ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸ್ವಾಮಿ ಎದ್ದದ್ದು ನಿಜ’

‘ಸ್ವಾಮಿ ಎದ್ದದ್ದು ನಿಜ’

‘ಸ್ವಾಮಿ ಎದ್ದದ್ದು ನಿಜ’

ತಮ್ಮ ಸ್ವಾಮಿಯು ಕೊಲ್ಲಲ್ಪಟ್ಟಾಗ ಯೇಸುವಿನ ಶಿಷ್ಯರಿಗೆ ಆದ ನೋವನ್ನು ಸ್ವಲ್ಪ ಊಹಿಸಿಕೊಳ್ಳಿ. ಅರಿಮಥಾಯದ ಯೋಸೇಫನು ಸಮಾಧಿಯಲ್ಲಿಟ್ಟ ಯೇಸುವಿನ ದೇಹದಂತೆ ಅವರ ನಿರೀಕ್ಷೆಯು ಜೀವರಹಿತವಾಗಿತ್ತು. ಯೇಸು, ರೋಮನ್‌ ಸಾಮ್ರಾಜ್ಯದ ನೊಗದ ಕೆಳಗೆ ನಲುಗಿಹೋಗಿರುವ ಯೆಹೂದ್ಯರನ್ನು ಬಿಡಿಸುತ್ತಾನೆ ಎಂಬ ಆಶಾಕಿರಣವು ಸಹ ನಂದಿಹೋಗಿತ್ತು.

ಆದರೆ ವಿಷಯವು ಇದೇ ಆಗಿದ್ದರೆ, ಯೇಸುವಿನ ಶಿಷ್ಯರು ಸಹ ಅನೇಕ ತೋರಿಕೆ ಮೆಸ್ಸೀಯರಂತೆ ಹೇಳಹೆಸರಿಲ್ಲದೆ ಮಾಯವಾಗಿಹೋಗಿರುತ್ತಿದ್ದರು. ಆದರೆ ಯೇಸು ಜೀವಂತನಾಗಿದ್ದನು! ಶಾಸ್ತ್ರವಚನಗಳಿಗನುಸಾರ, ಯೇಸು ಮೃತಪಟ್ಟ ಸ್ವಲ್ಪ ಸಮಯದ ನಂತರ ಹಲವಾರು ಸಂದರ್ಭಗಳಲ್ಲಿ ಅವನು ತನ್ನ ಹಿಂಬಾಲಕರಿಗೆ ಕಾಣಿಸಿಕೊಂಡನು. ಆದುದರಿಂದಲೇ ಕೆಲವರು ‘ಸ್ವಾಮಿ ಎದ್ದದ್ದು ನಿಜ’ ಎಂದು ಉದ್ಗರಿಸುವಂತೆ ಪ್ರೇರಿಸಲ್ಪಟ್ಟರು.​—ಲೂಕ 24:34.

ಯೇಸು ತಾನೇ ಮೆಸ್ಸೀಯನಾಗಿದ್ದಾನೆ ಎಂಬ ತಮ್ಮ ನಂಬಿಕೆಯನ್ನು ಅವನ ಶಿಷ್ಯರು ಕಂಠೋಕ್ತವಾಗಿ ಹೇಳಲೇಬೇಕಾಗಿತ್ತು. ಇದರ ಮೂಲಕ, ಅವರು ಯೇಸು ಸತ್ತವರಿಂದ ಪುನರುತ್ಥಾನಗೊಳಿಸಲ್ಪಟ್ಟನು ಎಂಬುದನ್ನು ವಿಶೇಷವಾಗಿ ತಿಳಿಸುತ್ತಿದ್ದರು. ಮತ್ತು ಇದು ಅವನ ಮೆಸ್ಸೀಯತ್ವಕ್ಕೆ ನಿಜವಾದ ಪುರಾವೆಯನ್ನು ಒದಗಿಸಿತು. ವಾಸ್ತವದಲ್ಲಿ, “ಕರ್ತನಾದ ಯೇಸು ಜೀವಂತನಾಗಿ ಎದ್ದು ಬಂದನೆಂಬದಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿ ಹೇಳುತ್ತಿದ್ದರು.”​—ಅ. ಕೃತ್ಯಗಳು 4:33.

ಯೇಸುವಿನ ದೇಹವು ಸಮಾಧಿಯಲ್ಲಿಯೇ ಇತ್ತು ಎಂದು ಶಿಷ್ಯರಲ್ಲಿ ಒಬ್ಬನು ಹೇಳುವಂತೆ ಮಾಡಿ, ಈ ಪುನರುತ್ಥಾನವು ಒಂದು ಮೋಸವಾಗಿತ್ತು ಎಂದು ಯಾರಾದರೂ ರುಜುಪಡಿಸಿದ್ದಲ್ಲಿ, ಕ್ರೈಸ್ತತ್ವವು ಪ್ರಾರಂಭದಲ್ಲಿಯೇ ಕುಸಿದುಬಿದ್ದಿರುತ್ತಿತ್ತು. ಆದರೆ ಹಾಗಾಗಲಿಲ್ಲ. ಕ್ರಿಸ್ತನು ಜೀವಂತನಾಗಿದ್ದಾನೆ ಎಂಬುದನ್ನು ಅರಿತ ಯೇಸುವಿನ ಹಿಂಬಾಲಕರು, ಅವನ ಪುನರುತ್ಥಾನದ ಬಗ್ಗೆ ಎಲ್ಲೆಲ್ಲೂ ಸಾರುತ್ತಾ ಹೋದರು. ಅಲ್ಲದೆ, ಎಬ್ಬಿಸಲ್ಪಟ್ಟ ಕ್ರಿಸ್ತನಲ್ಲಿ ನಂಬಿಕೆಯನ್ನಿಟ್ಟು ಅನೇಕರು ವಿಶ್ವಾಸಿಗಳಾದರು.

