ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಒಂದು ತಂಡವಾಗಿದ್ದೆವು

ನಾವು ಒಂದು ತಂಡವಾಗಿದ್ದೆವು

ಜೀವನ ಕಥೆ

ನಾವು ಒಂದು ತಂಡವಾಗಿದ್ದೆವು

ಮೆಲ್ಬಾ ಬ್ಯಾರಿ ಅವರು ಹೇಳಿರುವಂತೆ

ನಮ್ಮ 57 ವರ್ಷಗಳ ವೈವಾಹಿಕ ಜೀವನದಲ್ಲಿ ಸಾವಿರಾರು ಬಾರಿ ಹಾಜರಾದಂತೆ 1999 ಜುಲೈ 2ರಂದು ಸಹ, ನಾನು ಮತ್ತು ನನ್ನ ಯಜಮಾನರು ಯೆಹೋವನ ಸಾಕ್ಷಿಗಳ ಒಂದು ದೊಡ್ಡ ಕೂಟದಲ್ಲಿದ್ದೆವು. ಆ ಶುಕ್ರವಾರ, ಹವಾಯಿಯಲ್ಲಿ ಒಂದು ಜಿಲ್ಲಾ ಅಧಿವೇಶನದಲ್ಲಿ ಲಾಯ್ಡ್‌ ಮುಕ್ತಾಯದ ಭಾಷಣವನ್ನು ನೀಡುತ್ತಿದ್ದಾಗ, ಥಟ್ಟನೆ ಕುಸಿದುಬಿದ್ದರು. ಅವರನ್ನು ಮತ್ತೆ ಪ್ರಜ್ಞೆಗೆ ತರಲು ಎಲ್ಲಾ ರೀತಿಯ ಪ್ರಯತ್ನಗಳು ಮಾಡಲ್ಪಟ್ಟರೂ ಅವರು ತೀರಿಹೋದರು. *

ಈದುರಂತವನ್ನು ನಿಭಾಯಿಸಲು ನನ್ನ ಸುತ್ತಲೂ ನಿಂತುಕೊಂಡು ಧೈರ್ಯ ತುಂಬಿಸಿ, ಸಹಾಯ ಮಾಡಿದ ಹವಾಯಿ ದೇಶದ ಕ್ರೈಸ್ತ ಸಹೋದರ ಸಹೋದರಿಯರು ನನಗೆಷ್ಟು ಪ್ರಿಯರು! ಲಾಯ್ಡ್‌, ಅಲ್ಲಿರುವ ಹಾಗೂ ಲೋಕದ ಸುತ್ತಲಿರುವ ಅನೇಕರ ಜೀವಿತಗಳ ಮೇಲೆ ಪ್ರಭಾವ ಬೀರಿದ್ದರು.

ಅವರು ಮೃತಪಟ್ಟು ಈಗ ಸುಮಾರು ಎರಡು ವರ್ಷಗಳಾಗಿವೆ. ಈ ಸಮಯದಲ್ಲಿ, ನಾವು ಜೊತೆಯಾಗಿ ಕಳೆದಂಥ ಅಮೂಲ್ಯವಾದ ವರ್ಷಗಳ ಬಗ್ಗೆ ನಾನು ಯೋಚಿಸಿದ್ದೇನೆ. ನಾವು ಅನೇಕ ವರ್ಷಗಳ ವರೆಗೆ ಒಂದು ವಿದೇಶೀ ಮಿಷನೆರಿ ನೇಮಕದಲ್ಲಿ ಹಾಗೂ ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಇದ್ದೆವು. ಆಸ್ಟ್ರೇಲಿಯದ ಸಿಡ್ನಿಯಲ್ಲಿ ನನ್ನ ಆರಂಭದ ಜೀವಿತ ಹಾಗೂ ಎರಡನೆಯ ಲೋಕ ಯುದ್ಧದ ಸಮಯದಲ್ಲಿ ನಾನು ಮತ್ತು ಲಾಯ್ಡ್‌ ಮದುವೆಯಾಗಲು ಎದುರಿಸಬೇಕಾದ ಪಂಥಾಹ್ವಾನಗಳ ಹಳೆಯ ನೆನಪುಗಳು ಸಹ ಮರುಕಳಿಸಿದವು. ಆದರೆ, ನಾನು ಹೇಗೆ ಒಬ್ಬ ಸಾಕ್ಷಿಯಾದೆ ಮತ್ತು 1939ರಲ್ಲಿ ಲಾಯ್ಡ್‌ರನ್ನು ಹೇಗೆ ಭೇಟಿಯಾದೆನೆಂದು ಮೊದಲು ನಿಮಗೆ ಹೇಳುತ್ತೇನೆ.

ನಾನು ಒಬ್ಬ ಸಾಕ್ಷಿಯಾದ ವಿಧ

ಜೇಮ್ಸ್‌ ಮತ್ತು ಹೆನ್‌ರಿಟಾ ಜೋನ್ಸ್‌, ನನ್ನ ಪ್ರೀತಿಯ ಹಾಗೂ ಕಾಳಜಿವಹಿಸುವ ಹೆತ್ತವರಾಗಿದ್ದರು. ನಾನು 1932ರಲ್ಲಿ ಶಾಲೆಯನ್ನು ಮುಗಿಸಿದಾಗ ಕೇವಲ 14 ವರ್ಷದವಳಾಗಿದ್ದೆ. ಆಗ ಲೋಕವು ಆರ್ಥಿಕ ಕುಸಿತದಲ್ಲಿ ಸಿಲುಕಿಕೊಂಡಿತ್ತು. ನನ್ನ ಕುಟುಂಬಕ್ಕೆ ಸಹಾಯ ಮಾಡುವುದಕ್ಕಾಗಿ ನಾನು ಕೆಲಸಮಾಡಲಾರಂಭಿಸಿದೆ. ನನಗೆ ಇಬ್ಬರು ತಂಗಿಯರಿದ್ದರು. ಕೆಲವೇ ವರ್ಷಗಳಲ್ಲಿ, ಹಲವಾರು ಯುವತಿಯರು ನನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದರು ಮತ್ತು ನನಗೆ ಒಳ್ಳೆಯ ಸಂಬಳವಿತ್ತು.

ಈ ಮಧ್ಯೆ 1935ರಲ್ಲಿ, ಒಬ್ಬ ಯೆಹೋವನ ಸಾಕ್ಷಿಯಿಂದ ನನ್ನ ತಾಯಿ ಬೈಬಲ್‌ ಸಾಹಿತ್ಯವನ್ನು ಸ್ವೀಕರಿಸಿದರು ಮತ್ತು ಸ್ವಲ್ಪ ಸಮಯದೊಳಗೆಯೇ ತಮಗೆ ಸತ್ಯ ಸಿಕ್ಕಿದೆಯೆಂಬ ಮನವರಿಕೆ ಅವರಿಗಾಯಿತು. ಮಿಕ್ಕ ನಾವೆಲ್ಲರು ಅವರಿಗೆ ಹುಚ್ಚು ಹಿಡಿದಿದೆಯೆಂದು ನೆನಸಿದೆವು. ಆದರೆ ಹೇಗೊ ಒಂದು ದಿವಸ ನಾನು, ಮೃತರು ಎಲ್ಲಿದ್ದಾರೆ? (ಇಂಗ್ಲಿಷ್‌) ಎಂಬ ಶೀರ್ಷಿಕೆಯ ಪುಸ್ತಿಕೆಯನ್ನು ನೋಡಿದೆ. ಆ ಶೀರ್ಷಿಕೆಯು ನನ್ನ ಕುತೂಹಲವನ್ನು ಕೆರಳಿಸಿತು. ಆದುದರಿಂದ ನಾನು ಆ ಪುಸ್ತಿಕೆಯನ್ನು ಗುಟ್ಟಾಗಿ ಓದಿದೆ. ಅದು ನನ್ನ ಜೀವನದ ದೆಸೆಯನ್ನೇ ತಿರುಗಿಸಿತು! ಅಂದಿನಿಂದಲೇ ನಾನು, ಮಾದರಿ ಅಭ್ಯಾಸ ಎಂದು ಕರೆಯಲ್ಪಡುವ ವಾರಮಧ್ಯದ ಕೂಟಕ್ಕೆ ತಾಯಿಯೊಟ್ಟಿಗೆ ಹೋಗಲಾರಂಭಿಸಿದೆ. ಮಾದರಿ ಅಭ್ಯಾಸ (ಇಂಗ್ಲಿಷ್‌) ಎಂಬ ಶೀರ್ಷಿಕೆಯ ಪುಸ್ತಿಕೆಯಲ್ಲಿ ಪ್ರಶ್ನೋತ್ತರಗಳು ಮತ್ತು ಉತ್ತರಗಳನ್ನು ಬೆಂಬಲಿಸುವ ಶಾಸ್ತ್ರವಚನಗಳೂ ಇದ್ದವು. ಕಟ್ಟಕಡೆಗೆ ಈ ರೀತಿಯ ಮೂರು ಪುಸ್ತಿಕೆಗಳು ಪ್ರಕಾಶಿಸಲ್ಪಟ್ಟಿದ್ದವು.

