ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ವಿವೇಕವನ್ನು ಕಂಡುಕೊಂಡಿರುವವನು ಸಂತೋಷವುಳ್ಳವನು’

‘ವಿವೇಕವನ್ನು ಕಂಡುಕೊಂಡಿರುವವನು ಸಂತೋಷವುಳ್ಳವನು’

‘ವಿವೇಕವನ್ನು ಕಂಡುಕೊಂಡಿರುವವನು ಸಂತೋಷವುಳ್ಳವನು’

ವನೊಬ್ಬ ಕವಿಯಾಗಿದ್ದನು, ವಾಸ್ತುಶಿಲ್ಪಿಯಾಗಿದ್ದನು ಹಾಗೂ ಒಬ್ಬ ರಾಜನಾಗಿದ್ದನು. ವರ್ಷದಲ್ಲಿ ಸುಮಾರು 1,000 ಕೋಟಿ ರೂಪಾಯಿಗಳನ್ನು ಸಂಪಾದಿಸುತ್ತಿದ್ದನು. ಅವನು ಎಲ್ಲ ರಾಜರಿಗಿಂತಲೂ ಅತ್ಯಂತ ಧನಿಕ ರಾಜನಾಗಿದ್ದನು. ಈ ವ್ಯಕ್ತಿಯು ಅವನಿಗಿದ್ದ ವಿವೇಕದಿಂದಲೂ ಪ್ರಖ್ಯಾತನಾಗಿದ್ದನು. ಅವನನ್ನು ಭೇಟಿಮಾಡಿದ ಒಬ್ಬ ರಾಣಿಯು ಎಷ್ಟು ಪ್ರಭಾವಿತಳಾದಳೆಂದರೆ ಅವಳು ಹೇಳಿದ್ದು: “ಈಗ ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ.” (1 ಅರಸು 10:4-9) ಪುರಾತನ ಇಸ್ರಾಯೇಲಿನ ಸೊಲೊಮೋನ ರಾಜನ ಅಂತಸ್ತು ಅಂತಹದ್ದಾಗಿತ್ತು.

ಸೊಲೊಮೋನನು ಐಶ್ವರ್ಯ ಮತ್ತು ವಿವೇಕ ಇವೆರಡನ್ನೂ ಹೊಂದಿದ್ದನು. ಇವೆರಡರಲ್ಲಿ ಯಾವುದು ನಿಜವಾಗಿಯೂ ಅತ್ಯಗತ್ಯ ಎಂದು ನಿರ್ಧರಿಸುವುದಕ್ಕೆ ಇದು ಅವನನ್ನು ಅರ್ಹಗೊಳಿಸಿತು. ಅವನು ಬರೆದುದು: “ವಿವೇಕವನ್ನು ಕಂಡುಕೊಂಡಿರುವವನು ಮತ್ತು ವಿವೇಚನೆಯನ್ನು ಸಂಪಾದಿಸುವವನು ಸಂತೋಷವುಳ್ಳವನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.”​—ಜ್ಞಾನೋಕ್ತಿ 3:13-15, NW.

ಆದರೆ ವಿವೇಕವನ್ನು ಎಲ್ಲಿ ತಾನೇ ಕಂಡುಕೊಳ್ಳಸಾಧ್ಯವಿದೆ? ಇದು ಐಶ್ವರ್ಯಕ್ಕಿಂತಲೂ ಏಕೆ ಬಹಳ ಅಮೂಲ್ಯವಾಗಿದೆ? ಇದರ ಆಕರ್ಷಕ ಗುಣಗಳಾವುವು? ರಾಜ ಸೊಲೊಮೋನನಿಂದ ಬರೆಯಲ್ಪಟ್ಟ, ಜ್ಞಾನೋಕ್ತಿ ಪುಸ್ತಕದ 8ನೇ ಅಧ್ಯಾಯವು ಈ ಪ್ರಶ್ನೆಗಳಿಗೆ ಚಿತ್ತಾಕರ್ಷಕವಾದ ವಿಧದಲ್ಲಿ ಉತ್ತರಗಳನ್ನು ಕೊಡುತ್ತದೆ. ಇಲ್ಲಿ ವಿವೇಕವು ಮಾತಾಡಿ ಕ್ರಿಯೆಗೈಯುತ್ತದೋ ಎಂಬಂತೆ ಇದಕ್ಕೆ ವ್ಯಕ್ತಿತ್ವರೂಪ ಕೊಡಲಾಗಿದೆ. ಮತ್ತು ವಿವೇಕವು ವೈಯಕ್ತಿಕವಾಗಿ ತನ್ನ ಗುಣಲಕ್ಷಣವನ್ನೂ ತನ್ನ ಮೌಲ್ಯವನ್ನೂ ಹೊರಪಡಿಸುತ್ತದೆ.

