ಮಾನವ ಬಲಹೀನತೆಯನ್ನು ಜಯಿಸುವುದು
ಮಾನವ ಬಲಹೀನತೆಯನ್ನು ಜಯಿಸುವುದು
“ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ.”—ರೋಮಾಪುರ 8:6.
1. ಮಾನವ ದೇಹದ ಕುರಿತಾಗಿ ಕೆಲವರ ದೃಷ್ಟಿಕೋನವೇನು ಮತ್ತು ಯಾವ ಪ್ರಶ್ನೆಗೆ ನಾವು ಗಮನಕೊಡುವುದು ಉಚಿತ?
“ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.” (ಕೀರ್ತನೆ 139:14) ಯೆಹೋವನ ಸೃಷ್ಟಿಗಳಲ್ಲಿ ಒಂದಾಗಿರುವ ಮಾನವ ದೇಹದ ಕುರಿತಾಗಿ ಯೋಚಿಸುತ್ತಿರುವಾಗ ಕೀರ್ತನೆಗಾರನಾದ ದಾವೀದನು ಹೀಗೆ ಹಾಡಿದನು. ಸಕಾರಣವುಳ್ಳ ಅಂಥ ಸ್ತುತಿಯನ್ನು ಕೊಡುವ ಬದಲಿಗೆ, ಕೆಲವು ಧಾರ್ಮಿಕ ಬೋಧಕರು ಶರೀರವನ್ನು ಪಾಪದ ಅಡಗುತಾಣ ಮತ್ತು ಸಾಧನವಾಗಿ ಪರಿಗಣಿಸುತ್ತಾರೆ. ಅದನ್ನು “ಅಜ್ಞಾನದ ಬಟ್ಟೆ, ದುರ್ಗುಣಗಳ ತಳಪಾಯ, ಭ್ರಷ್ಟಾಚಾರದ ಸಂಕೋಲೆಗಳು, ಕತ್ತಲು ತುಂಬಿರುವ ಪಂಜರ, ಜೀವಂತ ಮರಣ, ಜೀವಂತ ಶವ, ನಡೆದಾಡುವ ಗೋರಿ” ಎಂದೆಲ್ಲಾ ಕರೆಯಲಾಗುತ್ತದೆ. ನಿಜ, ಅಪೊಸ್ತಲ ಪೌಲನು ಸಹ, “ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲ” ಎಂದು ಹೇಳಿದ್ದಾನೆ. (ರೋಮಾಪುರ 7:18) ಆದರೆ ನಾವು ಒಂದು ಪಾಪಪೂರ್ಣ ದೇಹದೊಳಗೆ ನಿರೀಕ್ಷೆಯಿಲ್ಲದೆ ಬಂಧಿಸಲ್ಪಟ್ಟಿದ್ದೇವೆಂದು ಇದರರ್ಥವೊ?
2. (ಎ) ‘ಶರೀರಭಾವದವುಗಳ ಮೇಲೆ ಮನಸ್ಸಿಡುವುದರ’ ಅರ್ಥವೇನು? (ಬಿ) ದೇವರನ್ನು ಮೆಚ್ಚಿಸಲು ಬಯಸುವಂಥ ಮಾನವರೊಳಗೆ “ಶರೀರ” ಮತ್ತು “ಆತ್ಮದ” ನಡುವೆ ಯಾವ ಸಂಘರ್ಷ ನಡೆಯುತ್ತದೆ?
2 ಶಾಸ್ತ್ರವಚನಗಳು ಕೆಲವೊಮ್ಮೆ “ಶರೀರ” ಎಂಬ ಪದವನ್ನು, ದಂಗೆಕೋರ ಆದಾಮನ ಪಾಪಪೂರ್ಣ ವಂಶಜನೋಪಾದಿ ಅಪರಿಪೂರ್ಣ ಸ್ಥಿತಿಯಲ್ಲಿರುವ ಮಾನವನನ್ನು ಪ್ರತಿನಿಧಿಸಲು ಉಪಯೋಗಿಸುತ್ತವೆ. (ಎಫೆಸ 2:3; ಕೀರ್ತನೆ 51:5; ರೋಮಾಪುರ 5:12) ನಮಗೆ ಆದಾಮನಿಂದ ಸಿಕ್ಕಿದಂಥ ಆಸ್ತಿಯು ನಮ್ಮಲ್ಲಿ ‘ನರಭಾವದ ಬಲಹೀನತೆಯನ್ನು’ ಉಂಟುಮಾಡಿದೆ. (ರೋಮಾಪುರ 6:19) ಆದುದರಿಂದ ಪೌಲನು ಈ ಎಚ್ಚರಿಕೆಯನ್ನು ಕೊಟ್ಟಿದ್ದಾನೆ: “ಶರೀರಭಾವದವುಗಳ ಮೇಲೆ ಮನಸ್ಸಿಡುವುದು ಮರಣ.” (ರೋಮಾಪುರ 8:6) ‘ಶರೀರಭಾವದವುಗಳ ಮೇಲೆ ಮನಸ್ಸಿಡುವುದರ’ ಅರ್ಥ, ಪಾಪಪೂರ್ಣ ಶರೀರದಭಿಲಾಷೆಗಳಿಂದ ನಿಯಂತ್ರಿಸಲ್ಪಡುವುದು ಅಥವಾ ಪ್ರಚೋದಿಸಲ್ಪಡುವುದೇ ಆಗಿದೆ. (1 ಯೋಹಾನ 2:16) ಆದುದರಿಂದ ನಾವು ದೇವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವಲ್ಲಿ, ನಮ್ಮ ಆತ್ಮಿಕತೆ ಮತ್ತು ನಮ್ಮ ಪಾಪಪೂರ್ಣ ಸ್ವಭಾವದ ನಡುವೆ ಸತತವಾದ ಸಂಘರ್ಷಣೆ ನಡೆಯುತ್ತಿರುತ್ತದೆ. ಏಕೆಂದರೆ ಈ ಪಾಪಪೂರ್ಣ ಸ್ವಭಾವವು, ‘ಶರೀರಭಾವದ ಕರ್ಮಗಳನ್ನು’ ನಡೆಸುವಂತೆ ನಮ್ಮ ಮೇಲೆ ತುಂಬ ಒತ್ತಡವನ್ನು ಹೇರುತ್ತದೆ. (ಗಲಾತ್ಯ 5:17-23; 1 ಪೇತ್ರ 2:11) ತನ್ನೊಳಗೆ ನಡೆಯುತ್ತಿರುವ ಈ ಸಂಕಟಮಯ ಸಂಘರ್ಷವನ್ನು ವರ್ಣಿಸಿದ ನಂತರ ಪೌಲನು ಉದ್ಗರಿಸಿದ್ದು: “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?” (ರೋಮಾಪುರ 7:24) ಹಾಗಾದರೆ, ಪೌಲನು ಶೋಧನೆಯ ಎದುರಿನಲ್ಲಿ ಏನೂ ಮಾಡಲಾಗದ ನಿಸ್ಸಹಾಯಕ ವ್ಯಕ್ತಿಯಾಗಿದ್ದನೊ? ಇಲ್ಲ ಎಂದು ಬೈಬಲ್ ಜನಜನಿತವಾಗಿ ಉತ್ತರಿಸುತ್ತದೆ!
