ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಪುನರುತ್ಥಾನ ಚರ್ಚಾಸ್ಪದವಾಗಿದೆ

ಯೇಸುವಿನ ಪುನರುತ್ಥಾನ ಚರ್ಚಾಸ್ಪದವಾಗಿದೆ

ಯೇಸುವಿನ ಪುನರುತ್ಥಾನ ಚರ್ಚಾಸ್ಪದವಾಗಿದೆ

“ಯೇಸು ಈ ಭೂಮಿಯಲ್ಲಿ ಜೀವಿಸಿದನೆಂಬುದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಖಚಿತವಾಗಿ ಹೇಳಸಾಧ್ಯವಿದೆ. . . . ಆದರೆ ಅದೇ ದೇವರು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನು ಎಂಬುದನ್ನು ಅಷ್ಟೇ ಖಚಿತವಾಗಿ ಹೇಳಸಾಧ್ಯವಿಲ್ಲ.” ಹೀಗೆ ಇಂಗ್ಲೆಂಡಿನ ಕ್ಯಾಂಟರ್‌ಬರೀ ಆರ್ಚ್‌ಬಿಷಪ್‌ ಹೇಳಿದರು.

ಆದರೆ ಕ್ರೈಸ್ತ ಅಪೊಸ್ತಲ ಪೌಲನಿಗೆ ಈ ರೀತಿಯ ಯಾವುದೇ ಸಂದೇಹವಿರಲಿಲ್ಲ. ಪುರಾತನ ಕೊರಿಂಥದ ಜೊತೆ ಕ್ರೈಸ್ತರಿಗೆ ತನ್ನ ಪ್ರಥಮ ಪತ್ರದ ಅಧ್ಯಾಯ 15ರಲ್ಲಿ ಅವನು ಬರೆದದ್ದು: “ನಾನು ನಿಮಗೆ ತಿಳಿಸಿದ ಮೊದಲನೆಯ ಸಂಗತಿಗಳೊಳಗೆ ಒಂದು ಸಂಗತಿಯನ್ನು ನಿಮಗೆ ತಿಳಿಸಿಕೊಟ್ಟೆನು. ಅದು ನಾನು ಸಹ ಕಲಿತುಕೊಂಡದ್ದೇ. ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.”​—1 ಕೊರಿಂಥ 15:3, 4.

ಯೇಸು ಕ್ರಿಸ್ತನ ಪುನರುತ್ಥಾನದಲ್ಲಿ ಅವನ ಶಿಷ್ಯರಿಟ್ಟ ನಂಬಿಕೆಯೇ, ಸುವಾರ್ತೆಯನ್ನು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಅಂದರೆ, ಗ್ರೀಕ್‌-ರೋಮನ್‌ ಲೋಕದಲ್ಲೆಲ್ಲ ಸಾರುವಂತೆ ಅವರಿಗೆ ಪ್ರೇರೇಪಣೆ ನೀಡಿತು. (ಕೊಲೊಸ್ಸೆ 1:23) ವಾಸ್ತವದಲ್ಲಿ, ಕ್ರಿಸ್ತೀಯ ನಂಬಿಕೆಯೇ ಯೇಸುವಿನ ಪುನರುತ್ಥಾನದ ಮೇಲೆ ನಿಂತಿದೆ.

ಆದರೂ, ಆದಿಯಿಂದಲೂ ಯೇಸುವಿನ ಪುನರುತ್ಥಾನವು ಸಂದೇಹಕ್ಕೆ ಮತ್ತು ಅಪನಂಬಿಕೆಗೆ ಒಳಗಾಗಿದೆ. ವಧಸ್ತಂಭಕ್ಕೇರಿಸಲ್ಪಟ್ಟ ಯೇಸು ಮೆಸ್ಸೀಯನಾಗಿದ್ದಾನೆಂದು ಅವನ ಹಿಂಬಾಲಕರು ಹೇಳುವುದು ದೈವದೂಷಣೆ ಎಂದು ಯೆಹೂದ್ಯರು ನೆನೆಸುತ್ತಿದ್ದರು. ಅಧಿಕಾಂಶ ಸುಶಿಕ್ಷಿತ ಗ್ರೀಕರು ಪ್ರಾಣದ ಅಮರತ್ವದಲ್ಲಿ ನಂಬಿಕೆಯನ್ನಿಡುತ್ತಿದ್ದದ್ದರಿಂದ, ಅವರಿಗೆ ಪುನರುತ್ಥಾನವೆಂಬ ಮಾತೇ ಅಸಮಂಜಸವಾದದ್ದಾಗಿತ್ತು.​—ಅ. ಕೃತ್ಯಗಳು 17:​32-34.