“ಕೂಗುತ್ತಾಳೆ”

ಜ್ಞಾನೋಕ್ತಿ 8ನೇ ಅಧ್ಯಾಯವು ಈ ಮಾತುಗಳೊಂದಿಗೆ ಆರಂಭಗೊಳ್ಳುತ್ತದೆ: “ಜ್ಞಾನವೆಂಬಾಕೆಯು [“ವಿವೇಕ,” NW] ಕರೆಯುತ್ತಾಳೆ, ವಿವೇಕವೆಂಬ [“ವಿವೇಚನೆ,” NW] ಆಕೆಯೇ ದನಿಗೈಯುತ್ತಾಳೆ.” * ಅನೈತಿಕ ಸ್ತ್ರೀಯು ಕತ್ತಲೆಯ ಸ್ಥಳಗಳಲ್ಲಿ ತಿರುಗಾಡುವಂತೆ ಹಾಗೂ ಒಬ್ಬಂಟಿಗನಾದ ಅನುಭವವಿಲ್ಲದ ಯುವಕನ ಕಿವಿಯಲ್ಲಿ ಮೋಹಕ ಮಾತುಗಳನ್ನು ಪಿಸುಗುಟ್ಟುವುದಕ್ಕೆ ವಿರುದ್ಧವಾಗಿ ವಿವೇಕ ಹಾಗೂ ವಿವೇಚನೆಯು ದನಿಗೈಯುತ್ತಾ ಇರುತ್ತದೆ. (ಜ್ಞಾನೋಕ್ತಿ 7:​12, ಓರೆಅಕ್ಷರಗಳು ನಮ್ಮವು.) “ಆಕೆಯು ರಾಜಮಾರ್ಗಗಳ ಅಗ್ರಸ್ಥಾನದಲ್ಲಿ, ದಾರಿಯ ಪಕ್ಕದಲ್ಲಿ, ನಡುಬೀದಿಯಲ್ಲಿ, ನಿಂತುಕೊಳ್ಳುತ್ತಾಳೆ. ಪುರಪ್ರವೇಶದ ದ್ವಾರಗಳಲ್ಲಿ, ಬಾಗಿಲುಗಳೊಳಗೆ ಜನಸೇರುವ ಸ್ಥಳದಲ್ಲಿ ಹೀಗೆ ಕೂಗುತ್ತಾಳೆ.” (ಜ್ಞಾನೋಕ್ತಿ 8:​1-3, ಓರೆಅಕ್ಷರಗಳು ನಮ್ಮವು.) ವಿವೇಕದ ಬಲವಾದ ಹಾಗೂ ದಿಟ್ಟ ಧ್ವನಿಯು ಸಾರ್ವಜನಿಕ ಸ್ಥಳಗಳಲ್ಲಿ, ಅಂದರೆ ದಾರಿಯಲ್ಲಿ, ನಡುಬೀದಿಯಲ್ಲಿ, ಪುರಪ್ರವೇಶದ ದ್ವಾರಗಳಲ್ಲಿ ಕೇಳಿಸುತ್ತದೆ. ಜನರು ಹೀಗೆ ಅವಳ ಧ್ವನಿಯನ್ನು ಕೇಳಿಸಿಕೊಂಡು ಅದಕ್ಕೆ ಪ್ರತಿಕ್ರಿಯಿಸುವುದು ಸುಲಭವಾಗಿರುತ್ತದೆ.

ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ದೈವಿಕ ವಿವೇಕವು, ಅದನ್ನು ಪಡೆದುಕೊಳ್ಳಲು ಇಷ್ಟಪಡುವವರೆಲ್ಲರಿಗೂ ಲಭ್ಯವಾಗಿದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಸಾಧ್ಯವಿದೆ? “ಇತಿಹಾಸದಲ್ಲಿಯೇ ವ್ಯಾಪಕವಾಗಿ ಓದಲ್ಪಟ್ಟ ಗ್ರಂಥವು ಬೈಬಲ್‌ ಆಗಿದೆ” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುತ್ತದೆ. ಅದು ಕೂಡಿಸುವುದು: “ಬೇರೆ ಯಾವುದೇ ಗ್ರಂಥಕ್ಕೆ ಹೋಲಿಸುವಾಗ ಬೈಬಲು ಅತ್ಯಧಿಕವಾಗಿ ವಿತರಿಸಲ್ಪಟ್ಟಿದೆ. ಮತ್ತು ಬೈಬಲು ಬಹಳಷ್ಟು ಸಮಯ ಹಾಗೂ ಬಹಳಷ್ಟು ಭಾಷೆಗಳಲ್ಲಿ ಅನುವಾದಿಸಲ್ಪಟ್ಟಿದೆ.” ಸಂಪೂರ್ಣ ಬೈಬಲು ಅಥವಾ ಅದರ ಭಾಗಗಳು ಸುಮಾರು 2,100ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಹಾಗೂ ಉಪಭಾಷೆಗಳಲ್ಲಿ ಲಭ್ಯವಿವೆ. ಮಾತ್ರವಲ್ಲ, ಸುಮಾರು 90 ಪ್ರತಿಶತಕ್ಕಿಂತಲೂ ಹೆಚ್ಚಿನ ಜನರ ಕೈಯಲ್ಲಿ ಸ್ವಂತ ಭಾಷೆಯಲ್ಲಿ ಕಡಿಮೆ ಪಕ್ಷ ದೇವರ ವಾಕ್ಯದ ಅಂಶವಾದರೂ ಇರುತ್ತದೆ.

