ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ?

ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ?

ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ?

ನೀವು ದೀಕ್ಷಾಸ್ನಾನಿತ ಕ್ರೈಸ್ತರಾಗಿರುವಲ್ಲಿ, ನಿಸ್ಸಂದೇಹವಾಗಿಯೂ ದೇವರ ಕಡೆಗಿರುವ ಪ್ರೀತಿಯಿಂದಲೇ ನೀವು ಆತನ ಚಿತ್ತವನ್ನು ಮಾಡುತ್ತೀರಿ. ಅಲ್ಲದೆ, ಶುಶ್ರೂಷೆಗೆ ನೀವು ನಿಮ್ಮನ್ನೇ ಮುಡಿಪಾಗಿಟ್ಟುಕೊಂಡಿರುತ್ತೀರಿ. ಯೇಸು ತನ್ನ ಹಿಂಬಾಲಕರೆಲ್ಲರಿಗೂ ಇತರರನ್ನು ಶಿಷ್ಯರನ್ನಾಗಿ ಮಾಡಬೇಕೆಂದು ಆಜ್ಞಾಪಿಸಿದನು. (ಮತ್ತಾಯ 28:​19, 20) ನೀವು ನಿಮ್ಮ ಕಾಲಮೇಲೆ ನಿಂತುಕೊಳ್ಳಲಿಕ್ಕಾಗಿ ಐಹಿಕ ಉದ್ಯೋಗದಲ್ಲಿರಬಹುದು ನಿಜ. ಆದರೆ, ಯೇಸುವಿನ ಹಿಂಬಾಲಕರೋಪಾದಿ ಹಾಗೂ ಯೆಹೋವನ ಸಾಕ್ಷಿಗಳೋಪಾದಿ ಮೊದಲಾಗಿ ನೀವು ಒಬ್ಬ ಕ್ರೈಸ್ತ ಶುಶ್ರೂಷಕರಾಗಿದ್ದೀರಿ. ಅಂದರೆ, ಜೀವಿತದಲ್ಲಿ ರಾಜ್ಯದ ಸಾಕ್ಷಿನೀಡುವಿಕೆಗೆ ನೀವು ಆದ್ಯತೆಯನ್ನು ಕೊಡುವವರಾಗಿರುತ್ತೀರಿ.​—ಮತ್ತಾಯ 24:14.

ನೀವು ಪ್ರಾಯಶಃ 19 ಅಥವಾ 20 ವರ್ಷದವರಾಗಿದ್ದೀರಿ. ಜೀವನದಲ್ಲಿ ಯಾವ ಮಾರ್ಗವನ್ನು ಬೆನ್ನಟ್ಟಬೇಕು ಎಂಬುದರ ಬಗ್ಗೆ ಬಹಳ ಯೋಚಿಸಿರಬಹುದು. ಮತ್ತು ನೀವು ನಿಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ತೂಗಿನೋಡುವ ಸಂದರ್ಭದಲ್ಲಿ, ಈ ನಿರ್ದಿಷ್ಟ ಬೆನ್ನಟ್ಟುವಿಕೆ ನನಗೆ ಸ್ವತೃಪ್ತಿಯನ್ನು ತರುತ್ತದೋ ಎಂಬುದು ಬಹಳ ಮಹತ್ತ್ವದ ಸಂಗತಿಯಾಗುವುದು ಸಹಜವೇ.

ತಾನು ಮಾಡಿದ ಆಯ್ಕೆಯ ಕುರಿತು ಡೆನ್ಮಾರ್ಕಿನಲ್ಲಿರುವ ಯಾರ್ನ್‌ ಏನು ಹೇಳುತ್ತಾನೆ ಎಂಬುದನ್ನು ಸ್ವಲ್ಪ ಪರಿಗಣಿಸಿರಿ. ತಾನು ಆರಿಸಿಕೊಂಡಿರುವ ಈ ವೃತ್ತಿಯು, “ಜೀವನದ ಅತ್ಯುತ್ತಮ ಮಾರ್ಗವಾಗಿದೆ. ಇದರಲ್ಲಿ ಬಹಳ ಮುಖ್ಯವಾದ ಕೆಲಸಕ್ಕೆ ಏಕಾಗ್ರತೆಯನ್ನು ಕೊಡಸಾಧ್ಯವಿದೆ” ಎಂದು ಯಾರ್ನ್‌ ಹೇಳುತ್ತಾನೆ. ಗ್ರೀಸಿನಲ್ಲಿ ವಾಸಿಸುವ ಇವಾ ಎಂಬ 31 ವರ್ಷ ಪ್ರಾಯದ ಮಹಿಳೆಯು ಹೇಳುವುದು: “ನನ್ನ ಸಮವಯಸ್ಕರ ಜೀವನವನ್ನೂ ನನ್ನ ಜೀವನವನ್ನೂ ಹೋಲಿಸಿ ನೋಡುವಾಗ, ನನ್ನ ಜೀವನಕ್ಕೆ ಅರ್ಥವಿದೆ, ಅದು ಹೆಚ್ಚು ಸಂತೃಪ್ತಿದಾಯಕವಾಗಿದೆ ಹಾಗೂ ಹೆಚ್ಚು ಭಾವೋತ್ತೇಜಕವಾಗಿದೆ.” ಇಷ್ಟೊಂದು ತೃಪ್ತಿಯನ್ನು ಕೊಡುವ ವೃತ್ತಿಯು ಯಾವುದಾಗಿರಸಾಧ್ಯವಿದೆ? ನೀವು ಹೇಗೆ ಇಂತಹ ವೃತ್ತಿಯನ್ನು ಆರಂಭಿಸಸಾಧ್ಯವಿದೆ?

ದೇವರು ನಿಮಗೆ ಮಾರ್ಗದರ್ಶನವನ್ನು ನೀಡುತ್ತಾನೋ?

ಜೀವನದಲ್ಲಿ ಯಾವ ವೃತ್ತಿಯನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದು ಬಹಳ ಕಷ್ಟಕರವಾಗಿರುತ್ತದೆ. ಕೆಲವರಿಗೆ ತಾವು ಏನು ಮಾಡಬೇಕೆಂಬುದನ್ನು ದೇವರು ಮಾರ್ಗದರ್ಶಿಸಿದರೆ ಚೆನ್ನಾಗಿರುತ್ತದೆ ಎಂದು ಅನಿಸುತ್ತದೆ.

ಮೋಶೆಯು ಮಿದ್ಯಾನ್ಯದಲ್ಲಿದ್ದಾಗ, ಯೆಹೋವನು ಅವನಿಗೆ ಐಗುಪ್ತ್ಯಕ್ಕೆ ಹೋಗುವಂತೆ ಮತ್ತು ಅಲ್ಲಿದ್ದ ಇಸ್ರಾಯೇಲ್ಯರನ್ನು ದಾಸತ್ವದಿಂದ ಬಿಡುಗಡೆಮಾಡುವಂತೆ ಹೇಳಿದನು. (ವಿಮೋಚನಕಾಂಡ 3:​1-10) ದೇವರ ದೂತನು ಗಿದ್ಯೋನನಿಗೆ ಕಾಣಿಸಿಕೊಂಡು, ಇಸ್ರಾಯೇಲ್ಯರನ್ನು ದಬ್ಬಾಳಿಕೆಯಿಂದ ಕಾಪಾಡುವಂತೆ ಅವನು ನೇಮಿಸಲ್ಪಟ್ಟಿದ್ದಾನೆಂದು ಹೇಳಿದನು. (ನ್ಯಾಯಸ್ಥಾಪಕರು 6:​11-14) ಇಸ್ರಾಯೇಲಿನ ಮುಂದಿನ ರಾಜನನ್ನಾಗಿ ದಾವೀದನನ್ನು ಅಭಿಷೇಕಿಸಬೇಕೆಂದು ದೇವರು ಸಮುವೇಲನಿಗೆ ಹೇಳಿದಾಗ, ದಾವೀದನು ಕುರಿಮೇಯಿಸುತ್ತಿದ್ದನು. (1 ಸಮುವೇಲ 16:​1-13) ಆದರೆ ಇಂದು ನಾವು ಇಂತಹ ರೀತಿಯಲ್ಲಿ ದೇವರಿಂದ ಮಾರ್ಗದರ್ಶಿಸಲ್ಪಡುವುದಿಲ್ಲ. ಅದಕ್ಕೆ ಬದಲಾಗಿ ನಾವು ವಿಷಯಗಳನ್ನು ತೂಗಿನೋಡಬೇಕು ಮಾತ್ರವಲ್ಲ, ನಮ್ಮ ದೇವದತ್ತ ಸಾಮರ್ಥ್ಯಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಬೇಕು ಎಂಬುದನ್ನು ನಿರ್ಧರಿಸಬೇಕು.