ಸುಮಾರು ಆ ಸಮಯದಷ್ಟಕ್ಕೆ, ಅಂದರೆ 1938ರ ಏಪ್ರಿಲ್‌ ತಿಂಗಳಿನಲ್ಲಿ, ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದ ಪ್ರತಿನಿಧಿಯಾದ ಜೋಸೆಫ್‌ ಎಫ್‌. ರದರ್‌ಫರ್ಡ್‌ರವರು, ಸಿಡ್ನಿಗೆ ಭೇಟಿನೀಡಿದರು. ನಾನು ಅವರ ಬಹಿರಂಗ ಭಾಷಣಕ್ಕೆ ಹಾಜರಾದೆ. ಅದು ನಾನು ಹಾಜರಾದ ಮೊತ್ತಮೊದಲ ಬಹಿರಂಗ ಭಾಷಣವಾಗಿತ್ತು. ಅದು ಸಿಡ್ನಿ ಟೌನ್‌ ಹಾಲ್‌ನಲ್ಲಿ ನಡೆಯಬೇಕಿತ್ತು. ಆದರೆ ವಿರೋಧಿಗಳು ನಾವು ಆ ಸ್ಥಳವನ್ನು ಉಪಯೋಗಿಸದಂತೆ ಅದನ್ನು ರದ್ದು ಮಾಡುವುದರಲ್ಲಿ ಯಶಸ್ವಿಯಾದರು. ಅದರ ಬದಲಿಗೆ, ಭಾಷಣವು ಅದಕ್ಕಿಂತಲೂ ದೊಡ್ಡದಾದ ಸಿಡ್ನಿ ಸ್ಪೋರ್ಟ್ಸ್‌ ಗ್ರೌಂಡ್‌ನಲ್ಲಿ ಕೊಡಲ್ಪಟ್ಟಿತ್ತು. ವಿರೋಧದ ಕಾರಣ ಸಿಕ್ಕಿದ ಪ್ರಚಾರದಿಂದಾಗಿ, ಸುಮಾರು 10,000 ಮಂದಿ ಹಾಜರಿದ್ದರು. ಇದು ನಿಜವಾಗಿಯೂ ಆಶ್ಚರ್ಯಕರವಾದ ಸಂಖ್ಯೆಯಾಗಿತ್ತು ಏಕೆಂದರೆ ಆ ಸಮಯದಲ್ಲಿ ಆಸ್ಟ್ರೇಲಿಯದಲ್ಲಿ ಕೇವಲ 1,300 ಮಂದಿ ಸಾಕ್ಷಿಗಳಿದ್ದರು.

ಅದಾದ ಸ್ವಲ್ಪ ಸಮಯದಲ್ಲಿ, ನಾನು ಮೊದಲ ಬಾರಿಗೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಿದೆ, ಅದೂ ಯಾವುದೇ ರೀತಿಯ ತರಬೇತಿಯಿಲ್ಲದೆ. ನಮ್ಮ ಗುಂಪು ಸಾರುವ ಕ್ಷೇತ್ರವನ್ನು ತಲುಪಿದಾಗ, ಮುಂದಾಳತ್ವ ವಹಿಸುವವರು ನನಗೆ, “ಅದೊ ಅಲ್ಲಿರುವ ಮನೆ ನಿನಗಾಗಿ” ಎಂದು ಹೇಳಿದರು. ನಾನು ಎಷ್ಟು ಗಾಬರಿಗೊಂಡಿದ್ದೆ ಅಂದರೆ, ಆ ಮನೆ ಯಜಮಾನಿ ಬಾಗಿಲು ತೆರೆದಾಗ ನಾನು, “ದಯವಿಟ್ಟು, ಸಮಯ ಎಷ್ಟು ಎಂದು ಹೇಳುವಿರಾ?” ಎಂದು ಕೇಳಿದೆ. ಆಕೆ ಒಳಗೆ ಹೋಗಿ, ಸಮಯವನ್ನು ನೋಡಿ, ಹೊರಬಂದು ನನಗೆ ಹೇಳಿದಳು. ಅಷ್ಟೇ. ಅಲ್ಲಿಂದ ನಾನು ನೇರವಾಗಿ ಕಾರಿಗೆ ಹಿಂದಿರುಗಿದೆ.

ಆದರೂ, ನಾನು ಬಿಟ್ಟುಕೊಡಲಿಲ್ಲ. ಸ್ವಲ್ಪ ಸಮಯದೊಳಗೆ ನಾನು ಕ್ರಮವಾಗಿ ರಾಜ್ಯದ ಸಂದೇಶವನ್ನು ಇತರರಿಗೆ ಹಂಚಲಾರಂಭಿಸಿದೆ. (ಮತ್ತಾಯ 24:14) 1939ರ ಮಾರ್ಚ್‌ ತಿಂಗಳಿನಲ್ಲಿ, ಯೆಹೋವನಿಗೆ ನಾನು ಮಾಡಿದ ಸಮರ್ಪಣೆಯನ್ನು ಸಂಕೇತಿಸುತ್ತಾ ಪಕ್ಕದ ಮನೆಯ ಡಾರತಿ ಹಚ್ಚಿಂಗ್ಸಳ ಸ್ನಾನದ ತೊಟ್ಟಿಯಲ್ಲಿ ದೀಕ್ಷಾಸ್ನಾನ ಪಡೆದೆ. ಸಹೋದರರು ಲಭ್ಯವಿಲ್ಲದಿದ್ದ ಕಾರಣ, ನನ್ನ ದೀಕ್ಷಾಸ್ನಾನವಾದ ಕೂಡಲೇ, ಸಾಮಾನ್ಯವಾಗಿ ಕ್ರೈಸ್ತ ಸಹೋದರರಿಗೆ ಕಾದಿರಿಸಲ್ಪಡುವ ಸಭೆಯ ಜವಾಬ್ದಾರಿಗಳನ್ನು ನನಗೆ ವಹಿಸಲಾಯಿತು.

ನಾವು ಸಾಮಾನ್ಯವಾಗಿ ನಮ್ಮ ಕೂಟಗಳನ್ನು ಖಾಸಗಿ ಮನೆಗಳಲ್ಲಿ ನಡೆಸುತ್ತಿದ್ದೆವು. ಆದರೆ ಕೆಲವು ಸಾರಿ ಬಹಿರಂಗ ಭಾಷಣಗಳಿಗಾಗಿ ಒಂದು ಹಾಲ್‌ ಅನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದೆವು. ಒಬ್ಬ ಸುಂದರ ಯುವ ಸಹೋದರರು ಬೆತೆಲ್‌ನಿಂದ, ಅಂದರೆ ನಮ್ಮ ಶಾಖಾ ಆಫೀಸಿನಿಂದ ನಮ್ಮ ಚಿಕ್ಕ ಸಭೆಗೆ ಭಾಷಣ ಕೊಡಲು ಬಂದರು. ನನಗೆ ಗೊತ್ತಿಲ್ಲದೆ, ಅವರ ಬರೋಣಕ್ಕೆ ಇನ್ನೊಂದು ಕಾರಣವೂ ಇತ್ತು​—ನನ್ನನ್ನು ನೋಡಲಿಕ್ಕೆಯೇ. ಹೌದು, ನಾನು ಲಾಯ್ಡ್‌ರನ್ನು ಭೇಟಿಯಾದದ್ದು ಈ ರೀತಿಯಲ್ಲೇ.

ಲಾಯ್ಡ್‌ರವರ ಕುಟುಂಬವನ್ನು ಭೇಟಿಯಾಗುವುದು

ಸ್ವಲ್ಪ ಸಮಯದಲ್ಲೇ, ಯೆಹೋವನಿಗೆ ಪೂರ್ಣ ಸಮಯ ಸೇವೆಸಲ್ಲಿಸುವ ಬಯಕೆಯು ನನ್ನಲ್ಲಿ ಹುಟ್ಟಿತು. ಆದರೆ ನಾನು ಪಯನೀಯರ್‌ ಸೇವೆಗಾಗಿ (ಪೂರ್ಣ-ಸಮಯ ಸಾರುವ ಕೆಲಸದಲ್ಲಿ ಒಳಗೂಡುವುದು) ಅರ್ಜಿ ಸಲ್ಲಿಸಿದಾಗ, ನನಗೆ ಬೆತೆಲ್‌ನಲ್ಲಿ ಸೇವೆ ಸಲ್ಲಿಸಲು ಇಷ್ಟವಿದೆಯೋ ಎಂದು ಕೇಳಲಾಯಿತು. ಹೀಗೆ 1939ರ ಸೆಪ್ಟೆಂಬರ್‌ನಲ್ಲಿ, ಎರಡನೇ ಲೋಕ ಯುದ್ಧ ಆರಂಭವಾದ ತಿಂಗಳಿನಲ್ಲಿ, ನಾನು ಸಿಡ್ನಿಯ ಹೊರವಲಯದಲ್ಲಿರುವ ಸ್ಟ್ರಾಥ್‌ಫಿಲ್ಡಿನ ಬೆತೆಲ್‌ ಕುಟುಂಬದ ಸದಸ್ಯಳಾದೆ.

1939ರ ಡಿಸೆಂಬರ್‌ ತಿಂಗಳಿನಲ್ಲಿ ನಾನು ಅಧಿವೇಶನಕ್ಕಾಗಿ ನ್ಯೂಸೀಲೆಂಡ್‌ಗೆ ಪ್ರಯಾಣಬೆಳೆಸಿದೆ. ಲಾಯ್ಡ್‌ ನ್ಯೂಸೀಲೆಂಡ್‌ ದೇಶದವರಾಗಿದ್ದರಿಂದ, ಅವರು ಸಹ ಅಲ್ಲಿಗೇ ಪ್ರಯಾಣಿಸುತ್ತಿದ್ದರು. ನಾವು ಒಂದೇ ಹಡಗಿನಲ್ಲಿ ಪ್ರಯಾಣ ಮಾಡಿದೆವು ಮತ್ತು ಪರಸ್ಪರರನ್ನು ಹೆಚ್ಚು ಚೆನ್ನಾಗಿ ಅರಿತುಕೊಂಡೆವು. ಲಾಯ್ಡ್‌ರವರು, ನಾನು ಅವರ ತಂದೆತಾಯಿ ಮತ್ತು ತಂಗಿಯರನ್ನು ವೆಲ್ಲಿಂಗ್‌ಟನ್‌ ಅಧಿವೇಶನದಲ್ಲಿ ಮತ್ತು ನಂತರ ಕ್ರೈಸ್ಟ್‌ಚರ್ಚ್‌ನಲ್ಲಿರುವ ಅವರ ಮನೆಯಲ್ಲಿ ಭೇಟಿಯಾಗುವ ಏರ್ಪಾಡು ಮಾಡಿದರು.