ಶೋಧನೆ ಮತ್ತು ಪಾಪ—ವಾಸ್ತವಿಕ ಸಂಗತಿಗಳು
3. ಪಾಪ ಮತ್ತು ಶೋಧನೆಯ ಕುರಿತಾಗಿ ಹೆಚ್ಚಿನವರ ಅಭಿಪ್ರಾಯವೇನು, ಆದರೆ ಅಂಥ ಮನೋಭಾವದ ವಿರುದ್ಧ ಬೈಬಲ್ ಹೇಗೆ ಎಚ್ಚರಿಕೆಯನ್ನು ಕೊಡುತ್ತದೆ?
3 ಇಂದು ಅನೇಕರು, ನಮ್ಮೊಳಗೆ ಪಾಪ ಇದೆ ಎಂಬ ಸಂಗತಿಯನ್ನು ಅಂಗೀಕರಿಸುವುದಿಲ್ಲ. ಕೆಲವರು, ಮಾನವರ ಚಿಕ್ಕಪುಟ್ಟ ತಪ್ಪುಗಳನ್ನು ವರ್ಣಿಸಲಿಕ್ಕಾಗಿ “ಪಾಪ” ಎಂಬ ಪದವನ್ನು ಹಾಸ್ಯಕ್ಕಾಗಿ ಹಳೆಯ ಕಾಲದ ಪದದೋಪಾದಿ ಉಪಯೋಗಿಸುತ್ತಾರೆ. “ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಒಳ್ಳೇದಕ್ಕಾಗಲಿ ಕೆಟ್ಟದ್ದಕ್ಕಾಗಲಿ ಸರಿಯಾಗಿ ಪ್ರತಿಫಲವನ್ನು ಹೊಂದುವದಕ್ಕೋಸ್ಕರ ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕು” ಎಂಬ ವಿಷಯವನ್ನು ಅವರು ಗ್ರಹಿಸುವುದಿಲ್ಲ. (2 ಕೊರಿಂಥ 5:10) ಕೆಲವರು ತುಂಬ ಹಗುರಭಾವದಿಂದ ಹೇಳುವುದು: “ಶೋಧನೆಯೊಂದನ್ನು ಬಿಟ್ಟರೆ ಬೇರೆಲ್ಲವನ್ನೂ ನಾನು ಪ್ರತಿರೋಧಿಸಬಲ್ಲೆ!” ಕೆಲವರು ಯಾವ ಸಂಸ್ಕೃತಿಯಲ್ಲಿ ಜೀವಿಸುತ್ತಿದ್ದಾರೊ ಅದು ಯಾವುದೇ ವಿಷಯದಲ್ಲಿ ಅಂದರೆ ಆಹಾರ, ಲೈಂಗಿಕ ಸಂಬಂಧ, ಮೋಜು ಅಥವಾ ಸಾಧನೆಯ ವಿಷಯದಲ್ಲಿ ದಿಢೀರ್ ಸುಖಾನುಭವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತದೆ. ಅವರಿಗೆ ಎಲ್ಲವೂ ಬೇಕು ಮಾತ್ರವಲ್ಲ, ಅದು ಈಗಿಂದೀಗಲೇ ಬೇಕು! (ಲೂಕ 15:12) ಅವರು ತಮಗೆ ಸದ್ಯಕ್ಕೆ ಎಷ್ಟು ಸುಖ ಸಿಗುವುದೆಂಬುದರ ಕುರಿತಾಗಿಯೇ ಚಿಂತಿಸುತ್ತಾರೆ ಹೊರತು ‘ವಾಸ್ತವವಾದ ಜೀವದ’ ಭಾವೀ ಆನಂದಕ್ಕೆ ಎದುರುನೋಡುವುದಿಲ್ಲ. (1 ತಿಮೊಥೆಯ 6:19) ಆದರೆ ನಾವು ಜಾಗರೂಕತೆಯಿಂದ ಯೋಚಿಸಿ, ದೂರದೃಷ್ಟಿಯುಳ್ಳವರಾಗಿದ್ದು ನಮಗೆ ಆತ್ಮಿಕವಾಗಿಯಾಗಲಿ, ಇನ್ಯಾವುದೇ ವಿಧದಲ್ಲಾಗಲಿ ಹಾನಿಯಾಗುವಂಥ ವಿಷಯಗಳಿಂದ ದೂರವಿರುವಂತೆ ಬೈಬಲ್ ಕಲಿಸುತ್ತದೆ. ದೇವರಿಂದ ಪ್ರೇರಿತವಾಗಿರುವ ಒಂದು ಜ್ಞಾನೋಕ್ತಿಯು ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋಕ್ತಿ 27:12.
4. ಒಂದನೆಯ ಕೊರಿಂಥ 10:12, 13ರಲ್ಲಿ ಯಾವ ಬುದ್ಧಿವಾದವನ್ನು ಪೌಲನು ಕೊಟ್ಟನು?
4 ಕೊರಿಂಥ ನಗರವು, ನೈತಿಕ ನೀತಿಭ್ರಷ್ಟತೆಗಾಗಿ ಕುಖ್ಯಾತವಾಗಿತ್ತು. ಆದುದರಿಂದ ಅಲ್ಲಿ ವಾಸಿಸುತ್ತಿದ್ದ ಕ್ರೈಸ್ತರಿಗೆ ಪೌಲನು ಬರೆದಾಗ, ಅವನು ಅವರಿಗೆ ಶೋಧನೆ ಮತ್ತು ಪಾಪದ ಶಕ್ತಿಯ ವಿರುದ್ಧ ಒಂದು ಒಳ್ಳೆಯ ಎಚ್ಚರಿಕೆಯನ್ನು ಕೊಟ್ಟನು. ಅವನಂದದ್ದು: “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ. ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:12, 13) ಯುವಕರಾಗಲಿ, ವೃದ್ಧರಾಗಲಿ, ಗಂಡಾಗಲಿ, ಹೆಣ್ಣಾಗಲಿ, ಯಾರೇ ಆಗಿರಲಿ ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಬೇರೆ ಕಡೆಗಳಲ್ಲಿ ನಾವೆಲ್ಲರೂ ಅನೇಕ ಶೋಧನೆಗಳನ್ನು ಎದುರಿಸುತ್ತೇವೆ. ಆದುದರಿಂದ, ನಾವು ಪೌಲನ ಮಾತುಗಳನ್ನು ಪರೀಕ್ಷಿಸಿ, ಅವುಗಳಿಂದ ನಾವೇನು ಕಲಿಯಬಹುದೆಂಬುದನ್ನು ನೋಡೋಣ.
ಮಿತಿಮೀರಿದ ಆತ್ಮವಿಶ್ವಾಸ ಬೇಡ
5. ಮಿತಿಮೀರಿದ ಆತ್ಮವಿಶ್ವಾಸ ಏಕೆ ಗಂಡಾಂತರಕಾರಿಯಾಗಿದೆ?
