ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಕ್ರೈಸ್ತತ್ವವು ಪ್ರಬಲವಾಗುತ್ತದೆ!

ನಿಜ ಕ್ರೈಸ್ತತ್ವವು ಪ್ರಬಲವಾಗುತ್ತದೆ!

ನಿಜ ಕ್ರೈಸ್ತತ್ವವು ಪ್ರಬಲವಾಗುತ್ತದೆ!

“ಈ ರೀತಿಯಾಗಿ ಕರ್ತನ [“ಯೆಹೋವನ,” NW] ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.”​—ಅ. ಕೃತ್ಯಗಳು 19:20.

1. ಪ್ರಥಮ ಶತಮಾನದಲ್ಲಾದ ಕ್ರೈಸ್ತತ್ವದ ಬೆಳವಣಿಗೆಯನ್ನು ವಿವರಿಸಿರಿ.

ಪವಿತ್ರಾತ್ಮದ ಶಕ್ತಿಯಿಂದ ಹುರಿದುಂಬಿಸಲ್ಪಟ್ಟವರಾಗಿ, ಆದಿ ಕ್ರೈಸ್ತರು ತುಂಬ ಹುರುಪಿನಿಂದ ದೇವರ ವಾಕ್ಯವನ್ನು ಘೋಷಿಸಿದರು. ಈ ಹುರುಪನ್ನು ನಂದಿಸಲು ಸಾಧ್ಯವಿರಲಿಲ್ಲ. ಒಬ್ಬ ಇತಿಹಾಸಗಾರನು ಬರೆದುದು: “ಕ್ರೈಸ್ತತ್ವವು, ರೋಮನ್‌ ಜಗತ್ತಿನಲ್ಲೆಲ್ಲ ಹಬ್ಬಿಕೊಂಡಿರುವ ವೇಗವು ಗಮನಾರ್ಹವಾದದ್ದು. ಇಸವಿ 100ರೊಳಗೆ, ಮೆಡಿಟರೇನಿಯನ್‌ನ ಗಡಿಯಲ್ಲಿದ್ದ ಬಹುಶಃ ಪ್ರತಿಯೊಂದು ಪ್ರಾಂತ್ಯದಲ್ಲೂ ಒಂದು ಕ್ರೈಸ್ತ ಸಮುದಾಯವಿತ್ತು.”

2. ಸುವಾರ್ತೆಯ ಪ್ರಭಾವವನ್ನು ತಡೆಯಲು ಸೈತಾನನು ಹೇಗೆ ಪ್ರಯತ್ನಿಸಿದನು, ಮತ್ತು ಇದನ್ನು ಹೇಗೆ ಮುಂತಿಳಿಸಲಾಗಿತ್ತು?

2 ಪಿಶಾಚನಾದ ಸೈತಾನನು ಆದಿ ಕ್ರೈಸ್ತರನ್ನು ನಿಶ್ಶಬ್ದಗೊಳಿಸುವುದರಲ್ಲಿ ಸೋತುಹೋದನು. ಆದುದರಿಂದ ಅವನು ಸುವಾರ್ತೆಯ ಪ್ರಭಾವವನ್ನು ತಡೆಯಲಿಕ್ಕಾಗಿ ಇನ್ನೊಂದು ವಿಧಾನವನ್ನು ಉಪಯೋಗಿಸಿದನು. ಅದು ಧರ್ಮಭ್ರಷ್ಟತೆ ಆಗಿತ್ತು. ಇದರ ಕುರಿತಾಗಿ ಯೇಸು ಮುಂಚಿತವಾಗಿಯೇ, ಗೋದಿ ಮತ್ತು ಹಣಜಿಯ ಕುರಿತಾದ ತನ್ನ ಸಾಮ್ಯದಲ್ಲಿ ತಿಳಿಸಿದ್ದನು. (ಮತ್ತಾಯ 13:​24-30, 36-43) ಸಭೆಯೊಳಗಿಂದ ಸುಳ್ಳು ಬೋಧಕರು ಎದ್ದು, ನಾಶಕರವಾದ ಮತಭೇದಗಳನ್ನು ತರುವರೆಂದು ಅಪೊಸ್ತಲ ಪೇತ್ರನು ಸಹ ಎಚ್ಚರಿಸಿದ್ದನು. (2 ಪೇತ್ರ 2:​1-3) ತದ್ರೀತಿಯಲ್ಲಿ ಅಪೊಸ್ತಲ ಪೌಲನು, ಯೆಹೋವನ ದಿನದ ಮುಂಚೆ ಧರ್ಮಭ್ರಷ್ಟತೆ ಇರುವುದೆಂದು ನಿರ್ದಿಷ್ಟವಾಗಿ ಎಚ್ಚರಿಸಿದ್ದನು.​—2 ಥೆಸಲೊನೀಕ 2:​1-3.

3. ಅಪೊಸ್ತಲರ ಮರಣದ ನಂತರ ಏನಾಯಿತು?

3 ಅಪೊಸ್ತಲರ ಮರಣದ ನಂತರ, ವಿಧರ್ಮಿ ಬೋಧನೆಗಳು ಮತ್ತು ತತ್ವಜ್ಞಾನಗಳು ಸುವಾರ್ತೆಯನ್ನು ಮರೆಮಾಡಿದವು. ಮುಂತಿಳಿಸಲ್ಪಟ್ಟಂತೆ, ಸುಳ್ಳು ಬೋಧಕರು ಸತ್ಯದ ಶುದ್ಧ ಸಂದೇಶವನ್ನು ತಿರುಚಿ, ಮಲಿನಗೊಳಿಸಿದರು. ಕ್ರಮೇಣವಾಗಿ ನಿಜ ಕ್ರೈಸ್ತತ್ವವು, ಕ್ರೈಸ್ತಪ್ರಪಂಚವೆಂದು ಕರೆಯಲಾಗುವ ನಕಲಿ ಕ್ರೈಸ್ತರಿಂದ ಮರೆಮಾಡಲ್ಪಟ್ಟಿತು. ಬೈಬಲು ಸಾಮಾನ್ಯ ಜನರ ಕೈಗೆ ಸಿಗದಂತೆ ಪ್ರಯತ್ನಿಸಿದ ಒಂದು ಪಾದ್ರಿ ವರ್ಗವು ಸ್ಥಾಪಿಸಲ್ಪಟ್ಟಿತು. ಕ್ರೈಸ್ತರೆಂದು ಕರೆದುಕೊಳ್ಳುತ್ತಿದ್ದವರ ಸಂಖ್ಯೆಯು ಹೆಚ್ಚಾದರೂ, ಅವರ ಆರಾಧನೆಯು ಶುದ್ಧವಾದದ್ದಾಗಿರಲಿಲ್ಲ. ಕ್ರೈಸ್ತಪ್ರಪಂಚವು ಬೇರೆ ಬೇರೆ ದೇಶಗಳನ್ನು ವ್ಯಾಪಿಸಿ, ಒಂದು ಶಕ್ತಿಶಾಲಿ ಸಂಸ್ಥೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಒಂದು ಪ್ರಧಾನ ಪ್ರಭಾವವಾಯಿತು. ಹೀಗಿದ್ದರೂ, ಅದರ ಮೇಲೆ ದೇವರ ಆಶೀರ್ವಾದವಾಗಲಿ, ಆತನ ಪವಿತ್ರಾತ್ಮವಾಗಲಿ ಇರಲಿಲ್ಲ.

4. ದೇವರ ಉದ್ದೇಶವನ್ನು ಭಂಗಗೊಳಿಸುವ ಸೈತಾನನ ಸಂಚು ಏಕೆ ವಿಫಲವಾಯಿತು?