ಇಂದು ಯುವ ಕ್ರೈಸ್ತರಿಗಾಗಿ ‘ಕಾರ್ಯಕ್ಕೆ ನಡಿಸುವ ಮಹಾಸಂದರ್ಭವನ್ನು’ ಯೆಹೋವನು ಒದಗಿಸಿದ್ದಾನೆ. (1 ಕೊರಿಂಥ 16:9) ಅದು ಹೇಗೆ? ಕಳೆದ ಹತ್ತು ವರ್ಷಗಳಲ್ಲಿ, ಲೋಕದಾದ್ಯಂತ ರಾಜ್ಯ ಘೋಷಕರ ಸಂಖ್ಯೆ 21,25,000ದಿಂದ 60 ಲಕ್ಷಕ್ಕೇರಿದೆ. ಆತ್ಮಿಕ ಪೋಷಣೆಗಾಗಿ ಹಾಗೂ ಸುವಾರ್ತಾ ಸಾಕ್ಷಿನೀಡುವಿಕೆಯ ಭೌಗೋಲಿಕ ಕೆಲಸಕ್ಕಾಗಿ ಕೋಟ್ಯಂತರ ಬೈಬಲ್‌ಗಳು, ಪುಸ್ತಕಗಳು, ಬ್ರೋಷರುಗಳು, ಪತ್ರಿಕೆಗಳು ಹಾಗೂ ಟ್ರ್ಯಾಕ್ಟ್‌ಗಳನ್ನು ಒದಗಿಸಲು ಯಾರು ಸಹಾಯಮಾಡುತ್ತಾರೆ? ಈ ಆಶೀರ್ವದಿತ ಸುಯೋಗವನ್ನು ಲೋಕದಾದ್ಯಂತವಿರುವ ಬೆತೆಲ್‌ ಕುಟುಂಬದ ಸದಸ್ಯರು ಅನುಭವಿಸುತ್ತಿದ್ದಾರೆ.

ಒಂದು ಪ್ರಯೋಜನಕಾರಿಯಾದ ಜೀವನ

ಬೆತೆಲ್‌ ಅಂದರೆ “ದೇವರ ಮನೆ” ಎಂದರ್ಥ. ಮತ್ತು ವಾಚ್‌ ಟವರ್‌ ಸೊಸೈಟಿಯ ಮುಖ್ಯಕಾರ್ಯಾಲಯ ಹಾಗೂ ಬ್ರಾಂಚ್‌ ಆಫೀಸುಗಳಲ್ಲಿ ಸ್ವಯಂಸೇವಕರಾಗಿ ಕೆಲಸಮಾಡುತ್ತಿರುವ ಕ್ರೈಸ್ತರ ನಿವಾಸಸ್ಥಾನಗಳೇ ಈ ಬೆತೆಲ್‌ ಗೃಹಗಳಾಗಿವೆ. (ಆದಿಕಾಂಡ 28:​19) ಈಗಿರುವ ಬೆತೆಲ್‌ ಕುಟುಂಬಗಳನ್ನು, ‘ಜ್ಞಾನದಿಂದ’ ಕಟ್ಟಲ್ಪಟ್ಟು ಯೆಹೋವನ ಪ್ರೀತಿಯಲ್ಲಿ ಆಧಾರಿತವಾದ ಸುಸಂಸ್ಥಾಪಿತ ‘ಮನೆ’ವಾರ್ತೆಗೆ ಹೋಲಿಸಬಹುದು.​—ಜ್ಞಾನೋಕ್ತಿ 24:3.

ಬೆತೆಲ್‌ನ ವಾತಾವರಣದ ಬಗ್ಗೆ ಏನು ಹೇಳಸಾಧ್ಯವಿದೆ? ಎಸ್ಟೋನ್ಯದ ಬೆತೆಲ್‌ ಗೃಹದಲ್ಲಿರುವ 25 ವರ್ಷ ಪ್ರಾಯದ ಒಬ್ಬ ಸದಸ್ಯಳು ಹೇಳುವುದು: “ಎಲ್ಲ ಸಮಯದಲ್ಲೂ ಯೆಹೋವನ ಸ್ನೇಹಿತರ ಜೊತೆ ಒಡನಾಟವನ್ನು ಇಟ್ಟುಕೊಂಡಿರುವುದರಿಂದ ಸಿಗುವ ಸುಖವನ್ನು ನಾನು ಆಸ್ವಾದಿಸುತ್ತೇನೆ. ಇದು ಈಗಲೂ ನನ್ನ ಬೆತೆಲ್‌ ಸೇವೆಯ ಬಹುಮೂಲ್ಯ ಸಂಗತಿಯಾಗಿದೆ.”​—ಕೀರ್ತನೆ 15:​1, 2.

ಲೋಕವ್ಯಾಪಕವಾಗಿ ಸುಮಾರು 19,500 ಜನರು ಈ ಬೆತೆಲ್‌ ಸೇವೆಯ ಸುಯೋಗದಲ್ಲಿ ಆನಂದಿಸುತ್ತಿದ್ದಾರೆ. (ಕೀರ್ತನೆ 110:3) ಅಮೆರಿಕದಲ್ಲಿ ಬೆತೆಲ್‌ನಲ್ಲಿರುವವರಲ್ಲಿ ಸುಮಾರು 46 ಪ್ರತಿಶತದಷ್ಟು ಜನರು 19ರಿಂದ 29ರ ವರೆಗಿನ ವಯೋಮಿತಿಯುಳ್ಳವರಾಗಿದ್ದಾರೆ. ಯೆಶಾಯನಂತೆ ಇವರು “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದ್ದಾರೆ. (ಯೆಶಾಯ 6:8) ಯೆಶಾಯನು ಈಗಾಗಲೇ ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡು, ಸೇವೆಯ ಇನ್ನೂ ಹೆಚ್ಚಿನ ಸುಯೋಗಕ್ಕಾಗಿ ಸ್ವಇಚ್ಛೆಯಿಂದ ನೀಡಿಕೊಳ್ಳುತ್ತಿದ್ದನು. ಖಂಡಿತವಾಗಿಯೂ ಇದು ಜೀವನದಲ್ಲಿ ಕೆಲವೊಂದು ತ್ಯಾಗಗಳನ್ನು ಮಾಡುವುದನ್ನು ಅವಶ್ಯಪಡಿಸಿತು. ಬೆತೆಲ್‌ನಲ್ಲಿ ಸೇವೆಸಲ್ಲಿಸುವವರು ತಮ್ಮ ಮನೆ, ಗುರುತುಪರಿಚಯವಿರುವ ಸ್ಥಳ, ತಾಯಿ, ತಂದೆ, ಅಣ್ಣ, ಅಕ್ಕ ಹಾಗೂ ಸ್ನೇಹಿತರನ್ನು ಬಿಟ್ಟು ಬರುತ್ತಾರೆ. ಈ ತ್ಯಾಗಗಳು “ಸುವಾರ್ತೆಯ ನಿಮಿತ್ತ”ವಾಗಿ ಸ್ವಇಚ್ಛೆಯಿಂದ ಮಾಡಲ್ಪಡುತ್ತವೆ.​—ಮಾರ್ಕ 10:29, 30.