5 ಪೌಲನು ತಿಳಿಸುವುದು: “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” ನಮ್ಮ ನೈತಿಕ ಬಲದ ಕುರಿತಾಗಿ ಮಿತಿಮೀರಿದ ಆತ್ಮವಿಶ್ವಾಸವು ಗಂಡಾಂತರಕಾರಿಯಾಗಿದೆ. ಪಾಪದ ಸ್ವಭಾವ ಮತ್ತು ಅದಕ್ಕಿರುವ ಶಕ್ತಿಯ ಕುರಿತಾಗಿ ನಮಗೆ ಸರಿಯಾದ ತಿಳುವಳಿಕೆಯಿಲ್ಲ ಎಂಬುದನ್ನು ಅದು ತೋರಿಸುತ್ತದೆ. ಮೋಶೆ, ದಾವೀದ, ಸೊಲೊಮೋನ ಮತ್ತು ಅಪೊಸ್ತಲ ಪೇತ್ರರಂಥ ಜನರೇ ಪಾಪಕ್ಕೆ ಬಲಿಬಿದ್ದಿರುವಾಗ, ನಮ್ಮಂಥವರಿಗೆ ಹಾಗಾಗುವ ಸಾಧ್ಯತೆಯಿಲ್ಲವೆಂದು ನಮಗನಿಸಬೇಕೊ? (ಅರಣ್ಯಕಾಂಡ 20:2-13; 2 ಸಮುವೇಲ 11:1-27; 1 ಅರಸುಗಳು 11:1-6; ಮತ್ತಾಯ 26:69-75) “ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು; ಜ್ಞಾನಹೀನನು ಸೊಕ್ಕೇರಿ ಭಯವನ್ನು ಲಕ್ಷಿಸನು” ಎಂದು ಜ್ಞಾನೋಕ್ತಿ 14:16 ಹೇಳುತ್ತದೆ. ಅಷ್ಟುಮಾತ್ರವಲ್ಲದೆ ಯೇಸು ಹೇಳಿದ್ದು: “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.” (ಮತ್ತಾಯ 26:41) ಈ ಲೋಕದಲ್ಲಿರುವ ಪ್ರತಿಯೊಬ್ಬ ಅಪರಿಪೂರ್ಣ ವ್ಯಕ್ತಿಗೆ ಭ್ರಷ್ಟ ಅಭಿಲಾಷೆಗಳು ಇದ್ದೇ ಇರುತ್ತವೆ. ಆದುದರಿಂದ ನಾವು ಪೌಲನ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಶೋಧನೆಯನ್ನು ಪ್ರತಿರೋಧಿಸಲೇಬೇಕು. ಇಲ್ಲದಿದ್ದಲ್ಲಿ, ನಾವು ಬಿದ್ದುಬಿಡುವುದಂತೂ ಖಂಡಿತ.—ಯೆರೆಮೀಯ 17:9.
6. ಶೋಧನೆಯನ್ನು ಎದುರಿಸಲಿಕ್ಕಾಗಿ ನಾವು ಯಾವಾಗ ಮತ್ತು ಹೇಗೆ ತಯಾರಿಸಬೇಕು?
6 ಯಾವುದೇ ಮುನ್ಸೂಚನೆಯಿಲ್ಲದೆ ಒಮ್ಮಿಂದೊಮ್ಮೆಲೇ ಬರುವ ತೊಂದರೆಗಾಗಿ ಮುಂದಾಗಿಯೇ ತಯಾರಾಗಿರುವುದು ವಿವೇಕದ ಸಂಗತಿಯಾಗಿದೆ. ರಾಜ ಆಸನಿಗೆ, ತನ್ನ ರಕ್ಷಣಾಪಡೆಗಳನ್ನು ಕಟ್ಟಲಿಕ್ಕಾಗಿ ಶಾಂತಿಯ ಅವಧಿಯೇ ಸರಿಯಾದ ಸಮಯವೆಂದು ಗೊತ್ತಿತ್ತು. (2 ಪೂರ್ವಕಾಲವೃತ್ತಾಂತ 14:2, 6, 7) ಏಕೆಂದರೆ, ಶತ್ರು ದಾಳಿಯ ಸಮಯದಲ್ಲಿ ತಯಾರಿಮಾಡಲು ಸಮಯವಿರುವುದಿಲ್ಲವೆಂದು ಅವನಿಗೆ ತಿಳಿದಿತ್ತು. ಹಾಗೆಯೇ, ನಮ್ಮೆದುರಿಗೆ ಶೋಧನೆಗಳು ಬರುವಾಗ ನಾವೇನು ಮಾಡಬೇಕೆಂಬುದರ ಕುರಿತಾದ ನಿರ್ಣಯಗಳನ್ನು, ಶಾಂತ ವಾತಾವರಣದಲ್ಲಿ, ಸಮಾಧಾನದಿಂದ ಮಾಡಿದರೆ ಒಳ್ಳೇದು. (ಕೀರ್ತನೆ 63:6) ಉದಾಹರಣೆಗಾಗಿ, ದಾನಿಯೇಲ ಮತ್ತು ದೇವಭಯವುಳ್ಳ ಅವನ ಮಿತ್ರರು, ರಾಜನ ರಸಭಕ್ಷ್ಯಗಳನ್ನು ತಿನ್ನುವಂತೆ ಒತ್ತಾಯಿಸಲ್ಪಡುವ ಮುಂಚೆಯೇ, ಯೆಹೋವನ ನಿಯಮಕ್ಕೆ ನಂಬಿಗಸ್ತರಾಗಿರುವ ನಿರ್ಣಯವನ್ನು ಮಾಡಿಬಿಟ್ಟಿದ್ದರು. ಆದುದರಿಂದ ಅವರು ತಮ್ಮ ದೃಢಾಭಿಪ್ರಾಯಗಳಿಗೆ ಅಂಟಿಕೊಂಡು, ಅಶುದ್ಧವಾದ ಆಹಾರವನ್ನು ತಿನ್ನದೇ ಇರುವುದರ ಕುರಿತು ಹಿಂದೆಮುಂದೆ ನೋಡಲಿಲ್ಲ. (ದಾನಿಯೇಲ 1:8) ಶೋಧಿಸುವಂಥ ಪರಿಸ್ಥಿತಿಗಳು ಎದ್ದೇಳುವ ಮುಂಚೆಯೇ, ನೈತಿಕವಾಗಿ ಶುದ್ಧರಾಗಿ ಉಳಿಯುವ ನಮ್ಮ ದೃಢಸಂಕಲ್ಪವನ್ನು ಬಲಪಡಿಸೋಣ. ಆಗ ನಾವು ಪಾಪವನ್ನು ಪ್ರತಿರೋಧಿಸಲು ಶಕ್ತರಾಗುವೆವು.
7. ಬೇರೆಯವರು ಶೋಧನೆಯನ್ನು ಯಶಸ್ವಿಯಾಗಿ ಪ್ರತಿರೋಧಿಸಿದ್ದಾರೆಂದು ತಿಳಿಯುವುದು ಏಕೆ ಸಾಂತ್ವನದಾಯಕವಾಗಿದೆ?
1 ಕೊರಿಂಥ 10:13) ಅಪೊಸ್ತಲ ಪೇತ್ರನು ಬರೆದುದು: “ನೀವು ನಂಬಿಕೆಯಲ್ಲಿ ದೃಢವಾಗಿದ್ದು [ಸೈತಾನನನ್ನು] ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ.” (1 ಪೇತ್ರ 5:9) ಹೌದು, ಬೇರೆಯವರು ಸಹ ನಾವು ಎದುರಿಸುವಂಥ ಶೋಧನೆಗಳನ್ನೇ ಎದುರಿಸಿದ್ದಾರೆ. ಮತ್ತು ದೇವರ ಸಹಾಯದೊಂದಿಗೆ ಅವರು ಅವುಗಳನ್ನು ಯಶಸ್ವಿಯಾಗಿ ಪ್ರತಿರೋಧಿಸಿದ್ದಾರೆ. ನಾವು ಸಹ ಅದನ್ನೇ ಮಾಡಬಲ್ಲೆವು. ನಾವು ಒಂದು ನೀತಿಭ್ರಷ್ಟ ಲೋಕದಲ್ಲಿ ಜೀವಿಸುತ್ತಿರುವ ಕ್ರೈಸ್ತರಾಗಿರುವುದರಿಂದ, ಒಂದಲ್ಲ ಒಂದು ದಿನ, ಈಗಲೋ ಮುಂದೆಂದೊ ನಾವೆಲ್ಲರೂ ಖಂಡಿತವಾಗಿಯೂ ಶೋಧನೆಗಳನ್ನು ಎದುರಿಸುವೆವು. ಆದರೆ ಮಾನವ ಬಲಹೀನತೆ ಮತ್ತು ಪಾಪ ಮಾಡುವುದರ ಶೋಧನೆಯ ಮೇಲೆ ಜಯಗಳಿಸುವುದರ ಕುರಿತಾಗಿ ನಮಗೆ ಹೇಗೆ ಭರವಸೆಯಿರಬಲ್ಲದು?