ಯೇಸುವಿನ ಪುನರುತ್ಥಾನದಲ್ಲಿ ನೀವು ಸಹ ಏಕೆ ನಂಬಿಕೆಯಿಡಸಾಧ್ಯವಿದೆ? ನಿಜವಾಗಿಯೂ ಯೇಸುವಿನ ಪುನರುತ್ಥಾನವಾಯಿತು ಎಂಬುದಕ್ಕೆ ಏನು ಪುರಾವೆಯಿದೆ?

ಪುರಾವೆಯನ್ನು ಏಕೆ ಪರಿಗಣಿಸಬೇಕು?

ನಾಲ್ಕೂ ಸುವಾರ್ತೆಗಳು ವರದಿಯನ್ನು ನೀಡುತ್ತವೆ. (ಮತ್ತಾಯ 28:​1-10; ಮಾರ್ಕ 16:​1-8; ಲೂಕ 24:​1-12; ಯೋಹಾನ 20:​1-29) * ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳ ಇನ್ನಿತರ ಭಾಗಗಳು, ಸತ್ತವರಿಂದ ಕ್ರಿಸ್ತನು ಎಬ್ಬಿಸಲ್ಪಟ್ಟನು ಎಂಬುದನ್ನು ಖಚಿತವಾಗಿ ವರದಿಸುತ್ತವೆ.

ಯೇಸುವಿನ ಹಿಂಬಾಲಕರು ಅವನ ಪುನರುತ್ಥಾನದ ಬಗ್ಗೆ ಘೋಷಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ! ಅವನು ನಿಜವಾಗಿಯೂ ದೇವರಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಿದ್ದಲ್ಲಿ, ಲೋಕವು ಇಷ್ಟರ ವರೆಗೆ ಕೇಳಿಸಿಕೊಂಡ ಸುದ್ದಿಗಳಲ್ಲಿಯೇ ಇದು ಅತ್ಯಂತ ವಿಸ್ಮಯಕಾರಿ ಸುದ್ದಿಯಾಗಿದೆ ಎಂಬುದು ನಿಜ. ಅಂದರೆ ಇದರರ್ಥ ದೇವರಿದ್ದಾನೆ ಎಂದಾಯಿತು. ಮಾತ್ರವಲ್ಲದೆ, ಈಗಲೂ ಯೇಸು ಜೀವಂತನಾಗಿದ್ದಾನೆ ಎಂಬುದನ್ನು ಸಹ ಇದು ತಿಳಿಸುತ್ತದೆ.

ಇದು ನಮ್ಮನ್ನು ಯಾವ ರೀತಿಯಲ್ಲಿ ಪ್ರಭಾವಿಸುತ್ತದೆ? “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು” ಎಂದು ಯೇಸು ಪ್ರಾರ್ಥಿಸಿದನು. (ಯೋಹಾನ 17:3) ಹೌದು, ನಾವು ಯೇಸು ಹಾಗೂ ಅವನ ತಂದೆಯ ಜೀವದಾಯಕ ಜ್ಞಾನವನ್ನು ಪಡೆದುಕೊಳ್ಳಸಾಧ್ಯವಿದೆ. ಪಡೆದುಕೊಂಡ ಇಂತಹ ಜ್ಞಾನವನ್ನು ಅನ್ವಯಿಸಿಕೊಳ್ಳುವ ಮೂಲಕ, ನಾವು ಮೃತರಾದರೂ ನಮಗೆ ಪುನರುತ್ಥಾನವಾಗುವುದು. ಏಕೆಂದರೆ ಸ್ವತಃ ಯೇಸುವಿಗೆ ಪುನರುತ್ಥಾನವಾಯಿತು. (ಯೋಹಾನ 5:​28, 29) ರಾಜಾಧಿರಾಜನೂ ದೇವರ ಮಹಿಮಾನ್ವಿತ ಪುತ್ರನೂ ಆದ ಯೇಸು ಕ್ರಿಸ್ತನ ಮೂಲಕ ದೇವರ ಸ್ವರ್ಗೀಯ ರಾಜ್ಯದ ಕೆಳಗೆ, ಪರದೈಸಿಕ ಭೂಮಿಯ ಮೇಲೆ ಸದಾಕಾಲಕ್ಕೂ ಜೀವಿಸುವಂತಹ ನಿರೀಕ್ಷೆಯು ನಮಗಿದೆ.​—ಯೆಶಾಯ 9:​6, 7; ಲೂಕ 23:43; ಪ್ರಕಟನೆ 17:14.

