ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವಜನರಿಗಾಗಿ ಹಣಕಾಸಿನ ಸಹಾಯವನ್ನು ಪೌಲನು ಏರ್ಪಡಿಸುತ್ತಾನೆ

ದೇವಜನರಿಗಾಗಿ ಹಣಕಾಸಿನ ಸಹಾಯವನ್ನು ಪೌಲನು ಏರ್ಪಡಿಸುತ್ತಾನೆ

ದೇವಜನರಿಗಾಗಿ ಹಣಕಾಸಿನ ಸಹಾಯವನ್ನು ಪೌಲನು ಏರ್ಪಡಿಸುತ್ತಾನೆ

ನಿಜ ಕ್ರೈಸ್ತರಿಗೆ ಆತ್ಮಿಕ ವಿಷಯಗಳು ಬಹಳ ಮುಖ್ಯವಾಗಿವೆ. ಆದರೂ, ಅವರಿಗೆ ಇತರರ ಭೌತಿಕ ಹಿತಚಿಂತನೆ ಸಹ ಮುಖ್ಯವಾಗಿದೆ. ಕಷ್ಟದೆಸೆಗಳನ್ನು ಅನುಭವಿಸುತ್ತಿರುವವರಿಗೆ ಅವರು ಅನೇಕ ಸಲ ಸಹಾಯಮಾಡಿದ್ದಾರೆ. ಏಕೆಂದರೆ ಕ್ರೈಸ್ತರಿಗೆ, ಸಹೋದರರ ಪ್ರೇಮವು ತಾನೇ ಅಗತ್ಯದಲ್ಲಿರುವ ಜೊತೆ ವಿಶ್ವಾಸಿಗಳಿಗೆ ಸಹಾಯವನ್ನು ನೀಡುವಂತೆ ಪ್ರಚೋದನೆಯನ್ನು ನೀಡುತ್ತದೆ.​—ಯೋಹಾನ 13:​34, 35.

ಅಪೊಸ್ತಲ ಪೌಲನು ಆತ್ಮಿಕ ಸಹೋದರ ಸಹೋದರಿಯರನ್ನು ಪ್ರೀತಿಸುತ್ತಿದ್ದದ್ದರಿಂದ, ಅಖಾಯ, ಗಲಾತ್ಯ, ಮಕೆದೋನ್ಯ ಮತ್ತು ಏಷ್ಯಾದ ಭಾಗಗಳಲ್ಲಿರುವ ಸಭೆಗಳಿಂದ ಹಣಸಂಗ್ರಹವನ್ನು ಮಾಡಿದನು. ಆದರೆ ಇದರ ಅಗತ್ಯವೇಕಿತ್ತು? ಯಾವ ರೀತಿಯಲ್ಲಿ ಹಣಸಂಗ್ರಹವನ್ನು ಮಾಡಲಾಯಿತು? ಪ್ರತಿಕ್ರಿಯೆಯು ಏನಾಗಿತ್ತು? ಮತ್ತು ಅಲ್ಲಿ ಏನು ನಡೆಯಿತೋ ಅದು ನಮಗೇಕೆ ಆಸಕ್ತಿಕರವಾಗಿರಬೇಕು?