4 ಆದರೆ, ಯೆಹೋವನ ಉದ್ದೇಶವನ್ನು ಭಂಗಗೊಳಿಸುವ ಸೈತಾನನ ಸಂಚು ಖಂಡಿತವಾಗಿಯೂ ವಿಫಲವಾಯಿತು. ಧರ್ಮಭ್ರಷ್ಟತೆಯ ಗಾಢಾಂಧಕಾರದ ಸಮಯದಲ್ಲೂ, ನಿಜ ಕ್ರೈಸ್ತತ್ವವು ಕೆಲವರಲ್ಲಿ ಜೀವಂತವಾಗಿತ್ತು. ಬೈಬಲಿನ ನಕಲು ಪ್ರತಿಗಳನ್ನು ಮಾಡುತ್ತಿದ್ದವರು, ಅದನ್ನು ನಿಷ್ಕೃಷ್ಟವಾಗಿ ನಕಲು ಮಾಡಲು ತುಂಬ ಶ್ರಮಪಟ್ಟರು. ಹೀಗಿರುವುದರಿಂದ, ಬೈಬಲನ್ನು ಕಲಿಸಲು ತಮಗೆ ಅಧಿಕಾರವಿದೆ ಎಂದು ಹೇಳಿಕೊಳ್ಳುವವರು ಅದರಲ್ಲಿರುವ ಸಂದೇಶಕ್ಕೆ ತಪ್ಪಾರ್ಥವನ್ನು ಕೊಟ್ಟರೂ, ಸ್ವತಃ ಬೈಬಲ್‌ಗೆ ಯಾವುದೇ ಹಾನಿ ತಟ್ಟಲಿಲ್ಲ. ಅಷ್ಟುಮಾತ್ರವಲ್ಲದೆ, ಶತಮಾನಗಳಾದ್ಯಂತ ಜೆರೋಮ್‌ ಮತ್ತು ಟಿಂಡೇಲ್‌ರಂಥ ವಿದ್ವಾಂಸರು, ದೇವರ ವಾಕ್ಯವನ್ನು ಧೈರ್ಯದಿಂದ ಭಾಷಾಂತರಿಸಿ, ವಿತರಿಸಿದರು. ಇದರಿಂದಾಗಿ ಕೋಟಿಗಟ್ಟಲೆ ಜನರಿಗೆ, ಬೈಬಲಿನ ಮತ್ತು ನಕಲಿ ಕ್ರೈಸ್ತತ್ವದ ಪರಿಚಯವಾಯಿತು.

5. “ಸತ್ಯ ಜ್ಞಾನದ” ಕುರಿತಾಗಿ ಪ್ರವಾದಿ ದಾನಿಯೇಲನು ಏನನ್ನು ಮುಂತಿಳಿಸಿದನು?

5 ಕಟ್ಟಕಡೆಗೆ, ದಾನಿಯೇಲನ ಪುಸ್ತಕದಲ್ಲಿ ಮುಂತಿಳಿಸಲ್ಪಟ್ಟಂತೆ ‘ಸತ್ಯ ಜ್ಞಾನವು ಸಮೃದ್ಧವಾಯಿತು’ (NW). ಇದು, ‘ಅಂತ್ಯಕಾಲದಲ್ಲಿ’ ಅಂದರೆ ನಾವೀಗ ಜೀವಿಸುತ್ತಿರುವ ಸಮಯದಲ್ಲಿ ಸಂಭವಿಸಿದೆ. (ದಾನಿಯೇಲ 12:4) ಪವಿತ್ರಾತ್ಮವು, ಲೋಕವ್ಯಾಪಕವಾಗಿ ಸತ್ಯವನ್ನು ಪ್ರೀತಿಸುವವರನ್ನು ಸತ್ಯದೇವರ ಮತ್ತು ಆತನ ಉದ್ದೇಶಗಳ ಕುರಿತಾದ ನಿಷ್ಕೃಷ್ಟ ಜ್ಞಾನದ ಕಡೆಗೆ ನಡೆಸಿದೆ. ಇಷ್ಟೊಂದು ಶತಮಾನಗಳ ಧರ್ಮಭ್ರಷ್ಟ ಬೋಧನೆಯ ನಂತರವೂ, ದೇವರ ವಾಕ್ಯವು ಪ್ರಬಲವಾಗಿದೆ! ಇಂದು ಸುವಾರ್ತೆಯು ಎಲ್ಲ ಕಡೆಗಳಲ್ಲಿ ಘೋಷಿಸಲ್ಪಡುತ್ತಿದೆ. ಮತ್ತು ಇದು ಜನರಿಗೆ ಒಂದು ಹರ್ಷಕರವಾದ ಹೊಸ ಲೋಕದ ನಿರೀಕ್ಷೆಯನ್ನು ಕೊಡುತ್ತಿದೆ. (ಕೀರ್ತನೆ 37:11) ಆಧುನಿಕ ದಿನಗಳಲ್ಲಿ ದೇವರ ವಾಕ್ಯವು ಈ ರೀತಿಯಲ್ಲಿ ಹೇಗೆ ಹೆಚ್ಚುತ್ತಾ ಹೋಗಿದೆಯೆಂಬುದನ್ನು ನಾವೀಗ ಪರೀಕ್ಷಿಸೋಣ.

ಇಂದು ವಾಕ್ಯವು ಹೆಚ್ಚುತ್ತಾ ಹೋದ ರೀತಿ

6. ಇಸವಿ 1914ರೊಳಗೆ ಬೈಬಲ್‌ ವಿದ್ಯಾರ್ಥಿಗಳು ಯಾವ ಸತ್ಯಗಳನ್ನು ಅರ್ಥಮಾಡಿಕೊಂಡರು?

6 ಬೈಬಲ್‌ ಸತ್ಯವು, ಇಂದು ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧರಾಗಿರುವ ಬೈಬಲ್‌ ವಿದ್ಯಾರ್ಥಿಗಳ ಒಂದು ಚಿಕ್ಕ ಗುಂಪನ್ನು, ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಪ್ರಚೋದಿಸಿತು. 1914ರೊಳಗೆ ಬೈಬಲ್‌ ಅವರಿಗೆ ಸಜೀವವಾಗಿಬಿಟ್ಟಿತ್ತು. ದೇವರ ಉದ್ದೇಶಕ್ಕೆ ಸಂಬಂಧಿಸಿದ ಅದ್ಭುತಕರ ಸತ್ಯಗಳನ್ನು ಅವರು ಅರ್ಥಮಾಡಿಕೊಂಡರು. ನಿತ್ಯಜೀವದ ಮಾರ್ಗವನ್ನು ತೆರೆಯಲಿಕ್ಕಾಗಿ ತನ್ನ ಪುತ್ರನನ್ನು ಈ ಭೂಮಿಗೆ ಕಳುಹಿಸುವುದರಲ್ಲಿ ಯೆಹೋವನು ತೋರಿಸಿದ ಪ್ರೀತಿಯು ಅವರ ಮನಮುಟ್ಟಿತು. ಅವರು ದೇವರ ಹೆಸರು ಮತ್ತು ವ್ಯಕ್ತಿತ್ವದ ಬಗ್ಗೆಯೂ ತಿಳಿದುಕೊಂಡು, ಗಣ್ಯಮಾಡಲಾರಂಭಿಸಿದರು. ಅಲ್ಲದೆ, “ಅನ್ಯದೇಶದವರ ಸಮಯಗಳು” ಈಗಾಗಲೇ ಅಂತ್ಯಗೊಂಡಿದೆ ಮತ್ತು ಇದು, ದೇವರ ರಾಜ್ಯ ಸರಕಾರವು ಮಾನವಕುಲಕ್ಕಾಗಿ ಆಶೀರ್ವಾದಗಳನ್ನು ತರುವ ಸಮಯ ಹತ್ತಿರವಿದೆಯೆಂಬುದನ್ನು ಸೂಚಿಸಿತೆಂಬುದನ್ನು ಅವರು ಗ್ರಹಿಸಿದರು. (ಲೂಕ 21:24) ಎಷ್ಟೊಂದು ಮಹಿಮಾಭರಿತವಾದ ಸುವಾರ್ತೆಯಿದು! ಈ ಶಕ್ತಿಶಾಲಿ ಸತ್ಯಗಳನ್ನು ಎಲ್ಲರೊಂದಿಗೆ ಮತ್ತು ಎಲ್ಲ ಕಡೆಗಳಲ್ಲಿ ಹಂಚಬೇಕಾಗಿತ್ತು. ಏಕೆಂದರೆ ಜೀವಗಳು ಗಂಡಾಂತರದಲ್ಲಿದ್ದವು!