ಹೀಗಿರುವಲ್ಲಿ, ಸತ್ತವರೊಳಗಿಂದ ಯೇಸು ನಿಜವಾಗಿಯೂ ಎಬ್ಬಿಸಲ್ಪಟ್ಟನೋ ಇಲ್ಲವೋ ಎಂಬ ಪ್ರಶ್ನೆಯು ಪ್ರಾಮುಖ್ಯವಾಗಿದೆ. ಏಕೆಂದರೆ ಇದು ನಮ್ಮ ಜೀವಿತದ ಮೇಲೆ ಈಗಲೂ ಹಾಗೂ ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಗಳ ಮೇಲೂ ಪ್ರಭಾವವನ್ನು ಬೀರುತ್ತದೆ. ಆದುದರಿಂದಲೇ, ಯೇಸು ಮೃತನಾಗಿ, ಪುನರುತ್ಥಾನಗೊಳಿಸಲ್ಪಟ್ಟನು ಎಂಬುದಕ್ಕಿರುವ ನಾಲ್ಕು ರೀತಿಯ ಪುರಾವೆಗಳನ್ನು ಪರೀಕ್ಷೆಮಾಡಿನೋಡುವಂತೆ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ.

ಯೇಸು ನಿಜವಾಗಿಯೂ ವಧಸ್ತಂಭದ ಮೇಲೆ ಪ್ರಾಣಬಿಟ್ಟನು

ಯೇಸು ಶೂಲಕ್ಕೇರಿಸಲ್ಪಟ್ಟರೂ ನಿಜವಾಗಿಯೂ ವಧಸ್ತಂಭದ ಮೇಲೆ ಪ್ರಾಣವನ್ನು ಬಿಡಲಿಲ್ಲ ಎಂಬುದು ಕೆಲವು ಸಂದೇಹವಾದಿಗಳ ವಾದವಾಗಿದೆ. ಯೇಸು ಇನ್ನೇನೂ ಸಾಯಲಿಕ್ಕಿದ್ದನು ಆದರೆ, ಸಮಾಧಿಯ ತಂಪಿನಿಂದ ಪುನರುಜ್ಜೀವಿಸಲ್ಪಟ್ಟನು ಎಂದು ಅವರು ಹೇಳುತ್ತಾರೆ. ಆದರೂ ಯೇಸುವಿನ ನಿರ್ಜೀವ ದೇಹವು ಸಮಾಧಿಯಲ್ಲಿಡಲ್ಪಟ್ಟಿತು ಎಂಬುದನ್ನು ಸಿಕ್ಕಿರುವ ಎಲ್ಲ ಪುರಾವೆಗಳು ರುಜುಪಡಿಸುತ್ತವೆ.

ಯೇಸು ಸಾರ್ವಜನಿಕವಾಗಿ ಎಲ್ಲರ ಮುಂದೆ ಪ್ರಾಣಬಿಟ್ಟದ್ದರಿಂದ, ಅವನು ವಧಸ್ತಂಭದ ಮೇಲೆ ನಿಜವಾಗಿಯೂ ಮೃತಪಟ್ಟದ್ದನ್ನು ನೋಡಿದ ಸಾಕ್ಷಿಗಳಿದ್ದರು ಎಂಬುದು ಸುವ್ಯಕ್ತ. ಮರಣದಂಡನೆಯನ್ನು ನಡೆಸುವ ಜಬ್ದಾರಿಯಿದ್ದ ಶತಾಧಿಪತಿಯು ಯೇಸು ಮೃತಪಟ್ಟಿದ್ದಾನೆ ಎಂಬುದನ್ನು ದೃಢೀಕರಿಸಿದನು. “ಆ ಸೇನಾಪತಿಯು ವೃತ್ತಿಪರ ವ್ಯಕ್ತಿಯಾಗಿದ್ದು, ಮರಣ ನಿಜವಾಗಿ ಸಂಭವಿಸಿತ್ತೆಂದು ನಿರ್ಧರಿಸುವ ಕೆಲಸವೂ ಅವನಿಗಿತ್ತು. ಅದನ್ನು ಖಚಿತಪಡಿಸಿಕೊಂಡ ನಂತರವೇ, ರೋಮನ್‌ ದೇಶಾಧಿಪತಿಯಾದ ಪೊಂತ್ಯ ಪಿಲಾತನು, ಯೇಸುವಿನ ದೇಹವನ್ನು ಹೂಳಲಿಕ್ಕಾಗಿ ಅರಿಮಥಾಯದ ಯೋಸೇಫನಿಗೆ ಕೊಟ್ಟನು.​—ಮಾರ್ಕ 15:​39-46.