ಬೈಬಲಿನಲ್ಲಿರುವ ಸಂದೇಶವನ್ನು ಯೆಹೋವನ ಸಾಕ್ಷಿಗಳು ಎಲ್ಲೆಲ್ಲೂ ಘೋಷಿಸುತ್ತಿದ್ದಾರೆ. 235 ದೇಶಗಳಲ್ಲಿ, ಇವರು ದೇವರ ರಾಜ್ಯದ ಸುವಾರ್ತೆಯನ್ನು ಸಕ್ರಿಯವಾಗಿ ಸಾರುತ್ತಿದ್ದಾರೆ ಹಾಗೂ ದೇವರ ವಾಕ್ಯದಲ್ಲಿರುವ ಸತ್ಯಗಳನ್ನು ಜನರಿಗೆ ಕಲಿಸುತ್ತಿದ್ದಾರೆ. ಇವರ ಬೈಬಲ್‌ ಆಧಾರಿತ ಪತ್ರಿಕೆಗಳಾದ ಕಾವಲಿನಬುರುಜು 140 ಭಾಷೆಗಳಲ್ಲಿ ಹಾಗೂ ಎಚ್ಚರ! 83 ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತದೆ. ಮತ್ತು ಇಂದು ಸುಮಾರು ಎರಡು ಕೋಟಿಗಿಂತಲೂ ಹೆಚ್ಚಿನ ಪತ್ರಿಕೆಗಳು ವಿತರಿಸಲ್ಪಡುತ್ತಿವೆ. ಖಂಡಿತವಾಗಿಯೂ ವಿವೇಕವು ಸಾರ್ವಜನಿಕ ಸ್ಥಳಗಳಲ್ಲಿ ದನಿಗೈಯುತ್ತಿದೆ.

“ಮಾನವರಿಗಾಗಿ ದನಿಗೈಯುತ್ತೇನೆ”

ವ್ಯಕ್ತಿತ್ವರೂಪ ಕೊಡಲ್ಪಟ್ಟ ವಿವೇಕವು ಹೀಗೆ ಮಾತಾಡಲು ಪ್ರಾರಂಭಿಸುತ್ತದೆ. “ಮನುಷ್ಯರೇ, ನಿಮ್ಮನ್ನೇ ಕರೆಯುತ್ತೇನೆ, ಮಾನವರಿಗಾಗಿಯೇ ದನಿಗೈಯುತ್ತೇನೆ. ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ, ಜ್ಞಾನಹೀನರೇ, ಬುದ್ಧಿಯನ್ನು ಗ್ರಹಿಸಿರಿ.”​—ಜ್ಞಾನೋಕ್ತಿ 8:4, 5, ಓರೆಅಕ್ಷರಗಳು ನಮ್ಮವು.

ವಿವೇಕದ ದನಿಗೈಯುವಿಕೆಯು ಸಾರ್ವತ್ರಿಕವಾಗಿದೆ. ಇದು ಎಲ್ಲ ಮಾನವರಿಗೂ ಆಮಂತ್ರಣವನ್ನು ನೀಡುತ್ತದೆ. ಮೂಢರು ಅಥವಾ ಅನುಭವವಿಲ್ಲದವರಿಗೆ ಜಾಣತನವನ್ನು ಅಥವಾ ವಿವೇಕವನ್ನು ಪಡೆದುಕೊಳ್ಳುವಂತೆ ಮತ್ತು ಜ್ಞಾನಹೀನರಿಗೆ ಬುದ್ಧಿಯನ್ನು ಪಡೆದುಕೊಳ್ಳುವಂತೆ ಆಮಂತ್ರಣವನ್ನು ನೀಡಲಾಗಿದೆ. ಬೈಬಲು ಸಕಲ ಜನರಿಗಾಗಿರುವ ಒಂದು ಗ್ರಂಥವಾಗಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಆದುದರಿಂದಲೇ, ಅವರು ಭೇಟಿಯಾಗುವ ಎಲ್ಲರನ್ನೂ ಬೈಬಲಿನಲ್ಲಿ ಕಂಡುಬರುವ ವಿವೇಕದ ನುಡಿಮುತ್ತುಗಳನ್ನು ಕಂಡುಕೊಳ್ಳಲಿಕ್ಕಾಗಿ ಅದನ್ನು ಪರೀಕ್ಷಿಸಿ ನೋಡುವಂತೆ ನಿಷ್ಪಕ್ಷಪಾತದಿಂದ ಉತ್ತೇಜನವನ್ನು ನೀಡುತ್ತಾರೆ.

“ನನ್ನ ಬಾಯಿ ಸತ್ಯವನ್ನೇ ಆಡುವದು”

ವಿವೇಕವು ತನ್ನ ಬಿನ್ನಹವನ್ನು ಮಾಡುತ್ತಾ ಮುಂದುವರಿಸುವುದು: “ಕೇಳಿರಿ, ನಾನು ಶ್ರೇಷ್ಠವಾದ ಸಂಗತಿಗಳನ್ನು ಹೇಳುವೆನು, ಯಥಾರ್ಥಕ್ಕಾಗಿಯೇ ತುಟಿಗಳನ್ನು ತೆರೆಯುವೆನು, ನನ್ನ ಬಾಯಿ ಸತ್ಯವನ್ನೇ ಆಡುವದು, ದುಷ್ಟತನವು ನನ್ನ ತುಟಿಗಳಿಗೆ ಅಸಹ್ಯವಾಗಿದೆ. ನನ್ನ ಮಾತುಗಳೆಲ್ಲಾ ನೀತಿಭರಿತವಾಗಿವೆ, ಅವುಗಳಲ್ಲಿ ಕಪಟವೂ ವಕ್ರತೆಯೂ ಇಲ್ಲ.” ಹೌದು, ವಿವೇಕದ ಕಲಿಸುವಿಕೆಯು ಅತ್ಯುತ್ತಮವಾದದ್ದೂ ಪ್ರಾಮಾಣಿಕವಾದದ್ದೂ ಹಾಗೂ ಸತ್ಯವಾದದ್ದೂ ನ್ಯಾಯಬದ್ಧವಾದದ್ದೂ ಆಗಿದೆ. ಅದರಲ್ಲಿ ಯಾವುದೇ ಕುಟಿಲವಾದ ಇಲ್ಲವೆ ವಕ್ರವಾದ ವಿಷಯಗಳಿಲ್ಲ. ಖಂಡಿತವಾಗಿಯೂ, “ಅವೆಲ್ಲಾ ಗ್ರಹಿಕೆಯುಳ್ಳವನಿಗೆ ನ್ಯಾಯವಾಗಿಯೂ ತಿಳುವಳಿಕೆಯನ್ನು ಪಡೆದವರಿಗೆ ಯಥಾರ್ಥವಾಗಿಯೂ ತೋರುವವು.”​—ಜ್ಞಾನೋಕ್ತಿ 8:6-9, ಓರೆಅಕ್ಷರಗಳು ನಮ್ಮವು.