7 “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ” ಎಂಬ ಪೌಲನ ಮಾತುಗಳಿಂದ ನಮಗೆಷ್ಟು ಸಾಂತ್ವನ ದೊರೆಯುತ್ತದೆ! (ನಾವು ಖಂಡಿತವಾಗಿಯೂ ಶೋಧನೆಯನ್ನು ಪ್ರತಿರೋಧಿಸಬಲ್ಲೆವು!
8. ಶೋಧನೆಯಿಂದ ದೂರವಿರುವ ಒಂದು ಮುಖ್ಯ ವಿಧಾನ ಯಾವುದು?
8 ನಾವು “ಪಾಪದ ವಶದಲ್ಲಿರದ” ಒಂದು ಮುಖ್ಯ ವಿಧಾನವು, ಸಾಧ್ಯವಿರುವಾಗಲೆಲ್ಲ ಶೋಧನೆಯಿಂದ ದೂರವಿರುವುದೇ ಆಗಿದೆ. (ರೋಮಾಪುರ 6:6) ಜ್ಞಾನೋಕ್ತಿ 4:14, 15 ನಮಗೆ ಹೀಗೆ ಉತ್ತೇಜಿಸುತ್ತದೆ: “ದುಷ್ಟರ ಮಾರ್ಗದಲ್ಲಿ ಸೇರದಿರು; ಕೆಟ್ಟವರ ದಾರಿಯಲ್ಲಿ ನಡೆಯಬೇಡ. ಅದಕ್ಕೆ ದೂರವಾಗಿರು, ಅದರಲ್ಲಿ ನಡೆಯದೆ ಓರೆಯಾಗು; ಮುಂದೆ ಮುಂದೆ ನಡೆ.” ನಿರ್ದಿಷ್ಟ ಪ್ರಕಾರದ ಪರಿಸ್ಥಿತಿಗಳು, ಪಾಪಕ್ಕೆ ನಡೆಸಬಲ್ಲವೋ ಇಲ್ಲವೋ ಎಂಬುದು ನಮಗೆ ಅನೇಕವೇಳೆ ಮೊದಲೇ ಗೊತ್ತಿರುತ್ತದೆ. ಆದುದರಿಂದ, ಕ್ರೈಸ್ತರೋಪಾದಿ ನಾವು ಮಾಡಬೇಕಾದಂಥ ಕೆಲಸವು ತೀರ ಸ್ಪಷ್ಟ: ದುರಾಶೆಗಳನ್ನು ಹೊತ್ತಿಸಿ, ಅಶುದ್ಧವಾದ ಕಾಮೋದ್ರೇಕವನ್ನು ನಮ್ಮೊಳಗೆ ಉದ್ರೇಕಿಸುವಂಥ ಯಾವುದೇ ವ್ಯಕ್ತಿಯಿಂದ, ಯಾವುದೇ ವಸ್ತುವಿನಿಂದ, ಮತ್ತು ಯಾವುದೇ ಸ್ಥಳದಿಂದ ದೂರವಿರಬೇಕು, ಅಂದರೆ “ಮುಂದೆ ಮುಂದೆ ನಡೆ”ಯಬೇಕು.
9. ಶೋಧನೆಗೊಳಪಡಿಸುವಂಥ ಸನ್ನಿವೇಶಗಳಿಂದ ಓಡಿಹೋಗುವುದನ್ನು ಬೈಬಲಿನಲ್ಲಿ ಹೇಗೆ ಎತ್ತಿಹೇಳಲಾಗಿದೆ?
9 ಶೋಧನೆಗೊಳಪಡಿಸುವ ಸನ್ನಿವೇಶದಿಂದ ಓಡಿಹೋಗುವುದು, ಶೋಧನೆಯ ಮೇಲೆ ಜಯಗಳಿಸುವ ಇನ್ನೊಂದು ಮುಖ್ಯ ಹೆಜ್ಜೆಯಾಗಿದೆ. ಪೌಲನು ಸಲಹೆನೀಡಿದ್ದು: “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ.” (1 ಕೊರಿಂಥ 6:18) ಮತ್ತು ಅವನು ಬರೆದುದು: “ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ.” (1 ಕೊರಿಂಥ 10:14) ತಿಮೊಥೆಯನನ್ನು, ಭೌತಿಕ ಸಂಪತ್ತಿಗಾಗಿರುವ ಮಿತಿಮೀರಿದ ಆಸೆಯಿಂದ ಹಾಗೂ “ಯೌವನದ ಇಚ್ಛೆಗ”ಳಿಂದ ದೂರ ಓಡಿಹೋಗುವಂತೆಯೂ ಪೌಲನು ಎಚ್ಚರಿಸಿದನು.—2 ತಿಮೊಥೆಯ 2:22; 1 ತಿಮೊಥೆಯ 6:9-11.
10. ಶೋಧನೆಯಿಂದ ಓಡಿಹೋಗುವುದು ಎಷ್ಟು ಮಹತ್ವಪೂರ್ಣ ಎಂಬುದನ್ನು ಯಾವ ಎರಡು ವಿಭಿನ್ನ ಉದಾಹರಣೆಗಳು ತೋರಿಸುತ್ತವೆ?
