ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯದ ಆಶೀರ್ವಾದಗಳು ನಿಮ್ಮದಾಗಸಾಧ್ಯವಿದೆ

ರಾಜ್ಯದ ಆಶೀರ್ವಾದಗಳು ನಿಮ್ಮದಾಗಸಾಧ್ಯವಿದೆ

ರಾಜ್ಯದ ಆಶೀರ್ವಾದಗಳು ನಿಮ್ಮದಾಗಸಾಧ್ಯವಿದೆ

ಕ್ರೈಸ್ತ ಅಪೊಸ್ತಲ ಪೌಲನು ತನ್ನ ದಿನದಲ್ಲಿದ್ದ ಕೆಲವೊಂದು ಪ್ರಮುಖ ಭಾಷೆಗಳ ಪಂಡಿತನಾಗಿದ್ದನು. ಇಂದಿನ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕೆ ಸರಿಸಮವಾದ ಶಿಕ್ಷಣವನ್ನು ಅವನು ಪಡೆದಿದ್ದನು. ಒಬ್ಬ ರೋಮನ್‌ ಪ್ರಜೆಯೋಪಾದಿ ಅವನು ಸಕಲ ಸವಲತ್ತುಗಳನ್ನೂ ಹಕ್ಕುಗಳನ್ನೂ ಪಡೆದುಕೊಂಡಿದ್ದನು. (ಅ. ಕೃತ್ಯಗಳು 21:​37-40; 22:​3, 28) ಈ ಸವಲತ್ತುಗಳು ಅವನನ್ನು ಐಶ್ವರ್ಯವಂತನೂ ಪ್ರಖ್ಯಾತನನ್ನಾಗಿಯೂ ಮಾಡಿದ್ದಿರಬಹುದು. ಆದರೂ ಅವನು ಹೇಳಿದ್ದು: “ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. . . . ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.” (ಫಿಲಿಪ್ಪಿ 3:7, 8) ಪೌಲನು ಹೀಗೇಕೆ ಹೇಳಿದನು?

ಪೌಲನು ಈ ಹಿಂದೆ ತಾರ್ಸದ ಸೌಲನೆಂದೂ “ಆ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ” ಅವರನ್ನು ಹಿಂಸಿಸುವವನೆಂದೂ ಕುಖ್ಯಾತನಾಗಿದ್ದನು. ಅವನು ಪುನರುತ್ಥಿತ ಹಾಗೂ ಮಹಿಮಾನ್ವಿತ ಯೇಸುವಿನ ದರ್ಶನವನ್ನು ನೋಡಿದ ಬಳಿಕ ವಿಶ್ವಾಸಿಯಾದನು. (ಅ. ಕೃತ್ಯಗಳು 9:​1-19) ಪೌಲನಿಗೆ ದಮಸ್ಕದ ದಾರಿಯಲ್ಲಾದ ಈ ಅನುಭವವು ಯೇಸುವೇ ವಾಗ್ದತ್ತ ಮೆಸ್ಸೀಯ ಅಥವಾ ಕ್ರಿಸ್ತನಾಗಿದ್ದಾನೆ ಹಾಗೂ ವಾಗ್ದತ್ತ ರಾಜ್ಯವನ್ನು ಆಳಲಿದ್ದಾನೆ ಎಂಬುದನ್ನು ನಿಸ್ಸಂದೇಹವಾಗಿ ರುಜುಪಡಿಸಿತು. ಮಾತ್ರವಲ್ಲ ಪೌಲನ ಜೀವನದಲ್ಲಿ ಅದು ಬಹಳ ಬದಲಾವಣೆಗಳನ್ನು ತಂದಿತು. ಅದನ್ನು ಮೇಲೆ ಅವನು ಮಾಡಿದ ಶಕ್ತಿಶಾಲಿಯಾದ ಹೇಳಿಕೆಯಿಂದ ತಿಳಿದುಕೊಳ್ಳಬಹುದು. ಬೇರೆ ಮಾತಿನಲ್ಲಿ ಹೇಳುವುದಾದರೆ, ನಿಷ್ಕಪಟದಿಂದ ಹಾಗೂ ಪ್ರಾಮಾಣಿಕ ಹೃದಯದಿಂದ ಪೌಲನು ಪಶ್ಚಾತ್ತಾಪಪಟ್ಟನು.​—ಗಲಾತ್ಯ 1:​13-16.