ಸಮಾಧಿಯು ಖಾಲಿಯಾಗಿತ್ತು

ಸಮಾಧಿಯು ಖಾಲಿಯಾಗಿದ್ದ ವಿಷಯವು ಯೇಸುವಿನ ಶಿಷ್ಯರಿಗೆ, ಅವನು ಪುನರುತ್ಥಾನಗೊಂಡಿದ್ದಾನೆ ಎಂಬುದಕ್ಕೆ ಮೊದಲ ಪುರಾವೆಯಾಗಿತ್ತು. ಮತ್ತು ಇದು ಈಗಲೂ ನಿರ್ವಿವಾದವಾಗಿ ಉಳಿದಿದೆ. ಅಲ್ಲದೆ, ಹಿಂದೆಂದೂ ಉಪಯೋಗಿಸದಂತಹ ಒಂದು ಹೊಸ ಸಮಾಧಿಯಲ್ಲಿ ಯೇಸು ಹೂಳಲ್ಪಟ್ಟನು. ಮತ್ತು ಯೇಸುವನ್ನು ಶೂಲಕ್ಕೇರಿಸಲ್ಪಟ್ಟ ಸ್ಥಳದ ಹತ್ತಿರದಲ್ಲಿಯೇ ಆ ಸಮಾಧಿಯಿತ್ತು ಮತ್ತು ಆ ಸಮಯದಲ್ಲಿ ಅದನ್ನು ಸುಲಭವಾಗಿ ಕಂಡುಹಿಡಿಯಸಾಧ್ಯವಿತ್ತು. (ಯೋಹಾನ 19:​41, 42) ಯೇಸು ಮೃತಪಟ್ಟು ಎರಡು ದಿವಸಗಳಾದ ಮೇಲೆ, ಅವನ ಮಿತ್ರರು ಬೆಳಗ್ಗೆ ಸಮಾಧಿಯ ಬಳಿ ಬಂದು ನೋಡಿದಾಗ, ಅವನ ದೇಹವು ಇರಲಿಲ್ಲ ಎಂಬ ವಿಷಯಕ್ಕೆ ಎಲ್ಲ ಸುವಾರ್ತೆಯ ವೃತ್ತಾಂತಗಳು ಸಹಮತವನ್ನು ನೀಡುತ್ತವೆ.​—ಮತ್ತಾಯ 28:​1-7; ಮಾರ್ಕ 16:​1-7; ಲೂಕ 24:​1-3; ಯೋಹಾನ 20:​1-10.

ಖಾಲಿಯಾಗಿದ್ದ ಸಮಾಧಿಯನ್ನು ನೋಡಿ ಯೇಸುವಿನ ಮಿತ್ರರು ನಿಬ್ಬೆರಗಾದಂತೆಯೇ ಅವನ ಶತ್ರುಗಳು ನಿಬ್ಬೆರಗಾದರು. ಅವನು ಮೃತಪಟ್ಟು, ಹೂಳಲ್ಪಡುವುದನ್ನು ನೋಡಲು ಅವನ ಶತ್ರುಗಳು ಬಹಳ ಸಮಯದಿಂದ ಪ್ರಯತ್ನಪಡುತ್ತಿದ್ದರು. ಈಗ ತಮ್ಮ ಗುರಿಯನ್ನು ಸಾಧಿಸಿದ್ದರಿಂದ, ಆ ಸಮಾಧಿಯ ಮುಂದೆ ಕಾವಲಿಡಲು ಹಾಗೂ ಅದಕ್ಕೆ ಮೊಹರೆ ಹಾಕಲು ಅವರು ಎಲ್ಲ ಬಂದೋಬಸ್ತನ್ನು ಮಾಡಿದ್ದರು. ಆದರೂ, ಆ ವಾರದ ಮೊದಲನೆಯ ದಿನದ ಬೆಳಗ್ಗೆಯೇ ಸಮಾಧಿಯು ಖಾಲಿಯಾಗಿತ್ತು.

ಅಂದರೆ, ಯೇಸುವಿನ ಮಿತ್ರರು ಸಮಾಧಿಯಿಂದ ಅವನ ದೇಹವನ್ನು ತೆಗೆದುಕೊಂಡುಹೋದರೋ? ಅದು ಅಸಾಧ್ಯ, ಏಕೆಂದರೆ ಅವನಿಗೆ ಮರಣದಂಡನೆಯನ್ನು ವಿಧಿಸಿದ ಅನಂತರ ಅವರು ಬಹಳ ವ್ಯಥೆಗೊಂಡಿದ್ದರು. ಅಷ್ಟೇ ಅಲ್ಲದೆ, ಯೇಸುವಿನ ದೇಹವನ್ನು ಹಾಗೆ ತೆಗೆದುಕೊಂಡುಹೋಗುವುದು ದಂಡನಾರ್ಹವಾದ ಮೋಸವೆಂಬುದನ್ನು ಶಿಷ್ಯರು ಅರಿತಿದ್ದೂ, ಹಿಂಸೆಗೆ ಗುರಿಯಾಗಲು ಮತ್ತು ಸ್ವತಃ ಸಾವಿನ ಬಾಗಿಲನ್ನು ತಟ್ಟಲು ಅವರು ಖಂಡಿತವಾಗಿಯೂ ಹೋಗಸಾಧ್ಯವಿರಲಿಲ್ಲ.

ಹಾಗಾದರೆ ಯಾರು ಸಮಾಧಿಯನ್ನು ಖಾಲಿಮಾಡಿದರು? ಖಂಡಿತವಾಗಿಯೂ ಯೇಸುವಿನ ಶತ್ರುಗಳು ಅವನ ದೇಹವನ್ನು ಕೊಂಡೊಯ್ದಿರಲಿಕ್ಕಿಲ್ಲ. ಹಾಗೇನಾದರೂ ಒಂದು ಪಕ್ಷ ಮಾಡಿದ್ದರೂ, ಯೇಸು ಪುನರುತ್ಥಾನಗೊಂಡಿದ್ದಾನೆ ಮತ್ತು ಜೀವಂತನಾಗಿದ್ದಾನೆ ಎಂದು ಅವನ ಶಿಷ್ಯರು ಮಾಡಿದ ಪ್ರತಿಪಾದಗಳನ್ನು ಸುಳ್ಳೆಂದು ಸಾಬೀತುಪಡಿಸಲಿಕ್ಕಾದರೂ ಅವನ ದೇಹವನ್ನು ಅನಂತರ ತೆಗೆದುಕೊಂಡು ಬರುತ್ತಿದ್ದರು. ಆದರೆ ಅಂತಹದ್ದೇನೂ ನಡೆಯಲಿಲ್ಲ. ಏಕೆಂದರೆ, ದೇವರು ತಾನೇ ಆ ಕ್ರಿಯೆಯನ್ನು ಮಾಡಿದ್ದನು.