ಇದಕ್ಕೆ ಪ್ರತಿಯಾಗಿ ಬೆತೆಲ್‌ನಲ್ಲಿ ಎಂತಹ ಆತ್ಮಿಕ ಆಶೀರ್ವಾದದ ಸುರಿಮಳೆ ಸಿಗುತ್ತದೆ! ರಷ್ಯದಲ್ಲಿರುವ ಬೆತೆಲ್‌ ಕುಟುಂಬದ ಒಬ್ಬ ಯುವತಿಯು ಹೇಳುವುದು: “ತ್ಯಾಗವನ್ನು ಮಾಡುವುದರ ಮೂಲಕ ನಾವು ಜೀವನದಲ್ಲಿ ಬಹಳಷ್ಟನ್ನು ಕಲಿತುಕೊಳ್ಳಬಹುದು. ಇದು ಹೊಸ ಲೋಕದಲ್ಲಿ ಜೀವಿಸುವುದಕ್ಕೆ ಸಹಾಯಮಾಡುತ್ತದೆ. ನಾನು ನನ್ನ ಜೀವನದಲ್ಲಿ ಏನು ತ್ಯಾಗಮಾಡಿದ್ದೇನೋ ಅದಕ್ಕಿಂತಲೂ ನೂರುಪಟ್ಟು ಹೆಚ್ಚಾಗಿ ಯೆಹೋವನು ಆಶೀರ್ವದಿಸಿದ್ದಾನೆ.”​—ಮಲಾಕಿಯ 3:10.

ಬೆತೆಲ್‌ ಜೀವನ

ಬೆತೆಲ್‌ ಜೀವನವು ಹೇಗಿರುತ್ತದೆ? ಇಲ್ಲಿ ಜೀವನವು ಪ್ರಯೋಜನಕಾರಿಯೂ, ಸಂತೃಪ್ತಿದಾಯಕವೂ ಹಾಗೂ ಉತ್ತೇಜನದಾಯಕವೂ ಆಗಿದೆ ಎಂಬುದನ್ನು ಬೆತೆಲ್‌ ಕುಟುಂಬದಲ್ಲಿರುವ ಸದಸ್ಯರು ಒಪ್ಪಿಕೊಳ್ಳುತ್ತಾರೆ. 43 ವರ್ಷ ಪ್ರಾಯದ ಯೆನ್ಸ್‌ ಬೆತೆಲ್‌ ಸೇವೆಯಲ್ಲಿ ಆನಂದಿಸುತ್ತಾರೆ. ಏಕೆ? ಅವರು ಹೇಳುವುದು: “ಬಹಳ ಮುಖ್ಯವಾದ ಒಂದು ಕೆಲಸವನ್ನು ಮುಗಿಸುವುದಕ್ಕೆ ಪರಿಶ್ರಮಪಡುವುದರಲ್ಲಿ ನಾವು ಸಹ ಒಳಗೂಡಿದ್ದೇವೆ ಎಂಬ ಅನಿಸಿಕೆಯೇ ನನಗೆ ಆನಂದದ ಪುಳಕವನ್ನು ಉಂಟುಮಾಡುತ್ತದೆ. ಯೆಹೋವನ ಕೆಲಸದಲ್ಲಿರುವ ವ್ಯಾಪ್ತಿ ಹಾಗೂ ಮಹತ್ತ್ವವನ್ನು ನಾನು ಅರ್ಥಮಾಡಿಕೊಳ್ಳಶಕ್ತನಾಗಿದ್ದೇನೆ.”

ಸೋಮವಾರದಿಂದ ಶನಿವಾರದ ವರೆಗೆ, ಬೆತೆಲ್‌ ದಿನಚರಿಯು ಬೆಳಗ್ಗಿನ ಸಮಯದ ಆರಾಧನೆಯಿಂದ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೈಬಲಿನ ಬಗ್ಗೆ ಚರ್ಚೆಯನ್ನು ಮಾಡಲಾಗುತ್ತದೆ. ಇದನ್ನು ಒಬ್ಬ ಅನುಭವಸ್ಥ ಹಿರಿಯನು ನಿರ್ವಹಿಸುತ್ತಾನೆ. ಪ್ರತಿ ಸೋಮವಾರ ಸಂಜೆ ಕಾವಲಿನಬುರುಜು ಪತ್ರಿಕೆಯ ಕುಟುಂಬ ಅಭ್ಯಾಸವಿರುತ್ತದೆ. ಕೆಲವೊಮ್ಮೆ ಇದರ ನಂತರ ಬೆತೆಲ್‌ ಕುಟುಂಬಕ್ಕೆ ಸರಿಹೊಂದುವಂತಹ ಶಾಸ್ತ್ರವಚನಗಳ ಮೇಲಾಧಾರಿತವಾದ ಭಾಷಣವಿರುತ್ತದೆ.

ಒಬ್ಬ ವ್ಯಕ್ತಿಯು ಹೊಸದಾಗಿ ಬೆತೆಲ್‌ಗೆ ಬರುವಾಗ ಏನಾಗುತ್ತದೆ? ಇವರಿಗೆ ಬೆತೆಲ್‌ ಜೀವನದ ಬಗ್ಗೆ ತಿಳಿಸಲು, ಬೆತೆಲ್‌ ಕುಟುಂಬದಲ್ಲಿರುವ ಪ್ರೌಢ ಸಹೋದರರು ಬೆತೆಲ್‌ ಸೇವೆಯ ಹಲವಾರು ಅಂಶಗಳಿಗೆ ಸಂಬಂಧಿಸಿದ ಭಾಷಣಗಳನ್ನು ಕೊಡುತ್ತಾರೆ. ಬೆತೆಲ್‌ಗೆ ಬಂದು ಸೇರಿದ ಮೊದಲ ವರ್ಷದಲ್ಲಿ ಸುಮಾರು ವಾರಗಳ ತನಕ, ಈ ಹೊಸ ಸದಸ್ಯನು ಅತ್ಯುತ್ತಮವಾದ ಸಾಪ್ತಾಹಿಕ ಶಾಲೆಗೆ ಹಾಜರಾಗುತ್ತಾನೆ. ಇದು ಶಾಸ್ತ್ರಗಳ ಬಗ್ಗೆ ಅವನಿಗಿರುವ ಅಥವಾ ಅವಳಿಗಿರುವ ತಿಳುವಳಿಕೆಯನ್ನು ವಿಶಾಲಗೊಳಿಸುವುದಕ್ಕಾಗಿ ಏರ್ಪಡಿಸಲ್ಪಟ್ಟಿದೆ. ಹೊಸದಾಗಿ ಸೇರಿರುವವರು ವಿಶೇಷ ಬೈಬಲ್‌ ವಾಚನದ ಕಾರ್ಯಕ್ರಮದಲ್ಲಿ ಸಹ ಆನಂದಿಸುತ್ತಾರೆ. ಬೆತೆಲ್‌ಗೆ ಸೇರಿದ ಮೊದಲ ವರ್ಷದಲ್ಲಿ, ಹೊಸ ಸದಸ್ಯರು ಇಡೀ ಬೈಬಲನ್ನು ಓದುತ್ತಾರೆ.