ಆದುದರಿಂದಲೇ ವಿವೇಕವು ಪ್ರೇರೇಪಿಸುವುದು: “ನನ್ನ ಬೋಧನೆಯನ್ನು ಬೆಳ್ಳಿಗಿಂತಲೂ ಜ್ಞಾನೋಪದೇಶವನ್ನು ಅಪರಂಜಿಗಿಂತಲೂ ಉತ್ತಮವೆಂದು ಹೊಂದಿಕೊಳ್ಳಿರಿ.” ಈ ಬಿನ್ನಹವು ಅರ್ಥವತ್ತಾಗಿದೆ ಏಕೆಂದರೆ, “ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ, ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.” (ಜ್ಞಾನೋಕ್ತಿ 8:10, 11, ಓರೆಅಕ್ಷರಗಳು ನಮ್ಮವು.) ಏಕೆ? ಯಾವ ವಿಷಯವು ವಿವೇಕವನ್ನು ಸಿರಿಸಂಪತ್ತುಗಳಿಗಿಂತಲೂ ಅತ್ಯಮೂಲ್ಯವಾದದ್ದಾಗಿ ಮಾಡುತ್ತದೆ?

“ನನ್ನಿಂದಾಗುವ ಫಲವು ಭಂಗಾರಕ್ಕಿಂತಲೂ . . . ಉತ್ತಮ”

ವಿವೇಕವು ತನ್ನ ಮಾತಿಗೆ ಕಿವಿಗೊಡುವವರಿಗೆ ಅನುಗ್ರಹಿಸುವ ಕೊಡುಗೆಗಳು ಚಿನ್ನ, ಬೆಳ್ಳಿ ಅಥವಾ ಹವಳಕ್ಕಿಂತಲೂ ಅಮೂಲ್ಯವಾದದ್ದಾಗಿವೆ. ಇವು ಯಾವ್ಯಾವ ಕೊಡುಗೆಗಳು ಎಂಬುದನ್ನು ತಿಳಿಸುತ್ತಾ ವಿವೇಕವು ತಿಳಿಸುವುದು: “ಜ್ಞಾನವೆಂಬ [“ವಿವೇಕ,” NW] ನನಗೆ ಜಾಣ್ಮೆಯೇ ನಿವಾಸ, ಯುಕ್ತಿಗಳ ತಿಳುವಳಿಕೆಯನ್ನು ಹೊಂದಿದ್ದೇನೆ. ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.”​—ಜ್ಞಾನೋಕ್ತಿ 8:12, 13, ಓರೆಅಕ್ಷರಗಳು ನಮ್ಮವು.

ವಿವೇಕವನ್ನು ಪಡೆದುಕೊಳ್ಳುವವರಿಗೆ ಇದು ಜಾಣತನವನ್ನೂ ಯೋಚನಾಸಾಮರ್ಥ್ಯಗಳನ್ನು ನೀಡುತ್ತದೆ. ದೈವಿಕ ವಿವೇಕವನ್ನು ಪಡೆದುಕೊಂಡಿರುವ ವ್ಯಕ್ತಿಗೆ ದೇವರ ಬಗ್ಗೆ ಪೂಜ್ಯಭಾವನೆ ಹಾಗೂ ಭಯಭಕ್ತಿಯಿರುತ್ತದೆ. ಏಕೆಂದರೆ, “ಯೆಹೋವನ ಭಯವೇ ಜ್ಞಾನಕ್ಕೆ [“ವಿವೇಕ,” NW] ಮೂಲವು.” (ಜ್ಞಾನೋಕ್ತಿ 9:10) ಹೀಗೆ, ಅವನು ಯೆಹೋವನು ದ್ವೇಷಿಸುವಂತಹ ವಿಷಯಗಳನ್ನು ದ್ವೇಷಿಸುತ್ತಾನೆ. ಗರ್ವ, ಅಹಂಭಾವ, ದುರ್ಮಾರ್ಗತನ ಮತ್ತು ಕುಟಿಲ ಭಾಷಣವು ಅವನಲ್ಲಿರುವುದಿಲ್ಲ. ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಹಾಗೂ ಕುಟುಂಬದ ಮುಖ್ಯಸ್ಥರು ವಿವೇಕವನ್ನು ಹುಡುಕುವುದು ಎಷ್ಟು ಪ್ರಾಮುಖ್ಯವಾಗಿದೆ!