ನಮ್ಮ ಕೆಲಸದ ಮೇಲೆ ನಿಷೇಧ

1941, ಜನವರಿ 18ರ ಶನಿವಾರದಂದು, ಸರಕಾರಿ ಅಧಿಕಾರಿಗಳು ಸಂಸ್ಥೆಯ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳಲು ಸುಮಾರು ಆರು ಕಪ್ಪು ಲಿಮಸೀನ್‌ ಕಾರುಗಳಲ್ಲಿ ಶಾಖಾ ಆಫೀಸಿಗೆ ಬಂದರು. ನಾನು ಬೆತೆಲಿನ ಪ್ರವೇಶದಾರಿಯಲ್ಲಿರುವ ಕಾವಲುಮನೆಯಲ್ಲಿ ಕೆಲಸ ಮಾಡುತ್ತಿದ್ದದರಿಂದ, ಅವರನ್ನು ನಾನೇ ಮೊದಲು ನೋಡಿದೆ. ಸುಮಾರು 18 ತಾಸುಗಳ ಮುಂಚೆ, ನಮಗೆ ನಿಷೇಧದ ಬಗ್ಗೆ ಸೂಚನೆಯನ್ನು ಕೊಡಲಾಗಿತ್ತು. ಆದ್ದರಿಂದ ಹೆಚ್ಚುಕಡಿಮೆ ಎಲ್ಲಾ ಸಾಹಿತ್ಯವನ್ನು ಮತ್ತು ಫೈಲ್‌ಗಳನ್ನು ಶಾಖೆಯಿಂದ ಈಗಾಗಲೇ ಸ್ಥಳಾಂತರಿಸಲಾಗಿತ್ತು. ಮುಂದಿನವಾರ, ಲಾಯ್ಡ್‌ರನ್ನು ಸೇರಿಸಿ ಬೆತೆಲ್‌ ಕುಟುಂಬದ ಐದು ಮಂದಿ ಸದಸ್ಯರನ್ನು ಸೆರೆಮನೆಗೆ ಹಾಕಲಾಯಿತು.

ಸೆರೆಮನೆಯಲ್ಲಿರುವ ಸಹೋದರರಿಗೆ ಹೆಚ್ಚು ಅಗತ್ಯವಾಗಿ ಬೇಕಾಗಿರುವುದು ಆತ್ಮಿಕ ಆಹಾರವೆಂದು ನನಗೆ ಗೊತ್ತಿತ್ತು. ಲಾಯ್ಡ್‌ರನ್ನು ಉತ್ತೇಜಿಸಲು, ನಾನು ಅವರಿಗೆ “ಪ್ರೇಮ ಪತ್ರಗಳನ್ನು” ಬರೆಯಲು ನಿರ್ಧರಿಸಿದೆ. ಅಂಥ ಪತ್ರಗಳಲ್ಲಿ ಏನನ್ನು ನಿರೀಕ್ಷಿಸಲಾಗುತ್ತದೊ ಆ ರೀತಿಯಲ್ಲೇ ಬರೆಯಲಾರಂಭಿಸಿ ಆನಂತರ ಎಲ್ಲಾ ಕಾವಲಿನಬುರುಜು ಲೇಖನಗಳನ್ನು ಅದರಲ್ಲಿ ನಕಲುಮಾಡಿ, ಕೊನೆಯಲ್ಲಿ ಅವರ ಪ್ರಿಯಳೆಂದು ಸಹಿ ಹಾಕುತ್ತಿದ್ದೆ. ನಾಲ್ಕೂವರೆ ತಿಂಗಳುಗಳ ನಂತರ ಲಾಯ್ಡ್‌ರವರನ್ನು ಬಿಡುಗಡೆಮಾಡಲಾಯಿತು.

ಮದುವೆ ಮತ್ತು ಮುಂದುವರಿದ ಸೇವೆ

1940ರಲ್ಲಿ, ಲಾಯ್ಡ್‌ರವರ ತಾಯಿ ಆಸ್ಟ್ರೇಲಿಯಕ್ಕೆ ಭೇಟಿ ನೀಡಿದರು ಮತ್ತು ಲಾಯ್ಡ್‌ ನಾವು ಮದುವೆಯಾಗುವುದರ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಅವರಿಗೆ ಹೇಳಿದರು. ಈ ವ್ಯವಸ್ಥೆಯ ಅಂತ್ಯವು ಹತ್ತಿರದಲ್ಲಿರುವ ಹಾಗೆ ತೋರುತ್ತಿದ್ದದರಿಂದ ಅವರು ಮದುವೆಯಾಗದೆ ಇರುವಂತೆ ಸಲಹೆ ನೀಡಿದರು. (ಮತ್ತಾಯ 24:​3-​14) ಲಾಯ್ಡ್‌ರವರು ತಮ್ಮ ಸ್ನೇಹಿತರಿಗೂ ತಮ್ಮ ಉದ್ದೇಶಗಳ ಕುರಿತಾಗಿ ಹೇಳಿದರು, ಆದರೆ ಅವರು ಪ್ರತಿಸಾರಿ ಅದರ ಕುರಿತಾಗಿ ಮಾತಾಡಿದಾಗ, ಆ ಸ್ನೇಹಿತರು ಸಹ ಮದುವೆ ಬೇಡವೆಂದೇ ವಾದಿಸಿದರು. ಕೊನೆಗೆ, ಒಂದು ದಿನ 1942ರ ಫೆಬ್ರವರಿಯಲ್ಲಿ, ಲಾಯ್ಡ್‌ರವರು ನನ್ನನ್ನು, ಮತ್ತು ಈ ವಿಷಯವನ್ನು ಗುಪ್ತವಾಗಿಡುವಂತೆ ಪ್ರತಿಜ್ಞೆಮಾಡಿದ ನಾಲ್ಕು ಮಂದಿ ಸಾಕ್ಷಿಗಳನ್ನು ಯಾರಿಗೂ ಗೊತ್ತಾಗದಂಥ ರೀತಿಯಲ್ಲಿ ರೆಜಿಸ್ಟರ್‌ ಆಫೀಸಿಗೆ ಕರೆದುಕೊಂಡು ಹೋದರು. ಅಲ್ಲಿ ನಾವು ಮದುವೆಯಾದೆವು. ಆಗ ಆಸ್ಟ್ರೇಲಿಯದ ಯೆಹೋವನ ಸಾಕ್ಷಿಗಳಲ್ಲಿ, ಮದುವೆಗಳನ್ನು ನಡೆಸುವ ಒಬ್ಬ ವ್ಯಕ್ತಿಯ ಸೌಲಭ್ಯವಿರಲಿಲ್ಲ.

ವಿವಾಹಿತ ದಂಪತಿಯೋಪಾದಿ ಬೆತೆಲ್‌ ಸೇವೆಯಲ್ಲಿ ಮುಂದುವರಿಯಲು ನಮಗೆ ಅನುಮತಿ ಸಿಕ್ಕದಿದ್ದರೂ, ನಾವು ವಿಶೇಷ ಪಯನೀಯರರೋಪಾದಿ ಕೆಲಸಮಾಡಲು ಇಷ್ಟಪಡುವೆವೊ ಎಂದು ಕೇಳಲಾಯಿತು. ವೆಗಾವೆಗಾ ಎಂಬ ಹೆಸರಿನ ಸಣ್ಣಪಟ್ಟಣಕ್ಕೆ ಹೋಗುವ ನೇಮಕವನ್ನು ನಾವು ಸಂತೋಷದಿಂದ ಸ್ವೀಕರಿಸಿದೆವು. ನಮ್ಮ ಸಾರುವ ಕೆಲಸವು ಇನ್ನೂ ನಿಷೇಧದ ಕೆಳಗಿತ್ತು ಮತ್ತು ನಮಗೆ ಯಾವುದೇ ಆರ್ಥಿಕ ನೆರವು ಇರಲಿಲ್ಲ. ಆದುದರಿಂದ ನಾವು ನಿಜವಾಗಿಯೂ ನಮ್ಮ ಭಾರವನ್ನು ಯೆಹೋವನ ಮೇಲೆ ಹಾಕಬೇಕಿತ್ತು.​—ಕೀರ್ತನೆ 55:22.

ನಾವು, ಇಬ್ಬರು ಕೂರುವ ಸೈಕಲಿನ ಮೇಲೆ ಸವಾರಿ ಮಾಡಿ ಹಳ್ಳಿಗಳಿಗೆ ಹೋಗುತ್ತಿದ್ದೆವು. ಅಲ್ಲಿ ಕೆಲವು ಒಳ್ಳೇ ಜನರನ್ನು ಭೇಟಿಯಾಗಿ ಬಹಳ ಸಮಯದ ವರೆಗೆ ಅವರೊಟ್ಟಿಗೆ ಮಾತಾಡುತ್ತಿದ್ದೆವು. ಕೆಲವೇ ಮಂದಿ ಬೈಬಲ್‌ ಅಭ್ಯಾಸವನ್ನು ಸ್ವೀಕರಿಸಿದರು. ಆದರೂ ಒಬ್ಬ ಅಂಗಡಿಯವನು ನಾವು ಮಾಡುತ್ತಿರುವ ಕೆಲಸವನ್ನು ಎಷ್ಟು ಮೆಚ್ಚಿದನೆಂದರೆ, ಪ್ರತಿ ವಾರ ನಮಗೆ ಹಣ್ಣುಹಂಪಲುಗಳು ಹಾಗೂ ತರಕಾರಿಯನ್ನು ಕೊಡುತ್ತಿದ್ದನು. ನಾವು ವೆಗಾವೆಗಾದಲ್ಲಿ ಆರು ತಿಂಗಳುಗಳ ವರೆಗೆ ಸೇವೆಸಲ್ಲಿಸಿದ ನಂತರ, ನಮ್ಮನ್ನು ಪುನಃ ಬೆತೆಲ್‌ಗೆ ಆಮಂತ್ರಿಸಲಾಯಿತು.