ಬೈಬಲಿನಲ್ಲಿ ಕಂಡುಬರುವ “ಪಶ್ಚಾತ್ತಾಪ” ಎಂಬ ಕ್ರಿಯಾಪದವು ಗ್ರೀಕ್‌ ಪದದಿಂದ ಅನುವಾದಮಾಡಲ್ಪಟ್ಟಿದೆ. ಇದರ ಅಕ್ಷರಾರ್ಥವು, “ಮುಂತಿಳಿಯು” ಎಂಬುದಕ್ಕೆ ತದ್ವಿರುದ್ಧವಾದ “ತಿಳಿದಾದ ಮೇಲೆ” ಎಂದಾಗಿದೆ. ಹೀಗೆ, ಪಶ್ಚಾತ್ತಾಪದಲ್ಲಿ ಒಬ್ಬನ ಮನಸ್ಸು, ಮನೋಭಾವ ಅಥವಾ ಉದ್ದೇಶದಲ್ಲಿ ಒಂದು ಬದಲಾವಣೆ ಹಾಗೂ ಹಿಂದಿನ ಅಯೋಗ್ಯ ಜೀವನಮಾರ್ಗಗಳ ತಿರಸ್ಕರಿಸುವಿಕೆಯು ಒಳಗೂಡಿರುತ್ತದೆ. (ಅ. ಕೃತ್ಯಗಳು 3:19; ಪ್ರಕಟನೆ 2:5) ದಮಸ್ಕದ ದಾರಿಯಲ್ಲಿ ಸಂಭವಿಸಿದ ಈ ಬಹಳ ಮುಖ್ಯವಾದ ಘಟನೆಯನ್ನು ಕೇವಲ ಭಾವನಾತ್ಮಕವಾದ ಇಲ್ಲವೆ ಆತ್ಮಿಕ ಅನುಭವವಾಗಿ ಪೌಲನು ನೋಡಲಿಲ್ಲ. ಬದಲಿಗೆ ಇದು ಕ್ರಿಸ್ತನನ್ನು ಅರಿಯದ ತನ್ನ ಹಿಂದಿನ ಜೀವನ ಮಾರ್ಗವು ನಿರರ್ಥಕವಾಗಿದೆ ಎಂಬ ವಾಸ್ತವಾಂಶಕ್ಕೆ ಅವನ ಕಣ್ಣುತೆರೆಸಿತು. ಕ್ರಿಸ್ತನ ಬಗ್ಗೆ ತಿಳಿದುಕೊಂಡ ಜ್ಞಾನದಿಂದ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ತನ್ನ ಜೀವನಶೈಲಿಯನ್ನು ಸರಿಪಡಿಸಿಕೊಳ್ಳಲು ತಾನು ಕ್ರಿಯೆಗೈಯಬೇಕು ಎಂಬುದನ್ನು ಅವನು ಗ್ರಹಿಸಿದನು.​—ರೋಮಾಪುರ 2:4; ಎಫೆಸ 4:23ಬಿ, 24.

