇಕಾಯಿತು. (ದಾನಿಯೇಲ 4:34, 35) ಯೆಹೋವನು ತನ್ನ ಶಕ್ತಿಯನ್ನು ಉಪಯೋಗಿಸುವಾಗ, ಆತನ ಶತ್ರುಗಳು ಸಹ ಅವನ ಶಕ್ತಿಶಾಲಿ ಕಾರ್ಯಗಳನ್ನು ಒಪ್ಪಿಕೊಳ್ಳಲು ಒತ್ತಾಯಿಸಲ್ಪಡುವರು.
ಯೆಶಾಯನು ಹೇಳುವುದು: “ಬಲಿಷ್ಠವಾದ ಜನಾಂಗವು ನಿನ್ನನ್ನು ಘನಪಡಿಸುವದು, ಭಯಂಕರ ಜನರ ಪಟ್ಟಣವು ನಿನಗೆ ಅಂಜುವದು.” (17 ಮಹಾ ಬಾಬೆಲ್ ಎಂದಾದರೂ ಯೆಹೋವನ ಶಕ್ತಿಶಾಲಿ ಕಾರ್ಯಗಳನ್ನು ಒಪ್ಪಿಕೊಳ್ಳಲು ಒತ್ತಾಯಿಸಲ್ಪಟ್ಟಿತ್ತೊ? ಹೌದು. ಮೊದಲನೆಯ ವಿಶ್ವ ಯುದ್ಧದ ಸಮಯದಲ್ಲಿ ಯೆಹೋವನ ಅಭಿಷಿಕ್ತ ಸೇವಕರು ಹಿಂಸೆಯ ಎದುರಿನಲ್ಲೂ ಸಾರಬೇಕಾಯಿತು. 1918ರಲ್ಲಿ, ವಾಚ್‌ಟವರ್ ಸೊಸೈಟಿಯ ಮುಖ್ಯ ಅಧಿಕಾರಿಗಳು ಸೆರೆಮನೆಗೆ ಹಾಕಲ್ಪಟ್ಟಾಗ ಅವರು ಆತ್ಮಿಕ ಬಂಧನಕ್ಕೊಳಗಾದರು. ವ್ಯವಸ್ಥಿತವಾದ ಸಾರುವ ಕೆಲಸವು ನಿಂತೇಹೋಯಿತು. ಆನಂತರ 1919ರಲ್ಲಿ, ಯೆಹೋವನು ಅವರನ್ನು ಪುನಸ್ಸ್ಥಾಪಿಸಿ, ತನ್ನ ಆತ್ಮದ ಮೂಲಕ ಪುನರ್‌ಚೈತನ್ಯಗೊಳಿಸಿದನು. ಆಗ ಅವರು, ನಿವಾಸಿತ ಭೂಮಿಯಲ್ಲೆಲ್ಲ ಸುವಾರ್ತೆಯನ್ನು ಸಾರುವ ನೇಮಕವನ್ನು ಪೂರೈಸಲಿಕ್ಕಾಗಿ ಹೊರಟುನಿಂತರು. (ಮಾರ್ಕ 13:10) ಪ್ರಕಟನೆ ಪುಸ್ತಕದಲ್ಲಿ ಇದೆಲ್ಲವೂ ಮತ್ತು ಅವರ ವಿರೋಧಿಗಳ ಮೇಲೆ ಆಗುವ ಪರಿಣಾಮವನ್ನೂ ಪ್ರವಾದಿಸಲಾಗಿತ್ತು. ಈ ವಿರೋಧಿಗಳು “ಭಯಗ್ರಸ್ತರಾಗಿ ಪರಲೋಕ ದೇವರನ್ನು ಘನಪಡಿಸಿದರು.” (ಪ್ರಕಟನೆ 11:3, 7, 11-13) ಅವರೆಲ್ಲರೂ ಮತಾಂತರ ಹೊಂದಿದರೆಂದು ಇದರರ್ಥವಲ್ಲ. ಬದಲಾಗಿ, ಯೆಶಾಯನು ಮುಂತಿಳಿಸಿದಂತೆಯೇ, ಈ ಸಂದರ್ಭದಲ್ಲಿ ಯೆಹೋವನ ಶಕ್ತಿಯುತವಾದ ಕೆಲಸವನ್ನು ಅವರು ಅಂಗೀಕರಿಸುವಂತೆ ಒತ್ತಾಯಿಸಲ್ಪಟ್ಟರು.