1942ರ ಮೇ ತಿಂಗಳಿನಲ್ಲಿ ಬೆತೆಲ್‌ ಕುಟುಂಬವು ಸ್ಟ್ರಾಥ್‌ಫೀಲ್ಡ್‌ ಆಫೀಸನ್ನು ಖಾಲಿಮಾಡಿ, ಖಾಸಗಿ ಮನೆಗಳಲ್ಲಿ ವಾಸಿಸಲಾರಂಭಿಸಿತು. ಪೊಲೀಸರು ಪತ್ತೇ ಹಚ್ಚುವುದನ್ನು ತಪ್ಪಿಸಲು ಬೆತೆಲ್‌ ಕುಟುಂಬವು ಹೆಚ್ಚುಕಡಿಮೆ ಪ್ರತಿ ಎರಡು ವಾರಗಳಿಗೊಮ್ಮೆ ಮನೆಗಳನ್ನು ಬದಲಾಯಿಸುತ್ತಿತ್ತು. ಆಗಸ್ಟ್‌ನಲ್ಲಿ ನಾನು ಮತ್ತು ಲಾಯ್ಡ್‌ ಬೆತೆಲ್‌ಗೆ ಹಿಂತಿರುಗಿದಾಗ, ಇಂಥ ಒಂದು ಸ್ಥಳಗಳಲ್ಲಿ ಅವರನ್ನು ಜೊತೆಗೂಡಿದೆವು. ದಿನದ ಸಮಯದಲ್ಲಿ ನಮ್ಮ ನೇಮಕವು, ಗುಪ್ತವಾಗಿ ನಡೆಸಲಾಗುತ್ತಿದ್ದ ಮುದ್ರಣಾಲಯೊಂದರಲ್ಲಿ ಕೆಲಸಮಾಡುವುದಾಗಿತ್ತು. ಕೊನೆಗೆ, 1943ರ ಜೂನ್‌ ತಿಂಗಳಲ್ಲಿ ನಮ್ಮ ಕೆಲಸದ ಮೇಲಿದ್ದ ನಿಷೇಧವನ್ನು ತೆಗೆಯಲಾಯಿತು.

ವಿದೇಶೀ ಸೇವೆಗಾಗಿ ತಯಾರಿ

ಅಮೆರಿಕದ ನ್ಯೂಯಾರ್ಕ್‌ನ ಸೌತ್‌ ಲ್ಯಾಂಸಿಂಗ್‌ನಲ್ಲಿರುವ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಹಾಜರಾಗಲು ನಮಗೆ 1947ರ ಏಪ್ರಿಲ್‌ ತಿಂಗಳಿನಲ್ಲಿ ಮೊದಲ ಅರ್ಜಿಗಳನ್ನು ಕೊಡಲಾಯಿತು. ಅಷ್ಟರವರೆಗೆ, ಆಸ್ಟ್ರೇಲಿಯದಲ್ಲಿರುವ ಸಭೆಗಳನ್ನು ಭೇಟಿಮಾಡಿ ಆತ್ಮಿಕವಾಗಿ ಬಲಪಡಿಸುವಂತೆ ನಮ್ಮನ್ನು ನೇಮಿಸಲಾಯಿತು. ಕೆಲವು ತಿಂಗಳುಗಳ ನಂತರ, ಗಿಲ್ಯಡಿನ 11ನೇ ತರಗತಿಗೆ ಹಾಜರಾಗುವ ಆಮಂತ್ರಣವನ್ನು ನಾವು ಪಡೆದುಕೊಂಡೆವು. ನಮ್ಮ ಎಲ್ಲಾ ಆವಶ್ಯಕ ಕೆಲಸಗಳನ್ನು ಮುಗಿಸಿ, ನಮ್ಮ ಸಾಮಾನುಗಳನ್ನು ಪ್ಯಾಕ್‌ ಮಾಡಲು ನಮಗೆ ಕೇವಲ ಮೂರು ವಾರಗಳಿದ್ದವು. 1947ರ ಡಿಸೆಂಬರ್‌ ತಿಂಗಳಿನಲ್ಲಿ ನಾವು ನಮ್ಮ ಕುಟುಂಬದವರು ಹಾಗೂ ಸ್ನೇಹಿತರನ್ನು ಬಿಟ್ಟು, ಅದೇ ತರಗತಿಗೆ ಆಮಂತ್ರಿಸಲ್ಪಟ್ಟ ಆಸ್ಟ್ರೇಲಿಯದ ಇತರ 15 ಮಂದಿಯೊಂದಿಗೆ ನ್ಯೂ ಯಾರ್ಕ್‌ಗೆ ಹೊರಟೆವು.

ಗಿಲ್ಯಡ್‌ ಸ್ಕೂಲ್‌ನಲ್ಲಿ ನಾವು ಕಳೆದ ಕೆಲವೇ ತಿಂಗಳುಗಳು ಬೇಗನೆ ಹಾರಿಹೋದವು ಮತ್ತು ನಾವು ಜಪಾನಿಗೆ ಹೋಗುವ ಮಿಷನೆರಿ ನೇಮಕವನ್ನು ಪಡೆದುಕೊಂಡೆವು. ಜಪಾನಿಗೆ ಹೋಗಲು ಬೇಕಾದ ಡಾಕ್ಯುಮೆಂಟ್‌ಗಳನ್ನು ತಯಾರಿಸಲು ಸಮಯ ಹಿಡಿದದ್ದರಿಂದ, ಮತ್ತೊಂದು ಬಾರಿ ಲಾಯ್ಡ್‌ರನ್ನು ಯೆಹೋವನ ಸಾಕ್ಷಿಗಳ ಸಂಚಾರ ಮೇಲ್ವಿಚಾರಕರನ್ನಾಗಿ ನೇಮಿಸಲಾಯಿತು. ನಾವು ಭೇಟಿ ಮಾಡುವಂತೆ ನೇಮಿಸಲ್ಪಟ್ಟ ಸಭೆಗಳು, ಲಾಸ್‌ ಏಂಜಲಿಸ್‌ ನಗರದಿಂದ ಹಿಡಿದು ಮೆಕ್ಸಿಕೊ ದೇಶದ ಗಡಿಯ ವರೆಗೆ ಹರಡಿದ್ದವು. ನಮ್ಮ ಹತ್ತಿರ ಕಾರ್‌ ಇರಲಿಲ್ಲ, ಆದ್ದರಿಂದ ಪ್ರತಿ ವಾರ ಸಾಕ್ಷಿಗಳು ನಮ್ಮನ್ನು ಪ್ರೀತಿಯಿಂದ ಮುಂದಿನ ಸಭೆಗಳಿಗೆ ಸಾಗಿಸುತ್ತಿದ್ದರು. ಆ ವಿಶಾಲವಾದ ಸರ್ಕಿಟಿನ ಕ್ಷೇತ್ರವು ಈಗ ಮೂರು ಇಂಗ್ಲಿಷ್‌ ಮತ್ತು ಮೂರು ಸ್ಪ್ಯಾನಿಷ್‌ ಡಿಸ್ಟ್ರಿಕ್ಟ್‌ಗಳ ಭಾಗಗಳಾಗಿ ಪರಿಣಮಿಸಿವೆ, ಮತ್ತು ಈ ಪ್ರತಿಯೊಂದು ಡಿಸ್ಟ್ರಿಕ್ಟ್‌ನಲ್ಲಿ ಸುಮಾರು ಹತ್ತು ಸರ್ಕಿಟ್‌ಗಳಿವೆ!

ಒಮ್ಮಿಂದೊಮ್ಮೆಲೇ 1949ರ ಅಕ್ಟೋಬರ್‌ ತಿಂಗಳಿನಲ್ಲಿ, ಮಾರ್ಪಡಿಸಲ್ಪಟ್ಟಿರುವ ಸೈನಿಕ ಹಡಗೊಂದರಲ್ಲಿ ನಾವು ಜಪಾನಿಗೆ ಹೋಗುವ ದಾರಿಯಲ್ಲಿದ್ದೆವು. ಹಡಗಿನ ಒಂದು ಭಾಗವು ಪುರುಷರಿಗಾಗಿ ಬದಿಗಿರಿಸಲ್ಪಟ್ಟಿತ್ತು ಮತ್ತು ಇನ್ನೊಂದು ಭಾಗವು ಮಹಿಳೆಯರಿಗಾಗಿ ಹಾಗೂ ಮಕ್ಕಳಿಗಾಗಿತ್ತು. ಯೋಕೊಹಾಮವನ್ನು ತಲಪಲು ಒಂದು ದಿನವಿರುವಾಗ, ನಾವು ಒಂದು ತುಫಾನನ್ನು ಎದುರಿಸಿದೆವು. ಅದು ಮೋಡಗಳನ್ನು ದೂರ ಓಡಿಸಿತೆಂದು ತೋರುತ್ತದೆ. ಆದುದರಿಂದ ಮರುದಿನ, ಅಂದರೆ ಅಕ್ಟೋಬರ್‌ 31ರಂದು ಸೂರ್ಯನು ಉದಯಿಸಿದಾಗ, ನಾವು ಫ್ಯುಜಿ ಪರ್ವತವನ್ನು ಅದರ ಪೂರ್ಣ ವೈಭವದಲ್ಲಿ ನೋಡಸಾಧ್ಯವಿತ್ತು. ನಮ್ಮ ಹೊಸ ನೇಮಕಕ್ಕೆ ಆಗಮಿಸಿದ ನಮಗೆ ಎಷ್ಟು ಭವ್ಯವಾದ ಸ್ವಾಗತ!