ಆಶೀರ್ವಾದಗಳನ್ನು ತಂದ ಬದಲಾವಣೆ

ಹಿಂದೆ, ಪೌಲನು ದೇವರ ಬಗ್ಗೆ ಜ್ಞಾನವನ್ನು ಪಡೆದುಕೊಂಡಿದ್ದನು. ಆದರೆ ಇದು ಫರಿಸಾಯರ ಪಂಥದಿಂದಾಗಿತ್ತು, ಏಕೆಂದರೆ ಪೌಲನೂ ಇದರ ಸದಸ್ಯನಾಗಿದ್ದನು. ಅವರ ನಂಬಿಕೆಗಳಲ್ಲಿ ಹೆಚ್ಚಾಗಿ ಮಾನವ ತತ್ತ್ವಜ್ಞಾನ ಹಾಗೂ ಸಂಪ್ರದಾಯಗಳು ಒಳಗೂಡಿದ್ದವು. ಧಾರ್ಮಿಕ ಪೂರ್ವಕಲ್ಪಿತ ಅಭಿಪ್ರಾಯದಿಂದಾಗಿ, ಪೌಲನ ಹುರುಪು ಹಾಗೂ ಪ್ರಯತ್ನಗಳು ತಪ್ಪಾದ ಕಡೆಗೆ ತಿರುಗಿಸಲ್ಪಟ್ಟವು. ತಾನು ದೇವರಿಗೆ ಸೇವೆಸಲ್ಲಿಸುತ್ತಿದ್ದೇನೆಂದು ನೆನಸಿದನಾದರೂ ವಾಸ್ತವದಲ್ಲಿ ಅವನು ದೇವರಿಗೆ ವಿರುದ್ಧವಾಗಿ ಹೋರಾಡುತ್ತಿದ್ದನು.​—ಫಿಲಿಪ್ಪಿ 3:​5, 6.

ಪೌಲನು ಕ್ರಿಸ್ತನ ಬಗ್ಗೆ ಹಾಗೂ ದೇವರ ಉದ್ದೇಶದಲ್ಲಿ ತನ್ನ ಪಾತ್ರವೇನು ಎಂಬುದರ ಬಗ್ಗೆ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡ ಬಳಿಕ, ಈ ಆಯ್ಕೆಯನ್ನು ಮಾಡಬೇಕಾಗಿತ್ತು: ಒಂದೋ ಫರಿಸಾಯನಾಗಿಯೇ ಇದ್ದುಕೊಂಡು ಅಂತಸ್ತು, ಪ್ರತಿಷ್ಠೆಯಲ್ಲಿ ಆನಂದಿಸುವುದೋ ಇಲ್ಲವೆ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಂಡು ದೇವರ ಸಮ್ಮತಿಯನ್ನು ಪಡೆದುಕೊಳ್ಳಲಿಕ್ಕಾಗಿ ಏನು ಅಗತ್ಯವಿದೆಯೋ ಅದನ್ನು ಮಾಡಲು ಶುರುಮಾಡುವುದೋ? ಸಂತೋಷದ ವಿಷಯವೇನೆಂದರೆ, ಪೌಲನು ಸರಿಯಾದ ಆಯ್ಕೆಯನ್ನು ಮಾಡಿದನು. ಏಕೆಂದರೆ ಅವನು ಹೇಳಿದ್ದು: “ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು ಮೊದಲು ಯೆಹೂದ್ಯರಿಗೆ ಆ ಮೇಲೆ ಗ್ರೀಕರಿಗೆ ಅಂತೂ ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವಂಥದಾಗಿದೆ.” (ರೋಮಾಪುರ 1:15ಬಿ, 16) ಪೌಲನು ಕ್ರಿಸ್ತನ ಹಾಗೂ ರಾಜ್ಯದ ಕುರಿತಾದ ಸುವಾರ್ತೆಯನ್ನು ಹುರುಪಿನಿಂದ ಸಾರಲು ಪ್ರಾರಂಭಿಸಿದನು.

ಅನೇಕ ವರ್ಷಗಳ ತರುವಾಯ, ಪೌಲನು ತನ್ನ ಜೊತೆ ಕ್ರೈಸ್ತರಿಗೆ ಹೇಳಿದ್ದು: “ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.” (ಫಿಲಿಪ್ಪಿ 3:13, 14) ಪೌಲನು ಸುವಾರ್ತೆಯಿಂದ ಪ್ರಯೋಜನವನ್ನು ಪಡೆದುಕೊಂಡನು. ಏಕೆಂದರೆ, ತನ್ನನ್ನು ದೇವರಿಂದ ದೂರಮಾಡುತ್ತಿದ್ದ ವಿಷಯಗಳನ್ನು ಅವನು ಸ್ವಂತ ಇಚ್ಛೆಯಿಂದ ಬಿಟ್ಟುಬಿಟ್ಟು, ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿದ್ದಂತಹ ಗುರಿಗಳನ್ನು ಹೃತ್ಪೂರ್ವಕವಾಗಿ ಬೆನ್ನಟ್ಟಿದನು.