“ದೀನರಿಗೆ ಕೋಟೆ”
18, 19. (ಎ) ವಿರೋಧಿಗಳು ಯೆಹೋವನ ಜನರ ಸಮಗ್ರತೆಯನ್ನು ಮುರಿಯುವುದರಲ್ಲಿ ಏಕೆ ಅಸಫಲರಾಗಿದ್ದಾರೆ? (ಬಿ) ‘ಭೀಕರರ ಉತ್ಸಾಹಗಾನವು ನಿಂತುಹೋಗುವುದು’ ಹೇಗೆ?
18 ಬೆಳಕಿನಲ್ಲಿ ನಡೆಯುವವರೊಂದಿಗೆ ಯೆಹೋವನ ದಯಾಪರ ವ್ಯವಹಾರಗಳ ಕಡೆಗೆ ಗಮನವನ್ನು ಸೆಳೆಯುತ್ತಾ, ಯೆಶಾಯನು ಯೆಹೋವನಿಗೆ ಹೇಳುವುದು: “ನೀನು ದೀನರಿಗೆ ಕೋಟೆ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣದುರ್ಗ, ಬಿಸಿಲಿಗೆ ನೆರಳು, ಭೀಕರರ ಶ್ವಾಸವು ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ. [ಮೇಘವು] ಒಣನೆಲದ ಕಾವನ್ನು ಆರಿಸುವಂತೆ ನೀನು ಅನ್ಯರ ಗದ್ದಲವನ್ನು ಅಣಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೋ ಹಾಗೆಯೇ ನಿನ್ನಿಂದ ಭೀಕರರ ಉತ್ಸಾಹಗಾನವು ನಿಂತುಹೋಗುವದು.”—ಯೆಶಾಯ 25:4, 5.
19 ಇಸವಿ 1919ರಿಂದಾರಂಭಿಸಿ ಪ್ರಜಾಪೀಡಕರು, ಸತ್ಯಾರಾಧಕರ ಸಮಗ್ರತೆಯನ್ನು ಮುರಿಯಲು ಸಾಧ್ಯವಿರುವುದೆಲ್ಲವನ್ನೂ ಪ್ರಯತ್ನಿಸಿದ್ದಾರೆ. ಆದರೆ ಅವರು ವಿಫಲರಾಗಿದ್ದಾರೆ. ಏಕೆ? ಏಕೆಂದರೆ ಯೆಹೋವನು ತನ್ನ ಜನರ ಭದ್ರಸ್ಥಾನ ಮತ್ತು ಆಶ್ರಯದುರ್ಗವಾಗಿದ್ದಾನೆ. ಹಿಂಸೆ ಎಂಬ ಸುಡುವ ಕಾವಿನಲ್ಲಿ ಆತನು ತಂಪಾದ ನೆರಳನ್ನು ಒದಗಿಸುತ್ತಾನೆ. ಮತ್ತು ವಿರೋಧವೆಂಬ ಬಿರುಗಾಳಿ ಮಳೆಯ ಎದುರಿನಲ್ಲಿ ಒಂದು ಗಟ್ಟಿಯಾದ ಗೋಡೆಯಂತೆ ನಿಲ್ಲುತ್ತಾನೆ. ದೇವರ ಬೆಳಕಿನಲ್ಲಿ ನಡೆಯುವವರಾಗಿರುವ ನಾವು, ‘ಭೀಕರರ ಉತ್ಸಾಹಗಾನವು ನಿಂತುಹೋಗುವ’ ಸಮಯಕ್ಕಾಗಿ ಭರವಸೆಯಿಂದ ಎದುರುನೋಡುತ್ತೇವೆ. ಹೌದು, ಯೆಹೋವನ ಶತ್ರುಗಳು ಇಲ್ಲದೇ ಹೋಗುವ ದಿನಕ್ಕಾಗಿ ನಾವು ಆತುರದಿಂದ ಕಾಯುತ್ತಿದ್ದೇವೆ.
20, 21. ಯೆಹೋವನು ಯಾವ ರೀತಿಯ ಔತಣವನ್ನು ಒದಗಿಸುತ್ತಾನೆ, ಮತ್ತು ಹೊಸ ಲೋಕದಲ್ಲಿನ ಆ ಔತಣದಲ್ಲಿ ಏನು ಸೇರಿರುವುದು?