7. ಆಧುನಿಕ ಸಮಯಗಳಲ್ಲಿ ಬೈಬಲ್‌ ಸತ್ಯವು ಹೇಗೆ ಪ್ರಬಲವಾಗಿದೆ?

7 ಯೆಹೋವನು ಆ ಆತ್ಮಾಭಿಷಿಕ್ತ ಕ್ರೈಸ್ತರ ಚಿಕ್ಕ ಗುಂಪನ್ನು ಆಶೀರ್ವದಿಸಿದನು. ಇಂದು, ನಿಜ ಕ್ರೈಸ್ತತ್ವವನ್ನು ಪಾಲಿಸುವವರ ಸಂಖ್ಯೆಯು 60 ಲಕ್ಷವನ್ನೂ ಮೀರಿದೆ. ದೇವರ ವಾಕ್ಯವು ಅನೇಕ ದೇಶಗಳಲ್ಲೂ ಹಬ್ಬಿಕೊಂಡಿದೆ. ಇಂದು ಯೆಹೋವನ ಸಾಕ್ಷಿಗಳು 235 ದೇಶಗಳಲ್ಲಿದ್ದಾರೆ. ಇನ್ನೂ ಹೆಚ್ಚಾಗಿ, ಬೈಬಲ್‌ ಸತ್ಯವು ಶಕ್ತಿಯನ್ನು ಪ್ರಯೋಗಿಸುತ್ತಾ, ಧಾರ್ಮಿಕವಾದ ಹಾಗೂ ಬೇರೆ ಎಲ್ಲ ವಿಧದ ಅಡೆತಡೆಗಳನ್ನು ಜಯಿಸಿ ಪ್ರಬಲಗೊಂಡಿದೆ. ಈ ಭೌಗೋಲಿಕ ಸಾರುವ ಚಟುವಟಿಕೆಯು, ಯೇಸು ರಾಜ್ಯಾಧಿಕಾರದಲ್ಲಿ ಪ್ರತ್ಯಕ್ಷನಾಗಿದ್ದಾನೆಂಬುದರ ನಿರಾಕರಿಸಲಾಗದಂಥ ರುಜುವಾತಿಗೆ ಹೆಚ್ಚನ್ನು ಕೂಡಿಸುತ್ತದೆ.​—ಮತ್ತಾಯ 24:​3, 14.

8. ಯೆಹೋವನ ಸಾಕ್ಷಿಗಳಲ್ಲಾಗಿರುವ ವೃದ್ಧಿಯ ಕುರಿತಾಗಿ ಕೆಲವರು ಏನು ಹೇಳಿದ್ದಾರೆ?

8 ಪ್ರಥಮ ಶತಮಾನದಲ್ಲಿ ಕ್ರೈಸ್ತತ್ವದ ದಂಗುಬಡಿಸುವಂಥ ಅಭಿವೃದ್ಧಿಯ ಕುರಿತಾಗಿ ಇತಿಹಾಸಗಾರರು ಹೇಳಿಕೆಗಳನ್ನು ನೀಡುತ್ತಿದ್ದಂತೆ, ಆಧುನಿಕ ಸಮಯಗಳಲ್ಲಿ ಯೆಹೋವನ ಜನರ ವೃದ್ಧಿಯ ಕುರಿತಾಗಿಯೂ ಅನೇಕ ವಿದ್ವಾಂಸರು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅಮೆರಿಕದಲ್ಲಿ ಇಬ್ಬರು ವಿದ್ವಾಂಸರು ಜಂಟಿಯಾಗಿ ಹೀಗೆ ಬರೆದರು: “ಗತ 75 ವರ್ಷಗಳಲ್ಲಿ, ಯೆಹೋವನ ಸಾಕ್ಷಿಗಳು ಸತತವಾಗಿ ಅಸಾಧಾರಣವಾದ ವೃದ್ಧಿಯನ್ನು ಪಡೆದಿದ್ದಾರೆ . . . ಮತ್ತು ಇದು ಭೌಗೋಲಿಕವಾಗಿ ನಡೆದಿದೆ.” ಪೂರ್ವ ಆಫ್ರಿಕದ ಒಂದು ನಿಯತಕಾಲಿಕ ಪತ್ರಿಕೆಯು, ಯೆಹೋವನ ಸಾಕ್ಷಿಗಳ ಕುರಿತಾಗಿ ಹೇಳುವಾಗ, ಅದು “ಲೋಕದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ಮತ್ತು ತುಂಬ ಮಾನ್ಯತೆಯನ್ನು ಪಡೆದಿರುವ ಧರ್ಮಗಳಲ್ಲಿ ಒಂದಾಗಿದ್ದು, ಬೈಬಲಿನ ಬೋಧನೆಗಳಿಗೆ ಸಂಪೂರ್ಣವಾಗಿ ಅಂಟಿಕೊಂಡಿರುವುದಕ್ಕಾಗಿ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧವಾಗಿದೆ” ಎಂದು ಹೇಳಿತು. ಮತ್ತು ಯೂರೋಪಿನಲ್ಲಿ ಪ್ರಕಾಶಿಸಲ್ಪಟ್ಟ, ಒಂದು ಸಂಪ್ರದಾಯವಾದಿ ಕ್ಯಾಥೊಲಿಕ್‌ ನಿಯತಕಾಲಿಕ ಪತ್ರಿಕೆಯು “ಯೆಹೋವನ ಸಾಕ್ಷಿಗಳ ಪ್ರಚಂಡವಾದ ವೃದ್ಧಿಯ” ಕುರಿತಾಗಿ ಸೂಚಿಸಿ ಮಾತಾಡಿತು. ಈ ವೃದ್ಧಿಗೆ ಏನು ಕಾರಣ?

ಇಂದು ಪವಿತ್ರಾತ್ಮವು ಕಾರ್ಯೋನ್ಮುಖವಾಗಿದೆ

9. (ಎ) ಇಂದು ದೇವರ ವಾಕ್ಯವು ಪ್ರಬಲವಾಗುತ್ತಿರುವುದಕ್ಕೆ ಮುಖ್ಯ ಕಾರಣ ಏನಾಗಿದೆ? (ಬಿ) ಯೆಹೋವನು ಜನರನ್ನು ತನ್ನ ಕಡೆಗೆ ಹೇಗೆ ಎಳೆಯುತ್ತಾನೆ?