ನೀವು ಏನು ಮಾಡಲಿರುವಿರಿ?

ನೀವು ಬಹುಶಃ ಇತ್ತೀಚೆಗೆ ರಾಜ್ಯದ ಸುವಾರ್ತೆಯನ್ನು ಕೇಳಿಸಿಕೊಂಡಿದ್ದಿರಬೇಕು. ಪರಿಪೂರ್ಣವಾದ ಪರದೈಸದಲ್ಲಿ ಸದಾಕಾಲ ಜೀವಿಸುವಂತಹ ನಿರೀಕ್ಷೆಯು ನಿಮಗೆ ಹಿಡಿಸಿದೆಯೋ? ಖಂಡಿತವಾಗಿಯೂ ಹಿಡಿಸಬೇಕು. ಏಕೆಂದರೆ, ನಮ್ಮಲ್ಲಿ ಎಲ್ಲರಿಗೂ ಜೀವಿಸುವಂತಹ ಹಾಗೂ ಶಾಂತಿ, ಭದ್ರತೆಯ ಜೀವನವನ್ನು ಆನಂದಿಸುವಂತಹ ಹುಟ್ಟು ಆಸೆಯಿರುವುದು ಸಹಜವೇ. ದೇವರು ನಮ್ಮ ಹೃದಯದಲ್ಲಿ “ಅನಂತಕಾಲದ ಯೋಚನೆಯನ್ನು” ಇಟ್ಟಿದ್ದಾನೆ ಎಂದು ಬೈಬಲು ಹೇಳುತ್ತದೆ. (ಪ್ರಸಂಗಿ 3:11) ಆದುದರಿಂದ, ಜನರು ಶಾಂತಿ ಹಾಗೂ ಸಂತೋಷದಿಂದ ಸದಾಕಾಲ ಜೀವಿಸುವ ನಿರೀಕ್ಷೆಯನ್ನು ಹೊಂದಿರುವುದು ಬಹಳ ಸ್ವಾಭಾವಿಕ. ಮತ್ತು ಇದನ್ನು ತಾನೇ ರಾಜ್ಯದ ಸುವಾರ್ತೆಯು ನೀಡುತ್ತದೆ.

ಈ ನಿರೀಕ್ಷೆಯನ್ನು ನಿಜವಾಗಿಸಬೇಕಾದರೆ, ಸುವಾರ್ತೆಯಲ್ಲಿ ಏನೆಲ್ಲ ಒಳಗೂಡಿದೆ ಎಂಬುದನ್ನು ನೀವು ಪರೀಕ್ಷಿಸಿ ಕಂಡುಕೊಳ್ಳಬೇಕು. ಅಪೊಸ್ತಲ ಪೌಲನು ಬುದ್ಧಿವಾದ ನೀಡಿದ್ದು: ‘ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳಿರಿ.’ (ರೋಮಾಪುರ 12:2) ಹೀಗೆ, ಪೌಲನಂತೆ ಜ್ಞಾನ ಹಾಗೂ ತಿಳುವಳಿಕೆಯನ್ನು ಪಡೆದುಕೊಂಡ ಮೇಲೆ ನೀವು ಆಯ್ಕೆಯನ್ನು ಮಾಡಬೇಕು.