10 ಇಸ್ರಾಯೇಲಿನ ರಾಜ ದಾವೀದನ ಸನ್ನಿವೇಶವನ್ನು ಪರಿಗಣಿಸಿರಿ. ಅವನು ತನ್ನ ಅರಮನೆಯ ಛಾವಣಿಯಿಂದ ಕೆಳಗೆ ನೋಡುತ್ತಿದ್ದಾಗ, ಒಬ್ಬ ಸುಂದರ ಹೆಂಗಸು ಸ್ನಾನಮಾಡುತ್ತಿರುವ ದೃಶ್ಯ ಅವನ ದೃಷ್ಟಿಗೆ ಬಿತ್ತು. ಆಗ ಅವನ ಹೃದಯದಲ್ಲಿ ದುರಾಶೆಗಳು ತುಂಬಿಕೊಳ್ಳಲು ಆರಂಭಿಸಿದವು. ಅವನು ಛಾವಣಿಯಿಂದ ಕೆಳಗೆ ಬಂದು, ಆ ಶೋಧನೆಯಿಂದ ದೂರ ಓಡಿಹೋಗಬೇಕಿತ್ತು. ಅದಕ್ಕೆ ಬದಲು, ಅವನು ಬತ್ಷೆಬೆ ಎಂಬ ಆ ಸ್ತ್ರೀಯ ಬಗ್ಗೆ ವಿಚಾರಿಸಲಾರಂಭಿಸಿದನು. ಮತ್ತು ಇದರ ಫಲಿತಾಂಶ ಧ್ವಂಸಕರವಾಗಿತ್ತು. (2 ಸಮುವೇಲ 11:1–12:23) ಇನ್ನೊಂದು ಕಡೆ ಯೋಸೇಫನನ್ನು ಪರಿಗಣಿಸಿರಿ. ಅವನ ಧಣಿಯ ನೀತಿಗೆಟ್ಟ ಹೆಂಡತಿಯು ಅವನನ್ನು ತನ್ನೊಡನೆ ಸಂಗಮಕ್ಕೆ ಕರೆದಾಗ ಅವನು ಏನು ಮಾಡಿದನು? ಆ ವೃತ್ತಾಂತವು ಹೇಳುವುದು: “ಆಕೆ ಯೋಸೇಫನ ಸಂಗಡ ಪ್ರತಿದಿನವೂ ಈ ಮಾತನ್ನು ಆಡಿದಾಗ್ಯೂ ಅವನು ಅದಕ್ಕೆ ಕಿವಿಗೊಡದೆ ಆಕೆಯಲ್ಲಿ ಸಂಗಮಮಾಡುವುದಕ್ಕಾಗಲಿ ಆಕೆಯ ಬಳಿಯಲ್ಲಿರುವುದಕ್ಕಾಗಲಿ ಒಪ್ಪಿಕೊಳ್ಳಲೇ ಇಲ್ಲ.” ಆ ಸಮಯದಲ್ಲಿ ಮೋಶೆಯ ಧರ್ಮಶಾಸ್ತ್ರದ ಆಜ್ಞೆಗಳಿರದಿದ್ದರೂ, ಯೋಸೇಫನು ಹೀಗನ್ನುತ್ತಾ ಅವಳಿಗೆ ಉತ್ತರಕೊಟ್ಟನು: “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ”? ಒಂದು ದಿನ ಅವಳು ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನ ಸಂಗಮಕ್ಕೆ ಬಾ” ಎಂದು ಹೇಳಿದಳು. ಯೋಸೇಫನು ಅಲ್ಲಿ ಅವಳಿಗೆ ಬುದ್ಧಿಹೇಳುತ್ತಾ ಅಲ್ಲಿಯೇ ನಿಂತುಕೊಂಡನೊ? ಇಲ್ಲ. ಅವನು “ತಪ್ಪಿಸಿಕೊಂಡು ಓಡಿಹೋದನು.” ಲೈಂಗಿಕ ಶೋಧನೆಯು ತನ್ನ ಮೇಲೆ ಜಯಗಳಿಸುವಂತೆ ಯೋಸೇಫನು ಅವಕಾಶವನ್ನು ಕೊಡಲಿಲ್ಲ. ಅವನು ಓಡಿಹೋದನು!—ಆದಿಕಾಂಡ 39:7-16.
11. ಪದೇಪದೇ ಎದುರಾಗುತ್ತಿರುವ ಒಂದು ಶೋಧನೆಯನ್ನು ನಾವು ಅನುಭವಿಸುತ್ತಿರುವಲ್ಲಿ ಏನು ಮಾಡಬಹುದು?
11 ಅಂಥ ಸನ್ನಿವೇಶದಿಂದ ಓಡಿಹೋಗುವುದು ಹೇಡಿತನವೆಂದು ಕೆಲವೊಮ್ಮೆ ಪರಿಗಣಿಸಲಾಗುತ್ತದಾದರೂ, ನಾವು ಅಲ್ಲಿಂದ ದೂರಹೋಗುವುದೇ ಬುದ್ಧಿವಂತಿಕೆಯ ಕೆಲಸವಾಗಿದೆ. ಪ್ರಾಯಶಃ, ನಮ್ಮ ಕೆಲಸದ ಸ್ಥಳದಲ್ಲಿ ಆಗಾಗ್ಗೆ ಪದೇಪದೇ ಎದುರಾಗುತ್ತಿರುವ ಶೋಧನೆಯೊಂದು ಇರಬಹುದು. ನಾವು ನಮ್ಮ ಉದ್ಯೋಗವನ್ನು ಬದಲಾಯಿಸಲು ಸಾಧ್ಯವಿಲ್ಲದಿರಬಹುದು. ಆದರೆ ಶೋಧನೆಗೊಳಪಡಿಸುವಂಥ ಪರಿಸ್ಥಿತಿಗಳಿಂದ ನಮ್ಮನ್ನು ದೂರವಿರಿಸುವ ಬೇರೆ ಮಾರ್ಗಗಳಿರಬಹುದು. ತಪ್ಪು ಎಂದು ನಮಗೆ ಗೊತ್ತಿರುವ ಯಾವುದೇ ಸಂಗತಿಯಿಂದ ನಾವು ಓಡಿಹೋಗಬೇಕು, ಮತ್ತು ಸರಿಯಾದದ್ದನ್ನು ಮಾತ್ರವೇ ಮಾಡುವ ದೃಢನಿರ್ಧಾರ ನಮಗಿರಬೇಕು. (ಆಮೋಸ 5:15) ಕೆಲವೊಂದು ಸ್ಥಳಗಳಲ್ಲಿ, ಶೋಧನೆಯಿಂದ ಓಡಿಹೋಗಲಿಕ್ಕಾಗಿ, ಅಶ್ಲೀಲವಿಷಯವಿರುವ ಇಂಟರ್‌ನೆಟ್ ಸೈಟ್‌ಗಳಿಂದ ಮತ್ತು ಸಂದೇಹಾಸ್ಪದ ಮನೋರಂಜನೆಯ ಸ್ಥಳಗಳಿಂದ ದೂರವಿರುವುದು ಅವಶ್ಯವಾಗಿರಬಹುದು. ನಾವು ಒಂದು ಪತ್ರಿಕೆಯನ್ನು ಕಸದ ಬುಟ್ಟಿಗೆ ಹಾಕಬೇಕಾಗಬಹುದು ಅಥವಾ ದೇವರನ್ನು ಪ್ರೀತಿಸುವ ಮತ್ತು ನಮಗೆ ಸಹಾಯಮಾಡಲು ಶಕ್ತರಾಗಿರುವ ಹೊಸ ಮಿತ್ರರನ್ನು ಕಂಡುಕೊಳ್ಳಬೇಕಾಗಬಹುದು. (ಜ್ಞಾನೋಕ್ತಿ 13:20) ನಮಗೆ ಪಾಪಮಾಡುವಂತೆ ಪ್ರಲೋಭಿಸುವ ಯಾವುದೇ ವಿಷಯವನ್ನು ದೃಢನಿರ್ಧಾರದಿಂದ ತಿರಸ್ಕರಿಸುವುದು ನಾವು ಮಾಡಬಹುದಾದ ವಿವೇಕದ ಸಂಗತಿಯಾಗಿದೆ.—ರೋಮಾಪುರ 12:9.
ಪ್ರಾರ್ಥನೆಯು ಸಹಾಯಮಾಡುವ ವಿಧ
12. ‘ನಮ್ಮನ್ನು ಶೋಧನೆಯೊಳಗೆ ಸೇರಿಸದಿರು’ ಎಂದು ನಾವು ಪ್ರಾರ್ಥಿಸುವಾಗ ನಾವು ದೇವರಿಂದ ಏನನ್ನು ಕೇಳುತ್ತಿದ್ದೇವೆ?