ಯೆರೂಸಲೇಮಿನ ಸಭೆಯ ಸ್ಥಿತಿ

ಪಂಚಾಶತ್ತಮದಂದು ಶಿಷ್ಯರಾದ ಯೆಹೂದಿಯರೂ ಮತಾವಲಂಬಿಗಳೂ, ನಿಜ ನಂಬಿಕೆಯ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಕಲಿತುಕೊಳ್ಳಲಿಕ್ಕಾಗಿ ಸಾ.ಶ. 33ರ ಪಂಚಾಶತ್ತಮದ ನಂತರವೂ ಯೆರೂಸಲೇಮಿನಲ್ಲಿಯೇ ಉಳಿದರು. ಇವರು ಇನ್ನೂ ಹೆಚ್ಚಿನ ದಿವಸಗಳ ತನಕ ಉಳಿದಾಗ, ಜೊತೆ ಆರಾಧಕರು ಸಂತೋಷದಿಂದ ಇವರಿಗೆ ಸಹಾಯಮಾಡುವ ಹೊರೆಯನ್ನು ಹೊತ್ತುಕೊಂಡರು. (ಅ. ಕೃತ್ಯಗಳು 2:​7-11, 41-44; 4:​32-37) ಯೆಹೂದಿ ಸ್ವಾತಂತ್ರ್ಯ ಹೋರಾಟಗಾರರು ದಂಗೆ ಮತ್ತು ದೊಂಬಿ ಹಿಂಸೆಯ ಅಲೆಯನ್ನು ಎಬ್ಬಿಸಿದ್ದರಿಂದ ಅಲ್ಲಿ ಅಶಾಂತಿಯು ಮನೆಮಾಡಿತ್ತು. ಇದು ಇನ್ನೂ ಹೆಚ್ಚಿನ ಸಹಾಯ ಮಾಡುವಂತೆ ಕೇಳಿಕೊಂಡಿತು. ಕ್ರಿಸ್ತನ ಹಿಂಬಾಲಕರಲ್ಲಿ ಯಾರೊಬ್ಬರು ಹಸಿವಿನಿಂದ ಕಂಗಾಲಾಗದಂತಿರಲಿಕ್ಕಾಗಿ, ಅಗತ್ಯದಲ್ಲಿದ್ದ ವಿಧವೆಯರಿಗೆ ದಿನಾಲೂ ಆಹಾರವನ್ನು ಒದಗಿಸಲಾಯಿತು. (ಅ. ಕೃತ್ಯಗಳು 6:​1-6) ಹೆರೋದನು ಈ ಸಭೆಯನ್ನು ಕಠಿನವಾಗಿ ಹಿಂಸಿಸಿದನು ಮತ್ತು ಈ ಮಧ್ಯೆ ಸಾ.ಶ. 40ಗಳ ಮಧ್ಯಭಾಗದಲ್ಲಿ ಬರಗಾಲವು ಯೆಹೂದವನ್ನು ಧ್ವಂಸಮಾಡಿತು. ಯೇಸುವಿನ ಹಿಂಬಾಲಕರಿಗಾದರೋ ಇವೆಲ್ಲವೂ ಪೌಲನು “ಕಷ್ಟಾನುಭವ,” ‘ಸಂಕಟಗಳು’ ಮತ್ತು “ಸೊತ್ತನ್ನು ಸುಲುಕೊಳ್ಳುವವರಿಗೆ” ಬಿಟ್ಟುಕೊಡುವುದು ಎಂದು ಹೇಳಿದ ವಿಷಯಗಳಾಗಿದ್ದಿರಬಹುದು.​—ಇಬ್ರಿಯ 10:​32-34; ಅ. ಕೃತ್ಯಗಳು 11:​27–12:1.

ಸಾ.ಶ. 49ರಲ್ಲಿ ಪರಿಸ್ಥಿತಿಯು ಇನ್ನೂ ಗಂಭೀರವಾಗಿಯೇ ಇತ್ತು. ಸಾರುವುದಕ್ಕಾಗಿ ಅನ್ಯಜನರ ಬಳಿ ಹೋಗುತ್ತೇನೆಂದು ಪೌಲನು ಹೇಳಿದಾಗ, ಪೇತ್ರ, ಯಾಕೋಬ ಹಾಗೂ ಯೋಹಾನರು ‘ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕೆಂದು’ ಅವನಿಗೆ ಹೇಳಿದರು. ಮತ್ತು ಪೌಲನು ಅದನ್ನೇ ಮಾಡಲು ಬಹಳ ಪ್ರಯತ್ನಪಟ್ಟನು.​—ಗಲಾತ್ಯ 2:​7-10.