20 ಯೆಹೋವನು ತನ್ನ ಸೇವಕರನ್ನು ಸಂರಕ್ಷಿಸುವುದಕ್ಕಿಂತಲೂ ಹೆಚ್ಚನ್ನು ಮಾಡುತ್ತಾನೆ. ಪ್ರೀತಿಯ ತಂದೆಯೋಪಾದಿ ಆತನು ಅವರಿಗೆ ಬೇಕಾದದ್ದನ್ನು ಒದಗಿಸುತ್ತಾನೆ. ತನ್ನ ಜನರನ್ನು 1919ರಲ್ಲಿ ಮಹಾ ಬಾಬೆಲಿನಿಂದ ಬಿಡುಗಡೆಮಾಡಿದ ನಂತರ, ಆತನು ಅವರಿಗಾಗಿ ಒಂದು ವಿಜಯದ ಔತಣವನ್ನು, ಅಂದರೆ ಆತ್ಮಿಕ ಆಹಾರದ ಹೇರಳವಾದ ಸರಬರಾಯಿಯನ್ನು ಏರ್ಪಡಿಸಿದನು. ಇದನ್ನು ಯೆಶಾಯ 25:6ರಲ್ಲಿ ಮುಂತಿಳಿಸಲಾಗಿತ್ತು. ಅಲ್ಲಿ ಹೀಗೆ ಹೇಳಲಾಗಿದೆ: “ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.” ಆ ಔತಣದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಪಡೆದದ್ದಕ್ಕಾಗಿ ನಾವೆಷ್ಟು ಧನ್ಯರು! (ಮತ್ತಾಯ 4:4) “ಯೆಹೋವನ ಮೇಜು” ನಿಜವಾಗಿಯೂ ತಿನ್ನಲಿಕ್ಕಾಗಿ ಒಳ್ಳೊಳ್ಳೆಯ ವಸ್ತುಗಳಿಂದ ತುಂಬಿಕೊಂಡಿದೆ. (1 ಕೊರಿಂಥ 10:21, NW) “ನಂಬಿಗಸ್ತನೂ ವಿವೇಕಿಯೂ ಆದ ಆಳಿನ” ಮೂಲಕ ನಮಗೆ ಆತ್ಮಿಕ ಅರ್ಥದಲ್ಲಿ ಬೇಕಾದದ್ದೆಲ್ಲವನ್ನು ಕೊಡಲಾಗುತ್ತದೆ.
21 ದೇವರು ಒದಗಿಸುವ ಈ ಔತಣದಲ್ಲಿ ಇನ್ನೂ ಹೆಚ್ಚಿನದ್ದು ಸೇರಿದೆ. ನಾವು ಈಗ ಆನಂದಿಸುತ್ತಿರುವ ಆತ್ಮಿಕ ಔತಣವು, ದೇವರ ವಾಗ್ದತ್ತ ಹೊಸ ಲೋಕದಲ್ಲಿ ಲಭ್ಯವಿರುವ ಹೇರಳವಾದ ಶಾರೀರಿಕ ಆಹಾರವನ್ನು ನೆನಪಿಗೆ ತರುತ್ತದೆ. ಆಗ, ಆ “ಸಾರವತ್ತಾದ ಮೃಷ್ಟಾನ್ನ”ದಲ್ಲಿ, ಸಮೃದ್ಧವಾದ ಭೌತಿಕ ಆಹಾರವು ಒಳಗೂಡಿರುವುದು. ಆ ಸಮಯದಲ್ಲಿ ಯಾರೂ ಶಾರೀರಿಕ ರೀತಿಯಲ್ಲಾಗಲಿ, ಆತ್ಮಿಕ ರೀತಿಯಲ್ಲಾಗಲಿ ಹಸಿವಿನಿಂದಿರುವ ಅಗತ್ಯವಿರುವುದಿಲ್ಲ. ಇದು, ಯೇಸುವಿನ ಸಾನ್ನಿಧ್ಯದ ‘ಸೂಚನೆಯ’ ಭಾಗವಾಗಿರುವುದೆಂದು ಮುಂತಿಳಿಸಲ್ಪಟ್ಟಿದ್ದ ‘ಬರಗಳ’ ಕಾರಣದಿಂದ ಇಂದು ನರಳುತ್ತಿರುವ ನಂಬಿಗಸ್ತರಾದ ಪ್ರಿಯ ವ್ಯಕ್ತಿಗಳಿಗೆ ಇದು ಎಂತಹ ಉಪಶಮನವಾಗಿರುವುದು! (ಮತ್ತಾಯ 24:3, 7) ಅವರಿಗೆ, ಕೀರ್ತನೆಗಾರನ ಮಾತುಗಳು ಸಹ ಸಾಂತ್ವನದಾಯಕವಾಗಿವೆ. ಅವನಂದದ್ದು: “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ; ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರಲಿ. ಹೊಲದಲ್ಲಿ ಕಾಯಿಪಲ್ಯದಂತೆ ಪಟ್ಟಣಗಳಲ್ಲಿ ಜನರು ಹೆಚ್ಚಲಿ.”—ಕೀರ್ತನೆ 72:16.