“ಸದ್ಯೋಚನೆಯೂ ಸುಜ್ಞಾನವೂ ಸಾಮರ್ಥ್ಯವೂ ನನ್ನಲ್ಲಿವೆ; ವಿವೇಕವು ನಾನೇ. ನನ್ನ ಸಹಾಯದಿಂದ ರಾಜರು ಆಳುವರು, ಅಧಿಪತಿಗಳು ಸಹ ನ್ಯಾಯತೀರಿಸುವರು. ನನ್ನ ಮೂಲಕ ಪ್ರಭುಗಳು, ನಾಯಕರು, ಅಂತು ಭೂಪತಿಗಳೆಲ್ಲರೂ ದೊರೆತನ ಮಾಡುವರು.” (ಜ್ಞಾನೋಕ್ತಿ 8:14-16, ಓರೆಅಕ್ಷರಗಳು ನಮ್ಮವು.) ವಿವೇಕದ ಫಲವು ಸೂಕ್ಷ್ಮಪರಿಜ್ಞಾನ, ತಿಳುವಳಿಕೆ ಮತ್ತು ಸರ್ವಶಕ್ತತೆಯನ್ನು ಒಳಗೊಳ್ಳುತ್ತದೆ. ಈ ಅಂಶಗಳು ರಾಜರಿಗೆ, ಅಧಿಪತಿಗಳಿಗೆ ಹಾಗೂ ಭೂಪತಿಗಳಿಗೆಲ್ಲ ಬಹಳ ಅಗತ್ಯವಾದದ್ದಾಗಿವೆ. ಅಧಿಕಾರದ ಸ್ಥಾನದಲ್ಲಿರುವವರಿಗೆ ಹಾಗೂ ಇತರರಿಗೆ ಸಲಹೆಯನ್ನು ನೀಡುವವರಿಗೆ ವಿವೇಕವು ಬಹಳ ಅತ್ಯಗತ್ಯವಾಗಿದೆ.

ನಿಜ ವಿವೇಕವು ಎಲ್ಲರಿಗೂ ಲಭ್ಯವಿದೆ. ಆದರೆ ಎಲ್ಲರೂ ಅದನ್ನು ಕಂಡುಕೊಳ್ಳುವುದಿಲ್ಲ. ಕೆಲವರು ಅದು ತಮ್ಮ ಹೊಸ್ತಿಲಲ್ಲೇ ಇರುವುದಾದರೂ ಅದನ್ನು ದೂರತಳ್ಳುತ್ತಾರೆ. “ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು” ಎಂದು ವಿವೇಕವು ಹೇಳುತ್ತದೆ. (ಜ್ಞಾನೋಕ್ತಿ 8:​17, ಓರೆಅಕ್ಷರಗಳು ನಮ್ಮವು.) ವಿವೇಕವು ಅದನ್ನು ಶ್ರದ್ಧೆಯಿಂದ ಹುಡುಕುವವರಿಗೆ ಮಾತ್ರ ಸಿಗುತ್ತದೆ.

ವಿವೇಕದ ಮಾರ್ಗಗಳು ಪ್ರಾಮಾಣಿಕವೂ ನ್ಯಾಯಬದ್ಧವೂ ಆದದ್ದಾಗಿವೆ. ಅದು ತನ್ನನ್ನು ಹುಡುಕುವವರಿಗೆ ಪ್ರತಿಫಲಗಳನ್ನು ನೀಡುತ್ತದೆ. “ನನ್ನಲ್ಲಿ ಧನಘನತೆಗಳೂ ಶ್ರೇಷ್ಠಸಂಪತ್ತೂ ನೀತಿಯೂ ಇರುತ್ತವೆ. ನನ್ನಿಂದಾಗುವ ಫಲವು ಭಂಗಾರಕ್ಕಿಂತಲೂ ಹೌದು ಅಪರಂಜಿಗಿಂತಲೂ ಉತ್ತಮ; ನನ್ನ ಮೂಲಕವಾದ ಆದಾಯವು ಚೊಕ್ಕ ಬೆಳ್ಳಿಗಿಂತಲೂ ಅಮೂಲ್ಯವಾಗಿದೆ. ನಾನು ಹಿಡಿದಿರುವ ದಾರಿಯು ನೀತಿಯೇ, ನ್ಯಾಯಮಾರ್ಗಗಳಲ್ಲಿ ನಡೆಯುತ್ತೇನೆ. ಹೀಗಿರಲು ನನ್ನನ್ನು ಪ್ರೀತಿಸುವವರಿಗೆ ಧನದ ಬಾಧ್ಯತೆಯನ್ನು ದೊರಕಿಸಿ ಅವರ ಬೊಕ್ಕಸಗಳನ್ನು ತುಂಬಿಸುವೆನು” ಎಂದು ವಿವೇಕವು ಹೇಳುತ್ತದೆ.​ಜ್ಞಾನೋಕ್ತಿ 8:18-21, ಓರೆಅಕ್ಷರಗಳು ನಮ್ಮವು.