ಹಣಸಂಗ್ರಹವನ್ನು ಮಾಡುವುದು

ಯೂದಾಯದಲ್ಲಿನ ಬಡ ಕ್ರೈಸ್ತರಿಗಾಗಿ ಹಣಸಂಗ್ರಹವನ್ನು ಮಾಡುವುದಕ್ಕೆ ಪೌಲನು ಮೇಲ್ವಿಚಾರಣೆಯನ್ನು ವಹಿಸಿಕೊಂಡನು. ಸಾ.ಶ. 55ರಲ್ಲಿ ಅವನು ಕೊರಿಂಥದವರಿಗೆ ಹೇಳಿದ್ದು: “ದೇವಜನರಿಗೋಸ್ಕರ ಹಣ ವಸೂಲುಮಾಡುವದನ್ನು ಕುರಿತು ನಾನು ಹೇಳುವದೇನಂದರೆ, ಗಲಾತ್ಯದ ಸಭೆಗಳಿಗೆ ನಾನು ಹೇಳಿಕೊಟ್ಟ ಕ್ರಮದಂತೆ ನೀವೂ ಮಾಡಿರಿ. . . . ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದ ಸಂಪಾದನೆಯ ಮೇರೆಗೆ ವಾರವಾರದ ಮೊದಲನೆಯ ದಿನದಲ್ಲಿ ಗಂಟುಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು. ನಾನು ಬಂದ ಮೇಲೆ ನೀವು ಯಾರನ್ನು ಯೋಗ್ಯರೆಂದು ಸೂಚಿಸುವಿರೋ ಅವರನ್ನು ಯೆರೂಸಲೇಮಿಗೆ ನಿಮ್ಮ ಉಪಕಾರದ್ರವ್ಯವನ್ನು ತೆಗೆದುಕೊಂಡು ಹೋಗುವದಕ್ಕೆ ಪತ್ರಗಳನ್ನು ಕೊಟ್ಟು ಕಳುಹಿಸುವೆನು.” (1 ಕೊರಿಂಥ 16:1-3) ಮಕೆದೋನ್ಯ ಹಾಗೂ ಅಖಾಯ ಸಭೆಯವರು ಸಹ ಹಣಸಹಾಯವನ್ನು ನೀಡುತ್ತಿದ್ದಾರೆ ಎಂದು ಒಂದು ವರ್ಷದ ಅನಂತರ ಪೌಲನು ಹೇಳಿದನು. ಮತ್ತು ಹಣವನ್ನು ಯೆರೂಸಲೇಮಿಗೆ ಕಳುಹಿಸಿದಾಗ, ಏಷ್ಯಾದ ಭಾಗಗಳಿಂದ ಬಂದ ಪ್ರತಿನಿಧಿಗಳು ಅಲ್ಲಿದ್ದರಿಂದ ಆ ಸಭೆಗಳು ಸಹ ಕಾಣಿಕೆಯನ್ನು ನೀಡಿದ್ದವು ಎಂಬುದು ಗೊತ್ತಾಗುತ್ತದೆ.​—ಅ. ಕೃತ್ಯಗಳು 20:4; 2 ಕೊರಿಂಥ 8:​1-4; 9:​1, 2.

ಒಬ್ಬನಿಗೆ ತನ್ನ ಕೈಲಾದುದಕ್ಕಿಂತಲೂ ಹೆಚ್ಚನ್ನು ಕೊಡಬೇಕೆಂಬ ಯಾವ ಒತ್ತಾಯವೂ ಇರಲಿಲ್ಲ. ಅದಕ್ಕೆ ಬದಲಾಗಿ, ಇದು ಸಮಾನತ್ವವಿರುವಂತಹ ಒಂದು ವಿಷಯವಾಗಿತ್ತು. ಅಂದರೆ, ಯಾವದೇ ಸಮೃದ್ಧಿಯನ್ನು ಯೆರೂಸಲೇಮಿನ ಹಾಗೂ ಯೂದಾಯದಲ್ಲಿರುವ ದೇವಜನರ ಮಧ್ಯೆಯಿದ್ದ ಕೊರತೆಯನ್ನು ನೀಗಿಸಲು ಉಪಯೋಗಿಸುವ ವಿಷಯವಾಗಿತ್ತು. (2 ಕೊರಿಂಥ 8:​13-15) “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” ಎಂದು ಪೌಲನು ಹೇಳಿದನು.​—2 ಕೊರಿಂಥ 9:7.

ಉದಾರಿಗಳಾಗಿರುವಂತೆ ಕೊರಿಂಥದವರಿಗೆ ಉತ್ತಮ ಕಾರಣವನ್ನು ಅಪೊಸ್ತಲನು ಕೊಟ್ಟನು. ಅವರು ಆತ್ಮಿಕವಾಗಿ “ಐಶ್ವರ್ಯವಂತರಾಗಬೇಕೆಂದು” ಅವರಿಗೋಸ್ಕರ ಯೇಸು “ಬಡವನಾದನು” ಎಂದು ಅಪೊಸ್ತಲನು ಹೇಳಿದನು. (2 ಕೊರಿಂಥ 8:9) ನಿಜವಾಗಿಯೂ ಅವರು ಯೇಸುವಿನ ಉದಾರಮನೋಭಾವವನ್ನು ಅನುಕರಿಸಬೇಕಾಗಿತ್ತು. ಏಕೆಂದರೆ, ‘ಉದಾರವಾಗಿ ಕೊಡಶಕ್ತರಾಗುವಂತೆ’ ದೇವರು ಅವರನ್ನು ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದದ್ದರಿಂದ, ಇವರು ದೇವಜನರಿಗೆ ಸಹಾಯಮಾಡುವುದು ಯೋಗ್ಯವಾಗಿತ್ತು.​—2 ಕೊರಿಂಥ 9:​10-12.