9 ದೇವರ ವಾಕ್ಯವು ಇಂದು ಪ್ರಬಲವಾಗಿರಲು ಒಂದು ಮುಖ್ಯ ಕಾರಣ, ಯೆಹೋವನ ಆತ್ಮವು ಶಕ್ತಿಶಾಲಿಯಾಗಿ ಕಾರ್ಯೋನ್ಮುಖವಾಗಿರುವುದೇ ಆಗಿದೆ. ಪ್ರಥಮ ಶತಮಾನದಲ್ಲೂ ಹೀಗೆಯೇ ಆಯಿತು. ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ದೇವರು, ಯೋಗ್ಯ ಪ್ರವೃತ್ತಿಯುಳ್ಳವರನ್ನು ಕೋಮಲವಾಗಿ ಆಕರ್ಷಿಸುತ್ತಾನೆ, ಅಂದರೆ ಅವರ ಹೃದಯಗಳನ್ನು ಆಕರ್ಷಿಸುತ್ತಾನೆಂಬುದನ್ನು ಈ ಮಾತುಗಳು ಸೂಚಿಸುತ್ತವೆ. ತನ್ನ ಸಾಕ್ಷಿಗಳ ಸಾರುವ ಚಟುವಟಿಕೆಯ ಮೂಲಕ ಯೆಹೋವನು ತನ್ನ ಸೇವೆಗಾಗಿ ‘ಇಷ್ಟವಸ್ತುಗಳನ್ನು,’ ಲೋಕದ ನಮ್ರ, ಕುರಿಗಳಂತಹ ಜನರನ್ನು ಸೆಳೆಯುತ್ತಿದ್ದಾನೆ.​—ಹಗ್ಗಾಯ 2:​6, 7.

10. ಯಾವ ರೀತಿಯ ಜನರು ದೇವರ ವಾಕ್ಯಕ್ಕೆ ಪ್ರತಿಕ್ರಿಯೆಯನ್ನು ತೋರಿಸಿದ್ದಾರೆ?

10 ದೇವರ ವಾಕ್ಯವನ್ನು ಭೂಮಿಯ ಕಟ್ಟಕಡೆಯ ವರೆಗೂ ಕೊಂಡೊಯ್ಯುವಂತೆ ಪವಿತ್ರಾತ್ಮವು ದೇವಜನರಿಗೆ ಶಕ್ತಿಯನ್ನು ಕೊಟ್ಟಿದೆ. ಅಷ್ಟುಮಾತ್ರವಲ್ಲದೆ, ಎಲ್ಲ ರೀತಿಯ ಜನರು ಸುವಾರ್ತೆಗೆ ಪ್ರತಿಕ್ರಿಯೆಯನ್ನು ತೋರಿಸುವಂತೆ ಅದು ಅವರನ್ನು ಪ್ರಚೋದಿಸಿದೆ. ಹೌದು, ದೇವರ ವಾಕ್ಯವನ್ನು ಸ್ವೀಕರಿಸುವವರು ‘ಸಕಲ ಜನಾಂಗ ಕುಲ ಪ್ರಜೆ ಭಾಷೆಗಳಿಂದ’ ಬಂದವರಾಗಿದ್ದಾರೆ. (ಪ್ರಕಟನೆ 5:9; 7:​9, 10) ಅವರಲ್ಲಿ ಶ್ರೀಮಂತರಿದ್ದಾರೆ, ಬಡವರಿದ್ದಾರೆ, ಉಚ್ಚ ಶಿಕ್ಷಣ ಪಡೆದವರು ಮತ್ತು ಅನಕ್ಷರಸ್ಥರೂ ಇದ್ದಾರೆ. ಕೆಲವರು ದೇವರ ವಾಕ್ಯವನ್ನು ಯುದ್ಧ ಮತ್ತು ಕಠಿನ ಹಿಂಸೆಯಂಥ ಪರಿಸ್ಥಿತಿಗಳಲ್ಲಿ ಸ್ವೀಕರಿಸಿದ್ದಾರೆ. ಇತರರು ಶಾಂತಿಸಮೃದ್ಧಿಯ ಸಮಯದಲ್ಲಿ ಸ್ವೀಕರಿಸಿದ್ದಾರೆ. ವಿಭಿನ್ನ ಸರಕಾರಗಳಡಿಯಲ್ಲಿ, ಎಲ್ಲ ಸಂಸ್ಕೃತಿಗಳಲ್ಲಿ, ಸೆರೆಶಿಬಿರಗಳಿಂದ ಹಿಡಿದು ಅರಮನೆಯ ವರೆಗೂ ಸ್ತ್ರೀಪುರುಷರು ಸುವಾರ್ತೆಯ ಕಡೆಗೆ ಉತ್ತಮ ಪ್ರತಿಕ್ರಿಯೆಯನ್ನು ತೋರಿಸಿದ್ದಾರೆ.

11. ಪವಿತ್ರಾತ್ಮವು ದೇವಜನರ ಜೀವಿತಗಳಲ್ಲಿ ಹೇಗೆ ಕಾರ್ಯನಡೆಸುತ್ತಿದೆ, ಮತ್ತು ಯಾವ ತಾರತಮ್ಯವು ತೋರಿಬರುತ್ತಿದೆ?

11 ದೇವಜನರ ನಡುವೆ ಬೆರಗುಗೊಳಿಸುವಂಥ ವೈವಿಧ್ಯತೆಯಿದ್ದರೂ ಅವರು ಐಕ್ಯತೆಯಿಂದಿರುತ್ತಾರೆ. (ಕೀರ್ತನೆ 133:1-3) ದೇವರನ್ನು ಸೇವಿಸುತ್ತಿರುವವರ ಜೀವಿತಗಳಲ್ಲಿ ಪವಿತ್ರಾತ್ಮವು ಕಾರ್ಯೋನ್ಮುಖವಾಗಿದೆ ಎಂಬ ರುಜುವಾತಿಗೆ ಇದು ಕೂಡಿಸುತ್ತದೆ. ದೇವರಾತ್ಮವು ಒಳಿತಿಗಾಗಿರುವ ಶಕ್ತಿಯಾಗಿದೆ. ಆತನ ಸೇವಕರು ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ ಮತ್ತು ಶಮೆದಮೆಯಂಥ ಗುಣಗಳನ್ನು ಪ್ರದರ್ಶಿಸುವಂತೆ ಅದು ಸಹಾಯಮಾಡುತ್ತದೆ. (ಗಲಾತ್ಯ 5:​22, 23) “ಆಗ ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ” ಎಂದು ಪ್ರವಾದಿಯಾದ ಮಲಾಕಿಯನು ಎಷ್ಟೋ ಸಮಯದ ಹಿಂದೆ ಹೇಳಿದ ವಿಷಯವನ್ನು ನಾವು ಇಂದು ಸ್ಪಷ್ಟವಾಗಿ ಗ್ರಹಿಸಬಹುದು.​—ಮಲಾಕಿಯ 3:18.

ದೇವರ ವಾಕ್ಯವು ಹುರುಪಿನ ಕೆಲಸಗಾರರಲ್ಲಿ ಪ್ರಬಲವಾಗಿದೆ

12. ಸಾರುವ ಕೆಲಸದ ಕುರಿತಾಗಿ ಯೆಹೋವನ ಸಾಕ್ಷಿಗಳಿಗೆ ಹೇಗನಿಸುತ್ತದೆ, ಮತ್ತು ತಮ್ಮ ಸಾರುವ ಚಟುವಟಿಕೆಯ ಕಡೆಗೆ ಅವರು ಯಾವ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ?