“ಇಸ್ರಾಯೇಲ್‌ ಜನರೇ, ನನ್ನ ಮಾತುಗಳನ್ನು ಲಾಲಿಸಿರಿ​—ನಜರೇತಿನ ಯೇಸು ಇದ್ದನಲ್ಲಾ, ದೇವರು ನಿಮಗೂ ತಿಳಿದಿರುವಂತೆ ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು. ಆ ಯೇಸು ದೇವರ ಸ್ಥಿರಸಂಕಲ್ಪಕ್ಕೂ ಭವಿಷ್ಯದ್‌ಜ್ಞಾನಕ್ಕೂ ಅನುಸಾರವಾಗಿ ಒಪ್ಪಿಸಲ್ಪಟ್ಟಿರಲು ನೀವು ಅನ್ಯಜನರ ಕೈಯಿಂದ ಆತನನ್ನು ಶಿಲುಬೆಗೆ ಹಾಕಿಸಿ ಕೊಂದಿರಿ. ಆತನನ್ನು ದೇವರು ಮರಣವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಯಾಕಂದರೆ ಮರಣವು ಆತನನ್ನು ಹಿಡುಕೊಂಡಿರುವದು ಅಸಾಧ್ಯವಾಗಿತ್ತು. ಆತನ ವಿಷಯದಲ್ಲಿ ದಾವೀದನು​—ಕರ್ತನು ಯಾವಾಗಲೂ ನನ್ನೆದುರಿನಲ್ಲಿರುವದನ್ನು ನೋಡುತ್ತಿದ್ದೆನು. . . . ನನ್ನ ಶರೀರವೂ ನಿರೀಕ್ಷೆಯಿಂದ ನೆಲೆಯಾಗಿರುವದು; ಯಾಕಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವದಿಲ್ಲ, ನಿನ್ನ ಪ್ರಿಯನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವದಿಲ್ಲ” ಎಂದು ವಾರಗಳ ನಂತರ, ಪೇತ್ರನು ದೃಢೀಕರಿಸಿದಾಗ ಯೇಸುವಿನ ಶತ್ರುಗಳು ಅದನ್ನು ತಪ್ಪೆಂದು ಸಾಬೀತುಪಡಿಸಲಿಲ್ಲ.​—ಅ. ಕೃತ್ಯಗಳು 2:22-27.

ಅನೇಕರು ಪುನರುತ್ಥಿತ ಯೇಸುವನ್ನು ನೋಡಿದರು

ಅಪೊಸ್ತಲ ಕೃತ್ಯಗಳಲ್ಲಿ, ಸುವಾರ್ತೆಯ ಲೇಖಕನಾದ ಲೂಕನು ಹೇಳಿದ್ದು: “ಆತನು ಬಾಧೆಪಟ್ಟು ಸತ್ತ ಮೇಲೆ ತನ್ನನ್ನು [ಯೇಸು] ಜೀವಂತನೆಂದು ಅನೇಕ ಪ್ರಮಾಣಗಳಿಂದ ಅಪೊಸ್ತಲರಿಗೆ ತೋರಿಸಿಕೊಂಡನು. ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವಾದ ಸಂಗತಿಗಳನ್ನು ಹೇಳುತ್ತಾ ಇದ್ದನು.” (ಅ. ಕೃತ್ಯಗಳು 1:2, 3) ತೋಟದಲ್ಲಿ, ರಸ್ತೆಯಲ್ಲಿ, ಊಟಮಾಡುವಾಗ, ತಿಬೇರಿಯ ಸಮುದ್ರದ ಬಳಿ ಹೀಗೆ ಹಲವಾರು ಸಂದರ್ಭಗಳಲ್ಲಿ ಶಿಷ್ಯರು ಪುನರುತ್ಥಿತ ಯೇಸುವನ್ನು ಕಂಡರು.​—ಮತ್ತಾಯ 28:​8-10; ಲೂಕ 24:​13-43; ಯೋಹಾನ 21:​1-23.