ಜಪಾನೀಯರೊಂದಿಗೆ ಕೆಲಸಮಾಡುವುದು

ನಾವು ಬಂದರಿಗೆ ಹತ್ತಿರವಾಗುತ್ತಿರುವಾಗ, ಕಪ್ಪು-ಕೂದಲಿನ ನೂರಾರು ಜನರನ್ನು ನೋಡಿದೆವು. ಭಾರಿ ಲಟಪಟ ಸಪ್ಪಳವನ್ನು ಕೇಳಿಸಿಕೊಂಡಾಗ ‘ಎಂಥ ಗದ್ದಲ ಮಾಡುವ ಜನರ ಗುಂಪಪ್ಪಾ!’ ಎಂದು ಮನಸ್ಸಿನಲ್ಲೇ ಅಂದುಕೊಂಡೆವು. ಎಲ್ಲರೂ, ಮರದ ಪಾದುಕೆಗಳನ್ನು ಹಾಕಿಕೊಂಡಿದ್ದರು ಮತ್ತು ಇದು, ಅವರು ಮರದ ಬಂದರುಕಟ್ಟೆಗಳ ಮೇಲೆ ನಡೆಯುತ್ತಿದ್ದಾಗ ಲಟಪಟ ಶಬ್ದವನ್ನು ಮಾಡುತ್ತಿದ್ದವು. ಯೋಕೊಹಾಮದಲ್ಲಿ ಒಂದು ರಾತ್ರಿಯನ್ನು ಕಳೆದ ನಂತರ, ನಮ್ಮ ಮಿಷನೆರಿ ನೇಮಕವಾದ ಕೋಬಿಗೆ ಹೋಗಲು ರೈಲು ಹತ್ತಿದೆವು. ನಮಗಿಂತಲೂ ಕೆಲವು ತಿಂಗಳುಗಳ ಮುಂಚೆ ಜಪಾನಿಗೆ ಬಂದಿದ್ದ ಗಿಲ್ಯಡ್‌ ಸಹಪಾಠಿಯಾದ ಡಾನ್‌ ಹಾಸ್ಲೆಟ್‌ರವರು, ಒಂದು ಮಿಷನೆರಿ ಮನೆಯನ್ನು ಬಾಡಿಗೆಗೆ ತಕ್ಕೊಂಡಿದ್ದರು. ಅದು ಸುಂದರವಾದ, ದೊಡ್ಡ, ಪಾಶ್ಚಿಮಾತ್ಯ ಶೈಲಿಯ ಎರಡು-ಮಾಳಿಗೆಯ ಮನೆಯಾಗಿತ್ತು. ಆದರೆ ಅದು ಯಾವುದೇ ರೀತಿಯ ಸಾಮಾನು ಸಲಕರಣೆಗಳಿಂದ ಸಜ್ಜುಗೊಳಿಸಲ್ಪಟ್ಟಿರಲಿಲ್ಲ!

ನಾವು ಮಲಗಲು ಹಾಸಿಗೆಯಾಗಿ, ಅಂಗಳದಲ್ಲಿ ಎತ್ತರಕ್ಕೆ ಬೆಳೆದಿದ್ದ ಹುಲ್ಲನ್ನು ಕತ್ತರಿಸಿ ನೆಲದ ಮೇಲೆ ಹಾಕಿದೆವು. ಹೀಗೆ ನಮ್ಮ ಮಿಷನೆರಿ ಜೀವನ ಆರಂಭವಾಯಿತು. ನಮ್ಮ ಲಗೇಜ್‌ನಲ್ಲಿರುವುದನ್ನು ಬಿಟ್ಟರೆ ನಮ್ಮ ಬಳಿ ಬೇರೇನೂ ಇರಲಿಲ್ಲ. ನಮಗೆ ಕಾವು ಒದಗಿಸಲು ಮತ್ತು ಅಡಿಗೆಮಾಡಲು, ಹಿಬಾಚಿ ಎಂದು ಕರೆಯಲ್ಪಡುವ ಚಿಕ್ಕ ಇದ್ದಲು ಬರ್ನರ್‌ಗಳನ್ನು ತಂದೆವು. ಒಂದು ರಾತ್ರಿ, ನಮ್ಮ ಇಬ್ಬರು ಜೊತೆ ಮಿಷನೆರಿಗಳಾದ ಪರ್ಸಿ ಮತ್ತು ಇಲ್ಮಾ ಇಜ್ಲೊಬ್‌ ಪ್ರಜ್ಞೆತಪ್ಪಿ ಬಿದ್ದಿರುವುದನ್ನು ಲಾಯ್ಡ್‌ ಕಂಡರು. ನಿರ್ಮಲವಾಗಿರುವ, ತಣ್ಣನೆಯ ಗಾಳಿ ಒಳಬರುವಂತೆ ಕಿಟಕಿಯನ್ನು ತೆರೆಯುವುದರ ಮೂಲಕ ಅವರನ್ನು ಮತ್ತೆ ಪ್ರಜ್ಞೆಗೆ ತರಲು ಶಕ್ತರಾದರು. ಆ ಇದ್ದಲು ಬರ್ನರ್‌ಗಳಲ್ಲಿ ಅಡಿಗೆ ಮಾಡುತ್ತಿರುವಾಗ ನಾನು ಕೂಡ ಒಮ್ಮೆ ಪ್ರಜ್ಞೆತಪ್ಪಿಬಿದ್ದೆ. ಕೆಲವು ವಿಷಯಗಳು ರೂಢಿಯಾಗಲು ಸ್ವಲ್ಪ ಸಮಯ ಹಿಡಿಯಿತು!

ಭಾಷೆಯನ್ನು ಕಲಿಯುವುದು ಒಂದು ಆದ್ಯತೆ ಆಗಿತ್ತು. ದಿನಕ್ಕೆ 11 ತಾಸುಗಳಂತೆ ಒಂದು ತಿಂಗಳಿನವರೆಗೂ ನಾವು ಜಪಾನೀಸ್‌ ಭಾಷೆಯನ್ನು ಅಭ್ಯಾಸಮಾಡಿದೆವು. ಆನಂತರ ಶುಶ್ರೂಷೆಯನ್ನು ಆರಂಭಿಸಲು ಒಂದು ಅಥವಾ ಎರಡು ವಾಕ್ಯಗಳನ್ನು ಬರೆದುಕೊಂಡು ಸೇವೆಗೆ ಹೊರಡುತ್ತಿದ್ದೆವು. ನಾವು ಸೇವೆಗೆ ಹೋದ ಮೊದಲನೆ ದಿನವೇ, ನಾನು ಮಿಯೊ ಟಕಾಗಿ ಎಂಬ ಸುಂದರ ಮಹಿಳೆಯನ್ನು ಭೇಟಿಯಾದೆ. ಅವರು ದಯೆಯಿಂದ ನನ್ನನ್ನು ಬರಮಾಡಿಕೊಂಡರು. ಪುನರ್ಭೇಟಿಗಳ ಸಮಯದಲ್ಲಿ, ಮಿಯೊ ಮತ್ತು ನಾನು ಜಪಾನೀಸ್‌-ಇಂಗ್ಲಿಷ್‌ ನಿಘಂಟುಗಳ ಸಹಾಯದಿಂದ ಹೇಗೊ ಸಂಭಾಷಿಸುತ್ತಿದ್ದೆವು, ಮತ್ತು ಕೊನೆಯಲ್ಲಿ ಇದರಿಂದ ಒಂದು ಒಳ್ಳೆಯ ಬೈಬಲ್‌ ಅಭ್ಯಾಸವು ಫಲಿಸಿತು. 1999ರಲ್ಲಿ, ಜಪಾನಿನ ವಿಸ್ತರಿಸಲ್ಪಟ್ಟ ಶಾಖಾ ಸೌಕರ್ಯದ ಸಮರ್ಪಣೆಯ ಕಾರ್ಯಕ್ರಮಕ್ಕೆ ಹಾಜರಾದಾಗ, ನಾನು ಅಭ್ಯಾಸಿಸಿದ ಅನೇಕ ಪ್ರಿಯರನ್ನು ಹಾಗೂ ಮಿಯೊಳನ್ನು ಪುನಃ ಭೇಟಿಯಾದೆ. ಐವತ್ತು ವರ್ಷಗಳು ದಾಟಿವೆ, ಆದರೂ ಅವರು ಈಗಲೂ ಹುರುಪುಳ್ಳ ರಾಜ್ಯ ಘೋಷಕರಾಗಿದ್ದಾರೆ ಮತ್ತು ಯೆಹೋವನನ್ನು ಸೇವಿಸಲು ಸಾಧ್ಯವಾದಷ್ಟನ್ನು ಮಾಡುತ್ತಿದ್ದಾರೆ.