12 ಪೌಲನು ಸಮಾಧಾನಪಡಿಸುವ ಈ ಆಶ್ವಾಸನೆಯನ್ನು ಕೊಡುತ್ತಾನೆ: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13) ಯೆಹೋವನು ನಮಗೆ ನೆರವನ್ನು ನೀಡುವ ಒಂದು ವಿಧವು, ಶೋಧನೆಯನ್ನು ಪ್ರತಿರೋಧಿಸುವಂತೆ ಆತನ ಸಹಾಯಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳನ್ನು ಉತ್ತರಿಸುವ ಮೂಲಕವೇ. ನಾವು ಹೀಗೆ ಪ್ರಾರ್ಥನೆಮಾಡುವಂತೆ ಯೇಸು ಕ್ರಿಸ್ತನು ಕಲಿಸಿದನು: “ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ [“ಕೆಡುಕನಿಂದ,” ಪಾದಟಿಪ್ಪಣಿ] ನಮ್ಮನ್ನು ತಪ್ಪಿಸು.” (ಮತ್ತಾಯ 6:13) ಅಂಥ ಹೃತ್ಪೂರ್ವಕವಾದ ಪ್ರಾರ್ಥನೆಗೆ ಪ್ರತಿಕ್ರಿಯಿಸುತ್ತಾ, ನಾವು ಶೋಧನೆಗೆ ಬಲಿಬೀಳುವಂತೆ ಯೆಹೋವನು ನಮ್ಮನ್ನು ತೊರೆಯದಿರುವನು. ಆತನು ನಮ್ಮನ್ನು ಸೈತಾನನಿಂದ ಮತ್ತು ಆತನ ಕುಟಿಲ ಕೃತ್ಯಗಳಿಂದ ಪಾರುಗೊಳಿಸುವನು. (ಎಫೆಸ 6:11) ಶೋಧನೆಗಳು ಯಾವುವು ಎಂಬುದನ್ನು ನಾವು ಗುರುತಿಸಲು ಸಹಾಯಮಾಡುವಂತೆ ಮತ್ತು ಅವುಗಳನ್ನು ಪ್ರತಿರೋಧಿಸಲು ಶಕ್ತಿಯನ್ನು ಕೊಡುವಂತೆ ನಾವು ದೇವರ ಬಳಿ ಕೇಳಬೇಕು. ನಾವು ಶೋಧನೆಗೊಳಗಾಗುವಾಗ ತಪ್ಪಿಬೀಳದಂತೆ ಆತನನ್ನು ಬೇಡಿಕೊಂಡರೆ, “ಕೆಡುಕನಿಂದ” ಅಂದರೆ ಸೈತಾನನಿಂದ ವಂಚಿಸಲ್ಪಟ್ಟು ನಷ್ಟಪಡಿಸಲ್ಪಡದಂತೆ ಸಹಾಯಮಾಡುವನು.
13. ಪಟ್ಟುಬಿಡದಂಥ ಒಂದು ಶೋಧನೆಯನ್ನು ಎದುರಿಸುವಾಗ ನಾವೇನು ಮಾಡಬೇಕು?
13 ಪಟ್ಟುಬಿಡದಂಥ ಶೋಧನೆಯನ್ನು ಎದುರಿಸುತ್ತಿರುವಾಗ, ನಾವು ಹೆಚ್ಚು ತೀವ್ರವಾಗಿ ಪ್ರಾರ್ಥಿಸುವ ಅಗತ್ಯವಿದೆ. ಕೆಲವೊಂದು ಶೋಧನೆಗಳು ನಮ್ಮೊಳಗೆ ಬಲವಾದ ಹೋರಾಟಗಳನ್ನು ಆರಂಭಿಸಬಲ್ಲವು. ನಾವು ನಮ್ಮ ಆಲೋಚನೆಗಳು ಮತ್ತು ಮನೋಭಾವಗಳೊಂದಿಗೆ ಸೆಣಸಾಡುತ್ತಿರುವೆವು. ಮತ್ತು ನಾವು ನಿಜವಾಗಿ ಎಷ್ಟು ದುರ್ಬಲರಾಗಿದ್ದೇವೆಂಬುದನ್ನು ಅವು ನೆನಪುಹುಟ್ಟಿಸುತ್ತವೆ. (ಕೀರ್ತನೆ 51:5) ದೃಷ್ಟಾಂತಕ್ಕಾಗಿ, ನಾವು ಹಿಂದೆ ಮಾಡಿದಂಥ ಯಾವುದೋ ನೀತಿಗೆಟ್ಟ ಕೃತ್ಯದ ಸ್ಮರಣೆಗಳು ನಮ್ಮನ್ನು ಕಾಡುತ್ತಾ ಇರುವಲ್ಲಿ, ನಾವೇನು ಮಾಡಸಾಧ್ಯವಿದೆ? ಅದೇ ಕೆಲಸವನ್ನು ಪುನಃ ಮಾಡುವಂತೆ ನಾವು ಶೋಧನೆಗೊಳಗಾಗುವಲ್ಲಿ ಆಗೇನು? ಅಂಥ ಭಾವನೆಗಳನ್ನು ಕೇವಲ ಅದುಮಿಹಿಡಿಯುವ ಬದಲಿಗೆ, ಅದನ್ನು ಯೆಹೋವನಿಗೆ ಪ್ರಾರ್ಥನೆಯಲ್ಲಿ ತಿಳಿಸಿರಿ. ಕೇವಲ ಒಮ್ಮೆಯಲ್ಲ, ಬದಲಾಗಿ ಅವಶ್ಯವಿದ್ದಲ್ಲಿ ಪದೇ ಪದೇ ಹಾಗೆ ಮಾಡಿರಿ. (ಕೀರ್ತನೆ 55:22) ಆತನ ವಾಕ್ಯ ಮತ್ತು ಪವಿತ್ರಾತ್ಮದ ಶಕ್ತಿಯಿಂದ ಆತನು ನಮ್ಮ ಮನಸ್ಸಿನಿಂದ ಅಶುದ್ಧ ಪ್ರವೃತ್ತಿಗಳನ್ನು ತೆಗೆದುಹಾಕಲು ಸಹಾಯಮಾಡಬಲ್ಲನು.—ಕೀರ್ತನೆ 19:8, 9.
14. ಶೋಧನೆಯನ್ನು ಎದುರಿಸಲಿಕ್ಕಾಗಿ ಪ್ರಾರ್ಥನೆಯು ಏಕೆ ಅತ್ಯಗತ್ಯ?