ಈ ಎಲ್ಲ ತರಬೇತಿಯು ಅವರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ? ಹಾಂಗ್‌ಕಾಂಗ್‌ನ ಬೆತೆಲ್‌ ಕುಟುಂಬದವನಾದ ಜಾಷ್ವ ಹೇಳುವುದು: “ಯೆಹೋವನಿಗಾಗಿರುವ ನನ್ನ ಗಣ್ಯತೆಯನ್ನು ಬೆತೆಲ್‌ ಇನ್ನೂ ಆಳಗೊಳಿಸಿದೆ. ತಮ್ಮ ಬಹುಪಾಲು ಜೀವಮಾನವನ್ನು ಯೆಹೋವನ ಸೇವೆಗೆ ಮುಡಿಪಾಗಿಟ್ಟಿರುವ ಅನೇಕ ಅನುಭವಸ್ಥ ಸಹೋದರರೊಂದಿಗೆ ನಾನು ಒಡನಾಟವನ್ನು ಇಟ್ಟುಕೊಳ್ಳಸಾಧ್ಯವಿದೆ. ನಾನು ಬೆಳಗ್ಗಿನ ಆರಾಧನೆ ಮತ್ತು ಕುಟುಂಬ ಕಾವಲಿನಬುರುಜು ಪತ್ರಿಕೆಯ ಅಧ್ಯಯನದಂಥ ಆತ್ಮಿಕ ಕಾರ್ಯಕ್ರಮಗಳಲ್ಲಿ ಆನಂದಿಸುತ್ತೇನೆ. ಅಲ್ಲದೆ, ಇಲ್ಲಿರುವ ಕ್ರಮಬದ್ಧವಾದ ಹಾಗೂ ಸರಳವಾದ ಜೀವನವನ್ನು ಇಷ್ಟಪಡುತ್ತೇನೆ. ಇದು ಅನಾವಶ್ಯಕವಾದ ಕಳವಳದಿಂದ ನನ್ನನ್ನು ಮುಕ್ತಿಗೊಳಿಸುತ್ತದೆ. ವಿಷಯಗಳನ್ನು ಹೇಗೆ ಕ್ರಿಸ್ತೀಯ ವಿಧದಲ್ಲಿ ನಿರ್ವಹಿಸಬೇಕು ಎಂಬುದನ್ನು ಸಹ ನಾನು ಕಲಿಯುತ್ತಿದ್ದೇನೆ. ಇದು ಯಾವಾಗಲೂ ನನಗೆ ಪ್ರಯೋಜನವನ್ನು ತಂದಿದೆ.”

ಬೆತೆಲ್‌ ಕುಟುಂಬದಲ್ಲಿರುವ ಸದಸ್ಯರು, ಯಾವುದಕ್ಕಾಗಿ ಸ್ವಇಚ್ಛೆಯಿಂದ ತಮ್ಮನ್ನು ನೀಡಿಕೊಂಡಿದ್ದಾರೋ ಅದನ್ನು ಮಾಡುವುದಕ್ಕಾಗಿ ತಮ್ಮ ಸಮಯ ಹಾಗೂ ಪರಿಶ್ರಮವನ್ನು ವ್ಯಯಿಸುತ್ತಾರೆ. ಅಂದರೆ, ಬೆತೆಲ್‌ನಲ್ಲಿ ತಮಗೆ ಕೊಡಲ್ಪಟ್ಟಿರುವ ನೇಮಕವನ್ನು ನೋಡಿಕೊಳ್ಳುವುದಕ್ಕಾಗಿ ತಮ್ಮ ಶಾರೀರಿಕ ಮತ್ತು ಮಾನಸಿಕ ಶಕ್ತಿಸಾಮರ್ಥ್ಯಗಳನ್ನು ಉಪಯೋಗಿಸುತ್ತಾರೆ. ಇಲ್ಲಿ ಅನೇಕ ವಿವಿಧ ರೀತಿಯ ಕೆಲಸಗಳನ್ನು ಮಾಡಬೇಕಾಗಿರುತ್ತದೆ. ಕೆಲವರು ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸಮಾಡುತ್ತಾರೆ ಅಥವಾ ಪುಸ್ತಕ ಬೈಂಡ್‌ ಮಾಡುವ, ಪುಸ್ತಕಗಳನ್ನು ತಯಾರಿಸುವ ಸ್ಥಳದಲ್ಲಿ ಕೆಲಸಮಾಡುತ್ತಾರೆ. ಇವು, ಆಮೇಲೆ ಬೇರೆ ಬೇರೆ ಸಭೆಗಳಿಗೆ ರವಾನಿಸಲ್ಪಡುತ್ತವೆ. ಇತರರು ಅಡುಗೆಮನೆಯಲ್ಲಿ, ಡೈನಿಂಗ್‌ ರೂಮ್‌ನಲ್ಲಿ ಅಥವಾ ಲಾಂಡ್ರಿಯಲ್ಲಿ ಕೆಲಸಮಾಡುತ್ತಾರೆ. ಶುಚಿಮಾಡುವುದು, ಬೇಸಾಯಮಾಡುವುದು, ನಿರ್ಮಾಣದ ಕೆಲಸ ಮುಂತಾದ ನೇಮಕಗಳೂ ಇರುತ್ತವೆ. ಕೆಲವರಿಗೆ ಈ ಇಲಾಖೆಗಳಲ್ಲಿ ಉಪಯೋಗಿಸಲ್ಪಡುವ ಸಾಧನಗಳನ್ನು ನೋಡಿಕೊಳ್ಳುವ ಜವಾಬ್ದಾರಿಯಿರುತ್ತದೆ. ಇನ್ನೂ ಕೆಲವರು ಇತರರ ಆರೋಗ್ಯಾರೈಕೆ ಮಾಡುತ್ತಾರೆ ಅಥವಾ ಆಫೀಸು ಕೆಲಸವನ್ನು ಮಾಡುತ್ತಾರೆ. ಬೆತೆಲ್‌ನಲ್ಲಿರುವ ಎಲ್ಲ ನೇಮಕಗಳು ಕಷ್ಟಕರವಾಗಿರುವುದಾದರೂ ಆನಂದದಾಯಕವಾಗಿರುತ್ತವೆ ಮತ್ತು ಇದರಿಂದ ಬಹಳಷ್ಟು ಪ್ರಯೋಜನವೂ ದೊರೆಯುತ್ತದೆ. ಬೆತೆಲ್‌ನಲ್ಲಿ ಮಾಡಲ್ಪಡುವ ಕೆಲಸವು ವಿಶೇಷ ಸಂತೃಪ್ತಿಯನ್ನು ತರುತ್ತದೆ. ಏಕೆಂದರೆ, ಇದು ರಾಜ್ಯಾಭಿರುಚಿಗಳಿಗೆ ಒತ್ತಾಸೆಕೊಡುತ್ತದೆ ಮತ್ತು ದೇವರ ಕಡೆಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಟ್ಟ ಕೆಲಸವಾಗಿರುತ್ತದೆ.