ವಿವೇಕದ ಕೊಡುಗೆಗಳಲ್ಲಿ ಜಾಣತನ, ಯೋಚನಾಸಾಮರ್ಥ್ಯ, ನಮ್ರತೆ, ಸೂಕ್ಷ್ಮಪರಿಜ್ಞಾನ, ಸುಜ್ಞಾನ ಹಾಗೂ ತಿಳುವಳಿಕೆಯಂತಹ ಅತ್ಯುತ್ಕೃಷ್ಟ ಗುಣಗಳೊಂದಿಗೆ ಸಿರಿಸಂಪತ್ತು ಹಾಗೂ ಮರ್ಯಾದೆಯು ಸೇರಿರುತ್ತದೆ. ಒಬ್ಬ ವಿವೇಕಿಯು ಐಶ್ವರ್ಯವನ್ನು ನ್ಯಾಯಬದ್ಧವಾದ ರೀತಿಯಲ್ಲಿ ಗಳಿಸಿಕೊಳ್ಳಬಹುದು ಮತ್ತು ಆತ್ಮಿಕವಾಗಿ ಏಳಿಗೆ ಹೊಂದಬಹುದು. (3 ಯೋಹಾನ 2) ಮಾತ್ರವಲ್ಲ, ವಿವೇಕವು ಒಬ್ಬ ವ್ಯಕ್ತಿಗೆ ಮರ್ಯಾದೆಯನ್ನು ತರುತ್ತದೆ. ಹಾಗೂ ಅವನು ಏನನ್ನು ಪಡೆದುಕೊಳ್ಳುತ್ತಾನೋ ಅದರಿಂದ ಅವನಿಗೆ ಸಂತೃಪ್ತಿ, ಮನಶ್ಶಾಂತಿ ಹಾಗೂ ದೇವರ ಮುಂದೆ ಒಂದು ಶುದ್ಧ ಮನಸ್ಸಾಕ್ಷಿ ಸಿಗುತ್ತದೆ. ಹೌದು, ವಿವೇಕವನ್ನು ಕಂಡುಕೊಂಡಿರುವವನು ಸಂತೋಷವುಳ್ಳವನಾಗಿದ್ದಾನೆ. ವಿವೇಕದಿಂದ ಸಿಗುವ ಫಲವು ಅಪರಂಜಿಗಿಂತಲೂ ಬೆಳ್ಳಿಗಿಂತಲೂ ಅಮೂಲ್ಯವಾದದ್ದು.

ಹೇಗಾದರೂ ಮಾಡಿ, ಹಣವನ್ನು ಗಳಿಸಿಕೊಳ್ಳುವುದಕ್ಕೆ ಮಹತ್ವವನ್ನು ಕೊಡುವ ಒಂದು ಪ್ರಾಪಂಚಿಕ ಲೋಕದಲ್ಲಿ ನಾವು ಜೀವಿಸುತ್ತಿರುವುದರಿಂದ ನಮಗೆ ಇದು ಎಂತಹ ಸಮಯೋಚಿತ ಬುದ್ಧಿವಾದವಾಗಿದೆ! ವಿವೇಕವು ಎಷ್ಟು ಬೆಲೆಯುಳ್ಳದ್ದಾಗಿದೆ ಎಂಬುದನ್ನು ಎಂದಿಗೂ ಮರೆಯದಿರೋಣ ಇಲ್ಲವೆ ಸಿರಿಸಂಪತ್ತನ್ನು ಅನ್ಯಾಯವಾದ ವಿಧದಲ್ಲಿ ಗಳಿಸಿಕೊಳ್ಳಲು ಪ್ರಯತ್ನಿಸದಿರೋಣ. ಕೇವಲ ಸಿರಿಸಂಪತ್ತುಗಳನ್ನು ಗಳಿಸಿಕೊಳ್ಳಲಿಕ್ಕಾಗಿ, ವಿವೇಕವನ್ನು ನಮಗೆ ದಯಪಾಲಿಸುವ ನಮ್ಮ ಕ್ರೈಸ್ತ ಕೂಟಗಳು, ಬೈಬಲಿನ ವೈಯಕ್ತಿಕ ಅಧ್ಯಯನ ಹಾಗೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಪುಸ್ತಕ ಪತ್ರಿಕೆಗಳನ್ನು ಎಂದಿಗೂ ಕಡೆಗಣಿಸದಿರೋಣ.​—ಮತ್ತಾಯ 24:​45, 47.

“ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು”

ವಿವೇಕದ ಸಾಕಾರಮೂರ್ತಿಯು ಜ್ಞಾನೋಕ್ತಿ 8ನೇ ಅಧ್ಯಾಯದಲ್ಲಿ ಕಂಡುಬರುತ್ತದೆ. ಇದು ಕೇವಲ ಭಾವನಾರೂಪದ ಗುಣದ ವೈಶಿಷ್ಟ್ಯಗಳನ್ನು ವಿವರಿಸುವ ಒಂದು ಮಾಧ್ಯಮವಾಗಿಲ್ಲ. ಇದು ಸಾಂಕೇತಿಕ ರೂಪದಲ್ಲಿ ಯೆಹೋವನ ಅತ್ಯಂತ ಪ್ರಮುಖ ಸೃಷ್ಟಿಯನ್ನು ಸೂಚಿಸುತ್ತದೆ. ವಿವೇಕವು ಮುಂದುವರಿಸುವುದು: “ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ. ಪ್ರಾರಂಭದಲ್ಲಿ, ಭೂಮಿಯು ಹುಟ್ಟುವದಕ್ಕಿಂತ ಮುಂಚೆ, ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು. ಜಲನಿಧಿಗಳಾಗಲಿ ನೀರುತುಂಬಿದ ಬುಗ್ಗೆಗಳಾಗಲಿ ಇಲ್ಲದಿರುವಾಗ ನಾನು ಹುಟ್ಟಿದೆನು. ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವದಕ್ಕೆ ಮುಂಚೆ ಆತನು ಭೂಲೋಕವನ್ನಾಗಲಿ ಬೈಲನ್ನಾಗಲಿ ಭೂಮಿಯ ಮೊದಲನೆಯ ಅಣುರೇಣನ್ನಾಗಲಿ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು.”​—ಜ್ಞಾನೋಕ್ತಿ 8:22-26, ಓರೆಅಕ್ಷರಗಳು ನಮ್ಮವು.