22, 23. (ಎ) ಯಾವ ‘ಮುಸುಕು’ ಅಥವಾ ‘ತೆರೆ’ಯನ್ನು ತೆಗೆದುಹಾಕಲಾಗುವುದು, ಮತ್ತು ಹೇಗೆ? (ಬಿ) ‘ಯೆಹೋವನ ಪ್ರಜೆಯ ಅವಮಾನವನ್ನು ತೊಲಗಿಸಲಾಗುವುದು’ ಹೇಗೆ?
22 ಹೆಚ್ಚು ಅದ್ಭುತವಾದ ಇನ್ನೊಂದು ವಾಗ್ದಾನಕ್ಕೆ ಈಗ ಕಿವಿಗೊಡಿರಿ. ಪಾಪ ಮತ್ತು ಮರಣವನ್ನು “ಮುಸುಕು” ಅಥವಾ ‘ತೆರೆಗೆ’ ಹೋಲಿಸುತ್ತಾ, ಯೆಶಾಯನು ಹೇಳುವುದು: “ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶೀಯರ ಮೇಲೆ ಹಾಕಿರುವ ತೆರೆಯನ್ನೂ ಇದೇ ಪರ್ವತದಲ್ಲಿ [ಯೆಹೋವನು] ನಾಶಮಾಡುವನು.” (ಯೆಶಾಯ 25:7) ಸ್ವಲ್ಪ ಆಲೋಚಿಸಿರಿ! ಮಾನವಕುಲದ ಮೇಲೆ ಉಸಿರುಗಟ್ಟಿಸುವಂತಹ ಭಾರವಾದ ಕಂಬಳಿಯೋಪಾದಿ ಹೊದಿಸಲ್ಪಟ್ಟಿರುವ ಪಾಪ ಮತ್ತು ಮರಣಗಳು ಇಲ್ಲದೇ ಹೋಗುವವು. ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು, ವಿಧೇಯ ಹಾಗೂ ನಂಬಿಗಸ್ತ ಮಾನವಕುಲಕ್ಕೆ ಸಂಪೂರ್ಣವಾಗಿ ಅನ್ವಯಿಸಲ್ಪಡುವ ಆ ದಿನಕ್ಕಾಗಿ ನಾವೆಷ್ಟು ಹಂಬಲಿಸುತ್ತೇವೆ!—ಪ್ರಕಟನೆ 21:3, 4.
23 ಆ ಮಹಿಮಾಭರಿತ ಸಮಯಕ್ಕೆ ಕೈತೋರಿಸುತ್ತಾ, ಪ್ರೇರಿತ ಪ್ರವಾದಿಯು ನಮಗೆ ಈ ಆಶ್ವಾಸನೆಯನ್ನು ಕೊಡುತ್ತಾನೆ: “[ದೇವರು] ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.” (ಯೆಶಾಯ 25:8) ನೈಸರ್ಗಿಕ ಕಾರಣಗಳಿಂದಾಗಿ ಯಾರೂ ಸಾಯದಿರುವರು, ಮತ್ತು ಒಬ್ಬ ಪ್ರಿಯ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಳ್ಳುವ ದುಃಖದಿಂದ ಯಾರೂ ಅಳದಿರುವರು. ಇದು ಎಷ್ಟೊಂದು ಒಳ್ಳೆಯ ಬದಲಾವಣೆ! ಅಲ್ಲದೆ, ದೇವರು ಮತ್ತು ಆತನ ಸೇವಕರು ದೀರ್ಘ ಸಮಯದಿಂದಲೂ ಸಹಿಸಿಕೊಂಡು ಬಂದಿರುವ ನಿಂದೆ ಮತ್ತು ಅಪಪ್ರಚಾರವು ಭೂಮಿಯ ಮೇಲೆ ಕೇಳಿಬರಲಿಕ್ಕಿಲ್ಲ. ಏಕಿಲ್ಲ? ಏಕೆಂದರೆ ಯೆಹೋವನು ಅವುಗಳ ಮೂಲವನ್ನು, ಅದನ್ನು ಆರಂಭಿಸಿದವನನ್ನು ಅಂದರೆ ಸುಳ್ಳಿನ ತಂದೆಯಾದ ಪಿಶಾಚನಾದ ಸೈತಾನನೊಂದಿಗೆ ಅವನ ಇಡೀ ಸಂತಾನವನ್ನೇ ತೆಗೆದುಹಾಕಲಿದ್ದಾನೆ.—ಯೋಹಾನ 8:44.