1950ರ ಏಪ್ರಿಲ್‌ 1ರಂದು ಕೋಬಿಯಲ್ಲಿ ನಾವು ಕ್ರಿಸ್ತನ ಮರಣದ ಜ್ಞಾಪಕಾಚರಣೆಯನ್ನು ಆಚರಿಸಿದಾಗ ಸುಮಾರು 180 ಮಂದಿ ಹಾಜರಾದರು. ನಮ್ಮ ಆಶ್ಚರ್ಯಕ್ಕೆ, ಮರುದಿನ ಬೆಳಿಗ್ಗೆ 35 ಜನರು ಶುಶ್ರೂಷೆಯಲ್ಲಿ ಭಾಗವಹಿಸಲು ಬಂದರು. ಪ್ರತಿಯೊಬ್ಬ ಮಿಷನೆರಿಯು ತಮ್ಮ ಜೊತೆಗೆ ಮೂರು ಅಥವಾ ನಾಲ್ಕು ಮಂದಿ ಹೊಸಬರನ್ನು ಕರೆದೊಯ್ದರು. ಜಪಾನೀಸ್‌ ಭಾಷೆ ಗೊತ್ತಿಲ್ಲದವಳೆಂದು ಮನೆಯವರು ನನ್ನ ಜೊತೆ ಮಾತಾಡಲಿಲ್ಲ. ಅದರ ಬದಲಿಗೆ ಜ್ಞಾಪಕಾಚರಣೆಗೆ ಹಾಜರಾಗಿ ನನ್ನ ಜೊತೆಗೆ ಬಂದಿದ್ದ ಆ ಹೊಸ ಆಸಕ್ತ ಜಪಾನೀಯರೊಂದಿಗೆ ಮಾತಾಡಿದರು. ಆ ಸಂಭಾಷಣೆಗಳು ನಡೆಯುತ್ತಲೇ ಇರುತ್ತಿದ್ದವು, ಆದರೆ ಅವರು ಏನು ಮಾತಾಡುತ್ತಿದ್ದಾರೆಂದು ಮಾತ್ರ ನನಗೆ ಒಂದೂ ಅರ್ಥವಾಗುತ್ತಿರಲಿಲ್ಲ. ಈ ಹೊಸಬರಲ್ಲಿ ಕೆಲವರು ಜ್ಞಾನದಲ್ಲಿ ಪ್ರಗತಿ ಮಾಡಿದರು ಮತ್ತು ಇಂದಿನ ವರೆಗೂ ಸಾರುವ ಕೆಲಸವನ್ನು ಮುಂದುವರಿಸುತ್ತಿದ್ದಾರೆಂದು ಹೇಳಲು ಸಂತೋಷಪಡುತ್ತೇನೆ.

ಅನೇಕ ಸುಯೋಗಗಳು ಹಾಗೂ ನೇಮಕಗಳು

1952ರ ವರೆಗೆ ಕೋಬಿಯಲ್ಲಿ ನಾವು ನಮ್ಮ ಮಿಷನೆರಿ ಸೇವೆಯನ್ನು ಮುಂದುವರಿಸಿದೆವು. ಆನಂತರ ನಮಗೆ ಟೋಕಿಯೋಗೆ ನೇಮಕ ಮಾಡಲಾಯಿತು ಮತ್ತು ಅಲ್ಲಿದ್ದ ಶಾಖಾ ಆಫೀಸಿನ ಮೇಲ್ವಿಚಾರಣೆಯನ್ನು ಲಾಯ್ಡ್‌ರಿಗೆ ವಹಿಸಲಾಯಿತು. ಸಮಯಾನಂತರ, ಅವರು ತಮ್ಮ ಕೆಲಸದ ನೇಮಕಗಳ ನಿಮಿತ್ತ ಜಪಾನಿನಾದ್ಯಂತ ಹಾಗೂ ಬೇರೆ ದೇಶಗಳಿಗೆ ಪ್ರಯಾಣಿಸಬೇಕಾಗುತ್ತಿತ್ತು. ಸ್ವಲ್ಪ ಸಮಯದ ನಂತರ, ಜಾಗತಿಕ ಮುಖ್ಯಕಾರ್ಯಾಲಯದಿಂದ ಬಂದಿದ್ದ ನೇತನ್‌ ಎಚ್‌. ನಾರ್‌ರವರು ಟೋಕಿಯೋಗೆ ಭೇಟಿ ನೀಡಿದ ಒಂದು ಸಂದರ್ಭದಲ್ಲಿ ನನಗೆ ಹೇಳಿದ್ದು: “ನಿನ್ನ ಗಂಡನು ಮುಂದಿನ ಸೋನ್‌ ಸಂಚಾರಕ್ಕೆ ಎಲ್ಲಿಗೆ ಹೋಗುತ್ತಿದ್ದಾನೆಂದು ನಿನಗೆ ಗೊತ್ತೋ? ಆಸ್ಟ್ರೇಲಿಯ ಮತ್ತು ನ್ಯೂಸೀಲೆಂಡ್‌.” ಅವರು ಕೂಡಿಸಿದ್ದು: “ನೀನು ಕೂಡ ಹೋಗಬಹುದು, ಆದರೆ ನಿನ್ನ ಟಿಕೆಟಿನ ಖರ್ಚು ನೀನೇ ನೋಡಿಕೊಳ್ಳಬೇಕು ಅಷ್ಟೇ.” ಎಂಥ ಸಂಭ್ರಮ! ಎಷ್ಟೆಂದರೂ ನಾವು ಮನೆಯನ್ನು ಬಿಟ್ಟು ಒಂಬತ್ತು ವರ್ಷಗಳಾಗಿದ್ದವಲ್ಲಾ.

ಅದರ ನಂತರ ನಾವು ಬೇಗನೆ ನಮ್ಮ ಕುಟುಂಬಗಳಿಗೆ ಪತ್ರವನ್ನು ಬರೆದೆವು. ನನ್ನ ತಾಯಿಯು ನನ್ನ ಟಿಕೆಟನ್ನು ಖರೀದಿಸಲು ಸಹಾಯಮಾಡಿದರು. ಲಾಯ್ಡ್‌ ಮತ್ತು ನಾನು ನಮ್ಮ ನೇಮಕಗಳಲ್ಲಿ ಕಾರ್ಯಮಗ್ನರಾಗಿದ್ದೆವು ಮತ್ತು ನಮ್ಮ ಕುಟುಂಬಗಳನ್ನು ಭೇಟಿಯಾಗಲು ನಮ್ಮ ಹತ್ತಿರ ಹಣವಿರಲಿಲ್ಲ. ಆದುದರಿಂದ ಇದು ನನ್ನ ಪ್ರಾರ್ಥನೆಗಳಿಗೆ ಉತ್ತರದಂತೆ ಇತ್ತು. ನೀವು ಊಹಿಸಿಕೊಂಡಂತೆ, ತಾಯಿ ನನ್ನನ್ನು ನೋಡಿ ತುಂಬ ಸಂತೋಷಪಟ್ಟರು. ಅವರು ಹೇಳಿದ್ದು, “ಒಳ್ಳೇದು, ನೀನು ಮತ್ತೆ ಮೂರು ವರ್ಷಗಳಲ್ಲಿ ಬರುವಂತೆ ನಾನು ಹಣವನ್ನು ಕೂಡಿಸಿಡುವೆ.” ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಅಗಲಿದೆವು. ಆದರೆ ದುಃಖಕರ ಸಂಗತಿಯೇನೆಂದರೆ, ಮುಂದಿನ ಜುಲೈ ತಿಂಗಳಿನಲ್ಲಿ ಅವರು ತೀರಿಹೋದರು. ಹೊಸ ಲೋಕದಲ್ಲಿ ಅವರೊಂದಿಗಿನ ಒಂದು ಅದ್ಭುತಕರವಾದ ಪುನರ್ಮಿಲನಕ್ಕಾಗಿ ನಾನು ಎದುರುನೋಡುತ್ತೇನೆ!

1960ರ ವರೆಗೆ ಮಿಷನೆರಿ ಕೆಲಸವು ನನ್ನ ಏಕಮಾತ್ರ ನೇಮಕವಾಗಿತ್ತು. ಆದರೆ ಆನಂತರ ನನಗೆ ಸಿಕ್ಕಿದ ಒಂದು ಪತ್ರವು ಹೀಗೆ ಹೇಳಿತು: “ಈ ತಾರೀಖಿನಿಂದಾರಂಭಿಸಿ, ಇಡೀ ಬೆತೆಲ್‌ ಕುಟುಂಬದ ಬಟ್ಟೆ ಒಗೆಯುವಿಕೆ ಹಾಗೂ ಇಸ್ತ್ರಿ ಮಾಡುವಿಕೆಯು ನಿಮ್ಮ ಕೆಲಸವಾಗಿರುವುದು.” ನಮ್ಮ ಬೆತೆಲ್‌ ಕುಟುಂಬದಲ್ಲಿ ಆಗ ಕೇವಲ ಹನ್ನೆರಡು ಜನರು ಇದದ್ದರಿಂದ, ನನ್ನ ಮಿಷನೆರಿ ನೇಮಕದೊಂದಿಗೆ ನಾನು ಈ ಕೆಲಸವನ್ನು ಸಹ ಮಾಡಲು ಸಾಧ್ಯವಾಯಿತು.

1962ರಲ್ಲಿ ನಮ್ಮ ಜಾಪನೀಸ್‌-ಶೈಲಿಯ ಮನೆಯನ್ನು ಕೆಡವಿಹಾಕಲಾಯಿತು, ಮತ್ತು ಅದೇ ಸ್ಥಳದಲ್ಲಿ ಆರು ಮಾಳಿಗೆಯ ಹೊಸ ಬೆತೆಲ್‌ ಮನೆಯನ್ನು ಮುಂದಿನ ವರ್ಷದಲ್ಲಿ ಕಟ್ಟಿಮುಗಿಸಲಾಯಿತು. ಬೆತೆಲ್‌ಗೆ ಸೇರಿರುವ ಹೊಸ, ಯುವ ಸಹೋದರರು ತಮ್ಮ ರೂಮ್‌ಗಳನ್ನು ಅಚ್ಚುಕಟ್ಟಾಗಿಡಲು ಹಾಗೂ ತಮ್ಮ ಬಟ್ಟೆಗಳನ್ನು ಜೋಡಿಸಿಡಲು, ಊಟದ ತಟ್ಟೆಗಳನ್ನು ತೊಳೆದಿಡುವುದರಂಥ ಕೆಲಸಗಳಲ್ಲಿ ಸಹಾಯ ಮಾಡುವಂತೆ ನನಗೆ ನೇಮಕಮಾಡಲಾಯಿತು. ರೂಢಿಗನುಸಾರ, ಜಪಾನಿನಲ್ಲಿ ಹುಡುಗರಿಗೆ ಮನೆಯಲ್ಲಿ ಯಾವುದೇ ಕೆಲಸವನ್ನು ಮಾಡಲು ಕಲಿಸಲಾಗುತ್ತಿರಲಿಲ್ಲ. ಐಹಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಡಲಾಗುತ್ತಿತ್ತು ಮತ್ತು ಅವರ ತಾಯಂದಿರು ಅವರಿಗಾಗಿ ಎಲ್ಲ ಕೆಲಸವನ್ನು ಮಾಡುತ್ತಿದ್ದರು. ನಾನು ಅವರ ತಾಯಿಯಲ್ಲವೆಂದು ಅವರು ಬೇಗನೆ ಕಲಿತುಕೊಂಡರು. ಕಾಲಕಳೆದಂತೆ, ಅನೇಕರು ಪ್ರಗತಿಮಾಡುತ್ತಾ, ಸಂಸ್ಥೆಯಲ್ಲಿ ಹೊಸ ಜವಾಬ್ದಾರಿಯುತ ನೇಮಕಗಳನ್ನು ವಹಿಸಿಕೊಂಡರು.