ಹಣಸಹಾಯವನ್ನು ನೀಡಿದವರ ಮನೋಭಾವ

ದೇವಜನರಿಗಾಗಿ ಪ್ರಥಮ ಶತಮಾನದ ಹಣಸಂಗ್ರಹದ ಏರ್ಪಾಡಿನಲ್ಲಿ ಭಾಗಿಯಾಗಿದ್ದವರ ಮನೋಭಾವವನ್ನು ಪರಿಗಣಿಸುವುದು ಒಳ್ಳೆಯದು. ಏಕೆಂದರೆ, ಇದರಿಂದ ನಾವು ಸ್ವ-ಇಚ್ಛೆಯಿಂದ ಹಣಸಹಾಯವನ್ನು ನೀಡುವುದರ ಬಗ್ಗೆ ಹೆಚ್ಚಿನ ವಿಷಯವನ್ನು ಕಲಿತುಕೊಳ್ಳಸಾಧ್ಯವಿದೆ. ಹಣಸಂಗ್ರಹವು ಯೆಹೋವನ ಬಡ ಜೊತೆ ಆರಾಧಕರಿಗೆ ಸಹಾಯಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸಿತು. ಅಂದರೆ, ಇದು ಯೆಹೂದ್ಯರು ಹಾಗೂ ಅನ್ಯಕ್ರೈಸ್ತರ ಮಧ್ಯೆ ಸಹೋದರತ್ವದ ಬಲವಾದ ಬಂಧವಿತ್ತೆಂಬುದನ್ನು ತೋರಿಸುತ್ತದೆ. ಹಣಸಹಾಯವನ್ನು ನೀಡುವುದು ಮತ್ತು ಸ್ವೀಕರಿಸುವುದು ಈ ಅನ್ಯಜನರ ಹಾಗೂ ಯೆಹೂದಿಯರ ಮಧ್ಯೆಯಿದ್ದ ಏಕತೆಯನ್ನು ಹಾಗೂ ಸ್ನೇಹಭಾವವನ್ನು ವ್ಯಕ್ತಪಡಿಸಿತು. ಹೌದು, ಅವರು ಭೌತಿಕವಾಗಿಯೂ ಆತ್ಮಿಕವಾಗಿಯೂ ಸಹಾಯಮಾಡಿದರು.​—ರೋಮಾಪುರ 15:​26, 27.

ಮೊದಮೊದಲು ಪೌಲನು ಮಕೆದೋನ್ಯದ ಕ್ರೈಸ್ತರನ್ನು ಈ ಏರ್ಪಾಡಿನಲ್ಲಿ ಭಾಗಿಯಾಗುವಂತೆ ಆಮಂತ್ರಿಸಿದ್ದಿರಲಿಕ್ಕಿಲ್ಲ ಏಕೆಂದರೆ, ಅವರು ಕಡುಬಡತನದಲ್ಲಿದ್ದರು. ಆದರೂ ಅವರು ‘ಸಹಾಯಮಾಡುವ ಕೆಲಸದಲ್ಲಿ ತಾವು ಪಾಲುಗಾರರರಾಗುವಂತೆ ಬೇಡಿಕೊಳ್ಳುತ್ತಿದ್ದನು.’ ಅವರು ‘ಬಹಳ ಹಿಂಸೆ ತಾಳಿಕೊಳ್ಳುತ್ತಿದ್ದರೂ’ ಆನಂದದಿಂದ “ಶಕ್ತಿಯನ್ನು ಮೀರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು”! (2 ಕೊರಿಂಥ 8:​1-4) ರೋಮನ್ನರಿಗೆ ಕಾನೂನುಬಾಹಿರವಾಗಿದ್ದ ಧರ್ಮವೊಂದರಲ್ಲಿ ಭಾಗಿಯಾಗುತ್ತಿದ್ದ ಆಪಾದನೆಗಳು ಸಹ ಈ ಹಿಂಸೆಯಲ್ಲಿ ಒಳಗೂಡಿದ್ದವು ಎಂಬುದು ಸುವ್ಯಕ್ತ. ಆದುದರಿಂದ, ತದ್ರೀತಿಯ ಕಷ್ಟಾನುಭವಗಳನ್ನು ಅನುಭವಿಸುತ್ತಿದ್ದ ಯೂದಾಯದ ತಮ್ಮ ಸಹೋದರರಿಗಾಗಿ ಅವರಲ್ಲಿ ಸಹಾನುಭೂತಿಯಿದ್ದದ್ದು ಸುವ್ಯಕ್ತ.​—ಅ. ಕೃತ್ಯಗಳು 16:​20, 21; 17:​5-9; 1 ಥೆಸಲೊನೀಕ 2:14.