24. ಬೆಳಕಿನಲ್ಲಿ ನಡೆಯುವವರು, ತಮ್ಮ ಪರವಾಗಿ ಯೆಹೋವನು ನಡೆಸುವ ಶಕ್ತಿಶಾಲಿ ಕೆಲಸಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ?
24 ಯೆಹೋವನ ಶಕ್ತಿಯ ಅಂಥ ಪ್ರದರ್ಶನಗಳ ಕುರಿತಾಗಿ ಆಲೋಚಿಸುವಾಗ, ಬೆಳಕಿನಲ್ಲಿ ನಡೆಯುವವರು ಹೀಗೆ ಉದ್ಗರಿಸಲು ಪ್ರಚೋದಿಸಲ್ಪಡುತ್ತಾರೆ: “ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನೇ ಯೆಹೋವನು, ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ, ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು.” (ಯೆಶಾಯ 25:9) ಸ್ವಲ್ಪ ಸಮಯದಲ್ಲೇ, ನೀತಿವಂತ ಮಾನವಕುಲಕ್ಕೆ ಹರ್ಷಿಸಲು ಪ್ರತಿಯೊಂದು ಕಾರಣವಿರುವುದು. ಕತ್ತಲನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದು ಮತ್ತು ನಂಬಿಗಸ್ತ ಜನರು ನಿತ್ಯತೆಗೂ ಯೆಹೋವನ ಬೆಳಕಿನಲ್ಲಿ ಆನಂದಿಸುವರು. ಇದಕ್ಕಿಂತಲೂ ಮಹಿಮಾಭರಿತವಾದ ಯಾವುದೇ ನಿರೀಕ್ಷೆಯು ಇರಸಾಧ್ಯವೊ? ಖಂಡಿತವಾಗಿಯೂ ಇಲ್ಲ!
ನೀವು ವಿವರಿಸಬಲ್ಲಿರೊ?
• ಇಂದು ಬೆಳಕಿನಲ್ಲಿ ನಡೆಯುವುದು ಏಕೆ ಪ್ರಾಮುಖ್ಯವಾಗಿದೆ?
• ಯೆಶಾಯನು ಯೆಹೋವನ ನಾಮವನ್ನು ಏಕೆ ಮಹಿಮೆಗೊಳಿಸಿದನು?
• ದೇವರ ಜನರ ಸಮಗ್ರತೆಯನ್ನು ಶತ್ರುಗಳು ಎಂದೂ ಮುರಿಯಲು ಶಕ್ತರಾಗಲಿಕ್ಕಿಲ್ಲ ಏಕೆ?
• ಬೆಳಕಿನಲ್ಲಿ ನಡೆಯುವವರಿಗಾಗಿ ಯಾವ ಸಮೃದ್ಧ ಆಶೀರ್ವಾದಗಳು ಕಾದಿವೆ?
[ಅಧ್ಯಯನ ಪ್ರಶ್ನೆಗಳು]
[ಪುಟ 13ರಲ್ಲಿರುವ ಚಿತ್ರ]
ಯೆಹೂದದ ನಿವಾಸಿಗಳು ಮೋಲೆಕನಿಗೆ ಮಕ್ಕಳನ್ನು ಬಲಿಯರ್ಪಿಸುತ್ತಿದ್ದರು
[ಪುಟ 15ರಲ್ಲಿರುವ ಚಿತ್ರಗಳು]
ಯೆಹೋವನ ಶಕ್ತಿಶಾಲಿ ಕೃತ್ಯಗಳ ಕುರಿತಾಗಿ ಯೆಶಾಯನಿಗಿದ್ದ ತಿಳುವಳಿಕೆಯು, ಅವನು ಯೆಹೋವನ ನಾಮವನ್ನು ಕೊಂಡಾಡುವಂತೆ ನಡೆಸಿತು
[ಪುಟ 16ರಲ್ಲಿರುವ ಚಿತ್ರ]
ನೀತಿವಂತರು ಸದಾಕಾಲಕ್ಕೂ ಯೆಹೋವನ ಬೆಳಕಿನಲ್ಲಿ ಆನಂದಿಸುವರು