ವಿಮರ್ಶಕರು ಈ ಕಾಣ್ಕೆಗಳ ಸತ್ಯತೆಯನ್ನು ಪ್ರಶ್ನಿಸುತ್ತಾರೆ. ಲೇಖಕರು ಈ ವೃತ್ತಾಂತಗಳನ್ನು ಸ್ವತಃ ಹೆಣೆದಿದ್ದಾರೆ ಎಂದು ಅವರು ಹೇಳುತ್ತಾರೆ, ಅಥವಾ ಅವುಗಳಲ್ಲಿ ವ್ಯತ್ಯಾಸಗಳಂತೆ ತೋರುವ ವಿಷಯಗಳಿಗೆ ಅವರು ಸೂಚಿಸುತ್ತಾರೆ. ನಿಜ ವಿಷಯವೇನೆಂದರೆ, ಸುವಾರ್ತೆಯ ವೃತ್ತಾಂತದಲ್ಲಿ ಕಂಡುಬರುವ ಚಿಕ್ಕಪುಟ್ಟ ವ್ಯತ್ಯಾಸಗಳು ಇದರಲ್ಲಿ ಯಾವುದೇ ಪಿತೂರಿ ನಡೆದಿಲ್ಲ ಎಂಬುದನ್ನು ರುಜುಪಡಿಸುತ್ತವೆ. ಕ್ರಿಸ್ತನು ಭೂಮಿಯಲ್ಲಿದ್ದಾಗ ನಡೆದ ನಿರ್ದಿಷ್ಟ ಘಟನೆಗಳಿಗೆ ಇನ್ನಷ್ಟು ಹೆಚ್ಚು ವಿವರಣೆಗಳನ್ನು ಮತ್ತೊಬ್ಬ ಲೇಖಕನು ನೀಡುವಾಗ, ಇದು ಯೇಸುವಿನ ಕುರಿತಾಗಿ ನಮಗಿರುವ ಜ್ಞಾನವನ್ನು ಮತ್ತಷ್ಟು ವಿಶಾಲಗೊಳಿಸುತ್ತದೆ ಅಷ್ಟೇ.

ಯೇಸು ಪುನರುತ್ಥಾನಗೊಂಡ ನಂತರ ಅವನ ಕಾಣಿಸಿಕೊಳ್ಳುವಿಕೆಯು ಕೇವಲ ಭ್ರಮೆಯಾಗಿತ್ತೋ ಈ ವಿಷಯದಲ್ಲಿ ಮಾಡಲ್ಪಡುವ ಯಾವುದೇ ವಾಗ್ವಾದವು ನ್ಯಾಯಸಮ್ಮತವಲ್ಲದ್ದಾಗಿದೆ ಏಕೆಂದರೆ, ಅವನನ್ನು ಅನೇಕ ಜನರು ಕಂಡಿದ್ದಾರೆ. ಅವರಲ್ಲಿ ಬೆಸ್ತರು, ಸ್ತ್ರೀಯರು, ಸರಕಾರಿ ಅಧಿಕಾರಿ, ಸಂದೇಹಪಡುತ್ತಿದ್ದ ಅಪೊಸ್ತಲನಾದ ತೋಮನು ಸಹ ಇದ್ದರು. ಇವನು ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ ಎಂಬ ಅಲ್ಲಗಳೆಯಲಾರದ ಪುರಾವೆಯನ್ನು ನೋಡಿದ ಮೇಲೆ ಮನಗಾಣಿಸಲ್ಪಟ್ಟನು. (ಯೋಹಾನ 20:​24-29) ಹಲವಾರು ಸಂದರ್ಭಗಳಲ್ಲಿ, ಯೇಸುವಿನ ಶಿಷ್ಯರು ಒಮ್ಮೆಗೆ ತಮ್ಮ ಪುನರುತ್ಥಿತ ಸ್ವಾಮಿಯನ್ನು ಗುರುತಿಸಲಿಲ್ಲ. ಒಮ್ಮೆ, ಸುಮಾರು 500ಕ್ಕಿಂತಲೂ ಹೆಚ್ಚಿನ ಜನರು ಅವನನ್ನು ನೋಡಿದರು. ಮತ್ತು ಅಪೊಸ್ತಲ ಪೌಲನು ಪುನರುತ್ಥಾನದ ಬಗ್ಗೆ ಸಮರ್ಥಿಸುತ್ತಿದ್ದಾಗ ಈ ಘಟನೆಯನ್ನು ರುಜುವಾತಾಗಿ ಉಪಯೋಗಿಸಿದನು. ಮತ್ತು ಆ ಸಮಯದಲ್ಲಿ ಯೇಸುವನ್ನು ನೋಡಿದವರಲ್ಲಿ ಹೆಚ್ಚಿನವರು ಇನ್ನೂ ಜೀವಂತರಾಗಿದ್ದರು.​—1 ಕೊರಿಂಥ 15:6.