12 ಇಂದು ಯೆಹೋವನ ಸಾಕ್ಷಿಗಳು, ಚರ್ಚಿನ ಸದಸ್ಯರಂತೆ ಸಾರುವ ವಿಷಯದಲ್ಲಿ ನಿಷ್ಕ್ರಿಯರಾಗಿರುವುದಿಲ್ಲ. ಅವರು ಸಾರುವ ಕೆಲಸದಲ್ಲಿ ಸಕ್ರಿಯವಾದ ಪಾತ್ರವನ್ನು ವಹಿಸುತ್ತಾರೆ. ಆದಿ ಕ್ರೈಸ್ತರಂತೆ, ಅವರು ದೇವರ ಚಿತ್ತವನ್ನು ನಡೆಸಲು ತಮ್ಮನ್ನೇ ಸಿದ್ಧಮನಸ್ಸಿನಿಂದ ಸಮರ್ಪಿಸುತ್ತಾರೆ ಮತ್ತು ಇತರರು ಯೆಹೋವನ ರಾಜ್ಯ ವಾಗ್ದಾನಗಳ ಕುರಿತಾಗಿ ಕಲಿಯುವಂತೆ ಸಹಾಯಮಾಡಲು ಪ್ರಯತ್ನಿಸುತ್ತಾರೆ. ಅವರು ದೇವರ ಜೊತೆಕೆಲಸಗಾರರಾಗಿದ್ದಾರೆ. ಮತ್ತು ಆತನ ಪವಿತ್ರಾತ್ಮದೊಂದಿಗೆ ಹೊಂದಿಕೆಯಲ್ಲಿ ಇತರರನ್ನು ಯೆಹೋವನ ಸೇವೆಗೆ ಒಟ್ಟುಗೂಡಿಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ ಅವರು, ನಂಬದಿರುವ ಮಾನವಕುಲಕ್ಕಾಗಿ ಯೆಹೋವನಿಗಿರುವ ಕರುಣೆ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತಾರೆ. ಇದನ್ನು ಅವರು ಜನರ ನಿರಾಸಕ್ತಿ, ಅಪಹಾಸ್ಯ ಹಾಗೂ ಹಿಂಸೆಯ ಎದುರಿನಲ್ಲೂ ಮಾಡುತ್ತಾರೆ. ಸುವಾರ್ತೆಗೆ ಸಿಗುವ ಮಿಶ್ರ ಪ್ರತಿಕ್ರಿಯೆಗಳನ್ನು ತಿಳಿಸುತ್ತಾ ಯೇಸು ತನ್ನ ಹಿಂಬಾಲಕರನ್ನು ಮುಂಚೆಯೇ ತಯಾರಿಸಿದನು. ಅವನಂದದ್ದು: “ದಣಿಗಿಂತ ಆಳು ದೊಡ್ಡವನಲ್ಲ . . . ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು; ಅವರು ನನ್ನ ಮಾತನ್ನು ಕೈಕೊಂಡು ನಡೆದರೆ ನಿಮ್ಮ ಮಾತನ್ನು ಸಹ ಕೈಕೊಂಡು ನಡೆಯುವರು.”​—ಯೋಹಾನ 15:20.

13. ಕ್ರೈಸ್ತಪ್ರಪಂಚದಲ್ಲಿ ಇಲ್ಲದಿರುವ ಯಾವ ವೈಶಿಷ್ಟ್ಯಗಳು ಯೆಹೋವನ ಸಾಕ್ಷಿಗಳ ಬಳಿ ಸಮೃದ್ಧವಾಗಿವೆ?

13 ಇಂದಿನ ಯೆಹೋವನ ಸಾಕ್ಷಿಗಳು ಮತ್ತು ಪ್ರಥಮ ಶತಮಾನದ ನಿಜ ಕ್ರೈಸ್ತರ ನಡುವೆ ಇರುವ ಸಮಾನತೆಗಳನ್ನು ನೋಡುವಾಗ, ನಮಗೆ ಖಂಡಿತವಾಗಿಯೂ ವಿಸ್ಮಯವಾಗುತ್ತದೆ. ಅದೇ ಸಮಯದಲ್ಲಿ, ಇಂದು ಯೆಹೋವನ ಸಾಕ್ಷಿಗಳು ಹಾಗೂ ಕ್ರೈಸ್ತಪ್ರಪಂಚದ ನಡುವಿನ ವ್ಯತ್ಯಾಸವು ಸಹ ತೀರ ಗಮನಾರ್ಹವಾಗಿದೆ. ಆದಿ ಕ್ರೈಸ್ತರಲ್ಲಿ ಸಾರುವುದಕ್ಕಾಗಿದ್ದ ಹುರುಪಿನ ಕುರಿತಾಗಿ ಬರೆದ ನಂತರ, ಒಬ್ಬ ವಿದ್ವಾಂಸನು ಹೀಗೆ ಪ್ರಲಾಪಿಸಿದನು: “ಚರ್ಚಿನ ಸದ್ಯದ ಕಾರ್ಯನೀತಿಯಲ್ಲಿ ಒಂದು ಬದಲಾವಣೆಯಾಗಬೇಕು. ಸಾರುವ ಕೆಲಸವು, ದೀಕ್ಷಾಸ್ನಾನ ಪಡೆದಿರುವ ಪ್ರತಿಯೊಬ್ಬ ಕ್ರೈಸ್ತನಿಗಿರುವ ಆವಶ್ಯಕ ಕರ್ತವ್ಯವೆಂದು ಪುನಃ ಒಮ್ಮೆ ಪರಿಗಣಿಸಲ್ಪಡಬೇಕು. ಮತ್ತು ನಂಬಿಕೆಯಿಲ್ಲದವರಿಗಿಂತಲೂ ಶ್ರೇಷ್ಠವಾಗಿರುವ ಗುಣಮಟ್ಟದ ಜೀವಿತಗಳ ಮೂಲಕ ಅದು ರುಜುಪಡಿಸಲ್ಪಡಬೇಕು. ಇಲ್ಲದಿದ್ದರೆ, ನಾವು ಪ್ರಗತಿಮಾಡುವ ಸಾಧ್ಯತೆ ತುಂಬ ಕಡಿಮೆ.” ಕ್ರೈಸ್ತಪ್ರಪಂಚದಲ್ಲಿಲ್ಲದಿರುವ ಈ ವೈಶಿಷ್ಟ್ಯಗಳೇ ಯೆಹೋವನ ಸಾಕ್ಷಿಗಳ ಬಳಿ ಸಮೃದ್ಧವಾಗಿವೆ! ಅವರಿಗಿರುವ ನಂಬಿಕೆಯು ಜೀವಂತವಾದದ್ದು, ನಿಜವಾದದ್ದು ಮತ್ತು ಬೈಬಲ್‌ ಸತ್ಯದ ಮೇಲೆ ಆಧಾರಿತವಾದದ್ದಾಗಿದೆ. ಈ ನಂಬಿಕೆಯನ್ನು ಅವರು, ಕಿವಿಗೊಡಲು ಸಿದ್ಧರಿರುವವರೆಲ್ಲರೊಂದಿಗೆ ಹಂಚಿಕೊಳ್ಳಲು ಪ್ರಚೋದಿಸಲ್ಪಟ್ಟಿದ್ದಾರೆ.​—1 ತಿಮೊಥೆಯ 2:​3, 4.

14. ತನ್ನ ಶುಶ್ರೂಷೆಯ ಬಗ್ಗೆ ಯೇಸುವಿಗೆ ಹೇಗನಿಸಿತು, ಮತ್ತು ಇಂದು ಅವನ ಶಿಷ್ಯರು ಯಾವ ಮನೋಭಾವವನ್ನು ತೋರಿಸುತ್ತಾರೆ?