ಬೇಸಗೆಯಲ್ಲಿ ಸುಡುಬಿಸಿಲಿನ ಒಂದು ದಿನದಂದು, ಒಬ್ಬ ಬೈಬಲ್‌ ವಿದ್ಯಾರ್ಥಿ ನಮ್ಮ ಸೌಕರ್ಯವನ್ನು ಸುತ್ತುತ್ತಿದ್ದಳು. ಆಗ ನಾನು ಶವರ್‌ ರೂಮ್‌ಗಳನ್ನು ಉಜ್ಜುತ್ತಿರುವುದನ್ನು ಅವಳು ನೋಡಿದಳು. ಆಕೆ ಹೇಳಿದ್ದು, “ದಯವಿಟ್ಟು ಇಲ್ಲಿರುವ ವ್ಯವಸ್ಥಾಪಕರಿಗೆ ಹೇಳಿ, ಒಂದು ಹೆಣ್ಣಾಳು ಬಂದು ಈ ಕೆಲಸವನ್ನು ಮಾಡಲಿ. ಅದಕ್ಕೆ ನಾನು ಹಣ ಕೊಡುವೆ.” ಅವಳ ಈ ದಯಾಪರ ವಿಚಾರವನ್ನು ಮೆಚ್ಚುತ್ತೇನಾದರೂ, ಯೆಹೋವನ ಸಂಸ್ಥೆಯಲ್ಲಿ ನನಗೆ ಯಾವುದೇ ಕೆಲಸವು ನೇಮಿಸಲ್ಪಟ್ಟರೂ ನಾನು ಅದನ್ನು ಮಾಡಲು ಸಿದ್ಧಳಿದ್ದೇನೆಂದು ಆಕೆಗೆ ವಿವರಿಸಿದೆ.

ಅಷ್ಟರಲ್ಲಿ, ನಾನು ಮತ್ತು ಲಾಯ್ಡ್‌ ಗಿಲ್ಯಡ್‌ ಶಾಲೆಯ 39ನೇ ತರಗತಿಗೆ ಹಾಜರಾಗುವ ಆಮಂತ್ರಣವನ್ನು ಪಡೆದೆವು. 1964ರಲ್ಲಿ, 46 ವರ್ಷ ಪ್ರಾಯದಲ್ಲಿ ಪುನಃ ಶಾಲೆಗೆ ಹೋಗುವುದು ಎಂಥ ಒಂದು ಸುಯೋಗವಾಗಿತ್ತು! ಈ ತರಬೇತಿಯು ನಿರ್ದಿಷ್ಟವಾಗಿ ಶಾಖಾ ಆಫೀಸುಗಳಲ್ಲಿ ಸೇವೆ ಸಲ್ಲಿಸುವವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ ಸಹಾಯ ಮಾಡಲಿಕ್ಕಾಗಿತ್ತು. ಹತ್ತು ತಿಂಗಳುಗಳ ತರಬೇತಿಯ ನಂತರ, ಪುನಃ ನಮಗೆ ಜಪಾನಿಗೆ ಹೋಗುವ ನೇಮಕವನ್ನು ಕೊಡಲಾಯಿತು. ಈ ಸಮಯದಷ್ಟಕ್ಕೆ, ಜಪಾನಿನಲ್ಲಿ 3,000ಕ್ಕೂ ಹೆಚ್ಚು ರಾಜ್ಯ ಘೋಷಕರು ಇದ್ದರು.

ಬೆಳವಣಿಗೆಯು ಎಷ್ಟು ವೇಗವಾಗಿತ್ತೆಂದರೆ, 1972ರಲ್ಲಿ 14,000ಕ್ಕೂ ಹೆಚ್ಚು ಸಾಕ್ಷಿಗಳಿದ್ದರು. ಟೋಕಿಯೋದ ಪೂರ್ವದಲ್ಲಿರುವ ನುಮಾಝುವಿನಲ್ಲಿ, ಐದು ಮಾಳಿಗೆಯ ಹೊಸ ಶಾಖಾ ಆಫೀಸನ್ನು ಕಟ್ಟಲಾಯಿತು. ನಮ್ಮ ಕಟ್ಟಡಗಳಿಂದ ಫ್ಯುಜಿ ಪರ್ವತದ ಮನೋಹರ ನೋಟವನ್ನು ನೋಡಸಾಧ್ಯವಿತ್ತು. ಹೊಸ ದೊಡ್ಡ ರೋಟರಿ ಮುದ್ರಣಾಲಯದಿಂದ ತಿಂಗಳಿಗೆ ಹತ್ತು ಲಕ್ಷಕ್ಕೂ ಹೆಚ್ಚು ಪತ್ರಿಕೆಗಳು ಜಾಪನೀಸ್‌ ಭಾಷೆಯಲ್ಲಿ ಮುದ್ರಿಸಲ್ಪಡಲಾರಂಭಿಸಿದವು. ಆದರೆ ಭವಿಷ್ಯದಲ್ಲಿ ನಮಗಾಗಿ ಒಂದು ಬದಲಾವಣೆಯು ಕಾದಿತ್ತು.

1974ರ ಕೊನೆಯಲ್ಲಿ, ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಆಮಂತ್ರಿಸುವ ಪತ್ರವನ್ನು ಲಾಯ್ಡ್‌ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯವಾದ ಬ್ರೂಕ್‌ಲಿನ್‌ನಿಂದ ಪಡೆದುಕೊಂಡರು. ಮೊದಲು ನಾನು ಹೀಗೆ ಯೋಚಿಸಿದೆ: ‘ಆಯ್ತು ಇದೆ ಕೊನೆ. ಲಾಯ್ಡ್‌ಗೆ ಸ್ವರ್ಗೀಯ ನಿರೀಕ್ಷೆ ಮತ್ತು ನನಗೆ ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯಿರುವುದರಿಂದ, ಇಂದೊ ಮುಂದೊ ನಾವು ಹೇಗೂ ಅಗಲಲೇಬೇಕಿತ್ತು. ಪ್ರಾಯಶಃ ನಾನು ಇಲ್ಲಿಯೇ ಇದ್ದು, ಲಾಯ್ಡ್‌ ಒಬ್ಬರೇ ಬ್ರೂಕ್‌ಲಿನ್‌ಗೆ ಹೋಗಬೇಕು.’ ಆದರೆ ಬೇಗನೆ ನಾನು ನನ್ನ ಆಲೋಚನೆಯನ್ನು ಸರಿಪಡಿಸಿಕೊಂಡು, ಮಾರ್ಚ್‌ 1975ರಲ್ಲಿ ಲಾಯ್ಡ್‌ರೊಂದಿಗೆ ಹೋದೆ.

ಮುಖ್ಯಕಾರ್ಯಾಲಯದಲ್ಲಿ ಆಶೀರ್ವಾದಗಳು

ಬ್ರೂಕ್‌ಲಿನ್‌ನಲ್ಲಿದ್ದರೂ, ಲಾಯ್ಡ್‌ರ ಮನಸ್ಸು ಜಪಾನ್‌ ಕ್ಷೇತ್ರದಲ್ಲೇ ಇತ್ತು ಮತ್ತು ನಮಗೆ ಅಲ್ಲಿ ಆದಂಥ ಅನುಭವಗಳ ಕುರಿತಾಗಿಯೇ ಅವರು ಯಾವಾಗಲೂ ಮಾತಾಡುತ್ತಿದ್ದರು. ಆದರೆ ಈಗ ಹೆಚ್ಚನ್ನು ಮಾಡುವ ಅವಕಾಶಗಳಿದ್ದವು. ತನ್ನ ಜೀವನದ ಕೊನೆಯ 24 ವರ್ಷಗಳಲ್ಲಿ, ಲಾಯ್ಡ್‌ರನ್ನು ಲೋಕಾದ್ಯಂತ ಸಂಚರಿಸುವುದನ್ನು ಒಳಗೂಡುವ ಸೋನ್‌ ಕೆಲಸಕ್ಕೆ ಪೂರ್ಣ ರೀತಿಯಲ್ಲಿ ಉಪಯೋಗಿಸಲಾಯಿತು. ಅನೇಕ ಬಾರಿ ಲೋಕಾದ್ಯಂತ ಸಂಚರಿಸುವಾಗ ನಾನು ಅವರ ಜೊತೆಯಲ್ಲಿದ್ದೆ.