ಜೀವಿತನಾಗಿ ಎದ್ದ ಯೇಸುವಿನಿಂದ ಜನರು ಪ್ರಭಾವಿತರಾದರು

ಯೇಸುವಿನ ಪುನರುತ್ಥಾನವು ಕೇವಲ ಕುತೂಹಲಕಾರಿಯಾದ ವಿಷಯವೋ ಇಲ್ಲವೆ ಚರ್ಚೆವಾಗ್ವಾದದ ವಿಷಯವೋ ಆಗಿಲ್ಲ. ಅವನು ಜೀವಂತನಾಗಿದ್ದಾನೆ ಎಂಬ ನಿಜಾಂಶವು ತಾನೇ ಎಲ್ಲ ಜನರ ಮೇಲೂ ಸಕಾರಾತ್ಮಕ ಪ್ರಭಾವವನ್ನು ಬೀರಿದೆ. ಏಕೆಂದರೆ, ಕ್ರೈಸ್ತತ್ವಕ್ಕೆ ಅಸಡ್ಡೆಯನ್ನು ತೋರಿದ ಇಲ್ಲವೆ ಬಹಳಷ್ಟು ವಿರೋಧಿಸಿದ ಅನೇಕ ಜನರು ಆಮೇಲೆ ಇದೇ ಸತ್ಯ ಧರ್ಮವೆಂದು ದೃಢವಿಶ್ವಾಸದಿಂದ ಅಂಗೀಕರಿಸಿದ್ದಾರೆ. ಹಾಗಾದರೆ, ಯಾವ ವಿಷಯವು ಅವರನ್ನು ಮಾರ್ಪಡಿಸಿತು? ದೇವರು ಯೇಸುವನ್ನು ಸ್ವರ್ಗದಲ್ಲಿ ಮಹಿಮಾನ್ವಿತ ಆತ್ಮಿಕ ಜೀವಿಯಾಗಿ ಪುನರುತ್ಥಾನಗೊಳಿಸಿದನು ಎಂಬ ಶಾಸ್ತ್ರವಚನಗಳ ಅಧ್ಯಯನವೇ ಅವರನ್ನು ಮಾರ್ಪಡಿಸಿತು. (ಫಿಲಿಪ್ಪಿ 2:​8-11) ಅವರು ಯೇಸುವಿನಲ್ಲಿ ಮತ್ತು ಅವನ ಪ್ರಾಯಶ್ಚಿತ್ತಯಜ್ಞದ ಮುಖಾಂತರ ರಕ್ಷಣೆಯನ್ನು ಪಡೆದುಕೊಳ್ಳಲಿಕ್ಕಾಗಿ ಯೆಹೋವ ದೇವರ ಒದಗಿಸುವಿಕೆಯಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. (ರೋಮಾಪುರ 5:8) ದೇವರ ಚಿತ್ತವನ್ನು ಮಾಡುವುದರ ಮೂಲಕ ಹಾಗೂ ಯೇಸುವಿನ ಕಲಿಸುವಿಕೆಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ಇವರು ಪರಮಾನಂದವನ್ನು ಕಂಡುಕೊಂಡಿದ್ದಾರೆ.

ಪ್ರಥಮ ಶತಮಾನದಲ್ಲಿ ಕ್ರೈಸ್ತನು ಎಂಬುದರ ಅರ್ಥವೇನಾಗಿತ್ತು ಎಂಬುದನ್ನು ಸ್ವಲ್ಪ ಪರಿಗಣಿಸಿರಿ. ಕ್ರೈಸ್ತನು ಅನ್ನುವಾಗ ಪ್ರತಿಷ್ಠೆ, ಸಾಮರ್ಥ್ಯ, ಇಲ್ಲವೆ ಸಿರಿಸಂಪತ್ತನ್ನು ಗಳಿಸಿಕೊಳ್ಳುವುದಾಗಿರಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ನಂಬಿಕೆಗೋಸ್ಕರ ಅನೇಕ ಆದಿ ಕ್ರೈಸ್ತರು ‘ತಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟುಕೊಟ್ಟರು’ ಎಂದು ಬೈಬಲು ತಿಳಿಸುತ್ತದೆ. (ಇಬ್ರಿಯ 10:34) ಒಬ್ಬ ಕ್ರೈಸ್ತನು ಜೀವನದಲ್ಲಿ ತ್ಯಾಗವನ್ನು ಮಾಡಬೇಕಾಗಿತ್ತು ಹಾಗೂ ಹಿಂಸೆಯನ್ನು ತಾಳಿಕೊಳ್ಳಬೇಕಾಗಿತ್ತು. ಮಾತ್ರವಲ್ಲ, ಅನೇಕ ಸಲ ನಂಬಿಕೆಗಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿತ್ತು.

ಕ್ರಿಸ್ತನ ಹಿಂಬಾಲಕರಾಗುವ ಮುಂಚೆ, ಕೆಲವರಿಗೆ ಪ್ರತಿಷ್ಠೆ ಹಣಐಶ್ವರ್ಯದ ಸುಪ್ರತೀಕ್ಷೆಗಳಿದ್ದವು. ತಾರ್ಸದ ಸೌಲನು ಹೆಸರುವಾಸಿ ಶಾಸ್ತ್ರ ಬೋಧಕನಾದ ಗಮಲಿಯೇಲನಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದನು ಮತ್ತು ಇನ್ನಿತರ ಯೆಹೂದಿಗಳಿಗಿಂತ ತಾನು ಭಿನ್ನನು ಎಂದು ತೋರಿಸಿಕೊಳ್ಳುತ್ತಿದ್ದನು. (ಅ. ಕೃತ್ಯಗಳು 9:​1, 2; 22:3; ಗಲಾತ್ಯ 1:14) ಆದರೂ, ಕೊನೆಗೆ ಸೌಲನು ಅಪೊಸ್ತಲ ಪೌಲನಾದನು. ಇವನು ಹಾಗೂ ಇನ್ನೂ ಅನೇಕ ಜನರು, ಈ ಲೋಕದಲ್ಲಿ ಸಿಗುವಂತಹ ಪ್ರತಿಷ್ಠೆ, ಹಣಐಶ್ವರ್ಯವನ್ನು ನಿರಾಕರಿಸಿದರು. ಆದರೆ ಏಕೆ? ದೇವರ ವಾಗ್ದಾನಗಳ ಮೇಲೆ ಆಧಾರಿಸಿದ ನಿಜ ನಿರೀಕ್ಷೆಯ ಸಂದೇಶವನ್ನು ಹಾಗೂ ಯೇಸು ಸತ್ತವರಿಂದ ಪುನರುತ್ಥಾನಗೊಳಿಸಲ್ಪಟ್ಟನು ಎಂಬ ನಿಜಾಂಶವನ್ನು ಪ್ರಚುರಪಡಿಸಲಿಕ್ಕಾಗಿಯೇ. (ಕೊಲೊಸ್ಸೆ 1:28) ಅವರು ಇದಕ್ಕಾಗಿ ಕಷ್ಟದುಃಖವನ್ನು ಸಹಿಸಿಕೊಳ್ಳಲು ತಯಾರಿದ್ದರು, ಏಕೆಂದರೆ ಇದು ಸತ್ಯದ ಮೇಲಾಧಾರಿಸಿತ್ತು ಎಂಬುದನ್ನು ಅವರು ತಿಳಿದಿದ್ದರು.