14 ಗೆತ್ಸೇಮನೆ ತೋಟದಲ್ಲಿ ತನ್ನ ಅಪೊಸ್ತಲರು ತೂಕಡಿಸುತ್ತಿರುವುದನ್ನು ನೋಡಿ, ಯೇಸು ಉತ್ತೇಜಿಸಿದ್ದು: “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.” (ಮತ್ತಾಯ 26:41) ಶೋಧನೆಯು ಬೇರೆ ಬೇರೆ ರೂಪಗಳಲ್ಲಿ ಮತ್ತು ನವಿರಾದ ರೀತಿಗಳಲ್ಲಿ ಬರುತ್ತದೆ. ಇವುಗಳ ಕುರಿತು ಯಾವಾಗಲೂ ಎಚ್ಚರವಾಗಿದ್ದು, ಅವುಗಳನ್ನು ಕೂಡಲೇ ಗುರುತಿಸುವುದು ಶೋಧನೆಯನ್ನು ಜಯಿಸುವ ಒಂದು ವಿಧವಾಗಿದೆ. ಆ ಶೋಧನೆಯ ಕುರಿತಾಗಿ ತಡಮಾಡದೇ ಪ್ರಾರ್ಥಿಸುವುದು ಸಹ ಅತ್ಯಾವಶ್ಯಕ. ಏಕೆಂದರೆ ಆಗ ನಾವು ಅದರ ವಿರುದ್ಧ ಹೋರಾಡಲು ಸನ್ನದ್ಧರಾಗಿರುವೆವು. ನಾವು ಯಾವ ಕ್ಷೇತ್ರದಲ್ಲಿ ದುರ್ಬಲರಾಗಿದ್ದೇವೊ ಅಲ್ಲಿ ಶೋಧನೆಯು ದಾಳಿಯಿಡುವುದರಿಂದ, ನಾವು ಅದನ್ನು ಒಬ್ಬಂಟಿಗರಾಗಿ ಪ್ರತಿರೋಧಿಸಲು ಸಾಧ್ಯವಿಲ್ಲ. ಪ್ರಾರ್ಥನೆಯು ಅತ್ಯಗತ್ಯ. ಏಕೆಂದರೆ ದೇವರು ಕೊಡುವಂಥ ಬಲವು, ಸೈತಾನನ ವಿರುದ್ಧ ನಮ್ಮ ರಕ್ಷಣಾ ಸಾಧನಗಳನ್ನು ಬೆಂಬಲಿಸಬಲ್ಲದು. (ಫಿಲಿಪ್ಪಿ 4:6, 7) ನಮಗೆ “ಸಭೆಯ ಹಿರಿಯರ” ಆತ್ಮಿಕ ನೆರವು ಮತ್ತು ಪ್ರಾರ್ಥನೆಗಳ ಅಗತ್ಯವೂ ಇರಬಹುದು.—ಯಾಕೋಬ 5:13-18.
ಶೋಧನೆಯನ್ನು ಸಕ್ರಿಯವಾಗಿ ಪ್ರತಿರೋಧಿಸಿರಿ
15. ಶೋಧನೆಯನ್ನು ಪ್ರತಿರೋಧಿಸುವುದರಲ್ಲಿ ಏನೆಲ್ಲಾ ಒಳಗೂಡಿದೆ?
15 ಸಾಧ್ಯವಿರುವಾಗಲೆಲ್ಲ ಶೋಧನೆಯಿಂದ ದೂರವಿರುವುದಲ್ಲದೆ, ಅದು ದಾಟಿಹೋಗುವ ವರೆಗೆ ಅಥವಾ ಸನ್ನಿವೇಶವು ಬದಲಾಗುವ ವರೆಗೂ ನಾವು ಸಕ್ರಿಯವಾಗಿ ಅದನ್ನು ಪ್ರತಿರೋಧಿಸುತ್ತಾ ಇರಬೇಕು. ಯೇಸು ಸೈತಾನನಿಂದ ಶೋಧಿಸಲ್ಪಟ್ಟಾಗ, ಪಿಶಾಚನು ಹೊರಟುಹೋಗುವ ವರೆಗೂ ಅವನು ಪ್ರತಿರೋಧಿಸುತ್ತಾ ಇದ್ದನು. (ಮತ್ತಾಯ 4:1-11) ಶಿಷ್ಯನಾದ ಯಾಕೋಬನು ಹೀಗೆ ಬರೆದನು: “ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” (ಯಾಕೋಬ 4:7) ಪ್ರತಿರೋಧಿಸಲಿಕ್ಕಾಗಿ, ನಾವು ಮೊದಲು ದೇವರ ವಾಕ್ಯದೊಂದಿಗೆ ನಮ್ಮ ಮನಸ್ಸನ್ನು ಗಟ್ಟಿಮಾಡಿಕೊಂಡು, ನಾವು ಆತನ ಮಟ್ಟಗಳಿಗೆ ಅಂಟಿಕೊಳ್ಳುವೆವು ಎಂಬ ದೃಢವಾದ ನಿರ್ಣಯವನ್ನು ಮಾಡಬೇಕು. ನಮಗಿರುವ ನಿರ್ದಿಷ್ಟವಾದ ಬಲಹೀನತೆಯ ಕುರಿತಾದ ಮುಖ್ಯ ವಚನಗಳನ್ನು ನಾವು ಬಾಯಿಪಾಠ ಮಾಡಿಕೊಂಡು ಅದರ ಕುರಿತು ಮನನ ಮಾಡಿದರೆ ಒಳ್ಳೇದು. ನಮಗಿರುವ ಚಿಂತೆಗಳನ್ನು ವ್ಯಕ್ತಪಡಿಸಲು ಮತ್ತು ಶೋಧನೆಯು ಎದುರಾಗುವಾಗ ನಾವು ಸಹಾಯವನ್ನು ಕೇಳಬಹುದಾದ ಒಬ್ಬ ಪ್ರೌಢ ಕ್ರೈಸ್ತ, ಬಹುಶಃ ಒಬ್ಬ ಹಿರಿಯನನ್ನು ಕಂಡುಹಿಡಿಯುವುದು ಬುದ್ಧಿವಂತಿಕೆಯ ಸಂಗತಿಯಾಗಿದೆ.—ಜ್ಞಾನೋಕ್ತಿ 22:17.
16. ನಾವು ಹೇಗೆ ನೈತಿಕವಾಗಿ ಶುದ್ಧರಾಗಿ ಉಳಿಯಬಲ್ಲೆವು?
16 ನಾವು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವಂತೆ ಶಾಸ್ತ್ರವಚನಗಳು ಉತ್ತೇಜಿಸುತ್ತವೆ. (ಎಫೆಸ 4:24) ಇದರರ್ಥ, ಯೆಹೋವನು ನಮ್ಮನ್ನು ರೂಪಿಸಿ ಬದಲಾಯಿಸುವಂತೆ ಅನುಮತಿಸುವುದೇ. ತನ್ನ ಜೊತೆ ಕೆಲಸಗಾರನಾದ ತಿಮೊಥೆಯನಿಗೆ ಬರೆಯುತ್ತಾ, ಪೌಲನಂದದ್ದು: “ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು. ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು.” (1 ತಿಮೊಥೆಯ 6:11, 12) ‘ನೀತಿಯನ್ನು ಸಂಪಾದಿಸಲಿಕ್ಕಾಗಿ’ ನಾವು ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಾಸಮಾಡಬೇಕು. ಆಗ ನಾವು ಆತನ ವ್ಯಕ್ತಿತ್ವದ ಬಗ್ಗೆ ಪೂರ್ಣ ತಿಳುವಳಿಕೆಯನ್ನು ಪಡೆಯುವೆವು ಮತ್ತು ಆತನ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ನಡೆದುಕೊಳ್ಳಬಹುದು. ಸುವಾರ್ತೆಯನ್ನು ಸಾರುವುದು ಮತ್ತು ಕೂಟಗಳಿಗೆ ಹಾಜರಾಗುವುದರಂಥ ಕ್ರೈಸ್ತ ಚಟುವಟಿಕೆಗಳಿಂದ ತುಂಬಿರುವ ಒಂದು ಕಾರ್ಯತಖ್ತೆಯು ಸಹ ಅತ್ಯಾವಶ್ಯಕ. ದೇವರ ಸಮೀಪಕ್ಕೆ ಬಂದು, ಆತನ ಆತ್ಮಿಕ ಏರ್ಪಾಡುಗಳ ಪೂರ್ಣ ಲಾಭವನ್ನು ಪಡೆದುಕೊಳ್ಳುವುದರಿಂದ ನಮಗೆ ಆತ್ಮಿಕವಾಗಿ ಬೆಳೆಯಲು ಮತ್ತು ನೈತಿಕವಾಗಿ ಶುದ್ಧರಾಗಿರಲು ಸಹಾಯ ಸಿಗಬಲ್ಲದು.—ಯಾಕೋಬ 4:8.