ಇಂದಿನ ಸಂದೇಹಕರು

ಇತ್ತೀಚಿನ ವರ್ಷಗಳಲ್ಲಿ, ಕ್ರೈಸ್ತರೆಂದು ಹೇಳಿಕೊಳ್ಳುವ ಕೆಲವು ವಿದ್ವಾಂಸರು ಪುಸ್ತಕಗಳನ್ನು ಹಾಗೂ ಲೇಖನಗಳನ್ನು ಹೊರತಂದಿದ್ದಾರೆ. ಇವುಗಳು ಯೇಸುವಿನ ಪುನರುತ್ಥಾನವು ಕಟ್ಟುಕಥೆಯಾಗಿದೆ ಎಂದು ಹೇಳುತ್ತವೆಯಾದುದರಿಂದ, ಅದು ಬಹಳಷ್ಟು ವಾಗ್ವಾದಕ್ಕೆ ಗುರಿಯಾಗಿದೆ. ಅನೇಕ ವಿದ್ವಾಂಸರು “ಐತಿಹಾಸಿಕ ಯೇಸು”ವಿನ ಹುಡುಕಾಟದಲ್ಲಿ, ಖಾಲಿಯಾಗಿದ್ದ ಸಮಾಧಿ ಹಾಗೂ ಯೇಸು ಪುನರುತ್ಥಾನದ ನಂತರ ಕಾಣಿಸಿಕೊಂಡಂತಹ ವಿಷಯಗಳು ಸಂಪೂರ್ಣವಾಗಿ ಕಾಲ್ಪನಿಕವಾಗಿವೆ ಎಂದು ವಾದಿಸುತ್ತಾರೆ. ಮಾತ್ರವಲ್ಲ, ಅವನು ಸ್ವರ್ಗದಲ್ಲಿ ಆಳುತ್ತಾನೆ ಎಂಬ ನಂಬಿಕೆಯನ್ನು ಬೆಂಬಲಿಸಲಿಕ್ಕಾಗಿಯೇ ಯೇಸು ಮೃತನಾಗಿ ಸುಮಾರು ಸಮಯವು ಸಂದ ಬಳಿಕ ಇದು ಹೆಣೆಯಲ್ಪಟ್ಟಿದೆ ಎಂದು ವಾದಿಸುತ್ತಾರೆ.

ಉದಾಹರಣೆಗೆ, ಜರ್ಮನಿಯ ವಿದ್ವಾಂಸರಾದ ಗರ್ಟ್‌ ಲ್ಯೂಡೆಮಾನ್‌ ಅವರ ದೃಷ್ಟಿಕೋನಗಳನ್ನು ತೆಗೆದುಕೊಳ್ಳಿರಿ. ಇವರು ಹೊಸ ಒಡಂಬಡಿಕೆಯ ಪ್ರೊಫೆಸರರಾಗಿದ್ದು, ಯೇಸುವಿಗೆ ನಿಜವಾಗಿ ಏನು ಸಂಭವಿಸಿತು​—ಪುನರುತ್ಥಾನಕ್ಕೆ ಒಂದು ಐತಿಹಾಸಿಕ ದೃಷ್ಟಿಕೋನ (ಇಂಗ್ಲಿಷ್‌) ಎಂಬ ಪುಸ್ತಕದ ಲೇಖಕರಾಗಿದ್ದಾರೆ. ಯೇಸುವಿನ ಪುನರುತ್ಥಾನ ಎಂಬುದು “ಟೊಳ್ಳು ಹೇಳಿಕೆಯಾಗಿದೆ” ಹಾಗೂ “ವೈಜ್ಞಾನಿಕ ಯುಗವನ್ನು” ನಂಬುವವರು ಈ ಮಾತನ್ನು ತಳ್ಳಿಹಾಕಬೇಕು ಎಂದು ವಾದಿಸುತ್ತಾರೆ.