ನಿಮ್ಮ ಭವಿಷ್ಯದ ಬಗ್ಗೆ ನಿಮಗೆ ಈಗಾಗಲೇ ಕೆಲವೊಂದು ನಂಬಿಕೆಗಳಿವೆ ಎಂದಿಟ್ಟುಕೊಳ್ಳಿ. ದೇವರ ಚಿತ್ತದ ಬಗ್ಗೆ ಪೌಲನಿಗೆ ತನ್ನದೇ ಆದ ವಿಚಾರಗಳಿದ್ದವು ಎಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ. ಅದ್ಭುತಕರವಾದ ರೀತಿಯಲ್ಲಿ ದೇವರಿಂದ ದೈವಿಕ ಜ್ಞಾನವನ್ನು ಪಡೆದುಕೊಳ್ಳುವುದನ್ನು ಎದುರುನೋಡುವ ಬದಲು, ವಾಸ್ತವಿಕ ವಿಷಯವಾಗಿ ಅದನ್ನು ಏಕೆ ಪರೀಕ್ಷಿಸಿನೋಡಬಾರದು? ನೀವು ಹೀಗೆ ನಿಮ್ಮನ್ನು ಪ್ರಶ್ನಿಸಿಕೊಳ್ಳಿ: ‘ಮನುಷ್ಯರ ಹಾಗೂ ಈ ಭೂಮಿಯ ಬಗ್ಗೆ ದೇವರ ಚಿತ್ತವೇನಾಗಿದೆ ಎಂಬುದನ್ನು ನಾನು ನಿಜವಾಗಿಯೂ ಬಲ್ಲೆನೋ? ನನ್ನ ನಂಬಿಕೆಗಳನ್ನು ಸಮರ್ಥಿಸಲು ನಾನು ಯಾವ ರುಜುವಾತನ್ನು ಕೊಡಬಲ್ಲೆ? ದೇವರ ವಾಕ್ಯವಾದ ಬೈಬಲಿನ ಬೆಳಕಿನಲ್ಲಿ ಮಾಡಲ್ಪಡುವ ಪರೀಕ್ಷೆಯಲ್ಲಿ ನನ್ನ ರುಜುವಾತು ಅಚಲವಾಗಿದೆಯೋ?’ ಈ ರೀತಿಯಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಪರೀಕ್ಷಿಸುವುದರಿಂದ ನಿಮಗೇನೂ ನಷ್ಟವಾಗುವುದಿಲ್ಲ. ವಾಸ್ತವದಲ್ಲಿ ನೀವು ಪರೀಕ್ಷಿಸಿ ನೋಡಬೇಕು ಏಕೆಂದರೆ, ಬೈಬಲು ನಮ್ಮನ್ನು ಪ್ರೇರೇಪಿಸುವುದು: “ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:21) ಏನೇ ಆದರೂ, ದೇವರ ಸಮ್ಮತಿಯೇ ಅತಿ ಮುಖ್ಯವಾದ ವಿಷಯವಾಗಿದೆ ಅಲ್ಲವೇ?​—ಯೋಹಾನ 17:3; 1 ತಿಮೊಥೆಯ 2:​3, 4.

ಧಾರ್ಮಿಕ ಗುರುಗಳು ಅನಂತಕಾಲದ ಭವಿಷ್ಯತ್ತಿನ ಬಗ್ಗೆ ಮಾತುಕೊಡುತ್ತಾರೆ. ಆದರೆ ಆ ಮಾತುಕೊಡುವಿಕೆಯು ಬೈಬಲಿನ ಬೋಧನೆಗಳ ಮೇಲಾಧಾರಿತವಾಗಿರದಿದ್ದಲ್ಲಿ, ದೇವರ ರಾಜ್ಯದ ಆಶೀರ್ವಾದಗಳನ್ನು ನಾವು ಪಡೆದುಕೊಳ್ಳಸಾಧ್ಯವಿಲ್ಲ. ಯೇಸು ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ಬಲವತ್ತಾಗಿ ಎಚ್ಚರಿಸಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.”​—ಮತ್ತಾಯ 7:21.