ಬೆತೆಲ್‌ ಕುಟುಂಬದಲ್ಲಿರುವ ಸದಸ್ಯರನ್ನು ಬೇರೆ ಬೇರೆ ಸಭೆಗಳಿಗೆ ನೇಮಿಸಲಾಗುತ್ತದೆ. ಇಲ್ಲಿ ಅವರು ತಮ್ಮ ಕೆಲಸದ ಮೊದಲ ಫಲವನ್ನು ಅನುಭವಿಸುತ್ತಾರೆ. ಸಭಾಕೂಟಗಳಿಗೆ ಹಾಜರಾಗುವುದರಲ್ಲಿ ಹಾಗೂ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವುದರಲ್ಲಿ ಸಹ ಇವರು ಆನಂದಿಸುತ್ತಾರೆ. ಹೀಗೆ, ಬೆತೆಲ್‌ ಕುಟುಂಬದ ಸದಸ್ಯರು ಸ್ಥಳಿಕ ಸಭೆಗಳಲ್ಲಿರುವ ಸಹೋದರ ಸಹೋದರಿಯರೊಂದಿಗೆ ಬಲವಾದ ಬಂಧವನ್ನಿಟ್ಟುಕೊಂಡಿದ್ದಾರೆ.​—ಮಾರ್ಕ 10:​29, 30.

ಬ್ರಿಟನಿನ ಬೆತೆಲ್‌ ಸದಸ್ಯೆಯಾಗಿರುವ ರೀಟಾ ಹೇಳುವುದು: “ಈ ಸಭೆಗೆ ನಾನು ಆಭಾರಿಯಾಗಿದ್ದೇನೆ! ಕೂಟಗಳಲ್ಲಿ ಹಾಗೂ ಶುಶ್ರೂಷೆಯಲ್ಲಿ ಪ್ರೀತಿಯ ಸಹೋದರ ಸಹೋದರಿಯರು, ಮಕ್ಕಳು ಹಾಗೂ ವೃದ್ಧರನ್ನು ನೋಡುವಾಗ, ಅದು ನನ್ನ ನಂಬಿಕೆಯನ್ನು ಬಲಪಡಿಸುತ್ತದೆ! ಏನೇ ಆಗಲಿ, ಅವರು ಕೂಟಕ್ಕೆ ಹಾಜರಾಗುತ್ತಾರೆ ಹಾಗೂ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ನನ್ನ ಬೆತೆಲ್‌ ಸೇವೆಯಲ್ಲಿ ಇನ್ನೂ ಹೆಚ್ಚು ಹುರುಪಿನಿಂದ ಕೆಲಸಮಾಡಲು ಸಹಾಯಮಾಡುತ್ತದೆ.”

ಬೆತೆಲ್‌ ಜೀವನ ಅಂದರೆ, ಕೆಲಸಮಾಡುವುದು, ಕೂಟಗಳಿಗೆ ಹಾಜರಾಗುವುದು, ಕ್ಷೇತ್ರ ಸೇವೆಗೆ ಹೋಗುವುದು ಮಾತ್ರವಲ್ಲ. ಕುಟುಂಬವು ವಿನೋದವಿಹಾರದಲ್ಲಿ ಸಹ ಆನಂದಿಸುತ್ತದೆ. ಆಗಾಗ್ಗೆ, “ಫ್ಯಾಮಿಲಿ ನೈಟ್‌” ಎಂಬ ಕಾರ್ಯಕ್ರಮವಿರುತ್ತದೆ. ಇದು ಪ್ರತಿಫಲದಾಯಕವಾದ ಕಾರ್ಯಕ್ರಮವಾಗಿರುತ್ತದೆ. ಏಕೆಂದರೆ, ಇಲ್ಲಿ ಅನೇಕರಿಗೆ ತಮ್ಮ ಮೇಧಾಶಕ್ತಿಗಳನ್ನು ತೋರಿಸುವುದಕ್ಕೆ ಅವಕಾಶವಿರುತ್ತವೆ ಮತ್ತು ಬೆತೆಲ್‌ನಲ್ಲಿ ಸೇವೆಸಲ್ಲಿಸುತ್ತಿರುವ ಅನೇಕರ ಜೀವಿತಗಳ ಕುರಿತಾಗಿ ಹೆಚ್ಚಿನ ಉತ್ತೇಜನದಾಯಕ ವಿಷಯಗಳನ್ನು ಕಲಿತುಕೊಳ್ಳಸಾಧ್ಯವಿರುತ್ತದೆ. ಮಾತ್ರವಲ್ಲ, ಬೇರೆಯವರ ರೂಮುಗಳಿಗೆ ಹೋಗುವುದು ಇಲ್ಲವೆ ಅವರನ್ನು ಆಮಂತ್ರಿಸುವುದು ಆನಂದದಾಯಕವೂ ಹಿತಕರವೂ ಆತ್ಮೋನ್ನತಿಮಾಡುವಂತಹದ್ದೂ ಆಗಿದೆ. ಮನೋರಂಜನೆಗಾಗಿ ಕೆಲವೊಂದು ಒದಗಿಸುವಿಕೆಗಳು, ವೈಯಕ್ತಿಕ ಅಧ್ಯಯನ ಹಾಗೂ ರಿಸರ್ಚ್‌ಗಾಗಿ ಲೈಬ್ರರಿಗಳು ಸಹ ಇರುತ್ತವೆ. ಡೈನಿಂಗ್‌ ಹಾಲ್‌ನಲ್ಲಿ ಊಟಮಾಡುವಾಗಲೂ ಹಿತವಾದ ಮಾತುಕತೆಯಿರುತ್ತದೆ.

ಎಸ್ಟೋನ್ಯದ ಬೆತೆಲ್‌ ಸದಸ್ಯನಾದ ಟಾಮ್‌ ಹೇಳುವುದು: “ಬೆತೆಲ್‌ನಿಂದ ಸ್ವಲ್ಪ ದೂರಕ್ಕೆ ಸಮುದ್ರವಿದೆ. ಮತ್ತು ಹತ್ತಿರದಲ್ಲಿಯೇ ಕಣ್ಮನಸೆಳೆಯುವ ಅರಣ್ಯವಿದೆ. ನಾನು ನನ್ನ ಪತ್ನಿ ಇಬ್ಬರೂ ಅಲ್ಲಿ ತನಕ ಹೋಗಿಬರುತ್ತೇವೆ. ಕೆಲವೊಮ್ಮೆ ನಾನು ಸಭೆಯಲ್ಲಿ ಹಾಗೂ ಬೆತೆಲ್‌ನಲ್ಲಿ ಇರುವ ಸ್ನೇಹಿತರೊಂದಿಗೆ ಗಾಲ್ಫ್‌, ಹಾಕಿ ಹಾಗೂ ಟೆನಿಸನ್ನು ಆಡುತ್ತೇನೆ. ಹವಾಮಾನವು ಆಹ್ಲಾದಕರವಾಗಿರುವಾಗ, ನಾವಿಬ್ಬರೂ ಬೈಕ್‌ನಲ್ಲಿ ಸ್ವಲ್ಪ ದೂರ ಹೋಗಿಬರುತ್ತೇವೆ.”

ಬೆತೆಲ್‌ ಸೇವೆಗೆ ಅರ್ಹರಾಗಲು ನೀವೇನು ಮಾಡಸಾಧ್ಯವಿದೆ?