ವ್ಯಕ್ತಿರೂಪವಾಗಿ ಕೊಡಲ್ಪಟ್ಟಿರುವ ವಿವೇಕದ ವರ್ಣನೆಯು ಶಾಸ್ತ್ರವಚನಗಳಲ್ಲಿ “ವಾಕ್ಯ” ಎಂದು ಹೇಳಲ್ಪಟ್ಟ ವಿಷಯಕ್ಕೆ ಎಷ್ಟೊಂದು ಚೆನ್ನಾಗಿ ಸರಿಹೋಲುತ್ತದೆ! “ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು” ಎಂದು ಅಪೊಸ್ತಲ ಪೌಲನು ಬರೆದನು. (ಯೋಹಾನ 1:1) ವ್ಯಕ್ತಿರೂಪವಾಗಿ ಕೊಡಲ್ಪಟ್ಟ ವಿವೇಕವು ಸಾಂಕೇತಿಕವಾಗಿ ದೇವರ ಪುತ್ರನಾದ ಯೇಸು ಕ್ರಿಸ್ತನ ಮಾನವಪೂರ್ವ ಅಸ್ತಿತ್ವವವನ್ನು ಪ್ರತಿನಿಧಿಸುತ್ತದೆ. *

ಯೇಸು ಕ್ರಿಸ್ತನು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ. ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ . . . ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು.” (ಕೊಲೊಸ್ಸೆ 1:15, 16) “ಆತನು [“ಯೆಹೋವನು,” NW] ಸಾಗರದ ಮೇಲೆ ಚಕ್ರಾಕಾರವಾದ ಗೀಟನ್ನು ಎಳೆದು ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು. ಆತನು ಗಗನವನ್ನು ಮೇಲೆ ಸ್ಥಿರಪಡಿಸಿ ಸಾಗರದ ಸೆಲೆಗಳನ್ನು ನೆಲೆಗೊಳಿಸಿ ಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಸಮುದ್ರಕ್ಕೆ ಎಲ್ಲೆಕಟ್ಟನ್ನು ನೇಮಿಸಿ ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.” (ಜ್ಞಾನೋಕ್ತಿ 8:27-31, ಓರೆಅಕ್ಷರಗಳು ನಮ್ಮವು.) ಯೆಹೋವನ ಜೇಷ್ಠಪುತ್ರನು ತನ್ನ ತಂದೆಯ ಪಕ್ಕದಲ್ಲಿಯೇ ಇದ್ದುಕೊಂಡು, ಭೂಪರಲೋಕಗಳ ಸೃಷ್ಟಿಕರ್ತನೊಟ್ಟಿಗೆ ಕೆಲಸಮಾಡುತ್ತಿದ್ದನು. ಯೆಹೋವ ದೇವರು ಪ್ರಥಮ ಮಾನವರನ್ನು ಸೃಷ್ಟಿಸಿದಾಗ, ಆತನ ಮಗನು ಶಿಲ್ಪಿಯಾಗಿದ್ದುಕೊಂಡು ಆ ಕೆಲಸದಲ್ಲಿ ಭಾಗಿಯಾಗಿದ್ದನು. (ಆದಿಕಾಂಡ 1:26) ಹೀಗೆ ದೇವರ ಪುತ್ರನು ಮನುಷ್ಯರಲ್ಲಿ ಬಹಳ ಆಸಕ್ತಿಯುಳ್ಳವನಾಗಿರುವುದರಲ್ಲಿ ಹಾಗೂ ಅವರನ್ನು ಪ್ರೀತಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.

“ನನ್ನ ಮಾತನ್ನು ಕೇಳುವವನು ಸಂತೋಷವುಳ್ಳವನು”

ವಿವೇಕದ ಸಾಕಾರಮೂರ್ತಿಯಾದ ದೇವಪುತ್ರನು ಹೇಳುವುದು: “ಮಕ್ಕಳಿರಾ, ಈಗ ನನಗೆ ಕಿವಿಗೊಡಿರಿ, ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೇ ಸರಿ. ಉಪದೇಶವನ್ನು ಕೇಳಿರಿ, ಅದನ್ನು ಬಿಡದೆ ಜ್ಞಾನವಂತರಾಗಿರಿ. ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನವೂ ಕಾಯುತ್ತಾ ಬಾಗಲಿನ ನಿಲವುಗಳ ಹತ್ತಿರ ಜಾಗರೂಕನಾಗಿ ನನ್ನ ಮಾತುಗಳನ್ನು ಕೇಳುವವನು ಸಂತೋಷವುಳ್ಳವನು. ಯಾವನು ನನ್ನನ್ನು ಹುಡುಕುತ್ತಾನೋ ಅವನು ಖಂಡಿತವಾಗಿಯೂ ಜೀವವನ್ನು ಕಂಡುಕೊಳ್ಳುವನು ಹಾಗೂ ದೇವರ ಸುಚಿತ್ತವನ್ನು ಪಡೆದುಕೊಳ್ಳುವವನು. ಯೆಹೋವನ ಕಟಾಕ್ಷಕ್ಕೆ ಗುರಿಯಾಗುವನು. ಯಾವನು ನನಗೆ ತಪ್ಪುಮಾಡುತ್ತಾನೋ ಅವನು ತನ್ನ ಆತ್ಮಕ್ಕೆ ಕೇಡುಮಾಡಿಕೊಳ್ಳುತ್ತಾನೆ; ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”​—ಜ್ಞಾನೋಕ್ತಿ 8:32-36, NW.