ಹಣಸಂಗ್ರಹವನ್ನು ಮಾಡುವಾಗ, ಮಕೆದೋನ್ಯರನ್ನು ಉತ್ತೇಜಿಸಲಿಕ್ಕಾಗಿ ಕೊರಿಂಥದವರ ಮೊದಲಿನ ಹುರುಪನ್ನು ಪೌಲನು ಉಪಯೋಗಿಸಿದನಾದರೂ, ಕೊರಿಂಥದಲ್ಲಿ ಉತ್ಸಾಹವು ತಣ್ಣಗಾಗಿಹೋಗಿತ್ತು. ಆದರೆ ಈಗ ಕೊರಿಂಥದವರನ್ನು ಪ್ರೇರೇಪಿಸಲಿಕ್ಕಾಗಿ ಮಕೆದೋನ್ಯರ ಉದಾರತೆಯನ್ನು ಅಪೊಸ್ತಲನು ತಿಳಿಸಿದನು. ಒಂದು ವರ್ಷದ ಹಿಂದೆ ಅವರು ಪ್ರಾರಂಭಿಸಿದ್ದ ಹಣಸಂಗ್ರಹದ ಕೆಲಸವು ಈಗ ಕೊನೆಗೊಳ್ಳಬೇಕಾಗಿದೆ ಎಂಬುದನ್ನು ಮರುಜ್ಞಾಪಿಸಲಿಕ್ಕಿದ್ದ ಆವಶ್ಯಕತೆಯನ್ನು ಅವನು ಕಂಡುಕೊಂಡನು. ಅಲ್ಲಿ ಏನು ಸಂಭವಿಸಿತ್ತು?​—2 ಕೊರಿಂಥ 8:​10, 11; 9:​1-5.

ಕೊರಿಂಥದಲ್ಲಿ ಹಣಸಂಗ್ರಹವನ್ನು ಮಾಡುವುದಕ್ಕೆ ತೀತನು ನೇತೃತ್ವವನ್ನು ವಹಿಸಿಕೊಂಡಿದ್ದನಾದರೂ, ಅಲ್ಲಿ ಸಮಸ್ಯೆಗಳೆದ್ದವು. ಇವು ಅವನ ಪ್ರಯತ್ನಗಳನ್ನು ಭಂಗಪಡಿಸಿದವು. ಮಕೆದೋನ್ಯದಲ್ಲಿ, ಪೌಲನಿಂದ ಸಲಹೆಯನ್ನು ಪಡೆದುಕೊಂಡ ಬಳಿಕ, ತೀತನು ಇನ್ನಿಬ್ಬರೊಂದಿಗೆ ಕೊರಿಂಥದ ಸಭೆಗೆ ಬೆಂಬಲವನ್ನು ನೀಡಲು ಹಾಗೂ ಹಣಸಂಗ್ರಹವನ್ನು ಕೊನೆಗೊಳಿಸಲು ಹಿಂದಿರುಗಿದನು. ಪೌಲನು ಕೊರಿಂಥದವರನ್ನು ಶೋಷಿಸಲು ಪ್ರಯತ್ನಿಸಿದ್ದನು ಎಂದು ಕೆಲವರು ವ್ಯಂಗವಾಗಿ ಸೂಚಿಸಿದ್ದಿರಬಹುದು. ಆದುದರಿಂದಲೇ, ಹಣಸಂಗ್ರಹವನ್ನು ಸಂಪೂರ್ಣಗೊಳಿಸಲು ಪೌಲನು ಮೂರು ಜನರನ್ನು ಕಳುಹಿಸಿದ್ದು ಮಾತ್ರವಲ್ಲ ಅವರಲ್ಲಿ ಪ್ರತಿಯೊಬ್ಬರಿಗೂ ಶಿಫಾರಸ್ಸುಗಳನ್ನು ನೀಡಿದನು. ‘ನಾವು ಪಾರುಪತ್ಯಮಾಡುವ ಈ ದ್ರವ್ಯಸಂಚಯದ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದವನ್ನು’ ನೀಡುತ್ತಿಲ್ಲ, “ಯಾಕಂದರೆ” ನಾವು “ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವವಾದದ್ದನ್ನು ಯೋಚನೆಗೆ ತಂದುಕೊಳ್ಳುವವರಾಗಿದ್ದೇವೆ” ಎಂದು ಪೌಲನು ಹೇಳಿದನು.​—2 ಕೊರಿಂಥ 8:​6, 18-23; 12:18.