14 ಯೇಸು ತನ್ನ ಶುಶ್ರೂಷೆಗೆ ತುಂಬ ಮಹತ್ವವನ್ನು ಕೊಟ್ಟನು. ಅದು ಅವನ ಮುಖ್ಯ ಚಿಂತೆಯಾಗಿತ್ತು. ಅವನು ಪಿಲಾತನಿಗೆ ಅಂದದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ಯೇಸುವಿನಂತೆಯೇ ದೇವರ ಜನರಿಗೂ ಅನಿಸುತ್ತದೆ. ಬೈಬಲ್‌ ಸತ್ಯವು ಅವರ ಹೃದಯದಲ್ಲಿರುವುದರಿಂದ, ಅದನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ಹಂಚಿಕೊಳ್ಳಲು ಅವರು ಮಾರ್ಗಗಳನ್ನು ಹುಡುಕುತ್ತಾರೆ. ಇವುಗಳಲ್ಲಿ ಕೆಲವು ಮಾರ್ಗಗಳು ಅದ್ಭುತಕರವಾದ ಬುದ್ಧಿವಂತಿಕೆಯನ್ನು ತೋರಿಸುತ್ತವೆ.

15. ಸುವಾರ್ತೆಯನ್ನು ಸಾರುವುದರಲ್ಲಿ ಕೆಲವರು ಹೇಗೆ ಬುದ್ಧಿವಂತಿಕೆಯನ್ನು ತೋರಿಸಿದ್ದಾರೆ?

15 ದಕ್ಷಿಣ ಅಮೆರಿಕದ ಒಂದು ದೇಶದಲ್ಲಿ, ಸಾಕ್ಷಿಗಳು ಆ್ಯಮಸಾನ್‌ ನದಿಯ ಒಂದು ಉಪನದಿಯ ಪ್ರದೇಶಕ್ಕೆ ಹೋಗಿ, ಅಲ್ಲಿನ ಜನರಿಗೆ ಸತ್ಯವನ್ನು ಸಾರಿದರು. 1995ರಲ್ಲಿ ಆಂತರಿಕ ಕಲಹದಿಂದಾಗಿ, ಆ ನದಿಯಲ್ಲಿ ಪ್ರಜೆಗಳು ಯಾನಮಾಡುವುದನ್ನು ನಿಲ್ಲಿಸಲಾಯಿತು. ಆದರೆ ಆಸಕ್ತ ಜನರಿಗೆ ಬೈಬಲ್‌ ಪ್ರಕಾಶನಗಳ ಸರಬರಾಯಿಯನ್ನು ಮುಂದುವರಿಸಲು ಸಾಕ್ಷಿಗಳು ದೃಢಸಂಕಲ್ಪವುಳ್ಳವರಾಗಿದ್ದರು. ಆದುದರಿಂದ ಅವರು ಸಂದೇಶವನ್ನು ನದಿಯಲ್ಲಿ ತೇಲಿಬಿಡುವ ನಿರ್ಣಯವನ್ನು ಮಾಡಿದರು. ಅವರು ಪತ್ರಗಳನ್ನು ಬರೆದು, ಅವುಗಳನ್ನು ಖಾಲಿಯಾಗಿರುವ ಪ್ಲಾಸ್ಟಿಕ್‌ ಬಾಟಲಿಗಳೊಳಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳೊಂದಿಗೆ ಇಡುತ್ತಿದ್ದರು. ನಂತರ ಅವರು ಆ ಬಾಟಲಿಗಳನ್ನು ನದಿಯಲ್ಲಿ ಎಸೆಯುತ್ತಿದ್ದರು. ಇದನ್ನು ಅವರು ನಾಲ್ಕೂವರೆ ವರ್ಷಗಳ ವರೆಗೆ ಮಾಡಿದರು. ಆನಂತರ, ಪ್ರಜೆಗಳು ಪುನಃ ಆ ನದಿಯನ್ನು ಉಪಯೋಗಿಸುವಂತೆ ಅನುಮತಿಸಲಾಯಿತು. ಆ ನದೀತೀರದ ಪ್ರದೇಶದಲ್ಲೆಲ್ಲ, ಆ ಸಾಹಿತ್ಯಕ್ಕಾಗಿ ಜನರು ಸಾಕ್ಷಿಗಳಿಗೆ ಉಪಕಾರವನ್ನು ಹೇಳಿದರು. ಬೈಬಲ್‌ ವಿದ್ಯಾರ್ಥಿಯಾಗಿದ್ದ ಒಬ್ಬ ಮಹಿಳೆಯು, ಅವರನ್ನು ಆಲಂಗಿಸಿ, ಕಣ್ಣೀರು ಸುರಿಸುತ್ತಾ ಹೇಳಿದ್ದು: “ನಿಮ್ಮನ್ನು ಪುನಃ ಎಂದಿಗೂ ನೋಡದಿರುವೆನೆಂದು ನಾನು ನೆನಸಿದೆ. ಆದರೆ ಆ ಬಾಟಲಿಗಳಲ್ಲಿ ನಾನು ಸಾಹಿತ್ಯವನ್ನು ಪಡೆಯಲಾರಂಭಿಸಿದಾಗ, ನೀವಿನ್ನೂ ನನ್ನನ್ನು ಮರೆತಿಲ್ಲವೆಂದು ನನಗೆ ತಿಳಿಯಿತು.” ಆ ನದಿಯುದ್ದಕ್ಕೂ ಜೀವಿಸುತ್ತಿದ್ದ ಇತರ ಜನರು, ತಾವು ಆ ಪತ್ರಿಕೆಗಳನ್ನು ಪುನಃ ಪುನಃ ಓದುತ್ತಿದ್ದೇವೆಂದು ಹೇಳಿದರು. ಅನೇಕ ವಸಾಹತುಗಳಿಗೆ ಒಂದು “ಅಂಚೆ ಇಲಾಖೆ” ಇತ್ತು. ಇದು ಒಂದು ಸಣ್ಣ ನೀರುಸುಳಿಯಾಗಿದ್ದು, ತೇಲಿಬರುತ್ತಿದ್ದ ಎಲ್ಲ ವಸ್ತುಗಳು ಅಲ್ಲಿ ಬಂದು ತಾತ್ಕಾಲಿಕವಾಗಿ ಶೇಖರಿಸಲ್ಪಡುತ್ತಿದ್ದವು. ಈ ಆಸಕ್ತ ವ್ಯಕ್ತಿಗಳು ಅಲ್ಲಿಗೆ ಪದೇ ಪದೇ ಬಂದು, ನದಿಯ ಇನ್ನೊಂದು ತುದಿಯಿಂದ ಬಂದಿರಬಹುದಾದ “ಟಪಾಲಿಗಾಗಿ” ಹುಡುಕುತ್ತಿದ್ದರು.

16. ನಮ್ಮನ್ನೇ ಸಿದ್ಧವಾಗಿರಿಸುವುದು, ಕೆಲವೊಮ್ಮೆ ಶಿಷ್ಯರನ್ನಾಗಿ ಮಾಡುವುದಕ್ಕೆ ಹೇಗೆ ದಾರಿಯನ್ನು ತೆರೆಯುತ್ತದೆ?