ಬೆತೆಲ್‌ ಬಹಳ ಮುಖ್ಯವಾದ ಸ್ಥಳವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವ ಹಾಗೂ ಲೋಕದಾದ್ಯಂತವಿರುವ ಜೊತೆ ವಿಶ್ವಾಸಿಗಳ ಪರವಾಗಿ ಕೆಲಸಮಾಡುವ ಪ್ರೌಢ ಕ್ರೈಸ್ತರಿದ್ದಾರೆ. ಬೆತೆಲ್‌ ಕುಟುಂಬದ ಸದಸ್ಯರಾಗುವವರು ಕೆಲವೊಂದು ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರಬೇಕು. ಹಾಗಾದರೆ, ಬೆತೆಲ್‌ ಸೇವೆಗೆ ಅರ್ಹರಾಗಲು ನೀವೇನು ಮಾಡಸಾಧ್ಯವಿದೆ?

ಅಪೊಸ್ತಲ ಪೌಲನ ಜೊತೆ ಸೇವೆಸಲ್ಲಿಸಿದ ತಿಮೊಥೆಯನಂತೆ, ಬೆತೆಲ್‌ ಸೇವೆಗೆ ಸ್ವೀಕರಿಸಲ್ಪಡುವವರು ಸಭೆಯಲ್ಲಿ ಒಂದು ಒಳ್ಳೆಯ ನಿಲುವನ್ನು ಹೊಂದಿರಬೇಕು. (1 ತಿಮೊಥೆಯ 1:1) ತಿಮೊಥೆಯನ ಬಗ್ಗೆ “ಲುಸ್ತ್ರದಲ್ಲಿಯೂ ಇಕೋನ್ಯದಲ್ಲಿಯೂ ಇದ್ದ ಸಹೋದರರು ಒಳ್ಳೇ ಸಾಕ್ಷಿಹೇಳುತ್ತಿದ್ದರು.” (ಅ. ಕೃತ್ಯಗಳು 16:2) ತಿಮೊಥೆಯು ಯುವಕನಾಗಿದ್ದರೂ, ಶಾಸ್ತ್ರಗಳನ್ನು ಚೆನ್ನಾಗಿ ಬಲ್ಲವನಾಗಿದ್ದನು ಮತ್ತು ಸತ್ಯದಲ್ಲಿ ನೆಲೆಯೂರಿದ್ದನು. (2 ತಿಮೊಥೆಯ 3:​14, 15) ಇದೇ ರೀತಿಯಲ್ಲಿ, ಬೆತೆಲ್‌ ಸೇವೆಗೆ ಸ್ವೀಕರಿಸಲ್ಪಡುವವರು ಬೈಬಲಿನ ಜ್ಞಾನವನ್ನು ಪಡೆದುಕೊಂಡಿರತಕ್ಕದ್ದು.

ಬೆತೆಲ್‌ ಕುಟುಂಬದ ಸದಸ್ಯರು ಸ್ವತ್ಯಾಗದ ಮನೋಭಾವವನ್ನು ತೋರಿಸಬೇಕು. ತಿಮೊಥೆಯನು ತನ್ನ ಸ್ವಂತ ಹಿತಚಿಂತನೆಗಳಿಗಿಂತಲೂ ರಾಜ್ಯದ ಅಭಿರುಚಿಗಳಿಗೆ ಹೆಚ್ಚು ಮಹತ್ತ್ವವನ್ನು ಕೊಟ್ಟನು. ಇವನು ತೋರಿಸಿದಂತಹ ಸ್ವತ್ಯಾಗ ಮನೋಭಾವ ಹಾಗೂ ಸ್ವಇಚ್ಛೆಯು ಎಷ್ಟು ಸ್ಪಷ್ಟವಾಗಿ ಕಾಣುತ್ತಿತ್ತೆಂದರೆ, “ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ. ತಿಮೊಥೆಯನ ಗುಣವನ್ನು ನೀವು ನೋಡಿ ತಿಳುಕೊಂಡಿದ್ದೀರಿ; ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನೆಂಬದು ನಿಮಗೆ ಗೊತ್ತುಂಟು” ಎಂದು ಪೌಲನು ಅವನ ಕುರಿತು ಹೇಳಿದನು.​—ಫಿಲಿಪ್ಪಿ 2:20-22.

ಬೆತೆಲ್‌ ಸೇವೆ ಆತ್ಮಿಕ ಸ್ತ್ರೀಪುರುಷರನ್ನು ಕೇಳಿಕೊಳ್ಳುತ್ತದೆ. ಬೆತೆಲ್‌ ಕುಟುಂಬದ ಸದಸ್ಯರಿಗಾಗಿ ಮಾಡಲ್ಪಡುವ ಏರ್ಪಾಡುಗಳು ಇವರನ್ನು ಆತ್ಮಿಕವಾಗಿ ಬೆಳೆಯುವಂತೆ ಸಹಾಯಮಾಡುತ್ತದೆ. ಇದು ಬೈಬಲ್‌ ಅಧ್ಯಯನಮಾಡುವ, ಕ್ರೈಸ್ತ ಕೂಟಗಳಿಗೆ ಮತ್ತು ಕ್ಷೇತ್ರ ಸೇವೆಗೆ ಕ್ರಮವಾಗಿ ಹೋಗುವ ಮೂಲಕ ಹಾಗೂ ಪ್ರೌಢ ಕ್ರೈಸ್ತರೊಂದಿಗೆ ಒಡನಾಟವನ್ನಿಟ್ಟುಕೊಳ್ಳುವ ಮೂಲಕ ಸಾಧ್ಯವಾಗುತ್ತದೆ. ಹೀಗೆ ಬೆತೆಲಿನಲ್ಲಿರುವವರಿಗೆ “ನೀವು ಕರ್ತನಾದ ಯೇಸುವೆಂಬ ಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದುಕೊಳ್ಳಿರಿ. ಆತನಲ್ಲಿ ಬೇರೂರಿಕೊಂಡು ಭಕ್ತಿವೃದ್ಧಿಯನ್ನು ಹೊಂದಿ ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರಮಾಡುವವರಾಗಿರಿ” ಎಂಬ ಪೌಲನ ಈ ಸಲಹೆಯನ್ನು ಅನುಸರಿಸಲಿಕ್ಕಾಗಿ ಸಹಾಯವು ಸಿಗುತ್ತದೆ.​—ಕೊಲೊಸ್ಸೆ 2:6, 7.

ಬೆತೆಲಿನಲ್ಲಿ ಮಾಡಲ್ಪಡುವ ಕೆಲಸವು, ಶಾರೀರಿಕವಾಗಿ ಬಲವನ್ನು ಹಾಗೂ ಒಳ್ಳೆಯ ಆರೋಗ್ಯವನ್ನು ಕೇಳಿಕೊಳ್ಳುವುದರಿಂದ ಅಂತಹವರನ್ನೇ ಇಲ್ಲಿಗೆ ಸೇರಿಸಿಕೊಳ್ಳಲಾಗುತ್ತದೆ. ಇಲ್ಲಿ ತಿಳಿಸಲ್ಪಟ್ಟಿರುವಂತಹ ಅರ್ಹತೆಗಳು ನಿಮಗಿದ್ದು, 19 ಅಥವಾ ಹೆಚ್ಚು ವರ್ಷ ಪ್ರಾಯದವರಾಗಿದ್ದರೆ ಮತ್ತು ಕಡಿಮೆಪಕ್ಷ ಒಂದು ವರ್ಷದ ಹಿಂದೆ ದೀಕ್ಷಾಸ್ನಾನಪಡೆದುಕೊಂಡಿದ್ದರೆ ನೀವು ಬೆತೆಲ್‌ ಸೇವೆಗೆ ಅರ್ಜಿಹಾಕಬಹುದೆಂಬುದಾಗಿ ನಾವು ಉತ್ತೇಜಿಸುತ್ತೇವೆ.