ಕಾಣಿಕೆಯನ್ನು ಗಮ್ಯಸ್ಥಾನಕ್ಕೆ ತಲಪಿಸುವುದು

ಸಾ.ಶ. 56ರ ವಸಂತಕಾಲದಷ್ಟರಲ್ಲಿ, ದಾನಮಾಡಲ್ಪಟ್ಟ ಹಣವು ಯೆರೂಸಲೇಮಿಗೆ ತೆಗೆದುಕೊಂಡುಹೋಗುವುದಕ್ಕೆ ಸಿದ್ಧವಾಗಿತ್ತು. ದಾನಮಾಡಿದವರು ಆಯ್ಕೆಮಾಡುವ ಜನರೊಂದಿಗೆ ಪೌಲನು ಅಲ್ಲಿಗೆ ಹೋಗಲಿಕ್ಕಿದ್ದನು. ಅ. ಕೃತ್ಯಗಳು 20:4 ಹೇಳುವುದು: “ಪುರ್ರನ ಮಗನಾದ ಬೆರೋಯಪಟ್ಟಣದ ಸೋಪತ್ರನೂ ಥೆಸಲೊನೀಕದವರಲ್ಲಿ ಅರಿಸ್ತಾರ್ಕನೂ ಸೆಕುಂದನೂ ದೆರ್ಬೆಪಟ್ಟಣದ ಗಾಯನೂ ತಿಮೊಥೆಯನೂ ಆಸ್ಯಸೀಮೆಯವರಲ್ಲಿ ತುಖಿಕನೂ ತ್ರೊಫಿಮನೂ ಆಸ್ಯಸೀಮೆಯ ವರೆಗೆ ಅವನ ಜೊತೆಯಲ್ಲಿ ಹೋದರು.” ಅವರಲ್ಲಿ ಫಿಲಿಪ್ಪಿಯಲ್ಲಿರುವ ಕ್ರೈಸ್ತರನ್ನು ಪ್ರತಿನಿಧಿಸುತ್ತಿದ್ದ ಲೂಕನು ಸಹ ಇದ್ದನು ಎಂಬುದು ಸುವ್ಯಕ್ತ. ಹೀಗೆ ಕಡಿಮೆ ಅಂದರೆ ಒಂಬತ್ತು ಜನರೊಂದಿಗೆ ಅವನು ಯೆರೂಸಲೇಮಿಗೆ ಹೋದನು.

“ಸಂಗ್ರಹಿಸಿದ ಒಟ್ಟು ಮೊಬಲಗು ಗಮನಾರ್ಹವಾಗಿದ್ದಿರಬೇಕು, ಇಲ್ಲವಾದರೆ ಪೌಲನು ಹಾಗೂ ಇನ್ನಿತರ ಅನೇಕ ಪ್ರತಿನಿಧಿಗಳು ಪಟ್ಟ ಶ್ರಮ, ಅನುಭವಿಸಿದ ಸಂಕಷ್ಟ ಹಾಗೂ ಆದ ಖರ್ಚು ಇವೆಲ್ಲವೂ ವ್ಯರ್ಥವಾಗಿರುತ್ತಿತ್ತು” ಎಂದು ವಿದ್ವಾಂಸರಾದ ಡೀಟರ್‌ ಗ್ಯಾರ್‌ಗೇ ಹೇಳುತ್ತಾರೆ. ಪೌಲನೊಂದಿಗೆ ಹೋಗುತ್ತಿದ್ದ ಗುಂಪು ಸುರಕ್ಷೆಗಾಗಿ ಇರುತ್ತಿತ್ತು ಮಾತ್ರವಲ್ಲ, ಅಪ್ರಾಮಾಣಿಕತೆ ಎಂಬ ಆಪಾದನೆಯಿಂದ ಪೌಲನನ್ನು ರಕ್ಷಿಸುತ್ತಲೂ ಇತ್ತು. ಅವನೊಂದಿಗೆ ಕಳುಹಿಸಲ್ಪಟ್ಟವರು ಯೆರೂಸಲೇಮಿನಲ್ಲಿದ್ದ ದೇವಜನರ ಮುಂದೆ ಅನ್ಯಜನರ ಸಭೆಗಳನ್ನು ಪ್ರತಿನಿಧಿಸುತ್ತಿದ್ದರು.