ಯೇಸು ಕ್ರಿಸ್ತನು ದೇವರ ವಿವೇಕದ ಸಾಕಾರಮೂರ್ತಿಯಾಗಿದ್ದಾನೆ. “ಅವನಲ್ಲಿಯೇ ವಿವೇಕ ಹಾಗೂ ಜ್ಞಾನದ ಎಲ್ಲ ನಿಕ್ಷೇಪಗಳು ಅಡಗಿವೆ.” (ಕೊಲೊಸ್ಸೆ 2:​3, NW) ಆದುದರಿಂದ, ಬಹಳ ಜಾಗರೂಕತೆಯಿಂದ ಅವನಿಗೆ ಕಿವಿಗೊಡೋಣ ಹಾಗೂ ಅವನ ಹೆಜ್ಜೆಗಳನ್ನು ನಿಕಟವಾಗಿ ಅನುಸರಿಸೋಣ. (1 ಪೇತ್ರ 2:21) ಅವನನ್ನು ತಿರಸ್ಕರಿಸುವುದು ನಮ್ಮ ಸ್ವಂತ ಪ್ರಾಣಕ್ಕೆ ಹಿಂಸೆಯನ್ನು ಕೊಡುವುದಕ್ಕೆ ಸಮವಾಗಿರುತ್ತದೆ. ಮಾತ್ರವಲ್ಲ, ‘ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವುದಿಲ್ಲವಾದ’ ಕಾರಣ, ನಾವು ಮೃತ್ಯುವನ್ನು ಕೈಬೀಸಿ ಕರೆಯುತ್ತಿರುತ್ತೇವೆ. (ಅ. ಕೃತ್ಯಗಳು 4:12) ನಮ್ಮ ರಕ್ಷಣೆಗಾಗಿ ದೇವರು ಯೇಸುವನ್ನು ಒದಗಿಸಿದ್ದಾನೆ ಎಂಬುದನ್ನು ನಾವು ನಿಶ್ಚಯವಾಗಿ ಅಂಗೀಕರಿಸೋಣ. (ಮತ್ತಾಯ 20:28; ಯೋಹಾನ 3:16) ಹೀಗೆ, ‘ಜೀವವನ್ನು ಕಂಡುಕೊಂಡು ಯೆಹೋವನ ಸುಚಿತ್ತವನ್ನು’ ಪಡೆದುಕೊಳ್ಳುವುದರಿಂದ ಸಿಗುವ ಸಂತೋಷವನ್ನು ಅನುಭವಿಸುವೆವು.

[ಪಾದಟಿಪ್ಪಣಿಗಳು]

^ ಪ್ಯಾರ. 6 “ವಿವೇಕ” ಎಂಬ ಹೀಬ್ರು ಪದವು ಸ್ತ್ರೀಲಿಂಗವಾಗಿದೆ. ಆದುದರಿಂದ ಕೆಲವು ತರ್ಜುಮೆಗಳು ವಿವೇಕವನ್ನು ಸೂಚಿಸುವಾಗ ಸ್ತ್ರೀ ಸರ್ವನಾಮವನ್ನು ಬಳಸುತ್ತದೆ.

^ ಪ್ಯಾರ. 25 “ವಿವೇಕ” ಎಂಬ ಈ ಹೀಬ್ರು ಪದವು ಯಾವಾಗಲೂ ಸ್ತ್ರೀಲಿಂಗದಲ್ಲಿ ಪ್ರಯೋಗಿಸಲ್ಪಡುವುದು ದೇವರ ಪುತ್ರನನ್ನು ಪ್ರತಿನಿಧಿಸಲು ಉಪಯೋಗಿಸುವುದರಲ್ಲಿ ಅಸಂಗತವಾಗಿರುವುದಿಲ್ಲ. “ದೇವರು ಪ್ರೀತಿಸ್ವರೂಪಿ” ಎಂಬ ಅಭಿವ್ಯಕ್ತಿಯಲ್ಲಿ “ಪ್ರೀತಿ” ಎಂಬ ಗ್ರೀಕ್‌ ಪದವು ಸಹ ಸ್ತ್ರೀಲಿಂಗವಾಗಿದೆ. (1 ಯೋಹಾನ 4:8) ಆದರೂ ಅದು ದೇವರನ್ನು ಸೂಚಿಸಲು ಉಪಯೋಗಿಸಲ್ಪಡುತ್ತದೆ.

[ಪುಟ 26ರಲ್ಲಿರುವ ಚಿತ್ರಗಳು]

ಜವಾಬ್ದಾರಿಯುತ ಸ್ಥಾನಗಳಲ್ಲಿರುವವರಿಗೆ ವಿವೇಕವು ಅತ್ಯಗತ್ಯವಾಗಿದೆ

[ಪುಟ 27ರಲ್ಲಿರುವ ಚಿತ್ರಗಳು]

ವಿವೇಕವನ್ನು ದಯಪಾಲಿಸುವ ಏರ್ಪಾಡುಗಳನ್ನು ಕಡೆಗಣಿಸದಿರಿ