ಇದರಲ್ಲಿ ನಮ್ಮ ಪಾಲು ಸಹ ಇದೆ

ಕ್ರೈಸ್ತರೋಪಾದಿ ಖಂಡಿತವಾಗಿಯೂ ನಾವೆಲ್ಲರೂ ನಮ್ಮ ಜೀವಿತದಲ್ಲಿ ರಾಜ್ಯದ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಲು ಹಾಗೂ ಯೆಹೋವನನ್ನು ಪೂರ್ಣಹೃದಯದಿಂದ ಸೇವಿಸಲು ಇಷ್ಟಪಡುತ್ತೇವೆ. (ಮತ್ತಾಯ 6:33; ಕೊಲೊಸ್ಸೆ 3:23) ಬೆತೆಲಿನಲ್ಲಿ ಸೇವೆಸಲ್ಲಿಸುತ್ತಿರುವವರಿಗೆ ಅವರು ಪವಿತ್ರ ಸೇವೆಯನ್ನು ಮುಂದುವರಿಸುತ್ತಾ ಹೋಗುವಂತೆ ನಾವು ಉತ್ತೇಜನವನ್ನು ನೀಡಸಾಧ್ಯವಿದೆ. ಮತ್ತು ವಿಶೇಷವಾಗಿ, ಬೆತೆಲ್‌ ಸೇವೆಗೆ ಅರ್ಹರಾಗಿರುವ ಯುವ ಸಹೋದರರು ಈ ಆಶೀರ್ವದಿತ ಸುಯೋಗಕ್ಕಾಗಿ ಪ್ರಯತ್ನಿಸುವಂತೆ ಪ್ರೇರೇಪಿಸಲ್ಪಡಬೇಕು.

ಬೆತೆಲ್‌ ಸೇವೆಯು ಆತ್ಮಿಕವಾಗಿ ಸಂತೃಪ್ತಿಯನ್ನು ತರುವಂತಹ ಒಂದು ವೃತ್ತಿಯಾಗಿರಸಾಧ್ಯವಿದೆ. ಖಂಡಿತವಾಗಿಯೂ ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವಿದೆ. 20 ವಯಸ್ಸಿನವನಾಗಿದ್ದಾಗ ಬೆತೆಲಿನಲ್ಲಿ ಸೇವೆಸಲ್ಲಿಸಲು ಶುರುಮಾಡಿದ ನಿಕ್‌ ಅನ್ನು ಪರಿಗಣಿಸಿರಿ. ಬೆತೆಲ್‌ನಲ್ಲಿ ಸೇವೆಸಲ್ಲಿಸಿದ ಹತ್ತು ವರ್ಷಗಳ ಅನಂತರ ಅವನು ಹೇಳುವುದು: “ಯೆಹೋವನು ನನಗೆ ತೋರಿಸಿರುವ ಅಪಾತ್ರ ದಯೆಗಾಗಿ ಆತನಿಗೆ ನಾನು ಆಭಾರಿಯಾಗಿದ್ದೇನೆ. ಇದಕ್ಕಿಂತಲೂ ಜೀವನದಲ್ಲಿ ಇನ್ನೇನನ್ನು ತಾನೇ ನಾನು ಅಪೇಕ್ಷಿಸಸಾಧ್ಯ? ಇಲ್ಲಿ ನಮ್ಮ ಸುತ್ತುಮುತ್ತಲೂ ಯೆಹೋವನಿಗೆ ಸೇವೆಸಲ್ಲಿಸಲು ತಮ್ಮ ಕೈಲಾದುದನ್ನೆಲ್ಲ ಮಾಡುತ್ತಿರುವ ನಂಬಿಗಸ್ತ ಕ್ರೈಸ್ತರಿದ್ದಾರೆ.”

[ಪುಟ 22ರಲ್ಲಿರುವ ಚೌಕ/ಚಿತ್ರ]

ಹಿರಿಯರೂ ಹೆತ್ತವರೂ ಈ ಸಂಬಂಧದಲ್ಲಿ ಏನು ಮಾಡಸಾಧ್ಯವಿದೆ?

ಹಿರಿಯರೂ ಸಂಚರಣ ಮೇಲ್ವಿಚಾರಕರೂ ಯುವ ಪುರುಷರನ್ನು ಬೆತೆಲ್‌ ಸೇವೆಗೆ ಅರ್ಜಿಹಾಕುವಂತೆ ವಿಶೇಷವಾಗಿ ಪ್ರೋತ್ಸಾಹಿಸಬೇಕು. ಬೆತೆಲ್‌ ಕುಟುಂಬದಲ್ಲಿರುವ ಯುವ ಸದಸ್ಯರು ಬೆತೆಲಿಗೆ ಬಂದದ್ದು ಹೇಗೆ ಎಂದು ಕೇಳಿದಾಗ, ಅವರಲ್ಲಿ 34 ಪ್ರತಿಶತ ಮಂದಿ ಬೆತೆಲ್‌ ಸೇವೆಯನ್ನು ಜೀವನದ ಗುರಿಯಾಗಿಡುವಂತೆ, ಮುಖ್ಯವಾಗಿ ಕ್ರೈಸ್ತ ಹಿರಿಯರು ನಮಗೆ ಪ್ರೇರೇಪಿಸಿದರು ಎಂದು ಹೇಳಿದರು. ಇವರು ಸಹವಾಸಮಾಡುತ್ತಿದ್ದ ಸಭೆಯ ಸಹೋದರಸಹೋದರಿಯರಿಗೆ ಇವರಿಲ್ಲದೆ ಬೇಸರವಾಗಬಹುದು ಖಂಡಿತ. ಉದಾಹರಣೆಗೆ, ಲುಸ್ತ್ರ ಹಾಗೂ ಇಕೋನ್ಯದಲ್ಲಿದ್ದ ಇತರ ಯುವ ಜನರ ಮೇಲೆ ತಿಮೊಥೆಯನು ಒಳ್ಳೆಯ ಪ್ರಭಾವ ಬೀರಿದ್ದನು ನಿಜ. ಆದರೂ ಅಲ್ಲಿದ್ದ ಹಿರಿಯರು ತಿಮೊಥೆಯನು ಪೌಲನ ಜೊತೆ ಸೇವೆಸಲ್ಲಿಸುವುದಕ್ಕೆ ಹೋಗುವಾಗ ಅವನನ್ನು ತಡೆಯಲಿಲ್ಲ. ತಿಮೊಥೆಯನು ಅಪೊಸ್ತಲನೊಟ್ಟಿಗೆ ಹೋಗುವುದು ಸಭೆಗೆ ತುಂಬಲಾರದ ನಷ್ಟ ಎಂದು ಅವರು ನೆನಸಲಿಲ್ಲ.​—1 ತಿಮೊಥೆಯ 4:14.