ಪೇತ್ರನು ಯೇಸುವನ್ನು ಅಲ್ಲಗಳೆದ ಕಾರಣ ಅವನಿಗೆ ಬಹಳ ದುಃಖವಾಗಿತ್ತು ಮಾತ್ರವಲ್ಲ ದೋಷಿಭಾವನೆಯು ಅವನನ್ನು ಕಿತ್ತುತಿನ್ನುತ್ತಿತ್ತು. ಆದುದರಿಂದ, ಅವನು ಪುನರುತ್ಥಿತ ಯೇಸು ತನಗೆ ಕಾಣಿಸಿಕೊಂಡನು ಎಂದು ಹೇಳಿದನು ಎಂಬುದಾಗಿ ಪ್ರೊಫೆಸರರಾದ ಲ್ಯೂಡೆಮಾನ್‌ ಪ್ರತಿಪಾದಿಸುತ್ತಾರೆ. ಮತ್ತು ಇವರಿಗನುಸಾರ, ಒಂದು ಸಂದರ್ಭದಲ್ಲಿ 500 ಜನ ವಿಶ್ವಾಸಿಗಳಿಗೆ ಯೇಸು ಕಾಣಿಸಿಕೊಂಡನು ಎಂಬುದು “ಸಾಮೂಹಿಕ ಭಾವಪರವಶತೆ” ಆಗಿದೆ. (1 ಕೊರಿಂಥ 15:​5, 6) ಸಂಕ್ಷಿಪ್ತವಾಗಿ ಹೇಳುವುದಾದರೆ, ಅನೇಕ ವಿದ್ವಾಂಸರು ಪುನರುತ್ಥಿತ ಯೇಸುವಿನ ಬೈಬಲ್‌ ವೃತ್ತಾಂತಗಳನ್ನು ಕಾಲ್ಪನಿಕ ಅನುಭವಗಳನ್ನಾಗಿ ಮಾರ್ಪಡಿಸಿದ್ದಾರೆ. ಮತ್ತು ಇದು ಶಿಷ್ಯರಲ್ಲಿ ಆತ್ಮಿಕ ಆತ್ಮವಿಶ್ವಾಸವನ್ನು ಚೈತನ್ಯಗೊಳಿಸಿತೆಂದೂ ಅವರಲ್ಲಿ ಮಿಷನೆರಿ ಹುರುಪನ್ನು ಉಂಟುಮಾಡಿತೆಂದೂ ಹೇಳುತ್ತಾರೆ.

ಅನೇಕರಿಗೆ ಪಾಂಡಿತ್ಯ ವಾಗ್ಯುದ್ಧದಲ್ಲಿ ಕಡಿಮೆ ಆಸಕ್ತಿಯಿದೆ ಎಂಬುದೇನೋ ನಿಜವೇ. ಆದರೂ, ಯೇಸುವಿನ ಪುನರುತ್ಥಾನದ ಬಗ್ಗೆ ನಾವೆಲ್ಲರೂ ಆಸಕ್ತಿಯನ್ನು ತೋರಿಸಲೇಬೇಕು. ಏಕೆ? ಏಕೆಂದರೆ, ಯೇಸು ಪುನರುತ್ಥಾನಗೊಂಡಿರದಿದ್ದರೆ, ಕ್ರೈಸ್ತತ್ವದ ತಳಪಾಯವೇ ಸುಳ್ಳಾಗಿದೆ ಎಂದು ಇದರರ್ಥ. ಆದರೆ ಯೇಸು ನಿಜವಾಗಿಯೂ ಪುನರುತ್ಥಾನಗೊಂಡನು ಎಂದರೆ, ಕ್ರೈಸ್ತತ್ವವು ಸತ್ಯದ ಮೇಲಾಧಾರಿಸಿದೆ. ಹಾಗಿರುವಲ್ಲಿ, ಯೇಸುವಿನ ಪ್ರತಿಪಾದನೆಗಳು ಮಾತ್ರವಲ್ಲ ಅವನ ವಾಗ್ದಾನಗಳು ಸಹ ಸಮರ್ಥಿಸಲ್ಪಡುವುವು. ಅಲ್ಲದೆ, ಪುನರುತ್ಥಾನ ಎಂಬುದು ಒಂದಿದ್ದರೆ, ಮೃತ್ಯುವು ಮಹಾ ವಿಜೇತನಲ್ಲ ಬದಲಾಗಿ, ಸೋಲಿಸಿ ಕೆಡವಿಹಾಕಸಾಧ್ಯವಿರುವ ಶತ್ರುವಾಗಿದೆ.​—1 ಕೊರಿಂಥ 15:55.

[ಪುಟ 3ರಲ್ಲಿರುವ ಚಿತ್ರ ಕೃಪೆ]

From the Self-Pronouncing Edition of the Holy Bible, containing the King James and the Revised versions