ಬೇರೆ ದೇಶದಲ್ಲಿ ಕ್ರೈಸ್ತ ಸಹೋದರರನ್ನು ಭೇಟಿಮಾಡುವುದರಿಂದ ಅವರು ಎಂಥ ಪರಸ್ಥಿತಿಯಲ್ಲಿದ್ದುಕೊಂಡು ಕೆಲಸ ಮಾಡುತ್ತಾರೆಂಬುದನ್ನು ನೋಡಿ ಗಣ್ಯಮಾಡಲು ನನಗೆ ಸಹಾಯಮಾಡಿತು. ಉತ್ತರ ಆಫ್ರಿಕದಲ್ಲಿ ನಾನು ಭೇಟಿಯಾದ ಎನ್‌ಟೆಲ್ಯಾ ಎಂಬ ಹತ್ತು ವರ್ಷದ ಹುಡುಗಿಯ ಮುಖವನ್ನು ನಾನೆಂದೂ ಮರೆಯಲಾರೆ. ಆಕೆ ದೇವರ ಹೆಸರನ್ನು ಪ್ರೀತಿಸಿದಳು ಮತ್ತು ಕ್ರೈಸ್ತ ಕೂಟಗಳಿಗೆ ಹೋಗಿಬರಲು ಒಟ್ಟಿನಲ್ಲಿ ಮೂರು ತಾಸು ನಡೆಯುತ್ತಿದ್ದಳು. ಅವಳ ಕುಟುಂಬದಿಂದ ತೀವ್ರ ಹಿಂಸೆಯಿದ್ದಾಗ್ಯೂ, ಎನ್‌ಟೆಲ್ಯಾ ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದಳು. ಆಕೆಯ ಸಭೆಗೆ ನಾವು ಭೇಟಿನೀಡಿದಾಗ, ಕೇವಲ ಭಾಷಣಕರ್ತನ ಟಿಪ್ಪಣಿಗಳ ಹತ್ತಿರ ಒಂದು ಕಡಿಮೆ-ವೋಲ್ಟಿನ ಲೈಟ್‌ ಬಲ್ಬ್‌ ಅನ್ನು ತೂಗಿಸಲಾಗಿತ್ತು. ಬೇರೆ ಎಲ್ಲಾ ಕಡೆಯೂ ಕೂಟದ ಸ್ಥಳವು ಕತ್ತಲಾಗಿತ್ತು. ಆ ಕತ್ತಲ್ಲಲ್ಲಿಯೂ, ಸಹೋದರ ಸಹೋದರಿಯರು ಇಂಪಾಗಿ ಹಾಡುವುದನ್ನು ಕೇಳುವುದು ರೋಮಾಂಚಕಾರಿಯಾಗಿತ್ತು.

ನಮ್ಮ ಜೀವನದ ಅತಿ ಪ್ರಾಮುಖ್ಯ ಘಟನೆಯು, 1998ರ ಡಿಸೆಂಬರ್‌ ತಿಂಗಳಿನಲ್ಲಿ ನಡೆಯಿತು. ಆಗ ಕ್ಯೂಬಾದಲ್ಲಿ “ದೇವರ ಜೀವನ ಮಾರ್ಗ” ಎಂಬ ಜಿಲ್ಲಾ ಅಧಿವೇಶನಗಳಿಗೆ ಪ್ರತಿನಿಧಿಗಳೋಪಾದಿ ಹಾಜರಾದವರಲ್ಲಿ ನಾನು ಮತ್ತು ಲಾಯ್ಡ್‌ ಇದ್ದೆವು. ಬ್ರೂಕ್ಲಿನ್‌ನಲ್ಲಿರುವ ಮುಖ್ಯಕಾರ್ಯಾಲಯದಿಂದ ಕೆಲವರು ಅವರಿಗೆ ಭೇಟಿ ನೀಡಿದ್ದಕ್ಕಾಗಿ ಅಲ್ಲಿನ ಸಹೋದರಸಹೋದರಿಯರು ವ್ಯಕ್ತಪಡಿಸಿದ ಕೃತಜ್ಞತೆ ಮತ್ತು ಆನಂದವು ನಮ್ಮ ಮೇಲೆ ಎಷ್ಟು ಪ್ರಭಾವ ಬೀರಿತು! ಹುರುಪಿನಿಂದ ಯೆಹೋವನಿಗೆ ಸ್ತುತಿಯ ಮಹಾ ಘೋಷವನ್ನು ಮಾಡುತ್ತಿರುವ ಪ್ರಿಯರನ್ನು ಭೇಟಿಯಾದ ಆ ಅನೇಕ ನೆನಪುಗಳನ್ನು ನಾನು ಅಮೂಲ್ಯವೆಂದೆಣಿಸುತ್ತೇನೆ.

ದೇವಜನರೊಂದಿಗಿರುವುದರಿಂದ ಹಾಯಾದ ಅನಿಸಿಕೆ

ನನ್ನ ಸ್ವದೇಶವು ಆಸ್ಟ್ರೇಲಿಯ ಆಗಿದ್ದರೂ, ಯೆಹೋವನ ಸಂಸ್ಥೆಯು ನನ್ನನ್ನು ಎಲ್ಲಿಗೆ ಕಳುಹಿಸಿತೊ ಅಲ್ಲಿನ ಜನರನ್ನು ನಾನು ಪ್ರೀತಿಸಲು ಆರಂಭಿಸಿದೆ. ಅದು ಜಪಾನಿನ ವಿಷಯದಲ್ಲಿ ನಿಜವಾಗಿತ್ತು. ಈಗ 25ಕ್ಕೂ ಹೆಚ್ಚು ವರ್ಷಗಳಿಂದ ನಾನು ಅಮೆರಿಕದಲ್ಲಿರುವುದರಿಂದ, ಇಲ್ಲಿಯೂ ಅದು ನಿಜವಾಗಿದೆ. ನನ್ನ ಯಜಮಾನರನ್ನು ಕಳೆದುಕೊಂಡಾಗ, ನನ್ನ ಯೋಚನೆಯು ಆಸ್ಟ್ರೇಲಿಯಕ್ಕೆ ಹಿಂದಿರುಗುವುದು ಆಗಿರಲಿಲ್ಲ, ಬದಲಿಗೆ ಯೆಹೋವನು ನನಗೆ ನೇಮಕ ಮಾಡಿರುವ ಬ್ರೂಕ್ಲಿನ್‌ ಬೆತೆಲ್‌ನಲ್ಲಿ ಉಳಿಯುವುದೇ ಆಗಿತ್ತು.

ನಾನು ಈಗ 80ರ ಪ್ರಾಯದಲ್ಲಿದ್ದೇನೆ. ಪೂರ್ಣ-ಸಮಯದ ಸೇವೆಯಲ್ಲಿ 61 ವರ್ಷಗಳನ್ನು ಕಳೆದ ನಂತರ, ಯೆಹೋವನು ಎಲ್ಲಿ ಯೋಗ್ಯವೆಂದು ನೆನಸುತ್ತಾನೋ ಅಲ್ಲಿ ಸೇವೆಸಲ್ಲಿಸಲು ಈಗಲೂ ಸಿದ್ಧಳಾಗಿದ್ದೇನೆ. ಆತನು ನಿಜವಾಗಿಯೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ. ಯೆಹೋವನನ್ನು ಪ್ರೀತಿಸುತ್ತಿದ್ದ ಒಬ್ಬ ಪ್ರಿಯ ಸಂಗಾತಿಯೊಂದಿಗೆ ನನ್ನ ಜೀವಿತವನ್ನು ಹಂಚಿಕೊಂಡ ಆ 57ಕ್ಕೂ ಹೆಚ್ಚಿನ ವರ್ಷಗಳ ಸಮಯಾವಧಿಯು ನನಗೆ ಬಹುಮೂಲ್ಯವಾದದ್ದಾಗಿದೆ. ಯೆಹೋವನ ಆಶೀರ್ವಾದವು ನಿರಂತರವಾಗಿ ನಮ್ಮ ಮೇಲೆ ಇರುವುದೆಂದು ನನಗೆ ಭರವಸೆಯಿದೆ ಮತ್ತು ಆತನು ನಮ್ಮ ಕೆಲಸವನ್ನು ಹಾಗೂ ನಾವು ಆತನ ನಾಮಕ್ಕೆ ತೋರಿಸಿದ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲವೆಂದು ನನಗೆ ಗೊತ್ತು.​—ಇಬ್ರಿಯ 6:​10.

[ಪಾದಟಿಪ್ಪಣಿ]

^ ಪ್ಯಾರ. 4 1999, ಅಕ್ಟೋಬರ್‌ 1ರ ಕಾವಲಿನಬುರುಜು ಪತ್ರಿಕೆಯ ಪುಟ 16 ಮತ್ತು 17ನ್ನು ನೋಡಿ.

[ಪುಟ 25ರಲ್ಲಿರುವ ಚಿತ್ರ]

1956ರಲ್ಲಿ ತಾಯಿಯೊಂದಿಗೆ

[ಪುಟ 26ರಲ್ಲಿರುವ ಚಿತ್ರ]

1950ರ ಆದಿಭಾಗದಲ್ಲಿ ಲಾಯ್ಡ್‌ ಮತ್ತು ಜಾಪನೀಸ್‌ ಪ್ರಚಾರಕರ ಒಂದು ಗುಂಪಿನೊಂದಿಗೆ

[ಪುಟ 26ರಲ್ಲಿರುವ ಚಿತ್ರಗಳು]

ಜಪಾನಿನಲ್ಲಿ ನನ್ನ ಮೊದಲ ಬೈಬಲ್‌ ವಿದ್ಯಾರ್ಥಿಯಾಗಿದ್ದ ಮಿಯೊ ಟಕಾಗಿಯೊಂದಿಗೆ, 1950 ಮತ್ತು 1999ರಲ್ಲಿ

[ಪುಟ 28ರಲ್ಲಿರುವ ಚಿತ್ರ]

ಜಪಾನಿನಲ್ಲಿ ಲಾಯ್ಡ್‌ರೊಂದಿಗೆ ಪತ್ರಿಕಾ ಕೆಲಸದಲ್ಲಿ