ಈ ವಿಷಯದಲ್ಲಿ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬೇಕು. ಈಗಷ್ಟೇ ತಿಳಿಸಿದ ಯುವ ಜನರ ಸರ್ವೆಯಲ್ಲಿ, ಸುಮಾರು 40 ಪ್ರತಿಶತದಷ್ಟು ಜನರು ಬೆತೆಲ್‌ ಸೇವೆಯನ್ನು ಮಾಡಲು ಮುಖ್ಯವಾಗಿ ಹೆತ್ತವರು ಉತ್ತೇಜನವನ್ನು ನೀಡಿದರು ಎಂದು ಹೇಳಿದರು. ಕೆಲವೊಂದು ವರ್ಷಗಳಿಂದ ಬೆತೆಲ್‌ನಲ್ಲಿ ಸೇವೆಸಲ್ಲಿಸುತ್ತಿರುವ ಒಬ್ಬ ಸಹೋದರಿಯು ಹೇಳುವುದು: “ನನ್ನ ಹೆತ್ತವರು ಯೆಹೋವನ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ರೀತಿಯು, ನಾನು ಬೆತೆಲ್‌ ಸೇವೆಯನ್ನು ಮಾಡುವಂತೆ ನನಗೆ ಪ್ರಚೋದನೆಯನ್ನು ನೀಡಿತು. ಅವರು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಅತ್ಯುತ್ತಮ ಮಾದರಿಯನ್ನಿಟ್ಟಿದ್ದಾರೆ. ಆದುದರಿಂದಲೇ, ಬೆತೆಲ್‌ ಸೇವೆಯು ಜೀವನದಲ್ಲಿ ಆರಿಸಿಕೊಳ್ಳಸಾಧ್ಯವಿರುವ ಅತ್ಯುತ್ತಮ ಹಾಗೂ ಅತ್ಯಂತ ಸಂತುಷ್ಟಿಕರ ವೃತ್ತಿಯಾಗಿದೆ ಎಂಬುದು ನನಗೆ ತಿಳಿದಿದೆ.”

[ಪುಟ 24ರಲ್ಲಿರುವ ಚೌಕ]

ಬೆತೆಲ್‌ ಸೇವೆಯನ್ನು ಅವರು ಗಣ್ಯಮಾಡುತ್ತಾರೆ

“ನಾನು ನನ್ನ ಬೆತೆಲ್‌ ಸೇವೆಯನ್ನು ನಿಧಿಯಂತೆ ಕಾಪಾಡುತ್ತೇನೆ. ಹಿಂದೆ ಪ್ರತಿದಿನವೂ ನಾನು ಯೆಹೋವನಿಗೆ ಸೇವೆಸಲ್ಲಿಸಿದ್ದೇನೆ, ನಾಳೆ, ನಾಳಿದ್ದು ಹೀಗೆ ಮುಂದಿನ ದಿನಗಳಲ್ಲೆಲ್ಲ ಆತನ ಸೇವೆಸಲ್ಲಿಸುತ್ತೇನೆ ಎಂಬುದನ್ನು ತಿಳಿದಿರುವುದೇ ನನ್ನ ಬಾಳಿಗೆ ಸಂತೃಪ್ತಿಯನ್ನು ತರುತ್ತದೆ. ಅಷ್ಟುಮಾತ್ರವಲ್ಲ, ಇದರಿಂದ ನನಗೆ ಒಳ್ಳೆಯ ಮನಸ್ಸಾಕ್ಷಿ ಲಭಿಸುತ್ತದೆ ಹಾಗೂ ಇದು ನನ್ನ ಮನಸ್ಸಿನಲ್ಲಿ ಸಕಾರಾತ್ಮಕ ವಿಚಾರಗಳನ್ನು ತುಂಬಿಸುತ್ತದೆ.”

“ಯಾವುದೇ ಅಪಕರ್ಷಣೆಗಳಿಲ್ಲದೆ ನಮ್ಮ ಎಲ್ಲ ಸಮಯವನ್ನೂ ಶಕ್ತಿಯನ್ನೂ ಯೆಹೋವನಿಗೆ ಸೇವೆಸಲ್ಲಿಸಲು ಉಪಯೋಗಿಸಬಹುದಾದ ಸ್ಥಳವೆಂದರೆ ಬೆತೆಲ್‌ ಆಗಿದೆ. ಇದು ನಿಮ್ಮ ಹೃದಯದಲ್ಲಿ ಆನಂದದ ಕಾರಂಜಿಯು ಚಿಮ್ಮುವಂತೆ ಮಾಡುತ್ತದೆ. ಅಲ್ಲದೆ, ಇಲ್ಲಿ ಯೆಹೋವನ ಸಂಸ್ಥೆಯನ್ನು ಬೇರೆಯೇ ಆದ ಕೋನದಿಂದ ನೋಡಸಾಧ್ಯವಿರುತ್ತದೆ. ಹಾಗೂ ಈ ಸಂಸ್ಥೆಯ ಚಟುವಟಿಕೆಗಳ ಕೇಂದ್ರಸ್ಥಾನವನ್ನು ಹತ್ತಿರದಿಂದ ನೋಡಸಾಧ್ಯವಿರುತ್ತದೆ. ಇದು ನಿಮ್ಮನ್ನು ರೋಮಾಂಚನಗೊಳಿಸುತ್ತದೆ.”

“ಬೆತೆಲಿಗೆ ಬಂದದ್ದು ನನ್ನ ಜೀವನದಲ್ಲಿ ನಾನು ಮಾಡಿದ ಅತ್ಯುತ್ತಮ ವಿಷಯವಾಗಿದೆ. ಇಲ್ಲಿ ಶಿಕ್ಷಣ ಎಂಬುದಕ್ಕೆ ಕೊನೆಯೇ ಇಲ್ಲ. ಅಂದರೆ, ಇಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುವುದು ನನ್ನ ವೈಯಕ್ತಿಕ ಸಾಧನೆಗಲ್ಲ, ಬದಲಾಗಿ ಯೆಹೋವನಿಗಾಗಿದೆ. ನಾನು ಬೆತೆಲಿನಲ್ಲಿ ಮಾಡುವ ಕೆಲಸವು ಎಂದೂ ವ್ಯರ್ಥವಾಗಿ ಹೋಗುವುದಿಲ್ಲ ಎಂಬುದು ನನಗೆ ಗೊತ್ತು.”

“ಬೆತೆಲಿನಲ್ಲಿ ನನ್ನ ಮೇಧಾಶಕ್ತಿಯನ್ನು ಉಪಯೋಗಿಸುವುದು ನನಗೆ ಜೀವನದಲ್ಲಿ ತೃಪ್ತಿಯನ್ನೂ ಮನಶ್ಶಾಂತಿಯನ್ನೂ ನೀಡುತ್ತದೆ. ಏಕೆಂದರೆ, ಈ ಮೇಧಾಶಕ್ತಿಯು ಯೆಹೋವನಿಗಾಗಿ ಹಾಗೂ ಸಹೋದರಸಹೋದರಿಯರಿಗಾಗಿ ಉಪಯೋಗಿಸಲ್ಪಡುತ್ತಿದೆ.”

“ಹಿಂದಿನ ಜೀವನೋಪಾಯದಲ್ಲಿ ನಾನು ನಿಜ ಸಂತೃಪ್ತಿ ಹಾಗೂ ಸಂತೋಷವನ್ನು ಕಂಡುಕೊಳ್ಳಲಿಲ್ಲ. ಅನೇಕ ವರ್ಷಗಳ ಹಿಂದೆ, ನನ್ನ ಸಹೋದರಸಹೋದರಿಯರೊಂದಿಗೆ ಮತ್ತು ಅವರಿಗಾಗಿ ಕೆಲಸಮಾಡುವ ಕನಸು ಕಂಡಿದ್ದೆ. ಈ ಕಾರಣದಿಂದಲೇ ನಾನು ಬೆತೆಲಿಗೆ ಬಂದೆ. ನನ್ನೆಲ್ಲ ಪ್ರಯತ್ನಗಳು ಇತರರಿಗೆ ಆತ್ಮಿಕವಾಗಿ ಪ್ರಯೋಜನವನ್ನು ತರುವವು ಹಾಗೂ ಯೆಹೋವನಿಗೆ ಸ್ತುತಿಯನ್ನು ತರುವವು ಎಂಬ ವಿಚಾರವೇ ನನಗೆ ಬಹಳ ತೃಪ್ತಿಯನ್ನು ತರುತ್ತದೆ.”