ಕೊರಿಂಥದಿಂದ ಸಿರಿಯಕ್ಕೆ ಯಾನಮಾಡುತ್ತಾ, ಜನರ ಗುಂಪು ಪಸ್ಕಹಬ್ಬದಷ್ಟರೊಳಗಾಗಿ ಯೆರೂಸಲೇಮನ್ನು ತಲಪಿದ್ದಿರಬೇಕಾಗಿತ್ತು. ಆದರೆ, ಪೌಲನನ್ನು ಕೊಲ್ಲಲು ಹವಣಿಸುತ್ತಿದ್ದಾರೆ ಎಂಬ ಸುದ್ದಿಯು ಯೋಜನೆಗಳನ್ನು ಬದಲಿಸುವಂತೆ ಮಾಡಿತು. (ಅ. ಕೃತ್ಯಗಳು 20:3) ಪ್ರಾಯಶಃ ಅವನ ಶತ್ರುಗಳು ಅವನನ್ನು ಸಮುದ್ರದಲ್ಲಿಯೇ ಮುಗಿಸಿಬಿಡಲು ನಿರ್ಧರಿಸಿದ್ದರು.

ಪೌಲನಿಗೆ ಇನ್ನೂ ಹೆಚ್ಚಿನ ಚಿಂತೆಗಳಿದ್ದವು. ಅವನು ಹೊರಡುವ ಮುಂಚೆ, ರೋಮಿನಲ್ಲಿದ್ದ ಕ್ರೈಸ್ತರಿಗೆ, “ನನ್ನನ್ನು ಯೂದಾಯದಲ್ಲಿರುವ ಅವಿಧೇಯರ ಕೈಗೆ ತಪ್ಪಿಸಬೇಕೆಂತಲೂ ಯೆರೂಸಲೇಮಿಗೋಸ್ಕರ ನಾನು ಮಾಡುವಂಥ ಈ ಧರ್ಮಕಾರ್ಯವು ಅಲ್ಲಿರುವ ದೇವಜನರಿಗೆ ಹಿತಕರವಾಗಿ ತೋರಬೇಕೆಂತಲೂ ಪ್ರಾರ್ಥಿಸಿರಿ” ಎಂದು ಕೇಳಿಕೊಂಡನು. (ರೋಮಾಪುರ 15:30, 31) ದೇವಜನರು ಕಾಣಿಕೆಗಳನ್ನು ಖಂಡಿತವಾಗಿಯೂ ಉಪಕಾರಸ್ಮರಣೆಯಿಂದ ಪಡೆದುಕೊಳ್ಳುತ್ತಿದ್ದರಾದರೂ, ಅಲ್ಲಿಗೆ ಪೌಲನು ಹೋಗುವುದರಿಂದ ಒಟ್ಟಿನಲ್ಲಿ ಯೆಹೂದಿಯರ ಮಧ್ಯೆ ಉಂಟಾಗಸಾಧ್ಯವಿದ್ದ ತೊಂದರೆಯ ಬಗ್ಗೆ ಅವನು ಚಿಂತಿತನಾಗಿದ್ದನು.

ಅಪೊಸ್ತಲನು ಖಂಡಿತವಾಗಿಯೂ ಬಡವರ ಬಗ್ಗೆ ಕಾಳಜಿವಹಿಸಿದನು. ಸಂಗ್ರಹಿಸಲ್ಪಟ್ಟ ಹಣವು ಯಾವಾಗ ಅವರಿಗೆ ಕೊಡಲ್ಪಟ್ಟಿತು ಎಂಬುದನ್ನು ಶಾಸ್ತ್ರವಚನಗಳು ತಿಳಿಸುವುದಿಲ್ಲವಾದರೂ, ಅದನ್ನು ಗಮ್ಯಸ್ಥಾನಕ್ಕೆ ತಲಪಿಸಿದ ಸಂಗತಿಯು ಏಕತೆಯನ್ನು ಪ್ರವರ್ಧಿಸಿತು. ಮತ್ತು ಯೂದಾಯದ ಜೊತೆ ವಿಶ್ವಾಸಿಗಳಿಂದ ಸಿಕ್ಕಿದ ಆತ್ಮಿಕ ಧನಸಂಪತ್ತುಗಳಿಗಾಗಿ ಕೃತಜ್ಞತೆಯನ್ನು ತೋರಿಸುವಂತೆ ಅನ್ಯಜನರಾದ ಕ್ರೈಸ್ತರನ್ನು ಶಕ್ತಗೊಳಿಸಿತು. ಪೌಲನು ಯೆರೂಸಲೇಮಿಗೆ ಬಂದು ಸ್ವಲ್ಪ ಸಮಯವಾದ ನಂತರ, ಅವನು ದೇವಾಲಯದಲ್ಲಿ ಕಾಣಿಸಿಕೊಂಡನು. ಇದು ದೊಂಬಿ ಗಲಭೆಯನ್ನು ಉಂಟುಮಾಡಿತು ಮತ್ತು ಹೀಗೆ ಅವನು ಬಂಧಿಸಲ್ಪಟ್ಟನು. ಆದರೆ ಇದು ಕೊನೆಗೆ ಸೇನಾಧಿಪತಿಗಳಿಗೂ ರಾಜರಿಗೂ ಸಾಕ್ಷಿಯನ್ನು ಕೊಡುವುದಕ್ಕೆ ಅವನಿಗೆ ಅವಕಾಶಗಳನ್ನು ನೀಡಿತು.​—ಅ. ಕೃತ್ಯಗಳು 9:15; 21:​17-36; 23:11; 24:​1–26:32.

ಇಂದು ನಾವು ನೀಡಬಹುದಾದ ಸಹಾಯಗಳು

ಪ್ರಥಮ ಶತಮಾನದಿಂದ ಹಿಡಿದು ಇಲ್ಲಿಯ ವರೆಗೆ, ಬಹಳಷ್ಟು ವಿಷಯಗಳು ಬದಲಾಗಿವೆಯಾದರೂ ಮೂಲಭೂತ ತತ್ತ್ವಗಳು ಮಾತ್ರ ಹಾಗೇ ಉಳಿದಿವೆ. ಈಗ ಎಲ್ಲಿ ಹಣಕಾಸಿನ ಅಗತ್ಯವಿದೆ ಎಂಬುದರ ಬಗ್ಗೆ ಕ್ರೈಸ್ತರಿಗೆ ತಿಳಿಸಲಾಗುತ್ತದೆ. ಸ್ವ-ಇಚ್ಛೆಯಿಂದ, ದೇವರಿಗಾಗಿರುವ ಹಾಗೂ ಜೊತೆ ಮಾನವರಿಗಾಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಟ್ಟು ನಾವು ಅಗತ್ಯದಲ್ಲಿರುವವರಿಗೆ ಸಹಾಯಮಾಡಬೇಕು.​—ಮಾರ್ಕ 12:​28-31.

ಪ್ರಥಮ ಶತಮಾನದಲ್ಲಿ ದೇವಜನರ ಪರವಾಗಿ ಹಣಸಂಗ್ರಹವನ್ನು ಮಾಡಿದ ವಿಷಯವು, ಸುಸಂಘಟನೆ ಹಾಗೂ ಹಣದ ಬಗ್ಗೆ ಬಹಳ ಪ್ರಾಮಾಣಿಕವಾಗಿರಬೇಕು ಎಂಬುದನ್ನು ತಿಳಿಸುತ್ತದೆ. ಯೆಹೋವ ದೇವರು ತನ್ನ ಸೇವಕರ ಅಗತ್ಯಗಳ ಕುರಿತಾಗಿ ಬಲ್ಲವನಾಗಿದ್ದಾನಾದ್ದರಿಂದ ಕಷ್ಟದೆಸೆಗಳ ಮಧ್ಯೆಯೂ ಇತರರಿಗೆ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಮುಂದುವರಿಯುವಂತೆ ಮಾಡಲಿಕ್ಕಾಗಿ ಆತನು ಒದಗಿಸುವಿಕೆಯನ್ನು ಸಹ ನೀಡುತ್ತಾನೆ. (ಮತ್ತಾಯ 6:​25-34) ಆದರೂ, ನಮ್ಮ ಆರ್ಥಿಕ ಸ್ಥಿತಿ ಹೇಗೇ ಇರಲಿ ನಾವು ನಮ್ಮ ಕೈಲಾದ ಸಹಾಯವನ್ನು ನೀಡಬೇಕು. ಹೀಗೆ, ‘ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗದು, ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗದು.’​—2 ಕೊರಿಂಥ 8:15.

[ಪುಟ 26ರಲ್ಲಿರುವ ಚಿತ್ರಗಳು]

ಜವಾಬ್ದಾರಿಯುತ ಸ್ಥಾನಗಳಲ್ಲಿರುವವರಿಗೆ ವಿವೇಕವು ಅತ್ಯಗತ್ಯವಾಗಿದೆ

[ಪುಟ 27ರಲ್ಲಿರುವ ಚಿತ್ರಗಳು]

ವಿವೇಕವನ್ನು ದಯಪಾಲಿಸುವ ಏರ್ಪಾಡುಗಳನ್ನು ಕಡೆಗಣಿಸದಿರಿ