16 ಸುವಾರ್ತೆಯ ಸಾರುವಿಕೆಯನ್ನು ಯೆಹೋವ ದೇವರು ಹಾಗೂ ಆತನ ಶಕ್ತಿಶಾಲಿ ದೇವದೂತರು ನಿರ್ದೇಶಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. (ಪ್ರಕಟನೆ 14:6) ಶಿಷ್ಯರನ್ನು ಮಾಡುವ ಅವಕಾಶಗಳು ಕೆಲವೊಮ್ಮೆ ಅನಿರೀಕ್ಷಿತವಾಗಿ ಸಿಗುತ್ತವೆ. ನಾವು ಮಾತ್ರ ಯಾವಾಗಲೂ ಅಲ್ಲಿದ್ದುಕೊಂಡು ಸಿದ್ಧರಾಗಿರಬೇಕು ಅಷ್ಟೇ. ಕೆನ್ಯಾದ ನೈರೋಬಿಯಲ್ಲಿ ಕ್ಷೇತ್ರ ಸೇವೆಗೆ ಹೋಗಿದ್ದ ಇಬ್ಬರು ಕ್ರೈಸ್ತ ಮಹಿಳೆಯರು, ತಮಗೆ ನೇಮಿಸಲ್ಪಟ್ಟಿದ್ದ ಮನೆಗಳಲ್ಲಿ ಸಾರಿಮುಗಿಸಿದ್ದರಷ್ಟೇ. ಅಷ್ಟರಲ್ಲಿ, ಹಠಾತ್ತಾಗಿ ಎಲ್ಲಿಂದಲೊ ಒಬ್ಬ ಯುವ ಸ್ತ್ರೀಯು ಅವರ ಬಳಿ ಬಂದು, ಸಂತೋಷದಿಂದ ಹೇಳಿದ್ದು: “ನಿಮ್ಮಂಥ ಜನರನ್ನೇ ಭೇಟಿಯಾಗಲಿಕ್ಕಾಗಿ ನಾನು ಪ್ರಾರ್ಥನೆಮಾಡುತ್ತಿದ್ದೆ.” ಆ ಕ್ಷಣವೇ ಸಾಕ್ಷಿಗಳು ಒಂದು ಚರ್ಚೆಗಾಗಿ ತನ್ನ ಮನೆಗೆ ಬರುವಂತೆ ಅವಳು ಬೇಡಿಕೊಂಡಳು. ಅದೇ ದಿನ ಅವಳೊಂದಿಗೆ ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸಲಾಯಿತು. ಆ ಯುವ ಸ್ತ್ರೀಯು, ಈ ಇಬ್ಬರು ಕ್ರೈಸ್ತರನ್ನು ಅಷ್ಟು ತುರ್ತಾಗಿ ಭೇಟಿಯಾದದ್ದು ಏಕೆ? ಸುಮಾರು ಎರಡು ವಾರಗಳ ಹಿಂದೆ ಅವಳ ಹೆಣ್ಣುಮಗು ತೀರಿಕೊಂಡಿತ್ತು. ಆದುದರಿಂದ ಒಬ್ಬ ಹುಡುಗನ ಬಳಿ, “ಸತ್ತ ಪ್ರಿಯ ಜನರಿಗಾಗಿ ಯಾವ ನಿರೀಕ್ಷೆ?” ಎಂಬ ಟ್ರ್ಯಾಕ್ಟನ್ನು ನೋಡಿದಾಗ, ಅದನ್ನು ಓದಬೇಕೆಂಬ ತೀವ್ರ ಅಪೇಕ್ಷೆ ಅವಳಲ್ಲಿ ಹುಟ್ಟಿತು. ಅದನ್ನು ತನಗೆ ಕೊಡುವಂತೆ ಆ ಹುಡುಗನಿಗೆ ಕೇಳಿದಳು. ಅವನು ನಿರಾಕರಿಸಿದನು. ಆದರೆ ತನಗೆ ಆ ಟ್ರ್ಯಾಕ್ಟನ್ನು ಕೊಟ್ಟ ಸಾಕ್ಷಿಗಳ ಕಡೆಗೆ ಕೈತೋರಿಸಿದನು. ಸ್ವಲ್ಪ ಸಮಯದೊಳಗೆಯೇ ಆ ಸ್ತ್ರೀಯು ತುಂಬ ಒಳ್ಳೆಯ ಆತ್ಮಿಕ ಪ್ರಗತಿಯನ್ನು ಮಾಡಿದಳು ಮತ್ತು ತನ್ನ ಮಗುವನ್ನು ಕಳೆದುಕೊಂಡಿದ್ದರ ನೋವನ್ನು ನಿಭಾಯಿಸಲು ಸ್ವಲ್ಪಮಟ್ಟಿಗೆ ಶಕ್ತಳಾದಳು.

ದೇವರ ವಾಕ್ಯವು ಪ್ರಬಲವಾಗಲೇಬೇಕು!

17-19. ಪ್ರಾಯಶ್ಚಿತ್ತದ ಮೂಲಕ ಯೆಹೋವನು ಮಾನವಕುಲಕ್ಕೆ ಎಂಥ ಪ್ರೀತಿಯನ್ನು ತೋರಿಸಿದ್ದಾನೆ?

17 ಇಡೀ ಲೋಕದಲ್ಲಿ ದೇವರ ವಾಕ್ಯವು ಹೆಚ್ಚುತ್ತಾ ಹೋಗುತ್ತಿರುವುದಕ್ಕೂ, ಕ್ರಿಸ್ತ ಯೇಸುವಿನ ಪ್ರಾಯಶ್ಚಿತ್ತ ಯಜ್ಞಕ್ಕೂ ನಿಕಟವಾದ ಸಂಬಂಧವಿದೆ. ಪ್ರಾಯಶ್ಚಿತ್ತದಂತೆಯೇ, ಸಾರುವ ಕೆಲಸವು ಎಲ್ಲ ಕಡೆಗಳಲ್ಲಿರುವ ಜನರಿಗಾಗಿ ಯೆಹೋವನಿಗಿರುವ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”​—ಯೋಹಾನ 3:16.

18 ಪ್ರಾಯಶ್ಚಿತ್ತವನ್ನು ಒದಗಿಸುವ ಮೂಲಕ ಯೆಹೋವನು ತೋರಿಸಿರುವ ಪ್ರೀತಿಯ ಕುರಿತಾಗಿ ಯೋಚಿಸಿರಿ. ದೇವರು ಅನೇಕಾನೇಕ ಯುಗಗಳ ವರೆಗೆ, ‘ದೇವರ ಸೃಷ್ಟಿಗೆ ಮೂಲನಾಗಿರುವ’ ತನ್ನ ಪ್ರಿಯ, ಒಬ್ಬನೇ ಮಗನೊಂದಿಗೆ ಅತ್ಯಾಪ್ತವಾದ ಸಂಬಂಧದಲ್ಲಿ ಆನಂದಿಸಿದ್ದನು. (ಪ್ರಕಟನೆ 3:14) ಯೇಸು ತನ್ನ ತಂದೆಯನ್ನು ತುಂಬ ಪ್ರೀತಿಸಿದನು ಮತ್ತು ಯೆಹೋವನು ಕೂಡ, “ಲೋಕವು ಹುಟ್ಟುವದಕ್ಕಿಂತ ಮುಂಚೆಯೇ” ತನ್ನ ಮಗನನ್ನು ಪ್ರೀತಿಸಿದನು. (ಯೋಹಾನ 14:31; 17:24) ಆದರೂ, ಮನುಷ್ಯರಿಗೆ ನಿತ್ಯ ಜೀವ ಸಿಗಲಿ ಎಂಬ ಕಾರಣಕ್ಕೋಸ್ಕರ ಈ ಪ್ರಿಯ ಮಗನು ಸಾಯುವಂತೆ ಯೆಹೋವನು ಅನುಮತಿಸಿದನು. ಇದು, ಮಾನವಕುಲಕ್ಕಾಗಿರುವ ಪ್ರೀತಿಯ ಭಯಭಕ್ತಿ ಹುಟ್ಟಿಸುವ ಅಭಿವ್ಯಕ್ತಿಯೇ ಸರಿ!