ತನ್ನ ತಂದೆಯ ಚಿತ್ತದಂತೆ ನಡೆಯುವುದಕ್ಕೆ ಯೇಸು ಕೊಟ್ಟಿರುವಂತಹ ಮಹತ್ವವನ್ನು ಗಮನಿಸಿರಿ. ದೇವರ ರಾಜ್ಯದಿಂದ ಸಿಗುವ ಆಶೀರ್ವಾದಗಳನ್ನು ಪಡೆದುಕೊಳ್ಳಬೇಕಾದರೆ ತನ್ನ ತಂದೆಯ ಚಿತ್ತದಂತೆ ನಡೆಯಬೇಕು ಎಂದು ಯೇಸು ಇಲ್ಲಿ ಹೇಳುತ್ತಿದ್ದನು. ಬೇರೆ ಮಾತಿನಲ್ಲಿ ಹೇಳುವುದಾದರೆ, ದೇವಭಕ್ತಿಯದ್ದಾಗಿ ತೋರುವ ವಿಷಯವು ದೇವರಿಂದ ಸಮ್ಮತಿಸಲ್ಪಡದೇ ಇರಬಹುದು. ಯೇಸು ಹೇಳುತ್ತಾ ಮುಂದುವರಿಸಿದ್ದು: “ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.” (ಮತ್ತಾಯ 7:22, 23) ರಾಜ್ಯದ ಸುವಾರ್ತೆಯು ನಿಜವಾಗಿಯೂ ಏನಾಗಿದೆ ಎಂಬುದರ ನಿಷ್ಕೃಷ್ಟವಾದ ತಿಳುವಳಿಕೆಯನ್ನು ಪಡೆದುಕೊಳ್ಳುವುದು ಹಾಗೂ ಅದಕ್ಕೆ ತಕ್ಕಂತೆ ಕ್ರಿಯಗೈಯುವುದು ಬಹಳ ಪ್ರಾಮುಖ್ಯವಾಗಿದೆ.​—ಮತ್ತಾಯ 7:​24, 25.

ಸಹಾಯವು ಲಭ್ಯವಿದೆ

100ಕ್ಕಿಂತಲೂ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದಾರೆ. ಸಾಹಿತ್ಯಗಳು, ಪತ್ರಿಕೆಗಳು ಮತ್ತು ಮಾತಿನ ಮೂಲಕ ರಾಜ್ಯದ ಬಗ್ಗೆ, ಅದರಿಂದ ಸಿಗುವ ಆಶೀರ್ವಾದಗಳ ಬಗ್ಗೆ ಹಾಗೂ ಅಂತಹ ಆಶೀರ್ವಾದಗಳನ್ನು ಪಡೆದುಕೊಳ್ಳಲು ಒಬ್ಬರು ಏನು ಮಾಡಬೇಕು ಎಂಬುದರ ಕುರಿತಾಗಿ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಲೋಕದ ಸುತ್ತಲೂ ಇರುವ ಜನರಿಗೆ ಸಹಾಯಮಾಡುತ್ತಿದ್ದಾರೆ.

ಯೆಹೋವನ ಸಾಕ್ಷಿಗಳು ನಿಮಗೆ ತಿಳಿಸುವ ಸಂದೇಶಕ್ಕೆ ಕಿವಿಗೊಡಿರಿ ಎಂದು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಸುವಾರ್ತೆಯನ್ನು ಸ್ವೀಕರಿಸುವ ಹಾಗೂ ಅದಕ್ಕನುಸಾರ ಕ್ರಿಯೆಗೈಯುವ ಮೂಲಕ, ನೀವು ಮಹಾ ಆಶೀರ್ವಾದಗಳನ್ನು ಪಡೆದುಕೊಳ್ಳಸಾಧ್ಯವಿದೆ. ಇದನ್ನು ಕೇವಲ ಈಗ ಮಾತ್ರ ಅನುಭವಿಸುವುದಲ್ಲದೆ ಮುಂದೆ ದೇವರ ರಾಜ್ಯವು ಇಡೀ ಭೂಮಿಯನ್ನು ಆಳುವಾಗ ಸಹ ಆನಂದಿಸುವಿರಿ.​—1 ತಿಮೊಥೆಯ 4:8.

ಈಗಲೇ ಕ್ರಿಯೆಗೈಯಿರಿ ಏಕೆಂದರೆ ದೇವರ ರಾಜ್ಯದ ಆಶೀರ್ವಾದದ ಮಳೆಯು ಶೀಘ್ರದಲ್ಲೇ ಸುರಿಯಲಿದೆ!

[ಪುಟ 7ರಲ್ಲಿರುವ ಚಿತ್ರಗಳು]

ಸಾಹಿತ್ಯಗಳು, ಪತ್ರಿಕೆಗಳು ಮತ್ತು ಮಾತಿನ ಮೂಲಕ, ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾರೆ