ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಸಿ ಹಿಂಸೆಯ ಮೇಲೆ ಜಯಗಳಿಸಿದ ಧೀರ ಸಮಗ್ರತಾ ಪಾಲಕರು

ನಾಸಿ ಹಿಂಸೆಯ ಮೇಲೆ ಜಯಗಳಿಸಿದ ಧೀರ ಸಮಗ್ರತಾ ಪಾಲಕರು

ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಿರಿ

ನಾಸಿ ಹಿಂಸೆಯ ಮೇಲೆ ಜಯಗಳಿಸಿದ ಧೀರ ಸಮಗ್ರತಾ ಪಾಲಕರು

“ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.” (ಜ್ಞಾನೋಕ್ತಿ 27:11) ಈ ಆದರಣೀಯ ಮನವಿಯು, ದೇವರ ಬುದ್ಧಿವಂತ ಸೃಷ್ಟಿಜೀವಿಗಳು ಆತನಿಗೆ ನಂಬಿಗಸ್ತರೂ ನಿಷ್ಠಾವಂತರೂ ಆಗಿರುವುದರಿಂದ ಯೆಹೋವನ ಹೃದಯವನ್ನು ಸಂತೋಷಪಡಿಸಬಹುದೆಂಬುದನ್ನು ತೋರಿಸುತ್ತದೆ. (ಚೆಫನ್ಯ 3:17) ಆದರೆ, ದೂರುಗಾರನಾಗಿರುವ ಸೈತಾನನು ಯೆಹೋವನನ್ನು ಸೇವಿಸುವವರ ಸಮಗ್ರತೆಯನ್ನು ಮುರಿಯುವ ದೃಢನಿರ್ಧಾರವನ್ನು ಮಾಡಿದ್ದಾನೆ.​—ಯೋಬ 1:​10, 11.

ವಿಶೇಷವಾಗಿ, 20ನೇ ಶತಮಾನದ ಆದಿಭಾಗದಲ್ಲಿ ಸೈತಾನನು ಸ್ವರ್ಗದಿಂದ ಭೂಮಿಗೆ ದೊಬ್ಬಲ್ಪಟ್ಟಾಗಿನಿಂದ ಅವನು ಯೆಹೋವನ ಜನರ ಕಡೆಗೆ ಮಹಾ ರೌದ್ರವನ್ನು ವ್ಯಕ್ತಪಡಿಸಿದ್ದಾನೆ. (ಪ್ರಕಟನೆ 12:​10, 12) ಹಾಗಿದ್ದರೂ, ಸತ್ಯ ಕ್ರೈಸ್ತರು “ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಂತು” ದೇವರ ಕಡೆಗೆ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡಿದ್ದಾರೆ. (ಕೊಲೊಸ್ಸೆ 4:​12, NW) ಎರಡನೇ ಲೋಕ ಯುದ್ಧಕ್ಕೆ ಮುಂಚೆ ಮತ್ತು ಆ ಯುದ್ಧದ ಸಮಯದಲ್ಲಿ ಜರ್ಮನಿಯ ಯೆಹೋವನ ಸಾಕ್ಷಿಗಳು ತೋರಿಸಿದ ಸಮಗ್ರತೆಯಲ್ಲಿ ಎದ್ದುಕಾಣುವ ಒಂದು ಉದಾಹರಣೆಯನ್ನು ಸಂಕ್ಷಿಪ್ತವಾಗಿ ಪರಿಗಣಿಸೋಣ.

ಹುರುಪುಳ್ಳ ಚಟುವಟಿಕೆ ಸಮಗ್ರತೆಯ ಪರೀಕ್ಷೆಗಳಿಗೆ ನಡೆಸುತ್ತದೆ

ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳನ್ನು ಬಿಬೇಲ್‌ಫಾರ್ಷ ಎಂದು ಕರೆಯಲಾಗುತ್ತಿತ್ತು. 1920 ಮತ್ತು 1930ರ ಆದಿಭಾಗದಲ್ಲಿ ಅವರು ಬೈಬಲ್‌ ಸಾಹಿತ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಹಂಚಿದರು. 1919 ಮತ್ತು 1933ರ ಮಧ್ಯದಲ್ಲಿ, ಜರ್ಮನಿಯಲ್ಲಿದ್ದ ಪ್ರತಿಯೊಂದು ಕುಟುಂಬಕ್ಕೆ ಸರಾಸರಿ ಎಂಟು ಪುಸ್ತಕಗಳು, ಪುಸ್ತಿಕೆಗಳು ಇಲ್ಲವೇ ಪತ್ರಿಕೆಗಳನ್ನು ವಿತರಿಸಿದರು.

ಆ ಸಮಯದಲ್ಲಿ, ಕ್ರಿಸ್ತನ ಅಭಿಷಿಕ್ತ ಹಿಂಬಾಲಕರ ಒಂದು ದೊಡ್ಡ ಗುಂಪು ಜರ್ಮನಿಯಲ್ಲಿತ್ತು. ವಾಸ್ತವದಲ್ಲಿ, 1933ರಲ್ಲಿ ಲೋಕವ್ಯಾಪಕವಾಗಿ ಕರ್ತನ ಸಂಧ್ಯಾಭೋಜನದಲ್ಲಿ ಪಾಲ್ಗೊಂಡ 83,941 ಜನರಲ್ಲಿ, ಬಹುಮಟ್ಟಿಗೆ 30 ಪ್ರತಿಶತದಷ್ಟು ಮಂದಿ ಜರ್ಮನಿಯಲ್ಲಿ ವಾಸಿಸುತ್ತಿದ್ದರು. ಸ್ವಲ್ಪ ಸಮಯದಲ್ಲಿ, ಈ ಜರ್ಮನ್‌ ಸಾಕ್ಷಿಗಳು ತಮ್ಮ ಸಮಗ್ರತೆಯನ್ನು ಬಲಹೀನಗೊಳಿಸುವ ಪರೀಕ್ಷೆಗಳನ್ನು ಎದುರಿಸಿದರು. (ಪ್ರಕಟನೆ 12:17; 14:12) ಕೆಲಸಗಳಿಂದ ವಜಾಮಾಡುವಿಕೆ, ಮನೆಗಳ ಮೇಲೆ ದಾಳಿಗಳು ಮತ್ತು ಶಾಲೆಗಳಿಂದ ತೆಗೆದುಹಾಕುವಿಕೆಯಿಂದ ಆರಂಭವಾದ ಹಿಂಸೆಯು ಹೊಡೆತಗಳು, ಬಂಧನಗಳು ಮತ್ತು ಸೆರೆವಾಸಗಳವರೆಗೆ ವೇಗವಾಗಿ ಬೆಳೆದವು. (ಚಿತ್ರ 1) ಇದರ ಪರಿಣಾಮವಾಗಿ, ಎರಡನೇ ಲೋಕಯುದ್ಧದ ಮುಂಚಿನ ವರ್ಷಗಳಲ್ಲಿ, ಕೂಟ ಶಿಬಿರದಲ್ಲಿದ್ದವರಲ್ಲಿ 5ರಿಂದ 10 ಪ್ರತಿಶತದಷ್ಟು ಮಂದಿ ಯೆಹೋವನ ಸಾಕ್ಷಿಗಳಾಗಿದ್ದರು.

ನಾಸಿಗಳು ಸಾಕ್ಷಿಗಳನ್ನು ಏಕೆ ಹಿಂಸಿಸಿದರು?

ಆದಾಗ್ಯೂ ಯೆಹೋವನ ಸಾಕ್ಷಿಗಳು ನಾಸಿ ಆಳ್ವಿಕೆಯ ಆವೇಶವನ್ನು ಏಕೆ ಕೆರಳಿಸಿದರು? ಹಿಟ್ಲರ್‌​—1889-1936: ಹುಬ್ರಿಸ್‌, ಎಂಬ ತಮ್ಮ ಪುಸ್ತಕದಲ್ಲಿ ಇತಿಹಾಸದ ಅಧ್ಯಾಪಕರಾದ ಇಯನ್‌ ಕೇರ್‌ಶಾ ಗಮನಿಸುವುದೇನೆಂದರೆ, “ನಾಸಿ ಸರಕಾರದ ಸಂಪೂರ್ಣ ಹಕ್ಕುಗಳಿಗೆ ತಮ್ಮನ್ನು ಬಿಟ್ಟುಕೊಡಲು” ನಿರಾಕರಿಸಿದ್ದರಿಂದ ಸಾಕ್ಷಿಗಳು ಹಿಂಸೆಗೆ ಗುರಿಯಾದರು.

ಇತಿಹಾಸದ ಪ್ರೊಫೆಸರರಾದ ರಾಬರ್ಟ್‌ ಪಿ. ಎರಿಕ್ಸನ್‌ ಮತ್ತು ಯೆಹೂದಿಗಳ ಕುರಿತು ಅಭ್ಯಸಿಸುತ್ತಿದ್ದ ಪ್ರೊಫೆಸರರಾದ ಸುಸೆನ್ನಾ ಹೆಶಲ್‌ ಅವರು ಬರೆದಿರುವ ಬಿಟ್ರೇಯಲ್‌-ಜರ್ಮನ್‌ ಚರ್ಚ್‌ಸ್‌ ಆ್ಯಂಡ್‌ ದ ಹೋಲೋಕಾಸ್ಟ್‌ ಎಂಬ ಪುಸ್ತಕದಲ್ಲಿ ವಿವರಿಸಿದ್ದೇನೆಂದರೆ, ಸಾಕ್ಷಿಗಳು “ಹಿಂಸಾಚಾರ ಇಲ್ಲವೇ ಮಿಲಿಟರಿ ಪಡೆಯಲ್ಲಿ ಭಾಗವಹಿಸಲು ನಿರಾಕರಿಸಿದರು. . . . ಸಾಕ್ಷಿಗಳು ರಾಜಕೀಯ ತಾಟಸ್ಥ್ಯವನ್ನು ನಂಬಿದ್ದರು. ಇದರ ಅರ್ಥ, ಅವರು ಹಿಟ್ಲರನಿಗೆ ಮತ ಹಾಕುವುದಾಗಲಿ ಅಥವಾ ಜಯಕಾರವನ್ನು ಹೇಳುವುದನ್ನು ಮಾಡಲಿಲ್ಲ.” ನಾಸಿಯರ ಕೋಪ ಕೆರಳಲು ಮತ್ತು ಅವರು ಸಾಕ್ಷಿಗಳಿಗೆ ಹಾನಿಯನ್ನು ಉಂಟುಮಾಡುವುದಕ್ಕೆ ಇದೇ ಮೂಲಕಾರಣವಾಗಿತ್ತು. ಏಕೆಂದರೆ, “ಅಂಥ ನಿರಾಕರಣೆಯನ್ನು ರಾಷ್ಟ್ರೀಯ ಸಮಾಜವಾದವು ಸಹಿಸಲಿಲ್ಲ” ಎಂದು ಅದೇ ಪುಸ್ತಕವು ಕೂಡಿಸಿ ಹೇಳುತ್ತದೆ.

ಲೋಕವ್ಯಾಪಕ ಖಂಡನೆ ಹಾಗೂ ತೀವ್ರ ಆಕ್ರಮಣ

ಆಗಿನ ಸಮಯದಲ್ಲಿ ಕೆಲಸದ ನಾಯಕತ್ವ ವಹಿಸುತ್ತಿದ್ದ ಜೋಸೆಫ್‌ ಎಫ್‌. ರದರ್‌ಫರ್ಡರು, ನಾಸಿಯರ ಅಸಹಿಷ್ಣುತೆಯ ವಿರುದ್ಧ ಆಕ್ಷೇಪವನ್ನು ಸೂಚಿಸುವ ಪತ್ರವೊಂದನ್ನು 1934, ಫೆಬ್ರವರಿ 9ರಂದು ಒಬ್ಬ ವಿಶೇಷ ದೂತನ ಮೂಲಕವಾಗಿ ಹಿಟ್ಲರನಿಗೆ ಕಳುಹಿಸಿದರು. (ಚಿತ್ರ 2) 1934, ಅಕ್ಟೋಬರ್‌ 7ರಂದು, ಜರ್ಮನಿಯನ್ನೊಳಗೊಂಡಂತೆ 50 ದೇಶಗಳಿಂದ ಯೆಹೋವನ ಸಾಕ್ಷಿಗಳು ರದರ್‌ಫರ್ಡರ ಪತ್ರವನ್ನು ಹಿಂಬಾಲಿಸಿ ಆಕ್ಷೇಪವನ್ನು ಸೂಚಿಸುವ 20,000 ಪತ್ರಗಳನ್ನು ಮತ್ತು ಟೆಲಿಗ್ರಾಮ್‌ಗಳನ್ನು ಹಿಟ್ಲರನಿಗೆ ಕಳುಹಿಸಿದರು.

ಹಿಂಸೆಯನ್ನು ಹೆಚ್ಚಿಸುವ ಮೂಲಕ ನಾಸಿಯರು ಇದಕ್ಕೆ ಪ್ರತ್ಯುತ್ತರ ಕೊಟ್ಟರು. 1935, ಏಪ್ರಿಲ್‌ 1ರಂದು, ದೇಶದಾದ್ಯಂತ ಸಾಕ್ಷಿಗಳನ್ನು ನಿಷೇಧಿಸಲಾಯಿತು. 1936, ಆಗಸ್ಟ್‌ 28ರಂದು, ಗೆಸ್ಟಾಪೊ ಪೊಲೀಸರು ಅವರ ವಿರುದ್ಧ ತೀವ್ರ ಆಕ್ರಮಣವನ್ನು ಆರಂಭಿಸಿದರು. ಆಗಲೂ, ಸಾಕ್ಷಿಗಳು “ಕಿರುಹೊತ್ತಿಗೆಗಳನ್ನು ಹಂಚುತ್ತಾ ಇದ್ದರು ಮತ್ತು ಇನ್ನಿತರ ರೀತಿಗಳಲ್ಲಿ ತಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುತ್ತಿದ್ದರು” ಎಂಬುದಾಗಿ ಬಿಟ್ರೇಯಲ್‌​—ಜರ್ಮನ್‌ ಚರ್ಚ್‌ಸ್‌ ಆ್ಯಂಡ್‌ ದ ಹೋಲೋಕಾಸ್ಟ್‌ ಹೇಳುತ್ತದೆ.

ಉದಾಹರಣೆಗೆ, 1936, ಡಿಸೆಂಬರ್‌ 12ರಂದು, ಸುಮಾರು 3,500 ಸಾಕ್ಷಿಗಳು ಗೆಸ್ಟಾಪೊ ಪೊಲೀಸರು ಹತ್ತಿರದಲ್ಲಿರುವಾಗಲೇ, ತಾವು ಅನುಭವಿಸುತ್ತಿರುವ ದುರುಪಚಾರದ ಕುರಿತ ಮುದ್ರಿತ ಠರಾವಿನ ಹತ್ತಾರು ಸಾವಿರ ಪ್ರತಿಗಳನ್ನು ಹಂಚಿದರು. ಈ ಕಾರ್ಯಾಚರಣೆಯ ಕುರಿತು ದ ವಾಚ್‌ಟವರ್‌ ಪತ್ರಿಕೆಯು ವರದಿಸಿದ್ದು: “ಇದೊಂದು ಮಹಾ ವಿಜಯವಾಗಿದ್ದು, ನಂಬಿಗಸ್ತ ಕೆಲಸಗಾರರಿಗೆ ವರ್ಣನಾತೀತ ಆನಂದವನ್ನು ತರುತ್ತಾ, ವೈರಿಗೆ ಹರಿತವಾದ ಚೂರಿಯಿಂದ ಇರಿದಂತಾಗಿತ್ತು.”​—ರೋಮಾಪುರ 9:17.

ಹಿಂಸೆ ವಿಫಲಗೊಳ್ಳುತ್ತದೆ!

ಯೆಹೋವನ ಸಾಕ್ಷಿಗಳಿಗಾಗಿ ಹುಡುಕುವುದನ್ನು ನಾಸಿಗಳು ಮುಂದುವರಿಸಿದರು. 1939ರಷ್ಟರಲ್ಲಿ, ಆರು ಸಾವಿರ ಮಂದಿಯನ್ನು ಸೆರೆಯಲ್ಲಿಡಲಾಯಿತು ಮತ್ತು ಸಾವಿರಾರು ಜನರನ್ನು ಕೂಟ ಶಿಬಿರಗಳಿಗೆ ಕಳುಹಿಸಲಾಯಿತು. (ಚಿತ್ರ 3) ಎರಡನೇ ಲೋಕ ಯುದ್ಧದ ಅಂತ್ಯದಲ್ಲಿ ಪರಿಸ್ಥಿತಿಯು ಹೇಗಿತ್ತು? ಸೆರೆಯಲ್ಲಿಡಲ್ಪಟ್ಟ ಸಾಕ್ಷಿಗಳಲ್ಲಿ ಸುಮಾರು 2,000 ಮಂದಿ ಮರಣಹೊಂದಿದ್ದರು. ಅವರಲ್ಲಿ 250ಕ್ಕಿಂತಲೂ ಹೆಚ್ಚು ಮಂದಿ ವಧಿಸಲ್ಪಟ್ಟಿದ್ದರು. ಅಷ್ಟಾದರೂ, “ಯೆಹೋವನ ಸಾಕ್ಷಿಗಳು ತೊಂದರೆಯ ಮಧ್ಯದಲ್ಲಿಯೂ ಬಹುಮಟ್ಟಿಗೆ ತಮ್ಮ ನಂಬಿಕೆಯಲ್ಲಿ ಅಚಲರಾಗಿದ್ದರು” ಎಂಬುದಾಗಿ ಪ್ರೊಫೆಸರರಾದ ಎರಿಕ್ಸನ್‌ ಮತ್ತು ಹೆಸಲ್‌ ಬರೆಯುತ್ತಾರೆ. ಇದರ ಪರಿಣಾಮವಾಗಿ ಹಿಟ್ಲರನ ಆಳ್ವಿಕೆಯು ಕುಸಿದುಬಿದ್ದಾಗ, ಸಾವಿರಕ್ಕೂ ಹೆಚ್ಚು ಸಾಕ್ಷಿಗಳು ಶಿಬಿರಗಳಿಂದ ಜಯಭರಿತರಾಗಿ ಹೊರಬಂದರು.​—ಚಿತ್ರ 4 ಅ. ಕೃತ್ಯಗಳು 5:​38, 39; ರೋಮಾಪುರ 8:​35-37.

ಹಿಂಸೆಯನ್ನು ಸಹಿಸಿಕೊಳ್ಳಲು ಯೆಹೋವನ ಜನರಿಗೆ ಯಾವುದು ಬಲವನ್ನು ನೀಡಿತು? ಕೂಟ ಶಿಬಿರದಿಂದ ಪಾರಾಗಿ ಉಳಿದ ಅಡಾಲ್ಫ್‌ ಅರ್ನಾಲ್ಡ್‌ ವಿವರಿಸಿದ್ದು: “ನೀವು ತೀರ ಮನಗುಂದಿದ ಸ್ಥಿತಿಯಲ್ಲಿದ್ದರೂ ಯೆಹೋವನು ನಿಮ್ಮನ್ನು ನೋಡುತ್ತಾನೆ, ನೀವು ಏನನ್ನು ಅನುಭವಿಸುತ್ತಿದ್ದೀರೆಂದು ಆತನಿಗೆ ತಿಳಿದಿರುತ್ತದೆ ಮತ್ತು ಆ ಸನ್ನಿವೇಶದಿಂದ ಹೊರಬರಲು ಮತ್ತು ನಂಬಿಗಸ್ತರಾಗಿ ಉಳಿಯಲು ಬೇಕಾಗಿರುವ ಬಲವನ್ನು ಆತನು ನಿಮಗೆ ಒದಗಿಸುತ್ತಾನೆ. ಆತನ ಹಸ್ತವು ಮೋಟುಗೈ ಅಲ್ಲ.” ಆ ನಂಬಿಗಸ್ತ ಕ್ರೈಸ್ತರಿಗೆ ಪ್ರವಾದಿಯಾದ ಚೆಫನ್ಯನ ಮಾತುಗಳು ಎಷ್ಟು ಚೆನ್ನಾಗಿ ಅನ್ವಯಿಸುತ್ತವೆ! ಅವನು ಘೋಷಿಸಿದ್ದು: “ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು.” (ಚೆಫನ್ಯ 3:17) ಇಂದು ಸತ್ಯ ದೇವರ ಆರಾಧಕರಾಗಿರುವವರೆಲ್ಲರೂ, ನಾಸಿ ಹಿಂಸೆಯ ಮಧ್ಯದಲ್ಲಿ ಸಮಗ್ರತೆಯನ್ನು ಕಾಪಾಡಿಕೊಂಡ ಆ ನಿಷ್ಠಾವಂತ ಸಾಕ್ಷಿಗಳ ನಂಬಿಕೆಯನ್ನು ಅನುಕರಿಸುವ ಮೂಲಕ ಯೆಹೋವನ ಹೃದಯವನ್ನು ಉಲ್ಲಾಸಪಡಿಸಲಿ.​—ಫಿಲಿಪ್ಪಿ 1:​12-14.

[ಪುಟ 8ರಲ್ಲಿರುವ ಚಿತ್ರ ಕೃಪೆ]

Państwowe Muzeum Oświȩcim-Brzezinka, courtesy of the USHMM Photo Archives