19ಯೋಹಾನ 3:17 ತಿಳಿಸುವುದು: “ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ.” ಹೀಗೆ ಯೆಹೋವನು ತನ್ನ ಮಗನನ್ನು ತೀರ್ಪುಮಾಡುವ ಅಥವಾ ಖಂಡಿಸುವ ಕೆಲಸಕ್ಕಾಗಿ ಅಲ್ಲ ಬದಲಾಗಿ ಪ್ರೀತಿಯ ಕಾರ್ಯದ ನಿಮಿತ್ತ ಕಳುಹಿಸಿದನು. ಇದು ಪೇತ್ರನ ಮಾತುಗಳೊಂದಿಗೆ ಹೊಂದಿಕೆಯಲ್ಲಿದೆ: ‘ಯಾವನಾದರೂ ನಾಶವಾಗುವದರಲ್ಲಿ [ಯೆಹೋವನು] ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುತ್ತಾನೆ.’​—2 ಪೇತ್ರ 3:9.

20. ರಕ್ಷಣೆಯು ಸುವಾರ್ತೆಯ ಸಾರುವಿಕೆಯೊಂದಿಗೆ ಹೇಗೆ ಸಂಬಂಧಿಸಿದೆ?

20 ಯೆಹೋವನು ಸ್ವತಃ ಭಾರಿ ಬೆಲೆಯನ್ನು ತೆತ್ತು, ರಕ್ಷಣೆಗಾಗಿರುವ ಕಾನೂನುಬದ್ಧ ಆಧಾರವನ್ನು ಒದಗಿಸಿರುವುದರಿಂದ, ಸಾಧ್ಯವಾದಷ್ಟು ಜನರು ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಆತನು ಬಯಸುತ್ತಾನೆ. ಅಪೊಸ್ತಲ ಪೌಲನು ಬರೆದುದು: “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ಬರೆದದೆ. ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?”​—ರೋಮಾಪುರ 10:13, 14.

21. ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಸಿಕ್ಕಿರುವ ಅವಕಾಶದ ಕುರಿತಾಗಿ ನಮಗೆ ಹೇಗನಿಸಬೇಕು?

21 ಈ ಭೌಗೋಲಿಕ ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಪಾಲ್ಗೊಳ್ಳುವುದು ಎಂಥ ಅದ್ಭುತಕರವಾದ ಸುಯೋಗವಾಗಿದೆ! ಅದೊಂದು ಸುಲಭದ ಕೆಲಸವಲ್ಲ. ಆದರೆ ತನ್ನ ಜನರು ಸತ್ಯಕ್ಕನುಗುಣವಾಗಿ ಜೀವಿಸುವುದನ್ನು ಮತ್ತು ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದನ್ನು ನೋಡುವಾಗ ಯೆಹೋವನು ಎಷ್ಟು ಹರ್ಷಿಸುತ್ತಿರಬಹುದು! ಆದುದರಿಂದ ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ದೇವರಾತ್ಮವು ಮತ್ತು ನಿಮ್ಮ ಹೃದಯದಲ್ಲಿರುವ ಪ್ರೀತಿಯು, ಈ ಕೆಲಸದಲ್ಲಿ ಪಾಲ್ಗೊಳ್ಳುವಂತೆ ನಿಮ್ಮನ್ನು ಪ್ರಚೋದಿಸಲಿ. ಯೆಹೋವ ದೇವರು, “ನೀತಿಯು ವಾಸವಾಗಿರುವ” ಮಹಿಮಾಭರಿತವಾದ “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ತರುವ ವಾಗ್ದಾನವನ್ನು ಮಾಡಿದ್ದಾನೆ. ಲೋಕವ್ಯಾಪಕವಾಗಿ ಏನೇನು ಸಾಧಿಸಲ್ಪಡುತ್ತಿರುವುದನ್ನು ನಾವು ನೋಡುತ್ತಿದ್ದೇವೊ ಅದು, ದೇವರು ತನ್ನ ಆ ವಾಗ್ದಾನವನ್ನು ಬೇಗನೆ ಪೂರೈಸುವನೆಂಬುದರ ದೃಢವಾದ ರುಜುವಾತನ್ನು ಕೊಡುತ್ತದೆಂಬುದನ್ನು ನೆನಪಿನಲ್ಲಿಡಿರಿ.​—2 ಪೇತ್ರ 3:13.

ನಿಮಗೆ ಜ್ಞಾಪಕವಿದೆಯೊ?

• ಧರ್ಮಭ್ರಷ್ಟತೆಯು ಸುವಾರ್ತೆ ಸಾರುವವರನ್ನು ಏಕೆ ನಿಶ್ಶಬ್ದಗೊಳಿಸಲಿಲ್ಲ?

• ದೇವರ ವಾಕ್ಯವು ನಮ್ಮ ದಿನದಲ್ಲಿ ಹೇಗೆ ಪ್ರಬಲವಾಗಿದೆ?

• ದೇವರ ಆತ್ಮವು ಇಂದು ಯಾವ ವಿಧದಲ್ಲಿ ಕಾರ್ಯೋನ್ಮುಖವಾಗಿದೆ?

• ಪ್ರಾಯಶ್ಚಿತ್ತವು ಸುವಾರ್ತೆಯ ಸಾರುವಿಕೆಯೊಂದಿಗೆ ಹೇಗೆ ಸಂಬಂಧಿಸಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 16 ರಲ್ಲಿರು ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

20ನೆಯ ಶತಮಾನದ ರಾಜ್ಯ ಪ್ರಚಾರಕರ ಸಂಖ್ಯೆಯಲ್ಲಿ ವೃದ್ಧಿ

ಸರಾಸರಿ ಪ್ರಚಾರಕರು (ಲಕ್ಷಗಟ್ಟಲೆ)

60

55

50

45

40

35

30

25

20

15

10

5

1900 1910 1920 1930 1940 1950 1960 1970 1980 1990 2000

[ಪುಟ 15ರಲ್ಲಿರುವ ಚಿತ್ರಗಳು]

ಜೆರೋಮ್‌

ಟಿಂಡೇಲ್‌

ಗಟನ್‌ಬರ್ಗ್‌

ಹಸ್‌

[ಕೃಪೆ]

ಗಟನ್‌ಬರ್ಗ್‌ ಮತ್ತು ಹಸ್‌: From the book The Story of Liberty, 1878

[ಪುಟ 15ರಲ್ಲಿರುವ ಚಿತ್ರ]

1920ಗಳಲ್ಲಿ ಸುವಾರ್ತೆಯನ್ನು ಘೋಷಿಸುತ್ತಿದ್ದ ಬೈಬಲ್‌ ವಿದ್ಯಾರ್ಥಿಗಳು

[ಪುಟ 16, 17ರಲ್ಲಿರುವ ಚಿತ್ರಗಳು]

ಲೋಕದ ಸುತ್ತಲೂ ಜನರು ಸುವಾರ್ತೆಗೆ ಪ್ರತಿಕ್ರಿಯೆಯನ್ನು ತೋರಿಸುತ್ತಿದ್ದಾರೆ

[ಪುಟ 18ರಲ್ಲಿರುವ ಚಿತ್ರ]

ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಂತೆ, ಸಾರುವ ಕೆಲಸವು ದೇವರ ಪ್ರೀತಿಯನ್ನು ಉತ್ಪ್ರೇಕ್ಷಿಸುತ್ತದೆ