ಇಂದು ಸಹ ಲಕ್ಷಾಂತರ ಜನರಿಗೆ ಅದೇ ರೀತಿಯ ಮನೋಭಾವವಿದೆ. ನೀವು ಅವರನ್ನು ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಕಂಡುಕೊಳ್ಳಬಹುದು. ಕ್ರಿಸ್ತನ ಮರಣದ ವಾರ್ಷಿಕ ಆಚರಣೆಗೆ ನಿಮ್ಮನ್ನು ಸಾಕ್ಷಿಗಳು ಹೃತ್ಪೂರ್ವಕವಾಗಿ ಆಮಂತ್ರಿಸುತ್ತಾರೆ. ಇದು ಏಪ್ರಿಲ್‌ 8ರ ಭಾನುವಾರದಂದು ಸೂರ್ಯಾಸ್ತಮಾನವಾದ ನಂತರ ಆಚರಿಸಲ್ಪಡುವುದು. ಆ ಸಂದರ್ಭದಲ್ಲಿ ಹಾಗೂ ಬೈಬಲ್‌ ಅಧ್ಯಯನಕ್ಕಾಗಿ ರಾಜ್ಯ ಸಭಾಗೃಹದಲ್ಲಿ ನಡೆಸಲ್ಪಡುವ ಎಲ್ಲ ಕೂಟಗಳಿಗೆ ನೀವು ಹಾಜರಾಗುವುದಾದರೆ ಅದು ಅವರಿಗೆ ಆನಂದವನ್ನು ತರುವುದು.

ಕೇವಲ ಯೇಸುವಿನ ಮರಣ ಹಾಗೂ ಪುನರುತ್ಥಾನದ ಬಗ್ಗೆ ಮಾತ್ರವಲ್ಲ, ಅವನ ಜೀವನ ಹಾಗೂ ಕಲಿಸುವಿಕೆಗಳ ಬಗ್ಗೆ ಸಹ ನೀವೇಕೆ ಹೆಚ್ಚಿನ ವಿಷಯವನ್ನು ಕಲಿತುಕೊಳ್ಳಬಾರದು? ತನ್ನ ಬಳಿಗೆ ಬರುವಂತೆ ಅವನು ನಮ್ಮೆಲ್ಲರಿಗೂ ಆಮಂತ್ರಣವನ್ನು ನೀಡುತ್ತಾನೆ. (ಮತ್ತಾಯ 11:​28-30) ಯೆಹೋವ ದೇವರ ಹಾಗೂ ಯೇಸು ಕ್ರಿಸ್ತನ ಕುರಿತಾಗಿ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಈಗ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಹೀಗೆ ಮಾಡುವುದರಿಂದ, ದೇವರ ಪುತ್ರನ ಕೈಕೆಳಗೆ ದೇವರ ರಾಜ್ಯದಲ್ಲಿ ಸದಾಕಾಲ ಜೀವಿಸಬಹುದು.

[ಪಾದಟಿಪ್ಪಣಿ]

^ ಪ್ಯಾರ. 8 ಸುವಾರ್ತೆಯ ವೃತ್ತಾಂತಗಳು ವಿಶ್ವಾಸಾರ್ಹವಾಗಿವೆ ಎಂಬ ಪುರಾವೆಗಾಗಿ, ಮೇ 15, 2000ದ ಕಾವಲಿನಬುರುಜು ಪತ್ರಿಕೆಯಲ್ಲಿರುವ “ಸುವಾರ್ತೆಗಳು​—ಐತಿಹಾಸಿಕವೋ ಪೌರಾಣಿಕವೋ?” ಎಂಬುದನ್ನು ನೋಡಿರಿ.

[ಪುಟ 7ರಲ್ಲಿರುವ ಚಿತ್ರಗಳು]

ಯೇಸು ಕ್ರಿಸ್ತನ ಹಿಂಬಾಲಕರೋಪಾದಿ ಲಕ್ಷಾಂತರ ಜನರು ನಿಜ ಸಂತೋಷವನ್ನು ಕಂಡುಕೊಳ್ಳುತ್ತಾರೆ

[ಪುಟ 6ರಲ್ಲಿರುವ ಚಿತ್ರ ಕೃಪೆ]

From the Self-Pronouncing Edition of the Holy Bible, containing the King James and the Revised versions