17. ಶೋಧನೆಯ ಸಮಯದಲ್ಲಿ ದೇವರು ನಮ್ಮ ಕೈಬಿಡದಿರುವನೆಂದು ನಮಗೆ ಹೇಗೆ ತಿಳಿದಿದೆ?
17 ನಾವು ಅನುಭವಿಸುವಂಥ ಯಾವುದೇ ಶೋಧನೆಯು, ಅದನ್ನು ನಿಭಾಯಿಸಲು ನಮಗಿರುವ ದೇವ-ದತ್ತ ಸಾಮರ್ಥ್ಯವನ್ನು ಮೀರಿಹೋಗದೆಂದು ಪೌಲನು ನಮಗೆ ಆಶ್ವಾಸನೆಯನ್ನು ಕೊಡುತ್ತಾನೆ. ಯೆಹೋವನು, ‘ನಾವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.’ (1 ಕೊರಿಂಥ 10:13) ಹೌದು, ನಾವು ದೇವರ ಮೇಲೆ ಆತುಕೊಳ್ಳುತ್ತಾ ಇರುವಲ್ಲಿ, ಸಮಗ್ರತೆಯನ್ನು ಕಾಪಾಡಿಕೊಳ್ಳಲು ಬೇಕಾಗುವ ಆತ್ಮಿಕ ಶಕ್ತಿಯ ಕೊರತೆಯು ನಮಗಾಗುವ ವರೆಗೆ ದೇವರು ಶೋಧನೆಯನ್ನು ಅನುಮತಿಸುವುದಿಲ್ಲ. ಆತನ ದೃಷ್ಟಿಯಲ್ಲಿ ತಪ್ಪಾಗಿರುವುದನ್ನು ಮಾಡುವ ಶೋಧನೆಯನ್ನು ಸಕ್ರಿಯವಾಗಿ ಪ್ರತಿರೋಧಿಸುವುದರಲ್ಲಿ ಯಶಸ್ವಿಗಳಾಗುವಂತೆ ಆತನು ಬಯಸುತ್ತಾನೆ. ಅದಲ್ಲದೆ, ಆತನ ಈ ವಾಗ್ದಾನದಲ್ಲಿ ನಾವು ನಂಬಿಕೆಯನ್ನಿಡಬಲ್ಲೆವು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.”—ಇಬ್ರಿಯ 13:5.
18. ಮಾನವ ಬಲಹೀನತೆಯ ಮೇಲೆ ನಾವು ಜಯಗಳಿಸುವೆವೆಂದು ನಾವೇಕೆ ನಿಶ್ಚಿತರಾಗಿರಬಲ್ಲೆವು?
18 ಮಾನವ ಬಲಹೀನತೆಯ ವಿರುದ್ಧ ತನ್ನಲ್ಲಿ ನಡೆಯುತ್ತಿರುವ ಹೋರಾಟದ ಫಲಿತಾಂಶದ ಕುರಿತಾಗಿ ಪೌಲನಿಗೆ ಯಾವುದೇ ಅನಿಶ್ಚಯತೆ ಇರಲಿಲ್ಲ. ತನ್ನ ಶರೀರದಭಿಲಾಷೆಗಳ ಕೈಯಲ್ಲಿ, ಮರುಕಹುಟ್ಟಿಸುವ ಮತ್ತು ನಿಸ್ಸಹಾಯಕ ಕೈಗೊಂಬೆಯಾಗಿದ್ದೇನೆಂದು ಅವನು ಎಣಿಸಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅವನು ಹೇಳಿದ್ದು: “ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ. ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂಥ 9:26, 27) ನಾವು ಸಹ ಅಪರಿಪೂರ್ಣ ಶರೀರದ ವಿರುದ್ಧ ಯಶಸ್ವಿಕರವಾದ ಹೋರಾಟವನ್ನು ನಡೆಸಬಲ್ಲೆವು. ಶಾಸ್ತ್ರವಚನಗಳು, ಬೈಬಲ್ ಆಧಾರಿತ ಪ್ರಕಾಶನಗಳು, ಕ್ರೈಸ್ತ ಕೂಟಗಳು ಮತ್ತು ಪ್ರೌಢ ಜೊತೆ ಕ್ರೈಸ್ತರ ಮೂಲಕ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ನಮಗೆ ಸತತವಾಗಿ ಮರುಜ್ಞಾಪನಗಳನ್ನು ಕೊಡುತ್ತಾ ಇರುತ್ತಾನೆ. ಮತ್ತು ಇದು ನಾವು ಯಥಾರ್ಥವಂತರಾಗಿ ಮುನ್ನಡೆಯುವಂತೆ ನೆರವು ನೀಡುತ್ತದೆ. ಆತನ ಸಹಾಯದೊಂದಿಗೆ ನಾವು ಮಾನವ ಬಲಹೀನತೆಯ ಮೇಲೆ ಖಂಡಿತವಾಗಿಯೂ ಜಯಗಳಿಸುವೆವು!
[ನಿಮಗೆ ಜ್ಞಾಪಕವಿದೆಯೊ?
• ‘ಶರೀರಭಾವದವುಗಳ ಮೇಲೆ ಮನಸ್ಸಿಡುವುದರ’ ಅರ್ಥವೇನು?
• ನಾವು ಶೋಧನೆಗಾಗಿ ಹೇಗೆ ತಯಾರಾಗಿರಬಲ್ಲೆವು?
• ಶೋಧನೆಯನ್ನು ನಿಭಾಯಿಸಲು ನಾವೇನು ಮಾಡಬಲ್ಲೆವು?
• ಶೋಧನೆಯನ್ನು ನಿಭಾಯಿಸುವುದರಲ್ಲಿ ಪ್ರಾರ್ಥನೆಯ ಪಾತ್ರವೇನು?
• ಮಾನವ ಬಲಹೀನತೆಯ ಮೇಲೆ ಜಯಗಳಿಸಲು ಸಾಧ್ಯವಿದೆಯೆಂದು ನಮಗೆ ಹೇಗೆ ತಿಳಿದಿದೆ?
[ಅಧ್ಯಯನ ಪ್ರಶ್ನೆಗಳು]
[ಪುಟ 10ರಲ್ಲಿರುವ ಚಿತ್ರಗಳು]
ನಮ್ಮ ಶರೀರದಭಿಲಾಷೆಗಳ ಎದುರು ನಾವು ನಿಸ್ಸಹಾಯಕರಾಗಿದ್ದೇವೆಂದು ಬೈಬಲ್ ಕಲಿಸುವುದಿಲ್ಲ
[ಪುಟ 12ರಲ್ಲಿರುವ ಚಿತ್ರ]
ಪಾಪದಿಂದ ದೂರವಿರುವ ಒಂದು ಮುಖ್ಯ ವಿಧಾನವು, ಶೋಧನೆಯಿಂದ ಓಡಿಹೋಗುವುದೇ ಆಗಿದೆ